ಮಂಗಳಗ್ರಹದಲ್ಲಿ ಒಂದು ಮನೆ

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ಎಮ್. ಎಸ್. ಎಸ್. ಮೂರ್ತಿ

ಭೂಮಿಯ ಮೇಲಿರುವಂತೆ ಇತರ ಗ್ರಹಗಳಲ್ಲಿ ಜೀವ ಸಂಪತ್ತು ಇದೆಯೆ?  ಅನಾದಿಕಾಲದಿಂದಲೂ ಈ ಪ್ರಶ್ನೆ ಮನುಷ್ಯನ ಕುತೂಹಲವನ್ನು ಕೆರಳಿಸುತ್ತಾ ಬಂದಿದೆ. ಆದರೆ, ಇದುವರೆಗೆ ತಿಳಿದಿರುವಂತೆ, ಜೀವ ಸಂಪತ್ತು ಸಾಧ್ಯವಾಗಿರುವುದು ಭೂಮಿಯ ಮೇಲೆ ಮಾತ್ರ. ಅದಕ್ಕೆ ಅನೇಕ ಕಾರಣಗಳು ಇವೆ. ಭೂಮಿಯ ಮೇಲಿನ ತಾಪಮಾನ ಸರಾಸರಿ 15°C ಇರುವುದರಿಂದಾಗಿ, ನೀರು ಜಲರೂಪದಲ್ಲಿ ಲಭ್ಯವಿದ್ದು ಜೀವ ಸಂಪತ್ತು ವೃದ್ಧಿಯಾಗಲು ಪೂರಕವಾಗಿದೆ. ಜೀವಿಗಳು ಉಸಿರಾಡಲು ಅನುಕೂಲವಾಗುವಂತೆ ಭೂಮಿಯ ಗುರುತ್ವ ವಾತಾವರಣವನ್ನು ಹಿಡಿದಿದೆ. ಭೂಮಿಯ ಕಾಂತ ಕ್ಷೇತ್ರ ಸೂರ್ಯನಿಂದ ನಿರಂತರವಾಗಿ ಹೊಮ್ಮುವ ಸೌರಮಾರುತದ ವಿಕಿರಣ ಕಣಗಳನ್ನು ತಡೆಗಟ್ಟಿ, ಅದರ ವಾತಾವರಣ ಹಾಗೂ ಜೀವಿಗಳನ್ನು ರಕ್ಷಿಸುತ್ತದೆ. ಈ ಎಲ್ಲ ಕಾರಣಗಳಿಂದ ಭೂಮಿ ವಾಸಯೋಗ್ಯ ಎಂದು ಪರಿಗಣಿಸಲಾಗಿದೆ.

