ಕಾಫಿಬೀಜದ ಬಿತ್ತನೆ ಮತ್ತು ಆರೈಕೆ

ರತೀಶ ರತ್ನಾಕರ.

ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಫಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಫಿ ಗುಟುಕನ್ನು ಕುಡಿಯುವಾಗ,ಕಾಫಿಯು ಕಾಫಿಯಾಗಲು ಮಾಡಬೇಕಾದ ಕೆಲಸಗಳೆಷ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಫಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು ಬೆಳೆದು ಬಂದ ಬಗೆ ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಕಾಫಿ ಬೆಳೆಯುವ ಕುಟುಂಬದಿಂದಲೇ ಬೆಳೆದು, ಕಾಫಿ ಬೆಳೆಯುವ ಬಗೆಯನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಇದರ ಬೇಸಾಯದ ಅರಿವನ್ನು ಆದಷ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಫಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ ನಡುವಿನ ಬೇರ‍್ಮೆಯನ್ನು ತಿಳಿದೆವು. ಈ ಬರಹದಲ್ಲಿ ಕಾಫಿಯನ್ನು ಬೆಳೆಯುವ ಮೊದಲ ಹಂತವಾದ ಕಾಫಿ ಗಿಡಮನೆ (Nursery) ಮಾಡುವುದರ ಕುರಿತು ಕೊಂಚ ಅರಿಯೋಣ.

ಬೀಜಗಳ ಆಯ್ಕೆ:
ಕಾಫಿಯ ಮುಂದಿನ ತಲೆಮಾರಿಗೆ ಬೇಕಾದ ಕಾಫಿ ಬೀಜವನ್ನು ಆಯ್ದುಕೊಳ್ಳುವುದು ಒಂದು ಅರಿದಾದ ಕೆಲಸ. ತೋಟದ ನಡುವೆ ಇರುವ ಆರೋಗ್ಯಕರವಾದ, ಒಳ್ಳೆಯ ಇಳುವರಿಯನ್ನು ಕೊಡುತ್ತಿರುವ ಕಾಫಿ ಗಿಡದಿಂದ ತುಂಬಾನೇ ಚೆನ್ನಾಗಿರುವ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ಹಣ್ಣುಗಳು ದೊಡ್ಡದಿದ್ದಷ್ಟು ಒಳ್ಳೆಯದು. ಮೊದಲೇ ತಿಳಿದಿರುವಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗು ಕಾಫಿ ಹಣ್ಣಿನ ಕಾಲ. ಈ ಹೊತ್ತಿನಲ್ಲಿ, ಗಿಡದಲ್ಲಿರುವ ಕಾಫಿಯು ಚೆನ್ನಾಗಿ ಹಣ್ಣಾದ ಕೂಡಲೇ ಹಣ್ಣುಗಳನ್ನು ಕಿತ್ತುಕೊಂಡಿರಬೇಕು.

ಕಿತ್ತ ಕಾಫಿ ಹಣ್ಣಿನ ಸಿಪ್ಪೆಗಳನ್ನು ಬಿಡಿಸಿ, ಕಾಫಿ ಬೀಜಗಳನ್ನು ಆರಿಸಬೇಕು. ನೆನಪಿರಲಿ, ಒಂದು ಕಾಫಿ ಹಣ್ಣಿನಲ್ಲಿ ಎರೆಡು ಕಾಫಿ ಬೀಜಗಳಿರುತ್ತವೆ. ಒಂದು ವೇಳೆ ಕಾಫಿ ಹಣ್ಣಿನಲ್ಲಿ ಒಂದೇ ಬೀಜವಿದ್ದರೆ ಇಲ್ಲವೇ ಒಂದು ಬೀಜ ದೊಡ್ಡದಾಗಿದ್ದು ಇನ್ನೊಂದು ತುಂಬಾ ಚಿಕ್ಕದಾಗಿದ್ದರೆ ಅಂತಹ ಬೀಜಗಳನ್ನು ಮೊಳಕೆ ಬರಿಸಲು ಆಯ್ದುಕೊಳ್ಳಬಾರದು. ಹೀಗೆ ಸಿಪ್ಪೆ ಬಿಡಿಸಿದ ಬೀಜಗಳ ಮೇಲ್ಮೈನಲ್ಲಿ ಲೋಳೆಯು ಇರುತ್ತದೆ, ಈ ಲೋಳೆಯಿಂದಾಗಿ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು, ಅಂಟಿಕೊಂಡ ಅವನ್ನು ಬಿಡಿಸಿದಾಗ ಬೀಜಗಳಿಗೆ ಗಾಯವಾಗಿ ಹಾಳಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಕೆಲವರು ಕಾಫಿ ಹಣ್ಣನ್ನು ಬಿಡಿಸಿದ ಕೂಡಲೇ ತೊಳೆಯುತ್ತಾರೆ ಇಲ್ಲವೇ ಬೂದಿಯನ್ನು ಬೀಜಗಳಿಗೆ ಹಾಕಿ ಕಲಿಸುತ್ತಾರೆ. ಬೂದಿಯನ್ನು ಬಳಸುವುದರಿಂದ ಇನ್ನೊಂದು ಉಪಕಾರವೆಂದರೆ, ಬೂದಿಯು ಬೀಜದ ಸುತ್ತಲೂ ಅಂಟಿಕೊಳ್ಳುವುದರಿಂದ ಇರುವೆ ಇಲ್ಲವೇ ಮತ್ತಿತರ ಕೀಟಗಳಿಂದ ಬೀಜಗಳನ್ನು ಕಾಪಾಡಿಕೊಳ್ಳಬಹುದು. ಇದೇ ಕೆಲಸ ಮಾಡುವಂತಹ ಯಾವುದಾದರು ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಸಿಕ್ಕರೆ ಅವನ್ನು ಕೂಡ ಬಳಸಬಹುದು. ಬೂದಿಯನ್ನು ಬಳಸುವುದು ಕೊಂಚ ಹಳೆಯ ಪದ್ದತಿ, ಬೂದಿಯನ್ನು ಬೀಜಗಳ ಜೊತೆ ಕಲೆಸುವಾಗ ಬೀಜದ ಮೇಲಿನ ಸಿಪ್ಪೆಗೆ ಗಾಯವಾಗುವ ಸಾದ್ಯತೆಗಳೂ ಇವೆ.

ಹೀಗೆ ಅಣಿಗೊಳಿಸಿದ ಬೀಜಗಳನ್ನು ಬಲೆಯಂತಿರುವ ತಟ್ಟೆಗಳು ಇಲ್ಲವೇ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿಟ್ಟು ಎರೆಡರಿಂದ ಮೂರು ದಿನಗಳ ಕಾಲ ಆರಿಸಬೇಕು. ಹರಡಿರುವ ಬೀಜಗಳ ನಡುವೆ ಚೆನ್ನಾಗಿ ಗಾಳಿ ಓಡಾಡುವಂತಿರಬೇಕು. ಬೀಜದಲ್ಲಿರುವ ಪಸೆ (moisture) 10% ಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು. ಬಿಸಿಲಿನಲ್ಲಿ ಇಲ್ಲವೇ ಹೆಚ್ಚು ದಿನಗಳ ಕಾಲ ಒಣಗಿಸಿದರೆ ಪಸೆಯು 10% ಗಿಂತ ಕಡಿಮೆಯಾಗಬಹುದು. ಆರಿದ ಬೀಜಗಳಿಂದ ಗಾಯಗೊಂಡ ಇಲ್ಲವೇ ಚೆನ್ನಾಗಿಲ್ಲದ ಬೀಜಗಳನ್ನು ಆರಿಸಿ ತೆಗೆಯಬೇಕು. ಈಗ ನಿಮ್ಮ ಮುಂದಿನ ತಲೆಮಾರಿನ ಕಾಫಿಗಿಡಗಳಿಗೆ ಬೇಕಾದ ಬೀಜಗಳು ಸಿದ್ದವಾದಂತೆ. ಹೀಗೆ ಸಿದ್ದವಾದ ಬೀಜಗಳನ್ನು ಆದಷ್ಟು ಬೇಗ ಮೊಳಕೆಗಾಗಿ ನೆಡಬೇಕು ಇಲ್ಲವಾದರೆ ಮೊಳಕೆ ಬರುವ ಸಾದ್ಯತೆಗಳು ಕಡಿಮೆ. ಬೀಜಗಳನ್ನು ಆದಷ್ಟು ಕಡಿಮೆ ಬಿಸುಪು ಮತ್ತು ಹೆಚ್ಚು ಪಸೆಯಿರುವ ಜಾಗದಲ್ಲಿ ಕಾಪಿಟ್ಟುಕೊಳ್ಳಬೇಕು.

ಮೊಳಕೆಗೆ ಬೀಜ ಬಿತ್ತನೆ:

ಬೀಜಗಳನ್ನು ಮೊಳಕೆಗೆ ಹಾಕುವ ಮೊದಲು ಎಷ್ಟು ಗಿಡಗಳು ತಮಗೆ ಬೇಕಾಗಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಕೆ.ಜಿ. ಕಾಫಿ ಬೀಜದಲ್ಲಿ ಸುಮಾರು 3000ದಿಂದ 4000 ಬೀಜಗಳು ಸಿಗುತ್ತವೆ. ಇವುಗಳಲ್ಲಿ 75% ನಷ್ಟು ಬೀಜಗಳು ಮೊಳಕೆ ಬರಬಹುದು ಎಂಬ ಲೆಕ್ಕಾಚಾರವಿದೆ. ತಮಗೆ ಎಷ್ಟು ಕಾಫಿಗಿಡಗಳು ಬೇಕಾಗಬಹುದು ಎಂದು ಎಣಿಸಿಕೊಂಡು ಮೊಳಕೆಗೆ ಅಷ್ಟು ಬೀಜಗಳನ್ನು ಅಣಿಗೊಳಿಸಬೇಕು.

ಮೊಳಕೆಗೆ ಹಾಕಲು ಮೊದಲು ಮಣ್ಣಿನ ಹಾಸಿಗೆಯನ್ನು ಅಣಿಮಾಡಬೇಕು. ಮಣ್ಣಿನ ಹಾಸಿಗೆಯು ಸುಮಾರು 1.2 ಮೀಟರ್ ಅಗಲವಾಗಿರಬೇಕು ಮತ್ತು ಸಾಕಷ್ಟು ಉದ್ದ ಅಂದರೆ ಸುಮಾರು 6 ಮೀಟರ್ ನಷ್ಟು ಇರಬೇಕು. ಮಣ್ಣಿನ ಹಾಸಿಗೆಯ ಎತ್ತರ ನೆಲದಿಂದ ಸುಮಾರು 15 ಸೆ.ಮೀ ನಷ್ಟಿರಬೇಕು. ಹಾಸಿಗೆಯಲ್ಲಿರುವ ಮಣ್ಣನ್ನು ಚೆನ್ನಾಗಿ ಅಗೆದು ಸಡಿಲಗೊಳಿಸರಬೇಕು, ಸಾಕಷ್ಟು ಸಾರವಿರುವ ಕಾಡಿನ ಮಣ್ಣನ್ನು ತಂದು ಇದರ ಜೊತೆ ಸೇರಿಸಿದರೆ ಒಳ್ಳೆಯದು. ಬೀಜಗಳಿಗೆ ಬೇಕಾದ ಗೊಬ್ಬರಕ್ಕಾಗಿ ಸಗಣಿ ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಬೇಕು. ಇದರ ಜೊತೆಗೆ ಬೀಜದ ಮೊಳಕೆಗೆ ನೆರವಾಗುವಂತಹ ಪಾಸ್ಪೇಟ್ ಗೊಬ್ಬರ (ಸಾವಯವ ಇಲ್ಲವೇ ರಾಸಾಯನಿಕ ಎಂಬುದು ಬೆಳೆಗಾರರಿಗೆ ಬಿಟ್ಟದ್ದು) ವನ್ನು ಬಳಸಬೇಕು. ಸುಮಾರು 1 ಮೀ. ಉದ್ದದ ಜಾಗಕ್ಕೆ 100 ಗ್ರಾಂ ಪಾಸ್ಪೇಟ್ ಗೊಬ್ಬರ ಬೇಕಾಗುತ್ತದೆ. ಕೇವಲ ಮಣ್ಣು ಮತ್ತು ಗೊಬ್ಬರವನ್ನು ಕಲೆಸಿದಾಗ ಮಣ್ಣೇನಾದರು ಕೊಂಚ ಗಟ್ಟಿಯಾದರೆ ಇಲ್ಲವೇ ಅಂಟು ಅಂಟಾದರೆ ಮರಳನ್ನು ಸೇರಿಸಿ ಕಲೆಸಿದರೆ ಒಳ್ಳೆಯದು ಆಗ ಮಣ್ಣು ಸಡಿಲವಾಗಿ ಮೊಳಕೆ ಬರಲು ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಮಣ್ಣಿನ ಹಾಸಿಗೆಯನ್ನು ಮಾಡುವುದಾದರೆ ಒಂದು ಹಾಸಿಗೆಯಿಂದ ಇನ್ನೊಂದರ ನಡುವೆ ಕಡಿಮೆ ಎಂದರೂ 60 ಸೆ.ಮೀ ಜಾಗವಿರಬೇಕು.

ಹೀಗೆ ಆಣಿಗೊಳಿಸಿದ ಮಣ್ಣಿನ ಹಾಸಿಗೆಯ ಮೇಲೆ ಈಗ ಬೀಜಗಳನ್ನು ನೆಡುವ ಕೆಲಸ. ಇದನ್ನು ಈ ಕೆಳಗಿನಂತೆ ಮಾಡಬಹುದು

  1. ಮೊಳಕೆಗೆ ಬೀಜ ನೆಡುವ ಮೊದಲು ಮಣ್ಣಿನ ಹಾಸಿಗೆಗೆ ಚೆನ್ನಾಗಿ ನೀರು ಹಾಕಬೇಕು.
  2. ಒಂದು ಚೂಪಾದ ಕಡ್ದಿಯಿಂದ ಮಣ್ಣಿನ ಹಾಸಿಗೆಯ ಮೇಲೆ 12 ಮಿ.ಮೀ ಆಳದ ಸಾಲುಗುಂಡಿಗಳನ್ನು ಮಾಡಬೇಕು. ಒಂದು ಸಾಲಿನ ಎರೆಡು ಗುಂಡಿಗಳ ನಡುವೆ 25 ಮಿ.ಮೀ ಜಾಗವಿರಬೇಕು.
  3. ಮಣ್ಣಿನ ಹಾಸಿಗೆಯ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸುಮಾರು 100 ಮಿ.ಮೀ ದೂರವಿರಬೇಕು.
  4. ಆರಿಸಿದ ಬೀಜಗಳನ್ನು 12 ಮಿ.ಮೀ ಗುಂಡಿಯೊಳಗೆ ಮೆದುವಾಗಿ ಊರಬೇಕು. ನೆನಪಿರಲಿ, ಬೀಜವು ಹೆಚ್ಚು ಆಳಕ್ಕೆ ಹೋಗಬಾರದು.
  5. ಕಾಫಿ ಬೀಜದ ಆಕಾರದಲ್ಲಿ ಒಂದು ಕಡೆ ಮಟ್ಟವಾಗಿದ್ದು ಇನ್ನೊಂದು ಕಡೆ ಅರೆ ಮೊಟ್ಟೆಯಾಕಾರದಲ್ಲಿರುತ್ತದೆ. ಮಟ್ಟವಾಗಿರುವ ಕಡೆಯನ್ನು ನೆಲಕ್ಕೆ ಮುಖಮಾಡಿ ಬೀಜವನ್ನು ಬಿತ್ತಬೇಕು.
  6. ಮಣ್ಣಿನ ಹಾಸಿಗೆಯಲ್ಲಿರುವ ಪಸೆಯು ಆರದಂತೆ ಮತ್ತು ಬಿಸಿಲಿನಿಂದ ಬಿತ್ತನೆಯನ್ನು ಕಾಪಾಡಲು ಒಣಗಿದ ಹುಲ್ಲು ಇಲ್ಲವೇ ಅಡಿಕೆ ಸೋಗೆಯನ್ನು ಈ ಹಾಸಿಗೆಯ ಮೇಲೆ ತೆಳುವಾಗಿ ಹರಡಬೇಕು. ಹೆಚ್ಚಿನ ಬಿಸಿಲು ಇಲ್ಲವೇ ಮಳೆಯಿದ್ದಲ್ಲಿ ಬಿತ್ತನೆಯನ್ನು ಕಾಪಾಡಲು ಮಣ್ಣಿನ ಹಾಸಿಗೆಯ ಮೇಲೆ ಸುಮಾರು ಒಂದು ಮೀಟರ್ ಎತ್ತರದ ಚಪ್ಪರವನ್ನು ಹಾಕಿ ಪ್ಲಾಸ್ಟಿಕ್ ಇಲ್ಲವೇ ಸೊಪ್ಪಿನಿಂದ ಮುಚ್ಚಬೇಕು. ಆದರೆ ಸಾಕಷ್ಟು ಗಾಳಿ ಒಡಾಡಲು ಜಾಗವಿರಬೇಕು.
  7. ಮಣ್ಣಿನ ಹಾಸಿಗೆಗೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ನೀರುಣಿಸಬೇಕು. ನೀರುಣಿಸುವಾಗ ಮಣ್ಣು ಸರಿದು ಬೀಜವು ಮಣ್ಣಿನಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು.
  8. ಬಿತ್ತನೆಯ ಆರೈಕೆಯ ಮೇಲೆ ನಿಗಾವಹಿಸಬೇಕು. ಬಿತ್ತನೆಗೆ ತೊಂದರೆ ಕೊಡುವಂತಹ ಕೀಟಗಳು, ರೋಗ ತರುವಂತಹ ಗಿಡಗಳು ಮತ್ತು ಕಳೆಗಿಡಗಳನ್ನು ತೆಗೆಯುತ್ತಿರಬೇಕು.

