ಕಾಫಿಬೀಜದ ಬಿತ್ತನೆ ಮತ್ತು ಆರೈಕೆ

ರತೀಶ ರತ್ನಾಕರ.

ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಫಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಫಿ ಗುಟುಕನ್ನು ಕುಡಿಯುವಾಗ,ಕಾಫಿಯು ಕಾಫಿಯಾಗಲು ಮಾಡಬೇಕಾದ ಕೆಲಸಗಳೆಷ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಫಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು ಬೆಳೆದು ಬಂದ ಬಗೆ ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಕಾಫಿ ಬೆಳೆಯುವ ಕುಟುಂಬದಿಂದಲೇ ಬೆಳೆದು, ಕಾಫಿ ಬೆಳೆಯುವ ಬಗೆಯನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಇದರ ಬೇಸಾಯದ ಅರಿವನ್ನು ಆದಷ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಫಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ ನಡುವಿನ ಬೇರ‍್ಮೆಯನ್ನು ತಿಳಿದೆವು. ಈ ಬರಹದಲ್ಲಿ ಕಾಫಿಯನ್ನು ಬೆಳೆಯುವ ಮೊದಲ ಹಂತವಾದ ಕಾಫಿ ಗಿಡಮನೆ (Nursery) ಮಾಡುವುದರ ಕುರಿತು ಕೊಂಚ ಅರಿಯೋಣ.

ಬೀಜಗಳ ಆಯ್ಕೆ:
ಕಾಫಿಯ ಮುಂದಿನ ತಲೆಮಾರಿಗೆ ಬೇಕಾದ ಕಾಫಿ ಬೀಜವನ್ನು ಆಯ್ದುಕೊಳ್ಳುವುದು ಒಂದು ಅರಿದಾದ ಕೆಲಸ. ತೋಟದ ನಡುವೆ ಇರುವ ಆರೋಗ್ಯಕರವಾದ, ಒಳ್ಳೆಯ ಇಳುವರಿಯನ್ನು ಕೊಡುತ್ತಿರುವ ಕಾಫಿ ಗಿಡದಿಂದ ತುಂಬಾನೇ ಚೆನ್ನಾಗಿರುವ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ಹಣ್ಣುಗಳು ದೊಡ್ಡದಿದ್ದಷ್ಟು ಒಳ್ಳೆಯದು. ಮೊದಲೇ ತಿಳಿದಿರುವಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗು ಕಾಫಿ ಹಣ್ಣಿನ ಕಾಲ. ಈ ಹೊತ್ತಿನಲ್ಲಿ, ಗಿಡದಲ್ಲಿರುವ ಕಾಫಿಯು ಚೆನ್ನಾಗಿ ಹಣ್ಣಾದ ಕೂಡಲೇ ಹಣ್ಣುಗಳನ್ನು ಕಿತ್ತುಕೊಂಡಿರಬೇಕು.

