ಸುಮಾರು ಒಂದು ತಿಂಗಳ ಹಿಂದೆ, 08.09.2016 ರಂದು ಅಮೇರಿಕಾದ ನಾಸಾ ಕೂಟ 101955 ಬೆನ್ನು (Bennu) ಎಂದು ಗುರುತಿಸಲಾಗುವ ಆಸ್ಟಾರಾಯ್ಡ್ ನತ್ತ ಪಯಣ ಬೆಳೆಸಿತು. ಈ ಮೂಲಕ ಬಾನಂಗಳದಲ್ಲಿರುವ ಬೆರಗುಗೊಳಿಸುವ ಜಗತ್ತನ್ನು ಅರಿಯುವತ್ತ ಮಾನವರು ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಟ್ಟಂತಾಯಿತು.
ಆಸ್ಟಾರಾಯ್ಡ್ (asteroid) ಅಂದರೇನು?
ಗ್ರಹಗಳಂತೆ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಬಾನಕಾಯಗಳಿವು. ಗ್ರಹಗಳಿಗೂ ಮತ್ತು ಆಸ್ಟಾರಾಯ್ಡ್ ಗಳಿಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ, ಇವು ಗ್ರಹಗಳಷ್ಟು ದೊಡ್ಡದಾಗಿರುವುದಿಲ್ಲ ಮತ್ತು ಗ್ರಹಗಳಂತೆ ನಿರ್ದಿಷ್ಟವಾದ ದುಂಡನೆಯ ಆಕಾರವನ್ನು ಹೊಂದಿರುವುದಿಲ್ಲ. ಕನ್ನಡದಲ್ಲಿ ಇವುಗಳನ್ನು ಬಾನಬಂಡೆಗಳು ಎಂದು ಕರೆಯಬಹುದು. ಇವುಗಳ ಅಳತೆ 1-2 ಮೀಟರ್ ಗಳಿಂದ ಹಿಡಿದು ಸುಮಾರು 1000 ಕಿ.ಮೀ. ನಷ್ಟಾಗಿರಬಹುದು. (1 ಮೀಟರ್ ಗಿಂತ ಕಡಿಮೆ ಅಳತೆ ಹೊಂದಿರುವ ಬಾನಕಾಯಗಳನ್ನು ಮೀಟರಾಯ್ಡ್ ಎಂದು ಗುರುತಿಸಲಾಗುತ್ತದೆ).
ಬಾಲಚುಕ್ಕಿಗಳಿಗೂ (comets) ಮತ್ತು ಬಾನಬಂಡೆಗಳಿಗೂ (asteroids) ಇರುವ ವ್ಯತ್ಯಾಸವೆಂದರೆ, ಬಾಲಚುಕ್ಕಿಗಳು ಹೆಚ್ಚಾಗಿ ಧೂಳು ಮತ್ತು ಮಂಜಿನಿಂದ ಕೂಡಿರುತ್ತವೆ. ಅದೇ ಬಾನಬಂಡೆಗಳು ಅದಿರು ಮತ್ತು ಕಲ್ಲಿನ ರಚನೆಯನ್ನು ಹೊಂದಿರುತ್ತವೆ.
ಬಾನಬಂಡೆಗಳು ಹೆಚ್ಚಾಗಿ ಗುರು ಮತ್ತು ಮಂಗಳ ಗ್ರಹಗಳ ನಡುವೆ ದುಂಡನೆಯ ಪಟ್ಟಿಯಲ್ಲಿ ಹರಡಿಕೊಂಡಿವೆ. ಈ ಪಟ್ಟಿಯನ್ನು ಬಾನಬಂಡೆಗಳ ಪಟ್ಟಿ (asteroid belt) ಎಂದು ಕರೆಯಲಾಗುತ್ತದೆ.
ಬಾನಬಂಡೆಗಳು ಮಂಗಳ-ಗುರು ಗ್ರಹಗಳ ನಡುವಿನ ಈ ಪಟ್ಟಿಯಲ್ಲಲ್ಲದೇ ಬಾನಂಗಳದ ಇತರೆಡೆಯೂ ಹರಡಿಕೊಂಡಿವೆ. ಬಾನಬಂಡೆಗಳ ಪಟ್ಟಿಯಾಚೆ ನೆಲಕ್ಕೆ ಸುಮಾರು 4.82 ಲಕ್ಷ ಕಿಲೋಮೀಟರ್ ಗಳಷ್ಟು ಹತ್ತಿರ ಸಾಗಬಲ್ಲ ಇಂತಹ ಬಾನಬಂಡೆಗಳಲ್ಲೊಂದು 101955 ಬೆನ್ನು (Bennu).
