ಕನೆಕ್ಟೆಡ್ ಕಾರುಗಳು(Connected Cars)

ಜಯತೀರ್ಥ ನಾಡಗೌಡ.

ಮಿಂಬಲೆ(ಇಂಟರ್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ ಒಳಗೂ ಇರುವಂತ ಇಲ್ಲವೇ ಹೊರಗಿರುವಂತವವೂ ಆಗಿರಬಹುದು. ಉದಾಹರಣೆಗೆ ಕಾರೊಂದು ಮಿಂಬಲೆ ಮೂಲಕ ಇನ್ನೊಂದು ಕಾರಿನೊಂದಿಗೆ ಇಲ್ಲವೇ ಸ್ಮಾರ್ಟ್‌ಫೋನ್ /ಸ್ಮಾರ್ಟ್‌ವಾಚ್‌ಗಳಂತ ಬೇರೆ ಉಪಕರಣೊಂದಿಗೆ ಮಾಹಿತಿ ಹಂಚಿಕೆ ಅಥವಾ ಮಾಹಿತಿ ಪಡೆದುಕೊಳ್ಳಬಹುದು. ಈ ರೀತಿ ಕಾರೊಂದು ಇನ್ನೊಂದು  ವಸ್ತುವಿನೊಂದಿಗೆ ಬೆಸೆದುಕೊಂಡರೆ ಅದು ಬೆಸುಗೆಯ ಕಾರು ಎನ್ನಿಸಿಕೊಳ್ಳುತ್ತದೆ.

ಕಾರುಗಳು ಹೇಗೆ ಬೆಸೆದುಕೊಳ್ಳುತ್ತವೆ? ಇದರ ಕೆಲಸ ಮಾಡುವ ವಿಧಾನ ಹೇಗೆ?

ಈ ಬೆಸುಗೆಯ ಕಾರುಗಳು ಕೆಳಗೆ ನೀಡಿರುವ ಎರಡರಲ್ಲಿ ಒಂದು ಏರ್ಪಾಟಿನ ಮೂಲಕ ಕೆಲಸ ಮಾಡುತ್ತವೆ.

  1. ಮೊದಲನೇ ಏರ್ಪಾಟು, ಟೆಥೆರ್ಡ್(Tethered) – ಟೆಥೆರ್ ಅಂದರೆ ವ್ಯಾಪ್ತಿ/ಮಿತಿಯೊಳಗೆ ಎಂಬ ಅರ್ಥ ಬರುತ್ತದೆ. ಈ ಏರ್ಪಾಟಿನಲ್ಲಿ ಕಾರು ಪಯಣಿಗರ ಮೊಬೈಲ್ ನೊಂದಿಗೆ ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
  2. ಎರಡನೇ ಏರ್ಪಾಟು, ಎಂಬೆಡೆಡ್(Embedded) – ಈ ಏರ್ಪಾಟನ್ನು ಕನ್ನಡದಲ್ಲಿ ನಾಟಿದ/ಹುದುಗಿಸಿದ ಏರ್ಪಾಟು ಎನ್ನಬಹುದು. ಇದರಲ್ಲಿ ಗಾಡಿಯ ಒಳಗಿನ ಟೆಲೆಮಾಟಿಕ್ಸ್ ಕಂಟ್ರೋಲರ್ ದಲ್ಲಿ(Telematics ECU) ಎಂಟೆನ್ನಾ(Antenna) ಮತ್ತು ಸೆಮಿಕಂಡಕ್ಟರ್ ಚಿಪ್ ಸೇರಿರುತ್ತದೆ. ಇವುಗಳ ಮೂಲಕ ಗಾಡಿಯು ಬೇರೆ ದೂರದ ಉಪಕರಣಗಳೊಂದಿಗೆ ಸುಲಭವಾಗಿ ಸಂಪರ್ಕ ಮಾಡಬಹುದು.

ಇದನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಮೊಬೈಲ್ ಫೋನ್‌ಗೆ ಬರುವ ತಂತ್ರಾಂಶದ ಅಪ್ಡೇಟ್‌ಗಳಂತೆ, ಬೆಸುಗೆಯ ಕಾರುಗಳು ಈ ರೀತಿ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಪಡೆದು ಕೆಳಗಿಸಿಕೊಳ್ಳಬಲ್ಲವು, ಹೊರ ಜಗತ್ತಿನ ವಸ್ತುಗಳೊಂದಿಗೆ ಸಂಪರ್ಕ ಪಡೆಯಬಲ್ಲವು ಮತ್ತು ತನ್ನ ಸುತ್ತಲಿನ ಮಿತಿಯಲ್ಲಿನ ಇತರೆ ವಸ್ತುಗಳೊಂದಿಗೆ ಮಿಂಬಲೆ ಇಲ್ಲವೇ ಕಾರಿನ ವೈಫೈ (Wifi) ಮೂಲಕ ಸಂಪರ್ಕ ಹೊಂದಬಲ್ಲವು.

ಬೆಸುಗೆಯ ಕಾರುಗಳು ಹೇಗೆ ಮಾತುಕತೆ ನಡೆಸಬಲ್ಲವು?

ಬೆಸುಗೆಯ ಕಾರುಗಳು ಹೊರಜಗತ್ತಿನ ವಸ್ತುಗಳೊಂದಿಗೆ ವ್ಯವಹಾರ/ಸಂಪರ್ಕ ಮಾಡುವುದನ್ನು 5 ಬಗೆಗಳಾಗಿ ವಿಂಗಡಿಸಬಹುದು.

  1. ಒಂದು ಬಂಡಿ(ಕಾರು/ಗಾಡಿ) ಮತ್ತೊಂದು ಬಂಡಿ ಇಲ್ಲವೇ ಬಂಡಿಗಳೊಂದಿಗೆ ಮಾಹಿತಿ ಸಂಪರ್ಕ ಮಾಡಬಹುದು. ಇದನ್ನು ವೆಹಿಕಲ್ ಟು ವೆಹಿಕಲ್ ಮಾಹಿತಿ ಒಡನಾಟ ಎನ್ನುತ್ತಾರೆ(V2V). ಒಂದು ಕಾರು ನಿರ್ದಿಷ್ಟ ಜಾಗದಲ್ಲಿ ಸಾಗುತ್ತಿರುತ್ತದೆ, ಅದು ಸಾಗುವ ವೇಗ, ದಾರಿ, ತಡೆತದ ಸ್ಥಿತಿ(braking situation) ಮುಂತಾದ ಮಾಹಿತಿಯನ್ನು ಈ ಕಾರು ಕಲೆ ಹಾಕಿ ಇನ್ನೊಂದು ಕಾರಿಗೆ ಕಳಿಸಬಹುದು. ಈ ವಿಧದ ಮೂಲಕ ಬೇಜವ್ದಾರಿ ಬಂಡಿ ಓಡಿಸುಗರನ್ನು, ಇಲ್ಲವೇ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಹೋಗುವ ಬಂಡಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು. ಬಹುತೇಕ ಕ್ಯಾಬ್/ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕಂಪನಿಯವರು ತಮ್ಮ ಕಾರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ  ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಗಾಡಿಗಳಲ್ಲಿ ಪರಾರಿಯಾಗುವ ಕಳ್ಳಕಾಕರನ್ನು/ಅಪಹರಣಕಾರರನ್ನು, ಅವರು ಸಾಗುವ ದಾರಿಯ ಬಗ್ಗೆ ನಿಖರ ಮಾಹಿತಿ ನೀಡುವ ಮೂಲಕ ಈ ಬಗೆಯು ಪೋಲೀಸ್‍ರಿಗೆ ನೆರವಾಗುತ್ತದೆ. 
  2. ಎರಡನೇ ಬಗೆ, ಗಾಡಿ ಮತ್ತು ದಾರಿಹೋಕರ ನಡುವೆ ಸಂಪರ್ಕ(V2P-ವೆಹಿಕಲ್ ಟು ಪೆಡೆಸ್ಟ್ರಿಯನ್):

ಇಲ್ಲಿ ಕಾರು ದಾರಿಯಲ್ಲಿ ಓಡಾಡುವ ಇತರೆ ದಾರಿಹೋಕರನ್ನು ಅರಿವುಕಗಳ ಮೂಲಕ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಪಘಾತ ತಡೆಯುತ್ತದೆ.