ಕಿತ್ತ ಕಾಫಿ ಹಣ್ಣಿನ ಸಿಪ್ಪೆಗಳನ್ನು ಬಿಡಿಸಿ, ಕಾಫಿ ಬೀಜಗಳನ್ನು ಆರಿಸಬೇಕು. ನೆನಪಿರಲಿ, ಒಂದು ಕಾಫಿ ಹಣ್ಣಿನಲ್ಲಿ ಎರೆಡು ಕಾಫಿ ಬೀಜಗಳಿರುತ್ತವೆ. ಒಂದು ವೇಳೆ ಕಾಫಿ ಹಣ್ಣಿನಲ್ಲಿ ಒಂದೇ ಬೀಜವಿದ್ದರೆ ಇಲ್ಲವೇ ಒಂದು ಬೀಜ ದೊಡ್ಡದಾಗಿದ್ದು ಇನ್ನೊಂದು ತುಂಬಾ ಚಿಕ್ಕದಾಗಿದ್ದರೆ ಅಂತಹ ಬೀಜಗಳನ್ನು ಮೊಳಕೆ ಬರಿಸಲು ಆಯ್ದುಕೊಳ್ಳಬಾರದು. ಹೀಗೆ ಸಿಪ್ಪೆ ಬಿಡಿಸಿದ ಬೀಜಗಳ ಮೇಲ್ಮೈನಲ್ಲಿ ಲೋಳೆಯು ಇರುತ್ತದೆ, ಈ ಲೋಳೆಯಿಂದಾಗಿ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು, ಅಂಟಿಕೊಂಡ ಅವನ್ನು ಬಿಡಿಸಿದಾಗ ಬೀಜಗಳಿಗೆ ಗಾಯವಾಗಿ ಹಾಳಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಕೆಲವರು ಕಾಫಿ ಹಣ್ಣನ್ನು ಬಿಡಿಸಿದ ಕೂಡಲೇ ತೊಳೆಯುತ್ತಾರೆ ಇಲ್ಲವೇ ಬೂದಿಯನ್ನು ಬೀಜಗಳಿಗೆ ಹಾಕಿ ಕಲಿಸುತ್ತಾರೆ. ಬೂದಿಯನ್ನು ಬಳಸುವುದರಿಂದ ಇನ್ನೊಂದು ಉಪಕಾರವೆಂದರೆ, ಬೂದಿಯು ಬೀಜದ ಸುತ್ತಲೂ ಅಂಟಿಕೊಳ್ಳುವುದರಿಂದ ಇರುವೆ ಇಲ್ಲವೇ ಮತ್ತಿತರ ಕೀಟಗಳಿಂದ ಬೀಜಗಳನ್ನು ಕಾಪಾಡಿಕೊಳ್ಳಬಹುದು. ಇದೇ ಕೆಲಸ ಮಾಡುವಂತಹ ಯಾವುದಾದರು ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಸಿಕ್ಕರೆ ಅವನ್ನು ಕೂಡ ಬಳಸಬಹುದು. ಬೂದಿಯನ್ನು ಬಳಸುವುದು ಕೊಂಚ ಹಳೆಯ ಪದ್ದತಿ, ಬೂದಿಯನ್ನು ಬೀಜಗಳ ಜೊತೆ ಕಲೆಸುವಾಗ ಬೀಜದ ಮೇಲಿನ ಸಿಪ್ಪೆಗೆ ಗಾಯವಾಗುವ ಸಾದ್ಯತೆಗಳೂ ಇವೆ.

ಹೀಗೆ ಅಣಿಗೊಳಿಸಿದ ಬೀಜಗಳನ್ನು ಬಲೆಯಂತಿರುವ ತಟ್ಟೆಗಳು ಇಲ್ಲವೇ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿಟ್ಟು ಎರೆಡರಿಂದ ಮೂರು ದಿನಗಳ ಕಾಲ ಆರಿಸಬೇಕು. ಹರಡಿರುವ ಬೀಜಗಳ ನಡುವೆ ಚೆನ್ನಾಗಿ ಗಾಳಿ ಓಡಾಡುವಂತಿರಬೇಕು. ಬೀಜದಲ್ಲಿರುವ ಪಸೆ (moisture) 10% ಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು. ಬಿಸಿಲಿನಲ್ಲಿ ಇಲ್ಲವೇ ಹೆಚ್ಚು ದಿನಗಳ ಕಾಲ ಒಣಗಿಸಿದರೆ ಪಸೆಯು 10% ಗಿಂತ ಕಡಿಮೆಯಾಗಬಹುದು. ಆರಿದ ಬೀಜಗಳಿಂದ ಗಾಯಗೊಂಡ ಇಲ್ಲವೇ ಚೆನ್ನಾಗಿಲ್ಲದ ಬೀಜಗಳನ್ನು ಆರಿಸಿ ತೆಗೆಯಬೇಕು. ಈಗ ನಿಮ್ಮ ಮುಂದಿನ ತಲೆಮಾರಿನ ಕಾಫಿಗಿಡಗಳಿಗೆ ಬೇಕಾದ ಬೀಜಗಳು ಸಿದ್ದವಾದಂತೆ. ಹೀಗೆ ಸಿದ್ದವಾದ ಬೀಜಗಳನ್ನು ಆದಷ್ಟು ಬೇಗ ಮೊಳಕೆಗಾಗಿ ನೆಡಬೇಕು ಇಲ್ಲವಾದರೆ ಮೊಳಕೆ ಬರುವ ಸಾದ್ಯತೆಗಳು ಕಡಿಮೆ. ಬೀಜಗಳನ್ನು ಆದಷ್ಟು ಕಡಿಮೆ ಬಿಸುಪು ಮತ್ತು ಹೆಚ್ಚು ಪಸೆಯಿರುವ ಜಾಗದಲ್ಲಿ ಕಾಪಿಟ್ಟುಕೊಳ್ಳಬೇಕು.

