ಭೂಮಿಯ ತೂಕ

ಪ್ರಶಾಂತ ಸೊರಟೂರ.

ಕಳೆದ ಬರಹವೊಂದರಲ್ಲಿ ಭೂಮಿಯ ದುಂಡಗಲವನ್ನು (Diameter) ಮೊಟ್ಟಮೊದಲ ಬಾರಿಗೆ ಅಳೆದವರಾರು ಮತ್ತು ಹೇಗೆ ಅಳೆದರು ಅಂತಾ ತಿಳಿದುಕೊಂಡೆವು. ಬಾನರಿಮೆ ಇಲ್ಲವೇ ಅದಕ್ಕೆ ಹೊಂದಿಕೊಂಡಂತ ವಿಷಯಗಳನ್ನು ಓದುವಾಗ ನೆಲ, ನೇಸರ, ಮಂಗಳ ಮುಂತಾದವುಗಳ ತೂಕ ’ಇಂತಿಷ್ಟು ’ ಅಂತಾ ಓದಿದೊಡನೆ, ಇಂತ ದೊಡ್ಡದಾದ ವಸ್ತುಗಳನ್ನು ಹೇಗೆ ತೂಗುತ್ತಾರೆ ಅನ್ನುವಂತ ಕೇಳ್ವಿಯೊಂದು ನಿಮ್ಮ ತಲೆಗೆ ಹೊಕ್ಕಿರಬಹುದು.

ಅರಿಮೆಯ ಹೆಚ್ಚುಗಾರಿಕೆ ಇದರಲ್ಲೇ ಅಡಗಿರುವುದು, ನೇರವಾಗಿ ಕಂಡುಹಿಡಿಯಲು ಆಗದಂತಹ ವಿಷಯಗಳನ್ನು ನೇರವಲ್ಲದ ಹೊಲಬು (Method) ಬಳಸಿ ಎಣಿಕೆಹಾಕಬಹುದು. ಬನ್ನಿ, ಈ ಬರಹದಲ್ಲಿ ಭೂಮಿಯ ತೂಕವನ್ನು ಹೇಗೆ ನೇರವಾಗಿ ತೂಗದೆ, ಬೇರೊಂದು ಗೊತ್ತಿರುವ ಅರಿಮೆಯ ನಂಟುಗಳಿಂದ ಎಣಿಕೆಹಾಕಬಹುದು ಅಂತಾ ತಿಳಿದುಕೊಳ್ಳೋಣ.

ನಮ್ಮ ದಿನದ ಬದುಕಿನಲ್ಲಿ ರಾಶಿಯನ್ನೇ ತೂಕ ಅನ್ನುವ ಹುರುಳಿನಿಂದ ನಾವು ಬಳಸುತ್ತೇವೆ. ಆದರೆ ಅರಿಮೆಯ ಕಣ್ಣಿನಲ್ಲಿ ತೂಕ (weight) ಮತ್ತು ರಾಶಿಗಳಲ್ಲಿ (Mass) ಬೇರ್ಮೆಯಿದೆ .

ವಸ್ತು ಎಷ್ಟು’ಅಡಕವಾಗಿದೆ’ ಅನ್ನುವುದನ್ನು ರಾಶಿ (Mass) ಅಂತಾ ಮತ್ತು ವಸ್ತು ಬೇರೊಂದರ ನೆಲೆಯಲ್ಲಿ ಎಷ್ಟು ’ಸೆಳೆಯಲ್ಪಡುತ್ತದೆ’ ಅನ್ನುವುದನ್ನು ತೂಕ (Weight) ಅಂತಾ ಕರೆಯುತ್ತಾರೆ. ರಾಶಿಯನ್ನು ಕೆಜಿ (kg) ಎಂಬ ಅಳತೆಗೋಲಿನಿಂದ ಅಳೆದರೆ ತೂಕಕ್ಕೆ ನ್ಯೂಟನ್ (N) ಎಂಬ ಅಳತೆಗೋಲು ಬಳಸಲಾಗುತ್ತದೆ.

ಉದಾಹರಣೆಗೆ : ಭೂಮಿಯ ಮೇಲೆ ವಸ್ತುವೊಂದರ ರಾಶಿ 70 kg ಆಗಿದ್ದರೆ ಚಂದ್ರನ ಮೇಲೂ ಅದರ ರಾಶಿ ಅಷ್ಟೇ ಆಗಿರುತ್ತದೆ ಆದರೆ ಅದೇ ವಸ್ತುವಿನ ತೂಕ ಭೂಮಿಯ ಮೇಲೆ 70 x 9.81 = 686.7 N (ನ್ಯೂಟನ್) ಆಗಿದ್ದರೆ, ಚಂದ್ರನ ಮೇಲೆ ಅದು 70 x 1.62 = 113.4 N ಆಗಿರುತ್ತದೆ.

ಇದಕ್ಕೆ ಕಾರಣವೆಂದರೆ, ಇಂತಿಷ್ಟು ಅಡಕವಾಗಿರುವ (ರಾಶಿ) ವಸ್ತುವನ್ನು ಭೂಮಿಯು ತನ್ನೆಡೆಗೆ ಹೆಚ್ಚು ಸೆಳೆದರೆ, ಚಂದ್ರನಿಗೆ ಆ ಸೆಳೆಯುವ ಕಸುವು ನೆಲಕ್ಕಿಂತ ಸುಮಾರು 83% ಕಡಿಮೆಯಿದೆ. ಅಂದರೆ ಭೂಮಿಯ ಮೇಲೆ ಗಟ್ಟಿಯಾಗಿ ನೆಲೆಯೂರಿರುವ ವಸ್ತು, ಚಂದ್ರನ ಮೇಲೆ ಕಡಿಮೆ ಸೆಳೆತದಿಂದಾಗಿ ತೇಲಾಡಬಹುದು.

(ರಾಶಿ ಮತ್ತು ತೂಕದ ಬೇರ್ಮೆ ತೋರಿಸುತ್ತಿರುವ ತಿಟ್ಟ)

 

ಇದರಿಂದ ಇನ್ನೊಂದು ತಿಳಿದುಕೊಳ್ಳುವ ವಿಷಯವೆಂದರೆ ವಸ್ತುವಿನ ತೂಕ ಇಂತಿಷ್ಟಿದೆ ಎಂದರೆ ಅದನ್ನು ಯಾವ ಸೆಳೆತದ ನೆಲೆಯಲ್ಲಿ (ನೆಲ, ಚಂದಿರ, ನೇಸರ ಮುಂತಾದವು) ಅಳೆಯಲಾಯಿತು ಅನ್ನುವುದನ್ನೂ ತಿಳಿಸಬೇಕಾಗುತ್ತದೆ ಆದರೆ ರಾಶಿ ಹಾಗಲ್ಲ, ಎಲ್ಲೆಡೆಯೂ ಅದು ಒಂದೇ ಆಗಿರುತ್ತದೆ. (ಯಾರಾದರೂ ನನ್ನ ತೂಕ ಇಂತಿಶ್ಟಿದೆ ಅಂದರೆ ಎಲ್ಲಿ ಅಳೆದದ್ದು ಭುವಿಯಲ್ಲೋ , ಚಂದಿರನಲ್ಲೋ ಅಂತಾ ಕೇಳುವುದು ಅರಿಮೆಯ ಕಣ್ಣಲ್ಲಿ ಸರಿಯಾದ ಕೇಳ್ವಿಯೇ)

ಅರಿಮೆಯ ಈ ಹಿನ್ನೆಲೆಯಲ್ಲಿ ಭೂಮಿಯ ’ತೂಕ’ (Weight) ಕಂಡುಹಿಡಿಯುವ ಬಗೆಯನ್ನು ತಿಳಿಯಲು ಹೊರಟಿರುವ ನಾವು ಅದು ಭೂಮಿಯ ’ರಾಶಿ’ (Mass) ಅಂತಾ ಹುರುಳಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಬರಹದ ಮುಂದಿನ ಕುರುಳುಗಳಲ್ಲಿ ’ತೂಕ’ ಅನ್ನುವ ಬದಲಾಗಿ ’ರಾಶಿ’ ಅಂತಾ ಬಳಸಲಾಗಿದೆ.

ನಿಮಗೆ ಶಾಲೆಯ ಪಾಟವೊಂದರಲ್ಲಿ ಈ ಆಗುಹವನ್ನು ಓದಿದ ನೆನಪಿರಬಹುದು,

“ಮರವೊಂದರಿಂದ ಬೇರ್ಪಟ್ಟ ಸೇಬಿನ ಹಣ್ಣು ನೆಟ್ಟಗೆ ನೆಲಕ್ಕೇ ಏಕೆ ಬಿದ್ದಿತು? ಅದ್ಯಾಕೆ ಮೇಲೆ ಹಾರಲಿಲ್ಲ? ಅನ್ನುವಂತ ಕೇಳ್ವಿಗಳು ಆ ಮರದ ಕೆಳಗೆ ಕುಳಿತಿದ್ದ ಹುಡುಗ ಐಸಾಕ್‍ನನ್ನು ಕಾಡತೊಡಗಿದವು. ಮುಂದೆ ಆ ಕುತೂಹಲಗಳೇ ಜಗತ್ತಿನ ಅರಿಮೆಯ ನಾಳೆಗಳನ್ನು ಬೆಳಗಿಸಿದವು. ಐಸಾಕ್ ನ್ಯೂಟನ್ನರ ತಿಳಿವು, ಕಟ್ಟಲೆಗಳು ಹಲವು ವಿಷಯಗಳಿಗೆ ಅಡಿಪಾಯವಾದವು”

ಭೂಮಿಯ ರಾಶಿಯನ್ನೂ ಐಸಾಕ್ ನ್ಯೂಟನ್ನರು ತಿಳಿಸಿಕೊಟ್ಟ ’ಕದಲಿಕೆಯ ಕಟ್ಟಲೆ’ (Law of motion) ಮತ್ತು ’ಹಿರಿಸೆಳೆತದ ಕಟ್ಟಲೆ’ (Law of gravitation) ಬಳಸಿ ಎಣಿಕೆಹಾಕಲಾಗುತ್ತದೆ. ನ್ಯೂಟನ್ನರು ತೋರಿಸಿಕೊಟ್ಟ ಕಟ್ಟಲೆಗಳು ಹೀಗಿವೆ,

 

ಅ) ಕದಲಿಕೆಯ ಕಟ್ಟಲೆ (law of motion):

ಒಂದು ವಸ್ತುವಿನ ಮೇಲೆ ಬೀಳುವ ಕಸುವು, ಆ ವಸ್ತುವಿನ ರಾಶಿ (Mass) ಮತ್ತು ಅದರ ವೇಗಮಾರ್ಪಿನ (acceleration) ಗುಣಿತಕ್ಕೆ ಸಾಟಿಯಾಗಿರುತ್ತದೆ.
F = m x a

ಇಲ್ಲಿ, F = ಕಸುವು, m = ವಸ್ತುವಿನ ರಾಶಿ, a = ವೇಗಮಾರ್ಪು

ಆ) ಹಿರಿಸೆಳೆತದ ಕಟ್ಟಲೆ (law of gravitation):

ಎರಡು ವಸ್ತುಗಳ ನಡುವೆ ಅವುಗಳ ರಾಶಿಗೆ ತಕ್ಕಂತೆ ಮತ್ತು ಅವುಗಳ ನಡುವಣಗಳ ದೂರಕ್ಕೆ ಎದುರಾಗಿ ಸೆಳೆತದ ಕಸುವಿರುತ್ತದೆ, ಅದನ್ನು ಹಿರಿಸೆಳೆತ (Gravitation) ಎನ್ನುತ್ತಾರೆ. (ಹಿರಿಸೆಳೆತ = ರಾಶಿಯಲ್ಲಿ ಹಿರಿದಾದ ವಸ್ತುವು ಕಿರಿದಾದ ವಸ್ತುವನ್ನು ತನ್ನೆಡೆಗೆ ಸೆಳೆಯುವ ಕಸುವು)

F = G (m1 x m2 / r2)

ಇಲ್ಲಿ, F = ವಸ್ತುಗಳ ನಡುವಿರುವ ಹಿರಿಸೆಳೆತದ ಕಸುವು, m1, m2 = ವಸ್ತುಗಳ ರಾಶಿಗಳು, r = ವಸ್ತುಗಳ ನಡುವಣದ ದೂರ, G = ನೆಲೆಬೆಲೆ (Constant).