  1. ಗಾಡಿ ಮತ್ತು ಇತರೆ ಮೂಲಭೂತ ಸೌಕರ್ಯಗಳ ನಡುವಿನ ಸಂಪರ್ಕ(V2I-ವೆಹಿಕಲ್ ಟು ಇನ್ಫ್ರಾಸ್ಟ್ರಕ್ಚರ್): 

ಈ ಬಗೆಯಲ್ಲಿ ಕಾರು ತನ್ನ ಸುತ್ತಲಿನ ಪರಿಸರ, ಸೇತುವೆ, ಕಟ್ಟಡ, ಬೀದಿ ದೀಪ, ಸಂಚಾರದ ದಟ್ಟಣೆ, ಎದುರಾಗುವ ಸಂಚಾರಿ ಸಿಗ್ನಲ್ ಹೀಗೆ ಹಲವಾರು ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳಬಲ್ಲದು. ಈ ಮಾಹಿತಿ ಸಂಚಾರ ದಟ್ಟಣೆ ನಿರ್ವಹಿಸುವ ಪೋಲೀಸ್‍ರಿಗೆ, ತುರ್ತು ಸಮಯದಲ್ಲಿ ಅಂಬ್ಯುಲೆನ್ಸ್‌ಗಳಿಗೆ ನೆರವಾಗುತ್ತವೆ. ನಮ್ಮ ಮೊಬೈಲ್‌ಗಳಲ್ಲಿ ಕಂಡುಬರುವ ದಾರಿತಲುಪು ಏರ್ಪಾಟು(Navigation System) ಮಾಹಿತಿಗಿಂತಲೂ ಇಲ್ಲಿ ಹೆಚ್ಚು ನಿಖರ ಮತ್ತು ನೇರವಾದ ಮಾಹಿತಿ(Real time Data) ಒದಗಿಸುವ ವ್ಯವಸ್ತೆ ಇರುತ್ತದೆ.

  1. ಗಾಡಿ ಮತ್ತು ಕ್ಲೌಡ್ ಮಾಹಿತಿ ಸಂಪರ್ಕ(V2C-ವೆಹಿಕಲ್ ಟು ಕ್ಲೌಡ್): ಕಾರುಗಳು ಮೂಲಕ ಕ್ಲೌಡ್‍ನಲ್ಲಿ ಮಾಹಿತಿ ಕೂಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಗಾಡಿಯೊಂದು ಎಷ್ಟು ಬಾರಿ ರಿಪೇರಿಯಾಗಿದೆ, ಎಷ್ಟು ಸಲ ಸರ್ವೀಸ್ ಮಾಡಿಸಲ್ಪಟ್ಟಿದೆ, ದಾರಿ ಮಧ್ಯೆದಲ್ಲಿ ಕಾರು ಕೆಟ್ಟು ನಿಂತ ಪರಿಸ್ಥಿತಿ, ಹೀಗೆ ಎಲ್ಲ ದಾಖಲೆಗಳನ್ನು ಕ್ಲೌಡ್ ಮೂಲಕ ಕೂಡಿಟ್ಟು, ಬೇಕೆಂದಾಗ ಅದನ್ನು ಬಳಸಿಕೊಳ್ಳಬಹುದು.
  2. ಗಾಡಿ ಮತ್ತು ಮೇಲಿನ ಎಲ್ಲವೂಗಳೊಂದಿಗೆ ಸಂಪರ್ಕ(V2X-ವೆಹಿಕಲ್ ಟು ಎವೆರಿಥಿಂಗ್):

