ಉಸಿರಾಟದ ಏರ‍್ಪಾಟು – ಬಾಗ 1

ಉಸಿರಾಟ (respiration) ಎಂದರೇನು?
ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು ಮತ್ತು ಹೊರ ಹಾಕುವುದು. ಈ ಮೂಲಕ ಉಸಿರ‍್ಗಾಳಿಯನ್ನು (oxygen) ಹೊರಗಿನ ಗಾಳಿಯಿಂದ ಮಯ್ಯಿಗೆ ಒದಗಿಸುವುದು ಮತ್ತು ಮಯ್ಯೊಳಗೆ ಉಂಟಾಗುವ ಬೇಡದ ಕಾರ‍್ಬನ್ ಡಯಾಕ್ಸಾಯಡ್ ನ್ನು (carbon dioxide) ಹೊರಹಾಕುವುದು.

ನಾವು ಏಕೆ ಉಸಿರಾಡಬೇಕು?
ನಮ್ಮ ಮಯ್ಯೊಳಗಿನ ಪ್ರತಿಯೊಂದು ಗೂಡು (cell) ಚನ್ನಾಗಿ ಕೆಲಸ ಮಾಡಲು ಶಕ್ತಿ ಬೇಕು. ಈ ಶಕ್ತಿ ನಾವು ತಿನ್ನುವ ಆಹಾರದಿಂದ ದೊರೆಯುತ್ತದೆ. ನಾವು ತಿನ್ನುವ ಆಹಾರದ ಅಂಶಗಳನ್ನು ಶಕ್ತಿಯನ್ನಾಗಿಸುವ ಕೆಲಸವನ್ನು ತರುಮಾರ‍್ಪಿಸುವಿಕೆ (metabolism) ಎಂದು ಕರೆಯುತ್ತಾರೆ. ತರುಮಾರ‍್ಪಿಸುವಿಕೆ ನಡೆಯಬೇಕೆಂದರೆ ಉಸಿರುಗಾಳಿ ಬೇಕು. ಈ ಉಸಿರುಗಾಳಿಯನ್ನು (oxygen) ಒದಗಿಸಲು ಉಸಿರಾಟವು ಬೇಕು.

ಕಾರ‍್ಬನ್ ಡಯಾಕ್ಸಾಯಡ್ (carbon di-oxide) ತರುಮಾರ‍್ಪಿಸುವಿಕೆಯ (ಆಹಾರವನ್ನು ಶಕ್ತಿಯನ್ನಾಗಿಸಿದ) ಬಳಿಕ ಉಳಿಯುವ ಕಸಗಳಲ್ಲೊಂದು. ಕಾರ‍್ಬನ್ ಡಯಾಕ್ಸಾಯಡ್, ಮಯ್ಯೊಳಗೇ ಉಳಿದುಕೊಂಡರೆ ಮಯ್ಯಿಗೆ ಕೆಡುಕುಂಟು ಮಾಡುತ್ತದೆ. ಗೂಡುಗಳಿಂದ ಕಾರ‍್ಬನ್ ಡಯಾಕ್ಸಾಯಡ್ ಹೊರಹಾಕಲು ಉಸಿರೇರ‍್ಪಾಟು ಬೇಕೇಬೇಕು.

ನಾವು ಉಸಿರಾಡುವ ಹಮ್ಮುಗೆಯನ್ನು ಅರಿಯುವ ಮೊದಲು, ಈ ಉಸಿರಾಟದಲ್ಲಿ ಪಾಲ್ಗೊಳ್ಳುವ ಇಟ್ಟಳಗಳ (structures) ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಉಸಿರೇರ‍್ಪಾಟಿನ ಒಡಲರಿಮೆಯಲ್ಲಿ (anatomy) ಮೂರು ಮುಕ್ಯ ಬಾಗಗಳಿವೆ:
1) ಗಾಳಿಜಾಡು (respiratory tract)
2) ಉಸಿರುಚೀಲಗಳು (lungs)
3) ಉಸಿರಾಟದ ಕಂಡಗಳು (respiratory muscles)

ಗಾಳಿಯಜಾಡು (respiratory tract): ಗಾಳಿಜಾಡನ್ನು, ಮೇಲ್ಗಾಳಿಜಾಡು (upper respiratory tract) ಹಾಗು ಕೆಳಗಾಳಿಜಾಡು (lower respiratory tract) ಎಂದು ಬೇರ‍್ಪಡಿಸಬಹುದಾಗಿದೆ. ಉಸಿರುಚೀಲ ಹಾಗು ಹೊರಗಿನ ವಾತಾವರಣಗಳ ನಡುವೆ, ಉಸಿರನ್ನು ಸಾಗಿಸಲು ಗಾಳಿಯಜಾಡು ನೆರವಾಗುತ್ತದೆ.
ಮೇಲ್ಗಾಳಿಜಾಡು (upper respiratory tract) ಮೂಗು, ಬಾಯಿ, ಗಂಟಲ್ಕುಳಿ (pharynx) ಮತ್ತು ಉಲಿಪೆಟ್ಟಿಗೆಗಳನ್ನು (larynx/voice box) ಒಳಗೊಂಡಿದೆ.

Respiration_1_1ಮೇಲ್ಗಾಳಿಜಾಡಿನ ಈ ಬಾಗಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1) ಮೂಗು ಮತ್ತು ಮೂಗಿನ ಕುಳಿ (nose & nasal cavity): (ಚಿತ್ರ 1 & 2) ಮೂಗು ಉಸಿರೇರ‍್ಪಾಟಿನ ಹೊರಗಿನ ಹೊಳ್ಳೆಯ ಬಾಗ. ಇವು ಗಾಳಿಜಾಡಿನ  ಮೊದಲನೆಯ ಹಂತವೂ ಹವ್ದು.

ಮೂಗು ಮೆಲ್ಲೆಲುಬು (cartilage), ಎಲುಬು (bone), ಕಂಡ (muscle) ಹಾಗು ತೊಗಲಿನಿಂದ (skin) ಮಾಡಲ್ಪಟ್ಟಿದೆ. ಇದು ಮೂಗಿನ ಕುಳಿಯ (nasal cavity) ಮುಂಬಾಗಕ್ಕೆ ಆನಿಕೆ (support) ಹಾಗು ಕಾಪನ್ನು (protection) ಒದಗಿಸುತ್ತದೆ.

ತಲೆಬುರುಡೆ ಹಾಗು ಮೂಗಿನೊಳಗೆ ಕಂಡು ಬರುವ ಟೊಳ್ಳಿನ ತಾಣವೇ ಮೂಗಿನ ಕುಳಿ (nasal cavity). ಈ ಕುಳಿಯ ಗೋಡೆಗಳ ಮೇಲೆ ಕೂದಲು ಹಾಗು ಲೋಳೆ ಪದರದ (mucus membrane) ಹೊದಿಕೆಯಿರುತ್ತದೆ.

Respiration_1_2ಮೂಗಿನ ಕುಳಿಯ ಮತ್ತೊಂದು ಮುಕ್ಯ ರಚನೆಯೆಂದರೆ ಮೂಗಿನ ಕೊಳಲ-ಎಲುಬುಗಳು (nasal turbinate bones). ಇವು ಕಿರಿದಾದ ಗುಂಗುರಿನ ಆಕಾರದ ಹೀರುಗದೆಲುಬುಗಳು. ಕೊಳಲ-ಎಲುಬುಗಳು (nasal turbinate) ಮೂಗಿನ ಕುಳಿಯನ್ನು ನಾಲ್ಕು ಕೊರಕಲಿನಂತಹ (groove-like) ಗಾಳಿದಾರಿಗಳನ್ನಾಗಿ ಬೇರ‍್ಪಡಿಸುತ್ತವೆ. ಹೀಗೆ ಮಾಡಲ್ಪಟ್ಟ ಗಾಳಿದಾರಿಯು ಉಸಿರಾಡುವಾಗ ಎಳೆದುಕೊಂಡ ಗಾಳಿಯು ಹದವಾಗಿ ಸಾಗಲು ನೆರವಾಗುತ್ತದೆ.

ಮೂಗಿನ ಕುಳಿಯ (nasal cavity) ಮುಕ್ಯ ಕೆಲಸಗಳೆಂದರೆ,

  1. ಒಳಗೆ ಎಳೆದುಕೊಳ್ಳುವ ಗಾಳಿಯನ್ನು ಮಯ್ ಬಿಸುಪಿನ (temperature) ಮಟ್ಟಕ್ಕೆ ಕಾಯಿಸುವುದು
  2. ಒಣಗಾಳಿಯ ನೀರಿನ ಅಂಶವನ್ನು ಹೆಚ್ಚಿಸುವುದು
  3. ಎಳೆದುಕೊಂಡ ಗಾಳಿಯು ಉಸಿರುಚೀಲವನ್ನು ತಲಪುವ ಮೊದಲು, ಗಾಳಿಯಲ್ಲಿ ಇರಬಹುದಾದ ನಂಜುಕಣಗಳು (toxic particles), ಆವಿ(gases), ದೂಳು, ಬೂಸ್ಟು(fungus), ದಂಡಾಣು(bacteria) ಹಾಗು ನಂಜುಳಗಳನ್ನು(virus) ಸಾದ್ಯವಾದಶ್ಟು ಮಟ್ಟಿಗೆ ಸೋಸುವುದು. ಗಾಳಿಯು ಉಸಿರುಚೀಲಗಳಿಂದ(lungs) ಹೊರಹೋಗುವಾಗ, ಆವಿ ಹಾಗು ಬಿಸುಪನ್ನು ಮೂಗಿನ ಕುಳಿ (nasal cavity) ಹೀರಿಕೊಳ್ಳುತ್ತದೆ.

