ತೊಗಲು – ಬಾಗ 3

ಹಿಂದಿನ ಎರಡು ಕಂತುಗಳಲ್ಲಿ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿಸಿಕೊಡಲಾಗಿದೆ. ತೊಗಲೇರ‍್ಪಾಟಿನ ಈ ಕೊನೆಯ ಕಂತಿನಲ್ಲಿ ತೊಗಲಿನ ಕೆಲಸದ ಬಗ್ಗೆ ತಿಳಿದುಕೊಳ್ಳೋಣ. ತೊಗಲಿನ ಮುಕ್ಯವಾದ ಕೆಲಸಗಳು ಕೆಳಕಂಡಂತಿವೆ.

ಕೊಂಪರೆಸುವಿಕೆ (keratinization): ಕೊಂಪರೆ ಮುನ್ನು (keratin protein), ದನಕರುಗಳ ಕೊಂಬುಗಳ ಪದರಗಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ, ಈ  ಮುನ್ನನ್ನು ‘ಕೊಂಪರೆ ಮುನ್ನು’ ಎಂದು ಹೆಸರಿಸಲಾಗಿದೆ; ಇವು ಕೊಂಬಿನ ಪದರುಗಳಲ್ಲದೇ, ಮನುಶ್ಯರ ಗೂಡುಕಟ್ಟುಗಳನ್ನೂ (tissues) ಒಳಗೊಂಡ, ಹಲವು ಬಗೆಯ ಜೀವಿಗಳಲ್ಲಿಯೂ ಇರುತ್ತವೆ. ಕೊಂಪರೆಗೂಡುಗಳು (keratinocytes) ಕೊಂಪರೆ ಮುನ್ನನ್ನು ಕೂಡಿಡುವ ಹಮ್ಮುಗೆಯನ್ನು ಕೊಂಪರೆಸುವಿಕೆ ಎಂದು ಹೇಳಬಹುದು.

ತಳಪರೆಯ (stratum basale) ಬುಡಗೂಡಿನಿಂದ (stem cell) ಹುಟ್ಟುವ ಕೊಂಪರೆಗೂಡುಗಳು, ಹುಟ್ಟಿದ ಹೊಸದರಲ್ಲಿ ಆರ‍್ಮೂಲೆಯ (cuboidal) ಆಕಾರದಲ್ಲಿದ್ದು, ಈ ಹಂತದ ಗೂಡುಗಳಲ್ಲಿ  ಕೊಂಪರೆ ಮುನ್ನು ಇರುವುದಿಲ್ಲ. ಬುಡಗೂಡುಗಳು ಹೆಚ್ಚೆಚ್ಚು ಹೊಸ ಗೂಡುಗಳನ್ನು ಹುಟ್ಟಿಸುತ್ತಿದ್ದಂತೆ, ಹಳೆಯ ಕೊಂಪರೆಗೂಡುಗಳು ತೊಗಲಿನ ಹೊರಮಯ್ಯೆಡೆಗೆ ತಳ್ಳಲ್ಪಡುತ್ತವೆ. ಹೀಗೆ ತಳ್ಳಲ್ಪಡುವ ಗೂಡುಗಳು, ಮುಳ್ಪರೆಯನ್ನು (stratum spinosum) ತಲುಪುವ ಹೊತ್ತಿಗೆ, ಕೊಂಪರೆ ಮುನ್ನನ್ನು ಕೂಡಿಟ್ಟುಕೊಳ್ಳಲು ಮೊದಲುಗೊಳ್ಳುತ್ತವೆ. ಜೊತೆಗೆ ಅವುಗಳ ಇಟ್ಟಳವು ಚಪ್ಪಟೆ ಹಾಗು ಗಟ್ಟಿಯಾಗಿ ಮಾರ‍್ಪಡುತ್ತವೆ. ಈ ಬಗೆಯ ಮಾರ‍್ಪಾಡುವಿಕೆಯಿಂದ ಈ ಗೂಡುಗಳ ನೀರು ತಡೆಯುವ ಅಳವು ಹೆಚ್ಚುತ್ತದೆ.

ಗೂಡುಗಳು ಮುಂದೆ ಸಾಗಿ, ಹರಳ್ಪರೆಯನ್ನು (stratum granulosum) ತಲುಪಿದಾಗ, ಮತ್ತಶ್ಟು ಚಪ್ಪಟೆಗೊಳ್ಳುತ್ತವೆ ಹಾಗು ಇನ್ನಶ್ಟು ಕೊಂಪರೆ ಮುನ್ನನ್ನು ತುಂಬಿಕೊಳ್ಳುತ್ತವೆ. ಇಶ್ಟು ದೂರ ಸಾಗಿದ ಗೂಡುಗಳಿಗೆ ನಡುತೊಗಲ್ಪರೆಯ (dermis) ನೆತ್ತರುಗೊಳವೆಗಳಿಗೆ (blood vessels) ಆರಯ್ವಗಳನ್ನು (nutrients) ಉಣಿಸಲಾಗುವುದಿಲ್ಲ. ಇದರಿಂದಾಗಿ, ಕೊಂಪರೆಗೂಡುಗಳು ಹಮ್ಮಡಿತದ (apoptosis) (ಹಮ್ಮುಗೆಯ ಮಡಿತ = programmed cell death) ಬಗೆಯಲ್ಲಿ ಸಾಯುತ್ತವೆ.

ಹಮ್ಮಡಿತದ ಮಾದರಿಯಲ್ಲಿ ಸತ್ತ ಕೊಂಪರೆಗೂಡುಗಳು, ಹೊಳ್ಪರೆ (stratum lucidum) ಹಾಗು ಕೋಡ್ಪರೆಗಳನ್ನು (stratum corneum) ತಲುಪಿದಾಗ  ತುಂಬಾ ಗಟ್ಟಿಯಾದ, ಚಪಟ್ಟೆಯಾಗಿ, ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಈ ಬಗೆಯ ಜೋಡಣೆಯು, ಕೊಂಪರೆ ಮುನ್ನಿನ ಬೇಲಿಯನ್ನು ಮಾಡುತ್ತವೆ ಹಾಗು ತೊಗಲಿನ ಕೆಳಗಿರುವ ಗೂಡುಕಟ್ಟುಗಳನ್ನು (tissues) ಕಾಯುತ್ತವೆ.

ಬಿಸುಪಿನ ಒನ್ನೆಸುವಿಕೆ (temperature homeostasis): ತೊಗಲು ನಮ್ಮ ಹೊರಮಯ್ ಹೊದಿಕೆಯಾದ್ದರಿಂದ, ಹೊರಗಿನ-ಪಾಡು (environment) ಹಾಗು ನಮ್ಮ ಮಯ್ಯೊಳಗಿನ ಒಡನಾಟಗಳಿಗೆ (interaction) ಹೊಂದಿಕೊಳ್ಳುವಂತೆ, ಮಯ್ ಬಿಸುಪನ್ನು (temperature) ಅಂಕೆಯಲ್ಲಿಡುತ್ತದೆ.

i) ಮಯ್ಕಾವೆರಿಕೆ (hyperthermia) : ನಮ್ಮ ಮಯ್ಯಲ್ಲಿ ಬಿಸುಪು ಹೆಚ್ಚಾದರೆ, ನೆತ್ತರುಗೊಳವೆಗಳನ್ನು ಹಿಗ್ಗಿಸಿ ಹಾಗು ಬೆವರುವಿಕೆಯನ್ನು ಹೆಚ್ಚಿಸಿ, ತೊಗಲು ಮಯ್ ಬಿಸುಪನ್ನು ತಗ್ಗಿಸುತ್ತದೆ. ಬೆವರು ಸುರಿಕಗಳಲ್ಲಿ (sweat glands) ಮಾಡಲ್ಪಡುವ ಬೆವರು, ನೀರನ್ನು ಹೊರಮಯ್ಗೆ ತಲುಪಿಸುತ್ತದೆ. ಹೊರಮಯ್ ತಲುಪಿದ ಬೆವರಿನ ನೀರು ಆವಿಯಾಗುತ್ತದೆ.

togalu_3_1

ಹೀಗೆ ಆವಿಯಾಗುವ  ಬೆವರಿನ ನೀರು, ಕಾವನ್ನು ಹೀರಿಕೊಂಡು, ಹೊರಮಯ್ಯನ್ನು ತಂಪಾಗಿಸುತ್ತದೆ. ನಡುತೊಗಲ್ಪರೆಯಲ್ಲಿರುವ (dermis) ನೆತ್ತರುಗೊಳವೆಗಳ ಹಿಗ್ಗುವಿಕೆಯು, ತೊಗಲಿಗೆ ಹರಿಯುವ ನೆತ್ತರಿನ ಮೊತ್ತವನ್ನು ಹೆಚ್ಚಿಸುತ್ತದೆ. ತೊಗಲಿನೆಡೆಗೆ ಸಾಗುವ ನೆತ್ತರು, ಮಯ್ಯೊಳಗಿನ ಕಾವನ್ನೂ ತೊಗಲಿಗೆ ಸಾಗಿಸುತ್ತದೆ. ಹೊರಮಯ್ ತಲುಪಿದ ಕಾವು, ಮಯ್ಯಿಂದ ಹೊರ ಹೋಗುತ್ತದೆ.

ii) ಮಯ್ಕಾವಿಳಿಕೆ (hypothermia) : ಮಯ್ ಬಿಸುಪು ಎಂದಿನ ಮಟ್ಟಕ್ಕಿಂತ ಕೆಳಗೆ ಇಳಿದರೆ, ಕೂದಲು ನಿಮಿರುಗ ಕಂಡ (arrector pili muscle) ಹಾಗು ನೆತ್ತರುಗೊಳವೆಗಳನ್ನು ತೊಗಲು ಕುಗ್ಗಿಸುತ್ತದೆ. ನಿಮಿರುಗ ಕಂಡಗಳ ಕುಗ್ಗುವಿಕೆಯಿಂದಾಗಿ, ತೊಗಲಿನ ಹೊರಮಯ್ಯಲ್ಲಿ ಗುಗ್ಗರಿ ಗುಳ್ಳೆಗಳು (goose bumps) ಉಂಟಾಗುತ್ತವೆ.

