ಇಂಟರ್‌ನೆಟ್ ಆಫ್ ಥಿಂಗ್ಸ್: ಬದುಕು ಹೆಣೆಯಲಿರುವ ಮಿಂಬಲೆ!?

ಜಯತೀರ್ಥ ನಾಡಗೌಡ.

ಬೆಳಿಗ್ಗೆ ಅಲಾರ್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಫಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಫಿ ಕುಡಿದು ಜಳಕಕ್ಕೆಂದು ಬಚ್ಚಲಮನೆಯ ನಲ್ಲಿ(tap) ಶುರುಮಾಡುತ್ತಲೇ ಗೀಸರ್‌ನಿಂದ ಬಿಸಿ ನೀರು. ಇಲ್ಲಿ ನೀವಾಗಲಿ ನಿಮ್ಮ ಮನೆಯವರಾಗಲಿ ಕಾಫಿ ಮೆಶೀನು(Coffee maker) ಶುರು ಮಾಡಿಲ್ಲ, ಬಿಸಿನೀರೂಟೆಯ(Geyser) ಗುಂಡಿ ಒತ್ತಿ ನೀರು ಕಾಯುವಂತೆ ಮಾಡಿಲ್ಲ. ಆದರೂ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಇವೆಲ್ಲ ನಡೆದು ಹೋಗಿರುತ್ತವೆ. ಅಯ್ಯೋ ಏನಿದು ಅಚ್ಚರಿ, ಇದೆಲ್ಲ ಹೇಗೆ ಅಂದೀರಾ? ಹೌದು ಎಲ್ಲವೂ ಸಾಧ್ಯವಾಗಲಿದೆ. ಇದನ್ನು ಸಾಧ್ಯವಾಗಿಸಲಿದೆ ಇಂಟರ್‌ನೆಟ್ ಆಫ್ ಥಿಂಗ್ಸ್ (Internet of Things) ಅಂದರೆ ವಸ್ತುಗಳ/ಇರುಕಗಳ ಮಿಂಬಲೆ.

ಇಂಟರ್‌ನೆಟ್ ಆಫ್ ಥಿಂಗ್ಸ್” ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ಯಾವುದೇ ಕೈಗಾರಿಕೆ ಆಗಿರಲಿ, ಅಲ್ಲಿ ಈ ಪದಗಳ ಬಳಕೆ ಕಂಡು ಬರುತ್ತಿದೆ. ಆದರೆ ಇದು ಏನು ಎತ್ತ? ಹೇಗೆ ಕೆಲಸ ಮಾಡುತ್ತದೆ? ಇವೆಲ್ಲವೂಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ನಮ್ಮಲ್ಲಿ ಮನೆ ಮಾಡಿವೆ. ಇಂಟರ್‌ನೆಟ್ ಆಫ್ ಥಿಂಗ್ಸ್ ಬಗ್ಗೆ ನಾವುಗಳು ತಿಳಿಯುವುದು ಅಗತ್ಯವಾಗಿದೆ ಯಾಕೆಂದರೆ ಬರುವ ದಿನಗಳಲ್ಲಿ ಇದು ನಮ್ಮ ಬದುಕಿನ ಭಾಗವಾಗಿರಲಿದೆ ಎನ್ನುತ್ತಾರೆ ಅರಿಮೆಗಾರರು.

ಕಳೆದ ಹತ್ತಾರು ವರುಶಗಳಿಂದ ಮಿಂಬಲೆ ನಮ್ಮ ಬದುಕಿನ ಒಂದು ಭಾಗವೇ ಆಗಿಹೋಗಿದೆ ಎನ್ನಬಹುದು. 1990ರ ಈಚೆಗೆ ಜಗತ್ತಿನಲ್ಲಾದ ಹಲವು ಬದಲಾವಣೆಗಳನ್ನು ನೋಡಿದರೆ ಯಾರು ಇದನ್ನು ತಳ್ಳಿಹಾಕುವಂತಿಲ್ಲ. ಮೊದಲೆಲ್ಲ ಬ್ಯಾಂಕುಗಳಿಗೆ ತೆರಳಿ ಹಣ ಪಡೆಯಲು ರಸೀತಿ ತುಂಬಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆದು ಮನೆಗೆ ಬರುವುದು ಸಾಹಸವಾಗಿತ್ತು. ಆದರೆ ಈಗ ದುಡ್ಡು ಬೇಕೆಂದಾಗ ಚಕ್ಕನೆ ನಾವಿರುವ ಮನೆ, ಕೆಲಸದೆಡೆ, ಬಸ್ ನಿಲ್ದಾಣ ಹೀಗೆ ಎಲ್ಲೆ ಇರಲಿ ಬಳಿಯಿರುವ ಹಣದ ಮನೆಯಿಂದ (ATM) ದುಡ್ಡು ಸಲೀಸಾಗಿ ಪಡೆಯಬಹುದು. ಅಷ್ಟೇ ಚಕ್ಕನೆ ಕಣ್ಣ ರೆಪ್ಪೆ ಬಡಿಯುವುದರಲ್ಲಿ ನಿಮ್ಮ ಅಲೆಯುಲಿಗೆ(Mobile) ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆದ ವಿವರಗಳು ಬಂದಿರುತ್ತವೆ. ಈಗಲಂತೂ ಮಿಂಬಲೆಯ ಹರವೂ ಹೆಚ್ಚಿದೆ ಮತ್ತು ಅಗ್ಗದ ಬೆಲೆಯಲ್ಲಿ ಕೈಗೆಟಕುತ್ತಿರುವ ಕಾರಣ ಫೇಸ್ಬುಕ್, ಟ್ವಿಟರ್ ನಂತಹ ಕೂಡುತಾಣಗಳಿಂದ ಮಂದಿಯ ಸೇರುವಿಕೆ ಚಿಟಿಕೆ ಹೊಡೆದಷ್ಟು ಸುಳುವಾಗಿದೆ. ಹೆಚ್ಚುತ್ತಿರುವ ವೈಫೈ ಅಳವುತನ(Efficiency) ಹಾಗೂ ಅರಿವುಕಗಳು(sensor), ಹೊಸ ಚಳಕಗಳ ಬೆಲೆಯನ್ನು ಇಳಿಮುಖ ಮಾಡಿವೆ. ಇನ್ನೂ ಚೂಟಿಯುಲಿಗಳಂತು (Smartphones) ಹೆಚ್ಚು ಕಡಿಮೆ ಎಲ್ಲರ ಕೈಯಲ್ಲೂ ಬಂದು ಸೇರಿವೆ. ಇವೆಲ್ಲವೂ ಇರುಕಗಳ ಮಿಂಬಲೆಗೆ ತಕ್ಕ ಅಡಿಪಾಯ ಹಾಕಿವೆ.

ಚುಟುಕಾಗಿ ಹೇಳಬೇಕೆಂದರೆ ಮನುಷ್ಯರಿಂದ ವಸ್ತುಗಳಿಗೆ, ವಸ್ತುಗಳಿಂದ (Things) ವಸ್ತುಗಳಿಗೆ ಇಲ್ಲವೇ ಮನುಷ್ಯರಿಂದ ಮನುಷ್ಯರಿಗೆ ಮಿಂಬಲೆಯ ಮೂಲಕ ಕೊಂಡಿ ಬೆಸೆದು ಮಾಹಿತಿಯನ್ನು ಕಳಿಸುವುದು ಇಲ್ಲವೇ ಹಂಚಿಕೊಳ್ಳುವುದೇ ವಸ್ತುಗಳ/ಇರುಕಗಳ ಮಿಂಬಲೆ (Internet of Things). ನಡುಬಲೆ ಇಲ್ಲವೇ ಮಿಂಬಲೆಯೊಂದಿಗೆ ಕೂಡಿಕೊಳ್ಳಬಲ್ಲ ಎಲ್ಲ ವಸ್ತುಗಳು, ಇದರ ಭಾಗವೆನ್ನಬಹುದು. ಅವು ನಮ್ಮ ಚೂಟಿಯುಲಿ, ಕಾಫಿ ಮಾಡುವ ಮೆಶೀನು, ಇಸ್ತ್ರೀ ಪೆಟ್ಟಿಗೆ, ಗೋಡೆ ಗಡಿಯಾರ, ಕೈ ಗಡಿಯಾರ, ಬಟ್ಟೆ ಒಗೆಯುವ ಮೆಶೀನು (Washing machine), ಟಿವಿ, ನಾವು ಓಡಿಸುವ ಗಾಡಿಗಳು, ಬಾನೋಡ(Flight) ಯಾವುದೇ ಆಗಿರಬಹುದು. ಇವೆಲ್ಲ ವಸ್ತುಗಳು ಮಿಂಬಲೆಯೊಂದಿಗೆ ಕೂಡಬಲ್ಲವಂತವಾಗಿದ್ದರೆ, ಅವುಗಳ ನಡುವೆ ಮಾತುಕತೆಯಾಡಿಸಬಹುದು. ಗಾರ್ಟ್ನರ್ (Gartner) ಎಂಬ ಕೂಟವೊಂದು ಹೇಳುವಂತೆ ಮುಂದಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಬಹಳಶ್ಟು ವಸ್ತುಗಳು-ಮನುಷ್ಯರು ಕೂಡಿ, ಅವರ ನಡುವೆ ಸಾಕಷ್ಟು ಮಾಹಿತಿ ಹಂಚಿಕೆಯಾಗಲಿದೆಯಂತೆ!

ಇಂಟರ್‌ನೆಟ್ ಆಫ್ ಥಿಂಗ್ಸ್ ಗೆ ಸಂಬಂಧಪಟ್ಟ ಮತ್ತಶ್ಟು ಮಾಹಿತಿ ನೋಡಿದಾಗ, 1974ರಲ್ಲಿ ಕಾಲಿಟ್ಟ ಹಣಮನೆಯ ಮೆಶೀನುಗಳು (ATM) ಇರುಕಗಳ ಮಿಂಬಲೆಯ ಮೊಟ್ಟ ಮೊದಲ ಹೆಜ್ಜೆ ಎನ್ನಬಹುದು. ಒಂದು ಅಂದಾಜಿನ ಪ್ರಕಾರ 2020 ಮುಗಿಯುವ ಹೊತ್ತಿಗೆ ಸುಮಾರು 2.5 ಲಕ್ಷಕ್ಕೂ ಹೆಚ್ಚಿನ ಗಾಡಿಗಳು ಮಿಂಬಲೆಗೆ ಸೇರಿಕೊಳ್ಳಬಹುದು ಎಂಬ ಎಣಿಕಯಿದೆ. ಮುಂಬರುವ ದಿನಗಳಲ್ಲಿ ಗೂಗಲ್‌ನ ತನ್ನಿಂದ ತಾನೇ ಓಡುವ ಕಾರು ಒಂದು ವಾರದಲ್ಲಿ ಹತ್ತು ಸಾವಿರ ಮೈಲಿ ಸಾಗಲಿವೆ. ಕೈಗೆ ತೊಡಬಲ್ಲ ಚೂಟಿಗಡಿಯಾರದಂತ ವಸ್ತುಗಳ ಬೇಡಿಕೆ ಬಹಳಶ್ಟು ಏರಲಿದೆ. ಆಪಲ್ (Apple) ಕೂಟ ಮತ್ತು ಫಿಟ್‌ಬಿಟ್ (Fitbit) ಎಂಬ ಇನ್ನೊಂದು ಕೂಟ ಇಂತ ಕೈಯಲ್ಲಿ ತೊಡಬಲ್ಲ ಕೋಟ್ಯಂತರ ಚೂಟಿ ಎಣಿಗಳನ್ನು (Smart wearing devices) ಕೊಳ್ಳುಗರಿಗೆ ಸಾಗಿಸಿದೆ. ಗೂಗಲ್ ಕೂಟ ನೇಸ್ಟ್‌ಲ್ಯಾಬ್ಸ್ (Nest Labs) ಎನ್ನುವ ಕಾವುಹತೋಟಿಗ (Thermostat) ಸಂಸ್ಥೆಯನ್ನು 3.2 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದೆ. ತೆಂಕಣ ಕೊರಿಯಾ ಮೂಲದ ಸ್ಯಾಮಸಂಗ್ ಕೂಡ “ಕನೆಕ್ಟೆಡ್ ಹೋಮ್ಸ್” (Connected homes) ಎಂಬ ಹೆಸರುವಾಸಿ ಕೂಟವನ್ನು 200 ಮಿಲಿಯನ್ ಡಾಲರ್‌ಗೆ ಕೊಂಡು ಕೊಂಡಿದೆ. ಈ ಮೇಲಿನ ಎಲ್ಲ ಮಾಹಿತಿ,  ಮುಂಬರುವ ದಿನಗಳಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ ಹೆಚ್ಚಾಗುವಿಕೆಯ ಕುರುಹುಗಳಾಗಿವೆ. ಮಿಂಬಲೆ ವ್ಯವಹಾರದಲ್ಲಿರುವ ಗೂಗಲ್ ಕೂಟಕ್ಕೂ ಕಾವುಹತೋಟಿಗ ಕೂಟ ನೇಸ್ಟ್‌ಲ್ಯಾಬ್‌ಗೂ ಯಾವುದೇ ನೇರ ಸಂಬಂಧವೇ ಇಲ್ಲ. ಆದರೆ ಇವರಿಬ್ಬರ ನಡುವಿನ ಈ ವ್ಯವಹಾರ ನೋಡಿದರೆ ಗೂಗಲ್ ಕೂಟ ಇಂಟರ್‌ನೆಟ್ ಆಫ್ ಥಿಂಗ್ಸ್ ನತ್ತ ಚಿತ್ತವಿರಿಸಿದೆ ಎಂಬುದನ್ನು ಹೇಳುತ್ತದೆ. ಅದೇ ರೀತಿ ಸ್ಯಾಮ್‌ಸಂಗ್‌ನ ಕತೆ.

ಎಲ್ಲವೂ ಒಪ್ಪುವಂತದ್ದೇ ಆದರೆ ಇಷ್ಟೆಲ್ಲ ವಸ್ತುಗಳು ತಮ್ಮ ನಡುವೆಯೇಕೆ ಮಾತನಾಡಿಕೊಳ್ಳಬೇಕು? ಇವುಗಳ ಲಾಭವೇನು? ಇದನ್ನರಿಯಲು ಮೊದಲಿನ ಎತ್ತುಗೆಯನ್ನೇ ವಿವರವಾಗಿ ನೋಡೋಣ. ನಿಮ್ಮ ಅಲಾರ್ಮ್ ಗಡಿಯಾರ ಬೆಳಿಗ್ಗೆ 6 ಗಂಟೆಗೆ ನಿಮ್ಮನ್ನು ಎಬ್ಬಿಸುತ್ತದೆ ಎನ್ನಿ. ನಿಮ್ಮನ್ನು ಎಬ್ಬಿಸುತ್ತ ಅದು ನಿಮ್ಮ ಕಾಫಿ ಮಾಡುವ ಮೆಶೀನಿಗೆ ಕಾಫಿ ತಯಾರಿಸುವಂತೆ ಮಾಹಿತಿ ನೀಡುತ್ತದೆ. ಕಣ್ಣು ತೆರೆದು ಅಡುಗೆಮನೆಗೆ ಹೆಜ್ಜೆ ಇಡುತ್ತಲೇ ಬಿಸಿ ಬಿಸಿ ಕಾಫಿ ನಿಮ್ಮ ಮುಂದೆ. ಹಾಗೆಯೇ ಕಾಫಿ ಕುಡಿಯುತ್ತಿದ್ದಂತೆ ಕಾಫಿ ಮಾಡುವ ಮೆಶೀನು ನಿಮ್ಮ ಬಿಸಿಕಕ್ಕೊಂದು (Geyser/Heater) ಸಂದೇಶ ಕಳುಹಿಸಿ ಜಳಕ ಮಾಡಲು ಬಿಸಿ ನೀರು ಕಾಯುವಂತೆ ಮಾಡುತ್ತದೆ. ಇನ್ನೇನು ಕೆಲಸದೆಡೆಗೆ ತೆರಳಲು ಸಿದ್ದರಾಗಿ ಕಾರನ್ನು ಏರಿದ್ದೀರಿ, ಟ್ರಾಫಿಕ್ ದಟ್ಟಣೆಯಿಂದ ನೀವು ಕೆಲಸದೆಡೆಯ ಮಾತುಕತೆಯೊಂದರಲ್ಲಿ ಭಾಗವಹಿಸಲಾಗುತ್ತಿಲ್ಲ, ಕೂಡಲೇ ನಿಮ್ಮ ಬಂಡಿ ನೀವು ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಚೂಟಿಯುಲಿಗೆ ಮಾಹಿತಿ ಕಳುಹಿಸಿ ಕೊಡುತ್ತದೆ. ನಿಮ್ಮ ದಿನದ ಕ್ಯಾಲೆಂಡರ್‌ ಬಗ್ಗೆ ಅರಿತಿರುವ ನಿಮ್ಮ ಚೂಟಿಯುಲಿ ನೀವು ತಡವಾಗಿರುವುದನ್ನು ಕೆಲಸದೆಡೆಯ ಗೆಳೆಯರಿಗೆ ಮಾಹಿತಿಯೊಂದರ ಮೂಲಕ ತಿಳಿಸಿದರೆ ಹೇಗಿರುತ್ತದೆ? ಹೆಚ್ಚಿನ ನಮ್ಮ ಕೆಲಸಗಳು ಸುಳುವಾಗುತ್ತ ಹೋಗುತ್ತವೆ. ಹಲವಾರು ಮಂದಿ ತಮ್ಮ ಕಚೇರಿಗೆ ತೆರಳದೇ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಸಾರಿಗೆ, ಒದಗಿಕೆ (Infrastructure) ಹೀಗೆ ಮುಂತಾದೆಡೆ ಇದನ್ನು ಬಳಸಿಕೊಂಡು ಹೆಚ್ಚಿನ ಬೆಳವಣಿಗೆ ಸಾಧಿಸಬಹುದಾಗಿದೆ. ಇವಷ್ಟೇ ಅಲ್ಲದೇ ಹಲವು ವಲಯಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಮಂದಿ ಮತ್ತು ವಸ್ತುಗಳ ನಡುವೆ ಕೊಂಡಿ ಬೆಸೆಯಲಿದೆ. ಈ ಕೆಳಗಿನ ಚಿತ್ರವನ್ನು ನೋಡಿ. ಹೆಚ್ಚು ಕಡಿಮೆ ಇದರಲ್ಲಿನ ಎಲ್ಲವೂ ಒಂದಕ್ಕೊಂದು ಮಿಂಬಲೆಯ ಮೂಲಕ ಕೊಂಡಿ ಬೆಸೆದುಕೊಳ್ಳಬಹುದಾಗಿದೆ.

ಈ ರೀತಿ ಹೆಚ್ಚುತ್ತಿರುವ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಂದ ನಮ್ಮ ಕೆಲಸಗಳು ಸುಳುವಾಗುವುದೇನೋ ಸರಿ, ಆದರೆ ಇದರ ಇನ್ನೊಂದು ಮುಖ ನಮಗೆ ಕೆಡುಕುಂಟು ಮಾಡುವುದು ಅಷ್ಟೇ ದಿಟ.  ಕೋಟಿಗಟ್ಟಲೆ ವಸ್ತುಗಳು ತಮ್ಮ ತಮ್ಮ ನಡುವೆ ಮಿಂಬಲೆ ಮೂಲಕ ಮಾಹಿತಿ ಹಂಚಿಕೊಳ್ಳತೊಡಗಿದರೆ ಕೆಲವು ಗುಟ್ಟಾದ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮಿಂಬಲೆ ಸುಲಿಗೆಕೋರರು (Internet Hawkers) ನಿಮ್ಮ ಕಾಫಿ ಮೆಶೀನು ಮೂಲಕ ನಿಮ್ಮ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ? ಇದರಿಂದ ಗುಟ್ಟಿನ ಮಾಹಿತಿಗಳನ್ನು ಮಂದಿ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಬಹುದು ಎನ್ನುತ್ತಾರೆ ಮಿಂಬಲೆ ಪಂಡಿತರು. ಜಗತ್ತಿನೆಲ್ಲೆಡೆ ಈಗಾಗಲೇ ಮಿಂಬಲೆ ಸುಲಿಗೆಕೋರರ ಹಾವಳಿ ತಡೆಯಲಾಗುತ್ತಿಲ್ಲ, ಇದು ಹೆಚ್ಚಾಗುವಿಕೆಯಿಂದ ಇಂತವರ ಎಣಿಕೆ ಹೆಚ್ಚಾಗಿ ಇವರನ್ನು ಮಟ್ಟ ಹಾಕುವುದು ಕಷ್ಟದ ಕೆಲಸವೇ ಸರಿ. ಇದಕ್ಕಾಗಿ ಜಗತ್ತಿನೆಲ್ಲೆಡೆ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಕರ್ಚು ಮಾಡಬೇಕಾಗಿ ಬರುತ್ತದೆ. ಇವುಗಳ ಪರಿಣಾಮ ಇದೀಗ ಅಗ್ಗವೆನಿಸಿರುವ ಮಿಂಬಲೆ ಮುಂದೊಮ್ಮೆ ದುಬಾರಿಯಾಗಲೂಬಹುದು. ಇಂತ ಸುಲಿಗೆಕೋರರು ಗಾಡಿಯ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಗಾಡಿಯು ಅಡ್ಡಾದಿಡ್ಡಿಯಾಗಿ ಓಡಾಡುವಂತೆ ಮಾಡಿದ್ದು ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇಂತಹ ಕೆಟ್ಟ ಕೆಲಸಗಳಿಗೂ ಇದು ದಾರಿಯಾಗಲಿದೆ. ಇನ್ನೂ ದಿಗಿಲುಕೋರರು ಈ ಚಳಕದ ಬಳಕೆ ಮಾಡಿ ಹೆಚ್ಚು ಕಡಿಮೆ ಇಡೀ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ತಳ್ಳಿ ಹಾಕಲಾಗದು. ಈ ಮಾಹಿತಿ ಸೋರಿಕೆಯ ಸಮಸ್ಯೆ ಒಂದೆಡೆಯಾದರೆ ಇಷ್ಟೆಲ್ಲ ವಸ್ತುಗಳು ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡಿಡುವುದು, ಬೇಕೆಂದಾಗ ಬಳಸಿಕೊಳ್ಳುವುದು, ಬೇಕಿಲ್ಲದ ಮಾಹಿತಿಗಳನ್ನು ಬೇರ್ಪಡಿಸಿ ಜಾಲಾಡುವುದು ಕೂಡ ಅಂದುಕೊಂಡಶ್ಟು ಸುಲಭವಲ್ಲ.

ಈ ಎಲ್ಲ ಪ್ರಶ್ನೆಗಳು ಸಾಕಷ್ಟು ತಲೆನೋವನ್ನು ಹುಟ್ಟುಹಾಕಿವೆ. ನಾಡು, ಹೊರನಾಡು ಮುಂತಾದೆಡೆ ಸಭೆ, ಸಮಾರಂಭ ಮತ್ತು ಮಾತುಕತೆ ಕೂಟಗಳಲ್ಲಿ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಇನ್ನೂ ತಕ್ಕ ಉತ್ತರಗಳನ್ನು ಕಂಡುಕೊಳ್ಳುವ ಯತ್ನಗಳು ನಡೆಯುತ್ತಿವೆ. ಇವರು ಆದಷ್ಟು ಬೇಗ ಸರಿಯಾದ ಉತ್ತರಗಳನ್ನು ಕಂಡುಕೊಂಡರೆ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಜಕ್ಕೂ ನಮ್ಮ ಬದುಕನ್ನು ಸುಳುವಾಗಿಸುವಲ್ಲಿ ಎರಡು ಮಾತಿಲ್ಲ.

ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು?

ರಘುನಂದನ್.

ನಮ್ಮ ಮೇಲಿರುವ ತಿಳಿಯಾಗಸದ ಬಣ್ಣ ನೀಲಿಯಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯ . ಅದು ಬೆಳಿಗ್ಗೆ ಮತ್ತು ನಡು ಹಗಲಿನಲ್ಲಿ ನೀಲಿಯಾಗಿರುತ್ತದೆ ಮತ್ತು ಹೊತ್ತು ಮುಳುಗುತ್ತಿದ್ದಂತೆ ಕೆಂಪು, ಕಿತ್ತಳೆ ಬಣ್ಣವಾಗಿ ಮಾರ್ಪಾಡಾಗುವುದನ್ನು ನಾವು ದಿನಾಲು ಕಂಡಿರುತ್ತೇವೆ. ಬೆಳಿಗ್ಗೆ ಬಾನು ಯಾಕೆ ನೀಲಿಯಾಗಿರುತ್ತದೆ ಮತ್ತು ಬಯ್ಗಿನ (ಸಂಜೆಯ) ಹೊತ್ತಿಗೆ ಏಕೆ ಕೆಂಪಾಗುತ್ತದೆ ಎಂದು ಯಾವಾತ್ತಾದರೂ ಯೋಚಿಸಿದ್ದೀರ?

ಇದಕ್ಕೆ ಉತ್ತರ ಸುಳುವಾಗಿಲ್ಲ. ಈ ಪ್ರಶ್ನೆಯ ಬಗ್ಗೆ ಹಲವಾರು ಅರಿಮೆಗಾರರು ತಲೆ ಕೆಡಿಸಿಕೊಂಡಿದ್ದಾರೆ. ಬಾನಿನ ನೀಲಿ ಬಣ್ಣದ ಹಿಂದಿನ ಅರಿಮೆ ಏನು ಎಂಬುದನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ನೇಸರನು ಹೊರಸೂಸುವ ಬೇರೆ ಬೇರೆ ತೆರನಾದ ಕದಿರುಗಳು (rays) ಭೂಮಿಯ ಗಾಳಿಪದರವನ್ನು (atmosphere) ದಾಟಿ ನೆಲದ ಮೇಲೆ ಬೀಳುತ್ತವೆ. ಬರಿ ಬೆಳಕೊಂದೇ ಅಲ್ಲದೆ ಮಿನ್ಸೆಳೆತದ ಅಲೆಸಾಲಿನ(electromagnetic spectrum) ಬೇರೆ ಬೇರೆ ಕದಿರುಗಳನ್ನೂ ಕೂಡ ನೇಸರನೆಂಬ ಬೆಂಕಿಯುಂಡೆ ಹೊರಹಾಕುತ್ತದೆ. ಆದರೆ ಭೂಮಿಯ ಮೇಲಿನ ಉಸಿರಿಗಳಿಗೆ ಕುತ್ತು ಎನಿಸುವ ಕದಿರುಗಳನ್ನು ಒಜೋನ್ (ozone) ಪದರ ಹೀರಿಕೊಳ್ಳುತ್ತದೆ. ಉದಾಹರಣೆಗೆ – ಕಡುನೀಲಿ ಕದಿರುಗಳು (ultra violet rays). ಹಾಗಾಗಿ ನಮ್ಮ ಕಣ್ಣಿಗೆ ಕಾಣುವ ಬೆಳಕಿನ ಕದಿರುಗಳ ಮೂಲಕ ನಾವು ನಮ್ಮ ಸುತ್ತಮುತ್ತವನ್ನು ನೋಡಬಹುದಾಗಿದೆ. ನಮಗೆ ತಿಳಿದಿರುವಂತೆ ಬೆಳಕು ಕೂಡ ಬೇರೆ ಬೇರೆ ಬಣ್ಣಗಳಿಂದ ಕೂಡಿದೆ ಮತ್ತು ಎಲ್ಲಾ ಬಣ್ಣಗಳಿಗೆ ಅದರದೇ ಆದ ಅಲೆಯಗಲ (wavelength) ಕೂಡ ಇರುತ್ತದೆ.

 

ಭೂಮಿಯ ಸುತ್ತಾವಿ

ಭೂಮಿಯ ಸುತ್ತ ಇರುವ, ಇಂಗ್ಲಿಶಿನಲ್ಲಿ ಅಟ್ಮೊಸ್ಪಿಯರ್ ಎನ್ನುವ ಗಾಳಿಪದರದಲ್ಲಿ ಸಾಮಾನ್ಯವಾಗಿ ಆವಿ – ಅನಿಲಗಳು, ನೀರಿನ ಹನಿಗಳು ಮುಂತಾದವುಗಳು ಇರುತ್ತವೆ. ಆವಿಗಳಲ್ಲಿ ಹೆಚ್ಚಾಗಿ ನೈಟ್ರೋಜನ್ (78%) ಮತ್ತು ಆಕ್ಸಿಜನ್ (21%) ಇರುತ್ತದೆ. ಇದರ ಜೊತೆ ಕಸದ ತುಣುಕುಗಳು, ಕಡಲಿನ ಉಪ್ಪು, ದೂಳು ಕೂಡ ಈ ಪದರದಲ್ಲಿ ಇರುತ್ತದೆ. ಇವುಗಳು ಕಡುಚಿಕ್ಕದಾದ ಕಾರಣ ನಮ್ಮ ಕಣ್ಣಿಗೆ ಕಾಣಸಿಗುವುದಿಲ್ಲ. ಭೂಮಿಯ ಗಾಳಿಪದರದ ಆಚೆ ಇರುವುದು ಬಾನಂಗಳ (space). ಭೂಮಿಯ ಸುತ್ತಾವಿ ನೆಲದ ಹತ್ತಿರ ದಟ್ಟವಾಗಿರುತ್ತದೆ(dense) ಮತ್ತು ಬಾನಂಗಳದೆಡೆಗೆ ಚಾಚುತ್ತಿದ್ದಂತೆ ಗಾಳಿಯ ದಟ್ಟಣೆ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೇ ಗಾಳಿಪದರದ ಒತ್ತಡ(atmospheric pressure) ಎನ್ನುತ್ತೇವೆ.

ಬೆಳಕಿನ ಅಲೆಗಳು

ಬೆಳಕು ಒಂದು ಬಗೆಯ ಹುರುಪು/ಶಕ್ತಿ. ಬೆಳಕು ಅಲೆಗಳಾಗಿ ಕೂಡ ಹರಿಯಬಹುದು ಇಲ್ಲವೇ ತುಣುಕುಗಳಾಗಿ ಕೂಡ ಹರಿಯಬಹುದು. ಅಲೆಗಳಾಗಿ ತೆಗೆದುಕೊಂಡರೆ ಬೆಳಕು ಮಿಂಚಿನ(electric) ಮತ್ತು ಸೆಳೆತದ(magnetic) ಅಲೆಗಳಾಗಿ ಹರಿಯುತ್ತದೆ. ಹೀಗೆ ಅಲೆಗಳಾಗಿ ಹರಿಯುವ ಕಾರಣದಿಂದ ಬೆಳಕಿಗೆ ಒಂದು ಅಲೆಯಗಲ ಎಂದು ಇರುತ್ತದೆ. ಬೆಳಕಿನ ಅಲೆಯಗಲ 400nm ಇಂದ 750nm ವರೆಗೂ ಇರುತ್ತದೆ. ಮಿನ್ಸೆಳೆತ ಅಲೆಸಾಲಿನ ಬೇರೆ ಬೇರೆ ಕದಿರುಗಳಿಗೆ ಒಂದೊಂದು ಅಲೆಯಗಲದ ಬೆಲೆ ಇರುತ್ತದೆ. ಕದಿರುಗಳ ಹರಿಯುವಿಕೆಯ ದೆಸೆಯಿಂದ ಎಲ್ಲಾ ಅಲೆಗಳಿಗೆ ಹುರುಪು ಕೂಡ ಇರುತ್ತದೆ.

