ಎ.ಸಿ.(ಏರ್ ಕಂಡಿಷನರ್) ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಇಂದು ಎ.ಸಿ. ಸರ್ವೇ ಸಾಮಾನ್ಯವಾಗಿ ಎಲ್ಲಕಡೆ ಕಂಡುಬರುವ ಉಪಕರಣ. ನಾವಿರುವ ಕೋಣೆಯ ಒಳಗಿನ ಬಿಸುಪನ್ನು ಹೊರಗಟ್ಟಿ ತಂಪಾದ ಗಾಳಿ ಒದಗಿಸುವುದು ಇದರ ಕೆಲಸ. ಭಾರತದಂತ ಹೆಚ್ಚು ಬಿಸುಪಿನ ದೇಶಗಳಲ್ಲಂತೂ ಬೇಸಿಗೆಯಲ್ಲಿ ಎ.ಸಿ.ಯಿರದೇ ಎಷ್ಟೋ ಕಚೇರಿ, ಹೋಟೆಲ್, ಸಿನಿಮಾ ಮಂದಿರ, ಬ್ಯಾಂಕ್‌ಗಳು ಕೆಲಸ ಮಾಡಲಾರದಷ್ಟು ಇವುಗಳ ಬೇಡಿಕೆ. ತಂಪುಗಾಳಿ ನೀಡಿ ಸೆಕೆಯ ವಾತಾವರಣಕ್ಕೆ ಕಡಿವಾಣ ಹಾಕುವ ಎ.ಸಿ.ಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ ಬನ್ನಿ.

ಎ.ಸಿ. ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು, ಅದರ ಪ್ರಮುಖ ಬಿಡಿಭಾಗಗಳು ಯಾವುವೆಂದು ಅರಿಯೋಣ. ಯಾವುದೇ ಎ.ಸಿ.ಯಲ್ಲಿ ಕೆಳಕಂಡ ಭಾಗಗಳು ಪ್ರಮುಖವಾಗಿರುತ್ತವೆ:

ಒತ್ತುಕ(Compressor)

ಇಂಗಿಸುಕ(Condenser)

ಸೋಸುಕ(Filter)

ಬೀಸಣಿಗೆ(Fan)

ತಂಪುಕ(Refrigerant Chemical)

ಸಾಮಾನ್ಯವಾಗಿ ತಂಪುಕ ಒಂದು ಬಿಸುಪನ್ನು ಹೀರುವ ರಾಸಾಯನಿಕವಾಗಿದ್ದು, ಗಾಳಿಯ ರೂಪದಲ್ಲಿ ಎ.ಸಿ.ಯಲ್ಲಿ ಕೂಡಿಟ್ಟಿರುತ್ತಾರೆ.

ಎ.ಸಿ. ಶುರುವಾದ ಮೇಲೆ,ಮೊದಲು ಆವಿಯಾಗಿಸುಕದ(Evaporator) ಬಳಿಯಿರುವ ಬೀಸಣಿಗೆ ಕೋಣೆಯ ಬಿಸಿಗಾಳಿಯನ್ನು ಎಳೆದುಕೊಳ್ಳುತ್ತದೆ. ಈ ಬಿಸುಪಿನ ಗಾಳಿಯಲ್ಲಿರುವ ಕಸ, ಧೂಳನ್ನು ಸೋಸುಕ ಬೇರ್ಪಡಿಸಿ, ಆವಿಯಾಗಿಸುಕದ ಸುರುಳಿಗಳ(Evaporator Coils) ಮೇಲೆ ಹರಿಸುತ್ತದೆ. ಆಗ ತಂಪಾದ ಈ ಸುರುಳಿಗಳು, ಬಿಸಿ ಗಾಳಿಯಲ್ಲಿರುವ ಬಿಸುಪನ್ನು ಕಡಿಮೆಯಾಗಿಸಿ ಬೀಸಣಿಗೆ ಮೂಲಕ ಕೋಣೆಗೆ ತಂಪು ಗಾಳಿಯನ್ನು ಹೊರಸೂಸುತ್ತವೆ. ಇದೆಲ್ಲ ಕೋಣೆಯಲ್ಲಿರುವ ಎ.ಸಿ.ಯ ಮುಂಭಾಗದಲ್ಲಿ ನಡೆಯುತ್ತದೆ. ಕೋಣೆಯ ಹಿಂದಿರುವ ಎ.ಸಿ.ಯ ಹಿಂಭಾಗದಲ್ಲಿ,  ತಂಪುಕವು ಒತ್ತುಕದ ಮೂಲಕ ಸಾಗಿ, ಹೆಚ್ಚಿನ ಒತ್ತಡ ಮತ್ತು ಬಿಸುಪಿಗೇರುತ್ತದೆ. ಹೆಚ್ಚು ಬಿಸಿಯಾಗಿರುವ  ತಂಪುಕ ಇಂಗಿಸುಕದ ಮೂಲಕ ಸಾಗಿದಾಗ ಅಲ್ಲಿನ ವಾತಾವರಣದ ಕಡಿಮೆ ಬಿಸುಪಿನ ಗಾಳಿ ಮತ್ತು ತಂಪುಕದ ನಡುವೆ ಬಿಸುಪು ವಿನಿಮಯವಾಗಿ(Heat Exchange), ಬಿಸಿಯಾಗಿರುವ ತಂಪುಕ ತನ್ನ ಬಿಸುಪನ್ನು ಕಳೆದುಕೊಳ್ಳುತ್ತದೆ, ತಂಪುಕದ ಬಿಸುಪು ಪಡೆದ ಅಲ್ಲಿನ ಗಾಳಿಯನ್ನು ಇಂಗಿಸುಕದ ಹಿಂದಿರುವ ಬೀಸಣಿಗೆ ಹೊರಹಾಕುತ್ತದೆ. ಮುಂದೆ, ತಂಪುಕ ಹಿಗ್ಗುವ ತೆರಪಿನ(Expansion Valve) ಮೂಲಕ ಸಾಗಿದಾಗ ದ್ರವರೂಪದಿಂದ ತಂಪಾದ ಗಾಳಿ ರೂಪಕ್ಕೆ ಮಾರ್ಪಾಡುಗೊಳ್ಳುತ್ತೆ. ಇದೇ ತಂಪಾದ ತಂಪುಕ ಗಾಳಿ ಆವಿಯಾಗಿಸುಕದ ಮೇಲೆ ಸಾಗಿದಾಗ, ಅದೇ ಪ್ರಕ್ರಿಯೆ ಮರುಕಳಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎ.ಸಿ.ಯು, ಯಾವುದೇ ಹೊರಗಿನ ತಾಜಾ ಗಾಳಿಯನ್ನು ತನ್ನೊಳಗೆಳೆದುಕೊಂಡು  ಕೋಣೆ/ ಕೊಠಡಿಗಳನ್ನು ತಂಪಾಗಿಸುವುದಿಲ್ಲ. ಬದಲಿಗೆ,ಕೋಣೆಯಲ್ಲಿರುವ ಬಿಸಿಗಾಳಿಯನ್ನೇ ಒಳಗೆಳೆದುಕೊಂಡು ತಂಪಾಗಿಸಿ ಮತ್ತೆ ಕೋಣೆಗೆ ಸೂಸುತ್ತದೆ. ಇದನ್ನು ಬಿಸಿಗಾಳಿಯ ಮರುಬಳಕೆ ಎನ್ನಬಹುದು. ಈ ಬಿಸುಪಿನ ವಿನಿಮಯ ಪ್ರಕ್ರಿಯೆಯಲ್ಲಿ ಕೋಣೆಯ ಗಾಳಿಯಲ್ಲಿನ ತೇವಾಂಶವನ್ನು ಹೀರುವ ಕೆಲಸವೂ ನಡೆದಿರುತ್ತದೆ.

ಮನೆಗಳಲ್ಲಿ ಕಂಡುಬರುವ ಎ.ಸಿ.ಯ ಬಿಡಿಭಾಗಗಳು

ಎ.ಸಿ.ಗಳಲ್ಲಿ ಪ್ರಮುಖವಾಗಿ ಎರಡು ಬಗೆ. ನಡುನಟ್ಟ ಎ.ಸಿ.(Centralized AC) ಒಂದು ಬಗೆಯಾದರೆ, ಭಾಗವಾದ ಅಂದರೆ ಸ್ಪ್ಲಿಟ್ ಎ.ಸಿ.(Split AC) ಇನ್ನೊಂದು ಪ್ರಮುಖ ಬಗೆಯಾಗಿದೆ. ಒಂದೆಡೆ ಕೇಂದ್ರಿತ ಎ.ಸಿ.ಗಳು ದೊಡ್ಡ ಕಚೇರಿ, ಬ್ಯಾಂಕ್, ಮುಂತಾದೆಡೆ ಜೋಡಿಸಲು ಮತ್ತು ಬಳಸಲು ಸೂಕ್ತ. ದೊಡ್ಡ ಕಚೇರಿ, ಬ್ಯಾಂಕ್, ಆಸ್ಪತ್ರೆಯ ಗ್ಯಾರೇಜ್, ತಳಮಹಡಿಯಲ್ಲೋ ಎ.ಸಿ.ಯ ಮುಂಭಾಗವನ್ನು ಅಳವಡಿಸಿ, ಕೊಳವೆಗಳ(Ducts) ಮೂಲಕ ತಂಪಾದ ಗಾಳಿಯನ್ನು ಬೇಕಾದ ಹಲವಾರು ಕೋಣೆಗಳಿಗೆ ಸಾಗುವಂತೆ ಏರ್ಪಾಟು ಮಾಡಿರುತ್ತಾರೆ. ಇಂತಹ ಎ.ಸಿ.ಗಳು ಕಡಿಮೆ ಅಳವಡಿಕೆಯ ವೆಚ್ಚ, ಒಂದೆಡೆಯಿಂದ ಎಲ್ಲ ಕೋಣೆಗಳ ಗಾಳಿಯ ನಿಯಂತ್ರಣ ಮತ್ತು ಎಲ್ಲ ಕೋಣೆಗಳು ಒಂದೇ ಗುಣಮಟ್ಟದ ಗಾಳಿ ಒದಗಿಸುವ ಅನುಕೂಲಗಳನ್ನು ಹೊಂದಿವೆ. ಕಚೇರಿ, ಆಸ್ಪತ್ರೆ ಮುಂತಾದೆಡೆ ನಡುನಟ್ಟ ಎ.ಸಿ. ಒದಗಿಸಲು ಕೊಳವೆಗಳನ್ನು ಜೋಡಿಸಿಕೊಳ್ಳಬೇಕು, ಇದಕ್ಕೆ ಹೆಚ್ಚಿನ ವೆಚ್ಚ ಮತ್ತು ಜಾಗ ತಗುಲುತ್ತದೆ. ಇಂತಹ ಎ.ಸಿ.ಗಳ ಅಳವುತನವೂ ಕಡಿಮೆಯಿರುವುದರಿಂದ ಹೆಚ್ಚಿನ ವಿದ್ಯುತ್ ಬಿಲ್‌ಗೆ ಹಣ ನೀಡಬೇಕಾಗುತ್ತದೆ.

ಚಿಕ್ಕದಾದ ಸ್ಪ್ಲಿಟ್ ಎ.ಸಿ.ಗಳನ್ನು ಮನೆಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಮನೆಯ ಮಲಗುವ ಕೋಣೆಗೆ ಮಾತ್ರವೇ ಎ.ಸಿ. ಬೇಕಿದ್ದರೆ, ಈ ಚಿಕ್ಕದಾದ ಎ.ಸಿ.ಗಳು ಹೆಚ್ಚು ತಕ್ಕುದಾಗಿವೆ. ಹೆಚ್ಚು ಕಸುವಿನ ಅಳವುತನ(Energy Efficiency), ಅಳವಡಿಸಲು ಕಡಿಮೆ ಜಾಗ, ನಡುನಟ್ಟ ಎ.ಸಿ.ಗಳಿಗಿಂತ ಕಡಿಮೆ ವಿದ್ಯುತ ಬಿಲ್ ಇವೆಲ್ಲ ಅನುಕೂಲಗಳನ್ನು ಹೊಂದಿದೆ. ಮನೆಯೊಂದರಲ್ಲಿ ಕೋಣೆಗೊಂದರಂತೆ ಈ ಸ್ಪ್ಲಿಟ್ ಎ.ಸಿ. ಅಳವಡಿಸಿದರೆ, ಅಳವಡಿಕೆ ವೆಚ್ಚ ಹೆಚ್ಚಾಗುತ್ತದೆ. ಪ್ರತಿಕೋಣೆಯಲೂ ಎ.ಸಿ.ಯ ಮುಂಭಾಗ ಇರಲೇಬೇಕು, ಇದರಿಂದ ಗೋಡೆಗಳ/ ಮನೆಯ ಒಳಾಂಗಣದ ಅಂದ ಹಾಳಗೆಡುವುತ್ತವೆ. ನಡುನಟ್ಟ ಅಳವಡಿಕೆಯ ಎ.ಸಿ.ಗಳಲ್ಲಿ ಕಂಡುಬರುವ ಸೋಸುಕಗಳು ಹೆಚ್ಚಿನ ಕಸ ಕಡ್ಡಿ ಧೂಳು ಬೇರ್ಪಡಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವು ಸ್ಪ್ಲಿಟ್ ಎ.ಸಿ.ಗಿಂತ ಒಳ್ಳೆಯ ಗುಣಮಟ್ಟದ ಗಾಳಿಯನ್ನು ಹೊರಸೂಸುತ್ತವೆ.

 

ಮಾಹಿತಿ ಮತ್ತು ತಿಟ್ಟ ಸೆಲೆ:

A Guide to How a Split Air Conditioner Works


https://point-s.ca/en/blog-and-advices/how-does-your-cars-air-conditioning-work
https://www.carrier.com/residential/en/us/products/air-conditioners/how-do-air-conditioners-work/

How Does an Air Conditioner Work?

ಬಿತ್ತಿದ ಬೀಜ ಮೊಳಕೆ ಒಡೆದೀತು ಹೇಗೆ?

ರತೀಶ ರತ್ನಾಕರ.

ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ ಮೊಳಕೆಯೊಡೆದು ಗಿಡವಾಗ ತೊಡಗುತ್ತದೆ. ತಾನಾಗಿಯೇ ಆಗುವ ಈ ಕೆಲಸ ಹಲವು ಹಂತಗಳಲ್ಲಿ ನಡೆಯುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೀಜವು ಹೇಗೆ ಮೊಳಕೆಯೊಡೆಯುತ್ತದೆ ಎಂದು ಅರಿಯುವ ಮೊದಲು ಬೀಜದ ಏರ್ಪಾಟಿನ (structure) ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ಬೀಜದಲ್ಲಿ ಈ ಕೆಳಗಿನ ಮೂರು ಭಾಗಗಳಿರುತ್ತವೆ.

ಬಸಿರ ಪೊರೆಕ (Endosperm) : ಬೀಜದ ಹೆಚ್ಚಿನ ಭಾಗವನ್ನು ಇದು ಪಡೆದುಕೊಂಡಿರುತ್ತದೆ. ಬೀಜದ ಬಸಿರಿಗೆ ಬೇಕಾಗುವ ಊಟವನ್ನು ಮತ್ತು ಆರಯ್ಕೆಯನ್ನು ಗಂಜಿಯ ರೂಪದಲ್ಲಿ ಈ ಬಸಿರ ಪೊರೆಕ ನೀಡುತ್ತದೆ, ಅಲ್ಲದೇ ಇದರಲ್ಲಿ ಎಣ್ಣೆ ಹಾಗು ಮುನ್ನು (protein) ಅಂಶಗಳು ಇರುತ್ತದೆ. ಇದು ಬಸಿರಿಗೆ ಬೇಕಾಗುವ ಆರಯ್ಕೆಯನ್ನು ಮಾಡುವುದಲ್ಲದೇ ಅದರ ಊಟವನ್ನು ಕೂಡಿಡುವ ಕೆಲಸವನ್ನು ಮಾಡುತ್ತದೆ. ಬೀಜದ ಹೆಚ್ಚಿನ ಪಾಲು ಬಸಿರ ಪೊರೆಕದಿಂದ ಕೂಡಿರುತ್ತದೆ.

ಬಸಿರು (Embryo): ಬೀಜದ ಬಸಿರು ಇದಾಗಿದ್ದು ಮುಂದೆ ಬೀಜವು ಮೊಳಕೆಯೊಡೆದು ಬೇರು, ಕಾಂಡ ಹಾಗು ಎಲೆಗಳಾಗಲು ಬೇಕಾಗುವಂತಹ ಗೂಡುಕಟ್ಟುಗಳನ್ನು (tissue) ಇದು ಹೊಂದಿರುತ್ತದೆ. ಜೊತೆಗೆ ಮೊಳಕೆ ಎಲೆಯ (cotyledon) ಗೂಡುಕಟ್ಟುಗಳು ಕೂಡ ಇರುತ್ತವೆ. ಇವು ಬೀಜದ ಬಸಿರಿಗೆ ಬೇಕಾಗಿರುವ ಊಟವನ್ನು ಪಕ್ಕದಲ್ಲಿರುವ ಬಸಿರ ಪೊರೆಕದಿಂದ ಬಸಿರಿಗೆ ಸಾಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ, ಬೀಜವು ಬಿಡುವ ಮೊದಲ ಎಲೆಯನ್ನು ಕಾಪಾಡಲು ಬೇಕಾಗಿರುವ ಕಾಪು (shield) ಈ ಮೊಳಕೆ ಎಲೆಯಲ್ಲಿ ಇರುತ್ತದೆ. ಬೀಜವು ಒಂದೆಲೆ ಗಿಡವಾಗಬೇಕೋ ಇಲ್ಲವೇ ಎರಡಲೆ ಗಿಡವಾಗಬೇಕೋ ಎಂಬುದು ಈ ಮೊಳಕೆ ಎಲೆಯ ಗೂಡುಕಟ್ಟುಗಳಲ್ಲೇ ಇರುತ್ತದೆ.

ಸಿಪ್ಪೆ: ಬಸಿರು ಹಾಗು ಬಸಿರ ಪೊರೆಕವನ್ನು ಸುತ್ತಿಕೊಂಡು ಎರವಾಗದಂತೆ ಕಾಪಾಡುವುದೇ ಸಿಪ್ಪೆ. ಸಿಪ್ಪೆಯು ಕೆಲವು ಬೀಜಗಳಲ್ಲಿ ತೆಳುವಾಗಿ (ಕಡಲೇ ಬೀಜದಲ್ಲಿರುವ ಹಾಗೆ), ಇನ್ನು ಕೆಲವು ಬೀಜಗಳಲ್ಲಿ ದಪ್ಪನಾಗಿ (ತೆಂಗಿನಕಾಯಿಯಲ್ಲಿರುವ ಹಾಗೆ) ಇರುತ್ತದೆ. ಹೊರಗಿನ ಹಾನಿಗಳಿಂದ ಬಸಿರನ್ನು ಕಾಪಾಡುವುದೇ ಇದರ ಮುಖ್ಯ ಕೆಲಸವಾಗಿರುತ್ತದೆ.

ಒಂದು ಬೀಜವು ಮೊಳಕೆಯೊಡೆಯಲು ಅದಕ್ಕೆ ತಕ್ಕನಾದ ಉಸಿರುಗಾಳಿ (oxygen), ನೀರು ಹಾಗು ಕಾವು ಬೇಕಾಗುತ್ತದೆ. ಬೀಜವು ಯಾವ ತಳಿ ಎಂಬುದರ ಮೇಲೆ ಬೇಕಾಗಿರುವ ಗಾಳಿ, ನೀರು ಮತ್ತು ಬಿಸುಪು ತೀರ್ಮಾನವಾಗುತ್ತದೆ. ಕೆಲವು ಬಗೆಯ ಬೀಜಗಳು ಮೊಳಕೆ ಒಡೆಯುವಲ್ಲಿ ಬೆಳಕು ಕೂಡ ತನ್ನ ಪಾತ್ರ ವಹಿಸುತ್ತದೆ. ಒಂದು ಬೀಜವು ತಾನು ಮೊಳಕೆಯೊಡೆಯಲು ಬೇಕಾದ ನೀರು, ಉಸಿರುಗಾಳಿ ಮತ್ತು ಬಿಸುಪಿಗೆ ತೆರೆದುಕೊಳ್ಳುವವರೆಗೂ ಒರಗಿದ (dormant) ಸ್ಥಿತಿಯಲ್ಲಿ ಇರುತ್ತದೆ. ಅದರ ಒಳಗಿರುವ ಬಸಿರಿಗೆ ಬಸಿರ ಪೊರೆಕ ಊಟ ಒದಗಿಸುತ್ತಿರುತ್ತದೆ, ಇದನ್ನು ಬಿಟ್ಟರೆ ಅದರಲ್ಲಿ ಯಾವ ಬೆಳವಣಿಗೆಯು ಆಗುತ್ತಿರುವುದಿಲ್ಲ. ಒಮ್ಮೆ ಬೇಕಾದ ನೀರು, ಉಸಿರುಗಾಳಿ ಹಾಗು ಬಿಸುಪಿಗೆ ತೆರೆದುಕೊಂಡಾಗ ಅದು ಮೊಳಕೆ ಒಡೆಯುವ ಕೆಲಸವನ್ನು ಆರಂಭಿಸುತ್ತದೆ.

ಬೀಜವು ಮೊಳಕೆ ಒಡೆಯಲು ಬೇಕಾದ ನೀರಿಗೆ ತಾಕಿದಾಗ ಹೊರಗಿನ ನೀರು ಬೀಜದ ಸಿಪ್ಪೆಯೊಳಗೆ ಒಳಹೀರಿಕೆಯ (imbibition) ಮೂಲಕ ಬರುತ್ತದೆ. ಸಿಪ್ಪೆಯೊಳಗೆ ಬಂದ ನೀರನ್ನು ಬಳಸಿಕೊಂಡು ಬಸಿರಿನಲ್ಲಿರುವ ಸೂಲುಗೂಡುಗಳು (cells) ತಮ್ಮ ತರುಮಾರ್ಪುವ (metabolism) ಕೆಲಸವನ್ನು ಹೆಚ್ಚುಗೊಳಿಸಿ ಹಿಗ್ಗಲಾರಂಬಿಸುತ್ತವೆ ಮತ್ತು ಕೆಲವು ಸೂಲುಗೂಡುಗಳು ಒಡೆದು ಹೆಚ್ಚಲಾರಂಬಿಸುತ್ತವೆ. ಬೆಳವಿಕ (auxins) ಮತ್ತು ಇತರೆ ಸುರಿಗೆಗಳು (harmones) ಕೂಡ ಬಸಿರಿನ ಬೆಳವಣಿಗೆಯನ್ನು ಹುರಿದುಂಬಿಸುತ್ತವೆ.