togalu_3_2

ಗುಗ್ಗರಿ ಗುಳ್ಳೆಗಳು ಕೂದಲುಗಳ ತಾಳುಗಳನ್ನು ತೊಗಲಿನ ಹೊರಮಯ್ಯಿಂದ ಸ್ವಲ್ಪ ಮೇಲೆತ್ತುತ್ತವೆ. ಈ ಬಗೆಯ ಮಾರ‍್ಪಾಟು, ಕೂದಲಿನ ಸಂದುಗಳಲ್ಲಿ ಹೆಚ್ಚಿನ ಪ್ರಮಾಣದ ಗಾಳಿಯನ್ನು ಹಿಡಿದಿಡಲು ನೆರವಾಗುತ್ತದೆ. ಹೀಗೆ ಹಿಡಿದಿಡಲ್ಪಟ್ಟ ಗಾಳಿಯು ತೊಗಲಿನ ಹೊರ ಮಯ್ಗೆ ಮತ್ತಶ್ಟು ಹೊದಿಕೆಯನ್ನು ಕೊಡುತ್ತದೆ. ತೊಗಲಿನ ನೆತ್ತರುಗೊಳವೆಗಳ ಕುಗ್ಗುವಿಕೆ, ತೊಗಲಿಗೆ ಹರಿಯುವ ನೆತ್ತರಿನ ಪ್ರಮಾಣವನ್ನು ಕುಗ್ಗಿಸುತ್ತದೆ. ಇದು ತೊಗಲಿನಲ್ಲಿ  ತಂಪನ್ನು ಉಂಟುಮಾಡಿದರೂ, ಮಯ್ಯೊಳಗಿನ  ಕಾವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

D ಬಾಳುಳುಪು ಮಾಡುವಿಕೆ (Vitamin D Synthesis): ನಾವು ಉಣ್ಣುವ ಕೂಳಿನಿಂದ ಕ್ಯಾಲ್ಸಿಯಮ್ ಅನ್ನು ಹೀರಿಕೊಳ್ಳಲು D ಬಾಳುಳುಪು ಬೇಕಾಗುತ್ತದೆ. ಕಡುನೇರಳೆಯ ಕದಿರುಗಳು (UV light) ತೊಗಲಿಗೆ ಬಡಿದಾಗ, D ಬಾಳುಳುಪು ಉಂಟಾಗುತ್ತದೆ. ಮೇಲ್ತೊಗಲ್ಪರೆಯ ತಳಪರೆ (stratum basale) ಹಾಗು ಮುಳ್ಪರೆಗಳು (stratum spinosum) 7-ಡಿಹಯ್ಡ್ರೊಕೊಲೆಸ್ಟಿರಾಲ್ಗುಳನ್ನು ಹೊಂದಿರುತ್ತವೆ.

togalu_3_3

ನೇಸರನ ಬೆಳಕಿನ ಕಡುನೇರಳೆಯ ಕದಿರುಗಳು ತೊಗಲಿನ ಹೊರ ಪದರಗಳಲ್ಲಿ ತೂರುವಾಗ,  ಅವು 7-ಡಿಹಯ್ಡ್ರೊಕೊಲೆಸ್ಟಿರಾಲ್ಗ ಳಿಗೆ ಬಡಿದಾಗ, 7-ಡಿಹಯ್ಡ್ರೊಕೊಲೆಸ್ಟಿರಾಲ್ಗೇಳು D3 ಬಾಳುಳುಪುಗಳಾಗಿ ಬದಲಾಗುತ್ತವೆ. D3 ಬಾಳುಳುಪುಗಳು ಈಲಿಯಲ್ಲಿ (liver), ಕ್ಯಾಲ್ಸಿಡಯಾಲ್ಗಹಳಾಗಿ (calcidiol) ಬದಲಾಗುತ್ತವೆ. ಕ್ಯಾಲ್ಸಿಡಯಾಲ್ಗಪಳು ಬಿಕ್ಕುಗಳಲ್ಲಿ (kidneys), D ಬಾಳುಳುಪಿನ ಚೂಟಿಯ (active) ಬಗೆಯಾದ ಕ್ಯಾಲ್ಸಿಟ್ರಿಯಾಲ್ಗಳಳಾಗಿ (calcitriol) ಬದಲಾಗುತ್ತವೆ.

ಕಾಪು (protection): ಕೆಡುಕುಕಣಗಳು (pathogens) ಮತ್ತು ಕಡುನೇರಳೆ ಕದಿರುಗಳನ್ನೂ (UV rays) ಒಳಗೊಂಡಂತೆ ಹಲವು ಬಗೆಯ ತೊಡಕುಗಳಿಂದ ನಮ್ಮ ಮಯ್ಯೊಳಗಿನ ಗೂಡುಕಟ್ಟುಗಳನ್ನು ಕಾಯುವಲ್ಲಿ ತೊಗಲೇರ‍್ಪಾಟು ನೆರವಾಗುತ್ತದೆ. ಆರೋಗ್ಯವಂತ ತೊಗಲಿನ ಹೊರಪದರದಲ್ಲಿ ಗಟ್ಟಿಯಾದ ಸತ್ತ ಕೊಂಪರೆಗಳ ಒತ್ತಣೆಯು (density) ಹೆಚ್ಚಿದ್ದು, ನಂಜುಳ (virus), ಬೂಸು (fungus), ಒಚ್ಚೀರು (bacteria) ಮುಂತಾದ ಕೆಡುಕುಕಣಗಳು ಅಶ್ಟು ಸುಳುವಾಗಿ ನುಸುಳಲು ಆಗುವುದಿಲ್ಲ. ತೊಗಲಿನಲ್ಲಿ ಬಿರುಕು ಕಾಣಿಸಿಕೊಂಡಾಗ, ಈ ಕೆಡುಕುಕಣಗಳು ನುಸುಳುವ ಸಾದ್ಯತೆ ಹೆಚ್ಚಾಗುತ್ತದೆ.

togalu_3_4

ಹೊರತೊಗಲ್ಪರೆಯ ಗೂಡುಗಳು ಎಡೆಬಿಡದೆ ಹುಟ್ಟುವುದರಿಂದ, ತೊಗಲಿನ ಮೇಲ್ಪದರ ಸ್ವಲ್ಪ ಮಟ್ಟಿಗೆ ತರಚಿದರೆ ಇಲ್ಲವೆ ಕೊಯ್ದುಕೊಂಡರೆ, ಆ ಬಾಗವು ಕಡಿಮೆ ಸಮಯದಲ್ಲಿಯೇ ಸರಿಹೊಂದುತ್ತದೆ. ಮೇಲ್ತೊಗಲ್ಪರೆಯ ಕರ‍್ವದಣ್ಣಗೂಡುಗಳು ಕರ‍್ವಾಣ್ಣ ಹೊಗರನ್ನು (melanin pigment) ಮಾಡುತ್ತದೆ. ಕಡುನೇರಳೆ ಕದಿರುಗಳು, ಒಳ ಮಯ್ಯನ್ನು ನುಸುಳುವ ಮೊದಲೇ, ಅವುಗಳನ್ನು ಕರ‍್ವಣ್ಣ ಹೊಗರು ಹೀರಿಕೊಳ್ಳುತ್ತದೆ. ಈ ಬಗೆಯಲ್ಲಿ ಕಡುನೇರಳೆ ಕದಿರುಗಳು ನಮ್ಮ ಮಯ್ಯಿಗೆ ಮಾಡಬಹುದಾದ ಕೆಡುಕುಗಳನ್ನು ಕರ‍್ವೊಣ್ಣ ಹೊಗರು ತಡೆಯುತ್ತದೆ.

ತೊಗಲಿನ ಬಣ್ಣ (skin color): ಮೂರು ಬಗೆಯ ಹೊಗರುಗಳು (pigments) ಮನುಶ್ಯರ ಮಯ್ ಬಣ್ಣವನ್ನು ತೀರ‍್ಮಾನಿಸುತ್ತವೆ. ಆ ಹೊಗರುಗಳೆಂದರೆ,

1) ಕರ‍್ವಣ್ಣ ಹೊಗರು (melanin pigment)

2) ಕೆಂಬೇರ್ ಹೊಗರು (carotene pigment)

3) ನೆತ್ತರುಬಣ್ಣಕ (hemoglobin)

ಕರ‍್ವಣ್ಣಗೂಡುಗಳಿಂದ ಮಾಡಲ್ಪಡುವ ಕರ‍್ವಣ್ಣ ಹೊಗರು, ತೊಗಲಿನಲ್ಲಿ ಕಂದು (brown) ಇಲ್ಲವೆ ತಿಳಿಗಂದಿನ (tan) ಬಣ್ಣವನ್ನು ಉಂಟುಮಾಡಿದರೆ, ಕೂದಲುಗಳಿಗೆ ಕಂದು ಇಲ್ಲವೆ ಕಪ್ಪುಬಣ್ಣವನ್ನು ಕೊಡುತ್ತದೆ. ತೊಗಲಿಗೆ ನೇಸರನ ಬೆಳಕಿನ ಕಡುನೇರಳೆಯ ಕದಿರುಗಳು  ಹೆಚ್ಚೆಚ್ಚು ತಾಗಿದಂತೆಲ್ಲ, ಕರ‍್ವಣ್ಣ ಹೊಗರಿನ ಮಾಡುವಿಕೆ ಹೆಚ್ಚಾಗುತ್ತದೆ.

ಕೆಂಬೇರ್ ಹೊಗರು, ತೊಗಲಿಗೆ ಅರಿಶಿನ ಇಲ್ಲವೆ ಕಿತ್ತಳೆ ಬಣ್ಣವನ್ನು ಕೊಡುತ್ತದೆ. ಕರ‍್ವಣ್ಣ ಹೊಗರನ್ನು ಕಡಿಮೆ ಮಟ್ಟದಲ್ಲಿ ಹೊಂದಿರುವ ತೊಗಲಿನಲ್ಲಿ ಕೆಂಬೇರ್ ಹೊಗರನ್ನು ಸರಿಯಾಗಿ ಗುರುತಿಸಬಹುದಾಗಿದೆ. ನೆತ್ತರುಬಣ್ಣಕವನ್ನೂ, ಕಡಿಮೆ ಮಟ್ಟದ ಕರ‍್ವಣ್ಣ ಹೊಗರನ್ನು ಹೊಂದಿರುವ ತೊಗಲುಗಳಲ್ಲಿ ಗುರುತಿಸಬಹುದು. ನೆತ್ತರಿನ ಕೆನೆಕಣಗಳಲ್ಲಿ (RBC) ಇರುವ ಈ ಹೊಗರು, ತೊಗಲಿನ ಪದರಗಳಲ್ಲಿ ನಸುಗೆಂಪಿನ (pink) ಬಣ್ಣದಂತೆ ಕಾಣುತ್ತದೆ. ತೊಗಲಿನ ನೆತ್ತರುಗೊಳವೆಗಳು ಹಿಗ್ಗಿದ್ದಾಗ, ತೊಗಲಿನಲ್ಲಿ ನೆತ್ತರಿನ ಮೊತ್ತವೂ ಹೆಚ್ಚುವುದರಿಂದ,  ತೊಗಲಲ್ಲಿ ನೆತ್ತರುಗೊಳವೆಗಳು ಹಿಗ್ಗಿದಾಗ, ನೆತ್ತರುಬಣ್ಣಕವು ಎದ್ದು ಕಾಣಿಸುತ್ತದೆ.

