ಬೆಂಕಿ ಆರಿಸುಕ ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಬೆಂಕಿ ಆರಿಸುಕ ಇಂದು ಬಹುತೇಕ ಎಲ್ಲ ಕಡೆ ಕಾಣಸಿಗುತ್ತದೆ. ಮಾಲ್, ಕಚೇರಿ, ಬ್ಯಾಂಕ್, ಬಾನೋಡತಾಣ, ಸಿನೆಮಾ ಮಂದಿರ, ಶಾಲೆ, ಕಾರ್ಖಾನೆ, ಹೀಗೆ ಎಲ್ಲೆಡೆ ಕೆಂಪು ಬಣ್ಣದ ಸಿಲಿಂಡರ್ ಆಕಾರದ ಚಿಕ್ಕ,ದೊಡ್ಡ ಅಳತೆಯ ಬೆಂಕಿ ಆರಿಸುಕವನ್ನು ನಾವುಗಳು ನೋಡಿರುತ್ತೇವೆ. ಬೆಂಕಿ ಹತ್ತಿ ಅವಗಡ ಸಮಯದಲ್ಲಿ ಇವುಗಳು ಬಹಳ ನೆರವಿಗೆ ಬರುತ್ತವೆ. ಆದರೆ ಇವುಗಳು ಹೇಗೆ ಕೆಲಸ ಮಾಡುತ್ತವೆ? ಕಷ್ಟದ ಸಂದರ್ಭಗಳಲ್ಲಿ ಇವುಗಳನ್ನು ಹೇಗೆ ಬಳಸಬೇಕು ಎಂಬುದು ತಿಳಿಯೋಣ ಬನ್ನಿ. 

ಸಾಮಾನ್ಯವಾಗಿ ತಿಳಿದಿರುವಂತೆ, ಬೆಂಕಿ ಹೊತ್ತಿಕೊಳ್ಳಲು ಆಕ್ಸಿಜನ್ ಗಾಳಿ ಮತ್ತು ಉರುವಲು ಬೇಕಾಗುತ್ತದೆ. ಆದರೆ ಕೇವಲ ಆಕ್ಸಿಜನ್ ಗಾಳಿ, ಉರುವಲು ಇದ್ದರೆ ಬೆಂಕಿ ಉರಿಯಲ್ಲ. ಉರುವಲು ತನ್ನ ಉರಿತದ ಕಾವಳತೆ ಮಟ್ಟ(Ignition Temperature) ತಲುಪಿರಬೇಕು. ಒಟ್ಟಾಗಿ ಹೇಳುವುದಾದರೆ ಬೆಂಕಿ ಕಿಡಿಹೊತ್ತಿಕೊಳ್ಳಲು, ಆಕ್ಸಿಜನ್, ಉರುವಲು ಮತ್ತು ಬಿಸುಪು ಈ ಮೂರು ಇರಲೇಬೇಕು. ಬೆಂಕಿ ಆರಿಸಲು ಈ ಮೂರರಲ್ಲಿ ಒಂದನ್ನು ಕಡಿತಗೊಳಿಸಿಯೋ, ಇಲ್ಲವಾಗಿಸಿಯೋ ಬೆಂಕಿ ಆರಿಸಬಹುದು. ಸಣ್ಣದಾಗಿ ಬೆಂಕಿ ಹತ್ತಿದ್ದರೆ ದಪ್ಪ ಕಂಬಳಿ ಬಿಸಾಕಿ ಅದನ್ನು ನಿಲ್ಲಿಸುವುದನ್ನು ನೋಡಿರುತ್ತೇವೆ. ಕಂಬಳಿ ಬೆಂಕಿ ಮೇಲೆ ಬಿದ್ದಾಗ ವಾತಾವರಣದ ಆಕ್ಸಿಜನ್ ಪೂರೈಕೆ ನಿಂತು, ಬೆಂಕಿ ಆರುತ್ತದೆ. ಬೆಂಕಿ ಆರಿಸುಕ ಗಾಡಿಗಳು(Fire fighting Vehicles) ನೀರು ಸಿಡಿಸಿ ಬೆಂಕಿ ನಿಲ್ಲಿಸುತ್ತವೆ, ನೀರು ಸಿಂಪಡಿಸಿದಾಗ ಬಿಸುಪು ತಣ್ಣಗಾಗಿ ಬೆಂಕಿ ಆರುತ್ತದೆ. ಇದೇ ವಿಜ್ಞಾನ ಆಧಾರವಾಗಿಟ್ಟುಕೊಂಡು ಬೆಂಕಿ ಆರಿಸುಕಗಳನ್ನು ತಯಾರಿಸಲಾಗುತ್ತದೆ.