ಬಿತ್ತಿದ ಬೀಜವು ಹೇಗೆ ಮೊಳಕೆ ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ ತಿಳಿಯಬಹುದು. ಬಿತ್ತಿದ ನಾಲ್ಕು ವಾರಗಳಲ್ಲಿ ಮೊದಲು ತಾಯಿಬೇರು (Radicle) ಬರುತ್ತದೆ, ಬಳಿಕ ಎರೆಡು ಮೊಳಕೆ ಎಲೆಗಳು (Cotyledon) ಮೂಡುತ್ತವೆ. ಈ ಮೊಳಕೆ ಎಲೆಗಳು ಮೊಟ್ಟೆಯಾಕಾರದಲ್ಲಿ ಇದ್ದು ಸುಮಾರು 20 ರಿಂದ 50 ಮಿ.ಮೀ ಅಡ್ಡಗಲವನ್ನು ಹೊಂದಿರುತ್ತದೆ. ಸುಮಾರು ಐದರಿಂದ ಆರನೇ ವಾರದಲ್ಲಿ ಮೊದಲ ಕುಡಿ ಎಲೆಗಳು (Primary leaves) ಮೂಡುತ್ತವೆ. ಇವು ಮೂಡಿದ ಬಳಿಕ ಮೊಳಕೆ ಎಲೆಗಳು ಉದುರಿ ಬೀಳುತ್ತವೆ. ಈ ಹಂತದಲ್ಲಿ ಕುಡಿ ಎಲೆಗಳು ‘ಬೆಳಕಿನ ಅಡುಗೆ’ (Photosynthesis) ನಡೆಸಿ ಸಾಕಷ್ಟು ಊಟವನ್ನು ಗಿಡಕ್ಕೆ ನೀಡುತ್ತಾ ಹೋಗುತ್ತದೆ. ಆಗ ಗಿಡದ ಬೇರುಗಳು ಬೆಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

ಮಣ್ಣಿನ ಹಾಸಿಗೆಗೆ ಹರಡಿದ್ದ ಹುಲ್ಲಿನ ಮುಚ್ಚುಗೆಯನ್ನು ಬೀಜವು ಮೊಳಕೆಯೊಡದಂತೆ ಹಂತ ಹಂತವಾಗಿ ತೆಗೆಯುತ್ತಾ ಹೋಗಬೇಕಾಗುತ್ತದೆ. ಆಗ ಎಳೆಯ ಮೊಳಕೆಗೆ ಸಾಕಷ್ಟು ಗಾಳಿ ಮತ್ತು ಬೆಳಕು ಸಿಕ್ಕಿ ಬೆಳವಣಿಗೆಗೆ ನೆರವಾಗುತ್ತದೆ. ಸುಮಾರು 40 ರಿಂದ 50 ದಿನದಲ್ಲಿ ಬೀಜವು ಮೊಳಕೆಯೊಡೆದು 200 – 300 ಮಿ.ಮೀ ಬೆಳೆಯುತ್ತದೆ. ಈಗ ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಲು ಅಣಿಯಾದಂತೆ. ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಗಿಡದ ಎರಡನೇ ಹಂತದ ಬೆಳವಣಿಯನ್ನು ನೋಡಿಕೊಳ್ಳಲಾಗುತ್ತದೆ. ಈ ಎರಡನೇ ಹಂತಹ ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: fao.org)

 

ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳ ಬೇರ‍್ಮೆ

ರತೀಶ ರತ್ನಾಕರ.

ಹಿಂದಿನ ಬರಹದಲ್ಲಿ ಕಾಫಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಫಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಭಾಗ ರೊಬಸ್ಟಾವನ್ನು ಬೆಳೆಯುತ್ತಾರೆ. ಹಾಗಾದರೆ ಈ ಅರಾಬಿಕಾ ಹಾಗು ರೊಬಸ್ಟಾ ಕಾಫಿಯ ನಡುವಿನ ಬೇರ‍್ಮೆಗಳೇನು ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳು ನೋಡುವುದಕ್ಕೆ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಕಂಡರೂ, ಬೆಳೆಯುವ ಬಗೆ ಮತ್ತು ಅವುಗಳ ಗುಣಗಳಲ್ಲಿ ಹಲವು ಬೇರ‍್ಮೆಗಳನ್ನು ಕಾಣಬಹುದು. ಆ ಗುಣಗಳು ಮತ್ತು ಅದರ ಬೇರ‍್ಮೆಗಳನ್ನು ಈ ಕೆಳಗೆ ನೀಡಲಾಗಿದೆ.

ಕಾಫಿಯ ತಳಿ:

ಅರಾಬಿಕಾ ಕಾಫಿಯೂ ‘ಕಾಫಿಯೇಯ್ ಅರಾಬಿಕಾ‘(Coffea Arabica) ಎಂಬ ತಳಿಯಾಗಿದ್ದು ಈ ತಳಿಯ ಇರುವಿಕೆಯನ್ನು 1753 ರಲ್ಲಿ ಕಂಡು ಹಿಡಿಯಲಾಯಿತು. ಮೊತ್ತ ಮೊದಲನೆಯದಾಗಿ ಬೇಸಾಯ ಮಾಡಿ ಬೆಳೆಯಲು ಆರಂಬಿಸಿದ ತಳಿ ಎಂಬ ಹೆಗ್ಗಳಿಗೆಯನ್ನು ಇದು ಹೊಂದಿದೆ. ಅತಿ ಎತ್ತರದ ಮತ್ತು ಬೆಟ್ಟದ ಸಾಲುಗಳಲ್ಲಿ ಬೆಳೆಯಲು ಸೂಕ್ತವಾಗಿರುವ ಬೆಳೆಯಾದ ಇದು ‘ಬೆಟ್ಟದ ಕಾಫಿ’ ಎಂದು ಹೆಸರುವಾಸಿಯಾಗಿದೆ. ಈ ಕಾಫಿಯಲ್ಲಿರುವ ‘ಕಾಫಿನ್’ (Caffeine) ಅಂಶವು ಕಾಫಿಯ ಉಳಿದ ಎಲ್ಲಾ ತಳಿಗಳಿಗಿಂತ ಕಡಿಮೆಯಿದೆ, ಹಾಗಾಗಿ ಉಳಿದ ಕಾಫಿಯ ತಳಿಗಳಿಗಿಂತ ರುಚಿಕರವಾದ ಕಾಫಿ ಎಂದು ಕೂಡ ಕರೆಸಿಕೊಳ್ಳುತ್ತದೆ.

ರೊಬಸ್ಟಾ ಕಾಫಿಯೂ ‘ಕಾಫಿಯೇಯ್ ಕನೆಪೋರಾ‘ (Coffea Canephora) ಎಂಬ ತಳಿಯಾಗಿದ್ದು ಇದನ್ನು 1895ರಲ್ಲಿ ಕಂಡು ಹಿಡಿಯಲಾಯಿತು. ವ್ಯಾವಹಾರಿಕ ಉದ್ದೇಶಕ್ಕಾಗಿಯೇ ಈ ಕಾಫಿಯ ತಳಿಯನ್ನು ಕಂಡು ಹಿಡಿಯಲಾಗಿದೆ. ಅರಾಬಿಕಾ ಕಾಫಿಗಿಂತ ಹೆಚ್ಚಿನ ಇಳುವರಿಯನ್ನು ರೊಬಸ್ಟಾ ಕಾಫಿಬೆಳೆಯಲ್ಲಿ ಕಾಣಬಹುದು. ಅರಾಬಿಕಾ ಕಾಫಿಯ ಬೆಳೆಗೆ ಹೋಲಿಸಿದರೆ ಇದು ಕೀಟ ಮತ್ತು ರೋಗಕ್ಕೆ ಕೂಡಲೇ ತುತ್ತಾಗುವುದಿಲ್ಲ ಮತ್ತು ಬದಲಾಗುವ ಗಾಳಿಪಾಡಿಗೆ ಹೊಂದಿಕೊಂಡು ಬೆಳೆಯುತ್ತದೆ ಹಾಗಾಗಿ ರೊಬಸ್ಟಾ ಬೆಳೆಯನ್ನು ಅರಾಬಿಕಕ್ಕಿಂತ ಕಡಿಮೆ ಆರೈಕೆ ಕೊಟ್ಟು ಸುಲಭವಾಗಿ ಬೆಳೆಯಬಹುದು.

ಕಾಫಿ ಬೆಳೆಯುವ ಗಾಳಿಪಾಡು:
ಅರಾಬಿಕಾ ಕಾಫಿ ಬೆಳೆಯಲು ವರುಶದ ಬಿಸುಪು 15-24 ಡಿಗ್ರಿ ಸೆಂಟಿಗ್ರೇಡ್ ಮತ್ತು ವರುಶಕ್ಕೆ 1200 – 2200 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ಅರಾಬಿಕಾ ಕಾಫಿ ಬೆಳೆಯುವ ಜಾಗ ಕಡಿಮೆ ಎಂದರೂ 1200 -2200 ಮೀಟರ್ ನಷ್ಟು ಎತ್ತರದಲ್ಲಿರಬೇಕು. ಆದರೆ ಹಿಮ ಬೀಳುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ.

ರೊಬಸ್ಟಾ ಕಾಫಿಬೆಳೆಯಲು ವರುಶದ ಬಿಸುಪು 18-35 ಡಿಗ್ರಿಯವರೆಗೆ ಮತ್ತು ವರುಶಕ್ಕೆ ಅರಾಬಿಕಾಕ್ಕಿಂತ ಹೆಚ್ಚಿನ ಮಳೆ ಅಂದರೆ 2200 ರಿಂದ 3000 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ತೀರ ಎತ್ತರವಿಲ್ಲದ ಜಾಗದಲ್ಲಿಯೂ ಕೂಡ ಇದನ್ನು ಬೆಳೆಯಬಹುದು. ಇದನ್ನು ಬೆಳೆಯಲು ಕಡಲ ಮಟ್ಟದಿಂದ ಸುಮಾರು 0-800 ಮೀಟರ್ ನಷ್ಟು ಎತ್ತರದಲ್ಲಿರುವ ಜಾಗವಿದ್ದರೂ ಸಾಕು.

ಕಾಫಿ ಬೀಜ ಮತ್ತು ಗಿಡದ ಏರ್ಪಾಟು:

ಅರಾಬಿಕಾ ಕಾಫಿಯೂ ನೆಲದಿಂದ 9-12 ಮೀಟರ್ ನವರೆಗೆ ಬೆಳೆಯುತ್ತವೆ. ಎಲೆಗಳು ಕಂದು ಹಸಿರು ಬಣ್ಣದಲ್ಲಿದ್ದು ಕೊಂಚ ಹೊಳೆಯವಂತಿರುತ್ತವೆ. ಮೊಟ್ಟೆಯಾಕಾರದ ಎಲೆಗಳು ಸುಮಾರು 6-12 ಸೆ.ಮೀ. ಉದ್ದ ಮತ್ತು 4-8 ಸೆ.ಮೀ. ಅಗಲವಿರುತ್ತವೆ. ಅರಾಬಿಕಾ ಕಾಫಿಯ ಹಣ್ಣುಗಳು 10-15 ಮಿ.ಮಿ ಅಡ್ಡಳತೆ ಹೊಂದಿದ್ದು ಎರೆಡು ಬೇಳೆಗಳನ್ನು ಒಳಗೊಂಡಿರುತ್ತದೆ. ಈ ಬೇಳೆಗಳೇ ಕಾಫಿ ಬೀಜಗಳು. ಕಾಫಿ ಬೀಜವು ಉದ್ದ-ಉರುಟಾದ (Elliptical) ಆಕಾರವನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿಯ ಬೇರುಗಳು ರೊಬಸ್ಟಾಗೆ ಹೋಲಿಸಿದರೆ ಹೆಚ್ಚು ಆಳಕ್ಕೆ ಹರಡಿಕೊಂಡಿರುತ್ತದೆ.      

ರೊಬಸ್ಟಾ ಕಾಫಿಯೂ ಕೂಡ ನೆಲದಿಂದ 10 ಮೀಟರ್ ವರೆಗೆ ಬೆಳೆಯುತ್ತವೆ. ಆದರೆ ಇದರ ಕಾಂಡವು ಅರಾಬಿಕಾಕ್ಕಿಂತ ಹೆಚ್ಚು ದಪ್ಪನಾಗಿದ್ದು ಎಲೆಗಳು ಕೂಡ ದೊಡ್ಡದಾಗಿರುತ್ತವೆ. ಕಾಫಿಬೀಜವು ಉಂಡನೆಯ ಆಕಾರದಲ್ಲಿದ್ದು ಹೆಚ್ಚು ಕಡಿಮೆ ಮೊಟ್ಟೆಯಾಕಾರದಲ್ಲಿರುತ್ತವೆ (Oval).

ಕಾಫಿಗಿಡಗಳು ಹೊರಗಿನ ರೋಗ ಮತ್ತು ಕೀಟಗಳಿಂದ ಕಾಪಾಡಿಕೊಳ್ಳಲು ತಮ್ಮ ಕಾಫಿ ಬೀಜಗಳಲ್ಲಿ ಕೆಫಿನ್ ಮತ್ತು ಕ್ಲೋರೊಜೆನಿಕ್ ಹುಳಿ(Chlorogenic Acid) ಯನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿ ಬೀಜವು 0.8 – 1.4% ನಷ್ಟು ಕೆಪಿನ್ ಹಾಗು 5.5-8.0% ನಷ್ಟು ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ರೊಬಸ್ಟಾವು ಅರಾಬಿಕಾಕ್ಕಿಂತ ಎರೆಡು ಪಟ್ಟು ಅಂದರೆ 1.7 – 4% ನಷ್ಟು ಕೆಪಿನ್ ಮತ್ತು 7-10% ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ಇದರಿಂದ ರೊಬಸ್ಟಾ ಕಾಫಿಯು ಕೀಟ ಹಾಗು ರೋಗಗಳಿಗೆ ಬೇಗನೆ ತುತ್ತಾಗುವುದಿಲ್ಲ ಮತ್ತು ಅರಾಬಿಕಾಕ್ಕಿಂತ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.