2) ಬಾಯಿ / ಬಾಯ್ಕುಳಿ (oral cavity): ಬಾಯ್ಕುಳಿ ಉಸಿರಾಟದ ಎರಡನೇ ಹಂತದ ಕಂಡಿ. ಸಾಮಾನ್ಯವಾಗಿ ಉಸಿರಾಟವು ಮೂಗಿನ ಮೂಲಕ ನಡೆಯುತ್ತದೆ. ಹೆಚ್ಚಿನ ಮಟ್ಟದಲ್ಲಿ ನಮ್ಮ ಮಯ್ಗೆ ಉಸಿರಾಟವು ಬೇಕಾದಾಗ, ಬಾಯ್ಕುಳಿಯ ಮೂಲಕವೂ ಉಸಿರನ್ನು ಎಳೆದುಕೊಳ್ಳಬಹುದು. ಮೂಗಿನ ಕುಳಿಗೆ (nasal cavity) ಹೋಲಿಸಿದರೆ ಬಾಯ್ಕುಳಿಯ ಉಸಿರುಜಾಡು ಚಿಕ್ಕದಿರುತ್ತದೆ. ಈ ಕಾರಣದಿಂದಾಗಿ, ಬಾಯಿಯಲ್ಲಿ ಎಳೆದುಕೊಳ್ಳುವ ಗಾಳಿಗೆ ಬಿಸುಪು ಹಾಗು ಆವಿಯನ್ನು ಸೇರಿಸಲಾಗುವುದಿಲ್ಲ.

ಬಾಯ್ಕುಳಿಯಲ್ಲಿ  ಕೂದಲುಗಳು ಹಾಗು ಮಂದವಾದ ಅಂಟು ಲೋಳೆಯು ಇರದ ಕಾರಣ, ಬಾಯಿಯ ಮೂಲಕ ಒಳಗೆಳೆದುಕೊಳ್ಳುವ ಗಾಳಿಯು ಸೋಸುವಿಕೆಗೆ ಒಳಪಡುವುದಿಲ್ಲ. ಆದರೆ ಬಾಯ್ಕುಳಿಯ ಉಸಿರಾಟದಲ್ಲಿ ಒಂದು ಒಳಿತು ಇದೆ. ಅದೆಂದರೆ, ಬಾಯ್ಕುಳಿಯ ದುಂಡಳತೆ (diameter), ಮೂಗಿನ ಕುಳಿಗೆ ಹೋಲಿಸಿದರೆ, ತುಂಬಾ ದೊಡ್ಡದಿರುವುದರಿಂದ, ಬಾಯಿಯಲ್ಲಿ ಉಸಿರಾಡಿದಾಗ ಹೆಚ್ಚಿನ ಗಾಳಿಯನ್ನು ಕಡಿಮೆ ವೇಳೆಯಲ್ಲಿ ಎಳೆದುಕೊಳ್ಳಲು ಸಾದ್ಯ.

3) ಗಂಟಲ್ಕುಳಿ (pharynx): (ಚಿತ್ರ 1 & 3) ಇದು ಕಂಡದ (muscular) ನಳಿಕೆಯಂತಿದ್ದು, ಮೂಗಿನ ಕುಳಿಯ ಹಿಂತುದಿಯಿಂದ ಉಲಿಪೆಟ್ಟಿಗೆ (larynx/voice box) ಹಾಗು ಅನ್ನನಾಳದ (esophagus) ಮುಂತುದಿಯವರೆಗೂ ಚಾಚಿಕೊಂಡಿರುತ್ತದೆ.

ಗಂಟಲ್ಕುಳಿಯಲ್ಲಿ (pharynx) ಮೂರು ಬಾಗಗಳಿವೆ: ಮೂಗ್ಗಂಟಲು (nasopharynx), ಬಾಯ್ಗಂಟಲು (oropharynx) ಹಾಗು ಉಲಿಪೆಟ್ಟಿಗೆಗಂಟಲು (laryngopharynx).

Respiration_1_3ಮೂಗ್ಗಂಟಲು (nasopharynx) ಮೂಗಿನ ಕುಳಿಯ (nasal cavity) ಹಿಂಬದಿಯಲಿರುತ್ತದೆ. ಮೂಗಿನ ಕುಳಿಯ ಮೂಲಕ ಒಳಬರುವ ಗಾಳಿ, ಮೂಗ್ಗಂಟಲಿನಲ್ಲಿ (nasopharynx) ಹಾಯ್ದು, ಬಾಯ್ಕುಳಿಯ (oral cavity) ಹಿಂಬದಿಯಲ್ಲಿರುವ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಕುಳಿಯಿಂದ ಒಳಬರುವ ಗಾಳಿಯು, ನೇರವಾಗಿ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಗಂಟಲಿನಿಂದ ಗಾಳಿಯು ಉಲಿಪೆಟ್ಟಿಗೆಗಂಟಲೆಡೆಗೆ (laryngopharynx) ಸಾಗುತ್ತದೆ.

ಉಲಿಪೆಟ್ಟಿಗೆಗಂಟಲು ಸೇರಿದ ಗಾಳಿಯನ್ನು, ಕಿರುನಾಲಿಗೆಯು (epiglottis) ಉಲಿಪೆಟ್ಟಿಗೆಯ ಕಂಡಿಯೆಡೆಗೆ ತಿರುಗಿಸುತ್ತದೆ. ಕಿರುನಾಲಿಗೆ (epiglottis), ಹಿಂಪುಟಿವ ಮೆಲ್ಲೆಲುಬಿನಿಂದ (elastic cartilage) ಮಾಡಲ್ಪಟ್ಟಿರುವ ಮುಚ್ಚಳ; ಇದು ಅನ್ನನಾಳ (esophagus) ಹಾಗು ಉಸಿರುಗೊಳವೆಯ (trachea) ನಡುವಿನ ಗುಂಡಿಯಂತೆ (switch) ಕೆಲಸವನ್ನು ಮಾಡುತ್ತದೆ. ಗಂಟಲ್ಕುಳಿ (pharynx) ಉಸಿರನ್ನು ಸಾಗಿಸುವುದರ ಜೊತೆಗೆ, ಕೂಳನ್ನೂ ನುಂಗಲು ನೆರವಾಗುತ್ತದೆ.

ಉಸಿರಾಡುವಾಗ, ಕಿರುನಾಲಿಗೆ (epiglottis), ಅನ್ನನಾಳದ (esophagus) ಮೇಲ್ತುದಿಯ ಕಂಡಿಯನ್ನು ಮುಚ್ಚುವುದರ ಮೂಲಕ, ಗಾಳಿಯನ್ನು ಉಸಿರುಗೊಳವೆಯೆಡೆಗೆ ತಿರುಗಿಸುತ್ತದೆ. ಕೂಳನ್ನು ನುಂಗುವ ಹಮ್ಮುಗೆಯಲ್ಲಿ, ಇದೆ ಕಿರುನಾಲಿಗೆ (epiglottis), ಉಸಿರುಗೊಳವೆಯನ್ನು ಮುಚ್ಚುತ್ತದೆ; ಈ ಬಗೆಯಾಗಿ ಕೂಳು ಅನ್ನನಾಳದೊಳಕ್ಕೆ ಸಾಗಲು ನೆರವಾಗುತ್ತದೆ. ಇದರಿಂದ ಕೂಳು ಉಸಿರುಗೊಳವೆಯನ್ನು ಹೊಕ್ಕುವುದರಿಂದ, ಆಗಬಹುದಾದ ತೊಂದರೆಯನ್ನು ತಪ್ಪಿಸುತ್ತದೆ.

4) ಗಂಟಲಗೂಡು/ಉಲಿಪೆಟ್ಟಿಗೆ (larynx/voice box): (ಚಿತ್ರ 1, 4, 5, & 6 ) ಇದು ಉಲಿಪೆಟ್ಟಿಗೆಗಂಟಲು (laryngopharynx) ಹಾಗು ಉಸಿರುಗೊಳವೆಯನ್ನು (trachea) ಜೋಡಿಸುವ ಉಸಿರುಜಾಡಿನ (airway) ಬಾಗವಾಗಿದೆ.

ಮೇಲ್ಕೊರಳಿನ ಬಾಗದಲ್ಲಿ, ನಾಲಗೆ-ಎಲುವಿನ (hyoid bone) ತುಸು ಕೆಳಗೆ ಹಾಗು ಉಸಿರುಕೊಳವೆಯ (trachea) ಮೇಲೆ ಉಲಿಪೆಟ್ಟಿಗೆಯನ್ನು (larynx) ಕಾಣಬಹುದು. ಉಲಿಪೆಟ್ಟಿಗೆಯು ಹಲವು ಮೆಲ್ಲೆಲುಬಿನ (cartilage) ರಚನೆಗಳಿಂದ ಮಾಡಲ್ಪಟ್ಟಿದೆ.

