ಜೇನುಹುಳದ ಕುಣಿತ

ರತೀಶ ರತ್ನಾಕರ.

“ಧಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ ತಿಳಿಸುತ್ತೇವೆ ಅಲ್ಲವೇ? ಯಾವ ಯಾವ ಊರಿನಲ್ಲಿ, ಕೇರಿಯಲ್ಲಿ, ಅಂಗಡಿಯಲ್ಲಿ ಯಾವ ತಿನಿಸುಗಳು ಎಲ್ಲಿ ಸಿಗುತ್ತವೆ ಎಂದು ಸರಿಯಾದ ವಿಳಾಸದೊಂದಿಗೆ ನಮ್ಮ ಮಾತಿನ ಮೂಲಕವೋ ಬರಹದ ಮೂಲಕವೋ ಇನ್ನೊಬ್ಬರಿಗೆ ತಿಳಿಸುತ್ತೇವೆ. ನಮ್ಮ ಮಾತಿನದ್ದೇನೋ ಸರಿ, ಆದರೆ ಯಾವುದೋ ಹೂವಿನ ತೋಟದಲ್ಲಿ ಸಿಗುವ ಹೂ ಜೇನಿನ ದಾರಿಯನ್ನು ಒಂದು ಜೇನುಹುಳವು ಮತ್ತೊಂದು ಹುಳಕ್ಕೆ ಹೇಗೆ ತಿಳಿಸಬಹುದು? ಜೇನುಹುಳಗಳು ಒಂದಕ್ಕೊಂದು ಮಾತನಾಡುತ್ತವೆಯೇ? ಅವುಗಳ ನುಡಿ ಯಾವುದು? ಬನ್ನಿ, ಈ ಪ್ರಶ್ನೆಗಳಿಗೆ ಮರುನುಡಿ ಹುಡುಕುವ ಪ್ರಯತ್ನ ಮಾಡೋಣ.

ಜೇನುಹುಳಗಳ ಮೇವು ಎಂದರೆ ಅದು ಹೂವಿನ ಬಂಡು (pollen), ಜೇನು (nectar) ಹಾಗು ನೀರು. ಹೂವಿನ ಬಂಡು ಮತ್ತು ಜೇನನ್ನು ಅವು ಹೂವುಗಳಿಂದಲೇ ಹುಡುಕಿ ತರಬೇಕು. ಹಿಂದಿನ ಬರಹದಲ್ಲಿ ತಿಳಿದಂತೆ ಒಂದು ಜೇನುಗೂಡಿನಲ್ಲಿ ಸವಿಯಾದ ಜೇನನ್ನು ಕೂಡಿಡುವ ಕೆಲಸ ದುಡಿಮೆಗಾರ ಹುಳಗಳದ್ದಾಗಿರುತ್ತದೆ. ಈ ದುಡಿಮೆಗಾರ ಹುಳಗಳಲ್ಲಿ ಸುಮಾರು 5-25% ಹುಳಗಳು ಬೇಹುಗಾರ(scouts) ಹುಳಗಳಾಗಿರುತ್ತವೆ. ಅಂದರೆ, ಮೇವಿಗಾಗಿ ಸುತ್ತಮುತ್ತಲಿನ ಜಾಗದಲ್ಲಿ ಹುಡುಕಾಟವನ್ನು ನಡೆಸಿ, ಸೊಂಪಾಗಿ ಹೂವುಗಳು ಸಿಗುವ ಜಾಗವನ್ನು ಕಂಡುಹಿಡಿದು, ಗೂಡಿಗೆ ಹಿಂತಿರುಗಿ ಉಳಿದ ದುಡಿಮೆಗಾರ ಜೇನುಹುಳಗಳಿಗೆ ಹೂವುಗಳಿರುವ ಜಾಗವನ್ನು ತಿಳಿಸುವುದು ಈ ಬೇಹುಗಾರ ಹುಳಗಳ ಕೆಲಸವಾಗಿರುತ್ತದೆ.

ಹಾಗಾದರೆ ಈ ಬೇಹುಗಾರ ಹುಳಗಳು ಉಳಿದ ಜೇನುಹುಳಗಳಿಗೆ ಹೂವು ಸಿಗುವ ಜಾಗವನ್ನು ಹೇಗೆ ತಿಳಿಸುತ್ತವೆ? ಜೇನುಗೂಡಿನಿಂದ ಹೂವುಗಳು ಎಷ್ಟು ದೂರದಲ್ಲಿವೆ ಮತ್ತು ಯಾವ ದಿಕ್ಕಿನಲ್ಲಿವೆ ಎಂಬ ವಿವರವನ್ನು ಹೇಗೆ ತೋರಿಸುತ್ತವೆ? ಈ ಎಲ್ಲಾ ಕುತೂಹಲಗಳಿಗೆ ಮರುನುಡಿಯೇ ‘ಜೇನುಹುಳದ ಕುಣಿತ‘! ಹೌದು, ಬೇಹುಗಾರ ಜೇನುಹುಳಗಳು ಉಳಿದ ಜೇನುಹುಳಗಳಿಗೆ ಸೊಂಪಾಗಿ ಸಿಗುವ ಮೇವಿನ ಜಾಗದ ವಿವರವನ್ನು ಕುಣಿತದ ಮೂಲಕ ತಿಳಿಸುತ್ತವೆ. ಇದನ್ನೇ ಜೇನುಹುಳದ ಕುಣಿತ ಎನ್ನಲಾಗುತ್ತದೆ.