ಅರಾಬಿಕಾ ಕಾಫಿಯೂ ರೊಬಸ್ಟಾಗಿಂತ ಸರಿಸುಮಾರು 60% ಹೆಚ್ಚು ಸೀರೆಣ್ಣೆ(Lipids) ಯನ್ನು ಮತ್ತು ರೊಬಸ್ಟಾಗಿಂತ ಎರೆಡುಪಟ್ಟು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದೆ. ಅರಾಬಿಕಾದಲ್ಲಿ 6-9% ಸಕ್ಕರೆ ಅಂಶವಿದ್ದರೆ ರೊಬಸ್ಟಾದಲ್ಲಿ 3-7% ಇದೆ. 15-17% ಸೀರೆಣ್ಣೆ ಅರಾಬಿಕಾ ಬೀಜದಲ್ಲಿ ಇದ್ದರೆ 10-11.5% ರೊಬಸ್ಟಾದಲ್ಲಿದೆ, ಇದರಿಂದಾಗಿ ಅರಾಬಿಕ ಕಾಫಿಯ ಹುಳಿತ (Acidity) ಹೆಚ್ಚಿದೆ. ಸಕ್ಕರೆಯ ಅಂಶ ಕಡಿಮೆಯಿದ್ದು ಕೆಪಿನ್ ಅಂಶ ಹೆಚ್ಚಿರುವುದರಿಂದ ರೊಬಸ್ಟಾ ಕಾಫಿಯು ಹೆಚ್ಚು ಕಹಿಯಾಗಿದೆ.

ಇದಲ್ಲದೇ ಕಾಫಿ ಬೀಜದಲ್ಲಿ ಹಲವು ರಾಸಾಯನಿಕ ಅಂಶಗಳವೆ. ಅವುಗಳಲ್ಲಿ ಕ್ವಿನಿಕ್ (Quinic), ಕ್ಲೋರೋಜೆನಿಕ್ (Chlorogenic), ಸಿಟ್ರಿಕ್ (Citric), ಪಾಸ್ಪರಿಕ್ (Phosphoric) , ಅಸಿಟಿಕ್ (Acetic) ಹುಳಿಗಳು (Acids), ಟ್ರೈಗೊನೆಲೈನ್, ಕೆಪಿನ್, ಸೀರೆಣ್ಣೆ ಮತ್ತು ಕಾರ‍್ಬೋಹೈಡ್ರೇಟ್ಸ್.

ಇದಲ್ಲದೇ, ಈ ಕಾಫಿಯ ತಳಿಗಳ ನಡುವೆ ಮತ್ತಷ್ಟು ಬೇರ‍್ಮೆಗಳಿವೆ ಮೇಲಿನವು ಕೆಲವು ಮುಖ್ಯವಾದವು ಮಾತ್ರ. ಈ ಬೇರ‍್ಮೆಗಳ ಕಾರಣದಿಂದ ಅರಾಬಿಕಾ ಹಾಗು ರೊಬಸ್ಟಾ ಬೆಳೆಗಳ ಬೇಸಾಯದಲ್ಲಿಯೂ ಕೂಡ ಬೇರ‍್ಮೆಗಳನ್ನು ಕಾಣಬಹುದು. ಅರಾಬಿಕಾ ಕಾಫಿಕಾಫಿಯನ್ನು ಹೆಚ್ಚು ನಿಗಾವಹಿಸಿ ಕೀಟ ಹಾಗು ರೋಗಗಳಿಂದ ಕಾಪಾಡಿಕೊಂಡು ಬೆಳೆಯ ಬೇಕಾಗುತ್ತದೆ. ಅಲ್ಲದೇ ಗಾಳಿಪಾಡಿನ ಹೆಚ್ಚುಕಡಿಮೆ ಕೂಡ ಅರಾಬಿಕಾ ಗಿಡವನ್ನು ತೊಂದರೆಗೆ ಈಡು ಮಾಡುತ್ತದೆ. ಇದಕ್ಕೆ ಹೆಚ್ಚಿನ ನೆರಳಿನ ಅವಶ್ಯಕತೆ ಇದೆ. ಆದರೆ ರೊಬಸ್ಟಾ ಬೆಳೆ ಹಾಗಲ್ಲ, ಇದನ್ನು ಬೆಳೆಯುವುದು ಅರಾಬಿಕಾಕ್ಕಿಂತ ಸುಲಭ ಹಾಗು ಹೆಚ್ಚಿನ ನಿಗಾ ವಹಿಸುವ ಅವಶ್ಯಕತೆ ಇರುವುದಿಲ್ಲ.

ಬೇರ‍್ಮೆಗಳು ಏನೇ ಇದ್ದರು ಎರೆಡೂ ಬಗೆಯ ಕಾಫಿಗಳು ತಮ್ಮ ಒಂದಲ್ಲ ಒಂದು ಗುಣಗಳಿಂದ ಹೆಸರುವಾಸಿಯಾಗಿವೆ. ಇವುಗಳನ್ನು ಬೆಳೆಯುವ ಬಗೆಯನ್ನು ಮುಂದಿನ ಬರಹಗಳಲ್ಲಿ ಅರಿಯೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

ಕಾಫಿ ಬೆಳೆ: ಹುಟ್ಟು ಮತ್ತು ಹರವು

ರತೀಶ ರತ್ನಾಕರ.

 

ಹೀಗೊಂದು ಹಳೆಯ ಕತೆ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ ಕುರಿಗಳು ಕಾಡಿನ ನಡುವೆ ಸಿಕ್ಕ ಒಂದು ಬಗೆಯ ಹಣ್ಣನ್ನು ತಿಂದೊಡನೆ ಕುಣಿದು ಕುಪ್ಪಳಿಸ ತೊಡಗಿದವು. ಹಣ್ಣಿನಲ್ಲಿರುವ ಯಾವುದೋ ಒಂದು ಅಂಶ ಕುರಿಗಳಿಗೆ ನಲಿವನ್ನು ತರುತ್ತಿದೆ ಎಂದು ಅರಿತು ಕಾಲ್ಡಿಯೂ ಆ ಹಣ್ಣನ್ನು ತಿಂದು ನೋಡಿದ. ಒಂದು ಬಗೆಯ ರುಚಿಯ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡಿದ ಆ ಹಣ್ಣನ್ನು ತನ್ನವರಿಗೂ ಪರಿಚಯಿಸಿದ.

ಉಲ್ಲಾಸ ನೀಡುವಂತಹ ಆ ಹಣ್ಣನ್ನು ಆಫ್ರಿಕಾದ ಬುಡಕಟ್ಟಿನವರು ಮೊದಲು ಹಾಗೆಯೇ ತಿನ್ನುತ್ತ ಬಳಿಕ ತಮ್ಮ ಊಟದ ಜೊತೆ ತಿನ್ನತೊಡಗಿದರು. ಹೀಗೆ ಮನುಷ್ಯನ ಊಟದ ಪಾಲಿನಲ್ಲಿ ಸೇರಿಕೊಂಡ ಆ ಹಣ್ಣು ಮುಂದೆ ಹಲವಾರು ಬಗೆಯಲ್ಲಿ ಮಾರ್ಪಾಟುಗೊಂಡು ಬೆಳಗ್ಗೆ ಎದ್ದಾಗ ಇಲ್ಲವೇ ಸಂಜೆಯ ಹೊತ್ತಿಗೆ ಕುಡಿಯುವ ಕಾಫಿಯಾಗಿ ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಕಾಲ್ಡಿಯು ಮೊತ್ತ ಮೊದಲ ಬಾರಿಗೆ ತನ್ನ ಕುರಿಗಳ ನೆರವಿನಿಂದ ಆ ಹಣ್ಣನ್ನು ತಿಂದ ಜಾಗದ ಹೆಸರು ‘ಕಪ’ ಎಂದು. ‘ಕಪ’ ಎಂಬ ಜಾಗದಲ್ಲಿ ದೊರೆತ ಹಣ್ಣು ಕಾಫಿಯಾಗಿ ಈಗ ನಮ್ಮ ನಡುವೆ ಹೆಸರುವಾಸಿಯಾಗಿದೆ.

ಹೌದು, ನಾವು ತಿನ್ನುವ ಹಾಗು ಕುಡಿಯುವ ವಸ್ತುಗಳ ಹಿಂದೆ ಸಾಕಷ್ಟು ಹಳಮೆ ಹಾಗು ಅರಿಮೆಯಿದೆ. ಕಾಫಿಯ ಹಳಮೆ ಮೇಲೆ ಹೇಳಿದ ಕತೆಯಿಂದ ಮೊದಲಾಗುತ್ತದೆ, ಈ ಹಳಮೆಯ ಜೊತೆ ನಾವು ಅರಿಯಬೇಕಾದ ಕಾಫಿಯ ಅರಿಮೆ ಕೂಡ ಸಾಕಷ್ಟಿದೆ. ಕಾಫಿಯ ಅರಿಮೆಯ ಮೇಲೆ ಕೊಂಚವಾದರು ಬೆಳಕು ಚೆಲ್ಲಬೇಕೆಂದು ಈ ಸರಣಿ ಬರಹ.

ಜಗತ್ತಿನ ಕಾಫಿ ಬೆಳೆಯುವ ನಾಡುಗಳಲ್ಲಿ ಇಂಡಿಯಾವು ಆರನೇ ಜಾಗದಲ್ಲಿದೆ. ಇಂಡಿಯಾದ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೇ ಮೊದಲ ಜಾಗ. ಇಂಡಿಯಾದಲ್ಲಿ ಬೆಳೆಯುವ ಕಾಫಿಯಲ್ಲಿ 71% ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಕಾಫಿ ಬೆಳೆಯುವ ಮುಖ್ಯ ಜಿಲ್ಲೆಗಳು. ಬೇರೆ ಬೇರೆ ರಾಜ್ಯಗಳಲ್ಲಿಕಾಫಿಯನ್ನು ಬೆಳೆಯುವ ಜಾಗದ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಕರ್ನಾಟಕದಲ್ಲಿ ಬೆಳೆಯುವ ಕಾಫಿಯನ್ನು ನೆರಳಿನ ಜಾಗದಲ್ಲಿ ಬೆಳೆಯುವ ಜಗತ್ತಿನ ರುಚಿಕರವಾದ ಕಾಫಿ ಎಂದು ಗುರುತಿಸಲಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ನೇಸರನ ಬಿಸಿಲಿಗೆ ನೇರವಾಗಿ ಗಿಡವನ್ನು ಬೆಳೆಸಿ ಕಾಫಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಬೆಟ್ಟದ ಸಾಲುಗಳಲ್ಲಿ ಹಲವು ಬಗೆಯ ಮರದ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗ್ಗೆ:
ಕಾಫಿಯು ಗಿಡ ಇಲ್ಲವೇ ಚಿಕ್ಕ ಮರದ ರೂಪದಲ್ಲಿ ಬೆಳೆಯುತ್ತದೆ. ಕಾಫಿಯೇಯ್ (coffeeae) ಎಂಬ ಗಿಡಗಳ ಬುಡಕಟ್ಟು ಮತ್ತು ರುಬಿಯೇಸಿಯಯ್ (Rubiaceae) ಎಂಬ ಕುಟುಂಬಕ್ಕೆ ಈ ತಳಿಯು ಸೇರುತ್ತದೆ. ಕಾಫಿ ಗಿಡವು ಸುಮಾರು 14 ರಿಂದ 15 ಅಡಿಗಳ ವರೆಗೆ ಬೆಳೆಯುತ್ತದೆ. ದಪ್ಪನಾದ ಹಾಗು ಉದ್ದನೆಯ ಒಂದು ಕಾಂಡ ನೆಲದಿಂದ ಹೊರಬಂದು, ಬಳಿಕ ಮೂರು ಹಂತದಲ್ಲಿ ರಕ್ಕೆಗಳು ಕವಲೊಡೆದು, ಒಂದು ದೊಡ್ಡದಾದ ಪೊದೆಯ ಗಿಡದಂತೆ ಕಾಫಿ ಗಿಡವು ಕಾಣುತ್ತದೆ. ಕೊಂಚ ಹೊಳೆಯುವ, ಕೊಂಚ ಮೇಣದ ಪದರ ಮತ್ತು ಕಂದು ಹಸಿರುಬಣ್ಣವನ್ನು ಕಾಫಿಗಿಡದ ಎಲೆಯು ಹೊಂದಿರುತ್ತದೆ. ಕಾಫಿಗಿಡದ ಎಲೆಗಳು ಸುಮಾರು 7 ರಿಂದ 8 ಇಂಚಿನವರೆಗೂ ಉದ್ದವಾಗಿರುತ್ತವೆ.

ಕಾಫಿ ಗಿಡದ ಬೇರುಗಳು ಮುಖ್ಯವಾಗಿ ಮೂರು ಬಗೆಯವು. ಬದಿಯ ಬೇರು (Lateral Roots), ನಲ್ಲಿ ಬೇರು (Tap Roots) ಮತ್ತು ಮೇವಿನ ಬೇರು (Feeder roots). ಬದಿಯ ಬೇರುಗಳು ಗಿಡದಿಂದ ಸುಮಾರು 2 ಮೀಟರ್ಗಳವರೆಗೂ ಹರಡಿಕೊಳ್ಳಬಲ್ಲವು. ನಲ್ಲಿ ಬೇರುಗಳು ನೆಲದ ಅಡಿಗೆ ಸುಮಾರು 1 ರಿಂದ 1.5 ಅಡಿಗಳಷ್ಟು ಬೆಳೆಯಬಲ್ಲವು. ಮೇವಿನ ಬೇರುಗಳು ನೆಲದಿಂದ ಕೇವಲ 20 ಸೆ.ಮೀ. ನಷ್ಟು ಕೆಳಗೆ ಇರುತ್ತವೆ ಆದರೆ ಇವು ಗಿಡದ ಬುಡದಿಂದ ಸುಮಾರು 60-90 ಸೆ.ಮೀ. ದೂರದಿಂದ ಹರಡಿಕೊಂಡಿರುತ್ತವೆ. ಒಟ್ಟಿನಲ್ಲಿ ಗಿಡದ ಬುಡದಿಂದ 30 ರಿಂದ 60 ಸೆ. ಮೀ. ನಷ್ಟು ಆಳಕ್ಕೆ ಸಾಕಷ್ಟು ಕಾಫಿಗಿಡದ ಬೇರುಗಳನ್ನು ಕಾಣಬಹುದು. ಒಂದು ಕಾಫಿ ಗಿಡದ ಬೇರು ಸುಮಾರು 500 ಚದರ ಮೀಟರಿನಷ್ಟು ನೆಲದ ಜಾಗದಿಂದ ನೀರು ಮತ್ತು ಆರಯ್ಕೆಯನ್ನು ಹೀರಿಕೊಳ್ಳಬಲ್ಲವು. ಗಟ್ಟಿಯಾದ ಮತ್ತು ದಪ್ಪನಾಗಿರುವ ಕಾಫಿ ಗಿಡದ ಬೇರು ಬೆಳೆಯಲು ನೈಟ್ರೋಜನ್, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ನ ಅವಶ್ಯಕತೆ ತೀರಾ ಇದೆ, ಅವನ್ನು ಹೀರಿಕೊಳ್ಳಲು ನೆರವಾಗುವಂತಹ ಬೇರಿನ ರೂಪು ರೇಶೆಯನ್ನು ಕಾಫಿ ಗಿಡವು ಹೊಂದಿದೆ.

