ಕುಡಿಯುವ ನೀರಿನ ಬವಣೆ ನೀಗಿಸಲಿರುವ ‘ವಾಟರ್‌ಸೀರ್’

ಜಯತೀರ್ಥ ನಾಡಗೌಡ.

ವಿಶ್ವಸಂಸ್ಥೆಯ ಅಂಕಿ-ಸಂಖ್ಯೆಗಳು ಹೇಳುವಂತೆ ದಿನಕ್ಕೆ ಸುಮಾರು 9 ಸಾವಿರ ಮಂದಿ ಚೊಕ್ಕಟವಾದ ಕುಡಿಯುವ ನೀರಿನ ಕೊರತೆಯಿಂದ ಸಾಯುತ್ತಿದ್ದಾರಂತೆ. ಜಗತ್ತಿನ ಬಹುತೇಕ ಭಾಗ ನೀರಿನಿಂದ ಆವರಿಸಿದ್ದರೂ, ಅದರಲ್ಲಿ ಕುಡಿಯಲು ತಕ್ಕುದಾಗಿರುವುದು ತೀರಾ ಕಡಿಮೆ. ಕುಡಿಯುವ ನೀರಿನ ಕೊರತೆ ಮತ್ತು ಅದರಿಂದ ಆಗುತ್ತಿರುವ ಸಾವು-ನೋವುಗಳ ಕಂಡು ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ಇದನ್ನು ಹೋಗಲಾಡಿಸಲು ಕೆಲಸ ಮಾಡುತ್ತಿವೆ. ಕುಡಿಯುವ ನೀರನ್ನು  ಹಸನಾಗಿಸಲು ಇಂತ ಸಂಸ್ಥೆಗಳು ಹೊಸ ಹೊಸ ಚಳಕಗಳನ್ನು ಕಂಡು ಹಿಡಿಯುತ್ತಿವೆ.

ವಾರ್ಕಾ ವಾಟರ್ ಎಂಬ ಹೊಸ ಚಳಕವೊಂದರ ಬಗ್ಗೆ ಹಿಂದೊಮ್ಮೆ ಓದಿದ್ದೀರಿ. ಅದನ್ನೇ ಹೋಲುವ ಇನ್ನೊಂದು ನೀರು ಹಸನಾಗಿಸುವ ಎಣಿಯೊಂದು(Device) ಹೊರಬಂದಿದೆ. ಅದೇ ವಾಟರ್ ಸೀರ್(WaterSeer). ಮಿಂಚಿನ ಕಸುವು ಬಳಸದೇ ಕಡಿಮೆ ವೆಚ್ಚದಲ್ಲಿ ನೀರು ಹಸನಾಗಿಸುವ ಎಣಿಯೇ ವಾಟರ್ ಸೀರ್. ವಿಸಿ ಲ್ಯಾಬ್ಸ್ (VICI Labs) ಹೆಸರಿನ ಅಮೇರಿಕಾದ ಕೂಟ, ಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯ (UC Berkeley) ಮತ್ತು ನ್ಯಾಶನಲ್ ಪೀಸ್ ಕಾರ್ಪ್ಸ್ ಅಸೋಸಿಯೇಶನ್ (National Peace Corps Association)ಎಂಬ ಸಂಘಟನೆಗಳು ಒಟ್ಟಾಗಿ ಈ ಕೆಲಸಕ್ಕೆ ಕೈ ಹಾಕಿವೆ.

