ತೊಗಲು – ಬಾಗ 3

ಹಿಂದಿನ ಎರಡು ಕಂತುಗಳಲ್ಲಿ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿಸಿಕೊಡಲಾಗಿದೆ. ತೊಗಲೇರ‍್ಪಾಟಿನ ಈ ಕೊನೆಯ ಕಂತಿನಲ್ಲಿ ತೊಗಲಿನ ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ತೊಗಲಿನ ಮುಕ್ಯವಾದ ಕೆಲಸಗಳು ಕೆಳಕಂಡಂತಿವೆ.

ಕೊಂಪರೆಸುವಿಕೆ (keratinization): ಕೊಂಪರೆ ಮುನ್ನು (keratin protein), ದನಕರುಗಳ ಕೊಂಬುಗಳ ಪದರಗಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ, ಈ  ಮುನ್ನನ್ನು ‘ಕೊಂಪರೆ ಮುನ್ನು’ ಎಂದು ಹೆಸರಿಸಲಾಗಿದೆ; ಇವು ಕೊಂಬಿನ ಪದರುಗಳಲ್ಲದೇ, ಮನುಶ್ಯರ ಗೂಡುಕಟ್ಟುಗಳನ್ನೂ (tissues) ಒಳಗೊಂಡ, ಹಲವು ಬಗೆಯ ಜೀವಿಗಳಲ್ಲಿಯೂ ಇರುತ್ತವೆ. ಕೊಂಪರೆಗೂಡುಗಳು (keratinocytes) ಕೊಂಪರೆ ಮುನ್ನನ್ನು ಕೂಡಿಡುವ ಹಮ್ಮುಗೆಯನ್ನು ಕೊಂಪರೆಸುವಿಕೆ ಎಂದು ಹೇಳಬಹುದು.

ತಳಪರೆಯ (stratum basale) ಬುಡಗೂಡಿನಿಂದ (stem cell) ಹುಟ್ಟುವ ಕೊಂಪರೆಗೂಡುಗಳು, ಹುಟ್ಟಿದ ಹೊಸದರಲ್ಲಿ ಆರ‍್ಮೂಲೆಯ (cuboidal) ಆಕಾರದಲ್ಲಿದ್ದು, ಈ ಹಂತದ ಗೂಡುಗಳಲ್ಲಿ  ಕೊಂಪರೆ ಮುನ್ನು ಇರುವುದಿಲ್ಲ. ಬುಡಗೂಡುಗಳು ಹೆಚ್ಚೆಚ್ಚು ಹೊಸ ಗೂಡುಗಳನ್ನು ಹುಟ್ಟಿಸುತ್ತಿದ್ದಂತೆ, ಹಳೆಯ ಕೊಂಪರೆಗೂಡುಗಳು ತೊಗಲಿನ ಹೊರಮಯ್ಯೆಡೆಗೆ ತಳ್ಳಲ್ಪಡುತ್ತವೆ. ಹೀಗೆ ತಳ್ಳಲ್ಪಡುವ ಗೂಡುಗಳು, ಮುಳ್ಪರೆಯನ್ನು (stratum spinosum) ತಲುಪುವ ಹೊತ್ತಿಗೆ, ಕೊಂಪರೆ ಮುನ್ನನ್ನು ಕೂಡಿಟ್ಟುಕೊಳ್ಳಲು ಮೊದಲುಗೊಳ್ಳುತ್ತವೆ. ಜೊತೆಗೆ ಅವುಗಳ ಇಟ್ಟಳವು ಚಪ್ಪಟೆ ಹಾಗು ಗಟ್ಟಿಯಾಗಿ ಮಾರ‍್ಪಡುತ್ತವೆ. ಈ ಬಗೆಯ ಮಾರ‍್ಪಾಡುವಿಕೆಯಿಂದ ಈ ಗೂಡುಗಳ ನೀರು ತಡೆಯುವ ಅಳವು ಹೆಚ್ಚುತ್ತದೆ.