ಜೇನುಹುಳಗಳು ಹೇಗೆ ಮಾತನಾಡಿಕೊಳ್ಳುತ್ತವೆ ಎನ್ನುವುದನ್ನು ಅರಿಯಲು ಸಾಕಷ್ಟು ಅರಕೆಗಳನ್ನು ಮಾಡಲಾಗಿದೆ. ಬೇಹುಗಾರ ಜೇನುಹುಳಗಳು ಮೇವಿನ ಜಾಗವನ್ನು ಹುಡುಕಾಡಿ, ಅಲ್ಲಿರುವ ಹೂವಿನ ಬಂಡು ಮತ್ತು ಜೇನನ್ನು ಹೊತ್ತುಕೊಂಡು ಗೂಡಿಗೆ ಹಿಂತಿರುಗುತ್ತವೆ. ಬೇಹುಗಾರ ಜೇನುಹುಳವು ತಂದ ಬಂಡಿನ ನರುಗಂಪಿನ (odor) ಜಾಡನ್ನು ಹಿಡಿದು ಉಳಿದ ದುಡಿಮೆಗಾರ ಹುಳಗಳು ಮೇವಿನ ಜಾಗವನ್ನು ಕಂಡುಹಿಡಿಯುತ್ತವೆ ಎಂದು ಈ ಮೊದಲು ನಂಬಲಾಗಿತ್ತು. ಬಳಿಕ ನಡೆದ ಹೆಚ್ಚಿನ ಅರಕೆಗಳಲ್ಲಿ ಜೇನುಹುಳದ ಕುಣಿತವು ಬೆಳಕಿಗೆ ಬಂದಿತು. ಜರ್ಮನಿಯ ಅರಕೆಗಾರ ಕಾರ‍್ಲ್ ವೊನ್ ಪ್ರಿಸ್ಕ್ ಅರಕೆಯನ್ನು ನಡೆಸಿ, ಜೇನುಹುಳದ ಕುಣಿತವನ್ನು ಪರಿಚಯಿಸಿದರು, ಅದಕ್ಕಾಗಿ ಅವರು ನೊಬೆಲ್ ಪ್ರಶಸ್ತಿಯನ್ನು ಕೂಡ ಪಡೆದರು.

ಏನಿದು ಜೇನುಹುಳದ ಕುಣಿತ?
ಮೇವನ್ನು ಅರಸಿ ಗೂಡಿನಿಂದ ಹೊರಹೋದ ಬೇಹುಗಾರ ಹುಳಗಳು ಗೂಡಿನ ಯಾವುದೋ ದಿಕ್ಕಿನಲ್ಲಿರುವ, ಎಷ್ಟೋ ದೂರದಲ್ಲಿರುವ ಹೂಗಳ ರಾಶಿಯನ್ನು ಹುಡುಕುತ್ತವೆ. ಆ ಹೂವಿನಿಂದ ಸಾಕಷ್ಟು ಜೇನನ್ನು ಹೀರಿ, ಹೂವಿನ ಬಂಡನ್ನು ಕೂಡ ತೆಗೆದುಕೊಂಡು ಜೇನುಗೂಡಿಗೆ ಮರಳುತ್ತವೆ. ಜೇನುಗೂಡಿನಲ್ಲಿರುವ ಉಳಿದ ದುಡಿಮೆಗಾರ ಹುಳಗಳಿಗೆ ತಾನು ಕಂಡ ಮೇವಿನ ಜಾಗವನ್ನು ತಿಳಿಸಲು ಅದು ಗೂಡಿನ ಪಕ್ಕದಲ್ಲಿ ಕುಣಿತವನ್ನು ಮಾಡುತ್ತದೆ. ಈ ಕುಣಿತವು ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುತ್ತದೆ! ಅದು ಹೇಗೆ ಎಂದು ಈಗ ನೋಡೋಣ.

ಮೇವು ಸಿಗುವ ದೂರ:
ಮೇವು ಜೇನುಗೂಡಿನಿಂದ 50 ಮೀಟರ್ ಗಿಂತ ಕಡಿಮೆ ದೂರದಲ್ಲಿದ್ದರೆ, ಬೇಹುಗಾರ ಹುಳವು ‘ಸುತ್ತು ಕುಣಿತ’ವನ್ನು (round dance) ಹಾಕುತ್ತದೆ. (ಕೆಳಗಿನ ಚಿತ್ರ ವನ್ನು ನೋಡಿ). ಹುಳವು ಒಂದು ಬಾರಿ ಇಲ್ಲವೇ ಗೂಡಿನ ಸುತ್ತಲೂ ಹಲವು ಬಾರಿ ಸುತ್ತು ಕುಣಿತವನ್ನು ಹಾಕಿ, ಮೇವಿನ ಜಾಗದ ಬಗ್ಗೆ ಮಾಹಿತಿಯನ್ನು ನೀಡುವುದು. ಸುತ್ತು ಕುಣಿತವನ್ನು ಹಾಕಿದ ಮೇಲೆ, ತಾನು ಹೊತ್ತು ತಂದ ಹೂವಿನ ಬಂಡು ಮತ್ತು ಜೇನನ್ನು ಗೂಡಿನಲ್ಲಿರುವ ಮತ್ತೊಂದು ಜೇನಿಗೆ ಸಾಗಿಸಿ, ಮತ್ತೊಂದು ಕಡೆ ಮೇವನ್ನು ಹುಡುಕಲು ಹೋಗುತ್ತದೆ. ಸುತ್ತು ಕುಣಿತವು ಕೇವಲ ದೂರವನ್ನು ತಿಳಿಸುತ್ತದೆ, ಗೂಡಿನಿಂದ ಕೇವಲ 50 ಮೀ ದೂರದಲ್ಲಿ ಇರುವುದರಿಂದ ದಿಕ್ಕನ್ನು ತಿಳಿಸುವ ಅವಶ್ಯಕತೆ ಇಲ್ಲ. ಸುತ್ತು ಕುಣಿತವನ್ನು ನೋಡಿದ ಉಳಿದ ದುಡಿಮೆಗಾರ ಹುಳಗಳು, ಹತ್ತಿರದಲ್ಲೇ ಹೂವು ಇದೆ ಎಂದು ಅರಿತು, ಹೂವಿನ ಕಂಪಿನ ಜಾಡನ್ನು ಹಿಡಿದು ಮೇವನ್ನು ತರಲು ಹೋರಡುತ್ತವೆ.

ಒಂದು ವೇಳೆ ಮೇವು ಸಿಗುವ ಜಾಗವು 50 ರಿಂದ 150 ಮೀಟರ್ ದೂರದಲ್ಲಿ ಇದ್ದರೆ ಆಗ ಬೇಹುಗಾರ ಹುಳವು ‘ಕುಡುಗೋಲು ಕುಣಿತ‘ವನ್ನು(sickle dance) ಹಾಕುತ್ತದೆ. ಹೆಸರೇ ಹೇಳುವಂತೆ ಕುಡುಗೋಲಿನ ಆಕಾರದಲ್ಲಿ ಹುಳವು ಓಡಾಡಿ ಮೇವಿನ ಜಾಗದ ಬಗ್ಗೆ ತಿಳಿಸುತ್ತದೆ. ಕುಡುಗೋಲು ಕುಣಿತವು ಕೂಡ ಕೇವಲ ದೂರವನ್ನು ತಿಳಿಸುತ್ತದೆಯೇ ಹೊರತು ದಿಕ್ಕನ್ನಲ್ಲ.