ಮೊಳಕೆಗೆ ಬೀಜ ಬಿತ್ತನೆ:

ಬೀಜಗಳನ್ನು ಮೊಳಕೆಗೆ ಹಾಕುವ ಮೊದಲು ಎಷ್ಟು ಗಿಡಗಳು ತಮಗೆ ಬೇಕಾಗಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಕೆ.ಜಿ. ಕಾಫಿ ಬೀಜದಲ್ಲಿ ಸುಮಾರು 3000ದಿಂದ 4000 ಬೀಜಗಳು ಸಿಗುತ್ತವೆ. ಇವುಗಳಲ್ಲಿ 75% ನಷ್ಟು ಬೀಜಗಳು ಮೊಳಕೆ ಬರಬಹುದು ಎಂಬ ಲೆಕ್ಕಾಚಾರವಿದೆ. ತಮಗೆ ಎಷ್ಟು ಕಾಫಿಗಿಡಗಳು ಬೇಕಾಗಬಹುದು ಎಂದು ಎಣಿಸಿಕೊಂಡು ಮೊಳಕೆಗೆ ಅಷ್ಟು ಬೀಜಗಳನ್ನು ಅಣಿಗೊಳಿಸಬೇಕು.

ಮೊಳಕೆಗೆ ಹಾಕಲು ಮೊದಲು ಮಣ್ಣಿನ ಹಾಸಿಗೆಯನ್ನು ಅಣಿಮಾಡಬೇಕು. ಮಣ್ಣಿನ ಹಾಸಿಗೆಯು ಸುಮಾರು 1.2 ಮೀಟರ್ ಅಗಲವಾಗಿರಬೇಕು ಮತ್ತು ಸಾಕಷ್ಟು ಉದ್ದ ಅಂದರೆ ಸುಮಾರು 6 ಮೀಟರ್ ನಷ್ಟು ಇರಬೇಕು. ಮಣ್ಣಿನ ಹಾಸಿಗೆಯ ಎತ್ತರ ನೆಲದಿಂದ ಸುಮಾರು 15 ಸೆ.ಮೀ ನಷ್ಟಿರಬೇಕು. ಹಾಸಿಗೆಯಲ್ಲಿರುವ ಮಣ್ಣನ್ನು ಚೆನ್ನಾಗಿ ಅಗೆದು ಸಡಿಲಗೊಳಿಸರಬೇಕು, ಸಾಕಷ್ಟು ಸಾರವಿರುವ ಕಾಡಿನ ಮಣ್ಣನ್ನು ತಂದು ಇದರ ಜೊತೆ ಸೇರಿಸಿದರೆ ಒಳ್ಳೆಯದು. ಬೀಜಗಳಿಗೆ ಬೇಕಾದ ಗೊಬ್ಬರಕ್ಕಾಗಿ ಸಗಣಿ ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಬೇಕು. ಇದರ ಜೊತೆಗೆ ಬೀಜದ ಮೊಳಕೆಗೆ ನೆರವಾಗುವಂತಹ ಪಾಸ್ಪೇಟ್ ಗೊಬ್ಬರ (ಸಾವಯವ ಇಲ್ಲವೇ ರಾಸಾಯನಿಕ ಎಂಬುದು ಬೆಳೆಗಾರರಿಗೆ ಬಿಟ್ಟದ್ದು) ವನ್ನು ಬಳಸಬೇಕು. ಸುಮಾರು 1 ಮೀ. ಉದ್ದದ ಜಾಗಕ್ಕೆ 100 ಗ್ರಾಂ ಪಾಸ್ಪೇಟ್ ಗೊಬ್ಬರ ಬೇಕಾಗುತ್ತದೆ. ಕೇವಲ ಮಣ್ಣು ಮತ್ತು ಗೊಬ್ಬರವನ್ನು ಕಲೆಸಿದಾಗ ಮಣ್ಣೇನಾದರು ಕೊಂಚ ಗಟ್ಟಿಯಾದರೆ ಇಲ್ಲವೇ ಅಂಟು ಅಂಟಾದರೆ ಮರಳನ್ನು ಸೇರಿಸಿ ಕಲೆಸಿದರೆ ಒಳ್ಳೆಯದು ಆಗ ಮಣ್ಣು ಸಡಿಲವಾಗಿ ಮೊಳಕೆ ಬರಲು ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಮಣ್ಣಿನ ಹಾಸಿಗೆಯನ್ನು ಮಾಡುವುದಾದರೆ ಒಂದು ಹಾಸಿಗೆಯಿಂದ ಇನ್ನೊಂದರ ನಡುವೆ ಕಡಿಮೆ ಎಂದರೂ 60 ಸೆ.ಮೀ ಜಾಗವಿರಬೇಕು.