ಗೂಡುಗಳು ಮುಂದೆ ಸಾಗಿ, ಹರಳ್ಪರೆಯನ್ನು (stratum granulosum) ತಲುಪಿದಾಗ, ಮತ್ತಶ್ಟು ಚಪ್ಪಟೆಗೊಳ್ಳುತ್ತವೆ ಹಾಗು ಇನ್ನಶ್ಟು ಕೊಂಪರೆ ಮುನ್ನನ್ನು ತುಂಬಿಕೊಳ್ಳುತ್ತವೆ. ಇಶ್ಟು ದೂರ ಸಾಗಿದ ಗೂಡುಗಳಿಗೆ ನಡುತೊಗಲ್ಪರೆಯ (dermis) ನೆತ್ತರುಗೊಳವೆಗಳಿಗೆ (blood vessels) ಆರಯ್ವಗಳನ್ನು (nutrients) ಉಣಿಸಲಾಗುವುದಿಲ್ಲ. ಇದರಿಂದಾಗಿ, ಕೊಂಪರೆಗೂಡುಗಳು ಹಮ್ಮಡಿತದ (apoptosis) (ಹಮ್ಮುಗೆಯ ಮಡಿತ = programmed cell death) ಬಗೆಯಲ್ಲಿ ಸಾಯುತ್ತವೆ.

ಹಮ್ಮಡಿತದ ಮಾದರಿಯಲ್ಲಿ ಸತ್ತ ಕೊಂಪರೆಗೂಡುಗಳು, ಹೊಳ್ಪರೆ (stratum lucidum) ಹಾಗು ಕೋಡ್ಪರೆಗಳನ್ನು (stratum corneum) ತಲುಪಿದಾಗ  ತುಂಬಾ ಗಟ್ಟಿಯಾದ, ಚಪಟ್ಟೆಯಾಗಿ, ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಈ ಬಗೆಯ ಜೋಡಣೆಯು, ಕೊಂಪರೆ ಮುನ್ನಿನ ಬೇಲಿಯನ್ನು ಮಾಡುತ್ತವೆ ಹಾಗು ತೊಗಲಿನ ಕೆಳಗಿರುವ ಗೂಡುಕಟ್ಟುಗಳನ್ನು (tissues) ಕಾಯುತ್ತವೆ.

ಬಿಸುಪಿನ ಒನ್ನೆಸುವಿಕೆ (temperature homeostasis): ತೊಗಲು ನಮ್ಮ ಹೊರಮಯ್ ಹೊದಿಕೆಯಾದ್ದರಿಂದ, ಹೊರಗಿನ-ಪಾಡು (environment) ಹಾಗು ನಮ್ಮ ಮಯ್ಯೊಳಗಿನ ಒಡನಾಟಗಳಿಗೆ (interaction) ಹೊಂದಿಕೊಳ್ಳುವಂತೆ, ಮಯ್ ಬಿಸುಪನ್ನು (temperature) ಅಂಕೆಯಲ್ಲಿಡುತ್ತದೆ.

i) ಮಯ್ಕಾವೆರಿಕೆ (hyperthermia) : ನಮ್ಮ ಮಯ್ಯಲ್ಲಿ ಬಿಸುಪು ಹೆಚ್ಚಾದರೆ, ನೆತ್ತರುಗೊಳವೆಗಳನ್ನು ಹಿಗ್ಗಿಸಿ ಹಾಗು ಬೆವರುವಿಕೆಯನ್ನು ಹೆಚ್ಚಿಸಿ, ತೊಗಲು ಮಯ್ ಬಿಸುಪನ್ನು ತಗ್ಗಿಸುತ್ತದೆ. ಬೆವರು ಸುರಿಕಗಳಲ್ಲಿ (sweat glands) ಮಾಡಲ್ಪಡುವ ಬೆವರು, ನೀರನ್ನು ಹೊರಮಯ್ಗೆ ತಲುಪಿಸುತ್ತದೆ. ಹೊರಮಯ್ ತಲುಪಿದ ಬೆವರಿನ ನೀರು ಆವಿಯಾಗುತ್ತದೆ.