ಅಲೆಯಗಲ ಹೆಚ್ಚಿದ್ದು ಸಲದೆಣಿಕೆ (frequency) ಕಡಿಮೆ ಇದ್ದರೆ ಆ ಕದಿರಿಗೆ ಕಡಿಮೆ ಹುರುಪಿರುತ್ತದೆ. ಅಲೆಯಗಲ ಕಡಿಮೆಯಿದ್ದು ಸಲದೆಣಿಕೆ ಹೆಚ್ಚಿದ್ದರೆ ಆ ಕದಿರಿಗೆ ಹೆಚ್ಚು ಹುರುಪಿರುತ್ತದೆ. ಮಳೆಬಿಲ್ಲಿನಲ್ಲಿ ಕಾಣುವಂತೆ ನೀಲಿ ನೇರಳೆ ಬಣ್ಣಗಳು ಒಂದೆಡೆ ಇದ್ದರೆ ಕೆಂಪು ಕಿತ್ತಳೆಗಳು ಇನ್ನೊಂದೆಡೆ ಇರುತ್ತದೆ. ನೀಲಿ ಬಣ್ಣಕ್ಕೆ ಹೆಚ್ಚು ಸಲದೆಣಿಕೆ/ಕಡಿಮೆ ಅಲೆಯಗಲ ಇರುತ್ತದೆ ಮತ್ತು ಕೆಂಪಿಗೆ ಕಡಿಮೆ ಸಲದೆಣಿಕೆ/ಹೆಚ್ಚು ಅಲೆಯಗಲ ಇರುತ್ತದೆ. ಈ ಎಲ್ಲಾ ಅಲೆಗಳು 3 X 108 m/s ಬಿರುಸಿನಲ್ಲಿ (speed) ಹರಿಯುತ್ತವೆ.

ನೇಸರನ ಬೆಳಕು ಗಾಳಿಪದರದ ಮೂಲಕ ಬರುತ್ತಿದ್ದಂತೆ ಗಾಳಿಪದರದ ಬೇರೆ ಬೇರೆ ವಸ್ತುಗಳೊಡನೆ ಬೆಳಕಿನ ತಿಕ್ಕಾಟ ಏರ್ಪಡುತ್ತದೆ . ಕಸದ ತುಣುಕುಗಳು ಮತ್ತು ನೀರಿನ ಹನಿಗಳು ಬೆಳಕಿನ ಅಲೆಯಗಲಕ್ಕಿಂತ ದೊಡ್ಡದಾಗಿರುವ ಕಾರಣ ಅದಕ್ಕೆ ಡಿಕ್ಕಿ ಹೊಡೆದು ಬೇರೆ ದಿಕ್ಕಿನೆಡೆಗೆ ಸಾಗುತ್ತದೆ. ಬೆಳಕಿನ ಎಲ್ಲಾ ಬಣ್ಣಗಳು ಒಂದೇ ಬಗೆಯಲ್ಲಿ ಸಾಗಿಹೋಗುವುದರಿಂದ ಡಿಕ್ಕಿಯ ಬಳಿಕವೂ ಬೆಳಕಿನ ಬಣ್ಣ ಹಾಗೆಯೇ ಉಳಿಯುತ್ತದೆ. ಹಾಗಾಗಿ ಬಿಳಿ ಬಣ್ಣ ಬಿಳಿಯಾಗಿಯೇ ಇರುತ್ತದೆ.

ಆದರೆ, ಬೆಳಕು ತನ್ನ ಅಲೆಯಗಲಕ್ಕಿಂತ ಚಿಕ್ಕದಾದ ಅಂದರೆ ಆವಿಯ ಅಣುಕೂಟಗಳಿಗೆ (gas molecules) ಡಿಕ್ಕಿ ಹೊಡೆದಾಗ ಬೆಳಕಿನ ಚದುರುವಿಕೆಯಾಗುತ್ತದೆ(scattering). ಬೆಳಕು ಚದುರಿದಾಗ ಅದರೊಳಗೆ ಇರುವ ಬಣ್ಣಗಳೂ ಕೂಡ ಚದುರುತ್ತವೆ. ಆದರೆ ಬೆರಗಿನ ವಿಷಯವೆಂದರೆ ಎಲ್ಲಾ ಬಣ್ಣಗಳು ಒಂದೇ ತೆರನಾಗಿ ಚದುರುವುದಿಲ್ಲ.

ಕಡಿಮೆ ಅಲೆಯಗಲಗಳುಳ್ಳ ಬಣ್ಣಗಳು (ನೀಲಿ,ನೇರಳೆ) ಹೆಚ್ಚು ಚದುರುತ್ತವೆ ಮತ್ತು ಹೆಚ್ಚು ಅಲೆಯಗಲಗಳುಳ್ಳ ಬಣ್ಣಗಳು(ಕೆಂಪು,ಕಿತ್ತಳೆ) ಕಡಿಮೆ ಚದುರುತ್ತವೆ. ಇದನ್ನು ರೇಯ್ಲೀ ಎಂಬಾತ ಮೊದಲು ತೋರಿಸಿಕೊಟ್ಟಿದ್ದರಿಂದ ಇದಕ್ಕೆ ರೇಯ್ಲೀ ಚದುರುವಿಕೆ (Rayleigh Scattering) ಎನ್ನುತ್ತಾರೆ. ಆವಿಯ ಅಣುಕೂಟಗಳು (Molecules) ನೀಲಿ ಮತ್ತು ನೇರಳೆ ಬಣ್ಣಗಳನ್ನು ಸುಳುವಾಗಿ ಹೀರಿಕೊಳ್ಳುತ್ತವೆ. ಆದರೆ ಕೆಂಪು ಮತ್ತು ಕಿತ್ತಳೆಯನ್ನು ಅಷ್ಟು ಸುಳುವಾಗಿ ಹೀರಿಕೊಳ್ಳುವುದಿಲ್ಲ ಮತ್ತು ಅದು ಪದರದ ಮೂಲಕ ಹಾದುಹೋಗಿಬಿಡುತ್ತವೆ.

ಆವಿಯ ಅಣುಕೂಟಗಳು ಹೀಗೆ ಕಡಿಮೆ ಅಲೆಯಗಲದ ಬಣ್ಣಗಳನ್ನು(ನೀಲಿ,ನೇರಳೆ) ಹೀರಿಕೊಂಡ ಬಳಿಕ ಅವು ಎಲ್ಲಾ ದಿಕ್ಕುಗಳಲ್ಲಿ ಚದುರಲು ಮೊದಲಾಗುತ್ತವೆ. ಹೀಗೆ ಎಲ್ಲಾ ದಿಕ್ಕಿನಲ್ಲಿ ಚದರುವ ಕಾರಣ ಬಾನಿನ ಬಣ್ಣ ನೀಲಿಯಾಗಿ ಕಾಣುತ್ತದೆ. ಆದರೆ ನೀಲಿಯೇ ಏಕೆ ನೇರಳೆ ಬಣ್ಣ ಯಾಕಲ್ಲ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು.

ಮನುಷ್ಯನ ಕಣ್ಣುಗಳು ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳಿಗೆ ಹೆಚ್ಚು ನಾಟುವ ಹಾಗೆ ಏರ್ಪಾಟಾಗಿವೆ , ಹಾಗಾಗಿ ನೀಲಿ-ನೇರಳೆ ಬಣ್ಣದ ಬೆರೆತ ಇದ್ದರೂ ಕೂಡ ಕಣ್ಣು ಅದನ್ನು ನೀಲಿಯೆಂದೆ ಅರಿಯುತ್ತದೆ . ಹಾಗಾಗಿ ಬಾನು ನಮಗೆ ನೀಲಿಯಾಗಿ ಕಾಣುತ್ತದೆ.

ಇಳಿಸಂಜೆಯ ಹೊತ್ತಿಗೆ ಬಾನು ಕೆಂಪಾಗುವುದನ್ನು ನಾವು ಕಂಡಿರುತ್ತೇವೆ. ಭೂಮಿಯು ತನ್ನ ಸುತ್ತ ತಿರುಗುತ್ತಿದ್ದಂತೆ ಬೆಳಿಗ್ಗೆ ನೇಸರನ ಎದುರಿಗಿದ್ದ ಭೂಮಿಯ ಬದಿಯು ಸಂಜೆಗೆ ನೇಸರನಿಂದ ದೂರ ಸರಿಯುತ್ತದೆ. ಮೇಲಿನ ತಿಟ್ಟದಲ್ಲಿ ಕಾಣುವಂತೆ ಸಂಜೆಯ ಹೊತ್ತಿಗೆ ನೇಸರನ ಕದಿರುಗಳು ಬೆಳಗಿನ ಹೊತ್ತಿನಂತೆ ನೇರವಾಗಿ ಭೂಮಿಯ ಮೇಲೆ ಬೀಳುವುದಿಲ್ಲ. ಅದು ನಾವು ಇರುವ ನೆಲವನ್ನು ತಲುಪಬೇಕಾದರೆ ಬೆಳಗಿನ ಹೊತ್ತಿಗಿಂತ ಹೆಚ್ಚು ದೂರ ಸಾಗಬೇಕಾಗುತ್ತದೆ. ಹೀಗೆ ಸಾಗುವಾಗ ಮೊದಲು ಚದರುವ ಕಡಿಮೆ ಅಲೆಯಗಲದ ನೀಲಿ ಬಣ್ಣವನ್ನು ಸುತ್ತಾವಿ ಆಗಲೇ ಹೀರಿಕೊಂಡಿರುತ್ತದೆ. ಮಿಕ್ಕ ಬಣ್ಣಗಳು ಸುತ್ತಾವಿಯನ್ನು ದಾಟಿ ನಮ್ಮನ್ನು ತಲುಪುತ್ತವೆ. ಈ ಬಣ್ಣಗಳು ಹೆಚ್ಚು ಅಲೆಯಗಲವುಳ್ಳವಾದ್ದರಿಂದ ನಮಗೆ ಸಂಜೆಯ ಬಾನು ಕೆಂಪು ಕಿತ್ತಳೆ ಬಣ್ಣವಾಗಿ ಕಾಣುತ್ತದೆ.

 

ಎಂಜಿನ್ ಬಗ್ಗೆ ತಿಳಿಯೋಣ ಬನ್ನಿ

ಜಯತೀರ್ಥ ನಾಡಗೌಡ.

ದಿನ ನಿತ್ಯ ನಾವು ಸಾರಿಗೆಗಾಗಿ ಅವಲಂಬಿಸಿರುವ ಗಾಡಿ/ಬಂಡಿಗಳು(Vehicles) ಹೆಚ್ಚಾಗಿ ಬಿಣಿಗೆಯನ್ನು(Engine) ಹೊಂದಿರುತ್ತವೆ. ಬಿಣಿಗೆಯಲ್ಲಿ ಹಲವು ಬಗೆಗಳು ಇದ್ದರೂ ಬಹುಪಾಲು ಕಾರು,ಬಸ್ಸುಗಳು,ಇಗ್ಗಾಲಿ ಬಂಡಿಗಳು ಒಳ ಉರಿಯುವಿಕೆಯ ಬಿಣಿಗೆಯನ್ನು (Internal Combustion Engine) ಬಳಸುತ್ತವೆ. ಅದರಲ್ಲೂ ಈ ಒಳ ಉರಿಯುವಿಕೆಯ ಬಿಣಿಗೆಗಳು ಹೆಚ್ಚಾಗಿ ಆಡುಬಿಣಿಗೆಯ (Reciprocating Engine) ಸಾಲಿಗೆ ಸೇರುತ್ತವೆ. ನಮ್ಮ ಬಂಡಿಗಳ ಬಿಣಿಗೆ ಹೇಗೆ ಕೆಲಸ ಮಾಡುತ್ತವೆ,ಇದರ ಬಗೆಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಬಿಣಿಗೆಗಳ ಹಳಮೆ:

ಮೊದಲ ಒಳ ಉರಿಯುವಿಕೆಯ ಬಿಣಿಗೆಯೊಂದನ್ನು ಕಂಡುಹಿಡಿದು ಮಾರಾಟಕ್ಕೆ ಅಣಿಗೊಳಿಸಿದ್ದು ಬೆಲ್ಜಿಯಮ್ ದೇಶದ ಜೀನ್ ಜೊಸೇಪ್ ಲೆನೊಯ್ರ್(Jean Joseph Lennoir) 1858 ರಲ್ಲಿ. ಆದರೂ 1876ರಲ್ಲಿ ಜರ್ಮನಿಯ ಖ್ಯಾತ ಅರಕೆಗಾರ ನಿಕೋಲವ್ಸ್ ಅಗಸ್ಟ್ ಒಟ್ಟೋ (Nicolaus August Otto) ಕಟ್ಟಿದ, ಒಟ್ಟೋ ಸುತ್ತು (Otto Cycle) ಆಧರಿಸಿದ ಬಿಣಿಗೆಯನ್ನೇ ಹಲವೆಡೆ ಮೊದಲ ಮಾರಾಟಕ್ಕೆ ಅಣಿಗೊಂಡ ಬಿಣಿಗೆಯೆಂದು ನಂಬಲಾಗಿದೆ. ಒಟ್ಟೋರವರು ಕಟ್ಟಿದ ಈ ಬಿಣಿಗೆಯ ಕೆಲವು ವರುಶಗಳ ಬಳಿಕ 1892ರಲ್ಲಿ ಮತ್ತೊಬ್ಬ ಜರ್ಮನಿಯ ಅರಕೆಗಾರ ರುಡಾಲ್ಫ್ ಡಿಸೇಲ್ (Rudolf Diesel) ಎಂಬುವರು ಹೊಸ ಸುತ್ತು ಆಧರಿಸಿದ ಬಿಣಿಗೆಯೊಂದನ್ನು ಕಂಡುಹಿಡಿದು ಇದನ್ನು ಡಿಸೇಲ್ ಸುತ್ತಿನ ಬಿಣಿಗೆ (Diesel Cycle) ಎಂದು ಕರೆದರು. ದಿನಗಳೆದಂತೆ ಒಟ್ಟೋ ಸುತ್ತಿನ ಬಿಣಿಗೆಯು ಪೆಟ್ರ‍ೋಲ್ ಬಿಣಿಗೆಯೆಂದು,ರುಡಾಲ್ಪ್ ಡಿಸೇಲ್ ಸುತ್ತಿನ ಬಿಣಿಗೆಯು ಡಿಸೇಲ್ ಬಿಣಿಗೆಯೆಂದು ಹೆಸರು ಪಡೆದವು.

ಒಳ ಉರಿಯುವಿಕೆಯ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ?

ಒಳ ಉರಿಯುವಿಕೆಯ ಬಿಣಿಗೆಗಳು ಉರುವಲಿನ ರಾಸಾಯನಿಕ ಬಲವನ್ನು(Chemical Energy) ತಿರುಗುಣಿಯ (Crankshaft) ಬಲವಾಗಿ ಮಾರ್ಪಡಿಸಿ ಗಾಲಿತೂಕದಲ್ಲಿ(Flywheel) ಕೂಡಿಡುತ್ತವೆ. ಬಿಣಿಗೆಯ ಉರುಳೆಗಳಲ್ಲಿ(Cylinder) ಉರುವಲು ಹೊತ್ತಿಕೊಂಡು ಉರಿದಾಗ ಇದು ಆಡುಬೆಣೆಯನ್ನು(Piston) ಹಿಂದುಮುಂದಾಗಿಸುತ್ತದೆ. ಆಡುಬೆಣೆಯ ಈ ಕದಲಿಕೆಯ ಬಲವು ಕೂಡುಸಳಿಗಳನ್ನು(Connecting rod) ತಿರುಗುವಂತೆ ಮಾಡಿ ತಿರುಗುಣಿಗೆ(Crankshaft) ಬಲ ಸಾಗಿಸುತ್ತದೆ. ತಿರುಗುಣಿಯಲ್ಲಿ ಸೇರಿಸಿದ ಬಲವು ಕೊನೆಯಲ್ಲಿ ಗಾಲಿತೂಕದ ಮೂಲಕ ಬಂಡಿಯ ಗಾಲಿಗಳನ್ನು ಮುಂದೂಡಲು ನೆರವಾಗುತ್ತದೆ.

ಬಿಣಿಗೆಗಳು ಕೆಲಸ ಮಾಡುವ ರೀತಿಯನ್ನು ಡಿಸೇಲ್ ರವರು ಮುಂದಿಟ್ಟ ಡಿಸೇಲ್ ಸುತ್ತು ಮತ್ತು ಒಟ್ಟೋರವರು ಮುಂದಿಟ್ಟ ಒಟ್ಟೋ ಸುತ್ತಿನಂತೆ ವಿವರಿಸಬಹುದು. ಡಿಸೇಲ್ ಬಿಣಿಗೆಗಳು ಡಿಸೇಲ್ ಸುತ್ತನ್ನು ಅನುಸರಿಸಿ ಕೆಲಸ ಮಾಡುತ್ತವೆ. ಪೆಟ್ರೋಲ್ ಬಿಣಿಗೆಗಳು ಒಟ್ಟೋ ಸುತ್ತನ್ನು ಅನುಸರಿಸುತ್ತವೆ. ಎರಡು ಉರುವಲುಗಳಿಗೆ ಪೆಟ್ರೋಲಿಯಮ್ ಸೆಲೆಯಿಂದ ಪಡೆಯಲಾಗಿದ್ದರೂ, ಡಿಸೇಲ್ ಮತ್ತು ಪೆಟ್ರೋಲ್ ಉರುವಲುಗಳಲ್ಲಿ ಸಾಕಶ್ಟು ಬೇರ್ಮೆಗಳಿವೆ. ಇದೇ ಕಾರಣಕ್ಕೆ ಡಿಸೇಲ್ ಸುತ್ತು ಹಾಗೂ ಒಟ್ಟೋ ಸುತ್ತುಗಳಲ್ಲಿಯೂ ಬೇರ್ಮೆ ಇದೆ.

ಗಾಳಿಯೊಂದಿಗೆ ಡಿಸೇಲ್ ಉರುವಲನ್ನು ಹೆಚ್ಚಿನ ಒತ್ತಡದಲ್ಲಿ ಕುಗ್ಗಿಸಿದರೆ ತನ್ನಿಂದ ತಾನೇ ಹೊತ್ತುರಿಯುತ್ತದೆ. ಇದಕ್ಕೆಂದೇ ಡಿಸೇಲ್ ಬಿಣಿಗೆಗಳನ್ನು ಕಾಂಪ್ರೆಸ್ಡ್ ಇಗ್ನಿಶನ್ ಎಂಜೀನ್ (Compressed Ignition Engine-CI Engine) ಎನ್ನಲಾಗುತ್ತದೆ. ಡಿಸೇಲ್ ಉರುವಲಿನಲ್ಲಿ ಹೆಚ್ಚಿನ ಕುಗ್ಗುವಿಕೆಯ(Compression) ಗುಣವಿರುತ್ತದೆ. ಆದರೆ ಗ್ಯಾಸೋಲಿನ್ ಅಂದರೆ ಪೆಟ್ರೋಲ್ ಬಿಣಿಗೆಗಳಲ್ಲಿ ಹೀಗಿರುವುದಿಲ್ಲ. ಪೆಟ್ರೋಲ್ ಬಿಣಿಗೆಗಳು ಡಿಸೇಲ್ -ಗಾಳಿಯಂತೆ ಕುಗ್ಗಿದರೂ ತನ್ನಿಂದ ತಾನೇ ಹೊತ್ತುರಿಯಲಾರವು. ಪೆಟ್ರ‍ೋಲ್ ಬಿಣಿಗೆಗಳು ಇದಕ್ಕೋಸ್ಕರ ಕಿಡಿಬೆಣೆ (Spark Plug) ಅನ್ನು ಬಳಸುತ್ತವೆ. ಆದ್ದರಿಂದ ಪೆಟ್ರ‍ೋಲ್ ಬಿಣಿಗೆಗಳು ಸ್ಪಾರ್ಕ್ ಇಗ್ನಿಶನ್ ಎಂಜೀನ್ ಗಳೆಂದು (Spark Ignition Engine-SI Engine) ಹೆಸರುಪಡೆದಿವೆ. ಪೆಟ್ರ‍ೋಲ್ ಉರುವಲಿಗೆ ಯೂರೋಪ್,ಅಮೇರಿಕಾ,ಕೆನಡಾ ಮುಂತಾದೆಡೆ ಗ್ಯಾಸೋಲಿನ್ ಎಂದು ಕರೆಯಲಾಗುತ್ತದೆ.

ಬಿಣಿಗೆಯ ಮುಖ್ಯ ಬಾಗಗಳು:

ಡಿಸೇಲ್ ಇಲ್ಲವೇ ಪೆಟ್ರ‍ೋಲ್ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರವಾಗಿ ಅರಿಯಲು ಇದರ ಪ್ರಮುಖ ಬಿಡಿಭಾಗಗಳು ಯಾವುವು ಎಂದು ತಿಳಿದುಕೊಳ್ಳುವುದು ಅಷ್ಟೇ ಅಗತ್ಯವಾಗಿದೆ. ಕೆಲವು ಪ್ರಮುಖ ಬಿಡಿಭಾಗಗಳು ಇಂತಿವೆ:

1.ಉರುಳೆ (Cylinder)

2.ಆಡುಬೆಣೆ (Piston)

3.ಕೂಡುಸಳಿ (Connecting Rod)

4.ತಿರುಗುಣಿ (Crankshaft)

5.ಹೊರ ತೆರಪು (Exhaust Valve)

6.ಒಳ ತೆರಪು (Intake Valve)

7.ಕಿಡಿ ಬೆಣೆ (Spark Plug) ***

8.ಚಿಮ್ಮುಕ (Injector)

9.ಉಬ್ಬುಕ (Camshaft)

***ಮುಂಚೆ ತಿಳಿಸಿದಂತೆ ಡಿಸೇಲ್ ಬಿಣಿಗೆಗಳು ಕಿಡಿಬೆಣೆ ಹೊಂದಿರುವುದಿಲ್ಲ.

ಬಿಣಿಗೆಯಲ್ಲಿ ಬಗೆಗಳು:

ನಾವು ಬಳಸುವ ಕಾರು,ಬಸ್ಸು ಮುಂತಾದ ಬಂಡಿಯ ಬಿಣಿಗೆಗಳು ಹಲವು ಬೇರ್ಮೆ ಹೊಂದಿವೆ. ಹೀಗಾಗಿ ಇವುಗಳಲ್ಲಿ ಹಲವಾರು ಬಗೆಗಳು ಇವೆ.

1.ಬಿಣಿಗೆಯ ಉರುಳೆಗಳ ಜೋಡಣೆಯಂತೆ

1.1 ನೇರ ಸಾಲಿನ ಉರುಳೆಗಳ ಬಿಣಿಗೆ (Inline Engine)

1.2 ಇಂಗ್ಲಿಶ್ “ವಿ” ಆಕಾರದಂತೆ ಜೋಡಿಸಿದ ಉರುಳೆಗಳ ಬಿಣಿಗೆ (V-Engine)

1.3 ಬಿರುಗೆರೆಯ ಬದಿಗೆ ಜೋಡಿಸಿದ ಉರುಳೆಗಳುಳ್ಳ ಬಿಣಿಗೆ  (Radial Engine)

1.4 ಒಂದಕ್ಕೊಂದು ಎದುರು ಜೋಡಿಸಿದ ಉರುಳೆಗಳ ಬಿಣಿಗೆ (Opposed Engine)

2. ಬಳಸಲ್ಪಡುವ ಉರುವಲಿನ ಪ್ರಕಾರ

2.1 ಡಿಸೇಲ್ ಬಿಣಿಗೆ (Diesel Engine)

2.2 ಪೆಟ್ರ‍ೋಲ್/ಗ್ಯಾಸೋಲಿನ್ ಬಿಣಿಗೆ (Petrol/Gasoline Engine)

2.3 ಸಿ ಎನ್ ಜಿ ಬಿಣಿಗೆ (CNG Engine)

2.4 ಎಲ್ ಪಿ ಜಿ ಬಿಣಿಗೆ (LPG Engine)

 

3.ಬಿಣಿಗೆಯ ಬಡೆತಗಳಿಗೆ ತಕ್ಕಂತೆ

3.1 ನಾಲ್ಬಡೆತಗಳ ಬಿಣಿಗೆ (4 Stroke engine)

3.2 ಇಬ್ಬಡೆತಗಳ ಬಿಣಿಗೆ (2 Stroke Engine)

 

4.ಬಿಣಿಗೆಯ ತಂಪಾಗಿಸುವಿಕೆಗೆ ತಕ್ಕಂತೆ

4.1 ನೀರಿನ ತಂಪಾಗಿಸುವಿಕೆ (Water cooled Engine)

4.2 ಕಿಲೇಣ್ಣೆಯಿಂದ ತಂಪಾಗಿಸುವಿಕೆ (Oil cooled Engine)

 

5.ಬಿಣಿಗೆಯ ಉಸಿರಾಟಕ್ಕೆ ತಕ್ಕಂತೆ

5.1 ಗಾಳಿದೂಡುಕ ಹೊಂದಿದ (Turbocharged/Supercharged Engines)

5.2 ಗಾಳಿದೂಡುಕವಿರದ (Naturally Aspirated Engines)

 

6.ಬಿಣಿಗೆಗಳು ಹೊಂದಿರುವ ತೆರಪಿಗೆ ತಕ್ಕಂತೆ

6.1 ಎರಡು ತೆರಪು (2 Valves Engine)

6.2 ಮೂರ ತೆರಪಿನ ಬಿಣಿಗೆ (3 Valves Engine)

6.3 ನಾಲ್ತೆರಪು (4 Valves Engine)

 

ಒಂದು ಬಿಣಿಗೆಯ ನೆರವೇರಿಕೆಯನ್ನು(Efficiency) ಈ ಕೆಳಕಂಡ ನಾಲ್ಕರ ಮೂಲಕ ಅರಿಯಬಹುದಾಗಿದೆ.

1. ಬಿಣಿಗೆಯ ಕಸುವು (Engine Power)

2.ಬಿಣಿಗೆ ಉಂಟು ಮಾಡುವ ತಿರುಗುಬಲ (Torque)

3.ಬಿಣಿಗೆಯ ಉರುವಲು ಬಳಕೆ (Fuel Consumption)

4.ಉಗುಳುವ ಕೆಡುಗಾಳಿ (Exhaust Emissions)

 

ಬಿಣಿಗೆಯ ಹಲಬಗೆಯ ಏರ್ಪಾಟುಗಳು:

ಬಿಣಿಗೆಯು ಮನುಶ್ಯನ ದೇಹದಂತೆ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿರುವ ಉಸಿರಾಟದ ಏರ್ಪಾಟು, ನೆತ್ತರಿನ ಹರಿಯುವಿಕೆಯ ಏರ್ಪಾಟುಗಳಿರುವಂತೆ ಬಿಣಿಗೆಯು ಹಲವು ಏರ್ಪಾಟುಗಳನ್ನು ಹೊಂದಿದೆ. ಬಿಣಿಗೆಯ ವಿವಿಧ ಏರ್ಪಾಟುಗಳು

1.ಉರುವಲಿನ ಏರ್ಪಾಟು (Fuel System)

2.ಉಸಿರಾಟದ ಏರ್ಪಾಟು (Air Intake System)

3.ಕೆಡುಗಾಳಿ ಹೊರಹಾಕುವಿಕೆಯ ಏರ್ಪಾಟು (Exhaust System)

4.ಬಿಣಿಗೆ ತಂಪಾಗಿಸುವಿಕೆಯ ಏರ್ಪಾಟು (Engine Cooling System)

5.ಬಿಣಿಗೆಯ ಮಿಂಚಿನ ಏರ್ಪಾಟು (Engine Electrical System)

ಪ್ರಯೋಗ: ಆಲೂಗಡ್ಡೆ ಬಳಸಿ ಬೆಳಕು!

ಜಯತೀರ್ಥ ನಾಡಗೌಡ.

ಮಕ್ಕಳಿಗೆ ಅರಿಮೆ ಬಗ್ಗೆ ಆಸಕ್ತಿ ಹುಟ್ಟಿಸಲು ಚಿಕ್ಕ ಪುಟ್ಟ ಪ್ರಯೋಗ(experiment) ಮಾಡಿ ತೋರಿಸಿ, ಅವರ ತಿಳುವಳಿಕೆ ಹೆಚ್ಚಿಸಬಹುದು. ದಿನ ನಿತ್ಯ ಊಟ-ತಿಂಡಿಗಳಲ್ಲಿ ಬಳಸುವ ಆಲೂಗಡ್ಡೆ ಮೂಲಕ ಬಲ್ಬ್ ಉರಿಸಿ ಪುಟಾಣಿಗಳಿಗೆ ಮುದ ನೀಡುವುದಲ್ಲದೇ ಕಲಿಕೆಯನ್ನು ಹಗುರವಾಗಿಸಬಹುದು. ಆಲೂಗಡ್ಡೆ ಬಳಸಿ ಬೆಳಕು ಉಂಟುಮಾಡುವ ಪ್ರಯೋಗದ ಬಗ್ಗೆ ತಿಳಿಯೋಣ ಬನ್ನಿ.

ಎರಡು ಬೇರೆ ತರಹದ ಲೋಹಗಳು (dissimilar metals) ಮತ್ತು ಆಲೂಗಡ್ಡೆಯ ತಿಳಿರಸದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ಚಿಕ್ಕದಾದ ವೋಲ್ಟೇಜ್ ಉಂಟು ಮಾಡಬಹುದು. ಇದಕ್ಕೆ ಬೇಕಾಗುವ ವಸ್ತುಗಳು ಇಂತಿವೆ,

1. ಒಂದು ದೊಡ್ಡ ಆಲೂಗಡ್ಡೆ
2. ಎರಡು ನಾಣ್ಯಗಳು
3. ಸತುವು ಬಳಿದ ಎರಡು ಮೊಳೆಗಳು (zinc-plated nails)
4. ಮೂರು ತಾಮ್ರದ ತಂತಿಗಳು
5. ಒಂದು ಚಿಕ್ಕ ಪುಟಾಣಿ ಬಲ್ಬ್

ಬೆಳಕು ಮೂಡಿಸುವ ಬಗೆ:
ಆಲೂಗಡ್ಡೆಯನ್ನು ಎರಡು ಹೋಳಾಗಿಸಿಕೊಳ್ಳಬೇಕು. ಈ ಎರಡು ಹೋಳುಗಳಲ್ಲಿ ನಾಣ್ಯಗಳು ತೋರಿಕೊಂಡು ಹೋಗುವಂತಿರಬೇಕು. ತಾಮ್ರದ ಎರಡು ತಂತಿಗಳನ್ನು ತೆಗೆದುಕೊಂಡು ಈ ನಾಣ್ಯಗಳತ್ತ ಚೆನ್ನಾಗಿ ಸುತ್ತಬೇಕು. ಈ ನಾಣ್ಯಗಳನ್ನು ಈಗ ಆಲೂಗಡ್ಡೆಯ ಎರಡು ಹೋಳುಗಳಲ್ಲಿ ಬೇರೆ ಬೇರೆಯಾಗಿ ಸಿಕ್ಕಿಸಿ. ಮೂರನೇಯ ತಾಮ್ರದ ತಂತಿಯನ್ನು ಸತುವು ಬಳಿದ ಮೊಳೆಯೊಂದರ ಸುತ್ತಲೂ ಸುತ್ತಿ. ಈ ತೆರನಾಗಿ ಸುತ್ತಿದ ಮೊಳೆಯನ್ನು ಯಾವುದಾದರೂ ಆಲೂಗಡ್ಡೆಯ ಹೋಳುಗಳಲ್ಲಿ ಸಿಕ್ಕಿಸಿ.