ಈಗ, ಕಂಡುಹಿಡಿಯಲು ಹೊರಟಿರುವ ಭೂಮಿಯ ರಾಶಿ ‘M’ ಮತ್ತು ಭೂಮಿಯ ಮೇಲ್ಮೈಯಲ್ಲಿರುವ ವಸ್ತುವೊಂದರ ರಾಶಿ ’m’ ಅಂತಾ ತಿಳಿದುಕೊಳ್ಳೋಣ. ಮೇಲಿನ ನ್ಯೂಟನ್ನರ ಕಟ್ಟಲೆಗಳನ್ನು ಹೀಗೆ ಹೊಂದಿಸಿಕೊಳ್ಳಬಹುದು,

F = m x a = G (M x m / r2)
>> M = (a x r2)/G

ಈ ಮೇಲಿನ ನಂಟಿನಲ್ಲಿ ನಮಗೆ ಕೆಳಗಿನವುಗಳು ಗೊತ್ತಿರುವಂತವು,
i) a = g = 9.81 m/sec2

ಭೂಮಿಯ ಸೆಳೆತಕ್ಕೆ ಒಳಪಟ್ಟ ವಸ್ತುವೊಂದರ ವೇಗವು ಪ್ರತಿ ಸೆಕೆಂಡಿಗೆ 9.81 ಮೀಟರ್ನಷ್ಟು ಮಾರ್ಪಡುತ್ತದೆ (Acceleration due to gravity)

ii) G = 6.67 x 10-11  m3/(kg sec2)

ಈ ಬೆಲೆಯನ್ನು ಕೆವೆಂಡಿಶ್ ಹೆನ್ರಿ ತಮ್ಮ ಅರಕೆಯಿಂದ ಕಂಡುಹಿಡಿದಿದ್ದರು

iii) r = 6378000‍ ಮೀಟರ್ = ಭೂಮಿಯ  ಮೇಲ್ಮೈಯಿಂದ ನಡುವಣದವರೆಗೆ (Center) ಇರುವ ದೂರ = ಭೂಮಿಯ ದುಂಡಿ (Radius)

ಕಳೆದ ಬರಹದಲ್ಲಿ ಇದನ್ನು ಹೇಗೆ ಅಳೆಯಲಾಯಿತು ಅಂತಾ ತಿಳಿದುಕೊಂಡಿದ್ದೆವು (ದುಂಡಿ=ದುಂಡಗಲ/2, radius = diameter / 2)

ಆದುದರಿಂದ,
ಭೂಮಿಯ ರಾಶಿ = M = (a x r2)/G = (9.81 x 6378000‍ 2) / 6.67 x 10-11

5.98 x 1024 Kg

ಗೊತ್ತಾಯಿತಲ್ಲ, ಭೂಮಿಯ ತೂಕವನ್ನು (ರಾಶಿಯನ್ನು) ತಕ್ಕಡಿಯಿಲ್ಲದೇ ಹೇಗೆ ಕಂಡುಹಿಡಿಯಬಹುದಂತ !.

 

(ತಿಳಿವಿನ ಮತ್ತು ತಿಟ್ಟಗಳ ಸೆಲೆಗಳು: enchantedlearningwikipedia.orgbbc.co.uk, cnx.org )

ಮಂಗಳಗ್ರಹದಲ್ಲಿ ಒಂದು ಮನೆ

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ಎಮ್. ಎಸ್. ಎಸ್. ಮೂರ್ತಿ

ಭೂಮಿಯ ಮೇಲಿರುವಂತೆ ಇತರ ಗ್ರಹಗಳಲ್ಲಿ ಜೀವ ಸಂಪತ್ತು ಇದೆಯೆ?  ಅನಾದಿಕಾಲದಿಂದಲೂ ಈ ಪ್ರಶ್ನೆ ಮನುಷ್ಯನ ಕುತೂಹಲವನ್ನು ಕೆರಳಿಸುತ್ತಾ ಬಂದಿದೆ. ಆದರೆ, ಇದುವರೆಗೆ ತಿಳಿದಿರುವಂತೆ, ಜೀವ ಸಂಪತ್ತು ಸಾಧ್ಯವಾಗಿರುವುದು ಭೂಮಿಯ ಮೇಲೆ ಮಾತ್ರ. ಅದಕ್ಕೆ ಅನೇಕ ಕಾರಣಗಳು ಇವೆ. ಭೂಮಿಯ ಮೇಲಿನ ತಾಪಮಾನ ಸರಾಸರಿ 15°C ಇರುವುದರಿಂದಾಗಿ, ನೀರು ಜಲರೂಪದಲ್ಲಿ ಲಭ್ಯವಿದ್ದು ಜೀವ ಸಂಪತ್ತು ವೃದ್ಧಿಯಾಗಲು ಪೂರಕವಾಗಿದೆ. ಜೀವಿಗಳು ಉಸಿರಾಡಲು ಅನುಕೂಲವಾಗುವಂತೆ ಭೂಮಿಯ ಗುರುತ್ವ ವಾತಾವರಣವನ್ನು ಹಿಡಿದಿದೆ. ಭೂಮಿಯ ಕಾಂತ ಕ್ಷೇತ್ರ ಸೂರ್ಯನಿಂದ ನಿರಂತರವಾಗಿ ಹೊಮ್ಮುವ ಸೌರಮಾರುತದ ವಿಕಿರಣ ಕಣಗಳನ್ನು ತಡೆಗಟ್ಟಿ, ಅದರ ವಾತಾವರಣ ಹಾಗೂ ಜೀವಿಗಳನ್ನು ರಕ್ಷಿಸುತ್ತದೆ. ಈ ಎಲ್ಲ ಕಾರಣಗಳಿಂದ ಭೂಮಿ ವಾಸಯೋಗ್ಯ ಎಂದು ಪರಿಗಣಿಸಲಾಗಿದೆ.

ಸುಮಾರು 200,000 ವರ್ಷಗಳ ಹಿಂದೆ ಆಧುನಿಕ ಮಾನವ ಈ ಭೂಮಿಯ ಮೇಲೆ ಮೈದಳೆದನೆಂಬುದು ತಜ್ಞರ ಲೆಕ್ಕಾಚಾರ. ಆದರೆ, ಈ ದೀರ್ಘಾವಧಿಯಲ್ಲಿ ಮನುಷ್ಯ ತನ್ನ ಪರಿಸರವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಏರುತ್ತಿರುವ ಜನಸಂಖ್ಯೆ, ಅನಿಯಂತ್ರಿತ ನಗರೀಕರಣ ಇವುಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವುದಲ್ಲದೆ, ಹವಾಮಾನದಲ್ಲಿಯೂ ತೀವ್ರ ಏರುಪೇರುಗಳಾಗಿ ಜೀವಿಗಳ ಅಸ್ತಿತ್ವಕ್ಕೇ ಮಾರಕವಾಗುವ ಸನ್ನಿವೇಶ ಉಂಟಾಗಿದೆ. ಇವುಗಳನ್ನೆಲ್ಲಾ ತಕ್ಷಣಾ ತಡೆಗಟ್ಟದಿದ್ದರೆ, ಮುಂದಿನ ಕೆಲವು ಶತಮಾನಗಳಲ್ಲಿ ಭೂಮಿಯ ಮೇಲೆನ ಜೀವರಾಶಿಗಳು ಸರ್ವನಾಶವಾಗಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಾನವ ಚಟುವಟಿಕೆಗಳು ಮಾತ್ರವೇ ಅಲ್ಲದೆ ನಿಸರ್ಗದಲ್ಲಿ ಸಂಭವಿಸುವ ಹಲವು ಘಟನೆಗಳೂ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಮಾರಕವಾಗಬಹುದು. ಖಗೋಳ ವಿಜ್ಞಾನಿಗಳ ಪ್ರಕಾರ ಸುಮಾರು 5 ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲ ಮೈದಳೆಯಿತು. ಈ ಸೌರಮಂಡಲದ ಅಧಿಪತಿಯಾದ ಸೂರ್ಯ ಇನ್ನೊಂದು 4.5 ಬಿಲಿಯನ್ ವರ್ಷಗಳನಂತರ ಅವಸಾನ ಸ್ಥಿತಿಯನ್ನು ತಲುಪಿ, ಕೆಂಪುದೈತ್ಯವಾಗಿ (Red Giant) ಪರಿವರ್ತನೆಯಾಗುತ್ತದೆ. ಆಗ ಅದರ ವ್ಯಾಸ ಸುಮಾರು 250 ಪಟ್ಟು ಹಿಗ್ಗಿ, ಭೂಮಿಯನ್ನೂ ಆವರಿಸಿಕೊಳ್ಳುವುದರಿಂದ, ಇಲ್ಲಿ ಇರಬಹುದಾದ ಜೀವಿಗಳೆಲ್ಲಾ ನಾಶವಾಗುತ್ತವೆ. ಇದು ಶತಸ್ಸಿದ್ಧ. ಅದಕ್ಕೆ ಮೊದಲೇ ಇನ್ನೂ ಕೆಲವು ವಿಪತ್ತುಗಳು ಸಂಭವಿಸಬಹುದು. ಅತಿ ಪ್ರಬಲವಾದ ಒಂದು ಜ್ವಾಲಾಮುಖಿ ಭೂಗರ್ಭದಲ್ಲಿ ಸಿಡಿಯಬಹುದು; ಅಥವಾ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ, ಸರ್ವನಾಶಗೊಳಿಸಬಹುದು. ಭೂಮಿಯ ಇತಿಹಾಸದಲ್ಲಿಯೇ ಇದಕ್ಕೆ ಸಾಕ್ಷಿ ಇದೆ. ಸುಮಾರು 160 ಮಿಲಿಯನ್ ವರ್ಷಗಳ ಹಿಂದೆ, ಅಂದರೆ, ಭೂಮಿಯಮೇಲೆ ಮಾನವ ಪಾದಾರ್ಪಣ ಮಾಡುವ ಮೊದಲೇ, ದೈತ್ಯಾಕಾರದ ಡೈನೊಸಾರ್ ಗಳು  ಇಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದವು. ಆದರೆ, ಈಗ್ಗೆ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಗಾತ್ರದ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದುದರಿಂದಾಗಿ, ಅವೆಲ್ಲ ಹಠಾತ್ ಕಣ್ಮರೆಯಾದವು.  ಮಾನವ ಸಂತತಿ ಮುಂದುವರಿದಿದ್ದೇ ಆದರೆ, ಅಂತಹ ದುರ್ಘಟನೆಗಳಿಂದ ಪಾರಾಗಬೇಕಾದರೆ, ಅದಕ್ಕೆ ಮೊದಲೇ ಭೂಮಿಯ ಜೊತೆಗೆ ಮತ್ತೊಂದು ಗ್ರಹದಲ್ಲಿ ವಾಸ್ತವ್ಯ ಹೂಡುವುದು ಅನಿವಾರ್ಯ. ಅದರ ಬಗ್ಗೆ ವಿಜ್ಞಾನಿಗಳು ಈಗಾಗಲೇ ಚಿಂತನೆ ನಡೆಸುತ್ತಿದ್ದಾರೆ. ಅವರ ಪ್ರಕಾರ, ಸಧ್ಯಕ್ಕೆ ಮಾನವನ ಮುಂದಿನ ನೆಲೆ ಸೌರಮಂಡಲದಲ್ಲೇ ಇರುವ ನಮ್ಮ ನೆರಯ ಮಂಗಳಗ್ರಹ.