ಸಾಮಾನ್ಯವಾಗಿ ಬೆಂಕಿ ಆರಿಸುಕಗಳಲ್ಲಿ 4 ಬಗೆ.  ಅವು ಕೆಳಗಿನಂತಿವೆ:

  1. ನೀರಿನ ಬೆಂಕಿ ಆರಿಸುಕಗಳು
  2. ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳು
  3. ನೊರೆಯ ಬೆಂಕಿ ಆರಿಸುಕಗಳು
  4. ಪುಡಿ ತುಂಬಿದ ಬೆಂಕಿ ಆರಿಸುಕಗಳು

ನೀರಿನ ಬೆಂಕಿ ಆರಿಸುಕಗಳು ನೀರನ್ನು ಬೆಂಕಿ ಆರಿಸುವ ಮಾಧ್ಯಮವಾಗಿ ಬಳಕೆ ಮಾಡುತ್ತವೆ. ಒಂದು ಚಿಕ್ಕ ಸಿಲಿಂಡರ್ ಗಾತ್ರದ ಕೊಳಾಯಿಯಲ್ಲಿ ಬಹುಪಾಲು ನೀರು ತುಂಬಿರುತ್ತದೆ. ಅದರೊಳಗೆ ಒಂದು ಪುಟ್ಟ ಗಾಳಿ ತುಂಬಿದ ಡಬ್ಬಿ(canister) ಇರುತ್ತದೆ ಮತ್ತು ನೀರು ಚಿಮ್ಮಲು ಒಂದು ಕೊಳವೆ. ಈ ಕೊಳವೆಯು ಸಿಲಿಂಡರ್‌ನ ಒಂದು ಮೇಲ್ಭಾಗದ ಬಲಬದಿಗೆ ನೀರು ಚಿಮ್ಮಲು ಬಾಯಿ ತೆರೆದಿರುತ್ತದೆ. ಸಿಲಿಂಡರ್ ಮೇಲೆ ಉಂಗುರದ ಮೂಲಕ ಆಪರೇಟ್ ಮಾಡಬಹುದಾದ ಒಂದು ಹಿಡಿಕೆ. ಉಂಗುರ ಎಳೆದಾಗ ಹಿಡಿಕೆಯು ರಿಲೀಸ್ ಆಗಿ ಕೆಳಗಿನ ಗಾಳಿ ತುಂಬಿದ ಡಬ್ಬಿಯ ತೆರಪು(Valve) ತೆರೆಯುವಂತೆ ಮಾಡುತ್ತದೆ. ಇದರಿಂದ ಗಾಳಿಯು ಸಿಲಿಂಡರ್ ತುಂಬಾ ಸೇರಿ ನೀರನ್ನು ಕೆಳಕ್ಕೆ ದಬ್ಬುತ್ತದೆ. ಇದರಿಂದ ನೀರಿನ ಮೇಲೆ ಒತ್ತಡ ಉಂಟಾಗಿ, ಕೊಳವೆ ಮೂಲಕ ಹೊರಕ್ಕೆ ಚಿಮ್ಮಲ್ಪಡುತ್ತದೆ. ಹೀಗೆ ನೀರು, ಬೆಂಕಿಯ ಬಿಸುಪನ್ನು ಹೀರಿ ಬೆಂಕಿ ಆರುವ ಕೆಲಸ ನಡೆಯುತ್ತದೆ.