togalu_3_1

ಹೀಗೆ ಆವಿಯಾಗುವ  ಬೆವರಿನ ನೀರು, ಕಾವನ್ನು ಹೀರಿಕೊಂಡು, ಹೊರಮಯ್ಯನ್ನು ತಂಪಾಗಿಸುತ್ತದೆ. ನಡುತೊಗಲ್ಪರೆಯಲ್ಲಿರುವ (dermis) ನೆತ್ತರುಗೊಳವೆಗಳ ಹಿಗ್ಗುವಿಕೆಯು, ತೊಗಲಿಗೆ ಹರಿಯುವ ನೆತ್ತರಿನ ಮೊತ್ತವನ್ನು ಹೆಚ್ಚಿಸುತ್ತದೆ. ತೊಗಲಿನೆಡೆಗೆ ಸಾಗುವ ನೆತ್ತರು, ಮಯ್ಯೊಳಗಿನ ಕಾವನ್ನೂ ತೊಗಲಿಗೆ ಸಾಗಿಸುತ್ತದೆ. ಹೊರಮಯ್ ತಲುಪಿದ ಕಾವು, ಮಯ್ಯಿಂದ ಹೊರ ಹೋಗುತ್ತದೆ.

ii) ಮಯ್ಕಾವಿಳಿಕೆ (hypothermia) : ಮಯ್ ಬಿಸುಪು ಎಂದಿನ ಮಟ್ಟಕ್ಕಿಂತ ಕೆಳಗೆ ಇಳಿದರೆ, ಕೂದಲು ನಿಮಿರುಗ ಕಂಡ (arrector pili muscle) ಹಾಗು ನೆತ್ತರುಗೊಳವೆಗಳನ್ನು ತೊಗಲು ಕುಗ್ಗಿಸುತ್ತದೆ. ನಿಮಿರುಗ ಕಂಡಗಳ ಕುಗ್ಗುವಿಕೆಯಿಂದಾಗಿ, ತೊಗಲಿನ ಹೊರಮಯ್ಯಲ್ಲಿ ಗುಗ್ಗರಿ ಗುಳ್ಳೆಗಳು (goose bumps) ಉಂಟಾಗುತ್ತವೆ.

togalu_3_2

ಗುಗ್ಗರಿ ಗುಳ್ಳೆಗಳು ಕೂದಲುಗಳ ತಾಳುಗಳನ್ನು ತೊಗಲಿನ ಹೊರಮಯ್ಯಿಂದ ಸ್ವಲ್ಪ ಮೇಲೆತ್ತುತ್ತವೆ. ಈ ಬಗೆಯ ಮಾರ‍್ಪಾಟು, ಕೂದಲಿನ ಸಂದುಗಳಲ್ಲಿ ಹೆಚ್ಚಿನ ಪ್ರಮಾಣದ ಗಾಳಿಯನ್ನು ಹಿಡಿದಿಡಲು ನೆರವಾಗುತ್ತದೆ. ಹೀಗೆ ಹಿಡಿದಿಡಲ್ಪಟ್ಟ ಗಾಳಿಯು ತೊಗಲಿನ ಹೊರ ಮಯ್ಗೆ ಮತ್ತಶ್ಟು ಹೊದಿಕೆಯನ್ನು ಕೊಡುತ್ತದೆ. ತೊಗಲಿನ ನೆತ್ತರುಗೊಳವೆಗಳ ಕುಗ್ಗುವಿಕೆ, ತೊಗಲಿಗೆ ಹರಿಯುವ ನೆತ್ತರಿನ ಪ್ರಮಾಣವನ್ನು ಕುಗ್ಗಿಸುತ್ತದೆ. ಇದು ತೊಗಲಿನಲ್ಲಿ  ತಂಪನ್ನು ಉಂಟುಮಾಡಿದರೂ, ಮಯ್ಯೊಳಗಿನ  ಕಾವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