ಈ ವಿಧದಲ್ಲಿ ಗಾಡಿಯೊಂದು ಮೇಲೆ ತಿಳಿಸಿದ ಎಲ್ಲವೂಗಳೊಂದಿಗೆ ಮಾಹಿತಿ ಪಡೆಯುವುದು-ಹಂಚುವುದನ್ನು ಮಾಡಬಹುದು. ಇದರಿಂದ ಗಾಡಿಯೊಂದು ಒಂದೇ ಸಮಯದಲ್ಲಿ ಬೇರೆ ಗಾಡಿಯೊಂದಕ್ಕೆ ಬೆಸೆದುಕೊಂಡು ಸುತ್ತಲಿನ ವಾತಾವರಣದ ಮಾಹಿತಿ ಹಂಚಿ, ಸಂಚಾರ ದಟ್ಟಣೆಯ ಮಾಹಿತಿ ಪಡೆದು, ದಾರಿಹೋಕರು ಎದುರಾದರೆ ಗಾಡಿ ನಿಲ್ಲಿಸುವಂತೆ ಓಡಿಸುಗನನ್ನು ಎಚ್ಚರಿಸಬಹುದು. ಮತ್ತೆ ಎಲ್ಲ ಮಾಹಿತಿಯನ್ನು ಮುಂದೆ ಬಳಸಲು ಕ್ಲೌಡ್‌ನಲ್ಲಿ ಕೂಡಿಡಬಹುದು. ಈ ಎಲ್ಲವೂ ಒಟ್ಟಿಗೆ ನಡೆದು,  ಸಾಕಷ್ಟು ಮಾಹಿತಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ರವಾನೆಯಾಗುತ್ತಿರುತ್ತದೆ.

ಬೆಸುಗೆಯ ಕಾರುಗಳ ಅನುಕೂಲಗಳೇನು?

ಗಾಡಿಯೊಳಗಡೆ ಮನೋರಂಜನೆ, ಭದ್ರತೆ ಮತ್ತು ಅಪಘಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಭವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಷಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೆಚ್ಚಿನ ಬಂಡಿಗಳ ಓಡಾಟವನ್ನು ಸುಲಭ ಸರಳಗೊಳಿಸಿ, ಸಾರಿಗೆ ಏರ್ಪಾಟಿನಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಬೆಸುಗೆಯ ಕಾರುಗಳು ನೆರವಾಗುವುದು ಖಚಿತ.

ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ಒಳ್ಳೆಯ ಗುಣಮಟ್ಟದ ತಿಳಿನಲಿ ಏರ್ಪಾಟು(Infotainment System), ಅಂಡ್ರ್ಯಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಏರ್ಪಾಟಿನಿಂದ ಸರಳವಾಗಿ ಜೋಡಣೆಗೊಳ್ಳುತ್ತವೆ. ಈ ಏರ್ಪಾಟುಗಳಿಗೆ ಹೆಚ್ಚಿನ ನಿಖರ ಮಾಹಿತಿ ಒದಗಿಸಿ ಕಾರು ಓಡಿಸುಗರಿಗೆ ದಾರಿತೋರಲಿದೆ ಬೆಸುಗೆಯ ಕಾರುಗಳು. ಒಬ್ಬ ವ್ಯಕ್ತಿ ಕಾರಿನಲ್ಲಿ ಮಾರುಕಟ್ಟೆಗೆ ಹೋಗಿದ್ದಾಗ,, ಅವಸರದಲ್ಲಿ ಕಾರು ಪಾರ್ಕ್ ಮಾಡಿ, ಕಾರಿಗೆ ಬೀಗ ಹಾಕದೇ ದೂರ ಬಂದಾಗ, ಕಾರಿಗೆ ಬೀಗ ಹಾಕದೇ ಇರುವುದು ನೆನಪಾಗುತ್ತದೆ. ಆದರೆ,ಆ ವ್ಯಕ್ತಿಗೆ ನೆನಪಾಗುವ ಮೊದಲೇ ಆತನ ಮೊಬೈಲ್ ತಕ್ಷಣ ಎಚ್ಚರಿಕೆ ಸಂದೇಶ ನೀಡುತ್ತದೆ. ಕನೆಕ್ಟೆಡ್ ಕಾರ್ ತಂತ್ರಜ್ಞಾನದ ಮೂಲಕ ಬೆಸೆದುಕೊಂಡ ಕಾರು ಮತ್ತು ಮೊಬೈಲ್, ಇಂತ ಹೊತ್ತಲ್ಲಿ ಸಹಾಯಕ್ಕೆ ಬರುತ್ತದೆ. ಟ್ಯಾಕ್ಸಿ ಕಂಪನಿಯ ಮಾಲೀಕನೊಬ್ಬ ತನ್ನ ಮೊಬೈಲ್ ಮೂಲಕವೇ ತನ್ನ ಹತ್ತಾರು ಟ್ಯಾಕ್ಸಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಕ್ಷಣಾರ್ಧದಲ್ಲಿ ಕಂಡುಕೊಳ್ಳಬಹುದು. ತನ್ನ ಟ್ಯಾಕ್ಸಿ ಓಡಿಸುಗರಿಗೆ ಸಾಗುವ ದಾರಿಯ ಸಂಚಾರ ದಟ್ಟಣೆಯ ಮಾಹಿತಿ ಒದಗಿಸಿ, ಅದಕ್ಕೆ ತಕ್ಕಂತೆ ಮಾರ್ಗ ಬದಲಿಸಿ ಸುಲಭವಾಗಿ ಊರು ಮುಟ್ಟುವ ಸಲಹೆ ನೀಡಬಹುದು. ಕಾರಿನಲ್ಲಿ ದೂರದ ಊರಿಗೆ ಸಾಗುತ್ತಿದ್ದೀರಿ, ಮನೆಯಲ್ಲಿ ಗೀಸರ್ ಆಫ್ ಮಾಡುವುದು ಆಗ ನೆನಪಾಗುತ್ತದೆ, ಚಿಂತೆ ಬೇಡ ನಿಮ್ಮ ಕಾರು ಮನೆಯಲ್ಲಿನ ಗೀಸರ್ ಆಫ್ ಮಾಡುತ್ತದೆ. ನೀವು ಮತ್ತು ಕುಟುಂಬ, ವಾರದ ಕೊನೆಯಲ್ಲಿ ಮಾಲ್‍ವೊಂದಕ್ಕೆ ಹೋಗಬೇಕೆಂದುಕೊಂಡಿರುತ್ತೀರಿ, ಆ ಮಾಲ್‍ನಲ್ಲಿ ಪಾರ್ಕಿಂಗ್‌ಗೆ ಎಷ್ಟು ಜಾಗಗಳು ಖಾಲಿ ಇವೆ ಎಂಬುದನ್ನು ನಿಮ್ಮ ಕಾರು ನಿಮಗೆ ತಿಳಿಸುತ್ತದೆ. ಮಾಲ್‌ನ ಸುತ್ತಮುತ್ತಲಿನ ಪರಿಸರದ ನೇರ ಮಾಹಿತಿ ಕನೆಕ್ಟೆಡ್ ಕಾರ್ ಮೂಲಕ ನಿಮ್ಮ ಕಾರು ಪಡೆದುಕೊಂಡು ನಿಮಗೆ ಮಾಹಿತಿ ನೀಡುತ್ತದೆ. ಆಗ ನೀವು ಪಾರ್ಕಿಂಗ್‍ಗಾಗಿ ಅಲೆದಾಡುವ-ಸಮಯ ಕಳೆಯುವ ಅಗತ್ಯ ಇರುವುದಿಲ್ಲ. ಇನ್ನೊಂದು ಪ್ರಮುಖ ಅನುಕೂಲವೆಂದರೆ ಜಿಯೋ ಫೆನ್ಸಿಂಗ್(Geo-Fencing). ಅಂದರೆ ನಿರ್ದಿಷ್ಟ ದಾರಿಯಲ್ಲಿ, ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಗಾಡಿ ಓಡಿಸುವಂತೆ ಮಾಡುವುದು. ಉದಾಹರಣೆಗೆ ನೀವು ನಿಮ್ಮ ಮನೆಯಲ್ಲಿ  ಮಗ/ಮಗಳಿಗೆ ಕಾಲೇಜಿಗೆ ಹೋಗಿಬರಲು ಕಾರನ್ನು ಕೊಡಿಸುತ್ತೀರಿ ಎಂದುಕೊಳ್ಳಿ. ದಿನವೂ ಮಕ್ಕಳು ಕಾಲೇಜಿಗೆ ಅದೇ ದಾರಿಯಲ್ಲಿ ಸಾಗಿ ಮರಳಿ ಬರುವಂತೆ ಮಾಡಬಹುದು, ಬಂಡಿ ಅದೇ ವಾತಾವರಣದಲ್ಲಿ ಸಾಗಿ ಬರುವ ಮಾಹಿತಿಯನ್ನು ಒಮ್ಮೆ ಜಿಯೋ ಫೆನ್ಸಿಂಗ್ ಮೂಲಕ ಫೀಡ್ ಮಾಡಿ, ಕನೆಕ್ಟೆಡ್ ಕಾರು ಮೂಲಕ ನಿಮ್ಮ ಮೊಬೈಲ್ ಮತ್ತು ಕಾರು ಬೆಸೆದುಕೊಂಡಿದ್ದರೆ, ಈ ದೈನಂದಿನ ಕಾಲೇಜಿಗೆ ಹೋಗಿ ಬರುವ ದಾರಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಹೀಗೆ ಕಾರು ಓಡಾಡುವ ಚಟುವಟಿಕೆಯ ಮೇಲೆ ಸುಲಭವಾಗಿ ಕಣ್ಣಿಡಬಹುದು. ಕಾರೊಂದು ದಾರಿಯಲ್ಲಿ ಸಾಗುವಾಗ ಅಪಘಾತಕ್ಕೀಡಾದರೆ, ಕೂಡಲೇ ಹತ್ತಿರದ ಸಂಚಾರಿ ಪೋಲೀಸ್‍ರಿಗೂ ಇಲ್ಲ ಅಪಘಾತವಾದ ವ್ಯಕ್ತಿಗಳ ಕುಟುಂಬಕ್ಕೆ ಕೂಡಲೇ ಕಾರು ಮಾಹಿತಿ ಒದಗಿಸಿ ಜೀವ ಉಳಿಸುವ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಗಾಡಿಯೊಂದು ಘಾಟಿ ಪ್ರದೇಶದಲ್ಲಿ ಸಾಗುತ್ತಿದೆ, ಮುಂದೆ ಹತ್ತಾರು ಮೈಲಿ ದೂರದಲ್ಲಿ ಗುಡ್ಡ ಕುಸಿತ, ಭೂಕುಸಿತವಾದರೆ, ಕೂಡಲೇ ಅದರ ಮಾಹಿತಿ ಗಾಡಿಗೆ ತಲುಪುತ್ತದೆ. ಆಗ ಓಡಿಸುಗ ಮುಂದೆ ಸಾಗುವ ಅಪಾಯವನ್ನು ಅರಿತು ಗಾಡಿಯ ಸಾಗುವ ದಾರಿಯನ್ನು ಬದಲಿಸಿಯೋ ಇಲ್ಲವೇ ಭದ್ರವಾದ ಜಾಗವನ್ನು ಸೇರಿಕೊಳ್ಳಬಹುದು. ದೈನಂದಿನ ವ್ಯವಹಾರದ ಮೇಲೆ ಕಣ್ಣಿಡಲು, ಕಳ್ಳ-ಕಾಕರ ಚಟುವಟಿಕೆಗಳ ಮಾಹಿತಿ ಪಡೆದು ಪೋಲೀಸ್ ವ್ಯವಸ್ಥೆಗೆ ನೆರವಾಗಲು ಬೆಸುಗೆಯ ಗಾಡಿಗಳ ಅಗತ್ಯವಿರಲಿದೆ.

