ಪಾತಿಯ ಬುಟ್ಟಿಗಳಲ್ಲಿ ಕಾಫಿಗಿಡದ ಬೆಳವಣಿಗೆ

ರತೀಶ ರತ್ನಾಕರ.

ಕಾಫಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಫಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಫಿ ಬೀಜವು ಸುಮಾರು 40 ರಿಂದ 50 ದಿನದಲ್ಲಿ 200 – 300 ಮಿ.ಮೀ ಬೆಳೆಯುತ್ತದೆ. ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಿ ಎರಡನೇ ಹಂತದ ಬೆಳವಣಿಗೆಯನ್ನು ನೋಡಿಕೊಳ್ಳಲಾಗುತ್ತದೆ.

ಪಾತಿ ಮಾಡುವುದು:
ಮೊಳಕೆಯೊಡೆದ ಕಾಫಿಗಿಡದ ಮುಂದಿನ ಬೆಳವಣಿಗೆಗಾಗಿ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ನೆಟ್ಟು, ಪಾತಿಯನ್ನು ಮಾಡಿ ನೋಡಿಕೊಳ್ಳಲಾಗುತ್ತದೆ. ಕಾಫಿಗಿಡಗಳಿಗೆ ಕಡಿಮೆ ಎಂದರು 8 ಇಂಚು ಎತ್ತರ ಮತ್ತು 3 ಇಂಚು ಅಡ್ಡಗಲ ಇರುವ ಪ್ಲಾಸ್ಟಿಕ್ ಬುಟ್ಟಿಗಳು ಬೇಕು. ಮಣ್ಣಿನಲ್ಲಿರುವ ಕೊಳಚೆ ಹಾಗು ಹೆಚ್ಚಿನ ನೀರು ಹರಿದು ಹೋಗುವಂತೆ ಚಿಕ್ಕ ಚಿಕ್ಕ ಕಿಂಡಿಗಳು ಪ್ಲಾಸ್ಟಿಕ್ ಬುಟ್ಟಿಯಲ್ಲಿರಬೇಕು.

ಈ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬುವ ಮಣ್ಣಿನಲ್ಲಿ ಸಾಕಷ್ಟು ಸಾರವಿರಬೇಕು. ಸಾರವಿರುವ ಕಾಡಿನ ಮಣ್ಣಿಗೆ ಕೊಟ್ಟಿಗೆ ಗೊಬ್ಬರವನ್ನು ಕಲೆಸಿ, ಮಣ್ಣು ಅಂಟಿಕೊಳ್ಳದಂತೆ ಸಡಿಲವಾಗಿರಲು ಮರಳನ್ನು ಕೂಡ ಸೇರಿಸಿ ಮಣ್ಣನ್ನು ಅಣಿಗೊಳಿಸಲಾಗುವುದು. ಗಿಡದ ಬೆಳವಣಿಗೆಗೆ ಬೇಕಾದ ಪಾಸ್ಪೇಟ್ ಹಾಗು ನೈಟ್ರೋಜನ್ ಹೊಂದಿರುವ ಗೊಬ್ಬರವನ್ನು ಕೂಡ ಬಳಸಲಾಗುತ್ತದೆ. ಕಾಫಿ ಸಿಪ್ಪೆಯ ಗೊಬ್ಬರವನ್ನು ಕೂಡ ಈ ಮಣ್ಣಿಗೆ ಬೆರೆಸಿದರೆ ಮಣ್ಣಿನ ಸಾರ ಹೆಚ್ಚುತ್ತದೆ. ಹೀಗೆ ಗೊಬ್ಬರವನ್ನು ಹೊಂದಿರುವ, ಹುಡಿಯಾಗಿರುವ ಮಣ್ಣನ್ನು ಚೆನ್ನಾಗಿ ಕಲೆಸಿ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸಬೇಕು. ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸುವಾಗ ಹೆಚ್ಚು ಒತ್ತಿ ತುಂಬಿಸದೆ, ಬುಟ್ಟಿಯೊಳಗಿರುವ ಮಣ್ಣಿನಲ್ಲಿ ಗಾಳಿ ಮತ್ತು ನೀರು ಯಾವ ತೊಡಕಿಲ್ಲದೆ ಓಡಾಡಲು ಆಗುವಂತೆ ಮಣ್ಣನ್ನು ತುಂಬಿಸಬೇಕು.