ಮಂಗಳಗ್ರಹದಲ್ಲಿ ಏನಿದೆ, ಏನಿಲ್ಲ?

1ಮಂಗಳಗ್ರಹವು, ಭೂಮಿಯಿಂದ ಆಚೆಗೆ, ಸೂರ್ಯನಿಂದ ಸರಾಸರಿ 228 ಮಿಲಿಯನ್ ಕಿಮೀ ದೂರದಲ್ಲಿದೆ. ಮಂಗಳಗ್ರಹ ಮೈದಳೆದಾಗ, ಅದು ಬಹುಮಟ್ಟಿಗೆ ಭೂಮಿಯಂತೆಯೇ ಇತ್ತು. ಅಲ್ಲಿನ ಒಂದು ದಿನದ ಅವಧಿ, ಭೂಮಿಯ ದಿನಕ್ಕಿಂತ ಸುಮಾರು 39 ನಿಮಿಶಗಳು ಅಧಿಕ. ವರ್ಷ ಮಾತ್ರ 687 ಭೂದಿನಗಳು. ಹಾಗೆಯೇ, ಋತುಮಾನಗಳು ಕೂಡ ದೀರ್ಘ. ಆಗ ಅಲ್ಲಿ  ದಟ್ಟ ವಾತಾವರಣ, ಹರಿವ ನೀರು, ಪ್ರಬಲ ಕಾಂತಕ್ಷೇತ್ರ ಎಲ್ಲ ಇದ್ದವು. ಆದರೆ, ಕೆಲವು ಭೂವೈಜ್ಞಾನಿಕ ಕಾರಣಗಳಿಂದಂದಾಗಿ, ಸುಮಾರು 3.2 ಬಿಲಿಯನ್ ವರ್ಷಗಳ ಹಿಂದೆ ಅದರ ಕಾಂತಕ್ಷೇತ್ರ ಬಹುಮಟ್ಟಿಗೆ ನಶಿಸಿ ಹೊಯಿತು. ಅದರಿಂದಾಗಿ, ಸೌರಮಾರುತದ ವಿಕಿರಣಗಳು ಯಾವ ತಡೆಯೂ ಇಲ್ಲದೆ ಮಂಗಳದ ಮಾಯುಮಂಡಲವನ್ನು ದಾಳಿಮಾಡಿ, ಅಲ್ಲಿನ ಅನಿಲ ಅಣುಗಳೊಂದಿಗೆ ಪ್ರತಿಕ್ರಿಯಿಸಿ ಅಯನೀಕರಣಗೊಳಿಸಲಾರಂಭಿಸಿದವು. ಅದರಿಂದ ಉಂಟಾದ ವಿದ್ಯುತ್ ಕ್ಷೇತ್ರದಲ್ಲಿ ಅನಿಲ ಅಯಾನುಗಳು ವೇಗವರ್ಧಕಗೊಂಡು, ಮಂಗಳದ ವಾಯುಮಂಡಲದ ಮೇಲಿನ ಸ್ತರಗಳಿಂದ ಬಾಹ್ಯಾಕಾಶಕ್ಕೆ ಸರಿದುಹೋದವು. ಹಾಗಾಗಿ, ಇಂದು ಮಂಗಳಗ್ರಹವನ್ನು ಆವರಿಸಿಕೊಂಡು ಒಂದು ತೆಳುವಾದ ವಾಯುಮಂಡಲ ಮಾತ್ರವಿದೆ. ಮಂಗಳದ ಮೇಲ್ಮೈನಲ್ಲಿ ಈ ವಾಯುಮಂಡಲದ ಒತ್ತಡ ಭೂಮಿಯ ವಾಯುಮಂಡಲದ ಒತ್ತಡದ ನೂರನೇ ಒಂದು ಭಾಗ ಮಾತ್ರ. ಅಲ್ಲದೇ ಅದು ಶೇಕಡ 95 ಭಾಗ ಕಾರ್ಬನ್  ಡೈಆಕ್ಸೈಡ್ ನಿಂದ ಕೂಡಿದೆ. ಆಮ್ಲಜನಕ ಶೇಕಡ 0.2 ಭಾಗ ಮಾತ್ರ. ಆದ್ದರಿಂದ, ಅಲ್ಲಿ  ಉಸಿರಾಡಲು ಸಾಧ್ಯವಿಲ್ಲ.

2
ಮಂಗಳದ ವ್ಯಾಸ, ಭೂಮಿಯ ವ್ಯಾಸದ ಅರ್ಧದಷ್ಟು. ಹಾಗಾಗಿ ಅದರ ಗುರುತ್ವ ಭೂಮಿಯ ಗರುತ್ವದ ಶೇಕಡ 40ರಷ್ಟು ಮಾತ್ರ. ಅದಲ್ಲದೆ, ಮಂಗಳ ಸೂರ್ಯನಿಂದ, ಭೂಮಿಗಿಂತ ಸರಾಸರಿ 60 ಮಿಲಿಯನ್ ಕಿಲೊಮೀಟರ್ ಅಧಿಕ ದೂರದಲ್ಲಿದೆ. ಹಾಗಾಗಿ, ಅಲ್ಲಿ ಬೀಳುವ ಸೂರ್ಯನ ಬೆಳಕು, ಭೂಮಿಯ ಮೇಲೆ ಬೀಳುವ ಬೆಳಕಿನ ಅರ್ಧದಷ್ಟು. ಸರಾಸರಿ ತಾಪಮಾನ ಮೈನಸ್ 63°C ಇಂದು ಮಂಗಳ ಒಂದು ಶೀತ, ಬಂಜರು ಗ್ರಹವಾಗಿದೆ.

ಮಂಗಳದಲ್ಲಿ ಬದುಕುವುದು ಹೇಗೆ?

ಹಾಗಾಗಿ, ಮಂಗಳಗ್ರಕ್ಕೆ ವಲಸೆ ಹೋಗುವುದೆಂದರೆ, ಬೇರೊಂದು ಊರು ಅಥವಾ ದೇಶಕ್ಕೆ ಹೋಗಿ ನೆಲಸಿದಷ್ಟು ಸುಲಭವಲ್ಲ. ಮಾನವ ಹಾಗೂ ಇತರ ಜೀವಿಗಳು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡು ಭೂಮಿಯಮೇಲಿನ ಪರಿಸರಕ್ಕೆ ಹೊಂದಿಕೊಂಡಿವೆ. ಮಂಗಳಗ್ರಹದಲ್ಲಿ ಇಲ್ಲಿನಂತೆ ಮುಕ್ತವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ. ಯಾವಾಗಲೂ ಆಮ್ಲಜನಕದ ಸಿಲೆಂಡರ್ ಜೊತೆಯಲ್ಲಿ ಇರಲೇಬೇಕು. ವಾತಾವರಣದ ಒತ್ತಡ ತೀರ ಕಡಿಮೆಯಾದ್ದರಿಂದ ದೇಹದ ರಕ್ತನಾಳಗಳು ಉಬ್ಬಿ, ಒಡೆದು ರಕ್ತಸ್ರಾವವಾಗುತ್ತದೆ. ಹಾಗಾಗಿ, ಯಾವಾಗಲೂ ಪ್ರೆಷರ್ ಸೂಟ್ ಧರಿಸಿರಬೇಕು. ಕಾಂತಕ್ಷೇತ್ರ ಇಲ್ಲದಿರುವುದರಿಂದ ವಿಕಿರಣ ತೀವ್ರತೆ ಅಧಿಕವಾಗಿರುತ್ತದೆ. ಭೂಮಿಯಮೇಲೆ ಒಂದು ವರ್ಷ ಕಾಲದಲ್ಲಿ ಉಂಟಾಗುವ ವಿಕಿರಣ ತಾಡನೆ, ಮಂಗಳದಲ್ಲಿ ಒಂದೇ ದಿನದಲ್ಲಿ ಸಂಭವಿಸುತ್ತದೆ. ಅತಿಯಾದ ವಿಕಿರಣ ತಾಡನೆಯಿಂದಾಗಿ, ಕಣ್ಣಿನ ಪೊರೆ, ಕ್ಯಾನ್ಸರ್, ತಳಿವಿಕೃತಿ ಮುಂತಾದ ಸಮಸ್ಯೆಗಳು ತೋರಿಬರುತ್ತವೆ. ವಿಕಿರಣ ದಾಳಿಯಿಂದ ಪಾರಾಗಲು ನೆಲಮಾಳಿಗೆಗಳಲ್ಲಿ ವಾಸಮಾಡಬೇಕಾಗುತ್ತದೆ. ಹೀಗೆ ನಿಸರ್ಗಕ್ಕೆ ತೆರೆದುಕೊಳ್ಳದೆ, ಮುಚ್ಚಿದ ಪರಿಸರದಲ್ಲಿ ದೀರ್ಘಕಾಲ ವಾಸಿಸುವುದರಿಂದ ಹಲವು ಮಾನಸಿಕ ತೊಂದರೆಗಳು ಉಂಟಾಗಬಹುದು.

ಮಂಗಳಗ್ರಹದ ಕಡಿಮೆ ಗುರುತ್ವವೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.ಇಂಟರ್ನ್ಯಾಶನಲ್ ಸ್ಪೇಸ್ ಸ್ಟೇಶನ್ (International Space Station – ISS) ಗಗನ ಯಾತ್ರಿಗಳ ಅನುಭವದ ಪ್ರಕಾರ, ಮಿನಿ ಗುರುತ್ವದಿಂದಾಗಿ ದೇಹದ ಮೂಳೆ, ಮಾಂಸ ಕ್ಷೀಣಿಸಿ ಮೂಳೆ ಮುರಿತ ಉಂಟಾಗಬಹುದು. ಅಲ್ಲದೇ, ಭೂಮಿಯ ಮೇಲಿರುವಾಗ, ಗುರುತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತ ಸಂಚಲನೆಯಾಗಬೇಕಾದುದರಿಂದ, ನಮ್ಮ ಹೃದಯ ಹೆಚ್ಚು ದಕ್ಷತೆಯಿಂದ ಪಂಪ್ ಮಾಡುತ್ತಿರುತ್ತದೆ. ಗುರುತ್ವ ಕಡಿಮೆ ಇದ್ದಲ್ಲಿ, ಹೃದಯ ದುರ್ಬಲಗೊಂಡು, ಹೃದಯ ಸಂಬಂಧಿ ರೋಗಗಳಿಗೆ ಎಡೆಯಾಗುತ್ತದೆ.

ಹಾಗಾದರೆ, ಮನುಷ್ಯನಿಗೆ ಮಂಗಳಗ್ರಹದಲ್ಲಿ ವಾಸಮಾಡಲು ಸಾಧ್ಯವಿಲ್ಲವೆ? ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕಾಗಿ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ.

