ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System)

ಜಯತೀರ್ಥ ನಾಡಗೌಡ.

ಅಡಾಸ್ – ಕಳೆದ 10-12 ವರುಶಗಳಿಂದ ಆಟೋಮೊಬೈಲ್ ಕೈಗಾರಿಕೆಯಲ್ಲಿ ಈ ಹೆಸರು ಕೇಳದವರು ಅತಿ ವಿರಳ. ಚಕ್ರದಿಂದ ಎತ್ತಿನಗಾಡಿಯಾಗಿ, ಮುಂದೆ ಜುಮ್ಮನೆ ಸಾಗುವ ಕಾರು-ಬಸ್ಸು ಮುಂತಾದವುಗಳನ್ನು ನಿರ್ಮಿಸುತ್ತಲೇ ಹೋದ ಮನುಕುಲ, ಸಾರಿಗೆ ಏರ್ಪಾಟಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಲೇ ಸಾಗಿದೆ. ತನ್ನಿಂದ ತಾನೇ ಓಡುವ ಕಾರು ಬಳಸುವ ಯುಗದ ಹೊಸ್ತಿಲು ತಲುಪಿದ್ದೇವೆ. ಇದೆಲ್ಲವೂ ಅಡಾಸ್ ತಂತ್ರಜ್ಞಾನದ ಫಲ.

ನಮ್ಮಲ್ಲಿ ಹಲವು ಇಂಜಿನೀಯರ್, ತಂತ್ರಜ್ಞಾನಿಗಳಿಗೆ ಈ ಅಡಾಸ್ ಪದ ಹೊಸದೇನಲ್ಲ. ಇನ್ನೂ ಕೆಲವು ಕಾರು ಬಳಕೆದಾರರು ಈ ತಂತ್ರಜ್ಞಾನ ಬಳಸಿದ್ದರೂ ಅವರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆಟೋಮೊಬೈಲ್ ಉದ್ಯಮದ ಚಿತ್ರಣವನ್ನೇ ಬದಲು ಮಾಡಲಿರುವ ಈ ಹೊಸ ಚಳಕದ ಬಗ್ಗೆ ಅರಿಯೋಣ ಬನ್ನಿ. 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System) ಇದರ ಕಿರುರೂಪವೇ ಅಡಾಸ್(ADAS). ಸರಳವಾಗಿ ಕನ್ನಡದಲ್ಲಿ ಹೇಳಬೇಕೆಂದರೆ, ಗಾಡಿ ಓಡಿಸುಗನಿಗೆ ನೆರವಾಗಬಲ್ಲ ಒಂದು ಚೂಟಿ ಏರ್ಪಾಟು ಇದು.  ಇಂದು ಜಗತ್ತಿನಾದ್ಯಂತ ಓಡಾಡುವ ಬಹುತೇಕ ಎಲ್ಲ ಕಾರು,ಬಸ್ಸು,ಲಾರಿಗಳಲ್ಲಿ ಅಳವಡಿಸಲ್ಪಟ್ಟ ಹಲವಾರು ಏರ್ಪಾಟುಗಳಲ್ಲಿ ಗಣಕಗಳ ಬಳಕೆ ಮಾಡಲಾಗುತ್ತದೆ. ಈ ಎಲ್ಲ ಗಣಕಗಳಿಗೆ ಮಾಹಿತಿ ನೀಡಿ ಕಾರನ್ನು ಸರಾಗವಾಗಿ ಕೊಂಡೊಯ್ಯಲು ಹಲವು ಅರಿವುಕಗಳನ್ನು ಕಾರುಗಳಲ್ಲಿ ಜೋಡಿಸಲಾಗಿರುತ್ತದೆ. ಇದು ಕೂಡ ಅಡಾಸ್ ವ್ಯವಸ್ಥೆಯ ಒಂದು ಭಾಗವೇ.

ಎಷ್ಟೇ ಜಾಗರೂಕರಾಗಿದ್ದರೂ ಮನುಷ್ಯನು ಮಾಡುವ ತಪ್ಪುಗಳಿಂದ ಸಾರಿಗೆಯ ಅಪಘಾತ, ಅವಘಡಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸಕ್ಕಿಳಿದ ಆಟೋಮೊಬೈಲ್ ಉದ್ಯಮದವರು, ಅಡಾಸ್ ವಿಶೇಷತೆಗಳನ್ನು ಗಾಡಿಗಳಲ್ಲಿ ಬಳಸಿ ಸಾರಿಗೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಸಾಗಿದ್ದಾರೆ. ಇದೇ ಅಡಾಸ್ ತಂತ್ರಜ್ಞಾನ ಮುನ್ನೆಲೆಗೆ ಬರಲು ಕಾರಣ. ಅಪಘಾತ, ಗಾಡಿಗಳ ಡಿಕ್ಕಿಯಾಗುವಂತ ತುರ್ತು ಸಂದರ್ಭಗಳನ್ನು ಕೂಡಲೇ ಅರಿತು ಓಡಿಸುಗನನ್ನು ಎಚ್ಚರಿಸಿ ಅಪಘಾತಗಳನ್ನು ತಡೆಯುವುದೇ ಅಡಾಸ್ ಚಳಕದ(Technology) ಮುಖ್ಯ ಕೆಲಸ. ಈ ಚಳಕವೇ ನಮ್ಮ ಕಾರುಗಳಲ್ಲಿ ಸುರಕ್ಷತೆಯ ಏರ್ಪಾಟುಗಳನ್ನು ಹೆಚ್ಚಿಸುತ್ತಿದೆ. ಇಂದು ಹಲವಾರು ಗಾಡಿಗಳಲ್ಲಿ ಓಡಿಸುಗ ಕೂರುಮಣೆಯ ಪಟ್ಟಿ (ಸೀಟ್ ಬೆಲ್ಟ್) ಬಳಸದೇ ಹೋದರೆ ಇಂಜೀನ್ ಶುರುವಾಗಲ್ಲ, ಗಾಡಿಯ ಗಾಲಿಗಳಲ್ಲಿ ಗಾಳಿಯು ಕಡಿಮೆಯಾದರೆ ತಕ್ಷಣ ಓಡಿಸುಗನ ಮುಂದಿರುವ ತೋರುಮಣೆಯಲ್ಲಿ ಅಲಾರ್ಮ್ ಬರುತ್ತದೆ, ಗಾಡಿಯ ವೇಗ 80-100 ಕಿ.ಮೀ.ಪ್ರತಿಗಂಟೆ ದಾಟುತ್ತಿದ್ದಂತೆ ಗಾಡಿಯ ಅಲಾರ್ಮ್ ಎಚ್ಚರಿಕೆಯ ಗಂಟೆ ಬಾರಿಸತೊಡಗುತ್ತದೆ. ಇವೆಲ್ಲವೂ ಅಪಘಾತ, ಗುದ್ದಾಟ ತಡೆಗಟ್ಟಬಲ್ಲ ಅಡಾಸ್‌ನ ಒಂದು ಭಾಗ.ಈ ಹೊಸ ಅಡಾಸ್ ಅನ್ನು ಬಲು ಮುಖ್ಯವಾಗಿ ಈ ಕೆಳಕಂಡ ಭದ್ರತೆಯ ಏರ್ಪಾಟುಗಳಲ್ಲಿ ಬಳಸಲಾಗುತ್ತಿದೆ.

1. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ

2. ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ

3. ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ

4. ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ

5. ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ

 ಈ ಎಲ್ಲ ಭದ್ರತೆಯ ವಿಷಯಗಳಲ್ಲಿ ಅಡಾಸ್ ಅಳವಡಿಸಿಕೊಳ್ಳಲು ಸಾಕಷ್ಟು ಅರಿವುಕ(Sensor), ರಡಾರ್ ಮತ್ತು ಕ್ಯಾಮೆರಾಗಳ ಬಳಕೆ ಮಾಡಲಾಗುತ್ತದೆ. ಗಾಡಿಯ ಸುತ್ತಮುತ್ತಲಿನ ಆಗುಹೋಗುಗಳು, ಬಗೆ ಬಗೆಯ ಸದ್ದು ಸಪ್ಪಳಗಳನ್ನು ಈ ಅರಿವುಕಗಳು, ರಡಾರ್ ಗಳು ಯಾವ ತಪ್ಪಿಲ್ಲದಂತೆ ಅರಿತು ಗಾಡಿಯ ಗಣಕದ ಮೂಲಕ ಓಡಿಸುಗನಿಗೆ ಸಂದೇಶ ಕಳಿಸುವಲ್ಲಿ ತೊಡಗಿರುತ್ತವೆ. ಗಾಡಿಯ ಸುತ್ತಲೂ 360 ಡಿಗ್ರಿ ಕ್ಯಾಮೆರಾಗಳು ಚಕಚಕನೆ ಪಟಗಳನ್ನು ಸೆರೆಹಿಡಿದು ಗಾಡಿಯ ಗಣಕಕ್ಕೆ ಮಾಹಿತಿ ನೀಡುತ್ತವೆ, ಇದರಿಂದ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಮುಂಚೆಯೇ ಎಚ್ಚರಿಸಿ ಅವುಗಳನ್ನು ತಪ್ಪಿಸುವಲ್ಲಿ ನೆರವಾಗುತ್ತವೆ.

ಅಡಾಸ್‌ನ ವಿವಿಧ ವಿಶೇಷತೆಗಳ ತೋರುವ ಚಿತ್ರ

ಹೀಗೆ ಅಡಾಸ್ ನ ಆಳ ಅರಿತ ಆಟೋಮೊಬೈಲ್ ಕೈಗಾರಿಕೆ, ಅಡಾಸ್ ನ ವಿವಿಧ ಹಂತಗಳಾಗಿ ವಿಂಗಡಿಸಿದೆ. ಒಟ್ಟು 6 ಹಂತಗಳ ಅಡಾಸ್ ನೋಡಬಹುದು. ಇವುಗಳು ಹೀಗಿವೆ.

ಸೊನ್ನೆ ಹಂತ: ಇದರಲ್ಲಿ ಎಲ್ಲವೂ ಮನುಷ್ಯನ ಹಿಡಿತ ಅಂದರೆ ಗಾಡಿಯ ಬಹುಪಾಲು ಏರ್ಪಾಟುಗಳು ಓಡಿಸುಗರ ಹಿಡಿತದಲ್ಲಿರುತ್ತವೆ. ತಂತಾನೇ ಕೆಲಸ ಮಾಡುವ ಗಣಕ, ರಡಾರ್, ಅರಿವುಕಗಳು ಕಡಿಮೆಯೇ. ತಿಗುರಿ(Steering), ತಡೆತ(Brake), ವೇಗ ಏರಿಸುಕ(Accelerator) ಎಲ್ಲವನ್ನೂ ಓಡಿಸುಗನೇ ಮಾಡಬೇಕು. ಆದರೆ ಭದ್ರತೆಯ ಕೆಲವು ವಿಶೇಷತೆಗಳಾದ ಕ್ಯಾಮೆರಾ, ದಿಡೀರ್ ಎದುರಾಗುವ ತಿರುವುಗಳ ಬಗ್ಗೆ ಮುನ್ಸೂಚನೆ ನೀಡುವ ಏರ್ಪಾಟು, ಗಾಡಿಗಳಲ್ಲಿ ಅಳವಡಿಸಬಹುದು.

ಮೊದಲ ಹಂತ: ಚಿಕ್ಕ ಪ್ರಮಾಣದಲ್ಲಿ ಗಾಡಿ ಹಿಡಿತದ ವಿಶೇಷತೆಗಳನ್ನು ನೀಡಲಾಗಿರುತ್ತದೆ. ಮಾರ್ಪಾಟುಗೊಳ್ಳುವ ಸುಯ್ ಅಂಕೆ ಏರ್ಪಾಟು(Adaptive Cruise Control) ಇದಕ್ಕೆ ಒಳ್ಳೆಯ ಉದಾಹರಣೆ. ಹೆದ್ದಾರಿಯಲ್ಲಿ ಚಲಿಸುವಾಗ, ಗಾಡಿಯು ದಾರಿಯ ಸ್ಥಿತಿಗತಿಗೆ ತಕ್ಕಂತೆ  ವೇಗ ಮಾರ್ಪಾಟು ಮಾಡಿಕೊಂಡು ಸಾಗುತ್ತಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ವೇಗ ಏರಿಸುಕ(Accelerator) ಮತ್ತು ಬೇರ್ಪಡಕಗಳ(Clutch) ಮೇಲಿನ ಕಾಲ್ತೆಗೆದು, ಓಡಿಸುಗ ನೆಮ್ಮದಿಯಿಂದ ಸಾಗಬಹುದು.

ಎರಡನೇ ಹಂತ: ಇದನ್ನು ಅರೆ-ಸ್ವತಂತ್ರದ ಗಾಡಿಯೆನ್ನಬಹುದು. ಇದರಲ್ಲಿ ತಿಗುರಿ ಮತ್ತು ಗಾಡಿಯ ವೇಗ ಏರಿಸುವ ಕೆಲಸಗಳನ್ನು ಗಾಡಿಯೇ ನೋಡಿಕೊಳ್ಳುತ್ತದೆ. ಓಡಿಸುಗ ಕೂಡ ಇದನ್ನು ನಿರ್ವಹಿಸಬಹುದು. ಇನ್ನೂ ಗಾಡಿಯ ತಡೆಯೊಡ್ಡುವಿಕೆ(braking), ಲೇನ್ ಬದಲಾವಣೆ(Lane Change), ನಿಲುಗಡೆ ವ್ಯವಸ್ಥೆಯನ್ನು(Parking) ಓಡಿಸುಗನೇ ನೋಡಿಕೊಳ್ಳಬೇಕು.

ಮೂರನೇ ಹಂತ: ಈ ಹಂತದಲ್ಲಿ ಗಾಡಿಯು ಬಹುತೇಕ ಎಲ್ಲ ಏರ್ಪಾಟುಗಳನ್ನು ಸ್ವತಹ ತಾನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲದಾದರೂ ಕೆಲವು ಸಂದರ್ಭಗಳಲ್ಲಿ ಓಡಿಸುಗನ ನಿಯಂತ್ರಣ ಬೇಕೇಬೇಕು. ಉದಾಹರಣೆಗೆ, ಸಂಚಾರ ದಟ್ಟಣೆಯ ಸಂದರ್ಭಗಳಲ್ಲಿ ಗಾಡಿಯ ಗಣಕ ಏರ್ಪಾಟು ಗಾಡಿಯ ಸಂಪೂರ್ಣ ಹಿಡಿತ ಪಡೆಯಬಲ್ಲುದು. ಓಡಿಸುಗ ಹಾಯಾಗಿ ಪತ್ರಿಕೆ ಓದುತ್ತಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯಬಹುದು. ಕೆಲವೊಮ್ಮೆ ಅವಶ್ಯವೆನಿಸಿದಾಗ ಗಾಡಿಯು ತೋರುಮಣೆಯ(Dashboard) ಮೂಲಕ ಓಡಿಸುಗನಿಗೆ ಸಂದೇಶ ನೀಡಿ, ಹಿಡಿತವನ್ನು ಓಡಿಸುಗ ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ.

ನಾಲ್ಕನೇ ಹಂತದ ಅಡಾಸ್ – ಗಾಡಿಯು ನಿರ್ದಿಷ್ಟ ಸನ್ನಿವೇಶಗಳಲ್ಲಿ ಸಂಪೂರ್ಣ ತನ್ನ ಹಿಡಿತದಲ್ಲೇ ಓಡುವ ಸಾಮರ್ಥ್ಯ ಹೊಂದಿರುತ್ತದೆ. ಗಾಡಿಯು ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ಎಲ್ಲವನ್ನೂ ಸ್ವತಹ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಆ ಪರಿಮಿತಿಯನ್ನು ಮೀರಿದ ಸಂದರ್ಭಗಳಲ್ಲಿ ಅದು ಓಡಿಸುಗನೇ ಗಾಡಿ ನಿರ್ವಹಿಸುವಂತೆ ಸಂದೇಶ ನೀಡುತ್ತದೆ. ಉದಾಹರಣೆಗೆ, ಅತಿಯಾದ ಮಂಜುಗಡ್ಡೆಯಿಂದ ಕೂಡಿದ ದಾರಿಗಳಲ್ಲಿ ಗಾಡಿ ಓಡಿಸುಗನ ಹಿಡಿತಕ್ಕೆ ಮರಳಬಹುದು. 

ಐದನೇಯ ಹಂತ: ಕೊನೆಯ ಹಂತದಲ್ಲಿ ಗಾಡಿಯು ಸಂಪೂರ್ಣವಾಗಿ ತನ್ನಿಂದ ತಾನೇ ಓಡಬಲ್ಲದು. ಇದಕ್ಕೆ ಬೇಕಾದ ಎಲ್ಲ ಏರ್ಪಾಟುಗಳನ್ನು ಗಾಡಿಯು ತಾನೇ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಯಾವುದೇ ತೆರನಾಗಿ ಓಡಿಸುಗ ಬೇಕಾಗಿರುವುದಿಲ್ಲ. ಕಾರಿನಲ್ಲಿ ಬರೀ ಸವಾರರು ಕುಳಿತು ಆದೇಶ ನೀಡಿದರೆ ಕಾರು ಸಾಗಿಕೊಂಡು ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, ಗಾಡಿ ತಯಾರಕರು ತಮಗೆ ಬೇಕಾದ ಹಂತವನ್ನು ಆಯ್ದುಕೊಂಡು ಅದಕ್ಕೆ ತಕ್ಕ ಏರ್ಪಾಟುಗಳನ್ನು ಅರಿವುಕ, ಕ್ಯಾಮೆರಾ, ರಡಾರ್ ಬಳಸಿ ನೀಡಿರುತ್ತಾರೆ. ನೀವು ಒಂದಕ್ಕಿಂತ ಒಂದು ಮೇಲ್ ಹಂತಕ್ಕೆ ಹೋದಂತೆ ಹೆಚ್ಚಿನ ಅರಿವುಕ, ರಡಾರ್ ಮತ್ತು ಅದಕ್ಕೆ ತಕ್ಕುದಾದ ಗಣಕ ತಂತ್ರಾಂಶಗಳನ್ನು ಬಳಸಬೇಕು, ಅದಕ್ಕೆ ಹೆಚ್ಚಿನ ಹಣವೂ ಬೇಕಾಗುತ್ತದೆ. ಅದಕ್ಕಾಗಿ, ಗಾಡಿ ತಯಾರಕರು ನಮ್ಮದು 2ನೇ ಹಂತದ ಅಡಾಸ್ ವಿಶೇಶತೆಗಳುಳ್ಳ ಗಾಡಿಯೆಂದೋ, 3ನೇ ಹಂತದ ಅಡಾಸ್ ಗಾಡಿಯೆಂದೋ ತಯಾರಿಸಿ ಮಾರುಕಟ್ಟೆ ತರುತ್ತಿದ್ದಾರೆ.

ಹಂತ ಹೆಚ್ಚಿದಂತೆ ಗಾಡಿಯ ಹಿಡಿತ ಹೆಚ್ಚಾಗುತ್ತ ಸಾಗುವುದು

ಜಗತ್ತಿನಾದ್ಯಂತ ಇಂದು ಎರಡನೇ ಹಂತದ ಅಡಾಸ್ ವಿಶೇಷತೆಗಳುಳ್ಳ ಹಲವು ಕಾರುಗಳು ಬಿಡುಗಡೆಯಾಗಿವೆ. ಮುಂದಿನ ಹಂತದ ಅಡಾಸ್ ವಿಶೇಷತೆಗಳ ಗಾಡಿಗಳನ್ನು ಟೆಸ್ಲಾ, ಗೂಗಲ್, ಜಿಎಮ್ ಸೇರಿದಂತೆ ದೊಡ್ಡ ಕಂಪನಿಗಳು ಸಿದ್ಧಪಡಿಸಿದ್ದರೂ ಇನ್ನೂ ಮಾರಾಟಕ್ಕೆ ಲಭ್ಯವಾಗಿಲ್ಲ. ಅದರಲ್ಲೂ 4 ಮತ್ತು 5ನೇ ಹಂತದ ಅಡಾಸ್ ವಿಶೇಷತೆಯೆಂದರೆ ಹೆಚ್ಚು ಕಡಿಮೆ ತನ್ನಿಂದ ತಾನೇ ಓಡುವ ಕಾರುಗಳು. ತಂತ್ರಜ್ಞಾನ ಬೆಳೆದರೂ ಅದಕ್ಕೆ ತಕ್ಕ ಕಾನೂನು-ಕಟ್ಟುಪಾಡುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ.

ಅಡಾಸ್ ನಮಗೆ ಹೇಗೆ ಉಪಯೋಗವಾಗಲಿದೆ?

ಅಡಾಸ್ ಅಭಿವ್ರದ್ಧಿ ಪಡಿಸಿದ್ದೇ, ಅಪಘಾತ, ಗುದ್ದುವಿಕೆಯಂತ ಅಪಾಯಗಳನ್ನು ತಡೆದು ಗಾಡಿಯಲ್ಲಿ ಸಾಗುವವರು ಸುರಕ್ಷಿತವಾಗಿ ಪ್ರಯಾಣ ಮಾಡಲೆಂದು. ಇಂದು ಸಾಕಷ್ಟು ಗಾಡಿಗಳಲ್ಲಿ ಹೆಚ್ಚಿನ ಭದ್ರತೆಯ ವಿಶೇಷತೆಗಳು ಕಾಣುತ್ತಿರುವುದು ಅಡಾಸ್ ಬಳಕೆಯಿಂದ. ಅಡಾಸ್ ಬಳಕೆಯಿಂದ ನಮ್ಮ ಕಾರುಗಳು ಹೆಚ್ಚು ಭದ್ರವಾಗಲಿವೆ. ನಮ್ಮ ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಕಾರುಗಳಲ್ಲೂ ಇಂದು ಅಡಾಸ್ ವಿಶೇಷತೆಗಳಿಂದ ಕೂಡಿವೆ. ಕಾರು ಓಡಿಸುವಾತ ಅಕಸ್ಮಾತ್ ನಿದ್ದೆಗೆ ಜಾರಿದರೆ ಎಚ್ಚರಿಕೆ, ಗಾಡಿಯ ವೇಗ > 80-100 ಕಿಮೀ/ಗಂಟೆ ಮೀರಿದರೆ ಎಚ್ಚರಿಕೆ, ಗಾಲಿಯ ಒತ್ತಡ ಕಡಿಮೆಯಾದರೆ ಎಚ್ಚರಿಕೆ, ಗಾಡಿ ನಿಲುಗಡೆಗೆ ನೆರವಾಗಲು ಹಿಂಬದಿಯ ಕ್ಯಾಮೆರಾ, ಹೀಗೆ ಕಾಪಿನ ವಿಶೇಷತೆಗಳು ಇಂದಿನ ಹಲವು ಕಾರುಗಳಲ್ಲಿ ಕಂಡು ಬರುತ್ತವೆ. ಕಾರುಗಳು ಆಟೋನೊಮಸ್ ಆದಂತೆ ನಾವು ಟ್ರಾಫಿಕ್ ಅಪಘಾತ ಕಡಿತಗೊಳಿಸಿ, ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಬಹುದು.

ಇಂದು ಜಗತ್ತಿನ ಹಲವೆಡೆ ಮಾರಾಟಗೊಳ್ಳುವ ಬಹುತೇಕ ಕಾರುಗಳು 2ನೇ ಹಂತದ ವರೆಗಿನ ಅಡಾಸ್ ವಿಶೇಷತೆಗಳನ್ನು ಪಡೆದು ಬರುತ್ತಿವೆ.ಜಪಾನ್, ಅಮೇರಿಕಾ, ಯುರೋಪ್ ಒಕ್ಕೂಟದ ದೇಶಗಳು, ಕೊರಿಯಾ ಮುಂತಾದ ದೇಶಗಳಲ್ಲಿ 1-2 ನೇ ಹಂತದವರೆಗಿನ ಅಡಾಸ್ ಕಾರುಗಳು ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಅಡಾಸ್ 2ನೇ ಹಂತದ ಹಲವು ಕಾರುಗಳು ಮಾರಾಟಗೊಳ್ಳುತ್ತಿವೆ. ಮಹೀಂದ್ರಾ ಎ‍‍ಕ್ಸ್‌ಯುವಿ 7ಒ‍ಒ, ಹೋಂಡಾ ಸಿಟಿ ಈಹೆಚ್‍ವಿ, ಎಮ್‍ಜಿ ಹೆಕ್ಟರ್, ಗ್ಲಾಸ್ಟರ್,ಝೆಡ್‍ಎಸ್ ಇವಿ, ಹ್ಯುಂಡಾಯ್ ಟುಕ್ಸಾನ್, ಟಾಟಾ ಸಫಾರಿ ಮುಂತಾದವು ಅಡಾಸ್‌ನ ವಿವಿಧ ವಿಶೇಷತೆಗಳನ್ನು ಹೊಂದಿವೆ.

ಅಡಾಸ್ ತಂತ್ರಜ್ಞಾನದ ಸವಾಲುಗಳು:

ತಂತ್ರಜ್ಞಾನ ಇದ್ದಲ್ಲಿ ಸವಾಲುಗಳಿಗೂ ಕೊರತೆ ಇರಲ್ಲ. ಹೊಸ ತಂತ್ರಜ್ಞಾನ ಬಂದಂತೆ ಅದಕ್ಕೆ ಸಂಬಂಧಿಸಿದ ತೊಡಕು ತೊಂದರೆಗಳು ಅದರ ಜೊತೆಯಲ್ಲೇ ಸಾಗಿಬರುತ್ತವೆ. ಅಡಾಸ್ ತಂತ್ರಜ್ಣ್ಯಾನವನ್ನು ಅಪಘಾತ ಅವಘಡ ತಡೆಯಲೆಂದೇ ಅಭಿವೃದ್ಧಿ ಪಡಿಸಿದ್ದರೂ, ಅದೇ ವಿಶೇಷತೆ ನಮಗೆ ತೊಂದರೆ ಉಂಟು ಮಾಡಿದರೆ? ಉದಾಹರಣೆಗೆ 5ನೇ ಹಂತದ ತನ್ನಿಂದ ತಾನೇ ಸಾಗಬಲ್ಲ ಕಾರುಗಳಿಂದ ಅಪಘಾತವಾದರೆ ಯಾರು ಹೊಣೆ? ಯಾಕೆಂದರೆ ಈ ಕಾರುಗಳಲ್ಲಿ ಓಡಿಸುಗನಿರುವುದಿಲ್ಲ, ಬರೀ ಸವಾರರು ಮಾತ್ರ. ಈ ಅಪಘಾತಗಳು ವಿಮೆಯ ವ್ಯಾಪ್ತಿಯ ಒಳಗಡೆ ಬರುತ್ತವೆಯೇ ಇಲ್ಲವೇ ಎಂಬುದು ಮುಂದಿನ ಪ್ರಶ್ನೆ? ಈ ಅಪಘಾತ,ವಿಮೆಯ ವಿಷಯಗಳಿಗೆ ತಕ್ಕ ಕಟ್ಟಳೆ-ಕಟ್ಟಪಾಡುಗಳು ಇನ್ನೂ ಎಳವೆಯಲ್ಲಿವೆ. ಹಲವು ದೇಶಗಳ ಸರ್ಕಾರಗಳು ಕಟ್ಟಳೆ-ಕಟ್ಟಪಾಡುಗಳ ಕುರಿತಾಗಿ ಸಾಕಷ್ಟು ಗೊಂದಲದಲ್ಲಿವೆ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವವರೆಗೂ ಇಂತ ಗಾಡಿಗಳನ್ನು ಮಾರಾಟಕ್ಕೆ ಬಿಡಬಾರದೆಂಬ ಕೂಗು ಎದ್ದಿದೆ.

ಎರಡನೇ ಸವಾಲು, ಅಡಾಸ್‌ನ ವಿವಿಧ ವಿಶೇಷತೆಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದರಿಂದ ವಿಶೇಷತೆಗಳ ಬಗ್ಗೆ ಹಲವು ಗಾಡಿ ತಯಾರಕರ ನಡುವೆ, ಕೊಳ್ಳುವರ ಮಧ್ಯೆ ಗೊಂದಲಗಳಿವೆ. ಕೆಲವು ವಿಶೇಷತೆಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ನೆಟ್ಟಗೆ ಕೆಲಸ ಮಾಡಬಲ್ಲವು.ಬೆಟ್ಟ-ಗುಡ್ಡ-ಘಾಟಿ ರಸ್ತೆಗಳಲ್ಲಿ ಗಾಡಿಯಲ್ಲಿರುವ ಅರಿವುಕ, ಕ್ಯಾಮೆರಾ, ರಡಾರ್‌ಗಳಿಗೆ ಸಮಸ್ಯೆ ಎದುರಾಗಲಿದೆ. ಹೆದ್ದಾರಿಗಳಲ್ಲಿ ಲೇನ್ ಅಂದರೆ ಓಣಿಗಳನ್ನು ಸರಿಯಾಗಿ ಬಣ್ಣದಿಂದ ಗುರುತಿಸಿರುತ್ತಾರೆ ಹೀಗಾಗಿ ಗಾಡಿಯ ಕ್ಯಾಮೆರಾಗಳು ಅವುಗಳನ್ನು ಗುರುತಿಸಿ, ಓಣಿ ದಾಟುವಿಕೆಯನ್ನು ಚೆನ್ನಾಗಿ ನಿರ್ವಹಿಸಬಲ್ಲವು. ಅದೇ ಚಿಕ್ಕ ಪುಟ್ಟ ದಾರಿಗಳಲ್ಲಿ ಬಣ್ಣದಿಂದ ಗುರುತಿಸದ ಲೇನ್‍ಗಳಲ್ಲಿ ಓಣಿ ಗುರುತಿಸುವಿಕೆಯಂತ ವಿಶೇಷತೆ ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಪ್ರಶ್ನೆಗಳಿವೆ.

ಹಲವು ಗಣಕಗಳಿಂದ ಕೂಡಿರುವ ಈ ಅಡಾಸ್ ಗಾಡಿಗಳಿಗೆ ಸುಭದ್ರವಾದ ಸೈಬರ್ ಭದ್ರತೆಯ ತಂತ್ರಾಂಶ ಒದಗಿಸುವ ಅವಶ್ಯಕತೆಯಿದೆ. ದಿಗಿಲುಕೋರರು, ಕಳ್ಳ-ಕಾಕರು ಗಾಡಿಯ ಗಣಕಗಳನ್ನು ತಮ್ಮ ಹಿಡಿತಕ್ಕೆ ಪಡೆದು ಬೇಕಾಬಿಟ್ಟಿ ಬಳಕೆ ಮಾಡಿ ಸಮಾಜಕ್ಕೆ ಕೆಡುಕುಂಟು ಮಾಡುವ ಸಾಧ್ಯತೆಗಳಿವೆ. ಇದನ್ನು ಮೆಟ್ಟಿ ನಿಂತು ಅಡಾಸ್ ತಂತ್ರಜ್ಞಾನ ಬೆಳೆಯಲಿ, ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ.

Bookmark the permalink.

Comments are closed.