ಜೇನಿನ ಜಾಡು ಹಿಡಿದು

ರತೀಶ ರತ್ನಾಕರ.

‘ಸಾವಿರ ಹೂವ ಎದೆಹನಿ ಬೇಕು ಜೀನಿನ ಗೂಡಾಗಲು… ಸಾವಿರ ಭಾವ ಸಂದಿಸ ಬೇಕು ಕನ್ನಡ ನಾಡಾಗಲು…‘ ಈ ಹಾಡಿನ ಸಾಲುಗಳು ಹೇಳುವಂತೆ, ಸಾವಿರ ಹೂವಿನ ಸವಿಯನ್ನು ಕೂಡಿಟ್ಟು ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಬದುಕು ಹಲವು ಸೋಜಿಗದಿಂದ ಕೂಡಿದೆ. ಪುಟ್ಟ ಹುಳುವಿನ ಬದುಕಿನ ಬಗೆಯನ್ನು ಅರಿಯ ಹೊರಟರೆ ನಮಗೆ ಸಾಕಷ್ಟು ಬೆರಗುಗಳು ಎದುರಾಗುತ್ತವೆ. ಈ ಹಸಿರು ನೆಲವು ನೀಡಿರುವ ಅಪರೂಪದ ಕೀಟ ಜೇನುಹುಳ ಎಂದರೆ ತಪ್ಪಾಗಲಾರದು. ಜೇನಿನ ಮಡಕೆ, ಪೆಟ್ಟಿಗೆಗಳನ್ನಿರಿಸಿ ಜೇನುಗಳಿಗೆ ಬೇಕಾದ ಕಾವು ಮತ್ತು ಗಾಳಿಪಾಡನ್ನು ಕೊಟ್ಟರೆ, ನಾವು ಇಟ್ಟ ಪೆಟ್ಟಿಗೆ-ಮಡಕೆಗಳಲ್ಲಿ ಜೇನುಗೂಡನ್ನು ಕಟ್ಟಿ, ಜೇನುತುಪ್ಪವನ್ನು ನಮಗೆ ಬಿಟ್ಟು ಹೋಗುತ್ತವೆ. ಇದ್ಯಾವುದು ಇಲ್ಲದಿದ್ದರೆ ತನ್ನ ಪಾಡಿಗೆ ಗಿಡದ ಕೊಂಬೆಯಲ್ಲೋ, ಮರದ ಪೊಟರೆಯಲ್ಲೋ ತನ್ನ ಗೂಡನ್ನು ಕಟ್ಟಿಕೊಂಡು ಬದುಕನ್ನು ಕಂಡುಕೊಳ್ಳುತ್ತದೆ. ಮಾನವನಿಗೆ ಬೇಕಾದರೆ ನೆರವಾಗುವ, ಬೇಡವಾದರೆ ತನ್ನ ಪಾಡಿಗೆ ತಾನು ಬದುಕುವ ಒಂದು ಬೆರಗಿನ ಹುಳು ಇದಾಗಿದೆ!

ಈ ನೆಲದಲ್ಲಿ ಇನ್ನೂ ಬದುಕಿರುವ ತುಂಬಾ ಹಳೆಯದಾದ ಪೀಳಿಗೆಗಳಲ್ಲಿ ಜೇನುಹುಳವು ಕೂಡ ಒಂದು. ನೆಲದ ಮೇಲೆ ಹೂವಿನ ಹುಟ್ಟು ಆದ ಹೊತ್ತಿನಲ್ಲಿ ಜೇನುಹುಳುಗಳ ಹುಟ್ಟು ಆಗಿರಬೇಕು ಎಂದು ಅಂದಾಜಿಸಲಾಗುತ್ತದೆ. ಹೂದುಂಬುಗೆ(Pollination)ಯಿಂದ ಹೂವಿನ ಪೀಳಿಗೆ ಬೆಳೆಯಲು ಜೇನುಹುಳ ಹಾಗು ಮತ್ತಿತರ ಕೀಟಗಳ ನೆರವು ಬೇಕಾಗುತ್ತದೆ. ಹಾಗೆಯೇ, ಹೂವಿನ ಸವಿಕುಡಿಗೆ(nectar)ಯನ್ನು ತಿಂದು ಬದುಕನ್ನು ನಡೆಸಲು ಜೇನಿಗೆ ಹೂವು ಬೇಕಾಗುತ್ತದೆ. ಒಂದಕ್ಕೊಂದು ನೆರವಾಗಿ ಹೀಗೆ ಉಳಿದು ಬೆಳೆದುಕೊಂಡು ಬಂದವು ಇವು.

