ಜೇನುಹುಳದ ಬಾಳ್ಮೆಸುತ್ತು

ರತೀಶ ರತ್ನಾಕರ.

ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಷ್ಟು ಹಲತನವಿದೆ. ಒಂದು ಜೇನಿನ ಗೂಡಿನಲ್ಲಿ ಒಡತಿ, ಗಂಡು ಜೇನು ಮತ್ತು ದುಡಿಮೆಗಾರ ಜೇನುಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ. ಎಲ್ಲಾ ಜೇನುಹುಳಗಳು ಮೊಟ್ಟೆ, ಮರಿಹುಳ (larvae), ಗೂಡುಹುಳ (pupa) ಮತ್ತು ಜೇನುಹುಳವೆಂಬ ನಾಲ್ಕು ಹಂತಗಳಲ್ಲಿ ಜೇನುಗೂಡಿನಲ್ಲಿ ಬದುಕು ನಡೆಸುತ್ತಿರುತ್ತವೆ.

ಜೇನುಹುಳದ ಬಾಳ್ಮೆಸುತ್ತು (Life cycle):

ಜೇನುಗೂಡಿನಲ್ಲಿ ಸಾಕಷ್ಟು ಹೆಣ್ಣು ಜೇನುಹುಳಗಳಿದ್ದರೂ ಒಡತಿ ಜೇನುಹುಳವು ಮಾತ್ರ ಎರುಬುಳ್ಳ (fertile) ಹುಳವಾಗಿದೆ. ಒಡತಿ ಜೇನು ಮಾತ್ರ ಮೊಟ್ಟೆಗಳನ್ನಿಡುವ ಕಸುವನ್ನು ಹೊಂದಿದೆ. ಜೇನುಹುಳು ಎರಡು ಬಗೆಯ ಮೊಟ್ಟೆಯಿಂದ ಹುಟ್ಟಬಹುದು;
1) ಹೆಣ್ಣು ಗಂಡಿನೊಡನೆ ಕೂಡುವಿಕೆಯ ಬಳಿಕ ಇಟ್ಟ ಮೊಟ್ಟೆ 2) ಹೆಣ್ಣು ಗಂಡಿನೊಂದಿಗೆ ಕೂಡದೆಯೇ ಇಟ್ಟ ಮೊಟ್ಟೆ
ಮೊದಲ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಯಾವಾಗಲೂ ಹೆಣ್ಣು ಜೇನುಗಳಾಗಿರುತ್ತವೆ ಅದೇ ಎರಡನೇ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಗಂಡಾಗಿರುತ್ತವೆ; ಒಡತಿ ಹುಳವು ಗಂಡು ಹುಳದೊಡನೆ ಕೂಡಿದಾಗ ಅದರ ಗಂಡು ಬಿತ್ತುಗಳನ್ನು ಪಡೆದು ತನ್ನಲ್ಲಿ ಅಡಗಿಸಿಟ್ಟುಕೊಳ್ಳುತ್ತದೆ. ಯಾವಾಗ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸಬೇಕು ಮತ್ತು ಯಾವಾಗ ಗಂಡು ಜೇನುಗಳನ್ನು ಅನ್ನುವುದನ್ನು ಒಡತಿ ಜೇನು ತೀರ್ಮಾನಿಸುತ್ತದೆ. ಹೆಣ್ಣು ಜೇನುಹುಳುಗಳು ಬೇಕೆಂದಾಗ ಒಡತಿ ಜೇನು ತನ್ನಲ್ಲಿ ಕೂಡಿಟ್ಟುಕೊಂಡಿರುವ ಗಂಡುಬಿತ್ತುಗಳನ್ನು(sperm) ತನ್ನ ಮೊಟ್ಟೆಯೊಡನೆ ಬೆರಸಿ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸುತ್ತದೆ. ಒಡತಿ ಜೇನು ಗಂಡು ಜೇನುಹುಳಗಳನ್ನು ಹುಟ್ಟಿಸಬೇಕೆಂದಾಗ ಗಂಡುಬಿತ್ತುಗಳೊಂದಿಗೆ ಬೆರಸದೆಯೇ ಬರೀ ಮೊಟ್ಟೆಗಳನ್ನು ಇಡುತ್ತದೆ!

ಒಡತಿ ಜೇನುಹುಳವು ಗೂಡಿನಲ್ಲಿ ಮೊಟ್ಟೆಗಳನಿಟ್ಟ ಮೂರು ದಿನಗಳ ಬಳಿಕ ಮೊಟ್ಟೆಯೊಡೆದು ಮರಿಹುಳು(larvae) ಹೊರಗಡೆ ಬರುತ್ತದೆ. ಈ ಮರಿಹುಳಗಳಿಗೆ ದುಡಿಮೆಗಾರ ಜೇನುಹುಳಗಳು ಬೇಕಾದ ಊಟವನ್ನು ಒದಗಿಸುತ್ತವೆ. ಮರಿಹುಳಗಳಿಗೆ ಒದಗಿಸುವ ಊಟವು ‘ಜೇನುಗಂಜಿ‘ (Royal jelly) ಮತ್ತು ಜೇನುರೊಟ್ಟಿ (Bee Bread) ಆಗಿರುತ್ತದೆ. ಹೆಚ್ಚು ಮುನ್ನುಗಳಿರುವ (protein) ಹೂವಿನ ಬಂಡು (pollen), ಜೇನುತುಪ್ಪ ಮತ್ತು ಜೇನುಹುಳಗಳೇ ಹೊರಹಾಕುವ ದೊಳೆ(enzyme)ಗಳನ್ನು ಸೇರಿಸಿ ಜೇನುಗಂಜಿಯನ್ನು ಈ ದುಡಿಮೆಗಾರ ಹುಳಗಳು ಅಣಿಮಾಡುತ್ತವೆ. ಜೇನುರೊಟ್ಟಿ ಎಂಬುದನ್ನು ಜೇನುತುಪ್ಪ ಮತ್ತು ಹೂವಿನ ಬಂಡನ್ನು ಸೇರಿಸಿ ಹುಳಗಳು ತಯಾರಿಸಿರುತ್ತವೆ.