D ಬಾಳುಳುಪು ಮಾಡುವಿಕೆ (Vitamin D Synthesis): ನಾವು ಉಣ್ಣುವ ಕೂಳಿನಿಂದ ಕ್ಯಾಲ್ಸಿಯಮ್ ಅನ್ನು ಹೀರಿಕೊಳ್ಳಲು D ಬಾಳುಳುಪು ಬೇಕಾಗುತ್ತದೆ. ಕಡುನೇರಳೆಯ ಕದಿರುಗಳು (UV light) ತೊಗಲಿಗೆ ಬಡಿದಾಗ, D ಬಾಳುಳುಪು ಉಂಟಾಗುತ್ತದೆ. ಮೇಲ್ತೊಗಲ್ಪರೆಯ ತಳಪರೆ (stratum basale) ಹಾಗು ಮುಳ್ಪರೆಗಳು (stratum spinosum) 7-ಡಿಹಯ್ಡ್ರೊಕೊಲೆಸ್ಟಿರಾಲ್ಗುಳನ್ನು ಹೊಂದಿರುತ್ತವೆ.

togalu_3_3

ನೇಸರನ ಬೆಳಕಿನ ಕಡುನೇರಳೆಯ ಕದಿರುಗಳು ತೊಗಲಿನ ಹೊರ ಪದರಗಳಲ್ಲಿ ತೂರುವಾಗ,  ಅವು 7-ಡಿಹಯ್ಡ್ರೊಕೊಲೆಸ್ಟಿರಾಲ್ಗ ಳಿಗೆ ಬಡಿದಾಗ, 7-ಡಿಹಯ್ಡ್ರೊಕೊಲೆಸ್ಟಿರಾಲ್ಗೇಳು D3 ಬಾಳುಳುಪುಗಳಾಗಿ ಬದಲಾಗುತ್ತವೆ. D3 ಬಾಳುಳುಪುಗಳು ಈಲಿಯಲ್ಲಿ (liver), ಕ್ಯಾಲ್ಸಿಡಯಾಲ್ಗಹಳಾಗಿ (calcidiol) ಬದಲಾಗುತ್ತವೆ. ಕ್ಯಾಲ್ಸಿಡಯಾಲ್ಗಪಳು ಬಿಕ್ಕುಗಳಲ್ಲಿ (kidneys), D ಬಾಳುಳುಪಿನ ಚೂಟಿಯ (active) ಬಗೆಯಾದ ಕ್ಯಾಲ್ಸಿಟ್ರಿಯಾಲ್ಗಳಳಾಗಿ (calcitriol) ಬದಲಾಗುತ್ತವೆ.

ಕಾಪು (protection): ಕೆಡುಕುಕಣಗಳು (pathogens) ಮತ್ತು ಕಡುನೇರಳೆ ಕದಿರುಗಳನ್ನೂ (UV rays) ಒಳಗೊಂಡಂತೆ ಹಲವು ಬಗೆಯ ತೊಡಕುಗಳಿಂದ ನಮ್ಮ ಮಯ್ಯೊಳಗಿನ ಗೂಡುಕಟ್ಟುಗಳನ್ನು ಕಾಯುವಲ್ಲಿ ತೊಗಲೇರ‍್ಪಾಟು ನೆರವಾಗುತ್ತದೆ. ಆರೋಗ್ಯವಂತ ತೊಗಲಿನ ಹೊರಪದರದಲ್ಲಿ ಗಟ್ಟಿಯಾದ ಸತ್ತ ಕೊಂಪರೆಗಳ ಒತ್ತಣೆಯು (density) ಹೆಚ್ಚಿದ್ದು, ನಂಜುಳ (virus), ಬೂಸು (fungus), ಒಚ್ಚೀರು (bacteria) ಮುಂತಾದ ಕೆಡುಕುಕಣಗಳು ಅಶ್ಟು ಸುಳುವಾಗಿ ನುಸುಳಲು ಆಗುವುದಿಲ್ಲ. ತೊಗಲಿನಲ್ಲಿ ಬಿರುಕು ಕಾಣಿಸಿಕೊಂಡಾಗ, ಈ ಕೆಡುಕುಕಣಗಳು ನುಸುಳುವ ಸಾದ್ಯತೆ ಹೆಚ್ಚಾಗುತ್ತದೆ.