ಬೀಜದ ಒಳಗೆ ಬಂದಿರುವ ನೀರು, ನೀರ‍್ದೊಳೆಗಳನ್ನು (hydrolytic Enzymes) ಚುರುಕುಗೊಳಿಸುತ್ತವೆ ಇವು ಬಸಿರ ಪೊರೆಕದಲ್ಲಿರುವ ಎಣ್ಣೆ, ಮುನ್ನು (protien) ಮತ್ತು ಗಂಜಿಯನ್ನು ಒಡೆದು ಬಸಿರಿನ ತರುಮಾರ್ಪಿಗೆ ನೆರವಾಗುವಂತಹ ರಾಸಾಯನಿಕಗಳನ್ನು ಕೊಡುತ್ತವೆ. ಉಸಿರುಗಾಳಿ ಮತ್ತು ಬಿಸುಪು ಕೂಡ ಬಸಿರಿನ ತರುಮಾರ್ಪಿಗೆ ನೆರವಾಗುತ್ತವೆ. ಇವನ್ನೆಲ್ಲಾ ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುತ್ತಿರುವ ಬಸಿರಿಗೆ ಬೇಕಾಗಿರುವ ಆರಯ್ಕೆಯನ್ನು ಬಸಿರ ಪೊರೆಕ ಕೊಡುತ್ತಿರುತ್ತದೆ. ಮೊಳಕೆಯು ಒಡೆದು ಎಲೆಯನ್ನು ಬಿಟ್ಟು ನೇಸರನ ಬೆಳಕಿನ ನೆರವಿನಿಂದ ‘ಬೆಳಕಿನ ಒಂದುಗೆ’ (photosynthesis) ನಡೆಸಿ ತನ್ನ ಊಟವನ್ನು ತಾನೇ ಸಿದ್ದ ಮಾಡಿಕೊಳ್ಳುವವರೆಗೂ ಈ ಬಸಿರ ಪೊರೆಕ ನೋಡಿಕೊಳ್ಳುತ್ತಿರುತ್ತದೆ.

ಸಿಪ್ಪೆಯ ಒಳಗೆ ಬಸಿರು ಬೆಳೆಯುತ್ತಿದ್ದಂತೆ ಒಳಗಿನ ಒತ್ತಡ ಹೆಚ್ಚಾಗಿ ಸಿಪ್ಪೆಯು ಒಡೆದು ಬಿಡುತ್ತದೆ. ಸಿಪ್ಪೆಯನ್ನು ಒಡೆದ ಬಸಿರು ಮೊದಲು ತಾಯಿಬೇರಾಗಿ (radicle) ಹೊರಬರುತ್ತದೆ. ಈ ತಾಯಿಬೇರು ಸುತ್ತಲಿನಲ್ಲಿರುವ ಮಣ್ಣನ್ನು ಸೀಳಿಕೊಂಡು ಬೆಳೆಯತೊಡಗುತ್ತದೆ. ಮಣ್ಣಿನಲ್ಲಿರುವ ನೀರು, ಉಸಿರುಗಾಳಿ, ಬಿಸುಪು ಮತ್ತು ಆರಯ್ಕೆಗಳನ್ನು ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತದೆ.

ಒಮ್ಮೆ ತಾಯಿಬೇರಿನ ಬೆಳವಣಿಗೆ ಗಟ್ಟಿಗೊಂಡಮೇಲೆ ಎಳೆಗರಿಯ(plumule) ಬೆಳವಣಿಗೆ ಶುರುವಾಗುತ್ತದೆ. ಎಳೆಗರಿಯು ಮಣ್ಣಿನ ಒಳಗಿನಿಂದ ನೇಸರನ ಬೆಳಕನ್ನು ಹುಡುಕಿಕೊಂಡು ನೆಲದ ಮೇಲ್ಭಾಗಕ್ಕೆ ಬರುತ್ತದೆ. ಹಲವು ಬಗೆಯ ಮೊಳಕೆಗಳಲ್ಲಿ ಎಳೆಗರಿಯನ್ನು ಕಾಯಲು ಬೀಜದ ಸಿಪ್ಪೆಯ ಭಾಗಗಳು ಅಂಟಿಕೊಂಡಿರುತ್ತದೆ. ಎಳೆಗರಿಯು ಬೆಳೆದು ಮೊದಲ ಮೊಳಕೆ ಎಲೆಗಳನ್ನು (Cotyledons) ಬಿಡುತ್ತದೆ ಆಗ ಈ ಸಿಪ್ಪೆಯ ಬಾಗಗಳು ಉದುರಿ ಬೀಳುತ್ತವೆ. ಈ ಎಲೆಗಳು ನೇಸರನ ಬೆಳಕಿನ ನೆರವಿನಿಂದ ತಮ್ಮ ಊಟವನ್ನು ಸಿದ್ದಮಾಡಲಾರಂಬಿಸುತ್ತವೆ. ಈ ಹೊತ್ತಿನಲ್ಲಿ ತಾಯಿಬೇರು ಕೂಡ ಕವಲೊಡೆದು ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ಮುಂದೆ ಮೊಳಕೆಯೊಡೆದ ಬೀಜದ ಕಾಂಡ ಹಾಗು ಎಲೆಗಳು ಬಿಟ್ಟು ಬೆಳೆಯುತ್ತದೆ.

ಹೀಗೆ ಒಂದು ಬೀಜವು ಮಣ್ಣಿಗೆ ಸೇರಿ ಮೊಳೆಕೆ ಒಡೆದು ಎಲೆಯಾಗುವವರೆಗೂ ಹಲವು ಹಂತಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ಕೆಲಸದಲ್ಲಿ, ಗಾಳಿ, ನೀರು, ಬಿಸುಪು ಮತ್ತು ಬೆಳಕು ದೊಡ್ಡ ಪಾತ್ರವನ್ನು ವಹಿಸುತ್ತವೆ.

 

(ಮಾಹಿತಿ ಸೆಲೆ :intechopen.comnature.com wikipedia.org), (ಚಿತ್ರ ಸೆಲೆ : commons.wikimedia.org)

ಎಲ್ಲೆ ದಾಟಿದ ವೋಯಜರ್ – 1

ಪ್ರಶಾಂತ ಸೊರಟೂರ.

ಚಿತ್ರ: ವೋಯಜರ್ – 1

12.09.2013, ಅಮೇರಿಕಾ ಕಳುಹಿಸಿದ ಬಾನಬಂಡಿ (space craft) ವೋಯಜರ್–1 ಮೊಟ್ಟಮೊದಲ ಬಾರಿಗೆ ನೇಸರ-ಕೂಟದ (solar system) ಎಲ್ಲೆ ದಾಟುವ ಮೂಲಕ ಮಾನವರು ಮಾಡಿದ ವಸ್ತುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದೂರದಲ್ಲಿರುವ ವಸ್ತು ಅನ್ನುವ ಹೆಗ್ಗಳಿಕೆಯನ್ನು ತನ್ನತಾಗಿಸಿಕೊಂಡಿತು.

ಸೆಪ್ಟೆಂಬರ್ 2023 ಕ್ಕೆ ನೇಸರನಿಂದ ವೋಯಜರ್ – 1 ರ ದೂರ 161 AU ಅಂದರೆ ಸುಮಾರು 24 ಬಿಲಿಯನ್ ಕಿಲೋ ಮೀಟರಗಳಷ್ಟು! ನೇಸರ ಮತ್ತು ನಮ್ಮ ಭೂಮಿಗೆ ಇರುವ ದೂರವನ್ನು 1 ಬಾನಳತೆ ಇಲ್ಲವೇ ಅಸ್ಟ್ರೋನಾಮಿಕಲ್ ಯುನಿಟ್ (Astronomical Unit – AU) ಅಂತ ಕರೆಯುತ್ತಾರೆ. ಅಂದರೆ ನಮ್ಮಿಂದ ನೇಸರಕ್ಕೆ ಇರುವ ದೂರದ ಸರಿಸುಮಾರು 161 ಪಟ್ಟು ಹೆಚ್ಚು ದೂರದಲ್ಲಿ ವೋಯಜರ್ ಈಗ ಸಾಗುತ್ತಿದೆ.

ನೇಸರನ ಸುತ್ತ ಸುತ್ತುವ 8 ಗ್ರಹಗಳು (planets) ಮತ್ತು ಅವುಗಳ ಸ್ಯಾಟಲೈಟ್ ಗಳನ್ನ ಒಳಗೊಂಡ ಏರ್ಪಾಟಿಗೆ ‘ನೇಸರ-ಕೂಟ’ (Solar System) ಅಂತ ಕರೆಯಲಾಗುತ್ತದೆ. ನೇಸರನ ಒಂಬತ್ತನೇ ಗ್ರಹ ಎಂದು ಗುರುತಿಸಲಾಗಿದ್ದ ಪ್ಲೂಟೋವನ್ನು 2006 ರಲ್ಲಿ ಪಟ್ಟಿಯಿಂದ ಹೊರಗಿಡಲಾಯಿತು ಹಾಗಾಗಿ ನೇಸರ ಕೂಟದಲ್ಲಿ ಇದೀಗ 8 ಗ್ರಹಗಳನ್ನಷ್ಟೇ ಎಣಿಸಲಾಗುತ್ತದೆ. ಇವೆಲ್ಲವುಗಳನ್ನು ದಾಟಿಕೊಂಡು ವೋಯಜರ್–1 ಮುನ್ನಡೆಯುತ್ತಿದೆ.

ವೋಯಜರ್ – 1 ಇಂದಿಗೆ ಸಾಗಿದ ದೂರ ಹಾಗು ಬಾನಿನ 3D ನೋಟವನ್ನು ನಾಸಾ ಮಿಂದಾಣನದಲ್ಲಿ ನೋಡಬಹುದು, ಕೆಳಗಿನ ಕೊಂಡಿಯನ್ನು ಒತ್ತಿ.

 ವೋಯಜರ್ – 1 ಸಾಗಿದ ದೂರ

ಸಪ್ಟಂಬರ್ 5, 1977 ರಂದು ಅಮೇರಿಕಾದ ಬಾನರಿಮೆಯ ಕೂಟ ನಾಸಾ (NASA), ನೇಸರಕೂಟದ ಆಚೆಗಿನ ಮಾಹಿತಿಗಳನ್ನು ತಿಳಿದುಕೊಳ್ಳಲು ವೋಯಜರ್–1 (Voyager-1) ಬಾನಬಂಡಿಯನ್ನು ಹಾರಿಸಿತ್ತು. ಬಾನ ತೆರವು (space) ತಲುಪಿದ ಮೇಲೆ 1979 ರಲ್ಲಿ ಗುರುವಿನ ಏರ್ಪಾಟು (Jovian system) ಮತ್ತು 1980 ರಲ್ಲಿ ಶನಿಯ ಏರ್ಪಾಟಿನ (Saturnine system) ಕುರಿತು ಹಲವಾರು ವಿಷಯಗಳನ್ನು ವೋಯಜರ್–1 ತಿಳಿಸಿಕೊಟ್ಟಿತ್ತು.

ವೋಯಜರ್ – 1 ತೆಗೆದ ಗುರು ಮತ್ತು ಶನಿಯ ಚಿತ್ರಗಳು

        

 ವೋಯಜರ್ – ಏರ್ಪಾಟುಗಳು.

ಬಾನಾಡಿರುವಿನಲ್ಲಿ (ಸ್ಪೇಸ್) ದೊರೆಯುವ ಮಾಹಿತಿಗಳನ್ನು ಕಲೆಹಾಕಲು ವೋಯಜರ್–1 ಹಲವು ಬಗೆಯ ಸಲಕರಣೆಗಳನ್ನು ಹೊಂದಿದೆ. ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮೆರಾಗಳ ಏರ್ಪಾಟು, ಸುತ್ತಣದ ಗುಣಗಳನ್ನು ತಿಳಿದುಕೊಳ್ಳಲು ನೆರವಾಗುವು ರೆಡಿಯೋ ಅಲೆಗಳ ಸಲಕರಣೆಗಳು, ಸೆಳೆತದ ಹರವನ್ನು (magnetic field) ಅಳೆಯುವ ಸೆಳೆಯಳಕಗಳು (magnetometers), ಸಲಕರಣೆಗಳನ್ನು ಹಿಡಿತದಲ್ಲಿಡುವ ಕಂಪ್ಯೂಟರ್ ಮುಂತಾದವುಗಳನ್ನು ವೋಯಜರ್ ಒಳಗೊಂಡಿದೆ. ಸಲಕರಣೆಗಳಿಗೆ ಕಸುವು ನೀಡಲು ವೋಯಜರಿನಲ್ಲಿ ಪ್ಲುಟೋನಿಯಮ್-238 ಆಕ್ಸಾಯಡ್ಸನಿಂದ ಮಾಡಿದ ಬ್ಯಾಟರಿಗಳಿವೆ.

ವೋಯಜರ್ – 1 ರ 3D ಚಿತ್ರಣ

ಬಾನಾಚೆಗೆ ಸಾಗುತ್ತಿರುವ ವೋಯಜರ್–1 ಬಾನಬಂಡಿಗೆ ಯಾವುದಾದರೂ (ಯಾರಾದರೂ!) ಜಾಣ್ಮೆ, ತಿಳುವಳಿಕೆ ಹೊಂದಿದ ಜೀವಿಗಳು ಎದುರಾದರೆ ನಮ್ಮ ಕುರಿತು, ನಾವಿರುವ ನೆಲದ ಕುರಿತು ತಿಳಿಸಿಕೊಡಲು ಮೇಲಿನ ಸಲಕರಣೆಗಳ ಜೊತೆಗೆ ಚಿನ್ನದ ಹೊದಿಕೆಯಿರುವ ಅಡಕತಟ್ಟೆಯೊಂದನ್ನು ಇರಿಸಲಾಗಿದೆ. ಈ ಅಡಕತಟ್ಟೆಯಲ್ಲಿ ನೆಲದ ತಿಟ್ಟಗಳು, ಜೀವಿಗಳ ಬದುಕು, ಅರಿಮೆಯ ಹಲವಾರು ವಿಷಯಗಳು, ಮುಂದಾಳುಗಳ ಹಾರಯ್ಕೆಗಳು ಅಡಕಗೊಂಡಿವೆ. ’ನೆಲದ ದನಿಗಳು’ (sounds of earth) ಎಂದು ಹೆಸರಿಟ್ಟಿರುವ ಕಡತದಲ್ಲಿ ತಿಮಿಂಗಲಿನ ಕೂಗಾಟ, ಮಗುವಿನ ಅಳುವು, ಕಡಲ ತೆರೆಗಳ ಅಪ್ಪಳಿಸುವ ದನಿ ಮತ್ತು ಹಲವು ಬಗೆಯ ಇನಿತದ (music) ಕಟ್ಟುಗಳಿವೆ.

1977 ಕ್ಕಿಂತ ಮುಂಚೆಯೇ ಬಾನಿನಲ್ಲಿ ತೇಲಿದ ವೋಯಜರ್–1, ತನಗೊಪ್ಪಿಸಿದ ಕೆಲಸವನ್ನು ಕೊರತೆಯಿಲ್ಲದಂತೆ ಮಾಡಿ ತೋರಿಸಿದೆ. ಇಷ್ಟು ವರುಷಗಳ ಬಳಿಕವೂ, ಅಷ್ಟೊಂದು ದೂರ ಸಾಗಿದರೂ ನಮ್ಮೊಡನೆ ಒಡನಾಡುತ್ತಿರುವ ವೋಯಜರ್, ಅರಿಮೆಯ ಹಿರಿಮೆಯನ್ನು ಎತ್ತಿ ತೋರಿಸುತ್ತಿದೆ.

2025 ಕ್ಕೆ ಬ್ಯಾಟರಿಗಳ ಕಸುವು ಕೊನೆಗೊಳ್ಳುವದರಿಂದ ವೋಯೋಜರ್–1, ಭೂಮಿಯ ಒಡನಾಟವನ್ನು ಕಡಿದುಕೊಳ್ಳುತ್ತ ಕೊನೆಯಿರದ ಬಾನಂಗಳದಲ್ಲಿ ಕಣ್ಮರೆಯಾಗಲಿದೆ.

ಮಾಹಿತಿ ಮತ್ತು ಚಿತ್ರ ಸೆಲೆ: ನಾಸಾ

 

ಬೆಂಕಿ ಆರಿಸುಕ ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಬೆಂಕಿ ಆರಿಸುಕ ಇಂದು ಬಹುತೇಕ ಎಲ್ಲ ಕಡೆ ಕಾಣಸಿಗುತ್ತದೆ. ಮಾಲ್, ಕಚೇರಿ, ಬ್ಯಾಂಕ್, ಬಾನೋಡತಾಣ, ಸಿನೆಮಾ ಮಂದಿರ, ಶಾಲೆ, ಕಾರ್ಖಾನೆ, ಹೀಗೆ ಎಲ್ಲೆಡೆ ಕೆಂಪು ಬಣ್ಣದ ಸಿಲಿಂಡರ್ ಆಕಾರದ ಚಿಕ್ಕ,ದೊಡ್ಡ ಅಳತೆಯ ಬೆಂಕಿ ಆರಿಸುಕವನ್ನು ನಾವುಗಳು ನೋಡಿರುತ್ತೇವೆ. ಬೆಂಕಿ ಹತ್ತಿ ಅವಗಡ ಸಮಯದಲ್ಲಿ ಇವುಗಳು ಬಹಳ ನೆರವಿಗೆ ಬರುತ್ತವೆ. ಆದರೆ ಇವುಗಳು ಹೇಗೆ ಕೆಲಸ ಮಾಡುತ್ತವೆ? ಕಷ್ಟದ ಸಂದರ್ಭಗಳಲ್ಲಿ ಇವುಗಳನ್ನು ಹೇಗೆ ಬಳಸಬೇಕು ಎಂಬುದು ತಿಳಿಯೋಣ ಬನ್ನಿ. 

ಸಾಮಾನ್ಯವಾಗಿ ತಿಳಿದಿರುವಂತೆ, ಬೆಂಕಿ ಹೊತ್ತಿಕೊಳ್ಳಲು ಆಕ್ಸಿಜನ್ ಗಾಳಿ ಮತ್ತು ಉರುವಲು ಬೇಕಾಗುತ್ತದೆ. ಆದರೆ ಕೇವಲ ಆಕ್ಸಿಜನ್ ಗಾಳಿ, ಉರುವಲು ಇದ್ದರೆ ಬೆಂಕಿ ಉರಿಯಲ್ಲ. ಉರುವಲು ತನ್ನ ಉರಿತದ ಕಾವಳತೆ ಮಟ್ಟ(Ignition Temperature) ತಲುಪಿರಬೇಕು. ಒಟ್ಟಾಗಿ ಹೇಳುವುದಾದರೆ ಬೆಂಕಿ ಕಿಡಿಹೊತ್ತಿಕೊಳ್ಳಲು, ಆಕ್ಸಿಜನ್, ಉರುವಲು ಮತ್ತು ಬಿಸುಪು ಈ ಮೂರು ಇರಲೇಬೇಕು. ಬೆಂಕಿ ಆರಿಸಲು ಈ ಮೂರರಲ್ಲಿ ಒಂದನ್ನು ಕಡಿತಗೊಳಿಸಿಯೋ, ಇಲ್ಲವಾಗಿಸಿಯೋ ಬೆಂಕಿ ಆರಿಸಬಹುದು. ಸಣ್ಣದಾಗಿ ಬೆಂಕಿ ಹತ್ತಿದ್ದರೆ ದಪ್ಪ ಕಂಬಳಿ ಬಿಸಾಕಿ ಅದನ್ನು ನಿಲ್ಲಿಸುವುದನ್ನು ನೋಡಿರುತ್ತೇವೆ. ಕಂಬಳಿ ಬೆಂಕಿ ಮೇಲೆ ಬಿದ್ದಾಗ ವಾತಾವರಣದ ಆಕ್ಸಿಜನ್ ಪೂರೈಕೆ ನಿಂತು, ಬೆಂಕಿ ಆರುತ್ತದೆ. ಬೆಂಕಿ ಆರಿಸುಕ ಗಾಡಿಗಳು(Fire fighting Vehicles) ನೀರು ಸಿಡಿಸಿ ಬೆಂಕಿ ನಿಲ್ಲಿಸುತ್ತವೆ, ನೀರು ಸಿಂಪಡಿಸಿದಾಗ ಬಿಸುಪು ತಣ್ಣಗಾಗಿ ಬೆಂಕಿ ಆರುತ್ತದೆ. ಇದೇ ವಿಜ್ಞಾನ ಆಧಾರವಾಗಿಟ್ಟುಕೊಂಡು ಬೆಂಕಿ ಆರಿಸುಕಗಳನ್ನು ತಯಾರಿಸಲಾಗುತ್ತದೆ.

ಸಾಮಾನ್ಯವಾಗಿ ಬೆಂಕಿ ಆರಿಸುಕಗಳಲ್ಲಿ 4 ಬಗೆ.  ಅವು ಕೆಳಗಿನಂತಿವೆ:

  1. ನೀರಿನ ಬೆಂಕಿ ಆರಿಸುಕಗಳು
  2. ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳು
  3. ನೊರೆಯ ಬೆಂಕಿ ಆರಿಸುಕಗಳು
  4. ಪುಡಿ ತುಂಬಿದ ಬೆಂಕಿ ಆರಿಸುಕಗಳು

ನೀರಿನ ಬೆಂಕಿ ಆರಿಸುಕಗಳು ನೀರನ್ನು ಬೆಂಕಿ ಆರಿಸುವ ಮಾಧ್ಯಮವಾಗಿ ಬಳಕೆ ಮಾಡುತ್ತವೆ. ಒಂದು ಚಿಕ್ಕ ಸಿಲಿಂಡರ್ ಗಾತ್ರದ ಕೊಳಾಯಿಯಲ್ಲಿ ಬಹುಪಾಲು ನೀರು ತುಂಬಿರುತ್ತದೆ. ಅದರೊಳಗೆ ಒಂದು ಪುಟ್ಟ ಗಾಳಿ ತುಂಬಿದ ಡಬ್ಬಿ(canister) ಇರುತ್ತದೆ ಮತ್ತು ನೀರು ಚಿಮ್ಮಲು ಒಂದು ಕೊಳವೆ. ಈ ಕೊಳವೆಯು ಸಿಲಿಂಡರ್‌ನ ಒಂದು ಮೇಲ್ಭಾಗದ ಬಲಬದಿಗೆ ನೀರು ಚಿಮ್ಮಲು ಬಾಯಿ ತೆರೆದಿರುತ್ತದೆ. ಸಿಲಿಂಡರ್ ಮೇಲೆ ಉಂಗುರದ ಮೂಲಕ ಆಪರೇಟ್ ಮಾಡಬಹುದಾದ ಒಂದು ಹಿಡಿಕೆ. ಉಂಗುರ ಎಳೆದಾಗ ಹಿಡಿಕೆಯು ರಿಲೀಸ್ ಆಗಿ ಕೆಳಗಿನ ಗಾಳಿ ತುಂಬಿದ ಡಬ್ಬಿಯ ತೆರಪು(Valve) ತೆರೆಯುವಂತೆ ಮಾಡುತ್ತದೆ. ಇದರಿಂದ ಗಾಳಿಯು ಸಿಲಿಂಡರ್ ತುಂಬಾ ಸೇರಿ ನೀರನ್ನು ಕೆಳಕ್ಕೆ ದಬ್ಬುತ್ತದೆ. ಇದರಿಂದ ನೀರಿನ ಮೇಲೆ ಒತ್ತಡ ಉಂಟಾಗಿ, ಕೊಳವೆ ಮೂಲಕ ಹೊರಕ್ಕೆ ಚಿಮ್ಮಲ್ಪಡುತ್ತದೆ. ಹೀಗೆ ನೀರು, ಬೆಂಕಿಯ ಬಿಸುಪನ್ನು ಹೀರಿ ಬೆಂಕಿ ಆರುವ ಕೆಲಸ ನಡೆಯುತ್ತದೆ.