ನೊರೆಯ ಬೆಂಕಿ ಆರಿಸುಕಗಳು: ಇವುಗಳು ನೀರಿನ ಬೆಂಕಿ ಆರಿಸುಕಗಳಂತೆ ಕೆಲಸ ಮಾಡುತ್ತವೆ. ಆದರೆ ಕೊಳಾಯಿಯ ಒಳಗೆ ನೀರಿನ ಜೊತೆ ನೊರೆಯು ಸೇರಿರುತ್ತದೆ. ಈ ನೊರೆಯು ಸೋಡಿಯಮ್ ಬೈಕಾರ್ಬೋನೆಟ್‍ನಿಂದ ತಯಾರಿಸಿದ್ದಾಗಿರುತ್ತದೆ. ಕೊಳಾಯಿ ಮೇಲ್ಭಾಗದ ಹಿಡಿಕೆಯ ಉಂಗುರ ಎಳೆದಾಗ ನೊರೆಯ ಜೊತೆ ನೀರು ಸೇರಿ ದೊಡ್ಡ ಗಾತ್ರದ ನೊರೆಯು ಉರಿಯುತ್ತಿರುವ ಬೆಂಕಿಯ ಮೇಲೆ ಸಿಂಪಡನೆಗೊಂಡು ಬೆಂಕಿಗೆ ಆಕ್ಸಿಜನ್ ಹರಿವನ್ನು ತಡೆಯುತ್ತದೆ ಮತ್ತು ಬಿಸುಪನ್ನು ಹೀರಿಕೊಳ್ಳುತ್ತ ಬೆಂಕಿ ನಿಲ್ಲಿಸುತ್ತವೆ.

ಪುಡಿಯ ಬೆಂಕಿ ಆರಿಸುಕಗಳು: ಪುಡಿ ಬೆಂಕಿ ಆರಿಸುಕಗಳು ಹೆಚ್ಚು ಕಡಿಮೆ ನೀರು ಇಲ್ಲವೇ ನೊರೆಯ ಆರಿಸುಕಗಳಂತೆ ಈಡುಗಾರಿಕೆ(Design) ಹೊಂದಿರುತ್ತವೆ. ಆದರೆ ಇಲ್ಲಿ ನೊರೆ ಇಲ್ಲವೇ ನೀರಿನ ಬದಲು ಬೆಂಕಿ ಆರಿಸಲು ನೆರವಾಗುವ ಮೊನೊಅಮೋನಿಯಂ ಫಾಸ್ಫೇಟ್(Monoammonium Phosphate) ಪುಡಿಯನ್ನು ಬಳಸುತ್ತಾರೆ. ಇದರೊಟ್ಟಿಗೆ ಪೊಟ್ಯಾಸಿಯಂ ಬೈಕಾರ್ಬೋನೆಟ್ ಇಲ್ಲವೇ ಸೋಡಿಯಂ ಬೈಕಾರ್ಬೋನೆಟ್ ಪುಡಿಗಳನ್ನು ಬಳಕೆ ಮಾಡುತ್ತಾರೆ. ಈ ಪುಡಿ ಬೆಂಕಿಯ ಮೇಲೆ ಬಿದ್ದಾಗ ರಾಸಾಯನಿಕ ಕ್ರಿಯೆಯಿಂದ ಬೆಂಕಿಯ ಬಿಸುಪನ್ನು ಹೀರಿ, ಕರಗುತ್ತ ಉರುವಲಿನ ಆವಿಯಾಗಿಸಿ ಬೆಂಕಿಗೆ ಅವಶ್ಯವಿರುವ ಆಕ್ಸಿಜನ್ ಹರಿವನ್ನು ಕಡಿತ ಮಾಡುತ್ತದೆ. 

(ಈ ಮೇಲಿರುವ ತಿಟ್ಟದಲ್ಲಿ ಸಾಮಾನ್ಯವಾಗಿ ಬೆಂಕಿ ಆರಿಸುಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸಲಾಗಿದೆ).

 ಪುಡಿ, ನೀರು ಮತ್ತು ನೊರೆಯ ಈ ಮೂರು ತರಹದ ಬೆಂಕಿ ಆರಿಸುಕಗಳಲ್ಲಿ ಮುನ್ನುಗ್ಗುಕವೊಂದನ್ನು(Propellent) ಬಳಸುತ್ತಾರೆ. ಕ್ಯಾನಿಸ್ಟರ್(ಡಬ್ಬಿ)ಗಳಲ್ಲಿ ಇದೇ ಮುನ್ನುಗ್ಗುಕ ಗಾಳಿಯನ್ನು ಕೂಡಿಡುತ್ತಾರೆ. ಹೆಚ್ಚಾಗಿ ಸಾರಜನಕ(ನೈಟ್ರೋಜನ್) ಇಲ್ಲವೇ ಕಾರ್ಬನ್ ಡೈಆಕ್ಸೈಡ್‍ಗಳನ್ನೇ ಮುನ್ನುಗ್ಗುಕವಾಗಿ ಬಳಸುತ್ತಾರೆ. ಬೆಂಕಿ ಆರಿಸುಕಗಳಲ್ಲಿ, ಹೆಚ್ಚಿನ ಒತ್ತಡದಲ್ಲಿ ಕೂಡಿಟ್ಟಿರುವ ಮುನ್ನುಗ್ಗುಕ ಸ್ಪೋಟಗೊಳ್ಳಬಾರದೆಂದು ಗಟ್ಟಿಮುಟ್ಟಾದ ಉಕ್ಕಿನಿಂದ ತಯಾರಿಸಿಲಾಗಿರುತ್ತದೆ.

ಕಾರ್ಬನ್ ಡೈಆಕ್ಸೈಡ್ ಬೆಂಕಿ ಆರಿಸುಕಗಳು ಕೂಡ ಕೆಂಪು ಬಣ್ಣದ ಸಿಲಿಂಡರ್‌ಗಳಿಂದಾಗಿರುತ್ತವೆ. ಇಲ್ಲಿ ನೀರಿನ ಬದಲು ಕಾರ್ಬನ್ ಡೈಆಕ್ಸೈಡ್ ಗಾಳಿಯನ್ನು ಬಳಸುತ್ತಾರೆ. ಈ ತರದ ಆರಿಸುಕಗಳು ದೊಡ್ಡದಾದ ಕೋನ್  ಆಕಾರದ ಬಾಯಿ ಹೊಂದಿರುತ್ತವೆ. ಇದಕ್ಕೆ ಹಾರ್ನ್ ಎಂದು ಹೇಳಲಾಗುತ್ತದೆ, ಈ ದೊಡ್ಡ ಹಾರ್ನ್ ಮೂಲಕವೇ ಇವುಗಳು ಇಂಗಾಲದ ಬೆಂಕಿ ಆರಿಸುಕಗಳು ಎಂದು ಗುರುತಿಸಬಹುದು. ಇಲ್ಲಿ ಕೂಡ ಮೇಲ್ಭಾಗದಲ್ಲಿ ಹಿಡಿಕೆ-ಅದಕ್ಕೆ ಜೋಡಿಸಲ್ಪಟ್ಟ ತೆರಪಿನ ಏರ್ಪಾಟು ಇರುತ್ತದೆ. ಕೆಂಪು ಕೊಳಾಯಿಯ ಒಳಗೆ ದ್ರವರೂಪದಲ್ಲಿ ಇಂಗಾಲದ ಡೈಆಕ್ಸೈಡ್ ತುಂಬಿರುತ್ತಾರೆ. ಹಿಡಿಕೆಯನ್ನು ಜೋರಾಗಿ ಅದುಮಿದಾಗ ತೆರಪು ತೆರೆದುಕೊಂಡು, ವೇಗದಿಂದ CO2 ಮಂಜಿನಂತೆ ಉರಿಯುವ ಬೆಂಕಿಗೆ  ಬಿಳಿಯ ದಟ್ಟ ಹೊಗೆ ರೂಪದಲ್ಲಿ ಸಿಂಪಡನೆಗೊಂಡು, ಅದನ್ನು ನಿಲ್ಲಿಸುತ್ತದೆ. ಇಲ್ಲಿ ಕೋನ್  ಆಕಾರದ ಹಾರ್ನ್ ರಚನೆ ಬಲುಮುಖ್ಯ.. ವೇಗದಿಂದ ಬರುವ ಕಾರ್ಬನ್ ಡೈಆಕ್ಸೈಡ್ ಬಿರುಸಾದ ಹರಿವಿನಿಂದ ಹಿಗ್ಗುತ್ತಾ ತಂಪಾದ ಮಂಜಿನ ಗಾಳಿ ಹೊರಸೂಸಲು ಅನುಕೂಲವಾಗುವಂತೆ ಹಾರ್ನ್ ಈಡುಗಾರಿಕೆ ಮಾಡಲಾಗಿರುತ್ತದೆ. 