ಕಾಫಿ ಬೆಳೆಯಲು ಬೇಕಾದ ಗಾಳಿಪಾಡು:
ಕಾಫಿಯ ಬೆಳವಣಿಗೆಗೆ ಸುಮಾರು 15 -28 ಡಿಗ್ರಿ ಸೆಲ್ಶಿಯಸ್ ಬಿಸುಪು ವರುಶವಿಡಿ ಇದ್ದರೆ ಒಳಿತು. ಕೊರೆಯುವ ಚಳಿಯಿದ್ದು, ಹಿಮ ಬೀಳುವಂತಹ ಜಾಗಗಳಲ್ಲಿ ಕಾಫಿಯ ಬೆಳವಣಿಗೆ ಸಾಧ್ಯವಿಲ್ಲ . ಹಾಗೆಯೇ ವರುಶಕ್ಕೆ 60-80 ಇಂಚು ಮಳೆ ಬೀಳಬೇಕು, ಜೊತೆಗೆ ಎರೆಡರಿಂದ ಮೂರು ತಿಂಗಳುಗಳ ಕಾಲ ಅತಿ ಕಡಿಮೆ ಮಳೆಯಿದ್ದು ಬಿಸಿಲು ಸಿಗುವಂತಿರಬೇಕು. ಮಳೆ ಇಲ್ಲವೇ ಚಳಿಯಿಂದ ಕಾಫಿಯ ಗಿಡಕ್ಕೆ ತಂಪು ಹೆಚ್ಚಾದರೆ ಅದರ ಬೆಳವಣಿಗೆಗೆ ಪೆಟ್ಟು ನೀಡಿದಂತೆ, ಹಾಗಾಗಿ ಮಳೆ ಬಿದ್ದೊಡನೆ ಅದರ ನೀರು ಹರಿದು ಹೋಗುವಂತೆ ಮತ್ತು ಗಾಳಿಯು ಚೆನ್ನಾಗಿ ಹರಿದಾಡುವಂತೆ ಇರುವ ಇಳಿಜಾರಿನ ಜಾಗಗಳಲ್ಲಿ ಕಾಫಿಯನ್ನು ಬೆಳಯಲಾಗುತ್ತದೆ. ನೀರು ಹರಿದುಕೊಂಡು ಹೋಗುವಂತಹ ಮತ್ತು ಗಾಳಿಗೆ ಸುಳಿದಾಡಲು ಜಾಗ ಕೊಡುವಂತಹ ಬೆಟ್ಟ-ಗುಡ್ಡದ ಜಾಗವು ಒಳ್ಳೆಯದಾಗಿರುತ್ತದೆ.

ಕಾಫಿ ಬೆಳೆಯಲು ಬೇಕಾಗಿರುವ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿರಬೇಕು ಮತ್ತು ಕೊಂಚ ಹುಳಿಯಾಗಿರಬೇಕು, ಅಂದರೆ ಮಣ್ಣಿನ ಹುಳಿಯಳತೆ (pH) 6.0 – 6.5 ಇರಬೇಕು. ಈ ಎಲ್ಲಾ ಗಾಳಿಪಾಡುಗಳು ಸಿಗಬೇಕೆಂದರೆ ಕಡಲಿನಿಂದ 1000 – 1500 ಮೀಟರ್ ನಷ್ಟು ಎತ್ತರದಲ್ಲಿರುವ ಬೆಟ್ಟ-ಗುಡ್ಡದ ಜಾಗಗಳನ್ನು ಕಾಫಿ ಬೆಳೆಯಲು ಆಯ್ಕೆ ಮಾಡಬೇಕಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿರುವ ಬೆಟ್ಟಗುಡ್ಡದ ಜಾಗಗಳು ಈ ಗಾಳಿಪಾಡನ್ನು ಹೊಂದಿದ್ದು ಕಾಫಿ ಬೆಳೆಯಲು ಸೂಕ್ತವಾಗಿವೆ.

ಕರ್ನಾಟಕದಲ್ಲಿ ಕಾಫಿಯ ಜೊತೆ ಕಾಳುಮೆಣಸು, ಶುಂಟಿ, ಅಡಿಕೆ, ಚಕ್ಕೆ ಹೀಗೆ ಕೆಲವು ಬೆಳೆಗಳನ್ನು ಒಟ್ಟೊಟ್ಟಿಗೆ ಬೆಳೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಕಾಡುಮರಗಳ ಜೊತೆಗೆ ಸಿಲ್ವರ್ ಇಲ್ಲವೇ ಇತರೆ ಮರಮಟ್ಟುಗಳಿಗೆ ನೆರವಾಗುವ ಮರಗಳ ಜೊತೆ ನೆರಳಿನಲ್ಲಿ ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗೆಗಳು:
ಕುಡಿಯುವ ಕಾಫಿಯಲ್ಲಿ ನಾವು ಹಲವಾರು ಬಗೆಗಳನ್ನು ಕಾಣುತ್ತೇವೆ ಹಾಗೆಯೇ ಕಾಫಿಯ ಗಿಡಗಳಲ್ಲಿಯೂ ಹಲವಾರು ಬಗೆಗಳಿವೆ, ಅವುಗಳಲ್ಲಿ ಕೆಲವೆಂದರೆ ಲಿಬೆರಿಕಾ (Liberica), ಗ್ರಾಸ್ ಇಂಡೆಂಟೆ (Gros Indente), ಎಕ್ಸೆಲ್ಸ (Excelsa), ಕುಯ್ಲೂ (Kouilou), ಪೆಟಿಟ್ ಇಂಡೇನಿಜೆ (Petit Indénizé), ಅರಾಬಿಕಾ ಮತ್ತು ರೊಬಸ್ಟಾ. ಇವುಗಳಲ್ಲಿ ಅರಾಬಿಕಾವನ್ನು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ನೂರಕ್ಕೆ 75% ನಷ್ಟು ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ರೊಬಸ್ಟಾ ಎರಡನೆಯ ಜಾಗವನ್ನು ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ರೊಬಸ್ಟಾವನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ 67.3% ರೊಬಸ್ಟಾ ಮತ್ತು ಉಳಿದ 32.7% ಅರಾಬಿಕ ಬೆಳೆಯಲಾಗುತ್ತದೆ.

ಹಾಗದರೆ ಅರಾಬಿಕಾ ಮತ್ತು ರೊಬಸ್ಟಾ ನಡುವಿನ ವ್ಯತ್ಯಾಸವೇನು?ಕಾಫಿಯನ್ನು ಮೊಳಕೆ ಬರಿಸುವುದರಿಂದ ಹಿಡಿದು ಹಣ್ಣು ಕುಯ್ಯುವುದರವರೆಗೂ ಇರುವ ಹಂತಗಳಾವವು? ಕುಡಿಯುವ ಕಾಫಿಯಲ್ಲಿ ಹಲವು ಬಗೆಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು? ಕಾಫಿಯ ಕುರಿತು ಮತ್ತೇನಾದರು ಸೋಜಿಗದ ಸುದ್ದಿಗಳು ಇದೆಯೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ಮೇಲಿನ ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

(ಚಿತ್ರ ಸೆಲೆ: Wikimediagktodaycoffeeplanet.nl)

 

ಹಸಿರುಮನೆಯ ಗುಟ್ಟು

ರತೀಶ ರತ್ನಾಕರ.

ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ ಬೆಳವಣಿಗೆಗೆ ಈ ಬಗೆಯ ಬೆಳಸುವಿಕೆ ನೆರವಾಗುತ್ತದೆ ಎಂದು ಅಲ್ಲಲ್ಲಿ ಕೇಳಿರುತ್ತೇವೆ. ಹಾಗದರೆ ಈ ಹಸಿರು ಮನೆಗಳು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತವೆ? ಇದರ ಕೆಲಸವೇನು ಎಂಬುದನ್ನು ಅರಿಯೋಣ ಬನ್ನಿ.

ಹಸಿರುಮನೆಯ ಹಿಂದಿರುವ ಅರಿಮೆ:

ನೇಸರನಿಂದ ನೆಲಕ್ಕೆ ಬೀಳುವ ಬೆಳಕಿನಿಂದಾಗಿ ನೆಲದಲ್ಲಿರುವ ಮಣ್ಣು, ನೀರು ಹಾಗು ಇತರೆ ವಸ್ತುಗಳು ಬಿಸಿಯಾಗುತ್ತವೆ. ಅಂದರೆ ನೇಸರನ ಬೆಳಕಿನ ಶಕ್ತಿಯನ್ನು ಹೀರಿಕೊಂಡು ಅದೇ ಶಕ್ತಿಯನ್ನು ಬಿಸಿಯ ರೂಪದಲ್ಲಿ ಹೊರಬಿಡುತ್ತವೆ ಹೀಗೆ ಹೊರಸೂಸುವ ಬಿಸಿಯು ತಿಳಿಗೆಂಪು ಕದಿರಾಗಿರುತ್ತದೆ (infrared rays). ನೇಸರನ ಬೆಳಕಿನ ಅಲೆಯಗಲ (wavelength) ಮತ್ತು ಮಣ್ಣು/ನೀರು ಹೊರಬಿಡುವ ತಿಳಿಗೆಂಪು ಕದಿರಿನ (infrared rays) ಅಲೆಯಗಲ ಬೇರೆ ಬೇರೆಯಾಗಿರುತ್ತದೆ. ಈ ಅಲೆಯಗಲದ ಆದಾರದ ಮೇಲೆ ಈ ಕಿರಣಗಳು ಕೆಲವು ವಸ್ತುಗಳ ಮೂಲಕ ಹಾದುಹೋಗಲಾರವು. ಉದಾಹರಣೆಗೆಗೆ , ನೇಸರನ ಬೆಳಕು ಗೋಡೆಗಳ ಮೂಲಕ ಹಾದುಹೋಗಲಾಗದು ಆದರೆ ರೇಡಿಯೋ ಅಲೆಗಳು ಗೋಡೆಗಳಮೂಲಕ ಹಾದುಹೋಗವುವು ಅದಕ್ಕೆ ಕಾರಣ ಅವುಗಳ ಅಲೆಯಗಲವೂ ಒಂದು. ಹೀಗೆ ನೇಸರನ ಬೆಳಕು ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗುವುದು ಆದರೆ ತಿಳಿಗೆಂಪು ಕದಿರು ತಮ್ಮ ಅಲೆಯಗಲದಿಂದಾಗಿ ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗಲಾರವು.

ಒಂದು ಹಸಿರುಮನೆಯು ಕಾಲಿ ಕೋಣೆಯಂತಿದ್ದು ಅದರ ಗೋಡೆ ಹಾಗು ಮಾಡನ್ನು ಗಾಜು ಇಲ್ಲವೇ ಪ್ಲಾಸ್ಟಿಕ್ ನಿಂದ ಕಟ್ಟಿರುತ್ತಾರೆ. ಈ ಗಾಜು/ಪ್ಲಾಸ್ಟಿಕ್ ನಿಂದ ನೇಸರನ ಬೆಳಕು ಹರಿದು ಹಸಿರುಮನೆಯ ಒಳಗೆ ಬರುತ್ತದೆ. ಹೀಗೆ ಒಳಗೆ ಬಂದ ನೇಸರನ ಬೆಳಕು ಮಣ್ಣಿನ ಮೇಲ್ಬಾಗ ಇಲ್ಲವೇ ಗಿಡಗಳಲ್ಲಿರುವ ತೇವವನ್ನು (humidity) ಆರಿಸುತ್ತದೆ ಮತ್ತು ಬಿಸಿಯನ್ನು ಅಂದರೆ ತಿಳಿಗೆಂಪು ಕದಿರನ್ನು (infrared rays) ಹೊರಹಾಕತೊಡಗುತ್ತವೆ.

ಹಸಿರುಮನೆಯ ಒಳಗಿರುವ ಮಣ್ಣು ನೇಸರನ ಬೆಳಕು ಬಿದ್ದೊಡನೆ ಬಿಸಿಯಾಗಿ ಆ ಬಿಸಿಯನ್ನು ಮಣ್ಣಿನ ಮೇಲ್ಬಾಗದಲ್ಲಿರುವ ಗಾಳಿಗೆ ಸಾಗಿಸುತ್ತದೆ. ಇದರಿಂದ ಮಣ್ಣಿನ ಮೇಲ್ಭಾಗದ ಗಾಳಿ ಮೊದಲು ಬಿಸಿಯಾಗತೊಡಗುತ್ತದೆ. ಹೀಗೆ ಬಿಸಿಯಾದ ಗಾಳಿಯ ದಟ್ಟಣೆ (Density) ಕಡಿಮೆಯಿರುವುದರಿಂದ ಇದು ಹರಡಿಕೊಂಡು ನೆಲದಿಂದ ಮೇಲೇರುವುದು ಅದರ ಗುಣ ಹಾಗಾಗಿ ಬಿಸಿಗಾಳಿಯು ಹರಡಿಕೊಂಡು ಮೇಲೇರುತ್ತದೆ. ಹಸಿರುಮನೆಯ ಚಾವಣಿಯ ಹತ್ತಿರದ ತಂಪನೆಯಗಾಳಿಯು ಬಿಸಿಗಾಳಿಗಿಂತ ಹೆಚ್ಚು ದಟ್ಟಣೆ ಹೊಂದಿರುವುದರಿಂದ ಇದು ಕೆಳಭಾಗಕ್ಕೆ ಬರುತ್ತದೆ. ಈ ತಂಪುಗಾಳಿಯು ಮಣ್ಣಿನಿಂದ ಹೊರಬರುತ್ತಿರುವ ಬಿಸಿಯನ್ನು ಹೀರಿಕೊಂಡು ಬಿಸಿಗಾಳಿಯಾಗಿ ಮತ್ತೆ ಮೇಲೇರತೊಡಗುತ್ತದೆ. ಹೀಗೆ ಮಣ್ಣಿನ ಮೇಲ್ಬಾಗದ ಕಡೆಯಿಂದ ಹಸಿರುಮನೆಯ ಚಾವಣಿಯ ಕಡೆಗೆ ಗಾಳಿಯು ಬಿಸಿಯಾಗತೊಡಗುತ್ತದೆ.

ಹಸಿರುಮನೆಗೆ ಬಳಸುವ ಗಾಜು/ಪ್ಲಾಸ್ಟಿಕ್‍ನ ಗುಣವೆಂದರೆ ಅದು ನೇಸರನ ಬೆಳಕನ್ನು ತನ್ನ ಮೂಲಕ ಹರಿಯಲು ಬಿಡುತ್ತದೆ ಆದರೆ ಹೆಚ್ಚು ಅಲೆಯಗಲ ಹೊಂದಿರುವ ಕಿರಣಗಳನ್ನು ಅಂದರೆ infrared rays ನ್ನು ತನ್ನ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಮೊದಲೇ ತಿಳಿದಿದ್ದೇವೆ. ಹೀಗಾಗಿ ಮಣ್ಣಿನಿಂದ ಹೊರಬಂದ ಬಿಸಿಯು ಹಸಿರುಮನೆಯ ಗಾಳಿಗೆ ಸೇರಿ ಗಾಜು/ಪ್ಲಾಸ್ಟಿಕ್ ಮೂಲಕ ಹೊರಹೋಗಲಾಗದೆ ಇರುತ್ತದೆ. ಇದರಿಂದ ಹಸಿರುಮನೆಯ ಒಳಗಿನ ಗಾಳಿಯು ಬಿಸಿಯಾಗಿ, ಹಸಿರುಮನೆ ಹೊರಗಿನ ಗಾಳಿಯ ಬಿಸುಪಿಗಿಂತ (temperature) ಹೆಚ್ಚಿನ ಬಿಸುಪನ್ನು ಹೊಂದಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಹಸಿರುಮನೆಯ ಒಳಗೆ ಯಾವಾಗಲೂ ಹೊರಗಿನ ಗಾಳಿಪಾಡಿಗಿಂತ ಹೆಚ್ಚಿನ ಬಿಸುಪು ಇರುತ್ತದೆ. ಈ ಹೆಚ್ಚಿನ ಬಿಸುಪು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದೆ ನೋಡೋಣ.

ಹಗಲಿನ ಹೊತ್ತು ನೇಸರನ ಬೆಳಕಿನಿಂದ ಹಸಿರುಮನೆಯ ಒಳಗೆ ಹೆಚ್ಚಿನ ಬಿಸುಪು ಇದ್ದರೆ ಇನ್ನೂ ಇರುಳಿನ ಹೊತ್ತಿನಲ್ಲಿ ಇಲ್ಲಿ ಬೆಚ್ಚಗಿನ ಗಾಳಿ ಇರುತ್ತದೆ. ಇದಕ್ಕೆ ಕಾರಣ, ಹಗಲೆಲ್ಲಾ ನೇಸರನ ಬೆಳಕಿನಿಂದ ಬಿಸಿಯಾದ ಹಸಿರು ಮನೆಯೊಳಗಿನ ಮಣ್ಣು ತನ್ನಲ್ಲಿರುವ ಬಿಸುಪನ್ನು ರಾತ್ರಿಯ ಹೊತ್ತು ಹೊರಗಾಳಿಗೆ ಬಿಡಲಾರಂಬಿಸುತ್ತದೆ. ಹಾಗು ಈ ಬಿಸಿಯನ್ನು ಗಾಜು/ಪ್ಲಾಸ್ಟಿಕ್ಕಿನ ಗೊಡೆಯ ನೆರವಿನಿಂದ ಹಸಿರುಮನೆಯ ಒಳಗೇ ಹಿಡಿದಿಡಿಲಾಗುತ್ತದೆ. ಹಾಗಾಗಿ ಹಸಿರು ಮನೆಯ ಒಳಗಿನ ಬಿಸುಪು ಹೊರಗಿನ ಗಾಳಿಯ ಬಿಸುಪಿಗಿಂತ ಹೆಚ್ಚಿರುತ್ತದೆ ಮತ್ತು ಇದು ಗಿಡಗಳ ಸುತ್ತಲಿನ ಗಾಳಿಯನ್ನು ಕೂಡಲೇ ತಂಪಾಗುವುದನ್ನು ತಡೆಯುತ್ತದೆ.

ಗಿಡಗಳ ಬೆಳವಣಿಗೆಗೆ ಹಸಿರುಮನೆ ಹೇಗೆ ನೆರವಾಗುತ್ತದೆ?
ನೇಸರನ ಬೆಳಕನ್ನು ಹಸಿರುಮನೆಯ ಒಳಗೆ ಹಾಯಿಸಿ ಅದರಿಂದ ಬಿಸಿಯಾದ ಮಣ್ಣು/ಗಿಡ/ನೀರಿನಿಂದ ಹೊರಬರುವ ತಿಳಿಗೆಂಪು ಕದಿರನ್ನು (infrared rays) ಹಿಡಿದಿಟ್ಟುಕೊಳ್ಳುವುದರಿಂದ ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.

 

1. ಹೆಚ್ಚಿನ ಬಿಸುಪು ಗಿಡದ ಬೆಳವಣಿಗೆಗೆ ಉಪಕಾರಿ:
ಪ್ರತಿಯೊಂದು ಮರಗಿಡಗಳು ಸೂಲುಗೂಡುಗಳಿಂದ (cell) ಆಗಿರುತ್ತದೆ. ಈ ಸೂಲುಗೂಡುಗಳಲ್ಲಿ ದಿನಕ್ಕೆ ನೂರಾರು ಬಗೆಯ ರಾಸಾಯನಿಕ ಚಟುವಟಿಕೆಗಳು (chemical reaction) ನಡೆಯುತ್ತಿರುತ್ತವೆ, ಇವು ಸೂಲುಗೂಡುಗಳ ಬೆಳವಣಿಗೆಗೆ ನೆರವಾಗುತ್ತವೆ. ಹೀಗೆ ನಡೆಯುವ ರಾಸಾಯನಿಕ ಚಟುವಟಿಕೆಗಳಿಗೆ ದೊಳೆಗಳು (enzymes) ನೆರವನ್ನು ನೀಡುತ್ತವೆ. ಈ ದೊಳೆಗಳು ರಾಸಾಯನಿಕ ಚಟುವಟಿಕೆಗೆ ಬಿರುಗೆ (catalyst)ಯಂತೆ ಕೆಲಸ ಮಾಡುತ್ತವೆ. ಗಿಡದ ಸೂಲುಗೂಡುಗಳ ರಾಸಾಯನಿಕ ಚಟುವಟಿಕೆಯಲ್ಲಿ ‘ಬೆಳಕಿನ ಅಡುಗೆ ‘(photosynthesis) ಕೂಡ ಒಂದು. ಹೀಗೆ ಬೆಳಕಿನ ಒಂದುಗೆಗೆ ನೆರವಾಗುವ ದೊಳೆಗಳು ಕೆಲವು ಹುಳಿಯಳತೆ (pH) ಮತ್ತು ಬಿಸುಪಿನಲ್ಲಿ ಚೆನ್ನಾಗಿ ಕೆಲಸಮಾಡುತ್ತವೆ. ಅತಿ ಕಡಿಮೆ ಹುಳಿಯಳತೆ ಮತ್ತು ಕಡಿಮೆ ಬಿಸುಪು ಇದ್ದರೆ ಈ ದೊಳೆಗಳ ಕೆಲಸ ಕುಂದುತ್ತದೆ. ಹಾಗೆಯೇ ಅತಿ ಹೆಚ್ಚು ಹುಳಿಯಳತೆ ಮತ್ತು ಬಿಸುಪು ಇದ್ದರೂ ಈ ದೊಳೆಗಳು ತಮ್ಮ ಕೆಲಸಮಾಡಲಾರವು ಮತ್ತು ಸಾಯುಲೂ ಬಹುದು. ಹಾಗಾಗಿ, ಈ ದೊಳೆಗಳು ಚೆನ್ನಾಗಿ ತಮ್ಮ ಬಿರುಗೆಯ ಕೆಲಸವನ್ನು ಚೆನ್ನಾಗಿ ಮಾಡಲು ಒಂದು ಒಳ್ಳೆಯ ಬಿಸುಪು ಇರಬೇಕಾಗುತ್ತದೆ. ದೊಳೆಗಳ ಬಗೆಯ ಆಧಾರದ ಮೇಲೆ ಅವು ಹೆಚ್ಚು ಕೆಲಸ ಮಾಡುವ ಬಿಸುಪು ಬೇರೆ ಬೇರೆಯಾಗಿರುತ್ತದೆ.

ಹಸಿರುಮನೆಯ ಒಳಗೆ ಹೊರಗಿನ ಗಾಳಿಗಿಂತ ಹೆಚ್ಚಿನ ಬಿಸುಪು ಇರುವುದರಿಂದ ಗಿಡದ ಸೂಲುಗೂಡುಗಳ ದೊಳೆಗಳು ಈ ಬಿಸುಪಿನಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ನಡೆಸಿ ಬೆಳಕಿನ ಒಂದುಗೆಯನ್ನು ನಡೆಸುತ್ತಿರುತ್ತವೆ. ಗಿಡಗಳಿಗೆ ಬೇಕಾದ ಬಿಸುಪನ್ನು ಮೊದಲೇ ತಿಳಿದುಕೊಂಡು ಆ ಬಿಸುಪನ್ನು ಹಸಿರುಮನೆಯ ಒಳಗೆ ಕಾದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೇಸರನ ಬೆಳಕು ಹೆಚ್ಚಾಗಿ ಹಸಿರುಮನೆಯ ಒಳಗಿನ ಬಿಸುಪು ಬೇಕಾದ ಬಿಸುಪಿಗಿಂತ ಹೆಚ್ಚಾದರೆ ಗಾಳಿಕಿಂಡಿಗಳ (Ventilator) ಮೂಲಕ ಬಿಸಿಗಾಳಿಯನ್ನು ಹೊರಹಾಕಿ ಹೊರಗಿನ ತಂಪುಗಾಳಿಯನ್ನು ಹಸಿರುಮನೆಯ ಒಳಗೆ ಬರುವಂತೆ ಏರ್ಪಾಡು ಮಾಡಬೇಕಾಗುತ್ತದೆ. ಅದಕ್ಕಾಗಿ ಹಸಿರುಮನೆಯಲ್ಲಿ ಗಾಳಿಕಿಂಡಿಗಳನ್ನು ಇಟ್ಟಿರಬೇಕಾಗುತ್ತದೆ. ಹಸಿರುಮನೆಯ ಕಿಟಕಿ ಬಾಗಿಲುಗಳು ಕೂಡ ಗಾಳಿಕಿಂಡಿಗಳಾಗಿ ಕೆಲಸ ಮಾಡುತ್ತವೆ. ಹೀಗೆ ಹಗಲೆಲ್ಲಾ ಬಿಸುಪಿನಲ್ಲಿ ಹೆಚ್ಚಿನ ಏರುಪೇರಾಗದೇ, ಬೇಕಾದ ಬಿಸುಪನ್ನು ಕಾಯ್ದುಕೊಳ್ಳುವುದರಿಂದ ಗಿಡದ ದೊಳೆಗಳು ನೇಸರನ ಬೆಳಕು ಸಿಗುವವರೆಗೂ ಚೆನ್ನಾಗಿ ಕೆಲಸಮಾಡಿ ಬೆಳಕಿನ ಅಡುಗೆಯನ್ನು ನಡೆಸುತ್ತವೆ. ಇದರಿಂದ ಹಸಿರು ಮನೆಯ ಒಳಗೆ ಗಿಡಗಳು ಬೇಗನೇ ಮತ್ತು ಚೆನ್ನಾಗಿ ಬೆಳೆಯುತ್ತವೆ.

2. ಹೆಚ್ಚಿನ ತೇವ (humidity) ಗಿಡದ ಬೆಳವಣಿಗೆಗೆ ಉಪಕಾರಿ:
ನೇಸರನ ಬೆಳಕಿದ್ದಾಗ ಬೆಳಕಿನ ಒಂದುಗೆಯನ್ನು ಗಿಡಗಳು ನಡೆಸುತ್ತವೆ ಎಂದು ನಾವು ಮೊದಲೇ ತಿಳಿದಿದ್ದೇವೆ. ಈ ಬೆಳಕಿನ ಒಂದುಗೆಗೆ ನೀರನ್ನೂ ಕೂಡ ಗಿಡಗಳು ಬಳಸುತ್ತವೆ. ಹಾಗಾಗಿ ಹಸಿರುಮನೆಯ ಒಳಗೆ ಸಾಕಷ್ಟು ನೀರಿನ ಏರ್ಪಾಡು ಗಿಡಗಳಿಗೆ ಬೇಕಾಗುತ್ತದೆ. ಮಣ್ಣಿನಿಂದ ಆವಿಯಾದ ನೀರಿನ ತೇವ ಮತ್ತು ಗಿಡಗಳ ಬೆಳಕಿನ ಅಡುಗೆಯಿಂದ ಹೊರಬಂದ ತೇವ ಹಸಿರುಮನೆಯ ಒಳಗೆಯೇ ಇರುತ್ತದೆ, ಗಾಜು/ಪ್ಲಾಸ್ಟಿಕ್ ಗೋಡೆಗಳನ್ನು ದಾಟಿ ತೇವಾಂಶವು ಹೊರಹೋಗಲಾಗದು. ಇದರಿಂದ ಮಣ್ಣಿನಲ್ಲಿರುವ ನೀರು ಬೇಗನೆ ಆವಿಯಾಗುವುದನ್ನು ತಪ್ಪಿಸಬಹುದು ಮತ್ತು ಈ ನೀರನ್ನು ಗಿಡಗಳ ಬೆಳಕಿನ ಅಡುಗೆಗೆ ಒದಗಿಸುತ್ತಿರ ಬಹುದು. ಒಂದು ವೇಳೆ, ಹಸಿರು ಮನೆಯ ಒಳಗೆ ತೇವಾಂಶವು ಅಗತ್ಯಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಬೆಳಕಿನ ಅಡುಗೆಯಿಂದ ತೇವಾಂಶವನ್ನು ಹೊರಹಾಕಲು ತೊಡಕಾಗುತ್ತದೆ. ಹಾಗಾಗಿ ತೇವಾಂಶವನ್ನು ಬೇಕಾದಷ್ಟು ಮಾತ್ರ ಕಾಯ್ದುಕೊಳ್ಳಲು ಮತ್ತೊಮ್ಮೆ ಗಾಳಿಕಿಂಡಿಗಳ ನೆರವನ್ನು ಪಡೆಯಬಹುದು. ಒಳಗಿರುವ ತೇವದ ಗಾಳಿ ಹೊರಹೋಗಿ ಹೊರಗಿನ ಗಾಳಿ ಒಳಬರುವಂತೆ ಗಾಳಿಕಿಂಡಿಗಳನ್ನು ಹಸಿರುಮನೆಗಳಲ್ಲಿ ಅಳವಡಿಸಲಾಗಿರುತ್ತದೆ.

3. ಹೊರಗಿನ ಕ್ರಿಮಿಕೀಟಗಳಿಂದ ಕಾಯುವುದು.
ಹಸಿರುಮನೆಯು ಗಾಜು/ಪ್ಲಾಸ್ಟಿಕ್ ನ ಗೋಡೆಗಳಿಂದ ಕಟ್ಟಿರುವುದರಿಂದ ಗಿಡಗಳ ಬೆಳವಣಿಗೆಗೆ ತೊಂದರೆ ಕೊಡುವ ಹೊರಗಿನ ಕ್ರಿಮಿಕೀಟಗಳಿಂದ ದೂರವಿಡಬಹುದಾಗಿದೆ.

4. ಕೆಟ್ಟ ಗಾಳಿಪಾಡಿನಿಂದ ಕಾಯುವುದು.
ಹಸಿರುಮನೆಯ ಗಿಡಗಳನ್ನು ಅತಿ ಹೆಚ್ಚಿನ ಮಳೆ, ಗಾಳಿ ಮತ್ತು ಬಿಸಿಲಿನಿಂದ ಆಗುವ ತೊಂದರೆಗಳಿಂದ ಕಾಪಾಡಬಹುದು. ಅಲ್ಲದೇ ಇರುಳಿನ ಹೆಚ್ಚು ಹೊತ್ತು ಹಸಿರುಮನೆಯ ಒಳಗೆ ಬೆಚ್ಚಗಿನ ಗಾಳಿ ಇರುವುದರಿಂದ ತಂಪುಗಾಳಿಯಿಂದ ಗಿಡಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು. ಕೆಲವು ಕಡೆ ಹಸಿರುಮನೆಗಳಿಗೆ ಹಸಿರುಬಣ್ಣದ ಗಾಜು/ಪ್ಲಾಸ್ಟಿಕ್ ಅನ್ನು ಬಳಸಿರುತ್ತಾರೆ, ಇದು ನೇಸರನ ಬಿಸಿಲು ಅಗತ್ಯಕ್ಕಿಂತ ಹೆಚ್ಚಾಗಿ ಹಸಿರುಮನೆಯ ಒಳಗೆ ಬರದಂತೆ ತಡೆಯುತ್ತದೆ.