ನೊರೆಯ ಬೆಂಕಿ ಆರಿಸುಕಗಳು: ಇವುಗಳು ನೀರಿನ ಬೆಂಕಿ ಆರಿಸುಕಗಳಂತೆ ಕೆಲಸ ಮಾಡುತ್ತವೆ. ಆದರೆ ಕೊಳಾಯಿಯ ಒಳಗೆ ನೀರಿನ ಜೊತೆ ನೊರೆಯು ಸೇರಿರುತ್ತದೆ. ಈ ನೊರೆಯು ಸೋಡಿಯಮ್ ಬೈಕಾರ್ಬೋನೆಟ್‍ನಿಂದ ತಯಾರಿಸಿದ್ದಾಗಿರುತ್ತದೆ. ಕೊಳಾಯಿ ಮೇಲ್ಭಾಗದ ಹಿಡಿಕೆಯ ಉಂಗುರ ಎಳೆದಾಗ ನೊರೆಯ ಜೊತೆ ನೀರು ಸೇರಿ ದೊಡ್ಡ ಗಾತ್ರದ ನೊರೆಯು ಉರಿಯುತ್ತಿರುವ ಬೆಂಕಿಯ ಮೇಲೆ ಸಿಂಪಡನೆಗೊಂಡು ಬೆಂಕಿಗೆ ಆಕ್ಸಿಜನ್ ಹರಿವನ್ನು ತಡೆಯುತ್ತದೆ ಮತ್ತು ಬಿಸುಪನ್ನು ಹೀರಿಕೊಳ್ಳುತ್ತ ಬೆಂಕಿ ನಿಲ್ಲಿಸುತ್ತವೆ.

ಪುಡಿಯ ಬೆಂಕಿ ಆರಿಸುಕಗಳು: ಪುಡಿ ಬೆಂಕಿ ಆರಿಸುಕಗಳು ಹೆಚ್ಚು ಕಡಿಮೆ ನೀರು ಇಲ್ಲವೇ ನೊರೆಯ ಆರಿಸುಕಗಳಂತೆ ಈಡುಗಾರಿಕೆ(Design) ಹೊಂದಿರುತ್ತವೆ. ಆದರೆ ಇಲ್ಲಿ ನೊರೆ ಇಲ್ಲವೇ ನೀರಿನ ಬದಲು ಬೆಂಕಿ ಆರಿಸಲು ನೆರವಾಗುವ ಮೊನೊಅಮೋನಿಯಂ ಫಾಸ್ಫೇಟ್(Monoammonium Phosphate) ಪುಡಿಯನ್ನು ಬಳಸುತ್ತಾರೆ. ಇದರೊಟ್ಟಿಗೆ ಪೊಟ್ಯಾಸಿಯಂ ಬೈಕಾರ್ಬೋನೆಟ್ ಇಲ್ಲವೇ ಸೋಡಿಯಂ ಬೈಕಾರ್ಬೋನೆಟ್ ಪುಡಿಗಳನ್ನು ಬಳಕೆ ಮಾಡುತ್ತಾರೆ. ಈ ಪುಡಿ ಬೆಂಕಿಯ ಮೇಲೆ ಬಿದ್ದಾಗ ರಾಸಾಯನಿಕ ಕ್ರಿಯೆಯಿಂದ ಬೆಂಕಿಯ ಬಿಸುಪನ್ನು ಹೀರಿ, ಕರಗುತ್ತ ಉರುವಲಿನ ಆವಿಯಾಗಿಸಿ ಬೆಂಕಿಗೆ ಅವಶ್ಯವಿರುವ ಆಕ್ಸಿಜನ್ ಹರಿವನ್ನು ಕಡಿತ ಮಾಡುತ್ತದೆ. 

(ಈ ಮೇಲಿರುವ ತಿಟ್ಟದಲ್ಲಿ ಸಾಮಾನ್ಯವಾಗಿ ಬೆಂಕಿ ಆರಿಸುಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸಲಾಗಿದೆ).

 ಪುಡಿ, ನೀರು ಮತ್ತು ನೊರೆಯ ಈ ಮೂರು ತರಹದ ಬೆಂಕಿ ಆರಿಸುಕಗಳಲ್ಲಿ ಮುನ್ನುಗ್ಗುಕವೊಂದನ್ನು(Propellent) ಬಳಸುತ್ತಾರೆ. ಕ್ಯಾನಿಸ್ಟರ್(ಡಬ್ಬಿ)ಗಳಲ್ಲಿ ಇದೇ ಮುನ್ನುಗ್ಗುಕ ಗಾಳಿಯನ್ನು ಕೂಡಿಡುತ್ತಾರೆ. ಹೆಚ್ಚಾಗಿ ಸಾರಜನಕ(ನೈಟ್ರೋಜನ್) ಇಲ್ಲವೇ ಕಾರ್ಬನ್ ಡೈಆಕ್ಸೈಡ್‍ಗಳನ್ನೇ ಮುನ್ನುಗ್ಗುಕವಾಗಿ ಬಳಸುತ್ತಾರೆ. ಬೆಂಕಿ ಆರಿಸುಕಗಳಲ್ಲಿ, ಹೆಚ್ಚಿನ ಒತ್ತಡದಲ್ಲಿ ಕೂಡಿಟ್ಟಿರುವ ಮುನ್ನುಗ್ಗುಕ ಸ್ಪೋಟಗೊಳ್ಳಬಾರದೆಂದು ಗಟ್ಟಿಮುಟ್ಟಾದ ಉಕ್ಕಿನಿಂದ ತಯಾರಿಸಿಲಾಗಿರುತ್ತದೆ.

ಕಾರ್ಬನ್ ಡೈಆಕ್ಸೈಡ್ ಬೆಂಕಿ ಆರಿಸುಕಗಳು ಕೂಡ ಕೆಂಪು ಬಣ್ಣದ ಸಿಲಿಂಡರ್‌ಗಳಿಂದಾಗಿರುತ್ತವೆ. ಇಲ್ಲಿ ನೀರಿನ ಬದಲು ಕಾರ್ಬನ್ ಡೈಆಕ್ಸೈಡ್ ಗಾಳಿಯನ್ನು ಬಳಸುತ್ತಾರೆ. ಈ ತರದ ಆರಿಸುಕಗಳು ದೊಡ್ಡದಾದ ಕೋನ್  ಆಕಾರದ ಬಾಯಿ ಹೊಂದಿರುತ್ತವೆ. ಇದಕ್ಕೆ ಹಾರ್ನ್ ಎಂದು ಹೇಳಲಾಗುತ್ತದೆ, ಈ ದೊಡ್ಡ ಹಾರ್ನ್ ಮೂಲಕವೇ ಇವುಗಳು ಇಂಗಾಲದ ಬೆಂಕಿ ಆರಿಸುಕಗಳು ಎಂದು ಗುರುತಿಸಬಹುದು. ಇಲ್ಲಿ ಕೂಡ ಮೇಲ್ಭಾಗದಲ್ಲಿ ಹಿಡಿಕೆ-ಅದಕ್ಕೆ ಜೋಡಿಸಲ್ಪಟ್ಟ ತೆರಪಿನ ಏರ್ಪಾಟು ಇರುತ್ತದೆ. ಕೆಂಪು ಕೊಳಾಯಿಯ ಒಳಗೆ ದ್ರವರೂಪದಲ್ಲಿ ಇಂಗಾಲದ ಡೈಆಕ್ಸೈಡ್ ತುಂಬಿರುತ್ತಾರೆ. ಹಿಡಿಕೆಯನ್ನು ಜೋರಾಗಿ ಅದುಮಿದಾಗ ತೆರಪು ತೆರೆದುಕೊಂಡು, ವೇಗದಿಂದ CO2 ಮಂಜಿನಂತೆ ಉರಿಯುವ ಬೆಂಕಿಗೆ  ಬಿಳಿಯ ದಟ್ಟ ಹೊಗೆ ರೂಪದಲ್ಲಿ ಸಿಂಪಡನೆಗೊಂಡು, ಅದನ್ನು ನಿಲ್ಲಿಸುತ್ತದೆ. ಇಲ್ಲಿ ಕೋನ್  ಆಕಾರದ ಹಾರ್ನ್ ರಚನೆ ಬಲುಮುಖ್ಯ.. ವೇಗದಿಂದ ಬರುವ ಕಾರ್ಬನ್ ಡೈಆಕ್ಸೈಡ್ ಬಿರುಸಾದ ಹರಿವಿನಿಂದ ಹಿಗ್ಗುತ್ತಾ ತಂಪಾದ ಮಂಜಿನ ಗಾಳಿ ಹೊರಸೂಸಲು ಅನುಕೂಲವಾಗುವಂತೆ ಹಾರ್ನ್ ಈಡುಗಾರಿಕೆ ಮಾಡಲಾಗಿರುತ್ತದೆ. 

ಈ ಎಲ್ಲ ಬಗೆಯ ಬೆಂಕಿ ಆರಿಸುಕಗಳನ್ನು ಎಲ್ಲ ರೀತಿಯ ಬೆಂಕಿ ಅವಘಡಗಳಲ್ಲಿ ಬಳಸಲಾಗದು. ತಪ್ಪು ಬಳಕೆಯಿಂದ ಅಪಾಯವಾಗುವ ಸಾಧ್ಯತೆಯುಂಟು. ಅದಕ್ಕೆಂದೇ ಬೆಂಕಿಯನ್ನು ಅವುಗಳು ಉಂಟಾದ ಮೂಲದಿಂದ ಬಗೆಗಳಾಗಿ ಗುರುತಿಸಿ, ಅದಕ್ಕೆ ತಕ್ಕುದಾದ ಬೆಂಕಿ ಆರಿಸುಕಗಳನ್ನು ಬಳಸಬೇಕು. ಕ್ಲಾಸ್ ಎ,ಬಿ,ಸಿ,ಡಿ,ಈ ಮತ್ತು ಎಫ್ ಎಂಬ 6 ಬಗೆಯ ಬೆಂಕಿಗಳನ್ನು ಗುರುತಿಸಲಾಗಿದೆ.

ಕ್ಲಾಸ್ ಎ – ಸೌದೆ/ಕಟ್ಟಿಗೆ, ಕಾಗದ, ಪ್ಲ್ಯಾಸ್ಟಿಕ್, ರಬ್ಬರ್ ಮುಂತಾದ ಗಟ್ಟಿವಸ್ತುಗಳಿಂದ ಹೊತ್ತಿಕೊಂಡಿರುವ ಬೆಂಕಿಯು ಈ ಸಾಲಿಗೆ ಸೇರುತ್ತದೆ. ಇದನ್ನು ನೀರಿನ ಬೆಂಕಿ ಆರಿಸುಕ ಬಳಸಿ ತಡೆಹಿಡಿಯಬಹುದು.

ಕ್ಲಾಸ್ ಬಿ – ದ್ರವರೂಪದ ಗಾಳಿ, ದ್ರವ ವಸ್ತುಗಳಿಂದ ಹೊತ್ತಿರುವ ಬೆಂಕಿಯನ್ನು ಕ್ಲಾಸ್ ಬಿ ತರಹದ ಬೆಂಕಿ. ಇಂತ ಬೆಂಕಿ ಆರಿಸಲು ನೊರೆಯ ಬೆಂಕಿ ಆರಿಸುಕ ಬಳಸಬಹುದು.

ಕ್ಲಾಸ್ ಸಿ – ಒತ್ತಡದಲ್ಲಿ ಕೂಡಿಟ್ಟ ದ್ರವ ಇಲ್ಲವೇ ದ್ರವರೂಪದ ಗಾಳಿಯಿಂದ ಹೊತ್ತಿಕೊಂಡ ಬೆಂಕಿ ಕ್ಲಾಸ್ ಸಿ ಬಗೆಯ ಬೆಂಕಿ. ಉದಾಹರಣೆಗೆ:ಎಲ್ಪಿಜಿ ಸಿಲಿಂಡರ್ ಮುಂತಾದವುಗಳಿಂದ ಹೊತ್ತಿದ ಬೆಂಕಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಡಿ – ಸರಳವಾಗಿ ಹೊತ್ತಿಯುರಿಯುವ ಮಾಗ್ನೇಸಿಯಂ, ಅಲ್ಯುಮಿನಿಯಂ, ಸತು, ಪೊಟ್ಯಾಸಿಯಂ, ಸೋಡಿಯಮ್ ಮುಂತಾದ ಜಲ್ಲಿಗಳಿಂದ ಹತ್ತುವ ಬೆಂಕಿ ಕ್ಲಾಸ್ ಡಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಈ – ಎಲೆಕ್ಟ್ರಿಕಲ್ ವಾಹಕ ವಸ್ತುಗಳಿಂದ ಉಂಟಾದ ಬೆಂಕಿ. ಕಾರ್ಬನ್ ಡೈ ಆಕ್ಸೈಡ್ ಮತ್ತು ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಕ್ಲಾಸ್ ಎಫ್ – ಅಡುಗೆ ಎಣ್ಣೆ, ಕೊಬ್ಬು ಮುಂತಾದ ವಸ್ತುಗಳಿಂದ ಉಂಟಾದ ಬೆಂಕಿ. ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಹೀಗೆ ಬೆಂಕಿಗಳ ಬಗೆಗಳಿಗೆ ತಕ್ಕ ಬೆಂಕಿ ಆರಿಸುಕ ಬಳಸಬೇಕು. ಒಂದು ಬಗೆಯ ಬೆಂಕಿಗೆ ಬೇರೆ ಬೇರೆ ಬಗೆಯ 2-3 ಬಗೆಯ ಬೆಂಕಿ ಆರಿಸುಕಗಳನ್ನು ಬಳಸಬಹುದಾಗಿರುತ್ತದೆ.  ಯಾವ ಬೆಂಕಿ ಆರಿಸುಕ ಯಾವ ಬಗೆಯ ಬೆಂಕಿಗೆ ಸೂಕ್ತ ಎಂಬುದನ್ನು ನುರಿತ ತರಬೇತುದಾರರಿಂದ ತರಬೇತಿ ಪಡೆದವರು ಬಳಸಬೇಕು. ನೀರಿನ ಬೆಂಕಿ ಆರಿಸುಕಗಳಿಗೆ ಕೆಂಪು, ನೊರೆಯ ಬೆಂಕಿ ಆರಿಸುಕ ಹಳದಿ, ಪುಡಿಯ ಬೆಂಕಿ ಆರಿಸುಕಕ್ಕೆ ನೀಲಿ ಮತ್ತು ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳಿಗೆ ಕಪ್ಪು ಬಣ್ಣದ ಗುರುತು ಹಾಕಿರಲಾಗಿರುತ್ತದೆ.

ಬಳಸುವ ಬಗೆ:  ಬೆಂಕಿ ಆರಿಸುಕದ ಮೂತಿ ಇಲ್ಲವೇ ಚಿಮ್ಮುಕವನ್ನು ಬೆಂಕಿ ಇರುವ ಕಡೆ ತಿರುಗಿಸಿ ಬೆಂಕಿಗೆ ಗುರಿಯಾಗಿಸಿ, ಹಿಡಿಕೆಯ ಮೇಲಿರುವ ಉಂಗುರ ಎಳೆಯಬೇಕು ಆಗ ಬೆಂಕಿ ಮೆಲ್ಲಗೆ ಆರ ತೊಡಗುತ್ತದೆ. ಇದು ಒಂದು ರೀತಿಯಲ್ಲಿ ಬಂದೂಕನ್ನು ಸರಿಯಾದ ಗುರಿಯತ್ತ ತಿರುಗಿಸಿ ಟ್ರಿಗ್ಗರ್ ಅದುಮಿದಂತೆ ಎನ್ನಬಹುದು. ಬೆಂಕಿ ಆರಿಸುಕ ಬಳಸಲು ಕಚೇರಿ, ಮಾಲ್, ಬ್ಯಾಂಕ್, ಬಾನೋಡತಾಣ ಮುಂತಾದ ಕಡೆ ಭದ್ರತಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈ ತರಬೇತಿ ನೀಡಿದ ವ್ಯಕ್ತಿಗಳಿಗೆ ಮಾತ್ರ ಬೆಂಕಿ ಆರಿಸುಕವನ್ನು ಸರಿಯಾಗಿ ಬಳಸಬಹುದು. ಬೆಂಕಿ ಆರಿಸುಕ ಬಳಸುವ ಮುನ್ನ ಯಾರೇ ಆಗಲಿ ಈ ತರಬೇತಿ ಪಡೆಯಲೇಬೇಕು. ಸರಿಯಾದ ತರಬೇತಿ ಇರದೇ ಬಳಸಲು ಹೋಗಿ ಹಲವರು ತಮಗೆ ಅಪಾಯ ಮಾಡಿಕೊಂಡ ಹಲವು ಘಟನೆಗಳು ನಡೆದಿವೆ.

ಮಾಹಿತಿ ಮತ್ತು ತಿಟ್ಟ ಸೆಲೆ:explainthatstuff.com

ಕಾಯಿಯೊಂದು ಹಣ್ಣಾಗುವ ಬಗೆ

ರತೀಶ ರತ್ನಾಕರ.

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ ಮತ್ತು ಹಣ್ಣಿನ ನಡುವೆ ಬೇರ್ಮೆಯನ್ನು ಗುರುತಿಸಿದರೆ ಅದು ಹೆಚ್ಚಾಗಿ ಅದರ ಬಣ್ಣ ಮತ್ತು ರುಚಿಯಲ್ಲಿ ಬೇರೆ ಬೇರೆಯಾಗಿರುತ್ತವೆ. ಕಾಯಿಗಳು ಹೆಚ್ಚಾಗಿ ಹಸಿರು ಬಣ್ಣದಲ್ಲಿದ್ದು, ರುಚಿ ಮತ್ತು ಕಂಪು ಇಲ್ಲದೆ ಗಟ್ಟಿಯಾಗಿ ಇರುತ್ತವೆ. ಕಾಯಿಯು ಹಣ್ಣಾಗುತ್ತಾ ಬಂದಂತೆ ಬೇರೆ ಬಣ್ಣವನ್ನು ಪಡೆಯುತ್ತದೆ, ಕಾಯಿಗಿಂತ ಮೆತ್ತಗಾಗುತ್ತದೆ, ರುಚಿ ಮತ್ತು ಕಂಪನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಪ್ರಾಣಿ ಮತ್ತು ಹಕ್ಕಿಗಳನ್ನು ಸೆಳೆಯುತ್ತವೆ.

ಹೌದಲ್ಲ, ಈ ಕಾಯಿಯು ಹಣ್ಣಾದ ಮೇಲೆ ನಮಗೆ ಉಪಕಾರಿ. ಹಾಗಾದರೆ ಈ ಕಾಯಿಯು ಹೇಗೆ ಹಣ್ಣಾಗುತ್ತದೆ? ಬಣ್ಣ, ರುಚಿ, ಕಂಪನ್ನು ಹೇಗೆ ಪಡೆದುಕೊಳ್ಳುತ್ತದೆ? ಕಾಯಿಯಲ್ಲಿ ನಡೆಯುವ ಯಾವ ತಿರುಳು ಹಣ್ಣಾಗಲು ಕಾರಣ? ಬನ್ನಿ, ಈ ವಿಷಯಗಳ ಕುರಿತು ನಾವಿಂದು ಅರಿಯೋಣ.

ಹೂವಿನ ಗಂಡೆಳೆಗಳು(Anther) ಹೆಣ್ದುಂಡುಗಳೊಡನೆ(Stigma) ಸೇರುವುದನ್ನು ಹೂದುಂಬುವಿಕೆ (Pollination) ಎಂದು ಕರೆಯಲಾಗುತ್ತದೆ. ಯಾವುದೇ ಗಿಡ ಇಲ್ಲವೇ ಮರದಲ್ಲಿ ಹೂದುಂಬುವಿಕೆ ನಡೆದಾಗ ಹೀಚುಗಾಯಿ ಉಂಟಾಗುತ್ತದೆ. ಹೀಗೆ ಉಂಟಾದ ಹೀಚುಗಾಯಿಯ ತತ್ತಿಚೀಲದೊಳಗೆ(Ovary) ಹೊಸ ಬೀಜ ಹುಟ್ಟುತ್ತದೆ. ಈ ಬೀಜಗಳು ಬೆಳೆಯುತ್ತಿದ್ದಂತೆ ಸಯ್ಟೋಕಿನಿನ್ಸ್ (Cytokinins) ಎನ್ನುವ ಸೋರುಗೆಯನ್ನು (Hormone) ಹೊರಹಾಕುತ್ತವೆ. ಈ ಸೋರುಗೆಗಳು ತತ್ತಿಚೀಲದ ಗೋಡೆಯ ಬಳಿ ಬಂದು ಸೂಲುಗೂಡುಗಳನ್ನು (Cells) ಒಡೆದು ಹೊಸ ಹೊಸ ಸೂಲುಗೂಡುಗಳು ಮೂಡಿ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ. ಹಾಗೆಯೇ ಮುಂದುವರಿದು ಈ ಬೀಜಗಳು ಜಿಬ್ಬೆರೆಲಿಕ್ (Gibberellic) ಹುಳಿಯನ್ನು ಹೊರಹಾಕುತ್ತವೆ. ಈ ಹುಳಿಯು ಸೂಲುಗೂಡುಗಳನ್ನು ಹಿಗ್ಗಿಸಲು ನೆರವಾಗುತ್ತದೆ. ಹೀಗೆ ಸೂಲುಗೂಡುಗಳ ಒಡೆಯುವಿಕೆ ಮತ್ತು ಹಿಗ್ಗುವಿಕೆಯಿಂದ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ.

ಮರ, ಗಿಡ ಹಾಗು ಬಳ್ಳಿಗಳ ತಳಿಗಳ ಆಧಾರದ ಮೇಲೆ ಕಾಯಿಯು ಒಂದು ಹಂತದವರೆಗೆ ದೊಡ್ಡದಾಗುತ್ತಾ ಹೋಗುತ್ತದೆ. ಕಾಯಿಯು ಸಾಕಷ್ಟು ದೊಡ್ಡದಾದ ಮೇಲೆ ತಾಯಿಗಿಡವು ಅಬ್ಸಿಸಿಕ್ ಎನ್ನುವ ಸೋರುಗೆಯನ್ನು ಹೊರಬಿಡುತ್ತದೆ ಅದು ಕಾಯಿಯ ಬೀಜದೊಳಗಿರುವ ಬಸಿರನ್ನು (Embryo) ಒರಗಿದ(Dormant) ಸ್ಥಿತಿಯಲ್ಲಿ ದೂಡುತ್ತದೆ. ಆಗ ಬೀಜ ಮತ್ತು ಕಾಯಿ ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತವೆ.

ಒಂದು ಕಾಯಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ರಾಸಾಯನಿಕಗಳು ಇರುತ್ತವೆ.

ಗಂಜಿ (Starch) – ಕಾಯಿಯು ರುಚಿಯಾಗದಿರಲು ಇದೇ ಕಾರಣವಾಗಿರುತ್ತದೆ.
ಎಲೆಹಸಿರು (Chlorophyll) – ಕಾಯಿಯ ಹಸಿರು ಬಣ್ಣಕ್ಕೆ ಇದು ಕಾರಣವಾಗಿರುತ್ತದೆ.
ಹುಳಿ (acids) – ಇದರಿಂದ ಕಾಯಿಯು ತುಂಬಾ ಹುಳಿ ಹುಳಿಯಾಗಿ ಇಲ್ಲವೇ ಒಗರಾಗಿರುತ್ತದೆ.
ಪೆಕ್ಟಿನ್ (Pectin) – ಇದೊಂದು ಬಗೆಯ ಪಾಲಿಸೆಕರಯ್ಡ್ ಆಗಿದ್ದು, ಕಾಯಿಯಲ್ಲಿನ ಸೂಲುಗೂಡುಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡಿರುವಂತೆ ನೋಡಿಕೊಳ್ಳುತ್ತದೆ. ಪೆಕ್ಟಿನ್ ದೆಸೆಯಿಂದಾಗಿ ಕಾಯಿಯು ಗಟ್ಟಿಯಾಗಿರುತ್ತದೆ.
ಹೆಬ್ಬುಸುರಿ (Large Organics)- ಇವು ಒಂದು ಬಗೆಯ ಸೀರಕೂಟಗಳಾಗಿದ್ದು (Molecules) ಕಾಯಿಯಲ್ಲಿ ಇರುತ್ತವೆ.