ಎರಡನೇ ಭೂಮಿ:

ಈ ಸಮಸ್ಯೆಗಳಿಗೆ ಒಂದು ದೀರ್ಘಕಾಲದ ಪರಿಹಾರವೆಂದರೆ, ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸುವುದು. ಅದಕ್ಕೆ ಟೆರಾಪಾರ್ಮಿಂಗ್ (Terraforming) ಎನ್ನುತ್ತಾರೆ. ಮೊದಲನೆಯದಾಗಿ, ಅಲ್ಲಿ ಒಂದು ದಟ್ಟ ವಾತಾವರಣ ಸೃಷ್ಟಿಸಬೇಕು. ಅಲ್ಲಿನ ಬಂಡೆಗಳು, ಮಣ್ಣು, ಉತ್ತರ ಮತ್ತು ದಕ್ಷಿಣ ಧ್ರುವ ಇವುಗಳಲ್ಲಿ  ಹೇರಳವಾಗಿ ಕಾರ್ಬನ್ ಡೈಆಕ್ಸೈಡ್ ಘನೀಭೂತವಾಗಿದೆ. ಅದನ್ನು ಬಿಡುಗಡೆ ಮಾಡುವುದರಿಂದ ವಾತಾವರಣದ ದಟ್ಟಣೆಯನ್ನು ಹೆಚ್ಚಿಸಬಹುದು. ಆದರೆ,  ಘನೀಭೂತವಾದ ಆಷ್ಟೊಂದು ಕಾರ್ಬನ್ ಡೈಆಕ್ಸೈಡ್ ನ್ನು ಕರಗಿಸುವುದು ಹೇಗೆ? ಒಂದು ಬೃಹದಾಕಾರದ ಸೌರಪಟವನ್ನು (Solar Sail) ಹೊತ್ತ ಉಪಗ್ರಹವನ್ನು ಮಂಗಳದ ಸುತ್ತ ಒಂದು ಕಕ್ಷೆಯಲ್ಲಿ ಸ್ಥಾಪಿಸುವುದರಿಂದ ಅದು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಕನ್ನಡಿಯು ಬೆಳಕನ್ನು ಪ್ರತಿಫಲಿಸುವಂತೆ, ಸೌರಪಟವು ಸೂರ್ಯನ ಬೆಳಕನ್ನು ಮಂಗಳದ ಧ್ರುವಪ್ರದೇಶದಮೇಲೆ ಸಾಂದ್ರೀಕರಿಸುವಂತೆ ಮಾಡಿದರೆ, ಘನೀಭೂತವಾದ ಕಾರ್ಬನ್ ಡೈಆಕ್ಸೈಡ್ ನಿಧಾನವಾಗಿ ಕರಗಿ, ವಾತಾವರಣವನ್ನು ಸೇರುತ್ತದೆ. ಕಾರ್ಬನ್ ಡೈಆಕ್ಸೈಡ್ ಹಸಿರುಮನೆ ಅನಿಲವೂ ಆದ್ದರಿಂದ, ವಾತಾವರಣದ ಒತ್ತಡ ಹೆಚ್ಚಿದಂತೆ, ಮಂಗಳಗ್ರಹದ ತಾಪಮಾನವೂ ಏರುತ್ತದೆ. ಆಗ ಹೆಪ್ಪುಗಟ್ಟಿದ ನೀರು ಕರಗಿ ಹರಿಯಲಾರಂಭಿಸುತ್ತದೆ. ಹೀಗೆ, ವಾತಾವರಣ, ತಾಪಮಾನ, ಹರಿಯುವ ನೀರೂ ಎಲ್ಲವೂ ಲಭ್ಯವಾಗುತ್ತವೆ. ಹರಿಯುವ ನೀರು ಬಾಷ್ಪೀಕರಣಗೊಂಡು, ವಾಯುಮಂಡಲ ಸೇರಿ, ಮೋಡವಾಗಿ, ಮಳೆ ಸುರಿಯುವುದರಿಂದ ಜಲಚಕ್ರ ಸ್ಥಾಪಿತವಾಗುತ್ತದೆ. ಆಗ ಕೃಷಿ ಆರಂಭಿಸಿ, ಅಲ್ಲಿಯೇ ಆಹಾರವನ್ನೂ ಬೆಳೆದುಕೊಳ್ಳಬಹುದು. ಅಲ್ಲದೆ, ಗಿಡಮರಗಳನ್ನು ಬೆಳೆಸಿದಾಗ, ಅವು ವಾತಾವರಣಕ್ಕೆ ಮತ್ತಷ್ಟು ಆಮ್ಲಜನಕವನ್ನು ಒದಗಿಸುತ್ತವೆ.

ಮಂಗಳದ ಮಣ್ಣಿನಲ್ಲಿ, ಕಬ್ಬಿಣದ ಅಂಶ ಹೆಚ್ಚಿನ ಸಾಂದ್ರತೆಯಲ್ಲಿದೆ. ಅದೇ ಮಾದರಿಯ ಮಣ್ಣನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ, ಅದಕ್ಕೆ ಸೂಕ್ತವಾದ ಪಾಲಿಮರ್ ನ್ನು ಬೆರಸಿ, ಒತ್ತಡಕ್ಕೆ ಒಳಪಡಿಸಿದರೆ, ಗಟ್ಟಿಯಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದರಿಂದ ಸುರಕ್ಷಿತವಾದ ವಸತಿಗಳನ್ನು ಮಂಗಳದ ಮಣ್ಣಿನಿಂದಲೇ ನಿರ್ಮಾಣ ಮಾಡಬಹುದು.

3
ಆದರೆ, ಮಂಗಳದಲ್ಲಿ ಹೀಗೆ ಸೃಷ್ಟಿಸಿದ ವಾಯುಮಂಡಲ, ಮತ್ತೆ ಚದುರಿಹೋಗದೆ, ಸ್ಥಿರವಾಗಿರಬೇಕಾದರೆ, ಅದನ್ನು ಸೌರಮಾರುತದ ವಿಕಿರಣಗಳಿಂದ ರಕ್ಷಿಸಲು ಒಂದು ಪ್ರಬಲ ಕಾಂತಕ್ಷೇತ್ರ ಬೇಕು. ಅದಕ್ಕಾಗಿ ನಾಸಾ ವಿಜ್ಞಾನಿಗಳು ಒಂದು ಅದ್ಭುತ ಯೋಜನೆಯನ್ನು ರೂಪಿಸಿದ್ದಾರೆ. ಅದರ ಪ್ರಕಾರ ಸೂರ್ಯ ಮತ್ತು ಮಂಗಳದ ನಡುವೆ ಒಂದು ಪ್ರಬಲವಾದ (1 ರಿಂದ 2 ಟೆಸ್ಲ) ಕೃತಕ ಕಾಂತಕ್ಷೇತ್ರವನ್ನು ನಿರ್ಮಿಸಲಾಗುವುದು. ಅದು ಸೌರಮಾರುತವನ್ನು ತಡೆಹಿದಿದು, ಜೀವಿಗಳನ್ನು ವಿಕಿರಣ ತಾಡನೆಯಿಂದ ರಕ್ಷಿಸುತ್ತದೆ.

ಮಂಗಳದಲ್ಲಿ ಒಂದು ಹೊಸ ಮಾನವ ಪ್ರಭೇದ?

ಹೀಗೆ ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸಲು ಹಲವಾರು ಯೋಜನೆಗಳಿವೆ. ಆದರೆ, ಅವುಗಳಿಂದ ಭಿನ್ನವಾಗಿ, ವಿಜ್ಞಾನಿಗಳು ಮತ್ತೊಂದು ರೀತಿಯ ಯೋಜನೆಯ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಮಂಗಳವನ್ನು ಎರಡನೇ ಭೂಮಿಯಾಗಿ ರೂಪಿಸುವ ಬದಲು, ಮನುಷ್ಯನನ್ನೇ ಮಂಗಳದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಏಕೆ ಪರಿವರ್ತಿಸಬಾರದು? ಅಂತಹ ಮನುಷ್ಯ ಉಸಿರಾಡಲು ವಾತಾವರಣ ಬೇಕಿಲ್ಲ. ಅಲ್ಲಿನ ಕಡಿಮೆ ವಾಯು ಒತ್ತಡ, ಗುರುತ್ವ, ಅತಿಯಾದ ವಿಕಿರಣದ  ಪರಿಸರದಲ್ಲಿಯೇ ಯಾವ ತೊಂದರೆಯೂ ಇಲ್ಲದೆ ಬದುಕಬಲ್ಲ. ಅದಕ್ಕೆ ಅವಶ್ಯವಾದ ನ್ಯಾನೊ ಮತ್ತು ತಳಿ ತಂತ್ರಜ್ಞಾನ ಈಗಾಗಲೇ ಲಭ್ಯವಿದೆ. ಉದಾಹರಣೆಗೆ, ದೇಹಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುವ ನ್ಯಾನೊಮಷೀನ್ ಗಳನ್ನು ತಯಾರಿಸಬಹುದು. ಮಿನಿಗುರತ್ವದಿಂದ ಉಂಟಾಗುವ ಮೂಳೆ ಮತ್ತು ಮಾಂಸ ಕ್ಷೀಣಿಸುವುದನ್ನು ತಡೆಗಟ್ಟುವಂತಹ ತಳಿ ವಿಕೃತಿಗಳನ್ನು (Gene mutations) ವಿಜ್ಞಾನಿಗಳು ಈಗಾಗಲೇ ಗುರುತಿಸಿದ್ದಾರೆ. “Deinococcus radioduran” ಎಂಬ ಬ್ಯಾಕ್ಟೀರಿಯ ಪ್ರಭೇದ ಇತರ ಪ್ರಭೇದಗಳಿಗಿಂತ ನೂರುಪಟ್ಟು ಹೆಚ್ಚು ವಿಕಿರಣ ತಾಡನೆಯನ್ನು ಸಹಿಸಿಕೊಳ್ಳಬಲ್ಲದು. ಅದಕ್ಕೆ ಕಾರಣವಾದ ವಿಶಿಷ್ಟ ತಳಿಗಳನ್ನೂ ಪತ್ತೆಹಚ್ಚಲಾಗಿದೆ. ಹಾಗಿದ್ದಲ್ಲಿ, ಆ ರೀತಿಯ ತಳಿಗಳನ್ನು ಮನುಷ್ಯನಿಗೆ ವರ್ಗಾಯಿಸಿದರೆ, ಅವನು ಮಂಗಳದ ಪರಿಸರದಲ್ಲಿ ಆರಾಮವಾಗಿ ಬದುಕಬಹುದಲ್ಲವೆ? ಅಲ್ಲದೇ, ಆ ಗುಣಗಳನ್ನು ಮುಂದಿನ ಪೀಳಿಗೆಗಳಿಗೂ ವರ್ಗಾಯಿಸಬಹುದಾದ್ದರಿಂದ, ಮಂಗಳ ಗ್ರಹಕ್ಕಾಗಿಯೇ ಒಂದು ಮಾನವ ಪ್ರಭೇದವನ್ನು ಸೃಷ್ಟಿಸಿದಂತಾಗುತ್ತದೆ!