ಹೀಗೆ ದುಡಿಮೆಗಾರ ಹುಳಗಳಿಂದ ಆರೈಕೆ ಮಾಡಿಸಿಕೊಂಡ ಮರಿಹುಳಗಳು ಬೆಳೆಯುತ್ತಿದ್ದಂತೆ, ಅವುಗಳ ಗೂಡುಗಳನ್ನು ದುಡಿಮೆಗಾರ ಹುಳಗಳು ಮೇಲಿನಿಂದ ಮೇಣವನ್ನು ಬಳಸಿ ಮುಚ್ಚುತ್ತವೆ, ಇದು ಮರಿಹುಳಗಳನ್ನು ಹೊರಗಿನ ತೊಂದರೆಗಳಿಂದ ಕಾಪಾಡುತ್ತದೆ ಮತ್ತು ಅವುಗಳ ಬೆಳವಣಿಗೆಗೆ ಬೇಕಾದ ಬಿಸುಪನ್ನು ಕಾದುಕೊಳ್ಳುತ್ತದೆ. ಮುಚ್ಚಿದ ಗೂಡಿನೊಳಗಿರುವ ಮರಿಹುಳ ಮತ್ತಷ್ಟು ಬೆಳೆದು ಗೂಡುಹುಳದಹಂತಕ್ಕೆ ಹೋಗುತ್ತದೆ. ಬಳಿಕ ಗೂಡುಹುಳದಿಂದ ಜೇನುಹುಳ ಹೊರಗೆ ಬರುತ್ತದೆ. ಇದು ಗೂಡಿನ ಮುಚ್ಚನ್ನು ಒಡೆದು ಹೊರಬಂದು ಉಳಿದ ಹುಳಗಳೊಡನೆ ಬೆರೆತು ಬೆಳೆಯುತ್ತದೆ.

ಮೊಟ್ಟೆಯಿಂದ ಒಡತಿ, ಗಂಡುಹುಳ ಮತ್ತು ದುಡಿಮೆಗಾರ ಹುಳಗಳು ಆಗುವ ಬಗೆಯನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು:

ಒಡತಿ ಜೇನುಹುಳ:

ದುಡಿಮೆಗಾರ ಜೇನುಹುಳಗಳು ಯಾವ ಮರಿಹುಳವು ಒಡತಿ ಜೇನುಹುಳವಾಗಬೇಕೆಂದು ಆರಿಸುತ್ತವೆ. ಹಾಗಾಗಿ, ಒಡತಿಯಾಗುವ ಆ ಮರಿಹುಳಕ್ಕೆ ಹೆಚ್ಚು ಜೇನುಗಂಜಿಯನ್ನು ಒದಗಿಸುತ್ತವೆ. ತನ್ನ ಮರಿಹುಳದ ಹಂತದ ಕೊನೆಯವರೆಗೂ ಒಡತಿಯು ಊಟವನ್ನು ಪಡೆಯುತ್ತದೆ. ಇದು ಒಡತಿಯ ಹೆರುವ ಅಂಗಗಳು ಮತ್ತು ಸುರಿಗೆ(hormone)ಗಳ ಬೆಳವಣಿಗೆಗೆ ನೆರವಾಗುತ್ತದೆ. ಒಡತಿಯು ದುಡಿಮೆಗಾರ ಹುಳಕ್ಕಿಂತ ಒಂದೂವರೆ ಪಟ್ಟು ದೊಡ್ಡದಿರುತ್ತದೆ. ತನ್ನ ಬಾಳಿನುದ್ದಕ್ಕೂ ಇದು ಜೇನುಗಂಜಿಯನ್ನು ತಿಂದೇ ಬದುಕುತ್ತದೆ.

ಮೊಟ್ಟೆಯೊಡೆದು ಹೊರಬರುವ ಹೊಸ ಒಡತಿ ಹುಳವು ಮೊದಲು ಮಾಡುವ ಕೆಲಸವೆಂದರೆ, ಉಳಿದ ಗೂಡುಗಳಿಗೆ ಹೋಗಿ ಅಲ್ಲಿ ಯಾವುದಾದರು ಒಡತಿಯಾಗುತ್ತಿರುವ ಗೂಡುಹುಳವಿದ್ದರೆ ಅದಕ್ಕೆ ತನ್ನ ಕೊಂಡಿಯಿಂದ ನಂಜನ್ನು ಚುಚ್ಚಿ ಸಾಯಿಸುವುದು. ಬಳಿಕ ಜೇನುಗೂಡಿನ ತುಂಬೆಲ್ಲಾ ಓಡಾಡಿ ಆಗುತ್ತಿರುವ ಕೆಲಸವನ್ನು ಗಮನಿಸುತ್ತದೆ. ಈ ಹೊಸ ಒಡತಿ ಹುಳವನ್ನು ಒಮ್ಮೆಲೆ ಒಡತಿ ಹುಳವೆಂದು ಉಳಿದ ದುಡಿಮೆಗಾರ ಹುಳಗಳು ಒಪ್ಪಿಕ್ಕೊಳ್ಳುವುದಿಲ್ಲ. ಒಡತಿ ಎಂದು ಹೇಳಿ ತಿರುಗುತ್ತಿರುವ ಈ ಹುಳವು ಗೂಡಿನಿಂದ ಹೊರಬಂದ ಎರಡು ಮೂರು ವಾರಗಳಲ್ಲಿ ಗಂಡು ಜೇನುಹುಳದ ಜೊತೆ ಒಂದಾಗಿ ಮೊಟ್ಟೆಗಳನ್ನಿಡುವ ಸುಳಿವನ್ನು ನೀಡಬೇಕು. ಆಗ ಮಾತ್ರ ಇದನ್ನು ಒಡತಿ ಎಂದು ಎಲ್ಲರು ಒಪ್ಪಿಕೊಳ್ಳುತ್ತಾರೆ, ಇಲ್ಲವಾದರೆ ದುಡಿಮೆಗಾರ ಹುಳಗಳು ಈ ಒಡತಿಯ ಸಾಯಿಸಿಯೋ, ಓಡಿಸಿಯೋ ಇನ್ನೊಂದು ಒಡತಿ ಹುಳವನ್ನು ನೇಮಿಸುತ್ತವೆ.