ಮೊದಲನೇಯ ಆಲೂಗಡ್ಡೆ ಹೋಳಿನಲ್ಲಿರುವ ನಾಣ್ಯಕ್ಕೆ ಸುತ್ತಿರುವ ತಂತಿಯನ್ನು ಸ್ವಲ್ಪ ಎಳೆದು ಇನ್ನೊಂದು ಮೊಳೆಗೂ ಸುತ್ತಿ, ಅದನ್ನು ಅಲ್ಲಿಯೇ ಉಳಿದ ಅರ್ಧ ಆಲೂಗಡ್ಡೆ ಹೋಳಿಗೆ ಸಿಕ್ಕಿಸಬೇಕು. ಈ ರೀತಿ ಎರಡು ಮೊಳೆಗಳ ಸುತ್ತಿ ಉಳಿದಿರುವ ತಂತಿಯ ಬದಿಯ ನಡುವೆ ಚಿಕ್ಕ ಬಲ್ಬೊಂದನ್ನು ಜೋಡಿಸಿದರೆ ಬಲ್ಬ್ ಹೊತ್ತಿಕೊಂಡು ಉರಿಯುತ್ತದೆ. ಇದರಿಂದ ಉಂಟಾಗುವ ಮಿಂಚು (current) ಚಿಕ್ಕ ಪ್ರಮಾಣದ್ದು ಮಾತ್ರ.

ಈ ಪ್ರಯೋಗದ ಹಿಂದಿರುವ ಅರಿಮೆ:
ಇಲ್ಲಿ ಮಿನ್ನೊಡೆಯುವಿಕೆ (electrolysis) ಮೂಲಕವೇ ಮಿಂಚು ಹರಿದು ಬಲ್ಬ್ ಉರಿಯುವಂತೆ ಮಾಡುತ್ತದೆ. ಸತುವಿನ ಮೊಳೆಗಳು ಆನೋಡ್ ನಂತೆ(anode) ಕೆಲಸಮಾಡಿ ಕಳೆವಣಿಗಳಾಗಿ (electrons) ಬೇರ್ಪಟ್ಟರೆ, ನಾಣ್ಯಕ್ಕೆ ಸುತ್ತಿದ ತಾಮ್ರದ ತಂತಿಗಳು ಕ್ಯಾಥೋಡ್ ನಂತೆ(cathode) ಕೆಲಸಮಾಡಿ ಮಿಂಚು ಹರಿಯಲು ನೆರವಾಗುತ್ತವೆ. ಆಲೂಗಡ್ಡೆಯಲ್ಲಿರುವ ಫಾಸ್ಪರಿಕ್ ಹುಳಿ (phosphoric acid) ಇಲ್ಲಿ ಮಿಂಚೋಡುಕನಾಗಿ (electrolyte) ರಾಸಾಯನಿಕ ಕ್ರಿಯೆಯನ್ನು ಪೂರ್ತಿಗೊಳಿಸುತ್ತದೆ.

ನೆನಪಿರಲಿ: ತಾಮ್ರದ ತಂತಿಗಳನ್ನು ಮಕ್ಕಳು ಮುಟ್ಟದಂತೆ ಎಚ್ಚರವಹಿಸಿ,ಇದರಲ್ಲಿ ಕಡಿಮೆ ಪ್ರಮಾಣದ ಮಿಂಚು ಹರಿದರೂ ಚಿಕ್ಕದಾದ ಶಾಕ್ ನೀಡಬಲ್ಲುದು. ಈ ಪ್ರಯೋಗದ ಮೂಲಕ ಹೈಡ್ರೋಜನ್ ಗಾಳಿಯು ಬಿಡುಗಡೆಗೊಳ್ಳುತ್ತದೆ, ಆದ್ದರಿಂದ, ತುಂಬಾ ಬಿಸಿಯಾದ ಹಾಗೂ ಬೆಂಕಿಯಿಂದ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳನ್ನು ಸುತ್ತ-ಮುತ್ತಲೂ ಬಳಸದೇ ಇದ್ದರೆ ಲೇಸು.

ಹಿಗ್ಸ್ ಬೋಸಾನ್ ಎಂಬ ಕಾಣದ ತುಣುಕುಗಳು

ಪ್ರಶಾಂತ ಸೊರಟೂರ.

1964, ಹೊಸಗಾಲದ ಭೌತಶಾಸ್ತ್ರದಲ್ಲಿ (modern physics) ಅಚ್ಚಳಿಯದ ಹೊತ್ತು. ಇಂಗ್ಲೆಂಡಿನ ಪೀಟರ್ ಹಿಗ್ಸ್ (Peter Higgs) ತಮ್ಮ ಒಡ ಸಂಶೋಧಕರಾದ ರಾಬರ್ಟ್ ಬ್ರಾಟ್ (Robert Brout) ಮತ್ತು ಪ್ರಾಂಕ್ವಾಯ್ಸ್ ಎಂಗ್ಲರ್ಟ್ (François Englert) ಗಣಿತದ ನೆಲೆಯಲ್ಲಿ ಹೊಸ ಅರಿವನ್ನು ಮುಂದಿಟ್ಟರು. ಅದೆಂದರೆ,

ವಸ್ತುಗಳು ರಾಶಿಯನ್ನು (mass) ಪಡೆಯಲು ಕೆಲವು ಕಿರುತುಣುಕುಗಳು ಏರ್ಪಡಿಸುವ ಬಯಲು ಕಾರಣವಾಗಿದ್ದು, ಬಯಲು (field) ಎಲ್ಲೆಡೆ ಹರಡಿಕೊಂಡಿದೆ.”

ನಮ್ಮ ಸುತ್ತಣದ ಹಲವು ಆಗುಹೋಗುಗಳಲ್ಲಿ ರಾಶಿ (mass), ತೂಕ (weight) ತಮ್ಮದೇ ಆದ ಹಿರಿಮೆಯನ್ನು ಹೊಂದಿವೆ. ರಾಶಿ ಹೊಂದಿರುವ ಎರಡು ವಸ್ತುಗಳ ನಡುವೆ ಉಂಟಾಗುವ ಸೆಳೆತದಿಂದಾಗಿ ’ತೂಕ’ ಉಂಟಾಗುತ್ತದೆ ಎಂಬುದು ಅರಿತಿದ್ದರೂ, ವಸ್ತುಗಳು ರಾಶಿಯನ್ನು ಹೇಗೆ ಪಡೆದುಕೊಳ್ಳುತ್ತವೆ? ಅನ್ನುವುದು ಕಗ್ಗಂಟಾಗಿಯೇ ಉಳಿದಿದ್ದ ವಿಷಯ. ಈ ಹಿನ್ನೆಲೆಯಲ್ಲಿ ಪೀಟರ್ ಹಿಗ್ಸ್ ಅವರು ಮುಂದಿಟ್ಟ ಅರುಹು (hypothesis) ವಿಜ್ಞಾನಿಗಳಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟ, ಒಳಪಡುತ್ತಿರುವ ಅರಿವು ಎನ್ನಬಹುದು.

ಹಿಗ್ಸ್ ಅವರ ತಿಳಿವಿನ ಮಹತ್ವವನ್ನು ಮನಗಾಣುವ ಮುನ್ನ ಅಣುಗಳ ಒಳರಚನೆಯ ಬಗ್ಗೆ ತುಸು ತಿಳಿದುಕೊಳ್ಳೋಣ.

ನಮಗೆ ಗೊತ್ತಿರುವಂತೆ ಪ್ರತಿಯೊಂದು ವಸ್ತುವು ಕೋಟಿಗಟ್ಟಲೆ ಅಣುಗಳಿಂದ ಕೂಡಿರುತ್ತದೆ. ಅಣುಗಳ ಒಳಹೊಕ್ಕಾಗ ಅದರಲ್ಲಿ ಇನ್ನು ಕಿರಿದಾದ ತುಣುಕುಗಳಿರುತ್ತವೆ. ಅಣುವಿನ ನಡುವಣದಲ್ಲಿ (nucleus) ಪ್ರೋಟಾನ್ ಗಳು ಮತ್ತು ನ್ಯೂಟ್ರಾನ್ ಗಳ ನಡುವಣದ ಸುತ್ತ ಗೊತ್ತುಪಡಿಸಿದ ದಾರಿಯಲ್ಲಿ ಎಲೆಕ್ಟ್ರಾನ್ ಗಳು ಸುತ್ತುತ್ತಿರುತ್ತವೆ.

ಹೊಸಗಾಲದ ಭೌತಶಾಸ್ತ್ರದಲ್ಲಿ ಅಣುಗಳ ಒಳರಚನೆಯು ಹಂತ-ಹಂತವಾಗಿ ಅರಿವಿಗೆ ಬಂತು ಎನ್ನಬಹುದು. ಮೊದ-ಮೊದಲಿಗೆ ಕೂಡುವಣಿಗಳು (Protons), ನೆಲೆವಣಿಗಳು (Neutrons) ಅಣುಗಳ ಕಿರಿದಾದ ಭಾಗಗಳಾಗಿದ್ದು, ಅವುಗಳನ್ನು ಮತ್ತಷ್ಟು ಒಡೆಯಲು ಆಗುವುದಿಲ್ಲ ಅನ್ನುವಂತ ತಿಳುವಳಿಕೆ ಇತ್ತು. ಅರಿಮೆ ಮುಂದುವರೆಯುತ್ತಾ, ಅವುಗಳು ಇನ್ನೂ ಕಿರಿದಾದ ಭಾಗಗಳನ್ನು ಹೊಂದಿವೆ ಅನ್ನುವುದು ಗೊತ್ತಾಯಿತು.

ಕೂಡುವಣಿಗಳು ಮತ್ತು ನೆಲೆವಣಿಗಳು ಹೊಂದಿರುವ ಕಿರುತುಣುಕುಗಳನ್ನು ಕ್ವಾರ್ಕ್ಸ್ (Quarks) ಎನ್ನುತ್ತಾರೆ. ಕನ್ನಡದಲ್ಲಿ ಇವುಗಳನ್ನು ಕಿರಿಗಳು ಇಲ್ಲವೇ ಕಿರಿವಣಿಗಳು ಅನ್ನೋಣ. ಪ್ರತಿಯೊಂದು ಕೂಡುವಣಿ ಮತ್ತು ನೆಲೆವಣಿಗಳಲ್ಲಿ ತಲಾ ಮೂರು ಕಿರಿವಣಿಗಳಿರುತ್ತವೆ. ಈ ಕಿರುತುಣುಕುಗಳ ರಾಶಿಯನ್ನು ಹೋಲಿಸಿದಾಗ, ಕಳೆವಣಿಗಳ(Electrons) ರಾಶಿಯು ಕಿರುವಣಿಗಳಿಂದ ಕೂಡಿರುವ ಕೂಡುವಣಿಗಳು ಮತ್ತು ನೆಲೆವಣಿಗಳ ರಾಶಿಗಳಿಗಿಂತ ಹಲವು ಪಟ್ಟು ಕಡಿಮೆ ಇರುವುದು ಗೊತ್ತಾಯಿತು.

ಇನ್ನು, ಅಣುಗಳ ಕಿರುತುಣುಕುಗಳ ನಡುವೆ ಏರ್ಪಡುವ ಬಲಗಳು ಎರಡು ಬಗೆಯವು. ಮೊದಲನೆಯದು, ನಡುವಣದಲ್ಲಿ ಹಲವು ಕೂಡುವಣಿಗಳನ್ನು, ನೆಲೆವಣಿಗಳನ್ನು ಹಿಡಿದಿಡುವ ಗಟ್ಟಿ ಬಲ (strong force). ಎರಡನೆಯದು, ಕೂಡುವಣಿಗಳು ಮತ್ತು ಕಳೆವಣಿಗಳ ನಡುವಿರುವ ಸಡಿಲ ಬಲ (weak force).

ರಾಶಿ ಹೊಂದಿರದ ಒಂದು ಬಗೆಯ ತುಣುಕುಗಳು ಏರ್ಪಡಿಸುವ ಬಯಲಿನಿಂದಾಗಿ ಗಟ್ಟಿಬಲವು ಉಂಟಾಗುತ್ತದೆ. ರಾಶಿಯಿರದ ಈ ತುಣುಕುಗಳನ್ನು ಅಂಟುವಣಿಗಳು (gluons) ಎನ್ನುತ್ತಾರೆ. ಅಂಟುವಣಿಗಳು ಕಿರಿವಣಿಗಳನ್ನು ಪರಸ್ಪರ ಹಿಡಿದಿಟ್ಟಿರುತ್ತವೆ. ಅದೇ, ಸಡಿಲ ಬಲವು ನಡುವಣದಲ್ಲಿರುವ ಕೂಡುವಣಿಗಳ ಮತ್ತು ಅದರ ಸುತ್ತ ಸುತ್ತುವ ಕಳೆವಣಿಗಳ ನಡುವೆ ಏರ್ಪಡುವ ಬಲ. ಈ ಬಲವು ಇನ್ನೊಂದು ಬಗೆಯ ತುಣುಕುಗಳು ಉಂಟುಮಾಡುವ ಬಯಲಿನಿಂದಾಗಿ ಉಂಟಾಗುತ್ತದೆ. ಈ ತುಣುಕುಗಳನ್ನು W, Z ಗೇಜ್ ಬೋಸಾನ್ಸ್ (gauge bosons) ಎನ್ನುತ್ತಾರೆ.

ಸಡಿಲ ಬಲವನ್ನು ಏರ್ಪಡಿಸುವ W, Z ಗೇಜ್ ಬೋಸಾನ್ಸ್ ತುಣುಕುಗಳು ರಾಶಿಯನ್ನು ಹೊಂದಿರುವುದು ವಿಜ್ಞಾನಿಗಳನ್ನು ಬಿಡಿಸಲಾಗದ ಕಗ್ಗಂಟಿನಂತೆ ಕಾಡಿತು. ಈ ತುಣುಕುಗಳು ಕೂಡ ಗಟ್ಟಿಬಲವನ್ನು ಉಂಟುಮಾಡುವ ಅಂಟುವಣಿಗಳಂತೆ ರಾಶಿಯನ್ನು ಹೊಂದಿರಬಾರದಲ್ಲ, ಇವ್ಯಾಕೇ ರಾಶಿಯನ್ನು ಹೊಂದಿವೆ? ಮುಂದುವರೆಯುತ್ತಾ, ಎಲ್ಲ ಕಿರು ತುಣುಕುಗಳು, ಅಣುಗಳು, ವಸ್ತುಗಳು ರಾಶಿಯನ್ನು ಹೇಗೆ ಹೊಂದುತ್ತವೆ? ಅನ್ನುವಂತ ಪ್ರಶ್ನೆಗಳು ಭೌತಶಾಸ್ತ್ರಜ್ಞರ (physicist) ತಲೆ ಕೊರೆಯತೊಡಗಿದವು. ಈ ಕಗ್ಗಂಟನ್ನು ಬಿಡಿಸುವತ್ತ ಇಟ್ಟ ಹೆಜ್ಜೆಯೇ ಪೀಟರ್ ಹಿಗ್ಸ್ ತಮ್ಮ ಒಡ ಅರಕೆಗಾರರೊಂದಿಗೆ ಮುಂದಿಟ್ಟ ಹಿಗ್ಸ್ ನಡಾವಳಿ (Higgs mechanism) ಎಂಬ ಅರುಹು (hypothesis).

ಹಿಗ್ಸ್ ನಡಾವಳಿಯ ಪ್ರಕಾರ,

ಜಗದೆಲ್ಲೆಡೆ ಸಾಮಾನ್ಯ ಅರಿವಿಗೆ ಎಟುಕದಂತಹ ರೀತಿಯಲ್ಲಿ ಒಂದು ಬಗೆಯ ತುಣುಕುಗಳು ಹರಡಿಕೊಂಡಿವೆ. ತುಣುಕುಗಳು ಏರ್ಪಡಿಸುವ ಬಯಲಿನಿಂದಾಗಿ W, Z ಗೇಜ್ ಬೋಸಾನ್ಸ್ ತುಣುಕುಗಳು ರಾಶಿಯನ್ನು ಹೊಂದುವಂತಾಗಿದೆ. ಇದೇ ತುಣುಕುಗಳು ಅಣುವೊಂದರ ಕಳೆವಣಿಗಳು, ಕೂಡುವಣಿಗಳು ನೆಲೆವಣಿಗಳು ಮತ್ತು ಒಟ್ಟುನೋಟದಲ್ಲಿ ವಸ್ತುವೊಂದು ರಾಶಿಯನ್ನು ಹೊಂದಿರಲು ಕಾರಣವಾಗಿವೆ.

ತುಣುಕುಗಳು ಏರ್ಪಡಿಸುವ ಬಯಲಿಗೆ ಯಾವ ವಸ್ತುವು ಹೆಚ್ಚು ತಡೆಯನ್ನು ಒಡ್ಡುತ್ತದೋ ವಸ್ತು ಹೆಚ್ಚು ರಾಶಿಯನ್ನು ಹೊಂದಿರುತ್ತದೆ. ಅದೇ, ಬಯಲಿಗೆ ತುಂಬಾ ಕಡಿಮೆ ತಡೆಯನ್ನು ಒಡ್ಡುವ ವಸ್ತುಗಳ ರಾಶಿ ಕಡಿಮೆಯಾಗಿರುತ್ತದೆ ಮತ್ತು ಬಯಲಿಗೆ ತಡೆಯೊಡ್ಡದ ವಸ್ತುಗಳು ರಾಶಿಯನ್ನು ಹೊಂದಿರುವುದಿಲ್ಲ.”

ಈ ಅರಿಮೆಯನ್ನು ಒಂದು ಹೋಲಿಕೆಯೊಂದಿಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸೋಣ. ಕೆರೆಯೊಂದರಲ್ಲಿ ನೀರಿಗೆ ಹೆಚ್ಚು ತಡೆಯನ್ನು ಒಡ್ದದೆ ಮೀನು ಸುಳುವಾಗಿ ಈಜಬಲ್ಲದು ಅದೇ ಮನುಷ್ಯರು ನೀರಿಗೆ ಹೆಚ್ಚು ತಡೆಯನ್ನು ಒಡ್ಡುವುದರಿಂದ ಈಜಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇಲ್ಲಿ ನೀರಿನ ಕಣಗಳು ತನ್ನ ಸುತ್ತ ಬಯಲೊಂದನ್ನು ಏರ್ಪಡಿಸುತ್ತವೆ. ಈ ಬಯಲಿಗೆ ಮೀನು ಕಡಿಮೆ ತಡೆಯನ್ನು ಒಡ್ದುತ್ತದೆ ಮತ್ತು ಮನುಷ್ಯರು ಹೆಚ್ಚಿನ ತಡೆಯನ್ನು ಒಡ್ಡುತ್ತಾರೆ. ಇದನ್ನು ಹಿಗ್ಸ್ ನಡಾವಳಿಗೆ ಹೋಲಿಸಿದಾಗ, ನೀರಿನ ಕಣಗಳಂತೆ ಹಿಗ್ಸ್ ಕಣಗಳು ಬಯಲೊಂದನ್ನು ಏರ್ಪಡಿಸಿರುತ್ತವೆ. ಈ ಬಯಲಿಗೆ ಕೆಲವೊಂದು ವಸ್ತುಗಳು ಹೆಚ್ಚಿನ ತಡೆಯೊಡ್ಡುತ್ತವೆ ಅಂತಹ ವಸ್ತುಗಳು ಹೆಚ್ಚಿನ ರಾಶಿಯನ್ನು ಹೊಂದಿರುತ್ತವೆ. ಅದೇ ಕೆಲವು ವಸ್ತುಗಳು ಕಡಿಮೆ ತಡೆಯನ್ನು ಒಡ್ಡುವುದರಿಂದ ಕಡಿಮೆ ರಾಶಿಯನ್ನು ಹೊಂದುತ್ತವೆ.

ಹಿಗ್ಸ್ ನಡಾವಳಿಯನ್ನು ತಿಳಿಸಲು ಸಾಮಾನ್ಯವಾಗಿ ನೀಡುವ ಇನ್ನೊಂದು ಹೋಲಿಕೆ ಎಂದರೆ ಜನಸಂದಣಿಯಲ್ಲಿ ಸಿಲುಕಿದ ಪೀಟರ್ ಹಿಗ್ಸ್. ಕೆಳಗಿನ ಚಿತ್ರ-1 ರಲ್ಲಿ ತೋರಿಸಿರುವಂತೆ ಜನಸಂದಣಿಯಿರುವ ಕಾರ್ಯಕ್ರಮವೊಂದಕ್ಕೆ ಪೀಟರ್ ಹಿಗ್ಸ್ ಬರುತ್ತಾರೆ ಅಂದುಕೊಳ್ಳೋಣ. ಆಗ ಅವರು ಸಾಗುವ ದಾರಿಯಲ್ಲಿ ಚಿತ್ರ -2 ರಲ್ಲಿ ತೋರಿಸಿರುವಂತೆ ಮಂದಿ ಅವರ ಸುತ್ತ ಮುತ್ತಿಕೊಳ್ಳುತ್ತಾರೆ. ಅದೇ ಈ ಕಾರ್ಯಕ್ರಮಕ್ಕೆ  ಅಶ್ಟೇನು ಹೆಸರು ಗಳಿಸಿರದ ಜಾನ್ ಎಂಬುವರು ಬಂದರೆ ಅವರ ಪರಿಚಯದ ಕೆಲವರಷ್ಟೇ ಅವರನ್ನು ಸುತ್ತುವರೆಯುತ್ತಾರೆ. ಈ ಹೋಲಿಕೆಯಲ್ಲಿ ಜನಸಂದಣಿಯನ್ನು ಹಿಗ್ಸ್ ಬಯಲು ಮತ್ತು ಜನರನ್ನು ಹಿಗ್ಸ್ ಬೋಸಾನ್ ತುಣುಕುಗಳು ಎಂದುಕೊಂಡರೆ ಪೀಟರ್ ಹಿಗ್ಸ್ ಮುಂದೆ ಸಾಗಲು ಜನಸಂದಣಿಯಿಂದ ಅಂದರೆ ಹಿಗ್ಸ್ ಬಯಲಿಂದ ಹೆಚ್ಚು ತಡೆತಕ್ಕೆ ಒಳಗಾಗುತ್ತಾರೆ. ಮೇಲೆ ತಿಳಿದುಕೊಂಡಂತೆ ಹೆಚ್ಚು ತಡೆಗೆ ಒಳ್ಳಪಟ್ಟಿರುವ ವಸ್ತು ಹೆಚ್ಚು ರಾಶಿಯನ್ನು ಹೊಂದುತ್ತದೆ. ಅದೇ, ಕಡಿಮೆ ತಡೆತಕ್ಕೆ ಒಳಪಟ್ಟ ಜಾನ್ ಕಡಿಮೆ ರಾಶಿಯನ್ನು ಹೊಂದುತ್ತಾರೆ.

ಪೀಟರ್ ಹಿಗ್ಸ್ ಗೆಳೆಯರ ಬಳಗ ಮುಂದಿಟ್ಟ ಹಿಗ್ಸ್ ನಡಾವಳಿಯ ಅರುಹು ಇರುವರಿಗರಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿತು. ಇದು ಹೀಗೆ ಆಗಿರಲಿಕ್ಕಿಲ್ಲ ಅಂತಾ ಕೆಲವರೆಂದರೆ, ಗಣಿತದ ನೆಲೆಯಲ್ಲಿ ತೋರಿಸಿರುವುದರಿಂದ ಹಿಗ್ಸ್ ನಡಾವಳಿ ನಿಜವಿರಬಹುದು ಅಂತಾ ಇನ್ನು ಹಲವರೆಂದರು.

ವಸ್ತುಗಳಿಗೆ ರಾಶಿಯನ್ನು ಒದಗಿಸುತ್ತವೆ ಎಂದು ಊಹಿಸಿದ ಆ ತುಣುಕುಗಳನ್ನು ಮುಂದಿನ ದಿನಗಳಲ್ಲಿ ಹಿಗ್ಸ್ ಬೋಸಾನ್ (Higgs boson) ಎಂದು ಕರೆಯಲಾಯಿತು. ಕಾಣದಂತೆ ಜಗದೆಲ್ಲೆಡೆ ಹರಡಿರಬಹುದಾದ ಈ ತುಣುಕುಗಳನ್ನು ಕೆಲವರು ದೇವರ ಕಣಗಳು (god’s particles) ಎಂದು ಕರೆದರು. ಆದರೆ ಈ ಹೆಸರು ಪೀಟರ್ ಹಿಗ್ಸ್ ಸೇರಿಸಿ ಹಲವು ಅರಿಗರಿಗೆ ಹಿಡಿಸದಿದ್ದ ಕಾರಣ, ’ಹಿಗ್ಸ್ ಬೋಸಾನ್’ ಎಂಬ ಹೆಸರೇ ಹೆಚ್ಚು ಬಳಕೆಗೆ ಬಂತು.

ಮಾಹಿತಿ: ಸತ್ಯೇಂದ್ರ ಬೋಸ್ ಅವರು ಕಿರುತುಣುಕುಗಳ ಕುರಿತು ಹೊಮ್ಮಿಸಿದ ತಿಳುವಳಿಕೆಯನ್ನು ನೆನೆಯಲು, ಬಲವನ್ನು ಉಂಟುಮಾಡುವ ಕಿರುತುಣುಕುಗಳನ್ನು ಅವರ ಹೆಸರಿನಲ್ಲಿ ಬೋಸಾನ್ ಎಂದು ಕರೆಯಲಾಗುತ್ತದೆ.

(ಚಿತ್ರಮತ್ತು ತಿಳುವಳಿಕೆಯ ಮಾಹಿತಿಗಳು: ವಿಕಿಪೀಡಿಯಾ, ಯುಟ್ಯೂಬ್ ಓಡುತಿಟ್ಟಗಳು, relevancy22.blogspot.comboldimagination.hubpages.comcds.cern.ch)

http://www.whoinventedfirst.com/who-discovered-the-atom/

ಗಾಳಿಚೀಲದ ಏರ್ಪಾಟು (Air Bag System)

ಜಯತೀರ್ಥ ನಾಡಗೌಡ.

ಅಪಘಾತಗಳಿಂದ ಆಗುವ ಅನಾಹುತಗಳನ್ನು ಕಡಿಮೆ ಮಾಡಿ, ಗಾಡಿಯಲ್ಲಿರುವ ಪಯಣಿಗರನ್ನು ಕಾಪಾಡುವ ತಂತ್ರಜ್ಞಾನಗಳು ಹೆಚ್ಚೆಚ್ಚು ಬಳಕೆಯಾಗ ತೊಡಗಿವೆ. ಗಾಳಿಚೀಲ ಅಂದರೆ ಏರ್ ಬ್ಯಾಗ್ ತಂತ್ರಜ್ಞಾನ ಇವುಗಳಲ್ಲಿ ಮುಖ್ಯವಾದದ್ದು. ಸೀಟ್ ಬೆಲ್ಟ್ ಜೊತೆಗೆ ಏರ್ ಬ್ಯಾಗ್ ಇಂದಿನ ಗಾಡಿಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಪಘಾತದ ಪರಿಣಾಮಗಳನ್ನು ಕಡಿಮೆ ಮಾಡಲು ಬೈಕ್ ಓಡಿಸುವವರಿಗೆ ಹೇಗೆ ತಲೆಗಾಪು (ಹೆಲ್ಮೆಟ್) ಮುಖ್ಯವೋ, ಕಾರು ಓಡಿಸುವವರಿಗೆ ಸೀಟ್ ಬೆಲ್ಟ್ ಮತ್ತು ಏರ್ ಬ್ಯಾಗ್ ಮುಖ್ಯವಾಗುತ್ತವೆ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ವಿಶ್ವದ ಎರಡನೇಯ ಮಹಾಯುದ್ಧದ ಹೊತ್ತಿನಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಗಾಳಿಚೀಲ ಬಳಸಲಾಗಿತ್ತಂತೆ. ಕಾರುಗಳಲ್ಲಿ ಗಾಳಿಚೀಲ ಮೊದಲ ಬಾರಿಗೆ ಬಳಕೆಗೆ ಬಂದಿದ್ದು 1980ರ ಹೊತ್ತಿನಲ್ಲಿ. ಅಮೇರಿಕಾದಲ್ಲಿ ಎಲ್ಲ ಗಾಡಿಗಳಲ್ಲಿ ಗಾಳಿಚೀಲ ಇರುವಿಕೆಯನ್ನು 1998 ರಲ್ಲಿ ಕಡ್ಡಾಯಗೊಳಿಸಲಾಯಿತು. ಇಂದು ಮುಂದುವರೆದ ಎಲ್ಲ ದೇಶಗಳಲ್ಲಿ ಎಲ್ಲ ಗಾಡಿಗಳು ಗಾಳಿಚೀಲ ಹೊಂದಿರುವುದು ಕಂಡುಬರುತ್ತದೆ. ಭಾರತದಲ್ಲಿಯೂ ಇದೀಗ ಗಾಡಿಯಲ್ಲಿ ಪಯಣಿಸುವವರ ಸುರಕ್ಷತೆಯ ಅರಿವು ಎಲ್ಲೆಡೆ ಮೂಡುತ್ತಿದೆ. ಇಂದು ಬಿಡುಗಡೆಗೊಳ್ಳುತ್ತಿರುವ ಹೆಚ್ಚು ಕಡಿಮೆ ಎಲ್ಲ ಕಾರುಗಳಲ್ಲಿ ನಾವು ಗಾಳಿಚೀಲದ ಏರ್ಪಾಟನ್ನು(Air Bag System) ಕಾಣುತ್ತೇವೆ.

ಅಂಕಿ ಸಂಖ್ಯೆಗಳ ಪ್ರಕಾರ ಗಾಡಿಯೊಂದು ಇನ್ನೊಂದು ಗಾಡಿಗೆ ಎದುರಾಗಿ ಗುದ್ದಿಕೊಂಡಾಗ (Frontal Crash) ಆಗುವ ಅವಘಡವನ್ನು ಗಾಳಿಚೀಲದ ಏರ್ಪಾಟು ಬಳಸಿ ಶೇಕಡಾ 30ರಷ್ಟು ತಡೆಯಬಹುದಂತೆ. ಕಾರಿನಲ್ಲಿರುವ ಈ ವಿಶೇಷ ಏರ್ಪಾಟಿನ ಕುರಿತು ತಿಳಿದುಕೊಳ್ಳುವುದು ಕಾರು ಕೊಳ್ಳುಗರಿಗೆ ಅವಶ್ಯವಾಗಿದೆ. ಗಾಳಿಚೀಲದ ಏರ್ಪಾಟು ಹೇಗೆ ಕೆಲಸ ಮಾಡುತ್ತದೆ ಎಂದು ಈಗ ತಿಳಿಯುವ ಬನ್ನಿ.

