ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ 1 ನೇ ಬಹುಮಾನ ಪಡೆದ ಬರಹ)

ಡಾ.ಶಿಶಿರ ಎಸ್ ರಾನಡೆ.

ಪೀಠಿಕೆ:
​ಭಾರತೀಯ ವೈದ್ಯಶಾಸ್ತ್ರದ ಪಿತಾಮಹರಾದ ಸುಶ್ರುತ, ಚರಕ ಮುಂತಾದವರ ಕಾಲದಿಂದ ಇಂದಿನವರೆಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಗಳು ಕಂಡುಬಂದಿವೆ.  ​ ನಾಡಿಶಾಸ್ತ್ರ, ವಾತ, ಪಿತ್ತ, ಕಫ ಈ ರೀತಿಯ ಪರಿಕಲ್ಪನೆಗಳ ಭದ್ರ ಬುನಾದಿಯ ಮೇಲೆ ಬೆಳೆದುನಿಂತ ವೈದ್ಯಶಾಸ್ತ್ರ ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತರ್ಕಕ್ಕೂ  ಮೀರಿದ ಚಿಕಿತ್ಸೆಯನ್ನು  ರೋಗಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.  ಅಂದಿನ ಮತ್ತು ಇಂದಿನ ನಡುವೆ ಬಹಳಷ್ಟು ಬದಲಾವಣೆಗಳನ್ನು ಕಂಡಂತಹ ಈ ಕ್ಷೇತ್ರ ಎಲ್ಲಾ ರೀತಿಯ ಊಹಾಪೋಹಗಳು ಹಾಗೂ ತಪ್ಪು ಪರಿಕಲ್ಪನೆಗಳನ್ನು ಅಲ್ಲಗೊಳಿಸಿ ಇಂದು “ಸಾಕ್ಷ್ಯಾಧಾರಿತ ವೈದ್ಯಕೀಯ ವಿಜ್ಞಾನ” ಎನ್ನುವ ಹಂತಕ್ಕೆ ಬೆಳೆದು ನಿಂತಿದೆ.

​ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಪ್ರಚಲಿತವಿರುವ ತಂತ್ರಜ್ಞಾನದ ಮಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಚಿರಪರಿಚಿತವಾಗಿರುತ್ತದೆ.  ಒತ್ತಡದ ಜೀವನ ಶೈಲಿ, ಅವಸರದ ಬದುಕು, ಪರಿಸರ ಹಾಗೂ  ಆಹಾರ ಕ್ರಮಗಳಲ್ಲಾದ ಬದಲಾವಣೆಗಳು ಇವೆಲ್ಲವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೋಗಕಾರಕಗಳೇ ಆಗಿವೆ.  ಇಂದು ಇವೆಲ್ಲವನ್ನೂ ಮೀರಿ ಬದುಕಲು ವೈದ್ಯಕೀಯ ಕ್ಷೇತ್ರದಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿವೆ  ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯೂ ಇದೆ. ಅದರಲ್ಲಿ  ಕೆಲವನ್ನು ಇಲ್ಲಿ ವಿಮರ್ಶಿಸಲಾಗಿದೆ.

ಶ್ವಾಸಕೋಶದ ಕಾಯಿಲೆಯ ಔಷಧಿಗಳು – ಸ್ಮಾರ್ಟ್ ಇನ್‍ಹೇಲರ್ ಗಳು :
inhaler

(ಚಿತ್ರ: propellerhealth.com)

ಅಸ್ತಮಾ ಎನ್ನುವ ಕಾಯಿಲೆಗೆ ಉಸಿರಾಟದ ಪಂಪುಗಳ ಮೂಲಕ ಔಷಧಿಯನ್ನು ಒದಗಿಸಬಹುದು.  ಈ ರೀತಿ ಮಾಡುವುದರಿಂದ ಶೇಕಡ 90 ರಿಂದ 94.1 ರಷ್ಟು ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ.  ಆದರೆ ಔಷಧಿ ಪ್ರಮಾಣದ ವ್ಯತ್ಯಯ ಅಥವಾ ರೋಗಿಗಳು ಸರಿಯಾಗಿ ಔಷಧಿಗಳನ್ನು ಬಳಸದೇ ಇರುವ ಕಾರಣಗಳಿಂದ ಶೇಕಡ 50 ರಷ್ಟು ರೋಗನಿಯಂತ್ರಣದ ಸಮಸ್ಯೆ ಎದುರಾಗುತ್ತಿದೆ.  ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಇನ್‍ಹೇಲರ್‍ಗಳು, ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಮೊಬೈಲ್ ಫೋನ್‍ಗಳಿಗೆ ಅಳವಡಿಸಿ ಔಷಧಿಯ ಪ್ರಮಾಣ ಹಾಗೂ ಸಮಯಗಳನ್ನು ನಿಗಧಿಪಡಿಸಿ ರೋಗಿಯು ಸರಿಯಾದ ವಿಧಾನದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.