Respiration_1_4ಕಿರುನಾಲಿಗೆ (epiglottis) ಕೂಡ ಉಲಿಪೆಟ್ಟಿಗೆಯನ್ನು ಮಾಡುವ ಮೆಲ್ಲೆಲುಬುಗಳ ತುಂಡುಗಳಲ್ಲೊಂದು. ಕಿರುನಾಲಿಗೆಯ (epiglottis) ಕೆಳಬಾಗದಲ್ಲಿ, ಗುರಾಣಿಕ ಮೆಲ್ಲೆಲುಬು (thyroid cartilage) ಇರುತ್ತದೆ; ಇದನ್ನು ಆದಮನ ಸೇಬು (adam’s apple) ಎಂದೂ ಕರೆಯುವುದುಂಟು. ಈ ಇಟ್ಟಳವು ಗಂಡಸರಲ್ಲಿ ದೊಡ್ಡದಿರುತ್ತದೆ; ಆದ್ದರಿಂದ ಕೊರಳಿನ ಮುಂಬಾಗದಲ್ಲಿ, ಇದು ಮುಂಚಾಚಿದ ಇಟ್ಟಳದಂತೆ ಕಾಣಿಸುತ್ತದೆ.

ಗುರಾಣಿಕ ಮೆಲ್ಲೆಲುಬು (thyroid cartilage), ಉಲಿಪೆಟ್ಟಿಗೆಯ (larynx) ಮುಂತುದಿಯನ್ನು ತೆರೆದಿಡುವುದರ ಜೊತೆಗೆ, ಉಲಿನೆರಕೆಗಳನ್ನು (vocal folds) ಕಾಯುವ ಕೆಲಸವನ್ನೂ ಮಾಡುತ್ತದೆ. ಗುರಾಣಿಕ ಮೆಲ್ಲೆಲುಬಿನ ಕೆಳಗೆ ಉಂಗುರದ ಆಕಾರವಿರುವ ಉಂಗುರಬಗೆ ಮೆಲ್ಲೆಲುಬು (cricoid cartilage) ಇರುತ್ತದೆ. ಉಂಗುರಬಗೆ ಮೆಲ್ಲುಬು (cricoid cartilage), ಉಲಿಪೆಟ್ಟಿಗೆಯ (larynx) ಹಿಂಬಾಗವನ್ನು ತೆರೆದ ನಿಲುವಿನಲ್ಲಿ (position) ಇಡಲು ನೆರವಾಗುತ್ತದೆ.

Respiration_1_5ಮೆಲ್ಲೆಲುಬುಗಳಲ್ಲದೆ, ಉಲಿಪೆಟ್ಟಿಗೆಯಲ್ಲಿ ‘ಉಲಿನೆರಕೆ’ಗಳೆಂಬ (vocal folds) ವಿಶೇಶ ರಚನೆಯೊಂದಿದೆ. ಉಲಿನೆರಕೆಗಳು ಮಾತು ಮತ್ತು ಹಾಡಿನ ಸಪ್ಪಳಗಳನ್ನು ಹುಟ್ಟಿಸುತ್ತವೆ. ಉಲಿನೆರಕೆ (vocal folds), ಉಲಿ ಸಪ್ಪಳಗಳನ್ನು (vocal sounds) ಉಂಟುಮಾಡಲು ಮಿಡಿಯುವ (vibrate) ಲೋಳ್ಪದರದ (mucus membrane) ನೆರಗೆಗಳಾಗಿವೆ. ಉಲಿನೆರಕೆಗಳ ಬಿಗಿತ (tension) ಹಾಗು ಮಿಡಿತದ (vibration) ವೇಗವನ್ನು ಬದಲಾಯಿಸುವುದರ ಮೂಲಕ ಮಾತಿನ ಏರಿಳಿತವನ್ನು (pitch) ಬದಲಾಯಿಸಬಹುದು.

Respiration_1_6ಉಸಿರೇರ‍್ಪಾಟಿನ ಮುಂದಿನ ಕಂತಿನಲ್ಲಿ ಕೆಳಗಾಳಿಜಾಡು (lower respiratory tract), ಉಸಿರುಚೀಲಗಳು (lungs) ಹಾಗು ಉಸಿರೇರ‍್ಪಾಟಿನ ಕಂಡಗಳ ಒಡಲರಿಮೆಯನ್ನು (anatomy) ತಿಳಿಸಿಕೊಡಲಾಗುವುದು

(ಮಾಹಿತಿ ಮತ್ತು ಚಿತ್ರ ಸೆಲೆಗಳು: innerbody, buzzle.comanswers.com, riversideonline.com, intechopen.com)

(ಈ ಬರಹವು ಹೊಸಬರಹದಲ್ಲಿದೆ)

ಹುರಿಕಟ್ಟಿನ ಏರ‍್ಪಾಟು – ಕೀಲುಗಳು

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ-4:

ಕಾರಿನ ಬಿಡಿಬಾಗಗಳಾಗಲಿ ಇಲ್ಲವೇ ಮನೆಯ ಬಾಗಿಲನ್ನು ಚವ್ಕಟ್ಟಿಗೆ ಅಣಿಗೊಳಿಸುವುದಕ್ಕಾಗಲಿ, ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಎರಡು ಇಲ್ಲವೆ ಹಲವು ಬಿಡಿಬಾಗಗಳನ್ನು ಒಂದಕ್ಕೊಂದು ಜೋಡಿಸಲು ಜಂಟಿಗಳನ್ನು (joint) ಬಳಸಲಾಗುತ್ತದೆ. ಈ ಜಂಟಿಗಳು ಬಿಡಿಬಾಗಗಳನ್ನು ಹಿಡಿದಿಡುವುದರ ಜತೆಗೆ ಅವುಗಳು ಸುಲಬವಾಗಿ ಕದಲಲು ಕೂಡ ನೆರವಾಗುತ್ತವೆ. ನಮ್ಮ ಮಯ್ಯಲ್ಲಿ ಕೂಡ ಇಂತಹ ಹಲವಾರು ಬಗೆಯ ಜಂಟಿಗಳು ಅಣಿಗೊಂಡಿವೆ.

ಎರಡು ಇಲ್ಲವೇ ಹೆಚ್ಚು ಎಲುಬುಗಳು ಒಂದಕ್ಕೊಂದು ಕೂಡುವ ಜಾಗವನ್ನು ಕೀಲು ಇಲ್ಲವೇ ಜಂಟಿ (joint) ಎಂದು ಕರೆಯಲಾಗುತ್ತದೆ. ಜಂಟಿಗಳು ಹಾಗು ಅವುಗಳಿಗೆ ಹೊಂದಿಕೊಂಡ ಇಟ್ಟಳಗಳು (structures) ಒಟ್ಟಾಗಿ ಮಯ್ಯನ್ನು ಅಲುಗಾಡಿಸಲು (ತಲೆಬುರುಡೆ ಜಂಟಿಗಳನ್ನು ಹೊರತು ಪಡಿಸಿ) ಮತ್ತು ಮಯ್ಯಿಗೆ ಆಸರೆಯನ್ನು ಒದಗಿಸಲು ನೆರವಾಗುತ್ತವೆ.

ಜಂಟಿಗೆ ಹೊಂದಿಕೊಂಡಿರುವ ಮುಕ್ಯ ಇಟ್ಟಳಗಳೆಂದರೆ ಕಂಡರಗಳು (tendons), ತಂತುಗಟ್ಟುಗಳು (ligaments), ಕೀಲ್ಗೂಡುವ ಮೆಲ್ಲೆಲುಗಳು (articular cartilage), ಕೀಲ್ಗಾಪು (joint capsule) ಮತ್ತು ಕೀಲೋಳೆಯ ದಿಂಚೀಲ (synovial bursa)

joints_1ತಂತುಗಟ್ಟುಗಳು (ligaments): ತಂತುಗಟ್ಟು (ligament), ಒಂದು ಎಲುಬನ್ನು ಮತ್ತೊಂದು ಎಲುಬಿಗೆ ಬೆಸೆಯುವ ಪಟ್ಟಿ, ಹಗ್ಗದಂತಹ ಇಟ್ಟಳ. ಈ ಇಟ್ಟಳವು ತಂತುಗೂಡುಕಟ್ಟಿನಿಂದ (fibrous tissue) ಮಾಡಲ್ಪಟ್ಟಿದೆ. ಜಂಟಿಯ ಬಾಗದಲ್ಲಿ ಮಾಡುವ ಇದರ ಕೆಲಸದಿಂದಾಗಿ ಇದನ್ನು ಕೀಲ್ಗೂಡುವ ತಂತುಗಟ್ಟು (articular ligament) ಎಂದೂ ಕರೆಯಬಹುದು. ಇದು ಮುಕ್ಯವಾಗಿ ಜಂಟಿಗಳಿಗೆ ನೆಲತೆಯನ್ನು (stability) ಒದಗಿಸುತ್ತದೆ.