ಇನ್ನು 150 ಮೀ. ಗಿಂತ ದೂರದಲ್ಲಿರುವ ಮೇವಿನ ಮಾಹಿತಿಯನ್ನು ತಿಳಿಸಲು ಬೇಹುಗಾರ ಹುಳವು ‘ಓಲಾಟದ ಕುಣಿತ‘ವನ್ನು (waggle dance) ಮಾಡುತ್ತದೆ. ಈ ಓಲಾಟದ ಕುಣಿತವು ದೂರ ಮತ್ತು ದಿಕ್ಕು ಎರಡನ್ನೂ ತಿಳಿಸುತ್ತದೆ. ಓಲಾಟದ ಕುಣಿತಕ್ಕೆ ಚಿತ್ರ 2 ನ್ನು ನೋಡಿ. ಓಲಾಟದ ಕುಣಿತದಲ್ಲಿ ಬೇಹುಗಾರ ಹುಳವು ಒಂದಷ್ಟು ದೂರ ನೇರವಾಗಿ ಹಾರುತ್ತದೆ, ಬಳಿಕ ಬಲ/ಎಡಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬಂದು ತಲುಪುತ್ತದೆ, ಮತ್ತೆ ಮೊದಲು ಓಡಿದ ನೇರದಾರಿಯಲ್ಲೇ ಹಾರಿ, ತಿರುಗಿ ಎಡ/ಬಲಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬರುತ್ತದೆ. ಈ ಕುಣಿತದಲ್ಲಿ ಹುಳವು ನೇರದಾರಿಯಲ್ಲಿ ಹಾರುವಾಗ ತನ್ನ ಹೊಟ್ಟೆಯ ಭಾಗವನ್ನುಅಲ್ಲಾಡಿಸಿಕೊಂಡು ಇಲ್ಲವೇ ಓಲಾಡಿಸಿಕೊಂಡು ಹಾರುತ್ತದೆ, ಇದು ಬಾಲವನ್ನು ಅಲ್ಲಾಡಿಸಿದಂತೆ ಕಾಣಿಸುತ್ತದೆ. ಆದ್ದರಿಂದ ಇದನ್ನು ಓಲಾಟದ ಕುಣಿತ ಎನ್ನುತ್ತಾರೆ. ಅಲ್ಲದೇ ನೇರದಾರಿಯಲ್ಲಿ ಹಾರುವಾಗ ‘ಜುಂಯ್’ ಎಂಬ ಸದ್ದನ್ನು ಕೂಡ ಮಾಡಿ ಹಾರುತ್ತದೆ.

ಓಲಾಟದ ಕುಣಿತದಲ್ಲಿ ನೇರದಾರಿಯನ್ನು ಸಾಗಲು ಹುಳವು ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮೇವು ಸಿಗುವ ದೂರವನ್ನು ಲೆಕ್ಕಹಾಕಲಾಗುತ್ತದೆ. ನೇರದಾರಿಯಲ್ಲಿ ಕಡಿಮೆ ಹೊತ್ತು ಹಾರಿದರೆ ಮೇವಿನ ಜಾಗವು ಕಡಿಮೆ ದೂರವೆಂದು, ಹೆಚ್ಚು ಹೊತ್ತು ಹಾರಿದರೆ ಹೆಚ್ಚು ದೂರವೆಂದು ತಿಳಿಯಲಾಗುತ್ತದೆ. ಉದಾಹರಣೆಗೆ, ನೇರದಾರಿಯಲ್ಲಿ 2 ಸೆಕೆಂಡ್ ಹಾರಿದರೆ ಮೇವಿನ ದೂರ 2000 ಮೀ. ಇದೆ ಎಂದು, 4 ಸೆಕೆಂಡ್ ಹಾರಿದರೆ ಸುಮಾರು 4400 ಮೀ. ದೂರದಲ್ಲಿ ಮೇವು ಇದೆ ಎಂದು ಅಂದಾಜಿಸಲಾಗುತ್ತದೆ. ಇದಲ್ಲದೇ, ನೇರದಾರಿಯಲ್ಲಿ ಹಾರುವಾಗ ಮಾಡುವ ಓಲಾಟದ ಉರುಬು (tempo) ಮತ್ತು ಎಷ್ಟು ಹೊತ್ತು ‘ಜಂಯ್’ ಎಂದು ಮಾಡುವ ಸದ್ದು ಮಾಡುವುದು ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡು, ಮೇವು ಇರುವ ದೂರವನ್ನು ದುಡಿಮೆಗಾರ ಹುಳಗಳು ಕಂಡುಕೊಳ್ಳುತ್ತವೆ.

ಹೀಗೆ ಮೇವಿನ ದೂರವನ್ನು ಓಲಾಟದ ಕುಣಿತದಲ್ಲಿ ಲೆಕ್ಕಹಾಕಲಾಗುತ್ತದೆ. ಮೇವಿನ ದೂರ ಮತ್ತು ನೇರದಾರಿಯಲ್ಲಿ ಹಾರುವ ಹೊತ್ತಿನ ನಡುವೆ ಇರುವ ನಂಟನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಮೇವು ಇರುವ ದಿಕ್ಕು ಮತ್ತು ಓಲಾಟದ ಕುಣಿತ:

ಓಲಾಟದ ಕುಣಿತದಲ್ಲಿ ಮೇವು ಇರುವ ದಿಕ್ಕು ಕಂಡುಹಿಡಿಯುವುದನ್ನು ನೋಡಿದರೆ, ಜೇನುಹುಳಗಳು ಲೆಕ್ಕದಲ್ಲಿ ಎತ್ತಿದ ಕೈ ಎನ್ನಬಹುದು. ಓಲಾಟದ ಕುಣಿತದ ನೇರದಾರಿಯಲ್ಲಿ ಜೇನುಹುಳವು ಯಾವ ದಿಕ್ಕಿನಲ್ಲಿ ಹಾರುತ್ತದೆ, ಜೇನುಗೂಡಿಗೆ ಯಾವ ಕೋನದಲ್ಲಿ ಹಾರುತ್ತಿದೆ ಮತ್ತು ನೇಸರನು ಯಾವ ದಿಕ್ಕಿನಲ್ಲಿ ಇದ್ದಾನೆ ಎಂಬುದರ ಮೇಲೆ ದಿಕ್ಕನ್ನು ಕಂಡುಕೊಳ್ಳಲಾಗುತ್ತದೆ. ಇದನ್ನು ಸುಳುವಾಗಿ ತಿಳಿಸಲು ಈ ಕೆಳಗಿನ ಚಿತ್ರವನ್ನು ನೋಡಿ.