ಹಾಗಾದರೆ ಹಣ್ಣಾಗುವುದು ಹೇಗೆ?

ಯಾವುದೇ ಕಾಯಿಯು ಹಣ್ಣಾಗುವುದರಲ್ಲಿ ಇತಯ್ಲಿನ್ (Ethylene) ಪ್ರಮುಖ ಪಾತ್ರ ವಹಿಸುತ್ತದೆ. ಗಿಡದಲ್ಲಿರುವ ETR1 ಮತ್ತು CTR1 ಎಂಬ ಪೀಳಿಗಳು(genes) ಕಾಯಿಯನ್ನು ಹಣ್ಣಾಗದಂತೆ ತಡೆಹಿಡಿದಿರುತ್ತವೆ. ಯಾವುದೇ ಒಂದು ಮರ, ಗಿಡ ಇಲ್ಲವೇ ಬಳ್ಳಿಯ ಗುಣವೆಂದರೆ ತನ್ನಲ್ಲಿರುವ ಕಾಯಿ ಇಲ್ಲವೇ ಹಣ್ಣುಗಳಿಗೆ ಗಾಯವಾದಾಗ, ಕಾಯಿ/ಹಣ್ಣನ್ನು ಗಿಡದಿಂದ ಕಿತ್ತಾಗ, ಸುತ್ತಲಿನ ಗಾಳಿಪಾಡಿನಲ್ಲಿ ಏರುಪೇರಾಗಿ ತನ್ನ ಎಂದಿನ ಚಟುವಟಿಕೆಗಳಿಗೆ ಒತ್ತಡ ಬಂದಾಗ, ಒಟ್ಟಿನಲ್ಲಿ ಹೇಳುವುದಾದರೆ ತನ್ನ ಎಂದಿನ ಚಟುವಟಿಕೆಗೆ ಯಾವುದೇ ತೊಡಕಾದ ಕೂಡಲೆ ಅದು ಇತಯ್ಲಿನ್ ಗಾಳಿಯನ್ನು ಹೊರಹಾಕತೊಡಗುತ್ತದೆ. ಇತಯ್ಲಿನ್ ಅನ್ನು ತನ್ನ ಕಾಂಡ, ಬೇರು, ಹೂವು, ಕಾಯಿಗಳ ಮೂಲಕ ತನ್ನ ಸುರಕ್ಷತೆಗಾಗಿ ಹೊರಹಾಕುತ್ತದೆ. ಈ ಇತಯ್ಲಿನ್ ಮುಂದೆ ಕಾಯಿ ಹಣ್ಣಾಗುವಲ್ಲಿ ನೆರವಾಗುತ್ತದೆ.

 

ಯಾವುದೇ ಕಾಯಿ ಇತಯ್ಲಿನ್ ಗಾಳಿಗೆ ತಾಕಿದಾಗ ಅದರಲ್ಲಿರುವ ETR1 ಮತ್ತು CTR1 ಪೀಳಿಗಳು ತನ್ನ ಕೆಲಸವನ್ನು ನಿಲ್ಲಿಸುತ್ತವೆ ಮತ್ತು ಬೇರೆ ಪೀಳಿಗಳಿಗೆ ಕೆಲಸಮಾಡಲು ದಾರಿ ಮಾಡಿಕೊಡುತ್ತವೆ. ಕಾಯಿಯಲ್ಲಿರುವ ಇತರೆ ಪೀಳಿಗಳು ಅಮಯ್ಲೇಸಸ್ (amylases), ಹಯ್ಡ್ರೋಲೇಸಸ್ (hydrolases), ಕಯ್ನೇಸಸ್(kinases) ಮತ್ತು ಪೆಕ್ಟಿನೇಸಸ್ (pectinases) ಎಂಬ ದೊಳೆಗಳನ್ನು(enzyme) ಬಿಡುಗಡೆ ಮಾಡುತ್ತವೆ. ಈ ದೊಳೆಗಳು ಕಾಯಿಯನ್ನು ಹಣ್ಣು ಮಾಡಲು ನೆರವಾಗುತ್ತವೆ.

– ಅಮಯ್ಲೇಸಸ್ ದೊಳೆಯು ಕಾಯಿಯಲ್ಲಿರುವ ಗಂಜಿಯನ್ನು ಕಾರ್ಬೋಹೈಡ್ರೇಟ್ ಗಳಾಗಿ(Sugars) ಮಾರ್‍ಪಾಟುಗೊಳಿಸುತ್ತವೆ. ಇದು ಹಣ್ಣಿನ ರುಚಿಗೆ ಕಾರಣವಾಗಿರುತ್ತದೆ.
– ಹೈಡ್ರೊಲೇಸಸ್ ದೊಳೆಯು ಕಾಯಿಯಲ್ಲಿರುವ ಎಲೆಹಸಿರನ್ನು ಅಂತೋಸಯ್ನಿನ್ಸ್ (anthocynins) ಆಗಿ ಮಾರ್ಪಾಟುಗೊಳಿಸುತ್ತವೆ. ಇದು ಹಣ್ಣಿನ ಬಣ್ಣವನ್ನು ಹಸಿರಿನಿಂದ ಮತ್ತೊಂದು ಬಣ್ಣಕ್ಕೆ ತಿರುಗಿಸುತ್ತದೆ.
– ಕಯ್ನೇಸಸ್ ದೊಳೆಯು ಕಾಯಿಯಲ್ಲಿರುವ ಹುಳಿಗಳನ್ನು ತಟಸ್ಥ ಸೀರಕೂಟಗಳಾಗಿ (neutral molecules) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಹುಳಿ ಮತ್ತು ಒಗರನ್ನು ಕಡಿಮೆ ಮಾಡುತ್ತದೆ.
– ಪೆಕ್ಟಿನೇಸಸ್ ದೊಳೆಯು ಕಾಯಿಯ ಗಟ್ಟಿತನಕ್ಕೆ ಕಾರಣವಾದ ಪೆಕ್ಟಿನಿನ್ ಅನ್ನು ಕಡಿಮೆಗೊಳಿಸಿ ಹಣ್ಣನ್ನು ಕಾಯಿಗಿಂತ ಮೆತ್ತಗಾಗಿಸುತ್ತದೆ.
– ಹೈಡ್ರೊಲೇಸಸ್ ದೊಳೆಯು ಹೆಬ್ಬುಸುರಿಗಳನ್ನು ಕಂಪು ಬೀರುವ ಸೀರುಗಳಾಗಿ (aromatic compounds) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಕಂಪಿಗೆ ಕಾರಣವಾಗುತ್ತದೆ.

ಹೀಗೆ ಕಾಯಿಯು ಇತಯ್ಲಿನ್ ಗಾಳಿಗೆ ತೆರೆದುಕೊಂಡೊಡನೆ ಹಲವಾರು ರಾಸಾಯನಿಕೆ ಚಟುವಟಿಕೆಗಳು ನಡೆದು ಹಣ್ಣಾಗುತ್ತದೆ. ಕೆಲವು ಕಾಯಿಗಳು ಮರ/ಗಿಡದಿಂದ ಕಿತ್ತ ಮೇಲೂ ಇತಯ್ಲೀನ್ ಗಾಳಿಯ ನೆರವಿನಿಂದ ಹಣ್ಣಾಗುತ್ತವೆ ಇಂತಹವನ್ನು ಬಿಡಿಮಾಗು (Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಎತ್ತುಗೆಗೆ, ಸೇಬು, ಬಾಳೆಹಣ್ಣು, ಸೀಬೆಹಣ್ಣು. ಇನ್ನು ಕೆಲವು ಹಣ್ಣುಗಳು ಮರ/ಗಿಡದಲ್ಲಿ ಇದ್ದರೆ ಮಾತ್ರ ಹಣ್ಣಾಗಬಲ್ಲವು, ಕಿತ್ತರೆ ಹಣ್ಣಾಗಲಾರವು ಅಂತವುಗಳನ್ನು ಗಿಡಮಾಗು (Non- Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಉದಾಹರಣೆಗೆಗೆ ದ್ರಾಕ್ಷಿ, ಸ್ಟ್ರಾಬೆರ್‍ರಿ.

 

ಸೆಲೆ:-

www.researchgate.net, ncbi, www.scientificamerican.com,

ಕನೆಕ್ಟೆಡ್ ಕಾರುಗಳು(Connected Cars)

ಜಯತೀರ್ಥ ನಾಡಗೌಡ.

ಮಿಂಬಲೆ(ಇಂಟರ್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ ಒಳಗೂ ಇರುವಂತ ಇಲ್ಲವೇ ಹೊರಗಿರುವಂತವವೂ ಆಗಿರಬಹುದು. ಉದಾಹರಣೆಗೆ ಕಾರೊಂದು ಮಿಂಬಲೆ ಮೂಲಕ ಇನ್ನೊಂದು ಕಾರಿನೊಂದಿಗೆ ಇಲ್ಲವೇ ಸ್ಮಾರ್ಟ್‌ಫೋನ್ /ಸ್ಮಾರ್ಟ್‌ವಾಚ್‌ಗಳಂತ ಬೇರೆ ಉಪಕರಣೊಂದಿಗೆ ಮಾಹಿತಿ ಹಂಚಿಕೆ ಅಥವಾ ಮಾಹಿತಿ ಪಡೆದುಕೊಳ್ಳಬಹುದು. ಈ ರೀತಿ ಕಾರೊಂದು ಇನ್ನೊಂದು  ವಸ್ತುವಿನೊಂದಿಗೆ ಬೆಸೆದುಕೊಂಡರೆ ಅದು ಬೆಸುಗೆಯ ಕಾರು ಎನ್ನಿಸಿಕೊಳ್ಳುತ್ತದೆ.

ಕಾರುಗಳು ಹೇಗೆ ಬೆಸೆದುಕೊಳ್ಳುತ್ತವೆ? ಇದರ ಕೆಲಸ ಮಾಡುವ ವಿಧಾನ ಹೇಗೆ?

ಈ ಬೆಸುಗೆಯ ಕಾರುಗಳು ಕೆಳಗೆ ನೀಡಿರುವ ಎರಡರಲ್ಲಿ ಒಂದು ಏರ್ಪಾಟಿನ ಮೂಲಕ ಕೆಲಸ ಮಾಡುತ್ತವೆ.

  1. ಮೊದಲನೇ ಏರ್ಪಾಟು, ಟೆಥೆರ್ಡ್(Tethered) – ಟೆಥೆರ್ ಅಂದರೆ ವ್ಯಾಪ್ತಿ/ಮಿತಿಯೊಳಗೆ ಎಂಬ ಅರ್ಥ ಬರುತ್ತದೆ. ಈ ಏರ್ಪಾಟಿನಲ್ಲಿ ಕಾರು ಪಯಣಿಗರ ಮೊಬೈಲ್ ನೊಂದಿಗೆ ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
  2. ಎರಡನೇ ಏರ್ಪಾಟು, ಎಂಬೆಡೆಡ್(Embedded) – ಈ ಏರ್ಪಾಟನ್ನು ಕನ್ನಡದಲ್ಲಿ ನಾಟಿದ/ಹುದುಗಿಸಿದ ಏರ್ಪಾಟು ಎನ್ನಬಹುದು. ಇದರಲ್ಲಿ ಗಾಡಿಯ ಒಳಗಿನ ಟೆಲೆಮಾಟಿಕ್ಸ್ ಕಂಟ್ರೋಲರ್ ದಲ್ಲಿ(Telematics ECU) ಎಂಟೆನ್ನಾ(Antenna) ಮತ್ತು ಸೆಮಿಕಂಡಕ್ಟರ್ ಚಿಪ್ ಸೇರಿರುತ್ತದೆ. ಇವುಗಳ ಮೂಲಕ ಗಾಡಿಯು ಬೇರೆ ದೂರದ ಉಪಕರಣಗಳೊಂದಿಗೆ ಸುಲಭವಾಗಿ ಸಂಪರ್ಕ ಮಾಡಬಹುದು.

ಇದನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಮೊಬೈಲ್ ಫೋನ್‌ಗೆ ಬರುವ ತಂತ್ರಾಂಶದ ಅಪ್ಡೇಟ್‌ಗಳಂತೆ, ಬೆಸುಗೆಯ ಕಾರುಗಳು ಈ ರೀತಿ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಪಡೆದು ಕೆಳಗಿಸಿಕೊಳ್ಳಬಲ್ಲವು, ಹೊರ ಜಗತ್ತಿನ ವಸ್ತುಗಳೊಂದಿಗೆ ಸಂಪರ್ಕ ಪಡೆಯಬಲ್ಲವು ಮತ್ತು ತನ್ನ ಸುತ್ತಲಿನ ಮಿತಿಯಲ್ಲಿನ ಇತರೆ ವಸ್ತುಗಳೊಂದಿಗೆ ಮಿಂಬಲೆ ಇಲ್ಲವೇ ಕಾರಿನ ವೈಫೈ (Wifi) ಮೂಲಕ ಸಂಪರ್ಕ ಹೊಂದಬಲ್ಲವು.

ಬೆಸುಗೆಯ ಕಾರುಗಳು ಹೇಗೆ ಮಾತುಕತೆ ನಡೆಸಬಲ್ಲವು?

ಬೆಸುಗೆಯ ಕಾರುಗಳು ಹೊರಜಗತ್ತಿನ ವಸ್ತುಗಳೊಂದಿಗೆ ವ್ಯವಹಾರ/ಸಂಪರ್ಕ ಮಾಡುವುದನ್ನು 5 ಬಗೆಗಳಾಗಿ ವಿಂಗಡಿಸಬಹುದು.

  1. ಒಂದು ಬಂಡಿ(ಕಾರು/ಗಾಡಿ) ಮತ್ತೊಂದು ಬಂಡಿ ಇಲ್ಲವೇ ಬಂಡಿಗಳೊಂದಿಗೆ ಮಾಹಿತಿ ಸಂಪರ್ಕ ಮಾಡಬಹುದು. ಇದನ್ನು ವೆಹಿಕಲ್ ಟು ವೆಹಿಕಲ್ ಮಾಹಿತಿ ಒಡನಾಟ ಎನ್ನುತ್ತಾರೆ(V2V). ಒಂದು ಕಾರು ನಿರ್ದಿಷ್ಟ ಜಾಗದಲ್ಲಿ ಸಾಗುತ್ತಿರುತ್ತದೆ, ಅದು ಸಾಗುವ ವೇಗ, ದಾರಿ, ತಡೆತದ ಸ್ಥಿತಿ(braking situation) ಮುಂತಾದ ಮಾಹಿತಿಯನ್ನು ಈ ಕಾರು ಕಲೆ ಹಾಕಿ ಇನ್ನೊಂದು ಕಾರಿಗೆ ಕಳಿಸಬಹುದು. ಈ ವಿಧದ ಮೂಲಕ ಬೇಜವ್ದಾರಿ ಬಂಡಿ ಓಡಿಸುಗರನ್ನು, ಇಲ್ಲವೇ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಹೋಗುವ ಬಂಡಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು. ಬಹುತೇಕ ಕ್ಯಾಬ್/ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕಂಪನಿಯವರು ತಮ್ಮ ಕಾರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ  ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಗಾಡಿಗಳಲ್ಲಿ ಪರಾರಿಯಾಗುವ ಕಳ್ಳಕಾಕರನ್ನು/ಅಪಹರಣಕಾರರನ್ನು, ಅವರು ಸಾಗುವ ದಾರಿಯ ಬಗ್ಗೆ ನಿಖರ ಮಾಹಿತಿ ನೀಡುವ ಮೂಲಕ ಈ ಬಗೆಯು ಪೋಲೀಸ್‍ರಿಗೆ ನೆರವಾಗುತ್ತದೆ. 
  2. ಎರಡನೇ ಬಗೆ, ಗಾಡಿ ಮತ್ತು ದಾರಿಹೋಕರ ನಡುವೆ ಸಂಪರ್ಕ(V2P-ವೆಹಿಕಲ್ ಟು ಪೆಡೆಸ್ಟ್ರಿಯನ್):

ಇಲ್ಲಿ ಕಾರು ದಾರಿಯಲ್ಲಿ ಓಡಾಡುವ ಇತರೆ ದಾರಿಹೋಕರನ್ನು ಅರಿವುಕಗಳ ಮೂಲಕ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಪಘಾತ ತಡೆಯುತ್ತದೆ.

  1. ಗಾಡಿ ಮತ್ತು ಇತರೆ ಮೂಲಭೂತ ಸೌಕರ್ಯಗಳ ನಡುವಿನ ಸಂಪರ್ಕ(V2I-ವೆಹಿಕಲ್ ಟು ಇನ್ಫ್ರಾಸ್ಟ್ರಕ್ಚರ್): 

ಈ ಬಗೆಯಲ್ಲಿ ಕಾರು ತನ್ನ ಸುತ್ತಲಿನ ಪರಿಸರ, ಸೇತುವೆ, ಕಟ್ಟಡ, ಬೀದಿ ದೀಪ, ಸಂಚಾರದ ದಟ್ಟಣೆ, ಎದುರಾಗುವ ಸಂಚಾರಿ ಸಿಗ್ನಲ್ ಹೀಗೆ ಹಲವಾರು ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳಬಲ್ಲದು. ಈ ಮಾಹಿತಿ ಸಂಚಾರ ದಟ್ಟಣೆ ನಿರ್ವಹಿಸುವ ಪೋಲೀಸ್‍ರಿಗೆ, ತುರ್ತು ಸಮಯದಲ್ಲಿ ಅಂಬ್ಯುಲೆನ್ಸ್‌ಗಳಿಗೆ ನೆರವಾಗುತ್ತವೆ. ನಮ್ಮ ಮೊಬೈಲ್‌ಗಳಲ್ಲಿ ಕಂಡುಬರುವ ದಾರಿತಲುಪು ಏರ್ಪಾಟು(Navigation System) ಮಾಹಿತಿಗಿಂತಲೂ ಇಲ್ಲಿ ಹೆಚ್ಚು ನಿಖರ ಮತ್ತು ನೇರವಾದ ಮಾಹಿತಿ(Real time Data) ಒದಗಿಸುವ ವ್ಯವಸ್ತೆ ಇರುತ್ತದೆ.

  1. ಗಾಡಿ ಮತ್ತು ಕ್ಲೌಡ್ ಮಾಹಿತಿ ಸಂಪರ್ಕ(V2C-ವೆಹಿಕಲ್ ಟು ಕ್ಲೌಡ್): ಕಾರುಗಳು ಮೂಲಕ ಕ್ಲೌಡ್‍ನಲ್ಲಿ ಮಾಹಿತಿ ಕೂಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಗಾಡಿಯೊಂದು ಎಷ್ಟು ಬಾರಿ ರಿಪೇರಿಯಾಗಿದೆ, ಎಷ್ಟು ಸಲ ಸರ್ವೀಸ್ ಮಾಡಿಸಲ್ಪಟ್ಟಿದೆ, ದಾರಿ ಮಧ್ಯೆದಲ್ಲಿ ಕಾರು ಕೆಟ್ಟು ನಿಂತ ಪರಿಸ್ಥಿತಿ, ಹೀಗೆ ಎಲ್ಲ ದಾಖಲೆಗಳನ್ನು ಕ್ಲೌಡ್ ಮೂಲಕ ಕೂಡಿಟ್ಟು, ಬೇಕೆಂದಾಗ ಅದನ್ನು ಬಳಸಿಕೊಳ್ಳಬಹುದು.
  2. ಗಾಡಿ ಮತ್ತು ಮೇಲಿನ ಎಲ್ಲವೂಗಳೊಂದಿಗೆ ಸಂಪರ್ಕ(V2X-ವೆಹಿಕಲ್ ಟು ಎವೆರಿಥಿಂಗ್):

ಈ ವಿಧದಲ್ಲಿ ಗಾಡಿಯೊಂದು ಮೇಲೆ ತಿಳಿಸಿದ ಎಲ್ಲವೂಗಳೊಂದಿಗೆ ಮಾಹಿತಿ ಪಡೆಯುವುದು-ಹಂಚುವುದನ್ನು ಮಾಡಬಹುದು. ಇದರಿಂದ ಗಾಡಿಯೊಂದು ಒಂದೇ ಸಮಯದಲ್ಲಿ ಬೇರೆ ಗಾಡಿಯೊಂದಕ್ಕೆ ಬೆಸೆದುಕೊಂಡು ಸುತ್ತಲಿನ ವಾತಾವರಣದ ಮಾಹಿತಿ ಹಂಚಿ, ಸಂಚಾರ ದಟ್ಟಣೆಯ ಮಾಹಿತಿ ಪಡೆದು, ದಾರಿಹೋಕರು ಎದುರಾದರೆ ಗಾಡಿ ನಿಲ್ಲಿಸುವಂತೆ ಓಡಿಸುಗನನ್ನು ಎಚ್ಚರಿಸಬಹುದು. ಮತ್ತೆ ಎಲ್ಲ ಮಾಹಿತಿಯನ್ನು ಮುಂದೆ ಬಳಸಲು ಕ್ಲೌಡ್‌ನಲ್ಲಿ ಕೂಡಿಡಬಹುದು. ಈ ಎಲ್ಲವೂ ಒಟ್ಟಿಗೆ ನಡೆದು,  ಸಾಕಷ್ಟು ಮಾಹಿತಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ರವಾನೆಯಾಗುತ್ತಿರುತ್ತದೆ.

ಬೆಸುಗೆಯ ಕಾರುಗಳ ಅನುಕೂಲಗಳೇನು?

ಗಾಡಿಯೊಳಗಡೆ ಮನೋರಂಜನೆ, ಭದ್ರತೆ ಮತ್ತು ಅಪಘಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಭವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಷಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೆಚ್ಚಿನ ಬಂಡಿಗಳ ಓಡಾಟವನ್ನು ಸುಲಭ ಸರಳಗೊಳಿಸಿ, ಸಾರಿಗೆ ಏರ್ಪಾಟಿನಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಬೆಸುಗೆಯ ಕಾರುಗಳು ನೆರವಾಗುವುದು ಖಚಿತ.

ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ಒಳ್ಳೆಯ ಗುಣಮಟ್ಟದ ತಿಳಿನಲಿ ಏರ್ಪಾಟು(Infotainment System), ಅಂಡ್ರ್ಯಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಏರ್ಪಾಟಿನಿಂದ ಸರಳವಾಗಿ ಜೋಡಣೆಗೊಳ್ಳುತ್ತವೆ. ಈ ಏರ್ಪಾಟುಗಳಿಗೆ ಹೆಚ್ಚಿನ ನಿಖರ ಮಾಹಿತಿ ಒದಗಿಸಿ ಕಾರು ಓಡಿಸುಗರಿಗೆ ದಾರಿತೋರಲಿದೆ ಬೆಸುಗೆಯ ಕಾರುಗಳು. ಒಬ್ಬ ವ್ಯಕ್ತಿ ಕಾರಿನಲ್ಲಿ ಮಾರುಕಟ್ಟೆಗೆ ಹೋಗಿದ್ದಾಗ,, ಅವಸರದಲ್ಲಿ ಕಾರು ಪಾರ್ಕ್ ಮಾಡಿ, ಕಾರಿಗೆ ಬೀಗ ಹಾಕದೇ ದೂರ ಬಂದಾಗ, ಕಾರಿಗೆ ಬೀಗ ಹಾಕದೇ ಇರುವುದು ನೆನಪಾಗುತ್ತದೆ. ಆದರೆ,ಆ ವ್ಯಕ್ತಿಗೆ ನೆನಪಾಗುವ ಮೊದಲೇ ಆತನ ಮೊಬೈಲ್ ತಕ್ಷಣ ಎಚ್ಚರಿಕೆ ಸಂದೇಶ ನೀಡುತ್ತದೆ. ಕನೆಕ್ಟೆಡ್ ಕಾರ್ ತಂತ್ರಜ್ಞಾನದ ಮೂಲಕ ಬೆಸೆದುಕೊಂಡ ಕಾರು ಮತ್ತು ಮೊಬೈಲ್, ಇಂತ ಹೊತ್ತಲ್ಲಿ ಸಹಾಯಕ್ಕೆ ಬರುತ್ತದೆ. ಟ್ಯಾಕ್ಸಿ ಕಂಪನಿಯ ಮಾಲೀಕನೊಬ್ಬ ತನ್ನ ಮೊಬೈಲ್ ಮೂಲಕವೇ ತನ್ನ ಹತ್ತಾರು ಟ್ಯಾಕ್ಸಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಕ್ಷಣಾರ್ಧದಲ್ಲಿ ಕಂಡುಕೊಳ್ಳಬಹುದು. ತನ್ನ ಟ್ಯಾಕ್ಸಿ ಓಡಿಸುಗರಿಗೆ ಸಾಗುವ ದಾರಿಯ ಸಂಚಾರ ದಟ್ಟಣೆಯ ಮಾಹಿತಿ ಒದಗಿಸಿ, ಅದಕ್ಕೆ ತಕ್ಕಂತೆ ಮಾರ್ಗ ಬದಲಿಸಿ ಸುಲಭವಾಗಿ ಊರು ಮುಟ್ಟುವ ಸಲಹೆ ನೀಡಬಹುದು. ಕಾರಿನಲ್ಲಿ ದೂರದ ಊರಿಗೆ ಸಾಗುತ್ತಿದ್ದೀರಿ, ಮನೆಯಲ್ಲಿ ಗೀಸರ್ ಆಫ್ ಮಾಡುವುದು ಆಗ ನೆನಪಾಗುತ್ತದೆ, ಚಿಂತೆ ಬೇಡ ನಿಮ್ಮ ಕಾರು ಮನೆಯಲ್ಲಿನ ಗೀಸರ್ ಆಫ್ ಮಾಡುತ್ತದೆ. ನೀವು ಮತ್ತು ಕುಟುಂಬ, ವಾರದ ಕೊನೆಯಲ್ಲಿ ಮಾಲ್‍ವೊಂದಕ್ಕೆ ಹೋಗಬೇಕೆಂದುಕೊಂಡಿರುತ್ತೀರಿ, ಆ ಮಾಲ್‍ನಲ್ಲಿ ಪಾರ್ಕಿಂಗ್‌ಗೆ ಎಷ್ಟು ಜಾಗಗಳು ಖಾಲಿ ಇವೆ ಎಂಬುದನ್ನು ನಿಮ್ಮ ಕಾರು ನಿಮಗೆ ತಿಳಿಸುತ್ತದೆ. ಮಾಲ್‌ನ ಸುತ್ತಮುತ್ತಲಿನ ಪರಿಸರದ ನೇರ ಮಾಹಿತಿ ಕನೆಕ್ಟೆಡ್ ಕಾರ್ ಮೂಲಕ ನಿಮ್ಮ ಕಾರು ಪಡೆದುಕೊಂಡು ನಿಮಗೆ ಮಾಹಿತಿ ನೀಡುತ್ತದೆ. ಆಗ ನೀವು ಪಾರ್ಕಿಂಗ್‍ಗಾಗಿ ಅಲೆದಾಡುವ-ಸಮಯ ಕಳೆಯುವ ಅಗತ್ಯ ಇರುವುದಿಲ್ಲ. ಇನ್ನೊಂದು ಪ್ರಮುಖ ಅನುಕೂಲವೆಂದರೆ ಜಿಯೋ ಫೆನ್ಸಿಂಗ್(Geo-Fencing). ಅಂದರೆ ನಿರ್ದಿಷ್ಟ ದಾರಿಯಲ್ಲಿ, ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಗಾಡಿ ಓಡಿಸುವಂತೆ ಮಾಡುವುದು. ಉದಾಹರಣೆಗೆ ನೀವು ನಿಮ್ಮ ಮನೆಯಲ್ಲಿ  ಮಗ/ಮಗಳಿಗೆ ಕಾಲೇಜಿಗೆ ಹೋಗಿಬರಲು ಕಾರನ್ನು ಕೊಡಿಸುತ್ತೀರಿ ಎಂದುಕೊಳ್ಳಿ. ದಿನವೂ ಮಕ್ಕಳು ಕಾಲೇಜಿಗೆ ಅದೇ ದಾರಿಯಲ್ಲಿ ಸಾಗಿ ಮರಳಿ ಬರುವಂತೆ ಮಾಡಬಹುದು, ಬಂಡಿ ಅದೇ ವಾತಾವರಣದಲ್ಲಿ ಸಾಗಿ ಬರುವ ಮಾಹಿತಿಯನ್ನು ಒಮ್ಮೆ ಜಿಯೋ ಫೆನ್ಸಿಂಗ್ ಮೂಲಕ ಫೀಡ್ ಮಾಡಿ, ಕನೆಕ್ಟೆಡ್ ಕಾರು ಮೂಲಕ ನಿಮ್ಮ ಮೊಬೈಲ್ ಮತ್ತು ಕಾರು ಬೆಸೆದುಕೊಂಡಿದ್ದರೆ, ಈ ದೈನಂದಿನ ಕಾಲೇಜಿಗೆ ಹೋಗಿ ಬರುವ ದಾರಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಹೀಗೆ ಕಾರು ಓಡಾಡುವ ಚಟುವಟಿಕೆಯ ಮೇಲೆ ಸುಲಭವಾಗಿ ಕಣ್ಣಿಡಬಹುದು. ಕಾರೊಂದು ದಾರಿಯಲ್ಲಿ ಸಾಗುವಾಗ ಅಪಘಾತಕ್ಕೀಡಾದರೆ, ಕೂಡಲೇ ಹತ್ತಿರದ ಸಂಚಾರಿ ಪೋಲೀಸ್‍ರಿಗೂ ಇಲ್ಲ ಅಪಘಾತವಾದ ವ್ಯಕ್ತಿಗಳ ಕುಟುಂಬಕ್ಕೆ ಕೂಡಲೇ ಕಾರು ಮಾಹಿತಿ ಒದಗಿಸಿ ಜೀವ ಉಳಿಸುವ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಗಾಡಿಯೊಂದು ಘಾಟಿ ಪ್ರದೇಶದಲ್ಲಿ ಸಾಗುತ್ತಿದೆ, ಮುಂದೆ ಹತ್ತಾರು ಮೈಲಿ ದೂರದಲ್ಲಿ ಗುಡ್ಡ ಕುಸಿತ, ಭೂಕುಸಿತವಾದರೆ, ಕೂಡಲೇ ಅದರ ಮಾಹಿತಿ ಗಾಡಿಗೆ ತಲುಪುತ್ತದೆ. ಆಗ ಓಡಿಸುಗ ಮುಂದೆ ಸಾಗುವ ಅಪಾಯವನ್ನು ಅರಿತು ಗಾಡಿಯ ಸಾಗುವ ದಾರಿಯನ್ನು ಬದಲಿಸಿಯೋ ಇಲ್ಲವೇ ಭದ್ರವಾದ ಜಾಗವನ್ನು ಸೇರಿಕೊಳ್ಳಬಹುದು. ದೈನಂದಿನ ವ್ಯವಹಾರದ ಮೇಲೆ ಕಣ್ಣಿಡಲು, ಕಳ್ಳ-ಕಾಕರ ಚಟುವಟಿಕೆಗಳ ಮಾಹಿತಿ ಪಡೆದು ಪೋಲೀಸ್ ವ್ಯವಸ್ಥೆಗೆ ನೆರವಾಗಲು ಬೆಸುಗೆಯ ಗಾಡಿಗಳ ಅಗತ್ಯವಿರಲಿದೆ.

ಅನಾನುಕೂಲಗಳ ವಿಷಯ ಬಂದಾಗ, ಕಾರುಗಳ ಹ್ಯಾಕಿಂಗ್ ಮುಖ್ಯವಾದ ತೊಡಕಾಗುವ ಸಾಧ್ಯತೆ ಇದೆ. ಮಿಂಬಲೆ ಮೂಲಕ ಬೆಸೆದುಕೊಂಡಿರುವ ಗಾಡಿಗಳನ್ನು ವೆಬ್ಸೈಟ್ ಹ್ಯಾಕ್ ಮಾಡುವಂತೆ ದೂರದಲೆಲ್ಲೋ ಇರುವ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡರೆ ಆಗುವ ಅನಾಹುತಗಳನ್ನು ಯೋಚಿಸಿ. ಇನ್ನೂ ದಿಗಿಲುಕೋರರು ಕಾರುಗಳನ್ನು ತಮ್ಮ ವಶಕ್ಕೆ ಪಡೆದು, ಯಾವುದೋ ದೇಶದ ಮೂಲೆಯಿಂದ ಕಾರನ್ನು ಅದರ ಮಾಲೀಕನ ಮೊಬೈಲ್ ಹೀಗೆ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದು ಕೊಲೆ ಸುಲಿಗೆ ಮಾಡುವ ಅಪಾಯ ತಪ್ಪಿದ್ದಲ್ಲ. ಮಾದಕ ವಸ್ತು ಸಾಗಾಟಗಾರರು ಈ ತಂತ್ರಜ್ಞಾನದ ಮೂಲಕ ಕಳ್ಳದಾರಿಗಳ ಮೂಲಕ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಸಮಾಜವನ್ನು ಹಾಳುಗೆಡುವಬಹುದು. 

ಮಾಹಿತಿ ಗುಟ್ಟನ್ನು ಕಾಪಾಡಿಕೊಳ್ಳುವುದು ಕಷ್ಟ. ಬೆಸುಗೆಯ ಗಾಡಿಗಳನ್ನು ಕ್ಲೌಡ್, ಆಪ್ ಮೂಲಕ ಸಾಕಷ್ಟು ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರಿಂದ ಕಾರಿನೊಡೆಯರ ವೈಯುಕ್ತಿಕ ಮಾಹಿತಿ ಕಾರು ತಯಾರಕರಿಗೆ ಸುಲಭವಾಗಿ ತಲುಪುತ್ತದೆ. ಇಂತ ಮಾಹಿತಿಗೆ ಪ್ರವೇಶವಕಾಶ(Access) ಹೊಂದಿರುವವರು ತಮಗಿಷ್ಟದಂತೆ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಬೆಸುಗೆಯ ಗಾಡಿಗಳ ಸಾಧಕ ಬಾಧಕಗಳ ಚರ್ಚೆಗಳು ದಿನೇದಿನೇ ಜೋರಾಗಿ ನಡೆಯುತ್ತಲೇ ಇವೆ. ಬೆಸುಗೆಯ ಗಾಡಿಗಳ ಅನಾನುಕೂಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಭರದಲ್ಲಿ ಸಾಗಿವೆ. ಇದರ ಮಧ್ಯೆಯೇ ಸಾಕಷ್ಟು ಬೆಸುಗೆಯ ಗಾಡಿಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನವೂ ಓಡಾಡುತ್ತಿವೆ.

ಮಾಹಿತಿ ಸೆಲೆ: connected cars
ತಿಟ್ಟ ಸೆಲೆ: connected cars pic

ಅಣು ಕೂಡಿಕೆಯಿಂದ ಮಿಂಚು – ಸವಾಲುಗಳೇನು?

ರಘುನಂದನ್.

ಹಿಂದಿನ ಬರಹದಲ್ಲಿ ಅಣುಕೂಡಿಕೆಯಿಂದ ಮಿಂಚನ್ನು ಪಡೆಯುವ ಬಗೆಯನ್ನು ತಿಳಿದೆವು. ಅಣು ಕೂಡಿಕೆಯ ಹೊಲಬಿನಿಂದ ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ(environmental friendly). ಬೂದಿ(ash), ಇಂಗಾಲ (carbon), ಹೊಗೆ(smoke), ಕೊಳಕು ನೀರು(polluted water) ಮತ್ತು ಕೆಟ್ಟಗಾಳಿ ಇಂತಹ ಯಾವುದೇ ಹಾನಿಯಿಲ್ಲ, ಆದರೂ ಅಣು ಕೂಡಿಕೆಯಿಂದ ನಾವು ಮಿಂಚನ್ನು ಯಾಕೆ ಬಳಸುತ್ತಿಲ್ಲ ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅಣು ಕೂಡಿಕೆಯನ್ನು ಯಾಕೆ ನಾವು ಯಾಕೆ ಬಳಸುತ್ತಿಲ್ಲ?

1. ಅಣು ಕೂಡಿಕೆಯಲ್ಲಿ ಡ್ಯೂಟಿರಿಯಮ್-ಟ್ರೈಶಿಯಮ್ ಅಣುಗಳು ಒಂದಕ್ಕೊಂದು ಕೂಡಬೇಕಾದರೆ ತುಂಬಾ ಹೆಚ್ಚು ಕಾವಳತೆ (Temperature) ಬೇಕಾಗುತ್ತದೆ, ಅಂದರೆ 100 ಮಿಲಿಯ ಡಿಗ್ರಿಗಳಷ್ಟು (100 million degree centigrade). ಹೆಚ್ಚು ಹರವು ಮತ್ತು ಕಾಲದಲ್ಲಿ ಅಷ್ಟು ಕಾವಳತೆ ಹೇಗೆ ಉಂಟು ಮಾಡಬಹುದೆಂಬುದು ಇನ್ನೂ ಗೊತ್ತಿಲ್ಲ, ನೇಸರನಲ್ಲಿ ಈ ಮಟ್ಟದ ಕಾವಳತೆ ಕಾಣಬಹುದು. ಅಲ್ಲಿ ಕೂಡ ಇದೇ ಅಣು ಕೂಡಿಕೆ ನಡೆಯುತ್ತಿದ್ದು ನಮಗೆ ದಿನಾಲು ಬೆಳಕು ಮತ್ತು ಹುರುಪು ನೇಸರನಿಂದ ದೊರಕುತ್ತಿರುವುದು ಇದೇ ಮಾದರಿಯಲ್ಲಿ. ಅದರಿಂದ ಗಿಡ ಮರಗಳು ಬದುಕುತ್ತಿವೆ. ನಾವು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅದೇ ಮನುಷ್ಯರಿಗೆ ಊಟ ದೊರಕಿಸುತ್ತಿದೆ. ಈ ಭೂಮಿಯ ಮೇಲೆ ಜೀವಿಗಳು ಇರುವುದೇ ಅಣು ಕೂಡಿಕೆಯಿಂದ ಬರುವ ಬೆಳಕು ಮತ್ತು ಹುರುಪಿನಿಂದ ಎಂದು ಹೇಳಬಹುದು.

2. ಅಷ್ಟು ಕಾವಳತೆಯನ್ನು(Temperature) ಉಂಟುಮಾಡಿದೆವು ಎಂದು ಇಟ್ಟುಕೊಳ್ಳೋಣ. ಆಗ ಅದನ್ನು ಹಿಡಿದಿಟ್ಟುಕೊಳ್ಳಬಹುದಾದ ವಸ್ತು ಯಾವುದಾದರು ಇದೆಯೇ? ಏಕೆಂದರೆ ಬರಿಯ ಮೂರು ಸಾವಿರ ಡಿಗ್ರಿಗಳಿಗಷ್ಟೇ ಎಲ್ಲಾ ಗೊತ್ತಿರುವ ವಸ್ತುಗಳು ಕರಗಿ ಹೋಗುತ್ತವೆ. ಇದಕ್ಕೆ ಬಗೆಹರಿಕೆ ಎಂದರೆ ಡ್ಯೂಟಿರಿಯಮ್-ಟ್ರೈಶಿಯಮ್ ಬೆರಕೆಯನ್ನು ಸೆಳೆ-ಸುರುಳಿಗಳ(magnetic coils) ಮೂಲಕ ಎರಕದ ಇರವಿನಲ್ಲಿ ಇರಿಸಬಹುದೇ ಎಂದು ವಿಜ್ಞಾನಿಗಳು ಯೋಚಿಸುತ್ತಿದ್ದಾರೆ. ಹಾಗಾದಾಗ ಹೆಚ್ಚು ಕಾದ ಭಾಗಗಳು ಸುತ್ತಲಿನ ವಸ್ತುವಿಗೆ ತಾಕದಂತೆ ನೋಡಿಕೊಳ್ಳಬಹುದು. ಈ ಬಗೆಯ ಏರ್ಪಾಟಿಗೆ ಟೋಕಾಮಾಕ್ (Tokamak) ಎನ್ನುತ್ತಾರೆ. ಟೋಕಾಮಾಕಿನಲ್ಲಿ ಬಿಡಿ ಎಲೆಕ್ಟ್ರಾನ್ಗಳು ಮತ್ತು ಅಣುಗಳು ಪ್ಲಾಸ್ಮಾ/ಎರಕದ ಇರವಿನಲ್ಲಿ(molten state/plasma) ಇರುವುದರಿಂದ ಒಂದಕ್ಕೊಂದು ಡಿಕ್ಕಿ ಹೊಡೆದಾಗ ಹೀಲಿಯಮ್ ರೂಪುಗೊಳ್ಳುತ್ತದೆ. ಅದರಿಂದ ಉಂಟಾಗುವ ಬಿಸಿ ಕಾವಿನಿಂದ ಮಿಂಚು / ವಿದ್ಯುತ್ ಅನ್ನು ಹುಟ್ಟುಹಾಕಬಹುದು.

ಅಮೇರಿಕಾದ ದೊಡ್ಡ ಕಂಪೆನಿಗಳಲ್ಲಿ ಒಂದಾದ ಲಾಕ್‌ಹೀಡ್ ಮಾರ್ಟಿನ್ (Lockheed Martin) ಅಣು ಕೂಡಿಕೆಯ ಕುರಿತಾಗಿ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ. ಲಾಕ್‌ಹೀಡ್ ಮಾರ್ಟಿನ್ ನ ತಾಮಸ್ ಮೆಗ್ವೈರ್ ಕಳೆದ ತಿಂಗಳಿನ ಸುದ್ದಿಕೂಟದಲ್ಲಿ ಹೀಗೆ ಹೇಳಿದ್ದಾರೆ –

“ಹೊಸ ಅಣುವಿನ ಶಕೆಯೊಂದನ್ನು ಮೊದಲು ಮಾಡೋಣ. ಪ್ರಪಂಚಕ್ಕೆ ಹಸನಾದ ಹುರುಪನ್ನು ಕೊಡುವುದು ನಮ್ಮ ಮುಂದಿನ ಗುರಿಯಾಗಿದೆ”.

ಈ ಚಳಕದರಿಮೆಯ ಮೂಲಕ ಮಿಂಚನ್ನು ತಯಾರಿಸಲಾಗುತ್ತದೆ ಎಂದು ಲಾಕ್‌ಹೀಡ್ ಮಾರ್ಟಿನ್ ಹೇಳಿಕೊಂಡಿದೆ. ಇದರಿಂದಾಗಿ ಅರಿಮೆಯ ಕೂಟಗಳಲ್ಲಿ (scientific circles) ಈ ಸುದ್ದಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ತಾಮಸ್ ಮೆಗ್ವೈರ್ ಪ್ರಕಾರ ಟೋಕಾಮಾಕ್‌ಗಳ ಒಳಗೆ ಇರುವ ಪ್ಲಾಸ್ಮಾ/ಎರಕದ ಒತ್ತಡ ಹೆಚ್ಚಾದರೆ ಅದರ ಸುತ್ತಲಿನ ವಸ್ತುವಿಗೆ ತೊಂದರೆಯಾಗುತ್ತದೆ. ಅದರ ಬದಲು ಒತ್ತಡವನ್ನು ಕಡಿಮೆ ಮಾಡಿದಲ್ಲಿ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಸಲದೆಣಿಕೆ(Frequency) ಕಡಿಮೆಯಾಗುತ್ತದೆ ಮತ್ತು ಟೋಕಾಮಾಕ್ ಗಳನ್ನು ತಯಾರಿಸಿದ ವಸ್ತುವಿನ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಈ ಬಗೆಯಲ್ಲಿ ಮಾಡಿದರೆ, ಹಣಕಾಸಿನ ಲೆಕ್ಕಾಚಾರದಲ್ಲಿ ನೋಡಿದರೆ ಅಷ್ಟು ಗಿಟ್ಟುವ ಏರ್ಪಾಟು (profitable venture) ಎನಿಸುವುದಿಲ್ಲ. ಅದಕ್ಕಾಗಿ ಲಾಕ್‌ಹೀಡ್ ಅವರು ಮೊಗೆಸಿರುವ ಟೋಕಾಮಾಕಿನಲ್ಲಿ ಪ್ಲಾಸ್ಮಾವು ಗೋಡೆಯ ಹತ್ತಿರ ಬರುತ್ತಿದ್ದಂತೆ ಸೆಳೆ-ಸುರುಳಿಗಳ ಹರಹು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಆ ಎಡೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಮತ್ತು ಆ ಭಾಗದಲ್ಲಿ ಹೆಚ್ಚು ಮರುಎಸಕಗಳು ಆಗುತ್ತವೆ,ಹೆಚ್ಚು ಹುರುಪು ದೊರೆಯುತ್ತದೆ.

ತಾಮಸ್ ಮೆಗ್ವೈರ್ ತಂಡವು ತಯಾರಿಸುತ್ತಿರುವ ಟೋಕಾಮಾಕ್‍ಗಳು ಎಷ್ಟು ಚಿಕ್ಕದಾಗಿ ಇರುತ್ತವೆಯೆಂದರೆ ಅದನ್ನು ಒಂದು ಟ್ರಕ್ ಇಲ್ಲವೇ ಲಾರಿಯ ಹಿಂದೆ ಅಳವಡಿಸಬಹುದು, ಹೀಗೆ ಮಾಡುವುದು ಸುಲಭದ ಮಾತಲ್ಲ ಎಂದು ಜಗತ್ತಿನ ವಿಜ್ಞಾನಿಗಳ ಅನಿಸಿಕೆ. ಈ ಹಮ್ಮುಗೆಯ ವಿಷಯವಾಗಿ ಲಾಕ್‌ಹೀಡ್ ಯಾವುದೇ ಗುಟ್ಟುಗಳನ್ನು ಹೊರಹಾಕಿಲ್ಲ. ಈ ಹಮ್ಮುಗೆ ಗೆಲುವು ಕಂಡಲ್ಲಿ ಜಗತ್ತು ಎದುರಿಸುತ್ತಿರುವ ಎಲೆಕ್ಟ್ರಿಸಿಟಿ ತೊಂದರೆ ಕೊನೆಗೊಳ್ಳಬಹುದು. ಇನ್ನೂ ಹಲವು ವರ್ಷ ಕಾದುನೋಡಬೇಕಿದೆ. ಇದರ ಕುರಿತಾಗಿ ಲಾಕ್‌ಹೀಡ್ ಮಾರ್ಟಿನ್ ಬಿಡುಗಡೆ ಮಾಡಿರುವ ಒಂದು ವಿಡಿಯೋ ಇಲ್ಲಿದೆ.

(ಚಿತ್ರ ಸೆಲೆ: chenected.ichewikipediawired.com)

ದುಂಡಾಕಾರದ ರನ್‌ವೇ

ಜಯತೀರ್ಥ ನಾಡಗೌಡ.