ಕಂಡರಗಳು (tendons): ಕಂಡಗಳನ್ನು (muscle) ಎಲುಬುಗಳಿಗೆ ಅಂಟಿಸುವ ಬಲವಾದ ತಂತುಗೂಡುಕಟ್ಟುಗಳನ್ನು (fibrous tissue) ಕಂಡರವೆಂದು (tendons) ಗುರುತಿಸಬಹುದು. ಇದೂ ಕೂಡ ತಂತುಗಟ್ಟಿನಂತೆ ಅಂಟುವುಟ್ಟುಕದಿಂದ (collagen) ಮಾಡಲ್ಪಟ್ಟಿರುತ್ತದೆ. ಕಂಡ ಮತ್ತು ಕಂಡರಗಳು ಎಲುಬುಗಳನ್ನು ಅಲುಗಾಡಿಸಲು ಒಗ್ಗೂಡಿ ಕೆಲಸ ಮಾಡುತ್ತವೆ.

ಕೀಲ್ಗಾಪು (joint capsule): ಕೀಲೋಳೆಯ ಜಂಟಿಯನ್ನು (synovial joint; ಮುಂದೆ ವಿವರಿಸಲಾಗಿದೆ) ಸುತ್ತುವರೆದ ಹೊದಿಕೆಯೇ ಕೀಲ್ಗಾಪು. ಇದು ಎರಡು ಪದರಗಳನ್ನು ಹೊಂದಿರುತ್ತದೆ. ಹೊರಗಿನ ಪದರವು ಬಿಳಿಯ ತಂತುಗೂಡುಕಟ್ಟಿನಿಂದ (white fibrous tissue) ಮಾಡಲ್ಪಟ್ಟಿದ್ದರೆ, ಒಳಗಿನದು ಸುರಿಗೆ ಪದರ (secretory layer). ಈ ಸುರಿಗೆ ಪದರವನ್ನು “ಕೀಲೋಳೆಯ ಪದರ” (synovial membrane) ಎಂದೂ ಕರೆಯಬಹುದು.

ಕೀಲ್ಗಾಪಿನ ಒಳಗೆ, ಕೀಲ್ಗೂಡುವ ಮೆಲ್ಲೆಲುಬುಗಳು (articular cartilage) ಎಲುಬಿನ ತುದಿಗಳಿಗೆ ಹೊದಿಸಲ್ಪಟ್ಟಿರುತ್ತವೆ. ಹೊರಗಿನ ಬಿಳಿಯ ತಂತುಗೂಡುಕಟ್ಟಿನ (white fibrous tissue) ಪದರವು, ಕೀಲ್ಗೂಡುವ ಎಲುಬಿನ ತುದಿಯ ಇಡೀ ಸುತ್ತಳತೆಗೆ ಅಂಟಿಕೊಂಡಿರುತ್ತದೆ. ಈ ಬಗೆಯಾಗಿ ಈ ಹೊರಪದರವು ಎಲುಬುತುದಿಗಳ ಕೂಡುವಿಕೆಯ ಇಡೀ ಬಾಗವನ್ನು ಸುತ್ತುವರೆಯುತ್ತದೆ.

ಕೀಲೋಳೆಯ ದಿಂಚೀಲ (synovial bursa): ಕೀಲೋಳೆಯ ಹರಿಕವು (synovial fluid) ತುಂಬಿದ ಕಿರುಚೀಲವಿದು. ಇದರಲ್ಲಿರುವ ಹರಿಕವು (liquid) ತತ್ತಿಲೋಳೆಯ (egg white) ಮಂದತೆಯನ್ನು (consistency) ಹೊಂದಿದೆ. ಇದು ಜಂಟಿಯ ಬಾಗದಲ್ಲಿ ತಂತುಗಟ್ಟು, ಕಂಡರ, ಕಂಡ ಹಾಗು ಎಲುಬಿನ ನಡುವೆ ಉಂಟಾಗುವು ತಿಕ್ಕಾಟವನ್ನು ಇಳಿಸಲು ನೆರವಾಗುತ್ತದೆ.

ಜಂಟಿಗಳನ್ನು  ಹಲವು ಬಗೆಯಲ್ಲಿ ಗುಂಪಿಸಲಾಗಿದೆ. ಅವುಗಳನ್ನು ಕೆಳಗೆ ಕೊಡಲಾಗಿದೆ.

ಇಟ್ಟಳದಂತೆ ಗುಂಪಿಸುವಿಕೆ (structural classification): ಜಂಟಿಯ ಇಟ್ಟಳವನ್ನು ಮಾಡಲ್ಪಡುವ ಗೂಡುಕಟ್ಟಿನ (tissue) ಅನುಗುಣವಾಗಿ, ಜಂಟಿಯನ್ನು ಕೆಳಕಂಡಂತೆ ಗುಂಪಿಸಬಹುದಾಗಿದೆ,

joints_21) ತಂತುಗೂಡಿನ ಜಂಟಿ (fibrous joint): ಇದರಲ್ಲಿ ಅಂಟುವುಟ್ಟುಕದ (collagen) ನಾರುಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುವ ಕೂಡಿಕೆಯ ಗೂಡುಕಟ್ಟಿನ (connective tissue) ಮೂಲಕ, ಎಲುಬುಗಳ ಜೋಡಣೆಯಾಗಿರುತ್ತದೆ.

2) ಮೆಲ್ಲೆಲು ಜಂಟಿ (cartilaginous joint): ಮೆಲ್ಲೆಲುಬಿನ ನೆರವಿನಿಂದ ಎರಡು ಎಲುಬುಗಳ ಬೆಸುಗೆಯಾದರೆ, ಅದನ್ನು ಮೆಲ್ಲೆಲು ಜಂಟಿ ಎನ್ನಬಹುದು.

3) ಕೀಲೋಳೆಯ ಜಂಟಿ (synovial joint): (ಚಿತ್ರ 1 & 2) ಈ ಬಗೆಯ ಜಂಟಿಯಲ್ಲಿ, ಎಲುಬುಗಳು ನೇರವಾಗಿ ಒಂದಕ್ಕೊಂದು ಸೇರಿಕೊಂಡಿರುವುದಿಲ್ಲ. ಎಲುಬುಗಳ ನಡುವೆ, ಕೀಲೋಳಿನ ಗೂಡು (synovial cavity) ಇರುತ್ತದೆ.

ತಂತುಗಟ್ಟುಗಳಿಗೆ ಹೊಂದಿಕೊಂಡಿರುವ ಕೀಲ್ಗೂಡುವ (articular) ಕೀಲ್ಗಾಪನ್ನು (capsule) ಮಾಡುವ ಮಂದ ಹಾಗು ಸಮವಲ್ಲದ ಕೂಡಿಕೆಯ ಗೂಡುಕಟ್ಟಿನ (connective tissue) ನೆರವಿನಿಂದ ಮೂಳೆಗಳು ಬೆಸೆದುಕೊಂಡಿರುತ್ತವೆ. ಕೀಲೋಳೆಯ ಜಂಟಿಗಳನ್ನು (synovial), ಅವು ತಿರುಗುವ ದಿಕ್ಕು ಹಾಗು ತಿರುಗುವ ಪ್ರಮಾಣದ ಅನುಗುಣವಾಗಿ ಹೀಗೆ ಮರುಗುಂಪಿಸಬಹುದು:

joints_3ಅ) ತಿರುಗಾಣಿ ಜಂಟಿ (pivot joints): ಈ ಬಗೆಯ ಜಂಟಿಗಳು ನಡುಗೆರೆಯ (axis) ಸುತ್ತಲೂ ತಿರುಗುತ್ತವೆ. ಉದಾ: ಮೊದಲನೆಯ ಹಾಗು ಎರಡನೆಯ ಕೊರಳಿನ ಬೆನ್ನೆಲುಬುಗಳ ನಡುವೆ ಕಂಡು ಬರುವ ಜಂಟಿ.

ಆ) ಕೀಳಚ್ಚು ಜಂಟಿ (hinge joints): ಕೀಳಚ್ಚು ಜಂಟಿಗಳು ಬಾಗಿಲಿನಂತೆ ತೆರದುಕೊಳ್ಳುವ ಹಾಗು ಮುಚ್ಚಿಕೊಳ್ಳುವ ಗುಣವನ್ನು ಹೊಂದಿವೆ. ಉದಾ: ಮೊಣಕಯ್ ಜಂಟಿ (elbow joint).

ಇ) ಜಾರುವ ಜಂಟಿ (gliding joints): ಎರಡು ಎಲುಬು ತಟ್ಟೆಗಳು ಎದುರು-ಬದುರಾಗಿ ಜಾರುವಿಕೆಯ ಹುರುಳನ್ನು ಹೊಂದಿರುವ ಜಂಟಿಗಳನ್ನು ’ಜಾರುವ ಜಂಟಿ’ ಎಂದು ಹೇಳಬಹುದು. ಮಣ್ಣಿಕಟ್ಟು (wrist) ಹಾಗು ಹಿಮ್ಮಡಿಗಂಟುಗಳಲ್ಲಿ (ankle) ಈ ಬಗೆಯ ಜಂಟಿಗಳು ಇರುತ್ತವೆ.