ಹೀಗೆ, ಹಸಿರುಮನೆಯನ್ನು ಬಳಸಿ ಗಿಡಗಳನ್ನು ಬೆಳಸುವುದರಿಂದ ಗಿಡಗಳಿಗೆ ಬೇಕಾದ ಬಿಸುಪು ಮತ್ತು ತೇವಾಂಶ ದಿನದ ಹೆಚ್ಚುಕಾಲ ಸಿಗುತ್ತಿರುತ್ತದೆ. ಇದರಿಂದ ಗಿಡಗಳು ತಮ್ಮ ಬೆಳಕಿನ ಒಂದುಗೆಯನ್ನ್ಯು ನಡೆಸಿ ಆದಷ್ಟು ಬೇಗ ಮತ್ತು ಚೆನ್ನಾಗಿ ಬೆಳೆಯುತ್ತವೆ. ಹಸಿರುಮನೆಯ ಬಿಸುಪು ಹಾಗು ತೇವಾಂಶವನ್ನು ನಮಗೆ ಬೇಕಾದ ಬಗೆಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಗಿದೆ. ಇದು ಹೆಚ್ಚು ಇಳುವರಿ ತರುವಲ್ಲಿ ನೆರವಾಗುತ್ತದೆ.

(ಮಾಹಿತಿ ಸೆಲೆ: www.ishs.org420magazine)

(ಚಿತ್ರ ಸೆಲೆ: wikipedia)

ಮರಗಿಡಗಳು ಬೆಳೆಯುವುದು ಹೇಗೆ?

ರತೀಶ ರತ್ನಾಕರ.

ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ಥಿತಿಯಲ್ಲಿ ಇರುತ್ತವೆ. ಮಳೆ ಬಿದ್ದೊಡನೆ ಚಿಗುರಿಕೊಂಡು ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಮರಗಳ ಈ ಬೆಳವಣಿಗೆ ಹೇಗೆ ನಡೆಯುತ್ತದೆ ಎಂದು ಒಮ್ಮೆ ಇಣುಕಿ ನೋಡಿಕೊಂಡು ಬರೋಣ.

ಮೊಳಕೆಯೊಡೆದ ಗಿಡದ ಎಲೆಯು ನೇಸರನ ಬೆಳಕು, ಮಣ್ಣಿನಿಂದ ಸಿಗುವ ನೀರು, ಆರಯ್ಕೆ (Nutrition), ಗಾಳಿಯಲ್ಲಿರುವ ಕಾರ್ಬನ್ ಡಯ್ ಆಕ್ಸಯ್ಡ್ ಮತ್ತು ಎಲೆಯಲ್ಲಿರುವ ಎಲೆಹಸಿರು (Chlorophyl) ಅನ್ನು ಬಳಸಿಕೊಂಡು ‘ಬೆಳಕಿನ ಅಡುಗೆ’ (Photo Synthesis)ಯ ಮೂಲಕ ಗಿಡಕ್ಕೆ ಬೇಕಾದ ಊಟವನ್ನು ಸಿದ್ದ ಮಾಡುತ್ತದೆ, ಜೊತೆಗೆ ಆಕ್ಸಿಜನ್ ಅನ್ನು ಹೊರಗಾಳಿಗೆ ಬಿಡುತ್ತದೆ. ಹೀಗೆ ಸಿದ್ದ ಮಾಡಿದ ಊಟವು ಗಿಡದ ಉಳಿದ ಭಾಗಗಳಿಗೆ ಹರಡಲಾಗುತ್ತದೆ ಇದು ಗಿಡದ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಮರಗಿಡಗಳು ಎರೆಡು ಬಗೆಯಲ್ಲಿ ಬೆಳೆಯುತ್ತವೆ, ಅವುಗಳ ಕುರಿತು ಅರಿಯೋಣ ಬನ್ನಿ.

ಮೊದಲನೆಯ ಬೆಳವಣಿಗೆಯು ಮರಗಿಡದ ಕೊಂಬೆ/ರಕ್ಕೆಗಳಲ್ಲಿ ನಡೆಯುತ್ತದೆ. ಗಿಡವು ಎತ್ತರವಾಗಿ ಬೆಳೆಯಲು ಇದು ನೆರವಾಗುತ್ತದೆ. ರಕ್ಕೆಯ ತುದಿಯಲ್ಲಿ ಕುಡಿ (Meristem) ಇರುತ್ತದೆ ಇದು ಗಿಡದ ಬೆಳವಣಿಗೆಗೆ ಬೇಕಾದ ಒಂದೇ ಬಗೆಯ ಸೂಲುಗೂಡುಗಳನ್ನು ಹೊಂದಿರುತ್ತದೆ. ಗಿಡದ ಬೇರಿನಿಂದ ನೀರು ಹಾಗು ಆರಯ್ಕೆ ದೊರೆತೊಡನೆ ಈ ಸೂಲುಗೂಡುಗಳು ಹಿಗ್ಗತೊಡಗುತ್ತವೆ ಮತ್ತು ಒಡೆದು ತನ್ನ ಎಣಿಕೆಯನ್ನು ಹೆಚ್ಚಿಸತೊಡಗುತ್ತದೆ. ಈ ಸೂಲುಗೂಡುಗಳ ಒಡೆಯುವಿಕೆಯಿಂದ ಗಿಡದ ಕೊಂಬೆಗಳಲ್ಲಿ ಕುಡಿಯು ಉದ್ದವಾಗಿ ಬೆಳೆದು ಹೊಸ ಎಲೆ/ಮೊಗ್ಗು ಚಿಗುರಲಾರಂಬಿಸುತ್ತದೆ. ಈ ಕೆಲಸ ನಡೆಯಲು ಗಿಡಕ್ಕೆ ಬೇಕಾದ ನೇಸರನ ಬೆಳಕು, ಕಾವು, ಗಾಳಿ, ನೀರು ಮತ್ತು ಮಣ್ಣಿನಿಂದ ಸಿಗುವ ಆರಯ್ಕೆಯ ಪಾತ್ರ ದೊಡ್ಡದಿದೆ. ಚಳಿಗಾಲದಲ್ಲಿ ಇರುಳಿಗಿಂತ ಹಗಲು ಚಿಕ್ಕದಾಗಿರುತ್ತದೆ, ಬಿಸುಪು ಕಡಿಮೆಯಿರುತ್ತದೆ, ಸಾಕಷ್ಟು ನೀರು ಸಿಗುವುದಿಲ್ಲ ಮತ್ತು ನೇಸರನ ಬೆಳಕಿನ ತೀವ್ರತೆ ಕೂಡ ಕಡಿಮೆಯಿರುತ್ತದೆ.

ಹಾಗಾಗಿ ಚಳಿಗಾಲದ ಗಾಳಿಪಾಡು ಒಟ್ಟಾರೆಯಾಗಿ ಮರಗಿಡಗಳ ಬೆಳವಣಿಗೆಗೆ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಇವು ಚಳಿಗಾಲದಲ್ಲಿ ಒರಗಿದ ಸ್ಥಿತಿಯಲ್ಲಿ ಇರುತ್ತವೆ. ಬೇಸಿಗೆ ಶುರುವಾಗುವ ಮುನ್ನ ಒಂದು ಮಳೆ ಬಿದ್ದೊಡನೆ ಮರಗಿಡಗಳ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಗುತ್ತದೆ ಮತ್ತು ಇವು ಚಿಗುರತೊಡಗುತ್ತವೆ. ಇದಲ್ಲದೇ, ಬೇರುಗಳ ತುದಿಯಲ್ಲಿಯೂ ಕೂಡ ಈ ಬೇರಿನ ಕುಡಿ (Root apical meristem) ಇರುತ್ತದೆ, ಇವು ಕೂಡ ತನ್ನ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಕ್ಕೊಡನೆ ತನ್ನ ಸೂಲುಗೂಡುಗಳನ್ನು ಹಿಗ್ಗಿಸಿ, ಒಡೆದು ಬೆಳೆಯುತ್ತಾ ಹೋಗುತ್ತವೆ. ಮರಗಿಡಗಳ ತಳಿಗಳಿಗೆ ತಕ್ಕಂತೆ ಬೇರಿನ ಇಲ್ಲವೇ ಕಾಂಡದ ಬೆಳವಣಿಗೆ ನಡೆಯುತ್ತದೆ.

ಎರಡನೆ ಬಗೆಯ ಬೆಳವಣಿಗೆಯಲ್ಲಿ ಬಗೆಯಲ್ಲಿ ಮರದ ಕಾಂಡವು ತನ್ನ ಅಗಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಮರದ ಕಾಂಡದಲ್ಲಿ ಒಟ್ಟು ನಾಲ್ಕು ಭಾಗಗಳಿರುತ್ತವೆ ಅವು ತೊಗಟೆ/ಸಿಪ್ಪೆ, ನೀರ‍್ಗೊಳವೆ (Xylem), ಕೂಳ್ಗೊಳವೆ(Phloem), ತಿರುಳು (Cambium) ಮತ್ತು ನಡುಮರ (heartwood). ಇವುಗಳ ಕುರಿತು ಮಾಹಿತಿಯನ್ನು ಪಡೆಯೋಣ.

ತಿರುಳು: ಕಾಂಡದಲ್ಲಿ ಬೆಳೆಯುವ ತುಂಬಾ ಮುಖ್ಯವಾದ ಭಾಗ ಇದಾಗಿದೆ. ಇದರ ಸೂಲುಗೂಡುಗಳು ಅತಿ ಹೆಚ್ಚು ಹುರುಪಿನಿಂದ ಇರುತ್ತವೆ, ಗಿಡದ ಬೆಳವಣಿಗೆಗೆ ಅನುಕೂಲಕರ ಗಾಳಿಪಾಡು ಸಿಕ್ಕಾಗ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗು ಮಾರ್ಪಾಡಾಗುತ್ತವೆ. ಹೀಗೆ ಮೂಡಿದ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಹೊರ ಭಾಗಕ್ಕೆ ಸಾಗಿ ಕೂಳ್ಗೊಳವೆ ಆಗುತ್ತದೆ. ಮತ್ತೆ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಒಳಭಾಗಕ್ಕೆ ಸಾಗಿ ನೀರ‍್ಗೊಳವೆ ಆಗುತ್ತದೆ. ಹಾಗಾಗಿ ಈ ತಿರುಳು ಕೂಳ್ಗೊಳವೆ ಮತ್ತು ನೀರ‍್ಗೊಳವೆಯ ನಡುವೆ ಇರುತ್ತದೆ.

ನೀರ‍್ಗೊಳವೆ: ತಿರುಳಿನ ಒಳಭಾಗಕ್ಕೆ ಇರುವ ಈ ಕೊಳವೆಯು ತಿರುಳಿನಿಂದ ಒಳಭಾಗಕ್ಕೆ ಸರಿದ ಹೊಸ ಸೂಲುಗೂಡುಗಳಿಂದ ಆಗಿರುತ್ತದೆ. ಮರಗಿಡಗಳ ಬೇರಿನಲ್ಲಿ ಸಣ್ಣ ಸಣ್ಣ ಬೇರು ಕೂದಲುಗಳು ಇರುತ್ತವೆ, ಈ ಕೂದಲುಗಳ ನೆರವಿನಿಂದ ಮಣ್ಣಿನಲ್ಲಿರುವ ನೀರು ಮತ್ತು ಆರಯ್ಕೆಯನ್ನು ಬೇರುಗಳು ಎಳೆದುಕೊಳ್ಳುತ್ತವೆ. ಹೀಗೆ ಎಳೆದುಕೊಂಡ ನೀರು ಮತ್ತು ಆರಯ್ಕೆಯನ್ನು ನೀರ‍್ಗೊಳವೆಯ ಮೂಲಕ ಗಿಡದ ಎಲೆಗಳಿಗೆ ಸಾಗಿಸುತ್ತದೆ. ಮೊದಲೆ ತಿಳಿಸಿದಂತೆ ಗಿಡದ ಎಲೆಗಳ ಬೆಳಗಿನ ಒಂದುಗೆಗೆ ಇದು ಬೇಕಾಗುತ್ತದೆ. ಹೀಗೆ ನೀರ‍್ಗೊಳವೆಗಳು ನೆರವಾಗುತ್ತವೆ.

ನಡುಮರ: ತಿರುಳಿನಿಂದ ಹೊಸ ಹೊಸ ಸೂಲುಗೂಡುಗಳು ನೀರ‍್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ನೀರ‍್ಗೊಳವೆಯ ಸೂಲುಗೂಡುಗಳು ಮತ್ತಷ್ಟು ಒಳಕ್ಕೆ ಸರಿದು ಗಟ್ಟಿಯಾಗುತ್ತಾ ಹೋಗುತ್ತವೆ ಹೀಗೆ ಮರದ ಒಳಭಾಗಕ್ಕೆ ಸರಿದು ಗಟ್ಟಿಯಾದ ಸೂಲುಗೂಡುಗಳಿಂದ ನಡುಮರ ಉಂಟಾಗಿರುತ್ತದೆ. ಮರವು ಮೇಲಕ್ಕೆ ಬೆಳೆಯುತ್ತಿದ್ದಂತೆ ಬೇಕಾದ ಗಟ್ಟಿತನವನ್ನು ಇದು ಒದಗಿಸುತ್ತದೆ.

ಕೂಳ್ಗೊಳವೆ: ಬೆಳಕಿನ ಅಡುಗೆಯ (Photo Synthesis) ಮೂಲಕ ಎಲೆಗಳು ತನ್ನ ಊಟವನ್ನು ಸಿದ್ದ ಮಾಡುತ್ತವೆ ಎಂದು ಮೊದಲೇ ತಿಳಿದೆವು. ಹೀಗೆ ಸಿದ್ಧ ಮಾಡಿದ ಊಟವನ್ನು ಗಿಡದ ಉಳಿದ ಭಾಗಗಳಿಗೆ ಕೂಳ್ಗೊಳವೆಯ ಮೂಲಕ ಹರಡುತ್ತದೆ. ಕೂಳ್ಗೊಳವೆಯು ತಿರುಳಿನ ಹೊರಭಾಗಕ್ಕೆ ಇದ್ದು, ತಿರುಳಿನ ಹೊಸ ಸೂಲುಗೂಡುಗಳಿಂದ ಉಂಟಾಗಿರುತ್ತದೆ.

ತೊಗಟೆ/ಸಿಪ್ಪೆ: ತಿರುಳಿನ ಹೊಸ ಹೊಸ ಸೂಲುಗೂಡುಗಳು ಕೂಳ್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ಕೂಳ್ಗೊಳವೆಯ ಸೂಲುಗೂಡುಗಳು ಮತ್ತಷ್ಟು ಹೊರಕ್ಕೆ ಸರಿದು ಗಟ್ಟಿಯಾಗಿ ತೊಗಟೆ/ಸಿಪ್ಪೆ ಆಗುತ್ತದೆ. ಕಾಂಡದ ಒಳಭಾಗವನ್ನು ಗಾಳಿಪಾಡಿನಿಂದ ಕಾಪಾಡಲು ಇದು ನೆರವಾಗುತ್ತದೆ.

ಹೀಗೆ, ಕಾಂಡದ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗಿ, ನೀರ‍್ಗೊಳವೆ, ಕೂಳ್ಗೊಳವೆ, ನಡುಮರ ಮತ್ತು ತೊಗಟೆ ಸಿಪ್ಪೆಗಳಾಗಿ ಅಗಲವಾಗಿ ಬೆಳೆಯುತ್ತಾ ಹೋಗುತ್ತದೆ. ಒಟ್ಟಾರೆಯಾಗಿ, ಮರದ ಬೆಳವಣಿಗೆಯು ಬೇಸಿಗೆ ಹಾಗು ಮಳೆಗಾಲದಲ್ಲಿ ಹೆಚ್ಚಾಗಿ ಇರುತ್ತದೆ ಮರಕ್ಕೆ ಬೇಕಾದ ಗಾಳಿಪಾಡು ಈ ಕಾಲಗಳಲ್ಲಿ ಸಿಗುವುದು ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ನಾವು ಮಾರ್ಚ್ ತಿಂಗಳಲ್ಲಿ ಬೀಳುವ ಮಳೆಗೆ ಮರಗಿಡಗಳ ತುಂಬೆಲ್ಲಾ ಚಿಗುರನ್ನು ನೋಡುತ್ತೇವೆ.