– ಮೇವು ಸಿಗುವ ಜಾಗವು ನೇಸರನು ಇರುವ ದಿಕ್ಕಿನ ಕಡೆ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ (parallel) ಇರುತ್ತದೆ (ಅಂದರೆ 0 ಡಿಗ್ರಿ ಕೋನ) ಮತ್ತು ನೇರದಾರಿಯ ದಿಕ್ಕು ಗೂಡಿನ ಮೇಲ್ಮುಖವಾಗಿ ಇರುತ್ತದೆ.

– ಮೇವು ಸಿಗುವ ಜಾಗವು ನೇಸರನ ಎದುರು ದಿಕ್ಕಿನಲ್ಲಿ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ ಇರುತ್ತದೆ ಆದರೆ ಹಾರಾಟದ ದಿಕ್ಕು ಗೂಡಿನ ಕೆಳಮುಖವಾಗಿ ಇರುತ್ತದೆ.

– ಒಂದು ವೇಳೆ ಮೇವು ಸಿಗುವ ಜಾಗವು ನೇಸರನಿಂದ ಬಲಕ್ಕೆ ಸುಮಾರು 30 ಡಿಗ್ರಿ ಕೋನದಲ್ಲಿ ಇದ್ದರೆ. ಕುಣಿತದ ನೇರದಾರಿಯ ಕೋನವು ಗೂಡಿನಿಂದ 30 ಡಿಗ್ರಿ ಬಲಕ್ಕೆ ಬಾಗಿರುತ್ತದೆ.

– ಹಾಗೆಯೇ ಮೇವು ನೇಸರನಿಂದ ಎಡಕ್ಕೆ 90 ಡಿಗ್ರಿಯಲ್ಲಿ ಇದ್ದರೆ ಕುಣಿತದ ನೇರದಾರಿಯ ಕೋನವು ಗೂಡಿಗೆ 90 ಡಿಗ್ರಿಯಲ್ಲಿ ಬಲಕ್ಕೆ ಬಾಗಿರುತ್ತದೆ.

ಈ ಓಲಾಟದ ಕುಣಿತವು ನೇಸರನ ಜಾಗದ ಮೇಲೆ ಹೆಚ್ಚು ನೆಚ್ಚಿಕೊಂಡಿರುತ್ತದೆ. ಉದಾಹರಣೆಗೆ, ಬೇಹುಗಾರ ಹುಳವು ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಉಳಿದ ಹುಳಗಳಿಗೆ ತಿಳಿಸಬೇಕಿದೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಬೆಳಗಿನ ಹೊತ್ತು ಆ ದಿಕ್ಕನ್ನು ತಿಳಿಸಬೇಕೆಂದರೆ ಬೇಹುಗಾರ ಹುಳವು ತನ್ನ ಕುಣಿತದ ನೇರದಾರಿಯಲ್ಲಿ ಮೇಲ್ಮುಖವಾಗಿ ಸಾಗಬೇಕು, ಏಕೆಂದರೆ ನೇಸರ ಮತ್ತು ಮೇವು ಒಂದೇ ದಿಕ್ಕಿನಲ್ಲಿವೆ. ಅದೇ ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಸಂಜೆಯ ಹೊತ್ತು ತಿಳಿಸಬೇಕೆಂದರೆ ಹುಳವು ಕುಣಿತದ ನೇರದಾರಿಯಲ್ಲಿ ಕೆಳಮುಖವಾಗಿ ಸಾಗಬೇಕು. ಏಕೆಂದರೆ ನೇಸರನು ಈಗ ಪಡುವಣ ದಿಕ್ಕಿನಲ್ಲಿ ಇದ್ದಾನೆ ಮತ್ತು ಮೇವು ನೇಸರನ ಎದುರು ದಿಕ್ಕಿನಲ್ಲಿದೆ.

ಇದು ಬೇಹುಗಾರ ಹುಳಗಳು ತಮ್ಮದೇ ಆದ ಕುಣಿತದ ಮೂಲಕ ಗೂಡಿನ ಉಳಿದ ಹುಳಗಳಿಗೆ ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುವ ಬಗೆ. ಈ ಕುಣಿತವಷ್ಟೆ ಅಲ್ಲದೆ ಬೇಹುಗಾರ ಹುಳಗಳು ಹೊತ್ತು ತರುವ ಹೂವಿನ ಬಂಡು ಮತ್ತು ಜೇನಿನ ನರುಗಂಪಿನ ನೆರವನ್ನು ಪಡೆದುಕೊಂಡು, ದುಡಿಮೆಗಾರ ಹುಳಗಳು ಹೂವು ಸಿಗುವ ಜಾಗವನ್ನು ಕಂಡುಹಿಡಿಯುತ್ತವೆ. ಬಳಿಕ ಗೂಡಿಗೆ ಬೇಕಾದ ಜೇನನ್ನು ಹೊತ್ತು ತಂದು ಕೂಡಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬಿನಲ್ಲಿರುವ ಕೆಲವು ವೀಡಿಯೊಗಳು:

(ಮಾಹಿತಿ ಮತ್ತು ಚಿತ್ರ ಸೆಲೆ: cals.ncsuusers.rcn.comwestmtnapairypinterest.com)