ಈಜಿಪ್ತಿನ ಪುರಾಣಗಳಲ್ಲಿ ಬರುವ ಬೆನ್ನು (Bennu) ಎಂಬ ಹಕ್ಕಿಯ ಹೆಸರಿನಲ್ಲಿ ಗುರುತಿಸಲಾಗುವ, ಸುಮಾರು 500 ಮೀಟರ್ ದುಂಡಳತೆ ಹೊಂದಿರುವ ಈ ಬಾನಬಂಡೆಯ ಇರುವಿಕೆಯು ಗೊತ್ತಾದದ್ದು 1999 ರಲ್ಲಿ. ಅಲ್ಲಿಂದೀಚೆಗೆ ಈ ಬಾನಬಂಡೆಯ ಬಗ್ಗೆ ಹಲವಾರು ಕುತೂಹಲದ ವಿಷಯಗಳು ಬೆಳಕಿಗೆ ಬಂದಿವೆ. ನೆಲಕ್ಕೆ ಕುತ್ತು ತರಬಲ್ಲ ಬಾನಬಂಡೆಗಳಲ್ಲಿ ಇದೂ ಒಂದು ಅಂದರೆ ಅಚ್ಚರಿಯಾದೀತು. ಈಗಿನ ಲೆಕ್ಕಾಚಾರದ ಪ್ರಕಾರ ಸುಮಾರು 2175 ರಿಂದ 2196 ನೇ ಇಸ್ವಿಯಲ್ಲಿ ಈ ಬಾನಬಂಡೆ ನೆಲಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಾಧ್ಯತೆಯು 0.037% ನಷ್ಟು ಕಡಿಮೆ ಪ್ರಮಾಣದ್ದಾಗಿದ್ದರೂ, ಒಂದೊಮ್ಮೆ ಇದು ನಿಜವಾದರೆ ಸುಮಾರು 1200 ಮೆಗಾಟನ್ ನಷ್ಟು ಶಕ್ತಿಯ ಅಪ್ಪಳಿಕೆ ಇದಾಗಬಲ್ಲದು ಮತ್ತು ಇದರಿಂದ ನೆಲಕ್ಕೆ ಹೆಚ್ಚಿನ ಪ್ರಮಾಣದ ಹಾನಿಯಾಗಬಲ್ಲದು.
ಬೆನ್ನು ಬಾನಬಂಡೆಯ ವಿವರಗಳು ಈ ಕೆಳಗಿನಂತಿವೆ,
- ನಡುಗೆರೆಯಲ್ಲಿ ದುಂಡಳತೆ (Equatorial Diameter) : ~500 ಮೀಟರ್
- ತುದಿಯಲ್ಲಿ ದುಂಡಳತೆ (Polar Diameter) : ~510 ಮೀಟರ್
- ಸರಾಸರಿ ವೇಗ (Average Speed) : 63,000 ಮೈಲಿಗಳು ಪ್ರತಿ ಗಂಟೆಗೆ
- ತಿರುಗುವಿಕೆಯ ಹೊತ್ತು (Rotation Period) : 4.3 ಗಂಟೆಗಳು
- ಸುತ್ತುವಿಕೆಯ ಹೊತ್ತು (Orbital Period) : 1.2 ವರುಶಗಳು
- ಸುತ್ತುವಿಕೆಯ ಬಾಗುತನ (Orbital Inclination) : 6 ಡಿಗ್ರಿಗಳು
- ನೆಲಕ್ಕೆ ಹತ್ತಿರ ಬರುವ ಕಾಲ: ಪ್ರತಿ 6 ವರುಶಗಳಿಗೊಮ್ಮೆ
(ಗೊತ್ತಿರುವ ಕಟ್ಟಡಗಳ ಅಳತೆಯೊಂದಿಗೆ ಬೆನ್ನುವಿನ ಹೋಲಿಕೆ)
ಬಾನಬಂಡೆಗಳ (asteroid) ರಚನೆಯ ಬಗ್ಗೆ ತಿಳಿದುಕೊಳ್ಳಲು ಮಾನವರು ಮುಂದಾಗುತ್ತಿರುವುದಕ್ಕೆ, ನೆಲಕ್ಕೆ ಅಪ್ಪಳಿಸಿ ಹಾನಿ ಉಂಟುಮಾಡಬಲ್ಲ ಇವುಗಳನ್ನು ತಡೆಯಲು ಸಜ್ಜಾಗಬೇಕು ಅನ್ನುವುದು ಒಂದು ಕಾರಣವಾದರೆ ಇದಕ್ಕಿಂತಲೂ ಮುಖ್ಯವಾದ ಕಾರಣವೆಂದರೆ ಇವುಗಳ ರಚೆಯನ್ನು ತಿಳಿದುಕೊಂಡರೆ ನಮ್ಮ ಸೂರ್ಯ ಏರ್ಪಾಟಿನ (Solar System) ಹುಟ್ಟಿನ ಬಗ್ಗೆ ಮತ್ತು ನಮ್ಮ ನೆಲದಲ್ಲಿ ಜೀವಿಗಳ ಹುಟ್ಟಿನ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು.