ಈ ಎಲ್ಲ ಬಗೆಯ ಬೆಂಕಿ ಆರಿಸುಕಗಳನ್ನು ಎಲ್ಲ ರೀತಿಯ ಬೆಂಕಿ ಅವಘಡಗಳಲ್ಲಿ ಬಳಸಲಾಗದು. ತಪ್ಪು ಬಳಕೆಯಿಂದ ಅಪಾಯವಾಗುವ ಸಾಧ್ಯತೆಯುಂಟು. ಅದಕ್ಕೆಂದೇ ಬೆಂಕಿಯನ್ನು ಅವುಗಳು ಉಂಟಾದ ಮೂಲದಿಂದ ಬಗೆಗಳಾಗಿ ಗುರುತಿಸಿ, ಅದಕ್ಕೆ ತಕ್ಕುದಾದ ಬೆಂಕಿ ಆರಿಸುಕಗಳನ್ನು ಬಳಸಬೇಕು. ಕ್ಲಾಸ್ ಎ,ಬಿ,ಸಿ,ಡಿ,ಈ ಮತ್ತು ಎಫ್ ಎಂಬ 6 ಬಗೆಯ ಬೆಂಕಿಗಳನ್ನು ಗುರುತಿಸಲಾಗಿದೆ.

ಕ್ಲಾಸ್ ಎ – ಸೌದೆ/ಕಟ್ಟಿಗೆ, ಕಾಗದ, ಪ್ಲ್ಯಾಸ್ಟಿಕ್, ರಬ್ಬರ್ ಮುಂತಾದ ಗಟ್ಟಿವಸ್ತುಗಳಿಂದ ಹೊತ್ತಿಕೊಂಡಿರುವ ಬೆಂಕಿಯು ಈ ಸಾಲಿಗೆ ಸೇರುತ್ತದೆ. ಇದನ್ನು ನೀರಿನ ಬೆಂಕಿ ಆರಿಸುಕ ಬಳಸಿ ತಡೆಹಿಡಿಯಬಹುದು.

ಕ್ಲಾಸ್ ಬಿ – ದ್ರವರೂಪದ ಗಾಳಿ, ದ್ರವ ವಸ್ತುಗಳಿಂದ ಹೊತ್ತಿರುವ ಬೆಂಕಿಯನ್ನು ಕ್ಲಾಸ್ ಬಿ ತರಹದ ಬೆಂಕಿ. ಇಂತ ಬೆಂಕಿ ಆರಿಸಲು ನೊರೆಯ ಬೆಂಕಿ ಆರಿಸುಕ ಬಳಸಬಹುದು.

