ಪಾತಿಯ ಬುಟ್ಟಿಗಳಲ್ಲಿ ಕಾಫಿಗಿಡದ ಬೆಳವಣಿಗೆ

ರತೀಶ ರತ್ನಾಕರ.

ಕಾಫಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಫಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಫಿ ಬೀಜವು ಸುಮಾರು 40 ರಿಂದ 50 ದಿನದಲ್ಲಿ 200 – 300 ಮಿ.ಮೀ ಬೆಳೆಯುತ್ತದೆ. ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಿ ಎರಡನೇ ಹಂತದ ಬೆಳವಣಿಗೆಯನ್ನು ನೋಡಿಕೊಳ್ಳಲಾಗುತ್ತದೆ.

ಪಾತಿ ಮಾಡುವುದು:
ಮೊಳಕೆಯೊಡೆದ ಕಾಫಿಗಿಡದ ಮುಂದಿನ ಬೆಳವಣಿಗೆಗಾಗಿ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ನೆಟ್ಟು, ಪಾತಿಯನ್ನು ಮಾಡಿ ನೋಡಿಕೊಳ್ಳಲಾಗುತ್ತದೆ. ಕಾಫಿಗಿಡಗಳಿಗೆ ಕಡಿಮೆ ಎಂದರು 8 ಇಂಚು ಎತ್ತರ ಮತ್ತು 3 ಇಂಚು ಅಡ್ಡಗಲ ಇರುವ ಪ್ಲಾಸ್ಟಿಕ್ ಬುಟ್ಟಿಗಳು ಬೇಕು. ಮಣ್ಣಿನಲ್ಲಿರುವ ಕೊಳಚೆ ಹಾಗು ಹೆಚ್ಚಿನ ನೀರು ಹರಿದು ಹೋಗುವಂತೆ ಚಿಕ್ಕ ಚಿಕ್ಕ ಕಿಂಡಿಗಳು ಪ್ಲಾಸ್ಟಿಕ್ ಬುಟ್ಟಿಯಲ್ಲಿರಬೇಕು.

ಈ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬುವ ಮಣ್ಣಿನಲ್ಲಿ ಸಾಕಷ್ಟು ಸಾರವಿರಬೇಕು. ಸಾರವಿರುವ ಕಾಡಿನ ಮಣ್ಣಿಗೆ ಕೊಟ್ಟಿಗೆ ಗೊಬ್ಬರವನ್ನು ಕಲೆಸಿ, ಮಣ್ಣು ಅಂಟಿಕೊಳ್ಳದಂತೆ ಸಡಿಲವಾಗಿರಲು ಮರಳನ್ನು ಕೂಡ ಸೇರಿಸಿ ಮಣ್ಣನ್ನು ಅಣಿಗೊಳಿಸಲಾಗುವುದು. ಗಿಡದ ಬೆಳವಣಿಗೆಗೆ ಬೇಕಾದ ಪಾಸ್ಪೇಟ್ ಹಾಗು ನೈಟ್ರೋಜನ್ ಹೊಂದಿರುವ ಗೊಬ್ಬರವನ್ನು ಕೂಡ ಬಳಸಲಾಗುತ್ತದೆ. ಕಾಫಿ ಸಿಪ್ಪೆಯ ಗೊಬ್ಬರವನ್ನು ಕೂಡ ಈ ಮಣ್ಣಿಗೆ ಬೆರೆಸಿದರೆ ಮಣ್ಣಿನ ಸಾರ ಹೆಚ್ಚುತ್ತದೆ. ಹೀಗೆ ಗೊಬ್ಬರವನ್ನು ಹೊಂದಿರುವ, ಹುಡಿಯಾಗಿರುವ ಮಣ್ಣನ್ನು ಚೆನ್ನಾಗಿ ಕಲೆಸಿ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸಬೇಕು. ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸುವಾಗ ಹೆಚ್ಚು ಒತ್ತಿ ತುಂಬಿಸದೆ, ಬುಟ್ಟಿಯೊಳಗಿರುವ ಮಣ್ಣಿನಲ್ಲಿ ಗಾಳಿ ಮತ್ತು ನೀರು ಯಾವ ತೊಡಕಿಲ್ಲದೆ ಓಡಾಡಲು ಆಗುವಂತೆ ಮಣ್ಣನ್ನು ತುಂಬಿಸಬೇಕು.

ಒಂದು ಪಾತಿಯ ಸಾಲು ಸುಮಾರು 3 ಅಡಿ ಅಗಲ ಮತ್ತು 20 ರಿಂದ 30 ಅಡಿಗಳಷ್ಟು ಉದ್ದವಿರುತ್ತದೆ. ಪಾತಿಯ ಸಾಲಿನ ಬದಿಗೆ ಬಿದಿರಿನ ತಟ್ಟೆಗಳನ್ನು ಹೊಡೆದು ಇಲ್ಲವೇ ಮರದ ಹಲಗೆಗಳನ್ನು ಇರಿಸಿ 30 x 3 ಅಡಿ ಉದ್ದಗಲದ ಕಟ್ಟೆಯನ್ನು ಮಾಡಲಾಗುತ್ತದೆ. ಈ ಕಟ್ಟೆಯ ಒಳಗೆ ಮಣ್ಣು ತುಂಬಿರುವ ಪ್ಲಾಸ್ಟಿಕ್ ಬುಟ್ಟಿಗಳನ್ನು ನೇರವಾಗಿ ಮತ್ತು ಸಾಲಾಗಿ ಒಂದರ ಪಕ್ಕ ಒಂದರಂತೆ ಜೋಡಿಸಿಡಲಾಗುತ್ತದೆ. (ಈ ಕೆಳಗಿನ ಚಿತ್ರವನ್ನು ನೋಡಿ) ಇದು ಬುಟ್ಟಿಗಳು ಗಟ್ಟಿಯಾಗಿ ಹಾಗು ನೇರವಾಗಿ ನಿಲ್ಲಲು ನೆರವಾಗುತ್ತದೆ.

ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಗಿಡಗಳನ್ನು ಕಿತ್ತು, ಜೋಡಿಸಿಟ್ಟ ಬುಟ್ಟಿಗಳಿಗೆ ತಂದು ನೆಡಬೇಕು. ಈ ಹಂತದಲ್ಲಿ ಕೆಳಗಿನ ಮಾಹಿತಿಗಳನ್ನು ಗಮನದಲ್ಲಿಡಬೇಕು.

  1. ಮಣ್ಣಿನ ಹಾಸಿಗೆಯಿಂದ ಗಿಡಗಳನ್ನು ಕೀಳುವಾಗ ಸಾಕಷ್ಟು ಎಚ್ಚರದಿಂದ ಕೀಳಬೇಕು. ಮೊಳಕೆಯೊಡೆದ ಗಿಡಗಳಿಗೆ ಮತ್ತು ಬೇರುಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು.
  2. ಕಿತ್ತ ಗಿಡಗಳಲ್ಲಿ ಚೆನ್ನಾಗಿ ಕುಡಿಯೊಡೆದಿರುವ ಮತ್ತು ನಲ್ಲಿಬೇರುಗಳು (tap roots) ನೇರವಾಗಿರುವ ಗಿಡಗಳನ್ನು ಮಾತ್ರ ಆರಿಸಿಕೊಳ್ಳಬೇಕು.
  3. ಗಿಡದ ಬೇರುಗಳು ಡೊಂಕಾಗಿದ್ದರೆ ಇಲ್ಲವೇ ಬೇರುಗಳಲ್ಲಿ ಕೂದಲುಗಳು (root hairs) ಕಡಿಮೆಯಿದ್ದರೆ ಅವನ್ನು ಬಳಸಬಾರದು.
  4. ಹುಳ ತಿಂದಿರುವ ಇಲ್ಲವೇ ಜಡ್ಡು ಹಿಡಿದಿರುವ ಮೊಳೆಕೆಯ ಗಿಡಗಳನ್ನು ಬಳಸಬಾರದು.
  5. ಅಗತ್ಯಕ್ಕಿಂತ ಹೆಚ್ಚು ಎಲೆಗಳನ್ನು ಹೊಂದಿರುವ ಗಿಡಗಳನ್ನು ಆರಿಸಿಕೊಳ್ಳಬಾರದು. ಏಕೆಂದರೆ, ಮುಂದೆ ಇವುಗಳ ಬೆಳವಣಿಗೆ ತೀರಾ ಕಡಿಮೆಯಾಗುತ್ತದೆ.

ಹೀಗೆ ಆರಿಸಿಕೊಂಡ ಮೊಳಕೆಯ ಗಿಡಗಳನ್ನು ಕೂಡಲೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಈ ಕೆಳಗಿನ ಹಂತಗಳ ಮೂಲಕ ನೆಡಬೇಕು.

  1. ತಂಪಾದ ಹೊತ್ತಿನಲ್ಲಿ ಗಿಡನೆಡುವ ಕೆಲಸವಿಟ್ಟುಕೊಳ್ಳಬೇಕು, ಅಂದರೆ ಬೆಳಗಿನ ಜಾವ ಇಲ್ಲವೇ ಸಂಜೆಯ ಹೊತ್ತು.
  2. ಪಾತಿಯ ಬುಟ್ಟಿಗಳಿಗೆ ಚೆನ್ನಾಗಿ ನೀರುಣಿಸಬೇಕು.
    ಪಾತಿಯ ಬುಟ್ಟಿಗಳಿಗೆ ನೀರುಣಿಸಿದ ಮೇಲೆ, ಚೂಪಾದ ಕಡ್ಡಿಯಿಂದ ಸುಮಾರು 50 ಮಿ.ಮೀ ತೂತವನ್ನು ಕೊರೆಯಬೇಕು.
  3. ಮಣ್ಣಿನ ಹಾಸಿಗೆಯಿಂದ ಕಿತ್ತು ಆರಿಸಿದ ಗಿಡವನ್ನು ತಂದು ಬುಟ್ಟಿಗೆ ನೆಡಬೇಕು. ಮೊಳಕೆಯ ಗಿಡವನ್ನು ನೆಡುವಾಗ ನಲ್ಲಿಬೇರು ಬಾಗದಂತೆ ನೇರವಾಗಿ ನೆಟ್ಟು, ಬುಟ್ಟಿಯ ಮೇಲಿರುವ ಮಣ್ಣಿನಿಂದ ಮೆದುವಾಗಿ ಒತ್ತಬೇಕು.
  4. ಒಂದು ವೇಳೆ ನಲ್ಲಿಬೇರಿನ ಉದ್ದ ಹೆಚ್ಚಾಗಿದ್ದರೆ ಅದರ ಉದ್ದಕ್ಕೆ ಬೇಕಾದ ತೂತವನ್ನು ಬುಟ್ಟಿಯೊಳಗೆ ಮಾಡಿ ನೆಡಬೇಕು.
  5. ಗಿಡವನ್ನು ನೆಟ್ಟ ಮೇಲೆ ಪಾತಿಗೆ ಚೆನ್ನಾಗಿ ನೀರುಣಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ನೀರುಣಿಸಬಾರದು.
  6. ಪಾತಿಯನ್ನು ಮಳೆ ಮತ್ತು ಬಿಸಿಲಿನಿಂದ ಕಾಪಾಡಲು ಮೊದಲೇ ಚಪ್ಪರವನ್ನು ಮಾಡಿರಬೇಕು. ಹಸಿರು ಮನೆಯ ಒಳಗೂ ಪಾತಿಯನ್ನು ಮಾಡಬಹುದು. ಗಿಡಗಳ ಬೆಳವಣಿಗೆಯಲ್ಲಿ ಹಸಿರು ಮನೆಯು ಹೇಗೆ ನೆರವಾಗುತ್ತದೆ ಎಂದು ‘ಹಸಿರುಮನೆಯ ಗುಟ್ಟು’ ಬರಹದಲ್ಲಿ ತಿಳಿಯಬಹುದು.
  7. ಪಾತಿಯ ಒಳಗೆ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತಿರಬೇಕು.
  8. ಕಾಫಿ ಬುಟ್ಟಿಗಳಲ್ಲಿ ಬರುವ ಕಳೆಗಿಡಗಳನ್ನು ತೆಗೆಯುತ್ತಿರಬೇಕು.
  9. ಪ್ರತಿ ಹದಿನೈದು ದಿನಗಳಿಗೊಮ್ಮೆ ಯೂರಿಯ (46:0:0) ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕಬೇಕು. ಸುಮಾರು 60 ಗ್ರಾಂ ಯೂರಿಯ ಗೊಬ್ಬರವನ್ನು 100 ಗಿಡಗಳಿಗೆ ಆಗುವಷ್ಟು ಹಾಕಬಹುದು. ಸಾವಯವ ಬೇಸಾಯ ಮಾಡುವವರು ಕೊಟ್ಟಿಗೆ ಗೊಬ್ಬರವನ್ನು ಚೆನ್ನಾಗಿ ಹುಡಿಮಾಡಿ ಹಾಕಬಹುದು. ಕಾಫಿ ಗಿಡದ ಎಲೆಗಳು ಕಂದು ಹಸಿರು ಬಣ್ಣಕ್ಕೆ ತಿರುಗುವಂತಿದ್ದರೆ ಗೊಬ್ಬರವನ್ನು ಕೊಡುವುದು ನಿಲ್ಲಿಸಬೇಕು.
  10. ಪಾತಿಯಲ್ಲಿ ಯಾವುದೇ ಹುಳ-ಹುಪ್ಪಟೆಗಳು ಆಗದಂತೆ ನೋಡಿಕೊಳ್ಳುತ್ತಿರಬೇಕು. ಯಾವುದಾದರು ಗಿಡಕ್ಕೆ ಜಡ್ಡು ಬಂದರೆ ಕೂಡಲೆ ಆ ಗಿಡದ ಬುಟ್ಟಿಯನ್ನು ಬೇರೆ ಮಾಡಿ ಸುಡಬೇಕು ಇಲ್ಲವೇ ದೂರೆ ಎಸೆಯಬೇಕು.

ಪಾತಿಯ ಬುಟ್ಟಿಯಲ್ಲಿನ ಗಿಡಗಳು ಸುಮಾರು 3 ತಿಂಗಳಿಗೆ ಒಂದರಿಂದ ಒಂದೂವರೆ ಅಡಿ ಎತ್ತರಕ್ಕೆ ಬೆಳೆಯಬಲ್ಲವು. ಈಗ ಈ ಗಿಡಗಳು ತೋಟದ ಮಣ್ಣಿನಲ್ಲಿ ನೆಡಲು ಸಿದ್ದವಾದಂತೆ. ಜನವರಿ-ಪ್ರೆಬ್ರವರಿಯಲ್ಲಿ ಮಣ್ಣಿನ ಹಾಸಿಗೆಗೆ ಹೋದ ಕಾಫಿ ಬೀಜಗಳು, ಮಾರ್ಚ್-ಏಪ್ರಿಲ್ ನಲ್ಲಿ ಮೊಳಕೆಯೊಡೆದು ಮೊದಲ ಹಂತದ ಬೆಳವಣಿಗೆಯನ್ನು ಮುಗಿಸುತ್ತವೆ. ಏಪ್ರಿಲ್ ನಿಂದ ಜೂನ್ ವರೆಗೆ ಪಾತಿಯ ಬುಟ್ಟಿಗಳಲ್ಲಿ ತಮ್ಮ ಎರಡನೇ ಹಂತದ ಬೆಳವಣಿಗೆಯನ್ನು ಮುಗಿಸಿಕೊಂಡು, ಸರಿಯಾಗಿ ಮಳೆಗಾಲದ ಹೊತ್ತಿಗೆ ಅಂದರೆ ಜೂನ್ – ಜುಲೈ ತಿಂಗಳಿನಲ್ಲಿ ತೋಟದ ಜಾಗದಲ್ಲಿ ನೆಡಲು ಸಿಗುತ್ತವೆ. ಜನವರಿಯಿಂದ ಜುಲೈವರೆಗೆ ಬೆಳೆಯುವ ಬುಟ್ಟಿಗಿಡಗಳನ್ನು ‘ಒಂದು ನೀರು’ ಗಿಡ ಎಂದು ಕರೆಯುತ್ತಾರೆ. ಒಂದು ವೇಳೆ ಈ ಜುಲೈ ಮಳೆಗಾಲಕ್ಕೆ ನೆಡದೇ ಮುಂದಿನ ವರುಶದ ಜುಲೈ ಮಳೆಗಾಲದ ವರೆಗೂ ಕಾಫಿಗಿಡಗಳು ಬುಟ್ಟಿಯಲ್ಲೇ ಬೆಳೆದರೆ ಅವನ್ನು ‘ಎರೆಡು ನೀರು’ ಗಿಡ ಎಂದು ಕರೆಯಲಾಗುತ್ತದೆ.

ಕಾಫಿಗಿಡವನ್ನು ತೋಟದ ಮಣ್ಣಿನಲ್ಲಿ ನೆಡುವುದಕ್ಕಿಂತ ಮುಂಚೆ ಹೀಗೆ ಎರೆಡು ಹಂತಗಳಲ್ಲಿ ಗಿಡದ ಆರೈಕೆಯನ್ನು ಮಾಡಬೇಕಾಗುತ್ತದೆ.

(ಚಿತ್ರ ಸೆಲೆ: dailycoffeenews.comwikimedia )

ಕಾಫಿಬೀಜದ ಬಿತ್ತನೆ ಮತ್ತು ಆರೈಕೆ

ರತೀಶ ರತ್ನಾಕರ.

ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಫಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಫಿ ಗುಟುಕನ್ನು ಕುಡಿಯುವಾಗ,ಕಾಫಿಯು ಕಾಫಿಯಾಗಲು ಮಾಡಬೇಕಾದ ಕೆಲಸಗಳೆಷ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಫಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು ಬೆಳೆದು ಬಂದ ಬಗೆ ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಕಾಫಿ ಬೆಳೆಯುವ ಕುಟುಂಬದಿಂದಲೇ ಬೆಳೆದು, ಕಾಫಿ ಬೆಳೆಯುವ ಬಗೆಯನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಇದರ ಬೇಸಾಯದ ಅರಿವನ್ನು ಆದಷ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಫಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ ನಡುವಿನ ಬೇರ‍್ಮೆಯನ್ನು ತಿಳಿದೆವು. ಈ ಬರಹದಲ್ಲಿ ಕಾಫಿಯನ್ನು ಬೆಳೆಯುವ ಮೊದಲ ಹಂತವಾದ ಕಾಫಿ ಗಿಡಮನೆ (Nursery) ಮಾಡುವುದರ ಕುರಿತು ಕೊಂಚ ಅರಿಯೋಣ.