ಹೀಗೆ ಆಣಿಗೊಳಿಸಿದ ಮಣ್ಣಿನ ಹಾಸಿಗೆಯ ಮೇಲೆ ಈಗ ಬೀಜಗಳನ್ನು ನೆಡುವ ಕೆಲಸ. ಇದನ್ನು ಈ ಕೆಳಗಿನಂತೆ ಮಾಡಬಹುದು

  1. ಮೊಳಕೆಗೆ ಬೀಜ ನೆಡುವ ಮೊದಲು ಮಣ್ಣಿನ ಹಾಸಿಗೆಗೆ ಚೆನ್ನಾಗಿ ನೀರು ಹಾಕಬೇಕು.
  2. ಒಂದು ಚೂಪಾದ ಕಡ್ದಿಯಿಂದ ಮಣ್ಣಿನ ಹಾಸಿಗೆಯ ಮೇಲೆ 12 ಮಿ.ಮೀ ಆಳದ ಸಾಲುಗುಂಡಿಗಳನ್ನು ಮಾಡಬೇಕು. ಒಂದು ಸಾಲಿನ ಎರೆಡು ಗುಂಡಿಗಳ ನಡುವೆ 25 ಮಿ.ಮೀ ಜಾಗವಿರಬೇಕು.
  3. ಮಣ್ಣಿನ ಹಾಸಿಗೆಯ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸುಮಾರು 100 ಮಿ.ಮೀ ದೂರವಿರಬೇಕು.
  4. ಆರಿಸಿದ ಬೀಜಗಳನ್ನು 12 ಮಿ.ಮೀ ಗುಂಡಿಯೊಳಗೆ ಮೆದುವಾಗಿ ಊರಬೇಕು. ನೆನಪಿರಲಿ, ಬೀಜವು ಹೆಚ್ಚು ಆಳಕ್ಕೆ ಹೋಗಬಾರದು.
  5. ಕಾಫಿ ಬೀಜದ ಆಕಾರದಲ್ಲಿ ಒಂದು ಕಡೆ ಮಟ್ಟವಾಗಿದ್ದು ಇನ್ನೊಂದು ಕಡೆ ಅರೆ ಮೊಟ್ಟೆಯಾಕಾರದಲ್ಲಿರುತ್ತದೆ. ಮಟ್ಟವಾಗಿರುವ ಕಡೆಯನ್ನು ನೆಲಕ್ಕೆ ಮುಖಮಾಡಿ ಬೀಜವನ್ನು ಬಿತ್ತಬೇಕು.
  6. ಮಣ್ಣಿನ ಹಾಸಿಗೆಯಲ್ಲಿರುವ ಪಸೆಯು ಆರದಂತೆ ಮತ್ತು ಬಿಸಿಲಿನಿಂದ ಬಿತ್ತನೆಯನ್ನು ಕಾಪಾಡಲು ಒಣಗಿದ ಹುಲ್ಲು ಇಲ್ಲವೇ ಅಡಿಕೆ ಸೋಗೆಯನ್ನು ಈ ಹಾಸಿಗೆಯ ಮೇಲೆ ತೆಳುವಾಗಿ ಹರಡಬೇಕು. ಹೆಚ್ಚಿನ ಬಿಸಿಲು ಇಲ್ಲವೇ ಮಳೆಯಿದ್ದಲ್ಲಿ ಬಿತ್ತನೆಯನ್ನು ಕಾಪಾಡಲು ಮಣ್ಣಿನ ಹಾಸಿಗೆಯ ಮೇಲೆ ಸುಮಾರು ಒಂದು ಮೀಟರ್ ಎತ್ತರದ ಚಪ್ಪರವನ್ನು ಹಾಕಿ ಪ್ಲಾಸ್ಟಿಕ್ ಇಲ್ಲವೇ ಸೊಪ್ಪಿನಿಂದ ಮುಚ್ಚಬೇಕು. ಆದರೆ ಸಾಕಷ್ಟು ಗಾಳಿ ಒಡಾಡಲು ಜಾಗವಿರಬೇಕು.
  7. ಮಣ್ಣಿನ ಹಾಸಿಗೆಗೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ನೀರುಣಿಸಬೇಕು. ನೀರುಣಿಸುವಾಗ ಮಣ್ಣು ಸರಿದು ಬೀಜವು ಮಣ್ಣಿನಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು.
  8. ಬಿತ್ತನೆಯ ಆರೈಕೆಯ ಮೇಲೆ ನಿಗಾವಹಿಸಬೇಕು. ಬಿತ್ತನೆಗೆ ತೊಂದರೆ ಕೊಡುವಂತಹ ಕೀಟಗಳು, ರೋಗ ತರುವಂತಹ ಗಿಡಗಳು ಮತ್ತು ಕಳೆಗಿಡಗಳನ್ನು ತೆಗೆಯುತ್ತಿರಬೇಕು.

ಬಿತ್ತಿದ ಬೀಜವು ಹೇಗೆ ಮೊಳಕೆ ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ ತಿಳಿಯಬಹುದು. ಬಿತ್ತಿದ ನಾಲ್ಕು ವಾರಗಳಲ್ಲಿ ಮೊದಲು ತಾಯಿಬೇರು (Radicle) ಬರುತ್ತದೆ, ಬಳಿಕ ಎರೆಡು ಮೊಳಕೆ ಎಲೆಗಳು (Cotyledon) ಮೂಡುತ್ತವೆ. ಈ ಮೊಳಕೆ ಎಲೆಗಳು ಮೊಟ್ಟೆಯಾಕಾರದಲ್ಲಿ ಇದ್ದು ಸುಮಾರು 20 ರಿಂದ 50 ಮಿ.ಮೀ ಅಡ್ಡಗಲವನ್ನು ಹೊಂದಿರುತ್ತದೆ. ಸುಮಾರು ಐದರಿಂದ ಆರನೇ ವಾರದಲ್ಲಿ ಮೊದಲ ಕುಡಿ ಎಲೆಗಳು (Primary leaves) ಮೂಡುತ್ತವೆ. ಇವು ಮೂಡಿದ ಬಳಿಕ ಮೊಳಕೆ ಎಲೆಗಳು ಉದುರಿ ಬೀಳುತ್ತವೆ. ಈ ಹಂತದಲ್ಲಿ ಕುಡಿ ಎಲೆಗಳು ‘ಬೆಳಕಿನ ಅಡುಗೆ’ (Photosynthesis) ನಡೆಸಿ ಸಾಕಷ್ಟು ಊಟವನ್ನು ಗಿಡಕ್ಕೆ ನೀಡುತ್ತಾ ಹೋಗುತ್ತದೆ. ಆಗ ಗಿಡದ ಬೇರುಗಳು ಬೆಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

ಮಣ್ಣಿನ ಹಾಸಿಗೆಗೆ ಹರಡಿದ್ದ ಹುಲ್ಲಿನ ಮುಚ್ಚುಗೆಯನ್ನು ಬೀಜವು ಮೊಳಕೆಯೊಡದಂತೆ ಹಂತ ಹಂತವಾಗಿ ತೆಗೆಯುತ್ತಾ ಹೋಗಬೇಕಾಗುತ್ತದೆ. ಆಗ ಎಳೆಯ ಮೊಳಕೆಗೆ ಸಾಕಷ್ಟು ಗಾಳಿ ಮತ್ತು ಬೆಳಕು ಸಿಕ್ಕಿ ಬೆಳವಣಿಗೆಗೆ ನೆರವಾಗುತ್ತದೆ. ಸುಮಾರು 40 ರಿಂದ 50 ದಿನದಲ್ಲಿ ಬೀಜವು ಮೊಳಕೆಯೊಡೆದು 200 – 300 ಮಿ.ಮೀ ಬೆಳೆಯುತ್ತದೆ. ಈಗ ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಲು ಅಣಿಯಾದಂತೆ. ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಗಿಡದ ಎರಡನೇ ಹಂತದ ಬೆಳವಣಿಯನ್ನು ನೋಡಿಕೊಳ್ಳಲಾಗುತ್ತದೆ. ಈ ಎರಡನೇ ಹಂತಹ ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: fao.org)

 

ಬಿತ್ತಿದ ಬೀಜ ಮೊಳಕೆ ಒಡೆದೀತು ಹೇಗೆ?

ರತೀಶ ರತ್ನಾಕರ.

ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ ಮೊಳಕೆಯೊಡೆದು ಗಿಡವಾಗ ತೊಡಗುತ್ತದೆ. ತಾನಾಗಿಯೇ ಆಗುವ ಈ ಕೆಲಸ ಹಲವು ಹಂತಗಳಲ್ಲಿ ನಡೆಯುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೀಜವು ಹೇಗೆ ಮೊಳಕೆಯೊಡೆಯುತ್ತದೆ ಎಂದು ಅರಿಯುವ ಮೊದಲು ಬೀಜದ ಏರ್ಪಾಟಿನ (structure) ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ಬೀಜದಲ್ಲಿ ಈ ಕೆಳಗಿನ ಮೂರು ಭಾಗಗಳಿರುತ್ತವೆ.