ಈ) ಒರಳು-ಗುಂಡಿನ ಜಂಟಿ (ball-and-socket joints): ತೊಡಕಿಲ್ಲದೆ ಹಲವು ದಿಕ್ಕಿನಲ್ಲಿ ಕದಲಿಸಬಹುದಾದ ಜಂಟಿಯ ಬಗೆಯಿದು. ತೋಳಿನ ಜಂಟಿ ಹಾಗು ಸೊಂಟ ಜಂಟಿಗಳು ಒರಲು-ಗುಂಡಿನ ಜಂಟಿ ಗುಂಪಿನಡಿ ಬರುತ್ತವೆ. ಇಲ್ಲಿ ಒಂದು ಎಲುಬಿನ ತುದಿ ಚಂಡಿನ ಇಟ್ಟಳವನ್ನು ಹೊಂದಿದ್ದರೆ, ಇದರ ಎದುರಿನ ಎಲುಬಿನ ತುದಿ, ಚಂಡಿನ ತುದಿಗೆ ಹೊಂದಿಕೊಳ್ಳಲು, ನಡುವಿನಲ್ಲಿ ಗುಳಿ ಹಾಗು ಅಂಚಿನಲ್ಲಿ ಹೊರಚಾಚಿದ ಇಟ್ಟಳವನ್ನು ಹೊಂದಿರುತ್ತದೆ.

ಉ) ಜೀನು ಜಂಟಿ (saddle joints): ಈ ಜಂಟಿಗಳು ಎರಡು ಬಗೆಯ ಅಲುಗಾಟದಲ್ಲಿ ನೆರವಾಗುತ್ತವೆ. ಉದಾ: ಜೀನು ಜಂಟಿಯ ನೆರವಿನಿಂದ, ಹೆಬ್ಬೆರಳನ್ನು ತೋರುಬೆರಳಿನ ಕಡೆ ಒಯ್ಯಬಹುದು. ಇದೆ ಜೀನು ಜಂಟಿಯ ನೆರವಿನಿಂದ, ಹೆಬ್ಬೆರಳನ್ನು ಕಿರು ಬೆರಳಿನೆಡೆಗೂ ಒಯ್ಯಬಹುದು.

ಊ) ಗಂಟಿನ ಜಂಟಿ (conyloid joints): ಈ ಜಂಟಿಗಳು ಸ್ವಲ್ಪ ಒರಳು-ಗುಂಡಿನ ಜಂಟಿಯನ್ನು ಹೋಲುತ್ತವೆ. ಆದರೆ, ಇವುಗಳಲ್ಲಿ ಚಂಡಿನ ಇಟ್ಟಳ ಇರುವುದಿಲ್ಲ.

ಕೆಲಸದಂತೆ ಗುಂಪಿಸುವಿಕೆ (functional classification): ಕದಲಿಕೆಗೆ ಅನುಗುಣವಾಗಿ ಜಂಟಿಗಳನ್ನು ಕೂಡುಗೀಲು (synarthrosis), ಇಗ್ಗೀಲು (amphiarthrosis) ಹಾಗು ಚಲಗೀಲು (diarthrosis) ಎಂದು ಗುಂಪಿಸಬಹುದಾಗಿದೆ.

1) ಕೂಡುಗೀಲು ಬಗೆಯ ಜಂಟಿಗಳಲ್ಲಿ, ಯಾವುದೇ ಅಲುಗಾಟವಿರುವುದಿಲ್ಲ. ಈ ಜಂಟಿಗಳು ನಾರಿನ ಜಂಟಿಗಳಾಗಿರುತ್ತವೆ (fibrous joint) (ಚಿತ್ರ 4). ಉದಾ: ತಲೆಬುರುಡೆಯ ಎಲುಬುಗಳು ಒಂದಕ್ಕೊಂದು ಜೊತೆಗೂಡುವ ಬಾಗದಲ್ಲಿನ “ಬುರುಡೆ ಸೇರುವೆ” (skull suture) ಜಂಟಿ.

joints_4

2) ಇಗ್ಗೀಲು ಜಂಟಿಗಳಲ್ಲಿ ಅಲುಗಾಟವು ತಕ್ಕ-ಮಟ್ಟಿಗೆ ಇರುತ್ತದೆ. ಇವು ಮೆಲ್ಲೆಲುಗುಣದ ಬೆಸುಗೆಗಳು (cartilaginous joints) (ಚಿತ್ರ 5). ಉದಾ: ಪಕ್ಕೆಲುಬುಗಳು (ribs) ಮೆಲ್ಲೆಲುಬುಗಳ (cartilage) ನೆರವಿನಿಂದ, ಎದೆಚಕ್ಕೆಗೆ (sternum) ಬೆಸುದುಕೊಳ್ಳುವ ಬಾಗ.

joints_53) ಚಲಗೀಲು ಜಂಟಿಗಳನ್ನು ತಡೆಯಿಲ್ಲದೆ ಅಲುಗಾಡಿಸಬಹುದು. ಎಲ್ಲಾ ಚಲಗೀಲು ಜಂಟಿಗಳು ಕೀಲೋಳಿನ ಜಂಟಿಗಳಾಗಿರುತ್ತವೆ (synovial joint) (ಚಿತ್ರ 2 & 6). ಉದಾ: ಸೊಂಟದ ಜಂಟಿ (hip joint), ಮಂಡಿ ಜಂಟಿ (knee joint).

joints_6ಉಸಿರುಗಸುವಿನ ಗುಂಪಿಸುವಿಕೆ (biomechanical classification): ಜಂಟಿಗಳು ಹೊಂದಿರುವ ಕಸುವಿನ ಗುಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಅವುಗಳನ್ನು ಈ ಬಗೆಯಾಗಿ ಗುಂಪಿಸಬಹುದು.

1) ಸರಳ ಜಂಟಿ (simple joint): ಎರಡು ಕೀಲ್ಗೂಡುವ ಮೇಲ್ಮಯ್ಗಳನ್ನು (articular surface) ಹೊಂದಿರುತ್ತವೆ. ಉದಾ: ಹೆಗಲು ಜಂಟಿ (shoulder joint), ಸೊಂಟ ಜಂಟಿ (hip joint)

2) ಕೂಡಿಕೆಯ ಜಂಟಿ (compound joint): ಮೂರು ಇಲ್ಲವೇ ಹೆಚ್ಚಿನ ಕೀಲ್ಗೂಡುವ ಮೇಲ್ಮಯ್ಗಳನ್ನು (articular surface) ಹೊಂದಿರುತ್ತವೆ. ಉದಾ: ಅರೆಲುಮುಂಗಯ್ ಜಂಟಿ (radiocarpal joint).

3) ತೊಡಕಿನ ಜಂಟಿ (complex joint): ಇವು ಎರಡು ಇಲ್ಲವೇ ಹೆಚ್ಚಿನ ಕೀಲ್ಗೂಡುವ ಮೇಲ್ಮಯ್ಗಳ (articular surface) ಜೊತೆಗೆ ಕೀಲ್ಗೂಡುವ ಬಿಲ್ಲೆ (articular disc) ಇಲ್ಲವೇ ಚಂದ್ರಬಟ್ಟುಗಳನ್ನು (meniscus) ಹೊಂದಿರುತ್ತವೆ. ಉದಾ: ಮಂಡಿ ಜಂಟಿ (knee joint).

ಕಳೆದ ನಾಲ್ಕು ಕಂತುಗಳಲ್ಲಿ (1, 2, 3, 4) ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ತಿಳಿಸಿಕೊಡಲಾಗಿದೆ. ಮಯ್ಯರಿಮೆ ಈ ಸರಣಿ ಬರಹಗಳ ಮುಂದಿನ ಕಂತಿನಲ್ಲಿ ಮತ್ತೊಂದು ಏರ‍್ಪಾಟಿನ ಬಗ್ಗೆ ತಿಳಿಸಲಾಗುವುದು.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. patienteducationcenter.org, 2. en.wikipedia.org  3. cnx.org  4. www.coa.edu, 5. www.coa.edu/stodd 
6. bahriortho.com)

(ಈ ಬರಹವು ಹೊಸಬರಹದಲ್ಲಿದೆ)

ಹುರಿಕಟ್ಟಿನ ಏರ‍್ಪಾಟು – ಕಂಡಗಳು

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ-3:

ಕಂಡಗಳು ಮೆತ್ತನೆಯ ಅಂಗಾಂಶಗಳಾಗಿದ್ದು (soft tissue), ಅಂಗಗಳ ಚಲನೆಗೆ ನೆರವಾಗುತ್ತವೆ. ಇವು ಎಲುಬುಗಳ ಸುತ್ತ, ಗುಂಡಿಗೆಯಲ್ಲಿ ಮತ್ತು ಇತರ ಅಂಗಗಳ ಗೋಡೆಗಳಲ್ಲಿ ಕಂಡುಬರುತ್ತವೆ. ಎಲುಬಿನ ಸುತ್ತ ಕಂಡುಬರುವ ಕಂಡವನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

muscles_0ಕಂಡಗಳು ಉಂಟುಮಾಡುವ ಏರ‍್ಪಾಟನ್ನು ಕಂಡದೇರ‍್ಪಾಟು ಇಲ್ಲವೇ ಹುರಿ ಏರ‍್ಪಾಟು (muscular system) ಎಂದು ಗುರುತಿಸಲಾಗುತ್ತದೆ. ಕಂಡಗಳ ಏರ‍್ಪಾಟು ಮೇಲೆ ತಿಳಿಸದಂತೆ ಮೂರು ಬಗೆಯ ಕಂಡಗಳನ್ನು ಹೊಂದಿರುತ್ತದೆ.

1) ಗುಂಡಿಗೆ ಕಂಡ (cardiac muscle): ಇದು ಎದೆಗುಂಡಿಗೆಯಲ್ಲಿ ಕಾಣಸಿಗುತ್ತದೆ.

2) ನುಣುಪು ಕಂಡ (smooth muscle): ಎದೆಗುಂಡಿಗೆಯನ್ನು ಹೊರತು ಪಡಿಸಿ, ಉಳಿದ ಅಂಗಗಳ ಗೋಡೆಗಳು ನುಣುಪುಕಂಡದಿಂದ ಮಾಡಲ್ಪಟ್ಟಿರುತ್ತವೆ

3) ಕಟ್ಟಿನ ಕಂಡ (skeletal muscle): ಕಟ್ಟಿನ ಕಂಡವು ಎಲುಬುಗಳ ಜೊತೆಗೂಡಿ ಹುರಿಕಟ್ಟಿನ ಏರ‍್ಪಾಡನ್ನು ಮಾಡುತ್ತದೆ. ಕಂಡಗಳು ಎಲುಬುಗಳನ್ನು ಒಂದಕ್ಕೊಂದು ಜೋಡಣೆಯಾಗುವಂತೆ ನೋಡಿಕೊಳ್ಳುತ್ತವೆ.

muscles_1 ಈ ಬರಹವು ಹುರಿಕಟ್ಟಿನ ಏರ‍್ಪಾಟಿಗೆ (musculo-skeletal system) ಸಂಬಂದಿಸಿದ್ದರಿಂದ, ಈ ಏರ‍್ಪಾಟಿನ ಬಾಗವಾದ ಕಟ್ಟಿನ ಕಂಡಗಳ (skeletal muscles) ಬಗ್ಗೆ ಈ ಬರಹದಲ್ಲಿ ತಿಳಿಸಲಾಗುವುದು. ಮೇಲಿನ ಮೊದಲೆರಡು ಕಂಡಗಳ ಬಗ್ಗೆ ಸರಣಿಯ ಮುಂದಿನ ಬಾಗಗಳಲ್ಲಿ ಬರೆಯಲಾಗುವುದು.

ಕಟ್ಟಿನ ಕಂಡದ ಮುಕ್ಯ ಕೆಲಸಗಳು:

1) ಮಯ್ ಅಲುಗಾಟ ಹಾಗು ಓಡಾಟ 

2) ಮಯ್ ಕಂಡಿಗಳ (orifice) ಕೆಲಸವನ್ನು ಅಂಕೆಯಲ್ಲಿಡುವುದು: ಮಯ್ಯಲ್ಲಿರುವ ಅಂಗಗಳಿಂದ ಗಟ್ಟಿಯಾದ ಇಲ್ಲವೇ ನೀರಿನ ಅಂಶಗಳನ್ನು ಹೊರಹಾಕುವಾಗ ಇಲ್ಲವೇ ಒಳಬಿಟ್ಟುಕೊಳ್ಳುವಾಗ ’ಗೆಂಡೆಗಳು’ (sphincter) ಎಂದು ಕರೆಯಲಾಗುವ ಕಂಡಗಳು ಹಿಗ್ಗುತ್ತವೆ. ಈ ಮೂಲಕ ಅಂಶಗಳನ್ನು ಹೊರಹಾಕಲು/ಒಳತರಲು ಅಂಗಗಳಿಗೆ ಸುಲಬವಾದ ದಾರಿಯನ್ನು ಮಾಡಿಕೊಡುತ್ತವೆ. ಗೆಂಡೆಗಳು ಕಟ್ಟಿನ ಕಂಡಗಳ ಬಗೆಗಳಲ್ಲೊಂದು.

3) ನಿಲುವು ಮತ್ತು ನೆಲೆತ (posture & stability): ಯಾವುದೇ ಗಳಿಗೆಯಲ್ಲೂ ಮಯ್ಯಲ್ಲಿನ ಕಂಡಗಳು ಒಂದು ಮಟ್ಟಕ್ಕಾದರೂ, ಕುಗ್ಗಿದ ಸ್ತಿತಿಯಲ್ಲಿರುವುದರ ಮೂಲಕ ತನ್ನ ಕೆಲಸವನ್ನು ಮಾಡುತ್ತಿರುತ್ತವೆ. ಇದರಿಂದ, ನೆಲದ ರಾಶಿಸೆಳೆತವನ್ನು (gravity) ಎದಿರಿಸುವ ಹಾಗು ಬೇಡದೆ ಇರುವ ಮಯ್ ಅಲುಗಾಡಿಸುವಿಕೆಯನ್ನು ತಪ್ಪಿಸುವ ಕೆಲಸವನ್ನು ಮಾಡುತ್ತಾ ಮಯ್ಗೆ ನೆಲೆತವನ್ನು (stability) ಕೊಡುತ್ತವೆ.

4) ಮಯ್ ಬಿಸುಪನ್ನು ಅಂಕೆಯಲ್ಲಿಡುವುದು: ನಾವು ತಿನ್ನುವ ಕೂಳಿನ ಅಂಶಗಳನ್ನು ಶಕಿಯನ್ನಾಗಿ ಮಾಡುವ ಕೆಲಸವನ್ನು ತರುಮಾರ‍್ಪಿಸುವಿಕೆ (metabolism) ಎಂದು ಕರೆಯಲಾಗುತ್ತದೆ. ಮಯ್ ಗೂಡುಗಳಲ್ಲಿ (cell) ನಡೆಯುವ ಈ ತರುಮಾರ‍್ಪಿಸುವಿಕೆಯ ಕೆಲಸದಲ್ಲಿ ಹುಟ್ಟುವ ಶಕ್ತಿಯ ಹೆಚ್ಚಿನ ಬಾಗವು ಕಾವಿನ (heat) ರೂಪದಲ್ಲಿ ಹೊರ ಹಾಕಲ್ಪಡುತ್ತದೆ.

ಮನುಶ್ಯನ 40% ಮಯ್ಯಿ ಕಂಡದಿಂದ ಮಾಡಲ್ಪಟ್ಟಿದೆ. ಮಯ್ ಕಂಡವು ಹುರುಪಿನ ಕೆಲಸದಲ್ಲಿ ತೊಡಗಿಕೊಂಡಾಗ, ತರುಮಾರ‍್ಪಿಸುವ (metabolism) ಕೆಲಸದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಿಸಿ ಹೊಮ್ಮುತ್ತದೆ. ಹೀಗೆ ಮಾಡಲ್ಪಟ್ಟ ಬಿಸಿಯು ರಕ್ತದ ನೆರವಿನಿಂದ ನಮ್ಮ ಇಡೀ ಮಯ್ಯಿಗೆ ಹರಡುವು ಮೂಲಕ ಮಯ್ ಬಿಸುಪನ್ನು (temperature) ಕಾಪಾಡುತ್ತದೆ.

5) ಅರುಹುವಿಕೆ (communication): ಮೊಗ ನುಡಿತ (facial expression), ಮಯ್ಮಾತು (body language), ಕಯ್ ಸನ್ನೆ, ಬರೆಯುವಿಕೆ, ಉಲಿಯುವಿಕೆ ಹೀಗೆ ಹಲವು ಬಗೆಯಲ್ಲಿ ಮತ್ತೊಬ್ಬರೊಡನೆ ಒಡನಾಡಲು ಕಟ್ಟಿನಕಂಡವು ನೆರವಾಗುತ್ತದೆ.

ಕಟ್ಟಿನ ಕಂಡಗಳನ್ನು (skeletal muscles) ಅವುಗಳ ಆಕಾರದ ಮೇಲೆ 7 ಗುಂಪುಗಳಾಗಿಸಬಹುದು:

muscles_21) ಡುಂಡನೆಯ ಕಂಡ (circular): ಈ ಬಗೆಯ ಕಂಡವು ದುಂಡಗಿರುತ್ತದೆ. ಇಂತಹ ಬಗೆಯ ಕಂಡಗಳು ಮೇಲೆ ತಿಳಿಸದಂತೆ ಅಂಗಗಳಿಂದ ಅಂಶಗಳನ್ನು ಹೊರಹಾಕಲು/ಒಳತರಲು ಹಿಗ್ಗಿಕೊಳ್ಳುವ ಗೆಂಡೆಗಳಲ್ಲಿ (sphincter) ಇರುತ್ತವೆ. ಉದಾಹರಣೆಗೆ ಬಾಯಿಯನ್ನು ಸುತ್ತುವರಿದ ಬಾಯ್ಸುತ್ತರಿ ಕಂಡ (orbicularis oris) ಮತ್ತು ಕಣ್ಣನ್ನು ಸುತ್ತುವರಿದ ಕಣ್ಸುತ್ತರಿ ಕಂಡ (orbicularis oculi).

2) ಒಮ್ಮೊಗದ ಕಂಡ (convergent) : ಯಾವುದೇ ಕಂಡವನ್ನು ಗುರುತಿಸುವಾಗ ಅದು ಯಾವ ಮೂಳೆಯ ಬಾಗದಲ್ಲಿ ಹುಟ್ಟಿ, ಯಾವ ಮೂಳೆಯ ಬಾಗವನ್ನು ಸೇರುತ್ತದೆ/ಅಂಟುತ್ತದೆ (insertion) ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಮ್ಮೊಗದ ಕಂಡಗಳು, ಹುಟ್ಟುವ ಬಾಗದಲ್ಲಿ ಅಗಲವಾಗಿದ್ದು, ಸೇರುವ (insertion) ತುದಿಯಲ್ಲಿ ಸಣ್ಣದಾಗಿರುತ್ತವೆ.

ಈ ಬಗೆಯ ಕಂಡದ ನಾರುಗಳ (muscle fiber) ಜೋಡಣೆಯು, ಹೆಚ್ಚಿನ ಬಲವನ್ನು ಹೊಮ್ಮಿಸುವಲ್ಲಿ ನೆರವಾಗುತ್ತದೆ. ಈ ಕಂಡಗಳನ್ನು ಮುಮ್ಮೂಲೆ (triangle) ಕಂಡವೆಂದೂ ಕರೆಯುವುದುಂಟು. ಉದಾ: ಎದೆಯ ಬಾಗದಲ್ಲಿ ಇರುವ ‘ಹಿರಿಯೆದೆಗಲ ಕಂಡ‘ (pectoralis major).

3) ಗರಿತೆರದ ಕಂಡ (unipinnate): ಈ ಬಗೆಯ ಕಂಡಗಳಲ್ಲಿ, ಕಂಡದ ನಾರುಗಳು ಕಂಡರಗಳೊಂದಿಗೆ (tendons) ಅಡ್ಡಬದಿಯಲ್ಲಿ (diagonal) ಸೇರಿಕೊಳ್ಳಲು (insertion) ನೆರವಾಗಲು ಪುಕ್ಕದ ಕೊಂಬೆಗಳಂತೆ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ಜೋಡಣೆಯು, ಕಂಡಗಳ ಬಲವನ್ನು ಹೆಚ್ಚಿಸುತ್ತದೆ. ಉದಾ: ಕಯ್ಯಲ್ಲಿ ಕಂಡುಬರುವ ‘ಹುಳುಬಗೆ‘ ಕಂಡ (lumbricals).

4) ಸರಿತೆರಪಿನ ಕಂಡ (parallel):. ಇವುಗಳಲ್ಲಿ ಕಂಡರದ ನಾರುಗಳು ಒಂದೇ ತೆರಪಿನ (parallel) ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಇಂತಹ ಕಂಡಗಳನ್ನು ಬಾರು ಇಲ್ಲವೇ ಪಟ್ಟಿ (strap) ಕಂಡವೆಂದೂ ಕರೆಯಬಹುದು. ಇವು ಉದ್ದನೆಯ ಕಂಡಗಳ ಜಾತಿಗೆ ಸೇರಿದ್ದು, ಅಶ್ಟೇನು ಗಟ್ಟಿಯಾಗಿರುವುದಿಲ್ಲ. ಆದರೆ ಇವು ಹೆಚ್ಚಿನ ತಾಳಿಕೆಯನ್ನು (durability) ಹೊಂದಿರುತ್ತವೆ. ಉದಾ: ಹೊಲಿಗ ಕಂಡ (Sartorius/tailor muscle).

5) ಇಗ್ಗರಿತೆರದ ಕಂಡ (bipinnate): ಹಕ್ಕಿಯ ಪುಕ್ಕವನ್ನು ಹೋಲುವ ಈ ಕಂಡವು, ಎದುರು-ಬದುರು ದಿಕ್ಕಿನಲ್ಲಿ ಸಾಗುವ ಎರಡು ಸಾಲುಗಳ ನಾರುಗಳನ್ನು ಹಾಗು ನಡುವಿನಲ್ಲಿ ಕಂಡರದ (tendon) ಕಡ್ಡಿಯನ್ನು ಹೊಂದಿರುತ್ತದೆ. ಈ ಬಗೆಯ ಜೋಡಣೆಯು, ಕಂಡದ ಬಲವನ್ನು ಹಿಗ್ಗಿಸುತ್ತದೆಯಾದರೂ, ಅದರ ಅಲುಗಾಟದ ಮಟ್ಟವನ್ನು ಕುಗ್ಗಿಸುತ್ತದೆ. ನೆಟ್ಟನೆಯ ತೊಡೆಕಂಡವು (rectus femoris) ಇಗ್ಗರಿತೆರದ ಗುಂಪಿಗೆ ಸೇರುತ್ತದೆ.

6) ಕಡುಬು ಬಗೆ ಕಂಡ (fusiform): ಈ ಬಗೆಯ ಕಂಡಗಳಲ್ಲಿ, ತುದಿಗಳಿಗೆ ಹೋಲಿಸಿದರೆ ನಡುಬಾಗವು ಅಗಲವಾಗಿರುತ್ತದೆ. ಉದಾ: ಇತ್ತಲೆ ತೋಳ್ ಕಂಡ (ತೋಳ್=brachii; ಇತ್ತಲೆ/ಎರಡು ತಲೆ=biceps).

7) ಹಲಗರಿತೆರ ಕಂಡ (multipinnate): ಈ ಬಗೆಯ ಕಂಡದಲ್ಲಿ ನಡು ಕಂಡರವು, ಎರಡಕ್ಕಿಂತ ಹೆಚ್ಚು ಕವಲುಗಳನ್ನು ಹೊಂದಿದ್ದು, ಈ ಕಂಡರದ ಕವಲುಗಳ ಮೇಲೆ, ಇಕ್ಕೆಲಗಳಲ್ಲೂ ಕಂಡದ ನಾರುಗಳು ಜೋಡಿಸಲ್ಪತ್ತಿರುತ್ತವೆ. ಉದಾ: ಮೂರು ಕಂಡದ ಕಂತೆಗಳನ್ನು (ಮುಂದಿನ, ಹಿಂದಿನ ಮತ್ತು ನಡುವಿನ ಕಂತೆ) ಹೊಂದಿರುವ ಡೆಲ್ಟಾ ಕಂಡ (delta) (ಈ ಕಂಡವು ಗ್ರೀಕ್ ಲಿಪಿಯ “ಡೆಲ್ಟಾ” ಬರಿಗೆಯನ್ನು ಹೋಲುವುದರಿಂದ, ಈ ಹೆಸರು ಬಂದಿದೆ).

ಈ ಬರಹದಲ್ಲಿ ಹುರಿಕಟ್ಟಿನ ಏರ‍್ಪಾಟಿನ ಬಾಗವಾದ ಕಂಡಗಳ ಬಗ್ಗೆ ತಿಳಿಸಲಾಯಿತು. ಮುಂದಿನ ಬರಹದಲ್ಲಿ ಹುರಿಕಟ್ಟು ಏರ‍್ಪಾಟಿನ ಇನ್ನೊಂದು ಬಾಗವಾದ ಎಲುಬುಗಳ ಕೀಲುಗಳ ಬಗ್ಗೆ ತಿಳಿಸಲಾಗುವುದು.

(ಚಿತ್ರ ಸೆಲೆಗಳು: intranet.tdmu.edu, myrevolution, www.artintercepts.org)

(ಈ ಬರಹವು ಹೊಸಬರಹದಲ್ಲಿದೆ)

ಹುರಿಕಟ್ಟಿನ ಏರ‍್ಪಾಟು – ಮೂಳೆಗಳು 2

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ 2: 

ಮೂಳೆಗಳು – ಬಾಗ 2 :                                                                                                                                                                     (ಮೂಳೆಗಳು – ಬಾಗ 1 >>)

ಹುಟ್ಟುವಾಗ ಮನುಶ್ಯರಲ್ಲಿ 300ಕ್ಕೂ ಹೆಚ್ಚು ಎಲುಬುಗಳು ಇರುತ್ತವೆ. ಹರೆಯ ಹೆಚ್ಚಿದಂತೆ ಒಂದಶ್ಟು ಎಲುಬುಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ ಸರಾಸರಿ 206 ಎಲುಬುಗಳಿರುತ್ತವೆ. ನಮ್ಮ ಮಯ್ಯಲ್ಲಿ ಜೋಡಿಸಲ್ಪಟ್ಟಿರುವ ವಿದಾನಕ್ಕೆ ಅನುಗುಣವಾಗಿ ಎಲುಬುಗಳನ್ನು ಎರಡು ಗುಂಪುಗಳಾಗಿ ತೋರಿಸಬಹುದಾಗಿದೆ. ಅವುಗಳೆಂದರೆ,

1) ನಟ್ಟೊಡಲ ಎಲುಬುಗಳು (axial skeleton)

2) ಕಯ್ಕಾಲುಗಳ ಎಲುಬುಗಳು (appendicular skeleton)

1ನಟ್ಟೊಡಲ ಎಲುಬುಗಳು ನಮ್ಮ ಮಯ್ ನಡು ಬಾಗದಲ್ಲಿದ್ದು, 80 ಎಲುಬುಗಳಿಂದ ಮಾಡಲ್ಪಟ್ಟಿರುತ್ತವೆ

  • ತಲೆಬುರುಡೆ (skull)
  • ನಾಲಗೆಲ್ಲು (hyoid)
  • ಆಲಿಕೆಯ ಕಿರ್‍ಮೂಳೆಗಳು (auditory ossicles)
  • ಪಕ್ಕೆಲುಬುಗಳು (ribs)
  • ಎದೆಚಕ್ಕೆ (sternum)
  • ಬೆನ್ನೆಲುಬಿನ ಕಂಬ (vertebral column)

ಕಯ್ಕಾಲುಗಳ ಎಲುಬುಗಳು (appendicular skeleton) ನಟ್ಟೊಡಲಿನ ಇಕ್ಕೆಲಗಳಲ್ಲಿ ಇರುತ್ತವೆ. ಇವುಗಳಲ್ಲಿ ಕಂಡು ಬರುವ ಒಟ್ಟು ಎಲುಬುಗಳ ಸಂಕೆ 126.