ರೋಬೋಟಿಕ್ ಸರ್ಜರಿ (ಯಂತ್ರಮಾನವನ ಸಹಾಯದ ಶಸ್ತ್ರ ಚಿಕಿತ್ಸೆ):
robotic surgery

 (ಚಿತ್ರ: uchealth.com)

ಈ ವಿಧಾನವನ್ನು ಅನುಸರಿಸಿ ಇಂದು ಶಸ್ತ್ರಚಿಕಿತ್ಸಕರು ಅತೀ ಕ್ಲಿಷ್ಟವಾದ ಅಥವಾ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾಯಿಲೆಗಳಿಗೆ ಶ್ರಮವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.  ಆದರೆ ಇದು ಯಂತ್ರ ಮಾನವನೇ ಪೂರ್ತಿಯಾಗಿ ಮಾಡುವ ಶಸ್ತ್ರಚಿಕಿತ್ಸೆ ಹಾಗೂ ಇದಕ್ಕೆ ವೈದ್ಯರ ಅವಶ್ಯಕತೆ ಇರುವುದಿಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿ ಇದೆ.   ಇದು ಒಂದು ಶಸ್ತ್ರಚಿಕಿತ್ಸಾ ಸಾಧನವಾಗಿದ್ದು ವೈದ್ಯರೇ ಇದನ್ನು ಬಳಸಿ ದೂರದಲ್ಲಿ ಕುಳಿತು ಸಣ್ಣರಂದ್ರಗಳ ಮೂಲಕ ನೀಡುವ ಚಿಕಿತ್ಸೆಯಾಗಿದೆ.  ಮೊದಲು ಶಸ್ತ್ರಚಿಕಿತ್ಸೆ ನೀಡಬೇಕಾದ ರೋಗಿಗೆ ಅರವಳಿಕೆಯ ಔಷಧಿಗಳನ್ನು ನೀಡಲಾಗುತ್ತದೆ.

ನಂತರ ರೋಗಿಯ ನಿರ್ಧಿಷ್ಟವಾದ ದೇಹದ ಭಾಗದ ಮೇಲೆ ರೋಬೋ ಅಥವಾ ಯಂತ್ರಮಾನವನನ್ನು ಅಳವಡಿಸಲಾಗುತ್ತದೆ.  ಉದಾಹರಣೆ ಹೊಟ್ಟೆಯ ಭಾಗ, ಎದೆಯಭಾಗ, ಕುತ್ತಿಗೆ ಇತ್ಯಾದಿ.  ನಂತರ ಶಸ್ತ್ರಚಿಕಿತ್ಸಕನು ಇನ್ನೊಂದು ಕೋಣೆಯಲ್ಲಿ ಕುಳಿತು ಕಂಪ್ಯೂಟರ್ ಪರದೆಯ ಸಹಾಯದಿಂದ ಈ ಯಂತ್ರದ ಚಲನವಲನಗಳನ್ನು ನಿಯಂತ್ರಿಸುತ್ತಾನೆ.  ಈ ಯಂತ್ರಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಕೈಗಳಿದ್ದು, ಅದರ ಕೆಲಸಗಳನ್ನು ನುರಿತ ವೈದ್ಯರು ಕೇವಲ ತಮ್ಮ ಕೈಬೆರಳುಗಳಲ್ಲಿ ಕಂಪ್ಯೂಟರ್‍ನ  ಜಾಯ್‍ಸ್ಟಿಕ್‍ನ ಸಹಾಯದಿಂದ ನಿಯಂತ್ರಿಸಬಹುದಾಗಿದೆ.  ರೋಗವಿರುವ ಅಂಗಾಂಗಗಳು ನಾಲ್ಕರಿಂದ ಹತ್ತು ಪಟ್ಟು ದೊಡ್ಡದಾಗಿ ಕಾಣುವ ಕಾರಣ ಅತೀ ಸೂಕ್ಷ್ಮವಾದ ಕಾಯಿಲೆಗಳ ಶಸ್ತ್ರಚಿಕಿತ್ಸೆಯನ್ನು ಸಲೀಸಾಗಿ ನಡೆಸಬಹುದು. ಇಂದು ಇಂಟರ್‍ನೆಟ್ ತಂತ್ರಜ್ಞಾನವನ್ನು ಬಳಸಿ, ಒಂದು ಊರಿನಲ್ಲಿದ್ದು ಇನ್ನೊಂದು ಊರಿನಲ್ಲಿರುವ ರೋಗಿಗಳಿಗೆ ರೋಬೊಟಿಕ್ ಸರ್ಜರಿ ನಡೆಸಬಹುದಾಗಿದೆ.  ಇದರಿಂದ ಸಾಮಾನ್ಯ ಜನರಿಗೂ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ.

ದೂರಸಂವೇದಿ ವೈದ್ಯಶಾಸ್ರ್ತ(Tele-Medicine / Telehealth ) :
telehealth

(ಚಿತ್ರ: medcitynews.com)

ಇಂದು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಇನ್ನೊಂದು ಮೂಲೆಯಲ್ಲಿರುವ ರೋಗಿಯೊಂದಿಗೆ ಸುಲಭವಾಗಿ ಸಂಪರ್ಕ ಬೆಳೆಸಿ, ರೋಗ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಇರುವುದು ಸಹಜ.  ಇಂತಹ ಸಂದರ್ಭಗಳಲ್ಲಿ ದೂರಸಂವೇದಿ ತಂತ್ರಜ್ಞಾನದ ಮೂಲಕ ರೋಗಿ ಇರುವಲ್ಲಿಂದಲೇ ಇನ್ನೊಂದು ಊರಿನಲ್ಲಿರುವ ನುರಿತ ವೈದ್ಯರನ್ನು ಸಂಪರ್ಕಿಸಿ ರೋಗನಿರ್ಣಯದ ಬಗ್ಗೆ ಚರ್ಚಿಸಿ, ಸೌಲಭ್ಯಗಳಿದ್ದಲ್ಲಿ ಅದೇ ಸ್ಥಳದಲ್ಲಿ ಚಿಕಿತ್ಸೆ ಒದಗಿಸಬಹುದು ಅಥವಾ ಸೌಲಭ್ಯದ ಕೊರತೆ ಇದ್ದಲ್ಲಿ ಉನ್ನತ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ತಕ್ಷಣ ಕಳುಹಿಸಬಹುದು.  ಇದರಿಂದ ರೋಗ ಪರೀಕ್ಷಾ ವಿಳಂಬ ದೂರವಾಗಿ ರೋಗಿಗಳಿಗೆ ತಕ್ಕ ಸಮಯದಲ್ಲಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯ. ಇದರಿಂದ ‘ ಪ್ರಪಂಚವೇ ಒಂದು ಪುಟ್ಟಗ್ರಾಮ ಎನ್ನುವ ತರ್ಕಕ್ಕೆ ಪುಷ್ಠಿ ನೀಡಿದಂತಾಗುತ್ತದೆ.

ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳು:
thumb_dc4979f47dc6b47aea064c829ef589e4

(ಚಿತ್ರ: yonsei.ac.kr)

ದೇಹದಲ್ಲಿ ತಾನಾಗಿಯೇ ಕರಗುವ ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳನ್ನು ತಲೆಬುರುಡೆಯು ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಮೇಲೆ ಅಳವಡಿಸಬಹುದಾಗಿದೆ.  ಇವು ಅಪಸ್ಮಾರ, ಪಾರ್ಕಿನ್ ಸೋನಿಸಂ ನಂತಹ ರೋಗಗಳಿಗೆ ರಾಮಬಾಣವಾಗಿರುವುದಲ್ಲದೆ, ಈ ಚಿಕಿತ್ಸೆಯಿಂದ ಮೆದುಳಿನಲ್ಲಾಗುವ  ಉಷ್ಣತೆ ಮತ್ತು ಒತ್ತಡದ ಬದಲಾವಣೆಗಳನ್ನು ಅಳೆಯಬಹುದಾಗಿದೆ.  ಚಿಕಿತ್ಸೆಯ ನಂತರ ಅವಶ್ಯಕತೆ ಇಲ್ಲದಿರುವಾಗ ಈ ಉಪಕರಣಗಳು ತಾನಾಗಿಯೇ ದೇಹದಲ್ಲಿ ಕರಗಿಬಿಡುತ್ತವೆ ಮತ್ತು ಶಸ್ತ್ರಚಿಕಿತ್ಸೆ ಮತ್ತೊಮ್ಮೆ ನಡೆಸಿ ತೆಗೆಯುವ ಅವಶ್ಯಕತೆ ಇರುವುದಿಲ್ಲ.

3ಡಿ ಅಚ್ಚುಗಾರಿಕೆ (3D printing):

5647122840-prostetic-3D-printing(ಚಿತ್ರ: healthtechzone.com)

​ಇದೊಂದು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಹಯೋಗದ ಕೆಲಸಕ್ಕೆ ಉತ್ತಮ ನಿದರ್ಶನವಾಗಿದೆ.  ಈ ತಂತ್ರಜ್ಞಾನವನ್ನು ಬಳಸಿ ರೋಗಿಯ ದೇಹದ ಅಂಗಾಂಗಗಳ  ಕೃತಕ ಮಾದರಿಯನ್ನು ತಯಾರಿಸಬಹುದಾಗಿದೆ.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಈ ಅಂಗಾಂಗಗಳನ್ನು ಅಳವಡಿಸಬಹುದಾಗಿದೆ.  ಉದಾಹರಣೆ: ಕೃತಕ ಕಾಲುಗಳು, ಕೃತಕ ಕೈಗಳು ಇತ್ಯಾದಿ. 3ಡಿ ಅಚ್ಚುಗಾರಿಕೆಯ ಸೌಲಭ್ಯವನ್ನು ಮುಖದ ಅಸ್ತಿಪಂಜರದ ಅಚ್ಚು ತೆಗೆಯಲು ಹೆಚ್ಚಾಗಿ ಬಳಸುತ್ತಾರೆ.  ರಸ್ತೆ ಅಪಘಾತವೋ ಅಥವಾ ಕೆಳಗೆ ಬೀಳುವುದರಿಂದ ಆದ ಮುಖದ ಮೂಳೆಗಳು ಮುರಿತಗೊಂಡಾಗ 3ಡಿ ಅಚ್ಚುಗಾರಿಕೆಯ ತಂತ್ರಜ್ಞಾನವನ್ನು ಬಳಸಿ, ಮುಖ್ಯವಾಗಿ ಕಣ್ಣಿನ ಸುತ್ತಲಿರುವ ಮೇಲ್ದವಡೆಯ ಮೂಗಿನ ಅಥವಾ ಕೆಳದವಡೆಯ ಮೂಳೆಗಳ ಮಾದರಿಯನ್ನು ತಯಾರಿಸಬಹುದು.