ನ್ಯೂಟನ್ ಅವರ ಕದಲಿಕೆಯ ಕಟ್ಟಳೆಯಂತೆ (Law of Motion) ವಸ್ತುವೊಂದರ ಮೇಲೆ ಹೊರಗಿನ ಬಲ ಹಾಕದೇ ಇದ್ದರೆ ಅದು ತನ್ನ ಮೊದಲಿನ ಸ್ಥಿತಿಯಲ್ಲಿಯೇ ಮುಂದುವರೆಯುತ್ತದೆ. ಉದಾಹರಣೆಗೆ ನೆಲದ ಮೆಲೆ ಬಿದ್ದಿರುವ ಚೆಂಡನ್ನು ಬಲದಿಂದ ಒದ್ದಾಗಲೇ ಅದು ಮುಂದೆ ಸಾಗಿ ಕೆಲವು ಸೆಕೆಂಡುಗಳ ನಂತರ ಮೊದಲಿನ ಸ್ಥಿತಿಗೆ ಬರುತ್ತದೆ ಇಲ್ಲದೇ ಹೋದರೆ ಅದು ಸುಮ್ಮನೆ ನೆಲದ ಮೇಲೆ ಬಿದ್ದಿರುತ್ತದೆ ಅಂದರೆ ತನ್ನ ಮೂಲ ಸ್ಥಿತಿಯನ್ನು ಕಾಯ್ದುಕೊಂಡು ಹೋಗುತ್ತದೆ. ಹೊರಗಿನ ಬಲ ಚೆಂಡ ಮೇಲೆ ಬೀಳದ ಹೊರತು ಅದು ಕದಲದು. ಇದೇ ರೀತಿ ಬಂಡಿಯಲ್ಲಿ ನಾವು ಸಾಗುವಾಗ ಅದರ ವೇಗಕ್ಕೆ ತಕ್ಕಂತೆ ನಮ್ಮ ದೇಹವು ಹೊಂದಿಕೊಂಡಿರುತ್ತದೆ. ಬಂಡಿಯು ಎದುರಿನ ಬಂಡಿಗೆ ಗುದ್ದಿದಾಗ ನಮ್ಮ ದೇಹ ಇನ್ನೂ ಕಾರಿನ ವೇಗದಲ್ಲಿಯೇ ಸಾಗುವಂತಿರುತ್ತದೆ. ಕಾರಿನ ವೇಗ ತಡೆತದಿಂದ ಒಮ್ಮೆಲೆ ಸೊನ್ನೆಗಿಳಿದರೂ, ಪಯಣಿಗರು ಮುಂದಕ್ಕೆ ತಳ್ಳಲ್ಪಡುವುದನ್ನು ನೋಡಿರಬಹುದು. ಇದರಿಂದ ನಮ್ಮ ದೇಹದ ಮುಂಭಾಗ ಬಂಡಿಯ ತೋರುಮಣೆಗೆ (dashboard) ಬಲು ಜೋರಾಗಿ ಅಪ್ಪಳಿಸಿ ಹೆಚ್ಚಿನ ಪೆಟ್ಟು ತಿನ್ನುತ್ತದೆ. ತಲೆ, ಕಯ್, ಮುಖಕ್ಕೆ ದೊಡ್ಡ ಪೆಟ್ಟು ಬಿದ್ದು ತೊಂದರೆಯಾಗುತ್ತದೆ. ಕೆಲವೊಮ್ಮೆ ಸಾವು ಸಂಭವಿಸುತ್ತದೆ. ಮುಂದೆಡೆಯ ಗುದ್ದುವಿಕೆ ಇಲ್ಲವೇ ಅಕ್ಕ-ಪಕ್ಕದಿಂದ ಬಂಡಿಗಳೆರಡು ಗುದ್ದಿಕೊಂಡಾಗ ಇಂತಹ ಅನಾಹುತಗಳು ಹೆಚ್ಚು. ಇಂತ ಹೊತ್ತಿನಲ್ಲಿ ನಮ್ಮ ದೇಹದ ಮುಂಭಾಗ ದಿಡೀರ್‌ನೆ ಕಾರಿನ ತೋರುಮಣೆಗೆ(dashboard) ಅಪ್ಪಳಿಸುವುದನ್ನು ತಡೆಯಲಾಗದು. ಇದರ ಬಗ್ಗೆ ಸಾಕಷ್ಟು ಅರಕೆಗಾರರು, ಇಂಜನೀಯರ್ ಗಳು ಅಧ್ಯಯನ ಮಾಡಿ ಒಂದು ತೀರ್ಮಾನಕ್ಕೆ ಬಂದರು. ಅದೆಂದರೆ, ದಿಡೀರ್‌ನೆ ದೇಹವು ಗಾಡಿಯ ಒಳ ಮುಂಭಾಗಕ್ಕೆ ಅಪ್ಪಳಿಸುವುದನ್ನು ತಡೆಯಲಾಗದಾದರೂ, ಆ ಹೊಡೆತದ ಪರಿಣಾಮವನ್ನು ಕಡಿತಗೊಳಿಸುವ ಚಳಕವೊಂದನ್ನು ಕಂಡುಕೊಳ್ಳಬಹುದು. ಹೀಗೆ ಹುಟ್ಟಿಕೊಂಡ ಹೊಳಹು ಗಾಳಿಚೀಲದ ಏರ್ಪಾಟು ಹೊಮ್ಮಲು ಕಾರಣವಾಯಿತು.

ನಮ್ಮ ದೇಹದ ಮುಂಭಾಗ ಕಾರಿನ ತೋರುಮಣೆಗೆ ಅಪ್ಪಳಿಸುವ ಬದಲು ಮೆತ್ತನೆಯ ದಿಂಬಿನಂತಹ ವಸ್ತುವಿಗೆ ಡಿಕ್ಕಿ ಹೊಡೆದರೆ ಆಗುವ ತೊಂದರೆಯನ್ನು ಸಾಕಷ್ಟು ಕಡಿಮೆ ಮಾಡಬಹುದು. ಸಾವು ನೋವಿನ ಸಂಖ್ಯೆ ಇಳಿಮುಖವಾಗುವುದು. ಗಾಳಿಚೀಲವೆಂದರೆ ಗಾಳಿಯಿಂದ ತುಂಬಿರುವ ಬಲೂನು ಎನ್ನಬಹುದು. ಬಲುವೇಗದಿಂದ ನಮ್ಮ ತಲೆ ಅದೇ ಬಲದಿಂದ ಮೆತ್ತನೆಯ ಬಲೂನೊಂದಿಗೆ ಅಪ್ಪಳಿಸಿದರೆ ಪೆಟ್ಟು/ಗಾಯದ ಪ್ರಮಾಣ ತಗ್ಗುತ್ತದೆ.

ಗಾಳಿಚೀಲದ ಏರ್ಪಾಟು ಮುಖ್ಯವಾಗಿ ಮೂರು ಬಿಡಿಭಾಗಗಳನ್ನು ಹೊಂದಿರುತ್ತದೆ. ಮೊದನೇಯದು ನೈಟ್ರೋಜನ್ ಗಾಳಿಯಿಂದ ಉಬ್ಬಿಕೊಳ್ಳುವ ಚೀಲ (Air bag), ಎರಡನೇಯದಾಗಿ ಗುದ್ದುವಿಕೆಯ ಅರಿವಿಕ (Crash Sensor) ಮತ್ತು ಕೊನೆಯದು ಗಾಳಿ ಉಬ್ಬಿಸುಕ (Inflator). ಗಾಡಿಯೊಂದು ಇನ್ನೊಂದು ಗಾಡಿಗೆ ಇಲ್ಲವೇ ಗೋಡೆಗೆ ಗುದ್ದಿತು ಎಂದುಕೊಳ್ಳೋಣ. ಮೊದಲು ಅರಿವಿಕ (sensor), ಗುದ್ದುವಿಕೆಯ ಬಲದ ಮಾಹಿತಿಯನ್ನು ಅರಿತು ಕಾರಿನಲ್ಲಿರುವ ಕಂಟ್ರೋಲರ್ ಗೆ ಸಾಗಿಸುತ್ತದೆ. ಆಗ ಕಂಟ್ರೋಲರ್ ಕೂಡಲೇ ಉಬ್ಬಿಸುಕ ಚೀಲವನ್ನು ಉಬ್ಬಿಸುವಂತೆ ಸೂಚನೆ ನೀಡುತ್ತದೆ. ಆಗ ಗಾಳಿಚೀಲ ಸಿಡಿದು ಉಬ್ಬಿಕೊಂಡು ಅಪ್ಪಳಿಸುತ್ತಿರುವ ತಲೆ ಮತ್ತು ದೇಹದ ಇತರ ಭಾಗಗಳಿಗೆ ಆಸರೆಯಾಗಿ, ಪೆಟ್ಟು ಬೀಳದಂತೆ ತಡೆಯೊಡ್ಡುತ್ತದೆ. ಸಾಮಾನ್ಯವಾಗಿ ಗಾಳಿಚೀಲ ಊದಿಕೊಳ್ಳಲು ಅದರಲ್ಲಿ ನೈಟ್ರೋಜನ್ (Nitrogen) ಗಾಳಿ ಬಿಡುಗಡೆಗೊಂಡಿರುತ್ತದೆ. ಉಬ್ಬಿಸುಕದ ಒಳಗೆ ಸೋಡಿಯಮ್ ಅಝೈಡ್ನೊಂದಿಗೆ (Sodium Azide) ಪೋಟ್ಯಾಶಿಯಂ ನಯ್ಟ್ರೇಟ್ (Potassium Nitrate) ಬೆರೆತು ನೈಟ್ರೋಜನ್ ಗಾಳಿ ಹೊರಹಾಕಿ ಚೀಲ ಉಬ್ಬುವಂತೆ ಮಾಡುತ್ತವೆ. ಇದೆಲ್ಲವೂ ನಾವು ಕಣ್ಣು ಮಿಟುಕಿಸುವದಕ್ಕಿಂತ ವೇಗದಲ್ಲಿ ಪೂರ್ಣಗೊಂಡಿರುತ್ತದೆ. ಅಂದರೆ ಸೆಕೆಂಡೊಂದರ 25ನೇಯ ಒಂದು ಭಾಗದಲ್ಲಿ (1/25th of Second) ಇಷ್ಟೆಲ್ಲ ಕೆಲಸವಾಗಿರುತ್ತದೆ. ಕೆಲವು ಸೆಕೆಂಡುಗಳ ನಂತರ ಈ ನೈಟ್ರೋಜನ್ ಗಾಳಿ ಸಣ್ಣಗೆ ಚೀಲದಲ್ಲಿ ಒದಗಿಸಲಾಗಿರುವ ತೂತುಗಳ ಮೂಲಕ ಹೊರ ನುಸುಳುತ್ತದೆ ಆಗ ಗುದ್ದುವಿಕೆಗೊಳಗಾದವರನ್ನು ಹೊರತೆಗೆದು ಮುಂದಿನ ಆರಯ್ಕೆಗೆ ಕರೆದೊಯ್ಯಬಹುದಾಗಿರುತ್ತದೆ.

ಮೊದ ಮೊದಲು ಈ ಚಳಕ ಕಂಡುಹಿಡಿದಾಗ ಕೆಲವು ಪ್ರಶ್ನೆಗಳು ಎದ್ದಿದ್ದವು. ಅವುಗಳೆಂದರೆ,

  1. ಕಾರಿನಲ್ಲಿ ನೈಟ್ರೋಜನ್ ಗಾಳಿಯನ್ನು ಕೂಡಿಡುವುದು ಹೇಗೆ?
  2. ಕಾರಿನ ಜೀವನದುದ್ದಕ್ಕೂ ಹೆಚ್ಚಿನೊತ್ತಡದಿಂದ ನೈಟ್ರೋಜನ್ ಗಾಳಿಯನ್ನು ಕೂಡಿಡಬೇಕೆ?
  3. ಕಾರನ್ನು ನಾವು ಮಳೆ, ಚಳಿ ಹಾಗೂ ಬೇಸಿಗೆಯಲ್ಲಿ ಬಳಸುತ್ತಿರುತ್ತೇವೆ. ಹೀಗೆ ಬದಲಾಗುವ ವಾತಾವರಣ, ಬಿಸುಪಿಗೆ (Temperature) ತಕ್ಕಂತೆ ಗಾಳಿಚೀಲ ಚಕ್ಕನೆ ಉಬ್ಬಿಕೊಂಡು ತನ್ನ ಕೆಲಸವನ್ನು ಮಾಡಬಲ್ಲುದೇ?

ದಿನಗಳೆದಂತೆ ಅರಕೆಗಾರರು ಹೆಚ್ಚಿನ ಅರಕೆಗಳನ್ನು ನಡೆಸಿ ಇದಕ್ಕೆ ಉತ್ತರ ಕಂಡುಕೊಂಡರು. ನೈಟ್ರೋಜನ್ ಗಾಳಿ ಕೂಡಿಡದೇ ಅದು ಕೂಡಲೇ ತಯಾರಾಗಿ ಗಾಳಿಚೀಲ ಉಬ್ಬಿ ಸಿಡಿಯುವಂತೆ ಮಾಡಲಾಯಿತು.

ಗಾಳಿಚೀಲದ ಏರ್ಪಾಟು ಬಳಸುವಾಗ ಕೆಲ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಗಾಡಿಯಲ್ಲಿ ಸಾಗುವಾಗ ಸೀಟ್ ಬೆಲ್ಟ್ ಬಳಸುವುದು ಯಾವಾಗಲೂ ನಮ್ಮನ್ನು ಕಾಪಾಡುತ್ತದೆ. ಗಾಡಿಯಲ್ಲಿ ಗಾಳಿಚೀಲದ ಏರ್ಪಾಟು ಅಳವಡಿಸಲಾಗಿದೆಯೆಂದು ಸೀಟ್ ಬೆಲ್ಟ್ (Seat belt) ಕಡೆಗಣಿಸದಿರಿ. ಸೀಟ್ ಬೆಲ್ಟ್ ಹಾಕಿಕೊಂಡಾಗಲಷ್ಟೇ ಗಾಳಿಚೀಲ ನಮ್ಮನ್ನು ಕಾಪಾಡುವ ಕೆಲಸ ಮಾಡಬಲ್ಲದು ಎಂಬುದನ್ನು ನೆನಪಿನಲ್ಲಿಡಿ. ಇದು ಏಕೆಂದರೆ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಗಾಳಿಚೀಲ ಉಬ್ಬುವಂತೆ ಮಾಡಿದರೆ ಕಾರಿನಲ್ಲಿ ಪಯಣಿಸುವವರಿಗೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚುತ್ತದೆ.

ಗಾಳಿಚೀಲದ ಏರ್ಪಾಟು ಕೆಲಸ ಮಾಡಲು ಗಾಡಿಯು ಇಂತಿಷ್ಟು ವೇಗ ದಾಟಿರಬೇಕು. ಕೆಲವು ಗಾಡಿ ತಯಾರಕರ ವೇಗದ ಮಿತಿ 10 ರಿಂದ 15 ಮೈಲಿ ಪ್ರತಿ ಗಂಟೆ ಎಂದು ತೀರ್ಮಾನಿಸಿರುತ್ತಾರೆ. ಅಂದರೆ ಗಾಡಿಯು ಸುಮಾರು 10ಮೈಲಿ ಇಲ್ಲವೇ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದಾಗ ಗುದ್ದುವಿಕೆಯಾದರೆ ಮಾತ್ರವೇ ಗಾಳಿ ಚೀಲದ ಏರ್ಪಾಟು ಕೆಲಸ ಮಾಡುತ್ತದೆ. ಕಡಿಮೆ ವೇಗದಲ್ಲಿ ಗುದ್ದುವಿಕೆಯಿಂದ ಹೆಚ್ಚು ಪೆಟ್ಟು, ಅವಘಡಗಳು ಆಗುವುದಿಲ್ಲವೆಂದು ಒರೆಹಚ್ಚಿ ಈ ವೇಗದ ಮಿತಿಯನ್ನು ನಿರ್ಧರಿಸಲಾಗಿರುತ್ತದೆ.

ಚಿಕ್ಕಮಕ್ಕಳು, ವಯಸ್ಸಾದವರು ಇಲ್ಲವೇ ರೋಗದಿಂದ ಬಳಲುತ್ತಿರುವವರು ಗಾಳಿಚೀಲ ಸಿಡಿಯುವ ವೇಗದಿಂದ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತದೆ. ಪುಟಾಣಿ ಮಕ್ಕಳು ಕಾರು ಓಡಿಸುವವರ ಪಕ್ಕದಲ್ಲಿ ಕೂಡದೇ ಹಿಂಭಾಗದಲ್ಲಿ ಕುಳಿತರೆ ಒಳಿತು. ಮಕ್ಕಳು ಕಾರಿನ ಹಿಂದುಗಡೆಯ ಸೀಟಿನಲ್ಲಿ ಕೂಡಿಸದೇ ಅವರಿಗೆಂದೇ ಬೇರೆಯದೇ ಆದ ಚಿಕ್ಕ ಸೀಟನ್ನು ಕಾರಿನ ಸೀಟಿನ ಮೇಲಿಟ್ಟು ಕೂಡಿಸಬೇಕು.

ಸಾಮಾನ್ಯವಾಗಿ ಗಾಳಿಚೀಲದ ಚೀಲವನ್ನು ನೈಲಾನ್ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಡ್ರೈವರ್ ನ ಗಾಳಿಚೀಲವನ್ನು ಹೆಚ್ಚಾಗಿ ಸ್ಟಿಯರಿಂಗ್ ಇಲ್ಲವೇ ತೋರುಮಣೆಯೊಳಗೆ(Dashboard) ಜೋಡಿಸಿಟ್ಟಿರುತ್ತಾರೆ. ಅದಕ್ಕಾಗಿ ಡ್ರೈವರ್ ಸ್ಟಿಯರಿಂಗ್ ನ್ನು ತಮ್ಮ ಸೀಟಿಗೆ ತಕ್ಕಂತೆ ಜೋಡಿಸಿಕೊಳ್ಳಬೇಕು. ಗಾಳಿಚೀಲ ಹೂತಿಟ್ಟಿರುವ ಸ್ಟಿಯರಿಂಗ್ ಇಲ್ಲವೇ ತೋರುಮಣೆಯಿಂದ ಡ್ರೈವರ್ ನ ಎದೆಯೆಲುಬಿನ ನಡುವೆ ಸುಮಾರು ಹತ್ತು ಇಂಚುಗಳ ದೂರವನ್ನು ಕಾಯ್ದುಕೊಂಡರೆ ಒಳ್ಳೆಯದು. ಗಾಳಿಚೀಲದ ಹತ್ತಿರವಿದ್ದರೆ ಅವಘಡವಾದಾಗ ಗಾಳಿಚೀಲ ಸಿಡಿಯುವ ಬಲದಿಂದ ಡ್ರೈವರ್ ಗೆ ನೋವುಂಟಾಗಬಹುದು. ಅದಕ್ಕೆ ತಕ್ಕ ದೂರವನ್ನು ಕಾಯ್ದುಕೊಳ್ಳಲೇಬೇಕು. ಸೀಟ್ ಬೆಲ್ಟ್ ಕಟ್ಟಿಕೊಂಡಿದ್ದರಷ್ಟೇ ಗಾಳಿಚೀಲ ತೆರೆಯಬೇಕು ಎಂಬ ಅಂಶ ಅಳವಡಿಸಿದ್ದು ಈ ಕಾರಣಕ್ಕಾಗಿಯೇ.

ಹಲವು ಗಾಡಿಗಳಲ್ಲಿ ಅಕ್ಕ ಪಕ್ಕದ ಗುದ್ದುವಿಕೆಯಿಂದ ತೊಂದರೆಯಾಗುವುದನ್ನು ತಡೆಯಲು ಇದೀಗ ಗಾಡಿಯ ಬಾಗಿಲಿಗೂ ಗಾಳಿಚೀಲವನ್ನು (Door/Side air bags) ಅಳವಡಿಸಿರುತ್ತಾರೆ. ವಯಸ್ಸಾದವರು, ಮಕ್ಕಳು ಮತ್ತು ಕಾಯಿಲೆಯಂದ ಬಳಲುತ್ತಿರುವವರಿಗೆ ಇವುಗಳು ಸಿಡಿದಾಗ ತೊಂದರೆಯೂ ಆಗಬಹುದು. ಇಂತವರೊಂದಿಗೆ ಸಾಗುವಾಗ ಅಗತ್ಯ ಎಚ್ಚರಿಕೆ ಕಯ್ಗೊಂಡು ಬಾಗಿಲಿನ ಗಾಳಿಚೀಲಗಳನ್ನು ಕೆಲಸ ಮಾಡದಂತೆ ಅವುಗಳನ್ನು ನಿಲ್ಲಿಸುವ ಏರ್ಪಾಟನ್ನು ಬಳಸಿಕೊಳ್ಳಬಹುದು.

ಗಾಳಿಚೀಲದ ಬಳಕೆಯ ಬಗ್ಗೆ ಮೇಲೆ ತಿಳಿಸಿದ ಹಲವಾರು ಎಚ್ಚರಿಕೆಯ ಬಗ್ಗೆ ತಕ್ಕುದಾದ ಕಟ್ಟಳೆಗಳನ್ನು ಮುಂದುವರೆದ ನಾಡುಗಳು ಅಳವಡಿಸಿಕೊಂಡಿವೆ. ನಮ್ಮ ಭಾರತದಲ್ಲಿ ಕಳೆದ ಕೆಲವು ವರುಶಗಳಲ್ಲಿ ಗಾಳಿಚೀಲ ಅಳವಡಿಸಿದ ಕಾರುಗಳು ತಯಾರಾದರೂ ಅದಕ್ಕೆ ತಕ್ಕ ಕಟ್ಟಳೆಗಳನ್ನು ಸರಕಾರಗಳು ಇನ್ನೂ ಜಾರಿಗೊಳಿಸಿಲ್ಲ. ಆದಷ್ಟು ಬೇಗ ಇವುಗಳು ಜಾರಿಗೆ ಬಂದರೆ ಎಲ್ಲರಿಗೂ ಒಳ್ಳೆಯದು.

( ಮಾಹಿತಿ ಸೆಲೆ : howstuffworks.com )

ಮನುಷ್ಯರು ಸಸ್ಯಗಳಂತೆ ಆಗಬಹುದೇ?

(ಇಗೋ ವಿಜ್ಞಾನ 2020 ಪೈಪೋಟಿಯಲ್ಲಿ ಮೆಚ್ಚುಗೆ ಪಡೆದ ಬರಹ)

ಡಾ. ಎ. ಮಹಾದೇವ.
(ವಿಜ್ಞಾನಿ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ KSSRDI,
ತಲಘಟ್ಟಪುರ, ಬೆಂಗಳೂರು)

ಸಸ್ಯಗಳಿಗೂ ಹಾಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇನು? ಎನ್ನುವ ಪ್ರಶ್ನೆಗೆ ಥಟ್ ಅಂತ ಬರುವ ಉತ್ತರ, ಸಸ್ಯಗಳಲ್ಲಿ ಪತ್ರಹರಿತ್ತಿನ (chlorophyll) ಸಹಾಯದಿಂದ ದ್ಯುತಿಸಂಶ್ಲೇಷಣೆ ಕ್ರಿಯೆ (photosynthesis) ನಡೆಯುತ್ತದೆ. ಇದರಿಂದ ಸಸ್ಯಗಳು ಸೂರ್ಯನ ಬೆಳಕಿನ ಸಹಾಯದಿಂದ ಗಾಳಿ ಮತ್ತು ನೀರನ್ನು ಬಳಸಿ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕ್ಕೊಳ್ಳುತ್ತವೆ. ಪ್ರಾಣಿಗಳ್ಳಲ್ಲಿ ಪತ್ರಹರಿತ್ತು ಇಲ್ಲದೆ ಇರುವದರಿಂದ ಅವುಗಳು ದ್ವಿತಿಸಂಶ್ಲೇಷಣೆ ಕ್ರಿಯೆ ನಡಿಸಿ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕ್ಕೊಳ್ಳಲಾರವು ಎಂಬುದಲ್ಲವೇ?. ಹೌದು, ಇದು ಅಕ್ಷರ ಸಹ ಸತ್ಯ.

ಸಮುದ್ರದಲ್ಲಿ ಇರುವ ಸೂಕ್ಶ್ಮಾಣುವಿನಿಂದ ಹಿಡಿದು ಅಮೆಜಾನ್ ನಲ್ಲಿನ ದೈತ್ಯಾಕಾರದ ಮರಗಳವರೆಗೂ ಪತ್ರಹರಿತ್ತು ಇರುವುದರಿಂದಲೇ ಅವುಗಳು ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಹಾಗೂ ನೀರಿನ ಸಹಾಯದಿಂದ ತಮಗೆ ಬೇಕಾದ ಆಹಾರವನ್ನು ತಾವೇ ತಯಾರಿಸಿಕ್ಕೊಳ್ಳುತ್ತವೆ. ಇದೇ ಜೀವ ಸಂಕುಲ ಸೃಷ್ಟಿಯ ಮೂಲ ಹಾಗೂ ವ್ಯವಿಧ್ಯತೆಯ ಉಸಿರು.

ಮನುಷ್ಯರು ಸೇರಿದಂತೆ ಯಾವ ಜೀವಸಂಕುಲಗಳಲ್ಲಿ ಪತ್ರಹರಿತ್ತು ಇರುವುದಿಲ್ಲವೋ ಅವುಗಳು ತಮ್ಮ ಆಹಾರಕ್ಕಾಗಿ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಹಾಗಿದ್ದರೆ, ಜೀವಿಗಳ ವಿಕಸನದ ಹಾದಿಯಲ್ಲಿ ಸಸ್ಯಗಳ್ಳಲ್ಲಿ ಈ ಪತ್ರಹರಿತ್ತು ಹೇಗೆ ಬಂತು? ಇದು ಪ್ರಾಣಿಗಳಲ್ಲಿ ಯಾಕೆ ಇಲ್ಲ? ಎನ್ನುವ ವಾದಕ್ಕೆ, ಜೀವ ವಿಜ್ಞಾನಿಗಳು ಹೇಳುವ ಪ್ರಕಾರ ಸುಮಾರೂ 1000 ಮಿಲಿಯನ್ ವರ್ಷಗಳ ಹಿಂದೆ ಸೈನೋಬ್ಯಾಕ್ಟೀರಿಯಾ (Cyanobacteria) ಮೂಲತಃ ಪತ್ರಹರಿತ್ತು ಹೊಂದಿದ್ದ ಏಕಕೋಶಜೀವಿಗಳು.

ಇವುಗಳು ಮತ್ತೊಂದು ಏಕಕೋಶ ಜೀವಿಯೆಯೊಳಗೆ ಸೇರಿಕೊಂಡು ಪರಸ್ಪರ ಸಹಾಯದೊಂದಿಗೆ ಬದುಕಲು ಪ್ರಾರಂಭಿಸಿ ಕೊನೆಗೆ ಒಂದನ್ನು ಬಿಟ್ಟು ಇನ್ನೊಂದು ಬದುಕಲು ಅಸಾಧ್ಯವಾದ ಹಂತಕ್ಕೆ ತಲುಪಿದವು. ತದನಂತರ ನಡೆದ ವ್ಯವಿಧ್ಯತೆಯ ವಿಕಸನ ಹಾಗೂ ಅಭಿವೃದ್ಧಿಯ ಫಲವಾಗಿ ಇಂದು ಇಷ್ಟೊಂದು ಎಣಿಕೆಗೆ ಸಿಗದಷ್ಟು ವಿವಿಧ ಪ್ರಭೇಧಗಳನ್ನು ಕಾಣುತ್ತಿದ್ದೇವೆ. ಹಾಗಿದ್ದರೆ, ಈ ಸೈನೋಬ್ಯಾಕ್ಟೀರಿಯಾಗಳು ಪ್ರಾಣಿಗಳಲ್ಲಿ ವಿಕಸನದ ಹಾದಿಯಲ್ಲಿ ಯಾಕೆ ಸೇರಿಕೊಂಡಿಲ್ಲಾ? ಎನ್ನುವ ಮತ್ತ್ತೊಂದು ಪ್ರಶ್ನೆ ಎದುರಾಗಬಹುದು.

ಅದಕ್ಕೆ ಇತ್ತೀಚಿಗೆ ಅಮೇರಿಕಾದ ಮೈನೆ ವಿಶ್ವವಿದ್ಯಾಲಯದ ಮೇರಿ ರುಮ್ಫೋ (Mery Rumpho) ಅವರು ಅಮೇರಿಕಾದ ಪೂರ್ವ ಕಡಲಿನಲ್ಲಿ ವಾಸಿಸುವ ಎಲಿಸಿಯ ಕ್ಲೋರೊಟಿಕ (Elysia chlorotica) ಎನ್ನುವ ಎಳೆಯಾಕಾರದ ಮೊಲುಸ್ಕ್ಯಾ (Molusca) ಜಾತಿಗೆ ಸೇರಿದ ಸಣ್ಣ ಸಮುದ್ರ ಹುಳುವಿನಲ್ಲಿ (sea slug) (ಚಿತ್ರ – 1 & 2) ಒಂದು ವಿಚಿತ್ರವಾದ ಸ್ವಭಾವ ಗಮನಿಸಿದರು.

ಅದೇನೆಂದರೆ ಈ ಎಲಿಸಿಯ ಕ್ಲೋರೊಟಿಕಗೆ ಯಾವುದೇ ರೀತಿಯ ಆಹಾರ ಕೊಡದೆ ಇದ್ದರೂ ಸಹ ಅದು ಸುಮಾರು 9 ರಿಂದ 10 ತಿಂಗಳುಗಳ ಕಾಲ ಆರಾಮವಾಗಿ ಬದುಕುತ್ತಿತ್ತು. ಮೇರಿಯವರು ಇದನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿದ ನಂತರ ಅವರಿಗೆ ವಿಸ್ಮಯವೊಂದು ಕಾದಿತ್ತು, ಎಲಿಸಿಯ ಕ್ಲೋರೊಟಿಕನ ಮುಖ್ಯ ಆಹಾರ ಸಮುದ್ರದ ಪಾಚಿ. ಈ ಪಾಚಿಯಲ್ಲಿ ಇರುವ ಪತ್ರಹರಿತ್ತನ್ನು ಎಲಿಸಿಯ ಕ್ಲೋರೊಟಿಕವೂ ಹೀರಿಕೊಂಡು ತನ್ನ ಜಠರದ ಜೀವಕೋಶಗಳಲ್ಲಿ ಅದಕ್ಕೆ ಯಾವುದೇ ಹಾನಿಯಾಗದಂತೆ ಶೇಖರಿಸಿ ಇಟ್ಟುಕೊಳ್ಳುತ್ತದೆ.

1(ಚಿತ್ರ – 1)

2(ಚಿತ್ರ – 2)

ಎಲಿಸಿಯ ಕ್ಲೋರೊಟಿಕದ ಜೀವಕೋಶ ಸೇರಿದ ಪಾಚಿಯ ಪತ್ರಹರಿತ್ತು ಯಾವುದೇ ಅಡೆತಡೆ ಇಲ್ಲದೆ ತನ್ನ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಮುಂದುವರಿಸುತ್ತದೆ. ಇದರಿಂದ ಉತ್ಪತಿಯಾಗುವ ಆಹಾರವನ್ನು ಎಲಿಸಿಯ ಕ್ಲೋರೊಟಿಕವು ಸಮರ್ಥವಾಗಿ ತನ್ನ ಉಳಿವಿಗಾಗಿ ಉಪಯೋಗಿಸಿಕೊಳ್ಳುತ್ತದೆ. ಅಂದರೆ ಪ್ರಾಣಿಯ ಉದರದಲ್ಲಿ ಪತ್ರಹರಿತ್ತು ಇರುವುದರಿಂದ ಪ್ರಾಣಿಯೂ ಸಹ ಸಸ್ಯಗಳಂತೆ ಜೀವಿಸುತ್ತಿದೆ. ಜೀವ ವಿಕಸನದ ಹಾದಿಯಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ಬೇರ್ಪಡುವ ಸಂದರ್ಭದಲ್ಲಿ ಈ ಮೊಲಾಸ್ಕಗಳು ಕೊಂಡಿಯೆಂದೇ ಹೇಳಬಹುದು. ಈ ರೀತಿಯ ಇನ್ನೂ ಅನೇಕ ಪ್ರಾಣಿಗಳು ಸಮುದ್ರದಲ್ಲಿ ಇರಬಹುದು ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಎಲಿಸಿಯ ಕ್ಲೋರೊಟಿಕದ ಕಥೆ ಇದಾದರೇ, ಕೀಟ ಪ್ರಭೇಧದ ಹೇನು (ಏಫಿಡ್) (Pea aphid, Acyrthosiphon pisum) (ಚಿತ್ರ – 3) ಕೀಟದ್ದು ಬೇರೆಯೇ ವಿಚಿತ್ರವಾದ ಕಥೆ.‌ ಪ್ರೌಢಾವಸ್ಥೆಯ ಕೀಟವು ಕೇವಲ 4 ಮಿಮಿ ಇದ್ದು ಸಸ್ಯಗಳಿಂದ ರಸವನ್ನು ಹೀರುತ್ತ ತನ್ನ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತದೆ. ಇದಲ್ಲದೆ ಕೀಟ ಜಾತಿಗಳಲ್ಲಿಯೇ ಈ ಏಫಿಡ್‌ಗಳದ್ದು ವಿಶಿಷ್ಟವಾದ ನಡವಳಿಕೆ. ಅದೇನೆಂದರೆ, ಸೂರ್ಯನ ಬೆಳಕಿನ ಶಕ್ತಿಯಿಂದ ತನ್ನ ಚಯಾಪಚಯ (metabolism) ಕ್ರಿಯೆಗೆ ಬೇಕಾಗುವ ಜೈವಿಕ ಶಕ್ತಿಯನ್ನು (ATP) ಉತ್ಪತ್ತಿ ಮಾಡಿಕ್ಕೊಳ್ಳುತ್ತದೆ. ಹೇನುಗಳಲ್ಲಿನ ವಿವಿಧ ಬಗೆಯ ಬಣ್ಣಗಳ ಮೂಲ ಹುಡುಕಲು ಹೊರಟ ಆರಿಝೊನಾ ವಿಶ್ವವಿದ್ಯಾಲಯದ ಮೋರಾನ್‌ ಮತ್ತು ಜೆರ್ವೀಕ್‌ ವಿಜ್ಞಾನಿಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಕೆರಾಟಿನಾಯ್ಡ್ಸ್‌ಗಳು (caroteinoids) ಪತ್ತೆಯಾದವು.