togalu_3_4

ಹೊರತೊಗಲ್ಪರೆಯ ಗೂಡುಗಳು ಎಡೆಬಿಡದೆ ಹುಟ್ಟುವುದರಿಂದ, ತೊಗಲಿನ ಮೇಲ್ಪದರ ಸ್ವಲ್ಪ ಮಟ್ಟಿಗೆ ತರಚಿದರೆ ಇಲ್ಲವೆ ಕೊಯ್ದುಕೊಂಡರೆ, ಆ ಬಾಗವು ಕಡಿಮೆ ಸಮಯದಲ್ಲಿಯೇ ಸರಿಹೊಂದುತ್ತದೆ. ಮೇಲ್ತೊಗಲ್ಪರೆಯ ಕರ‍್ವದಣ್ಣಗೂಡುಗಳು ಕರ‍್ವಾಣ್ಣ ಹೊಗರನ್ನು (melanin pigment) ಮಾಡುತ್ತದೆ. ಕಡುನೇರಳೆ ಕದಿರುಗಳು, ಒಳ ಮಯ್ಯನ್ನು ನುಸುಳುವ ಮೊದಲೇ, ಅವುಗಳನ್ನು ಕರ‍್ವಣ್ಣ ಹೊಗರು ಹೀರಿಕೊಳ್ಳುತ್ತದೆ. ಈ ಬಗೆಯಲ್ಲಿ ಕಡುನೇರಳೆ ಕದಿರುಗಳು ನಮ್ಮ ಮಯ್ಯಿಗೆ ಮಾಡಬಹುದಾದ ಕೆಡುಕುಗಳನ್ನು ಕರ‍್ವೊಣ್ಣ ಹೊಗರು ತಡೆಯುತ್ತದೆ.

ತೊಗಲಿನ ಬಣ್ಣ (skin color): ಮೂರು ಬಗೆಯ ಹೊಗರುಗಳು (pigments) ಮನುಶ್ಯರ ಮಯ್ ಬಣ್ಣವನ್ನು ತೀರ‍್ಮಾನಿಸುತ್ತವೆ. ಆ ಹೊಗರುಗಳೆಂದರೆ,

1) ಕರ‍್ವಣ್ಣ ಹೊಗರು (melanin pigment)

2) ಕೆಂಬೇರ್ ಹೊಗರು (carotene pigment)

3) ನೆತ್ತರುಬಣ್ಣಕ (hemoglobin)

ಕರ‍್ವಣ್ಣಗೂಡುಗಳಿಂದ ಮಾಡಲ್ಪಡುವ ಕರ‍್ವಣ್ಣ ಹೊಗರು, ತೊಗಲಿನಲ್ಲಿ ಕಂದು (brown) ಇಲ್ಲವೆ ತಿಳಿಗಂದಿನ (tan) ಬಣ್ಣವನ್ನು ಉಂಟುಮಾಡಿದರೆ, ಕೂದಲುಗಳಿಗೆ ಕಂದು ಇಲ್ಲವೆ ಕಪ್ಪುಬಣ್ಣವನ್ನು ಕೊಡುತ್ತದೆ. ತೊಗಲಿಗೆ ನೇಸರನ ಬೆಳಕಿನ ಕಡುನೇರಳೆಯ ಕದಿರುಗಳು  ಹೆಚ್ಚೆಚ್ಚು ತಾಗಿದಂತೆಲ್ಲ, ಕರ‍್ವಣ್ಣ ಹೊಗರಿನ ಮಾಡುವಿಕೆ ಹೆಚ್ಚಾಗುತ್ತದೆ.