ಮುಖದ ಒಂದು ಬದಿಯ ಭಾಗದ ರೀತಿಯಲ್ಲಿಯೇ ಇನ್ನೊಂದು ಬದಿಯ ಅಚ್ಚನ್ನು ತಯಾರಿಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದ ಮೂಳೆಗಳನ್ನು ಜೋಡಿಸುವಾಗ ಬಳಸಬಹುದು. ಆದ್ದರಿಂದಲೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ಈ ತಂತ್ರಜ್ಞಾನವನ್ನು ಬಹಳಷ್ಟು ಬಳಸಲಾಗುತ್ತದೆ.  ಅಷ್ಟೇ ಅಲ್ಲದೆ 3ಡಿ ಅಚ್ಚುಗಾರಿಕೆಯನ್ನು ಬಳಸಿ ಔಷಧಿ ಉತ್ಪಾದನೆಯನ್ನು ಮಾಡಬಹುದಾಗಿದೆ.  ಒಂದಕ್ಕಿಂತ ಹೆಚ್ಚು ಔಷಧಿಗಳನ್ನು ರೋಗಿಗೆ ನೀಡುವ ಅವಶ್ಯಕತೆ ಇದ್ದಲ್ಲಿ ಅದನ್ನು ಪದರಗಳ ರೀತಿ ಕ್ರೂಢೀಕರಿಸಿ ಒದಗಿಸಬಹುದಾಗಿದೆ.

ಕೃತಕ ಅಂಗಾಂಗಗಳ ಜೈವಿಕ ಅಚ್ಚುಗಾರಿಕೆ:
3ಡಿ ಅಚ್ಚುಗಾರಿಕೆಯ ರೀತಿಯಲ್ಲಿಯೇ ಜೈವಿಕ ಅಚ್ಚುಗಾರಿಕೆ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಸಾಧ್ಯತೆ ಇದೆ.  ಅಂಗಾಂಗ ಕಸಿ ತಂತ್ರಜ್ಞಾನವು ಎಲ್ಲರಿಗೂ ತಿಳಿದ ವಿಷಯ.  ಆದರೆ ಅದಕ್ಕೆ ತನ್ನದೇ ಆದ ನಿರ್ಬಂಧಗಳಿವೆ.  ಬೇರೆ ವ್ಯಕ್ತಿಯ ಅಂಗಾಂಗಗಳನ್ನು ದೇಹವು ತಿರಸ್ಕರಿಸುವ  ಸಾಧ್ಯತೆಯೇ ಹೆಚ್ಚು.  ಆದರೆ ಜೈವಿಕ ಅಚ್ಚುಗಾರಿಕೆಯ ತಂತ್ರಜ್ಞಾನದಿಂದ ರೋಗಿಯ ರಕ್ತನಾಳಗಳು, ಅಂಡಾಶಯಗಳು, ಮೇದೋಜೀರಕ ಗ್ರಂಥಿ ಮುಂತಾದ ಅಂಗಾಂಗಗಳನ್ನು ಬೆಳೆಸಬಹುದಾಗಿದೆ.  ಮೊದಲು ಕೇವಲ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಚರ್ಮವನ್ನು ಬೆಳೆಸುವ ತಂತ್ರಜ್ಞಾನವು ಇಂದು ಮುಂದುವರಿದು  ಬೇರೆ ಅಂಗಾಂಗಗಳನ್ನು ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊದಲು ಮೇಲೆ ತಿಳಿಸಿದ ಕೆಲವು ಅಂಗಾಂಗಗಳ ಮಾದರಿಗಳನ್ನು ತಯಾರಿಸಲಾಗುತ್ತದೆ.  ನಂತರ ಅವುಗಳನ್ನು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ.  ದೇಹದಲ್ಲಿ ಹೊಸ ಅಂಗಾಂಗಗಳು ರೋಗಗ್ರಸ್ಥವಾದ ಹಳೆಯ ಅಂಗಾಂಗಗಳ ಕಾರ್ಯಗಳನ್ನು ಕ್ರಮೇಣ ವಹಿಸಿಕೊಳ್ಳಲು ಆರಂಭಿಸುತ್ತವೆ.  ಅಲ್ಲಿಯವರೆಗೂ ದೇಹದ ಒಳಭಾಗದಲ್ಲಿ ಈ ಕೃತಕ ಅಂಗಾಂಗಗಳು ಬೆಳೆಯುತ್ತಿರುತ್ತವೆ.  ದೇಹದ ಒಳಗೇ ಅಂಗಾಂಗಗಳು ಬೆಳೆಯುವ ಕಾರಣ, ತಿರಸ್ಕರಿಸುವ (ರಿಜೆಕ್ಷನ್) ಪ್ರಮೇಯ ಕಡಿಮೆಯಾಗಿ ಇದೊಂದು ಮನುಜ ಸಂಕುಲಕ್ಕೆ ವರವಾಗುವ ಸಾಧ್ಯತೆ ಇದೆ.

ನೈಜ ಚಿತ್ರಣ ತಂತ್ರಜ್ಞಾನ (ವರ್ಚುವಲ್ ರಿಯಾಲಿಟಿ):
virtual reality medical

(ಚಿತ್ರ: wear-studio.com)