ಜಗತ್ತಿನೆಲ್ಲೆಡೆ ಹೆಚ್ಚು ಮಂದಿಯ ಓಡಾಟ, ವಿಮಾನ ಸಾರಿಗೆಯ ಮೇಲೂ ದಟ್ಟಣೆ ಹೆಚ್ಚಿಸಿದೆ. ನಮ್ಮ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಭಾರತದ ಪ್ರಮುಖ ಬಾನೋಡತಾಣಗಳು ಇಂದು ಕಿಕ್ಕಿರಿದಿರುತ್ತವೆ. ದುಬೈ, ಫ್ರಾಂಕ್‌ಪರ್ಟ್, ಪ್ಯಾರಿಸ್, ಲಂಡನ್, ಸಿಂಗಪುರ್, ನ್ಯೂಯಾರ್ಕ್ ಮುಂತಾದ ಬಾನೋಡ ತಾಣಗಳ ಮೂಲಕ ಪ್ರತಿ ವರುಶ ಕೋಟಿಗಟ್ಟಲೆ ಪ್ರವಾಸಿಗರು ಓಡಾಡುತ್ತಾರೆ. ದಿನವೊಂದಕ್ಕೆ ನೂರಾರು ಬಾನೋಡಗಳು ಇಲ್ಲಿಗೆ ಬಂದಿಳಿಯುತ್ತವೆ ಮತ್ತು ಇಲ್ಲಿಂದ ಬೇರೆಡೆಗೆ ಹಾರುತ್ತವೆ. ಹೀಗಾಗಿ ಈ ಬಾನೋಡ ತಾಣಗಳ ಓಡುದಾರಿ(Runway) ಯಾವಾಗಲೂ ಬ್ಯುಸಿ. ಲಂಡನ್ ಬಾನೋಡತಾಣದಲ್ಲಿ ಪ್ರತಿ 45 ಸೆಕೆಂಡ್‌ಗಳಿಗೊಮ್ಮೆ ಬಾನೋಡವೊಂದು ಮುಗಿಲಿನತ್ತ ಹಾರುತ್ತದೆ. ದಿನವೊಂದಕ್ಕೆ ಹಾರುವ ಮತ್ತು ಬಂದಿಳಿಯುವ ಒಟ್ಟು ಬಾನೋಡಗಳು 1400, ಅಂದರೆ ಪ್ರತಿ ವರುಷಕ್ಕೆ 5 ಲಕ್ಷಕ್ಕೂ ಹೆಚ್ಚು ಬಾನೋಡಗಳು. ನಮ್ಮ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಾನೋಡತಾಣದ ಅಂಕಿ ಸಂಖ್ಯೆಗಳತ್ತ ಗಮನ ಹಾಯಿಸಿದರೆ, ಪ್ರತಿ ವರುಶ 2 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಇಲ್ಲಿ ಓಡಾಟ ನಡೆಸುತ್ತಾರಂತೆ. ಅಂದರೆ ದಿನವೊಂದಕ್ಕೆ ಸುಮಾರು 55 ಸಾವಿರ ಪ್ರಯಾಣಿಕರು. ಒಂದೇ ದಿನದಲ್ಲಿ ಸುಮಾರು 500 ಬಾನೋಡಗಳು ಕೆಂಪೇಗೌಡ ಬಾನೋಡತಾಣದಲ್ಲಿ ಓಡಾಟ ನಡೆಸುತ್ತವೆ.

 ಈ ಓಡುದಾರಿಗಳು ಬ್ಯುಸಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಾನೋಡ ತಾಣಗಳನ್ನು ಕಟ್ಟುವ ಅಗತ್ಯವಿದೆ. ಹೊಸ ಬಾನೋಡ ತಾಣಗಳನ್ನು ಕಟ್ಟಲು ಸಾವಿರಾರು ಎಕರೆಗಳಷ್ಟು ಜಾಗಬೇಕು. ಬಾನೋಡತಾಣಗಳ ಈ ಸಮಸ್ಯೆಯ ಬಗ್ಗೆ ಆಳವಾದ ಅರಕೆ ನಡೆಸಿರುವ ನೆದರ್‌ಲ್ಯಾಂಡ್ಸ್ ಏರ್‌ಪೋರ್ಟ್ಸ್ ಸೆಂಟರ್‌ನ(NLR) ಮುಖ್ಯ ಸಂಶೋಧನಾ ವಿಜ್ಞಾನಿ ಹೆಂಕ್ ಹೆಸ್ಸಿಲಿಂಕ್(Henk Hesselink), ಒಂದು ಹೊಸದಾದ ಯೋಜನೆಯನ್ನು(Concept) ಮುಂದಿಟ್ಟಿದ್ದಿದ್ದಾರೆ. ಅದೇ “ದುಂಡಾಕಾರದ ಓಡುದಾರಿ”  ಇಂಗ್ಲಿಷ್‌ನಲ್ಲಿ ಎಂಡ್‌ಲೆಸ್ ರನ್‍ವೇ ಇಲ್ಲವೇ ಸರ್ಕ್ಯೂಲರ್ ರನ್‍ವೇ (Endless Runway/Circular Runway) ಎಂಬುದು.

ಒಂದು ಬಾನೋಡ ಹಾರುವುದು ಇಲ್ಲವೇ ನೆಲಕ್ಕೆ ಬಂದಿಳಿಯುವುದು ಸುಲಭದ ಕೆಲಸ ಅಲ್ಲ. ಒಂದು ಬಾನೋಡ ನೆಲಕ್ಕಿಳಿಯುತ್ತಿರುವಾಗ ಅದು ಸಾಕಷ್ಟು ಗಾಳಿಯೊತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಬಾನೋಡವೊಂದು ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ಕೆಳಗಿಳಿಸುವುದು ಕಷ್ಟ. ಇದನ್ನು ಕ್ರಾಸ್‌ವಿಂಡ್ ಲ್ಯಾಂಡಿಂಗ್ ಎನ್ನುತ್ತಾರೆ. ಹೆಚ್ಚಿನ ಬಾನೋಡಗಳು ಗಾಳಿ ಬೀಸುವ ದಿಕ್ಕಿನಲ್ಲೇ ಇಳಿಯುತ್ತವೆ. ಅದಕ್ಕೆಂದೇ ಬಾನೋಡವೊಂದನ್ನು ಕೆಳಗಿಳಿಸುವಾಗ ನಿಧಾನಕ್ಕೆ ಅದನ್ನು ಗಾಳಿ ಬೀಸುವ ದಿಕ್ಕಿಗೆ ತರುತ್ತ ಇಳಿಸುತ್ತಾರೆ. ಇಂತಹದ್ದಕ್ಕೆಲ್ಲ ಹತ್ತಾರು ಕಿಲೋಮೀಟರ್ ಗಟ್ಟಲೆ ದೊಡ್ಡ ಓಡುದಾರಿ ಕಟ್ಟಿಸಬೇಕು. ಇವುಗಳಿಗೆ ಸಾಕಷ್ಟು ಜಾಗ ಬೇಕಾಗುತದೆ. ಹೆಸ್ಸಿಲಿಂಕ್ ಅವರ ದುಂಡಾಕಾರದ ಓಡುದಾರಿಗೆ ಕೇವಲ 3.5 ಕಿಲೋಮೀಟರ್ ವ್ಯಾಸದ(Diameter) ದುಂಡಷ್ಟೇ(Circle) ಸಾಕಂತೆ. ಈ ದುಂಡಿನ ಸುತ್ತಲೂ ಒಂದೇ ಕಾಲಕ್ಕೆ 3 ಬಾನೋಡಗಳು ಹಾರಬಹುದು ಮತ್ತು 3 ಬಾನೋಡಗಳು ಕೆಳಗಿಳಿಯಬಹುದು. ಹೆಸ್ಸೆಲಿಂಕ್ ಅವರ ದುಂಡಾಕಾರದ ಓಡುದಾರಿಯ ಪ್ರಮುಖ ಅನುಕೂಲಗಳು(Advantages) ಹೀಗಿವೆ: 

ಈಗಿರುವ ಬಾನೋಡತಾಣಗಳಿಗಿಂತ, ದುಂಡನೆಯ ಓಡುದಾರಿಯ ಬಾನೋಡ ತಾಣಗಳು 2/3ರಷ್ಟು ಜಾಗವನ್ನು ಉಳಿತಾಯ ಮಾಡುತ್ತವೆ.ಸಾಮಾನ್ಯವಾಗಿ ಬಾನೋಡ ತಾಣಗಳಲ್ಲಿ ಬಾನೋಡಗಳು ಒಂದೇ ಕಡೆಯಿಂದ ಮೇಲೇರುವುದು ಮತ್ತು ಬಂದಿಳಿಯುವುದರಿಂದ ಒಂದೆಡೆ ದಿಕ್ಕಿನಲ್ಲಿ ಹೆಚ್ಚು ಸದ್ದು ಗದ್ದಲ ಇರುತ್ತದೆ. ಓಡುದಾರಿ ದುಂಡಿನ ಸುತ್ತಲೂ ಬಾನೋಡಗಳು ಏರುವುದು-ಇಳಿಯುವುದು ಮಾಡುವುದರಿಂದ, ಸದ್ದಿನ ಪರಿಣಾಮ ಎಲ್ಲೆಡೆ ಒಂದೇ ಸಮನಾಗಿರುತ್ತದೆ. ಹೀಗಾಗಿ ಬಾನೋಡ ತಾಣಗಳ ಅಕ್ಕ ಪಕ್ಕದ ಮನೆ ಮಾಡಿಕೊಂಡಿರುವವರಿಗೆ ಸದ್ದು ಗದ್ದಲ ಕಡಿಮೆಯಾಗಲಿದೆ.

ಒಂದೇ ಹೊತ್ತಿಗೆ ಹಲವಾರು ಬಾನೋಡಗಳು ಹಾರಲು-ಇಳಿಯಲು ಸಾಧ್ಯವಾಗುವುದರಿಂದ, ಒಂದೇ ಬಾನೋಡತಾಣ ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಬಾನೋಡಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟು, ಬಾನೋಡತಾಣಗಳ ಸಿಬ್ಬಂದಿ ಮತ್ತು ಪ್ರಯಾಣಿಕರ ಹೊತ್ತು ಉಳಿತಾಯವಾಗಲಿದೆ.ಈ ದುಂಡಾಕಾರದ ಓಡುದಾರಿಗಳ ಬಳಕೆಯಿಂದ, ಈಗಿನ ನೇರವಾಗಿರುವ ಓಡುದಾರಿಗಳಿಗೆ ತಗಲುವ ಸಿಬ್ಬಂದಿಯಲ್ಲಿ ಮುಕ್ಕಾಲು ಭಾಗ ಕಡಿತಗೊಳ್ಳಬಹುದೆಂದು ಹೆಸ್ಸಿಲಿಂಕ್ ಹೇಳಿದ್ದಾರೆ. ಬಾನೋಡತಾಣಗಳ ಅಳವು(Capacity) ಹೆಚ್ಚಲಿದೆ. ಬಾನೋಡಗಳು ಗಾಳಿಯ ಒತ್ತಡಕ್ಕೆ ತಕ್ಕಂತೆ ಇಳಿಯಬೇಕೆಂಬ ತೊಂದರೆಯೂ ಇರುವುದಿಲ್ಲ.

ಹೆಸ್ಸಿಲಿಂಕ್ ಮತ್ತವರ ತಂಡ, ಈ ಯೋಜನೆಗಾಗಿ ಗಣಕಯಂತ್ರಗಳ ಮೂಲಕ ಅಣುಕು(Simulations) ಮಾಡಿನೋಡಿದ್ದಾರೆ. “ಈ ಯೋಜನೆ ಸಾಕಾರಗೊಳ್ಳಲು ಹೆಚ್ಚಿನ ಹೊತ್ತು ತಗುಲುತ್ತದೆ. ದುಂಡಗಿನ ಓಡುದಾರಿ ಇನ್ನೂ ಈಗ ತಾನೆ ಹುಟ್ಟಿದ ಮಗುವಿನ ಹಂತದಲ್ಲಿದೆ. ಅಣುಕುಗಳ ಮೂಲಕ ಕೆಲವು ಮಾದರಿಗಳನ್ನು ತಯಾರಿಸಿ, ಡ್ರ‍ೋನ್‌ಗಳನ್ನು ಬಳಸಿ ಪರೀಕ್ಷೆಗಳು ನಡೆಸಬೇಕಾಗಿದೆ. ನಂತರ ಮಾದರಿ ಬಾನೋಡ ತಾಣ ಕಟ್ಟಿಸಿ ಅಲ್ಲಿ ಎಲ್ಲವನ್ನು ನೈಜ ಪರೀಕ್ಷೆ ನಡೆಸುವ ಕೆಲಸವಾಗಬೇಕು. ಇದೆಲ್ಲ ಕೂಡಲೇ ಆಗುವಂತ ಕೆಲಸವಲ್ಲ, ಏನಿಲ್ಲವೆಂದರೂ ಹತ್ತಾರು ವರುಶಗಳ ಬಳಿಕವೇ ಇಂತ ಒಂದು ಬಾನೋಡ ತಾಣವನ್ನು ನಾವು ನೋಡಬಹುದು” ಎನ್ನುತ್ತಾರೆ ಹೆಸ್ಸಿಲಿಂಕ್. ಪ್ಯಾರಿಸ್‌ನ ಸಿ.ಡಿ.ಜಿ.(Charles de Gaulle) ಬಾನೋಡ ತಾಣದಲ್ಲಿ ಹೆಚ್ಚಿನ ಪ್ರಯಾಣಿಕರು, ಬಾನೋಡಗಳು ತುಂಬಿ ಗಿಜಿಗಿಡುವ ದಿನವನ್ನೇ ನಮ್ಮ ಅಣುಕುಗಳಿಗೆ ಬಳಸಿಕೊಂಡಿದ್ದೇವೆ. ಒಳ್ಳೆಯ ಫಲಿತಾಂಶಗಳು(Results) ಕಂಡುಬಂದಿವೆ ಎಂದು ಹಿಗ್ಗಿನಿಂದ ಹೇಳಿಕೊಂಡಿದ್ದಾರೆ ಹೆಸ್ಸಿಲಿಂಕ್.

ಈ ದುಂಡಾಕಾರದ ಓಡುದಾರಿಯ ಬಗ್ಗೆ ಸಾಕಶ್ಟು ಪ್ರಶ್ನೆಗಳು ಎದ್ದಿವೆ. ಇದೆಲ್ಲದಕ್ಕೂ ತಕ್ಕ ಉತ್ತರಗಳನ್ನು ಹೆಸ್ಸಿಲಿಂಕ್ ಮತ್ತವರ ತಂಡದವರು ಕಂಡುಕೊಂಡಿದ್ದಾರೆ. ಕ್ರಾಸ್‌ವಿಂಡ್ ಲ್ಯಾಂಡಿಗ್ ಮಾಡುವಾಗ ಉಂಟಾಗುವ ತೊಂದರೆಗಳ ಬಗ್ಗೆಯೂ ಈ ತಂಡ ಪರಿಹಾರ ಕಂಡುಕೊಂಡಿದೆ. [ಕ್ರಾಸ್‌ವಿಂಡ್ ಲ್ಯಾಂಡಿಗ್ ಅಂದರೆ ಓಡುದಾರಿಗೆ ಅಡ್ಡವಾಗಿ (Perpendicular) ಗಾಳಿ ಬೀಸುತ್ತಿರುತ್ತದೆ, ಆಗ ಬಾನೋಡ ಓಲಾಟಕ್ಕೆ(Yaw), ಉರುಳಾಟಕ್ಕೆ (Rolling) ಒಳಪಡುವ ಸಾಧ್ಯತೆ ಹೆಚ್ಚು. ಇದು ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ]. ನೆದರ್‌ಲ್ಯಾಂಡ್ಸ್ ಬಾನೋಡ ಸಂಶೋಧನಾಲಯದ ಈ ಕೆಲಸಕ್ಕೆ ಜರ್ಮನಿ, ಫ್ರಾನ್ಸ್, ಪೋಲ್ಯಾಂಡ್ ಮತ್ತು ಸ್ಪೇನ್ ದೇಶಗಳ ವಿವಿಧ ಬಾನೋಡ ಸಂಶೋಧನಾಲಯಗಳು ಕೈಜೋಡಿಸಿವೆ. ಇಂತ ಓಡುದಾರಿಯುಳ್ಳ ಬಾನೋಡ ತಾಣ ಕಟ್ಟಿಸಲು , ಈಗಿರುವ ಬಾನೋಡ ತಾಣಗಳಿಗಿಂತ ಅರ್ಧಪಟ್ಟು ಹೆಚ್ಚು ಹಣ ಹೂಡಬೇಕಾಗಬಹುದಂತೆ. ಆದರೆ ಇದರಿಂದ ಸಾಕಷ್ಟು ಜಾಗ/ಭೂಮಿ ಉಳಿತಾಯವಾಗಲಿದೆ ಮತ್ತು ಮೇಲೆ ತಿಳಿಸಿದ ಅನುಕೂಲಗಳನ್ನು ಪಡೆಯಬಹುದಾಗಿದೆ. ಈ ದುಂಡಾಕಾರದ ಓಡುದಾರಿ ಸಾಕಾರಗೊಳ್ಳುವುದನ್ನು ನಾವಿನ್ನೂ ಕಾಯಲೇಬೇಕು.

(ಬಾನೋಡಗಳ ಹಾರಾಟದ ಕುರಿತಾಗಿ ಮೇಲ್ಕಂಡ ಅಂಕಿ-ಅಂಶಗಳು ಕೋವಿಡ್ ಮುಂಚಿನ ಅಂಕಿ-ಅಂಶಗಳಾಗಿವೆ. ಜಗತ್ತು ಕೋವಿಡ್ ಮುಂಚಿನ ರೀತಿಗೆ ಮರಳುತ್ತಿದೆ. ಆದ್ದರಿಂದ ಅಂಕಿ-ಅಂಶಗಳಲ್ಲಿ ಚಿಕ್ಕಪುಟ್ಟ ಬದಲಾವಣೆ ಕಾಣಬಹುದು).

 

ಅಣು ಕೂಡಿಕೆಯಿಂದ ಮಿಂಚು

ರಘುನಂದನ್.

ನಮ್ಮ ಮನೆಗಳನ್ನು ಬೆಳಗುವ ಕರೆಂಟ್ ಎಲ್ಲಿಂದ ಬರುತ್ತದೆ ಮತ್ತು ಹೇಗೆ ಹುಟ್ಟುತ್ತದೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ರಾಯಚೂರು, ಶರಾವತಿ, ಕೈಗಾ ಮತ್ತು ಶಿವನಸಮುದ್ರಗಳಲ್ಲಿ ಪವರ್ ಪ್ಲಾಂಟ್‌ಗಳಿವೆ (ಶಕ್ತಿ ಸ್ಥಾವರಗಳು) ಎಂದು ಕಂಡು ಕೇಳಿರುತ್ತೇವೆ. ಪವರ್ ಪ್ಲಾಂಟ್‍ಗಳಲ್ಲಿ ಅರಿಮೆ ಮತ್ತು ಚಳಕಗಳೆರಡೂ ಬಳಸಿ ಮಿಂಚನ್ನು (electric current) ಹುಟ್ಟಿಸಿ ಮನೆಮನೆಗಳಿಗೆ, ಊರುಗಳಿಗೆ ತಲುಪಿಸುತ್ತಾರೆ. 1902ರಲ್ಲಿ ಏಶಿಯಾದಲ್ಲಿಯೇ ಮೊಟ್ಟಮೊದಲಿಗೆ ಶಿವನಸಮುದ್ರದ ಅಬ್ಬಿಗಳಿಂದ(waterfalls) ಮಿಂಚನ್ನು (electric current) ತಯಾರಿಸಿ ಬೆಂಗಳೂರಿಗೆ ತಲುಪಿಸಲಾಗಿತ್ತು.

ರಾಯಚೂರಿನಲ್ಲಿ ಇದ್ದಿಲಿನಿಂದ ಮಿಂಚನ್ನು ತಯಾರಿಸಲಾಗುತ್ತದೆ. ಅಂದರೆ ಇದ್ದಿಲನ್ನು ಚೆನ್ನಾಗಿ ಕಾಯಿಸಿ ಅದರ ಕಾವಿನಿಂದ ನೀರನ್ನು ದೊಡ್ಡ ಹಂಡೆಗಳಲ್ಲಿ(boiler) ಕುದಿಸಲಾಗುತ್ತದೆ. ನೀರು ಕುದ್ದ ಬಳಿಕ ಅದರಿಂದ ಬರುವ ಆವಿಯ ಒತ್ತಡವನ್ನು ಹೆಚ್ಚಿಸಿ ತಿರುಗಾಲಿಗಳ(turbine) ಮೂಲಕ ಹರಿದುಹೋಗಲು ಬಿಡಲಾಗುತ್ತದೆ. ಒತ್ತಡದ ಆವಿಯಲ್ಲಿ ಅಡಗಿರುವ ಹುರುಪು ಆ ತಿರುಗಾಲಿಗಳನ್ನು ಕಡುಹೆಚ್ಚು ಬಿರುಸಿನಲ್ಲಿ ತಿರುಗಿಸುತ್ತದೆ. ಈ ತಿರುಗಾಲಿಗಳು ಬಳಿಕ ಮಿಂಚುಟ್ಟುಕಗಳನ್ನು(electric generators) ತಿರುಗಿಸುತ್ತವೆ. ಅಲ್ಲಿಂದ ತಂತಿಗಳ ಮೂಲಕ ಮನೆಮನೆಗಳಿಗೆ ಮಿಂಚನ್ನು ತಲುಪಿಸಲಾಗುತ್ತದೆ.

ಶರಾವತಿಯಲ್ಲಿ ನೀರಿನಿಂದ ಮಿಂಚನ್ನು ಉಂಟುಮಾಡಲಾಗುತ್ತದೆ. ಅಂದರೆ ಹೊಳೆಯಿಂದ ಬರುವ ನೀರನ್ನು ಅಣೆಕಟ್ಟುಗಳ ನೆರವಿನಿಂದ ತಡೆದುಹಿಡಿಯಲಾಗುತ್ತದೆ. ಅಣೆಕಟ್ಟುಗಳಲ್ಲಿ ಒಂದು ಎತ್ತರದ ಮಟ್ಟದಲ್ಲಿ ನೀರನ್ನು ಹಿಡಿದಿಡಲಾಗುತ್ತದೆ. ಕೆಳಗಿನ ಮಟ್ಟದಲ್ಲಿ ನೀರು ತಿರುಗಾಲಿಗಳನ್ನು ಅಳವಡಿಸಿರುತ್ತಾರೆ. ಅಣೆಕಟ್ಟುಗಳ ಬಾಗಿಲು ತೆರೆದಾಗ ದುಮ್ಮಿಕ್ಕಿ ಬಿರುಸಿನಿಂದ ಬರುವ ನೀರನ್ನು ತಿರುಗಾಲಿಗಳ ಸುತ್ತಕ್ಕೆ (periphery) ತಾಕುವಂತೆ ಹರಿಸಲಾಗುತ್ತದೆ. ತಿರುಗಾಲಿಗಳು ಹೆಚ್ಚು ಬಿರುಸಿನಲ್ಲಿ ತಿರುಗುತ್ತವೆ . ಈ ತಿರುಗಾಲಿಗಳನ್ನು(turbines) ಮಿಂಚುಟ್ಟುಕಗಳಿಗೆ (electric generators) ತಳುಕಿಸಿದಾಗ ಅವು ಕೂಡ ತಿರುಗುತ್ತವೆ ಮತ್ತು ಮಿಂಚು ತಯಾರಾಗುತ್ತದೆ. ಅದನ್ನು ತಂತಿಗಳ ಮೂಲಕ ಮನೆಗಳಿಗೆ ತಲುಪಿಸುತ್ತಾರೆ.