ಗೂಡಿನಿಂದ ಹೊರಬಂದ ಆರನೇ ದಿನಕ್ಕೆ ಒಡತಿ ಹುಳವು ಮೈನೆರೆದು ಗಂಡು ಹುಳದೊಡನೆ ಒಂದಾಗಲು ಸಿದ್ಧವಾಗಿರುತ್ತದೆ. ಮೊದಲು ಗೂಡಿನ ಸುತ್ತಲು ಅದು ತನ್ನ ಹಾರಾಟವನ್ನು ಆರಂಬಿಸುತ್ತದೆ. ಗೂಡಿನ ಸುತ್ತ ಹಾರಾಡುವುದರಿಂದ ಅದರ ಕಂಡಗಳು ಬಲಗೊಳ್ಳುತ್ತವೆ. ಕಂಡಗಳು ಬಲಗೊಳ್ಳುವುದರಿಂದ ಹೆಚ್ಚು ಗಂಡು ಹುಳಗಳ ಜೊತೆ ಒಂದಾಗಲು ಸಾಧ್ಯವಾಗುತ್ತದೆ, ಹಾಗಾಗಿ ಹೆಚ್ಚು ಗಂಡುಬಿತ್ತುಗಳನ್ನು (sperms) ಪಡೆದುಕೊಳ್ಳಲು ನೆರವಾಗುತ್ತದೆ. ಇದರಿಂದ ಒಡತಿ ಜೇನುಹುಳದ ಹುಟ್ಟಿಸುವಿಕೆಯ ಕಸುವು ಹೆಚ್ಚುತ್ತದೆ. ಇದು ಎರಡು ವಾರಗಳಲ್ಲಿ ಗಂಡು ಹುಳಗಳ ಜೊತೆ ಒಂದಾಗಿ ಮೊಟ್ಟೆಗಳನ್ನು ಇಡುವ ಸೂಚನೆ ಕೊಡಬೇಕು, ಇಲ್ಲವಾದರೆ ಅದು ಬೇಟದ (sexual) ಹರೆಯ ದಾಟಿದೆ ಎಂದು ಬೇರೆ ಒಡತಿಯನ್ನು ನೇಮಿಸಲಾಗುತ್ತದೆ.

ಒಂದು ಒಡತಿ ಹುಳವು ತನ್ನ ಹರೆಯದಲ್ಲಿ ಸುಮಾರು 40 ಗಂಡು ಹುಳಗಳ ಜೊತೆ ಒಂದಾಗುತ್ತವೆ. ತಾನು ಮೊಟ್ಟೆಯಿಡಲು ಶುರುಮಾಡಿದರೆ ದಿನಕ್ಕೆ 2000 ದ ತನಕ ಮೊಟ್ಟೆಗಳನ್ನಿಡುತ್ತವೆ. ಒಂದು ಒಡತಿ ಹುಳವು ಸುಮಾರು 5 ವರುಶಗಳವರೆಗೆ ಬದುಕಬಲ್ಲದು, ಆದರೆ ವಯಸ್ಸಾದಂತೆ ಅದರೆ ಮೊಟ್ಟೆಗಳನ್ನಿಡುವ ಕಸುವು ಕಡಿಮೆಯಾಗುತ್ತದೆ. ಆಗ ಗೂಡಿನ ಹುಳಗಳು ಅದನ್ನು ಬದಲು ಮಾಡಬಹುದು. ಅಲ್ಲದೇ, ಗಾಳಿಪಾಡು (weather) ಮತ್ತು ಹೊರಗಿನ ತೊಂದರೆಗಳಿಂದಲೂ ಇದು ತನ್ನ ಮೊಟ್ಟೆಯಿಡುವ ಕಸುವನ್ನು ಕಳೆದುಕೊಂಡು ಒಡತಿಯ ಜಾಗದಿಂದ ಕೆಳಗಿಳಿಯಬಹುದು. ಹೊಸ ಒಡತಿಯೊಂದು ಗೂಡಿನಲ್ಲಿ ಬೆಳೆಯುವಾಗ ಈಗಾಗಲೇ ಇರುವ ಒಡತಿ ಏನಾಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈಗಾಗಲೇ ಗೂಡಿನಲ್ಲಿರುವ ಒಡತಿ ತನ್ನ ಮೊಟ್ಟೆಯಿಡುವ ಕಸುವನ್ನು ಚೆನ್ನಾಗಿರಿಸಿಕೊಂಡಿದ್ದರೆ ಅದು ಕೆಲವು ದುಡಿಮೆಗಾರ ಹುಳಗಳ ಒಡನೆ ಇನ್ನೊಂದು ಜಾಗಕ್ಕೆ ಹಾರಿಹೋಗುತ್ತದೆ, ಅಲ್ಲಿ ಮತ್ತೊಂದು ಜೇನುಗೂಡು ಹುಟ್ಟುತ್ತದೆ.

ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳ ಬೆಳವಣಿಗೆಯ ದಿನದ ಹಂತಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

ಗಂಡು ಜೇನುಹುಳ:

ನಾವು ಮೊದಲೇ ತಿಳಿದಂತೆ ಒಡತಿ ಹುಳವು ಗಂಡು ಹುಳದ ಜೊತೆ ಒಂದಾಗದೆ, ಬಸಿರಿಲ್ಲದೆಯೂ ಕೂಡ ಮೊಟ್ಟೆಗಳನ್ನು ಇಡಬಲ್ಲದು. ಇಂತಹ ಬಸಿರಿಲ್ಲದೆ ಇಟ್ಟ ಮೊಟ್ಟೆಗಳಿಂದ ಮೂಡಿದ ಹುಳಗಳೇ ಗಂಡುಹುಳಗಳು. ಮೊಟ್ಟೆಯೊಡೆದ ಹದಿನಾರು ದಿನಗಳಿಗೆ ಗಂಡು ಹುಳವು ಮೈನೆರೆಯುತ್ತದೆ. ಜೇನುಗೂಡಿನ ಸುತ್ತ ಹಾರಾಡುತ್ತ ಒಡತಿ ಜೇನುಹುಳವನ್ನು ಕಂಡು ಒಂದಾಗುವುದು ಇದರ ಕೆಲಸವಾಗಿರುತ್ತದೆ.