ಕೆಂಬೇರ್ ಹೊಗರು, ತೊಗಲಿಗೆ ಅರಿಶಿನ ಇಲ್ಲವೆ ಕಿತ್ತಳೆ ಬಣ್ಣವನ್ನು ಕೊಡುತ್ತದೆ. ಕರ‍್ವಣ್ಣ ಹೊಗರನ್ನು ಕಡಿಮೆ ಮಟ್ಟದಲ್ಲಿ ಹೊಂದಿರುವ ತೊಗಲಿನಲ್ಲಿ ಕೆಂಬೇರ್ ಹೊಗರನ್ನು ಸರಿಯಾಗಿ ಗುರುತಿಸಬಹುದಾಗಿದೆ. ನೆತ್ತರುಬಣ್ಣಕವನ್ನೂ, ಕಡಿಮೆ ಮಟ್ಟದ ಕರ‍್ವಣ್ಣ ಹೊಗರನ್ನು ಹೊಂದಿರುವ ತೊಗಲುಗಳಲ್ಲಿ ಗುರುತಿಸಬಹುದು. ನೆತ್ತರಿನ ಕೆನೆಕಣಗಳಲ್ಲಿ (RBC) ಇರುವ ಈ ಹೊಗರು, ತೊಗಲಿನ ಪದರಗಳಲ್ಲಿ ನಸುಗೆಂಪಿನ (pink) ಬಣ್ಣದಂತೆ ಕಾಣುತ್ತದೆ. ತೊಗಲಿನ ನೆತ್ತರುಗೊಳವೆಗಳು ಹಿಗ್ಗಿದ್ದಾಗ, ತೊಗಲಿನಲ್ಲಿ ನೆತ್ತರಿನ ಮೊತ್ತವೂ ಹೆಚ್ಚುವುದರಿಂದ,  ತೊಗಲಲ್ಲಿ ನೆತ್ತರುಗೊಳವೆಗಳು ಹಿಗ್ಗಿದಾಗ, ನೆತ್ತರುಬಣ್ಣಕವು ಎದ್ದು ಕಾಣಿಸುತ್ತದೆ.

ತೊಗಲಿನ ಅರಿವು (cutaneous sensation): ಮುಟ್ಟುವಿಕೆ, ಒತ್ತುವಿಕೆ, ನಡುಗುವಿಕೆ, ಬಿಸುಪು ಹಾಗು ನೋವುಗಳ ಸುಳಿವುಗಳನ್ನು ಗುರುತಿಸಿ, ನಮ್ಮ ಮಯ್ಗೆು ಸುತ್ತುಮುತ್ತಲಿನ ಅರಿವುಗಳನ್ನು ತೊಗಲು ತಿಳಿಸಿಕೊಡುತ್ತದೆ. ಮೇಲ್ತೊಗಲ್ಪರೆಯಲ್ಲಿರುವ (epidermis) ಮೆರ‍್ಕೆಲ್ ತಟ್ಟೆಗೆ (Merkel disc) ನಡುತೊಗಲ್ಪರೆಯಲ್ಲಿರುವ ನರದ ಗೂಡುಗಳು ಹೊಂದಿಕೊಂಡಿರುತ್ತವೆ. ಈ ಬಗೆಯ ಜೋಡಣೆಯು ತೊಗಲು ಮುಟ್ಟುವ  ಅಡಕದ ಮಂದತೆ ಹಾಗು ಇಟ್ಟಳಗಳನ್ನು ಅರಿಯಲು ನೆರವಾಗುತ್ತದೆ.