ಚುಟುಕು ಯಂತ್ರಗಳಿಗೆ ಈ ಬಾರಿಯ ನೊಬೆಲ್

ಯಂತ್ರಗಳನ್ನು ಯಾರು ಬಳಸುವುದಿಲ್ಲ ಹೇಳಿ? ಕಾರು, ಬಸ್ಸು, ವಿಮಾನದಂತಹ ಸಾಗಾಣಿಕೆಯ ಯಂತ್ರಗಳಿಂದ ಹಿಡಿದು ಗ್ರ್ಯಾಂಡರ್, ಪಂಪ್, ಹೊಲಿಗೆ ಯಂತ್ರ ಹೀಗೆ ದೈನಂದಿನ ಹಲವು ಕೆಲಸಗಳಲ್ಲಿ ನಾವಿಂದು ಯಂತ್ರಗಳನ್ನು ಬಳಸುತ್ತಿದ್ದೇವೆ. ಹಿಂದೊಮ್ಮೆ ಎಲ್ಲ ಕೆಲಸಗಳಿಗೆ ಮೈ ಕಸುವನ್ನೇ ನೆಚ್ಚಿಕೊಂಡಿದ್ದ ನಾವು, ಇಂದು ಯಂತ್ರಗಳ ಮೇಲೆ ನಮ್ಮೆಲ್ಲ ಹೊರೆಯನ್ನು ಹಾಕಿದ್ದೇವೆ.

ಈಗೊಂದು ಪ್ರಶ್ನೆ, ಎಲ್ಲಕ್ಕಿಂತ ದೊಡ್ಡ ಯಂತ್ರ ಯಾವುದು? ಹಡಗು, ವಿಮಾನ, ರಾಕೆಟ್ ಹೀಗೆ ಹಲವು ಉತ್ತರಗಳು ಬರಬಹುದು. ಹಾಗಿದ್ದರೆ ಎಲ್ಲಕ್ಕಿಂತ ಚಿಕ್ಕ ಯಂತ್ರ ಯಾವುದು? ಮೊಬೈಲ್. ಅದಕ್ಕಿಂತ ಚಿಕ್ಕದು? ಕೈ ಗಡಿಯಾರ. ಹಾಗಾದರೆ ಅದಕ್ಕಿಂತ ಚಿಕ್ಕದು? ಇನ್ನೂ ಚಿಕ್ಕದು? ಹೀಗೆ ಕೇಳುತ್ತಾ ಹೊರಟರೆ ಕೊನೆ ಎಲ್ಲಿ? ಆದರೆ ಈ ಪ್ರಶ್ನೆಯನ್ನು ಕೇಳುತ್ತಲೇ, ಅಂತಹ ಕಿರಿದಾದ, ಚುಟುಕಾದ ಯಂತ್ರಗಳನ್ನು ಮಾಡಬಹುದು ಅಂತಾ ತೋರಿಸಿರುವ ಅರಿಗರ ತಂಡಕ್ಕೆ ಈ ವರುಶದ ನೊಬೆಲ್ ಪ್ರಶಸ್ತಿ ದೊರೆತಿದೆ. ಅವರು ಮಾಡಿದ ಚುಟುಕು ಯಂತ್ರಗಳ ಹೆಸರು ಮೊಲಿಕ್ಯುಲಾರ್ ಮಶೀನ್ಸ್ (Molecular Machines) ಅಂದರೆ ಅಣುಕೂಟಗಳ ಯಂತ್ರಗಳು. ಯಾವ ಯಂತ್ರಗಳಿವು? ಏನಿವುಗಳ ಉಪಯೋಗ? ಮುಂತಾದ ವಿಷಯಗಳನ್ನು ತಿಳಿಯೋಣ ಬನ್ನಿ.

ಮೊಲಿಕ್ಯುಲಾರ್ ಮಶೀನ್ಸ್  (Molecular Machine) ಅಂದರೇನು?:

’ಮೊಲಿಕ್ಯುಲಾರ್ ಮಶೀನ್’ ಪದದಲ್ಲಿರುವ ಎರಡು ಪದಗಳನ್ನು ಬೇರೆ ಬೇರೆಯಾಗಿ ಮೊದಲು ನೋಡೋಣ,

ನಮಗೆ ಗೊತ್ತಿರುವಂತೆ ವಸ್ತುಗಳು ಕಿರಿದಾದ ಘಟಕಗಳಾದ ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಈ ಅಣುಗಳು ಒಂದಕ್ಕೊಂದು ಕಲೆತು ನಿರ್ದಿಷ್ಟ ರಚನೆಯೊಂದನ್ನು ಏರ್ಪಡಿಸುತ್ತವೆ. ಈ ರಚನೆಗಳನ್ನು ’ಮೊಲಿಕ್ಯುಲ್’ (Molecule) ಎಂದು ಕರೆಯುತ್ತಾರೆ. ಮೊಲಿಕ್ಯುಲ್ (Molecule) ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಅಣುಗಳಿಂದ ಕೂಡಿರುತ್ತದೆ. ಕನ್ನಡದಲ್ಲಿ ಮೊಲಿಕ್ಯುಲ್‍ನ್ನು ಅಣುಕೂಟ ಎಂದು ಕರೆಯಬಹುದು.

Molicul

ಇಲ್ಲಿ ಗಮನಿಸಬೇಕಾದ ಎರಡು ವಿಷಯಗಳೆಂದರೆ, ಅಣುವಿನ ಬಗ್ಗೆ ನಾವು ಮಾತನಾಡುತ್ತಿರುವುದರಿಂದ ತುಂಬಾನೇ ಕಿರಿದಾದ ರಚನೆಯ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನುವುದು ಒಂದು ಮತ್ತು ಜೀವಿಗಳು, ವಸ್ತುಗಳು ಹೀಗೆ ಎಲ್ಲದರಲ್ಲಿ ಅಡಕವಾಗಿರುವ ರಚನೆಯೊಂದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಅನ್ನುವುದು ಇನ್ನೊಂದು.