ಈ ಗಂಡುಹುಳದ ಮುಕ್ಯ ಕೆಲಸವೇ ಒಡತಿ ಹುಳದ ಜೊತೆ ಒಂದಾಗಿ ಜೇನು ಹುಳದ ಸಂತತಿಯನ್ನು ಬೆಳೆಸುವುದು, ಈ ಕೆಲಸಕ್ಕಾಗಿ ಅದಕ್ಕೆ ದಕ್ಕುವ ಬಹುಮಾನ ಎಂದರೆ ಸಾವು! ಹೌದು, ಒಂದು ಗಂಡು ಜೇನುಹುಳವು, ಒಮ್ಮೆ ಒಡತಿ ಜೇನಿನ ಜೊತೆ ಒಂದಾದ ಕೂಡಲೆ ಅದರ ಬೇಟದ ಅಂಗವು (sexual organ) ಕಿತ್ತು ಒಡತಿ ಹುಳದೊಳಗೆ ಉಳಿಯುತ್ತದೆ. ಇದರಿಂದ ಗಂಡು ಹುಳವು ಸಾವನ್ನಪ್ಪುತ್ತದೆ ಮತ್ತು ಒಡತಿ ಹುಳವು 100% ಗಂಡುಬಿತ್ತನ್ನು (Sperm) ಪಡೆದು ತನ್ನಲ್ಲಿಟ್ಟುಕೊಳ್ಳುತ್ತದೆ. ಗಂಡು ಹುಳಗಳು ಗೂಡಿನಲ್ಲಿ ಯಾವುದೇ ಹೆಚ್ಚಿನ ಕೆಲಸ ಮಾಡುವುದಿಲ್ಲ. ಚಳಿಗಾಲದಲ್ಲಿ ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಯ್ದುಕೊಳ್ಳಲು ಇವು ನೆರವು ನೀಡುತ್ತವೆ ಅದನ್ನು ಬಿಟ್ಟರೆ ಗೂಡುಕಟ್ಟುವುದಾಗಲಿ, ಮೇವು ತರುವುದಾಗಲಿ ಇನ್ನಿತರ ಯಾವ ಕೆಲಸವನ್ನು ಮಾಡುವುದಿಲ್ಲ. ಗಂಡುಹುಳಗಳು ಒಡತಿಯ ಜೊತೆ ಒಂದಾದಾಗ ಸಾಯುತ್ತವೆ, ಇಲ್ಲವೇ ಹಸಿವಿನಿಂದ, ಹೊರಗಿನ ದಾಳಿಯಿಂದ ಸಾಯುತ್ತವೆ.

ದುಡಿಮೆಗಾರ ಹುಳಗಳು:
ಒಡತಿಯು ಗಂಡು ಹುಳಗಳ ಜೊತೆ ಒಂದಾಗಿ ಬಸಿರಾಗಿ ಇಡುವ ಮೊಟ್ಟೆಗಳಿಂದ ಮೂಡಿಬರುವ ಹುಳಗಳೇ ದುಡಿಮೆಗಾರ ಹುಳಗಳು. ಈ ಬಗೆಯಲ್ಲಿ ಹುಟ್ಟುವ ದುಡಿಮೆಗಾರ ಹುಳಗಳು ಹೆಣ್ಣು ಹುಳಗಳೇ ಆಗಿರುತ್ತವೆ. ಒಡತಿ ಮತ್ತು ಗಂಡುಹುಳಕ್ಕಿಂತ ಚಿಕ್ಕದಾಗಿ ಕಾಣುವ ಇವು ಗೂಡನ್ನು ಕಟ್ಟುವುದು, ಮೊಟ್ಟೆಗಳ ಆರೈಕೆ, ಒಡತಿಯ ಆರೈಕೆ, ಗೂಡಿನ ಆರೈಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೂವಿಂದ ಹೂವಿಗೆ ಹಾರಿ ಜೇನನ್ನು ತುಂಬಿಕೊಂಡು ಬಂದು ಕೂಡಿಡುವುದು. ಅದಕ್ಕಾಗಿ ಇವು ನಿಜವಾದ ದುಡಿಮೆಗಾರ ಹುಳಗಳು.

ಗೂಡಿನ ಎಲ್ಲಾ ಕೆಲಸಗಳನ್ನು ನೋಡಿಕೊಂಡು ಎಣಿಕೆಯಲ್ಲಿಯೂ ಕೂಡ ಹೆಚ್ಚಿರುವ ಈ ದುಡಿಮೆಗಾರ ಹುಳಗಳನ್ನು, ‘ಜೇನುಗೂಡಿನ ಬೆನ್ನೆಲುಬು’ ಎಂದು ಕರೆಯುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಗೂಡಿನಲ್ಲೇ ಇರುವ ದುಡಿಮೆಗಾರ ಹುಳಗಳು ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಪಾಡುತ್ತವೆ. ಮೇವಿಗಾಗಿ ಹೆಚ್ಚು ಹಾರಾಟ ನಡೆಸದೇ ಹೋದಲ್ಲಿ ಇವುಗಳು 4-5 ತಿಂಗಳು ಬದುಕುತ್ತವೆ. ಆದರೆ ಮೇವಿಗಾಗಿ ಹೂವಿಂದ ಹೂವಿಗೆ ಹೆಚ್ಚು ತಿರುಗಾಟ ಮಾಡುತ್ತಿದ್ದರೆ ಕೇವಲ 1-2 ತಿಂಗಳು ಮಾತ್ರ ಬದುಕುತ್ತವೆ.
ಹೀಗೆ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳು ತಮ್ಮ ಕೆಲಸಗಳನ್ನು ನಡೆಸುತ್ತ, ಒಂದಕ್ಕೊಂದು ನೆರವಾಗಿ ಜೇನುಗೂಡಿನಲ್ಲಿ ಸಂಸಾರ ನಡೆಸುತ್ತಿರುತ್ತವೆ.

(ಮಾಹಿತಿ ಮತ್ತು ಚಿತ್ರಸೆಲೆ: theholyhabibee.comgetbuzzingaboutbees.com)

ಹಸಿರುಮನೆಯ ಗುಟ್ಟು

ರತೀಶ ರತ್ನಾಕರ.

ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ ಬೆಳವಣಿಗೆಗೆ ಈ ಬಗೆಯ ಬೆಳಸುವಿಕೆ ನೆರವಾಗುತ್ತದೆ ಎಂದು ಅಲ್ಲಲ್ಲಿ ಕೇಳಿರುತ್ತೇವೆ. ಹಾಗದರೆ ಈ ಹಸಿರು ಮನೆಗಳು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತವೆ? ಇದರ ಕೆಲಸವೇನು ಎಂಬುದನ್ನು ಅರಿಯೋಣ ಬನ್ನಿ.