ನಡುತೊಗಲ್ಪರೆಯ ಮುಂಚಾಚುಗಳಲ್ಲಿ (dermal papillae) ಇರುವ ಮುಟ್ಟರಿವಿನ ಬಿಡಿಕಗಳು (corpuscles of touch), ತೊಗಲಿನ ಮುಟ್ಟರಿವನ್ನು ಗುರುತಿಸಲು ನೆರವಾಗುತ್ತದೆ. ನಡುತೊಗಲ್ಪರೆಯ ಒಳ ಪದರಗಳಲ್ಲಿ ಇರುವ ಒತ್ತರಿವಿನ ಬಿಡಿಕಗಳು/ಪದರ ಬಿಡಿಕಗಳು (lamellar corpuscles) ತೊಗಲಿನ/ಮಯ್ ಮೇಲೆ ಬೀಳುವ ಒತ್ತಡ ಹಾಗು ನಡುಕಗಳನ್ನು ಅರಿಯುವ ಅಳವನ್ನು ಹೊಂದಿವೆ.

ಇವುಗಳಲ್ಲದೇ, ನಡುತೊಗಲ್ಪರೆಯ ತುಂಬೆಲ್ಲಾ ಸುಳು ನರಗೂಡುಗಳು (simple neurons) ಹರಡಿಕೊಂದಿರುತ್ತವೆ. ಇವು ನೋವು, ಬಿಸಿ, ಇಲ್ಲವೇ ತಂಪಿನ ಅರಿವುಗಳನ್ನು ಅರಿಯಲು ನೆರವಾಗಬಲ್ಲವು.ಈ ಅರಿವು ಪಡೆಕಗಳು (sensory receptors) ಮಯ್ ತೊಗಲಿನ ಎಲ್ಲಾ ಬಾಗಗಳಲ್ಲಿ, ಒಂದೇ ತೆರನಾಗಿ ಹರಡಿಕೊಂಡಿರುವುದಿಲ್ಲ. ಒಂದಶ್ಟು ಕಡೆ ಹೆಚ್ಚಿನ ಎಣಿಕೆಯಲ್ಲಿದ್ದರೆ, ಮತ್ತೊಂದ್ದಶ್ಟು ಕಡೆ ಕಡಿಮೆ ಎಣಿಕೆಯಲ್ಲಿರುತ್ತವೆ. ಈ ಬಗೆಯ ಏರ‍್ಪಾುಟಿನಿಂದಾಗಿ, ನಮ್ಮ ಮಯ್ಯಿಯ ಕೆಲವು ಬಾಗಗಳು ಮುಟ್ಟುವಿಕೆ, ಬಿಸುಪು ಇಲ್ಲವೇ ನೋವುಗಳನ್ನು ಅರಿಯುವ ಮಟ್ಟ ಹೆಚ್ಚಿದ್ದರೆ, ಮತ್ತಶ್ಟು ಬಾಗಗಳಲ್ಲಿ ಕಡಿಮೆ ಇರುತ್ತದೆ.

ಅರಿವಿನ ಅಂಗಗಳ (sensory organs) ಬಗೆಗಿನ ಬರಹದಲ್ಲಿ ತೊಗಲಿನ ಅರಿವಿನ ಬಗ್ಗೆ ಇನ್ನಶ್ಟು ಆಳವಾಗಿ ತಿಳಿಸಿಕೊಡಲಾಗುವುದು.