ಕಾಡಿನಲ್ಲಿ ಅಲೆಮಾರಿಯಾಗಿದ್ದ ಮಾನವನಿಗೆ ಜೇನಿನ ಪರಿಚಯ ಮೊದಲೇ ಇದ್ದಿರಬೇಕು. ಆದರೂ, ಪುರಾವೆಗಳ ನೆರವಿನಿಂದ ಹೇಳುವುದಾದರೆ ಜೇನಿನ ಪರಿಚಯವು ಮಾನವನಿಗೆ ಸುಮಾರು 6000 C.E ದಿಂದ ಇರಬಹುದು ಎಂದು ಹೇಳಲಾಗಿದೆ. ಸ್ಪೇನ್ ನಲ್ಲಿ ಇರುವ ಕಲ್ಲುಕಾಲದ (Stone Age) ಗುಹೆಗಳಲ್ಲಿ, ಕೆತ್ತಿರುವ ಜೇನುಗೂಡಿನ ಚಿತ್ರಗಳು ಕಂಡುಬಂದಿವೆ. ಸುಮಾರು 3000 ವರುಶಗಳಷ್ಟು ಹಿಂದೆ ಕಟ್ಟಲಾಗಿರುವ ಈಜಿಪ್ಟಿನ ಹೂಳುಕಟ್ಟಡಗಳಲ್ಲಿಯೂ (Tomb) ಕೂಡ ಜೇನುಗೂಡಿನ ಚಿತ್ರಗಳು ಕಂಡುಬಂದಿವೆ. ಬಡಗಣ ಇಸ್ರೇಲಿನಲ್ಲಿ ಸುಮಾರು 3000 ವರುಶಗಳಷ್ಟು ಹಳೆಯದಾದ ಪಳೆಯುಳಿಕೆಗಳಲ್ಲಿ, ಆ ಕಾಲದ ಜೇನುಸಾಕಣೆಯ ಪಾಳು ಮಡಕೆಗಳು ಕಂಡುಬಂದಿವೆ. ನಮ್ಮ ಹಿರಿಯರಿಗೆ ತುಂಬಾ ಮುಂಚಿನಿಂದಲೇ ಪರಿಚಯವಿರುವ ಜೇನುಗಳು ನಮ್ಮ ಬದುಕಿಗೆ ಒಂದಲ್ಲ ಒಂದು ಬಗೆಯಲ್ಲಿ ನೆರವಾಗುತ್ತಾ ಬಂದಿವೆ.

ಜೇನುಹುಳವು ‘ಅಪಿಸ್‘(Apis) ಎಂಬ ಕೀಟದ ತಳಿಯಾಗಿದ್ದು (Genus) ಇದರಲ್ಲಿ ಐದು ಮುಖ್ಯವಾಗಿ ಪಂಗಡ (species)ಗಳಿವೆ. ಜೇನಿನ ಪಂಗಡಗಳು ಮತ್ತು ಅವು ಹೆಚ್ಚಾಗಿ ಕಂಡು ಬರುವ ಜಾಗಗಳ ವಿವರ ಕೆಳಗೆ ನೀಡಲಾಗಿದೆ.

 