ಬಸಿರ ಪೊರೆಕ (Endosperm) : ಬೀಜದ ಹೆಚ್ಚಿನ ಭಾಗವನ್ನು ಇದು ಪಡೆದುಕೊಂಡಿರುತ್ತದೆ. ಬೀಜದ ಬಸಿರಿಗೆ ಬೇಕಾಗುವ ಊಟವನ್ನು ಮತ್ತು ಆರಯ್ಕೆಯನ್ನು ಗಂಜಿಯ ರೂಪದಲ್ಲಿ ಈ ಬಸಿರ ಪೊರೆಕ ನೀಡುತ್ತದೆ, ಅಲ್ಲದೇ ಇದರಲ್ಲಿ ಎಣ್ಣೆ ಹಾಗು ಮುನ್ನು (protein) ಅಂಶಗಳು ಇರುತ್ತದೆ. ಇದು ಬಸಿರಿಗೆ ಬೇಕಾಗುವ ಆರಯ್ಕೆಯನ್ನು ಮಾಡುವುದಲ್ಲದೇ ಅದರ ಊಟವನ್ನು ಕೂಡಿಡುವ ಕೆಲಸವನ್ನು ಮಾಡುತ್ತದೆ. ಬೀಜದ ಹೆಚ್ಚಿನ ಪಾಲು ಬಸಿರ ಪೊರೆಕದಿಂದ ಕೂಡಿರುತ್ತದೆ.

ಬಸಿರು (Embryo): ಬೀಜದ ಬಸಿರು ಇದಾಗಿದ್ದು ಮುಂದೆ ಬೀಜವು ಮೊಳಕೆಯೊಡೆದು ಬೇರು, ಕಾಂಡ ಹಾಗು ಎಲೆಗಳಾಗಲು ಬೇಕಾಗುವಂತಹ ಗೂಡುಕಟ್ಟುಗಳನ್ನು (tissue) ಇದು ಹೊಂದಿರುತ್ತದೆ. ಜೊತೆಗೆ ಮೊಳಕೆ ಎಲೆಯ (cotyledon) ಗೂಡುಕಟ್ಟುಗಳು ಕೂಡ ಇರುತ್ತವೆ. ಇವು ಬೀಜದ ಬಸಿರಿಗೆ ಬೇಕಾಗಿರುವ ಊಟವನ್ನು ಪಕ್ಕದಲ್ಲಿರುವ ಬಸಿರ ಪೊರೆಕದಿಂದ ಬಸಿರಿಗೆ ಸಾಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ, ಬೀಜವು ಬಿಡುವ ಮೊದಲ ಎಲೆಯನ್ನು ಕಾಪಾಡಲು ಬೇಕಾಗಿರುವ ಕಾಪು (shield) ಈ ಮೊಳಕೆ ಎಲೆಯಲ್ಲಿ ಇರುತ್ತದೆ. ಬೀಜವು ಒಂದೆಲೆ ಗಿಡವಾಗಬೇಕೋ ಇಲ್ಲವೇ ಎರಡಲೆ ಗಿಡವಾಗಬೇಕೋ ಎಂಬುದು ಈ ಮೊಳಕೆ ಎಲೆಯ ಗೂಡುಕಟ್ಟುಗಳಲ್ಲೇ ಇರುತ್ತದೆ.

ಸಿಪ್ಪೆ: ಬಸಿರು ಹಾಗು ಬಸಿರ ಪೊರೆಕವನ್ನು ಸುತ್ತಿಕೊಂಡು ಎರವಾಗದಂತೆ ಕಾಪಾಡುವುದೇ ಸಿಪ್ಪೆ. ಸಿಪ್ಪೆಯು ಕೆಲವು ಬೀಜಗಳಲ್ಲಿ ತೆಳುವಾಗಿ (ಕಡಲೇ ಬೀಜದಲ್ಲಿರುವ ಹಾಗೆ), ಇನ್ನು ಕೆಲವು ಬೀಜಗಳಲ್ಲಿ ದಪ್ಪನಾಗಿ (ತೆಂಗಿನಕಾಯಿಯಲ್ಲಿರುವ ಹಾಗೆ) ಇರುತ್ತದೆ. ಹೊರಗಿನ ಹಾನಿಗಳಿಂದ ಬಸಿರನ್ನು ಕಾಪಾಡುವುದೇ ಇದರ ಮುಖ್ಯ ಕೆಲಸವಾಗಿರುತ್ತದೆ.