ಬೀಜಗಳ ಆಯ್ಕೆ:
ಕಾಫಿಯ ಮುಂದಿನ ತಲೆಮಾರಿಗೆ ಬೇಕಾದ ಕಾಫಿ ಬೀಜವನ್ನು ಆಯ್ದುಕೊಳ್ಳುವುದು ಒಂದು ಅರಿದಾದ ಕೆಲಸ. ತೋಟದ ನಡುವೆ ಇರುವ ಆರೋಗ್ಯಕರವಾದ, ಒಳ್ಳೆಯ ಇಳುವರಿಯನ್ನು ಕೊಡುತ್ತಿರುವ ಕಾಫಿ ಗಿಡದಿಂದ ತುಂಬಾನೇ ಚೆನ್ನಾಗಿರುವ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ಹಣ್ಣುಗಳು ದೊಡ್ಡದಿದ್ದಷ್ಟು ಒಳ್ಳೆಯದು. ಮೊದಲೇ ತಿಳಿದಿರುವಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗು ಕಾಫಿ ಹಣ್ಣಿನ ಕಾಲ. ಈ ಹೊತ್ತಿನಲ್ಲಿ, ಗಿಡದಲ್ಲಿರುವ ಕಾಫಿಯು ಚೆನ್ನಾಗಿ ಹಣ್ಣಾದ ಕೂಡಲೇ ಹಣ್ಣುಗಳನ್ನು ಕಿತ್ತುಕೊಂಡಿರಬೇಕು.

ಕಿತ್ತ ಕಾಫಿ ಹಣ್ಣಿನ ಸಿಪ್ಪೆಗಳನ್ನು ಬಿಡಿಸಿ, ಕಾಫಿ ಬೀಜಗಳನ್ನು ಆರಿಸಬೇಕು. ನೆನಪಿರಲಿ, ಒಂದು ಕಾಫಿ ಹಣ್ಣಿನಲ್ಲಿ ಎರೆಡು ಕಾಫಿ ಬೀಜಗಳಿರುತ್ತವೆ. ಒಂದು ವೇಳೆ ಕಾಫಿ ಹಣ್ಣಿನಲ್ಲಿ ಒಂದೇ ಬೀಜವಿದ್ದರೆ ಇಲ್ಲವೇ ಒಂದು ಬೀಜ ದೊಡ್ಡದಾಗಿದ್ದು ಇನ್ನೊಂದು ತುಂಬಾ ಚಿಕ್ಕದಾಗಿದ್ದರೆ ಅಂತಹ ಬೀಜಗಳನ್ನು ಮೊಳಕೆ ಬರಿಸಲು ಆಯ್ದುಕೊಳ್ಳಬಾರದು. ಹೀಗೆ ಸಿಪ್ಪೆ ಬಿಡಿಸಿದ ಬೀಜಗಳ ಮೇಲ್ಮೈನಲ್ಲಿ ಲೋಳೆಯು ಇರುತ್ತದೆ, ಈ ಲೋಳೆಯಿಂದಾಗಿ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು, ಅಂಟಿಕೊಂಡ ಅವನ್ನು ಬಿಡಿಸಿದಾಗ ಬೀಜಗಳಿಗೆ ಗಾಯವಾಗಿ ಹಾಳಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಕೆಲವರು ಕಾಫಿ ಹಣ್ಣನ್ನು ಬಿಡಿಸಿದ ಕೂಡಲೇ ತೊಳೆಯುತ್ತಾರೆ ಇಲ್ಲವೇ ಬೂದಿಯನ್ನು ಬೀಜಗಳಿಗೆ ಹಾಕಿ ಕಲಿಸುತ್ತಾರೆ. ಬೂದಿಯನ್ನು ಬಳಸುವುದರಿಂದ ಇನ್ನೊಂದು ಉಪಕಾರವೆಂದರೆ, ಬೂದಿಯು ಬೀಜದ ಸುತ್ತಲೂ ಅಂಟಿಕೊಳ್ಳುವುದರಿಂದ ಇರುವೆ ಇಲ್ಲವೇ ಮತ್ತಿತರ ಕೀಟಗಳಿಂದ ಬೀಜಗಳನ್ನು ಕಾಪಾಡಿಕೊಳ್ಳಬಹುದು. ಇದೇ ಕೆಲಸ ಮಾಡುವಂತಹ ಯಾವುದಾದರು ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಸಿಕ್ಕರೆ ಅವನ್ನು ಕೂಡ ಬಳಸಬಹುದು. ಬೂದಿಯನ್ನು ಬಳಸುವುದು ಕೊಂಚ ಹಳೆಯ ಪದ್ದತಿ, ಬೂದಿಯನ್ನು ಬೀಜಗಳ ಜೊತೆ ಕಲೆಸುವಾಗ ಬೀಜದ ಮೇಲಿನ ಸಿಪ್ಪೆಗೆ ಗಾಯವಾಗುವ ಸಾದ್ಯತೆಗಳೂ ಇವೆ.

ಹೀಗೆ ಅಣಿಗೊಳಿಸಿದ ಬೀಜಗಳನ್ನು ಬಲೆಯಂತಿರುವ ತಟ್ಟೆಗಳು ಇಲ್ಲವೇ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿಟ್ಟು ಎರೆಡರಿಂದ ಮೂರು ದಿನಗಳ ಕಾಲ ಆರಿಸಬೇಕು. ಹರಡಿರುವ ಬೀಜಗಳ ನಡುವೆ ಚೆನ್ನಾಗಿ ಗಾಳಿ ಓಡಾಡುವಂತಿರಬೇಕು. ಬೀಜದಲ್ಲಿರುವ ಪಸೆ (moisture) 10% ಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು. ಬಿಸಿಲಿನಲ್ಲಿ ಇಲ್ಲವೇ ಹೆಚ್ಚು ದಿನಗಳ ಕಾಲ ಒಣಗಿಸಿದರೆ ಪಸೆಯು 10% ಗಿಂತ ಕಡಿಮೆಯಾಗಬಹುದು. ಆರಿದ ಬೀಜಗಳಿಂದ ಗಾಯಗೊಂಡ ಇಲ್ಲವೇ ಚೆನ್ನಾಗಿಲ್ಲದ ಬೀಜಗಳನ್ನು ಆರಿಸಿ ತೆಗೆಯಬೇಕು. ಈಗ ನಿಮ್ಮ ಮುಂದಿನ ತಲೆಮಾರಿನ ಕಾಫಿಗಿಡಗಳಿಗೆ ಬೇಕಾದ ಬೀಜಗಳು ಸಿದ್ದವಾದಂತೆ. ಹೀಗೆ ಸಿದ್ದವಾದ ಬೀಜಗಳನ್ನು ಆದಷ್ಟು ಬೇಗ ಮೊಳಕೆಗಾಗಿ ನೆಡಬೇಕು ಇಲ್ಲವಾದರೆ ಮೊಳಕೆ ಬರುವ ಸಾದ್ಯತೆಗಳು ಕಡಿಮೆ. ಬೀಜಗಳನ್ನು ಆದಷ್ಟು ಕಡಿಮೆ ಬಿಸುಪು ಮತ್ತು ಹೆಚ್ಚು ಪಸೆಯಿರುವ ಜಾಗದಲ್ಲಿ ಕಾಪಿಟ್ಟುಕೊಳ್ಳಬೇಕು.

ಮೊಳಕೆಗೆ ಬೀಜ ಬಿತ್ತನೆ:

ಬೀಜಗಳನ್ನು ಮೊಳಕೆಗೆ ಹಾಕುವ ಮೊದಲು ಎಷ್ಟು ಗಿಡಗಳು ತಮಗೆ ಬೇಕಾಗಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಕೆ.ಜಿ. ಕಾಫಿ ಬೀಜದಲ್ಲಿ ಸುಮಾರು 3000ದಿಂದ 4000 ಬೀಜಗಳು ಸಿಗುತ್ತವೆ. ಇವುಗಳಲ್ಲಿ 75% ನಷ್ಟು ಬೀಜಗಳು ಮೊಳಕೆ ಬರಬಹುದು ಎಂಬ ಲೆಕ್ಕಾಚಾರವಿದೆ. ತಮಗೆ ಎಷ್ಟು ಕಾಫಿಗಿಡಗಳು ಬೇಕಾಗಬಹುದು ಎಂದು ಎಣಿಸಿಕೊಂಡು ಮೊಳಕೆಗೆ ಅಷ್ಟು ಬೀಜಗಳನ್ನು ಅಣಿಗೊಳಿಸಬೇಕು.

ಮೊಳಕೆಗೆ ಹಾಕಲು ಮೊದಲು ಮಣ್ಣಿನ ಹಾಸಿಗೆಯನ್ನು ಅಣಿಮಾಡಬೇಕು. ಮಣ್ಣಿನ ಹಾಸಿಗೆಯು ಸುಮಾರು 1.2 ಮೀಟರ್ ಅಗಲವಾಗಿರಬೇಕು ಮತ್ತು ಸಾಕಷ್ಟು ಉದ್ದ ಅಂದರೆ ಸುಮಾರು 6 ಮೀಟರ್ ನಷ್ಟು ಇರಬೇಕು. ಮಣ್ಣಿನ ಹಾಸಿಗೆಯ ಎತ್ತರ ನೆಲದಿಂದ ಸುಮಾರು 15 ಸೆ.ಮೀ ನಷ್ಟಿರಬೇಕು. ಹಾಸಿಗೆಯಲ್ಲಿರುವ ಮಣ್ಣನ್ನು ಚೆನ್ನಾಗಿ ಅಗೆದು ಸಡಿಲಗೊಳಿಸರಬೇಕು, ಸಾಕಷ್ಟು ಸಾರವಿರುವ ಕಾಡಿನ ಮಣ್ಣನ್ನು ತಂದು ಇದರ ಜೊತೆ ಸೇರಿಸಿದರೆ ಒಳ್ಳೆಯದು. ಬೀಜಗಳಿಗೆ ಬೇಕಾದ ಗೊಬ್ಬರಕ್ಕಾಗಿ ಸಗಣಿ ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಬೇಕು. ಇದರ ಜೊತೆಗೆ ಬೀಜದ ಮೊಳಕೆಗೆ ನೆರವಾಗುವಂತಹ ಪಾಸ್ಪೇಟ್ ಗೊಬ್ಬರ (ಸಾವಯವ ಇಲ್ಲವೇ ರಾಸಾಯನಿಕ ಎಂಬುದು ಬೆಳೆಗಾರರಿಗೆ ಬಿಟ್ಟದ್ದು) ವನ್ನು ಬಳಸಬೇಕು. ಸುಮಾರು 1 ಮೀ. ಉದ್ದದ ಜಾಗಕ್ಕೆ 100 ಗ್ರಾಂ ಪಾಸ್ಪೇಟ್ ಗೊಬ್ಬರ ಬೇಕಾಗುತ್ತದೆ. ಕೇವಲ ಮಣ್ಣು ಮತ್ತು ಗೊಬ್ಬರವನ್ನು ಕಲೆಸಿದಾಗ ಮಣ್ಣೇನಾದರು ಕೊಂಚ ಗಟ್ಟಿಯಾದರೆ ಇಲ್ಲವೇ ಅಂಟು ಅಂಟಾದರೆ ಮರಳನ್ನು ಸೇರಿಸಿ ಕಲೆಸಿದರೆ ಒಳ್ಳೆಯದು ಆಗ ಮಣ್ಣು ಸಡಿಲವಾಗಿ ಮೊಳಕೆ ಬರಲು ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಮಣ್ಣಿನ ಹಾಸಿಗೆಯನ್ನು ಮಾಡುವುದಾದರೆ ಒಂದು ಹಾಸಿಗೆಯಿಂದ ಇನ್ನೊಂದರ ನಡುವೆ ಕಡಿಮೆ ಎಂದರೂ 60 ಸೆ.ಮೀ ಜಾಗವಿರಬೇಕು.

ಹೀಗೆ ಆಣಿಗೊಳಿಸಿದ ಮಣ್ಣಿನ ಹಾಸಿಗೆಯ ಮೇಲೆ ಈಗ ಬೀಜಗಳನ್ನು ನೆಡುವ ಕೆಲಸ. ಇದನ್ನು ಈ ಕೆಳಗಿನಂತೆ ಮಾಡಬಹುದು

  1. ಮೊಳಕೆಗೆ ಬೀಜ ನೆಡುವ ಮೊದಲು ಮಣ್ಣಿನ ಹಾಸಿಗೆಗೆ ಚೆನ್ನಾಗಿ ನೀರು ಹಾಕಬೇಕು.
  2. ಒಂದು ಚೂಪಾದ ಕಡ್ದಿಯಿಂದ ಮಣ್ಣಿನ ಹಾಸಿಗೆಯ ಮೇಲೆ 12 ಮಿ.ಮೀ ಆಳದ ಸಾಲುಗುಂಡಿಗಳನ್ನು ಮಾಡಬೇಕು. ಒಂದು ಸಾಲಿನ ಎರೆಡು ಗುಂಡಿಗಳ ನಡುವೆ 25 ಮಿ.ಮೀ ಜಾಗವಿರಬೇಕು.
  3. ಮಣ್ಣಿನ ಹಾಸಿಗೆಯ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸುಮಾರು 100 ಮಿ.ಮೀ ದೂರವಿರಬೇಕು.
  4. ಆರಿಸಿದ ಬೀಜಗಳನ್ನು 12 ಮಿ.ಮೀ ಗುಂಡಿಯೊಳಗೆ ಮೆದುವಾಗಿ ಊರಬೇಕು. ನೆನಪಿರಲಿ, ಬೀಜವು ಹೆಚ್ಚು ಆಳಕ್ಕೆ ಹೋಗಬಾರದು.
  5. ಕಾಫಿ ಬೀಜದ ಆಕಾರದಲ್ಲಿ ಒಂದು ಕಡೆ ಮಟ್ಟವಾಗಿದ್ದು ಇನ್ನೊಂದು ಕಡೆ ಅರೆ ಮೊಟ್ಟೆಯಾಕಾರದಲ್ಲಿರುತ್ತದೆ. ಮಟ್ಟವಾಗಿರುವ ಕಡೆಯನ್ನು ನೆಲಕ್ಕೆ ಮುಖಮಾಡಿ ಬೀಜವನ್ನು ಬಿತ್ತಬೇಕು.
  6. ಮಣ್ಣಿನ ಹಾಸಿಗೆಯಲ್ಲಿರುವ ಪಸೆಯು ಆರದಂತೆ ಮತ್ತು ಬಿಸಿಲಿನಿಂದ ಬಿತ್ತನೆಯನ್ನು ಕಾಪಾಡಲು ಒಣಗಿದ ಹುಲ್ಲು ಇಲ್ಲವೇ ಅಡಿಕೆ ಸೋಗೆಯನ್ನು ಈ ಹಾಸಿಗೆಯ ಮೇಲೆ ತೆಳುವಾಗಿ ಹರಡಬೇಕು. ಹೆಚ್ಚಿನ ಬಿಸಿಲು ಇಲ್ಲವೇ ಮಳೆಯಿದ್ದಲ್ಲಿ ಬಿತ್ತನೆಯನ್ನು ಕಾಪಾಡಲು ಮಣ್ಣಿನ ಹಾಸಿಗೆಯ ಮೇಲೆ ಸುಮಾರು ಒಂದು ಮೀಟರ್ ಎತ್ತರದ ಚಪ್ಪರವನ್ನು ಹಾಕಿ ಪ್ಲಾಸ್ಟಿಕ್ ಇಲ್ಲವೇ ಸೊಪ್ಪಿನಿಂದ ಮುಚ್ಚಬೇಕು. ಆದರೆ ಸಾಕಷ್ಟು ಗಾಳಿ ಒಡಾಡಲು ಜಾಗವಿರಬೇಕು.
  7. ಮಣ್ಣಿನ ಹಾಸಿಗೆಗೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ನೀರುಣಿಸಬೇಕು. ನೀರುಣಿಸುವಾಗ ಮಣ್ಣು ಸರಿದು ಬೀಜವು ಮಣ್ಣಿನಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು.
  8. ಬಿತ್ತನೆಯ ಆರೈಕೆಯ ಮೇಲೆ ನಿಗಾವಹಿಸಬೇಕು. ಬಿತ್ತನೆಗೆ ತೊಂದರೆ ಕೊಡುವಂತಹ ಕೀಟಗಳು, ರೋಗ ತರುವಂತಹ ಗಿಡಗಳು ಮತ್ತು ಕಳೆಗಿಡಗಳನ್ನು ತೆಗೆಯುತ್ತಿರಬೇಕು.

ಬಿತ್ತಿದ ಬೀಜವು ಹೇಗೆ ಮೊಳಕೆ ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ ತಿಳಿಯಬಹುದು. ಬಿತ್ತಿದ ನಾಲ್ಕು ವಾರಗಳಲ್ಲಿ ಮೊದಲು ತಾಯಿಬೇರು (Radicle) ಬರುತ್ತದೆ, ಬಳಿಕ ಎರೆಡು ಮೊಳಕೆ ಎಲೆಗಳು (Cotyledon) ಮೂಡುತ್ತವೆ. ಈ ಮೊಳಕೆ ಎಲೆಗಳು ಮೊಟ್ಟೆಯಾಕಾರದಲ್ಲಿ ಇದ್ದು ಸುಮಾರು 20 ರಿಂದ 50 ಮಿ.ಮೀ ಅಡ್ಡಗಲವನ್ನು ಹೊಂದಿರುತ್ತದೆ. ಸುಮಾರು ಐದರಿಂದ ಆರನೇ ವಾರದಲ್ಲಿ ಮೊದಲ ಕುಡಿ ಎಲೆಗಳು (Primary leaves) ಮೂಡುತ್ತವೆ. ಇವು ಮೂಡಿದ ಬಳಿಕ ಮೊಳಕೆ ಎಲೆಗಳು ಉದುರಿ ಬೀಳುತ್ತವೆ. ಈ ಹಂತದಲ್ಲಿ ಕುಡಿ ಎಲೆಗಳು ‘ಬೆಳಕಿನ ಅಡುಗೆ’ (Photosynthesis) ನಡೆಸಿ ಸಾಕಷ್ಟು ಊಟವನ್ನು ಗಿಡಕ್ಕೆ ನೀಡುತ್ತಾ ಹೋಗುತ್ತದೆ. ಆಗ ಗಿಡದ ಬೇರುಗಳು ಬೆಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

ಮಣ್ಣಿನ ಹಾಸಿಗೆಗೆ ಹರಡಿದ್ದ ಹುಲ್ಲಿನ ಮುಚ್ಚುಗೆಯನ್ನು ಬೀಜವು ಮೊಳಕೆಯೊಡದಂತೆ ಹಂತ ಹಂತವಾಗಿ ತೆಗೆಯುತ್ತಾ ಹೋಗಬೇಕಾಗುತ್ತದೆ. ಆಗ ಎಳೆಯ ಮೊಳಕೆಗೆ ಸಾಕಷ್ಟು ಗಾಳಿ ಮತ್ತು ಬೆಳಕು ಸಿಕ್ಕಿ ಬೆಳವಣಿಗೆಗೆ ನೆರವಾಗುತ್ತದೆ. ಸುಮಾರು 40 ರಿಂದ 50 ದಿನದಲ್ಲಿ ಬೀಜವು ಮೊಳಕೆಯೊಡೆದು 200 – 300 ಮಿ.ಮೀ ಬೆಳೆಯುತ್ತದೆ. ಈಗ ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಲು ಅಣಿಯಾದಂತೆ. ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಗಿಡದ ಎರಡನೇ ಹಂತದ ಬೆಳವಣಿಯನ್ನು ನೋಡಿಕೊಳ್ಳಲಾಗುತ್ತದೆ. ಈ ಎರಡನೇ ಹಂತಹ ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: fao.org)

 

ಕಾಫಿ ಬೆಳೆ: ಹುಟ್ಟು ಮತ್ತು ಹರವು

ರತೀಶ ರತ್ನಾಕರ.