ಜೇನುಗೂಡು:
ಯಾವುದೇ ಒಂದು ಜೇನುಗೂಡಿನಲ್ಲಿ ಬೇಸಿಗೆಯ ಹೊತ್ತಿನಲ್ಲಿ ಸುಮಾರು 40 – 60 ಸಾವಿರ ಜೇನುಹುಳುಗಳು ಇರುತ್ತವೆ. ಹಾಗೆಯೇ ಚಳಿಗಾಲದಲ್ಲಿ ಸುಮಾರು 20 ಸಾವಿರ ಜೇನುಹುಳುಗಳಿರುತ್ತವೆ. ಚಳಿಗಾಲದ ಹೊತ್ತಿಗೆ ಒಂದು ಜೇನುಗೂಡಿನಿಂದ ಹಲವು ಹುಳಗಳು ಬೇರೊಂದು ಒಡತಿ ಜೇನಿನ ಒಡಗೂಡಿ ಬೇರೆ ಗೂಡಿಗೆ ಹೋಗುವುದರಿಂದ ಮತ್ತು ಕೆಲವು ಗೂಡುಗಳಲ್ಲಿ, ಇನ್ನೂ ಮೊಟ್ಟೆಯೊಡೆದು ಜೇನುಹುಳಗಳು ಹೊರ ಬರದೇ ಇರುವುದರಿಂದ, ಚಳಿಗಾಲದಲ್ಲಿ ಅವುಗಳ ಎಣಿಕೆ ಒಂದು ಗೂಡಿನಲ್ಲಿ ಕಡಿಮೆಯಿರುತ್ತದೆ. ಒಂದು ಜೇನುಗೂಡಿನಲ್ಲಿ ಮೂರು ಬಗೆಯ ಜೇನುಹುಳಗಳಿರುತ್ತವೆ. ಅವೆಂದರೆ ಒಡತಿ ಜೇನುಹುಳ(Queen), ಗಂಡು ಜೇನುಹುಳ(Drone) ಮತ್ತು ದುಡಿಮೆಗಾರ ಜೇನುಹುಳಗಳು(Worker). ಒಂದು ಸಾಮಾನ್ಯವಾದ ಜೇನುಗೂಡಿನಲ್ಲಿ ಈ ಹುಳುಗಳ ಎಣಿಕೆ ಈ ಕೆಳಗಿನಂತಿರುತ್ತದೆ;
– 1 ಒಡತಿ ಜೇನುಹುಳ
– 100 – 300 ಗಂಡು ಜೇನುಹುಳಗಳು
– 20 – 60 ಸಾವಿರ ದುಡಿಮೆಗಾರ ಜೇನುಹುಳಗಳು
ಇದಲ್ಲದೇ, ಒಡತಿ ಜೇನುಹುಳವು ಇಟ್ಟ ಮೊಟ್ಟೆಗಳು, ಕಾವುಗೂಡುಗಳು (Brood), ಮೊಟ್ಟೆಯಿಂದ ಮರಿಯಾಗುವ ಹಂತದಲ್ಲಿರುವ ಲಾರ‍್ವ ಹಾಗು ಪ್ಯೂಪಗಳು ಒಂದು ಜೇನುಹುಟ್ಟಿನಲ್ಲಿ ಕಂಡುಬರುವ ಜೀವಿಗಳು.

ಜೇನುಹುಳದ ಒಡಲರಿಮೆ:
ಒಂದು ಜೇನುಹುಳವನ್ನು ಮೂರು ತುಂಡುಗಳಾಗಿ ನೋಡಬಹುದು. ಅವು ತಲೆ, ಬಗ್ಗರಿ(Thorax) ಮತ್ತು ಹೊಟ್ಟೆಯ ಭಾಗ (abdomen). ಜೇನಿನ ಮುಖ್ಯವಾದ ಭಾಗ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

ತೆಲೆ: ಎದುರುಗಡೆಯಿಂದ ಜೇನುಹುಳದ ತಲೆಯನ್ನು ನೋಡಿದರೆ ಮುಮ್ಮೂಲೆಯ ಆಕಾರದಲ್ಲಿ ಕಾಣುತ್ತದೆ. ತಲೆಯ ಮುಖ್ಯವಾದ ಭಾಗ ಎಂದರೆ ಮಿದುಳು. ಜೇನುಹುಳದ ಮಿದುಳಿನಲ್ಲಿ ಸುಮಾರು 950,000 ನ್ಯೂರಾನ್ ಗಳು ಇವೆ. ತಲೆಯ ಭಾಗದಲ್ಲೇ ಕಣ್ಣು ಮತ್ತು ಎರಡು ಅರಿಗೊಂಬುಗಳು (Antennae) ಇವೆ.

ಅರಿಗೊಂಬುಗಳು: ಜೇನುಹುಳುವಿನ ಅರಿಗೆಗಳಾಗಿ (Sense Organ) ಇವು ಕೆಲಸ ಮಾಡುತ್ತವೆ. ಅರಿಗೊಂಬುಗಳಲ್ಲಿರುವ ಸಣ್ಣ ಸಣ್ಣ ಕೂದಲುಗಳು ವಾಸನೆ ಮತ್ತು ತಾಕುವಿಕೆಯ ಅರಿವನ್ನು ಮಿದುಳಿಗೆ ಕಳಿಸಲು ನೆರವಾಗುತ್ತವೆ.