ತೊಗಲಿನ ಅರಿವು (cutaneous sensation): ಮುಟ್ಟುವಿಕೆ, ಒತ್ತುವಿಕೆ, ನಡುಗುವಿಕೆ, ಬಿಸುಪು ಹಾಗು ನೋವುಗಳ ಸುಳಿವುಗಳನ್ನು ಗುರುತಿಸಿ, ನಮ್ಮ ಮಯ್ಗೆು ಸುತ್ತುಮುತ್ತಲಿನ ಅರಿವುಗಳನ್ನು ತೊಗಲು ತಿಳಿಸಿಕೊಡುತ್ತದೆ. ಮೇಲ್ತೊಗಲ್ಪರೆಯಲ್ಲಿರುವ (epidermis) ಮೆರ‍್ಕೆಲ್ ತಟ್ಟೆಗೆ (Merkel disc) ನಡುತೊಗಲ್ಪರೆಯಲ್ಲಿರುವ ನರದ ಗೂಡುಗಳು ಹೊಂದಿಕೊಂಡಿರುತ್ತವೆ. ಈ ಬಗೆಯ ಜೋಡಣೆಯು ತೊಗಲು ಮುಟ್ಟುವ  ಅಡಕದ ಮಂದತೆ ಹಾಗು ಇಟ್ಟಳಗಳನ್ನು ಅರಿಯಲು ನೆರವಾಗುತ್ತದೆ.

ನಡುತೊಗಲ್ಪರೆಯ ಮುಂಚಾಚುಗಳಲ್ಲಿ (dermal papillae) ಇರುವ ಮುಟ್ಟರಿವಿನ ಬಿಡಿಕಗಳು (corpuscles of touch), ತೊಗಲಿನ ಮುಟ್ಟರಿವನ್ನು ಗುರುತಿಸಲು ನೆರವಾಗುತ್ತದೆ. ನಡುತೊಗಲ್ಪರೆಯ ಒಳ ಪದರಗಳಲ್ಲಿ ಇರುವ ಒತ್ತರಿವಿನ ಬಿಡಿಕಗಳು/ಪದರ ಬಿಡಿಕಗಳು (lamellar corpuscles) ತೊಗಲಿನ/ಮಯ್ ಮೇಲೆ ಬೀಳುವ ಒತ್ತಡ ಹಾಗು ನಡುಕಗಳನ್ನು ಅರಿಯುವ ಅಳವನ್ನು ಹೊಂದಿವೆ.

ಇವುಗಳಲ್ಲದೇ, ನಡುತೊಗಲ್ಪರೆಯ ತುಂಬೆಲ್ಲಾ ಸುಳು ನರಗೂಡುಗಳು (simple neurons) ಹರಡಿಕೊಂದಿರುತ್ತವೆ. ಇವು ನೋವು, ಬಿಸಿ, ಇಲ್ಲವೇ ತಂಪಿನ ಅರಿವುಗಳನ್ನು ಅರಿಯಲು ನೆರವಾಗಬಲ್ಲವು.ಈ ಅರಿವು ಪಡೆಕಗಳು (sensory receptors) ಮಯ್ ತೊಗಲಿನ ಎಲ್ಲಾ ಬಾಗಗಳಲ್ಲಿ, ಒಂದೇ ತೆರನಾಗಿ ಹರಡಿಕೊಂಡಿರುವುದಿಲ್ಲ. ಒಂದಶ್ಟು ಕಡೆ ಹೆಚ್ಚಿನ ಎಣಿಕೆಯಲ್ಲಿದ್ದರೆ, ಮತ್ತೊಂದ್ದಶ್ಟು ಕಡೆ ಕಡಿಮೆ ಎಣಿಕೆಯಲ್ಲಿರುತ್ತವೆ. ಈ ಬಗೆಯ ಏರ‍್ಪಾುಟಿನಿಂದಾಗಿ, ನಮ್ಮ ಮಯ್ಯಿಯ ಕೆಲವು ಬಾಗಗಳು ಮುಟ್ಟುವಿಕೆ, ಬಿಸುಪು ಇಲ್ಲವೇ ನೋವುಗಳನ್ನು ಅರಿಯುವ ಮಟ್ಟ ಹೆಚ್ಚಿದ್ದರೆ, ಮತ್ತಶ್ಟು ಬಾಗಗಳಲ್ಲಿ ಕಡಿಮೆ ಇರುತ್ತದೆ.

ಅರಿವಿನ ಅಂಗಗಳ (sensory organs) ಬಗೆಗಿನ ಬರಹದಲ್ಲಿ ತೊಗಲಿನ ಅರಿವಿನ ಬಗ್ಗೆ ಇನ್ನಶ್ಟು ಆಳವಾಗಿ ತಿಳಿಸಿಕೊಡಲಾಗುವುದು.

ಹೊರವಡಿಕೆ (excretion): ಮಯ್ಯನ್ನು ತಂಪಾಗಿಸಲು ಬೆವರನ್ನು ಸುರಿಸುವುದರ ಜೊತೆಗೆ ಗುಳ್ಳೆ ಬೆವರು ಸುರಿಕಗಳು (accrine sweat glands), ಮಯ್ ಕಸವನ್ನು ಹೊರಹಾಕುವಿಕೆಯಲ್ಲಿಯೂ ನೆರವಾಗುತ್ತದೆ. ಗುಳ್ಳೆ ಸುರಿಕಗಳಲ್ಲಿ ಮಾಡಲ್ಪಡುವ ಬೆವರು, ನೀರು ಮತ್ತು ಮಿಂತುಣುಕುಗಳಲ್ಲದೇ (electrolytes) ಕೆಲವು ಇರ‍್ಪುಕಗಳನ್ನೂ ಹೊಂದಿರುತ್ತದೆ. ಬೆವರಿನಲ್ಲಿ ಸೋಡಿಯಂ ಮತ್ತು ಕ್ಲೋರಯ್ಡ್  ಹೆಚ್ಚಿನ ಮೊತ್ತದಲ್ಲಿ ಇದ್ದರೆ, ಪೊಟಾಸಿಯಮ್, ಕ್ಯಾಲ್ಸಿಯಮ್ ಹಾಗು ಮೆಗ್ನೀಸಿಯಂ ಮಿಂತುಣುಕುಗಳನ್ನು ಸ್ವಲ್ಪ ಮೊತ್ತದಲ್ಲಿ ಹೊಂದಿರುತ್ತದೆ.

ನೆತ್ತರಿನಲ್ಲಿ ಮಿಂತುಣುಕುಗಳ ಮಟ್ಟ ಹೆಚ್ಚಿದರೆ, ಬೆವರಿನಲ್ಲೂ ಅವುಗಳ ಮಟ್ಟ ಹೆಚ್ಚುತ್ತದೆ. ಈ ಬಗೆಯಲ್ಲಿ, ಮಿಂತುಣುಕುಗಳ ಸರಿಯಾದ ಮಟ್ಟವನ್ನು ನಮ್ಮ ಮಯ್ ಕಾಯ್ದುಕೊಳ್ಳುತ್ತದೆ. ಮಿಂತುಣುಕುಗಳಲ್ಲದೇ, ಲ್ಯಾಕ್ಟಿಕ್ ಆಸಿಡ್ (lactic acid), ಯುರಿಯ (urea), ಯುರಿಕ್ ಆಸಿಡ್ (uric acid), ಹಾಗು ಅಮೋನಿಯ (ammonia) ಮುಂತಾದ ತರುಮಾರ‍್ಪಿ ನ (metabolic) ಕಸಗಳು ಕೂಡ ಬೆವರಿನ ಮೂಲಕ ಹೊರದೂಡಲ್ಪಡುತ್ತವೆ.

ಮತ್ತೊಂದು ಮಜವಾದ ಸಂಗತಿ ಎಂದರೆ, ಹೆಂಡವನ್ನು ಕುಡಿದವರಲ್ಲಿ, ಹೆಂಡವು ಬೆವರಿನ ಮೂಲಕ ಮಯ್ಯಿಂದ ಹೊರ ಬರುತ್ತದೆ. ನೆತ್ತರಿನಲ್ಲಿರುವ ಹೆಂಡವನ್ನು  ಬೆವರು ಸುರಿಕಗಳ ಗೂಡುಗಳು ಹೀರಿಕೊಂಡು, ಬೆವರಿನ ಉಳಿದ ಅಡಕಗಳೊಂದಿಗೆ, ಹೆಂಡವನ್ನೂ ಹೊರ ಹಾಕುತ್ತವೆ.
ಈ ಬರಹದೊಂದಿಗೆ ತೊಗಲೇರ‍್ಪಾಟಿನ ಸರಣಿ ಬರಹಗಳನ್ನು ಕೊನೆಗೊಳಿಸಲಾಗುತ್ತಿದೆ. ಮುಂದಿನ ಬರಹದಲ್ಲಿ ನಮ್ಮ ಮಯ್ಯಿಯ ಮತ್ತೊಂದು ಏರ‍್ಪಾಟಿನ ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: innerbody.com, daviddarling.info, sphweb.bumc.bu.edu,godshotspot)

ತೊಗಲು – ಬಾಗ 2

ತೊಗಲೇರ‍್ಪಾಟಿನ ಹಿಂದಿನ ಕಂತಿನಲ್ಲಿ, ತೊಗಲಿನ ಒಡಲರಿಮೆಯ ಬಗ್ಗೆ ತಿಳಿಸಿಕೊಡಲಾಗಿತ್ತು. ಈ ಕಂತಿನಲ್ಲಿ ತೊಗಲಿಗೆ ಹೊಂದಿಕೊಂಡಿರುವ ನೆರವಿನ (accessory) ಬಾಗಗಳ ಒಡಲರಿಮೆಯನ್ನು ಅರಿಯೋಣ.