 

ಹೀಗೊಂದು ಹಳೆಯ ಕತೆ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ ಕುರಿಗಳು ಕಾಡಿನ ನಡುವೆ ಸಿಕ್ಕ ಒಂದು ಬಗೆಯ ಹಣ್ಣನ್ನು ತಿಂದೊಡನೆ ಕುಣಿದು ಕುಪ್ಪಳಿಸ ತೊಡಗಿದವು. ಹಣ್ಣಿನಲ್ಲಿರುವ ಯಾವುದೋ ಒಂದು ಅಂಶ ಕುರಿಗಳಿಗೆ ನಲಿವನ್ನು ತರುತ್ತಿದೆ ಎಂದು ಅರಿತು ಕಾಲ್ಡಿಯೂ ಆ ಹಣ್ಣನ್ನು ತಿಂದು ನೋಡಿದ. ಒಂದು ಬಗೆಯ ರುಚಿಯ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡಿದ ಆ ಹಣ್ಣನ್ನು ತನ್ನವರಿಗೂ ಪರಿಚಯಿಸಿದ.

ಉಲ್ಲಾಸ ನೀಡುವಂತಹ ಆ ಹಣ್ಣನ್ನು ಆಫ್ರಿಕಾದ ಬುಡಕಟ್ಟಿನವರು ಮೊದಲು ಹಾಗೆಯೇ ತಿನ್ನುತ್ತ ಬಳಿಕ ತಮ್ಮ ಊಟದ ಜೊತೆ ತಿನ್ನತೊಡಗಿದರು. ಹೀಗೆ ಮನುಷ್ಯನ ಊಟದ ಪಾಲಿನಲ್ಲಿ ಸೇರಿಕೊಂಡ ಆ ಹಣ್ಣು ಮುಂದೆ ಹಲವಾರು ಬಗೆಯಲ್ಲಿ ಮಾರ್ಪಾಟುಗೊಂಡು ಬೆಳಗ್ಗೆ ಎದ್ದಾಗ ಇಲ್ಲವೇ ಸಂಜೆಯ ಹೊತ್ತಿಗೆ ಕುಡಿಯುವ ಕಾಫಿಯಾಗಿ ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಕಾಲ್ಡಿಯು ಮೊತ್ತ ಮೊದಲ ಬಾರಿಗೆ ತನ್ನ ಕುರಿಗಳ ನೆರವಿನಿಂದ ಆ ಹಣ್ಣನ್ನು ತಿಂದ ಜಾಗದ ಹೆಸರು ‘ಕಪ’ ಎಂದು. ‘ಕಪ’ ಎಂಬ ಜಾಗದಲ್ಲಿ ದೊರೆತ ಹಣ್ಣು ಕಾಫಿಯಾಗಿ ಈಗ ನಮ್ಮ ನಡುವೆ ಹೆಸರುವಾಸಿಯಾಗಿದೆ.

ಹೌದು, ನಾವು ತಿನ್ನುವ ಹಾಗು ಕುಡಿಯುವ ವಸ್ತುಗಳ ಹಿಂದೆ ಸಾಕಷ್ಟು ಹಳಮೆ ಹಾಗು ಅರಿಮೆಯಿದೆ. ಕಾಫಿಯ ಹಳಮೆ ಮೇಲೆ ಹೇಳಿದ ಕತೆಯಿಂದ ಮೊದಲಾಗುತ್ತದೆ, ಈ ಹಳಮೆಯ ಜೊತೆ ನಾವು ಅರಿಯಬೇಕಾದ ಕಾಫಿಯ ಅರಿಮೆ ಕೂಡ ಸಾಕಷ್ಟಿದೆ. ಕಾಫಿಯ ಅರಿಮೆಯ ಮೇಲೆ ಕೊಂಚವಾದರು ಬೆಳಕು ಚೆಲ್ಲಬೇಕೆಂದು ಈ ಸರಣಿ ಬರಹ.

ಜಗತ್ತಿನ ಕಾಫಿ ಬೆಳೆಯುವ ನಾಡುಗಳಲ್ಲಿ ಇಂಡಿಯಾವು ಆರನೇ ಜಾಗದಲ್ಲಿದೆ. ಇಂಡಿಯಾದ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೇ ಮೊದಲ ಜಾಗ. ಇಂಡಿಯಾದಲ್ಲಿ ಬೆಳೆಯುವ ಕಾಫಿಯಲ್ಲಿ 71% ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಕಾಫಿ ಬೆಳೆಯುವ ಮುಖ್ಯ ಜಿಲ್ಲೆಗಳು. ಬೇರೆ ಬೇರೆ ರಾಜ್ಯಗಳಲ್ಲಿಕಾಫಿಯನ್ನು ಬೆಳೆಯುವ ಜಾಗದ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಕರ್ನಾಟಕದಲ್ಲಿ ಬೆಳೆಯುವ ಕಾಫಿಯನ್ನು ನೆರಳಿನ ಜಾಗದಲ್ಲಿ ಬೆಳೆಯುವ ಜಗತ್ತಿನ ರುಚಿಕರವಾದ ಕಾಫಿ ಎಂದು ಗುರುತಿಸಲಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ನೇಸರನ ಬಿಸಿಲಿಗೆ ನೇರವಾಗಿ ಗಿಡವನ್ನು ಬೆಳೆಸಿ ಕಾಫಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಬೆಟ್ಟದ ಸಾಲುಗಳಲ್ಲಿ ಹಲವು ಬಗೆಯ ಮರದ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗ್ಗೆ:
ಕಾಫಿಯು ಗಿಡ ಇಲ್ಲವೇ ಚಿಕ್ಕ ಮರದ ರೂಪದಲ್ಲಿ ಬೆಳೆಯುತ್ತದೆ. ಕಾಫಿಯೇಯ್ (coffeeae) ಎಂಬ ಗಿಡಗಳ ಬುಡಕಟ್ಟು ಮತ್ತು ರುಬಿಯೇಸಿಯಯ್ (Rubiaceae) ಎಂಬ ಕುಟುಂಬಕ್ಕೆ ಈ ತಳಿಯು ಸೇರುತ್ತದೆ. ಕಾಫಿ ಗಿಡವು ಸುಮಾರು 14 ರಿಂದ 15 ಅಡಿಗಳ ವರೆಗೆ ಬೆಳೆಯುತ್ತದೆ. ದಪ್ಪನಾದ ಹಾಗು ಉದ್ದನೆಯ ಒಂದು ಕಾಂಡ ನೆಲದಿಂದ ಹೊರಬಂದು, ಬಳಿಕ ಮೂರು ಹಂತದಲ್ಲಿ ರಕ್ಕೆಗಳು ಕವಲೊಡೆದು, ಒಂದು ದೊಡ್ಡದಾದ ಪೊದೆಯ ಗಿಡದಂತೆ ಕಾಫಿ ಗಿಡವು ಕಾಣುತ್ತದೆ. ಕೊಂಚ ಹೊಳೆಯುವ, ಕೊಂಚ ಮೇಣದ ಪದರ ಮತ್ತು ಕಂದು ಹಸಿರುಬಣ್ಣವನ್ನು ಕಾಫಿಗಿಡದ ಎಲೆಯು ಹೊಂದಿರುತ್ತದೆ. ಕಾಫಿಗಿಡದ ಎಲೆಗಳು ಸುಮಾರು 7 ರಿಂದ 8 ಇಂಚಿನವರೆಗೂ ಉದ್ದವಾಗಿರುತ್ತವೆ.

ಕಾಫಿ ಗಿಡದ ಬೇರುಗಳು ಮುಖ್ಯವಾಗಿ ಮೂರು ಬಗೆಯವು. ಬದಿಯ ಬೇರು (Lateral Roots), ನಲ್ಲಿ ಬೇರು (Tap Roots) ಮತ್ತು ಮೇವಿನ ಬೇರು (Feeder roots). ಬದಿಯ ಬೇರುಗಳು ಗಿಡದಿಂದ ಸುಮಾರು 2 ಮೀಟರ್ಗಳವರೆಗೂ ಹರಡಿಕೊಳ್ಳಬಲ್ಲವು. ನಲ್ಲಿ ಬೇರುಗಳು ನೆಲದ ಅಡಿಗೆ ಸುಮಾರು 1 ರಿಂದ 1.5 ಅಡಿಗಳಷ್ಟು ಬೆಳೆಯಬಲ್ಲವು. ಮೇವಿನ ಬೇರುಗಳು ನೆಲದಿಂದ ಕೇವಲ 20 ಸೆ.ಮೀ. ನಷ್ಟು ಕೆಳಗೆ ಇರುತ್ತವೆ ಆದರೆ ಇವು ಗಿಡದ ಬುಡದಿಂದ ಸುಮಾರು 60-90 ಸೆ.ಮೀ. ದೂರದಿಂದ ಹರಡಿಕೊಂಡಿರುತ್ತವೆ. ಒಟ್ಟಿನಲ್ಲಿ ಗಿಡದ ಬುಡದಿಂದ 30 ರಿಂದ 60 ಸೆ. ಮೀ. ನಷ್ಟು ಆಳಕ್ಕೆ ಸಾಕಷ್ಟು ಕಾಫಿಗಿಡದ ಬೇರುಗಳನ್ನು ಕಾಣಬಹುದು. ಒಂದು ಕಾಫಿ ಗಿಡದ ಬೇರು ಸುಮಾರು 500 ಚದರ ಮೀಟರಿನಷ್ಟು ನೆಲದ ಜಾಗದಿಂದ ನೀರು ಮತ್ತು ಆರಯ್ಕೆಯನ್ನು ಹೀರಿಕೊಳ್ಳಬಲ್ಲವು. ಗಟ್ಟಿಯಾದ ಮತ್ತು ದಪ್ಪನಾಗಿರುವ ಕಾಫಿ ಗಿಡದ ಬೇರು ಬೆಳೆಯಲು ನೈಟ್ರೋಜನ್, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ನ ಅವಶ್ಯಕತೆ ತೀರಾ ಇದೆ, ಅವನ್ನು ಹೀರಿಕೊಳ್ಳಲು ನೆರವಾಗುವಂತಹ ಬೇರಿನ ರೂಪು ರೇಶೆಯನ್ನು ಕಾಫಿ ಗಿಡವು ಹೊಂದಿದೆ.

ಕಾಫಿ ಬೆಳೆಯಲು ಬೇಕಾದ ಗಾಳಿಪಾಡು:
ಕಾಫಿಯ ಬೆಳವಣಿಗೆಗೆ ಸುಮಾರು 15 -28 ಡಿಗ್ರಿ ಸೆಲ್ಶಿಯಸ್ ಬಿಸುಪು ವರುಶವಿಡಿ ಇದ್ದರೆ ಒಳಿತು. ಕೊರೆಯುವ ಚಳಿಯಿದ್ದು, ಹಿಮ ಬೀಳುವಂತಹ ಜಾಗಗಳಲ್ಲಿ ಕಾಫಿಯ ಬೆಳವಣಿಗೆ ಸಾಧ್ಯವಿಲ್ಲ . ಹಾಗೆಯೇ ವರುಶಕ್ಕೆ 60-80 ಇಂಚು ಮಳೆ ಬೀಳಬೇಕು, ಜೊತೆಗೆ ಎರೆಡರಿಂದ ಮೂರು ತಿಂಗಳುಗಳ ಕಾಲ ಅತಿ ಕಡಿಮೆ ಮಳೆಯಿದ್ದು ಬಿಸಿಲು ಸಿಗುವಂತಿರಬೇಕು. ಮಳೆ ಇಲ್ಲವೇ ಚಳಿಯಿಂದ ಕಾಫಿಯ ಗಿಡಕ್ಕೆ ತಂಪು ಹೆಚ್ಚಾದರೆ ಅದರ ಬೆಳವಣಿಗೆಗೆ ಪೆಟ್ಟು ನೀಡಿದಂತೆ, ಹಾಗಾಗಿ ಮಳೆ ಬಿದ್ದೊಡನೆ ಅದರ ನೀರು ಹರಿದು ಹೋಗುವಂತೆ ಮತ್ತು ಗಾಳಿಯು ಚೆನ್ನಾಗಿ ಹರಿದಾಡುವಂತೆ ಇರುವ ಇಳಿಜಾರಿನ ಜಾಗಗಳಲ್ಲಿ ಕಾಫಿಯನ್ನು ಬೆಳಯಲಾಗುತ್ತದೆ. ನೀರು ಹರಿದುಕೊಂಡು ಹೋಗುವಂತಹ ಮತ್ತು ಗಾಳಿಗೆ ಸುಳಿದಾಡಲು ಜಾಗ ಕೊಡುವಂತಹ ಬೆಟ್ಟ-ಗುಡ್ಡದ ಜಾಗವು ಒಳ್ಳೆಯದಾಗಿರುತ್ತದೆ.

ಕಾಫಿ ಬೆಳೆಯಲು ಬೇಕಾಗಿರುವ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿರಬೇಕು ಮತ್ತು ಕೊಂಚ ಹುಳಿಯಾಗಿರಬೇಕು, ಅಂದರೆ ಮಣ್ಣಿನ ಹುಳಿಯಳತೆ (pH) 6.0 – 6.5 ಇರಬೇಕು. ಈ ಎಲ್ಲಾ ಗಾಳಿಪಾಡುಗಳು ಸಿಗಬೇಕೆಂದರೆ ಕಡಲಿನಿಂದ 1000 – 1500 ಮೀಟರ್ ನಷ್ಟು ಎತ್ತರದಲ್ಲಿರುವ ಬೆಟ್ಟ-ಗುಡ್ಡದ ಜಾಗಗಳನ್ನು ಕಾಫಿ ಬೆಳೆಯಲು ಆಯ್ಕೆ ಮಾಡಬೇಕಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿರುವ ಬೆಟ್ಟಗುಡ್ಡದ ಜಾಗಗಳು ಈ ಗಾಳಿಪಾಡನ್ನು ಹೊಂದಿದ್ದು ಕಾಫಿ ಬೆಳೆಯಲು ಸೂಕ್ತವಾಗಿವೆ.

ಕರ್ನಾಟಕದಲ್ಲಿ ಕಾಫಿಯ ಜೊತೆ ಕಾಳುಮೆಣಸು, ಶುಂಟಿ, ಅಡಿಕೆ, ಚಕ್ಕೆ ಹೀಗೆ ಕೆಲವು ಬೆಳೆಗಳನ್ನು ಒಟ್ಟೊಟ್ಟಿಗೆ ಬೆಳೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಕಾಡುಮರಗಳ ಜೊತೆಗೆ ಸಿಲ್ವರ್ ಇಲ್ಲವೇ ಇತರೆ ಮರಮಟ್ಟುಗಳಿಗೆ ನೆರವಾಗುವ ಮರಗಳ ಜೊತೆ ನೆರಳಿನಲ್ಲಿ ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗೆಗಳು:
ಕುಡಿಯುವ ಕಾಫಿಯಲ್ಲಿ ನಾವು ಹಲವಾರು ಬಗೆಗಳನ್ನು ಕಾಣುತ್ತೇವೆ ಹಾಗೆಯೇ ಕಾಫಿಯ ಗಿಡಗಳಲ್ಲಿಯೂ ಹಲವಾರು ಬಗೆಗಳಿವೆ, ಅವುಗಳಲ್ಲಿ ಕೆಲವೆಂದರೆ ಲಿಬೆರಿಕಾ (Liberica), ಗ್ರಾಸ್ ಇಂಡೆಂಟೆ (Gros Indente), ಎಕ್ಸೆಲ್ಸ (Excelsa), ಕುಯ್ಲೂ (Kouilou), ಪೆಟಿಟ್ ಇಂಡೇನಿಜೆ (Petit Indénizé), ಅರಾಬಿಕಾ ಮತ್ತು ರೊಬಸ್ಟಾ. ಇವುಗಳಲ್ಲಿ ಅರಾಬಿಕಾವನ್ನು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ನೂರಕ್ಕೆ 75% ನಷ್ಟು ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ರೊಬಸ್ಟಾ ಎರಡನೆಯ ಜಾಗವನ್ನು ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ರೊಬಸ್ಟಾವನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ 67.3% ರೊಬಸ್ಟಾ ಮತ್ತು ಉಳಿದ 32.7% ಅರಾಬಿಕ ಬೆಳೆಯಲಾಗುತ್ತದೆ.

ಹಾಗದರೆ ಅರಾಬಿಕಾ ಮತ್ತು ರೊಬಸ್ಟಾ ನಡುವಿನ ವ್ಯತ್ಯಾಸವೇನು?ಕಾಫಿಯನ್ನು ಮೊಳಕೆ ಬರಿಸುವುದರಿಂದ ಹಿಡಿದು ಹಣ್ಣು ಕುಯ್ಯುವುದರವರೆಗೂ ಇರುವ ಹಂತಗಳಾವವು? ಕುಡಿಯುವ ಕಾಫಿಯಲ್ಲಿ ಹಲವು ಬಗೆಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು? ಕಾಫಿಯ ಕುರಿತು ಮತ್ತೇನಾದರು ಸೋಜಿಗದ ಸುದ್ದಿಗಳು ಇದೆಯೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ಮೇಲಿನ ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

(ಚಿತ್ರ ಸೆಲೆ: Wikimediagktodaycoffeeplanet.nl)

 

ಬಿತ್ತಿದ ಬೀಜ ಮೊಳಕೆ ಒಡೆದೀತು ಹೇಗೆ?

ರತೀಶ ರತ್ನಾಕರ.

ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ ಮೊಳಕೆಯೊಡೆದು ಗಿಡವಾಗ ತೊಡಗುತ್ತದೆ. ತಾನಾಗಿಯೇ ಆಗುವ ಈ ಕೆಲಸ ಹಲವು ಹಂತಗಳಲ್ಲಿ ನಡೆಯುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೀಜವು ಹೇಗೆ ಮೊಳಕೆಯೊಡೆಯುತ್ತದೆ ಎಂದು ಅರಿಯುವ ಮೊದಲು ಬೀಜದ ಏರ್ಪಾಟಿನ (structure) ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ಬೀಜದಲ್ಲಿ ಈ ಕೆಳಗಿನ ಮೂರು ಭಾಗಗಳಿರುತ್ತವೆ.