ಒಂದು ಬೀಜವು ಮೊಳಕೆಯೊಡೆಯಲು ಅದಕ್ಕೆ ತಕ್ಕನಾದ ಉಸಿರುಗಾಳಿ (oxygen), ನೀರು ಹಾಗು ಕಾವು ಬೇಕಾಗುತ್ತದೆ. ಬೀಜವು ಯಾವ ತಳಿ ಎಂಬುದರ ಮೇಲೆ ಬೇಕಾಗಿರುವ ಗಾಳಿ, ನೀರು ಮತ್ತು ಬಿಸುಪು ತೀರ್ಮಾನವಾಗುತ್ತದೆ. ಕೆಲವು ಬಗೆಯ ಬೀಜಗಳು ಮೊಳಕೆ ಒಡೆಯುವಲ್ಲಿ ಬೆಳಕು ಕೂಡ ತನ್ನ ಪಾತ್ರ ವಹಿಸುತ್ತದೆ. ಒಂದು ಬೀಜವು ತಾನು ಮೊಳಕೆಯೊಡೆಯಲು ಬೇಕಾದ ನೀರು, ಉಸಿರುಗಾಳಿ ಮತ್ತು ಬಿಸುಪಿಗೆ ತೆರೆದುಕೊಳ್ಳುವವರೆಗೂ ಒರಗಿದ (dormant) ಸ್ಥಿತಿಯಲ್ಲಿ ಇರುತ್ತದೆ. ಅದರ ಒಳಗಿರುವ ಬಸಿರಿಗೆ ಬಸಿರ ಪೊರೆಕ ಊಟ ಒದಗಿಸುತ್ತಿರುತ್ತದೆ, ಇದನ್ನು ಬಿಟ್ಟರೆ ಅದರಲ್ಲಿ ಯಾವ ಬೆಳವಣಿಗೆಯು ಆಗುತ್ತಿರುವುದಿಲ್ಲ. ಒಮ್ಮೆ ಬೇಕಾದ ನೀರು, ಉಸಿರುಗಾಳಿ ಹಾಗು ಬಿಸುಪಿಗೆ ತೆರೆದುಕೊಂಡಾಗ ಅದು ಮೊಳಕೆ ಒಡೆಯುವ ಕೆಲಸವನ್ನು ಆರಂಭಿಸುತ್ತದೆ.

ಬೀಜವು ಮೊಳಕೆ ಒಡೆಯಲು ಬೇಕಾದ ನೀರಿಗೆ ತಾಕಿದಾಗ ಹೊರಗಿನ ನೀರು ಬೀಜದ ಸಿಪ್ಪೆಯೊಳಗೆ ಒಳಹೀರಿಕೆಯ (imbibition) ಮೂಲಕ ಬರುತ್ತದೆ. ಸಿಪ್ಪೆಯೊಳಗೆ ಬಂದ ನೀರನ್ನು ಬಳಸಿಕೊಂಡು ಬಸಿರಿನಲ್ಲಿರುವ ಸೂಲುಗೂಡುಗಳು (cells) ತಮ್ಮ ತರುಮಾರ್ಪುವ (metabolism) ಕೆಲಸವನ್ನು ಹೆಚ್ಚುಗೊಳಿಸಿ ಹಿಗ್ಗಲಾರಂಬಿಸುತ್ತವೆ ಮತ್ತು ಕೆಲವು ಸೂಲುಗೂಡುಗಳು ಒಡೆದು ಹೆಚ್ಚಲಾರಂಬಿಸುತ್ತವೆ. ಬೆಳವಿಕ (auxins) ಮತ್ತು ಇತರೆ ಸುರಿಗೆಗಳು (harmones) ಕೂಡ ಬಸಿರಿನ ಬೆಳವಣಿಗೆಯನ್ನು ಹುರಿದುಂಬಿಸುತ್ತವೆ.

ಬೀಜದ ಒಳಗೆ ಬಂದಿರುವ ನೀರು, ನೀರ‍್ದೊಳೆಗಳನ್ನು (hydrolytic Enzymes) ಚುರುಕುಗೊಳಿಸುತ್ತವೆ ಇವು ಬಸಿರ ಪೊರೆಕದಲ್ಲಿರುವ ಎಣ್ಣೆ, ಮುನ್ನು (protien) ಮತ್ತು ಗಂಜಿಯನ್ನು ಒಡೆದು ಬಸಿರಿನ ತರುಮಾರ್ಪಿಗೆ ನೆರವಾಗುವಂತಹ ರಾಸಾಯನಿಕಗಳನ್ನು ಕೊಡುತ್ತವೆ. ಉಸಿರುಗಾಳಿ ಮತ್ತು ಬಿಸುಪು ಕೂಡ ಬಸಿರಿನ ತರುಮಾರ್ಪಿಗೆ ನೆರವಾಗುತ್ತವೆ. ಇವನ್ನೆಲ್ಲಾ ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುತ್ತಿರುವ ಬಸಿರಿಗೆ ಬೇಕಾಗಿರುವ ಆರಯ್ಕೆಯನ್ನು ಬಸಿರ ಪೊರೆಕ ಕೊಡುತ್ತಿರುತ್ತದೆ. ಮೊಳಕೆಯು ಒಡೆದು ಎಲೆಯನ್ನು ಬಿಟ್ಟು ನೇಸರನ ಬೆಳಕಿನ ನೆರವಿನಿಂದ ‘ಬೆಳಕಿನ ಒಂದುಗೆ’ (photosynthesis) ನಡೆಸಿ ತನ್ನ ಊಟವನ್ನು ತಾನೇ ಸಿದ್ದ ಮಾಡಿಕೊಳ್ಳುವವರೆಗೂ ಈ ಬಸಿರ ಪೊರೆಕ ನೋಡಿಕೊಳ್ಳುತ್ತಿರುತ್ತದೆ.