ಕಣ್ಣುಗಳು: ಜೇನುಹುಳುವಿಗೆ ಒಟ್ಟು ಐದು ಕಣ್ಣುಗಳು! ಹೌದು, ಎರಡು ಕೂಡುಗಣ್ಣುಗಳು (compound eyes) ಮತ್ತು ಮೂರು ಸುಳುಗಣ್ಣುಗಳು(simple eyes) ಸೇರಿ ಒಟ್ಟು ಐದು ಕಣ್ಣುಗಳನ್ನು ಜೇನುಹುಳವು ಹೊಂದಿದೆ. ತುಂಬಾ ಚಿಕ್ಕದಾಗಿರುವ ಗಾಜಿನಂತಹ ಸಾವಿರಾರು ತುಣುಕುಗಳು ಸೇರಿ ಕೂಡುಕಣ್ಣುಗಳು ಆಗಿವೆ. ಈ ಸಣ್ಣ ತುಣುಕುಗಳನ್ನು ಒಮ್ಮಟಿಡಿಯಾ (ommatidia) ಎಂದು ಕರೆಯುತ್ತಾರೆ. ಕೂಡುಕಣ್ಣಿನ ಪ್ರತಿಯೊಂದು ತುಣುಕು, ತಾನು ಕಾಣುವ ಚಿತ್ರವನ್ನು ಮಿದುಳಿಗೆ ಕಳಿಸುತ್ತದೆ. ಹೀಗೆ ಎಲ್ಲಾ ತುಣುಕುಗಳಿಂದ ಬರುವ ಚಿತ್ರಗಳನ್ನು ಒಟ್ಟುಗೂಡಿಸಿ ಹೊರಗೆ ಒಟ್ಟಾರೆಯಾಗಿ ಏನು ಕಾಣುತ್ತಿದೆ ಎಂಬುದನ್ನು ಮಿದುಳು ಗುರುತಿಸುತ್ತದೆ. ಈ ಕೂಡುಕಣ್ಣಿನ ನೆರವಿನಿಂದ ಹೂಗಳ ಇಲ್ಲವೇ ತಾನು ಕಾಣುವ ಯಾವುದೇ ವಸ್ತುವಿನ ಅಲುಗಾಟವನ್ನು ಜೇನುಹುಳವು ಕೂಡಲೇ ಗುರುತಿಸಬಹುದು.
ಇನ್ನು, ಮೂರು ಸುಳುಗಣ್ಣುಗಳು ಕೂಡುಕಣ್ಣುಗಳ ಮೇಲೆ ಇವೆ. ಇವು ಬೆಳಕು ಮತ್ತು ಕಾಣುವ ಇತರೆ ಸಾಮಾನ್ಯ ವಸ್ತುಗಳನ್ನು ಗುರುತಿಸುತ್ತವೆ. ಮಾನವನ ಕಣ್ಣು ಕೆಂಪು-ಹಸಿರು-ನೀಲಿ (RGB) ಬಣ್ಣಗಳ ಪಟ್ಟಿಯನ್ನು ಗುರುತಿಸುವ ತಾಕತ್ತು ಹೊಂದಿದೆ ಆದರೆ ಜೇನುಹುಳದ ಕಣ್ಣು ಹಸಿರು-ನೀಲಿ-ಅತಿನೇರಳೆ (ultraviolet) ಬಣ್ಣಗಳನ್ನು ಮಾತ್ರ ಗುರುತಿಸಬಲ್ಲದು. ಇದು ಕೆಂಪು ಬಣ್ಣವನ್ನು ಗುರುತಿಸುವುದಿಲ್ಲ. ಆದರೂ ಕೆಂಪು ಹೂವಿನಿಂದ ಸವಿಯನ್ನು ಹೀರುತ್ತದೆ, ಅದಕ್ಕೆ ಕಾರಣ ಹೂವಿನ ಪರಿಮಳ ಮತ್ತು ಅದನ್ನು ಕಂಡುಹಿಡಿಯಲು ಜೇನುಹುಳಕ್ಕಿರುವ ಕಸುವು.