ತೊಗಲಿನ ನೆರವಿನ ಬಾಗಗಳು:

togalu_2_1
1) ಕೂದಲುಗಳು

2) ಉಗುರುಗಳು

3) ಬೆವರು ಸುರಿಕಗಳು (sweat glands)

4) ಮಯ್-ಜಿಡ್ಡಿನ ಸುರಿಕಗಳು (sebaceous glands)

5) ಗುಗ್ಗೆ ಸುರಿಕಗಳು (ceruminous glands)

ಕೂದಲು : (ಚಿತ್ರ 1, 2, & 3)

togalu_2_2

ತೊಗಲಿನ ನೆರವಿನ ಬಾಗಗಳಲ್ಲಿ ಒಂದಾದ ಕೂದಲು ಸತ್ತ ಕೊಂಪರೆಗೂಡುಗಳಿಂದ (keratinocytes) ಮಾಡಲ್ಪಟ್ಟ ಕಂಬಗಳಾಗಿವೆ. ಅಂಗಯ್, ಅಂಗಾಲು, ತುಟಿಗಳು, ಒರತೆರದ ಒಳ ತೆರಪುಗಳು (labia minora = inner vaginal lips) ಹಾಗು ತುಣ್ಣೆಯ ತುದಿಗಳನ್ನು (glans penis)  ಹೊರತುಪಡಿಸಿ,  ಕೂದಲು ಹೊರ ಮಯ್ ತುಂಬೆಲ್ಲಾ ಹರಡಿಕೊಂಡಿರುತ್ತವೆ. ಕಡುನೇರಳೆಯ ಕದಿರುಗಳು (UV rays) ತೊಗಲಿಗೆ ನೇರವಾಗಿ ತಾಗುವುದನ್ನು ತಡೆಯುವುದರ ಜೊತೆಗೆ, ತೊಗಲಿನ ಸುತ್ತಲು ಬೆಚ್ಚನೆಯ ಗಾಳಿಯನ್ನು ಹಿಡಿದಿಡುವ ಮೂಲಕ ಮಯ್ಯನ್ನು ಬೆಚ್ಚಗಿಡಲು ನೆರವಾಗುತ್ತದೆ.

ಕೂದಲಿನ ಇಟ್ಟಳದಲ್ಲಿ ಮೂರು ಬಾಗಗಳಿವೆ, (ಚಿತ್ರ 2)

i) ಕೂದಲಿನ ಚೀಲ (hair follicle)

ii) ಕೂದಲಿನ ಬೇರು (hair root)

iii) ಕೂದಲಿನ ತಾಳು (hair shaft)

ಮೇಲ್ತೊಗಲ್ಪರೆಯ (epidermis) ಗೂಡುಗಳ ಸಾಲುಗಳು ನಡುತೊಗಲ್ಪರೆಗೆ ತಳ್ಳಲ್ಪಡುವುದರಿಂದ ಉಂಟಾಗುವ ಗುಳಿಯನ್ನು ಕೂದಲಿನ ಚೀಲ (hair follicle) ಎಂದು ಹೇಳಬಹುದು. ಈ ಚೀಲದಲ್ಲಿ ಇರುವ ಬುಡಗೂಡುಗಳು (stem cells) ಕೂದಲನ್ನು ಮಾಡಲು ಬೇಕಾದ ಕೊಂಪರೆಗಳನ್ನು (keratin) ಹುಟ್ಟಿಸುತ್ತವೆ. ಕರ‍್ವಣ್ಣಗೂಡುಗಳಿಂದ (melanocytes) ಮಾಡಲ್ಪಡುವ ಕರ‍್ವಣ್ಣ ಹೊಗರು (melanin pigment), ಕೂದಲಿಗೆ ಕಪ್ಪು ಬಣ್ಣವನ್ನು ಕೊಡುತ್ತದೆ.

ಕೂದಲಿನ ಚೀಲದೊಳಗೆ ಕೂದಲಿನ ಬೇರು ಇರುತ್ತದೆ. ಕೂದಲಿನ ಚೀಲ ಹಾಗು ಅದರೊಳಗಿನ ಕೂದಲಿನ ಬೇರುಗಳು (hair root) ತೊಗಲಿಗೆ ಹೂತುಕೊಂಡಂತಿರುತ್ತವೆ. ಕೂದಲಿನ ಚೀಲವು ಹೊಸ ಗೂಡುಗಳನ್ನು ಮಾಡಿದಂತೆಲ್ಲಾ, ಕೂದಲಿನ ಬೇರುಗಳಲ್ಲಿರುವ ಗೂಡುಗಳು ತೊಗಲಿನ ಹೊರ ಮಯ್ ಮೇಲ್ಬಾಗದಲ್ಲಿರುವ ಕೂದಲನ್ನು ತಲುಪುವವರೆಗೆ ನೂಕಲ್ಪಡುತ್ತವೆ. ತೊಗಲಿನ ಹೊರ ಬಾಗದಲ್ಲಿ ಕಾಣಿಸುವ ಕೂದಲಿನ ಬಾಗವೇ ಕೂದಲಿನ ತಾಳು.

ಕೂದಲಿನ ಬೇರು ಹಾಗು ತಾಳು ಮೂರು ಪದರಗಳನ್ನು ಹೊಂದಿರುತ್ತವೆ,

togalu_2_3

i) ಪಿಸಿಮೊಗಲು (cuticle)

ii) ತೊಗಟೆ (cortex)

iii) ತಿರುಳು (medulla)

ಕೂದಲಿನ ಹೊರ ಪದರವಾದ ಪಿಸಿಮೊಗಲು ಕೊಂಪರೆಗೂಡುಗಳಿಂದ ಮಾಡಲ್ಪಟ್ಟಿದೆ.  ಪಿಸಿಮೊಗಲಿನ ಕೊಂಪರೆಗೂಡುಗಳು ಮೀನಿನ ಹುರುಪೆಗಳಂತೆ (scales) ಜೋಡಿಸಲ್ಪಟ್ಟಿರುರುತ್ತವೆ. ಕೂದಲಿನ ಅಡ್ಡಗಲದ (width) ಹೀಚಿನ ಬಾಗವು ಪಿಸಿಮೊಗಲಿನ ಕೆಳಗಿರುವ ತೊಗಟೆಯನ್ನು ಹೊಂದಿರುತ್ತದೆ. ಕಡುಬಿನ (spindle) ಆಕಾರವನ್ನು ಹೊಂದಿರುವ ತೊಗಟೆಯು, ಕೂದಲಿಗೆ ಬಣ್ಣವನ್ನು ಕೊಡುವ ಹೊಗರನ್ನು ಹೊಂದಿರುತ್ತದೆ.

ಕೂದಲಿನ ಒಳಗಿನ ಪದರವಾದ ತಿರುಳು ಎಲ್ಲಾ ಕೂದಲುಗಳಲ್ಲಿ ಇರುವುದಿಲ್ಲ. ಇವು ಕೂದಲುಗಳಲ್ಲಿ ಇದ್ದರೆ, ಹೆಚ್ಚಿನ ಮಟ್ಟದ ಹೊಗರು ಹಾಗು ಕೊಂಪರೆಯಿಂದ (keratin) ತುಂಬಿಕೊಂಡಿರುವ ಗೂಡುಗಳಿಂದ ಮಾಡಲ್ಪಟ್ಟಿರುತ್ತದೆ. ತಿರುಳನ್ನು ಹೊಂದಿರದ ಕೂದಲಿನ ಒಳಬಾಗವು ತೊಗಟೆಯಿಂದ ತುಂಬಿಕೊಂಡಿರುತ್ತದೆ.

ಉಗುರುಗಳು:

togalu_2_4

ಕಯ್ ಹಾಗು ಕಾಲ್ ಬೆರಳುಗಳ ತುದಿಯಲ್ಲಿ ಇರುವ ಉಗುರುಗಳು ಗಟ್ಟಿಯಾದ ಕೊಂಪರೆಗೂಡುಗಳ ಹಾಳೆಗಳಿಂದ ಮಾಡಲ್ಪಟ್ಟಿರುತ್ತವೆ. ಉಗುರುಗಳು ಬೆರಳುಗಳ ತುದಿಯನ್ನು ಕಾಯುತ್ತವೆ; ಕೆರೆಯಲು ಕೊಡ ಬಳಕೆಯಾಗುತ್ತವೆ.

ಉಗುರುಗಳಲ್ಲಿ 3 ಬಾಗಗಳಿರುತ್ತವೆ:

i) ಉಗುರಿನ ಬುಡ / ಬುಡ  (root of the nail)

ii) ಉಗುರಿನ ಒಡಲು / ಒಡಲು (body of the nail)

iii) ಉಗುರಿನ ತುದಿ / ತುದಿ (free edge of the nail)

ತೊಗಲಿನಿಂದ ಮುಚ್ಚಿಕೊಂಡಿರುವ ಉಗುರಿನ ಬಾಗವನ್ನು ‘ಉಗುರಿನ ಬುಡ’” ಎಂದು ಹೇಳಬಹುದು. ತೊಗಲಿನ ಹೊರಕ್ಕೆ ಚಾಚಿಕೊಂಡಿರುವ ಉಗುರಿನ ಬಾಗವು “‘ಉಗುರಿನ ಒಡಲು”’ ಎನಿಸಿಕೊಳ್ಳುತ್ತದೆ. ಬೆರಳುಗಳನ್ನು ದಾಟಿ  ಮುಂದೆ ಬೆಳೆಯುವ ಉಗುರಿನ ತುತ್ತತುದಿಯನ್ನು “‘ಉಗುರಿನ ತುದಿ’” ಎಂದು ಹೆಸರಿಸಬಹುದು.

ಮೇಲ್ತೊಗಲ್ಪರೆಯ ಒಳ ಪದರವನ್ನು ಉಗುರಚ್ಚು (nail matrix) ಎಂದು ಕರೆಯಬಹುದು. ಉಗುರುಗಳು ಉಗುರಚ್ಚುಗಳಿಂದ ಬೆಳೆಯುತ್ತವೆ. ಈ ಉಗುರಚ್ಚು ಉಗುರಿನ ಬುಡವನ್ನು ಸುತ್ತುವರೆದಿರುತ್ತವೆ. ಉಗುರಚ್ಚಿನ ಬುಡಗೂಡುಗಳು ಕೊಂಪರೆಗೂಡುಗಳನ್ನು ಹುಟ್ಟು ಹಾಕುತ್ತವೆ. ಈ ಕೊಂಪರೆಗೂಡುಗಳು, ಗೂಡಿಗೆ ಗಟ್ಟಿತನವನ್ನು ಕೊಡುವ ಕೊಂಪರೆ ಮುನ್ನನು (kertain protein) ಮಾಡುತ್ತವೆ. ಹೀಗೆ ಕೊಂಪರೆ ಮುನ್ನುಗಳನ್ನು ತುಂಬಿಕೊಂಡ ಕೊಂಪರೆಗೂಡುಗಳು ಗಟ್ಟಿಯಾದ ಗೂಡುಗಳ ಹಾಳೆಗಳಾಗಿ ಮಾರ‍್ಪಡುತ್ತವೆ. ಉಗುರಿನ ಬುಡವನ್ನು ಮಾಡುವ ಕೊಂಪರೆಗೂಡುಗಳ ಹಾಳೆಗಳು ತೊಗಲಿನಿಂದ ಹೊರಕ್ಕೆ ಬೆಳೆದಾಗ  ‘ಉಗುರಿನ ಒಡಲು’ ಎನಿಸಿಕೊಳ್ಳುತ್ತವೆ.