ಒಂದು ಪಾತಿಯ ಸಾಲು ಸುಮಾರು 3 ಅಡಿ ಅಗಲ ಮತ್ತು 20 ರಿಂದ 30 ಅಡಿಗಳಷ್ಟು ಉದ್ದವಿರುತ್ತದೆ. ಪಾತಿಯ ಸಾಲಿನ ಬದಿಗೆ ಬಿದಿರಿನ ತಟ್ಟೆಗಳನ್ನು ಹೊಡೆದು ಇಲ್ಲವೇ ಮರದ ಹಲಗೆಗಳನ್ನು ಇರಿಸಿ 30 x 3 ಅಡಿ ಉದ್ದಗಲದ ಕಟ್ಟೆಯನ್ನು ಮಾಡಲಾಗುತ್ತದೆ. ಈ ಕಟ್ಟೆಯ ಒಳಗೆ ಮಣ್ಣು ತುಂಬಿರುವ ಪ್ಲಾಸ್ಟಿಕ್ ಬುಟ್ಟಿಗಳನ್ನು ನೇರವಾಗಿ ಮತ್ತು ಸಾಲಾಗಿ ಒಂದರ ಪಕ್ಕ ಒಂದರಂತೆ ಜೋಡಿಸಿಡಲಾಗುತ್ತದೆ. (ಈ ಕೆಳಗಿನ ಚಿತ್ರವನ್ನು ನೋಡಿ) ಇದು ಬುಟ್ಟಿಗಳು ಗಟ್ಟಿಯಾಗಿ ಹಾಗು ನೇರವಾಗಿ ನಿಲ್ಲಲು ನೆರವಾಗುತ್ತದೆ.

ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಗಿಡಗಳನ್ನು ಕಿತ್ತು, ಜೋಡಿಸಿಟ್ಟ ಬುಟ್ಟಿಗಳಿಗೆ ತಂದು ನೆಡಬೇಕು. ಈ ಹಂತದಲ್ಲಿ ಕೆಳಗಿನ ಮಾಹಿತಿಗಳನ್ನು ಗಮನದಲ್ಲಿಡಬೇಕು.

  1. ಮಣ್ಣಿನ ಹಾಸಿಗೆಯಿಂದ ಗಿಡಗಳನ್ನು ಕೀಳುವಾಗ ಸಾಕಷ್ಟು ಎಚ್ಚರದಿಂದ ಕೀಳಬೇಕು. ಮೊಳಕೆಯೊಡೆದ ಗಿಡಗಳಿಗೆ ಮತ್ತು ಬೇರುಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು.
  2. ಕಿತ್ತ ಗಿಡಗಳಲ್ಲಿ ಚೆನ್ನಾಗಿ ಕುಡಿಯೊಡೆದಿರುವ ಮತ್ತು ನಲ್ಲಿಬೇರುಗಳು (tap roots) ನೇರವಾಗಿರುವ ಗಿಡಗಳನ್ನು ಮಾತ್ರ ಆರಿಸಿಕೊಳ್ಳಬೇಕು.
  3. ಗಿಡದ ಬೇರುಗಳು ಡೊಂಕಾಗಿದ್ದರೆ ಇಲ್ಲವೇ ಬೇರುಗಳಲ್ಲಿ ಕೂದಲುಗಳು (root hairs) ಕಡಿಮೆಯಿದ್ದರೆ ಅವನ್ನು ಬಳಸಬಾರದು.
  4. ಹುಳ ತಿಂದಿರುವ ಇಲ್ಲವೇ ಜಡ್ಡು ಹಿಡಿದಿರುವ ಮೊಳೆಕೆಯ ಗಿಡಗಳನ್ನು ಬಳಸಬಾರದು.
  5. ಅಗತ್ಯಕ್ಕಿಂತ ಹೆಚ್ಚು ಎಲೆಗಳನ್ನು ಹೊಂದಿರುವ ಗಿಡಗಳನ್ನು ಆರಿಸಿಕೊಳ್ಳಬಾರದು. ಏಕೆಂದರೆ, ಮುಂದೆ ಇವುಗಳ ಬೆಳವಣಿಗೆ ತೀರಾ ಕಡಿಮೆಯಾಗುತ್ತದೆ.

ಹೀಗೆ ಆರಿಸಿಕೊಂಡ ಮೊಳಕೆಯ ಗಿಡಗಳನ್ನು ಕೂಡಲೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಈ ಕೆಳಗಿನ ಹಂತಗಳ ಮೂಲಕ ನೆಡಬೇಕು.