ಹಸಿರುಮನೆಯ ಹಿಂದಿರುವ ಅರಿಮೆ:

ನೇಸರನಿಂದ ನೆಲಕ್ಕೆ ಬೀಳುವ ಬೆಳಕಿನಿಂದಾಗಿ ನೆಲದಲ್ಲಿರುವ ಮಣ್ಣು, ನೀರು ಹಾಗು ಇತರೆ ವಸ್ತುಗಳು ಬಿಸಿಯಾಗುತ್ತವೆ. ಅಂದರೆ ನೇಸರನ ಬೆಳಕಿನ ಶಕ್ತಿಯನ್ನು ಹೀರಿಕೊಂಡು ಅದೇ ಶಕ್ತಿಯನ್ನು ಬಿಸಿಯ ರೂಪದಲ್ಲಿ ಹೊರಬಿಡುತ್ತವೆ ಹೀಗೆ ಹೊರಸೂಸುವ ಬಿಸಿಯು ತಿಳಿಗೆಂಪು ಕದಿರಾಗಿರುತ್ತದೆ (infrared rays). ನೇಸರನ ಬೆಳಕಿನ ಅಲೆಯಗಲ (wavelength) ಮತ್ತು ಮಣ್ಣು/ನೀರು ಹೊರಬಿಡುವ ತಿಳಿಗೆಂಪು ಕದಿರಿನ (infrared rays) ಅಲೆಯಗಲ ಬೇರೆ ಬೇರೆಯಾಗಿರುತ್ತದೆ. ಈ ಅಲೆಯಗಲದ ಆದಾರದ ಮೇಲೆ ಈ ಕಿರಣಗಳು ಕೆಲವು ವಸ್ತುಗಳ ಮೂಲಕ ಹಾದುಹೋಗಲಾರವು. ಉದಾಹರಣೆಗೆಗೆ , ನೇಸರನ ಬೆಳಕು ಗೋಡೆಗಳ ಮೂಲಕ ಹಾದುಹೋಗಲಾಗದು ಆದರೆ ರೇಡಿಯೋ ಅಲೆಗಳು ಗೋಡೆಗಳಮೂಲಕ ಹಾದುಹೋಗವುವು ಅದಕ್ಕೆ ಕಾರಣ ಅವುಗಳ ಅಲೆಯಗಲವೂ ಒಂದು. ಹೀಗೆ ನೇಸರನ ಬೆಳಕು ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗುವುದು ಆದರೆ ತಿಳಿಗೆಂಪು ಕದಿರು ತಮ್ಮ ಅಲೆಯಗಲದಿಂದಾಗಿ ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗಲಾರವು.

ಒಂದು ಹಸಿರುಮನೆಯು ಕಾಲಿ ಕೋಣೆಯಂತಿದ್ದು ಅದರ ಗೋಡೆ ಹಾಗು ಮಾಡನ್ನು ಗಾಜು ಇಲ್ಲವೇ ಪ್ಲಾಸ್ಟಿಕ್ ನಿಂದ ಕಟ್ಟಿರುತ್ತಾರೆ. ಈ ಗಾಜು/ಪ್ಲಾಸ್ಟಿಕ್ ನಿಂದ ನೇಸರನ ಬೆಳಕು ಹರಿದು ಹಸಿರುಮನೆಯ ಒಳಗೆ ಬರುತ್ತದೆ. ಹೀಗೆ ಒಳಗೆ ಬಂದ ನೇಸರನ ಬೆಳಕು ಮಣ್ಣಿನ ಮೇಲ್ಬಾಗ ಇಲ್ಲವೇ ಗಿಡಗಳಲ್ಲಿರುವ ತೇವವನ್ನು (humidity) ಆರಿಸುತ್ತದೆ ಮತ್ತು ಬಿಸಿಯನ್ನು ಅಂದರೆ ತಿಳಿಗೆಂಪು ಕದಿರನ್ನು (infrared rays) ಹೊರಹಾಕತೊಡಗುತ್ತವೆ.

ಹಸಿರುಮನೆಯ ಒಳಗಿರುವ ಮಣ್ಣು ನೇಸರನ ಬೆಳಕು ಬಿದ್ದೊಡನೆ ಬಿಸಿಯಾಗಿ ಆ ಬಿಸಿಯನ್ನು ಮಣ್ಣಿನ ಮೇಲ್ಬಾಗದಲ್ಲಿರುವ ಗಾಳಿಗೆ ಸಾಗಿಸುತ್ತದೆ. ಇದರಿಂದ ಮಣ್ಣಿನ ಮೇಲ್ಭಾಗದ ಗಾಳಿ ಮೊದಲು ಬಿಸಿಯಾಗತೊಡಗುತ್ತದೆ. ಹೀಗೆ ಬಿಸಿಯಾದ ಗಾಳಿಯ ದಟ್ಟಣೆ (Density) ಕಡಿಮೆಯಿರುವುದರಿಂದ ಇದು ಹರಡಿಕೊಂಡು ನೆಲದಿಂದ ಮೇಲೇರುವುದು ಅದರ ಗುಣ ಹಾಗಾಗಿ ಬಿಸಿಗಾಳಿಯು ಹರಡಿಕೊಂಡು ಮೇಲೇರುತ್ತದೆ. ಹಸಿರುಮನೆಯ ಚಾವಣಿಯ ಹತ್ತಿರದ ತಂಪನೆಯಗಾಳಿಯು ಬಿಸಿಗಾಳಿಗಿಂತ ಹೆಚ್ಚು ದಟ್ಟಣೆ ಹೊಂದಿರುವುದರಿಂದ ಇದು ಕೆಳಭಾಗಕ್ಕೆ ಬರುತ್ತದೆ. ಈ ತಂಪುಗಾಳಿಯು ಮಣ್ಣಿನಿಂದ ಹೊರಬರುತ್ತಿರುವ ಬಿಸಿಯನ್ನು ಹೀರಿಕೊಂಡು ಬಿಸಿಗಾಳಿಯಾಗಿ ಮತ್ತೆ ಮೇಲೇರತೊಡಗುತ್ತದೆ. ಹೀಗೆ ಮಣ್ಣಿನ ಮೇಲ್ಬಾಗದ ಕಡೆಯಿಂದ ಹಸಿರುಮನೆಯ ಚಾವಣಿಯ ಕಡೆಗೆ ಗಾಳಿಯು ಬಿಸಿಯಾಗತೊಡಗುತ್ತದೆ.