ಸುಮಾರು 200,000 ವರ್ಷಗಳ ಹಿಂದೆ ಆಧುನಿಕ ಮಾನವ ಈ ಭೂಮಿಯ ಮೇಲೆ ಮೈದಳೆದನೆಂಬುದು ತಜ್ಞರ ಲೆಕ್ಕಾಚಾರ. ಆದರೆ, ಈ ದೀರ್ಘಾವಧಿಯಲ್ಲಿ ಮನುಷ್ಯ ತನ್ನ ಪರಿಸರವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಏರುತ್ತಿರುವ ಜನಸಂಖ್ಯೆ, ಅನಿಯಂತ್ರಿತ ನಗರೀಕರಣ ಇವುಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವುದಲ್ಲದೆ, ಹವಾಮಾನದಲ್ಲಿಯೂ ತೀವ್ರ ಏರುಪೇರುಗಳಾಗಿ ಜೀವಿಗಳ ಅಸ್ತಿತ್ವಕ್ಕೇ ಮಾರಕವಾಗುವ ಸನ್ನಿವೇಶ ಉಂಟಾಗಿದೆ. ಇವುಗಳನ್ನೆಲ್ಲಾ ತಕ್ಷಣಾ ತಡೆಗಟ್ಟದಿದ್ದರೆ, ಮುಂದಿನ ಕೆಲವು ಶತಮಾನಗಳಲ್ಲಿ ಭೂಮಿಯ ಮೇಲೆನ ಜೀವರಾಶಿಗಳು ಸರ್ವನಾಶವಾಗಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಾನವ ಚಟುವಟಿಕೆಗಳು ಮಾತ್ರವೇ ಅಲ್ಲದೆ ನಿಸರ್ಗದಲ್ಲಿ ಸಂಭವಿಸುವ ಹಲವು ಘಟನೆಗಳೂ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಮಾರಕವಾಗಬಹುದು. ಖಗೋಳ ವಿಜ್ಞಾನಿಗಳ ಪ್ರಕಾರ ಸುಮಾರು 5 ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲ ಮೈದಳೆಯಿತು. ಈ ಸೌರಮಂಡಲದ ಅಧಿಪತಿಯಾದ ಸೂರ್ಯ ಇನ್ನೊಂದು 4.5 ಬಿಲಿಯನ್ ವರ್ಷಗಳನಂತರ ಅವಸಾನ ಸ್ಥಿತಿಯನ್ನು ತಲುಪಿ, ಕೆಂಪುದೈತ್ಯವಾಗಿ (Red Giant) ಪರಿವರ್ತನೆಯಾಗುತ್ತದೆ. ಆಗ ಅದರ ವ್ಯಾಸ ಸುಮಾರು 250 ಪಟ್ಟು ಹಿಗ್ಗಿ, ಭೂಮಿಯನ್ನೂ ಆವರಿಸಿಕೊಳ್ಳುವುದರಿಂದ, ಇಲ್ಲಿ ಇರಬಹುದಾದ ಜೀವಿಗಳೆಲ್ಲಾ ನಾಶವಾಗುತ್ತವೆ. ಇದು ಶತಸ್ಸಿದ್ಧ. ಅದಕ್ಕೆ ಮೊದಲೇ ಇನ್ನೂ ಕೆಲವು ವಿಪತ್ತುಗಳು ಸಂಭವಿಸಬಹುದು. ಅತಿ ಪ್ರಬಲವಾದ ಒಂದು ಜ್ವಾಲಾಮುಖಿ ಭೂಗರ್ಭದಲ್ಲಿ ಸಿಡಿಯಬಹುದು; ಅಥವಾ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ, ಸರ್ವನಾಶಗೊಳಿಸಬಹುದು. ಭೂಮಿಯ ಇತಿಹಾಸದಲ್ಲಿಯೇ ಇದಕ್ಕೆ ಸಾಕ್ಷಿ ಇದೆ. ಸುಮಾರು 160 ಮಿಲಿಯನ್ ವರ್ಷಗಳ ಹಿಂದೆ, ಅಂದರೆ, ಭೂಮಿಯಮೇಲೆ ಮಾನವ ಪಾದಾರ್ಪಣ ಮಾಡುವ ಮೊದಲೇ, ದೈತ್ಯಾಕಾರದ ಡೈನೊಸಾರ್ ಗಳು  ಇಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದವು. ಆದರೆ, ಈಗ್ಗೆ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಗಾತ್ರದ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದುದರಿಂದಾಗಿ, ಅವೆಲ್ಲ ಹಠಾತ್ ಕಣ್ಮರೆಯಾದವು.  ಮಾನವ ಸಂತತಿ ಮುಂದುವರಿದಿದ್ದೇ ಆದರೆ, ಅಂತಹ ದುರ್ಘಟನೆಗಳಿಂದ ಪಾರಾಗಬೇಕಾದರೆ, ಅದಕ್ಕೆ ಮೊದಲೇ ಭೂಮಿಯ ಜೊತೆಗೆ ಮತ್ತೊಂದು ಗ್ರಹದಲ್ಲಿ ವಾಸ್ತವ್ಯ ಹೂಡುವುದು ಅನಿವಾರ್ಯ. ಅದರ ಬಗ್ಗೆ ವಿಜ್ಞಾನಿಗಳು ಈಗಾಗಲೇ ಚಿಂತನೆ ನಡೆಸುತ್ತಿದ್ದಾರೆ. ಅವರ ಪ್ರಕಾರ, ಸಧ್ಯಕ್ಕೆ ಮಾನವನ ಮುಂದಿನ ನೆಲೆ ಸೌರಮಂಡಲದಲ್ಲೇ ಇರುವ ನಮ್ಮ ನೆರಯ ಮಂಗಳಗ್ರಹ.

ಮಂಗಳಗ್ರಹದಲ್ಲಿ ಏನಿದೆ, ಏನಿಲ್ಲ?