ವಾಟರ್ ಸೀರ್ ಎಣಿಯು ಒಂದು ಗಾಳಿದೂಡುಕ(Turbine), ಒಂದು ಬೀಸಣಿಗೆ(Fan) ಮತ್ತು ಆವಿ ಇಂಗಿಸುವ ಗೂಡುಗಳನ್ನು(Condensation Chamber) ಹೊಂದಿದೆ. ವಾಟರ್ ಸೀರ್ ಎಣಿಯನ್ನು ಗಾಳಿಯಾಡುವ ಬಯಲು ಜಾಗದಲ್ಲಿ 6 ರಿಂದ 8 ಅಡಿಗಳವರೆಗೆ ನೆಡಬೇಕಾಗುತ್ತದೆ. ಎಣಿಯ ಮೇಲ್ಭಾಗದಲ್ಲಿ ಜೋಡಿಸಲಾಗಿರುವ ಸುರುಳಿಯಾಕಾರದ ಗಾಳಿದೂಡುಕ, ಸುತ್ತಮುತ್ತಲೂ ಬೀಸುವ ಗಾಳಿಯನ್ನು ಒಳದೂಡುತ್ತಿರುತ್ತದೆ. ಇದರಿಂದ ಒಳಭಾಗದ ಬೀಸಣಿಗೆ ತಿರುಗುತ್ತ, ಬೆಚ್ಚನೆಯ ಗಾಳಿಯನ್ನು ನೆಲದಡಿ ನೆಡಲಾಗಿರುವ ಆವಿ ಇಂಗಿಸುವ ಗೂಡಿಗೆ ಸಾಗಿಸುತ್ತದೆ. ಆವಿ ಇಂಗಿಸುವ ಗೂಡಿನಲ್ಲಿ ಕೂಡಿಕೊಂಡ ಬೆಚ್ಚನೆಯ ಗಾಳಿ, ಸುತ್ತಲಿನ ನೆಲದಡಿಯ ತಂಪಿನ ವಾತಾವರಣದಿಂದ ಇಂಗಿಸಲ್ಪಟ್ಟು ನೀರಿನ ಹನಿಗಳಾಗಿ ಮಾರ್ಪಡುತ್ತವೆ. ಗೂಡಿನಲ್ಲಿ ಇದೇ ರೀತಿ ನೀರು ಕೂಡಿಡಲ್ಪಟ್ಟು, ಬೇಕೆಂದಾಗ ಈ ನೀರನ್ನು ಕೊಳವೆ (Hose) ಮತ್ತು ಎತ್ತುಕದ(Pump) ಮೂಲಕ ಕೊಡ, ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಕುಡಿಯಲು ಬಳಕೆ ಮಾಡಬಹುದು. ಈ ಏರ್ಪಾಟಿನಲ್ಲಿ ಮಿಂಚಿನ ಕಸುವು(Electricity) ಬೇಕಿಲ್ಲ, ಇದನ್ನು ನೆಟ್ಟಜಾಗದಲ್ಲಿ ಯಾವಾಗಲೂ ಗಾಳಿ ಬೀಸುತ್ತಿರಬೇಕೆಂಬ ಅಗತ್ಯವೂ ಇಲ್ಲ. ಇರುಳಿನಲ್ಲೂ ಇದು ಕೆಲಸ ಮಾಡಬಲ್ಲುದು. ಈಗಾಗಲೇ ಇದರ ಮಾದರಿಯನ್ನು ತಯಾರಿಸಿ, ಮೊದಲ ಹಂತದ ಒರೆಹಚ್ಚುವ ಕೆಲಸಗಳು ಪೂರ್ಣಗೊಂಡಿವೆ. 9 ಅಡಿ ಆಳಕ್ಕೆ ನೆಡಲಾಗಿದ್ದ ಈ ಚಿಕ್ಕ ಎಣಿಯ ಮಾದರಿಯೊಂದು 11 ಗ್ಯಾಲನ್ ಅಂದರೆ ಸುಮಾರು 37 ಲೀಟರ್‌ಗಳಶ್ಟು ಹಸನಾದ ಕುಡಿಯುವ ನೀರನ್ನು ಒದಗಿಸಿದ್ದು, ವಿಜ್ಞಾನಿಗಳ ಕೆಲಸಕ್ಕೆ ಹುರುಪು ಹೆಚ್ಚಿಸಿದೆ.

ಯಾವುದೇ ರಾಸಾಯನಿಕ ವಸ್ತುಗಳು, ಕಲಬೆರಕೆ ಇಲ್ಲದ ನೀರನ್ನು ವಾಟರ್ ಸೀರ್ ಮೂಲಕ ಪಡೆದುಕೊಳ್ಳಬಹುದು. ವಾತಾವರಣ ಬೆಚ್ಚನೆಯ ಗಾಳಿ ಮತ್ತು ನೆಲದಡಿಯ ತಂಪು ವಾತಾವರಣಗಳ ನಡುವಿರುವ ಬಿಸುಪುಗಳ ಅಂತರವೇ ಈ ಕುಡಿಯಲು ತಕ್ಕುದಾದ ನೀರಿನ ಹನಿಗಳನ್ನು ಉಂಟುಮಾಡಲಿದೆ. ಇಂಗಿಸುವ ಗೂಡಿಗೆ ಸೋಸುಕ ಜೋಡಿಸಿರುವುದರಿಂದ ಯಾವುದೇ ತೆರನಾದ ಕಸ, ಧೂಳು, ನಂಜುಳುಗಳು ನೀರಿನಲ್ಲಿ ಸೇರಿಕೊಳ್ಳುವ ಸಾಧ್ಯತೆಯೇ ಇಲ್ಲವಂತೆ. ನೀರಿನ ಭಟ್ಟಿ ಇಳಿಸುವಿಕೆಯ ಮೂಲಕ ಚೊಕ್ಕಟಗೊಳಿಸಿ ಪಡೆದ ನೀರಿನಷ್ಟೇ, ವಾಟರ್ ಸೀರ್‌ನಿಂದ ಹೊರಬರುವ ನೀರು ಚೊಕ್ಕಟವಾಗಿರಲಿದೆಯಂತೆ.