3(ಚಿತ್ರ – 3)

ದ್ಯುತ್ತಿಸಂಷ್ಲೇಷಣೆಗೆ ಕಾರಣವಾದ ವಿವಿಧ ಬಗೆಯ ಪತ್ರಹರಿತ್ತಿನಲ್ಲಿ (chlorophyll) ಕೆರಾಟಿನಾಯ್ಡ್ಸ್‌ ಸಹ ಒಂದು ಬಗೆ. ಹಲವಾರು ಜೀವಿಗಳಲ್ಲಿನ ದ್ಯುತ್ತಿಸಂಷ್ಲೇಷಣೆ ಕ್ರಿಯೆಗೆ ಈ ಕೆರಾಟಿನಾಯ್ಡ್ಸ್‌ಗಳೇ ಮೂಲ. ಅದಲ್ಲದೆ, ಕೆರಾಟಿನಾಯ್ಡ್ಸ್‌ಗಳು ಪ್ರಾಣಿಗಳಲ್ಲಿನ ರೋಗ ನಿರೋಧಕ (immunity) ಶಕ್ತಿಯ ನಿರ್ವಹಣೆ, ಮೂಳೆಗಳ ಬೆಳವಣಿಗೆಗೆ ಮತ್ತು ವಿಟಿಮಿನ್‌ಗಳ ಉತ್ಪಾದನೆಗೆ ಮಹತ್ತರವಾದ ಕೊಡುಗೆ ನೀಡುತ್ತದೆ. ಆದರೇ, ಪ್ರಾಣಿಗಳು ತಮಗೆ ಅವಶ್ಯಕವಿರುವ ಕೆರಾಟಿನಾಯ್ಡ್ಸ್‌ಗಳನ್ನು ತಾವು ತೆಗೆದುಕೊಳ್ಳುವ ಆಹಾರದಿಂದ ಪಡೆಯುತ್ತವೆ. ಉದಾಹರಣೆಗೆ ಕ್ಯಾರೆಟ್‌ನಲ್ಲಿ ಬೀಟಾ-ಕೆರಾಟಿನಾಯ್ಡ್ಸ್‌ಗಳು ಯಥೇಚ್ಚವಾಗಿ ಇರುತ್ತದೆ. ಆದರೇ, ಹೇನು ಕೀಟ ಮಾತ್ರ ಈ ಕೆರಾಟಿನಾಯ್ಡ್ಸ್‌ಗಳನ್ನು ತಾನೇ ಉತ್ಪತ್ತಿ ಮಾಡಿಕೊಳ್ಳುತ್ತದೆ. ಅದಕ್ಕೆ ಬೇಕಾಗುವಂತಹ ಜೀನ್ಸ್ ಗಳನ್ನು ಜೀವ ವಿಕಸನದ ಕಾಲಘಟ್ಟದಲ್ಲಿ ಶೀಲಿಂದ್ರಗಳಿಂದ ಪಡೆದು ಅವುಗಳನ್ನು ಶಾಶ್ವತವಾಗಿ ತಮ್ಮ ಜೀನೋಮ್ ಗಳಲ್ಲಿ ಸೇರಿಸಿಕೊಂಡು ಕೆರಾಟಿನಾಯ್ಡ್ಸ್‌ಗಳನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ ಎಂದು ಮೋರಾನ್‌ ಮತ್ತು ಜೆರ್ವೀಕ್‌ ವಿಜ್ಞಾನಿಗಳ ಅಭಿಪ್ರಾಯ.

ಫ್ರಾನ್ಸಿನ ಸೋಫಿಯಾ ಅಗ್ರೊಬಯೋಟಿಕ್‌ ಇನ್ಸ್ಟಿಟ್ಯೂಟ್ ನ ಅಲೈನ್‌ ರಾಬಿಚೋನ್‌ ( Alain Robichon) ಅವರ ತಂಡ ಏಫಿಡ್ಸ್‌ಗಳಲ್ಲಿ ಇರುವ ಈ ಕೆರಾಟಿನಾಯ್ಡ್ಸ್‌ಗಳು ಸೂರ್ಯನ ಬೆಳಕನ್ನು ಉಪಯೊಗಿಸಿ ನೇರವಾಗಿ ಚಯಾಪಚಯ ಕ್ರಿಯೆಗೆ ಬೇಕಾದ ಜೈವಿಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ ಎನ್ನುವುದನ್ನು ಕಂಡು ಹಿಡಿದಿದ್ದಾರೆ. ಹೇಗೆ ಸಸ್ಯಗಳು ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿ ಮಾಡಿಕೊಳ್ಳಲು ಅವಶ್ಯಕವಾದ ಜೈವಿಕ ರಚನೆಯನ್ನು ಹೊಂದಿರುವವೋ ಅದೇ ರೀತಿ ಪ್ರಾಣಿ ಸಂಕುಲಕ್ಕೆ ಸೇರಿದ ಹೇನು ಕೀಟವು ಸಹ ಪ್ರಾಥಮಿಕ ಹಂತದ ಜೈವಿಕ ರಚನೆಯನ್ನು ಹೊಂದಿದೆ. ಅಂದರೇ, ಪ್ರಾಣಿಗಳು ಸಹ ದ್ಯುತಿಸಂಶ್ಲೇಷಣೆಗೆ ಬೇಕಾದ ಪತ್ರಹರಿತ್ತು ಹಾಗೂ ಅದಕ್ಕೆ ಸಂಬಂಧಿಸಿದ ಜೈವಿಕ ರಚನೆಯನ್ನು ಹೊಂದಿದ್ದರೆ ಆಹಾರಕ್ಕಾಗಿ ಸಸ್ಯಗಳನ್ನು ಅವಲಂಬಿಸದೇ, ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿ ಮಾಡಿಕೊಳ್ಳಬಹುದು.

4(ಚಿತ್ರ – 4)

ಇದೇ ರೀತಿಯ ವಿಸ್ಮಯಕಾರಿಯಾದ ಚುಕ್ಕೆಗಳುಳ್ಳ ಸಾಲಾಮಂಡರ್‌ನ (ಚಿತ್ರ – 4) ಮೊಟ್ಟೆಗಳಲ್ಲಿನ (ಚಿತ್ರ – 5) ಜೀವಕೋಶಭೀತ್ತಿಗಳಲ್ಲಿ ಪತ್ರಹರಿತ್ತನ್ನು ಹೊಂದಿರುವ ಆಲ್ಗೆಗಳು ಕಂಡುಬಂದಿರುತ್ತದೆ. ಈ ಆಲ್ಗೆಗಳು ಮೊಟ್ಟೆಯ ಜೀವಕೋಶಗಳಿಗೆ ಗ್ಲುಕೋಸ್‌ ಅನ್ನು ಒದಗಿಸಬಲ್ಲವೇ ಎನ್ನುವ ಸಂಶೋಧನೆಗಳು ಪ್ರಗತಿಯ ಹಂತದಲ್ಲಿವೆ. ಶರವೇಗದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಕೃತಿ ತನ್ನ ಮಡಿಲಿನಲ್ಲಿ ಗುಪ್ತವಾಗಿ ಹುದುಗಿಸಿಟ್ಟಿರುವ ಇನ್ನೂ ಸಹಸ್ರಾರು ಉದಾಹರಣೆಗಳು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

5(ಚಿತ್ರ – 5)

ಹೀಗೆಯೇ, ಸಂಶೋಧನೆಗಳು ಪ್ರಾಣಿಗಳಲ್ಲಿ ಪತ್ರಹರಿತ್ತು ಇರುವುದನ್ನು ಧೃಢಪಡಿಸುತ್ತಾ ಹೋಗುತ್ತಿರುವ ಸಂದರ್ಭದಲ್ಲಿ, ಇದಕ್ಕೆ ಸಮನಾಂತರವಾಗಿ ಈಗಾಗಲೆ ಪ್ರಾಣಿಗಳ ಜೀವಕೋಶಗಳಲ್ಲಿ ಕೃತಕವಾಗಿ ಪತ್ರಹರಿತ್ತನ್ನು ಸೇರಿಸಬಹುದೇ? ಹಾಗೇ ಸೇರಿಸಿದ ಪತ್ರಹರಿತ್ತಿನ ಸಹಾಯದಿಂದ ಜೀವಕೋಶಗಳು ದ್ಯೂತ್ತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರದ ಅವಶ್ಯಕತೆಯಲ್ಲಿ ಸ್ವಾವಲಂಬಿಗಳಾಗ ಬಲ್ಲವೇ? ಎನ್ನುವ ಚೀಂತನೆಗಳು ತಲೆ ಎತ್ತಿವೆ (ಚಿತ್ರ – 6). ಇದಕ್ಕೆ ಪ್ರಾಣಿಗಳನ್ನು ಹಸಿರುಪ್ರಾಣಿ (Planimal)ಗಳನ್ನಾಗಿಸಿ, ಅವುಗಳನ್ನು ಕೃತಕ ಉಸಿರಾಟಗಳಲ್ಲಿ ತೊಡಗಿಸಿ ಮುಂದಿನ ದಶಕದಲ್ಲಿ ವೈದ್ಯಕೀಯ ಕ್ಷೇತ್ರವು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವಹಿಸಲಿವೆ.

6ನಾವುಗಳೂ, ಪ್ರಕೃತಿಯು ಎಷ್ಟು ವಿಚಿತ್ರ ಅಲ್ಲವೇ? ಅಂತ ಹುಬ್ಬೇರಿಸಬಹುದು. ಆದರೆ, ಪ್ರಕೃತಿಯ ಒಳಹೊಕ್ಕಷ್ಟೂ ವಿಜ್ಞಾನ ಪ್ರಪಂಚದ ಬಾಗಿಲು ತೆರೆದುಕೊಳ್ಳುತ್ತಿರುವುದು ಮತ್ತೂ ವಿಸ್ಮಯಕಾರಕ. ನಿರಂತರವಾದ ಸಂಶೋಧನೆಗಳಿಂದ ಈ ಮೂಲ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದರಿಂದ ಮುಂದೆ ಮಾನವ ತನ್ನ ಆಹಾರ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳುವ ಕಾಲ ದೂರವಿಲ್ಲ.

ಒಂದು ವೇಳೆ ಮನುಷ್ಯನಿಗೂ ಸಹ ಎಲಿಸಿಯ ಕ್ಲೋರೊಟಿಕಕ್ಕೆ ಪತ್ರಹರಿತ್ತನ್ನು ಇಟ್ಟುಕೊಂಡು ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ ಸಾಮರ್ಥ್ಯ ಇದ್ದಿದ್ದರೇ? ಅದು ಊಹೆಗೂ ನಿಲುಕದ ಮಾತು! ಏನಿಲ್ಲಾ ಅಂದರೂ ಕೊನೆ ಪಕ್ಷ ಕೃಷಿಗಾಗಿ ಅರಣ್ಯವನ್ನು ನಾಶ ಮಾಡಿ ಕಾಂಕ್ರೀಟ್ ಕಾಡುಗಳು ನಿರ್ಮಾಣವಾಗದೆ,  ದಟ್ಟ ಅಡವಿಯಲ್ಲಿ ಮರಗಳು  ಸೂರ್ಯನ ಕಿರಣಗಳು ನೆಲಕ್ಕೆ ತಾಕದಂತೆ ಮುಗಿಲೆತ್ತರಕ್ಕೆ ಬೆಳೆವ ಹಾಗೆ , ಮನುಷ್ಯನು ಸಹ ಸೂರ್ಯನ ಬೆಳಕಿನಲ್ಲಿ ನಿಲ್ಲಲು ನಾ ಮುಂದು…! ತಾ ಮುಂದು…! ಎಂದು ಜಿದ್ದಾಜಿದ್ದಿನಲ್ಲಿ ಆಕಾಶದೆಡೆಗೆ ತಿರುಗುತ್ತಿದ್ದದ್ದಂತೂ ಕಟು ಸತ್ಯ.

ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ 1 ನೇ ಬಹುಮಾನ ಪಡೆದ ಬರಹ)

ಡಾ.ಶಿಶಿರ ಎಸ್ ರಾನಡೆ.

ಪೀಠಿಕೆ:
​ಭಾರತೀಯ ವೈದ್ಯಶಾಸ್ತ್ರದ ಪಿತಾಮಹರಾದ ಸುಶ್ರುತ, ಚರಕ ಮುಂತಾದವರ ಕಾಲದಿಂದ ಇಂದಿನವರೆಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಗಳು ಕಂಡುಬಂದಿವೆ.  ​ ನಾಡಿಶಾಸ್ತ್ರ, ವಾತ, ಪಿತ್ತ, ಕಫ ಈ ರೀತಿಯ ಪರಿಕಲ್ಪನೆಗಳ ಭದ್ರ ಬುನಾದಿಯ ಮೇಲೆ ಬೆಳೆದುನಿಂತ ವೈದ್ಯಶಾಸ್ತ್ರ ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತರ್ಕಕ್ಕೂ  ಮೀರಿದ ಚಿಕಿತ್ಸೆಯನ್ನು  ರೋಗಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.  ಅಂದಿನ ಮತ್ತು ಇಂದಿನ ನಡುವೆ ಬಹಳಷ್ಟು ಬದಲಾವಣೆಗಳನ್ನು ಕಂಡಂತಹ ಈ ಕ್ಷೇತ್ರ ಎಲ್ಲಾ ರೀತಿಯ ಊಹಾಪೋಹಗಳು ಹಾಗೂ ತಪ್ಪು ಪರಿಕಲ್ಪನೆಗಳನ್ನು ಅಲ್ಲಗೊಳಿಸಿ ಇಂದು “ಸಾಕ್ಷ್ಯಾಧಾರಿತ ವೈದ್ಯಕೀಯ ವಿಜ್ಞಾನ” ಎನ್ನುವ ಹಂತಕ್ಕೆ ಬೆಳೆದು ನಿಂತಿದೆ.

​ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಪ್ರಚಲಿತವಿರುವ ತಂತ್ರಜ್ಞಾನದ ಮಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಚಿರಪರಿಚಿತವಾಗಿರುತ್ತದೆ.  ಒತ್ತಡದ ಜೀವನ ಶೈಲಿ, ಅವಸರದ ಬದುಕು, ಪರಿಸರ ಹಾಗೂ  ಆಹಾರ ಕ್ರಮಗಳಲ್ಲಾದ ಬದಲಾವಣೆಗಳು ಇವೆಲ್ಲವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೋಗಕಾರಕಗಳೇ ಆಗಿವೆ.  ಇಂದು ಇವೆಲ್ಲವನ್ನೂ ಮೀರಿ ಬದುಕಲು ವೈದ್ಯಕೀಯ ಕ್ಷೇತ್ರದಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿವೆ  ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯೂ ಇದೆ. ಅದರಲ್ಲಿ  ಕೆಲವನ್ನು ಇಲ್ಲಿ ವಿಮರ್ಶಿಸಲಾಗಿದೆ.

ಶ್ವಾಸಕೋಶದ ಕಾಯಿಲೆಯ ಔಷಧಿಗಳು – ಸ್ಮಾರ್ಟ್ ಇನ್‍ಹೇಲರ್ ಗಳು :
inhaler

(ಚಿತ್ರ: propellerhealth.com)

ಅಸ್ತಮಾ ಎನ್ನುವ ಕಾಯಿಲೆಗೆ ಉಸಿರಾಟದ ಪಂಪುಗಳ ಮೂಲಕ ಔಷಧಿಯನ್ನು ಒದಗಿಸಬಹುದು.  ಈ ರೀತಿ ಮಾಡುವುದರಿಂದ ಶೇಕಡ 90 ರಿಂದ 94.1 ರಷ್ಟು ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ.  ಆದರೆ ಔಷಧಿ ಪ್ರಮಾಣದ ವ್ಯತ್ಯಯ ಅಥವಾ ರೋಗಿಗಳು ಸರಿಯಾಗಿ ಔಷಧಿಗಳನ್ನು ಬಳಸದೇ ಇರುವ ಕಾರಣಗಳಿಂದ ಶೇಕಡ 50 ರಷ್ಟು ರೋಗನಿಯಂತ್ರಣದ ಸಮಸ್ಯೆ ಎದುರಾಗುತ್ತಿದೆ.  ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಇನ್‍ಹೇಲರ್‍ಗಳು, ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಮೊಬೈಲ್ ಫೋನ್‍ಗಳಿಗೆ ಅಳವಡಿಸಿ ಔಷಧಿಯ ಪ್ರಮಾಣ ಹಾಗೂ ಸಮಯಗಳನ್ನು ನಿಗಧಿಪಡಿಸಿ ರೋಗಿಯು ಸರಿಯಾದ ವಿಧಾನದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.

ರೋಬೋಟಿಕ್ ಸರ್ಜರಿ (ಯಂತ್ರಮಾನವನ ಸಹಾಯದ ಶಸ್ತ್ರ ಚಿಕಿತ್ಸೆ):
robotic surgery

 (ಚಿತ್ರ: uchealth.com)

ಈ ವಿಧಾನವನ್ನು ಅನುಸರಿಸಿ ಇಂದು ಶಸ್ತ್ರಚಿಕಿತ್ಸಕರು ಅತೀ ಕ್ಲಿಷ್ಟವಾದ ಅಥವಾ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾಯಿಲೆಗಳಿಗೆ ಶ್ರಮವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.  ಆದರೆ ಇದು ಯಂತ್ರ ಮಾನವನೇ ಪೂರ್ತಿಯಾಗಿ ಮಾಡುವ ಶಸ್ತ್ರಚಿಕಿತ್ಸೆ ಹಾಗೂ ಇದಕ್ಕೆ ವೈದ್ಯರ ಅವಶ್ಯಕತೆ ಇರುವುದಿಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿ ಇದೆ.   ಇದು ಒಂದು ಶಸ್ತ್ರಚಿಕಿತ್ಸಾ ಸಾಧನವಾಗಿದ್ದು ವೈದ್ಯರೇ ಇದನ್ನು ಬಳಸಿ ದೂರದಲ್ಲಿ ಕುಳಿತು ಸಣ್ಣರಂದ್ರಗಳ ಮೂಲಕ ನೀಡುವ ಚಿಕಿತ್ಸೆಯಾಗಿದೆ.  ಮೊದಲು ಶಸ್ತ್ರಚಿಕಿತ್ಸೆ ನೀಡಬೇಕಾದ ರೋಗಿಗೆ ಅರವಳಿಕೆಯ ಔಷಧಿಗಳನ್ನು ನೀಡಲಾಗುತ್ತದೆ.

ನಂತರ ರೋಗಿಯ ನಿರ್ಧಿಷ್ಟವಾದ ದೇಹದ ಭಾಗದ ಮೇಲೆ ರೋಬೋ ಅಥವಾ ಯಂತ್ರಮಾನವನನ್ನು ಅಳವಡಿಸಲಾಗುತ್ತದೆ.  ಉದಾಹರಣೆ ಹೊಟ್ಟೆಯ ಭಾಗ, ಎದೆಯಭಾಗ, ಕುತ್ತಿಗೆ ಇತ್ಯಾದಿ.  ನಂತರ ಶಸ್ತ್ರಚಿಕಿತ್ಸಕನು ಇನ್ನೊಂದು ಕೋಣೆಯಲ್ಲಿ ಕುಳಿತು ಕಂಪ್ಯೂಟರ್ ಪರದೆಯ ಸಹಾಯದಿಂದ ಈ ಯಂತ್ರದ ಚಲನವಲನಗಳನ್ನು ನಿಯಂತ್ರಿಸುತ್ತಾನೆ.  ಈ ಯಂತ್ರಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಕೈಗಳಿದ್ದು, ಅದರ ಕೆಲಸಗಳನ್ನು ನುರಿತ ವೈದ್ಯರು ಕೇವಲ ತಮ್ಮ ಕೈಬೆರಳುಗಳಲ್ಲಿ ಕಂಪ್ಯೂಟರ್‍ನ  ಜಾಯ್‍ಸ್ಟಿಕ್‍ನ ಸಹಾಯದಿಂದ ನಿಯಂತ್ರಿಸಬಹುದಾಗಿದೆ.  ರೋಗವಿರುವ ಅಂಗಾಂಗಗಳು ನಾಲ್ಕರಿಂದ ಹತ್ತು ಪಟ್ಟು ದೊಡ್ಡದಾಗಿ ಕಾಣುವ ಕಾರಣ ಅತೀ ಸೂಕ್ಷ್ಮವಾದ ಕಾಯಿಲೆಗಳ ಶಸ್ತ್ರಚಿಕಿತ್ಸೆಯನ್ನು ಸಲೀಸಾಗಿ ನಡೆಸಬಹುದು. ಇಂದು ಇಂಟರ್‍ನೆಟ್ ತಂತ್ರಜ್ಞಾನವನ್ನು ಬಳಸಿ, ಒಂದು ಊರಿನಲ್ಲಿದ್ದು ಇನ್ನೊಂದು ಊರಿನಲ್ಲಿರುವ ರೋಗಿಗಳಿಗೆ ರೋಬೊಟಿಕ್ ಸರ್ಜರಿ ನಡೆಸಬಹುದಾಗಿದೆ.  ಇದರಿಂದ ಸಾಮಾನ್ಯ ಜನರಿಗೂ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ.

ದೂರಸಂವೇದಿ ವೈದ್ಯಶಾಸ್ರ್ತ(Tele-Medicine / Telehealth ) :
telehealth

(ಚಿತ್ರ: medcitynews.com)

ಇಂದು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಇನ್ನೊಂದು ಮೂಲೆಯಲ್ಲಿರುವ ರೋಗಿಯೊಂದಿಗೆ ಸುಲಭವಾಗಿ ಸಂಪರ್ಕ ಬೆಳೆಸಿ, ರೋಗ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಇರುವುದು ಸಹಜ.  ಇಂತಹ ಸಂದರ್ಭಗಳಲ್ಲಿ ದೂರಸಂವೇದಿ ತಂತ್ರಜ್ಞಾನದ ಮೂಲಕ ರೋಗಿ ಇರುವಲ್ಲಿಂದಲೇ ಇನ್ನೊಂದು ಊರಿನಲ್ಲಿರುವ ನುರಿತ ವೈದ್ಯರನ್ನು ಸಂಪರ್ಕಿಸಿ ರೋಗನಿರ್ಣಯದ ಬಗ್ಗೆ ಚರ್ಚಿಸಿ, ಸೌಲಭ್ಯಗಳಿದ್ದಲ್ಲಿ ಅದೇ ಸ್ಥಳದಲ್ಲಿ ಚಿಕಿತ್ಸೆ ಒದಗಿಸಬಹುದು ಅಥವಾ ಸೌಲಭ್ಯದ ಕೊರತೆ ಇದ್ದಲ್ಲಿ ಉನ್ನತ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ತಕ್ಷಣ ಕಳುಹಿಸಬಹುದು.  ಇದರಿಂದ ರೋಗ ಪರೀಕ್ಷಾ ವಿಳಂಬ ದೂರವಾಗಿ ರೋಗಿಗಳಿಗೆ ತಕ್ಕ ಸಮಯದಲ್ಲಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯ. ಇದರಿಂದ ‘ ಪ್ರಪಂಚವೇ ಒಂದು ಪುಟ್ಟಗ್ರಾಮ ಎನ್ನುವ ತರ್ಕಕ್ಕೆ ಪುಷ್ಠಿ ನೀಡಿದಂತಾಗುತ್ತದೆ.

ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳು:
thumb_dc4979f47dc6b47aea064c829ef589e4

(ಚಿತ್ರ: yonsei.ac.kr)

ದೇಹದಲ್ಲಿ ತಾನಾಗಿಯೇ ಕರಗುವ ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳನ್ನು ತಲೆಬುರುಡೆಯು ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಮೇಲೆ ಅಳವಡಿಸಬಹುದಾಗಿದೆ.  ಇವು ಅಪಸ್ಮಾರ, ಪಾರ್ಕಿನ್ ಸೋನಿಸಂ ನಂತಹ ರೋಗಗಳಿಗೆ ರಾಮಬಾಣವಾಗಿರುವುದಲ್ಲದೆ, ಈ ಚಿಕಿತ್ಸೆಯಿಂದ ಮೆದುಳಿನಲ್ಲಾಗುವ  ಉಷ್ಣತೆ ಮತ್ತು ಒತ್ತಡದ ಬದಲಾವಣೆಗಳನ್ನು ಅಳೆಯಬಹುದಾಗಿದೆ.  ಚಿಕಿತ್ಸೆಯ ನಂತರ ಅವಶ್ಯಕತೆ ಇಲ್ಲದಿರುವಾಗ ಈ ಉಪಕರಣಗಳು ತಾನಾಗಿಯೇ ದೇಹದಲ್ಲಿ ಕರಗಿಬಿಡುತ್ತವೆ ಮತ್ತು ಶಸ್ತ್ರಚಿಕಿತ್ಸೆ ಮತ್ತೊಮ್ಮೆ ನಡೆಸಿ ತೆಗೆಯುವ ಅವಶ್ಯಕತೆ ಇರುವುದಿಲ್ಲ.

3ಡಿ ಅಚ್ಚುಗಾರಿಕೆ (3D printing):

5647122840-prostetic-3D-printing(ಚಿತ್ರ: healthtechzone.com)

​ಇದೊಂದು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಹಯೋಗದ ಕೆಲಸಕ್ಕೆ ಉತ್ತಮ ನಿದರ್ಶನವಾಗಿದೆ.  ಈ ತಂತ್ರಜ್ಞಾನವನ್ನು ಬಳಸಿ ರೋಗಿಯ ದೇಹದ ಅಂಗಾಂಗಗಳ  ಕೃತಕ ಮಾದರಿಯನ್ನು ತಯಾರಿಸಬಹುದಾಗಿದೆ.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಈ ಅಂಗಾಂಗಗಳನ್ನು ಅಳವಡಿಸಬಹುದಾಗಿದೆ.  ಉದಾಹರಣೆ: ಕೃತಕ ಕಾಲುಗಳು, ಕೃತಕ ಕೈಗಳು ಇತ್ಯಾದಿ. 3ಡಿ ಅಚ್ಚುಗಾರಿಕೆಯ ಸೌಲಭ್ಯವನ್ನು ಮುಖದ ಅಸ್ತಿಪಂಜರದ ಅಚ್ಚು ತೆಗೆಯಲು ಹೆಚ್ಚಾಗಿ ಬಳಸುತ್ತಾರೆ.  ರಸ್ತೆ ಅಪಘಾತವೋ ಅಥವಾ ಕೆಳಗೆ ಬೀಳುವುದರಿಂದ ಆದ ಮುಖದ ಮೂಳೆಗಳು ಮುರಿತಗೊಂಡಾಗ 3ಡಿ ಅಚ್ಚುಗಾರಿಕೆಯ ತಂತ್ರಜ್ಞಾನವನ್ನು ಬಳಸಿ, ಮುಖ್ಯವಾಗಿ ಕಣ್ಣಿನ ಸುತ್ತಲಿರುವ ಮೇಲ್ದವಡೆಯ ಮೂಗಿನ ಅಥವಾ ಕೆಳದವಡೆಯ ಮೂಳೆಗಳ ಮಾದರಿಯನ್ನು ತಯಾರಿಸಬಹುದು.

ಮುಖದ ಒಂದು ಬದಿಯ ಭಾಗದ ರೀತಿಯಲ್ಲಿಯೇ ಇನ್ನೊಂದು ಬದಿಯ ಅಚ್ಚನ್ನು ತಯಾರಿಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದ ಮೂಳೆಗಳನ್ನು ಜೋಡಿಸುವಾಗ ಬಳಸಬಹುದು. ಆದ್ದರಿಂದಲೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ಈ ತಂತ್ರಜ್ಞಾನವನ್ನು ಬಹಳಷ್ಟು ಬಳಸಲಾಗುತ್ತದೆ.  ಅಷ್ಟೇ ಅಲ್ಲದೆ 3ಡಿ ಅಚ್ಚುಗಾರಿಕೆಯನ್ನು ಬಳಸಿ ಔಷಧಿ ಉತ್ಪಾದನೆಯನ್ನು ಮಾಡಬಹುದಾಗಿದೆ.  ಒಂದಕ್ಕಿಂತ ಹೆಚ್ಚು ಔಷಧಿಗಳನ್ನು ರೋಗಿಗೆ ನೀಡುವ ಅವಶ್ಯಕತೆ ಇದ್ದಲ್ಲಿ ಅದನ್ನು ಪದರಗಳ ರೀತಿ ಕ್ರೂಢೀಕರಿಸಿ ಒದಗಿಸಬಹುದಾಗಿದೆ.

ಕೃತಕ ಅಂಗಾಂಗಗಳ ಜೈವಿಕ ಅಚ್ಚುಗಾರಿಕೆ:
3ಡಿ ಅಚ್ಚುಗಾರಿಕೆಯ ರೀತಿಯಲ್ಲಿಯೇ ಜೈವಿಕ ಅಚ್ಚುಗಾರಿಕೆ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಸಾಧ್ಯತೆ ಇದೆ.  ಅಂಗಾಂಗ ಕಸಿ ತಂತ್ರಜ್ಞಾನವು ಎಲ್ಲರಿಗೂ ತಿಳಿದ ವಿಷಯ.  ಆದರೆ ಅದಕ್ಕೆ ತನ್ನದೇ ಆದ ನಿರ್ಬಂಧಗಳಿವೆ.  ಬೇರೆ ವ್ಯಕ್ತಿಯ ಅಂಗಾಂಗಗಳನ್ನು ದೇಹವು ತಿರಸ್ಕರಿಸುವ  ಸಾಧ್ಯತೆಯೇ ಹೆಚ್ಚು.  ಆದರೆ ಜೈವಿಕ ಅಚ್ಚುಗಾರಿಕೆಯ ತಂತ್ರಜ್ಞಾನದಿಂದ ರೋಗಿಯ ರಕ್ತನಾಳಗಳು, ಅಂಡಾಶಯಗಳು, ಮೇದೋಜೀರಕ ಗ್ರಂಥಿ ಮುಂತಾದ ಅಂಗಾಂಗಗಳನ್ನು ಬೆಳೆಸಬಹುದಾಗಿದೆ.  ಮೊದಲು ಕೇವಲ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಚರ್ಮವನ್ನು ಬೆಳೆಸುವ ತಂತ್ರಜ್ಞಾನವು ಇಂದು ಮುಂದುವರಿದು  ಬೇರೆ ಅಂಗಾಂಗಗಳನ್ನು ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊದಲು ಮೇಲೆ ತಿಳಿಸಿದ ಕೆಲವು ಅಂಗಾಂಗಗಳ ಮಾದರಿಗಳನ್ನು ತಯಾರಿಸಲಾಗುತ್ತದೆ.  ನಂತರ ಅವುಗಳನ್ನು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ.  ದೇಹದಲ್ಲಿ ಹೊಸ ಅಂಗಾಂಗಗಳು ರೋಗಗ್ರಸ್ಥವಾದ ಹಳೆಯ ಅಂಗಾಂಗಗಳ ಕಾರ್ಯಗಳನ್ನು ಕ್ರಮೇಣ ವಹಿಸಿಕೊಳ್ಳಲು ಆರಂಭಿಸುತ್ತವೆ.  ಅಲ್ಲಿಯವರೆಗೂ ದೇಹದ ಒಳಭಾಗದಲ್ಲಿ ಈ ಕೃತಕ ಅಂಗಾಂಗಗಳು ಬೆಳೆಯುತ್ತಿರುತ್ತವೆ.  ದೇಹದ ಒಳಗೇ ಅಂಗಾಂಗಗಳು ಬೆಳೆಯುವ ಕಾರಣ, ತಿರಸ್ಕರಿಸುವ (ರಿಜೆಕ್ಷನ್) ಪ್ರಮೇಯ ಕಡಿಮೆಯಾಗಿ ಇದೊಂದು ಮನುಜ ಸಂಕುಲಕ್ಕೆ ವರವಾಗುವ ಸಾಧ್ಯತೆ ಇದೆ.