ಇನ್ನು, ಎರಡನೆಯ ಪದ ಮಶೀನ್ ಇಲ್ಲವೇ ಯಂತ್ರ. ಮೈ ಶಕ್ತಿ, ರಾಸಾಯನಿಕ ಶಕ್ತಿ, ಮಿಂಚಿನ, ಗಾಳಿಯ ಶಕ್ತಿ ಹೀಗೆ ಯಾವುದಾದರೊಂದು ಬಗೆಯ ಶಕ್ತಿಯನ್ನು ಬಳಸಿಕೊಂಡು, ಗೊತ್ತುಪಡಿಸಿದ ಕೆಲಸ ಇಲ್ಲವೇ ಚಟುವಟಿಕೆಯೊಂದನ್ನು ಮಾಡುವ ಸಲಕರಣೆಯನ್ನು ಯಂತ್ರ ಎಂದು ಕರೆಯುತ್ತೇವೆ. ಉದಾಹರಣೆಗೆ, ಕಾರು ಉರುವಲಿನ ಶಕ್ತಿಯನ್ನು ಬಳಸಿಕೊಂಡು ಸಾಗಾಣಿಕೆಯ ಚಟುವಟುಕೆಯೊಂದನ್ನು ಮಾಡಬಲ್ಲ ಯಂತ್ರವಾಗಿದೆ. ಹಾಗೆನೇ ಹೊಲಿಗೆ ಯಂತ್ರ ಕರೆಂಟ್ ಇಲ್ಲವೇ ಕಾಲಿನ ಶಕ್ತಿಯನ್ನು ಬಳಸಿಕೊಂಡು ಹೊಲಿಯುವ ಸೂಜಿಯನ್ನು ಮೇಲೆ ಕೆಳಗೆ ಆಡಿಸುವ ಚಟುವಟಿಕೆಯನ್ನಾಗಿ ಬದಲಾಯಿಸುವ ಯಂತ್ರವಾಗಿದೆ.

ಈಗ ’ಮೊಲಿಕ್ಯುಲಾರ್ ಮಶಿನ್’ ಎಂಬ ಎರಡು ಪದಗಳನ್ನು ಜೋಡಿಸಿದಾಗ ಅದರ ಹುರುಳನ್ನು ಸುಲಭವಾಗಿ ತಿಳಿಯಬಹುದು. ವಸ್ತುಗಳಲ್ಲಿನ ಕಿರು ರಚನೆಯಾದ ಅಣುಕೂಟಗಳನ್ನು ಒಂದು ಗೊತ್ತುಪಡಿಸಿದ ರೀತಿಯಲ್ಲಿ ಹೊಂದಿಸಿಕೊಂಡು, ಗೊತ್ತುಪಡಿಸಿದ ಕೆಲಸವನ್ನು ಮಾಡುವ ಯಂತ್ರಗಳೇ ಮೊಲಿಕ್ಯುಲಾರ್ ಮಶಿನ್ಸ್ ಇಲ್ಲವೇ ಅಣುಕೂಟಗಳ ಯಂತ್ರಗಳು.

ಇನ್ನೂ ತಿಳಿಯಾಗಿ ಹೇಳಬೇಕೆಂದರೆ ಇಂಜಿನ್ನು, ಗಾಲಿ, ಅಡಿಗಟ್ಟು (chassis) ಮುಂತಾದ ರಚನೆಗಳನ್ನು, ಗೊತ್ತುಪಡಿಸಿದ ರೀತಿಯಲ್ಲಿ ಹೊಂದಿಸಿಕೊಂಡು, ನಮ್ಮ ಓಡಾಟಕ್ಕೆ ನೆರವಾಗುವ ’ಕಾರು’ ಎಂಬ ಯಂತ್ರ ಹೇಗಿದೆಯೋ ಹಾಗೆ ವಸ್ತುವಿನಲ್ಲಿನ ಕಿರಿದಾದ ಅಣುಕೂಟಗಳನ್ನು ಬಳಸಿಕೊಂಡು ಯಂತ್ರವೊಂದನ್ನು ತಯಾರು ಮಾಡಿದರೆ ಅದೇ ’ಮೊಲಿಕ್ಯುಲಾರ್ ಮಶೀನ್’ ಆಗುತ್ತದೆ. ಇದರ ಅಳತೆಯನ್ನು ಹೋಲಿಸಿ ಹೇಳಬೇಕೆಂದರೆ, ನಮ್ಮ ಕೂದಲ ಎಳೆಯೊಂದರ ಸುಮಾರು 1000 ಪಟ್ಟು ಚಿಕ್ಕ ಅಳತೆಯದು!

ಮೊಲಿಕ್ಯುಲಾರ್ ಮಶೀನ್ಸ್ (Molecular Machines) ಹೊಸದೇ?:
ಹಾಗೇ ನೋಡಿದರೆ ನಮ್ಮ ಮಯ್ಯಲ್ಲೇ ಸಾವಿರಾರು ಮೊಲಿಕ್ಯುಲಾರ್ ಮಶೀನ್‍ಗಳಿವೆ. ಉದಾಹರಣೆಗೆ, ಹಲವು ಪ್ರೋಟಿನ್ ರಚನೆಗಳು ಒಗ್ಗೂಡಿ ನಮ್ಮ ಮಯ್ಯ ರಚನೆಯ ಅಡಿಪಾಯವಾಗಿರುವ ಜೀವಕೋಶಗಳಲ್ಲಿ ಅಡಕಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಯಂತ್ರಗಳಾಗಿ ಕೆಲಸ ಮಾಡುತ್ತವೆ. ಇನ್ನೂ ಕೆಲವು ರಚನೆಗಳು ರಕ್ತ, ಉಸಿರ್ಗಾಳಿ ಸಾಗಾಣಿಕೆಯ ಕೆಲಸವನ್ನು ಮಾಡುತ್ತವೆ. ಹಾಗಾಗಿ ಮೊಲಿಕ್ಯುಲಾರ್ ಮಶೀನ್ ಗಳೆಂದು ಕರೆಯಲ್ಪಡುವ ಚುಟುಕು ಯಂತ್ರಗಳು ಸ್ವಾಭಾವಿಕವಾಗಿ ಕಾಣಸಿಗುತ್ತವೆ.

ಆದರೆ ಈ ಯಂತ್ರಗಳು ನಮಗೆ ಬೇಕಿರುವ ಕೆಲಸವನ್ನು ಮಾಡಲಾರವು, ತಮಗೆ ಗೊತ್ತುಪಡಿಸಿದ ಸ್ವಾಭಾವಿಕ ಕೆಲಸವನ್ನಷ್ಟೇ ಅವು ಮಾಡಬಲ್ಲವು. ನಮಗೆ ಬೇಕಾದ, ನಾವು ಗೊತ್ತುಪಡಿಸಿದ ಕೆಲಸವನ್ನೇ ಮಾಡಬಲ್ಲ ಯಂತ್ರಗಳು ಬೇಕಿದ್ದರೆ, ನಾವೇ ಅಂತಹ ಚುಟುಕು ಯಂತ್ರಗಳನ್ನು ಉಂಟು ಮಾಡುವುಂತೆ ಆಗಬೇಕು. ಇದೇ ಮೊಲಿಕ್ಯುಲಾರ್ ಮಶೀನ್ ಕುರಿತಾಗಿ ನಮ್ಮ ಮುಂದಿರುವ ಸವಾಲು.

ಮೊಲಿಕ್ಯುಲಾರ್ ಮಶೀನ್ಸ್  (Molecular Machine) ಮಾಡುವುದು ಹೇಗೆ?:
ಈ ಮೇಲೆ ತಿಳಿದುಕೊಂಡಂತೆ, ಮೊಲಿಕ್ಯುಲಾರ್ ಮಶೀನ್ ತುಂಬಾನೇ ಚಿಕ್ಕದಾಗಿರುವುದರಿಂದ ನಮ್ಮ ಕೈಯಿಂದಾಗಲಿ ಇಲ್ಲವೇ ನಾವು ಕಟ್ಟಿರುವ ಇನ್ನೊಂದು ಯಂತ್ರದಿಂದಾಗಲಿ ತಯಾರಿ ಮಾಡಲು ಆಗದು. ಹಾಗಿದ್ದರೆ ಈ ಚುಟುಕು ಅಣುಕೂಟ ಯಂತ್ರಗಳ ಕಟ್ಟಣೆಯ ಕೆಲಸವನ್ನು ಮಾಡುವುದು ಹೇಗೆ? ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಗೆಲುವು ಕಂಡವರೇ ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಅರಿಗರಲ್ಲಿ ಒಬ್ಬರಾದ ಫ್ರಾನ್ಸ್ ದೇಶದ ಜೀನ್-ಪಿರ್ ಸಾವೆಜ್ (Jean-Pierre Sauvage). 1983 ರಲ್ಲಿ ಇವರು ತಾಮ್ರದ ಗುಣವನ್ನು ಬಳಸಿಕೊಂಡು ಅಣುಕೂಟದ ಸರಪಳಿಯೊಂದನ್ನು ಮಾಡಿ ತೋರಿಸಿದರು. ಈ ಕಟ್ಟಣೆಯ ಹಂತಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

Molicular_Machine_1

ಎರಡು ಅಣುಕೂಟಗಳು ಒಂದಕ್ಕೊಂದು ಕೊಂಡಿಯಾಗಲು ತಾಮ್ರದ ಹುರುಪಿಯನ್ನು (copper ion) ಸಾವೆಜ್ ಬಳಸಿಕೊಂಡರು. ತಾಮ್ರದ ಹುರುಪಿಯೆಡೆಗೆ ಎರಡು ಅಣುಕೂಟಗಳನ್ನು ತಂದಾಗ, ಅವು ಒಂದಕ್ಕೊಂದು ಸೆಳೆಯಲ್ಪಟ್ಟು ಉಂಗುರದ ಆಕಾರದಂತೆ ಕೊಂಡಿಯಾದವು. ಇಂತಹ ಹಲವು ಉಂಗುರುಗಳನ್ನು ಸೇರಿಸಿದರೆ ಉಂಗುರದ ಸರಪಳಿಯೊಂದನ್ನು ಆಗ ಮಾಡಬಹುದಾಯಿತು. (ಕಾರಿನ ಕಟ್ಟಣೆಗೆ ಹೋಲಿಸಿದರೆ ಗಾಲಿಯಂತಹ ರಚನೆ ಈಗ ತಯಾರಾಯಿತು ಅನ್ನಬಹುದು)

1991 ನೇ ಇಸ್ವಿಯಲ್ಲಿ ಈ ನಿಟ್ಟಿನಲ್ಲಿ ಮುಂದಿನ ಮೈಲಿಗಲ್ಲು ಉಂಟಾಯಿತು. ಈ ಮೈಲಿಗಲ್ಲನ್ನು ನೆಟ್ಟವರೇ ಈ ಬಾರಿಯ ನೊಬೆಲ್ ಪಡೆದವರಲ್ಲಿ ಎರಡನೆಯವರಾದ ಸ್ಕಾಟ್‍ಲೆಂಡಿನ ಜೇಮ್ಸ್ ಪ್ರೇಸರ್ ಸ್ಟೊಡಾರ್ಟ್ (James Fraser Stoddart). ಅಣುಕೂಟಗಳ ಉಂಗುರಾಕಾರದ ಸರಪಳಿಯನ್ನು ಒಂದು ತಿರುಗೋಲಿನ (axle) ರಚನೆಯಲ್ಲಿ ಹಿಂದೆ ಮುಂದೆ ಸಾಗುವಂತೆ ಮಾಡುವಲ್ಲಿ ಸ್ಟೊಡಾರ್ಟ್ ಗೆಲುವು ಕಂಡರು.

ಕಾವು ನೀಡಿದಾಗ ಅಣುಕೂಟಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಹೀಗೆ ಹೊಡೆಯುವ ಡಿಕ್ಕಿಯನ್ನು ಒಂದು ಗೊತ್ತುಪಡಿಸಿದ ರೀತಿಯಲ್ಲಿ ಉಂಟುಮಾಡುವಂತಾದರೆ ತಿರುಗೋಲಿನಲ್ಲಿ ಸಾಗಬಲ್ಲ ಅಣುಕೂಟಗಳ ರಚನೆಯನ್ನು ಪಡೆಯಬಹುದೆಂದು ಸ್ಟೊಡಾರ್ಟ್ ತೋರಿಸಿದರು. (ಕಾರಿನ ಕಟ್ಟಣೆಗೆ ಹೋಲಿಸಿದರೆ ಗಾಲಿಗಳು ತಿರುಗೋಲಿನಲ್ಲಿ ಸಾಗುವಂತಹ ರಚನೆ ಈಗ ತಯಾರಾಯಿತು ಅನ್ನಬಹುದು). ಇಂತಹ ರಚನೆಯೊಂದನ್ನು ಕೆಳಗಿನ ಓಡುಚಿತ್ರದಲ್ಲಿ ನೋಡಬಹುದು.fig_ke_16_molecularelevator1999 ರಲ್ಲಿ ನೆದರ್ ಲ್ಯಾಂಡಿನ ಬರ್ನಾರ್ಡ್ ಎಲ್ ಫೆರಿಂಗಾ (Bernard L. Feringa) ಎಂಬುವವರು ಮೇಲಿನ ಎರಡು ಮೈಲಿಗಲ್ಲುಗಳನ್ನು ಬಳಸಿಕೊಂಡು, ಜಗತ್ತಿನ ಮೊಟ್ಟಮೊದಲ ಅಣುಕೂಟಗಳ ಕಿರುಕಾರೊಂದನ್ನು ಮಾಡಿ ತೋರಿಸಿದರು. ಈ ಸಾಧನೆಗಾಗಿ ಮೇಲಿನ ಇಬ್ಬರು ಅರಿಗರ ಜತೆಯಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ಫೆರಿಂಗಾ ಅವರಿಗೆ ಸಂದಿದೆ. ಫೆರಿಂಗಾ ಅವರು ಮುಂದಿಟ್ಟ ಅಣುಕೂಟಗಳು ಕಲೆತುಕೊಳ್ಳುವಂತೆ ಮಾಡುವ ಬಗೆಯನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದು.