ಹಸಿರುಮನೆಗೆ ಬಳಸುವ ಗಾಜು/ಪ್ಲಾಸ್ಟಿಕ್‍ನ ಗುಣವೆಂದರೆ ಅದು ನೇಸರನ ಬೆಳಕನ್ನು ತನ್ನ ಮೂಲಕ ಹರಿಯಲು ಬಿಡುತ್ತದೆ ಆದರೆ ಹೆಚ್ಚು ಅಲೆಯಗಲ ಹೊಂದಿರುವ ಕಿರಣಗಳನ್ನು ಅಂದರೆ infrared rays ನ್ನು ತನ್ನ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಮೊದಲೇ ತಿಳಿದಿದ್ದೇವೆ. ಹೀಗಾಗಿ ಮಣ್ಣಿನಿಂದ ಹೊರಬಂದ ಬಿಸಿಯು ಹಸಿರುಮನೆಯ ಗಾಳಿಗೆ ಸೇರಿ ಗಾಜು/ಪ್ಲಾಸ್ಟಿಕ್ ಮೂಲಕ ಹೊರಹೋಗಲಾಗದೆ ಇರುತ್ತದೆ. ಇದರಿಂದ ಹಸಿರುಮನೆಯ ಒಳಗಿನ ಗಾಳಿಯು ಬಿಸಿಯಾಗಿ, ಹಸಿರುಮನೆ ಹೊರಗಿನ ಗಾಳಿಯ ಬಿಸುಪಿಗಿಂತ (temperature) ಹೆಚ್ಚಿನ ಬಿಸುಪನ್ನು ಹೊಂದಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಹಸಿರುಮನೆಯ ಒಳಗೆ ಯಾವಾಗಲೂ ಹೊರಗಿನ ಗಾಳಿಪಾಡಿಗಿಂತ ಹೆಚ್ಚಿನ ಬಿಸುಪು ಇರುತ್ತದೆ. ಈ ಹೆಚ್ಚಿನ ಬಿಸುಪು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದೆ ನೋಡೋಣ.

ಹಗಲಿನ ಹೊತ್ತು ನೇಸರನ ಬೆಳಕಿನಿಂದ ಹಸಿರುಮನೆಯ ಒಳಗೆ ಹೆಚ್ಚಿನ ಬಿಸುಪು ಇದ್ದರೆ ಇನ್ನೂ ಇರುಳಿನ ಹೊತ್ತಿನಲ್ಲಿ ಇಲ್ಲಿ ಬೆಚ್ಚಗಿನ ಗಾಳಿ ಇರುತ್ತದೆ. ಇದಕ್ಕೆ ಕಾರಣ, ಹಗಲೆಲ್ಲಾ ನೇಸರನ ಬೆಳಕಿನಿಂದ ಬಿಸಿಯಾದ ಹಸಿರು ಮನೆಯೊಳಗಿನ ಮಣ್ಣು ತನ್ನಲ್ಲಿರುವ ಬಿಸುಪನ್ನು ರಾತ್ರಿಯ ಹೊತ್ತು ಹೊರಗಾಳಿಗೆ ಬಿಡಲಾರಂಬಿಸುತ್ತದೆ. ಹಾಗು ಈ ಬಿಸಿಯನ್ನು ಗಾಜು/ಪ್ಲಾಸ್ಟಿಕ್ಕಿನ ಗೊಡೆಯ ನೆರವಿನಿಂದ ಹಸಿರುಮನೆಯ ಒಳಗೇ ಹಿಡಿದಿಡಿಲಾಗುತ್ತದೆ. ಹಾಗಾಗಿ ಹಸಿರು ಮನೆಯ ಒಳಗಿನ ಬಿಸುಪು ಹೊರಗಿನ ಗಾಳಿಯ ಬಿಸುಪಿಗಿಂತ ಹೆಚ್ಚಿರುತ್ತದೆ ಮತ್ತು ಇದು ಗಿಡಗಳ ಸುತ್ತಲಿನ ಗಾಳಿಯನ್ನು ಕೂಡಲೇ ತಂಪಾಗುವುದನ್ನು ತಡೆಯುತ್ತದೆ.

ಗಿಡಗಳ ಬೆಳವಣಿಗೆಗೆ ಹಸಿರುಮನೆ ಹೇಗೆ ನೆರವಾಗುತ್ತದೆ?
ನೇಸರನ ಬೆಳಕನ್ನು ಹಸಿರುಮನೆಯ ಒಳಗೆ ಹಾಯಿಸಿ ಅದರಿಂದ ಬಿಸಿಯಾದ ಮಣ್ಣು/ಗಿಡ/ನೀರಿನಿಂದ ಹೊರಬರುವ ತಿಳಿಗೆಂಪು ಕದಿರನ್ನು (infrared rays) ಹಿಡಿದಿಟ್ಟುಕೊಳ್ಳುವುದರಿಂದ ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.

 