ಹೊರವಡಿಕೆ (excretion): ಮಯ್ಯನ್ನು ತಂಪಾಗಿಸಲು ಬೆವರನ್ನು ಸುರಿಸುವುದರ ಜೊತೆಗೆ ಗುಳ್ಳೆ ಬೆವರು ಸುರಿಕಗಳು (accrine sweat glands), ಮಯ್ ಕಸವನ್ನು ಹೊರಹಾಕುವಿಕೆಯಲ್ಲಿಯೂ ನೆರವಾಗುತ್ತದೆ. ಗುಳ್ಳೆ ಸುರಿಕಗಳಲ್ಲಿ ಮಾಡಲ್ಪಡುವ ಬೆವರು, ನೀರು ಮತ್ತು ಮಿಂತುಣುಕುಗಳಲ್ಲದೇ (electrolytes) ಕೆಲವು ಇರ‍್ಪುಕಗಳನ್ನೂ ಹೊಂದಿರುತ್ತದೆ. ಬೆವರಿನಲ್ಲಿ ಸೋಡಿಯಂ ಮತ್ತು ಕ್ಲೋರಯ್ಡ್  ಹೆಚ್ಚಿನ ಮೊತ್ತದಲ್ಲಿ ಇದ್ದರೆ, ಪೊಟಾಸಿಯಮ್, ಕ್ಯಾಲ್ಸಿಯಮ್ ಹಾಗು ಮೆಗ್ನೀಸಿಯಂ ಮಿಂತುಣುಕುಗಳನ್ನು ಸ್ವಲ್ಪ ಮೊತ್ತದಲ್ಲಿ ಹೊಂದಿರುತ್ತದೆ.

ನೆತ್ತರಿನಲ್ಲಿ ಮಿಂತುಣುಕುಗಳ ಮಟ್ಟ ಹೆಚ್ಚಿದರೆ, ಬೆವರಿನಲ್ಲೂ ಅವುಗಳ ಮಟ್ಟ ಹೆಚ್ಚುತ್ತದೆ. ಈ ಬಗೆಯಲ್ಲಿ, ಮಿಂತುಣುಕುಗಳ ಸರಿಯಾದ ಮಟ್ಟವನ್ನು ನಮ್ಮ ಮಯ್ ಕಾಯ್ದುಕೊಳ್ಳುತ್ತದೆ. ಮಿಂತುಣುಕುಗಳಲ್ಲದೇ, ಲ್ಯಾಕ್ಟಿಕ್ ಆಸಿಡ್ (lactic acid), ಯುರಿಯ (urea), ಯುರಿಕ್ ಆಸಿಡ್ (uric acid), ಹಾಗು ಅಮೋನಿಯ (ammonia) ಮುಂತಾದ ತರುಮಾರ‍್ಪಿ ನ (metabolic) ಕಸಗಳು ಕೂಡ ಬೆವರಿನ ಮೂಲಕ ಹೊರದೂಡಲ್ಪಡುತ್ತವೆ.

ಮತ್ತೊಂದು ಮಜವಾದ ಸಂಗತಿ ಎಂದರೆ, ಹೆಂಡವನ್ನು ಕುಡಿದವರಲ್ಲಿ, ಹೆಂಡವು ಬೆವರಿನ ಮೂಲಕ ಮಯ್ಯಿಂದ ಹೊರ ಬರುತ್ತದೆ. ನೆತ್ತರಿನಲ್ಲಿರುವ ಹೆಂಡವನ್ನು  ಬೆವರು ಸುರಿಕಗಳ ಗೂಡುಗಳು ಹೀರಿಕೊಂಡು, ಬೆವರಿನ ಉಳಿದ ಅಡಕಗಳೊಂದಿಗೆ, ಹೆಂಡವನ್ನೂ ಹೊರ ಹಾಕುತ್ತವೆ.
ಈ ಬರಹದೊಂದಿಗೆ ತೊಗಲೇರ‍್ಪಾಟಿನ ಸರಣಿ ಬರಹಗಳನ್ನು ಕೊನೆಗೊಳಿಸಲಾಗುತ್ತಿದೆ. ಮುಂದಿನ ಬರಹದಲ್ಲಿ ನಮ್ಮ ಮಯ್ಯಿಯ ಮತ್ತೊಂದು ಏರ‍್ಪಾಟಿನ ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: innerbody.com, daviddarling.info, sphweb.bumc.bu.edu,godshotspot)

Bookmark the permalink.

Comments are closed.

Comments are closed