ಈ ಮೊದಲು ಬಂದ ನೀರು ಹಸನಾಗಿಸುವ ಏರ್ಪಾಟುಗಳು ಹೆಚ್ಚಿನ ಮಿಂಚು ಪಡೆದೋ, ಇಲ್ಲವೇ ಇತರೆ ಕಸುವಿನ ಸೆಲೆ ಬಳಸಿ ನೀರನ್ನು ಹಸನಾಗಿಸುತ್ತಿದ್ದವು. ಆದರೆ ವಾಟರ್ ಸೀರ್ ಇಂತ ಯಾವುದೇ ಕಸುವಿನ ಸೆಲೆಗಳನ್ನು ಬಳಸದೇ, ಇತರೆ ಏರ್ಪಾಟುಗಳಿಗಿಂತ ಹೆಚ್ಚು ಅಳವುತನ(Efficiency) ಹೊಂದಿರಲಿದೆಯಂತೆ. ಬಿಸಿಲಿರುವ ಜಾಗ ಇಲ್ಲವೇ ವಾತಾವರಣಗಳಲ್ಲಿ ಅಡೆತಡೆಯಿಲ್ಲದೇ ಕೆಲಸ ಮಾಡುವ ವಾಟರ್ ಸೀರ್, ತಂಪು ಹೆಚ್ಚಿರುವ ಜಾಗಗಳಲ್ಲೂ ಅಡೆತಡೆಯಿಲ್ಲದೇ ಕೆಲಸ ಮಾಡುವಂತೆ ಅದಕ್ಕೆ ತಕ್ಕ ಮಾರ್ಪಾಟು ಮಾಡಲಾಗಿದೆ.

ಒಂದೇ ಜಾಗದಲ್ಲಿ ಹಲವು ವಾಟರ್ ಸೀರ್ ಎಣಿಗಳನ್ನು ನೆಟ್ಟು ಅವುಗಳ ಮೂಲಕ ಹೊರಬರುವ ನೀರನ್ನು ಒಟ್ಟಿಗೆ ಕೊಳವೊಂದರಲ್ಲಿ ಸೇರಿಸಿ ಚಿಕ್ಕ ಹಳ್ಳಿಗಳ ಮಂದಿಯ ನೀರಿನ ಬವಣೆ ನೀಗಿಸಬಹುದು. 134 ಅಮೇರಿಕನ್ ಡಾಲರ್‌ಗಳಷ್ಟು ಅಗ್ಗದ ಬೆಲೆಯ (ಸುಮಾರು 9200 ರೂಪಾಯಿಗಳು) ಈ ಎಣಿಯನ್ನು ನಡೆಸಿಕೊಂಡು ಹೋಗುವ ವೆಚ್ಚವೂ ಕಡಿಮೆ ಎಂದು ವಾಟರ್ ಸೀರ್ ಕೂಟ ಹೇಳಿಕೊಂಡಿದೆ. ಅಂದಹಾಗೆ ಈ ಹಮ್ಮುಗೆ ಮಂದಿ ದೇಣಿಗೆ (Crowd Funding) ಪಡೆದುಕೊಂಡು ತಯಾರಾಗುತ್ತಿದೆ. ಹಸನಾದ ಕುಡಿಯುವ ನೀರಿನ ಕೆಲಸಕ್ಕೆ ಫೇಸ್‌ಬುಕ್ ಮುಂತಾದ ಸಾಮಾಜಿಕ ಕೂಡತಾಣಗಳ ಮೂಲಕ ಪ್ರಚಾರ ನೀಡಿ ಮಂದಿ ದೇಣಿಗೆ ಪಡೆಯಲಾಗುತ್ತಿದೆ. ಆದಷ್ಟು ಬೇಗ ಇಂತಹ ಒಳ್ಳೆಯ ಕೆಲಸಗಳು ಕುಡಿಯುವ ನೀರು ಪಡೆಯಲು ಕಶ್ಟಪಡುತ್ತಿರುವ ಮಂದಿಯ ಬದುಕಿಗೆ ದಾರಿ ಮಾಡಿಕೊಡಲಿ.

 

Bookmark the permalink.

Comments are closed.