ಉಗುರಚ್ಚೆಯಿಂದ ಹೊಸ ಗೂಡುಗಳು ಹುಟ್ಟಿದಂತೆಲ್ಲಾ, ಉಗುರಿನ ಬುಡ ಹಾಗು ಒಡಲುಗಳ ಗೂಡುಗಳು, ಉಗುರಿನ ತುದಿಯ ಕಡೆಗೆ ತಳ್ಳಲ್ಪಡುತ್ತವೆ. ಉಗುರೊಡಲಿನ ತಳ ಬಾಗದಲ್ಲಿ ಇರುವ ಮೇಲ್ತೊಗಲ್ಪರೆ (epidermis) ಹಾಗು ನಡುತೊಗಲ್ಪರೆಗಳು (dermis) ಒಟ್ಟಾಗಿ ಉಗುರಿನ ಹಾಸಿಗೆಯನ್ನು (nail bed) ಮಾಡುತ್ತವೆ. ಉಗುರೊಡಲಿಗೆ ಆರಯ್ವಗಳನ್ನು (nutrients) ಉಣಿಸುವ ನವಿರುನೆತ್ತರುಗೊಳವೆಗಳು, ಉಗುರು ಹಾಸಿಗೆಗೆ ನಸುಗೆಂಪು (pink) ಬಣ್ಣವನ್ನು ಕೊಡುತ್ತವೆ.

ತೊಗಲಿನ ಹೊರಗೆ ಕಾಣಿಸಿಕೊಳ್ಳುವ ಉಗುರಿನ ಬಾಗದಲ್ಲಿ ಉಗುರೊಡಲಿನ ಕೆಳಗಿರುವ ಉಗುರಚ್ಚೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತದೆ. ಬೆಳ್ಳನೆಯ ಕಮಾನಿನಂತೆ ಇರುವ ಈ ಇಟ್ಟಳವನ್ನು ‘ಉಗುರಿನ ಕಮಾನು’ (lunule) ಎಂದು  ಹೇಳಬಹುದು.

ತೊಗಲಿನ ಹೊರಗೆ ಕಾಣಿಸುವ ಉಗುರು, ಬೆರಳಿಗೆ ಹೊಂದಿಕೊಳ್ಳುವ ಬದಿಗಳು (lateral) ಹಾಗು ಕೆಳ ಅಂಚುಗಳು  ಒಂದು ಪದರದ ಮೇಲ್ಪರೆಯನ್ನು (epithelium) ಹೊಂದಿರುತ್ತವೆ. ಈ ಪದರವನ್ನು ಮೊಳೆಯುಗುರು (eponychium) ಎಂದು ಹೇಳಬಹುದಾಗಿದೆ. ಮೊಳೆಯುಗುರು ಉಗುರಿನ  ಅಂಚು ಹಾಗು ಬೆರಳುಗಳ ನಡುವೆ ಇರುವ ಕಿಂಡಿಯನ್ನು  ಮುಚ್ಚಿಡುವುದರಿಂದ, ಕೆಡುಕುಕಣಗಳು ಮಯ್ಯೊಳಕ್ಕೆ ನುಸುಳುವುದನ್ನು ತಡೆಯುತ್ತದೆ.

ಬೆವರು ಸುರಿಕಗಳು (sudoriferous glands/ sweat glands): (ಚಿತ್ರ 1, 5, & 6)

togalu_2_5

ಹೊರ ಸುರಿಕಗಳ (exocrine glands) ಗುಂಪಿನ ಅಡಿಯಲ್ಲಿ ಬರುವ ಬೆವರು ಸುರಿಕಗಳು ನಡುತೊಗಲ್ಪರೆಯಲ್ಲಿ (dermis) ಇರುತ್ತವೆ.

ಬ್ಸುರಿಕಗಳಲ್ಲಿ ಎರಡು ಬಗೆ:

i) ಗುಳ್ಳೆ ಸುರಿಕ (eccrine gland):  ಈ ಬಗೆಯ ಸುರಿಕಗಳು ತಮ್ಮ ಸುರಿಕದ ಗೂಡುಗಳಲ್ಲಿ ಮಾಡಲ್ಪಡುವ ಒಸರುಗಳನ್ನು (secretion),  ಗುಳ್ಳೆಯೊಸರಿಕೆಯ (exocytosis) ಹಮ್ಮುಗೆಯಲ್ಲಿ ಒಸರುತ್ತವೆ.

[ಗುಳ್ಳೆಯೊಸರಿಕೆ (exocytosis) (ಚಿತ್ರ 6) : ಸುರಿಕದ  ಗೂಡುಗಳಲ್ಲಿ ಮಾಡಲ್ಪಡುವ ಒಸರನ್ನು (secretion), ಗೂಡುಗಳು ಗುಳ್ಳೆಗಳಲ್ಲಿ ಕೂಡಿಡುತ್ತವೆ. ಒಸರನ್ನು ಹೊಂದಿರುವ ಗುಳ್ಳೆಗಳನ್ನು ‘ಗೂಡ್ಗುಳ್ಳೆಗಳು’ (vesicles) ಎಂದು ಹೇಳಬಹುದು.  ಈ ಗೂಡ್ಗುಳ್ಳೆಗಳನ್ನು ಸುರಿಕದ ಗೂಡುಗಳು, ಗೂಡಿನಿಂದ ಹೊರದೂಡುತ್ತವೆ.  ಈ ಹಮ್ಮುಗೆಯನ್ನು ಗುಳ್ಳೆಯೊಸರಿಕೆ (exocytosis) ಎಂದು ಹೇಳಬಹುದು.]

ಗುಳ್ಳೆ ಸುರಿಕಗಳು, ಮಯ್ ಮೇಲಿನ ಎಲ್ಲಾ ಬಾಗಗಳಲ್ಲಿ ಇರುತ್ತವೆ. ಇವುಗಳಿಂದ ಮಾಡಲ್ಪಡುವ ಬೆವರಿನ ಹೆಚ್ಚಿನ ಬಾಗವು  ಉಪ್ಪು ಹಾಗು ನೀರನ್ನು ಹೊಂದಿರುತ್ತದೆ. ಗುಳ್ಳೆ ಸುರಿಕಗಳು ಮಾಡುವ ಬೆವರು, ಕೊಳವೆಯ ನೆರವಿನಿಂದ ತೊಗಲಿನ ಹೊರ ಮಯ್ ತಲುಪುತ್ತದೆ. ಈ ಬಗೆಯಲ್ಲಿ ಹರಿಯುವ ಬೆವರು ಮಯ್ ಬಿಸುಪನ್ನು ಆವಿ-ತಂಪುಗೆಯ (evaporative cooling) ಹಮ್ಮುಗೆಯಲ್ಲಿ ತಗ್ಗಿಸುತ್ತದೆ.

ii) ಚಿವುಟು ಸುರಿಕ  (apocrine gland):  ಈ ಬಗೆಯ ಸುರಿಕಗಳಲ್ಲಿ, ಸುರಿಕದ ಗೂಡುಗಳು, ತಾವು ಮಾಡಿದ ಒಸರುಗಳನ್ನು, ಕುಡಿಸೀಳಿಕೆಯ (budding) ಹಮ್ಮುಗೆಯಲ್ಲಿ ಒಸರುತ್ತವೆ. ಚಿವುಟು ಸುರಿಕಗಳು, ಹೆಚ್ಚಾಗಿ ಕಂಕುಳು (arm pit) ಹಾಗು ತೊಡೆ ಸಂದಿಗಳಲ್ಲಿ (pubic region) ಇರುತ್ತವೆ. ಈ ಸುರಿಕಗಳ ಕೊಳವೆಗಳು, ಕೂದಲು ಚೀಲದ ಒಳಕ್ಕೆ ಚಾಚಿಕೊಂದಿರುತ್ತವೆ. ಇದರಿಂದಾಗಿ, ಚಿವುಟು ಸುರಿಕಗಳಲ್ಲಿ ಉಂಟಾಗುವ ಬೆವರು, ಕೂದಲಿನ ತಾಳುಗಳ ಮೂಲಕ ತೊಗಲಿನ ಹೊರ ಮಯ್ ತಲುಪುತ್ತದೆ.

togalu_2_6

ಮನುಶ್ಯರ ಎಳೆ ವಯಸ್ಸಿನಲ್ಲಿ ಚಿವುಟು ಸುರಿಕಗಳು ಬೆವರನ್ನು ಉಂಟುಮಾಡುವ ಹಾಗು ಹರಿಸುವ  ಕೆಲಸವನ್ನು ಮಾಡುವುದಿಲ್ಲ. ಮಯ್ನೆರೆದ (puberty) ಕೂಡಲೇ ಈ ಸುರಿಕಗಳು ಮಂದವಾದ ಎಣ್ಣೆಯಂತ ಹರಿಕವನ್ನು (liquid) ಮಾಡಲು ಆರಬಿಸುತ್ತವೆ. ಈ ಹರಿಕವನ್ನು ಮಯ್ ಮೇಲಿನ ದಂಡಾಣುಗಳು (bacteria) ಉಣ್ಣುತ್ತವೆ. ಚಿವುಟು ಸುರಿಕದ ಬೆವರನ್ನು ದಂಡಾಣುಗಳು ಅರಗಿಸಿಕೊಂಡಾಗ, ಮಯ್-ವಾಸನೆ (body odor) ಉಂಟಾಗುತ್ತದೆ.

ಮಯ್-ಜಿಡ್ಡಿನ ಸುರಿಕಗಳು (Sebaceous glands):

togalu_2_7

ನಡುತೊಗಲ್ಪರೆಯಲ್ಲಿ  ಇರುವ  ಹೊರ ಸುರಿಕದ (exocrine gland) ಬಗೆಯ ಮಯ್-ಜಿಡ್ಡಿನ ಸುರಿಕಗಳು, ಮಯ್-ಜಿಡ್ಡನ್ನು (sebum) ಮಾಡುತ್ತವೆ. ಅಂಗಯ್ ಹಾಗು ಅಂಗಾಲುಗಳನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಮಯ್ ಬಾಗಗಳಲ್ಲಿ ಇರುವ ತೊಗಲಿನಲ್ಲಿ ಜಿಡ್ಡಿನ ಸುರಿಕಗಳನ್ನು ಕಾಣಬಹುದು. ಈ ಸುರಿಕಗಳಲ್ಲಿ ಮಾಡಲ್ಪಟ್ಟ ಮಯ್-ಜಿಡ್ಡು, ಕೊಳವೆಗಳ ನೆರವಿನಿಂದ ತೊಗಲಿನ ಹೊರಮಯ್ ಹಾಗು ಕೂದಲಿನ ಚೀಲಗಳನ್ನು ತಲುಪುತ್ತದೆ.

ಮಯ್-ಜಿಡ್ಡು, ತೊಗಲಿಗೆ ನೀರಿಳಿಯದಿರುವಿಕೆ (water proof)  ಹಾಗು ಹಿನ್ನೆಳೆಕೆಗಳನ್ನು (elasticity) ಕೊಡುತ್ತದೆ. ಕೂದಲಿನ ಚೀಲಗಳ ಮೂಲಕ ಹೊರಮಯ್ಗೆ ಹಾದುಹೋಗುವಾಗ, ಮಯ್-ಜಿಡ್ಡು, ಕೂದಲಿನ ಪಿಸಿಮೊಗಲುಗಳನ್ನು (cuticle) ಹೆರೆಯುತ್ತವೆ (lubricate). ಈ ಬಗೆಯ ಜಿಡ್ಡಿನ ಹೆರೆಯುವಿಕೆ, ಪಿಸಿಮೊಗಲಿಗೆ ಕಾಪನ್ನು ಒದಗಿಸುತ್ತದೆ.

ಗುಗ್ಗೆ ಸುರಿಕ (ceruminous gland):

togalu_2_8

ಗುಗ್ಗೆ ಸುರಿಕಗಳು, ಕಿವಿಗೊಳವೆಗಳ (ear canal) ನಡುತೊಗಲ್ಪರೆಯಲ್ಲಿ ಇರುತ್ತವೆ. ಗುಗ್ಗೆ ಸುರಿಕಗಳು ಮೇಣದಂತಿರುವ ಗುಗ್ಗೆಯನ್ನು (cerumen) ಮಾಡುತ್ತವೆ ಹಾಗು ಒಸರುತ್ತವೆ. ಗುಗ್ಗೆಯು ಕಿವಿಗೊಳವೆಯನ್ನು ಕಾಯುವುದರ ಜೊತೆಗೆ ಕಿವಿದಮಟೆಯನ್ನು (ear drum) ಹೆರೆಯುತ್ತದೆ (lubricate). ಅಂಟಿಸಿಕೊಳ್ಳುವ ಹಮ್ಮುಗೆಯ ನೆರವಿನಿಂದ, ದೂಳು ಹಾಗು ಗಾಳಿಯ ಮೂಲಕ ಕಿವಿಗೊಳವೆಯನ್ನು ನುಸುಳುವ ಕೆಡುಕುಕಣಗಳನ್ನು ಹಿಡಿದಿರುವ ಮೂಲಕ ಗುಗ್ಗೆಯು ಕಿವಿಯ ಕಾಪೇರ‍್ಪಾಟಿನಲ್ಲಿ ನೆರವಾಗುತ್ತದೆ.

ಗುಗ್ಗೆ ಸುರಿಕವು, ಎಡೆಬಿಡದೆ ಮೆಲ್ಲಗೆ ಗುಗ್ಗೆಯನ್ನು ಮಾಡುತ್ತಿರುತ್ತದೆ. ಹೊಸದಾಗಿ ಮಾಡಲ್ಪಟ್ಟ ಗುಗ್ಗೆಯು, ಹಳೆಯ ಗುಗ್ಗೆಯನ್ನು ಕಿವಿಗೊಳವೆಯ ಹೊರ ತೂತಿನೆಡೆಗೆ ತಳ್ಳುತ್ತಿರುತ್ತದೆ. ಹೀಗೆ ತಳ್ಳಲ್ಪಟ್ಟ ಗುಗ್ಗೆಯನ್ನು ಗುಗ್ಗೆ-ತೆಗೆಯುಕದ (ear wax remover) ನೆರವಿನಿಂದ ಹೊರ ತೆಗೆಯಬಹುದಾಗಿದೆ. ಹಳೆಯ ಗುಗ್ಗೆಯನ್ನು ತೆಗೆಯದ್ದಿದರೆ, ಅದು ತಂತಾನೇ ಕಿವಿಯಿಂದ ಹೊರಕ್ಕೆ ಬೀಳುತ್ತದೆ.

ಇಲ್ಲಿಯವರೆಗೆ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿದುಕೊಂಡಂತಾಯಿತು. ಮುಂದಿನ ಕಂತಿನಲ್ಲಿ ತೊಗಲೇರ‍್ಪಾಟಿನ ಕೆಲಸದ ಬಗ್ಗೆ ಅರಿಯೋಣ.

(ತಿಳಿವು ಮತ್ತು ಚಿತ್ರ ಸೆಲೆಗಳು: 1. imgkid.com, 2. ivyroses.com, 3. alwaystestclean.com, 4. studyblue.com, 5. mayoclinic.org 6. rci.rutgers.edu 7. wiki/Sebaceous_gland, 8. anatomyatlases.org, 9. webmd.com, 10. innerbody.com)

ತೊಗಲು – ಬಾಗ 1

ನಮ್ಮ ಮಯ್ಯಲ್ಲಿರುವ ಏರ‍್ಪಾಟುಗಳ ಬಗ್ಗೆ  ಬರಹಗಳಲ್ಲಿ ತಿಳಿಸುತ್ತಾ ಬರಲಾಗಿದೆ. ಈ ಸರಣಿ ಬರಹವನ್ನು ಮುಂದುವರೆಸುತ್ತಾ, ಮುಂದಿನ ಮೂರು ಕಂತುಗಳಲ್ಲಿ ತೊಗಲೇರ‍್ಪಾಟಿನ (Integument system) ಒಡಲರಿಮೆ (anatomy) ಹಾಗು ಉಸಿರಿಯರಿಮೆಯನ್ನು (physiology) ತಿಳಿದುಕೊಳ್ಳೋಣ.

ತೊಗಲೇರ‍್ಪಾಟಿನ ವಿಶೇಶತೆ ಎಂದರೆ, ತೊಗಲು ಕೆಲವೇ ಮಿಲಿಮೀಟರಗಳಶ್ಟು ತೆಳ್ಳಗಿದ್ದರೂ, ನಮ್ಮ ಮಯ್ಯಲ್ಲಿ ಇರುವ ಅಂಗಗಳಲ್ಲೇ ತುಂಬಾ ದೊಡ್ಡದು. ಅದು ಹೇಗೆ ಗೊತ್ತೆ? ಒಬ್ಬ ಹದುಳಾಗಿರುವ (healty) ಮನುಶ್ಯನ ತೊಗಲನ್ನು ಒಟ್ಟಾರೆ ಲೆಕ್ಕಕ್ಕೆ ತೆಗೆದುಕೊಂಡರೆ, ಅದರ ತೂಕ ಹೆಚ್ಚು ಕಡಿಮೆ  5 Kg ಹಾಗು ಅಗಲ 20 Sq ft ಇರುತ್ತದೆ.

ತೊಗಲೇರ‍್ಪಾಟಿನ ಅರಿದಾದ (important) ಬಾಗಗಳೆಂದರೆ:

1) ತೊಗಲು (skin): ತೊಗಲು ನಮ್ಮ ಹೊರ ಮಯ್ ಹೊದಿಕೆಯಾಗಿದ್ದು, ಮಯ್ಯನ್ನು ಇರ‍್ಪುಗಳು (chemicals), ಸೀರುಸುರಿಗಳು (microorganisms) ಮತ್ತು ಕಡುನೇರಳೆ ಕದಿರುಗಳಂತ (UV rays) ಕೇಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು ಕಾಯುವ ಪದರದಂತೆ ಕೆಲಸ ಮಾಡುತ್ತದೆ.

2) ಕೂದಲುಗಳು ಮತ್ತು ಉಗುರುಗಳು: ಇವು ತೊಗಲಿನ ಮುಂಚಾಚುಗಳಂತೆ ಬೆಳೆದು, ತೊಗಲಿಗೆ ಕಾಪನ್ನು ಒದಗಿಸುತ್ತವೆ.

3) ಹೊರಸುರಿಕೆಗಳು (exocrine glands): ತೊಗಲಿನ ಬಿಸುಪನ್ನು (temperature) ತಗ್ಗಿಸಲು, ತೊಗಲನ್ನು ಕಾಯಲು ಹಾಗು ತೊಗಲನ್ನು ತೇವಗೊಳಿಸಲು (moisturize), ತೊಗಲೇರ‍್ಪಾಟಿನ ಹೊರಸುರಿಕೆಗಳು ಬೆವರು, ಎಣ್ಣೆ ಹಾಗು ಮೇಣಗಳನ್ನು ಸುರಿಸುತ್ತವೆ.

togalu_1_1

ಈ ಕಂತಿನಲ್ಲಿ ತೊಗಲಿನ ಒಡಲರಿಮೆಯನ್ನು ತಿಳಿಸಿಕೊಡಲಾಗುವುದು.

ತೊಗಲು ಮೂರು ಪದರಗಳನ್ನು ಹೊಂದಿರುತ್ತದೆ. ಅವುಗಳೆಂದರೆ, (ಚಿತ್ರ 1 & 2)

1)    ಮೇಲ್ತೊಗಲ್ಪರೆ/ಹೊರತೊಗಲ್ಪರೆ (epidermis)
2)    ನಡುತೊಗಲ್ಪರೆ (dermis)
3)    ಕೆಳತೊಗಲ್ಪರೆ/ಒಳತೊಗಲ್ಪರೆ (hypodermis)

togalu_1_2
ಮೇಲ್ತೊಗಲ್ಪರೆ (epidermis): (ಚಿತ್ರ  3)

togalu_1_3

ತೊಗಲಿನ ಹೊರಬಾಗವಾದ ಮೇಲ್ತೊಗಲ್ಪರೆಯು ಹೆಚ್ಚುಕಡಿಮೆ ಮಯ್ ಹೊರಗಿನ ಎಲ್ಲಾ ಬಾಗಗಳನ್ನು ಮುಚ್ಚುತ್ತದೆ. 1/10 ಮಿಲಿಮೀಟರಿನಶ್ಟು ತೆಳ್ಳಗಿರುವ ಮೇಲ್ತೊಗಲ್ಪರೆಯು ಒಂದರ ಮೇಲೊಂದು ಜೋಡಿಸಿರುವ 40-50 ಸಾಲುಗಳ ಹುರುಪೆ ಮೇಲ್ಪರೆಗಳಿಂದ (squamous epithelium) ಮಾಡಿರುತ್ತದೆ. ಈ ಪದರವು ಯಾವುದೇ ಬಗೆಯ ನೆತ್ತರು ಇಲ್ಲವೆ ನೆತ್ತರುಗೊಳವೆಗಳನ್ನು ಹೊಂದಿರುವುದಿಲ್ಲ. ಈ ಪದರಕ್ಕೆ ಬೇಕಾದ ಆರಯ್ವಗಳನ್ನು (nutrients), ನಡುತೊಗಲ್ಪರೆಯಿಂದ ಪಸರಿಸುವ (diffusion) ಹರಿಕವು (fluid) ಒದಗಿಸುತ್ತದೆ.

ಮೇಲ್ತೊಗಲ್ಪರೆಯು 4 ಬಗೆಯ ಗೂಡುಗಳಿಂದ ಮಾಡಲ್ಪಟ್ಟಿದೆ: (ಚಿತ್ರ  3, 4, 5, 6, & 7)

togalu_1_4

i) ಕೊಂಪರೆಗೂಡುಗಳು (keratinocytes):   90% ರಶ್ಟು ಮೇಲ್ತೊಗಲ್ಪರೆಯು ಕೊಂಪರೆಗೂಡುಗಳಿಂದ ಮಾಡಲ್ಪಟ್ಟಿರುತ್ತದೆ. ಮೇಲ್ತೊಗಲ್ಪರೆಯ ತಾಳಿನಲ್ಲಿರುವ ಬುಡಗೂಡುಗಳಿಂದ (stem cells) ಕೊಂಪರೆಗೂಡುಗಳು ಉಂಟಾಗುತ್ತವೆ. ಕೊಂಪರೆಗೂಡುಗಳು  ಕೊಂಪರೆ (keratin) ಮುನ್ನನ್ನು (protein) ಮಾಡುವ ಹಾಗು ಕೂಡಿಟ್ಟುಕೊಳ್ಳುವ ಅಳವನ್ನು (capacity) ಹೊಂದಿರುತ್ತವೆ. ಕೊಂಪರೆ ಮುನ್ನು, ಕೊಂಪರೆಗೂಡುಗಳಿಗೆ ಒರಟುತನ (toughness), ಹುರುಪೆತನ (scalyness) ಹಾಗು ನೀರ್-ತಡೆತವನ್ನು (water resistance) ಕೊಡುತ್ತದೆ.

ii) ಕರ‍್ವಣ್ಣಗೂಡುಗಳು (melanocytes): 8% ನಶ್ಟು ಮೇಲ್ತೊಗಲ್ಪರೆಯ ಗೂಡುಗಳು, ಕರ‍್ವಣ್ಣಗೂಡುಗಳಾಗಿರುತ್ತವೆ (melanocytes). ಕರ‍್ವಣ್ಣವೆಂಬ (melanin) ಹೊಗರನ್ನು (pigment) ಮಾಡುವ ಕರ‍್ವಣ್ಣಗೂಡುಗಳು, ಕಡುನೇರಳೆ ಕದಿರುಗಳು (UV rays) ಹಾಗು ನೇಸರನ ಸುಡುವಿಕೆಯಿಂದ (sun burn) ನಮ್ಮ ತೊಗಲನ್ನು ಕಾಪಾಡುತ್ತವೆ.

togalu_1_5

iii) ಲ್ಯಾಂಗರ‍್ಹಾನ್ಸ್  ಗೂಡುಗಳು (Langherhans cells):  ಮೇಲ್ತೊಗಲ್ಪರೆಯಲ್ಲಿರುವ ಗೂಡುಗಳ ಪಯ್ಕಿ, 1%  ನಶ್ಟು ಲ್ಯಾಂಗರ‍್ಹಾನ್ಸ್ ಗೂಡುಗಳಾಗಿರುತ್ತವೆ. ತೊಗಲಿನ ಹಾದಿಯಲ್ಲಿ ನಮ್ಮ ಮಯ್ಯನ್ನು ಹೊಕ್ಕಲು ಮುನ್ನುಗ್ಗುವ ಕೆಡುಕುಕಣಗಳನ್ನು (pathogens) ಗುರುತಿಸುವ ಹಾಗು ಅವುಗಳ ಎದುರಾಗಿ ಸೆಣಸುವ ಗೆಯ್ಮೆಯನ್ನು ಲ್ಯಾಂಗರ‍್ಹಾನ್ಸ್  ಗೂಡುಗಳು ಮಾಡುತ್ತವೆ.

togalu_1_6

iv) ಮರ‍್ಕೆಲ್ ಗೂಡುಗಳು (Merkel cells) : ಮೇಲ್ತೊಗಲ್ಪರೆಯ ಒಟ್ಟುಗೂಡುಗಳಲ್ಲಿ,  1% ಗೂ ಕಡಿಮೆಯಶ್ಟು ಇರುವ ಈ ಗೂಡುಗಳು ಮುಟ್ಟುವ-ಅರಿವನ್ನು (sense of touch) ಹೊಂದಿದೆ. ಮೇಲ್ತೊಗಲ್ಪರೆಯ ಒಳಬಾಗದಲ್ಲಿ, ಮೇಲ್ತೊಗಲ್ಪರೆಯು ನರದ ತುದಿಗಳನ್ನು ಕೂಡಿಕೊಳ್ಳುವ ಬಾಗದಲ್ಲಿ ಮರ‍್ಕೆಲ್ ಗೂಡುಗಳು ಬಿಲ್ಲೆಯ ಇಟ್ಟಳಗಳನ್ನು ಹೊಂದಿದ್ದು, ಇವುಗಳನ್ನು ಮುಟ್ಟರಿವಿನ ತಟ್ಟೆಗಳು (tactile disc) ಎಂದು ಹೇಳಬಹುದಾಗಿದೆ. ಈ ಬಗೆಯ ಇಟ್ಟಳವು, ಮಟ್ಟುವ ಅರಿವನ್ನು ಅರಿಯಲು ನೆರವಾಗುತ್ತದೆ.

togalu_1_7

ಮೇಲ್ತೊಗಲ್ಪರೆಯು ಹೆಚ್ಚಿನ ಮಯ್ ಬಾಗಗಳಲ್ಲಿ 4 ಪದರಗಳಲ್ಲಿ ಜೋಡಿಸಲ್ಪಟ್ಟಿರುತ್ತದೆ. ಉಳಿದ ಮಯ್ ಬಾಗಗಳಿಗೆ ಹೋಲಿಸಿದರೆ, ಅಂಗಯ್ ಹಾಗು ಅಂಗಾಲುಗಳಲ್ಲಿ ಇದು ಸ್ವಲ್ಪ ದಪ್ಪಗಿರುತ್ತದೆ ಹಾಗು ಸಾಮಾನ್ಯವಾದ ನಾಲ್ಕು ಪದರಗಳಲ್ಲದೆ, ಅಯ್ದನೇ ಪದರವನ್ನೂ ಮೇಲ್ತೊಗಲ್ಪರೆಯಲ್ಲಿ ಕಾಣಬಹುದು. (ಚಿತ್ರ  4 & 8)

i) ತಳಪರೆ (stratum basale):  ಮೇಲ್ತೊಗಲ್ಪರೆಯ ತಳಬಾಗದಲ್ಲಿರುವ ತಳಪರೆಯು ಬುಡಗೂಡುಗಳನ್ನು (stem cells) ಹೊಂದಿರುತ್ತದೆ. ಮೇಲ್ತೊಗಲ್ಪರೆಯಲ್ಲಿ ಕಂಡುಬರುವ ಎಲ್ಲಾ ಬಗೆಯ ಗೂಡುಗಳು ಬುಡಗೂಡುಗಳಿಂದ ಹುಟ್ಟುತ್ತವೆ. ತಳಪರೆಯಲ್ಲಿ ಕೊಂಪರೆಗೂಡುಗಳು, ಕರ‍್ವಣ್ಣಗೂಡು, ಹಾಗು ಮರ‍್ಕೆಲ್ ಗೂಡುಗಳು ಇರುತ್ತವೆ.

ii) ಮುಳ್ಪರೆ (stratum spinosum):  ತಳಪರೆಯ ಮೇಲಿರುವ ಮುಳ್ಪರೆಯು, ಲ್ಯಾಂಗರ್ಹಾನ್ಸ್ ಗೂಡುಗಳು ಹಾಗು ಮುಳ್ಕೊಂಪರೆಗೂಡುಗಳನ್ನು (spiny keratinocytes) ಹೊಂದಿರುತ್ತವೆ. ಮುಳ್ಕೊಂಪರೆಗೂಡುಗಳ ಮೇಲಿರುವ ಮುಳ್ಳುಗಳು ಕೊಂಪರೆಗೂಡುಗಳ ಮುಂಚಾಚುಗಳು (projections). ಈ ಮುಳ್ಳುಗಳ ನೆರವಿನಿಂದ, ಮುಳ್ಕೊಂಪರೆಗೂಡುಗಳು ಒಂದಕ್ಕೊಂದು ಕೂಡಿಕೊಳ್ಳಲು ನೆರವಾಗುತ್ತವೆ. ಹೀಗೆ ಕೂಡಿಕೊಂಡ ಮುಳ್ಕೊಂಪರೆಗೂಡುಗಳ ಗುಂಪು, ತೊಗಲಿನಲ್ಲಿ ಉಂಟಾಗುವ ತಿಕ್ಕಾಟಕ್ಕೆ ತಡೆಯೊಡ್ಡುತ್ತವೆ.

iii) ಹರಳ್ಪರೆ (stratum granulosum): ಮುಳ್ಪರೆಯ ಮೇಲೆ ಹರಳ್ಪರೆ ಇರುತ್ತದೆ. ಹರಳ್ಪರೆಯಲ್ಲಿ ಇರುವ ಕೊಂಪರೆಗೂಡುಗಳು ಮೇಣವನ್ನು ಮಾಡುತ್ತವೆ. ಈ  ಮೇಣವು, ತೊಗಲಿಗೆ ನೀರ್-ತಡೆತನವನ್ನು (water resistance) ಒದಗಿಸುತ್ತದೆ. ನಡುತೊಗಲ್ಪರೆಯಿಂದ ಹರಡುವ ಹರಿಕವು ಹರಳ್ಪರೆಯನ್ನು ಮುಟ್ಟದ ಕಾರಣ, ಈ ಪದರಕ್ಕೆ ಆರಯ್ವಗಳು ತಲುಪುವುದಿಲ್ಲ. ಹಾಗಾಗಿ, ಈ ಪದರದಲ್ಲಿ ಹೆಚ್ಚಿನ ಮಟ್ಟದ ಸತ್ತ ಗೂಡುಗಳು ಇರುತ್ತವೆ.

iv) ಹೊಳ್ಪರೆ (stratum lucidum): ಮಂದವಾದ ತೊಗಲನ್ನು ಹೊಂದಿರುವ ಅಂಗಯ್ ಮತ್ತು ಅಂಗಾಲುಗಳಲ್ಲಿ,  ಹರಳ್ಪರೆಯ ಮೇಲೆ ಹೊಳ್ಪರೆ ಯನ್ನು (stratum lucidum) ಕಾಣಬಹುದು. ಹೊಳ್ಪರೆಯು, ಹಲವು ಪದರಗಳ ಸತ್ತ ಕೊಂಪರೆಗೂಡುಗಳನ್ನು ಹೊಂದಿರುತ್ತದೆ.

v) ಕೋಡ್ಪರೆ (stratum corneum):  ಮೇಲ್ತೊಗಲ್ಪರೆಯ ಹೊರಗಿನ ಪದರವನ್ನು ಕೋಡ್ಪರೆ (stratum corneum) ಎಂದು ಹೇಳಬಹುದು. ಇದು ತೊಗಲಿನ ಹೊರಪದರವೂ ಹವ್ದು. ಈ ಪದರವು, ಹಲವು ಸಾಲುಗಳ, ಚಪ್ಪಟ್ಟೆಯಾದ, ಸತ್ತ ಕೊಂಪರೆಗೂಡುಗಳನ್ನು ಹೊಂದಿರುತ್ತದೆ. ಈ ಪದರದ ಸತ್ತ ಕೊಂಪರೆಗೂಡುಗಳು ಕಳಚಿ ಬೀಳುತ್ತಲಿರುತ್ತವೆ. ಹೀಗೆ ಬಿದ್ದ ಕೊಂಪರೆಗೂಡುಗಳ ತಾಣಕ್ಕೆ, ಒಳ ಪದರಗಳಿಂದ, ಕೊಂಪರೆಗೂಡುಗಳು ಬಂದು ನೆಲೆಗೊಳ್ಳುತ್ತವೆ.

togalu_1_8

ನಡುತೊಗಲ್ಪರೆ (dermis):  (ಚಿತ್ರ  1, 2, 3, 4, 8 & 9)

ಮೇಲ್ತೊಗಲ್ಪರೆಗೆ ಹೋಲಿಸಿದರೆ, ನಡುತೊಗಲ್ಪರೆ ದಪ್ಪಗಿರುತ್ತದೆ. ನಡುತೊಗಲ್ಪರೆಯು ಕಟ್ಟಲೆಮೀರಿದ ಒತ್ತಾದ ಕೂಡಿಸುವ ಗೂಡುಕಟ್ಟು (irregular dense connective tissue), ನರಗಳು, ನೆತ್ತರು ಹಾಗು ನೆತ್ತರುಗೊಳವೆಗಳನ್ನು ಹೊಂದಿದೆ. ನಡುತೊಗಲ್ಪರೆಯು ತೊಗಲಿಗೆ ಹಿನ್ನೆಳೆತ (elasticity) ಹಾಗು ಬಲವನ್ನು ಕೊಡುತ್ತದೆ.

togalu_1_9

ನಡುತೊಗಲ್ಪರೆಯಲ್ಲಿ ಎರಡು ಹೊದಿಕೆಗಳಿರುತ್ತವೆ. ಮುಂಚಾಚು ಹೊದಿಕೆ (papillary layer) & ಬಲೆಬಗೆಯ ಹೊದಿಕೆ (reticular layer).

i)    ಮುಂಚಾಚು ಹೊದಿಕೆ (papillary layer): ಮೇಲ್ತೊಗಲ್ಪರೆಯ ಕೆಳ ಬಾಗದಲ್ಲಿ ಇರುವ ಮುಂಚಾಚು ಹೊದಿಕೆಯು, ಬೆರಳಿನ ಇಟ್ಟಳದಂತಿರುವ ಮುಂಚಾಚುಗಳನ್ನು (projection/papillae) ಹೊಂದಿದ್ದು, ಈ ಮುಂಚಾಚುಗಳು ಮೇಲ್ತೊಗಲ್ಪರೆಯೆಡೆಗೆ ಚಾಚಿಕೊಂಡಿರುತ್ತವೆ. ಮುಂಚಾಚುಗಳು ನಡುತೊಗಲ್ಪರೆಯ ಹೊರ ಮಯ್ ಹರವನ್ನು (surface area) ಹೆಚ್ಚಿಸುತ್ತವೆ. ಜೊತೆಗೆ ಮುಂಚಾಚುಗಳಲ್ಲಿ ನರಗಳು ಹಾಗು ನೆತ್ತರುಕೊಳವೆಗಳಿರುತ್ತವೆ. ಈ ಮುಂಚಾಚುಗಳಲ್ಲಿ ಹರಿಯುವ ನೆತ್ತರು, ಮೇಲೆತೊಗಲ್ಪರೆಗೆ ಬೇಕಾದ ಆರಯ್ವಗಳು ಹಾಗು ಉಸಿರುಗಾಳಿಯನ್ನು (oxygen) ಉಣಿಸಿದರೆ, ನರಗಳು ಮೇಲ್ತೊಗಲ್ಪರೆಯ ಮೂಲಕ ಮುಟ್ಟರಿವು (sense of touch), ನೋವರಿವು (sense of pain) ಹಾಗು ಬಿಸುಪರಿವುಗಳನ್ನು (sense of temperature) ತಿಳಿದುಕೊಳ್ಳಲು ನೆರವಾಗುತ್ತವೆ.

ii)    ಬಲೆಬಗೆಯ ಹೊದಿಕೆ (reticular layer): ಮುಂಚಾಚು ಹೊದಿಕೆಯ ಕೆಳಗಿರುವ ಬಲೆಬಗೆಯ ಹೊದಿಕೆಯು, ಮುಂಚಾಚು ಹೊದಿಕೆಗಿಂತ ದಪ್ಪ ಹಾಗು ಬಲವಾಗಿರುತ್ತದೆ. ಬಲೆಬಗೆಯ ಹೊದಿಕೆಯ ಅಂಟುವುಟ್ಟು (collagen) ಹಾಗು ಪುಟಿ ನಾರುಗಳನ್ನು (elastic fibers) ಹೊಂದಿರುವ ಕಟ್ಟಲೆಮೀರಿದ ಒತ್ತಾದ ಕೂಡಿಸುವ ಗೂಡುಕಟ್ಟುಗಳನ್ನು (irregular dense connective tissue) ಹೊಂದಿರುತ್ತದೆ. ಈ ನಾರುಗಳು ಎಲ್ಲಾ ದಿಕ್ಕಿನಲ್ಲೂ ಹರಡಿಕೊಂಡಿರುವುದರಿಂದ, ಇದು ತೊಗಲಿಗೆ ಬಲ ಹಾಗು ಹಿನ್ನೆಳೆತಗಳನ್ನು (elasticity) ಒದಗಿಸುತ್ತದೆ. ತೊಗಲಿನ ಗೂಡುಗಳ ಒತ್ತಡ ಹಾಗು ನೋವಿನ ಅರಿವುಗಳನ್ನು ತಿಳಿಯಲು ನೆರವಾಗುವಂತೆ, ನೆತ್ತರುಗೊಳವೆಗಳನ್ನೂ ಹೊಂದಿರುತ್ತದೆ.

ಕೆಳತೊಗಲ್ಪರೆ / ಒಳತೊಗಲ್ಪರೆ (hypodermis):

ತೊಗಲಿನ ಕಟ್ಟಾಳದ (deeper) ಪದರವೆ ಕೆಳತೊಗಲ್ಪರೆ. ಇದನ್ನು ನಡುತೊಗಲ್ಪರೆಯ ಕೆಳಗೆ ಕಾಣಬಹುದು. ತೊಗಲು ಹಾಗು ತೊಗಲಿನ ಅಡಿಯಲ್ಲಿರುವ ಎಲುಬುಗಳು ಹಾಗು ಕಂಡಗಳ ನಡುವೆ ಕೆಳತೊಗಲ್ಪರೆಯು ಬಳುಕುವ ಕೊಂಡಿಯನ್ನು ಮಾಡುತ್ತದೆ. ಜೊತೆಗೆ ಕೊಬ್ಬನ್ನು ಕೂಡಿಟ್ಟುಕೊಳ್ಳುವ ಕಣಜವೂ ಹವ್ದು. ಕೆಳತೊಗಲ್ಪರೆಯು ಸಡಿಲವಾಗಿ ಜೋಡಿಸಿದ ಹಿನ್ನೆಳೆಕ (elastin) ಹಾಗು ಅಂಟುವುಟ್ಟುಕದ (collagen) ನಾರುಗಳನ್ನು ಹೊಂದಿರುವ ಕಿರೆಡೆಯ ಕೂಡಿಸುವ ಗೂಡುಗಳನ್ನು (areolar connective tissue) ಹೊಂದಿದೆ.

ಈ ಬಗೆಯ ಇಟ್ಟಳವು ತೊಗಲು ಸುಳುವಾಗಿ ಜಗ್ಗಲು ಹಾಗು ಅಲುಗಾಡಲು ನೆರವಾಗುತ್ತದೆ. ಕೆಳತೊಗಲ್ಪರೆಯಲ್ಲಿ ಇರುವ ಕೊಬ್ಬಿನ ಗೂಡುಕಟ್ಟು ಕಸುವನ್ನು ಕೊಬ್ಬಿನ ಟ್ರಯ್-ಗ್ಲಿಸರಯ್ಡ್ ಬಗೆಯಲ್ಲಿ ಕೂಡಿಟ್ಟುಕೊಂಡಿರುತ್ತದೆ. ಜೊತೆಗೆ ಕೊಬ್ಬಿನ ಗೂಡುಕಟ್ಟು, ಮಯ್ಯೊಳಗಿನ ಕಂಡಗಳಿಂದ ಮಾಡಲ್ಪಟ್ಟ ಬಿಸುಪನ್ನು (temperature) ಹಿಡಿದಿಟ್ಟು ಕೊಳ್ಳುವ ಮೂಲಕ, ಮಯ್ ಬಿಸುಪನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಮುಂದಿನ ಕಂತಿನಲ್ಲಿ ತೊಗಲೇರ‍್ಪಾಟಿಗೆ ಹೊಂದಿಕೊಂಡಿರುವ ಕೂದಲುಗಳು, ಉಗುರುಗಳು ಹಾಗು ಹೊರಸುರಿಕೆಗಳ ಬಗ್ಗೆ ತಿಳಿದುಕೊಳ್ಳೋಣ.

(ತಿಳುವಳಿಕೆ ಮತ್ತು ಚಿತ್ರ ಸೆಲೆಗಳು: 1) innerbody.com 2) en.wikipedia.org,  3) daviddarling.info, 4)  dartmouth.edu, 5) studyblue.com, 6) wikipedia.org/wiki/Melanocyte  7) en.wikipedia.org/wiki/Merkel_cell, 8) en.wikipedia.org/wiki/Langerhans_cell, 9)en.wikipedia.org/wiki/Dermis)