ನೈಜ ಚಿತ್ರಣ ತಂತ್ರಜ್ಞಾನ (ವರ್ಚುವಲ್ ರಿಯಾಲಿಟಿ):
virtual reality medical

(ಚಿತ್ರ: wear-studio.com)

ಈ ತಂತ್ರಜ್ಞಾನದಿಂದ, ಕಂಪ್ಯೂಟರ್ ಪರದೆಯ ಮೇಲೆಯೇ ಮಾನವನ ಅಂಗಶಾಸ್ತ್ರದ (ದೇಹ ರಚನೆ)  ಸಂಪೂರ್ಣ ಚಿತ್ರಣವನ್ನು ನೈಜ ರೀತಿಯಲ್ಲಿ ಮೂಡಿಸಬಹುದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ  ಇದರ ಉಪಯೋಗ ಬಹಳಷ್ಟಿದೆ. ವೈದ್ಯಕೀಯ  ಕಾಲೇಜುಗಳಲ್ಲಿ ನೈಜ ಚಿತ್ರಣ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳು ಮಾನವನ ದೇಹದ ಸಹಾಯವಿಲ್ಲದೇ ದೇಹರಚನಾ ಶಾಸ್ತ್ರವನ್ನು ಕಲಿಯಬಹುದಾಗಿದೆ.  ಅದಲ್ಲದೇ ಯಾವುದೇ ರೋಗಿಯ ಸಿ.ಟಿ. ಅಥವಾ ಎಂ.ಆರ್.ಐ. ಚಿತ್ರಗಳನ್ನು ನೈಜಚಿತ್ರಣ ಯಂತ್ರದಲ್ಲಿ ಅಳವಡಿಸಿ, ರೋಗಿಯ ಕೃತಕ ದೇಹದ ಮಾದರಿ ಹಾಗೂ ಅವನಿಗಿರುವ  ಕಾಯಿಲೆಗಳನ್ನು ಪರದೆಯ ಮೇಲೆ ಮೂಡಿಸಬಹುದು.

ಇದರಿಂದ ರೋಗಿಗೆ ಗಂಟು(ಗಡ್ಡೆ) ಯಾವ ಭಾಗದಲ್ಲಿದೆ,  ಅದರ ಸುತ್ತಲಿರುವ ಅಂಗಾಂಗಗಳು ಯಾವುವು? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಗಡ್ಡೆಯನ್ನು ತೆಗೆಯಬೇಕು ಹಾಗೂ ಆ ಸಮಯದಲ್ಲಿ ಎದುರಾಗುವ ತೊಂದರೆಗಳೇನು? ಯಾವ ದೊಡ್ಡ ರಕ್ತನಾಳಗಳು ಗಡ್ಡೆಯ ಸುತ್ತ ಇವೆ.  ಮುಂತಾದ ಅನೇಕ  ಮಾಹಿತಿಗಳನ್ನು ಶಸ್ತ್ರಚಕಿತ್ಸೆಯ ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರು ಕೃತಕ ಮಾದರಿಯ ಮೇಲೆ ಪ್ರಯೋಗಾತ್ಮಕ ಶಸ್ತ್ರಚಕಿತ್ಸೆಯನ್ನು ನಡೆಸಲು ಸಾಧ್ಯವಿದೆ.  ಇದರಿಂದಾಗಿ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆಗಬಹುದಾದ ತೊಂದರೆಗಳನ್ನು ನಿಯಂತ್ರಿಸಬಹುದಾಗಿದೆ.

ಕ್ಯಾಪ್ಸೂಲ್ ನೋಟ:

capsule-endoscopy1(ಚಿತ್ರ: medgadget.com)

ಹೊಟ್ಟೆ, ಕರುಳು, ಪಿತ್ತನಾಳ ಇವುಗಳ ರೋಗ ಪತ್ತೆ ಹಾಗು ಚಿಕಿತ್ಸೆಗೆ ಉದರದರ್ಶಕ ಉಪಕರಣಗಳನ್ನು ಬಳಸುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈಗ ಅದಕ್ಕೂ ಮೇಲಾಗಿ ಒಂದು ಸಣ್ಣ ನಳಿಕೆ ಗುಳಿಗೆಯನ್ನು ಬಳಸಿ ಜಠರ ಹಾಗು ಕರುಳಿನ ರೋಗಗಳನ್ನು ಸುಲಭವಾಗಿ ಪತ್ತೆಮಾಡಬಹುದು. ಈ ಸಣ್ಣ ನಳಿಕೆ ಗುಳಿಗೆಯು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಗಣಕಯಂತ್ರ ದೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಗುಳಿಗೆಯ ಒಂದೊಂದು ತುದಿಗಳಲ್ಲಿಯೂ ಬೆಳಕಿನ ಒಂದು ಆಕರ ಮತ್ತು ಛಾಯಾಚಿತ್ರಗ್ರಾಹಕ ಒಂದನ್ನು ಅಳವಡಿಸಲಾಗಿರುತ್ತದೆ.capsule

(ಚಿತ್ರ: tgastro.com)

ರೋಗಿಯು ಈ ಗುಳಿಗೆಯನ್ನು ನುಂಗಿದ ನಂತರ 24 ರಿಂದ 48 ಗಂಟೆಗಳ ವರೆಗೂ ಹೊಟ್ಟೆ ಹಾಗೂ ಕರುಳಿನ ಚಿತ್ರಗಳನ್ನು ನಿರಂತರವಾಗಿ ತೆಗೆದು ಅದನ್ನು ಗಣಕಯಂತ್ರಕ್ಕೆ ರವಾನಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಗುಳಿಗೆಯು ಮಲದೊಂದಿಗೆ ವಿಸರ್ಜಿಸಲ್ಪಡುವ ಕಾರಣ ರೋಗಿಯು ಆಸ್ಪತ್ರೆಯಲ್ಲಿ ಭರ್ತಿಯಾಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಈ ಗುಳಿಗೆಯ ಸಹಾಯದಿಂದ ಕರುಳಿನಲ್ಲಾಗುವ ರಕ್ತಸ್ರಾವ, ಹುಣ್ಣುಗಳು ಉರಿ ಊತ ಈರೀತಿ ಅನೇಕ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಇದರಿಂದ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

ಕರುಳಿನ ಜೀವಕೋಶಗಳ ಹಾಗೂ ಕರುಳಿನ ಸೂಕ್ಷ್ಮಾಣುಜೀವಿಗಳ ಕಸಿ:
ದೇಹದ ಅನೇಕ ಸಮಸ್ಯೆಗಳಿಗೆ ದೊಡ್ಡಕರುಳಿನಲ್ಲೇ ಕಾರಣ ಅಡಗಿದೆ ಎಂಬುದನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಪಚನಕ್ರಿಯೆ ಹಾಗು ಮಲ ವಿಸರ್ಜನೆ ಸರಿ ಇದ್ದರೆ ವ್ಯಕ್ತಿಯು ಸಾಮಾನ್ಯ ರೋಗಗಳಿಂದ ಮುಕ್ತವಾಗಿರುತ್ತಾನೆ ಎಂದೇ ಅರ್ಥ ಎಂದು, ಪುರಾತನ ಭಾರತೀಯ ವೈದ್ಯಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇಂದು ಅದರ ಆಧಾರದ ಮೇಲೆ ಸಂಶೋಧನೆಗಳು ನಡೆದಿವೆ.

ಈ ಸಂಶೋಧನೆಗಳಿಂದ ಆರೋಗ್ಯವಂತ ವ್ಯಕ್ತಿಯ ದೊಡ್ಡಕರುಳಿನ ಜೀವಕೋಶಗಳು ಅಷ್ಟೇ ಅಲ್ಲದೆ, ಅದರಲ್ಲಿರುವ ಅನೇಕ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪ್ರತ್ಯೇಕಿಸಿ, ಅದನ್ನು ಕರುಳು ಸಂಬಂಧೀ ರೋಗಿಗಳಿಗೆ ಕಸಿಮಾಡಿ ರೋಗ ಮುಕ್ತರನ್ನಾಗಿಸಬಹುದು ಎನ್ನುವ ಸತ್ಯಾಂಶ ತಿಳಿದುಬಂದಿದೆ. ಆದರೆ ಈ ಚಿಕಿತ್ಸೆಗೆ ತನ್ನದೇ ಆದ ನಿರ್ಬಂಧಗಳಿದ್ದರೂ ಕರುಳಿನ ಹುಣ್ಣು, ಉರಿಯೂತ, ಕರುಳಿನ ಇತರ ಸೋಂಕು ನಿವಾರಣೆಗಾಗಿ ಬಳಸಬಹುದಲ್ಲದೇ, ಪಾರ್ಕಿಂಸೋನಿಸಂ, ಮಾನಸಿಕ ತೊಂದರೆಗಳು, ಬೊಜ್ಜುತನ, ಅರ್ಬುದ ರೋಗ ಈ ರೀತಿ ಅನೇಕ ರೋಗಗಳಿಗೆ ಚಿಕಿತ್ಸೆಗಾಗಿ ಪರೀಕ್ಷೆಗಳು ನಡೆದಿವೆ. ಇವುಗಳ ಪಲಿತಾಂಶದ ಮೇಲೆ ಬಹಳಷ್ಟು ರೋಗಗಳಿಗೆ ಮುಕ್ತಿ ಸಿಗಲಿದೆ.

ಕಣ್ಣಿನ ತೊಂದರೆಗಳಿಗೆ ಪರಿಹಾರಗಳು:

optometrist-giving-man-eye-drops(ಚಿತ್ರ: medicalnewstoday.com)

ಕಣ್ಣು ಪೊರೆ ಎಂಬುದು ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಬರುವ ಕಾಯಿಲೆ. ಅದಕ್ಕೆ ದೊಡ್ಡ ಗಾಯದ ಶಸ್ತ್ರಚಿಕಿತ್ಸೆಯಿಂದ ಹಿಡಿದು ಅತಿ ಸಣ್ಣ ರಂಧ್ರದ ಮೂಲಕ ನಡೆಸುವ ಚಿಕಿತ್ಸೆಯ ವರೆಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇತ್ತೀಚೆಗೆ ಪೊರೆ ಕರಗುವಂತಹ ಔಷಧಿಯ ಹನಿಗಳನ್ನು ಕಂಡುಹಿಡಿಯಲಾಗುತ್ತಿದೆ. ಅದು ಮಾರುಕಟ್ಟೆಗೆ ಬಂದರೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಅದರಿಂದ ಆಗಬಹುದಾದ ತೊಂದರೆಗಳಿಂದ ರೋಗಿಯು ದೂರವೇ ಉಳಿದುಬಿಡಬಹುದು.

ಜೈವಿಕ ಕಣ್ಣು (Bionic Eye):

r0_0_800_600_w1200_h678_fmax(ಚಿತ್ರ : northerndailyleader.com)

ಕಣ್ಣು ಕಾಣದ ವ್ಯಕ್ತಿಗಳ ನರಮಂಡಲ ವ್ಯವಸ್ಥೆ ಸರಿ ಇದ್ದರೆ ಅವರಿಗೆ ಕನ್ನಡಕದ ರೂಪದಲ್ಲಿ ಈ ಕಣ್ಣುಗಳನ್ನು ಬಳಸಬಹುದಾಗಿದೆ. ಇದರಲ್ಲಿ ಕೃತಕ ಕ್ಯಾಮರ ಒಂದನ್ನು ಕನ್ನಡಕದ ಮೇಲೆ ಅಳವಡಿಸಿ ತಂತು ರಹಿತ ಸಂದೇಶ ರವಾನಿಸುವ ಮಾಧ್ಯಮದ ಮೂಲಕ (ಬ್ಲೂಟೂತ್) ಕಣ್ಣಿನ ನರದ ಮೇಲೆ ಅಳವಡಿಸಲಾಗುವ ಸಂದೇಶ ಗ್ರಾಹಕಕ್ಕೆ ತಲುಪುವಂತೆ ಮಾಡಲಾಗುತ್ತದೆ .ಚಿತ್ರಗಳು ನೈಸರ್ಗಿಕ ಕಣ್ಣುಗಳಲ್ಲಿ ಮೂಡುವಂತೆ ಇರದಿದ್ದರೂ ವ್ಯಕ್ತಿಯು ಆ ಚಿತ್ರಗಳನ್ನು ಗ್ರಹಿಸಬಹುದಾಗಿದೆ. ಮೆದುಳು ಆ ಚಿತ್ರಗಳಿಗೆ ಹೊಂದಾಣಿಕೆ ಹೊಂದಿದ ನಂತರ ವ್ಯಕ್ತಿಯು ದೈನಂದಿಕ ಚಟುವಟಿಕೆಗಳನ್ನು ನಡೆಸಬಹುದೆಂದು ಊಹಿಸಲಾಗಿದೆ. ಈ ವಿಷಯದ ಮೇಲೆ ಇನ್ನಷ್ಟು ಪರೀಕ್ಷೆಗಳು ಜಾರಿಯಲ್ಲಿವೆ.

ನಿಖರ ಔಷಧಿಗಳು:
ರೋಗಿಯ ಜೀವ ಕೋಶದಲ್ಲಿರುವ ಅತೀ ಸೂಕ್ಷ್ಮವಾದ ಅನುವಂಶಿಕ ರೂಪವನ್ನು ಆಧರಿಸಿ ( ಜೆನೆಟಿಕ್ ಮೇಕಪ್) ಕ್ಯಾನ್ಸರ್ ರೋಗ, ಸಂದಿವಾತ ರೋಗ ಮೊದಲಾದವುಗಳಿಗೆ ನಿರ್ಧಿಷ್ಟವಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.  ಇಷ್ಟೇ ಅಲ್ಲದೆ ವೈದ್ಯಕೀಯ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನದಿಂದ ಆರೋಗ್ಯ ಯಂತ್ರಗಳಲ್ಲಿ ಪ್ರಗತಿಯಾಗಲಿದೆ.  ಇಂದು ಪ್ರಸ್ತುತವಿರುವ ನಾಡಿ, ಎದೆಬಡಿತ ಮಾಪನಗಳಷ್ಟೇ ಅಲ್ಲದೆ ಮುಂದೆ ಇ.ಸಿ.ಜಿ. ಅಥವಾ ಎದೆಪಟ್ಟಿ, ಸಕ್ಕರೆ ಪ್ರಮಾಣ ನಿಯಂತ್ರಕಗಳು ರಕ್ತದ ಕೊಬ್ಬು ಯಂತ್ರಣಗಳು ಇತ್ಯಾದಿ ಮಾರುಕಟ್ಟೆಗೆ ಬರಲಿವೆ.

ಜೀನ್ ಥೆರಪಿ -ಅನುವಂಶೀಯ ಧಾತು ಚಿಕಿತ್ಸೆ:
ದೇಹದ ಒಂದು ಜೀವಕೋಶವೆಂದರೇ, ಅದು ಅತಿಸೂಕ್ಷ್ಮ. ಅದರೊಳಗೆ ಕೇಂದ್ರ ಭಾಗದಲ್ಲಿರುವ ನ್ಯೂಕ್ಲಿಯಸ್ ಅಥವಾ ಗರ್ಭವನ್ನು ವಿಭಜಿಸಿ ಅದರ ರಚನಾ ಭಾಗಗಳಾದ ಡಿ ಎನ್ ಎ ಮತ್ತು ಆರ್ ಎನ್ ಎ ಗಳನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಅನುವಂಶೀಯವಾಗಿ ಬರುವ ಕಾಯಿಲೆಗಳು ಡಿಎನ್ಎ ಯ ಭಾಗಗಳಿಂದಲೇ ಬರುತ್ತವೆ ಎಂಬುದು ಕೂಡ ಹೊಸ ವಿಷಯವೇನಲ್ಲ. ಅಂದರೆ ಡಿಎನ್ಎ ಯನ್ನು ವಿಭಜಿಸಿ ಅದರ ಅಮೈನೋ ಆಸಿಡ್ ಗುಂಪುಗಳನ್ನು ಜೀನ್ ಗಳೆಂದು ಕರೆಯಲಾಯಿತು. ಈ ಜೀನ್‍ಗಳು ದೇಹದ ನಿರ್ದಿಷ್ಟ ಕಾರ್ಯ ವೈಖರಿಗಳನ್ನು ನಿರ್ಧರಿಸುತ್ತವೆ.

ಇದರ ಆಧಾರದ ಮೇಲೆ ಅನುವಂಶೀಯ ಕಾಯಿಲೆಗಳು ಪೋಷಕರಿಂದ ಅಥವಾ ಕುಟುಂಬದವರಿಂದ ಮಕ್ಕಳಿಗೆ ಬರುವ ವಿಧಾನ ಹಾಗೂ ಅವುಗಳನ್ನು ಗುರಿಯಿಟ್ಟುಕೊಂಡು ನೀಡಬಹುದಾದಂತಹ ಅನೇಕ ರೀತಿಯ ಚಿಕಿತ್ಸೆಗಳನ್ನು ಸಂಶೋಧಿಸಲಾಗಿದೆ, ಹಾಗೂ ಇಂದಿಗೂ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಅರ್ಬುದ ರೋಗಕ್ಕೆ ಈ ಸಂಶೋಧನೆಗಳು ವರವಾಗಲಿವೆ. ಇದೇ ತತ್ವವನ್ನು ಬಳಸಿ ಅನುವಂಶೀಯ ಗುರುತು ತಿದ್ದುಪಡಿ ತಂತ್ರಜ್ಞಾನವನ್ನು ಬೆಳೆಸಲಾಗಿದೆ.

ಅನುವಂಶಿಕ ಗುರುತು ತಿದ್ದುಪಡಿ ತಂತ್ರಜ್ಞಾನ (Gene editing technology):
​ಈ ತಂತ್ರಜ್ಞಾನದಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳನ್ನು ಕೃತಕ ವೈರಸ್‍ಗಳ ಸಹಾಯದಿಂದ ನಾಶಪಡಿಸಬಹುದಾಗಿದೆ.  ಬ್ಯಾಕ್ಟೀರಿಯಾದ ಜೀವಕೋಶಗಳ ಒಳಗೆ ವೈರಸ್ ಜೀವಕೋಶಗಳನ್ನು ಕಳಿಸಿ, ಬ್ಯಾಕ್ಟೀರಿಯಾಗಳ ಮೂಲ ಅನುವಂಶಿಕ ರಚನೆಯನ್ನು ಬೇಧಿಸಿ (ಡಿಎನ್‍ಎ), ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ತಂತ್ರಜ್ಞಾನವು ಹೊರಹೊಮ್ಮಲಿದೆ.  ಇದರಿಂದ ಮಾನವನ ಬದ್ಧವೈರಿಯಾಗಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು:
ಕ್ಯಾನ್ಸರ್ ಎಂದರೆ ಎಷ್ಟು ಭೀಕರ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೆ ಈ ರೋಗದಿಂದ ವ್ಯಕ್ತಿ ಉಳಿಯಲು ಸಾಧ್ಯವೇ ಇಲ್ಲ ಎಂಬ ತಪ್ಪು ಪರಿಕಲ್ಪನೆಯೂ ಇದೆ. ಇಂದು ಅತ್ಯಾಧುನಿಕ ರೋಗಪತ್ತೆ ಮಾಡಬಹುದಾದಂತಹ ವಿಧಾನಗಳು ಹಾಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ಕ್ಯಾನ್ಸರ್ ರೋಗ ವನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಹಿಂದೆಲ್ಲಾ ರೋಗ ನಿಯಂತ್ರಿಸಲಾಗದಂತಹ ಹಂತದಲ್ಲಿ ಬರುತ್ತಿದ್ದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯೊಂದೇ ಉತ್ತರವಾಗಿತ್ತು.

ಆದರೆ ಇಂದು ವಿಕಿರಣ ಚಿಕಿತ್ಸೆ, ಜೀನ್ ಥೆರಪಿ ಅಥವಾ ಅನುವಂಶೀಯ ಧಾತು ಚಿಕಿತ್ಸೆ ಅಲ್ಲದೇ, ಅನೇಕ ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಶಸ್ತ್ರಚಿಕಿತ್ಸೆ ಇಲ್ಲದೇ ರೋಗಿಯು ಗುಣಮುಖನಾಗುವ ಹಂತ ತಲುಪಿದೆ. ಅನೇಕ ವಿಧದ ಕ್ಯಾನ್ಸರ್ ರೋಗಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತವಾದಂತಹ ಚಿಕಿತ್ಸೆಯನ್ನು ನೀಡುವ ಮೂಲಕ ರೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿದೆ. ಇದು ಖಂಡಿತವಾಗಿಯೂ ಮಾನವ ಸಂಕುಲಕ್ಕೆ ಒಂದು ಹೊಸ ಆಶಾಕಿರಣ.

ಕೊನೆಯ ಮಾತು:
​ಮಾನವನು ದೇಹಶಾಸ್ತ್ರ, ಔಷಧಶಾಸ್ತ್ರ, ರೋಗಶಾಸ್ತ್ರಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ನಮ್ಮ ಊಹೆಗೂ  ಮೀರಿದ ಬದಲಾವಣೆಗಳು ದೇಹದಲ್ಲೂ ಆಗುತ್ತಿರುತ್ತವೆ. ತರ್ಕಕ್ಕೂ ಸಿಗಲಾರದ ರೋಗಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿರುತ್ತವೆ.  ಅದರೊಂದಿಗೆ ವೈದ್ಯಕೀಯ ತಂತ್ರಜ್ಞಾನವೂ ಬೆಳೆದು ರೋಗಗಳನ್ನು  ಹೋಗಲಾಡಿಸುವ ಪ್ರಯತ್ನವೂ ನಿರಂತರವಾಗಿ ಮುಂದುವರೆಯುತ್ತದೆ.  ವೈದ್ಯಕೀಯ ಶಾಸ್ತ್ರದ ತರ್ಕ ಹಾಗೂ ತಂತ್ರಜ್ಞಾನದ ಕೊಡುಗೆಗಳು, ಮತ್ತು ಇವೆರಡರ ಸಮ್ಮಿಲನದಿಂದ ಮನುಕುಲಕ್ಕೆ ಉತ್ತಮವಾದ ಆರೋಗ್ಯ ಭಾಗ್ಯ ಸಿಗುವುದರಲ್ಲಿ ಸಂದೇಹವಿಲ್ಲ.

ಮಂಗಳ ಗ್ರಹವನ್ನು ಭೂಮಿಯನ್ನಾಗಿಸಬಲ್ಲ ಜೀವಿಗಳಿವು!

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ಎರಡನೆ ಬಹುಮಾನ ಪಡೆದ ಬರಹ)

ಧನುಜಾ ಜೆ

ಬಾನಂಗಳವೆಂದರೆ ಅದೇನೋ ಕುತೂಹಲ, ಕೌತುಕತೆ ಮತ್ತು ಅಚ್ಚರಿಗಳ ಅನಂತ. ವಿಸ್ಮಯನೊಳಗೊಂಡ ಈ ಜಗತ್ತಿನಲ್ಲೆಲ್ಲಾ ಹೊಳೆವ ನಯವಾದ ಬಿಸಿ ಅನಿಲದ ನಕ್ಷತ್ರಗಳು. ಇಂತಹ ಜಗತ್ತಿನಲ್ಲಿ ಮತ್ತೊಂದು ಭೂಮಿ ಇರಬಹುದೇ? ಅಲ್ಲಿಯೂ ಜೀವಿಗಳಿರಬಹುದೇ? ಭೂಮಿಯಲ್ಲಿನ ಜೀವಿಗಳು ಅಲ್ಲಿ ವಾಸಿಸಬಹುದೇ? ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಇದಕ್ಕೆ ವಿಜ್ಞಾನಿಗಳು ಹೇಳುವುದು ಯಾಕಾಗಬಾರದು ಎಂದೇ!

ಭೂಮಿಗೆ ಹೋಲುವ ಅನೇಕ ಗ್ರಹಗಳು ಬಾಹ್ಯಾಕಾಶದಲ್ಲಿವೆ. ನಮ್ಮ ಸೌರಮಂಡಲ ಸೇರಿದಂತೆ ಇನ್ನು ಅನೇಕ ಎಷ್ಟೋ ಸೌರಾತೀತ ಗ್ರಹಗಳಲ್ಲಿ ಭೂಮಿಯಂತಹ ವಾತಾವರಣವಿರಬಹುದಾದ ಗ್ರಹಗಳು ಪತ್ತೆಯಾಗಿವೆ. ನಮ್ಮದೇ ಸೌರಮಂಡಲದಲ್ಲಿ ಇರುವ ಮಂಗಳ ಗ್ರಹ ಕೂಡ ಭೂಮಿಗೆ ಒಂದರ್ಥದಲ್ಲಿ ಹೋಲುವ ಗ್ರಹ. ಕೆಂಪು ಗ್ರಹ, ರೆಡ್ ಪ್ಲಾನೆಟ್ ಎಂದು ಕರೆಯಲ್ಪಡುವ ಇದು ಜೀವಿಗಳ ಉಗಮಕ್ಕೆ ಬೇಕಾದ ಅತ್ಯಮೂಲ್ಯ ವಸ್ತು ನೀರನ್ನು ಮಂಜುಗಡ್ಡೆಯಾಗಿ ಐಸ್ ಕ್ಯಾಪ್‍ಗಳಲ್ಲಿ ಹುದುಗಿಸಿಕೊಂಡಿದೆ. ಸರಿ ಹಾಗಾದರೆ, ನಾವು ಅಲ್ಲಿ ಹೋಗಿ ವಾಸಿಸಬಹುದೇ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರ, ವರ್ತಮಾನದ ತಂತ್ರಜ್ಞಾನದಲ್ಲಿ ಅದು ಬಲು ಕಷ್ಟವೆಂದು ನಾಸಾದ ವಿಜ್ಞಾನಿಗಳು ನಡೆಸಿದ 20 ವರ್ಷಕ್ಕೂ ಹೆಚ್ಚಿನ ಅಧ್ಯಯನದ ಆಧಾರದ ಮೇಲೆ ತಿಳಿಸಿದ್ದಾರೆ.

ಇದರ ಹಿಂದಿರುವ ಕಾರಣ ಎಂದರೆ ಭೂಮಿಗೆ ಹೋಲಿಸಿದರೆ ಬರೀ ಶೇಕಡಾ 0.6% ರಷ್ಟಿರುವ ಮಂಗಳದ ಮೇಲ್ಮೈನ ಒತ್ತಡ ಮತ್ತು ಬೇಕಾದ ಪೋಷಕಾಂಶಗಳು ಸಮತೋಲನೆಯಲ್ಲಿ ಇಲ್ಲದಿರುವುದು. ಭೂಮಿಗಿಂತ ತುಸು ದೂರದ ಕಕ್ಷೆಯಲ್ಲಿರುವುದರಿಂದ ತಾಪಮಾನವು -60°C  ರಷ್ಟು ತಂಪಾಗಿದೆ. ಅತಿ ಕಡಿಮೆ ಒತ್ತಡ ಹಾಗೂ ತಂಪಾದ ವಾತಾವರಣ ನೀರನ್ನು ಸ್ಥಿರ ದ್ರವ ರೂಪಕ್ಕೆ ಬರಲು ಅನುವು ಮಾಡಿಕೊಡಲಾರದು. ಆದರೆ ಜೀವಿಗಳ ಉಗಮಕ್ಕೆ ನೀರು ದ್ರವ ಸ್ವರೂಪದಲ್ಲಿರುವುದು ಅತ್ಯಮೂಲ್ಯವಾಗಿದೆ ಮತ್ತು ಜೀವ ಸಂಕುಲದ ಉಗಮಕ್ಕೆ ಬೆಂಬಲಿಸಲು ಬೇಕಾದ ಪೋಷಕಾಂಶಗಳು ಸಮತೋಲನದಲ್ಲಿರುವುದು ಅವಶ್ಯಕ.

ಈ ಸಮಸ್ಯೆ ಬಗೆಹರಿಯಬೇಕೆಂದರೆ ಮಂಗಳದ ಮೇಲ್ಮೈ ತಾಪಮಾನವನ್ನು ಭೂಮಿಯಂತಹ ವಾತಾವರಣದ ಒತ್ತಡಕ್ಕೆ ತರಬೇಕಾಗುತ್ತದೆ. ಬಾಹ್ಯಾಕಾಶ ವಿಜ್ಞಾನಿಗಳು ಇದಕ್ಕೆ ಮಂಗಳದ ಮಂಜುಗಡ್ಡೆಗಳಲ್ಲಿ, ಐಸ್ ಕ್ಯಾಪ್ಗಳಲ್ಲಿ, ಧೂಳಿನ ಕಣಗಳಲ್ಲಿ ಮತ್ತು ಖನಿಜ ನಿಕ್ಷೇಪಗಳಲ್ಲಿ ಅಡಗಿರುವ ಇಂಗಾಲದ ಡೈ ಆಕ್ಸೈಡ್ (CO2) ಅನ್ನು ಆವಿಪಡಿಸುವುದರಿಂದ ವಾತಾವರಣ ಒಂದು ಸಾಂದ್ರತೆಗೆ ಬರಲು ಸಾಧ್ಯವಾಗಬಹುದೆಂದು ಹೇಳುತ್ತಾರೆ. ಆದರೆ ಅಷ್ಟು ಪ್ರಮಾಣದ ಶಾಖವನ್ನು ಮಂಗಳವು ಹೊಂದಿಲ್ಲದ್ದರಿಂದ ಕೃತಕವಾಗಿ ಗಣಿಗಾರಿಕೆಯಿಂದಲೋ ಅಥವಾ ಕ್ಲೋರೋ ಫ್ಲೋರೋ ಕಾಬ್ರನ್ಸ್ (CFCs) ಮತ್ತು ಫ್ಲೊರಿನ್ಸ್ (F) ಆಧಾರಿತ ಸಂಯುಕ್ತಗಳನ್ನು ಪರಿಚಯಿಸಬೇಕಾಗುತ್ತದೆ. ಆದರೆ ಈ ಪ್ರಯತ್ನ ತಾತ್ಕಾಲಿಕ.