ಕ್ಲಾಸ್ ಸಿ – ಒತ್ತಡದಲ್ಲಿ ಕೂಡಿಟ್ಟ ದ್ರವ ಇಲ್ಲವೇ ದ್ರವರೂಪದ ಗಾಳಿಯಿಂದ ಹೊತ್ತಿಕೊಂಡ ಬೆಂಕಿ ಕ್ಲಾಸ್ ಸಿ ಬಗೆಯ ಬೆಂಕಿ. ಉದಾಹರಣೆಗೆ:ಎಲ್ಪಿಜಿ ಸಿಲಿಂಡರ್ ಮುಂತಾದವುಗಳಿಂದ ಹೊತ್ತಿದ ಬೆಂಕಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಡಿ – ಸರಳವಾಗಿ ಹೊತ್ತಿಯುರಿಯುವ ಮಾಗ್ನೇಸಿಯಂ, ಅಲ್ಯುಮಿನಿಯಂ, ಸತು, ಪೊಟ್ಯಾಸಿಯಂ, ಸೋಡಿಯಮ್ ಮುಂತಾದ ಜಲ್ಲಿಗಳಿಂದ ಹತ್ತುವ ಬೆಂಕಿ ಕ್ಲಾಸ್ ಡಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಈ – ಎಲೆಕ್ಟ್ರಿಕಲ್ ವಾಹಕ ವಸ್ತುಗಳಿಂದ ಉಂಟಾದ ಬೆಂಕಿ. ಕಾರ್ಬನ್ ಡೈ ಆಕ್ಸೈಡ್ ಮತ್ತು ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಕ್ಲಾಸ್ ಎಫ್ – ಅಡುಗೆ ಎಣ್ಣೆ, ಕೊಬ್ಬು ಮುಂತಾದ ವಸ್ತುಗಳಿಂದ ಉಂಟಾದ ಬೆಂಕಿ. ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಹೀಗೆ ಬೆಂಕಿಗಳ ಬಗೆಗಳಿಗೆ ತಕ್ಕ ಬೆಂಕಿ ಆರಿಸುಕ ಬಳಸಬೇಕು. ಒಂದು ಬಗೆಯ ಬೆಂಕಿಗೆ ಬೇರೆ ಬೇರೆ ಬಗೆಯ 2-3 ಬಗೆಯ ಬೆಂಕಿ ಆರಿಸುಕಗಳನ್ನು ಬಳಸಬಹುದಾಗಿರುತ್ತದೆ.  ಯಾವ ಬೆಂಕಿ ಆರಿಸುಕ ಯಾವ ಬಗೆಯ ಬೆಂಕಿಗೆ ಸೂಕ್ತ ಎಂಬುದನ್ನು ನುರಿತ ತರಬೇತುದಾರರಿಂದ ತರಬೇತಿ ಪಡೆದವರು ಬಳಸಬೇಕು. ನೀರಿನ ಬೆಂಕಿ ಆರಿಸುಕಗಳಿಗೆ ಕೆಂಪು, ನೊರೆಯ ಬೆಂಕಿ ಆರಿಸುಕ ಹಳದಿ, ಪುಡಿಯ ಬೆಂಕಿ ಆರಿಸುಕಕ್ಕೆ ನೀಲಿ ಮತ್ತು ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳಿಗೆ ಕಪ್ಪು ಬಣ್ಣದ ಗುರುತು ಹಾಕಿರಲಾಗಿರುತ್ತದೆ.

ಬಳಸುವ ಬಗೆ:  ಬೆಂಕಿ ಆರಿಸುಕದ ಮೂತಿ ಇಲ್ಲವೇ ಚಿಮ್ಮುಕವನ್ನು ಬೆಂಕಿ ಇರುವ ಕಡೆ ತಿರುಗಿಸಿ ಬೆಂಕಿಗೆ ಗುರಿಯಾಗಿಸಿ, ಹಿಡಿಕೆಯ ಮೇಲಿರುವ ಉಂಗುರ ಎಳೆಯಬೇಕು ಆಗ ಬೆಂಕಿ ಮೆಲ್ಲಗೆ ಆರ ತೊಡಗುತ್ತದೆ. ಇದು ಒಂದು ರೀತಿಯಲ್ಲಿ ಬಂದೂಕನ್ನು ಸರಿಯಾದ ಗುರಿಯತ್ತ ತಿರುಗಿಸಿ ಟ್ರಿಗ್ಗರ್ ಅದುಮಿದಂತೆ ಎನ್ನಬಹುದು. ಬೆಂಕಿ ಆರಿಸುಕ ಬಳಸಲು ಕಚೇರಿ, ಮಾಲ್, ಬ್ಯಾಂಕ್, ಬಾನೋಡತಾಣ ಮುಂತಾದ ಕಡೆ ಭದ್ರತಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈ ತರಬೇತಿ ನೀಡಿದ ವ್ಯಕ್ತಿಗಳಿಗೆ ಮಾತ್ರ ಬೆಂಕಿ ಆರಿಸುಕವನ್ನು ಸರಿಯಾಗಿ ಬಳಸಬಹುದು. ಬೆಂಕಿ ಆರಿಸುಕ ಬಳಸುವ ಮುನ್ನ ಯಾರೇ ಆಗಲಿ ಈ ತರಬೇತಿ ಪಡೆಯಲೇಬೇಕು. ಸರಿಯಾದ ತರಬೇತಿ ಇರದೇ ಬಳಸಲು ಹೋಗಿ ಹಲವರು ತಮಗೆ ಅಪಾಯ ಮಾಡಿಕೊಂಡ ಹಲವು ಘಟನೆಗಳು ನಡೆದಿವೆ.

ಮಾಹಿತಿ ಮತ್ತು ತಿಟ್ಟ ಸೆಲೆ:explainthatstuff.com