ಸಿಪ್ಪೆಯ ಒಳಗೆ ಬಸಿರು ಬೆಳೆಯುತ್ತಿದ್ದಂತೆ ಒಳಗಿನ ಒತ್ತಡ ಹೆಚ್ಚಾಗಿ ಸಿಪ್ಪೆಯು ಒಡೆದು ಬಿಡುತ್ತದೆ. ಸಿಪ್ಪೆಯನ್ನು ಒಡೆದ ಬಸಿರು ಮೊದಲು ತಾಯಿಬೇರಾಗಿ (radicle) ಹೊರಬರುತ್ತದೆ. ಈ ತಾಯಿಬೇರು ಸುತ್ತಲಿನಲ್ಲಿರುವ ಮಣ್ಣನ್ನು ಸೀಳಿಕೊಂಡು ಬೆಳೆಯತೊಡಗುತ್ತದೆ. ಮಣ್ಣಿನಲ್ಲಿರುವ ನೀರು, ಉಸಿರುಗಾಳಿ, ಬಿಸುಪು ಮತ್ತು ಆರಯ್ಕೆಗಳನ್ನು ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತದೆ.

ಒಮ್ಮೆ ತಾಯಿಬೇರಿನ ಬೆಳವಣಿಗೆ ಗಟ್ಟಿಗೊಂಡಮೇಲೆ ಎಳೆಗರಿಯ(plumule) ಬೆಳವಣಿಗೆ ಶುರುವಾಗುತ್ತದೆ. ಎಳೆಗರಿಯು ಮಣ್ಣಿನ ಒಳಗಿನಿಂದ ನೇಸರನ ಬೆಳಕನ್ನು ಹುಡುಕಿಕೊಂಡು ನೆಲದ ಮೇಲ್ಭಾಗಕ್ಕೆ ಬರುತ್ತದೆ. ಹಲವು ಬಗೆಯ ಮೊಳಕೆಗಳಲ್ಲಿ ಎಳೆಗರಿಯನ್ನು ಕಾಯಲು ಬೀಜದ ಸಿಪ್ಪೆಯ ಭಾಗಗಳು ಅಂಟಿಕೊಂಡಿರುತ್ತದೆ. ಎಳೆಗರಿಯು ಬೆಳೆದು ಮೊದಲ ಮೊಳಕೆ ಎಲೆಗಳನ್ನು (Cotyledons) ಬಿಡುತ್ತದೆ ಆಗ ಈ ಸಿಪ್ಪೆಯ ಬಾಗಗಳು ಉದುರಿ ಬೀಳುತ್ತವೆ. ಈ ಎಲೆಗಳು ನೇಸರನ ಬೆಳಕಿನ ನೆರವಿನಿಂದ ತಮ್ಮ ಊಟವನ್ನು ಸಿದ್ದಮಾಡಲಾರಂಬಿಸುತ್ತವೆ. ಈ ಹೊತ್ತಿನಲ್ಲಿ ತಾಯಿಬೇರು ಕೂಡ ಕವಲೊಡೆದು ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ಮುಂದೆ ಮೊಳಕೆಯೊಡೆದ ಬೀಜದ ಕಾಂಡ ಹಾಗು ಎಲೆಗಳು ಬಿಟ್ಟು ಬೆಳೆಯುತ್ತದೆ.

ಹೀಗೆ ಒಂದು ಬೀಜವು ಮಣ್ಣಿಗೆ ಸೇರಿ ಮೊಳೆಕೆ ಒಡೆದು ಎಲೆಯಾಗುವವರೆಗೂ ಹಲವು ಹಂತಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ಕೆಲಸದಲ್ಲಿ, ಗಾಳಿ, ನೀರು, ಬಿಸುಪು ಮತ್ತು ಬೆಳಕು ದೊಡ್ಡ ಪಾತ್ರವನ್ನು ವಹಿಸುತ್ತವೆ.

 

(ಮಾಹಿತಿ ಸೆಲೆ :intechopen.comnature.com wikipedia.org), (ಚಿತ್ರ ಸೆಲೆ : commons.wikimedia.org)