ಬಗ್ಗರಿ(Thorax) – ಜೇನುಹುಳದ ನಡುಭಾಗವಾಗಿರುವ ಬಗ್ಗರಿಯು ಆರು ಕಾಲುಗಳು ಮತ್ತು ಎರಡು ರೆಕ್ಕೆಗಳಿಗೆ ನೆಲೆಯಾಗಿದೆ.
ಕಾಲುಗಳು – ಪ್ರತಿಯೊಂದು ಕಾಲು ಮೂರು ತುಂಡುಗಳಾಗಿದ್ದು ಅವು ತೊಡೆಯೆಲುಬು (femur), ಕಣಕಾಲೆ (Tibia) ಮತ್ತು ಮುಂಗಾಲೆಲುತಂಡ(tarsus). ಕಾಲುಗಳನ್ನು ನಡೆಯಲು ಬಳಸಲಾಗುತ್ತದೆ. ಅಲ್ಲದೇ ಮುಂಭಾಗದ ಎರೆಡು ಕಾಲುಗಳಲ್ಲಿ ‘ಅರಿಗೊಂಬು ತೊಳಕ’ಗಳು (Antennae Cleaner) ಮತ್ತು ಹಿಂಬಾಗದ ಕಾಲುಗಳಲ್ಲಿ ಹೂವಿನ ಬಂಡನ್ನು(Pollen) ಕೂಡಿಟ್ಟುಕೊಳ್ಳಲು ‘ಬಂಡು ಚೀಲ’ (Pollen Basket)ವನ್ನು ಹೊಂದಿದೆ. ಅಲ್ಲದೇ ಬಂಡು ಚೀಲದಿಂದ ಬಂಡನ್ನು ತುಂಬಿಕೊಳ್ಳಲು ಮತ್ತು ತೆಗೆದುಹಾಕಲು ಬೇಕಾದ ಗೋರೆ(rake) ಮತ್ತು ಹಣಿಗೆಯಂತಹ (comb) ಇಟ್ಟಳ ಇದರ ಕಾಲುಗಳಲ್ಲಿವೆ.

ರೆಕ್ಕೆಗಳು – ಹುಳದ ಹಾರಾಟಕ್ಕೆ ನೆರವಾಗಲು ಎರಡು ಜೊತೆ ರೆಕ್ಕೆಗಳನ್ನು ಇದು ಹೊಂದಿದೆ. ಮುಂಭಾಗದ ರೆಕ್ಕೆಯು ಹಿಂಬಾಗದ ರೆಕ್ಕೆಗಿಂತ ಎತ್ತರವಾಗಿದೆ. ಈ ಹುಳದ ರೆಕ್ಕೆಗಳು ಮೇಲೆ-ಕೆಳಗೆ ಪಟ ಪಟ ಬಡಿಯುವುದರ ಜೊತೆಗೆ, ದೋಣಿಯ ಹುಟ್ಟನ್ನು ಹಾಕುವ ಬಗೆಯಲ್ಲಿ ರೆಕ್ಕೆಯನ್ನು ಬಡಿಯುತ್ತವೆ. ಇದರಿಂದ ಹಾರಲು ಮತ್ತು ಮುಂದೆ ಹೋಗಲು ಸಾಕಷ್ಟು ಬಲ ಸಿಗುತ್ತದೆ.

ಹೊಟ್ಟೆಯ ಭಾಗ(Abdomen): ಹೊಟ್ಟೆಯ ಭಾಗದಲ್ಲಿ ಹೊಟ್ಟೆ ಮತ್ತು ಕೊಂಡಿ(sting) ಹೊರಗೆ ಕಾಣುವಂತಹವು. ಉಳಿದಂತೆ ಕಿಬ್ಬೊಟ್ಟೆಯ ಒಳಗೆ ಅರಗೇರ್ಪಾಟು (Digestive System) ಮತ್ತು ಉಸಿರೇರ್ಪಾಟು ಇರುತ್ತದೆ. ಯಾವುದೇ ಅನಾಹುತಗಳು ಎದುರಾದಾಗ ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯ ನೆರವಿನಿಂದ ನಂಜನ್ನು ಚುಚ್ಚುತ್ತದೆ.

ಜೇನುಹುಳುವಿನ ಕೆಲವು ಮುಖ್ಯಭಾಗಗಳನ್ನು ಇಲ್ಲಿ ಹೇಳಲಾಗಿದೆ. ಇವಲ್ಲದೇ, ಇದರ ಕೆಲಸಕ್ಕೆ ನೆರವಾಗುವ ಇನ್ನಷ್ಟು ಅಂಗಗಳನ್ನು ಇದು ಹೊಂದಿದೆ. ಆ ಅಂಗಗಳಾವವು? ಅವುಗಳ ಕೆಲಸಗಳೇನು? ಜೇನುಹುಳವು ಜೇನುತುಪ್ಪವನ್ನು ಹೇಗೆ ಕೂಡಿಡುತ್ತದೆ? ಏಕೆ ಕೂಡಿಡುತ್ತದೆ? ಜೇನುಗೂಡನ್ನು ಹೇಗೆ ಕಟ್ಟುತ್ತದೆ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಮುಂದಿನ ಬರಹಗಳಲ್ಲಿ ತಿಳಿದುಕೊಳ್ಳೋಣ.

(ಮಾಹಿತಿ ಸೆಲೆ: askabiologist.asu.edu, )
(ಚಿತ್ರ ಸೆಲೆ: wikipedia)