ಬಾನಬಂಡೆಗಳು ’ಸೂರ್ಯ ಏರ್ಪಾಟು’ ಉಂಟಾಗುವ ಮೊದಲ ಹಂತದಲ್ಲಿ ಉಂಟಾದ ಬಾನಕಾಯಗಳು ಮತ್ತು ಇವು ಹಲವು ಬಿಲಿಯನ್ ವರುಶಗಳಿಂದ ಬದಲಾಗದೇ ಉಳಿದಿವೆ. ಹಾಗಾಗಿ ಇವುಗಳ ರಚನೆಯನ್ನು ತಿಳಿದುಕೊಂಡರೆ ಬಾನಂಗಳದ ಹಳಮೆಯನ್ನು ಅರಿಯಲು ಅನುಕೂಲವಾಗಬಲ್ಲದು. ಜೀವಿಗಳ ಬದುಕಿಗೆ ಅಡಿಪಾಯವಾದ ನೀರು ಮತ್ತು ಅಗತ್ಯವಾದ ಇತರ ವಸ್ತುಗಳು ಬಾನಬಂಡೆಗಳಲ್ಲಿ ಇವೆಯೇ? ಬಾನಬಂಡೆಗಳು ಮನುಷ್ಯರು ಬದಕಬಲ್ಲ ತಾಣಗಳಾಗಬಹುದೇ? ಅನ್ನುವುದನ್ನು ಅರಸುವುದೂ ನಾಸಾದ ಗುರಿಗಳಲ್ಲೊಂದು.
ನಾಸಾದ (NASA) ಯೋಜನೆ:
ಓಸಿರಿಸ್-ಆರ್ ಇ ಎಕ್ಸ್ (OSIRIS-REx) ಎಂದು ಗುರುತಿಸಲಾಗುವ, ಬೆನ್ನು (Bennu) ಬಾನಬಂಡೆಯ ಕುರಿತ ನಾಸಾದ ಯೋಜನೆ ಈ ಕೆಳಗಿನ ಮುಖ್ಯ ಗುರಿಗಳನ್ನು ಹೊಂದಿದೆ,
1. ಬೆನ್ನು ಬಾನಬಂಡೆಯ ಮೇಲ್ಮೈ ಅಡಕಗಳ ಮಾದರಿಯನ್ನು ಒರೆಗೆಹಚ್ಚುವುದು ಮತ್ತು ಈ ಮಾದರಿಯನ್ನು ಹೆಚ್ಚಿನ ಅರಕೆಗಾಗಿ ನೆಲಕ್ಕೆ ತರುವುದು.
2. ಬೆನ್ನು ಬಾನಬಂಡೆಯ ಆಕಾರವನ್ನು ಸೆರೆಹಿಡಿಯುವುದು.
3. ಯರ್ಕೋವಸ್ಕಿ ಆಗುಹ (Yarkovsky effect) ಎಂದು ಕರೆಯಲಾಗುವ, ರಾಶಿಸೆಳೆತವಲ್ಲದ (non gravitational) ಪರಿಣಾಮವನ್ನು ಅಳತೆಮಾಡುವುದು. ಈ ಆಗುಹವು ಬಾನಕಾಯಗಳ ತಿರುಗುದಾರಿಯನ್ನು ಬದಲಿಸಬಲ್ಲದಾಗಿದ್ದು, ಇದರ ಬಗ್ಗೆ ತಿಳಿದುಕೊಂಡರೆ ಬಾನಬಂಡೆಯ ಅಪ್ಪಳಿಕೆಯ ಸಾಧ್ಯತೆಯನ್ನು, ಅದು ಸಾಗುವ ದಾರಿಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳಬಹುದು.