ಈ ಎಲ್ಲ ಯೋಜನೆಗಳೂ, ಸೈದ್ಧಾಂತಿಕವಾಗಿ ಸಾಧ್ಯವಾದರೂ, ಸಾಕ್ಷಾತ್ಕಾರಗೊಳ್ಳಬೇಕಾದರೆ, ಸಹಸ್ರಾರು ವರ್ಷಗಳೇ ಬೇಕಾಗಬಹುದೆಂದು ತಜ್ಞರ ಅಭಿಪ್ರಾಯ. ಇವೆಲ್ಲದರ ನಡುವೆಯೂ, ಮಾನವನ ಪ್ರಥಮ ಮಂಗಳಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ನಾಸಾ ಸಂಸ್ಥೆಯು ಒಂದು ಶೋಧಕ ತಂಡವನ್ನು 2030ರ ದಶಕದಲ್ಲಿ ಕಳುಹಿಸಲು ತಯಾರಿ ನಡೆಸುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳೂ ಮಂಗಳದ ವಾಸ್ತವ್ಯದಲ್ಲಿ ಉತ್ಸುಕವಾಗಿವೆ. ಅಮೆರಿಕದ ಸ್ಪೇಸ್‍ಎಕ್ಸ್ (SpaceX) ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ (Elon Mask) ಅದಕ್ಕಾಗಿ 100 ಟನ್ ತೂಕ ಹೊರಬಲ್ಲ ಪ್ರಬಲವಾದ ರಾಕೆಟ್ ಹಾಗೂ ಗಗನ ನೌಕೆಗಳನ್ನು ತಯಾರಿಸಿ, ಪರೀಕ್ಷಿಸುತ್ತಿದ್ದಾರೆ. ಅಂತಹ ನೌಕೆಗಳಲ್ಲಿ, 100 ರಿಂದ 200 ಪ್ರಯಾಣಿಕರು ಹಾಗೂ ಅವರ ವಾಸ್ತವ್ಯಕ್ಕೆ ಬೇಕಾಗುವ ಎಲ್ಲ ಸರಕುಗಳನ್ನೂ ಹೊತ್ತ ಸಾವಿರಾರು ಉಡಾವಣೆಗಳನ್ನು ಆಯೋಜಿಸಿ, ಒಂದು ಮಿಲಿಯನ್ ಜನರ ವಸಾಹತುವನ್ನು ಮಂಗಳ ಗ್ರಹದಲ್ಲಿ ನಿರ್ಮಿಸಬೇಕೆಂಬುದು ಅವರ ಗುರಿ. ಮುಂದಿನ 40 ರಿಂದ 100 ವರ್ಷಗಳ ಅವಧಿಯಲ್ಲಿ ಅದನ್ನು ಸಾಧಿಸಬಹುದೆಂದು ಅವರು ಆಶಾದಾಯಕರಾಗಿದ್ದಾರೆ.

4
ಅದೇ ರೀತಿ ಯುನೈಟೆಡ್ ಅರಬ್ ರಿಪಬ್ಲಿಕ್ ಕೂಡ  ಒಂದು ಯೋಜನೆಯನ್ನು ಹಮ್ಮಿಕೊಂಡು, ಅದಕ್ಕಾಗಿ ದುಬೈ ನಗರದಲ್ಲಿ ಮಾದರಿ ಮಾರ್ಸ್ ಸಿಟಿ (Mars City) ನಿರ್ಮಾಣವಾಗುತ್ತಿದೆ. ಅದು 2023ರಲ್ಲಿ ಮುಗಿಯಬಹುದು.

ಹಾಗಾಗಿ, ಮಂಗಳಗ್ರಹದಲ್ಲಿ ವಾಸ್ತವ್ಯ ಹೂಡುವುದು ಹಗಲುಗನಸೇನಲ್ಲ. ಆದರೆ, ಅದರ ಉತ್ಸಾಹಿಗಳು ಬಯಸಿದಷ್ಟು ಬೇಗ ಸಾಧ್ಯವಾಗದೇ ಇರಬಹುದು. ಆದರೆ, ವಿಜ್ಞಾನಿಗಳು ಅಷ್ಟಕ್ಕೇ ತೃಪ್ತರಾಗಿಲ್ಲ. ಮೊದಲೇ ಹೇಳೀದಂತೆ, ಸೂರ್ಯನ ಅವಸಾನದ ವೇಳೆ ಮಂಗಳ ಗ್ರಹ ಕೂಡ ನಾಶವಾಗುವುದು. ಅಂತಹ ಆಪತ್ತು ಸಂಭವಿಸುವ ಮೊದಲೇ, ಮನುಕುಲ ಸೌರಮಂಡಲದಿಂದಲೇ ಹೊರಗೆ, ಬೇರೆ ನಕ್ಷತ್ರಗಳ ಗ್ರಹಗಳಲ್ಲಿ   ವಾಸ್ತವ್ಯ ಹೂಡಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಮಾನವನ ಅಂತರ್ ನಕ್ಷತ್ರೀಯ ಯಾನದ ಬಗ್ಗೆ ಈಗಾಗಲೇ ವಿಜ್ಞಾನಿಗಳು ಚಿಂತಿಸುತ್ತಿದ್ದಾರೆ.

’ಬೆನ್ನು’ ಬೆನ್ನತ್ತಿದ ನಾಸಾದ ಓಸಿರಿಸ್

ಸುಮಾರು ಒಂದು ತಿಂಗಳ ಹಿಂದೆ, 08.09.2016 ರಂದು ಅಮೇರಿಕಾದ ನಾಸಾ ಕೂಟ 101955 ಬೆನ್ನು (Bennu) ಎಂದು ಗುರುತಿಸಲಾಗುವ ಆಸ್ಟಾರಾಯ್ಡ್ ನತ್ತ ಪಯಣ ಬೆಳೆಸಿತು. ಈ ಮೂಲಕ ಬಾನಂಗಳದಲ್ಲಿರುವ ಬೆರಗುಗೊಳಿಸುವ ಜಗತ್ತನ್ನು ಅರಿಯುವತ್ತ ಮಾನವರು ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಟ್ಟಂತಾಯಿತು.

ಆಸ್ಟಾರಾಯ್ಡ್ (asteroid) ಅಂದರೇನು? 

ಗ್ರಹಗಳಂತೆ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಬಾನಕಾಯಗಳಿವು. ಗ್ರಹಗಳಿಗೂ ಮತ್ತು ಆಸ್ಟಾರಾಯ್ಡ್ ಗಳಿಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ, ಇವು ಗ್ರಹಗಳಷ್ಟು ದೊಡ್ಡದಾಗಿರುವುದಿಲ್ಲ ಮತ್ತು ಗ್ರಹಗಳಂತೆ ನಿರ್ದಿಷ್ಟವಾದ ದುಂಡನೆಯ ಆಕಾರವನ್ನು ಹೊಂದಿರುವುದಿಲ್ಲ. ಕನ್ನಡದಲ್ಲಿ ಇವುಗಳನ್ನು ಬಾನಬಂಡೆಗಳು ಎಂದು ಕರೆಯಬಹುದು. ಇವುಗಳ ಅಳತೆ 1-2 ಮೀಟರ್ ಗಳಿಂದ ಹಿಡಿದು ಸುಮಾರು 1000 ಕಿ.ಮೀ. ನಷ್ಟಾಗಿರಬಹುದು. (1 ಮೀಟರ್ ಗಿಂತ ಕಡಿಮೆ ಅಳತೆ ಹೊಂದಿರುವ ಬಾನಕಾಯಗಳನ್ನು ಮೀಟರಾಯ್ಡ್ ಎಂದು ಗುರುತಿಸಲಾಗುತ್ತದೆ).

ಬಾಲಚುಕ್ಕಿಗಳಿಗೂ (comets) ಮತ್ತು ಬಾನಬಂಡೆಗಳಿಗೂ (asteroids) ಇರುವ ವ್ಯತ್ಯಾಸವೆಂದರೆ, ಬಾಲಚುಕ್ಕಿಗಳು ಹೆಚ್ಚಾಗಿ ಧೂಳು ಮತ್ತು ಮಂಜಿನಿಂದ ಕೂಡಿರುತ್ತವೆ. ಅದೇ ಬಾನಬಂಡೆಗಳು ಅದಿರು ಮತ್ತು ಕಲ್ಲಿನ ರಚನೆಯನ್ನು ಹೊಂದಿರುತ್ತವೆ.

ಬಾನಬಂಡೆಗಳು ಹೆಚ್ಚಾಗಿ ಗುರು ಮತ್ತು ಮಂಗಳ ಗ್ರಹಗಳ ನಡುವೆ ದುಂಡನೆಯ ಪಟ್ಟಿಯಲ್ಲಿ ಹರಡಿಕೊಂಡಿವೆ. ಈ ಪಟ್ಟಿಯನ್ನು ಬಾನಬಂಡೆಗಳ ಪಟ್ಟಿ (asteroid belt) ಎಂದು ಕರೆಯಲಾಗುತ್ತದೆ.

Picture2

ಬಾನಬಂಡೆಗಳು ಮಂಗಳ-ಗುರು ಗ್ರಹಗಳ ನಡುವಿನ ಈ ಪಟ್ಟಿಯಲ್ಲಲ್ಲದೇ ಬಾನಂಗಳದ ಇತರೆಡೆಯೂ ಹರಡಿಕೊಂಡಿವೆ. ಬಾನಬಂಡೆಗಳ ಪಟ್ಟಿಯಾಚೆ ನೆಲಕ್ಕೆ ಸುಮಾರು 4.82 ಲಕ್ಷ ಕಿಲೋಮೀಟರ್ ಗಳಷ್ಟು ಹತ್ತಿರ ಸಾಗಬಲ್ಲ ಇಂತಹ ಬಾನಬಂಡೆಗಳಲ್ಲೊಂದು 101955 ಬೆನ್ನು (Bennu).

ಈಜಿಪ್ತಿನ ಪುರಾಣಗಳಲ್ಲಿ ಬರುವ ಬೆನ್ನು (Bennu) ಎಂಬ ಹಕ್ಕಿಯ ಹೆಸರಿನಲ್ಲಿ ಗುರುತಿಸಲಾಗುವ, ಸುಮಾರು 500 ಮೀಟರ್ ದುಂಡಳತೆ ಹೊಂದಿರುವ ಈ ಬಾನಬಂಡೆಯ ಇರುವಿಕೆಯು ಗೊತ್ತಾದದ್ದು 1999 ರಲ್ಲಿ. ಅಲ್ಲಿಂದೀಚೆಗೆ ಈ ಬಾನಬಂಡೆಯ ಬಗ್ಗೆ ಹಲವಾರು ಕುತೂಹಲದ ವಿಷಯಗಳು ಬೆಳಕಿಗೆ ಬಂದಿವೆ. ನೆಲಕ್ಕೆ ಕುತ್ತು ತರಬಲ್ಲ ಬಾನಬಂಡೆಗಳಲ್ಲಿ ಇದೂ ಒಂದು ಅಂದರೆ ಅಚ್ಚರಿಯಾದೀತು. ಈಗಿನ ಲೆಕ್ಕಾಚಾರದ ಪ್ರಕಾರ ಸುಮಾರು 2175 ರಿಂದ 2196 ನೇ ಇಸ್ವಿಯಲ್ಲಿ ಈ ಬಾನಬಂಡೆ ನೆಲಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಾಧ್ಯತೆಯು 0.037% ನಷ್ಟು ಕಡಿಮೆ ಪ್ರಮಾಣದ್ದಾಗಿದ್ದರೂ, ಒಂದೊಮ್ಮೆ ಇದು ನಿಜವಾದರೆ ಸುಮಾರು 1200 ಮೆಗಾಟನ್ ನಷ್ಟು ಶಕ್ತಿಯ ಅಪ್ಪಳಿಕೆ ಇದಾಗಬಲ್ಲದು ಮತ್ತು ಇದರಿಂದ ನೆಲಕ್ಕೆ ಹೆಚ್ಚಿನ ಪ್ರಮಾಣದ ಹಾನಿಯಾಗಬಲ್ಲದು.