ಅನಾನುಕೂಲಗಳ ವಿಷಯ ಬಂದಾಗ, ಕಾರುಗಳ ಹ್ಯಾಕಿಂಗ್ ಮುಖ್ಯವಾದ ತೊಡಕಾಗುವ ಸಾಧ್ಯತೆ ಇದೆ. ಮಿಂಬಲೆ ಮೂಲಕ ಬೆಸೆದುಕೊಂಡಿರುವ ಗಾಡಿಗಳನ್ನು ವೆಬ್ಸೈಟ್ ಹ್ಯಾಕ್ ಮಾಡುವಂತೆ ದೂರದಲೆಲ್ಲೋ ಇರುವ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡರೆ ಆಗುವ ಅನಾಹುತಗಳನ್ನು ಯೋಚಿಸಿ. ಇನ್ನೂ ದಿಗಿಲುಕೋರರು ಕಾರುಗಳನ್ನು ತಮ್ಮ ವಶಕ್ಕೆ ಪಡೆದು, ಯಾವುದೋ ದೇಶದ ಮೂಲೆಯಿಂದ ಕಾರನ್ನು ಅದರ ಮಾಲೀಕನ ಮೊಬೈಲ್ ಹೀಗೆ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದು ಕೊಲೆ ಸುಲಿಗೆ ಮಾಡುವ ಅಪಾಯ ತಪ್ಪಿದ್ದಲ್ಲ. ಮಾದಕ ವಸ್ತು ಸಾಗಾಟಗಾರರು ಈ ತಂತ್ರಜ್ಞಾನದ ಮೂಲಕ ಕಳ್ಳದಾರಿಗಳ ಮೂಲಕ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಸಮಾಜವನ್ನು ಹಾಳುಗೆಡುವಬಹುದು. 