ಬಸಿರ ಪೊರೆಕ (Endosperm) : ಬೀಜದ ಹೆಚ್ಚಿನ ಭಾಗವನ್ನು ಇದು ಪಡೆದುಕೊಂಡಿರುತ್ತದೆ. ಬೀಜದ ಬಸಿರಿಗೆ ಬೇಕಾಗುವ ಊಟವನ್ನು ಮತ್ತು ಆರಯ್ಕೆಯನ್ನು ಗಂಜಿಯ ರೂಪದಲ್ಲಿ ಈ ಬಸಿರ ಪೊರೆಕ ನೀಡುತ್ತದೆ, ಅಲ್ಲದೇ ಇದರಲ್ಲಿ ಎಣ್ಣೆ ಹಾಗು ಮುನ್ನು (protein) ಅಂಶಗಳು ಇರುತ್ತದೆ. ಇದು ಬಸಿರಿಗೆ ಬೇಕಾಗುವ ಆರಯ್ಕೆಯನ್ನು ಮಾಡುವುದಲ್ಲದೇ ಅದರ ಊಟವನ್ನು ಕೂಡಿಡುವ ಕೆಲಸವನ್ನು ಮಾಡುತ್ತದೆ. ಬೀಜದ ಹೆಚ್ಚಿನ ಪಾಲು ಬಸಿರ ಪೊರೆಕದಿಂದ ಕೂಡಿರುತ್ತದೆ.

ಬಸಿರು (Embryo): ಬೀಜದ ಬಸಿರು ಇದಾಗಿದ್ದು ಮುಂದೆ ಬೀಜವು ಮೊಳಕೆಯೊಡೆದು ಬೇರು, ಕಾಂಡ ಹಾಗು ಎಲೆಗಳಾಗಲು ಬೇಕಾಗುವಂತಹ ಗೂಡುಕಟ್ಟುಗಳನ್ನು (tissue) ಇದು ಹೊಂದಿರುತ್ತದೆ. ಜೊತೆಗೆ ಮೊಳಕೆ ಎಲೆಯ (cotyledon) ಗೂಡುಕಟ್ಟುಗಳು ಕೂಡ ಇರುತ್ತವೆ. ಇವು ಬೀಜದ ಬಸಿರಿಗೆ ಬೇಕಾಗಿರುವ ಊಟವನ್ನು ಪಕ್ಕದಲ್ಲಿರುವ ಬಸಿರ ಪೊರೆಕದಿಂದ ಬಸಿರಿಗೆ ಸಾಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ, ಬೀಜವು ಬಿಡುವ ಮೊದಲ ಎಲೆಯನ್ನು ಕಾಪಾಡಲು ಬೇಕಾಗಿರುವ ಕಾಪು (shield) ಈ ಮೊಳಕೆ ಎಲೆಯಲ್ಲಿ ಇರುತ್ತದೆ. ಬೀಜವು ಒಂದೆಲೆ ಗಿಡವಾಗಬೇಕೋ ಇಲ್ಲವೇ ಎರಡಲೆ ಗಿಡವಾಗಬೇಕೋ ಎಂಬುದು ಈ ಮೊಳಕೆ ಎಲೆಯ ಗೂಡುಕಟ್ಟುಗಳಲ್ಲೇ ಇರುತ್ತದೆ.

ಸಿಪ್ಪೆ: ಬಸಿರು ಹಾಗು ಬಸಿರ ಪೊರೆಕವನ್ನು ಸುತ್ತಿಕೊಂಡು ಎರವಾಗದಂತೆ ಕಾಪಾಡುವುದೇ ಸಿಪ್ಪೆ. ಸಿಪ್ಪೆಯು ಕೆಲವು ಬೀಜಗಳಲ್ಲಿ ತೆಳುವಾಗಿ (ಕಡಲೇ ಬೀಜದಲ್ಲಿರುವ ಹಾಗೆ), ಇನ್ನು ಕೆಲವು ಬೀಜಗಳಲ್ಲಿ ದಪ್ಪನಾಗಿ (ತೆಂಗಿನಕಾಯಿಯಲ್ಲಿರುವ ಹಾಗೆ) ಇರುತ್ತದೆ. ಹೊರಗಿನ ಹಾನಿಗಳಿಂದ ಬಸಿರನ್ನು ಕಾಪಾಡುವುದೇ ಇದರ ಮುಖ್ಯ ಕೆಲಸವಾಗಿರುತ್ತದೆ.

ಒಂದು ಬೀಜವು ಮೊಳಕೆಯೊಡೆಯಲು ಅದಕ್ಕೆ ತಕ್ಕನಾದ ಉಸಿರುಗಾಳಿ (oxygen), ನೀರು ಹಾಗು ಕಾವು ಬೇಕಾಗುತ್ತದೆ. ಬೀಜವು ಯಾವ ತಳಿ ಎಂಬುದರ ಮೇಲೆ ಬೇಕಾಗಿರುವ ಗಾಳಿ, ನೀರು ಮತ್ತು ಬಿಸುಪು ತೀರ್ಮಾನವಾಗುತ್ತದೆ. ಕೆಲವು ಬಗೆಯ ಬೀಜಗಳು ಮೊಳಕೆ ಒಡೆಯುವಲ್ಲಿ ಬೆಳಕು ಕೂಡ ತನ್ನ ಪಾತ್ರ ವಹಿಸುತ್ತದೆ. ಒಂದು ಬೀಜವು ತಾನು ಮೊಳಕೆಯೊಡೆಯಲು ಬೇಕಾದ ನೀರು, ಉಸಿರುಗಾಳಿ ಮತ್ತು ಬಿಸುಪಿಗೆ ತೆರೆದುಕೊಳ್ಳುವವರೆಗೂ ಒರಗಿದ (dormant) ಸ್ಥಿತಿಯಲ್ಲಿ ಇರುತ್ತದೆ. ಅದರ ಒಳಗಿರುವ ಬಸಿರಿಗೆ ಬಸಿರ ಪೊರೆಕ ಊಟ ಒದಗಿಸುತ್ತಿರುತ್ತದೆ, ಇದನ್ನು ಬಿಟ್ಟರೆ ಅದರಲ್ಲಿ ಯಾವ ಬೆಳವಣಿಗೆಯು ಆಗುತ್ತಿರುವುದಿಲ್ಲ. ಒಮ್ಮೆ ಬೇಕಾದ ನೀರು, ಉಸಿರುಗಾಳಿ ಹಾಗು ಬಿಸುಪಿಗೆ ತೆರೆದುಕೊಂಡಾಗ ಅದು ಮೊಳಕೆ ಒಡೆಯುವ ಕೆಲಸವನ್ನು ಆರಂಭಿಸುತ್ತದೆ.

ಬೀಜವು ಮೊಳಕೆ ಒಡೆಯಲು ಬೇಕಾದ ನೀರಿಗೆ ತಾಕಿದಾಗ ಹೊರಗಿನ ನೀರು ಬೀಜದ ಸಿಪ್ಪೆಯೊಳಗೆ ಒಳಹೀರಿಕೆಯ (imbibition) ಮೂಲಕ ಬರುತ್ತದೆ. ಸಿಪ್ಪೆಯೊಳಗೆ ಬಂದ ನೀರನ್ನು ಬಳಸಿಕೊಂಡು ಬಸಿರಿನಲ್ಲಿರುವ ಸೂಲುಗೂಡುಗಳು (cells) ತಮ್ಮ ತರುಮಾರ್ಪುವ (metabolism) ಕೆಲಸವನ್ನು ಹೆಚ್ಚುಗೊಳಿಸಿ ಹಿಗ್ಗಲಾರಂಬಿಸುತ್ತವೆ ಮತ್ತು ಕೆಲವು ಸೂಲುಗೂಡುಗಳು ಒಡೆದು ಹೆಚ್ಚಲಾರಂಬಿಸುತ್ತವೆ. ಬೆಳವಿಕ (auxins) ಮತ್ತು ಇತರೆ ಸುರಿಗೆಗಳು (harmones) ಕೂಡ ಬಸಿರಿನ ಬೆಳವಣಿಗೆಯನ್ನು ಹುರಿದುಂಬಿಸುತ್ತವೆ.

ಬೀಜದ ಒಳಗೆ ಬಂದಿರುವ ನೀರು, ನೀರ‍್ದೊಳೆಗಳನ್ನು (hydrolytic Enzymes) ಚುರುಕುಗೊಳಿಸುತ್ತವೆ ಇವು ಬಸಿರ ಪೊರೆಕದಲ್ಲಿರುವ ಎಣ್ಣೆ, ಮುನ್ನು (protien) ಮತ್ತು ಗಂಜಿಯನ್ನು ಒಡೆದು ಬಸಿರಿನ ತರುಮಾರ್ಪಿಗೆ ನೆರವಾಗುವಂತಹ ರಾಸಾಯನಿಕಗಳನ್ನು ಕೊಡುತ್ತವೆ. ಉಸಿರುಗಾಳಿ ಮತ್ತು ಬಿಸುಪು ಕೂಡ ಬಸಿರಿನ ತರುಮಾರ್ಪಿಗೆ ನೆರವಾಗುತ್ತವೆ. ಇವನ್ನೆಲ್ಲಾ ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುತ್ತಿರುವ ಬಸಿರಿಗೆ ಬೇಕಾಗಿರುವ ಆರಯ್ಕೆಯನ್ನು ಬಸಿರ ಪೊರೆಕ ಕೊಡುತ್ತಿರುತ್ತದೆ. ಮೊಳಕೆಯು ಒಡೆದು ಎಲೆಯನ್ನು ಬಿಟ್ಟು ನೇಸರನ ಬೆಳಕಿನ ನೆರವಿನಿಂದ ‘ಬೆಳಕಿನ ಒಂದುಗೆ’ (photosynthesis) ನಡೆಸಿ ತನ್ನ ಊಟವನ್ನು ತಾನೇ ಸಿದ್ದ ಮಾಡಿಕೊಳ್ಳುವವರೆಗೂ ಈ ಬಸಿರ ಪೊರೆಕ ನೋಡಿಕೊಳ್ಳುತ್ತಿರುತ್ತದೆ.

ಸಿಪ್ಪೆಯ ಒಳಗೆ ಬಸಿರು ಬೆಳೆಯುತ್ತಿದ್ದಂತೆ ಒಳಗಿನ ಒತ್ತಡ ಹೆಚ್ಚಾಗಿ ಸಿಪ್ಪೆಯು ಒಡೆದು ಬಿಡುತ್ತದೆ. ಸಿಪ್ಪೆಯನ್ನು ಒಡೆದ ಬಸಿರು ಮೊದಲು ತಾಯಿಬೇರಾಗಿ (radicle) ಹೊರಬರುತ್ತದೆ. ಈ ತಾಯಿಬೇರು ಸುತ್ತಲಿನಲ್ಲಿರುವ ಮಣ್ಣನ್ನು ಸೀಳಿಕೊಂಡು ಬೆಳೆಯತೊಡಗುತ್ತದೆ. ಮಣ್ಣಿನಲ್ಲಿರುವ ನೀರು, ಉಸಿರುಗಾಳಿ, ಬಿಸುಪು ಮತ್ತು ಆರಯ್ಕೆಗಳನ್ನು ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತದೆ.

ಒಮ್ಮೆ ತಾಯಿಬೇರಿನ ಬೆಳವಣಿಗೆ ಗಟ್ಟಿಗೊಂಡಮೇಲೆ ಎಳೆಗರಿಯ(plumule) ಬೆಳವಣಿಗೆ ಶುರುವಾಗುತ್ತದೆ. ಎಳೆಗರಿಯು ಮಣ್ಣಿನ ಒಳಗಿನಿಂದ ನೇಸರನ ಬೆಳಕನ್ನು ಹುಡುಕಿಕೊಂಡು ನೆಲದ ಮೇಲ್ಭಾಗಕ್ಕೆ ಬರುತ್ತದೆ. ಹಲವು ಬಗೆಯ ಮೊಳಕೆಗಳಲ್ಲಿ ಎಳೆಗರಿಯನ್ನು ಕಾಯಲು ಬೀಜದ ಸಿಪ್ಪೆಯ ಭಾಗಗಳು ಅಂಟಿಕೊಂಡಿರುತ್ತದೆ. ಎಳೆಗರಿಯು ಬೆಳೆದು ಮೊದಲ ಮೊಳಕೆ ಎಲೆಗಳನ್ನು (Cotyledons) ಬಿಡುತ್ತದೆ ಆಗ ಈ ಸಿಪ್ಪೆಯ ಬಾಗಗಳು ಉದುರಿ ಬೀಳುತ್ತವೆ. ಈ ಎಲೆಗಳು ನೇಸರನ ಬೆಳಕಿನ ನೆರವಿನಿಂದ ತಮ್ಮ ಊಟವನ್ನು ಸಿದ್ದಮಾಡಲಾರಂಬಿಸುತ್ತವೆ. ಈ ಹೊತ್ತಿನಲ್ಲಿ ತಾಯಿಬೇರು ಕೂಡ ಕವಲೊಡೆದು ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ಮುಂದೆ ಮೊಳಕೆಯೊಡೆದ ಬೀಜದ ಕಾಂಡ ಹಾಗು ಎಲೆಗಳು ಬಿಟ್ಟು ಬೆಳೆಯುತ್ತದೆ.

ಹೀಗೆ ಒಂದು ಬೀಜವು ಮಣ್ಣಿಗೆ ಸೇರಿ ಮೊಳೆಕೆ ಒಡೆದು ಎಲೆಯಾಗುವವರೆಗೂ ಹಲವು ಹಂತಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ಕೆಲಸದಲ್ಲಿ, ಗಾಳಿ, ನೀರು, ಬಿಸುಪು ಮತ್ತು ಬೆಳಕು ದೊಡ್ಡ ಪಾತ್ರವನ್ನು ವಹಿಸುತ್ತವೆ.

 

(ಮಾಹಿತಿ ಸೆಲೆ :intechopen.comnature.com wikipedia.org), (ಚಿತ್ರ ಸೆಲೆ : commons.wikimedia.org)

ಕಾಯಿಯೊಂದು ಹಣ್ಣಾಗುವ ಬಗೆ

ರತೀಶ ರತ್ನಾಕರ.

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ ಮತ್ತು ಹಣ್ಣಿನ ನಡುವೆ ಬೇರ್ಮೆಯನ್ನು ಗುರುತಿಸಿದರೆ ಅದು ಹೆಚ್ಚಾಗಿ ಅದರ ಬಣ್ಣ ಮತ್ತು ರುಚಿಯಲ್ಲಿ ಬೇರೆ ಬೇರೆಯಾಗಿರುತ್ತವೆ. ಕಾಯಿಗಳು ಹೆಚ್ಚಾಗಿ ಹಸಿರು ಬಣ್ಣದಲ್ಲಿದ್ದು, ರುಚಿ ಮತ್ತು ಕಂಪು ಇಲ್ಲದೆ ಗಟ್ಟಿಯಾಗಿ ಇರುತ್ತವೆ. ಕಾಯಿಯು ಹಣ್ಣಾಗುತ್ತಾ ಬಂದಂತೆ ಬೇರೆ ಬಣ್ಣವನ್ನು ಪಡೆಯುತ್ತದೆ, ಕಾಯಿಗಿಂತ ಮೆತ್ತಗಾಗುತ್ತದೆ, ರುಚಿ ಮತ್ತು ಕಂಪನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಪ್ರಾಣಿ ಮತ್ತು ಹಕ್ಕಿಗಳನ್ನು ಸೆಳೆಯುತ್ತವೆ.

ಹೌದಲ್ಲ, ಈ ಕಾಯಿಯು ಹಣ್ಣಾದ ಮೇಲೆ ನಮಗೆ ಉಪಕಾರಿ. ಹಾಗಾದರೆ ಈ ಕಾಯಿಯು ಹೇಗೆ ಹಣ್ಣಾಗುತ್ತದೆ? ಬಣ್ಣ, ರುಚಿ, ಕಂಪನ್ನು ಹೇಗೆ ಪಡೆದುಕೊಳ್ಳುತ್ತದೆ? ಕಾಯಿಯಲ್ಲಿ ನಡೆಯುವ ಯಾವ ತಿರುಳು ಹಣ್ಣಾಗಲು ಕಾರಣ? ಬನ್ನಿ, ಈ ವಿಷಯಗಳ ಕುರಿತು ನಾವಿಂದು ಅರಿಯೋಣ.

ಹೂವಿನ ಗಂಡೆಳೆಗಳು(Anther) ಹೆಣ್ದುಂಡುಗಳೊಡನೆ(Stigma) ಸೇರುವುದನ್ನು ಹೂದುಂಬುವಿಕೆ (Pollination) ಎಂದು ಕರೆಯಲಾಗುತ್ತದೆ. ಯಾವುದೇ ಗಿಡ ಇಲ್ಲವೇ ಮರದಲ್ಲಿ ಹೂದುಂಬುವಿಕೆ ನಡೆದಾಗ ಹೀಚುಗಾಯಿ ಉಂಟಾಗುತ್ತದೆ. ಹೀಗೆ ಉಂಟಾದ ಹೀಚುಗಾಯಿಯ ತತ್ತಿಚೀಲದೊಳಗೆ(Ovary) ಹೊಸ ಬೀಜ ಹುಟ್ಟುತ್ತದೆ. ಈ ಬೀಜಗಳು ಬೆಳೆಯುತ್ತಿದ್ದಂತೆ ಸಯ್ಟೋಕಿನಿನ್ಸ್ (Cytokinins) ಎನ್ನುವ ಸೋರುಗೆಯನ್ನು (Hormone) ಹೊರಹಾಕುತ್ತವೆ. ಈ ಸೋರುಗೆಗಳು ತತ್ತಿಚೀಲದ ಗೋಡೆಯ ಬಳಿ ಬಂದು ಸೂಲುಗೂಡುಗಳನ್ನು (Cells) ಒಡೆದು ಹೊಸ ಹೊಸ ಸೂಲುಗೂಡುಗಳು ಮೂಡಿ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ. ಹಾಗೆಯೇ ಮುಂದುವರಿದು ಈ ಬೀಜಗಳು ಜಿಬ್ಬೆರೆಲಿಕ್ (Gibberellic) ಹುಳಿಯನ್ನು ಹೊರಹಾಕುತ್ತವೆ. ಈ ಹುಳಿಯು ಸೂಲುಗೂಡುಗಳನ್ನು ಹಿಗ್ಗಿಸಲು ನೆರವಾಗುತ್ತದೆ. ಹೀಗೆ ಸೂಲುಗೂಡುಗಳ ಒಡೆಯುವಿಕೆ ಮತ್ತು ಹಿಗ್ಗುವಿಕೆಯಿಂದ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ.

ಮರ, ಗಿಡ ಹಾಗು ಬಳ್ಳಿಗಳ ತಳಿಗಳ ಆಧಾರದ ಮೇಲೆ ಕಾಯಿಯು ಒಂದು ಹಂತದವರೆಗೆ ದೊಡ್ಡದಾಗುತ್ತಾ ಹೋಗುತ್ತದೆ. ಕಾಯಿಯು ಸಾಕಷ್ಟು ದೊಡ್ಡದಾದ ಮೇಲೆ ತಾಯಿಗಿಡವು ಅಬ್ಸಿಸಿಕ್ ಎನ್ನುವ ಸೋರುಗೆಯನ್ನು ಹೊರಬಿಡುತ್ತದೆ ಅದು ಕಾಯಿಯ ಬೀಜದೊಳಗಿರುವ ಬಸಿರನ್ನು (Embryo) ಒರಗಿದ(Dormant) ಸ್ಥಿತಿಯಲ್ಲಿ ದೂಡುತ್ತದೆ. ಆಗ ಬೀಜ ಮತ್ತು ಕಾಯಿ ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತವೆ.