Molicular_Machine_3

ಈ ಬಗೆಯಲ್ಲಿ ಹಲವು ಅಣುಕೂಟಗಳನ್ನು ಕಲೆಯುವಂತೆ ಮಾಡುತ್ತಾ ಹೋದರೆ, ಅಣುಕೂಟಗಳ ಕಿರುಕಾರೊಂದನ್ನೇ ಮಾಡಬಹುದೆಂದು ಫೆರಿಂಗಾ ತೋರಿಸಿದರು. ಈ ಕಿರುಕಾರಿನ (nanocar) ತೋರುಚಿತ್ರವನ್ನು ಕೆಳಗೆ ನೋಡಬಹುದು.

nanocar_Feringa

ಹೀಗೆ ಮೂವರು ಅರಿಗರು ಬೇರೆ ಬೇರೆ ಕಾಲಘಟ್ಟದಲ್ಲಿ ಅಣುಕೂಟಗಳ ಯಂತ್ರಗಳನ್ನು ಅಂದರೆ ಮೊಲಿಕ್ಯುಲಾರ್ ಮಶೀನ್‍ಗಳನ್ನು ಉಂಟುಮಾಡಬಹುದಾದ ಬಗೆಯನ್ನು ತೋರಿಸಿದ್ದು, ಇದಕ್ಕಾಗಿ 2016 ನೇ ಸಾಲಿನ ಕೆಮಿಸ್ಟ್ರಿ ಕವಲಿನ ನೊಬೆಲ್ ಪ್ರಶಸ್ತಿಯನ್ನು ಈ ಮೂವರಿಗೂ ಒಟ್ಟಾಗಿ ನೀಡಲಾಗಿದೆ.

Nobel_luerates

ಈ ಚುಟುಕು ಯಂತ್ರಗಳ ಉಪಯೋಗವೇನು?:

ಕಡುಕಿರಿದಾದ ಯಂತ್ರಗಳನ್ನು ಮಾಡುವ ಬಗೆಯನ್ನೇನೋ ಅರಿಗರು ಮುಂದಿಟ್ಟರು. ಆದರೆ ಈ ಯಂತ್ರಗಳ ಉಪಯೋಗವೇನು? ಅನ್ನುವುದು ಸಹಜವಾದ ಪ್ರಶ್ನೆ. ಈ ಪ್ರಶ್ನೆಗೆ ನೇರವಾಗಿ ಜಾರಿಗೆ ತರಬಲ್ಲ ಬಳಕೆಗಳಿವೆ ಅನ್ನುವ ಉತ್ತರ ಇಂದಿಗೆ ದೊರೆಯದಿದ್ದರೂ, ಮುಂದಿನ ದಿನಗಳಲ್ಲಿ ಇದರ ಬಳಕೆಯ ಹರವು ತುಂಬಾ ಹೆಚ್ಚಲಿದೆ ಅನ್ನುವುದು ಬಲ್ಲವರ ಮಾತು.

ಉದಾಹರಣೆಗೆ, ಕ್ಯಾನ್ಸರ್ ಹುಣ್ಣನ್ನು ಅದಿರುವಲ್ಲಿಗೆ ಹೋಗಿ ಕೊಲ್ಲಬಹುದಾದ ಇಲ್ಲವೇ ಅದನ್ನು ಅಲ್ಲಿಂದ ಕತ್ತರಿಸಿ ಹೊರತರಬಹುದಾದ ಮೊಲಿಕ್ಯುಲಾರ್ ಮಶೀನ್ ಮಾಡುವಂತಾದರೆ ರೋಗಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಂತಾಗುತ್ತದೆ. ಹಾಗೆನೇ ಇಂದಿನ ಟ್ರಾನಿಸ್ಟರ್, ಕೆಪ್ಯಾಸಿಟರ್ ಮುಂತಾದ ಬಿಡಿಭಾಗಗಳ ಬದಲಾಗಿ ಅಣುಕೂಟಗಳ ಯಂತ್ರಗಳನ್ನೇ ಬಳಸುವಂತಾದರೇ ಇಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ಗಳ ಕವಲಿನಲ್ಲಿ ಕ್ರಾಂತಿಯನ್ನೇ ಉಂಟುಮಾಡಿದಂತಾಗುವುದು.

ಒಟ್ಟಿನಲ್ಲಿ ಅಣುಕೂಟಗಳ ಚುಟುಕು ಯಂತ್ರಗಳು ಮುಂದಿನ ದಿನಗಳಲ್ಲಿ ಅರಿವಿನ ಹೆಬ್ಬಾಗಿಲನ್ನೇ ನಮ್ಮ ಮುಂದೆ ತೆರಿದಿಡಬಹುದು. ಈ ಹೆಬ್ಬಾಗಿಲನ್ನು ತೋರಿದ ಅರಿಗರಿಗೆ ಈ ವರುಷದ ನೊಬೆಲ್ ಪ್ರಶಸ್ತಿ ದೊರೆತದ್ದು ನಲಿವಿನ ಸಂಗತಿ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: Royal Swedish Academy of Science, Washington PostWikipedia)