1ಮಂಗಳಗ್ರಹವು, ಭೂಮಿಯಿಂದ ಆಚೆಗೆ, ಸೂರ್ಯನಿಂದ ಸರಾಸರಿ 228 ಮಿಲಿಯನ್ ಕಿಮೀ ದೂರದಲ್ಲಿದೆ. ಮಂಗಳಗ್ರಹ ಮೈದಳೆದಾಗ, ಅದು ಬಹುಮಟ್ಟಿಗೆ ಭೂಮಿಯಂತೆಯೇ ಇತ್ತು. ಅಲ್ಲಿನ ಒಂದು ದಿನದ ಅವಧಿ, ಭೂಮಿಯ ದಿನಕ್ಕಿಂತ ಸುಮಾರು 39 ನಿಮಿಶಗಳು ಅಧಿಕ. ವರ್ಷ ಮಾತ್ರ 687 ಭೂದಿನಗಳು. ಹಾಗೆಯೇ, ಋತುಮಾನಗಳು ಕೂಡ ದೀರ್ಘ. ಆಗ ಅಲ್ಲಿ  ದಟ್ಟ ವಾತಾವರಣ, ಹರಿವ ನೀರು, ಪ್ರಬಲ ಕಾಂತಕ್ಷೇತ್ರ ಎಲ್ಲ ಇದ್ದವು. ಆದರೆ, ಕೆಲವು ಭೂವೈಜ್ಞಾನಿಕ ಕಾರಣಗಳಿಂದಂದಾಗಿ, ಸುಮಾರು 3.2 ಬಿಲಿಯನ್ ವರ್ಷಗಳ ಹಿಂದೆ ಅದರ ಕಾಂತಕ್ಷೇತ್ರ ಬಹುಮಟ್ಟಿಗೆ ನಶಿಸಿ ಹೊಯಿತು. ಅದರಿಂದಾಗಿ, ಸೌರಮಾರುತದ ವಿಕಿರಣಗಳು ಯಾವ ತಡೆಯೂ ಇಲ್ಲದೆ ಮಂಗಳದ ಮಾಯುಮಂಡಲವನ್ನು ದಾಳಿಮಾಡಿ, ಅಲ್ಲಿನ ಅನಿಲ ಅಣುಗಳೊಂದಿಗೆ ಪ್ರತಿಕ್ರಿಯಿಸಿ ಅಯನೀಕರಣಗೊಳಿಸಲಾರಂಭಿಸಿದವು. ಅದರಿಂದ ಉಂಟಾದ ವಿದ್ಯುತ್ ಕ್ಷೇತ್ರದಲ್ಲಿ ಅನಿಲ ಅಯಾನುಗಳು ವೇಗವರ್ಧಕಗೊಂಡು, ಮಂಗಳದ ವಾಯುಮಂಡಲದ ಮೇಲಿನ ಸ್ತರಗಳಿಂದ ಬಾಹ್ಯಾಕಾಶಕ್ಕೆ ಸರಿದುಹೋದವು. ಹಾಗಾಗಿ, ಇಂದು ಮಂಗಳಗ್ರಹವನ್ನು ಆವರಿಸಿಕೊಂಡು ಒಂದು ತೆಳುವಾದ ವಾಯುಮಂಡಲ ಮಾತ್ರವಿದೆ. ಮಂಗಳದ ಮೇಲ್ಮೈನಲ್ಲಿ ಈ ವಾಯುಮಂಡಲದ ಒತ್ತಡ ಭೂಮಿಯ ವಾಯುಮಂಡಲದ ಒತ್ತಡದ ನೂರನೇ ಒಂದು ಭಾಗ ಮಾತ್ರ. ಅಲ್ಲದೇ ಅದು ಶೇಕಡ 95 ಭಾಗ ಕಾರ್ಬನ್  ಡೈಆಕ್ಸೈಡ್ ನಿಂದ ಕೂಡಿದೆ. ಆಮ್ಲಜನಕ ಶೇಕಡ 0.2 ಭಾಗ ಮಾತ್ರ. ಆದ್ದರಿಂದ, ಅಲ್ಲಿ  ಉಸಿರಾಡಲು ಸಾಧ್ಯವಿಲ್ಲ.

2
ಮಂಗಳದ ವ್ಯಾಸ, ಭೂಮಿಯ ವ್ಯಾಸದ ಅರ್ಧದಷ್ಟು. ಹಾಗಾಗಿ ಅದರ ಗುರುತ್ವ ಭೂಮಿಯ ಗರುತ್ವದ ಶೇಕಡ 40ರಷ್ಟು ಮಾತ್ರ. ಅದಲ್ಲದೆ, ಮಂಗಳ ಸೂರ್ಯನಿಂದ, ಭೂಮಿಗಿಂತ ಸರಾಸರಿ 60 ಮಿಲಿಯನ್ ಕಿಲೊಮೀಟರ್ ಅಧಿಕ ದೂರದಲ್ಲಿದೆ. ಹಾಗಾಗಿ, ಅಲ್ಲಿ ಬೀಳುವ ಸೂರ್ಯನ ಬೆಳಕು, ಭೂಮಿಯ ಮೇಲೆ ಬೀಳುವ ಬೆಳಕಿನ ಅರ್ಧದಷ್ಟು. ಸರಾಸರಿ ತಾಪಮಾನ ಮೈನಸ್ 63°C ಇಂದು ಮಂಗಳ ಒಂದು ಶೀತ, ಬಂಜರು ಗ್ರಹವಾಗಿದೆ.

ಮಂಗಳದಲ್ಲಿ ಬದುಕುವುದು ಹೇಗೆ?

ಹಾಗಾಗಿ, ಮಂಗಳಗ್ರಕ್ಕೆ ವಲಸೆ ಹೋಗುವುದೆಂದರೆ, ಬೇರೊಂದು ಊರು ಅಥವಾ ದೇಶಕ್ಕೆ ಹೋಗಿ ನೆಲಸಿದಷ್ಟು ಸುಲಭವಲ್ಲ. ಮಾನವ ಹಾಗೂ ಇತರ ಜೀವಿಗಳು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡು ಭೂಮಿಯಮೇಲಿನ ಪರಿಸರಕ್ಕೆ ಹೊಂದಿಕೊಂಡಿವೆ. ಮಂಗಳಗ್ರಹದಲ್ಲಿ ಇಲ್ಲಿನಂತೆ ಮುಕ್ತವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ. ಯಾವಾಗಲೂ ಆಮ್ಲಜನಕದ ಸಿಲೆಂಡರ್ ಜೊತೆಯಲ್ಲಿ ಇರಲೇಬೇಕು. ವಾತಾವರಣದ ಒತ್ತಡ ತೀರ ಕಡಿಮೆಯಾದ್ದರಿಂದ ದೇಹದ ರಕ್ತನಾಳಗಳು ಉಬ್ಬಿ, ಒಡೆದು ರಕ್ತಸ್ರಾವವಾಗುತ್ತದೆ. ಹಾಗಾಗಿ, ಯಾವಾಗಲೂ ಪ್ರೆಷರ್ ಸೂಟ್ ಧರಿಸಿರಬೇಕು. ಕಾಂತಕ್ಷೇತ್ರ ಇಲ್ಲದಿರುವುದರಿಂದ ವಿಕಿರಣ ತೀವ್ರತೆ ಅಧಿಕವಾಗಿರುತ್ತದೆ. ಭೂಮಿಯಮೇಲೆ ಒಂದು ವರ್ಷ ಕಾಲದಲ್ಲಿ ಉಂಟಾಗುವ ವಿಕಿರಣ ತಾಡನೆ, ಮಂಗಳದಲ್ಲಿ ಒಂದೇ ದಿನದಲ್ಲಿ ಸಂಭವಿಸುತ್ತದೆ. ಅತಿಯಾದ ವಿಕಿರಣ ತಾಡನೆಯಿಂದಾಗಿ, ಕಣ್ಣಿನ ಪೊರೆ, ಕ್ಯಾನ್ಸರ್, ತಳಿವಿಕೃತಿ ಮುಂತಾದ ಸಮಸ್ಯೆಗಳು ತೋರಿಬರುತ್ತವೆ. ವಿಕಿರಣ ದಾಳಿಯಿಂದ ಪಾರಾಗಲು ನೆಲಮಾಳಿಗೆಗಳಲ್ಲಿ ವಾಸಮಾಡಬೇಕಾಗುತ್ತದೆ. ಹೀಗೆ ನಿಸರ್ಗಕ್ಕೆ ತೆರೆದುಕೊಳ್ಳದೆ, ಮುಚ್ಚಿದ ಪರಿಸರದಲ್ಲಿ ದೀರ್ಘಕಾಲ ವಾಸಿಸುವುದರಿಂದ ಹಲವು ಮಾನಸಿಕ ತೊಂದರೆಗಳು ಉಂಟಾಗಬಹುದು.

ಮಂಗಳಗ್ರಹದ ಕಡಿಮೆ ಗುರುತ್ವವೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.ಇಂಟರ್ನ್ಯಾಶನಲ್ ಸ್ಪೇಸ್ ಸ್ಟೇಶನ್ (International Space Station – ISS) ಗಗನ ಯಾತ್ರಿಗಳ ಅನುಭವದ ಪ್ರಕಾರ, ಮಿನಿ ಗುರುತ್ವದಿಂದಾಗಿ ದೇಹದ ಮೂಳೆ, ಮಾಂಸ ಕ್ಷೀಣಿಸಿ ಮೂಳೆ ಮುರಿತ ಉಂಟಾಗಬಹುದು. ಅಲ್ಲದೇ, ಭೂಮಿಯ ಮೇಲಿರುವಾಗ, ಗುರುತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತ ಸಂಚಲನೆಯಾಗಬೇಕಾದುದರಿಂದ, ನಮ್ಮ ಹೃದಯ ಹೆಚ್ಚು ದಕ್ಷತೆಯಿಂದ ಪಂಪ್ ಮಾಡುತ್ತಿರುತ್ತದೆ. ಗುರುತ್ವ ಕಡಿಮೆ ಇದ್ದಲ್ಲಿ, ಹೃದಯ ದುರ್ಬಲಗೊಂಡು, ಹೃದಯ ಸಂಬಂಧಿ ರೋಗಗಳಿಗೆ ಎಡೆಯಾಗುತ್ತದೆ.

ಹಾಗಾದರೆ, ಮನುಷ್ಯನಿಗೆ ಮಂಗಳಗ್ರಹದಲ್ಲಿ ವಾಸಮಾಡಲು ಸಾಧ್ಯವಿಲ್ಲವೆ? ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕಾಗಿ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ.

ಎರಡನೇ ಭೂಮಿ:

ಈ ಸಮಸ್ಯೆಗಳಿಗೆ ಒಂದು ದೀರ್ಘಕಾಲದ ಪರಿಹಾರವೆಂದರೆ, ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸುವುದು. ಅದಕ್ಕೆ ಟೆರಾಪಾರ್ಮಿಂಗ್ (Terraforming) ಎನ್ನುತ್ತಾರೆ. ಮೊದಲನೆಯದಾಗಿ, ಅಲ್ಲಿ ಒಂದು ದಟ್ಟ ವಾತಾವರಣ ಸೃಷ್ಟಿಸಬೇಕು. ಅಲ್ಲಿನ ಬಂಡೆಗಳು, ಮಣ್ಣು, ಉತ್ತರ ಮತ್ತು ದಕ್ಷಿಣ ಧ್ರುವ ಇವುಗಳಲ್ಲಿ  ಹೇರಳವಾಗಿ ಕಾರ್ಬನ್ ಡೈಆಕ್ಸೈಡ್ ಘನೀಭೂತವಾಗಿದೆ. ಅದನ್ನು ಬಿಡುಗಡೆ ಮಾಡುವುದರಿಂದ ವಾತಾವರಣದ ದಟ್ಟಣೆಯನ್ನು ಹೆಚ್ಚಿಸಬಹುದು. ಆದರೆ,  ಘನೀಭೂತವಾದ ಆಷ್ಟೊಂದು ಕಾರ್ಬನ್ ಡೈಆಕ್ಸೈಡ್ ನ್ನು ಕರಗಿಸುವುದು ಹೇಗೆ? ಒಂದು ಬೃಹದಾಕಾರದ ಸೌರಪಟವನ್ನು (Solar Sail) ಹೊತ್ತ ಉಪಗ್ರಹವನ್ನು ಮಂಗಳದ ಸುತ್ತ ಒಂದು ಕಕ್ಷೆಯಲ್ಲಿ ಸ್ಥಾಪಿಸುವುದರಿಂದ ಅದು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಕನ್ನಡಿಯು ಬೆಳಕನ್ನು ಪ್ರತಿಫಲಿಸುವಂತೆ, ಸೌರಪಟವು ಸೂರ್ಯನ ಬೆಳಕನ್ನು ಮಂಗಳದ ಧ್ರುವಪ್ರದೇಶದಮೇಲೆ ಸಾಂದ್ರೀಕರಿಸುವಂತೆ ಮಾಡಿದರೆ, ಘನೀಭೂತವಾದ ಕಾರ್ಬನ್ ಡೈಆಕ್ಸೈಡ್ ನಿಧಾನವಾಗಿ ಕರಗಿ, ವಾತಾವರಣವನ್ನು ಸೇರುತ್ತದೆ. ಕಾರ್ಬನ್ ಡೈಆಕ್ಸೈಡ್ ಹಸಿರುಮನೆ ಅನಿಲವೂ ಆದ್ದರಿಂದ, ವಾತಾವರಣದ ಒತ್ತಡ ಹೆಚ್ಚಿದಂತೆ, ಮಂಗಳಗ್ರಹದ ತಾಪಮಾನವೂ ಏರುತ್ತದೆ. ಆಗ ಹೆಪ್ಪುಗಟ್ಟಿದ ನೀರು ಕರಗಿ ಹರಿಯಲಾರಂಭಿಸುತ್ತದೆ. ಹೀಗೆ, ವಾತಾವರಣ, ತಾಪಮಾನ, ಹರಿಯುವ ನೀರೂ ಎಲ್ಲವೂ ಲಭ್ಯವಾಗುತ್ತವೆ. ಹರಿಯುವ ನೀರು ಬಾಷ್ಪೀಕರಣಗೊಂಡು, ವಾಯುಮಂಡಲ ಸೇರಿ, ಮೋಡವಾಗಿ, ಮಳೆ ಸುರಿಯುವುದರಿಂದ ಜಲಚಕ್ರ ಸ್ಥಾಪಿತವಾಗುತ್ತದೆ. ಆಗ ಕೃಷಿ ಆರಂಭಿಸಿ, ಅಲ್ಲಿಯೇ ಆಹಾರವನ್ನೂ ಬೆಳೆದುಕೊಳ್ಳಬಹುದು. ಅಲ್ಲದೆ, ಗಿಡಮರಗಳನ್ನು ಬೆಳೆಸಿದಾಗ, ಅವು ವಾತಾವರಣಕ್ಕೆ ಮತ್ತಷ್ಟು ಆಮ್ಲಜನಕವನ್ನು ಒದಗಿಸುತ್ತವೆ.

ಮಂಗಳದ ಮಣ್ಣಿನಲ್ಲಿ, ಕಬ್ಬಿಣದ ಅಂಶ ಹೆಚ್ಚಿನ ಸಾಂದ್ರತೆಯಲ್ಲಿದೆ. ಅದೇ ಮಾದರಿಯ ಮಣ್ಣನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ, ಅದಕ್ಕೆ ಸೂಕ್ತವಾದ ಪಾಲಿಮರ್ ನ್ನು ಬೆರಸಿ, ಒತ್ತಡಕ್ಕೆ ಒಳಪಡಿಸಿದರೆ, ಗಟ್ಟಿಯಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದರಿಂದ ಸುರಕ್ಷಿತವಾದ ವಸತಿಗಳನ್ನು ಮಂಗಳದ ಮಣ್ಣಿನಿಂದಲೇ ನಿರ್ಮಾಣ ಮಾಡಬಹುದು.

3
ಆದರೆ, ಮಂಗಳದಲ್ಲಿ ಹೀಗೆ ಸೃಷ್ಟಿಸಿದ ವಾಯುಮಂಡಲ, ಮತ್ತೆ ಚದುರಿಹೋಗದೆ, ಸ್ಥಿರವಾಗಿರಬೇಕಾದರೆ, ಅದನ್ನು ಸೌರಮಾರುತದ ವಿಕಿರಣಗಳಿಂದ ರಕ್ಷಿಸಲು ಒಂದು ಪ್ರಬಲ ಕಾಂತಕ್ಷೇತ್ರ ಬೇಕು. ಅದಕ್ಕಾಗಿ ನಾಸಾ ವಿಜ್ಞಾನಿಗಳು ಒಂದು ಅದ್ಭುತ ಯೋಜನೆಯನ್ನು ರೂಪಿಸಿದ್ದಾರೆ. ಅದರ ಪ್ರಕಾರ ಸೂರ್ಯ ಮತ್ತು ಮಂಗಳದ ನಡುವೆ ಒಂದು ಪ್ರಬಲವಾದ (1 ರಿಂದ 2 ಟೆಸ್ಲ) ಕೃತಕ ಕಾಂತಕ್ಷೇತ್ರವನ್ನು ನಿರ್ಮಿಸಲಾಗುವುದು. ಅದು ಸೌರಮಾರುತವನ್ನು ತಡೆಹಿದಿದು, ಜೀವಿಗಳನ್ನು ವಿಕಿರಣ ತಾಡನೆಯಿಂದ ರಕ್ಷಿಸುತ್ತದೆ.

ಮಂಗಳದಲ್ಲಿ ಒಂದು ಹೊಸ ಮಾನವ ಪ್ರಭೇದ?

ಹೀಗೆ ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸಲು ಹಲವಾರು ಯೋಜನೆಗಳಿವೆ. ಆದರೆ, ಅವುಗಳಿಂದ ಭಿನ್ನವಾಗಿ, ವಿಜ್ಞಾನಿಗಳು ಮತ್ತೊಂದು ರೀತಿಯ ಯೋಜನೆಯ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಮಂಗಳವನ್ನು ಎರಡನೇ ಭೂಮಿಯಾಗಿ ರೂಪಿಸುವ ಬದಲು, ಮನುಷ್ಯನನ್ನೇ ಮಂಗಳದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಏಕೆ ಪರಿವರ್ತಿಸಬಾರದು? ಅಂತಹ ಮನುಷ್ಯ ಉಸಿರಾಡಲು ವಾತಾವರಣ ಬೇಕಿಲ್ಲ. ಅಲ್ಲಿನ ಕಡಿಮೆ ವಾಯು ಒತ್ತಡ, ಗುರುತ್ವ, ಅತಿಯಾದ ವಿಕಿರಣದ  ಪರಿಸರದಲ್ಲಿಯೇ ಯಾವ ತೊಂದರೆಯೂ ಇಲ್ಲದೆ ಬದುಕಬಲ್ಲ. ಅದಕ್ಕೆ ಅವಶ್ಯವಾದ ನ್ಯಾನೊ ಮತ್ತು ತಳಿ ತಂತ್ರಜ್ಞಾನ ಈಗಾಗಲೇ ಲಭ್ಯವಿದೆ. ಉದಾಹರಣೆಗೆ, ದೇಹಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುವ ನ್ಯಾನೊಮಷೀನ್ ಗಳನ್ನು ತಯಾರಿಸಬಹುದು. ಮಿನಿಗುರತ್ವದಿಂದ ಉಂಟಾಗುವ ಮೂಳೆ ಮತ್ತು ಮಾಂಸ ಕ್ಷೀಣಿಸುವುದನ್ನು ತಡೆಗಟ್ಟುವಂತಹ ತಳಿ ವಿಕೃತಿಗಳನ್ನು (Gene mutations) ವಿಜ್ಞಾನಿಗಳು ಈಗಾಗಲೇ ಗುರುತಿಸಿದ್ದಾರೆ. “Deinococcus radioduran” ಎಂಬ ಬ್ಯಾಕ್ಟೀರಿಯ ಪ್ರಭೇದ ಇತರ ಪ್ರಭೇದಗಳಿಗಿಂತ ನೂರುಪಟ್ಟು ಹೆಚ್ಚು ವಿಕಿರಣ ತಾಡನೆಯನ್ನು ಸಹಿಸಿಕೊಳ್ಳಬಲ್ಲದು. ಅದಕ್ಕೆ ಕಾರಣವಾದ ವಿಶಿಷ್ಟ ತಳಿಗಳನ್ನೂ ಪತ್ತೆಹಚ್ಚಲಾಗಿದೆ. ಹಾಗಿದ್ದಲ್ಲಿ, ಆ ರೀತಿಯ ತಳಿಗಳನ್ನು ಮನುಷ್ಯನಿಗೆ ವರ್ಗಾಯಿಸಿದರೆ, ಅವನು ಮಂಗಳದ ಪರಿಸರದಲ್ಲಿ ಆರಾಮವಾಗಿ ಬದುಕಬಹುದಲ್ಲವೆ? ಅಲ್ಲದೇ, ಆ ಗುಣಗಳನ್ನು ಮುಂದಿನ ಪೀಳಿಗೆಗಳಿಗೂ ವರ್ಗಾಯಿಸಬಹುದಾದ್ದರಿಂದ, ಮಂಗಳ ಗ್ರಹಕ್ಕಾಗಿಯೇ ಒಂದು ಮಾನವ ಪ್ರಭೇದವನ್ನು ಸೃಷ್ಟಿಸಿದಂತಾಗುತ್ತದೆ!