ಒಂದು ಕಾಯಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ರಾಸಾಯನಿಕಗಳು ಇರುತ್ತವೆ.

ಗಂಜಿ (Starch) – ಕಾಯಿಯು ರುಚಿಯಾಗದಿರಲು ಇದೇ ಕಾರಣವಾಗಿರುತ್ತದೆ.
ಎಲೆಹಸಿರು (Chlorophyll) – ಕಾಯಿಯ ಹಸಿರು ಬಣ್ಣಕ್ಕೆ ಇದು ಕಾರಣವಾಗಿರುತ್ತದೆ.
ಹುಳಿ (acids) – ಇದರಿಂದ ಕಾಯಿಯು ತುಂಬಾ ಹುಳಿ ಹುಳಿಯಾಗಿ ಇಲ್ಲವೇ ಒಗರಾಗಿರುತ್ತದೆ.
ಪೆಕ್ಟಿನ್ (Pectin) – ಇದೊಂದು ಬಗೆಯ ಪಾಲಿಸೆಕರಯ್ಡ್ ಆಗಿದ್ದು, ಕಾಯಿಯಲ್ಲಿನ ಸೂಲುಗೂಡುಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡಿರುವಂತೆ ನೋಡಿಕೊಳ್ಳುತ್ತದೆ. ಪೆಕ್ಟಿನ್ ದೆಸೆಯಿಂದಾಗಿ ಕಾಯಿಯು ಗಟ್ಟಿಯಾಗಿರುತ್ತದೆ.
ಹೆಬ್ಬುಸುರಿ (Large Organics)- ಇವು ಒಂದು ಬಗೆಯ ಸೀರಕೂಟಗಳಾಗಿದ್ದು (Molecules) ಕಾಯಿಯಲ್ಲಿ ಇರುತ್ತವೆ.

ಹಾಗಾದರೆ ಹಣ್ಣಾಗುವುದು ಹೇಗೆ?

ಯಾವುದೇ ಕಾಯಿಯು ಹಣ್ಣಾಗುವುದರಲ್ಲಿ ಇತಯ್ಲಿನ್ (Ethylene) ಪ್ರಮುಖ ಪಾತ್ರ ವಹಿಸುತ್ತದೆ. ಗಿಡದಲ್ಲಿರುವ ETR1 ಮತ್ತು CTR1 ಎಂಬ ಪೀಳಿಗಳು(genes) ಕಾಯಿಯನ್ನು ಹಣ್ಣಾಗದಂತೆ ತಡೆಹಿಡಿದಿರುತ್ತವೆ. ಯಾವುದೇ ಒಂದು ಮರ, ಗಿಡ ಇಲ್ಲವೇ ಬಳ್ಳಿಯ ಗುಣವೆಂದರೆ ತನ್ನಲ್ಲಿರುವ ಕಾಯಿ ಇಲ್ಲವೇ ಹಣ್ಣುಗಳಿಗೆ ಗಾಯವಾದಾಗ, ಕಾಯಿ/ಹಣ್ಣನ್ನು ಗಿಡದಿಂದ ಕಿತ್ತಾಗ, ಸುತ್ತಲಿನ ಗಾಳಿಪಾಡಿನಲ್ಲಿ ಏರುಪೇರಾಗಿ ತನ್ನ ಎಂದಿನ ಚಟುವಟಿಕೆಗಳಿಗೆ ಒತ್ತಡ ಬಂದಾಗ, ಒಟ್ಟಿನಲ್ಲಿ ಹೇಳುವುದಾದರೆ ತನ್ನ ಎಂದಿನ ಚಟುವಟಿಕೆಗೆ ಯಾವುದೇ ತೊಡಕಾದ ಕೂಡಲೆ ಅದು ಇತಯ್ಲಿನ್ ಗಾಳಿಯನ್ನು ಹೊರಹಾಕತೊಡಗುತ್ತದೆ. ಇತಯ್ಲಿನ್ ಅನ್ನು ತನ್ನ ಕಾಂಡ, ಬೇರು, ಹೂವು, ಕಾಯಿಗಳ ಮೂಲಕ ತನ್ನ ಸುರಕ್ಷತೆಗಾಗಿ ಹೊರಹಾಕುತ್ತದೆ. ಈ ಇತಯ್ಲಿನ್ ಮುಂದೆ ಕಾಯಿ ಹಣ್ಣಾಗುವಲ್ಲಿ ನೆರವಾಗುತ್ತದೆ.

 

ಯಾವುದೇ ಕಾಯಿ ಇತಯ್ಲಿನ್ ಗಾಳಿಗೆ ತಾಕಿದಾಗ ಅದರಲ್ಲಿರುವ ETR1 ಮತ್ತು CTR1 ಪೀಳಿಗಳು ತನ್ನ ಕೆಲಸವನ್ನು ನಿಲ್ಲಿಸುತ್ತವೆ ಮತ್ತು ಬೇರೆ ಪೀಳಿಗಳಿಗೆ ಕೆಲಸಮಾಡಲು ದಾರಿ ಮಾಡಿಕೊಡುತ್ತವೆ. ಕಾಯಿಯಲ್ಲಿರುವ ಇತರೆ ಪೀಳಿಗಳು ಅಮಯ್ಲೇಸಸ್ (amylases), ಹಯ್ಡ್ರೋಲೇಸಸ್ (hydrolases), ಕಯ್ನೇಸಸ್(kinases) ಮತ್ತು ಪೆಕ್ಟಿನೇಸಸ್ (pectinases) ಎಂಬ ದೊಳೆಗಳನ್ನು(enzyme) ಬಿಡುಗಡೆ ಮಾಡುತ್ತವೆ. ಈ ದೊಳೆಗಳು ಕಾಯಿಯನ್ನು ಹಣ್ಣು ಮಾಡಲು ನೆರವಾಗುತ್ತವೆ.

– ಅಮಯ್ಲೇಸಸ್ ದೊಳೆಯು ಕಾಯಿಯಲ್ಲಿರುವ ಗಂಜಿಯನ್ನು ಕಾರ್ಬೋಹೈಡ್ರೇಟ್ ಗಳಾಗಿ(Sugars) ಮಾರ್‍ಪಾಟುಗೊಳಿಸುತ್ತವೆ. ಇದು ಹಣ್ಣಿನ ರುಚಿಗೆ ಕಾರಣವಾಗಿರುತ್ತದೆ.
– ಹೈಡ್ರೊಲೇಸಸ್ ದೊಳೆಯು ಕಾಯಿಯಲ್ಲಿರುವ ಎಲೆಹಸಿರನ್ನು ಅಂತೋಸಯ್ನಿನ್ಸ್ (anthocynins) ಆಗಿ ಮಾರ್ಪಾಟುಗೊಳಿಸುತ್ತವೆ. ಇದು ಹಣ್ಣಿನ ಬಣ್ಣವನ್ನು ಹಸಿರಿನಿಂದ ಮತ್ತೊಂದು ಬಣ್ಣಕ್ಕೆ ತಿರುಗಿಸುತ್ತದೆ.
– ಕಯ್ನೇಸಸ್ ದೊಳೆಯು ಕಾಯಿಯಲ್ಲಿರುವ ಹುಳಿಗಳನ್ನು ತಟಸ್ಥ ಸೀರಕೂಟಗಳಾಗಿ (neutral molecules) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಹುಳಿ ಮತ್ತು ಒಗರನ್ನು ಕಡಿಮೆ ಮಾಡುತ್ತದೆ.
– ಪೆಕ್ಟಿನೇಸಸ್ ದೊಳೆಯು ಕಾಯಿಯ ಗಟ್ಟಿತನಕ್ಕೆ ಕಾರಣವಾದ ಪೆಕ್ಟಿನಿನ್ ಅನ್ನು ಕಡಿಮೆಗೊಳಿಸಿ ಹಣ್ಣನ್ನು ಕಾಯಿಗಿಂತ ಮೆತ್ತಗಾಗಿಸುತ್ತದೆ.
– ಹೈಡ್ರೊಲೇಸಸ್ ದೊಳೆಯು ಹೆಬ್ಬುಸುರಿಗಳನ್ನು ಕಂಪು ಬೀರುವ ಸೀರುಗಳಾಗಿ (aromatic compounds) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಕಂಪಿಗೆ ಕಾರಣವಾಗುತ್ತದೆ.

ಹೀಗೆ ಕಾಯಿಯು ಇತಯ್ಲಿನ್ ಗಾಳಿಗೆ ತೆರೆದುಕೊಂಡೊಡನೆ ಹಲವಾರು ರಾಸಾಯನಿಕೆ ಚಟುವಟಿಕೆಗಳು ನಡೆದು ಹಣ್ಣಾಗುತ್ತದೆ. ಕೆಲವು ಕಾಯಿಗಳು ಮರ/ಗಿಡದಿಂದ ಕಿತ್ತ ಮೇಲೂ ಇತಯ್ಲೀನ್ ಗಾಳಿಯ ನೆರವಿನಿಂದ ಹಣ್ಣಾಗುತ್ತವೆ ಇಂತಹವನ್ನು ಬಿಡಿಮಾಗು (Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಎತ್ತುಗೆಗೆ, ಸೇಬು, ಬಾಳೆಹಣ್ಣು, ಸೀಬೆಹಣ್ಣು. ಇನ್ನು ಕೆಲವು ಹಣ್ಣುಗಳು ಮರ/ಗಿಡದಲ್ಲಿ ಇದ್ದರೆ ಮಾತ್ರ ಹಣ್ಣಾಗಬಲ್ಲವು, ಕಿತ್ತರೆ ಹಣ್ಣಾಗಲಾರವು ಅಂತವುಗಳನ್ನು ಗಿಡಮಾಗು (Non- Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಉದಾಹರಣೆಗೆಗೆ ದ್ರಾಕ್ಷಿ, ಸ್ಟ್ರಾಬೆರ್‍ರಿ.

 

ಸೆಲೆ:-

www.researchgate.net, ncbi, www.scientificamerican.com,

ನೀರಿಗೆ ಏಕೆ ಈ ವಿಶೇಷ ಗುಣಗಳು?

ರಘುನಂದನ್.

ಕಳೆದ ಬರಹದಲ್ಲಿ ತಿಳಿದುಕೊಂಡಂತೆ ನಮ್ಮ ಸುತ್ತಣದಲ್ಲಿರುವ ವಸ್ತುಗಳಲ್ಲೇ ನೀರು ವಿಶೇಷವಾದುದು. ಆದರೆ ವಿಶೇಷವಾದ ಗುಣಗಳು ನೀರಿಗೇ ಏಕೆ ಇವೆ ಎಂಬುದು ಕುತೂಹಲವಾದುದು. ಇದಕ್ಕೆ ಕಾರಣ ಅದರ ಅಣುಗಳು ಒಂದಕ್ಕೊಂದು ಹೊಂದಿಕೊಂಡಿರುವ ಬಗೆ. ಮುಂಚೆ ಹೇಳಿದ ಹಾಗೆ ಹೈಡ್ರೋಜನ್ ಬೆಸೆತದ ಏರ್ಪಾಟು (hydrogen bonding arrangement) ನೀರು ಈ ರೀತಿ ಇರುವುದಕ್ಕೆ ಕಾರಣ.

ಜೀವಿಗಳು ಬದುಕಿರುವಾಗ ಅವುಗಳ ಒಡಲಿನಲ್ಲಿ ಸಾಕಷ್ಟು ರಾಸಾಯನಿಕ ಚಟುವಟಿಕೆಗಳು (chemical reactions) ನಡೆಯುತ್ತಿರುತ್ತವೆ, ಈ ರೀತಿಯ ಚಟುವಟಿಕೆಗಳು ನಡೆಯುವುದಕ್ಕೆ ಸಾಕಷ್ಟು ಪ್ರೋಟೀನ್‍ಗಳು, ಎಂಜೈಮ್ಗಳು ಹರಿದಾಡುತ್ತಿರಬೇಕು. ನರ ನಾಡಿಗಳ ಸಂದಿಗೊಂದಿಗಳಲ್ಲಿ ಸಣ್ಣ ಪುಟ್ಟ ಹಾದಿಗಳಲ್ಲಿ ಪ್ರೋಟೀನುಗಳು ಮತ್ತು ಎಂಜೈಮ್ಗಳು ಓಡಾಡುತ್ತಿರಬೇಕು. ಪ್ರೋಟೀನುಗಳು ಹೇಗೆ ಬೇಕೋ ಹಾಗೆ ತಿರುಗುವ, ನುಣುಚಿಕೊಳ್ಳುವ, ಆಕಾರ ಮಾರ್ಪಡಿಸುವುದಕ್ಕೆ ನೀರು ನೆರವಾಗುತ್ತದೆ. ಅದಕ್ಕಾಗಿಯೇ ನೀರು ಭೂಮಿಯ ಮೇಲಿನ ಜೀವಿಗಳೊಂದಿಗೆ ಈ ಬಗೆಯ ನಂಟನ್ನು ಹೊಂದಿದೆ.

ನೀರನ್ನು ಈ ಮಾದರಿಯಲ್ಲಿ ತೋರಿಸಬಹುದು, ನೆಗೆಟಿವ್
ಚಾರ್ಜ್ ಹೈಡ್ರೋಜನ್ ಅಣುಗಳು ಮತ್ತು ಪಾಸಿಟಿವ್ ಚಾರ್ಜ್ ಆಕ್ಸಿಜನ್ ಎಲೆಕ್ಟ್ರಾನ್‍ಗಳ ನಡುವಿನ ಸೆಳೆತ. ಈ ಸೆಳೆತವು ಒಂದು ಬಗೆಯ ನಿರುಗೆಯನ್ನು ಹುಟ್ಟುಹಾಕುತ್ತದೆ. ಈ ಸೆಳೆತಕ್ಕೆ ವಾನ್ ಡರ್ ವಾಲ್ಸ್ ಕಸುವು (Van der Waals force) ಎನ್ನುತ್ತಾರೆ. ಇವು ನೋಡಲಿಕ್ಕೆ ನಾಲ್ಬದಿಗಳಾಗಿ (Tetrahedra) ಕಾಣುತ್ತವೆ. ಕೆಳಗಿನ ಚಿತ್ರವನ್ನು ನೋಡಿ,

ಎಡಗಡೆಯ ಚಿತ್ರದಲ್ಲಿ ನೀವು ನೀರಿನ ಅಣುಕೂಟಗಳು ಹೇಗೆ ಒಂದಕ್ಕೊಂದು ಅಂಟಿಕೊಂಡಿವೆ ಎಂದು ನೋಡಬಹುದು. ಈ ಬಗೆಯ ನಲ್ಬದಿಗಳು ಹೆಚ್ಚು ಹೆಚ್ಚು ಚಾಚಿದಾಗ ಬಲಗಡೆಯ ಚಿತ್ರದಂತೆ ಕಾಣುತ್ತದೆ. ಇಲ್ಲಿ ಕೆಂಪು ಬಣ್ಣದಲ್ಲಿ ಇರುವುದು ಆಕ್ಸಿಜನ್ ಅಣುಗಳು ಮತ್ತು ಬಿಳಿ ಬಣ್ಣದಲ್ಲಿ ಇರುವುದು ಹೈಡ್ರೋಜನ್ ಅಣುಗಳು. ಈ ಅಣುಗಳ ನಡುವೆ ಇರುವ ಗೆರೆಯೇ ಹೈಡ್ರೋಜನ್ ಬೆಸೆತ (Hydrogen Bond).

ಬೇರೆ ಹರಿಯುವ ವಸ್ತುಗಳು (fluids) ಯಾಕೆ ಹೀಗಿಲ್ಲ ಎಂಬುದನ್ನು ಒರೆಹಚ್ಚಲು ಕೆಲವು ವಿಜ್ಞಾನಿಗಳು ಈ ಬಗೆಯ ಪ್ರಯೋಗವೊಂದನ್ನು ಮಾಡಿದರು. ಈ ಪ್ರಯೋಗದಲ್ಲಿ ವಾನ್ ಡರ್ ವಾಲ್ಸ್ ಕಸುವು (Van der Waals force) ಮತ್ತು ಹೈಡ್ರೋಜನ್ ಬೆಸೆತದ (Hydrogen bonding) ಮೊತ್ತಗಳನ್ನು ಕೊಂಚ ಮಟ್ಟಕ್ಕೆ ಮಾರ್ಪಾಟು ಮಾಡುವುದಕ್ಕೆ ಮುಂದಾದರು. ಅಂದರೆ ನೀರಿನಂತೆಯೇ ಆದರೆ ನೀರಲ್ಲ ಎಂಬ ಅಣುಕೂಟಗಳು ಹೇಗಿರುತ್ತವೆ ಎಂದು ತಿಳಿಯುವುದಕ್ಕೆ.

ಈ ಪ್ರಯೋಗದಿಂದ ಕೆಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದವು. ಹೈಡ್ರೋಜನ್ ಬೆಸೆತ ಇಲ್ಲ ಎಂದುಕೊಳ್ಳಿ ಆಗ ನೀರು ಮೇಲಿನ ಚಿತ್ರದಲ್ಲಿ ತೋರಿದಂತೆ ಮೂರು ದಿಕ್ಕುಗಳ ಬಲೆಯಾಗಿ (three dimensional network) ಅಂಟಿಕೊಂಡಿರದೆ ಉದ್ದುದ್ದ ಸರಪಳಿಗಳಾಗಿ ಇರುತ್ತಿತ್ತು (ಅಮೋನಿಯಾ ಮತ್ತು ಹೈಡ್ರೋಜನ್ ಕ್ಲೋರೈಡಿನಲ್ಲಿ ಇರುವಂತೆ). ಆಗ ನೀರಿಗೆ ಮೇಲೆ ಹೇಳಿದಂತ ಸೆಳೆತ ಇರುತ್ತಿರಲಿಲ್ಲ ಮತ್ತು ಪ್ರೋಟೀನುಗಳನ್ನು ಸಾಗಿಸಲು ಆಗುತ್ತಿರಲಿಲ್ಲ. ಈ ಭೂಮಿಯ ಮೇಲೆ ಜೀವಿಗಳೇ ಇರುತ್ತಿರಲಿಲ್ಲ ಎಂದೇ ಹೇಳಬಹುದು! ಹಾಗೆಯೇ ಹೈಡ್ರೋಜನ್ ಬೆಸೆತಗಳ ಮೂಲೆಗಳ (hydrogen bond angles) ಮೊತ್ತವನ್ನು ಮಾರ್ಪಡಿಸಿದರೂ ನೀರಿನ ಕೆಲವು ಗುಣಗಳು ಮಾರ್ಪಾಟಾಗುತ್ತಿದ್ದವು.

ಈ ಮೇಲಿನ ಕಾರಣಗಳಿಗಾಗಿಯೇ ನೀರು ನೀರಾಗಿರುವುದು ಮತ್ತು ಬೇರೆ ವಸ್ತುಗಳಿಗಿಂತ ಬೇರೆಯಾಗಿರುವುದು. ದಿನ ಬಳಸುವ ಸಾಮಾನ್ಯ ನೀರಿನ ಬಗೆಗಿನ ತಿಳುವಳಿಕೆ ಎಷ್ಟು ಸೋಜಿಗವಲ್ಲವೇ !?.

ನೀರಿನ ಬಗ್ಗೆ ಕೆಲವು ಸೋಜಿಗದ ಪ್ರಶ್ನೆಗಳು

ರಘುನಂದನ್.

ಈ ಬರಹದಲ್ಲಿ ನೀರಿನ ಬಗ್ಗೆ ಹಲವು ತಿಳಿಯದ ಕೆಲವು ಸೋಜಿಗದ ಪ್ರಶ್ನೆಗಳನ್ನು ಕೇಳಿಕೊಳ್ಳೋಣ !.

ಎಷ್ಟು ಬಗೆಯ ಮಂಜುಗಡ್ಡೆಗಳಿವೆ ?

ನಿಮಗೆ ಅಚ್ಚರಿಯೆನಿಸಬಹುದು, ಈಗಿನವರೆಗೆ 17 ಬಗೆಯ ಮಂಜುಗಡ್ಡೆಗಳನ್ನು ಗುರುತಿಸಲಾಗಿದೆ. ಅವುಗಳ ಹರಳಿಟ್ಟಳದ (crystal structure) ನೆಲೆಯ ಮೇಲೆ ಈ 17 ಬಗೆಗಳನ್ನು ಗುರುತಿಸಲಾಗಿದೆ. ನಾವು ನೋಡುವುದು ಒಂದೇ ಬಗೆಯ ಮಂಜುಗಡ್ಡೆ. ಮತ್ತೊಂದು ಬಗೆಯು ಹೊರ ಗಾಳಿಪದರದಲ್ಲಿ ಇರುತ್ತದೆ. ಮಿಕ್ಕ 15 ಬಗೆಗಳು ಹೆಚ್ಚಿನ ಒತ್ತಡದಲ್ಲಿ ಮಾತ್ರವೇ ರೂಪವನ್ನು ತಾಳುತ್ತವೆ. ನೀರಿನಲ್ಲಿ ಹೈಡ್ರೋಜನ್ ನಂಟು (hydrogen bond) ಆಕ್ಸಿಜನ್ ಒಟ್ಟಿಗೆ ನಾಲ್ಕುಚಾಚುಗಳ ಬಲೆಯಾಗಿ (tetrahedral network) ಹೆಣೆದುಕೊಂಡಿರುತ್ತವೆ. ಇದರ ಮೇಲೆ ಒತ್ತಡವನ್ನು ಹಾಕಿದರೆ ಬಗೆ ಬಗೆಯ ನೀರು-ಮಂಜುಗಡ್ಡೆಗಳಾಗಿ ಮಾರ‍್ಪಾಟಾಗುತ್ತವೆ. ಆದರೆ ಹದಿನೇಳಕ್ಕಿಂತ ಹೆಚ್ಚಿಗೆ ಇವೆಯೇ ಎಂಬುದು ಗೊತ್ತಿಲ್ಲ.

ಎಷ್ಟು ಬಗೆಯ ನೀರುಗಳಿವೆ ?

ನಿಮಗೆ ಈ ಪ್ರಶ್ನೆ ಬೆರಗೆನಿಸಬಹುದು. ನೀರು ಗಟ್ಟಿಯಾಗಿದ್ದರೆ ಮಂಜುಗಡ್ಡೆ ಎನ್ನುತ್ತೇವೆ. ನೀರು ಉಗಿಯಾದರೆ ಆವಿ ಎನ್ನುತ್ತೇವೆ. ನೀರು ಹರಿದರೆ ನೀರೇ ಎನ್ನುತ್ತೇವೆ. ಆದರೆ ಈ ಹರಿಯುವ ನೀರಿನಲ್ಲಿ ಎರಡು ಬಗೆಗಳಿದ್ದರೆ?

ವಿಜ್ಞಾನಿಗಳ ಪ್ರಕಾರ ನೀರನ್ನು ಕಡುತಂಪಾಗಿಸಿದಾಗ (super-cooled) ಎರಡು ಬಗೆಯ ನೀರುಗಳು ಒಂದಕ್ಕೊಂದು ಮಾರ್ಪಾಟಾಗುವುದನ್ನು ಗಮನಿಸಬಹುದಂತೆ. ಆದರೆ ಕೆಲವು ವಿಜ್ಞಾನಿಗಳು ಇದನ್ನು ನಿರಾಕರಿಸಿದ್ದಾರೆ, ಹಾಗಾಗಿ ಇದರಬಗ್ಗೆ ಇನ್ನು ಹೆಚ್ಚು ಅರಕೆ ಮಾಡಬೇಕಿದೆ.

ನೀರು ಹೇಗೆ ಆವಿಯಾಗುತ್ತದೆ ?

ಇಂದಿಗೂ ಯಾವ ಬಿರುಸಿನಲ್ಲಿ ನೆಲದ ಮೇಲಿರುವ ನೀರು ಆವಿಯಾಗುತ್ತದೆ (rate of evaporation) ಎಂದು ತಿಳಿದಿಲ್ಲ. ಅದು ತಿಳಿದರೆ ಮೋಡದಲ್ಲಿ ನೀರಿನ ಹನಿಗಳು ಹೇಗೆ ಹರಡಿಕೊಂಡಿವೆ ಎಂಬುದನ್ನು ಅರಿಯಬಹುದು. ಅದನ್ನು ಅರಿತರೆ ಮೋಡಗಳು ನೇಸರನು ಸೂಸುವ ಬೆಳಕನ್ನು ಹೇಗೆ ತಿರುಗಿಸುತ್ತವೆ, ಹೇಗೆ ಹೀರುತ್ತವೆ ಮತ್ತು ಹೇಗೆ ಚದರಿಸುತ್ತವೆ ಎಂಬುದನ್ನು ತಿಳಿಯಬಹುದು. ಇದು ತಿಳಿದರೆ ನೆಲದ ಬಿಸಿಯಾಗುವಿಕೆಯ(global warming) ಕುರಿತಾಗಿ ಹೆಚ್ಚು ಅರಕೆ ನಡೆಸಬಹುದು.

ನೀರಿನ ಮೇಲ್ಮೈಯ pH ಎಷ್ಟು ?

ನೀರಿನ pH (ಹುಳಿಯಳತೆ) 7 ಎಂದು ಗೊತ್ತಿದೆ. ಆದರೆ ನೀರಿನ ಮೇಲ್ಮೈ ಯಾವ pH ಅನ್ನು ಹೊಂದಿರುತ್ತದೆ ? ನೀರಿನ ಅಬ್ಬಿಗಳ(water falls) ಸುತ್ತ ಕಾಣುವ ಮಂಜು ಸಾಮಾನ್ಯವಾಗಿ ನೆಗೆಟಿವ್ OH ಮಿನ್ತುಣುಕುಗಳನ್ನು(ions) ಹೊಂದಿರುತ್ತವೆ. ಅಂದರೆ pH 7 ಕ್ಕಿಂತ ಹೆಚ್ಚು ಎನ್ನಬಹುದು. ಆದರೆ ಇತ್ತೀಚಿನ ಅರಕೆಗಳ ಪ್ರಕಾರ ನೀರಿನ ಮೇಲ್ಮಯ್ ಅರೆ-ಹೈಡ್ರೋಜನ್ ನಂಟನ್ನು (broken hydrogen bonds) ಹೊಂದಿರುತ್ತವೆಯಂತೆ. ಹಾಗಾಗಿ ಇವು 7 ಕ್ಕಿಂತ ಕಡಿಮೆ pH ಅನ್ನು ಹೊಂದಿರಬಹುದೆಂದು ಹೇಳಲಾಗುತ್ತಿದೆ. ಹಿಂದಿನ ಬರಹದಲ್ಲಿ ನೋಡಿದಂತೆ ಎಂಜಾಯ್ಂಗಳು, ಪ್ರೋಟೀನುಗಳು ಒಡಲಿನಲ್ಲಿ ಹರಿದಾಡುತ್ತಿರಬೇಕೆಂದರೆ ನೀರು ಮುಖ್ಯ . ಇವೆಲ್ಲವೂ ನೀರಿನ pH ಅನ್ನು ನೆಚ್ಚಿರುತ್ತವೆ. ಆದ್ದರಿಂದ ನೀರಿನ ಮೇಲ್ಮೈಯ pH ತಿಳಿವಳಿಕೆ ಮುಖ್ಯವಾದದ್ದು ಆದರೆ ಆ ತಿಳುವಳಿಕೆ ನಮಗಿನ್ನೂ ಎಟುಕಿಲ್ಲ.

ನ್ಯಾನೋ ನೀರು ಬೇರೆಯದೇ ?

ನೀರೆಂದರೆ ನಮಗೆ ತಟ್ಟನೆ ಹೊಳೆಯುವುದು ದೊಡ್ಡದಾದ ಕಡಲುಗಳು ಹರಿಯುವ ಕಾಲುವೆಗಳು. ಆದರೆ ಕಡುಚಿಕ್ಕದಾದ ಎಡೆಗಳಲ್ಲಿ ನೀರನ್ನು ಸೆರೆಹಿಡಿದಾಗ (ಅಂದರೆ ನ್ಯಾನೋ ಮೀಟರ್ ಮಟ್ಟದಲ್ಲಿ) ಅದು ಬೇರೆ ಬಗೆಯ ಗುಣಗಳನ್ನು ತೋರಬಹುದೇ? ಯಾಕೆಂದರೆ ಬರಿಯ ನ್ಯಾನೋಮೀಟರ್ ಅಗಲದಲ್ಲಿ ನೀರನ್ನು ಹಿಡಿದಿಟ್ಟಾಗ ಕೆಲವೇ ಕೆಲವು ಅಣುಕೂಟಗಳಿರುವ ಸಾಧ್ಯತೆ ಇರುತ್ತದೆ. ಹೀಗಾದಾಗ ಕ್ವಾಂಟಮ್ ಪರಿಣಾಮಗಳು(quantum effects) ಆ ಅಣುಕೂಟಗಳ ಮೇಲೆ ಬೀರಬಹುದಾದ ಕಾರಣದಿಂದ ಅದರ ಗುಣಗಳು ಮಾರ್ಪಾಟಾಗಬಹುದು ಇದರ ಬಗ್ಗೆ ಇನ್ನಷ್ಟು ಅರಕೆ ನಡೆಯಬೇಕಿದೆ.

(ಸೆಲೆ: nautil.us7-themes.com)

ನೀರು – ಏನಿದರ ಗುಟ್ಟು?

ರಘುನಂದನ್.

ಮುಂಚಿನಿಂದಲೂ ಮನುಷ್ಯನಿಗೆ ನಮ್ಮ ಭೂಮಿಯನ್ನು ಬಿಟ್ಟು ಬೇರೆಡೆ ಜೀವಿಗಳು ಇವೆಯೇ ಎಂಬ ಕುತೂಹಲ ಇದ್ದೇ ಇದೆ. ಮಂಗಳ ಮತ್ತು ಶುಕ್ರ ಗ್ರಹಗಳಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನ ಸಾಕಷ್ಟು ನಡೆದಿದೆ. ನೇಸರ ಬಳಗದಾಚೆಗೂ (solar system) ಜೀವಿಗಳು ಇವೆಯೇ ಎಂಬ ಪ್ರಶ್ನೆ ಆಗಾಗ ವಿಜ್ಞಾನಿಗಳ ತಲೆ ಹೊಕ್ಕಿದೆ. ಇದಕ್ಕೆ ಸಾಕಷ್ಟು ಅರಕೆ ಕೂಡ ನಡೆದಿದೆ, ನಡೆಯುತ್ತಲೂ ಇದೆ.

ಜೀವಿಗಳು ಇರಬಹುದೇ ಎಂಬ ಪ್ರಶ್ನೆಯನ್ನು ಇನ್ನೊಂದು ಬಗೆಯಲ್ಲಿ ನೋಡಿದರೆ – ಜೀವಿಗಳು ಹುಟ್ಟಿ ಬೆಳೆಯುವುದಕ್ಕೆ ಮುಖ್ಯವಾದ ಕಾರಣಗಳಾವವು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅಂದರೆ ಆ ನೆಲದಲ್ಲಿ ಭೂಮಿಯಲ್ಲಿ ಇರುವಂತಹ ಕಾವಳತೆ (temperature), ಗಾಳಿ, ನೀರು ಮುಂತಾದವುಗಳು ಇರಬೇಕಾಗುತ್ತದೆ. ಹಾಗಾಗಿ ವಿಜ್ಞಾನಿಗಳು ಸಾಮಾನ್ಯವಾಗಿ ಹೊಸ ನೆಲಗಳನ್ನು ಹುಡುಕುವಾಗ ಅಲ್ಲಿ ನೀರಿನ ಇರುವಿಕೆಯ ಕುರುಹುಗಳಿವೆಯೇ ಎಂದು ಮೊದಲು ಹುಡುಕುತ್ತಾರೆ. ಭೂಮಿಯಲ್ಲಿ ಗಿಡ ಮರಗಳು ಪ್ರಾಣಿ ಹಕ್ಕಿಗಳು ಇರುವುದೇ ನೀರಿನಿಂದ ಎಂಬ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಇರುತ್ತದೆ. ಈ ನೋಟದಲ್ಲಿ ನೋಡಿದಾಗ ನೀರು ವಿಶೇಷ ವಸ್ತು ಎನಿಸುತ್ತದೆ.

ಬೇರೆ ಎಲ್ಲಾ ಹರಿಕಗಳಿಗೆ (fluid) ಹೋಲಿಸಿದರೆ ನೀರು ಯಾಕೆ ಬೇರೆ ಮತ್ತು ಅದರಿಂದ ಜೀವಿಗಳಿಗೆ ಹೇಗೆ ಒಳಿತು ಎಂಬುದನ್ನು ಅರಿಮೆಯ ನೋಟದಿಂದ ನೋಡುವ ಒಂದು ಪ್ರಯತ್ನ ಈ ಬರಹ.

ಒಂದು ನೀರಿನ ಅಣುಕೂಟದಲ್ಲಿ(molecule) ಎರಡು ಹೈಡ್ರೋಜನ್ ಅಣು ಮತ್ತು ಒಂದು ಆಕ್ಸಿಜನ್ ಅಣುವಿರುತ್ತದೆ. ಇವು ಒಂದಕ್ಕೊಂದು ಹೇಗೆ ಅಂಟಿಕೊಂಡಿವೆ ಎಂಬುದನ್ನು ಆಮೇಲೆ ನೋಡೋಣ. ಸೋಜಿಗವೆಂದರೆ ಬೇರೆ ಹೈಡ್ರೋಜನ್ ಉಳ್ಳ ಅಣುಕೂಟಗಳು (ಮೀತೇನ್, ಅಮೋನಿಯಾ, ಹೈಡ್ರೋಜನ್ ಸಲ್ಪೈಡ್) ಭೂಮಿಯ ಕಾವಳತೆ ಮತ್ತು ಒತ್ತಡದಲ್ಲಿ (atmospheric temperature and pressure) ಆವಿಯ(gaseous) ರೂಪದಲ್ಲಿ ಇರುತ್ತವೆ. ಆದರೆ ನೀರು ಮಾತ್ರವೇ ಹರಿಯುವ ರೂಪದಲ್ಲಿರುತ್ತದೆ ! ಹಾಗಾಗಿ ನೀರಿನ ಅಣುಕೂಟಗಳಿಗೆ ಒಂದಕ್ಕೊಂದು ಅಂಟಿಕೊಳ್ಳುವ ಸೆಳೆತ ಹೆಚ್ಚಿದೆ ಎಂದು ಅರಿಯಬಹುದು.

ನೀರಿಗೆ ಬಿಸುಪಿನ ಅಳವು (heat capacity) ಹೆಚ್ಚಿರುತ್ತದೆ (ಅಂದರೆ ಹೆಚ್ಚು ಕಾವು ಒದಗಿಸಿದಷ್ಟು ಕಾವಳತೆ ಕೂಡಲೆ ಏರುವುದಿಲ್ಲ). ಈ ಗುಣದಿಂದಾಗಿ ನೀರಿನ ಒಡಲುಗಳಾದ ಕಡಲುಗಳು, ನೇಸರನಿಂದ ಬರುವ ಕಾವನ್ನು ಚೆನ್ನಾಗಿ ಮರುಹಂಚಿಕೆ ಮಾಡುತ್ತವೆ ಮತ್ತು ಭೂಮಿಯ ತಾಪವನ್ನು ಒಬ್ಬಗೆಯಾಗಿ ಇರಿಸುತ್ತವೆ. ಇದು ಜೀವಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ.

ಬೇರೆಲ್ಲಾ ಹರಿಕಗಳು ತಂಪಾಗಿಸಿದಾಗ ಕುಗ್ಗುತ್ತವೆ ಮತ್ತು ಗಟ್ಟಿಯಾಗುತ್ತವೆ ಆದರೆ ನೀರಿನ ರೂಪವಾದ ಮಂಜುಗಡ್ಡೆ (ice) ತಂಪಾಗಿಸಿದಾಗ ಹಿಗ್ಗುತ್ತದೆ ಮತ್ತು ತೇಲುತ್ತದೆ. ಇದರಿಂದ ಕೆರೆ ಕೊಳಗಳು ಕೆಳಗಿನಿಂದ ಗಟ್ಟಿಯಾಗದೇ ಮಂಜುಗಡ್ಡೆ ಬರಿಯ ನೀರಿನ ಮೇಲೆ ತೇಲುತ್ತದೆ. ಇದರಿಂದ ನೀರಿನ ಜೀವಿಗಳಿಗೆ ಬೇಕಾದ ಕಾವಳತೆ ಸಿಗುತ್ತದೆ.

ನೀರಿಗೆ ಸಾಕಷ್ಟು ಬಗೆಯ ವಸ್ತುಗಳನ್ನು ಕರಗಿಸಿಕೊಳ್ಳುವ ಕಸುವು ಇದೆ. ಇದರಿಂದಾಗಿ ಜೀವಿಗಳಿಗೆ ಬೇಕಾಗುವ ಹಲಬಗೆಯ ಪೊರೆತ (nutrients)ಗಳನ್ನು ಸಾಗಿಸುವ ಶಕ್ತಿ ನೀರಿಗಿದೆ. ನೀರಿಗೆ ಮಿಂತುಣುಕನ್ನು ಅಡಗಿಸಿಕೊಳ್ಳುವ ಅಳವಿಲ್ಲದಿದ್ದರೆ ಗಿಡ ಮರಗಳಲ್ಲಿ ಬೆಳಕಿನಡುಗೆ (photosynthesis) ಆಗುತ್ತಲೇ ಇರಲಿಲ್ಲ. ನೀರಿಗೆ ಹೆಚ್ಚಿನ ಮಟ್ಟದ ಮೇಲ್ಮೈ ಎಳೆತ(surface tension) ಇರುವ ಕಾರಣದಿಂದ ಎಷ್ಟೇ ಉದ್ದ ಇರುವ ಮರಕ್ಕೂ ಮರದ-ರಸ (sap) ಸಾಗಿಸಬಲ್ಲದು.

(ಚಿತ್ರ ಸೆಲೆ : unrth.com)

ಹುದುಗುವಿಕೆಯ ಚಳಕ ಮತ್ತು ಅದರ ಬಳಕೆ

ನಮ್ಮ ನಮ್ಮ ಮನೆಗಳಲ್ಲಿ ಅಮ್ಮ ಮಾಡುವ ರುಚಿಯಾದ ಇಡ್ಲಿ ಅಥವಾ ದೋಸೆ ತಿನ್ನುತ್ತಾ ತಿಂಡಿಗಳು ಹೇಗೆ ಇಷ್ಟು ರುಚಿಯಾಗಿ, ಮೆದುವಾಗಿವೆ ಎಂದು ಯೋಚಿಸಿದ್ದೀರಾ? ಹಾಲು ಹೇಗೆ ತನ್ನಷ್ಟಕ್ಕೆ ತಾನೇ ಮೊಸರಾಗುತ್ತದೆ? ಹಾಗೆ ಅಜ್ಜಿ ಮಾಡಿಟ್ಟ ಉಪ್ಪಿನಕಾಯಿ ಹೇಗೆ ತಿಂಗಳುಗಟ್ಟಲೆ ಕೆಡದೆ ಅದರ ವಿಶಿಷ್ಟ ರುಚಿ ಉಳಿಯತ್ತೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇವುಗಳ ಹಿಂದಿರುವ ಚಳಕವೇ ಹುದುಗುವಿಕೆ ಅಥವಾ ಹುಳಿಯುವಿಕೆ (Fermentation). ಇದನ್ನು ಮನುಷ್ಯರು ನೂರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇಂದಿಗೂ ದಿನನಿತ್ಯದ ಬದುಕಿನಲ್ಲೂ ಇದರ ಬಳಕೆ ಬಹಳ ಸಾಮಾನ್ಯ.

 ಏನಿದು ಹುದುಗುವಿಕೆ ?

ಫಂಗೈ ಹಾಗು ಬ್ಯಾಕ್ಟೀರಿಯಾದಂತಹ ಕಿರುಜೀವಿಗಳು ನಮ್ಮ ಆಹಾರವನ್ನು ಗಾಳಿಯ ಆಮ್ಲಜನಕ ಇರುವೆಡೆ ಇಲ್ಲವೇ ಗಾಳಿಯಿಲ್ಲದೆಡೆ, ಸಕ್ಕರೆಯ ಅಂಶ (ಗ್ಲುಕೋಸ್) ಸೇವಿಸಿ ಬೇರೆ ಪದಾರ್ಥಗಳನ್ನು ತಯಾರಿಸುವ ಬಗೆಯೇ ಹುದುಗುವಿಕೆಗೆ ಕಾರಣ. ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯ ಕೊರತೆ ಇರುವುದಿಲ್ಲ, ಬಗೆಯ ಸೇವನೆಯನ್ನು ಏರೋಬಿಕ್ ಮೆಟಾಬೋಲಿಸಮ್ (Aerobic metabolism) ಎನ್ನುತ್ತಾರೆ. ಆಮ್ಲಜನಕದ ಕೊರತೆಯಿದ್ದಾಗ ಕಿರುಜೀವಿಗಳ ಸೇವನೆಯ ಬಗೆ ಬೇರೆಯಾಗಿರುತ್ತದೆ, ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ (Anaerobic Metabolism) ಎನ್ನುತ್ತಾರೆ. ಹೀಗೆ ಎರಡೂ ಬಗೆಯಲ್ಲಿ ಸೇವಿಸುವ ಜೊತೆಗೆ ಅವು ಆಲ್ಕೋಹಾಲ್ ಅಥವಾ ಇನ್ನಿತರ ರಾಸಾಯನಿಕ ಪದಾರ್ಥವನ್ನು ತಯಾರಿಸುತ್ತವೆ. ಫಂಗೈ ಹಾಗು ಬ್ಯಾಕ್ಟೀರಿಯಾಗಳ ಗುಣವನ್ನು ಜನರು ತಮ್ಮ ಅನುಕೂಲಕ್ಕೆ ಬಳಸುವ ಚಳಕವೇ ಹುದುಗುವಿಕೆ.

 36383574_1760910227333441_1638605155286908928_n

ಹುದುಗುವಿಕೆ ಚಳಕದ ಬಳಕೆ: 

ಸಾಮಾನ್ಯವಾಗಿ ಅಡುಗೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗೈನ ಕೆಲಸ ಇರುವುದಿಲ್ಲ, ಆದರೆ ಹುದುಗಿದ ತಿನಿಸು ಹಾಗು ಅಡಿಗೆಯಲ್ಲಿ ಬ್ಯಾಕ್ಟೀರಿಯಾ ಹಾಗು ಫಂಗೈನ ಕೆಲಸದಿಂದ ಅಡುಗೆಯ ರುಚಿ, ಪೌಷ್ಟಿಕತೆ, ಗುಣಗಳನ್ನು ಹೆಚ್ಚಿಸುತ್ತವೆ, ಕಾರಣಕ್ಕೆ ಹುದುಗಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇಡ್ಲಿ, ದೋಸೆ, ಉಪ್ಪಿನಕಾಯಿ ಇವುಗಳ ರುಚಿ ಹೆಚ್ಚುವುದು ಹುದುಗುವಿಕೆಯಿಂದಲೇ. ಇಡ್ಲಿ ಹಾಗು ದೋಸೆ ಮಾಡವ ಹಿಂದಿನ ದಿನ ಹಿಟ್ಟನ್ನು ನೆನಸಿಟ್ಟಾಗ ಕಿರುಜೀವಿಗಳು ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ ಮೂಲಕ ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುತ್ತದೆ ಹಾಗೆಯೆ ಹಿಟ್ಟು ಮೆದುವಾಗುತ್ತದೆ.

ಉಪ್ಪಿನಕಾಯಿ ಮಾಡುವಾಗ ಕಾಯಿಯ ತುಂಡುಗಳನ್ನು ಉಪ್ಪಿನಲ್ಲಿ ಕಲಸಿ ಗಾಳಿಯಾಡದಂತೆ ಮುಚ್ಚಿಟ್ಟಾಗ ಕಾಯಿಯ ಸಿಪ್ಪೆಯಲ್ಲಿದ್ದ ಲ್ಯಾಕ್ಟೊಬಸಿಲ್ಲುಸ್ (Lactobacillus) ಎಂಬ ಬ್ಯಾಕ್ಟೀರಿಯಾ ಕಾಯಿಯನ್ನು ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುವುದರ ಪರಿಣಾಮ ಉಪ್ಪಿನಕಾಯಿಗೆ ತನ್ನದೇ ಆದ ರುಚಿ ಒದಗುತ್ತದೆ, ಅಲ್ಲದೇ ಉಪ್ಪಿನೊಂದಿಗೆ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ಅದು ಕೆಡದೆ ಬಹಳ ಕಾಲ ಇರುತ್ತದೆ. ಇದೇ ಬ್ಯಾಕ್ಟೀರಿಯಾದ ಇಂತಹದೇ ಕೈಚಳಕದಿಂದ ಹಾಲು ಮೊಸರಾಗುವುದು ಕೂಡ. ಅಲ್ಲದೆ ಎಲ್ಲಾ ತರಹದ ಹೆಂಡಗಳು (ರಮ್, ವೈನ್, ವಿಸ್ಕಿ, ಇತ್ಯಾದಿ) ಎಲ್ಲವೂ ತಯಾರಾಗುವುದು ಹುದುಗುವಿಕೆಯಿಂದಲೇ. ಬ್ಯಾಕ್ಟೀರಿಯಾಗಳು ಹಣ್ಣು ಹಾಗು ತರಕಾರಿಗಳ ರಸವನ್ನು ಗಾಳಿಯಿಲ್ಲದ ಸಂದರ್ಭದಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತದೆ. ಬಗೆ ಬಗೆಯ ಹಣ್ಣು ಹಾಗು ತರಕಾರಿಗಳನ್ನು ಬಳಸಿ ಬಗೆ ಬಗೆಯ ಹೆಂಡಗಳನ್ನು ತಯಾರಿಸುತ್ತಾರೆ.

 ಹುದುಗುವಿಕೆಯ ಇತಿಹಾಸ:

ಯಾವಾಗ ಜನರು ಹಾಲನ್ನು ಮೊಸರು ಮಾಡುವುದನ್ನು ಕಲಿತರೋ, ಇಡ್ಲಿ, ದೋಸೆ, ಉಪ್ಪಿನಕಾಯಿ ಮಾಡಲು ಶುರುಮಾಡಿದರೋ, ಹೆಂಡ ತಯಾರಿಸಲು ಕಲಿತುಕೊಂಡರೋ ಅಂದೇ ಹುದುಗುವಿಕೆಯ ಬಳಕೆ ಶುರುವಾಯಿತು. ಸರಿ ಸುಮಾರು 6000 B.C.E ಯಲ್ಲಿ ಚೀನಾದ ಒಂದು ಪ್ರಾಂತ್ಯದಲ್ಲಿ ಒಂದು ಬಗೆಯ ಮದ್ಯ ತಯಾರಿಸಿದ ಪುರಾವೆ ಸಿಕ್ಕಿದೆ. ಹೀಗೆ ಬಗೆ ಬಗೆಯ ಹುದುಗಿದ ತಿನಿಸುಗಳನ್ನು ಸಾವಿರಾರು ವರುಷಗಳಿಂದ ತಯಾರಿಸಿದ ಪುರಾವೆಗಳು ಬಹಳಷ್ಟು ಇವೆ. ಆದರೆ ಇದರ ವೈಜ್ಞಾನಿಕ ಹಿನ್ನಲೆ ಯಾರು ಅರಿತಿರಲಿಲ್ಲ.

ಹುದುಗುವಿಕೆ ಹಿಂದಿನ ವಿಜ್ಞಾನವನ್ನು ಮೊದಲು ಅರಕೆ ಮಾಡಿದ್ದು ಫ್ರಾನ್ಸ್ ಮೂಲದ ಹೆಸರಾಂತ ವಿಜ್ಞಾನಿ ಲೂಯಿಸ್ ಪಾಶ್ಚರ್ (Louis Pasteur). ಸುಮಾರು 18ನೇ ಶತಮಾನದಲ್ಲಿ ಹಲವಾರು ವಿಜ್ಞಾನಿಗಳು ಹುದುಗುವಿಕೆ ಒಂದು ರಾಸಾಯನಿಕ ಕ್ರಿಯೆ ಎಂದು ಭಾವಿಸಿದ್ದರು, ಆದರೆ 1856ರಲ್ಲಿ ಪಾಶ್ಚರ್ ಅವರನ್ನು ಅವರ ಶಿಷ್ಯರ ತಂದೆಯೊಬ್ಬರು ತಮ್ಮ ವೈನ್ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಸೂಚಿಸಲು ಕೇಳಿಕೊಂಡರು. ಅವರ ತೊಂದರೆ ಏನೆಂದರೆ, ಇವರು ಸರಿ ತಿಳಿದ ದಾರಿಯಲ್ಲಿ ತಯಾರು ಮಾಡುತ್ತಿದ್ದ ವೈನ್ ರುಚಿ ಹಾಳಾಗುತ್ತಿತ್ತು. ಆಗ ತೊಂದರೆಯಿಂದ ಕುತೂಹಲಗೊಂಡ ಪಾಶ್ಚರ್ ಅವರು ವೈನ್ ಮಾಡುವ ಬಗೆಯ ಬಗ್ಗೆ ತನಿಕೆ ಮಾಡಿದಾಗ ಹೊಸ ವಿಷಯವೊಂದು ಇವರ ಗಮನಕ್ಕೆ ಬಂತು

ಹಣ್ಣಿನ ರಸವನ್ನು ವೈನ್ ಮಾಡಲು ಯೀಸ್ಟ್ ಅನ್ನು ಬಳಸುತ್ತಿದ್ದರು, ಇದು ಹಣ್ಣಿನ ಸಕ್ಕರೆ ಅಂಶವನ್ನು ಗಾಳಿಯಿಲ್ಲದ ಏರ್ಪಾಡಿನಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತಿತ್ತು, ಇದೆ ವೈನ್ ಆಗುವ ಬಗೆ ಎಂದು ತಿಳಿಯಿತು. ವೈನ್ ಕೆಡುವುದಕ್ಕೆ ಕಾರಣವು ಮತ್ತೊಂದು ಬಗೆಯ ಯೀಸ್ಟ್ ಎಂಬುದು ತಿಳಿಯಿತು. ಯೀಸ್ಟ್, ಫಂಗೈ ಇವುಗಳು ಕಿರುಜೀವಿಗಳ ಬಗೆಗಳಾಗಿವೆ, ಇವುಗಳಲ್ಲಿ ಬಗೆ ಬಗೆಯ ಜಾತಿಗಳಿರುತ್ತವೆ. ಹೇಗೆ ಒಂದು ಜಾತಿಯ ಯೀಸ್ಟ್ ಸಕ್ಕರೆ ಅಂಶವನ್ನು ಆಲ್ಕೋಹಾಲ್ ಬದಲಿಗೆ ಲ್ಯಾಕ್ಟಿಕ್ ಆಸಿಡ್ ಆಗಿ ಬದಲಿಸುತ್ತಿತ್ತು. ಹೆಚ್ಚಿನ ಅರಕೆ ನಡೆಸಿದಾಗ ವೈನ್ ತಯಾರಿಸಲು ಬಳಸುತ್ತಿದ್ದ ಯೀಸ್ಟ್ ಮಿಶ್ರಣದಲ್ಲಿ, ಬೇರೊಂದು ಜಾತಿಯ ಯೀಸ್ಟ್ ಸೇರಿಕೊಂಡಿದ್ದು ತಿಳಿಯಿತು. ವೈನ್‍ನ ರುಚಿ ಕೆಡಲು ಇದೇ ಕಾರಣ!.

36343675_1760912287333235_2991375452431450112_n

(ಹುದುಗುವಿಕೆಯ ಸಂಶೋಧನೆಯಲ್ಲಿ ಲೂಯಿಸ್ ಪಾಶ್ಚರ್)

ತನಿಕೆಯಿಂದ ಹುದುಗುವಿಕೆಯ ಕ್ರಿಯೆ ಕಿರುಜೀವಿಗಳ ಕೈಚಳಕ ಎಂದು ಸಾಬೀತಾಯಿತು. ಅಲ್ಲದೆ, ಬಗೆ ಬಗೆಯ ಬ್ಯಾಕ್ಟೀರಿಯಾಗಳು ಹಾಗು ಫಂಗೈಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಹಾರ ಸೇವಿಸಿ ಆಲ್ಕೋಹಾಲ್ ಅಥವಾ ಆಸಿಡ್‍ಗಳನ್ನು ತಯಾರಿಸುತ್ತದೆ ಎಂದು ತಿಳಿಯಿತು. ಪಾಶ್ಚರ್ ಅವರ ತನಿಕೆಯಿಂದ ಅವರಿಗೆ ಹುದುಗುವಿಕೆ ಚಳಕದ ತಂದೆ (Father of Fermentation Technology) ಎಂಬ ಪಟ್ಟ ಸಿಕ್ಕಿತು.

ಪಾಶ್ಚರ್ ಅವರ ಹೊಸ ಹುಡುಕಿನಿಂದ ಜನ ಕಿರುಜೀವಿಗಳನ್ನು ನೋಡುವ ಬಗೆಯೇ ಬದಲಾಯಿತು. ಬ್ಯಾಕ್ಟೀರಿಯಾ ಹಾಗು ಫಂಗೈ ಬರೀ ಮನುಷ್ಯರಿಗೆ ಹಾನಿ ಮಾಡುತ್ತದೆ, ಇವುಗಳಿಂದ ಯಾವುದೇ ಒಳಿತಿಲ್ಲ ಎಂಬ ನಂಬಿಕೆಗೆ ಬದಲಾಗಿ ಇವುಗಳು ನಮಗೆ ತಿಳಿಯದೆ ನಮಗೆ ಸಾವಿರಾರು ವರುಷಗಳಿಂದ ನಮಗೆ ಏನೆಲ್ಲಾ ಉಪಕಾರ ಮಾಡಿವೆ ಎಂಬ ಮನಸ್ಥಿತಿ ಹುಟ್ಟಿತು. ಪಾಶ್ಚರ್ ಅವರ ಸಂಶೋಧನೆಯ ನಂತರ ಹುದುಗುವಿಕೆಯ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿತು

1897 ರಲ್ಲಿ ಎಡ್ವರ್ಡ್ ಬುಕ್ನೆರ್, ಜರ್ಮನಿಯ ವಿಜ್ಞಾನಿಯೊಬ್ಬರು ಕಿರುಜೀವಿಗಳು ಬದುಕಿಲ್ಲದಿದ್ದರೂ ಅವುಗಳಿಂದ ತೆಗೆದ ರಸದಿಂದಲೇ ಹುದುಗುವಿಕೆಯಾಗುತ್ತದೆ ಎಂದು ತೋರಿಸಿದರು. ಸತ್ತ ಯೀಸ್ಟ್ ಇಂದ ತೆಗೆದ ರಸದಿಂದ ಸಕ್ಕರೆ ಆಲ್ಕೋಹಾಲ್ ಆಗಿ ಬದಲಾಗಿದ್ದನ್ನು ಗಮನಿಸಿ ತನಿಕೆ ಮಾಡಿದಾಗ ಯೀಸ್ಟ್ ತಯಾರಿಸಿದ ಕಿಣ್ವವೊಂದು(Enzymes) ಕೆಲಸ ಮಾಡುತಿದ್ದನ್ನು ಕಂಡುಹಿಡಿದರು. ಅದಕ್ಕೆ ಜೈಮೇಸ್ಎಂದು ಹೆಸರಿಟ್ಟರು. ಇದರಿಂದ, ಹುದುಗುವಿಕೆ ಬ್ಯಾಕ್ಟೀರಿಯಾ ಹಾಗು ಫಂಗೈಗಳು ತಯಾರಿಸುವ ಕಿಣ್ವಗಳಿಂದ ಹುದುಗುವಿಕೆಯಾಗುತ್ತದೆ ಎಂದು ಸಾಬೀತಾಯಿತು. ಇದನ್ನು ಕಂಡುಹಿಡಿದಿದ್ದಕ್ಕೆ ಎಡ್ವರ್ಡ್ ಬುಕ್ನೆರ್ ಅವರಿಗೆ 1907 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು.