ನಮ್ಮ ನಾಡಿನ ಕೈಗಾದಲ್ಲಿರುವ ಅಣುಶಕ್ತಿ ಸ್ಥಾವರದ ಬಗ್ಗೆ ಸುದ್ದಿಹಾಳೆಗಳಲ್ಲಿ ಓದಿರುತ್ತೇವೆ. ಅಣುಶಕ್ತಿ ಕುರಿತಾಗಿ ಜಗತ್ತಿನಲ್ಲಿ ಮಾತುಕತೆಗಳು, ವಾದವಿವಾದಗಳು ನಡೆಯುತ್ತಲೇ ಇರುತ್ತವೆ. ಅಣುಗಳ ಮೂಲಕ ಹೇಗೆ ಮಿಂಚಿನ ಶಕ್ತಿಯನ್ನು(electric energy) ತಯಾರಿಸಲಾಗುತ್ತದೆ ಎಂಬುದನ್ನು ನೋಡೋಣ.

ಅಣುಶಕ್ತಿ ತಯಾರಿಸುವಲ್ಲಿ ಎರಡು ಬಗೆಯಿದೆ:

1. ಅಣು ಒಡೆತ (nuclear fission)
2. ಅಣು ಕೂಡಿಕೆ (nuclear fusion)

ಈಗ ಜಗತ್ತಿನಲ್ಲಿರುವ ಎಲ್ಲಾ ಅಣುಶಕ್ತಿ ತಯಾರಿಕೆಯು ಅಣು ಒಡೆತದ ಮೂಲಕವೇ ಆಗುತ್ತಿದೆ. ಅಣು ಒಡೆತದ ಹೊಲಬಿನಲ್ಲಿ(process) ಹೆಚ್ಚು ತೂಕವಿರುವ ಬೇರಡಕವಾದ (ಬೇರು+ಅಡಕ – element) ಯುರೇನಿಯಮ್ ಅನ್ನು ನ್ಯೂಟ್ರಾನ್‌ಗಳ ಮೂಲಕ ಸಿಡಿಸಲಾಗುತ್ತದೆ. ಆಗ ಅದು ಎರಡು ಕಡಿಮೆ ತೂಕವಿರುವ ಬೇರಡಕಗಳಾಗಿ ಮಾರ್ಪಾಟಾಗುತ್ತದೆ. ಅದರ ಜೊತೆ ಇನ್ನೊ ಹೆಚ್ಚು ನ್ಯೂಟ್ರಾನ್‌ಗಳನ್ನು, ಗಾಮಾ ಕದಿರುಗಳನ್ನು(gamma rays) ಹುಟ್ಟಿಸುತ್ತದೆ ಮತ್ತು ಮಿಕ್ಕಿರುವ ತೂಕ ಹುರುಪಾಗಿ(mass to energy) ಮಾರ್ಪಾಟಾಗುತ್ತದೆ. ಅಣು ಒಡೆತದಿಂದ ಬರುವ ಹುರುಪು ತುಂಬಾ ಕಾವನ್ನು(heat energy) ಹೊರಸೂಸುತ್ತದೆ. ಈ ಕಾವನ್ನು ನೀರನ್ನು ಕುದಿಸಲಿಕ್ಕೆ ಬಳಸಲಾಗುತ್ತದೆ. ನೀರು ಕುದ್ದ ಬಳಿಕ ಬರುವ ಆವಿಯನ್ನು(steam) ಮುಂಚೆ ತಿಳಿಸಿದಂತೆ ಮಿಂಚಿನ ಶಕ್ತಿಯನ್ನು (electric energy) ತಯಾರಿಸುವುದಕ್ಕೆ ಬಳಸುತ್ತಾರೆ. ತೋರಿಯಮ್ (Th) ಮತ್ತು ಪ್ಲುಟೋನಿಯಮನ್ನು (Pu) ಕೂಡ ಅಣುಶಕ್ತಿ ಹುಟ್ಟಿಸುವುದಕ್ಕೆ ಬಳಸಲಾಗುತ್ತದೆ.

ಈಗ ಮೂರು ಬೇರೆ ಬೇರೆ ಬಗೆಗಳಲ್ಲಿ ಮಿಂಚನ್ನು ತಯಾರಿಸುವದನ್ನು ಮೇಲೆ ಕಂಡಿದ್ದೇವೆ. ಈ ಮೂರು ಬಗೆಗಳಿಗೆ ಅದರದ್ದೇ ಕೊರತೆಗಳಿವೆ.
1. ಮೊದಲಿಗೆ ರಾಯಚೂರಿನಲ್ಲಿ ಇದ್ದಿಲಿನ ಮೂಲಕ ತಯಾರಾಗುವ ಮಿಂಚಿನ ಶಕ್ತಿಯಲ್ಲಿ ಯಾವಾಗಲೂ ಇದ್ದಿಲಿನ ಪೂರೈಕೆಯನ್ನು ನೆಚ್ಚಿರುತ್ತದೆ. ಹಾಗಾಗಿ ಇದ್ದಿಲು ಇಲ್ಲ ಅಂದರೆ ಮಿಂಚನ್ನು ತಯಾರಿಸಲಾಗುವುದಿಲ್ಲ. ಮತ್ತೆ ಇದ್ದಿಲು ನೆಲದಲ್ಲಿ ಸಿಗುವ ಪಳೆಯುಳಿಕೆಯ ಉರವಲಾದ್ದರಿಂದ(fossil fuel) ಹೆಚ್ಚು ದಿನಗಳ ಕಾಲ ಅದನ್ನು ನೆಚ್ಚಿ ಕೂರಲಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇದ್ದಿಲಿನಿಂದ ಬರುವ ಕಸ ಸುತ್ತಮುತ್ತಲ ಪರಿಸರವನ್ನು ಹಾಳುಗೆಡುವುದರಿಂದ ಈ ಬಗೆಯ ತಯಾರಿಕೆ ಅಂತಹ ಹಸನಾದದುದಲ್ಲ(clean energy) ಎಂಬುದು ಸಾಮಾನ್ಯ ಅನಿಸಿಕೆ.

2. ಶರಾವತಿ, ಶಿವನಸಮುದ್ರದಲ್ಲಿ ತಯಾರಾಗುವ ಮಿಂಚಿನ ಶಕ್ತಿ ಯಾವಾಗಲು ಹರಿಯುವ ಹೊಳೆಯನ್ನು ನೆಚ್ಚಿರುತ್ತದೆ. ಅಂದರೆ ಒಳ್ಳೆ ಮಳೆ ಆದರೆ ಅಣೆಕಟ್ಟುಗಳಿಗೆ ನೀರು ತುಂಬುತ್ತದೆ. ಇಲ್ಲವಾದರೆ ತಿರುಗಾಲಿಗಳಿಗೆ ನೀರು ಒದಗಿಸಲಾಗುವುದಿಲ್ಲ.

3. ಕೈಗಾದಲ್ಲಿ ತಯಾರುಗುವ ಮಿನ್ಕೆ ಅಣು ಒಡೆತದ (nuclear fission) ಮೂಲಕ ತಯಾರಾಗುತ್ತದೆ. ಹೆಚ್ಚು ಅಣುತೂಕವುಳ್ಳ ಯುರೇನಿಯಮ್, ಪ್ಲುಟೋನಿಯಮ್ ಇಲ್ಲವೇ ತೋರಿಯಮನ್ನು ನ್ಯೂಟ್ರಾನ್‌ಗಳ ಮೂಲಕ ಸಿಡಿಸಿ ಎರಡು ಕಡಿಮೆ ಅಣುತೂಕವುಳ್ಳ ಬೇರಡಕಗಳಾಗಿ ಮಾರ್ಪಾಡಾಗುತ್ತದೆ. ಈ ಹೊಲಬಿನಲ್ಲಿ ಆಲ್ಪಾ, ಗಾಮಾ ಕದಿರುಗಳು ಕೂಡ ಹುಟ್ಟಿಕೊಳ್ಳುತ್ತವೆ. ಹೊಸದಾಗಿ ಹುಟ್ಟಿದ ಎರಡು ಬೇರಡಕಗಳೂ ರೇಡಿಯೋಆಕ್ಟಿವ್ ಆಗಿರುತ್ತದೆ. ಅಂದರೆ ಅವು ಕೂಡ ಕದಿರುಗಳನ್ನು ಹೊರಸೂಸುತ್ತಿರುತ್ತವೆ. ಮಿಕ್ಕುಳಿದ ಯುರೇನಿಯಮ್, ಪ್ಲುಟೋನಿಯಮ್ ಗಳೂ ಕೂಡ ಹಾನಿಕಾರಕವೇ. ಒಟ್ಟಾರೆ ಇವೆಲ್ಲವನ್ನು ಅಣುಕಸ(nuclear waste) ಎಂದು ಗುರುತಿಸಲಾಗುತ್ತದೆ. ಇವು ಮಾನವನ ಹದುಳಕ್ಕೆ (human health) ಕುತ್ತನ್ನು(hazardous) ಉಂಟುಮಾಡುವಂತಹ ವಸ್ತುಗಳು.

ಅಣುಕಸವನ್ನು ಹೇಗೆ ಅಡಗಿಸಬೇಕು ಎಂಬುದು ಸಾಕಷ್ಟು ಮಾತುಕತೆಗೆ ಒಳಗಾಗಿರುವ ವಿಷಯವಾಗಿದೆ. ಈ ಮೇಲಿನ ಮೂರು ಕಾರಣಗಳಿಂದಾಗಿ ಈಗ ಸದ್ಯದಲ್ಲಿ ಅಣು ಕೂಡಿಕೆಯ(Nuclear Fusion) ಮೂಲಕ ಮಿಂಚಿನ ಶಕ್ತಿಯನ್ನು ತಯಾರಿಸುವುದು ಹೆಚ್ಚೆಚ್ಚು ಗಮನ ಸೆಳೆಯುತ್ತಿದೆ.

ಅಣು ಕೂಡಿಕೆಯ ಮೂಲಕ ಹೇಗೆ ಮಿಂಚನ್ನು ತಯಾರಿಸಬಹುದು?

ಅಣು ಒಡೆತದ ಹೊಲಬಿನಲ್ಲಿ (process) ಒಂದು ಹೆಚ್ಚು ತೂಕವುಳ್ಳ ಅಣುವನ್ನು ಎರಡು ಕಡಿಮೆ ತೂಕವುಳ್ಳ ಅಣುಗಳಾಗಿ ಒಡೆಯಲಾಗುತ್ತದೆ. ಆದರೆ ಅಣು ಕೂಡಿಕೆಯಲ್ಲಿ ಎರಡು ಚಿಕ್ಕ ಅಣುಗಳು ಕೂಡುತ್ತವೆ. ಹೊಸದಾಗಿ ರೂಪಗೊಂಡ ಅಣುವಿಗೂ ಮೊದಲು ಕೂಡಿಕೆಯಾದ ಎರಡು ಚಿಕ್ಕ ಅಣುಗಳಿಗೂ ಇರುವ ತೂಕದ ವ್ಯತ್ಯಾಸವು (mass deficit) ಶಕ್ತಿಯಾಗಿ ಮಾರ್ಪಾಡಾಗುತ್ತದೆ.

ಈಗ ಹೈಡ್ರೋಜನನ್ನು ಉದಾಹರಣೆಯಾಗಿ ತೆಗೆದುಕೊಂಡು ಅಣು ಕೂಡಿಕೆಯ ಮೂಲಕ ಹೇಗೆ ಶಕ್ತಿಯನ್ನು ಹುಟ್ಟಿಸಬಹುದು ಎಂದು ನೋಡೋಣ. ಹೈಡ್ರೋಜನ್ ಒಂದು ಪ್ರೋಟಾನ್ ಇರುವ ಅಣು. ಆದರೆ ಒಂದಕ್ಕಿಂತ ಹೆಚ್ಚು ನ್ಯೂಟ್ರಾನ್‌ಗಳು ಇರಬಲ್ಲವು. ಒಂದು ನ್ಯೂಟ್ರಾನ್ ಇದ್ದರೆ ಡ್ಯೂಟಿರಿಯಮ್ ಮತ್ತು ಎರಡು ನ್ಯೂಟ್ರಾನ್‌ಗಳಿದ್ದರೆ ಟ್ರೈಶಿಯಮ್ ಎನ್ನುತ್ತಾರೆ. ಇವರೆಡನ್ನು ಕೂಡಿದಾಗ ಏನಾಗುತ್ತದೆ ನೋಡೋಣ. ಕೆಳಗಿನ ಚಿತ್ರದಲ್ಲಿ ಕಾಣುವಂತೆ ಡ್ಯೂಟಿರಿಯಮ್ ಮತ್ತು ಟ್ರೈಶಿಯನ್ ಕೂಡಿದಾಗ ಹೊಸ ಅಣುವಾದ ಹೀಲಿಯಮ್ ರೂಪಗೊಳ್ಳುತ್ತದೆ. ಇದರೊಟ್ಟಿಗೆ ಒಂದು ನ್ಯೂಟ್ರಾನ್ ಕೂಡ ಹೊರಬರುತ್ತದೆ ಮತ್ತು ಹೆಚ್ಚು ಶಕ್ತಿ ಹುಟ್ಟುತ್ತದೆ.

ಈ ಕೂಡಿಕೆಯಿಂದ ಎಷ್ಟು ಶಕ್ತಿ ಹುಟ್ಟುತ್ತದೆ ಎಂದು ಲೆಕ್ಕ ಹಾಕಬಹುದು. ಮೇಲೆ ತೋರಿದ ರಿಯಾಕ್ಷನ್ ಅನ್ನು ಸರಿದೂಗಿಸೋಣ (balancing the reaction).

2D1 + 3T1 -> 4He + 1n0

mD = (2-0.000994) mH

mT = (3-0.006284)mH

mHe = (4-0.027404)mH

mn = (1+0.001378)mH

dm = 0.0187mH

mH = 1.6727. 10-27 kg

E = mc2 = 0.0187mHc2 = 2.8184. 10-12 J

E = 2.8184. 10-12 / 1.6022.10-19 eV = 17.56MeV

ಒಂದು ಕೆಜಿ ಡ್ಯೂಟಿರಿಯಮ್ ಟ್ರೈಶಿಯಮ್ ಬೆರಕೆಗೆ ಒಟ್ಟು ರಿಯಾಕ್ಷನ್ ಗಳ ಎಣಿಕೆ(total number of reactions);

N = (0.5)/2.5 X 1.67 X 10-27 = 1.2 X 1026

E = N 2.8184. 10-12 J = 3.4 X 1014 J

24 ಗಂಟೆಗಳಲ್ಲಿ 4 GW ಶಕ್ತಿ.

ಬರಿ ಒಂದು ಕೆಜಿ ಡ್ಯೂಟಿರಿಯಮ್-ಟ್ರೈಶಿಯಮ್ ಬೆರೆತದಿಂದ ಈ ಮಟ್ಟದಲ್ಲಿ ಶಕ್ತಿಯನ್ನು ಹುಟ್ಟಿಸಬಹುದು. ಅದರ ಜೊತೆ ಅಣು ಕೂಡಿಕೆಯ ಹೊಲಬಿನಿಂದ ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ(environmental friendly). ಬೂದಿ(ash), ಕರ‍್ಪು(carbon), ಹೊಗೆ(smoke), ಕೊಳಕು ನೀರು(polluted water) ಮತ್ತು ಕೆಟ್ಟಗಾಳಿ ಇಂತಹ ಯಾವುದೇ ಹಾನಿಯಿಲ್ಲ.

ಹಾಗಾದರೆ ಅಣು ಕೂಡಿಕೆಯನ್ನು ಯಾಕೆ ನಾವು ಯಾಕೆ ಬಳಸುತ್ತಿಲ್ಲ ಎಂಬುದನ್ನು ಮುಂದಿನ ಬರಹದಲ್ಲಿ ನೋಡೋಣ.

(ಚಿತ್ರ ಸೆಲೆ: wikipediakompulsa.com)

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System)

ಜಯತೀರ್ಥ ನಾಡಗೌಡ.

ಅಡಾಸ್ – ಕಳೆದ 10-12 ವರುಶಗಳಿಂದ ಆಟೋಮೊಬೈಲ್ ಕೈಗಾರಿಕೆಯಲ್ಲಿ ಈ ಹೆಸರು ಕೇಳದವರು ಅತಿ ವಿರಳ. ಚಕ್ರದಿಂದ ಎತ್ತಿನಗಾಡಿಯಾಗಿ, ಮುಂದೆ ಜುಮ್ಮನೆ ಸಾಗುವ ಕಾರು-ಬಸ್ಸು ಮುಂತಾದವುಗಳನ್ನು ನಿರ್ಮಿಸುತ್ತಲೇ ಹೋದ ಮನುಕುಲ, ಸಾರಿಗೆ ಏರ್ಪಾಟಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಲೇ ಸಾಗಿದೆ. ತನ್ನಿಂದ ತಾನೇ ಓಡುವ ಕಾರು ಬಳಸುವ ಯುಗದ ಹೊಸ್ತಿಲು ತಲುಪಿದ್ದೇವೆ. ಇದೆಲ್ಲವೂ ಅಡಾಸ್ ತಂತ್ರಜ್ಞಾನದ ಫಲ.

ನಮ್ಮಲ್ಲಿ ಹಲವು ಇಂಜಿನೀಯರ್, ತಂತ್ರಜ್ಞಾನಿಗಳಿಗೆ ಈ ಅಡಾಸ್ ಪದ ಹೊಸದೇನಲ್ಲ. ಇನ್ನೂ ಕೆಲವು ಕಾರು ಬಳಕೆದಾರರು ಈ ತಂತ್ರಜ್ಞಾನ ಬಳಸಿದ್ದರೂ ಅವರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆಟೋಮೊಬೈಲ್ ಉದ್ಯಮದ ಚಿತ್ರಣವನ್ನೇ ಬದಲು ಮಾಡಲಿರುವ ಈ ಹೊಸ ಚಳಕದ ಬಗ್ಗೆ ಅರಿಯೋಣ ಬನ್ನಿ. 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System) ಇದರ ಕಿರುರೂಪವೇ ಅಡಾಸ್(ADAS). ಸರಳವಾಗಿ ಕನ್ನಡದಲ್ಲಿ ಹೇಳಬೇಕೆಂದರೆ, ಗಾಡಿ ಓಡಿಸುಗನಿಗೆ ನೆರವಾಗಬಲ್ಲ ಒಂದು ಚೂಟಿ ಏರ್ಪಾಟು ಇದು.  ಇಂದು ಜಗತ್ತಿನಾದ್ಯಂತ ಓಡಾಡುವ ಬಹುತೇಕ ಎಲ್ಲ ಕಾರು,ಬಸ್ಸು,ಲಾರಿಗಳಲ್ಲಿ ಅಳವಡಿಸಲ್ಪಟ್ಟ ಹಲವಾರು ಏರ್ಪಾಟುಗಳಲ್ಲಿ ಗಣಕಗಳ ಬಳಕೆ ಮಾಡಲಾಗುತ್ತದೆ. ಈ ಎಲ್ಲ ಗಣಕಗಳಿಗೆ ಮಾಹಿತಿ ನೀಡಿ ಕಾರನ್ನು ಸರಾಗವಾಗಿ ಕೊಂಡೊಯ್ಯಲು ಹಲವು ಅರಿವುಕಗಳನ್ನು ಕಾರುಗಳಲ್ಲಿ ಜೋಡಿಸಲಾಗಿರುತ್ತದೆ. ಇದು ಕೂಡ ಅಡಾಸ್ ವ್ಯವಸ್ಥೆಯ ಒಂದು ಭಾಗವೇ.

ಎಷ್ಟೇ ಜಾಗರೂಕರಾಗಿದ್ದರೂ ಮನುಷ್ಯನು ಮಾಡುವ ತಪ್ಪುಗಳಿಂದ ಸಾರಿಗೆಯ ಅಪಘಾತ, ಅವಘಡಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸಕ್ಕಿಳಿದ ಆಟೋಮೊಬೈಲ್ ಉದ್ಯಮದವರು, ಅಡಾಸ್ ವಿಶೇಷತೆಗಳನ್ನು ಗಾಡಿಗಳಲ್ಲಿ ಬಳಸಿ ಸಾರಿಗೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಸಾಗಿದ್ದಾರೆ. ಇದೇ ಅಡಾಸ್ ತಂತ್ರಜ್ಞಾನ ಮುನ್ನೆಲೆಗೆ ಬರಲು ಕಾರಣ. ಅಪಘಾತ, ಗಾಡಿಗಳ ಡಿಕ್ಕಿಯಾಗುವಂತ ತುರ್ತು ಸಂದರ್ಭಗಳನ್ನು ಕೂಡಲೇ ಅರಿತು ಓಡಿಸುಗನನ್ನು ಎಚ್ಚರಿಸಿ ಅಪಘಾತಗಳನ್ನು ತಡೆಯುವುದೇ ಅಡಾಸ್ ಚಳಕದ(Technology) ಮುಖ್ಯ ಕೆಲಸ. ಈ ಚಳಕವೇ ನಮ್ಮ ಕಾರುಗಳಲ್ಲಿ ಸುರಕ್ಷತೆಯ ಏರ್ಪಾಟುಗಳನ್ನು ಹೆಚ್ಚಿಸುತ್ತಿದೆ. ಇಂದು ಹಲವಾರು ಗಾಡಿಗಳಲ್ಲಿ ಓಡಿಸುಗ ಕೂರುಮಣೆಯ ಪಟ್ಟಿ (ಸೀಟ್ ಬೆಲ್ಟ್) ಬಳಸದೇ ಹೋದರೆ ಇಂಜೀನ್ ಶುರುವಾಗಲ್ಲ, ಗಾಡಿಯ ಗಾಲಿಗಳಲ್ಲಿ ಗಾಳಿಯು ಕಡಿಮೆಯಾದರೆ ತಕ್ಷಣ ಓಡಿಸುಗನ ಮುಂದಿರುವ ತೋರುಮಣೆಯಲ್ಲಿ ಅಲಾರ್ಮ್ ಬರುತ್ತದೆ, ಗಾಡಿಯ ವೇಗ 80-100 ಕಿ.ಮೀ.ಪ್ರತಿಗಂಟೆ ದಾಟುತ್ತಿದ್ದಂತೆ ಗಾಡಿಯ ಅಲಾರ್ಮ್ ಎಚ್ಚರಿಕೆಯ ಗಂಟೆ ಬಾರಿಸತೊಡಗುತ್ತದೆ. ಇವೆಲ್ಲವೂ ಅಪಘಾತ, ಗುದ್ದಾಟ ತಡೆಗಟ್ಟಬಲ್ಲ ಅಡಾಸ್‌ನ ಒಂದು ಭಾಗ.ಈ ಹೊಸ ಅಡಾಸ್ ಅನ್ನು ಬಲು ಮುಖ್ಯವಾಗಿ ಈ ಕೆಳಕಂಡ ಭದ್ರತೆಯ ಏರ್ಪಾಟುಗಳಲ್ಲಿ ಬಳಸಲಾಗುತ್ತಿದೆ.

1. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ

2. ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ

3. ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ

4. ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ

5. ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ

 ಈ ಎಲ್ಲ ಭದ್ರತೆಯ ವಿಷಯಗಳಲ್ಲಿ ಅಡಾಸ್ ಅಳವಡಿಸಿಕೊಳ್ಳಲು ಸಾಕಷ್ಟು ಅರಿವುಕ(Sensor), ರಡಾರ್ ಮತ್ತು ಕ್ಯಾಮೆರಾಗಳ ಬಳಕೆ ಮಾಡಲಾಗುತ್ತದೆ. ಗಾಡಿಯ ಸುತ್ತಮುತ್ತಲಿನ ಆಗುಹೋಗುಗಳು, ಬಗೆ ಬಗೆಯ ಸದ್ದು ಸಪ್ಪಳಗಳನ್ನು ಈ ಅರಿವುಕಗಳು, ರಡಾರ್ ಗಳು ಯಾವ ತಪ್ಪಿಲ್ಲದಂತೆ ಅರಿತು ಗಾಡಿಯ ಗಣಕದ ಮೂಲಕ ಓಡಿಸುಗನಿಗೆ ಸಂದೇಶ ಕಳಿಸುವಲ್ಲಿ ತೊಡಗಿರುತ್ತವೆ. ಗಾಡಿಯ ಸುತ್ತಲೂ 360 ಡಿಗ್ರಿ ಕ್ಯಾಮೆರಾಗಳು ಚಕಚಕನೆ ಪಟಗಳನ್ನು ಸೆರೆಹಿಡಿದು ಗಾಡಿಯ ಗಣಕಕ್ಕೆ ಮಾಹಿತಿ ನೀಡುತ್ತವೆ, ಇದರಿಂದ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಮುಂಚೆಯೇ ಎಚ್ಚರಿಸಿ ಅವುಗಳನ್ನು ತಪ್ಪಿಸುವಲ್ಲಿ ನೆರವಾಗುತ್ತವೆ.

ಅಡಾಸ್‌ನ ವಿವಿಧ ವಿಶೇಷತೆಗಳ ತೋರುವ ಚಿತ್ರ

ಹೀಗೆ ಅಡಾಸ್ ನ ಆಳ ಅರಿತ ಆಟೋಮೊಬೈಲ್ ಕೈಗಾರಿಕೆ, ಅಡಾಸ್ ನ ವಿವಿಧ ಹಂತಗಳಾಗಿ ವಿಂಗಡಿಸಿದೆ. ಒಟ್ಟು 6 ಹಂತಗಳ ಅಡಾಸ್ ನೋಡಬಹುದು. ಇವುಗಳು ಹೀಗಿವೆ.

ಸೊನ್ನೆ ಹಂತ: ಇದರಲ್ಲಿ ಎಲ್ಲವೂ ಮನುಷ್ಯನ ಹಿಡಿತ ಅಂದರೆ ಗಾಡಿಯ ಬಹುಪಾಲು ಏರ್ಪಾಟುಗಳು ಓಡಿಸುಗರ ಹಿಡಿತದಲ್ಲಿರುತ್ತವೆ. ತಂತಾನೇ ಕೆಲಸ ಮಾಡುವ ಗಣಕ, ರಡಾರ್, ಅರಿವುಕಗಳು ಕಡಿಮೆಯೇ. ತಿಗುರಿ(Steering), ತಡೆತ(Brake), ವೇಗ ಏರಿಸುಕ(Accelerator) ಎಲ್ಲವನ್ನೂ ಓಡಿಸುಗನೇ ಮಾಡಬೇಕು. ಆದರೆ ಭದ್ರತೆಯ ಕೆಲವು ವಿಶೇಷತೆಗಳಾದ ಕ್ಯಾಮೆರಾ, ದಿಡೀರ್ ಎದುರಾಗುವ ತಿರುವುಗಳ ಬಗ್ಗೆ ಮುನ್ಸೂಚನೆ ನೀಡುವ ಏರ್ಪಾಟು, ಗಾಡಿಗಳಲ್ಲಿ ಅಳವಡಿಸಬಹುದು.

ಮೊದಲ ಹಂತ: ಚಿಕ್ಕ ಪ್ರಮಾಣದಲ್ಲಿ ಗಾಡಿ ಹಿಡಿತದ ವಿಶೇಷತೆಗಳನ್ನು ನೀಡಲಾಗಿರುತ್ತದೆ. ಮಾರ್ಪಾಟುಗೊಳ್ಳುವ ಸುಯ್ ಅಂಕೆ ಏರ್ಪಾಟು(Adaptive Cruise Control) ಇದಕ್ಕೆ ಒಳ್ಳೆಯ ಉದಾಹರಣೆ. ಹೆದ್ದಾರಿಯಲ್ಲಿ ಚಲಿಸುವಾಗ, ಗಾಡಿಯು ದಾರಿಯ ಸ್ಥಿತಿಗತಿಗೆ ತಕ್ಕಂತೆ  ವೇಗ ಮಾರ್ಪಾಟು ಮಾಡಿಕೊಂಡು ಸಾಗುತ್ತಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ವೇಗ ಏರಿಸುಕ(Accelerator) ಮತ್ತು ಬೇರ್ಪಡಕಗಳ(Clutch) ಮೇಲಿನ ಕಾಲ್ತೆಗೆದು, ಓಡಿಸುಗ ನೆಮ್ಮದಿಯಿಂದ ಸಾಗಬಹುದು.

ಎರಡನೇ ಹಂತ: ಇದನ್ನು ಅರೆ-ಸ್ವತಂತ್ರದ ಗಾಡಿಯೆನ್ನಬಹುದು. ಇದರಲ್ಲಿ ತಿಗುರಿ ಮತ್ತು ಗಾಡಿಯ ವೇಗ ಏರಿಸುವ ಕೆಲಸಗಳನ್ನು ಗಾಡಿಯೇ ನೋಡಿಕೊಳ್ಳುತ್ತದೆ. ಓಡಿಸುಗ ಕೂಡ ಇದನ್ನು ನಿರ್ವಹಿಸಬಹುದು. ಇನ್ನೂ ಗಾಡಿಯ ತಡೆಯೊಡ್ಡುವಿಕೆ(braking), ಲೇನ್ ಬದಲಾವಣೆ(Lane Change), ನಿಲುಗಡೆ ವ್ಯವಸ್ಥೆಯನ್ನು(Parking) ಓಡಿಸುಗನೇ ನೋಡಿಕೊಳ್ಳಬೇಕು.

ಮೂರನೇ ಹಂತ: ಈ ಹಂತದಲ್ಲಿ ಗಾಡಿಯು ಬಹುತೇಕ ಎಲ್ಲ ಏರ್ಪಾಟುಗಳನ್ನು ಸ್ವತಹ ತಾನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲದಾದರೂ ಕೆಲವು ಸಂದರ್ಭಗಳಲ್ಲಿ ಓಡಿಸುಗನ ನಿಯಂತ್ರಣ ಬೇಕೇಬೇಕು. ಉದಾಹರಣೆಗೆ, ಸಂಚಾರ ದಟ್ಟಣೆಯ ಸಂದರ್ಭಗಳಲ್ಲಿ ಗಾಡಿಯ ಗಣಕ ಏರ್ಪಾಟು ಗಾಡಿಯ ಸಂಪೂರ್ಣ ಹಿಡಿತ ಪಡೆಯಬಲ್ಲುದು. ಓಡಿಸುಗ ಹಾಯಾಗಿ ಪತ್ರಿಕೆ ಓದುತ್ತಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯಬಹುದು. ಕೆಲವೊಮ್ಮೆ ಅವಶ್ಯವೆನಿಸಿದಾಗ ಗಾಡಿಯು ತೋರುಮಣೆಯ(Dashboard) ಮೂಲಕ ಓಡಿಸುಗನಿಗೆ ಸಂದೇಶ ನೀಡಿ, ಹಿಡಿತವನ್ನು ಓಡಿಸುಗ ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ.

ನಾಲ್ಕನೇ ಹಂತದ ಅಡಾಸ್ – ಗಾಡಿಯು ನಿರ್ದಿಷ್ಟ ಸನ್ನಿವೇಶಗಳಲ್ಲಿ ಸಂಪೂರ್ಣ ತನ್ನ ಹಿಡಿತದಲ್ಲೇ ಓಡುವ ಸಾಮರ್ಥ್ಯ ಹೊಂದಿರುತ್ತದೆ. ಗಾಡಿಯು ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ಎಲ್ಲವನ್ನೂ ಸ್ವತಹ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಆ ಪರಿಮಿತಿಯನ್ನು ಮೀರಿದ ಸಂದರ್ಭಗಳಲ್ಲಿ ಅದು ಓಡಿಸುಗನೇ ಗಾಡಿ ನಿರ್ವಹಿಸುವಂತೆ ಸಂದೇಶ ನೀಡುತ್ತದೆ. ಉದಾಹರಣೆಗೆ, ಅತಿಯಾದ ಮಂಜುಗಡ್ಡೆಯಿಂದ ಕೂಡಿದ ದಾರಿಗಳಲ್ಲಿ ಗಾಡಿ ಓಡಿಸುಗನ ಹಿಡಿತಕ್ಕೆ ಮರಳಬಹುದು. 

ಐದನೇಯ ಹಂತ: ಕೊನೆಯ ಹಂತದಲ್ಲಿ ಗಾಡಿಯು ಸಂಪೂರ್ಣವಾಗಿ ತನ್ನಿಂದ ತಾನೇ ಓಡಬಲ್ಲದು. ಇದಕ್ಕೆ ಬೇಕಾದ ಎಲ್ಲ ಏರ್ಪಾಟುಗಳನ್ನು ಗಾಡಿಯು ತಾನೇ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಯಾವುದೇ ತೆರನಾಗಿ ಓಡಿಸುಗ ಬೇಕಾಗಿರುವುದಿಲ್ಲ. ಕಾರಿನಲ್ಲಿ ಬರೀ ಸವಾರರು ಕುಳಿತು ಆದೇಶ ನೀಡಿದರೆ ಕಾರು ಸಾಗಿಕೊಂಡು ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, ಗಾಡಿ ತಯಾರಕರು ತಮಗೆ ಬೇಕಾದ ಹಂತವನ್ನು ಆಯ್ದುಕೊಂಡು ಅದಕ್ಕೆ ತಕ್ಕ ಏರ್ಪಾಟುಗಳನ್ನು ಅರಿವುಕ, ಕ್ಯಾಮೆರಾ, ರಡಾರ್ ಬಳಸಿ ನೀಡಿರುತ್ತಾರೆ. ನೀವು ಒಂದಕ್ಕಿಂತ ಒಂದು ಮೇಲ್ ಹಂತಕ್ಕೆ ಹೋದಂತೆ ಹೆಚ್ಚಿನ ಅರಿವುಕ, ರಡಾರ್ ಮತ್ತು ಅದಕ್ಕೆ ತಕ್ಕುದಾದ ಗಣಕ ತಂತ್ರಾಂಶಗಳನ್ನು ಬಳಸಬೇಕು, ಅದಕ್ಕೆ ಹೆಚ್ಚಿನ ಹಣವೂ ಬೇಕಾಗುತ್ತದೆ. ಅದಕ್ಕಾಗಿ, ಗಾಡಿ ತಯಾರಕರು ನಮ್ಮದು 2ನೇ ಹಂತದ ಅಡಾಸ್ ವಿಶೇಶತೆಗಳುಳ್ಳ ಗಾಡಿಯೆಂದೋ, 3ನೇ ಹಂತದ ಅಡಾಸ್ ಗಾಡಿಯೆಂದೋ ತಯಾರಿಸಿ ಮಾರುಕಟ್ಟೆ ತರುತ್ತಿದ್ದಾರೆ.

ಹಂತ ಹೆಚ್ಚಿದಂತೆ ಗಾಡಿಯ ಹಿಡಿತ ಹೆಚ್ಚಾಗುತ್ತ ಸಾಗುವುದು

ಜಗತ್ತಿನಾದ್ಯಂತ ಇಂದು ಎರಡನೇ ಹಂತದ ಅಡಾಸ್ ವಿಶೇಷತೆಗಳುಳ್ಳ ಹಲವು ಕಾರುಗಳು ಬಿಡುಗಡೆಯಾಗಿವೆ. ಮುಂದಿನ ಹಂತದ ಅಡಾಸ್ ವಿಶೇಷತೆಗಳ ಗಾಡಿಗಳನ್ನು ಟೆಸ್ಲಾ, ಗೂಗಲ್, ಜಿಎಮ್ ಸೇರಿದಂತೆ ದೊಡ್ಡ ಕಂಪನಿಗಳು ಸಿದ್ಧಪಡಿಸಿದ್ದರೂ ಇನ್ನೂ ಮಾರಾಟಕ್ಕೆ ಲಭ್ಯವಾಗಿಲ್ಲ. ಅದರಲ್ಲೂ 4 ಮತ್ತು 5ನೇ ಹಂತದ ಅಡಾಸ್ ವಿಶೇಷತೆಯೆಂದರೆ ಹೆಚ್ಚು ಕಡಿಮೆ ತನ್ನಿಂದ ತಾನೇ ಓಡುವ ಕಾರುಗಳು. ತಂತ್ರಜ್ಞಾನ ಬೆಳೆದರೂ ಅದಕ್ಕೆ ತಕ್ಕ ಕಾನೂನು-ಕಟ್ಟುಪಾಡುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ.

ಅಡಾಸ್ ನಮಗೆ ಹೇಗೆ ಉಪಯೋಗವಾಗಲಿದೆ?

ಅಡಾಸ್ ಅಭಿವ್ರದ್ಧಿ ಪಡಿಸಿದ್ದೇ, ಅಪಘಾತ, ಗುದ್ದುವಿಕೆಯಂತ ಅಪಾಯಗಳನ್ನು ತಡೆದು ಗಾಡಿಯಲ್ಲಿ ಸಾಗುವವರು ಸುರಕ್ಷಿತವಾಗಿ ಪ್ರಯಾಣ ಮಾಡಲೆಂದು. ಇಂದು ಸಾಕಷ್ಟು ಗಾಡಿಗಳಲ್ಲಿ ಹೆಚ್ಚಿನ ಭದ್ರತೆಯ ವಿಶೇಷತೆಗಳು ಕಾಣುತ್ತಿರುವುದು ಅಡಾಸ್ ಬಳಕೆಯಿಂದ. ಅಡಾಸ್ ಬಳಕೆಯಿಂದ ನಮ್ಮ ಕಾರುಗಳು ಹೆಚ್ಚು ಭದ್ರವಾಗಲಿವೆ. ನಮ್ಮ ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಕಾರುಗಳಲ್ಲೂ ಇಂದು ಅಡಾಸ್ ವಿಶೇಷತೆಗಳಿಂದ ಕೂಡಿವೆ. ಕಾರು ಓಡಿಸುವಾತ ಅಕಸ್ಮಾತ್ ನಿದ್ದೆಗೆ ಜಾರಿದರೆ ಎಚ್ಚರಿಕೆ, ಗಾಡಿಯ ವೇಗ > 80-100 ಕಿಮೀ/ಗಂಟೆ ಮೀರಿದರೆ ಎಚ್ಚರಿಕೆ, ಗಾಲಿಯ ಒತ್ತಡ ಕಡಿಮೆಯಾದರೆ ಎಚ್ಚರಿಕೆ, ಗಾಡಿ ನಿಲುಗಡೆಗೆ ನೆರವಾಗಲು ಹಿಂಬದಿಯ ಕ್ಯಾಮೆರಾ, ಹೀಗೆ ಕಾಪಿನ ವಿಶೇಷತೆಗಳು ಇಂದಿನ ಹಲವು ಕಾರುಗಳಲ್ಲಿ ಕಂಡು ಬರುತ್ತವೆ. ಕಾರುಗಳು ಆಟೋನೊಮಸ್ ಆದಂತೆ ನಾವು ಟ್ರಾಫಿಕ್ ಅಪಘಾತ ಕಡಿತಗೊಳಿಸಿ, ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಬಹುದು.

ಇಂದು ಜಗತ್ತಿನ ಹಲವೆಡೆ ಮಾರಾಟಗೊಳ್ಳುವ ಬಹುತೇಕ ಕಾರುಗಳು 2ನೇ ಹಂತದ ವರೆಗಿನ ಅಡಾಸ್ ವಿಶೇಷತೆಗಳನ್ನು ಪಡೆದು ಬರುತ್ತಿವೆ.ಜಪಾನ್, ಅಮೇರಿಕಾ, ಯುರೋಪ್ ಒಕ್ಕೂಟದ ದೇಶಗಳು, ಕೊರಿಯಾ ಮುಂತಾದ ದೇಶಗಳಲ್ಲಿ 1-2 ನೇ ಹಂತದವರೆಗಿನ ಅಡಾಸ್ ಕಾರುಗಳು ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಅಡಾಸ್ 2ನೇ ಹಂತದ ಹಲವು ಕಾರುಗಳು ಮಾರಾಟಗೊಳ್ಳುತ್ತಿವೆ. ಮಹೀಂದ್ರಾ ಎ‍‍ಕ್ಸ್‌ಯುವಿ 7ಒ‍ಒ, ಹೋಂಡಾ ಸಿಟಿ ಈಹೆಚ್‍ವಿ, ಎಮ್‍ಜಿ ಹೆಕ್ಟರ್, ಗ್ಲಾಸ್ಟರ್,ಝೆಡ್‍ಎಸ್ ಇವಿ, ಹ್ಯುಂಡಾಯ್ ಟುಕ್ಸಾನ್, ಟಾಟಾ ಸಫಾರಿ ಮುಂತಾದವು ಅಡಾಸ್‌ನ ವಿವಿಧ ವಿಶೇಷತೆಗಳನ್ನು ಹೊಂದಿವೆ.

ಅಡಾಸ್ ತಂತ್ರಜ್ಞಾನದ ಸವಾಲುಗಳು:

ತಂತ್ರಜ್ಞಾನ ಇದ್ದಲ್ಲಿ ಸವಾಲುಗಳಿಗೂ ಕೊರತೆ ಇರಲ್ಲ. ಹೊಸ ತಂತ್ರಜ್ಞಾನ ಬಂದಂತೆ ಅದಕ್ಕೆ ಸಂಬಂಧಿಸಿದ ತೊಡಕು ತೊಂದರೆಗಳು ಅದರ ಜೊತೆಯಲ್ಲೇ ಸಾಗಿಬರುತ್ತವೆ. ಅಡಾಸ್ ತಂತ್ರಜ್ಣ್ಯಾನವನ್ನು ಅಪಘಾತ ಅವಘಡ ತಡೆಯಲೆಂದೇ ಅಭಿವೃದ್ಧಿ ಪಡಿಸಿದ್ದರೂ, ಅದೇ ವಿಶೇಷತೆ ನಮಗೆ ತೊಂದರೆ ಉಂಟು ಮಾಡಿದರೆ? ಉದಾಹರಣೆಗೆ 5ನೇ ಹಂತದ ತನ್ನಿಂದ ತಾನೇ ಸಾಗಬಲ್ಲ ಕಾರುಗಳಿಂದ ಅಪಘಾತವಾದರೆ ಯಾರು ಹೊಣೆ? ಯಾಕೆಂದರೆ ಈ ಕಾರುಗಳಲ್ಲಿ ಓಡಿಸುಗನಿರುವುದಿಲ್ಲ, ಬರೀ ಸವಾರರು ಮಾತ್ರ. ಈ ಅಪಘಾತಗಳು ವಿಮೆಯ ವ್ಯಾಪ್ತಿಯ ಒಳಗಡೆ ಬರುತ್ತವೆಯೇ ಇಲ್ಲವೇ ಎಂಬುದು ಮುಂದಿನ ಪ್ರಶ್ನೆ? ಈ ಅಪಘಾತ,ವಿಮೆಯ ವಿಷಯಗಳಿಗೆ ತಕ್ಕ ಕಟ್ಟಳೆ-ಕಟ್ಟಪಾಡುಗಳು ಇನ್ನೂ ಎಳವೆಯಲ್ಲಿವೆ. ಹಲವು ದೇಶಗಳ ಸರ್ಕಾರಗಳು ಕಟ್ಟಳೆ-ಕಟ್ಟಪಾಡುಗಳ ಕುರಿತಾಗಿ ಸಾಕಷ್ಟು ಗೊಂದಲದಲ್ಲಿವೆ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವವರೆಗೂ ಇಂತ ಗಾಡಿಗಳನ್ನು ಮಾರಾಟಕ್ಕೆ ಬಿಡಬಾರದೆಂಬ ಕೂಗು ಎದ್ದಿದೆ.

ಎರಡನೇ ಸವಾಲು, ಅಡಾಸ್‌ನ ವಿವಿಧ ವಿಶೇಷತೆಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದರಿಂದ ವಿಶೇಷತೆಗಳ ಬಗ್ಗೆ ಹಲವು ಗಾಡಿ ತಯಾರಕರ ನಡುವೆ, ಕೊಳ್ಳುವರ ಮಧ್ಯೆ ಗೊಂದಲಗಳಿವೆ. ಕೆಲವು ವಿಶೇಷತೆಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ನೆಟ್ಟಗೆ ಕೆಲಸ ಮಾಡಬಲ್ಲವು.ಬೆಟ್ಟ-ಗುಡ್ಡ-ಘಾಟಿ ರಸ್ತೆಗಳಲ್ಲಿ ಗಾಡಿಯಲ್ಲಿರುವ ಅರಿವುಕ, ಕ್ಯಾಮೆರಾ, ರಡಾರ್‌ಗಳಿಗೆ ಸಮಸ್ಯೆ ಎದುರಾಗಲಿದೆ. ಹೆದ್ದಾರಿಗಳಲ್ಲಿ ಲೇನ್ ಅಂದರೆ ಓಣಿಗಳನ್ನು ಸರಿಯಾಗಿ ಬಣ್ಣದಿಂದ ಗುರುತಿಸಿರುತ್ತಾರೆ ಹೀಗಾಗಿ ಗಾಡಿಯ ಕ್ಯಾಮೆರಾಗಳು ಅವುಗಳನ್ನು ಗುರುತಿಸಿ, ಓಣಿ ದಾಟುವಿಕೆಯನ್ನು ಚೆನ್ನಾಗಿ ನಿರ್ವಹಿಸಬಲ್ಲವು. ಅದೇ ಚಿಕ್ಕ ಪುಟ್ಟ ದಾರಿಗಳಲ್ಲಿ ಬಣ್ಣದಿಂದ ಗುರುತಿಸದ ಲೇನ್‍ಗಳಲ್ಲಿ ಓಣಿ ಗುರುತಿಸುವಿಕೆಯಂತ ವಿಶೇಷತೆ ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಪ್ರಶ್ನೆಗಳಿವೆ.

ಹಲವು ಗಣಕಗಳಿಂದ ಕೂಡಿರುವ ಈ ಅಡಾಸ್ ಗಾಡಿಗಳಿಗೆ ಸುಭದ್ರವಾದ ಸೈಬರ್ ಭದ್ರತೆಯ ತಂತ್ರಾಂಶ ಒದಗಿಸುವ ಅವಶ್ಯಕತೆಯಿದೆ. ದಿಗಿಲುಕೋರರು, ಕಳ್ಳ-ಕಾಕರು ಗಾಡಿಯ ಗಣಕಗಳನ್ನು ತಮ್ಮ ಹಿಡಿತಕ್ಕೆ ಪಡೆದು ಬೇಕಾಬಿಟ್ಟಿ ಬಳಕೆ ಮಾಡಿ ಸಮಾಜಕ್ಕೆ ಕೆಡುಕುಂಟು ಮಾಡುವ ಸಾಧ್ಯತೆಗಳಿವೆ. ಇದನ್ನು ಮೆಟ್ಟಿ ನಿಂತು ಅಡಾಸ್ ತಂತ್ರಜ್ಞಾನ ಬೆಳೆಯಲಿ, ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ.