ಬೆಳಿಗ್ಗೆ ಅಲಾರ್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಫಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಫಿ ಕುಡಿದು ಜಳಕಕ್ಕೆಂದು ಬಚ್ಚಲಮನೆಯ ನಲ್ಲಿ(tap) ಶುರುಮಾಡುತ್ತಲೇ ಗೀಸರ್‌ನಿಂದ ಬಿಸಿ ನೀರು. ಇಲ್ಲಿ ನೀವಾಗಲಿ ನಿಮ್ಮ ಮನೆಯವರಾಗಲಿ ಕಾಫಿ ಮೆಶೀನು(Coffee maker) ಶುರು ಮಾಡಿಲ್ಲ, ಬಿಸಿನೀರೂಟೆಯ(Geyser) ಗುಂಡಿ ಒತ್ತಿ ನೀರು ಕಾಯುವಂತೆ ಮಾಡಿಲ್ಲ. ಆದರೂ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಇವೆಲ್ಲ ನಡೆದು ಹೋಗಿರುತ್ತವೆ. ಅಯ್ಯೋ ಏನಿದು ಅಚ್ಚರಿ, ಇದೆಲ್ಲ ಹೇಗೆ ಅಂದೀರಾ? ಹೌದು ಎಲ್ಲವೂ ಸಾಧ್ಯವಾಗಲಿದೆ. ಇದನ್ನು ಸಾಧ್ಯವಾಗಿಸಲಿದೆ ಇಂಟರ್‌ನೆಟ್ ಆಫ್ ಥಿಂಗ್ಸ್ (Internet of Things) ಅಂದರೆ ವಸ್ತುಗಳ/ಇರುಕಗಳ ಮಿಂಬಲೆ.
“ಇಂಟರ್‌ನೆಟ್ ಆಫ್ ಥಿಂಗ್ಸ್” ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ಯಾವುದೇ ಕೈಗಾರಿಕೆ ಆಗಿರಲಿ, ಅಲ್ಲಿ ಈ ಪದಗಳ ಬಳಕೆ ಕಂಡು ಬರುತ್ತಿದೆ. ಆದರೆ ಇದು ಏನು ಎತ್ತ? ಹೇಗೆ ಕೆಲಸ ಮಾಡುತ್ತದೆ? ಇವೆಲ್ಲವೂಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ನಮ್ಮಲ್ಲಿ ಮನೆ ಮಾಡಿವೆ. ಇಂಟರ್‌ನೆಟ್ ಆಫ್ ಥಿಂಗ್ಸ್ ಬಗ್ಗೆ ನಾವುಗಳು ತಿಳಿಯುವುದು ಅಗತ್ಯವಾಗಿದೆ ಯಾಕೆಂದರೆ ಬರುವ ದಿನಗಳಲ್ಲಿ ಇದು ನಮ್ಮ ಬದುಕಿನ ಭಾಗವಾಗಿರಲಿದೆ ಎನ್ನುತ್ತಾರೆ ಅರಿಮೆಗಾರರು.
ಕಳೆದ ಹತ್ತಾರು ವರುಶಗಳಿಂದ ಮಿಂಬಲೆ ನಮ್ಮ ಬದುಕಿನ ಒಂದು ಭಾಗವೇ ಆಗಿಹೋಗಿದೆ ಎನ್ನಬಹುದು. 1990ರ ಈಚೆಗೆ ಜಗತ್ತಿನಲ್ಲಾದ ಹಲವು ಬದಲಾವಣೆಗಳನ್ನು ನೋಡಿದರೆ ಯಾರು ಇದನ್ನು ತಳ್ಳಿಹಾಕುವಂತಿಲ್ಲ. ಮೊದಲೆಲ್ಲ ಬ್ಯಾಂಕುಗಳಿಗೆ ತೆರಳಿ ಹಣ ಪಡೆಯಲು ರಸೀತಿ ತುಂಬಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆದು ಮನೆಗೆ ಬರುವುದು ಸಾಹಸವಾಗಿತ್ತು. ಆದರೆ ಈಗ ದುಡ್ಡು ಬೇಕೆಂದಾಗ ಚಕ್ಕನೆ ನಾವಿರುವ ಮನೆ, ಕೆಲಸದೆಡೆ, ಬಸ್ ನಿಲ್ದಾಣ ಹೀಗೆ ಎಲ್ಲೆ ಇರಲಿ ಬಳಿಯಿರುವ ಹಣದ ಮನೆಯಿಂದ (ATM) ದುಡ್ಡು ಸಲೀಸಾಗಿ ಪಡೆಯಬಹುದು. ಅಷ್ಟೇ ಚಕ್ಕನೆ ಕಣ್ಣ ರೆಪ್ಪೆ ಬಡಿಯುವುದರಲ್ಲಿ ನಿಮ್ಮ ಅಲೆಯುಲಿಗೆ(Mobile) ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆದ ವಿವರಗಳು ಬಂದಿರುತ್ತವೆ. ಈಗಲಂತೂ ಮಿಂಬಲೆಯ ಹರವೂ ಹೆಚ್ಚಿದೆ ಮತ್ತು ಅಗ್ಗದ ಬೆಲೆಯಲ್ಲಿ ಕೈಗೆಟಕುತ್ತಿರುವ ಕಾರಣ ಫೇಸ್ಬುಕ್, ಟ್ವಿಟರ್ ನಂತಹ ಕೂಡುತಾಣಗಳಿಂದ ಮಂದಿಯ ಸೇರುವಿಕೆ ಚಿಟಿಕೆ ಹೊಡೆದಷ್ಟು ಸುಳುವಾಗಿದೆ. ಹೆಚ್ಚುತ್ತಿರುವ ವೈಫೈ ಅಳವುತನ(Efficiency) ಹಾಗೂ ಅರಿವುಕಗಳು(sensor), ಹೊಸ ಚಳಕಗಳ ಬೆಲೆಯನ್ನು ಇಳಿಮುಖ ಮಾಡಿವೆ. ಇನ್ನೂ ಚೂಟಿಯುಲಿಗಳಂತು (Smartphones) ಹೆಚ್ಚು ಕಡಿಮೆ ಎಲ್ಲರ ಕೈಯಲ್ಲೂ ಬಂದು ಸೇರಿವೆ. ಇವೆಲ್ಲವೂ ಇರುಕಗಳ ಮಿಂಬಲೆಗೆ ತಕ್ಕ ಅಡಿಪಾಯ ಹಾಕಿವೆ.
ಚುಟುಕಾಗಿ ಹೇಳಬೇಕೆಂದರೆ ಮನುಷ್ಯರಿಂದ ವಸ್ತುಗಳಿಗೆ, ವಸ್ತುಗಳಿಂದ (Things) ವಸ್ತುಗಳಿಗೆ ಇಲ್ಲವೇ ಮನುಷ್ಯರಿಂದ ಮನುಷ್ಯರಿಗೆ ಮಿಂಬಲೆಯ ಮೂಲಕ ಕೊಂಡಿ ಬೆಸೆದು ಮಾಹಿತಿಯನ್ನು ಕಳಿಸುವುದು ಇಲ್ಲವೇ ಹಂಚಿಕೊಳ್ಳುವುದೇ ವಸ್ತುಗಳ/ಇರುಕಗಳ ಮಿಂಬಲೆ (Internet of Things). ನಡುಬಲೆ ಇಲ್ಲವೇ ಮಿಂಬಲೆಯೊಂದಿಗೆ ಕೂಡಿಕೊಳ್ಳಬಲ್ಲ ಎಲ್ಲ ವಸ್ತುಗಳು, ಇದರ ಭಾಗವೆನ್ನಬಹುದು. ಅವು ನಮ್ಮ ಚೂಟಿಯುಲಿ, ಕಾಫಿ ಮಾಡುವ ಮೆಶೀನು, ಇಸ್ತ್ರೀ ಪೆಟ್ಟಿಗೆ, ಗೋಡೆ ಗಡಿಯಾರ, ಕೈ ಗಡಿಯಾರ, ಬಟ್ಟೆ ಒಗೆಯುವ ಮೆಶೀನು (Washing machine), ಟಿವಿ, ನಾವು ಓಡಿಸುವ ಗಾಡಿಗಳು, ಬಾನೋಡ(Flight) ಯಾವುದೇ ಆಗಿರಬಹುದು. ಇವೆಲ್ಲ ವಸ್ತುಗಳು ಮಿಂಬಲೆಯೊಂದಿಗೆ ಕೂಡಬಲ್ಲವಂತವಾಗಿದ್ದರೆ, ಅವುಗಳ ನಡುವೆ ಮಾತುಕತೆಯಾಡಿಸಬಹುದು. ಗಾರ್ಟ್ನರ್ (Gartner) ಎಂಬ ಕೂಟವೊಂದು ಹೇಳುವಂತೆ ಮುಂದಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಬಹಳಶ್ಟು ವಸ್ತುಗಳು-ಮನುಷ್ಯರು ಕೂಡಿ, ಅವರ ನಡುವೆ ಸಾಕಷ್ಟು ಮಾಹಿತಿ ಹಂಚಿಕೆಯಾಗಲಿದೆಯಂತೆ!
ಇಂಟರ್‌ನೆಟ್ ಆಫ್ ಥಿಂಗ್ಸ್ ಗೆ ಸಂಬಂಧಪಟ್ಟ ಮತ್ತಶ್ಟು ಮಾಹಿತಿ ನೋಡಿದಾಗ, 1974ರಲ್ಲಿ ಕಾಲಿಟ್ಟ ಹಣಮನೆಯ ಮೆಶೀನುಗಳು (ATM) ಇರುಕಗಳ ಮಿಂಬಲೆಯ ಮೊಟ್ಟ ಮೊದಲ ಹೆಜ್ಜೆ ಎನ್ನಬಹುದು. ಒಂದು ಅಂದಾಜಿನ ಪ್ರಕಾರ 2020 ಮುಗಿಯುವ ಹೊತ್ತಿಗೆ ಸುಮಾರು 2.5 ಲಕ್ಷಕ್ಕೂ ಹೆಚ್ಚಿನ ಗಾಡಿಗಳು ಮಿಂಬಲೆಗೆ ಸೇರಿಕೊಳ್ಳಬಹುದು ಎಂಬ ಎಣಿಕಯಿದೆ. ಮುಂಬರುವ ದಿನಗಳಲ್ಲಿ ಗೂಗಲ್‌ನ ತನ್ನಿಂದ ತಾನೇ ಓಡುವ ಕಾರು ಒಂದು ವಾರದಲ್ಲಿ ಹತ್ತು ಸಾವಿರ ಮೈಲಿ ಸಾಗಲಿವೆ. ಕೈಗೆ ತೊಡಬಲ್ಲ ಚೂಟಿಗಡಿಯಾರದಂತ ವಸ್ತುಗಳ ಬೇಡಿಕೆ ಬಹಳಶ್ಟು ಏರಲಿದೆ. ಆಪಲ್ (Apple) ಕೂಟ ಮತ್ತು ಫಿಟ್‌ಬಿಟ್ (Fitbit) ಎಂಬ ಇನ್ನೊಂದು ಕೂಟ ಇಂತ ಕೈಯಲ್ಲಿ ತೊಡಬಲ್ಲ ಕೋಟ್ಯಂತರ ಚೂಟಿ ಎಣಿಗಳನ್ನು (Smart wearing devices) ಕೊಳ್ಳುಗರಿಗೆ ಸಾಗಿಸಿದೆ. ಗೂಗಲ್ ಕೂಟ ನೇಸ್ಟ್‌ಲ್ಯಾಬ್ಸ್ (Nest Labs) ಎನ್ನುವ ಕಾವುಹತೋಟಿಗ (Thermostat) ಸಂಸ್ಥೆಯನ್ನು 3.2 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದೆ. ತೆಂಕಣ ಕೊರಿಯಾ ಮೂಲದ ಸ್ಯಾಮಸಂಗ್ ಕೂಡ “ಕನೆಕ್ಟೆಡ್ ಹೋಮ್ಸ್” (Connected homes) ಎಂಬ ಹೆಸರುವಾಸಿ ಕೂಟವನ್ನು 200 ಮಿಲಿಯನ್ ಡಾಲರ್‌ಗೆ ಕೊಂಡು ಕೊಂಡಿದೆ. ಈ ಮೇಲಿನ ಎಲ್ಲ ಮಾಹಿತಿ, ಮುಂಬರುವ ದಿನಗಳಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ ಹೆಚ್ಚಾಗುವಿಕೆಯ ಕುರುಹುಗಳಾಗಿವೆ. ಮಿಂಬಲೆ ವ್ಯವಹಾರದಲ್ಲಿರುವ ಗೂಗಲ್ ಕೂಟಕ್ಕೂ ಕಾವುಹತೋಟಿಗ ಕೂಟ ನೇಸ್ಟ್‌ಲ್ಯಾಬ್‌ಗೂ ಯಾವುದೇ ನೇರ ಸಂಬಂಧವೇ ಇಲ್ಲ. ಆದರೆ ಇವರಿಬ್ಬರ ನಡುವಿನ ಈ ವ್ಯವಹಾರ ನೋಡಿದರೆ ಗೂಗಲ್ ಕೂಟ ಇಂಟರ್‌ನೆಟ್ ಆಫ್ ಥಿಂಗ್ಸ್ ನತ್ತ ಚಿತ್ತವಿರಿಸಿದೆ ಎಂಬುದನ್ನು ಹೇಳುತ್ತದೆ. ಅದೇ ರೀತಿ ಸ್ಯಾಮ್‌ಸಂಗ್‌ನ ಕತೆ.
ಎಲ್ಲವೂ ಒಪ್ಪುವಂತದ್ದೇ ಆದರೆ ಇಷ್ಟೆಲ್ಲ ವಸ್ತುಗಳು ತಮ್ಮ ನಡುವೆಯೇಕೆ ಮಾತನಾಡಿಕೊಳ್ಳಬೇಕು? ಇವುಗಳ ಲಾಭವೇನು? ಇದನ್ನರಿಯಲು ಮೊದಲಿನ ಎತ್ತುಗೆಯನ್ನೇ ವಿವರವಾಗಿ ನೋಡೋಣ. ನಿಮ್ಮ ಅಲಾರ್ಮ್ ಗಡಿಯಾರ ಬೆಳಿಗ್ಗೆ 6 ಗಂಟೆಗೆ ನಿಮ್ಮನ್ನು ಎಬ್ಬಿಸುತ್ತದೆ ಎನ್ನಿ. ನಿಮ್ಮನ್ನು ಎಬ್ಬಿಸುತ್ತ ಅದು ನಿಮ್ಮ ಕಾಫಿ ಮಾಡುವ ಮೆಶೀನಿಗೆ ಕಾಫಿ ತಯಾರಿಸುವಂತೆ ಮಾಹಿತಿ ನೀಡುತ್ತದೆ. ಕಣ್ಣು ತೆರೆದು ಅಡುಗೆಮನೆಗೆ ಹೆಜ್ಜೆ ಇಡುತ್ತಲೇ ಬಿಸಿ ಬಿಸಿ ಕಾಫಿ ನಿಮ್ಮ ಮುಂದೆ. ಹಾಗೆಯೇ ಕಾಫಿ ಕುಡಿಯುತ್ತಿದ್ದಂತೆ ಕಾಫಿ ಮಾಡುವ ಮೆಶೀನು ನಿಮ್ಮ ಬಿಸಿಕಕ್ಕೊಂದು (Geyser/Heater) ಸಂದೇಶ ಕಳುಹಿಸಿ ಜಳಕ ಮಾಡಲು ಬಿಸಿ ನೀರು ಕಾಯುವಂತೆ ಮಾಡುತ್ತದೆ. ಇನ್ನೇನು ಕೆಲಸದೆಡೆಗೆ ತೆರಳಲು ಸಿದ್ದರಾಗಿ ಕಾರನ್ನು ಏರಿದ್ದೀರಿ, ಟ್ರಾಫಿಕ್ ದಟ್ಟಣೆಯಿಂದ ನೀವು ಕೆಲಸದೆಡೆಯ ಮಾತುಕತೆಯೊಂದರಲ್ಲಿ ಭಾಗವಹಿಸಲಾಗುತ್ತಿಲ್ಲ, ಕೂಡಲೇ ನಿಮ್ಮ ಬಂಡಿ ನೀವು ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಚೂಟಿಯುಲಿಗೆ ಮಾಹಿತಿ ಕಳುಹಿಸಿ ಕೊಡುತ್ತದೆ. ನಿಮ್ಮ ದಿನದ ಕ್ಯಾಲೆಂಡರ್ ಬಗ್ಗೆ ಅರಿತಿರುವ ನಿಮ್ಮ ಚೂಟಿಯುಲಿ ನೀವು ತಡವಾಗಿರುವುದನ್ನು ಕೆಲಸದೆಡೆಯ ಗೆಳೆಯರಿಗೆ ಮಾಹಿತಿಯೊಂದರ ಮೂಲಕ ತಿಳಿಸಿದರೆ ಹೇಗಿರುತ್ತದೆ? ಹೆಚ್ಚಿನ ನಮ್ಮ ಕೆಲಸಗಳು ಸುಳುವಾಗುತ್ತ ಹೋಗುತ್ತವೆ. ಹಲವಾರು ಮಂದಿ ತಮ್ಮ ಕಚೇರಿಗೆ ತೆರಳದೇ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಸಾರಿಗೆ, ಒದಗಿಕೆ (Infrastructure) ಹೀಗೆ ಮುಂತಾದೆಡೆ ಇದನ್ನು ಬಳಸಿಕೊಂಡು ಹೆಚ್ಚಿನ ಬೆಳವಣಿಗೆ ಸಾಧಿಸಬಹುದಾಗಿದೆ. ಇವಷ್ಟೇ ಅಲ್ಲದೇ ಹಲವು ವಲಯಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಮಂದಿ ಮತ್ತು ವಸ್ತುಗಳ ನಡುವೆ ಕೊಂಡಿ ಬೆಸೆಯಲಿದೆ. ಈ ಕೆಳಗಿನ ಚಿತ್ರವನ್ನು ನೋಡಿ. ಹೆಚ್ಚು ಕಡಿಮೆ ಇದರಲ್ಲಿನ ಎಲ್ಲವೂ ಒಂದಕ್ಕೊಂದು ಮಿಂಬಲೆಯ ಮೂಲಕ ಕೊಂಡಿ ಬೆಸೆದುಕೊಳ್ಳಬಹುದಾಗಿದೆ.
ಈ ರೀತಿ ಹೆಚ್ಚುತ್ತಿರುವ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಂದ ನಮ್ಮ ಕೆಲಸಗಳು ಸುಳುವಾಗುವುದೇನೋ ಸರಿ, ಆದರೆ ಇದರ ಇನ್ನೊಂದು ಮುಖ ನಮಗೆ ಕೆಡುಕುಂಟು ಮಾಡುವುದು ಅಷ್ಟೇ ದಿಟ. ಕೋಟಿಗಟ್ಟಲೆ ವಸ್ತುಗಳು ತಮ್ಮ ತಮ್ಮ ನಡುವೆ ಮಿಂಬಲೆ ಮೂಲಕ ಮಾಹಿತಿ ಹಂಚಿಕೊಳ್ಳತೊಡಗಿದರೆ ಕೆಲವು ಗುಟ್ಟಾದ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮಿಂಬಲೆ ಸುಲಿಗೆಕೋರರು (Internet Hawkers) ನಿಮ್ಮ ಕಾಫಿ ಮೆಶೀನು ಮೂಲಕ ನಿಮ್ಮ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ? ಇದರಿಂದ ಗುಟ್ಟಿನ ಮಾಹಿತಿಗಳನ್ನು ಮಂದಿ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಬಹುದು ಎನ್ನುತ್ತಾರೆ ಮಿಂಬಲೆ ಪಂಡಿತರು. ಜಗತ್ತಿನೆಲ್ಲೆಡೆ ಈಗಾಗಲೇ ಮಿಂಬಲೆ ಸುಲಿಗೆಕೋರರ ಹಾವಳಿ ತಡೆಯಲಾಗುತ್ತಿಲ್ಲ, ಇದು ಹೆಚ್ಚಾಗುವಿಕೆಯಿಂದ ಇಂತವರ ಎಣಿಕೆ ಹೆಚ್ಚಾಗಿ ಇವರನ್ನು ಮಟ್ಟ ಹಾಕುವುದು ಕಷ್ಟದ ಕೆಲಸವೇ ಸರಿ. ಇದಕ್ಕಾಗಿ ಜಗತ್ತಿನೆಲ್ಲೆಡೆ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಕರ್ಚು ಮಾಡಬೇಕಾಗಿ ಬರುತ್ತದೆ. ಇವುಗಳ ಪರಿಣಾಮ ಇದೀಗ ಅಗ್ಗವೆನಿಸಿರುವ ಮಿಂಬಲೆ ಮುಂದೊಮ್ಮೆ ದುಬಾರಿಯಾಗಲೂಬಹುದು. ಇಂತ ಸುಲಿಗೆಕೋರರು ಗಾಡಿಯ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಗಾಡಿಯು ಅಡ್ಡಾದಿಡ್ಡಿಯಾಗಿ ಓಡಾಡುವಂತೆ ಮಾಡಿದ್ದು ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇಂತಹ ಕೆಟ್ಟ ಕೆಲಸಗಳಿಗೂ ಇದು ದಾರಿಯಾಗಲಿದೆ. ಇನ್ನೂ ದಿಗಿಲುಕೋರರು ಈ ಚಳಕದ ಬಳಕೆ ಮಾಡಿ ಹೆಚ್ಚು ಕಡಿಮೆ ಇಡೀ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ತಳ್ಳಿ ಹಾಕಲಾಗದು. ಈ ಮಾಹಿತಿ ಸೋರಿಕೆಯ ಸಮಸ್ಯೆ ಒಂದೆಡೆಯಾದರೆ ಇಷ್ಟೆಲ್ಲ ವಸ್ತುಗಳು ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡಿಡುವುದು, ಬೇಕೆಂದಾಗ ಬಳಸಿಕೊಳ್ಳುವುದು, ಬೇಕಿಲ್ಲದ ಮಾಹಿತಿಗಳನ್ನು ಬೇರ್ಪಡಿಸಿ ಜಾಲಾಡುವುದು ಕೂಡ ಅಂದುಕೊಂಡಶ್ಟು ಸುಲಭವಲ್ಲ.
ಈ ಎಲ್ಲ ಪ್ರಶ್ನೆಗಳು ಸಾಕಷ್ಟು ತಲೆನೋವನ್ನು ಹುಟ್ಟುಹಾಕಿವೆ. ನಾಡು, ಹೊರನಾಡು ಮುಂತಾದೆಡೆ ಸಭೆ, ಸಮಾರಂಭ ಮತ್ತು ಮಾತುಕತೆ ಕೂಟಗಳಲ್ಲಿ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಇನ್ನೂ ತಕ್ಕ ಉತ್ತರಗಳನ್ನು ಕಂಡುಕೊಳ್ಳುವ ಯತ್ನಗಳು ನಡೆಯುತ್ತಿವೆ. ಇವರು ಆದಷ್ಟು ಬೇಗ ಸರಿಯಾದ ಉತ್ತರಗಳನ್ನು ಕಂಡುಕೊಂಡರೆ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಜಕ್ಕೂ ನಮ್ಮ ಬದುಕನ್ನು ಸುಳುವಾಗಿಸುವಲ್ಲಿ ಎರಡು ಮಾತಿಲ್ಲ.