ಬೆನ್ನು ಬಾನಬಂಡೆಯ ವಿವರಗಳು ಈ ಕೆಳಗಿನಂತಿವೆ,

  • ನಡುಗೆರೆಯಲ್ಲಿ ದುಂಡಳತೆ (Equatorial Diameter) : ~500 ಮೀಟರ್
  • ತುದಿಯಲ್ಲಿ ದುಂಡಳತೆ (Polar Diameter) : ~510 ಮೀಟರ್
  • ಸರಾಸರಿ ವೇಗ (Average Speed) : 63,000 ಮೈಲಿಗಳು ಪ್ರತಿ ಗಂಟೆಗೆ
  • ತಿರುಗುವಿಕೆಯ ಹೊತ್ತು (Rotation Period) : 4.3 ಗಂಟೆಗಳು
  • ಸುತ್ತುವಿಕೆಯ ಹೊತ್ತು (Orbital Period) : 1.2 ವರುಶಗಳು
  • ಸುತ್ತುವಿಕೆಯ ಬಾಗುತನ (Orbital Inclination) : 6 ಡಿಗ್ರಿಗಳು
  • ನೆಲಕ್ಕೆ ಹತ್ತಿರ ಬರುವ ಕಾಲ: ಪ್ರತಿ 6 ವರುಶಗಳಿಗೊಮ್ಮೆ

Picture1

(ಗೊತ್ತಿರುವ ಕಟ್ಟಡಗಳ ಅಳತೆಯೊಂದಿಗೆ ಬೆನ್ನುವಿನ ಹೋಲಿಕೆ)

ಬಾನಬಂಡೆಗಳ (asteroid) ರಚನೆಯ ಬಗ್ಗೆ ತಿಳಿದುಕೊಳ್ಳಲು ಮಾನವರು ಮುಂದಾಗುತ್ತಿರುವುದಕ್ಕೆ, ನೆಲಕ್ಕೆ ಅಪ್ಪಳಿಸಿ ಹಾನಿ ಉಂಟುಮಾಡಬಲ್ಲ ಇವುಗಳನ್ನು ತಡೆಯಲು ಸಜ್ಜಾಗಬೇಕು ಅನ್ನುವುದು ಒಂದು ಕಾರಣವಾದರೆ ಇದಕ್ಕಿಂತಲೂ ಮುಖ್ಯವಾದ ಕಾರಣವೆಂದರೆ ಇವುಗಳ ರಚೆಯನ್ನು ತಿಳಿದುಕೊಂಡರೆ ನಮ್ಮ ಸೂರ್ಯ ಏರ್ಪಾಟಿನ (Solar System) ಹುಟ್ಟಿನ ಬಗ್ಗೆ ಮತ್ತು ನಮ್ಮ ನೆಲದಲ್ಲಿ ಜೀವಿಗಳ ಹುಟ್ಟಿನ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು.

ಬಾನಬಂಡೆಗಳು ’ಸೂರ್ಯ ಏರ್ಪಾಟು’ ಉಂಟಾಗುವ ಮೊದಲ ಹಂತದಲ್ಲಿ ಉಂಟಾದ ಬಾನಕಾಯಗಳು ಮತ್ತು ಇವು ಹಲವು ಬಿಲಿಯನ್ ವರುಶಗಳಿಂದ ಬದಲಾಗದೇ ಉಳಿದಿವೆ. ಹಾಗಾಗಿ ಇವುಗಳ ರಚನೆಯನ್ನು ತಿಳಿದುಕೊಂಡರೆ ಬಾನಂಗಳದ ಹಳಮೆಯನ್ನು ಅರಿಯಲು ಅನುಕೂಲವಾಗಬಲ್ಲದು. ಜೀವಿಗಳ ಬದುಕಿಗೆ ಅಡಿಪಾಯವಾದ ನೀರು ಮತ್ತು ಅಗತ್ಯವಾದ ಇತರ ವಸ್ತುಗಳು ಬಾನಬಂಡೆಗಳಲ್ಲಿ ಇವೆಯೇ? ಬಾನಬಂಡೆಗಳು ಮನುಷ್ಯರು ಬದಕಬಲ್ಲ ತಾಣಗಳಾಗಬಹುದೇ? ಅನ್ನುವುದನ್ನು ಅರಸುವುದೂ ನಾಸಾದ ಗುರಿಗಳಲ್ಲೊಂದು.

ನಾಸಾದ (NASA) ಯೋಜನೆ:

800px-OSIRIS-REx_artist_rendetion

ಓಸಿರಿಸ್-ಆರ್ ಇ ಎಕ್ಸ್ (OSIRIS-REx) ಎಂದು ಗುರುತಿಸಲಾಗುವ, ಬೆನ್ನು (Bennu) ಬಾನಬಂಡೆಯ ಕುರಿತ ನಾಸಾದ ಯೋಜನೆ ಈ ಕೆಳಗಿನ ಮುಖ್ಯ ಗುರಿಗಳನ್ನು ಹೊಂದಿದೆ,

1. ಬೆನ್ನು ಬಾನಬಂಡೆಯ ಮೇಲ್ಮೈ ಅಡಕಗಳ ಮಾದರಿಯನ್ನು ಒರೆಗೆಹಚ್ಚುವುದು ಮತ್ತು ಈ ಮಾದರಿಯನ್ನು ಹೆಚ್ಚಿನ ಅರಕೆಗಾಗಿ ನೆಲಕ್ಕೆ ತರುವುದು.

2. ಬೆನ್ನು ಬಾನಬಂಡೆಯ ಆಕಾರವನ್ನು ಸೆರೆಹಿಡಿಯುವುದು.

3. ಯರ್ಕೋವಸ್ಕಿ ಆಗುಹ (Yarkovsky effect) ಎಂದು ಕರೆಯಲಾಗುವ, ರಾಶಿಸೆಳೆತವಲ್ಲದ (non gravitational) ಪರಿಣಾಮವನ್ನು ಅಳತೆಮಾಡುವುದು. ಈ ಆಗುಹವು ಬಾನಕಾಯಗಳ ತಿರುಗುದಾರಿಯನ್ನು ಬದಲಿಸಬಲ್ಲದಾಗಿದ್ದು, ಇದರ ಬಗ್ಗೆ ತಿಳಿದುಕೊಂಡರೆ ಬಾನಬಂಡೆಯ ಅಪ್ಪಳಿಕೆಯ ಸಾಧ್ಯತೆಯನ್ನು, ಅದು ಸಾಗುವ ದಾರಿಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳಬಹುದು.

ಓಸಿರಿಸ್ ಬಾನಬಂಡಿಯ ವಿವರಗಳು ಹೀಗಿವೆ,

  • ಉದ್ದ: 6.2 ಮೀಟರ್ ಗಳು
  • ಅಗಲ: 2.4 ಮೀಟರ್ ಗಳು
  • ಎತ್ತರ: 3.2 ಮೀಟರ್ ಗಳು
  • ರಾಶಿ – ಉರುವಲಿಲ್ಲದೆ (dry mass – Unfueled): 880 ಕೆ.ಜಿ.ಗಳು
  • ರಾಶಿ – ಉರುವಲಿನ ಜತೆಗೆ (wet mass – fueled): 2110 ಕೆ.ಜಿ.ಗಳು
  • ಕಸುವು (power): 2 ನೇಸರಪಟ್ಟಿಗಳನ್ನು (Solar panel) ಹೊಂದಿದ್ದು 1,226 ರಿಂದ 3,000 ವ್ಯಾಟ್ ನಷ್ಟು ಕಸುವನ್ನು ಉಂಟುಮಾಡಬಲ್ಲವು.
  • ಸಲಕರಣೆಗಳು: ಮಾದರಿ ಮರಳಿ ತರುವ ಸಲಕರಣೆ (Sample Return Capsule – SRC), ಕ್ಯಾಮೆರಾಗಳು, ದೂರ, ಎತ್ತರ ಮತ್ತು ಕಾವು ಅಳೆಯುವ ಸಲಕರಣೆಗಳು.

Science-Survey-Gif

ಇದೇ ಸಪ್ಟಂಬರ್, 8 ಕ್ಕೆ ಬಾನಿಗೆ ಹಾರಿದ ಓಸಿರಿಸ್ ಬಾನಬಂಡಿ (spacecraft) ಸುಮಾರು ಒಂದು ವರುಶದ ಕಾಲ ಸೂರ್ಯನ ಸುತ್ತ ಸುತ್ತಿ ಅಲ್ಲಿಂದ ಬೆನ್ನುವಿನೆಡೆಗೆ ಸಾಗಲಿದೆ. ಅಗಸ್ಟ್ 2018 ರ ಹೊತ್ತಿಗೆ ಅದು ಬೆನ್ನು ಬಾನಬಂಡೆಯನ್ನು ತಲುಪಲಿದೆ. ಸುಮಾರು 505 ದಿನಗಳ ಕಾಲ ಅಲ್ಲಿರುವ ಓಸಿರಿಸ್ ಬಾನಬಂಡಿಯು, ಬೆನ್ನುವಿನ ಸುತ್ತ ಸುತ್ತುತ್ತ ಹಲವಾರು ವಿಷಯಗಳನ್ನು ಕಲೆಹಾಕಲಿದೆ.

ಹಾಗೆನೇ ತನ್ನಲ್ಲಿರುವ ಕೈಯಂತಿರುವ ಉದ್ದನೆಯ ಸಲಕರಣೆಯೊಂದನ್ನು ಚಾಚಿ ಬೆನ್ನುವಿನ ಮೇಲ್ಮೈಯ ಮಾದರಿಯನ್ನು ಹಿಡಿದಿಟ್ಟುಕೊಳ್ಳಲಿದೆ. ಮಾರ್ಚ್, 2021 ರಂದು ಬೆನ್ನುವಿನಿಂದ ಮರಳಿ ಹೊರಡಲಿರುವ ಓಸಿರಿಸ್ ಬಾನಬಂಡಿಯು 2023 ರಲ್ಲಿ ಬೆನ್ನುವಿನ ಮೇಲ್ಮೈ ಮಾದರಿಯನ್ನು ಹೊತ್ತುಕೊಂಡು ನೆಲ ತಲುಪಲಿದೆ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: asteroidmission.org, wikipedia.org)

’ಸ್ಪೇಸ್ ಸೂಟ್’ ಅಂದರೇನು?

ದೂರದ ಬಾನಂಗಳದಲ್ಲಿ ಪಯಣಿಸುತ್ತ ನೆಲದಾಚೆಗಿನ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆಯಲ್ಲಿ ಮನುಷ್ಯರು ಚಂದ್ರನಲ್ಲಿ ಇಳಿಯುವಲ್ಲಿ ಗೆಲುವು ಕಂಡಿದ್ದಾರೆ. ಆಗಸವನ್ನು ಅರಸುವ ಕೆಲಸಕ್ಕಾಗಿ ನೆಲದಿಂದ ಸುಮಾರು 400 ಕಿ.ಮೀ. ಎತ್ತರದಲ್ಲಿ ತಮ್ಮದೊಂದು ಬಾನ್ನೆಲೆಯನ್ನೂ (space station) ಕಟ್ಟಿಕೊಂಡಿದ್ದಾರೆ.