20ನೇ ಶತಮಾನದ ಶುರುವಿನೊಂದಿಗೆ ಹುದುಗುವಿಕೆಯ ಚಳಕ ಬೆಳೆಯತೊಡಗಿತು. ಪಾಶ್ಚರ್ ಅವರು ಕಿರುಜೀವಿಗಳು ಹೇಗೆ ಹುದುಗುವಿಕೆ ಮಾಡುತ್ತದೆ ಎಂದು ತೋರಿಸಿಕೊಟ್ಟಿದ್ದರು. ಹಾಗೆ 19ನೇ ಶತಮಾನದಲ್ಲಿ ಶುರುವಾಗಿದ್ದ ಕಿಣ್ವಗಳ ಕುತೂಹಲಕ್ಕೆ ಎಡ್ವರ್ಡ್ ಬುಕ್ನೆರ್ ಅವರು ಕಂಡುಹಿಡಿದ ಹುದುಗುವಿಕೆಯಲ್ಲಿ ಕಿಣ್ವಗಳ ಪಾತ್ರದ ವಿಚಾರ ಚಳಕಕ್ಕೆ ನಾಂದಿ ಹಾಡಿತು. ಅಲ್ಲದೆ, 1930ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಪೆನಿಸಿಲಿಯಮ್ ಎಂಬ ಫಂಗೈಯಿಂದ ಮೊಟ್ಟಮೊದಲ ಆಂಟಿಬಯೋಟಿಕ್ (Anti-biotic), ಪೆನಿಸಿಲಿನ್ ಅನ್ನು ತಯಾರಿಸಬಹುದು ಎಂದು ಕಂಡುಕೊಟ್ಟರು, ಇದೇ ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯ ಚಳಕದಿಂದ ತಯಾರಿಸಬಹುದು ಎಂಬ ಸುದ್ದಿ ಉದ್ಯಮಿಗಳ ಹುಬ್ಬೇರಿಸಿತು. ಹೀಗೆ 20ನೇ ಶತಮಾನದುದ್ದಕ್ಕೂ ವಿಜ್ಞಾನಿಗಳು, ಉದ್ಯಮಿಗಳು ಹುದುಗುವಿಕೆಯ ಚಳಕದಿಂದ ಕಿರುಜೀವಿಗಳಿಂದ ಏನೆಲ್ಲಾ ತಯಾರಿಸಬಹುದೆಂದು ತಿಳಿಯುತ್ತಾಹೋದಂತೆ ಪ್ರಪಂಚದ ಗಮನ ಹುದುಗುವಿಕೆಯ ಚಳಕದ ಮೇಲೆ ಹೆಚ್ಚಾಯಿತು!

ಪ್ರಪಂಚವನ್ನಾಳುತ್ತಿರುವ ಹುದುಗುವಿಕೆಯ ಚಳಕ:

ಇಂದು ಹುದುಗುವಿಕೆಯ ಚಳಕವೆಂದರೆ ಕಿರುಜೀವಿಗಳನ್ನು ಬಳಸಿ ಯಾವುದೋ ಒಂದು ಉಪಯುಕ್ತ ಪದಾರ್ಥವನ್ನು ತಯಾರಿಸುವ ಅಥವಾ ಒಂದು ಪದಾರ್ಥವನ್ನು ಕಿರುಜೀವಿಗಳ ಸಹಾಯದಿಂದ ಮತ್ತೊಂದು ಉಪಯುಕ್ತ ಪದಾರ್ಥವಾಗಿ ಮಾರ್ಪಾಟು ಮಾಡುವ ಚಳಕವಾಗಿ ಬೆಳೆದಿದೆ.

36343658_1760910237333440_4097575942015156224_n (1)

ಪಾಶ್ಚರ್ ಅವರು ಹುದುಗುವಿಕೆಯನ್ನು ಕಂಡುಹಿಡಿದ ನಂತರ, ವರುಷಗಳು ಕಳೆದಂತೆ ವಿಜ್ಞಾನಿಗಳು ಹೊಸ ಬಗೆಯ ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಕಂಡುಹಿಡಿಯಲು ಶುರುಮಾಡಿದರು, ಹಾಗೆ ಇವುಗಳಿಂದ ತಯಾರಿಸಬಹುದಾದಂತ ಜನರಿಗೆ ಉಪಯೋಗವಾಗುವ ಪದಾರ್ಥಗಳನ್ನು ಕಂಡುಹಿಡಿಯಲು ಶುರುಮಾಡಿದರು. 1942ರಲ್ಲಿ ಫಂಗೈ ಬಳಸಿ ಪೆನಿಸಿಲಿನ್ಅನ್ನು ಹೆಚ್ಚು ಹೆಚ್ಚು ತಯಾರಿಸಲು ಶುರುವಾಯಿತು. ಹೀಗೆ ಪ್ರತಿಯೊಂದು ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯಿಂದ ತಯಾರಿಸಲು ಶುರುವಾಯಿತು. ಹುದುಗುವಿಕೆಯ ಚಳಕ ಬೆಳೆದಂತೆ ಅದರ ಬಳಕೆಯ ಬಗೆ ಬದಲಾಗತೊಡಗಿತು.

ಜೆನೆಟಿಕ್ ಇಂಜಿನಿಯರಿಂಗ್ (Genetic engineering) ಇಂದ ಜನರು ಬ್ಯಾಕ್ಟೀರಿಯಾ ಹಾಗು ಇತರೆ ಜೀವಿಗಳ ಜೀನ್ ಹಾಗು ಅವುಗಳ ಜಿನೊಮ್ ಅನ್ನು ನಮ್ಮ ಬಳಕೆಗೆ ಅನುಗುಣವಾಗಿ ಬದಲಾಯಿಸಬಲ್ಲ ಚಳಕದ ಬಗ್ಗೆ ಹೆಚ್ಚು ತಿಳಿಯುತ್ತ ಹೋದಂತೆ, ಹುದುಗುವಿಕೆಯಲ್ಲಿ ಬಳಸುವ ಜೀವಿಗಳ ಗುಣಗಳನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬದಲಾಯಿಸಲು ಶುರುಮಾಡಿದರು. ಮೈಕ್ರೋಬಯಾಲಜಿ (Microbiology) ಹಾಗು ಮೊಲಿಕ್ಯುಲರ್ ಬಯಾಲಜಿ(Molecular Biology)ಗಳಲ್ಲಿ ಜನರ ಅರಿವು ಹೆಚ್ಚಾದಂತೆ, ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಬಳಸಿ ಯಾವುದೇ ಬಗೆಯ ಬಯೋಮಾಲಿಕ್ಯುಲನ್ನು (Biomolecule) ಹುದುಗುವಿಕೆಯ ಮೂಲಕ ಹೆಚ್ಚು ಹೆಚ್ಚು ತಯಾರಿಸಬಹುದು ಎಂದು ಅರಿತರು.

ಕಿಣ್ವಗಳ ಬಗ್ಗೆ ತಿಳಿವು ಹೆಚ್ಚಾದಂತೆ ಇವುಗಳ ಉಪಯೋಗಗಳು ಜನ ಜೀವನದಲ್ಲಿ ಬಹಳಷ್ಟಿದೆ ಎಂಬುದನ್ನು ಅರಿತುಕೊಂಡರು. ಕಿಣ್ವಗಳು ಪ್ರತಿ ಜೀವಿಯು ಬದುಕಿ ಬಾಳಲು ಅಗತ್ಯ, ಏಕೆಂದರೆ ಯಾವುದೇ ಜೀವಿಯು ಆಹಾರ ಸೇವಿಸಬೇಕಾದರೆ, ಅದನ್ನು ಜೀರ್ಣಿಸಲು ಹಾಗು ಅದರಿಂದ ಪೌಷ್ಟಿಕತೆ ಪಡೆದು ಎಲ್ಲಾ ಬಗೆಯ ಚಟುವಟಿಕೆಗೆ ಬಳಸಲು ಕಿಣ್ವಗಳು ಬೇಕೇ ಬೇಕು. ಹೇಗೆ ಕಿಣ್ವಗಳ ಕೆಲಸವನ್ನು ಜನರ ಬದುಕಿನ ಚಟುವಟಿಕೆಗಳಲ್ಲೂ ಬಳಸಬಹುದೆಂದು ತಿಳಿದಾಗ, ಇದನ್ನು ಹೆಚ್ಚು ಬಳಕೆ ಮಾಡಲು ಶುರುವಾಯಿತು. ಯಾವುದೇ ಬಗೆಯ ಕಿಣ್ವಗಳನ್ನು ಬ್ಯಾಕ್ಟೀರಿಯಾ ಅಥವಾ ಫಂಗೈಗಳಲ್ಲಿ ತಯಾರಿಸಬಹುದು ಎಂದು ತಿಳಿಯಿತು, ಹೀಗೆ ಹುದುಗುವಿಕೆಯ ಮೂಲಕ ಕಿಣ್ವಗಳನ್ನು ತಯಾರಿಸುವ ಬಗೆ ಬೆಳಕಿಗೆ ಬಂತು.

ರಾಸಾಯನಿಕ ಉತ್ಪನ್ನಗಳ ಕೆಟ್ಟ ಪರಿಣಾಮಗಳಿಂದ ಅದರ ಬದಲಿಗೆ ಜೈವಿಕ ಉತ್ಪನ್ನಗಳ ತಯಾರಿಕೆಯ ಬಗ್ಗೆ ಜನರ ಒಲವು ಹೆಚ್ಚಾದಾಗ ಹುದುಗುವಿಕೆಯ ಚಳಕದ ಮೂಲಕ ಬಗೆ ಬಗೆಯ ರಾಸಾಯನಿಕಗಳ ಬದಲಿ ಪದಾರ್ಥಗಳನ್ನು ತಯಾರಿಸಲು ಶುರುಮಾಡಿದರು. ಇಂದು ಕುಗ್ಗುತಿರುವ ಪೆಟ್ರೋಲ್ ಹಾಗು ಡೀಸೆಲ್ ಪ್ರಮಾಣದಿಂದ ಇಂಧನ ಬಳಕೆಗೆ ಬದಲಿ ಪದಾರ್ಥ ಕಂಡುಹಿಡಿಯ ಬೇಕಾದ ಅವಶ್ಯಕತೆ ಎದುರಾಗಿದೆ. ಇದಕ್ಕೆ ಕೂಡ ಅಲ್ಗೆಯನ್ನು (Algae) ಬಳಸಿ ಬಯೋಡೀಸೆಲ್ (Bio-Diesel) ಅನ್ನು ಹುದುಗುವಿಕೆಯ ಮೂಲಕ ತಯಾರಿಸುವ ಸಂಶೋಧನೆ ನಡೆಯುತ್ತಿದೆ. ಸಕ್ಕರೆ ತಯಾರಿಕೆಯಲ್ಲಿ ಬಾಕಿ ಉಳಿಯುವ ಕಾಕಂಬಿಯಿಂದ ಹಾಗು ಬೇಸಾಯದಿಂದ ಬಾಕಿ ಉಳಿಯುವ ತೆನೆಗಳಲ್ಲಿ ಇರುವ ಸೆಲ್ಯುಲೋಸ್ (Cellulose) ಅಂಶವನ್ನು ಬ್ಯಾಕ್ಟೀರಿಯಾ ಹಾಗು ಫಂಗೈ ಹುದುಗುವಿಕೆಯಿಂದ ಎಥನಾಲ್ (Ethanol) ಆಗಿ ಪರಿವರ್ತಿಸಿ ಅದನ್ನು ಪೆಟ್ರೋಲ್ ಬದಲು ಬಂಡಿಗಳಲ್ಲಿ ಬಳಸುವ ಉರುವಲುಗಳನ್ನಾಗಿ ತಯಾರಿಸುವ ಸೋಶೋಧನೆ ಕೂಡ ಇಂದು ಭರದಿಂದ ಸಾಗಿದೆ.

ಬಯೋ ಟೆಕ್ನಾಲಜಿಯಿಂದ ಯಾವುದೇ ಉತ್ಪನ್ನ ತಯಾರಿಕೆ ಆಗಬೇಕಾದರೆ ಅದನ್ನು ಹೆಚ್ಚಾಗಿ ಹುದುಗುವಿಕೆಯಿಂದಲೇ ತಯಾರಿಸಬೇಕಾಗುತ್ತದೆ. ಇಂದು ಹುದುಗುವಿಕೆ ಕೇವಲ ಬ್ಯಾಕ್ಟೀರಿಯಾ ಹಾಗು ಫಂಗೈ ಅಂತಹ ಕಿರುಜೀವಿಗಳಿಗೆ ಮೀಸಲಾಗಿಲ್ಲ, ಗಿಡಗಳ ಜೀವ ಕಣಗಳು, ಪ್ರಾಣಿಗಳ ಹಾಗು ಮನುಷ್ಯರ ಜೀವ ಕಣಗಳಿಂದಲೂ ಹುದುಗುವಿಕೆ ಮಾಡುತ್ತಾರೆ. ಉತ್ಪನ್ನದ ಗುಣ ಹಾಗು ಅದು ಯಾವ ಜಾತಿಯ ಜೀವಿಯಲ್ಲಿ ಹೆಚ್ಚು ತಯಾರಿಕೆಯಾಗುತ್ತದೆಯೋ ಅದೇ ಜೀವಿಯ ಕಣಗಳನ್ನು ಹುದುಗುವಿಕೆಯಲ್ಲಿ ಬಳಸಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಯೋ ಟೆಕ್ನಾಲಜಿಲ್ಲಿ ನಡಿಯುತ್ತಿರುವ ಸಂಶೋಧನೆಗಳು ಯಾರಲ್ಲಾದರೂ ಅಚ್ಚರಿ ಹಾಗು ಕುತೂಹಲ ಮೂಡಿಸದೇ ಇರದು.

ಹೀಗೆ ಹಲವು ಬಗೆಯ ಉತ್ಪನ್ನಗಳನ್ನು ಇಂದು ಹುದುಗುವಿಕೆಯಿಂದ ತಯಾರಿಸಲಾಗುತ್ತಿದೆ. ಇಂದು ತಯಾರಾಗುವ ಪ್ರತಿಯೊಂದು ಆಂಟಿಬಯೋಟಿಕ್ ಹುದುಗುವಿಕೆಯಿಂದಲೇ ತಯಾರಾಗುವುದು. ಹಲವು ರೋಗಗಳಿಗೆ ಮದ್ದಾಗಿ ಸಿಗುವ ಗಿಡಗಳ ಪದಾರ್ಥಗಳನ್ನು ಹೆಚ್ಚಾಗಿ ತಯಾರಿಸಲು ಮದ್ದಿನ ಅಂಶವನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಹುದುಗುವಿಕೆಯಿಂದ ಕಿರುಜೀವಿಗಳಲ್ಲಿ ತಯಾರಾಗುವಂತೆ ಮಾಡುತ್ತಿದ್ದಾರೆ. ಹುದುಗುವಿಕೆಯಿಂದ ಹೆಚ್ಚಾಗಿ ತಯಾರಿಸುತ್ತಿರುವ ಕಿಣ್ವಗಳು ಇಂದು ಜನರಿಗೆ ಅರಿವೇ ಇಲ್ಲದೆ ಎಲ್ಲೆಡೆ ಬಳಕೆಯಾಗುತ್ತಿದೆ. ಬಟ್ಟೆಗಳನ್ನು ತೊಳೆಯಲು ಬಳಸುವ ಸೋಪುಗಳಲ್ಲಿ, ಬಟ್ಟೆಗಳನ್ನು ನವಿರಾಗಿಸಲು, ನೂಲಿನ ತಯಾರಿಕೆಯಲ್ಲಿ, ಅಣಿಯಾಗಿರುವ ತಿನುಸುಗಳನ್ನು ತಯಾರಿಸಲು, ಹಣ್ಣುಗಳ ರಸದ ಉತ್ಪನ್ನಗಳಲ್ಲಿ, ಹೀಗೆ ದಿನ ನಿತ್ಯದ ಬಳಕೆಯಲ್ಲದೆ ಎಲ್ಲಾ ಬಗೆಯ ಕೈಗಾರಿಕೆಗಳಲ್ಲಿ ಕಿಣ್ವಗಳನ್ನು ಬಳಸುತಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಗಾಡಿಗಳೆಲ್ಲವೂ ಓಡುವುದು ಹುದುಗುವಿಕೆಯಿಂದ ಬಂದ ಬಯೋಡೀಸೆಲ್ ಹಾಗು ಬಯೋಎಥನಾಲ್ ಇಂದಲೇ ಎಂಬುವುದು ಒಂದು ವಾದ. ಇಷ್ಟಲ್ಲದೆ, ಇವತ್ತಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಎಲ್ಲಾ ಕೈಗಾರಿಕೆಗಳು ಪರಿಸರ ಸ್ನೇಹಿ ಚಳಕಗಳ ಹುಡುಕಿನಲ್ಲಿವೆ, ಇದುವರೆಗೂ ತಯಾರಿಕೆಯಲ್ಲಿದ್ದ ರೀತಿಯ ಬದಲಿಗೆ ಹುದುಗುವಿಕೆಯನ್ನು ಅಳವಡಿಸುವ ಪ್ರಯತ್ನಗಳು ಜಗತಿನ್ನೆಲ್ಲೆಡೆ ನಡೆಯುತ್ತಿದೆ. ಹೀಗೆ ವಿಜ್ಞಾನವು ಬ್ಯಾಕ್ಟೀರಿಯಾ, ಫಂಗೈ, ಅಲ್ಗೆ, ಗಿಡ ಹಾಗು ಪ್ರಾಣಿಗಳ ಜೀವಕಣಗಳ ಬಗ್ಗೆ ಹೆಚ್ಚು ಹೆಚ್ಚು ಕಂಡುಹಿಡಿಯುತ್ತಾ ಹೋದಂತೆ, ಅವುಗಳಿಂದ ಹೇಗೆ ಎಲ್ಲಾ ಬಗೆಯ ಪದಾರ್ಥಗಳನ್ನು ಹುದುಗುವಿಕೆಯ ಮೂಲಕ ತಯಾರಿಸಹಬಹುದು ಎಂದು ಚಳಕಗಾರರು ಕಂಡುಹಿಡಿಯಲು ಮಾಡುತ್ತಿದ್ದಾರೆ.

ಸಾವಿರಾರು ವರುಷಗಳಿಂದ ಕೇವಲ ಇಡ್ಲಿ, ದೋಸೆ, ಉಪ್ಪಿನಕಾಯಿ ಅಂತಹ ತಿನಿಸುಗಳಲ್ಲಿ ಅಡಗಿದ್ದ ಹುದುಗುವಿಕೆಯ ಚಳಕ, ಕಳೆದ ನೂರು ವರುಷಗಳಲ್ಲಿ ಜನರ ಬದುಕಿನ ಎಲ್ಲಾ ನಡೆಯಲ್ಲೂ ಅನುಕೂಲ ನೀಡುವ ದೊಡ್ಡ ಚಳಕವಾಗಿ ಬೆಳೆದು ನಿಂತಿರುವುದು ಅಚ್ಚರಿಯೇ ಸರಿ!.

(ಮಾಹಿತಿ ಮೂಲ: www.ncbi.nlm.nih.gov, www.libguides.lindahall.org, www.wikipedia.org)