ಸೆಲೆ: www.sciencedirect.com hort.ifas.ufl.edu 

 

ಬಿತ್ತಿದ ಬೀಜ ಮೊಳಕೆ ಒಡೆದೀತು ಹೇಗೆ?

ರತೀಶ ರತ್ನಾಕರ.

ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ ಮೊಳಕೆಯೊಡೆದು ಗಿಡವಾಗ ತೊಡಗುತ್ತದೆ. ತಾನಾಗಿಯೇ ಆಗುವ ಈ ಕೆಲಸ ಹಲವು ಹಂತಗಳಲ್ಲಿ ನಡೆಯುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೀಜವು ಹೇಗೆ ಮೊಳಕೆಯೊಡೆಯುತ್ತದೆ ಎಂದು ಅರಿಯುವ ಮೊದಲು ಬೀಜದ ಏರ್ಪಾಟಿನ (structure) ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ಬೀಜದಲ್ಲಿ ಈ ಕೆಳಗಿನ ಮೂರು ಭಾಗಗಳಿರುತ್ತವೆ.

ಬಸಿರ ಪೊರೆಕ (Endosperm) : ಬೀಜದ ಹೆಚ್ಚಿನ ಭಾಗವನ್ನು ಇದು ಪಡೆದುಕೊಂಡಿರುತ್ತದೆ. ಬೀಜದ ಬಸಿರಿಗೆ ಬೇಕಾಗುವ ಊಟವನ್ನು ಮತ್ತು ಆರಯ್ಕೆಯನ್ನು ಗಂಜಿಯ ರೂಪದಲ್ಲಿ ಈ ಬಸಿರ ಪೊರೆಕ ನೀಡುತ್ತದೆ, ಅಲ್ಲದೇ ಇದರಲ್ಲಿ ಎಣ್ಣೆ ಹಾಗು ಮುನ್ನು (protein) ಅಂಶಗಳು ಇರುತ್ತದೆ. ಇದು ಬಸಿರಿಗೆ ಬೇಕಾಗುವ ಆರಯ್ಕೆಯನ್ನು ಮಾಡುವುದಲ್ಲದೇ ಅದರ ಊಟವನ್ನು ಕೂಡಿಡುವ ಕೆಲಸವನ್ನು ಮಾಡುತ್ತದೆ. ಬೀಜದ ಹೆಚ್ಚಿನ ಪಾಲು ಬಸಿರ ಪೊರೆಕದಿಂದ ಕೂಡಿರುತ್ತದೆ.

ಬಸಿರು (Embryo): ಬೀಜದ ಬಸಿರು ಇದಾಗಿದ್ದು ಮುಂದೆ ಬೀಜವು ಮೊಳಕೆಯೊಡೆದು ಬೇರು, ಕಾಂಡ ಹಾಗು ಎಲೆಗಳಾಗಲು ಬೇಕಾಗುವಂತಹ ಗೂಡುಕಟ್ಟುಗಳನ್ನು (tissue) ಇದು ಹೊಂದಿರುತ್ತದೆ. ಜೊತೆಗೆ ಮೊಳಕೆ ಎಲೆಯ (cotyledon) ಗೂಡುಕಟ್ಟುಗಳು ಕೂಡ ಇರುತ್ತವೆ. ಇವು ಬೀಜದ ಬಸಿರಿಗೆ ಬೇಕಾಗಿರುವ ಊಟವನ್ನು ಪಕ್ಕದಲ್ಲಿರುವ ಬಸಿರ ಪೊರೆಕದಿಂದ ಬಸಿರಿಗೆ ಸಾಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ, ಬೀಜವು ಬಿಡುವ ಮೊದಲ ಎಲೆಯನ್ನು ಕಾಪಾಡಲು ಬೇಕಾಗಿರುವ ಕಾಪು (shield) ಈ ಮೊಳಕೆ ಎಲೆಯಲ್ಲಿ ಇರುತ್ತದೆ. ಬೀಜವು ಒಂದೆಲೆ ಗಿಡವಾಗಬೇಕೋ ಇಲ್ಲವೇ ಎರಡಲೆ ಗಿಡವಾಗಬೇಕೋ ಎಂಬುದು ಈ ಮೊಳಕೆ ಎಲೆಯ ಗೂಡುಕಟ್ಟುಗಳಲ್ಲೇ ಇರುತ್ತದೆ.

ಸಿಪ್ಪೆ: ಬಸಿರು ಹಾಗು ಬಸಿರ ಪೊರೆಕವನ್ನು ಸುತ್ತಿಕೊಂಡು ಎರವಾಗದಂತೆ ಕಾಪಾಡುವುದೇ ಸಿಪ್ಪೆ. ಸಿಪ್ಪೆಯು ಕೆಲವು ಬೀಜಗಳಲ್ಲಿ ತೆಳುವಾಗಿ (ಕಡಲೇ ಬೀಜದಲ್ಲಿರುವ ಹಾಗೆ), ಇನ್ನು ಕೆಲವು ಬೀಜಗಳಲ್ಲಿ ದಪ್ಪನಾಗಿ (ತೆಂಗಿನಕಾಯಿಯಲ್ಲಿರುವ ಹಾಗೆ) ಇರುತ್ತದೆ. ಹೊರಗಿನ ಹಾನಿಗಳಿಂದ ಬಸಿರನ್ನು ಕಾಪಾಡುವುದೇ ಇದರ ಮುಖ್ಯ ಕೆಲಸವಾಗಿರುತ್ತದೆ.

ಒಂದು ಬೀಜವು ಮೊಳಕೆಯೊಡೆಯಲು ಅದಕ್ಕೆ ತಕ್ಕನಾದ ಉಸಿರುಗಾಳಿ (oxygen), ನೀರು ಹಾಗು ಕಾವು ಬೇಕಾಗುತ್ತದೆ. ಬೀಜವು ಯಾವ ತಳಿ ಎಂಬುದರ ಮೇಲೆ ಬೇಕಾಗಿರುವ ಗಾಳಿ, ನೀರು ಮತ್ತು ಬಿಸುಪು ತೀರ್ಮಾನವಾಗುತ್ತದೆ. ಕೆಲವು ಬಗೆಯ ಬೀಜಗಳು ಮೊಳಕೆ ಒಡೆಯುವಲ್ಲಿ ಬೆಳಕು ಕೂಡ ತನ್ನ ಪಾತ್ರ ವಹಿಸುತ್ತದೆ. ಒಂದು ಬೀಜವು ತಾನು ಮೊಳಕೆಯೊಡೆಯಲು ಬೇಕಾದ ನೀರು, ಉಸಿರುಗಾಳಿ ಮತ್ತು ಬಿಸುಪಿಗೆ ತೆರೆದುಕೊಳ್ಳುವವರೆಗೂ ಒರಗಿದ (dormant) ಸ್ಥಿತಿಯಲ್ಲಿ ಇರುತ್ತದೆ. ಅದರ ಒಳಗಿರುವ ಬಸಿರಿಗೆ ಬಸಿರ ಪೊರೆಕ ಊಟ ಒದಗಿಸುತ್ತಿರುತ್ತದೆ, ಇದನ್ನು ಬಿಟ್ಟರೆ ಅದರಲ್ಲಿ ಯಾವ ಬೆಳವಣಿಗೆಯು ಆಗುತ್ತಿರುವುದಿಲ್ಲ. ಒಮ್ಮೆ ಬೇಕಾದ ನೀರು, ಉಸಿರುಗಾಳಿ ಹಾಗು ಬಿಸುಪಿಗೆ ತೆರೆದುಕೊಂಡಾಗ ಅದು ಮೊಳಕೆ ಒಡೆಯುವ ಕೆಲಸವನ್ನು ಆರಂಭಿಸುತ್ತದೆ.

ಬೀಜವು ಮೊಳಕೆ ಒಡೆಯಲು ಬೇಕಾದ ನೀರಿಗೆ ತಾಕಿದಾಗ ಹೊರಗಿನ ನೀರು ಬೀಜದ ಸಿಪ್ಪೆಯೊಳಗೆ ಒಳಹೀರಿಕೆಯ (imbibition) ಮೂಲಕ ಬರುತ್ತದೆ. ಸಿಪ್ಪೆಯೊಳಗೆ ಬಂದ ನೀರನ್ನು ಬಳಸಿಕೊಂಡು ಬಸಿರಿನಲ್ಲಿರುವ ಸೂಲುಗೂಡುಗಳು (cells) ತಮ್ಮ ತರುಮಾರ್ಪುವ (metabolism) ಕೆಲಸವನ್ನು ಹೆಚ್ಚುಗೊಳಿಸಿ ಹಿಗ್ಗಲಾರಂಬಿಸುತ್ತವೆ ಮತ್ತು ಕೆಲವು ಸೂಲುಗೂಡುಗಳು ಒಡೆದು ಹೆಚ್ಚಲಾರಂಬಿಸುತ್ತವೆ. ಬೆಳವಿಕ (auxins) ಮತ್ತು ಇತರೆ ಸುರಿಗೆಗಳು (harmones) ಕೂಡ ಬಸಿರಿನ ಬೆಳವಣಿಗೆಯನ್ನು ಹುರಿದುಂಬಿಸುತ್ತವೆ.

ಬೀಜದ ಒಳಗೆ ಬಂದಿರುವ ನೀರು, ನೀರ‍್ದೊಳೆಗಳನ್ನು (hydrolytic Enzymes) ಚುರುಕುಗೊಳಿಸುತ್ತವೆ ಇವು ಬಸಿರ ಪೊರೆಕದಲ್ಲಿರುವ ಎಣ್ಣೆ, ಮುನ್ನು (protien) ಮತ್ತು ಗಂಜಿಯನ್ನು ಒಡೆದು ಬಸಿರಿನ ತರುಮಾರ್ಪಿಗೆ ನೆರವಾಗುವಂತಹ ರಾಸಾಯನಿಕಗಳನ್ನು ಕೊಡುತ್ತವೆ. ಉಸಿರುಗಾಳಿ ಮತ್ತು ಬಿಸುಪು ಕೂಡ ಬಸಿರಿನ ತರುಮಾರ್ಪಿಗೆ ನೆರವಾಗುತ್ತವೆ. ಇವನ್ನೆಲ್ಲಾ ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುತ್ತಿರುವ ಬಸಿರಿಗೆ ಬೇಕಾಗಿರುವ ಆರಯ್ಕೆಯನ್ನು ಬಸಿರ ಪೊರೆಕ ಕೊಡುತ್ತಿರುತ್ತದೆ. ಮೊಳಕೆಯು ಒಡೆದು ಎಲೆಯನ್ನು ಬಿಟ್ಟು ನೇಸರನ ಬೆಳಕಿನ ನೆರವಿನಿಂದ ‘ಬೆಳಕಿನ ಒಂದುಗೆ’ (photosynthesis) ನಡೆಸಿ ತನ್ನ ಊಟವನ್ನು ತಾನೇ ಸಿದ್ದ ಮಾಡಿಕೊಳ್ಳುವವರೆಗೂ ಈ ಬಸಿರ ಪೊರೆಕ ನೋಡಿಕೊಳ್ಳುತ್ತಿರುತ್ತದೆ.

ಸಿಪ್ಪೆಯ ಒಳಗೆ ಬಸಿರು ಬೆಳೆಯುತ್ತಿದ್ದಂತೆ ಒಳಗಿನ ಒತ್ತಡ ಹೆಚ್ಚಾಗಿ ಸಿಪ್ಪೆಯು ಒಡೆದು ಬಿಡುತ್ತದೆ. ಸಿಪ್ಪೆಯನ್ನು ಒಡೆದ ಬಸಿರು ಮೊದಲು ತಾಯಿಬೇರಾಗಿ (radicle) ಹೊರಬರುತ್ತದೆ. ಈ ತಾಯಿಬೇರು ಸುತ್ತಲಿನಲ್ಲಿರುವ ಮಣ್ಣನ್ನು ಸೀಳಿಕೊಂಡು ಬೆಳೆಯತೊಡಗುತ್ತದೆ. ಮಣ್ಣಿನಲ್ಲಿರುವ ನೀರು, ಉಸಿರುಗಾಳಿ, ಬಿಸುಪು ಮತ್ತು ಆರಯ್ಕೆಗಳನ್ನು ಬಳಸಿಕೊಂಡು ಬಸಿರು ಮತ್ತಷ್ಟು ಬೆಳೆಯುತ್ತದೆ.

ಒಮ್ಮೆ ತಾಯಿಬೇರಿನ ಬೆಳವಣಿಗೆ ಗಟ್ಟಿಗೊಂಡಮೇಲೆ ಎಳೆಗರಿಯ(plumule) ಬೆಳವಣಿಗೆ ಶುರುವಾಗುತ್ತದೆ. ಎಳೆಗರಿಯು ಮಣ್ಣಿನ ಒಳಗಿನಿಂದ ನೇಸರನ ಬೆಳಕನ್ನು ಹುಡುಕಿಕೊಂಡು ನೆಲದ ಮೇಲ್ಭಾಗಕ್ಕೆ ಬರುತ್ತದೆ. ಹಲವು ಬಗೆಯ ಮೊಳಕೆಗಳಲ್ಲಿ ಎಳೆಗರಿಯನ್ನು ಕಾಯಲು ಬೀಜದ ಸಿಪ್ಪೆಯ ಭಾಗಗಳು ಅಂಟಿಕೊಂಡಿರುತ್ತದೆ. ಎಳೆಗರಿಯು ಬೆಳೆದು ಮೊದಲ ಮೊಳಕೆ ಎಲೆಗಳನ್ನು (Cotyledons) ಬಿಡುತ್ತದೆ ಆಗ ಈ ಸಿಪ್ಪೆಯ ಬಾಗಗಳು ಉದುರಿ ಬೀಳುತ್ತವೆ. ಈ ಎಲೆಗಳು ನೇಸರನ ಬೆಳಕಿನ ನೆರವಿನಿಂದ ತಮ್ಮ ಊಟವನ್ನು ಸಿದ್ದಮಾಡಲಾರಂಬಿಸುತ್ತವೆ. ಈ ಹೊತ್ತಿನಲ್ಲಿ ತಾಯಿಬೇರು ಕೂಡ ಕವಲೊಡೆದು ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ಮುಂದೆ ಮೊಳಕೆಯೊಡೆದ ಬೀಜದ ಕಾಂಡ ಹಾಗು ಎಲೆಗಳು ಬಿಟ್ಟು ಬೆಳೆಯುತ್ತದೆ.

ಹೀಗೆ ಒಂದು ಬೀಜವು ಮಣ್ಣಿಗೆ ಸೇರಿ ಮೊಳೆಕೆ ಒಡೆದು ಎಲೆಯಾಗುವವರೆಗೂ ಹಲವು ಹಂತಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ಕೆಲಸದಲ್ಲಿ, ಗಾಳಿ, ನೀರು, ಬಿಸುಪು ಮತ್ತು ಬೆಳಕು ದೊಡ್ಡ ಪಾತ್ರವನ್ನು ವಹಿಸುತ್ತವೆ.