ತುಸು ಹೆಚ್ಚಿನ ಚಳಿ ಇಲ್ಲವೇ ಹೆಚ್ಚಿನ ಎತ್ತರಕ್ಕೆ ಸಾಗುವಾಗ ಆಗುವ ತೊಡಕುಗಳನ್ನು ತಾಳಿಕೊಳ್ಳಲು ಹೆಣಗಾಡುವ ಮನುಷ್ಯರ ಮೈ, ಬಾನಿನಲ್ಲಿ ಅಷ್ಟೊಂದು ಎತ್ತರದಲ್ಲಿ, ಚಳಿ-ಬಿಸಿ ಎಲ್ಲೆ ಮೀರಿದ ಹೊಯ್ದಾಟದಲ್ಲಿ ಹೇಗೆ ಗಟ್ಟಿಯಾಗಿಯಿರಬಲ್ಲದು? ಗಾಳಿ-ಚಳಿ-ಬಿಸಿ-ಒತ್ತಡಗಳ ಏರುಪೇರುಗಳ ನಡುವೆ ಬಾನದೆರವಿನಲ್ಲಿ (space) ಬಾನಾಡಿಗರನ್ನು ಕಾಪಾಡುವುದೇ ಅವರು ತೊಡುವ ಉಡುಪು. ಬನ್ನಿ, ಬಾನುಡುಪುಗಳ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ.

apollo_moonwalk2_space_suit

ನೆಲದಿಂದ ಸುಮಾರು 15-19 ಕಿ.ಮೀ. ಎತ್ತರಕ್ಕೆ ತಲುಪಿದಂತೆ ವಾತಾವರಣದಲ್ಲಿ ಉಂಟಾಗುವ ಏರುಪೇರುಗಳು ಮನುಷ್ಯರ ಮೈ ತಾಳಿಕೊಳ್ಳಲಾಗದ ಮಟ್ಟವನ್ನು ತಲುಪುತ್ತವೆ. ನೆಲದಿಂದ 19 ಕಿ.ಮೀ. ಎತ್ತರವನ್ನುಆರ‍್ಮಸ್ಟ್ರಾಂಗ್ ಗೆರೆ (Armstrong line) ಇಲ್ಲವೇ ಆರ‍್ಮಸ್ಟ್ರಾಂಗ್ ಎಲ್ಲೆ (Armstrong limit) ಅಂತಾ ಕರೆಯಲಾಗುತ್ತದೆ. ಈ ಎತ್ತರದಲ್ಲಿ ಗಾಳಿಯೊತ್ತಡ ತುಂಬಾನೇ ಕಡಿಮೆಯಾಗಿ 0.0618 bar ಒತ್ತಡ ತಲುಪುತ್ತದೆ. ಅಂದರೆ ನೆಲದ ಮೇಲ್ಮೆಯಲ್ಲಿ ಸಾಮಾನ್ಯವಾಗಿ 1 bar ಇರುವ ಗಾಳಿಯೊತ್ತಡ ಆರ‍್ಮಸ್ಟ್ರಾಂಗ್ ಎಲ್ಲೆಯಲ್ಲಿ ಅದರ ಬರೀ 6% ಒತ್ತಡವನ್ನು ತಲುಪುತ್ತದೆ. ಈ ಎತ್ತರದಲ್ಲಿ ಸಾಮಾನ್ಯ ಮೈ ಕಾವಳತೆ ಅಂದರೆ ಸುಮಾರು 37°C ನಲ್ಲೂ ನೀರು ಕುದಿಯುವ ಮಟ್ಟವನ್ನು ಮುಟ್ಟುತ್ತದೆ.

[ಗಮನಕ್ಕೆ: 1 bar ನಷ್ಟು ಒತ್ತಡದಲ್ಲಿ ನೀರಿನ ಕುದಿಯುವ ಮಟ್ಟ 100°C ಆಗಿರುತ್ತದೆ. ಒತ್ತಡ ಹೆಚ್ಚಾಂದತೆ ಅದರ ಕುದಿಯುವ ಮಟ್ಟ ಏರುತ್ತಾ ಹೋದರೆ, ಒತ್ತಡ ಇಳಿದಂತೆ ಕುದಿಯುವ ಮಟ್ಟದಲ್ಲಿ ಇಳಿತವಾಗುತ್ತದೆ. ಅಂದರೆ ನಮ್ಮ ದಿನಬಳಕೆಯಲ್ಲಿ ನೀರು ಕುದಿಯುವಂತೆ ಮಾಡಲು 100°C ಕಾವಳತೆ (temperature) ಬೇಕಾದರೆ ಆ ನೀರನ್ನೇ ಎತ್ತರಕ್ಕೆ, ಕಡಿಮೆ ಒತ್ತಡದ ಮಟ್ಟಕ್ಕೆ ಒಯ್ದದಂತೆಲ್ಲಾ ಅದನ್ನು ಕುದಿಯುವಂತೆ ಮಾಡಲು ಕಡಿಮೆ ಕಾವಳತೆ ಸಾಕಾಗುತ್ತದೆ.]

ಇಷ್ಟೊಂದು ಕಡಿಮೆ ಗಾಳಿಯೊತ್ತಡಕ್ಕೆ ಒಡ್ಡಿದಾಗ ಮನುಷ್ಯರ ಮೈಯಲ್ಲಿ ಈ ಕೆಳಗಿನ ತೊಂದರೆಗಳು ಉಂಟಾಗಬಲ್ಲವು,

1. ಮೈಯಲ್ಲಿ ನೀರ‍್ಬಗೆಯಲ್ಲಿರುವ ಉಗುಳು, ಕಣ್ಣೀರು, ಗಾಳಿಗೂಡಿನಲ್ಲಿರುವ ನೀರಿನಂಶ ಕುದಿಯತೊಡಗುತ್ತವೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ರಕ್ತನಾಳದಲ್ಲಿನ ಒತ್ತಡದಿಂದಾಗಿ ರಕ್ತ ಕುದಿಯದೇ ಎಂದಿನ ಸ್ಥಿತಿಯಲ್ಲೇ ಇರುತ್ತದೆ.

2. ಹೊರಗೆ ಕಡಿಮೆ ಒತ್ತಡ, ಮೈಯೊಳಗೆ ಹೆಚ್ಚಿನೊತ್ತಡದಿಂದಾಗಿ ಮಾಂಸಖಂಡಗಳು ಸಾಮಾನ್ಯ ಅಳತೆಗಿಂತ ಸುಮಾರು ಎರಡು ಪಟ್ಟು ಉಬ್ಬುತ್ತವೆ.

3. ಕಡಿಮೆ ಒತ್ತಡದಿಂದಾಗಿ ಉಸಿರುಚೀಲಗಳು ಎಲ್ಲಕ್ಕಿಂತ ಹೆಚ್ಚಿನ ತೊಂದರೆಗೆ ಈಡಾಗುತ್ತವೆ. ಕಡುಕಡಿಮೆ ಒತ್ತಡದಲ್ಲಿ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗದೇ, ಉಸಿರು ಬಿಡುವಾಗ ಉಂಟಾಗುವ ಸಿಡಿಯುವಂತಹ ಒತ್ತಡದ ಇಳಿತದಿಂದಾಗಿ ಉಸಿರುಚೀಲಗಳು ಹಾನಿಗೊಳಗಾಗುತ್ತವೆ. ಕಡಿಮೆ ಗಾಳಿಯೊತ್ತಡದ ಇಂತಹ ಪಾಡನ್ನು ತಾಳಿಕೊಂಡು ಮನುಷ್ಯರು ಹೆಚ್ಚೆಂದರೆ 15 ಸೆಕೆಂಡುಗಳಷ್ಟೇ ಬದುಕಬಲ್ಲರು.

ಆರ‍್ಮಸ್ಟ್ರಾಂಗ್ ಎಲ್ಲೆಯಷ್ಟು ಎತ್ತರಕ್ಕೆ ಏರಿದಾಗ ಕಡುಕಡಿಮೆ ಒತ್ತಡವಷ್ಟೇ ಅಲ್ಲ, ಬಿಸುಪಿನಲ್ಲಾಗುವ ಏರುಪೇರುಗಳು, ಬಾನಲ್ಲಿ ಸಿಡಿಲಿನಂತೆ ಅಪ್ಪಳಿಸುವ ಚೂರುಗಳು, ಅತಿ ನೇರಳೆ ಕೆಡುಕದಿರುಗಳು ಬಾನಾಡಿಗರಿಗೆ ತೊಂದರೆಯನ್ನು ಒಡ್ಡುತ್ತವೆ. ಇವೆಲ್ಲ ತೊಡಕುಗಳನ್ನು ಮೀರಿ ಬಾನಾಡಿಗರು ಬಾನಬಂಡಿಯಾಚೆ ತಮ್ಮ ಕೆಲಸವನ್ನು ಮಾಡುವಂತೆ ಬಾನುಡುಪುಗಳನ್ನು ಅಣಿಗೊಳಿಸಲಾಗುತ್ತದೆ. ಬಾನಬಂಡಿಯಲ್ಲಿ (space craft) ಸರಿಯಾದ ಒತ್ತಡವನ್ನು ಕಾಯ್ದುಕೊಳ್ಳುವುದರಿಂದ ಬಾನಾಡಿಗರು ಬಾನಬಂಡಿಯಾಚೆಗೆ ಬಂದಾಗಲಷ್ಟೇ ಬಾನುಡುಪು ತೊಡುವುದು ಕಡ್ಡಾಯವಾಗಿರುತ್ತದೆ.

ಬಾನುಡುಪು (space suit), ಒತ್ತಡದ ಉಡುಪು (pressure suit) ಇಲ್ಲವೇ ಬಂಡಿಯಾಚೆ ಬಳಸುವ ಉಡುಪು (Extravehicular Mobility Unit- EMU) ಎಂದು ಕರೆಯಲಾಗುವ ಬಾನಾಡಿಗರು ತೊಟ್ಟ ಉಡುಪು ಈ ಕೆಳಗಿನ ಕೆಲಸಗಳನ್ನು ಮಾಡುತ್ತದೆ,

space_suit

1. ಒತ್ತಡವನ್ನು ಕಾಯ್ದುಕೊಳ್ಳುವುದು:
ಬಾನಾಡಿಗರಿಗೆ ಉಸಿರಾಡಲು ಮತ್ತು ಮೇಲೆ ತಿಳಿಸಿದ ತೊಂದರೆಗಳನ್ನು ನೀಗಲು ಬೇಕಾದ ಒತ್ತಡವನ್ನು ಕಾಯ್ದುಕೊಳ್ಳುತ್ತದೆ. ಬಾನುಡುಪಿನಲ್ಲಿ ಸುಮಾರು 0.32 bar ನಷ್ಟು ಗಾಳಿಯೊತ್ತಡವನ್ನು ಕಾಯ್ದುಕೊಳ್ಳಲಾಗುತ್ತದೆ. ಅಂದರೆ ನೆಲದ ಮೇಲ್ಮೆಯ ಸುಮಾರು 32% ನಷ್ಟು ಒತ್ತಡ. ನೆಲದ ಮೇಲ್ಮೆಯ ವಾತಾವರಣದಲ್ಲಿ ನೈಟ್ರೋಜನ್ ಹೆಚ್ಚಿರುವುದರಿಂದ ಗಾಳಿಯೊತ್ತಡ ಹೆಚ್ಚಿರುತ್ತದೆ. ಆದರೆ ಮನುಷ್ಯರು ಉಸಿರಾಡಲು ಉಸಿರ‍್ಗಾಳಿ (oxygen) ಇದ್ದರಷ್ಟೇ ಸಾಕು, ನೈಟ್ರೋಜನ್‍ ಅಗತ್ಯವಿಲ್ಲ. ಆದುದರಿಂದ ಬಾನುಡುಪಿನಲ್ಲಿ ನೆಲದ 32% ನಷ್ಟು ಒತ್ತಡವಿದ್ದರೂ ಬಾನಾಡಿಗರು ಸರಿಯಾಗಿ ಉಸಿರಾಡಬಲ್ಲರು.