  1. ತಂಪಾದ ಹೊತ್ತಿನಲ್ಲಿ ಗಿಡನೆಡುವ ಕೆಲಸವಿಟ್ಟುಕೊಳ್ಳಬೇಕು, ಅಂದರೆ ಬೆಳಗಿನ ಜಾವ ಇಲ್ಲವೇ ಸಂಜೆಯ ಹೊತ್ತು.
  2. ಪಾತಿಯ ಬುಟ್ಟಿಗಳಿಗೆ ಚೆನ್ನಾಗಿ ನೀರುಣಿಸಬೇಕು.
    ಪಾತಿಯ ಬುಟ್ಟಿಗಳಿಗೆ ನೀರುಣಿಸಿದ ಮೇಲೆ, ಚೂಪಾದ ಕಡ್ಡಿಯಿಂದ ಸುಮಾರು 50 ಮಿ.ಮೀ ತೂತವನ್ನು ಕೊರೆಯಬೇಕು.
  3. ಮಣ್ಣಿನ ಹಾಸಿಗೆಯಿಂದ ಕಿತ್ತು ಆರಿಸಿದ ಗಿಡವನ್ನು ತಂದು ಬುಟ್ಟಿಗೆ ನೆಡಬೇಕು. ಮೊಳಕೆಯ ಗಿಡವನ್ನು ನೆಡುವಾಗ ನಲ್ಲಿಬೇರು ಬಾಗದಂತೆ ನೇರವಾಗಿ ನೆಟ್ಟು, ಬುಟ್ಟಿಯ ಮೇಲಿರುವ ಮಣ್ಣಿನಿಂದ ಮೆದುವಾಗಿ ಒತ್ತಬೇಕು.
  4. ಒಂದು ವೇಳೆ ನಲ್ಲಿಬೇರಿನ ಉದ್ದ ಹೆಚ್ಚಾಗಿದ್ದರೆ ಅದರ ಉದ್ದಕ್ಕೆ ಬೇಕಾದ ತೂತವನ್ನು ಬುಟ್ಟಿಯೊಳಗೆ ಮಾಡಿ ನೆಡಬೇಕು.
  5. ಗಿಡವನ್ನು ನೆಟ್ಟ ಮೇಲೆ ಪಾತಿಗೆ ಚೆನ್ನಾಗಿ ನೀರುಣಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ನೀರುಣಿಸಬಾರದು.
  6. ಪಾತಿಯನ್ನು ಮಳೆ ಮತ್ತು ಬಿಸಿಲಿನಿಂದ ಕಾಪಾಡಲು ಮೊದಲೇ ಚಪ್ಪರವನ್ನು ಮಾಡಿರಬೇಕು. ಹಸಿರು ಮನೆಯ ಒಳಗೂ ಪಾತಿಯನ್ನು ಮಾಡಬಹುದು. ಗಿಡಗಳ ಬೆಳವಣಿಗೆಯಲ್ಲಿ ಹಸಿರು ಮನೆಯು ಹೇಗೆ ನೆರವಾಗುತ್ತದೆ ಎಂದು ‘ಹಸಿರುಮನೆಯ ಗುಟ್ಟು’ ಬರಹದಲ್ಲಿ ತಿಳಿಯಬಹುದು.
  7. ಪಾತಿಯ ಒಳಗೆ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತಿರಬೇಕು.
  8. ಕಾಫಿ ಬುಟ್ಟಿಗಳಲ್ಲಿ ಬರುವ ಕಳೆಗಿಡಗಳನ್ನು ತೆಗೆಯುತ್ತಿರಬೇಕು.
  9. ಪ್ರತಿ ಹದಿನೈದು ದಿನಗಳಿಗೊಮ್ಮೆ ಯೂರಿಯ (46:0:0) ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕಬೇಕು. ಸುಮಾರು 60 ಗ್ರಾಂ ಯೂರಿಯ ಗೊಬ್ಬರವನ್ನು 100 ಗಿಡಗಳಿಗೆ ಆಗುವಷ್ಟು ಹಾಕಬಹುದು. ಸಾವಯವ ಬೇಸಾಯ ಮಾಡುವವರು ಕೊಟ್ಟಿಗೆ ಗೊಬ್ಬರವನ್ನು ಚೆನ್ನಾಗಿ ಹುಡಿಮಾಡಿ ಹಾಕಬಹುದು. ಕಾಫಿ ಗಿಡದ ಎಲೆಗಳು ಕಂದು ಹಸಿರು ಬಣ್ಣಕ್ಕೆ ತಿರುಗುವಂತಿದ್ದರೆ ಗೊಬ್ಬರವನ್ನು ಕೊಡುವುದು ನಿಲ್ಲಿಸಬೇಕು.
  10. ಪಾತಿಯಲ್ಲಿ ಯಾವುದೇ ಹುಳ-ಹುಪ್ಪಟೆಗಳು ಆಗದಂತೆ ನೋಡಿಕೊಳ್ಳುತ್ತಿರಬೇಕು. ಯಾವುದಾದರು ಗಿಡಕ್ಕೆ ಜಡ್ಡು ಬಂದರೆ ಕೂಡಲೆ ಆ ಗಿಡದ ಬುಟ್ಟಿಯನ್ನು ಬೇರೆ ಮಾಡಿ ಸುಡಬೇಕು ಇಲ್ಲವೇ ದೂರೆ ಎಸೆಯಬೇಕು.