ಮತ್ತೆ ಇನ್ಯಾವ ದಾರಿಯಿಂದ ಮಂಗಳದ ಮೇಲಿನ ಒತ್ತಡವನ್ನು ಭೂಮಿಯಂತೆ ಬದಲಿಸಲು ಸಾಧ್ಯ ಎಂದು ಯೋಚಿಸಿದರೆ ಇದಕ್ಕೆ ಉತ್ತರ ಹೇಳುವುದು ಕಣ್ಣಿಗೆ ಕಾಣಿಸದ ಸರ್ವವ್ಯಾಪಿಗಳೂ ಆದ ಒಂದು ಕೋಶದ ಸೂಕ್ಷ್ಮಜೀವಿಗಳು. ಅಚ್ಚರಿ ಎನಿಸಿದರೂ ಇವು ಅತಿ ವಿಪರೀತ ಪರಿಸರ ಹಾಗೂ ವಾತಾವರಣಗಳಿಗೆ ಹೊಂದಿಕೊಂಡು ಬದುಕುತ್ತವೆ. ಈ ಜೀವಿಗಳನ್ನು ಎಕ್ಸ್ ಸ್ಟ್ರೀಮೋಫೈಲ್ಸ್ (Extremophile) ಎಂದು ಹೇಳುತ್ತಾರೆ. ಕನ್ನಡದಲ್ಲಿಇವುಗಳನ್ನು ಕಡುಜೀವಿಗಳು ಅನ್ನಬಹುದೆನೋ.

ಅದೇನೋ ಸರಿ ಆದರೆ ಇಂತಹ ಜೀವಿಗಳಿಂದ ಹೇಗೆ, ಯಾವ ರೀತಿಯಲ್ಲಿ ಮಂಗಳನನ್ನು ಟೆರಫಾರ್ಮಿಂಗ್ ಅಂದರೆ ಭೂಮಿಯಂತೆ ಬದಲಿಸಲು ಸಾಧ್ಯ ಎಂದು ಕೇಳಿದರೆ, ಖಗೋಳ ಸೂಕ್ಷ್ಮಜೀವ ವಿಜ್ಞಾನಿಗಳು ಹೇಳುವುದು ಹೀಗೆ

ಮಂಗಳನನ್ನು ಭೂಮಿಯಂತೆ ಟೆರಾಫಾರ್ಮಿಂಗ್ ಮಾಡಲು ಕೃತಕವಾಗಿ ಗಣಿಗಾರಿಕೆಯಿಂದಲೋ, ಸಂಯುಕ್ತಗಳ ಪರಿಚಯದಿಂದಲೋ ಅಥವಾ ಮತ್ಯಾವ ದಾರಿಯಿಂದ ಸಾಧ್ಯವಿಲ್ಲ. ಜೈವಿಕವಾಗಿ ಮಂಗಳದಂತಹ ಅತಿ ಕ್ಲಿಷ್ಟಕರ ವಾತಾವರಣದಲ್ಲಿಯೂ ಬೆಳೆಯುವ ಎಕ್ಸ್ ಸ್ಟ್ರೀಮೋಫೈಲ್ಸ್ ನಿಂದ ಭರವಸೆ ಮೂಡಿಸಿವೆ

ಇಂತಹ ಸೂಕ್ಷ್ಮಜೀವಿಗಳನಿಟ್ಟುಕೊಂಡು ಮಂಗಳದ ಕಡಿಮೆ ಒತ್ತಡ (0.6% KPa) ಇರುವ ವಾತಾವರಣವನ್ನು ಭೂಮಿಯಂತೆ (101.3% KPa)  ಮಾರ್ಪಾಡು ಮಾಡಬಹುದು.

table1
ಮಂಗಳದಂತಹ 95% CO2 (<1 K Pa), ಅತಿ ಕಡಿಮೆ ನೀರು ಮತ್ತು ಸೂರ್ಯನ ಶಾಖ, ತೀವ್ರವಾದ ಸೌರ ಯುವಿ ಕಿರಣಗಳು, ಓಝೋನ್ ಪದರ ಇಲ್ಲದಿರುವುದು ಮತ್ತು -60°C ಉಷ್ಣತೆಯಲ್ಲಿಯೂ ಈ ಸೂಕ್ಷ್ಮಜೀವಿಗಳು ಖನಿಜ ನಿಕ್ಷೇಪಗಳಲ್ಲಿ ಬೆಳೆದು ಅವುಗಳನ್ನು ಅರಗಿಸಿಕೊಂಡು ಅವಶ್ಯಕ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಇದು ಮಂಗಳವನ್ನು ಭೂಮಿಯಂತೆ ಪರಿವರ್ತಿಸುವ ವಾತಾವರಣ ಮಾರ್ಪಾಟು (Ecopoiesis) ಪ್ರಕ್ರಿಯೆ ಕಾರಣವಾಗುತ್ತದೆ.

ಪ್ರಾಯೋಗಿಕ ಪುರಾವೆಗಳಿಗಾಗಿ ಎಕ್ಸ್ ಸ್ಟ್ರೀಮೋಫೈಲ್ಸ್ ಬಳಸಿಕೊಂಡು ಮಂಗಳದ ವಾತಾವರಣವನ್ನು ಮಾರ್ಪಾಡು ಮಾಡಬಹುದೇ ಎಂದು ನಾಸಾ ಸಂಸ್ಥೆ ಪ್ರಯೋಗ ನಡೆಸಿತು. ಮಂಗಳದಂತಹ ಕೃತಕ ವಾತಾವರಣ ರಚಿಸಿ “ಮಾರ್ಸ್ ಇಕೋಪೊಯಸಿಸ್ ಟೆಸ್ಟ್ ಬೆಡ್” ಎಂಬ ಅಧ್ಯಯನವನ್ನು ನಡೆಸಿತು. ಬಹುಮುಖ ಉದ್ದೇಶಗಳನ್ನೊಳಗೊಂಡ ಈ ಅಧ್ಯಯನ, ಮಂಗಳದ ಮೇಲ್ಮೈ ಆಳವಿಲ್ಲದ ಪೆನೆಟ್ರೇಟರ್ ಅನ್ನು ಉಪಯೋಗಿಸಿ ಮುಖ್ಯವಾದ ನಾಲ್ಕು ಧ್ಯೇಯೋದ್ದೇಶಗಳೊಂದಿಗೆ ಪರೀಕ್ಷಿಸಿತು.

1.    ಮಂಗಳದ ಧೂಳು ಮತ್ತು ಮಣ್ಣಿನಿಂದ ಕೂಡಿದ ಮೇಲ್ಪದರದಲ್ಲಿ ತೇವಾಂಶವನ್ನು ಮತ್ತು ಖನಿಜಗಳ     ಆವಿಯಾಗುವಿಕೆಯನ್ನು ಕಂಡುಹಿಡಿಯುವುದು.
2.    ಎಕ್ಸ್ ಸ್ಟ್ರೀಮೋಫೈಲ್ಸ್ ಪ್ರವರ್ತಕಗಳನ್ನು ಆಯ್ದು, ಅವುಗಳನ್ನು ಪರೀಕ್ಷೆಗೆ ಉಪಯೋಗಿಸುವುದು
3.    ಮಂಗಳದಲ್ಲಿ ಮೇಲ್ಮೈ ಆಳವಿಲ್ಲದ ಕಡೆ ನುಗ್ಗುವ ಯಂತ್ರವನ್ನು ಮತ್ತು ಎಲೆಕ್ಟ್ರಾನಿಕ್ ವಿನ್ಯಾಸಗೊಳಿಸುವುದು.
4.    ಎಲೆಕ್ಟ್ರಾನಿಕ್ ಜೈವಿಕ ಚಟುವಟಿಕೆ ಪರೀಕ್ಷೆಗಳನ್ನು ಗುರುತಿಸುವುದು (ಉದಾಹರಣೆಗೆ ಆಮ್ಲಜನಕದ ಸೆನ್ಸಾರ್)

ಪ್ರಾಯೋಗಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಟೆರಾಫಾರ್ಮಿಂಗ್ ಅನ್ನು ಎರಡು ಬಗೆಯ ಎಕ್ಸ್ ಸ್ಟ್ರೀಮೋಫೈಲ್ಸ್ ಗಳಾದ ಹೆಟಿರೊಟ್ರೋಫ್ಸ್ ಮತ್ತು ಸೈನೋಬ್ಯಾಕ್ಟೀರಿಯಾಗಳಿಂದ ಸಾಧ್ಯವಾಗಿಸಬಹುದು.

ಇಂದಿಗೂ ಭೂಮಿಯಲ್ಲಿ ದ್ಯುತಿಸಂಶ್ಲೇಷಣೆಯ (photosynthesis 1&2) ಮೂಲಕ ಅತಿಹೆಚ್ಚು ಶೇಕಡಾ 80%ರಷ್ಟು ಆಮ್ಲಜನಕವನ್ನು ಭೂಮಿಗೆ ಧಾರೆ ಎರೆಯುತ್ತಿರುವುದು ನೀಲಿ-ಹಸಿರು ಪಾಚಿ, ಸೈನೋಬ್ಯಾಕ್ಟೀರಿಯಾಗಳು. ಜೀವಿಗಳ ಉಗಮದಲ್ಲಿ ಇವು  ಆಮ್ಲಜನಕ ಇಲ್ಲದ (ರೆಡ್ಯೂಸಿಂಗ್ ಅಟ್ಮಾಸ್ಫಿಯರ್) ವಾತಾವರಣದಿಂದ ಆಮ್ಲಜನಕ ಇರುವ ವಾತಾವರಣದ ರೂಪಾಂತರಕ್ಕೆ ಕಾರಣವಾದವುಗಳು. ದೊಡ್ಡ ಆಮ್ಲಜನಕ ಘಟನೆಗೆ (Great Oxygen Event) ಕಾರಣಕರ್ತರಾದ ಇವುಗಳು ಆಮ್ಲಜನಕ ಒದಗಿಸುವುದರಲ್ಲಿ ಮೊದಲಿಗರಾಗಿ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಹುಟ್ಟಿಗೆ ಎಣೆಮಾಡಿಕೊಟ್ಪವು.

ಹೆಟಿರೋಟ್ರೋಪ್ಸ್ ಗಳು ಅದರಲ್ಲೂ ವಿಶೇಷವಾಗಿ ಕೀಮೋಲಿಥೊಆಟೋಟ್ರೋಫ್ಸ್ ಅಥವಾ ಲಿಥೋಆಟೋಟ್ರೋಪ್ಸ್ ಗಳು ಅಜೈವಿಕ ಶಕ್ತಿ ಮೂಲಗಳ ಆಕ್ಸಿಡೀಕರಣದಿಂದ ಶಕ್ತಿ ಪಡೆದು ಜೀವನ ಸಾಗಿಸುವವು. ಈ ವಿಧದ ಅನೇಕ ಸೂಕ್ಷ್ಮಜೀವಿಗಳು ಮಂಗಳದಂತಹ ತೀವ್ರ ಪರಿಸ್ಥಿತಿಯಲ್ಲೂ ಬದುಕಬಲ್ಲವು.

ಸೈನೋಬ್ಯಾಕ್ಟೀರಿಯಾದಲ್ಲಿ ಮುಖ್ಯವಾಗಿ ಅನಾಬೆನಾ ಎಸ್ಪಿ. ಮತ್ತು ಕ್ರೂಕೊಕಿಯೊಪ್ಸಿಸ್ ಎಸ್ಪಿ. CCMEE171 ಮಂಗಳದ ವಿಪರೀತ ವಾತಾವರಣದಲ್ಲಿ ಬೆಳೆದು ದ್ಯುತಿಸಂಶ್ಲೇಷಣೆಯ ಮೂಲಕ ಅಲ್ಲಿಯ ಆಮ್ಲಜನಕ ಪ್ರಮಾಣ ಹೆಚ್ಚಿಸುತ್ತವೆ. ಮಂಗಳದಲ್ಲಿಯೂ ಇವು ತಮ್ಮ ಹುಟ್ಟುಗುಣವನ್ನೇ ತೋರಿಸಿದರೆ ಇದನ್ನು ಎರಡನೇ ದೊಡ್ಡ ಆಮ್ಲಜನಕ ಘಟನೆ ಎನ್ನಬಹುದು! ಇದು ತಾಪಮಾನ ಏರಿಕೆಗೂ ಸಹಾಯ ಮಾಡಬಹುದು. ಆಗ ನೀರು ಸ್ಥಿರ ದ್ರವ ರೂಪಕ್ಕೆ ಬರಲು ಅನುವು ಮಾಡಿಕೊಡುತ್ತದೆ ಮತ್ತು CO2 ಕೂಡ ಆವಿಯಾಗಿ ವಾತಾವರಣ ಸೇರುತ್ತದೆ. ಈ ಘಟನೆಗಳು ಮಂಗಳದ ಮೇಲ್ಮೈನ ಒತ್ತಡವನ್ನು ಹೆಚ್ಚಿಸುತ್ತವೆ.

Cyanobacteria_guerrero_negro( ಮೈಕ್ರೊಸ್ಕೋಪ್ ನಲ್ಲಿ ಸೈನೊಬ್ಯಾಕ್ಟೀರಿಯಾಗಳ ನೋಟ)

ನೀರು ಸ್ಥಿರ ದ್ರವ ರೂಪಕ್ಕೆ ಬಂದು ಜೀವಿಗಳನ್ನು ಬೆಂಬಲಿಸಿದರೂ ಅದು ಮುಂದುವರಿಯಲು ಅತ್ಯವಶ್ಯಕ ಪೋಷಕಾಂಶಗಳು ಬದುಕನ್ನು ಉಳಿಸಿಕೊಳ್ಳಲು ಅಗತ್ಯ. ಅದರಲ್ಲಿ ಒಂದಾದ ಸಾರಜನಕವು ನ್ಯೂಕ್ಲಿಕ್ ಆಸಿಡ್ ಮತ್ತು ಪ್ರೋಟೀನ್ನ ಬಹುಪಾಲು ಅಂಗ. ಇದನ್ನು ಹೆಟಿರೋಟ್ರೋಪ್ಸ್ ಗಳಾದ ಡಿನೈಟ್ರಿಫಿಕೇಶನ್ (denitrification) ಮಾಡುವ ಬ್ಯಾಕ್ಟೀರಿಯಾಗಳು, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸ್ಯೂಡೋಮೊನಸ್ ಎರುಗಿನೋಸಾಗಳು ಸೈನೋಬ್ಯಾಕ್ಟೀರಿಯಾದ ಜೊತೆಗೂಡಿ ಪೋಷಕಾಂಶಗಳ ಸಮತೋಲನೆ ಮಾಡುತ್ತವೆ.

ಮಾರ್ಸ್ ಸಿಮ್ಯುಲೇಟರಲ್ಲಿ ಸ್ಯೂಡೋಮೊನಸ್ ಎರುಗಿನೋಸಾಗಳು ಡಿನೈಟ್ರಿಫಿಕೇಶನ್ ಪ್ರಕ್ರಿಯೆ ಮೂಲಕ ನೈಟ್ರೇಟ್ (NO3-) ಅನ್ನು ನೈಟ್ರೈಟ್ಗೆ (NO2-) ಮತ್ತು ಬ್ಯಾಸಿಲಸ್ ಸಬ್ಟಿಲಿಸ್ NO2 ಗೆ ಪರಿವರ್ತಿಸಿದವು. ಇಂತಹ ಪ್ರಕ್ರಿಯೆಗಳು ಖನಿಜ ನಿಕ್ಷೇಪಗಳನ್ನು ಮಣ್ಣಿನ ಕಣಗಳಾಗಿ ಮಾರ್ಪಡಿಸಬಹುದು ಮತ್ತು ಸೈಯನೋಬ್ಯಾಕ್ಟೀರಿಯಾಗಳು, ಮರಳಿ ಸಾರಜನಕ ಸ್ಥಿರೀಕರಣದಿಂದ ಅದು ಜೀವಿಗಳ ಬದುಕಿಗೆ ಪೋಷಕಾಂಶಗಳನ್ನು ಒದಗಿಸಬಹುದು. ಅಂತಿಮವಾಗಿ ಈ ಎಲ್ಲಾ ಘಟನೆಗಳು ಬಹುಕೋಶೀಯ ಜೀವಿಗಳಾದ ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ದಾರಿದೀಪವಾಗಿರುತ್ತವೆ.

picutre2
ಮಾರ್ಸ್ ಸಿಮ್ಯುಲೇಟರ್- “ಮಾರ್ಸ್ ಇಕೋಪೊಯಸಿಸ್ ಟೆಸ್ಟ್ ಬೆಡ್” ಅಲ್ಲಿ ಅನಾಬೆನಾ ಎಸ್ಪಿ, ಕ್ರೂಕೊಕಿಯೊಪ್ಸಿಸ್ ಎಸ್ಪಿ CCMEE171, ಕ್ಲೋರೆಲ್ಲಾ ಎಲಿಪ್ಸೋಡಿಯಾ, ಪ್ಲೆಕ್ಟೊನೆಮಾ ಬೋರಿಯಾನಮ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸ್ಯೂಡೋಮೊನಸ್ ಎರುಗಿನೋಸಾಗಳನ್ನು ಐದು ವಾರಗಳವರೆಗೆ 3-10 ಮಿಲಿ ಬಾರ್ ಗಳಲ್ಲಿ 100% CO2 ಮತ್ತು ನೀರಿನ ಪೂರೈಕೆಯಲ್ಲಿ (ಮಂಗಳದ ಹೋಲಿಕೆಯಂತೆ) ನಾಲ್ಕು ಪರಿಸ್ಥಿತಿಗಳಿಗೆ ಒಳಪಡಿಸಲಾಯಿತು: ಮಂಗಳ ಸಿಮ್ಯುಲೇಟರ್, ಕತ್ತಲೆಯಲ್ಲಿ -80°C, ಕತ್ತಲೆಯಲ್ಲಿ +4° C  ಮತ್ತು ದೈನಂದಿನ ಬೆಳಕಿನಲ್ಲಿ 25°C ಮತ್ತು ಫ್ಲೋರೊಸೀನ್ ಡಯಾ ಅಸಿಟೀಟ್ (ಎಫ್ ಡಿ ಎ) ಪರೀಕ್ಷೆ ಬಳಸಿಕೊಂಡು ಎಸ್ಟರೇಸ್‍ಗಳನ್ನು ಹೊಂದಿರುವ ಅಖಂಡ ಕೋಶಗಳ ಉಪಸ್ಥಿತಿ ತಿಳಿಯಲು ಬಳಸಲಾಯಿತು.

table2
ಮಾರ್ಸ್ ಸಿಮ್ಯುಲೇಟರ್ ನಲ್ಲಿ ಪರೀಕ್ಷಿಸಿದ ಬಳಿಕ ಎಫ್ ಡಿ ಎ ಮತ್ತು ಕ್ಲೋರೋಫಿಲ್ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಪೋಷಕಾಂಶ ಅಗರ್ ಮೇಲೆ ನೇರವಾಗಿ ಹಾಕಿ ಈ ಸೂಕ್ಷ್ಮಜೀವಿಗಳನ್ನು ವಿಶ್ಲೇಷಣೆ ಮಾಡಲಾಯಿತು. ಅನುಕರಿಸಿದ ಮಂಗಳ ಪರಿಸ್ಥಿತಿಗಳಿಗೆ ಒಡ್ಡಿಕೊಂಡು ನಂತರ ಸಂತಾನೋತ್ಪತ್ತಿ (ಬೈನರಿ ವಿದಳನ) ನಡೆಸಿದ ಕೋಶಗಳು ಉಳಿದುಕೊಂಡವು.

ಕೆಲವು ಸೀಮಿತ ಸ್ಥಿತಿಗತಿಗಳು ಈ ಎಕ್ಸ್ ಸ್ಟ್ರೀಮೋಫೈಲ್ಸ್ ಸೂಕ್ಷ್ಮಜೀವಿಗಳ ಜೀವಮಾನವನ್ನು ಅವಲಂಬಿಸಿರುತ್ತವೆ. ಅತಿ ತೀವ್ರವಾದ ಯುವಿ ಕಿರಣಗಳು, ಮೇಲ್ಮೈನ ಸಾರಜನಕದ ಕೊರತೆ, ಸೂರ್ಯನ ಬೆಳಕು ಹಾಗೂ ಅತಿ ತಂಪಾದ ವಾತಾವರಣಗಳು ಈ ಸೂಕ್ಷ್ಮಜೀವಿಗಳ ಬದುಕನ್ನು ನಿರ್ಧರಿಸುತ್ತವೆ. ಇದಾಗಿಯೂ ಛಲಬಿಡದ ಈ ಜೀವಿಗಳು ಬದುಕುಳಿಯುತ್ತವೆ. ಸಾಕಷ್ಟು ಹಾನಿಗಳ ಕಂಡು ತಮ್ಮ ಕೋಶದ ಕಾರ್ಯಕ್ಷಮತೆ ಕಡಿಮೆಯಾದರೂ, ಕ್ರೂಕೊಸಿಡಿಯೋಪ್ಸಿಸ್  ಡಿ ಎನ್ ಎ ಮತ್ತು ಕಿಣ್ವಗಳನ್ನು ಸರಿಪಡಿಸಿಕೊಂಡು ಯುವಿಯಿಂದ ರಕ್ಷಿಸಿಕೊಳ್ಳುತ್ತವೆ. ಹೈಪೋಲಿಥಿಕ್ ಬೆಳವಣಿಗೆ ಅಳವಡಿಸಿಕೊಂಡು ಬಂಡೆಗಳ ಅಡಿಯಲ್ಲಿ ಬೆಳೆಯುತ್ತವೆ. ನಿರ್ವಾತದಲ್ಲಿಯೂ ಬೆಳೆಯುವ ಇವು ಮಂಗಳದಂತಹ ಅತಿ ಕಡಿಮೆ ಒತ್ತಡದಲ್ಲಿ ಸುಲಲಿತವಾಗಿ ಜೀವಿಸಬಲ್ಲವು.

ಇದಾಗಿಯೂ ಎಕ್ಸ್ ಸ್ಟ್ರೀಮೋಫೈಲ್ಸ್ ಗಳನ್ನು ಬಳಸಿಕೊಂಡು ಮಂಗಳವನ್ನು ಟೆರಫಾರ್ಮಿಂಗ್ ಮಾಡಲು ಇನ್ನೂ ಆಳವಾದ ಸಂಶೋಧನೆಯನ್ನು ನಡೆಸಬೇಕಾಗಿದೆ. ಈ ಸೂಕ್ಷ್ಮಜೀವಿಗಳ ಸಾಮರ್ಥ್ಯ ತಿಳಿಯಲು ಮತ್ತು ಮಂಗಳನಲ್ಲಿ ಟೆರಫಾರ್ಮಿಂಗ್‍ಗೆ  ಸಾಧಿಸಬೇಕಾದ ಕನಿಷ್ಠ ಗುಣಗಳನ್ನು ನಿರ್ಧರಿಸಲು, ಭೂಮಿಯಲ್ಲಿ ಸಂಶೋಧನೆ ನಡೆಸಿ ಹೇಳುವಷ್ಟು ಸಾಧ್ಯವಾಗದೇ ಇರಬಹುದು. ಇನ್ನು ಅನೇಕ ಭೌತಿಕ ಮಿತಿಗಳನ್ನೊಳಗೊಂಡಿರುವುದರಿಂದ ಅದಕ್ಕಿರುವ ಪರಿಹಾರಗಳನ್ನು ಸ್ವಾಭಾವಿಕವಾಗಿ ಮಾಡಲು ಪ್ರಯತ್ನಿಸಬೇಕಾಗಿದೆ. ಇತ್ತೀಚೆಗೆ ಬೆಳೆಯುತ್ತಿರುವ ಸಂಶ್ಲೇಷಿತ ಜೀವಶಾಸ್ತ್ರ ಮತ್ತು ತಳೀಯ ಎಂಜಿನಿಯರಿಂಗ್, ಜೆನೆಟಿಕ್ ಮ್ಯಾನಿಪ್ಯುಲೇಷನ್‍ಗಳ ಮೂಲಕ ಮಂಗಳದ ವಾತಾವರಣಕ್ಕೆ ಹೊಂದುವ ಜೀವಕೋಶಗಳನ್ನು ನಿರ್ಮಿಸಿ ಭೂಮಿಯ ಜೀವಿಗಳು ಅಲ್ಲಿ ನೆಲೆಸಲು ಬೇಕಾದಂತೆ ಮಾರ್ಪಾಟಿಗೂ ಕೈಚಾಚಬಹುದು. ಇವೆಲ್ಲಾ ಹಗಲು ಕನಸಿನಂತೆ ಕಂಡರೂ, ಮುಂದೊಂದು ದಿನ ಕಣ್ಣ ಮುಂದೆ ನಿಂತರೂ ಅಚ್ಚರಿ ಏನಲ್ಲ.

ಅಂದಹಾಗೆ ಭೂಮಿಯಂತೆ ಬೇರೆ ಗ್ರಹಗಳನ್ನು ಟೆರಾಫಾರ್ಮಿಂಗ್‍ಗೆ ಬಳಸಲು ಹಲವಾರು ವಾದ ವಿವಾದಗಳು  ಮತ್ತು ಸಮಸ್ಯೆಗಳಿವೆ. ಸ್ವಇಚ್ಛೆಯಿಂದ ಇರುವ ಗ್ರಹಗಳನ್ನು ಮಾನವನು ತನ್ನ ಜೀವನಕ್ಕೆ ಬೆಂಬಲಿಸಲು ಬೇಕಾದಂತೆ ಮಾರ್ಪಾಡು ಮಾಡುವುದು ಎಷ್ಟು ಸರಿ ಮತ್ತು ಆಯಾ ಗ್ರಹಗಳು ತನ್ನದೇ ಆದ ಪ್ರಕೃತಿಯಲ್ಲಿ ತನ್ನದೇ ಹಾದಿಯನ್ನು ಹಿಡಿದಿರುತ್ತವೆ. ಇದನ್ನು ಬದಲಿಸುವುದು ನ್ಯಾಯವೇ?ಎಂಬ ತಾತ್ವಿಕ ಚರ್ಚೆ ಬರುತ್ತದೆ. ಇನ್ನು ಟೆರಫಾರ್ಮಿಂಗ್ ಎನ್ನುವುದು ಹತ್ತು ಅಥವಾ ಇಪ್ಪತ್ತು ವರ್ಷಗಳ ಮಾತಲ್ಲ ಅದು ನೂರರಿಂದ ಹಿಡಿದು ಅದೆಷ್ಟು ವರ್ಷಗಳು ತೆಗೆದುಕೊಂಡೀತೋ ಹೇಳತೀರದು. ಅಂತಹ ಕ್ರಿಯೆಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಮತ್ತು ಅಂತಹ  ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ವೆಚ್ಚವು ಹೆಚ್ಚಾಗಿದ್ದೂ ಅದನ್ನು ಬೆಂಬಲಿಸಲು ವರ್ತಮಾನದಲ್ಲಿ ಸಾಧ್ಯವಿಲ್ಲ.

ಆದರೂ ಮುಂದೊಂದು ದಿನ ಭೂಮಿಗೆ ವಿನಾಶ ಬರಬಹುದೆಂದು, ಅದರ ಆಯಸ್ಸು ಮುಗಿಯಿತೆಂದು ತಿಳಿದರೆ ಮನುಷ್ಯ ಅನಿವಾರ್ಯವಾಗಿ ಬಾನಾಚೆಗೆ ತನ್ನನ್ನು, ತನ್ನವರನ್ನು ಮತ್ತು ಮನುಕುಲವನ್ನು ಉಳಿಸಿಕೊಳ್ಳಲು ಬೇರೊಂದು ಭೂಮಿಯನ್ನು ಮಾಡಲು ಪ್ರಯತ್ನಿಸುವುದು ಅಚ್ಚರಿಯೇನಲ್ಲ.

ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ನಯನ.ಸಿ.ಕೆ.

ಬೇಸಾಯದಲ್ಲಿ ಇಂದು ಆಗಬೇಕಾದ ಮುಖ್ಯ ಸುಧಾರಣೆಗಳೆಂದರೆ:

೧. ಉಳುವ ರೈತನಿಗೆ ಆದಾಯ ಬರಬೇಕಾದರೆ ಯಾವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು?
೨. ರೈತ, ಮಾರುಕಟ್ಟೆ ಮತ್ತು ಗ್ರಾಹಕ – ಇವರ ನಡುವಿನ ನಂಟನ್ನು ಸರಿದೂಗಿಸುವುದು ಹೇಗೆ?

ಇದರ ವಿವರಗಳನ್ನು ಕೆಳಗೆ ನೋಡೋಣ.

ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ, ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ ವ್ಯವಸಾಯ. ವ್ಯವಸಾಯ ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುತ್ತದೆ.

ಕೃಷಿಭೂಮಿಯ ಸ್ವರೂಪ, ವಾಯುಗುಣ, ಮಳೆಹಂಚಿಕೆ, ಮಣ್ಣಿನಗುಣ, ಬಂಡವಾಳ ಹೂಡಿಕೆಯ ಆಧಾರದ ಮೇಲೆ ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಡಿಯಲ್ಲಿವೆ. ಅಂತೆಯೇ ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ.

ಕೃಷಿ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ, ಲಾಭ ಗಳಿಸಬೇಕಾದರೆ ರೈತರು ಆಧುನಿಕ ಕೃಷಿ ಪದ್ದತಿ ಹಾಗೂ ತಂತ್ರಜ್ಞಾನದ ಅಳವಡಿಕೆ ಅಥವಾ ಬಳಕೆಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ  ಕಾರ್ಮಿಕರ ಕೊರತೆ. ಕೂಲಿಭತ್ಯೆ ಹೆಚ್ಚಳದಿಂದಾಗಿ ದುಡಿಯುವ ಜನರಿಲ್ಲದ ಮನೆಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕೃಷಿಯಿಂದ, ಲಾಭ ಪಡೆಯುವುದು ಕನಸಿನ ಮಾತಾಗಿದೆ. ಇದರಿಂದ ವಿಮುಕ್ತಿ ಹೊಂದಲು, ಅಂದರೆ ಕೃಷಿಯ ಕಾರ್ಯಕ್ಷಮತೆ ಹೆಚ್ಚಿಸಿ ಮತ್ತು ಉತ್ಪಾದನಾ ವೆಚ್ಚ ತಗ್ಗಿಸಿ, ಹೆಚ್ಚು ಲಾಭಗಳಿಸಲು  “ಕೃಷಿ ಯಾಂತ್ರೀಕರಣ” ಹಾಗೂ “ಆಧುನಿಕ ತಂತ್ರಜ್ಞಾನ”ದ ಬಳಕೆ ಅನಿವಾರ್ಯವಾಗಿದೆ.

ಕೃಷಿ ಯಾಂತ್ರೀಕರಣ

ಮಾನವಸಂಪನ್ಮೂಲದ ಕೊರತೆ ಕೃಷಿಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಪಸ್ವಲ್ಪ ಯಂತ್ರಗಳ ಅಳವಡಿಕೆ ತೀರಾ ಅಗತ್ಯವಾಗಿದೆ. ಭೂಮಿ ಯನ್ನು ಅಣಿಗೊಳಿಸಲು  ಮತ್ತು ಆಳವಾಗಿ ಉಳುಮೆ ಮಾಡಲು ಟ್ರ್ಯಾಕ್ಟರ್ ಗಳ ಬಳಕೆ ಸಾಮಾನ್ಯವಾಗಿದೆ. ನವೀಕರಣಗೊಂಡ ೪೦ಹೆಚ್ ಪಿ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದೆ. ಬಹುಪಯೋಗಿ ಕಳೆ ಕೊಚ್ಚುವ ಯಂತ್ರ, ಹಾಲು ಹಿಂಡುವ ಯಂತ್ರ, ಪಾಲಿ ಟನಲ್ ಡ್ರೈಯರ್, ವಿದ್ಯುತ್ ಬೇಲಿ, ರೋಟರಿ ಟಿಲ್ಲರ್, ಕೀಟನಾಶಕಗಳ ಸಿಂಪಡಣೆಗೆ ವಿವಿಧ ಬಗೆಯ ಸ್ಪ್ರೇಯರ್ ಗಳು , ಮಿಸ್ಟ್ ಬ್ಲೋಯರ್, ಗುಂಡಿ ತೋಡುವ ಯಂತ್ರ, ಸಂಯೋಜಿತ ಕೊಯ್ಲು ಮತ್ತು ನಾಟಿಯಂತ್ರ, ಮುಂತಾದವುಗಳು ಹೆಚ್ಚು ಉಪಯುಕ್ತವಾಗಿವೆ.