ಈ ಎಲ್ಲ ಯೋಜನೆಗಳೂ, ಸೈದ್ಧಾಂತಿಕವಾಗಿ ಸಾಧ್ಯವಾದರೂ, ಸಾಕ್ಷಾತ್ಕಾರಗೊಳ್ಳಬೇಕಾದರೆ, ಸಹಸ್ರಾರು ವರ್ಷಗಳೇ ಬೇಕಾಗಬಹುದೆಂದು ತಜ್ಞರ ಅಭಿಪ್ರಾಯ. ಇವೆಲ್ಲದರ ನಡುವೆಯೂ, ಮಾನವನ ಪ್ರಥಮ ಮಂಗಳಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ನಾಸಾ ಸಂಸ್ಥೆಯು ಒಂದು ಶೋಧಕ ತಂಡವನ್ನು 2030ರ ದಶಕದಲ್ಲಿ ಕಳುಹಿಸಲು ತಯಾರಿ ನಡೆಸುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳೂ ಮಂಗಳದ ವಾಸ್ತವ್ಯದಲ್ಲಿ ಉತ್ಸುಕವಾಗಿವೆ. ಅಮೆರಿಕದ ಸ್ಪೇಸ್‍ಎಕ್ಸ್ (SpaceX) ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ (Elon Mask) ಅದಕ್ಕಾಗಿ 100 ಟನ್ ತೂಕ ಹೊರಬಲ್ಲ ಪ್ರಬಲವಾದ ರಾಕೆಟ್ ಹಾಗೂ ಗಗನ ನೌಕೆಗಳನ್ನು ತಯಾರಿಸಿ, ಪರೀಕ್ಷಿಸುತ್ತಿದ್ದಾರೆ. ಅಂತಹ ನೌಕೆಗಳಲ್ಲಿ, 100 ರಿಂದ 200 ಪ್ರಯಾಣಿಕರು ಹಾಗೂ ಅವರ ವಾಸ್ತವ್ಯಕ್ಕೆ ಬೇಕಾಗುವ ಎಲ್ಲ ಸರಕುಗಳನ್ನೂ ಹೊತ್ತ ಸಾವಿರಾರು ಉಡಾವಣೆಗಳನ್ನು ಆಯೋಜಿಸಿ, ಒಂದು ಮಿಲಿಯನ್ ಜನರ ವಸಾಹತುವನ್ನು ಮಂಗಳ ಗ್ರಹದಲ್ಲಿ ನಿರ್ಮಿಸಬೇಕೆಂಬುದು ಅವರ ಗುರಿ. ಮುಂದಿನ 40 ರಿಂದ 100 ವರ್ಷಗಳ ಅವಧಿಯಲ್ಲಿ ಅದನ್ನು ಸಾಧಿಸಬಹುದೆಂದು ಅವರು ಆಶಾದಾಯಕರಾಗಿದ್ದಾರೆ.

4
ಅದೇ ರೀತಿ ಯುನೈಟೆಡ್ ಅರಬ್ ರಿಪಬ್ಲಿಕ್ ಕೂಡ  ಒಂದು ಯೋಜನೆಯನ್ನು ಹಮ್ಮಿಕೊಂಡು, ಅದಕ್ಕಾಗಿ ದುಬೈ ನಗರದಲ್ಲಿ ಮಾದರಿ ಮಾರ್ಸ್ ಸಿಟಿ (Mars City) ನಿರ್ಮಾಣವಾಗುತ್ತಿದೆ. ಅದು 2023ರಲ್ಲಿ ಮುಗಿಯಬಹುದು.

ಹಾಗಾಗಿ, ಮಂಗಳಗ್ರಹದಲ್ಲಿ ವಾಸ್ತವ್ಯ ಹೂಡುವುದು ಹಗಲುಗನಸೇನಲ್ಲ. ಆದರೆ, ಅದರ ಉತ್ಸಾಹಿಗಳು ಬಯಸಿದಷ್ಟು ಬೇಗ ಸಾಧ್ಯವಾಗದೇ ಇರಬಹುದು. ಆದರೆ, ವಿಜ್ಞಾನಿಗಳು ಅಷ್ಟಕ್ಕೇ ತೃಪ್ತರಾಗಿಲ್ಲ. ಮೊದಲೇ ಹೇಳೀದಂತೆ, ಸೂರ್ಯನ ಅವಸಾನದ ವೇಳೆ ಮಂಗಳ ಗ್ರಹ ಕೂಡ ನಾಶವಾಗುವುದು. ಅಂತಹ ಆಪತ್ತು ಸಂಭವಿಸುವ ಮೊದಲೇ, ಮನುಕುಲ ಸೌರಮಂಡಲದಿಂದಲೇ ಹೊರಗೆ, ಬೇರೆ ನಕ್ಷತ್ರಗಳ ಗ್ರಹಗಳಲ್ಲಿ   ವಾಸ್ತವ್ಯ ಹೂಡಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಮಾನವನ ಅಂತರ್ ನಕ್ಷತ್ರೀಯ ಯಾನದ ಬಗ್ಗೆ ಈಗಾಗಲೇ ವಿಜ್ಞಾನಿಗಳು ಚಿಂತಿಸುತ್ತಿದ್ದಾರೆ.