 

(ಮಾಹಿತಿ ಸೆಲೆ :intechopen.comnature.com wikipedia.org), (ಚಿತ್ರ ಸೆಲೆ : commons.wikimedia.org)

ಕಾಯಿಯೊಂದು ಹಣ್ಣಾಗುವ ಬಗೆ

ರತೀಶ ರತ್ನಾಕರ.

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ ಮತ್ತು ಹಣ್ಣಿನ ನಡುವೆ ಬೇರ್ಮೆಯನ್ನು ಗುರುತಿಸಿದರೆ ಅದು ಹೆಚ್ಚಾಗಿ ಅದರ ಬಣ್ಣ ಮತ್ತು ರುಚಿಯಲ್ಲಿ ಬೇರೆ ಬೇರೆಯಾಗಿರುತ್ತವೆ. ಕಾಯಿಗಳು ಹೆಚ್ಚಾಗಿ ಹಸಿರು ಬಣ್ಣದಲ್ಲಿದ್ದು, ರುಚಿ ಮತ್ತು ಕಂಪು ಇಲ್ಲದೆ ಗಟ್ಟಿಯಾಗಿ ಇರುತ್ತವೆ. ಕಾಯಿಯು ಹಣ್ಣಾಗುತ್ತಾ ಬಂದಂತೆ ಬೇರೆ ಬಣ್ಣವನ್ನು ಪಡೆಯುತ್ತದೆ, ಕಾಯಿಗಿಂತ ಮೆತ್ತಗಾಗುತ್ತದೆ, ರುಚಿ ಮತ್ತು ಕಂಪನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಪ್ರಾಣಿ ಮತ್ತು ಹಕ್ಕಿಗಳನ್ನು ಸೆಳೆಯುತ್ತವೆ.

ಹೌದಲ್ಲ, ಈ ಕಾಯಿಯು ಹಣ್ಣಾದ ಮೇಲೆ ನಮಗೆ ಉಪಕಾರಿ. ಹಾಗಾದರೆ ಈ ಕಾಯಿಯು ಹೇಗೆ ಹಣ್ಣಾಗುತ್ತದೆ? ಬಣ್ಣ, ರುಚಿ, ಕಂಪನ್ನು ಹೇಗೆ ಪಡೆದುಕೊಳ್ಳುತ್ತದೆ? ಕಾಯಿಯಲ್ಲಿ ನಡೆಯುವ ಯಾವ ತಿರುಳು ಹಣ್ಣಾಗಲು ಕಾರಣ? ಬನ್ನಿ, ಈ ವಿಷಯಗಳ ಕುರಿತು ನಾವಿಂದು ಅರಿಯೋಣ.

ಹೂವಿನ ಗಂಡೆಳೆಗಳು(Anther) ಹೆಣ್ದುಂಡುಗಳೊಡನೆ(Stigma) ಸೇರುವುದನ್ನು ಹೂದುಂಬುವಿಕೆ (Pollination) ಎಂದು ಕರೆಯಲಾಗುತ್ತದೆ. ಯಾವುದೇ ಗಿಡ ಇಲ್ಲವೇ ಮರದಲ್ಲಿ ಹೂದುಂಬುವಿಕೆ ನಡೆದಾಗ ಹೀಚುಗಾಯಿ ಉಂಟಾಗುತ್ತದೆ. ಹೀಗೆ ಉಂಟಾದ ಹೀಚುಗಾಯಿಯ ತತ್ತಿಚೀಲದೊಳಗೆ(Ovary) ಹೊಸ ಬೀಜ ಹುಟ್ಟುತ್ತದೆ. ಈ ಬೀಜಗಳು ಬೆಳೆಯುತ್ತಿದ್ದಂತೆ ಸಯ್ಟೋಕಿನಿನ್ಸ್ (Cytokinins) ಎನ್ನುವ ಸೋರುಗೆಯನ್ನು (Hormone) ಹೊರಹಾಕುತ್ತವೆ. ಈ ಸೋರುಗೆಗಳು ತತ್ತಿಚೀಲದ ಗೋಡೆಯ ಬಳಿ ಬಂದು ಸೂಲುಗೂಡುಗಳನ್ನು (Cells) ಒಡೆದು ಹೊಸ ಹೊಸ ಸೂಲುಗೂಡುಗಳು ಮೂಡಿ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ. ಹಾಗೆಯೇ ಮುಂದುವರಿದು ಈ ಬೀಜಗಳು ಜಿಬ್ಬೆರೆಲಿಕ್ (Gibberellic) ಹುಳಿಯನ್ನು ಹೊರಹಾಕುತ್ತವೆ. ಈ ಹುಳಿಯು ಸೂಲುಗೂಡುಗಳನ್ನು ಹಿಗ್ಗಿಸಲು ನೆರವಾಗುತ್ತದೆ. ಹೀಗೆ ಸೂಲುಗೂಡುಗಳ ಒಡೆಯುವಿಕೆ ಮತ್ತು ಹಿಗ್ಗುವಿಕೆಯಿಂದ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ.

ಮರ, ಗಿಡ ಹಾಗು ಬಳ್ಳಿಗಳ ತಳಿಗಳ ಆಧಾರದ ಮೇಲೆ ಕಾಯಿಯು ಒಂದು ಹಂತದವರೆಗೆ ದೊಡ್ಡದಾಗುತ್ತಾ ಹೋಗುತ್ತದೆ. ಕಾಯಿಯು ಸಾಕಷ್ಟು ದೊಡ್ಡದಾದ ಮೇಲೆ ತಾಯಿಗಿಡವು ಅಬ್ಸಿಸಿಕ್ ಎನ್ನುವ ಸೋರುಗೆಯನ್ನು ಹೊರಬಿಡುತ್ತದೆ ಅದು ಕಾಯಿಯ ಬೀಜದೊಳಗಿರುವ ಬಸಿರನ್ನು (Embryo) ಒರಗಿದ(Dormant) ಸ್ಥಿತಿಯಲ್ಲಿ ದೂಡುತ್ತದೆ. ಆಗ ಬೀಜ ಮತ್ತು ಕಾಯಿ ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತವೆ.

ಒಂದು ಕಾಯಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ರಾಸಾಯನಿಕಗಳು ಇರುತ್ತವೆ.

ಗಂಜಿ (Starch) – ಕಾಯಿಯು ರುಚಿಯಾಗದಿರಲು ಇದೇ ಕಾರಣವಾಗಿರುತ್ತದೆ.
ಎಲೆಹಸಿರು (Chlorophyll) – ಕಾಯಿಯ ಹಸಿರು ಬಣ್ಣಕ್ಕೆ ಇದು ಕಾರಣವಾಗಿರುತ್ತದೆ.
ಹುಳಿ (acids) – ಇದರಿಂದ ಕಾಯಿಯು ತುಂಬಾ ಹುಳಿ ಹುಳಿಯಾಗಿ ಇಲ್ಲವೇ ಒಗರಾಗಿರುತ್ತದೆ.
ಪೆಕ್ಟಿನ್ (Pectin) – ಇದೊಂದು ಬಗೆಯ ಪಾಲಿಸೆಕರಯ್ಡ್ ಆಗಿದ್ದು, ಕಾಯಿಯಲ್ಲಿನ ಸೂಲುಗೂಡುಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡಿರುವಂತೆ ನೋಡಿಕೊಳ್ಳುತ್ತದೆ. ಪೆಕ್ಟಿನ್ ದೆಸೆಯಿಂದಾಗಿ ಕಾಯಿಯು ಗಟ್ಟಿಯಾಗಿರುತ್ತದೆ.
ಹೆಬ್ಬುಸುರಿ (Large Organics)- ಇವು ಒಂದು ಬಗೆಯ ಸೀರಕೂಟಗಳಾಗಿದ್ದು (Molecules) ಕಾಯಿಯಲ್ಲಿ ಇರುತ್ತವೆ.

ಹಾಗಾದರೆ ಹಣ್ಣಾಗುವುದು ಹೇಗೆ?

ಯಾವುದೇ ಕಾಯಿಯು ಹಣ್ಣಾಗುವುದರಲ್ಲಿ ಇತಯ್ಲಿನ್ (Ethylene) ಪ್ರಮುಖ ಪಾತ್ರ ವಹಿಸುತ್ತದೆ. ಗಿಡದಲ್ಲಿರುವ ETR1 ಮತ್ತು CTR1 ಎಂಬ ಪೀಳಿಗಳು(genes) ಕಾಯಿಯನ್ನು ಹಣ್ಣಾಗದಂತೆ ತಡೆಹಿಡಿದಿರುತ್ತವೆ. ಯಾವುದೇ ಒಂದು ಮರ, ಗಿಡ ಇಲ್ಲವೇ ಬಳ್ಳಿಯ ಗುಣವೆಂದರೆ ತನ್ನಲ್ಲಿರುವ ಕಾಯಿ ಇಲ್ಲವೇ ಹಣ್ಣುಗಳಿಗೆ ಗಾಯವಾದಾಗ, ಕಾಯಿ/ಹಣ್ಣನ್ನು ಗಿಡದಿಂದ ಕಿತ್ತಾಗ, ಸುತ್ತಲಿನ ಗಾಳಿಪಾಡಿನಲ್ಲಿ ಏರುಪೇರಾಗಿ ತನ್ನ ಎಂದಿನ ಚಟುವಟಿಕೆಗಳಿಗೆ ಒತ್ತಡ ಬಂದಾಗ, ಒಟ್ಟಿನಲ್ಲಿ ಹೇಳುವುದಾದರೆ ತನ್ನ ಎಂದಿನ ಚಟುವಟಿಕೆಗೆ ಯಾವುದೇ ತೊಡಕಾದ ಕೂಡಲೆ ಅದು ಇತಯ್ಲಿನ್ ಗಾಳಿಯನ್ನು ಹೊರಹಾಕತೊಡಗುತ್ತದೆ. ಇತಯ್ಲಿನ್ ಅನ್ನು ತನ್ನ ಕಾಂಡ, ಬೇರು, ಹೂವು, ಕಾಯಿಗಳ ಮೂಲಕ ತನ್ನ ಸುರಕ್ಷತೆಗಾಗಿ ಹೊರಹಾಕುತ್ತದೆ. ಈ ಇತಯ್ಲಿನ್ ಮುಂದೆ ಕಾಯಿ ಹಣ್ಣಾಗುವಲ್ಲಿ ನೆರವಾಗುತ್ತದೆ.

 

ಯಾವುದೇ ಕಾಯಿ ಇತಯ್ಲಿನ್ ಗಾಳಿಗೆ ತಾಕಿದಾಗ ಅದರಲ್ಲಿರುವ ETR1 ಮತ್ತು CTR1 ಪೀಳಿಗಳು ತನ್ನ ಕೆಲಸವನ್ನು ನಿಲ್ಲಿಸುತ್ತವೆ ಮತ್ತು ಬೇರೆ ಪೀಳಿಗಳಿಗೆ ಕೆಲಸಮಾಡಲು ದಾರಿ ಮಾಡಿಕೊಡುತ್ತವೆ. ಕಾಯಿಯಲ್ಲಿರುವ ಇತರೆ ಪೀಳಿಗಳು ಅಮಯ್ಲೇಸಸ್ (amylases), ಹಯ್ಡ್ರೋಲೇಸಸ್ (hydrolases), ಕಯ್ನೇಸಸ್(kinases) ಮತ್ತು ಪೆಕ್ಟಿನೇಸಸ್ (pectinases) ಎಂಬ ದೊಳೆಗಳನ್ನು(enzyme) ಬಿಡುಗಡೆ ಮಾಡುತ್ತವೆ. ಈ ದೊಳೆಗಳು ಕಾಯಿಯನ್ನು ಹಣ್ಣು ಮಾಡಲು ನೆರವಾಗುತ್ತವೆ.

– ಅಮಯ್ಲೇಸಸ್ ದೊಳೆಯು ಕಾಯಿಯಲ್ಲಿರುವ ಗಂಜಿಯನ್ನು ಕಾರ್ಬೋಹೈಡ್ರೇಟ್ ಗಳಾಗಿ(Sugars) ಮಾರ್‍ಪಾಟುಗೊಳಿಸುತ್ತವೆ. ಇದು ಹಣ್ಣಿನ ರುಚಿಗೆ ಕಾರಣವಾಗಿರುತ್ತದೆ.
– ಹೈಡ್ರೊಲೇಸಸ್ ದೊಳೆಯು ಕಾಯಿಯಲ್ಲಿರುವ ಎಲೆಹಸಿರನ್ನು ಅಂತೋಸಯ್ನಿನ್ಸ್ (anthocynins) ಆಗಿ ಮಾರ್ಪಾಟುಗೊಳಿಸುತ್ತವೆ. ಇದು ಹಣ್ಣಿನ ಬಣ್ಣವನ್ನು ಹಸಿರಿನಿಂದ ಮತ್ತೊಂದು ಬಣ್ಣಕ್ಕೆ ತಿರುಗಿಸುತ್ತದೆ.
– ಕಯ್ನೇಸಸ್ ದೊಳೆಯು ಕಾಯಿಯಲ್ಲಿರುವ ಹುಳಿಗಳನ್ನು ತಟಸ್ಥ ಸೀರಕೂಟಗಳಾಗಿ (neutral molecules) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಹುಳಿ ಮತ್ತು ಒಗರನ್ನು ಕಡಿಮೆ ಮಾಡುತ್ತದೆ.
– ಪೆಕ್ಟಿನೇಸಸ್ ದೊಳೆಯು ಕಾಯಿಯ ಗಟ್ಟಿತನಕ್ಕೆ ಕಾರಣವಾದ ಪೆಕ್ಟಿನಿನ್ ಅನ್ನು ಕಡಿಮೆಗೊಳಿಸಿ ಹಣ್ಣನ್ನು ಕಾಯಿಗಿಂತ ಮೆತ್ತಗಾಗಿಸುತ್ತದೆ.
– ಹೈಡ್ರೊಲೇಸಸ್ ದೊಳೆಯು ಹೆಬ್ಬುಸುರಿಗಳನ್ನು ಕಂಪು ಬೀರುವ ಸೀರುಗಳಾಗಿ (aromatic compounds) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಕಂಪಿಗೆ ಕಾರಣವಾಗುತ್ತದೆ.

ಹೀಗೆ ಕಾಯಿಯು ಇತಯ್ಲಿನ್ ಗಾಳಿಗೆ ತೆರೆದುಕೊಂಡೊಡನೆ ಹಲವಾರು ರಾಸಾಯನಿಕೆ ಚಟುವಟಿಕೆಗಳು ನಡೆದು ಹಣ್ಣಾಗುತ್ತದೆ. ಕೆಲವು ಕಾಯಿಗಳು ಮರ/ಗಿಡದಿಂದ ಕಿತ್ತ ಮೇಲೂ ಇತಯ್ಲೀನ್ ಗಾಳಿಯ ನೆರವಿನಿಂದ ಹಣ್ಣಾಗುತ್ತವೆ ಇಂತಹವನ್ನು ಬಿಡಿಮಾಗು (Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಎತ್ತುಗೆಗೆ, ಸೇಬು, ಬಾಳೆಹಣ್ಣು, ಸೀಬೆಹಣ್ಣು. ಇನ್ನು ಕೆಲವು ಹಣ್ಣುಗಳು ಮರ/ಗಿಡದಲ್ಲಿ ಇದ್ದರೆ ಮಾತ್ರ ಹಣ್ಣಾಗಬಲ್ಲವು, ಕಿತ್ತರೆ ಹಣ್ಣಾಗಲಾರವು ಅಂತವುಗಳನ್ನು ಗಿಡಮಾಗು (Non- Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಉದಾಹರಣೆಗೆಗೆ ದ್ರಾಕ್ಷಿ, ಸ್ಟ್ರಾಬೆರ್‍ರಿ.

 

ಸೆಲೆ:-

www.researchgate.net, ncbi, www.scientificamerican.com,