ಓಸಿರಿಸ್ ಬಾನಬಂಡಿಯ ವಿವರಗಳು ಹೀಗಿವೆ,
- ಉದ್ದ: 6.2 ಮೀಟರ್ ಗಳು
- ಅಗಲ: 2.4 ಮೀಟರ್ ಗಳು
- ಎತ್ತರ: 3.2 ಮೀಟರ್ ಗಳು
- ರಾಶಿ – ಉರುವಲಿಲ್ಲದೆ (dry mass – Unfueled): 880 ಕೆ.ಜಿ.ಗಳು
- ರಾಶಿ – ಉರುವಲಿನ ಜತೆಗೆ (wet mass – fueled): 2110 ಕೆ.ಜಿ.ಗಳು
- ಕಸುವು (power): 2 ನೇಸರಪಟ್ಟಿಗಳನ್ನು (Solar panel) ಹೊಂದಿದ್ದು 1,226 ರಿಂದ 3,000 ವ್ಯಾಟ್ ನಷ್ಟು ಕಸುವನ್ನು ಉಂಟುಮಾಡಬಲ್ಲವು.
- ಸಲಕರಣೆಗಳು: ಮಾದರಿ ಮರಳಿ ತರುವ ಸಲಕರಣೆ (Sample Return Capsule – SRC), ಕ್ಯಾಮೆರಾಗಳು, ದೂರ, ಎತ್ತರ ಮತ್ತು ಕಾವು ಅಳೆಯುವ ಸಲಕರಣೆಗಳು.
ಇದೇ ಸಪ್ಟಂಬರ್, 8 ಕ್ಕೆ ಬಾನಿಗೆ ಹಾರಿದ ಓಸಿರಿಸ್ ಬಾನಬಂಡಿ (spacecraft) ಸುಮಾರು ಒಂದು ವರುಶದ ಕಾಲ ಸೂರ್ಯನ ಸುತ್ತ ಸುತ್ತಿ ಅಲ್ಲಿಂದ ಬೆನ್ನುವಿನೆಡೆಗೆ ಸಾಗಲಿದೆ. ಅಗಸ್ಟ್ 2018 ರ ಹೊತ್ತಿಗೆ ಅದು ಬೆನ್ನು ಬಾನಬಂಡೆಯನ್ನು ತಲುಪಲಿದೆ. ಸುಮಾರು 505 ದಿನಗಳ ಕಾಲ ಅಲ್ಲಿರುವ ಓಸಿರಿಸ್ ಬಾನಬಂಡಿಯು, ಬೆನ್ನುವಿನ ಸುತ್ತ ಸುತ್ತುತ್ತ ಹಲವಾರು ವಿಷಯಗಳನ್ನು ಕಲೆಹಾಕಲಿದೆ.
ಹಾಗೆನೇ ತನ್ನಲ್ಲಿರುವ ಕೈಯಂತಿರುವ ಉದ್ದನೆಯ ಸಲಕರಣೆಯೊಂದನ್ನು ಚಾಚಿ ಬೆನ್ನುವಿನ ಮೇಲ್ಮೈಯ ಮಾದರಿಯನ್ನು ಹಿಡಿದಿಟ್ಟುಕೊಳ್ಳಲಿದೆ. ಮಾರ್ಚ್, 2021 ರಂದು ಬೆನ್ನುವಿನಿಂದ ಮರಳಿ ಹೊರಡಲಿರುವ ಓಸಿರಿಸ್ ಬಾನಬಂಡಿಯು 2023 ರಲ್ಲಿ ಬೆನ್ನುವಿನ ಮೇಲ್ಮೈ ಮಾದರಿಯನ್ನು ಹೊತ್ತುಕೊಂಡು ನೆಲ ತಲುಪಲಿದೆ.
(ಮಾಹಿತಿ ಮತ್ತು ಚಿತ್ರ ಸೆಲೆಗಳು: asteroidmission.org, wikipedia.org)
Pingback: meritking