ಮಾಹಿತಿ ಗುಟ್ಟನ್ನು ಕಾಪಾಡಿಕೊಳ್ಳುವುದು ಕಷ್ಟ. ಬೆಸುಗೆಯ ಗಾಡಿಗಳನ್ನು ಕ್ಲೌಡ್, ಆಪ್ ಮೂಲಕ ಸಾಕಷ್ಟು ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರಿಂದ ಕಾರಿನೊಡೆಯರ ವೈಯುಕ್ತಿಕ ಮಾಹಿತಿ ಕಾರು ತಯಾರಕರಿಗೆ ಸುಲಭವಾಗಿ ತಲುಪುತ್ತದೆ. ಇಂತ ಮಾಹಿತಿಗೆ ಪ್ರವೇಶವಕಾಶ(Access) ಹೊಂದಿರುವವರು ತಮಗಿಷ್ಟದಂತೆ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಬೆಸುಗೆಯ ಗಾಡಿಗಳ ಸಾಧಕ ಬಾಧಕಗಳ ಚರ್ಚೆಗಳು ದಿನೇದಿನೇ ಜೋರಾಗಿ ನಡೆಯುತ್ತಲೇ ಇವೆ. ಬೆಸುಗೆಯ ಗಾಡಿಗಳ ಅನಾನುಕೂಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಭರದಲ್ಲಿ ಸಾಗಿವೆ. ಇದರ ಮಧ್ಯೆಯೇ ಸಾಕಷ್ಟು ಬೆಸುಗೆಯ ಗಾಡಿಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನವೂ ಓಡಾಡುತ್ತಿವೆ.

ಮಾಹಿತಿ ಸೆಲೆ: connected cars
ತಿಟ್ಟ ಸೆಲೆ: connected cars pic

Bookmark the permalink.

Comments are closed.