ಜಿ ಪಿ ಎಸ್ ತಂತ್ರಜ್ಞಾನ ಅಳವಡಿಸಿರುವ  ಆಟೊಪೈಲಟ್ ಸ್ಪ್ರೇಯರ್ ಮತ್ತು ಟ್ರ್ಯಾಕ್ಟರ್ ಗಳು ಹೆಚ್ಚು ಸಾಮರ್ಥ್ಯ ಹೊಂದಿವೆ. ಇವು ಸ್ವಯಂಚಾಲಿತವಾಗಿದ್ದು, ಮಾನವ ತೊಡಕುಗಳ ಪ್ರಮಾಣ ಕಡಿಮೆ.

“ಸಮಯೋಚಿತ ಉತ್ಪಾದನೆ” ಕೃಷಿಯಲ್ಲಿ ಲಾಭಗಳಿಸಲು  ಒಂದು ಪ್ರಮುಖ ಅಂಶವಾಗಿದೆ. ಮುಂಗಡ ಬಿತ್ತನೆ, ಸಮಯಕ್ಕೆ ಸರಿಯಾಗಿ ಕಟಾವು ಮಾಡುವುದು ಮತ್ತು ಫಸಲನ್ನು ಸರಿಯಾದ ಸಮಯದಲ್ಲಿ ಮತ್ತು ಸ್ಥಳದಲ್ಲಿ ಶೇಖರಿಸುವುದು ಅತ್ಯಗತ್ಯ. ಫಸಲುಗಳನ್ನು ಶೇಖರಿಸಿ ಅಗತ್ಯಬಿದ್ದಾಗ, ಅಂದರೆ ಹೆಚ್ಚಿನ ಬೆಲೆ ದೊರೆತಾಗ ಮಾರಲು ಶೀತಲ ಶೇಖರಣಾ ಘಟಕದ  ಅವಶ್ಯಕತೆ ಇದೆ. ಹಾಗಾಗಿ  ರೈತರು ಸರ್ಕಾರದಿಂದ  ದೊರೆಯುವ ಸವಲತ್ತುಗಳನ್ನು  ಬಳಸಿಕೊಂಡು ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ  ಹೆಚ್ಚು ಅವಶ್ಯಕತೆಯಿರುವಲ್ಲಿ,  ಈ ಘಟಕಗಳನ್ನು  ನಿರ್ಮಿಸಿಕೊಳ್ಳುವುದು ಹೆಚ್ಚು ಉಪಯುಕ್ತ .

ಬೆಳೆ ಸೆನ್ಸರ್ಸ್ :

samvedagala-balake(ಚಿತ್ರ ಕೃಪೆ: Benedette cuffari)

ರಸಗೊಬ್ಬರ ಹಾಗೂ ಕೀಟನಾಶಕಗಳ ಪರಿಣಾಮಕಾರಿ ಸಿಂಪಡಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ, ಪ್ರತ್ಯೇಕ ಬೆಳೆಗೆ ಬೇಕಾದ ನಿರ್ದಿಷ್ಠ ರಸಗೊಬ್ಬರದ ಬಳಕೆ, ಸಿಂಪಡಿಸಬೇಕಾದ  ಸಮಯ  ಮತ್ತು ಅಳತೆ – ಇವುಗಳು ಸಾಮಾನ್ಯ ರೈತರಿಗೆ ತಿಳಿದಿರುವುದಿಲ್ಲ. ಕ್ರಾಪ್ ಸೆನ್ಸಾರ್ ಗಳು ಈ ಕಾರ್ಯವನ್ನು ಸುಲಭವಾಗಿಸುತ್ತವೆ. ಈ ತಂತ್ರಜ್ಞಾನದಿಂದ ಬೆಳೆಗಳ ಗುಣಮಟ್ಟವನ್ನು  ಅಳೆಯುವುದಲ್ಲದೆ, ಕೃಷಿ  ಭೂಮಿಯ  ಮೇಲ್ಮೈ ಕೂರೆತದ ಸಂಭವನೀಯತೆಯನ್ನು  ತಗ್ಗಿಸುತ್ತದೆ. ಈ ಬೆಳೆ ಸೆನ್ಸರ್ ಗಳು ಬೆಳೆಸಸ್ಯಗಳಿಗೆ  ಅಗತ್ಯವಾದ  ರಸಗೊಬ್ಬರ ಅಥವಾ ಕೀಟನಾಶಕದ  ಅಳತೆಯನ್ನು, ಅಗತ್ಯವಾದ ಸಮಯವನ್ನೂ ನಿರ್ದೇಶಿಸುವಂತೆ  ವಿನ್ಯಾಸಗೊಂಡಿವೆ. ಇವುಗಳ ಬಳಕೆಯಿಂದಾಗಿ  ಸಸ್ಯಗಳ ಗುಣಮಟ್ಟವನ್ನು ಕಾಪಾಡಿಕೊಂಡು ಅಗತ್ಯವಿರುವಷ್ಟೇ  ಕ್ರಿಮಿನಾಶಕ, ಗೊಬ್ಬರಗಳನ್ನು ಒದಗಿಸುವುದರಿಂದ ಅವುಗಳ ನಿಯಮಿತ ಬಳಕೆಯಿಂದಾಗಿ, ಹೂಡಿಕೆಯನ್ನು ತಗ್ಗಿಸಿ, ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಮಾಹಿತಿ ತಂತ್ರಜ್ಞಾನದ ಬಳಕೆ

ಇತ್ತೀಚಿನ ದಿನಗಳಲ್ಲಿ  ರಿಮೋಟ್ ಸೆನ್ಸಿಂಗ್, ಜಿಪಿಎಸ್ ಮತ್ತು ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ ತಂತ್ರಜ್ಞಾನಗಳು ಕೃಷಿ ಚಟುವಟಿಕೆಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಇವು ಅನೇಕ ತರನಾಗಿ ಉಪಯುಕ್ತವಾಗಿವೆ. ಫಸಲಿನ ಬೆಳವಣಿಗೆಯ ಗುಣಮಟ್ಟ ನೋಡಿಕೊಳ್ಳುವುದು, ಮಣ್ಣಿನ ತೇವಾಂಶ, ಫಲವತ್ತತೆಯ ಮೌಲ್ಯಮಾಪನ, ಬೆಳೆಗೆ ತಗುಲಬಹುದಾದ ಅಥವಾ ತಗುಲಿರಬಹುದಾದ ರೋಗ ಮತ್ತು ಕೀಟಗಳ ಭಾದೆ, ನೀರಿನ ಉಬ್ಬರ ಅಥವಾ ಕೊರತೆಯ ಸ್ಥಿತಿಗತಿ, ಅಂದಾಜು ಇಳುವರಿ, ಹವಾಮಾನ ವೈಪರೀತ್ಯದ ವರದಿಗಳ ನಿಖರ ಮಾಹಿತಿಯಿಂದಾಗಿ, ಕೃಷಿ ಪದ್ಧತಿಯ ಸಂರಕ್ಷಣೆ ಹಾಗೂ ಕೃಷಿಕ ಸಮುದಾಯದ ಆರ್ಥಿಕ ಸ್ಥಿತಿಗತಿಯ ಸುಧಾರಣೆ ಸಾಧ್ಯವಾಗುತ್ತದೆ. ಜಿಪಿಎಸ್ ತಂತ್ರಜ್ಞಾನದಿಂದ, ನಿರ್ದಿಷ್ಟ ಭೂಮಿಯಿಂದ ಬರುವ ಇಳುವರಿಯನ್ನು ಊಹಿಸಿ ದಾಖಲಿಸಬಹುದು. ಈ ಇಳುವರಿ ನಕ್ಷೆಯನ್ನು ಅವಲಂಬಿಸಿಕೊಂಡು ಯಾವ ಬೆಳೆ ಬೆಳೆಯುವುದು ಸೂಕ್ತವೆಂದು ನಿರ್ಣಯ ಮಾಡುವುದರೊಂದಿಗೆ, ಅತಿ ಹೆಚ್ಚುಉತ್ಪಾದನೆಯಿಂದಾಗುವ ಬೆಲೆ ಕುಸಿತದ ನಷ್ಟ ತಪ್ಪುತ್ತದೆ.

ಸಂರಕ್ಷಿತ ಕೃಷಿ ( ಹಸಿರು ಮನೆ ತಂತ್ರಜ್ಞಾನ)

hasiru-mane

ಚಿತ್ರ ಕೃಪೆ: Krishijagran.com

ಪಾಲಿಹೌಸ್ ಅಥವಾ ಹಸಿರುಮನೆಗಳಲ್ಲಿ, ಬೆಳೆಯುವ ಬೆಳೆಗಳ ಬೇಸಾಯಕ್ಕೆ ಅನುಕೂಲವಾದ ವಾತಾವರಣ ಕಲ್ಪಿಸಿ, ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿ ಪಡೆಯಬಹುದಾಗಿದೆ. ಭಾರ ಕಡಿಮೆಯಿದ್ದು, ಹೆಚ್ಚು ಲಾಭ ತರುವಂತಹ ತರಕಾರಿ, ಹೂವು ಹಾಗೂ ಹಣ್ಣಿನ ಬೆಳೆಗಳಿಗೆ ಇದು ಸೂಕ್ತ. ಉತ್ತಮ ತಳಿಗಳನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕಡಿಮೆ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಇಳುವರಿ ಮತ್ತು ಹೆಚ್ಚಿನ ಉತ್ಪಾದಕತೆ ಪಡೆಯಬಹುದು. ವರ್ಷದ ಎಲ್ಲಾ ಕಾಲದಲ್ಲೂ ಮಾರುಕಟ್ಟೆಗೆ ತಕ್ಕಂತೆ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು ಮತ್ತು ಒಳ್ಳೆಯ ಗುಣಮ್ಟದ ಹಾಗೂ ರಫ್ತುಮಾಡಲು ಯೋಗ್ಯವಾದ ಬೆಳೆ ಸಾಧ್ಯವಾಗುತ್ತದೆ.

ಜೈವಿಕ ತಂತ್ರಜ್ಞಾನ

ಕೃಷಿ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದೆ. ಟ್ರಾನ್‍ಜೆನಿಕ್ (ಕುಲಾಂತರಿ ತಳಿ) ತಂತ್ರಜ್ಞಾನದಿಂದ ಸುಧಾರಿತ ಇಳುವರಿ, ವಾತಾವರಣದ ಒತ್ತಡಕ್ಕೆ ಪ್ರತಿರೋಧಕತೆ, ಹೆಚ್ಚಿನ ಪೌಷ್ಟಿಕತೆ, ಗ್ಲೈಫೋಸೇಟ್ (ರೌಂಡಪ್), ಫಾಸ್ಫೀನೋತ್ರಿಸಿನ್ (ಬಾಸ್ಟಾ)  ಮುಂತಾದ ಕಳೆನಾಶಕ ಔಷಧಗಳಿಗೆ, ನಿರೋಧಕ ಶಕ್ತಿ ಹೊಂದಿರುವ ಬೆಳೆ ಸಸ್ಯಗಳು ದೊರಕುತ್ತಿವೆ.  ಕೀಟ ಹಾಗೂ ರೋಗ ನಿರೋಧಕ ತಳಿಗಳಾದ ಬಿ ಟಿ ಹತ್ತಿ, ಭತ್ತ, ಟೊಮ್ಯಾಟೋ, ಬದನೆ ಮುಂತಾದವು, ಇಳುವರಿಯ ಗುಣಮಟ್ಟ ಹೆಚ್ಚಿಸಿ ಲಾಭ ತಂದುಕೊಡುತ್ತಿವೆ.  ಉಪಯುಕ್ತ ಗುಣಗಳನ್ನು ಸಮೀಕರಿಸಿ ತಯಾರಿಸಿದ ಹೈಬ್ರಿಡ್ ತಳಿಗಳಿಂದ ರೋಗನಿರೋಧಕತೆ, ಅಧಿಕ ಇಳುವರಿ ಮತ್ತು ಬರನಿರೋಧಕ ಶಕ್ತಿ ಹೊಂದಿದ್ದು ಪ್ರಾದೇಶಿಕ ತಳಿಗಳಿಗಿಂತ ಹೆಚ್ಚು ಉಪಯುಕ್ತವಾಗಿವೆ.

ಅಂಗಾಂಶ ಕೃಷಿ ಮತ್ತು ಕ್ಲೋನಿಂಗ್ ತಂತ್ರಜ್ಞಾನವು, ಪ್ರಮುಖವಾಗಿ ತಿರುಳು, ಮರದ ದಿಮ್ಮಿ, ತೊಗಟೆ, ಹಣ್ಣು ಮುಂತಾದ ಉತ್ಪನ್ನಗಳಿಗಾಗಿ ಬೆಳೆಯುವ ಅರಣ್ಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಕಡಿಮೆ ಸಮ ಯ ದಲ್ಲಿ ಅಧಿಕ ಸಂಖ್ಯೆಯ ಸಸಿಗಳು, ಬೀಜದ ಜಡಸ್ಥಿತಿ ಹಾಗೂ ಅದು ಮೊಳೆತು ಸಸಿಯಾಗಿ ಫಲಕೊಡಲು ತೆಗೆದುಕೊಳ್ಳುವ ಕಾಲಾವಧಿ, ಈ ವಿಧಾನದಲ್ಲಿ ಉತ್ಪಾದಿಸಿದ ಸಸ್ಯಗಳಲ್ಲಿ ದುಪ್ಪಟ್ಟು ಕಡಿಮೆಯಿರುತ್ತದೆ.

ಜೈವಿಕ ತಂತ್ರಜ್ಞಾನದ ಪರ ಮತ್ತು ವಿರೋಧದ ಚರ್ಚೆಗಳು ಹಲವಾರು ವರುಷಗಳಿಂದ ನಡೆಯುತ್ತಿವೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸರಿಯಾಗಿರುವ ಕ್ರಮಗಳನ್ನು ಜಾರಿಗೆ ತರಬೇಕು. ಹೆಚ್ಚು ಇಳುವರಿ ಪಡೆಯುವಂತಾಗಬೇಕು ಆದರೆ ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆಯೂ ನೋಡಿಕೊಳ್ಳಬೇಕು. ಹೀಗಾಗಿ ಇಲ್ಲಿ ಸಮದೂಗಿದ ನಡೆ ತುಂಬಾ ಮುಖ್ಯ.

ಆಧುನಿಕ ನೀರಾವರಿ ಪದ್ಧತಿ

ಇತ್ತೀ ಚಿ ನ ದಿನಗಳಲ್ಲಿ, ಬೆಳೆಗೆ ಅಗತ್ಯವಿರುವ ಪ್ರಮಾಣದಲ್ಲಿ  ನೀರನ್ನು ಒದಗಿಸಿ, ಹೆಚ್ಚು ನೀರು ಪೋಲಾಗುವುದನ್ನು ತಡೆಗಟ್ಟುವಲ್ಲಿ ಮಹತ್ತರ ಆವಿಷ್ಕಾರಗಳು ನಡೆದಿವೆ. ಅದರ ಪರಿಣಾಮವಾಗಿ ಡ್ರಿಪ್ ಅಟೋಮೇಶನ್ ಸಿಸ್ಟಮ್ (ತಂತಾನೇ ನಡೆಯುವ ಹನಿ ನೀರಾವರಿ ವ್ಯವಸ್ಥೆ)  ಅನ್ನು ಫೋನಿನಿಂದ ಪ್ರೋಗ್ರಾಂ ಮಾಡಬಹುದು  ಮತ್ತು ಅದು ನಿಖರ ಪ್ರಮಾಣದ ನೀರನ್ನು ಹಾಯಿಸುತ್ತದೆ .

ಹೊಸ ಮಾದರಿಯ ಡೀಪ್ ಡ್ರಿಪ್ ಇರ್ರಿಗೇಶನ್ (ಆಳ ಹನಿ ನೀರಾವರಿ) ಇತ್ತೀಚಿಗೆ ನಮ್ಮ ದೇಶಕ್ಕೆ ಪರಿಚಯಗೊಂಡಿದೆ. ಈ ವ್ಯವಸ್ಥೆಯಿಂದ ಬೇರಿಗೆ ನೇರವಾಗಿ  ನೀರುಣಿಸುವುದರಿಂದ ಉಳಿದೆಲ್ಲ ನೀರಾವರಿ ತಂತ್ರಜ್ಞಾನಕ್ಕೆ ಹೋಲಿಸಿದರೆ, ಇದು ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಮರದ ಸುತ್ತ ಕಳೆಯೂ ಬೆಳೆಯುವುದಿಲ್ಲ.

neerina-vitarane(ಚಿತ್ರ ಕೃಪೆ: chahtech.com)

ಹೀಗೆ ಸ್ವಯಂಚಾಲಿತ ಸೂಕ್ಷ್ಮ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ದತಿಯಿಂದ, ನೀರಿನ ಮಿತಬಳಕೆ ಮಾಡಿಕೊಂಡು ಹೆಚ್ಚಿನ ಆದಾಯಗಳಿಸಬಹುದು.

ಕೃಷಿ  ಬೆಳೆವಣಿಗೆಯಲ್ಲಿ  ಸ್ಮಾರ್ಟ್ ಫೋನ್

smartphone-balake(ಚಿತ್ರಕೃಪೆ: lmkt.com)

ಸ್ಮಾರ್ಟ್ ಫೋನ್ ಬಳಕೆ ಈಗ ಸರ್ವೇಸಾಮಾನ್ಯ. ಇದರ ಬಳಕೆಯಿಂದ ಕೃಷಿಕಾರ್ಯಗಳನ್ನು ಸುಲಭಗೊಳಿಸಬಹುದಾಗಿದೆ. ಮಣ್ಣಿನ ತೇವಾಂಶ, ಉಷ್ಣಾಂಶ,ಹವಾಗುಣ ದಾಖಲಿಸುವ ರೋ ಬೋಟಿಕ್ಸ್ ಟೆಕ್ನಾಲಜಿಯನ್ನು  ಕೃಷಿಭೂಮಿಯಲ್ಲಿ   ಅಳವಡಿಸಿ, ಅದರ ದಾಖಲೆಗಳನ್ನು ಸ್ಮಾರ್ಟ್ ಫೋನಿನಿಂದ ನೋಡಬಹುದು. ಅದಕ್ಕೆ ತಕ್ಕಂತಹ ಬದಲಾವಣೆ ಗಳನ್ನೂ  ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ಉಷ್ಣಾಂಶ ಹೆಚ್ಚಾಗಿದ್ದರೆ ನೀರುಣಿಸುವುದು, ಪಾಲಿಹೌಸ್ ನ  ಮೇಲ್ಛಾವಣಿಯನ್ನು ಅಗತ್ಯಕ್ಕೆ ತಕ್ಕಂತೆ ಸರಿಸುವುದು.

ಕೃಷಿ ಅಪ್ಲಿ ಕೇ ಷನ್ ಗಳು ವ್ಯವಹಾರದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಿವೆ. ಇವುಗಳಿಂದ ಜಾಗತಿಕ ಕೃಷಿ, ಉಪಗ್ರಹ ಚಿತ್ರಣ, ದತ್ತಾಂಶ, ವಿಶ್ಲೇಷಣೆ, ತಜ್ಞರ ಸಲಹೆ, ಮೊಬೈಲ್ ಕ್ಯಾಮರಾದಿಂದ ರೋಗಗಳ ನಿರ್ಣಯ ಪಡೆಯಬಹುದಾಗಿದೆ. ಡಿಜಿಟಲ್ ಯುಗದಲ್ಲಿರುವ ಯುವ ರೈತರಿಗೆ ಬೇಸಾಯದ ಮಾಹಿತಿಗಳು ಬೆರಳ ತುದಿಯಲ್ಲಿ ದೊರೆಯುತ್ತವೆ.

1. ಸಣ್ಣ ಹಿಡುವಳಿದಾರರು ಗಣನೀಯ ಪ್ರಮಾಣದ ವೆಚ್ಚವನ್ನು ಭರಿಸಲಾರದೆ ಸಾಂಪ್ರದಾಯಿಕ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಬರುವ ಲಾಭಕ್ಕೆ ಹೆಚ್ಚೇನು ಅಂತರವಿರುವುದಿಲ್ಲ, ಹೀಗಾಗಿ ಮಧ್ಯಮ ವರ್ಗದ ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರಮಾಣವು ಶೇಕಡ ೭೦ ರಷ್ಟಿದ್ದು ಸಮಗ್ರಕೃಷಿ ಮಾಡುವುದು ಸೂಕ್ತ. ಈ ಪದ್ಧತಿಯಲ್ಲಿ, ಒಂದರಲ್ಲಿ ನಷ್ಟ ಹೊಂದಿದರೂ ಆಧಾರಕ್ಕೆ ಇನ್ನೊಂದಿರುತ್ತದೆ. ಪೂರಕವಾದ ಉಪಕಸುಬಿನಿಂದ ವರ್ಷವಿಡೀ ಆದಾಯ ಬರುತ್ತಿರುತ್ತದೆ. ಕೃಷಿತ್ಯಾಜ್ಯಗಳನ್ನು ಬಳಸಿ ಎರೆಹುಳು ಗೊಬ್ಬರ, ಕಾಂಪೋಸ್ಟ್ ತಯಾರಿಸಿಕೊಂಡು ತಮ್ಮ ಜಮೀನಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಸಾವಯವ ರೂಪದಲ್ಲಿ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನೂ ಕಡಿತಗೊಳಿಸಬಹುದು.

2. ಫಸಲು ಚೆನ್ನಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆಗೆ ನೇರವಾಗಿ ರೈತ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.

ಕೃಷಿಭೂಮಿ ಇರುವ ಪ್ರದೇಶ, ಮಾರಬೇಕಾಗುವ ಉತ್ಪನ್ನ, ಅದರ ಪ್ರಮಾಣ ಮತ್ತು ಬೆಳೆಯುವ ರೈತನ ಸ್ಥಿತಿಗತಿ ಮುಂತಾದ ಅಂಶಗಳನ್ನು ಆಧರಿಸಿ ರೈತರಿಂದ ನೇರವಾಗಿ ಗ್ರಹಕರಿಗೆ ಉತ್ಪನ್ನವನ್ನು ತಲುಪಿಸುವ ಪರಿಕಲ್ಪನೆಯಲ್ಲಿ ವಿವಿಧ ವಿಧಗಳಿವೆ. ಅವುಗಳೆಂದರೆ ರಸ್ತೆಬದಿಯ ಅಂಗಡಿಗಳು, ರಸ್ತೆಬದಿಯ ಮಾರುಕಟ್ಟೆ, ರೈತ ಮಾರುಕಟ್ಟೆ, ಗ್ರಾಹಕರೇ ಫಸಲನ್ನು ಆರಿಸಿಕೊಳ್ಳುವುದು. ಇನ್ನಿತರ ಆಯ್ಕೆಗಳೆಂದರೆ ಇ- ಮಾರುಕಟ್ಟೆ, ನೇರವಾಗಿ ರೆಸ್ಟೋರೆಂಟ್, ಹೋಟೆಲ್ ಉದ್ಯಮಗಳಿಗೆ ಮಾರುವುದು, ಕೃಷಿ ಅರಣ್ಯ ಅಥವಾ ತೋಟಗಾರಿಕೆ ಬೆಳೆಗಳನ್ನು ಫಸಲಿನ ಕಟಾವಿಗೆ ಗುತ್ತಿಗೆಕೊಡುವುದು.

ರಸ್ತೆಬದಿಯ ಅಂಗಡಿ

ಕೃಷಿಕ ತಾನು ಬೆಳೆದ ಉತ್ಪನ್ನಗಳನ್ನು ತನ್ನ ಕೃಷಿ ಭೂಮಿಯಲ್ಲೇ ಗ್ರಾಹಕರಿಗೆ ಮಾರುವುದು. ಇದರಿಂದ ಮಾರುಕಟ್ಟೆಗೆ ಸಾಗಾಣಿಕಾ ವೆಚ್ಚವನ್ನು ಕಡಿತಗಳಿಸಬಹುದಲ್ಲದೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ.

ರಸ್ತೆಬದಿಯ ಮಾರುಕಟ್ಟೆ

ಒಂದು ಪ್ರದೇಶದ ರೈತ ಸಮುದಾಯ ಒಂದುಗೂಡಿ, ತಾವು ವರ್ಷವಿಡೀ ಬೆಳೆಯುವ ವಿವಿಧ ಬೆಳೆಗಳನ್ನು, ಋತುಕಾಲಿಕ ಹಣ್ಣು ಮತ್ತು ತರಕಾರಿಗಳನ್ನು ಒಂದೆಡೆ ಒಟ್ಟುಗೂಡಿಸಿ, ಗ್ರಾಹಕರಿಗೆ ಹತ್ತಿರದ ಜಾಗದಲ್ಲಿ ರಸ್ತೆಬದಿಯ ಮಾರುಕಟ್ಟೆ ಸೌಲಭ್ಯ ರೂಪಿಸುವುದರಿಂದ, ಹೆಚ್ಚಿನ ಆದಾಯಗಳಿಸುವುದರೊಂದಿಗೆ ಕುಟುಂಬ ಸದ್ಯಸ್ಯರನ್ನೂ ತೊಡಗಿಸಿಕೊಂಡು ಉದ್ಯೋಗಸ್ಥರನ್ನಾಗಿಸಬಹುದು.

ರೈತ ಮಾರುಕಟ್ಟೆ

ರೈತ ಮಾರುಕಟ್ಟೆ ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕರ ಸಂಸ್ಥೆ ಅಥವಾ ಪುರಸಭೆಯ ಮುಖಾಂತರ ರೈತರು ಅಥವಾ ಮಾರಾಟಗಾರರು ಒಪ್ಪಿದ ಮಾರ್ಗಸೂಚಿ, ನಿಯಮ ಮತ್ತು ಕಾಯ್ದೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸೌಲಭ್ಯವು ಪ್ರತ್ಯೇಕ ಮಳಿಗೆಗಳನ್ನೊಳಗೊಂಡ, ವಿಶಾಲವಾದ ಸ್ಥಿರ ಮಾರುಕಟ್ಟೆಯಿಂದ ಹಿಡಿದು ರಸ್ತೆಬದಿಯ ಗಾಡಿ ವ್ಯಾಪಾರದವರೆಗೂ ವ್ಯಾಪಿಸಿದೆ. ಅಗತ್ಯ ಉತ್ಪನ್ನಗಳನ್ನು ಕ್ರೋಢೀಕರಿಸಿ ಒಂದೆಡೆ ಮಾರುವುದರಿಂದ ಗ್ರಾಹಕರನ್ನು ಸೆಳೆಯುವುದರೊಟ್ಟಿಗೆ, ಮಧ್ಯವರ್ತಿಗಳ ಹಸ್ತಕ್ಷೇಪ ತಗ್ಗಿಸಿ ಹೆಚ್ಚಿನ ಬೆಲೆ ಸಿಗುತ್ತದೆ.

ಮಾರುಕಟ್ಟೆ

ವಿದ್ಯಾವಂತ ಯುವಜನಾಂಗ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದಿದ್ದಾರೆ.  ಇತ್ತೀಚೆಗೆ ಇ- ಮಾರ್ಕೆಟಿಂಗ್ ಅಥವಾ ಆನ್ಲೈನ್ ಮಾರ್ಕೆಟಿಂಗ್ ಹೆಚ್ಚು ಚಾಲ್ತಿಗೆ ಬರುತ್ತಿದೆ. ಕೃಷಿ ಕ್ಷೇತ್ರದಲ್ಲೂ ಈ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಯುವ ಕೃಷಿಕರು ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿಪಡಿಸಿ ಇಲ್ಲವೇ ಇತರ ವೆಬ್ಸೈಟ್ ಗಳ ಸಹಾಯದಿಂದ ತಾವು ಬೆಳೆದ ಪದಾರ್ಥಗಳನ್ನು ಹೊಲದಲ್ಲೇ ಸಂಸ್ಕರಿಸಿ, ಪ್ಯಾಕಿಂಗ್ ಮಾಡಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದರಿಂದ ಲಾಭಗಳಿಸುವುದರೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗವನ್ನೂ ಸೃಷ್ಟಿಸಬಹುದು. ಅತ್ಯಂತ ಅಗತ್ಯವಿರುವ, ದಿನಬಳಕೆಯ ಹೂವು, ಹಣ್ಣು, ತರಕಾರಿ, ದಿನಸಿ ಪದಾರ್ಥಗಳಿಗೆ ಈ ವ್ಯವಸ್ಥೆ ಉತ್ತಮವಾಗಬಲ್ಲದು.

ರೆಸ್ಟೋರೆಂಟ್, ಹೋಟೆಲ್ ಉದ್ಯಮ, ಶಾಲೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ನೇರವಾಗಿ ತರಕಾರಿ, ಇನ್ನಿತರ ಉತ್ಪನ್ನಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಭಾಗವಹಿಸುವಿಕೆಯನ್ನು ತಡೆದು, ಸಗಟು ವ್ಯಾಪಾರಿತನವನ್ನೂ ನಿರ್ವಹಿಸಬಹುದು. ಆದರೆ ಇದಕ್ಕೆ ಕಾರ್ಯಕ್ಷಮತೆಯುಳ್ಳ ಜನರ ಅವಶ್ಯಕತೆ ಇರುತ್ತದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಇ-ಮಾರುಕಟ್ಟೆ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕದ ಮಾದರಿಯನ್ನು ಈಗ ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಲು ಮುಂದಾಗುತ್ತಿದೆ.

Capture(ವೆಬ್‍ಸೈಟ್ : ಕೃಷಿ ಮಾರಾಟ ವಾಹಿನಿ)

ಒಂದು ರೈತ ಕುಟುಂಬದ ಹೆಣ್ಣುಮಗಳಾಗಿ ನಾನು ಕಂಡಂತೆ ಸರ್ಕಾರದ ಕೃಷಿ ಯೋಜನೆಗಳು ಕೇವಲ ಕಡತಗಳಲ್ಲಿ ಮುದ್ರಿತಗೊಂಡು ಮುಚ್ಚಿಡುವಂತಾಗಿವೆ. ಬೆಳೆವಿಮೆಯಂತಹ ಯೋಜನೆಗಳಿಂದ  ವಿಮಾ ಕಂಪನಿಗಳು ಬೊಕ್ಕಸ ತುಂಬಿಸಿಕೊಳ್ಳುತ್ತವೆಯಷ್ಟೇ ಎಂಬುದು ರೈತರ ಅಭಿಪ್ರಾಯ ಹಾಗೂ ಎಷ್ಟೋ ಅಗತ್ಯವಿರುವ ಯೋಜನೆಗಳು, ಕಾರ್ಯನೀತಿಗಳು ರೈತರನ್ನು ತಲುಪುತ್ತಿಲ್ಲ, ಸಕ್ರಿಯವಾಗಿಲ್ಲ ಎಂಬುದು ವಿಷಾದನೀಯ.

ಬೆಳೆಗೆ ಸೂಕ್ತ ಬೆಲೆ ದೊರೆಯಬೇಕು, ಅಧಿಕ ಉತ್ಪಾದನೆಯಿಂದ ಠೇವಣಿ ಕಳೆದುಕೊಳ್ಳುವ ಸ್ಥಿತಿಯುಂಟಾಗಬಾರದೆಂದರೆ, ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ನಿಗದಿಯಾಗಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವುದು ಕೇವಲ ಪರಿಕಲ್ಪನೆಗಳಾಗದೆ, ಕಾರ್ಯರೂಪ ಪಡೆಯಬೇಕಾಗಿದೆ. ದಲ್ಲಾಳಿಗಳ ಹಾವಳಿ ನಿಯತ್ರಣಗೊಂಡರೆ ಪೂರ್ಣಪ್ರಮಾಣದ ಹಣ ಬೆಳೆಗಾರರ ಕೈಸೇರುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಸ್ವಗತ.