ಈ ತಂತ್ರಜ್ಞಾನದಿಂದ, ಕಂಪ್ಯೂಟರ್ ಪರದೆಯ ಮೇಲೆಯೇ ಮಾನವನ ಅಂಗಶಾಸ್ತ್ರದ (ದೇಹ ರಚನೆ)  ಸಂಪೂರ್ಣ ಚಿತ್ರಣವನ್ನು ನೈಜ ರೀತಿಯಲ್ಲಿ ಮೂಡಿಸಬಹುದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ  ಇದರ ಉಪಯೋಗ ಬಹಳಷ್ಟಿದೆ. ವೈದ್ಯಕೀಯ  ಕಾಲೇಜುಗಳಲ್ಲಿ ನೈಜ ಚಿತ್ರಣ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳು ಮಾನವನ ದೇಹದ ಸಹಾಯವಿಲ್ಲದೇ ದೇಹರಚನಾ ಶಾಸ್ತ್ರವನ್ನು ಕಲಿಯಬಹುದಾಗಿದೆ.  ಅದಲ್ಲದೇ ಯಾವುದೇ ರೋಗಿಯ ಸಿ.ಟಿ. ಅಥವಾ ಎಂ.ಆರ್.ಐ. ಚಿತ್ರಗಳನ್ನು ನೈಜಚಿತ್ರಣ ಯಂತ್ರದಲ್ಲಿ ಅಳವಡಿಸಿ, ರೋಗಿಯ ಕೃತಕ ದೇಹದ ಮಾದರಿ ಹಾಗೂ ಅವನಿಗಿರುವ  ಕಾಯಿಲೆಗಳನ್ನು ಪರದೆಯ ಮೇಲೆ ಮೂಡಿಸಬಹುದು.

ಇದರಿಂದ ರೋಗಿಗೆ ಗಂಟು(ಗಡ್ಡೆ) ಯಾವ ಭಾಗದಲ್ಲಿದೆ,  ಅದರ ಸುತ್ತಲಿರುವ ಅಂಗಾಂಗಗಳು ಯಾವುವು? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಗಡ್ಡೆಯನ್ನು ತೆಗೆಯಬೇಕು ಹಾಗೂ ಆ ಸಮಯದಲ್ಲಿ ಎದುರಾಗುವ ತೊಂದರೆಗಳೇನು? ಯಾವ ದೊಡ್ಡ ರಕ್ತನಾಳಗಳು ಗಡ್ಡೆಯ ಸುತ್ತ ಇವೆ.  ಮುಂತಾದ ಅನೇಕ  ಮಾಹಿತಿಗಳನ್ನು ಶಸ್ತ್ರಚಕಿತ್ಸೆಯ ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರು ಕೃತಕ ಮಾದರಿಯ ಮೇಲೆ ಪ್ರಯೋಗಾತ್ಮಕ ಶಸ್ತ್ರಚಕಿತ್ಸೆಯನ್ನು ನಡೆಸಲು ಸಾಧ್ಯವಿದೆ.  ಇದರಿಂದಾಗಿ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆಗಬಹುದಾದ ತೊಂದರೆಗಳನ್ನು ನಿಯಂತ್ರಿಸಬಹುದಾಗಿದೆ.

ಕ್ಯಾಪ್ಸೂಲ್ ನೋಟ:

capsule-endoscopy1(ಚಿತ್ರ: medgadget.com)

ಹೊಟ್ಟೆ, ಕರುಳು, ಪಿತ್ತನಾಳ ಇವುಗಳ ರೋಗ ಪತ್ತೆ ಹಾಗು ಚಿಕಿತ್ಸೆಗೆ ಉದರದರ್ಶಕ ಉಪಕರಣಗಳನ್ನು ಬಳಸುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈಗ ಅದಕ್ಕೂ ಮೇಲಾಗಿ ಒಂದು ಸಣ್ಣ ನಳಿಕೆ ಗುಳಿಗೆಯನ್ನು ಬಳಸಿ ಜಠರ ಹಾಗು ಕರುಳಿನ ರೋಗಗಳನ್ನು ಸುಲಭವಾಗಿ ಪತ್ತೆಮಾಡಬಹುದು. ಈ ಸಣ್ಣ ನಳಿಕೆ ಗುಳಿಗೆಯು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಗಣಕಯಂತ್ರ ದೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಗುಳಿಗೆಯ ಒಂದೊಂದು ತುದಿಗಳಲ್ಲಿಯೂ ಬೆಳಕಿನ ಒಂದು ಆಕರ ಮತ್ತು ಛಾಯಾಚಿತ್ರಗ್ರಾಹಕ ಒಂದನ್ನು ಅಳವಡಿಸಲಾಗಿರುತ್ತದೆ.capsule

(ಚಿತ್ರ: tgastro.com)

ರೋಗಿಯು ಈ ಗುಳಿಗೆಯನ್ನು ನುಂಗಿದ ನಂತರ 24 ರಿಂದ 48 ಗಂಟೆಗಳ ವರೆಗೂ ಹೊಟ್ಟೆ ಹಾಗೂ ಕರುಳಿನ ಚಿತ್ರಗಳನ್ನು ನಿರಂತರವಾಗಿ ತೆಗೆದು ಅದನ್ನು ಗಣಕಯಂತ್ರಕ್ಕೆ ರವಾನಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಗುಳಿಗೆಯು ಮಲದೊಂದಿಗೆ ವಿಸರ್ಜಿಸಲ್ಪಡುವ ಕಾರಣ ರೋಗಿಯು ಆಸ್ಪತ್ರೆಯಲ್ಲಿ ಭರ್ತಿಯಾಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಈ ಗುಳಿಗೆಯ ಸಹಾಯದಿಂದ ಕರುಳಿನಲ್ಲಾಗುವ ರಕ್ತಸ್ರಾವ, ಹುಣ್ಣುಗಳು ಉರಿ ಊತ ಈರೀತಿ ಅನೇಕ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಇದರಿಂದ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

ಕರುಳಿನ ಜೀವಕೋಶಗಳ ಹಾಗೂ ಕರುಳಿನ ಸೂಕ್ಷ್ಮಾಣುಜೀವಿಗಳ ಕಸಿ:
ದೇಹದ ಅನೇಕ ಸಮಸ್ಯೆಗಳಿಗೆ ದೊಡ್ಡಕರುಳಿನಲ್ಲೇ ಕಾರಣ ಅಡಗಿದೆ ಎಂಬುದನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಪಚನಕ್ರಿಯೆ ಹಾಗು ಮಲ ವಿಸರ್ಜನೆ ಸರಿ ಇದ್ದರೆ ವ್ಯಕ್ತಿಯು ಸಾಮಾನ್ಯ ರೋಗಗಳಿಂದ ಮುಕ್ತವಾಗಿರುತ್ತಾನೆ ಎಂದೇ ಅರ್ಥ ಎಂದು, ಪುರಾತನ ಭಾರತೀಯ ವೈದ್ಯಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇಂದು ಅದರ ಆಧಾರದ ಮೇಲೆ ಸಂಶೋಧನೆಗಳು ನಡೆದಿವೆ.

ಈ ಸಂಶೋಧನೆಗಳಿಂದ ಆರೋಗ್ಯವಂತ ವ್ಯಕ್ತಿಯ ದೊಡ್ಡಕರುಳಿನ ಜೀವಕೋಶಗಳು ಅಷ್ಟೇ ಅಲ್ಲದೆ, ಅದರಲ್ಲಿರುವ ಅನೇಕ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪ್ರತ್ಯೇಕಿಸಿ, ಅದನ್ನು ಕರುಳು ಸಂಬಂಧೀ ರೋಗಿಗಳಿಗೆ ಕಸಿಮಾಡಿ ರೋಗ ಮುಕ್ತರನ್ನಾಗಿಸಬಹುದು ಎನ್ನುವ ಸತ್ಯಾಂಶ ತಿಳಿದುಬಂದಿದೆ. ಆದರೆ ಈ ಚಿಕಿತ್ಸೆಗೆ ತನ್ನದೇ ಆದ ನಿರ್ಬಂಧಗಳಿದ್ದರೂ ಕರುಳಿನ ಹುಣ್ಣು, ಉರಿಯೂತ, ಕರುಳಿನ ಇತರ ಸೋಂಕು ನಿವಾರಣೆಗಾಗಿ ಬಳಸಬಹುದಲ್ಲದೇ, ಪಾರ್ಕಿಂಸೋನಿಸಂ, ಮಾನಸಿಕ ತೊಂದರೆಗಳು, ಬೊಜ್ಜುತನ, ಅರ್ಬುದ ರೋಗ ಈ ರೀತಿ ಅನೇಕ ರೋಗಗಳಿಗೆ ಚಿಕಿತ್ಸೆಗಾಗಿ ಪರೀಕ್ಷೆಗಳು ನಡೆದಿವೆ. ಇವುಗಳ ಪಲಿತಾಂಶದ ಮೇಲೆ ಬಹಳಷ್ಟು ರೋಗಗಳಿಗೆ ಮುಕ್ತಿ ಸಿಗಲಿದೆ.

ಕಣ್ಣಿನ ತೊಂದರೆಗಳಿಗೆ ಪರಿಹಾರಗಳು:

optometrist-giving-man-eye-drops(ಚಿತ್ರ: medicalnewstoday.com)

ಕಣ್ಣು ಪೊರೆ ಎಂಬುದು ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಬರುವ ಕಾಯಿಲೆ. ಅದಕ್ಕೆ ದೊಡ್ಡ ಗಾಯದ ಶಸ್ತ್ರಚಿಕಿತ್ಸೆಯಿಂದ ಹಿಡಿದು ಅತಿ ಸಣ್ಣ ರಂಧ್ರದ ಮೂಲಕ ನಡೆಸುವ ಚಿಕಿತ್ಸೆಯ ವರೆಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇತ್ತೀಚೆಗೆ ಪೊರೆ ಕರಗುವಂತಹ ಔಷಧಿಯ ಹನಿಗಳನ್ನು ಕಂಡುಹಿಡಿಯಲಾಗುತ್ತಿದೆ. ಅದು ಮಾರುಕಟ್ಟೆಗೆ ಬಂದರೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಅದರಿಂದ ಆಗಬಹುದಾದ ತೊಂದರೆಗಳಿಂದ ರೋಗಿಯು ದೂರವೇ ಉಳಿದುಬಿಡಬಹುದು.

ಜೈವಿಕ ಕಣ್ಣು (Bionic Eye):

r0_0_800_600_w1200_h678_fmax(ಚಿತ್ರ : northerndailyleader.com)

ಕಣ್ಣು ಕಾಣದ ವ್ಯಕ್ತಿಗಳ ನರಮಂಡಲ ವ್ಯವಸ್ಥೆ ಸರಿ ಇದ್ದರೆ ಅವರಿಗೆ ಕನ್ನಡಕದ ರೂಪದಲ್ಲಿ ಈ ಕಣ್ಣುಗಳನ್ನು ಬಳಸಬಹುದಾಗಿದೆ. ಇದರಲ್ಲಿ ಕೃತಕ ಕ್ಯಾಮರ ಒಂದನ್ನು ಕನ್ನಡಕದ ಮೇಲೆ ಅಳವಡಿಸಿ ತಂತು ರಹಿತ ಸಂದೇಶ ರವಾನಿಸುವ ಮಾಧ್ಯಮದ ಮೂಲಕ (ಬ್ಲೂಟೂತ್) ಕಣ್ಣಿನ ನರದ ಮೇಲೆ ಅಳವಡಿಸಲಾಗುವ ಸಂದೇಶ ಗ್ರಾಹಕಕ್ಕೆ ತಲುಪುವಂತೆ ಮಾಡಲಾಗುತ್ತದೆ .ಚಿತ್ರಗಳು ನೈಸರ್ಗಿಕ ಕಣ್ಣುಗಳಲ್ಲಿ ಮೂಡುವಂತೆ ಇರದಿದ್ದರೂ ವ್ಯಕ್ತಿಯು ಆ ಚಿತ್ರಗಳನ್ನು ಗ್ರಹಿಸಬಹುದಾಗಿದೆ. ಮೆದುಳು ಆ ಚಿತ್ರಗಳಿಗೆ ಹೊಂದಾಣಿಕೆ ಹೊಂದಿದ ನಂತರ ವ್ಯಕ್ತಿಯು ದೈನಂದಿಕ ಚಟುವಟಿಕೆಗಳನ್ನು ನಡೆಸಬಹುದೆಂದು ಊಹಿಸಲಾಗಿದೆ. ಈ ವಿಷಯದ ಮೇಲೆ ಇನ್ನಷ್ಟು ಪರೀಕ್ಷೆಗಳು ಜಾರಿಯಲ್ಲಿವೆ.

ನಿಖರ ಔಷಧಿಗಳು:
ರೋಗಿಯ ಜೀವ ಕೋಶದಲ್ಲಿರುವ ಅತೀ ಸೂಕ್ಷ್ಮವಾದ ಅನುವಂಶಿಕ ರೂಪವನ್ನು ಆಧರಿಸಿ ( ಜೆನೆಟಿಕ್ ಮೇಕಪ್) ಕ್ಯಾನ್ಸರ್ ರೋಗ, ಸಂದಿವಾತ ರೋಗ ಮೊದಲಾದವುಗಳಿಗೆ ನಿರ್ಧಿಷ್ಟವಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.  ಇಷ್ಟೇ ಅಲ್ಲದೆ ವೈದ್ಯಕೀಯ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನದಿಂದ ಆರೋಗ್ಯ ಯಂತ್ರಗಳಲ್ಲಿ ಪ್ರಗತಿಯಾಗಲಿದೆ.  ಇಂದು ಪ್ರಸ್ತುತವಿರುವ ನಾಡಿ, ಎದೆಬಡಿತ ಮಾಪನಗಳಷ್ಟೇ ಅಲ್ಲದೆ ಮುಂದೆ ಇ.ಸಿ.ಜಿ. ಅಥವಾ ಎದೆಪಟ್ಟಿ, ಸಕ್ಕರೆ ಪ್ರಮಾಣ ನಿಯಂತ್ರಕಗಳು ರಕ್ತದ ಕೊಬ್ಬು ಯಂತ್ರಣಗಳು ಇತ್ಯಾದಿ ಮಾರುಕಟ್ಟೆಗೆ ಬರಲಿವೆ.

ಜೀನ್ ಥೆರಪಿ -ಅನುವಂಶೀಯ ಧಾತು ಚಿಕಿತ್ಸೆ:
ದೇಹದ ಒಂದು ಜೀವಕೋಶವೆಂದರೇ, ಅದು ಅತಿಸೂಕ್ಷ್ಮ. ಅದರೊಳಗೆ ಕೇಂದ್ರ ಭಾಗದಲ್ಲಿರುವ ನ್ಯೂಕ್ಲಿಯಸ್ ಅಥವಾ ಗರ್ಭವನ್ನು ವಿಭಜಿಸಿ ಅದರ ರಚನಾ ಭಾಗಗಳಾದ ಡಿ ಎನ್ ಎ ಮತ್ತು ಆರ್ ಎನ್ ಎ ಗಳನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಅನುವಂಶೀಯವಾಗಿ ಬರುವ ಕಾಯಿಲೆಗಳು ಡಿಎನ್ಎ ಯ ಭಾಗಗಳಿಂದಲೇ ಬರುತ್ತವೆ ಎಂಬುದು ಕೂಡ ಹೊಸ ವಿಷಯವೇನಲ್ಲ. ಅಂದರೆ ಡಿಎನ್ಎ ಯನ್ನು ವಿಭಜಿಸಿ ಅದರ ಅಮೈನೋ ಆಸಿಡ್ ಗುಂಪುಗಳನ್ನು ಜೀನ್ ಗಳೆಂದು ಕರೆಯಲಾಯಿತು. ಈ ಜೀನ್‍ಗಳು ದೇಹದ ನಿರ್ದಿಷ್ಟ ಕಾರ್ಯ ವೈಖರಿಗಳನ್ನು ನಿರ್ಧರಿಸುತ್ತವೆ.

ಇದರ ಆಧಾರದ ಮೇಲೆ ಅನುವಂಶೀಯ ಕಾಯಿಲೆಗಳು ಪೋಷಕರಿಂದ ಅಥವಾ ಕುಟುಂಬದವರಿಂದ ಮಕ್ಕಳಿಗೆ ಬರುವ ವಿಧಾನ ಹಾಗೂ ಅವುಗಳನ್ನು ಗುರಿಯಿಟ್ಟುಕೊಂಡು ನೀಡಬಹುದಾದಂತಹ ಅನೇಕ ರೀತಿಯ ಚಿಕಿತ್ಸೆಗಳನ್ನು ಸಂಶೋಧಿಸಲಾಗಿದೆ, ಹಾಗೂ ಇಂದಿಗೂ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಅರ್ಬುದ ರೋಗಕ್ಕೆ ಈ ಸಂಶೋಧನೆಗಳು ವರವಾಗಲಿವೆ. ಇದೇ ತತ್ವವನ್ನು ಬಳಸಿ ಅನುವಂಶೀಯ ಗುರುತು ತಿದ್ದುಪಡಿ ತಂತ್ರಜ್ಞಾನವನ್ನು ಬೆಳೆಸಲಾಗಿದೆ.