ಪಾತಿಯ ಬುಟ್ಟಿಯಲ್ಲಿನ ಗಿಡಗಳು ಸುಮಾರು 3 ತಿಂಗಳಿಗೆ ಒಂದರಿಂದ ಒಂದೂವರೆ ಅಡಿ ಎತ್ತರಕ್ಕೆ ಬೆಳೆಯಬಲ್ಲವು. ಈಗ ಈ ಗಿಡಗಳು ತೋಟದ ಮಣ್ಣಿನಲ್ಲಿ ನೆಡಲು ಸಿದ್ದವಾದಂತೆ. ಜನವರಿ-ಪ್ರೆಬ್ರವರಿಯಲ್ಲಿ ಮಣ್ಣಿನ ಹಾಸಿಗೆಗೆ ಹೋದ ಕಾಫಿ ಬೀಜಗಳು, ಮಾರ್ಚ್-ಏಪ್ರಿಲ್ ನಲ್ಲಿ ಮೊಳಕೆಯೊಡೆದು ಮೊದಲ ಹಂತದ ಬೆಳವಣಿಗೆಯನ್ನು ಮುಗಿಸುತ್ತವೆ. ಏಪ್ರಿಲ್ ನಿಂದ ಜೂನ್ ವರೆಗೆ ಪಾತಿಯ ಬುಟ್ಟಿಗಳಲ್ಲಿ ತಮ್ಮ ಎರಡನೇ ಹಂತದ ಬೆಳವಣಿಗೆಯನ್ನು ಮುಗಿಸಿಕೊಂಡು, ಸರಿಯಾಗಿ ಮಳೆಗಾಲದ ಹೊತ್ತಿಗೆ ಅಂದರೆ ಜೂನ್ – ಜುಲೈ ತಿಂಗಳಿನಲ್ಲಿ ತೋಟದ ಜಾಗದಲ್ಲಿ ನೆಡಲು ಸಿಗುತ್ತವೆ. ಜನವರಿಯಿಂದ ಜುಲೈವರೆಗೆ ಬೆಳೆಯುವ ಬುಟ್ಟಿಗಿಡಗಳನ್ನು ‘ಒಂದು ನೀರು’ ಗಿಡ ಎಂದು ಕರೆಯುತ್ತಾರೆ. ಒಂದು ವೇಳೆ ಈ ಜುಲೈ ಮಳೆಗಾಲಕ್ಕೆ ನೆಡದೇ ಮುಂದಿನ ವರುಶದ ಜುಲೈ ಮಳೆಗಾಲದ ವರೆಗೂ ಕಾಫಿಗಿಡಗಳು ಬುಟ್ಟಿಯಲ್ಲೇ ಬೆಳೆದರೆ ಅವನ್ನು ‘ಎರೆಡು ನೀರು’ ಗಿಡ ಎಂದು ಕರೆಯಲಾಗುತ್ತದೆ.

ಕಾಫಿಗಿಡವನ್ನು ತೋಟದ ಮಣ್ಣಿನಲ್ಲಿ ನೆಡುವುದಕ್ಕಿಂತ ಮುಂಚೆ ಹೀಗೆ ಎರೆಡು ಹಂತಗಳಲ್ಲಿ ಗಿಡದ ಆರೈಕೆಯನ್ನು ಮಾಡಬೇಕಾಗುತ್ತದೆ.

(ಚಿತ್ರ ಸೆಲೆ: dailycoffeenews.comwikimedia )