1. ಹೆಚ್ಚಿನ ಬಿಸುಪು ಗಿಡದ ಬೆಳವಣಿಗೆಗೆ ಉಪಕಾರಿ:
ಪ್ರತಿಯೊಂದು ಮರಗಿಡಗಳು ಸೂಲುಗೂಡುಗಳಿಂದ (cell) ಆಗಿರುತ್ತದೆ. ಈ ಸೂಲುಗೂಡುಗಳಲ್ಲಿ ದಿನಕ್ಕೆ ನೂರಾರು ಬಗೆಯ ರಾಸಾಯನಿಕ ಚಟುವಟಿಕೆಗಳು (chemical reaction) ನಡೆಯುತ್ತಿರುತ್ತವೆ, ಇವು ಸೂಲುಗೂಡುಗಳ ಬೆಳವಣಿಗೆಗೆ ನೆರವಾಗುತ್ತವೆ. ಹೀಗೆ ನಡೆಯುವ ರಾಸಾಯನಿಕ ಚಟುವಟಿಕೆಗಳಿಗೆ ದೊಳೆಗಳು (enzymes) ನೆರವನ್ನು ನೀಡುತ್ತವೆ. ಈ ದೊಳೆಗಳು ರಾಸಾಯನಿಕ ಚಟುವಟಿಕೆಗೆ ಬಿರುಗೆ (catalyst)ಯಂತೆ ಕೆಲಸ ಮಾಡುತ್ತವೆ. ಗಿಡದ ಸೂಲುಗೂಡುಗಳ ರಾಸಾಯನಿಕ ಚಟುವಟಿಕೆಯಲ್ಲಿ ‘ಬೆಳಕಿನ ಅಡುಗೆ ‘(photosynthesis) ಕೂಡ ಒಂದು. ಹೀಗೆ ಬೆಳಕಿನ ಒಂದುಗೆಗೆ ನೆರವಾಗುವ ದೊಳೆಗಳು ಕೆಲವು ಹುಳಿಯಳತೆ (pH) ಮತ್ತು ಬಿಸುಪಿನಲ್ಲಿ ಚೆನ್ನಾಗಿ ಕೆಲಸಮಾಡುತ್ತವೆ. ಅತಿ ಕಡಿಮೆ ಹುಳಿಯಳತೆ ಮತ್ತು ಕಡಿಮೆ ಬಿಸುಪು ಇದ್ದರೆ ಈ ದೊಳೆಗಳ ಕೆಲಸ ಕುಂದುತ್ತದೆ. ಹಾಗೆಯೇ ಅತಿ ಹೆಚ್ಚು ಹುಳಿಯಳತೆ ಮತ್ತು ಬಿಸುಪು ಇದ್ದರೂ ಈ ದೊಳೆಗಳು ತಮ್ಮ ಕೆಲಸಮಾಡಲಾರವು ಮತ್ತು ಸಾಯುಲೂ ಬಹುದು. ಹಾಗಾಗಿ, ಈ ದೊಳೆಗಳು ಚೆನ್ನಾಗಿ ತಮ್ಮ ಬಿರುಗೆಯ ಕೆಲಸವನ್ನು ಚೆನ್ನಾಗಿ ಮಾಡಲು ಒಂದು ಒಳ್ಳೆಯ ಬಿಸುಪು ಇರಬೇಕಾಗುತ್ತದೆ. ದೊಳೆಗಳ ಬಗೆಯ ಆಧಾರದ ಮೇಲೆ ಅವು ಹೆಚ್ಚು ಕೆಲಸ ಮಾಡುವ ಬಿಸುಪು ಬೇರೆ ಬೇರೆಯಾಗಿರುತ್ತದೆ.

ಹಸಿರುಮನೆಯ ಒಳಗೆ ಹೊರಗಿನ ಗಾಳಿಗಿಂತ ಹೆಚ್ಚಿನ ಬಿಸುಪು ಇರುವುದರಿಂದ ಗಿಡದ ಸೂಲುಗೂಡುಗಳ ದೊಳೆಗಳು ಈ ಬಿಸುಪಿನಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ನಡೆಸಿ ಬೆಳಕಿನ ಒಂದುಗೆಯನ್ನು ನಡೆಸುತ್ತಿರುತ್ತವೆ. ಗಿಡಗಳಿಗೆ ಬೇಕಾದ ಬಿಸುಪನ್ನು ಮೊದಲೇ ತಿಳಿದುಕೊಂಡು ಆ ಬಿಸುಪನ್ನು ಹಸಿರುಮನೆಯ ಒಳಗೆ ಕಾದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೇಸರನ ಬೆಳಕು ಹೆಚ್ಚಾಗಿ ಹಸಿರುಮನೆಯ ಒಳಗಿನ ಬಿಸುಪು ಬೇಕಾದ ಬಿಸುಪಿಗಿಂತ ಹೆಚ್ಚಾದರೆ ಗಾಳಿಕಿಂಡಿಗಳ (Ventilator) ಮೂಲಕ ಬಿಸಿಗಾಳಿಯನ್ನು ಹೊರಹಾಕಿ ಹೊರಗಿನ ತಂಪುಗಾಳಿಯನ್ನು ಹಸಿರುಮನೆಯ ಒಳಗೆ ಬರುವಂತೆ ಏರ್ಪಾಡು ಮಾಡಬೇಕಾಗುತ್ತದೆ. ಅದಕ್ಕಾಗಿ ಹಸಿರುಮನೆಯಲ್ಲಿ ಗಾಳಿಕಿಂಡಿಗಳನ್ನು ಇಟ್ಟಿರಬೇಕಾಗುತ್ತದೆ. ಹಸಿರುಮನೆಯ ಕಿಟಕಿ ಬಾಗಿಲುಗಳು ಕೂಡ ಗಾಳಿಕಿಂಡಿಗಳಾಗಿ ಕೆಲಸ ಮಾಡುತ್ತವೆ. ಹೀಗೆ ಹಗಲೆಲ್ಲಾ ಬಿಸುಪಿನಲ್ಲಿ ಹೆಚ್ಚಿನ ಏರುಪೇರಾಗದೇ, ಬೇಕಾದ ಬಿಸುಪನ್ನು ಕಾಯ್ದುಕೊಳ್ಳುವುದರಿಂದ ಗಿಡದ ದೊಳೆಗಳು ನೇಸರನ ಬೆಳಕು ಸಿಗುವವರೆಗೂ ಚೆನ್ನಾಗಿ ಕೆಲಸಮಾಡಿ ಬೆಳಕಿನ ಅಡುಗೆಯನ್ನು ನಡೆಸುತ್ತವೆ. ಇದರಿಂದ ಹಸಿರು ಮನೆಯ ಒಳಗೆ ಗಿಡಗಳು ಬೇಗನೇ ಮತ್ತು ಚೆನ್ನಾಗಿ ಬೆಳೆಯುತ್ತವೆ.