ಅನುವಂಶಿಕ ಗುರುತು ತಿದ್ದುಪಡಿ ತಂತ್ರಜ್ಞಾನ (Gene editing technology):
​ಈ ತಂತ್ರಜ್ಞಾನದಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳನ್ನು ಕೃತಕ ವೈರಸ್‍ಗಳ ಸಹಾಯದಿಂದ ನಾಶಪಡಿಸಬಹುದಾಗಿದೆ.  ಬ್ಯಾಕ್ಟೀರಿಯಾದ ಜೀವಕೋಶಗಳ ಒಳಗೆ ವೈರಸ್ ಜೀವಕೋಶಗಳನ್ನು ಕಳಿಸಿ, ಬ್ಯಾಕ್ಟೀರಿಯಾಗಳ ಮೂಲ ಅನುವಂಶಿಕ ರಚನೆಯನ್ನು ಬೇಧಿಸಿ (ಡಿಎನ್‍ಎ), ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ತಂತ್ರಜ್ಞಾನವು ಹೊರಹೊಮ್ಮಲಿದೆ.  ಇದರಿಂದ ಮಾನವನ ಬದ್ಧವೈರಿಯಾಗಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು:
ಕ್ಯಾನ್ಸರ್ ಎಂದರೆ ಎಷ್ಟು ಭೀಕರ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೆ ಈ ರೋಗದಿಂದ ವ್ಯಕ್ತಿ ಉಳಿಯಲು ಸಾಧ್ಯವೇ ಇಲ್ಲ ಎಂಬ ತಪ್ಪು ಪರಿಕಲ್ಪನೆಯೂ ಇದೆ. ಇಂದು ಅತ್ಯಾಧುನಿಕ ರೋಗಪತ್ತೆ ಮಾಡಬಹುದಾದಂತಹ ವಿಧಾನಗಳು ಹಾಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ಕ್ಯಾನ್ಸರ್ ರೋಗ ವನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಹಿಂದೆಲ್ಲಾ ರೋಗ ನಿಯಂತ್ರಿಸಲಾಗದಂತಹ ಹಂತದಲ್ಲಿ ಬರುತ್ತಿದ್ದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯೊಂದೇ ಉತ್ತರವಾಗಿತ್ತು.

ಆದರೆ ಇಂದು ವಿಕಿರಣ ಚಿಕಿತ್ಸೆ, ಜೀನ್ ಥೆರಪಿ ಅಥವಾ ಅನುವಂಶೀಯ ಧಾತು ಚಿಕಿತ್ಸೆ ಅಲ್ಲದೇ, ಅನೇಕ ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಶಸ್ತ್ರಚಿಕಿತ್ಸೆ ಇಲ್ಲದೇ ರೋಗಿಯು ಗುಣಮುಖನಾಗುವ ಹಂತ ತಲುಪಿದೆ. ಅನೇಕ ವಿಧದ ಕ್ಯಾನ್ಸರ್ ರೋಗಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತವಾದಂತಹ ಚಿಕಿತ್ಸೆಯನ್ನು ನೀಡುವ ಮೂಲಕ ರೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿದೆ. ಇದು ಖಂಡಿತವಾಗಿಯೂ ಮಾನವ ಸಂಕುಲಕ್ಕೆ ಒಂದು ಹೊಸ ಆಶಾಕಿರಣ.

ಕೊನೆಯ ಮಾತು:
​ಮಾನವನು ದೇಹಶಾಸ್ತ್ರ, ಔಷಧಶಾಸ್ತ್ರ, ರೋಗಶಾಸ್ತ್ರಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ನಮ್ಮ ಊಹೆಗೂ  ಮೀರಿದ ಬದಲಾವಣೆಗಳು ದೇಹದಲ್ಲೂ ಆಗುತ್ತಿರುತ್ತವೆ. ತರ್ಕಕ್ಕೂ ಸಿಗಲಾರದ ರೋಗಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿರುತ್ತವೆ.  ಅದರೊಂದಿಗೆ ವೈದ್ಯಕೀಯ ತಂತ್ರಜ್ಞಾನವೂ ಬೆಳೆದು ರೋಗಗಳನ್ನು  ಹೋಗಲಾಡಿಸುವ ಪ್ರಯತ್ನವೂ ನಿರಂತರವಾಗಿ ಮುಂದುವರೆಯುತ್ತದೆ.  ವೈದ್ಯಕೀಯ ಶಾಸ್ತ್ರದ ತರ್ಕ ಹಾಗೂ ತಂತ್ರಜ್ಞಾನದ ಕೊಡುಗೆಗಳು, ಮತ್ತು ಇವೆರಡರ ಸಮ್ಮಿಲನದಿಂದ ಮನುಕುಲಕ್ಕೆ ಉತ್ತಮವಾದ ಆರೋಗ್ಯ ಭಾಗ್ಯ ಸಿಗುವುದರಲ್ಲಿ ಸಂದೇಹವಿಲ್ಲ.

Bookmark the permalink.

Comments are closed.

Comments are closed