2. ಉಸಿರ‍್ಗಾಳಿಯ ಪೂರೈಕೆ:
ಬಾನದೆರವು (space), ಗಾಳಿಯಿಲ್ಲದ ಬರಿದು ನೆಲೆಯಾಗಿರುವುದರಿಂದ ಬಾನಾಡಿಗರಿಗೆ ಬಾನಬಂಡಿಯಾಚೆ ಉಸಿರಾಡಲು ಬೇಕಾದ ಉಸಿರ‍್ಗಾಳಿಯನ್ನು ಬಾನುಡುಪುಗಳ ಮೂಲಕ ಒದಗಿಸಲಾಗುತ್ತದೆ. ಬಾನಬಂಡಿಯೊಳಗೆ ಉಸಿರ‍್ಗಾಳಿಯನ್ನು ಕೂಡಿಡಲಾಗಿದ್ದು, ಬಾನುಡುಪಿನ ಹಿಂದಿನ ಭಾಗದಿಂದ ಕೊಳವೆಗಳ ಮೂಲಕ ಉಸಿರ‍್ಗಾಳಿಯನ್ನು ಒದಗಿಸಲಾಗುತ್ತದೆ. ಬಾನಾಡಿಗರ ಉಸಿರಾಟದಿಂದ ಹೊರಡುವ ಕಾರ‍್ಬನ್ ಡೈಆಕ್ಸೈಡ್‍ನ್ನು ಕೊಳವೆಗಳ ಮೂಲಕ ಬಾನಬಂಡಿಯೊಳಗೆ ಸಾಗಿಸಲಾಗುತ್ತದೆ.

3. ಕದಲುವಿಕೆ (mobility):

ಬಾನಾಡಿಗರು ಸರಾಗವಾಗಿ ನಡೆದಾಡಲು ಬಾನುಡುಪಿನಲ್ಲಿರುವ ಒತ್ತಡವು ತಡೆಯೊಡ್ಡಬಲ್ಲದು. ಈ ತಡೆಯನ್ನು ಕಡಿಮೆಗೊಳಿಸುವಂತೆ ಬಾನುಡುಪನ್ನು ತಯಾರಿಸಲಾಗಿರುತ್ತದೆ. ಬಾನುಡುಪಿನ ಕಟ್ಟಣೆಯಲ್ಲಿ ಕದಲುವಿಕೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗಮನದಲ್ಲಿಡಲಾಗುತ್ತದೆ. ಬಾನಾಡಿಗರು ಬಾನುಡುಪನ್ನು ತೊಟ್ಟು ಒಂದು ನೆಲೆಯಿಂದ ಕದಲಿ ಮತ್ತೆ ಮರಳಿ ಅದೇ ನೆಲೆಗೆ ಬರಬೇಕಾದರೆ, ಅವರು ಮಾಡಬೇಕಾದ ಕೆಲಸ ಆದಷ್ಟು ಕಡಿಮೆಯಿರಬೇಕು. ಇಲ್ಲವಾದರೆ ಅವರಿಗೆ ತುಂಬಾ ದಣಿವಾಗಬಲ್ಲದು. ಇದನ್ನು ಇನ್ನೊಂದು ಬಗೆಯಲ್ಲಿ ನೋಡಬಹುದು. ದಪ್ಪನೆಯ ಕೋಟೊಂದನ್ನು ಹಾಕಿಕೊಂಡು ಬಾಗುವುದು, ಏಳುವುದು ಎಶ್ಟೊಂದು ಕಷ್ಟವಲ್ಲವೇ? ಹಾಗೆನೇ ಬಾನುಡುಪು ಬಾನಾಡಿಗರಿಗೆ ಹೊರೆಯಾಗಬಲ್ಲದು.

ಬಾನುಡುಪನ್ನು ಕದಲಿಸಲು ಬೇಕಾದ ಕೆಲಸದ ಪ್ರಮಾಣವನ್ನು ಕೆಳಗಿನ ಗಣಿತದ ನಂಟಿನಿಂದ ಲೆಕ್ಕಹಾಕಬಹುದು.

work relation

ಇಲ್ಲಿ, W = ಕೆಲಸ (Work), P = ಒತ್ತಡ (Pressure), V = ಆಳವಿ (Volume), Vi = ಮೊದಲಿದ್ದ ಆಳವಿ, Vf = ಬಳಿಕದ ಆಳವಿ, dV = ಆಳವಿಯಲ್ಲಾದ ಮಾರ‍್ಪಾಟು (Change in Volume)

ಮೇಲಿನ ಗಣಿತದ ನಂಟಿನಿಂದ ತಿಳಿದುಬರುವುದೇನೆಂದರೆ, ಕೆಲಸವನ್ನು ಕಡಿಮೆಗೊಳಿಸಬೇಕೆಂದರೆ ಉಡುಪಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡಬೇಕು ಇಲ್ಲವೇ ಆಳವಿಯ ಮಾರ‍್ಪಾಟನ್ನು ಕಡಿಮೆ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಿದರೆ ಉಸಿರಾಟಕ್ಕೆ ತೊಂದರೆಯಾಗಬಲ್ಲದು ಹಾಗಾಗಿ ಇನ್ನು ಉಳಿದದ್ದು ಆಳವಿಯ ಮಾರ‍್ಪಾಟನ್ನು ಕಡಿಮೆ ಮಾಡುವುದು. ಹೆಚ್ಚಿನ ಬಾನುಡುಪಗಳು ’ಆಳವಿಯ ಮಾರ‍್ಪಾಟನ್ನು’ ಕಡಿಮೆ ಮಾಡುವುದರ ಅಡಿಪಾಯದ ಮೇಲೆಯೇ ಅಣಿಗೊಂಡಿರುತ್ತವೆ.
ಹಾಗಾದರೆ ಆಳವಿಯ ಮಾರ‍್ಪಾಟನ್ನು ಕಡಿಮೆಗೊಳಿಸುವುದು ಹೇಗೆ?

ಇದಕ್ಕಾಗಿ ಬಾನುಡುಪುಗಳನ್ನು ಹಲವು ಪದರುಗಳಲ್ಲಿ ಹೆಣೆಯಲಾಗಿರುತ್ತದೆ ಮತ್ತು ಪದರುಗಳೊಳೆಗೆ ಅಲ್ಲಲ್ಲಿ ಒತ್ತಡದಲ್ಲಿ ತೆರೆದುಕೊಳ್ಳುವ ಕಿಂಡಿಯಂತಹ ವಿನ್ಯಾಸಗಳನ್ನು ಮಾಡಲಾಗುತ್ತದೆ. ಬಾನಾಡಿಗರು ಬಾಗಿದಾಗ ಅವರ ಇಡಿಯಾದ ಉಡುಪು ಬಾಗದೇ ಅದರೊಳಗಿನ ಪದರಗಳಷ್ಟೇ ಬಾಗುವುದರಿಂದ ಅವರಿಗಾಗುವ ದಣಿವು ಕಡಿಮೆಯಾಗುತ್ತದೆ.

4. ಕಾವಳತೆಯನ್ನು ಹಿಡಿತದಲ್ಲಿಡುವುದು: ಬಾನಿನಲ್ಲಿ ಕಾವಳತೆ (temperature) ಎಲ್ಲೆ ಮೀರಿದ ಏರಿಳಿತವನ್ನು ಕಾಣಬಹುದು. ಕಾವಳತೆಯಲ್ಲಿ −150°C ಇಂದ +120°C ನಷ್ಟು ಬದಲಾವಣೆಯಾಗಬಹುದು. ಕಾವಳತೆಯ ಇಂತಹ ಏರಿಳಿತದಿಂದ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳನ್ನು ತಡೆವೆ (insulators) ವಸ್ತುಗಳಿಂದ ಮಾಡಿರುತ್ತಾರೆ ಜತೆಗೆ ತಂಪಾಗಿಸುವಿಕೆ ಮತ್ತು ಗಾಳಿ ಹೊಯ್ದಾಟಕ್ಕೆ ಒಳಪದರವೊಂದನ್ನು ಮಾಡಿರುತ್ತಾರೆ. ಈ ಒಳಪದರದಲ್ಲಿ ನೀರಿನ ಕೊಳವೆಗಳ ಹಲವು ಸುತ್ತುಗಳಿರುತ್ತವೆ. ಬಾನಾಡಿಗರ ಮೈಯಿಂದ ಹೊಮ್ಮುವ ಕಾವನ್ನು ಇವು ತಂಪಾಗಾಗಿಸುತ್ತವೆ.

5. ಕಾಪುವಿಕೆ: ಅತಿ ನೇರಳೆ ಮತ್ತು ಇತರ ಕೆಡು ಕದಿರುಗಳಿಂದ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳ ಹೊರಪದರನ್ನು ಮ್ಯಾಲಾರ‍್(Mylar)ನಂತಹ ವಿಷೇಶ ವಸ್ತುಗಳಿಂದ ಮಾಡಿರುತ್ತಾರೆ. ಹಾಗೆನೇ ಬಾನಲ್ಲಿ ಕೆಲವು ಸಲ ಎಲ್ಲಿಂದಲೋ ಚಿಮ್ಮಿ ಬರುವ ತುಣುಕುಗಳು ಬಾನಾಡಿಗರ ಮೈ ಸೋಕದಂತೆ, ಬಾನುಡುಪಗಳ ಮತ್ತೊಂದು ಹೊರಪದರನ್ನು ಸಾಮಾನ್ಯವಾಗಿ ಗುಂಡುತಡೆ ಅಂಗಿಗಳನ್ನು ಮಾಡಲು ಬಳಸುವ ಕೆವ್ಲಾರ್‍ (Kevlar)ನಂತಹ ವಸ್ತುಗಳಿಂದ ಮಾಡಿರುತ್ತಾರೆ.

6. ಕೊಳೆತೆಗೆತ: ಬಾನಾಡಿಗರ ಮೈಯಿಂದ ಹೊರಬರುವ ಉಚ್ಚೆ ಮತ್ತು ಇನ್ನಿತರ ಕೊಳೆಯನ್ನು ಬಾನುಡುಪು ತನ್ನಲ್ಲೇ ಹಿಡಿದುಕೊಳ್ಳುವಂತೆ ಅಣಿಯಾಗಿರುತ್ತದೆ.

7. ಒಡನಾಟ: ಬಾನಾಡಿಗರು ಬಾನಬಂಡಿಯಾಚೆ ಇರುವಾಗ ಇತರರೊಡನೆ ಒಡನಾಡಲು ರೆಡಿಯೋ ಅಲೆಗಳನ್ನು ಪಡೆಯುವ/ಕಳಿಸುವ ಸಲಕರಣೆ, ಮೈಕ್ರೋಪೋನ್ ಮುಂತಾದ ಸಲಕರಣೆಗಳನ್ನು ಬಾನುಡುಪಿನ ಬಾಗವಾಗಿ ಅಣಿಗೊಳಿಸಲಾಗಿರುತ್ತದೆ.

ಹೀಗೆ ಹಲವು ಅಡೆತಡೆಗಳ ನಡುವೆಯೂ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳು ಸಜ್ಜಾಗಿರುತ್ತವೆ. ಅಂದ ಹಾಗೆ ಎಲ್ಲ ಸಲಕರಣೆಗಳನ್ನು ಒಳಗೊಂಡ ಒಂದು ಬಾನುಡುಪಿನ ಬೆಲೆ ಸುಮಾರು 12 ಮಿಲಿಯನ್ ಡಾಲರ್ (ಸುಮಾರು 72 ಕೋಟಿ ರೂಪಾಯಿಗಳು)

(ಮಾಹಿತಿ ಮತ್ತು ಚಿತ್ರಸೆಲೆಗಳು: wikipedia.org, science.howstuffworks,proxy.flss.edu.hkstyleguise.net)