2. ಹೆಚ್ಚಿನ ತೇವ (humidity) ಗಿಡದ ಬೆಳವಣಿಗೆಗೆ ಉಪಕಾರಿ:
ನೇಸರನ ಬೆಳಕಿದ್ದಾಗ ಬೆಳಕಿನ ಒಂದುಗೆಯನ್ನು ಗಿಡಗಳು ನಡೆಸುತ್ತವೆ ಎಂದು ನಾವು ಮೊದಲೇ ತಿಳಿದಿದ್ದೇವೆ. ಈ ಬೆಳಕಿನ ಒಂದುಗೆಗೆ ನೀರನ್ನೂ ಕೂಡ ಗಿಡಗಳು ಬಳಸುತ್ತವೆ. ಹಾಗಾಗಿ ಹಸಿರುಮನೆಯ ಒಳಗೆ ಸಾಕಷ್ಟು ನೀರಿನ ಏರ್ಪಾಡು ಗಿಡಗಳಿಗೆ ಬೇಕಾಗುತ್ತದೆ. ಮಣ್ಣಿನಿಂದ ಆವಿಯಾದ ನೀರಿನ ತೇವ ಮತ್ತು ಗಿಡಗಳ ಬೆಳಕಿನ ಅಡುಗೆಯಿಂದ ಹೊರಬಂದ ತೇವ ಹಸಿರುಮನೆಯ ಒಳಗೆಯೇ ಇರುತ್ತದೆ, ಗಾಜು/ಪ್ಲಾಸ್ಟಿಕ್ ಗೋಡೆಗಳನ್ನು ದಾಟಿ ತೇವಾಂಶವು ಹೊರಹೋಗಲಾಗದು. ಇದರಿಂದ ಮಣ್ಣಿನಲ್ಲಿರುವ ನೀರು ಬೇಗನೆ ಆವಿಯಾಗುವುದನ್ನು ತಪ್ಪಿಸಬಹುದು ಮತ್ತು ಈ ನೀರನ್ನು ಗಿಡಗಳ ಬೆಳಕಿನ ಅಡುಗೆಗೆ ಒದಗಿಸುತ್ತಿರ ಬಹುದು. ಒಂದು ವೇಳೆ, ಹಸಿರು ಮನೆಯ ಒಳಗೆ ತೇವಾಂಶವು ಅಗತ್ಯಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಬೆಳಕಿನ ಅಡುಗೆಯಿಂದ ತೇವಾಂಶವನ್ನು ಹೊರಹಾಕಲು ತೊಡಕಾಗುತ್ತದೆ. ಹಾಗಾಗಿ ತೇವಾಂಶವನ್ನು ಬೇಕಾದಷ್ಟು ಮಾತ್ರ ಕಾಯ್ದುಕೊಳ್ಳಲು ಮತ್ತೊಮ್ಮೆ ಗಾಳಿಕಿಂಡಿಗಳ ನೆರವನ್ನು ಪಡೆಯಬಹುದು. ಒಳಗಿರುವ ತೇವದ ಗಾಳಿ ಹೊರಹೋಗಿ ಹೊರಗಿನ ಗಾಳಿ ಒಳಬರುವಂತೆ ಗಾಳಿಕಿಂಡಿಗಳನ್ನು ಹಸಿರುಮನೆಗಳಲ್ಲಿ ಅಳವಡಿಸಲಾಗಿರುತ್ತದೆ.

3. ಹೊರಗಿನ ಕ್ರಿಮಿಕೀಟಗಳಿಂದ ಕಾಯುವುದು.
ಹಸಿರುಮನೆಯು ಗಾಜು/ಪ್ಲಾಸ್ಟಿಕ್ ನ ಗೋಡೆಗಳಿಂದ ಕಟ್ಟಿರುವುದರಿಂದ ಗಿಡಗಳ ಬೆಳವಣಿಗೆಗೆ ತೊಂದರೆ ಕೊಡುವ ಹೊರಗಿನ ಕ್ರಿಮಿಕೀಟಗಳಿಂದ ದೂರವಿಡಬಹುದಾಗಿದೆ.

4. ಕೆಟ್ಟ ಗಾಳಿಪಾಡಿನಿಂದ ಕಾಯುವುದು.
ಹಸಿರುಮನೆಯ ಗಿಡಗಳನ್ನು ಅತಿ ಹೆಚ್ಚಿನ ಮಳೆ, ಗಾಳಿ ಮತ್ತು ಬಿಸಿಲಿನಿಂದ ಆಗುವ ತೊಂದರೆಗಳಿಂದ ಕಾಪಾಡಬಹುದು. ಅಲ್ಲದೇ ಇರುಳಿನ ಹೆಚ್ಚು ಹೊತ್ತು ಹಸಿರುಮನೆಯ ಒಳಗೆ ಬೆಚ್ಚಗಿನ ಗಾಳಿ ಇರುವುದರಿಂದ ತಂಪುಗಾಳಿಯಿಂದ ಗಿಡಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು. ಕೆಲವು ಕಡೆ ಹಸಿರುಮನೆಗಳಿಗೆ ಹಸಿರುಬಣ್ಣದ ಗಾಜು/ಪ್ಲಾಸ್ಟಿಕ್ ಅನ್ನು ಬಳಸಿರುತ್ತಾರೆ, ಇದು ನೇಸರನ ಬಿಸಿಲು ಅಗತ್ಯಕ್ಕಿಂತ ಹೆಚ್ಚಾಗಿ ಹಸಿರುಮನೆಯ ಒಳಗೆ ಬರದಂತೆ ತಡೆಯುತ್ತದೆ.

ಹೀಗೆ, ಹಸಿರುಮನೆಯನ್ನು ಬಳಸಿ ಗಿಡಗಳನ್ನು ಬೆಳಸುವುದರಿಂದ ಗಿಡಗಳಿಗೆ ಬೇಕಾದ ಬಿಸುಪು ಮತ್ತು ತೇವಾಂಶ ದಿನದ ಹೆಚ್ಚುಕಾಲ ಸಿಗುತ್ತಿರುತ್ತದೆ. ಇದರಿಂದ ಗಿಡಗಳು ತಮ್ಮ ಬೆಳಕಿನ ಒಂದುಗೆಯನ್ನ್ಯು ನಡೆಸಿ ಆದಷ್ಟು ಬೇಗ ಮತ್ತು ಚೆನ್ನಾಗಿ ಬೆಳೆಯುತ್ತವೆ. ಹಸಿರುಮನೆಯ ಬಿಸುಪು ಹಾಗು ತೇವಾಂಶವನ್ನು ನಮಗೆ ಬೇಕಾದ ಬಗೆಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಗಿದೆ. ಇದು ಹೆಚ್ಚು ಇಳುವರಿ ತರುವಲ್ಲಿ ನೆರವಾಗುತ್ತದೆ.

(ಮಾಹಿತಿ ಸೆಲೆ: www.ishs.org420magazine)

(ಚಿತ್ರ ಸೆಲೆ: wikipedia)