  • ಕಯ್ಗಳು (upper limbs)
  • ಕಾಲುಗಳು (lower limbs)
  • ಕೀಳ್ಗುಳಿಯ ಸುತ್ತುಕಟ್ಟು (pelvic girdle)
  • ಎದೆಯ ಕಟ್ಟು (pectoral girdle)

ತಲೆಬುರುಡೆ (skull):

bones_2_2ತಲೆಬುರುಡೆಯು 22 ಎಲುಬುಗಳನ್ನು ಹೊಂದಿರುತ್ತದೆ. ಕೆಳದವಡೆಯನ್ನು (mandible) ಹೊರತುಪಡಿಸಿ, ಉಳಿದೆಲ್ಲ ತಲೆಬುರುಡೆಯ ಮೂಳೆಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ (fused). ಮಕ್ಕಳಲ್ಲಿ ತಲೆಬುರುಡೆಯ ಎಲುಬುಗಳು ಒಂದಕ್ಕೊಂದು ಬೆಸೆದುಕೊಂಡಿರದೇ (not fused), ಬೇರೆ-ಬೇರೆಯಾಗಿರುತ್ತವೆ; ಇದು ಮಕ್ಕಳಲ್ಲಿ ತಲೆಬುರುಡೆ ಹಾಗು ಮಿದುಳು ಬೆಳೆಯಲು ನೆರವಾಗುತ್ತದೆ. ತಲೆಬುರುಡೆಗೆ ಹೆಚ್ಚಿನ ಬಲ ಹಾಗು ಮಿದುಳಿಗೆ ಕಾಪುಗಳನ್ನು (protection) ಒದಗಿಸಲು, ಈ ಎಲುಬುಗಳು ದೊಡ್ಡವರಲ್ಲಿ ಬೆಸೆದುಕೊಂಡಿರುತವೆ.

ಕೆಳದವಡೆಯು (mandible), ಬೆಸೆದುಕೊಂಡಿರುವ ತಲೆಬುರುಡೆಯ ಎಲುಬುಗಳಲ್ಲಿ ಒಂದಾದ ಕಣತಲೆಯ ಎಲುಬಿಗೆ (temporal bone), ಜಂಟಿಯ ಮೂಲಕ ಜೋತುಬಿದ್ದಿರುತ್ತದೆ. ತಲೆಬುರುಡೆಯ ಮೇಲಿನ ಬಾಗವನ್ನು ಬುರುಡೆಚಿಪ್ಪು (cranium) ಎಂದು ಕರೆಯುತ್ತಾರೆ; ಇದು ಹೊರಗಿನ ಪೆಟ್ಟು ಹಾಗು ಒತ್ತಡಗಳಿಂದ ಮಿದುಳನ್ನು ಕಾಪಾಡುತ್ತದೆ. ತಲೆಬುರುಡೆಯ ಮುಂಬಾಗದ ಹಾಗು ಕೆಳಬಾಗದ ಎಲುಬುಗಳನ್ನು ಮುಂದಲೆ ಇಲ್ಲವೇ ಮೊಗದ ಮೂಳೆಗಳೆಂದು (facial bones) ಗುರುತಿಸಲಾಗಿದ್ದು, ಇವು ಕಣ್ಣು, ಮೂಗು, ಹಾಗು ಬಾಯಿಗಳ ಆಕಾರ ಹಾಗು ಇರುವಿಕೆಗೆ (support/stability) ನೆರವಾಗುತ್ತವೆ.

ನಾಲಗೆಲ್ಲು (hyoid):

bones_2_3ನಾಲಗೆಲ್ಲು (hyoid), ”U” ಆಕಾರದಲ್ಲಿರುತ್ತದೆ. ಇದನ್ನು ಕೆಳದವಡೆಯ ಕೆಳಗೆ ಕಾಣಬಹುದು. ಇತರ ಎಲುಬುಗಳಿಗೆ ಹೋಲಿಸಿದರೆ, ನಾಲಗೆಲ್ಲು (hyoid), ಯಾವುದೇ ಎಲುಬು/ಮೆಲ್ಲೆಲುಬುಗಳ ಜೊತೆ ಕೊಂಡಿಯಾಗಿರುವುದಿಲ್ಲ. ಆದ್ದರಿಂದ ಇದನ್ನು ತೇಲೆಲುಬು (floating bone) ಎಂದು ಕರೆಯುತ್ತಾರೆ. ಈ ಎಲುಬು ಉಸಿರ್‍ಗೊಳವೆಯನ್ನು (trachea) ತೆರೆದ ಸ್ತಿತಿಯಲ್ಲಿ ಇಡಲು ಹಾಗು ನಾಲಗೆಯ ಮಾಂಸಗಳಿಗೆ ಆಸರೆಯನ್ನು ಕೊಡಲು ನೆರವಾಗಿದೆ.

ಆಲಿಕೆಯ  ಕಿರ‍್ಮೂಳೆಗಳು (auditory ossicles):

bones_2_4ಬಡಿಕಿರ‍್ಮೂಳೆ/ಬಡಿಕೆ (malleus), ಅಡಿಕಿರ‍್ಮೂಳೆ/ಅಡಿಕೆ (incus) ಹಾಗು ಅಂಕಣಿ (stapes) – ಇವುಗಳನ್ನು ಒಟ್ಟಾಗಿ ಆಲಿಕೆಯ ಕಿರ‍್ಮೂಳೆಗಳು (auditory ossicles) ಎಂದು ಕರೆಯಲಾಗುತ್ತದೆ. ಇವು ಮನುಶ್ಯರ ಮಯ್ಯಲ್ಲಿರುವ ತುಂಬಾ ಸಣ್ಣ ಮೂಳೆಗಳಾಗಿವೆ. ಇವುಗಳು ಕಣತಲೆಯ ಎಲುಬಿಗೆನೊಳಗೆ (temporal bone) ಇರುವ ಸಣ್ಣ ಗೂಡಿನಲ್ಲಿ ಕಾಣಸಿಗುತ್ತವೆ. ಈ ಎಲುಬುಗಳು ಸಪ್ಪಳವನ್ನು ಕಿವಿದಮಟೆಯಿಂದ (ear drum) ಕಿವಿಯ ಒಳಬಾಗಕ್ಕೆ ರವಾನಿಸಲು ಹಾಗು ಸದ್ದನ್ನು ಹಿಗ್ಗಿಸಲು (amplify) ನೆರವಾಗುತ್ತವೆ.

ಬೆನ್ನೆಲುಬುಗಳು:  (ಚಿತ್ರ 1 ಮತ್ತು 5 )

bones_2_526 ಬೆನ್ನೆಲುಬುಗಳು ಒಟ್ಟುಗೂಡಿ ಮನುಶ್ಯನ ಬೆನ್ನೆಲುಕಂಬವನ್ನು (vertebral column) ಮಾಡುತ್ತವೆ. ಬೆನ್ನೆಲುಕಂಬದ ನಡುಬಾಗದಲ್ಲಿರುವ ಬೆನ್ನೆಲುಕಾಲುವೆಯಲ್ಲಿ (spinal canal), ಮಿದುಳುಬಳ್ಳಿಯನ್ನು (spinal cord) ಕಾಣಬಹುದು. ಬೆನ್ನೆಲುಕಂಬವು ಮಿದುಳುಬಳ್ಳಿಗೆ ಆಸರೆ ಹಾಗು ಕಾಪುವಿಕೆಯನ್ನು ಒದಗಿಸುತ್ತದೆ. ಬೆನ್ನೆಲುಬುಗಳು ನೆಲೆಸಿರುವ  ಬೆನ್ನಿನ ಬಾಗ ಹಾಗು ಆಕಾರದ ಮೇಲೆ, ಅವುಗಳನ್ನು ಕೆಳಕಂಡಂತೆ ಗುಂಪಿಸಬಹುದಾಗಿದೆ.

  • ಕೊರಳಿನ ಬೆನ್ನೆಲುಬುಗಳು (cervical/neck) – 7
  • ಎದೆಗೂಡಿನ ಬೆನ್ನೆಲುಬುಗಳು (thoracic/chest) – 12
  • ಸೊಂಟದ ಬೆನ್ನೆಲುಬುಗಳು (lumbar/lower back) – 5
  • ಮಡಿ (sacrum) – 1
  • ಬಾಲದ ಎಲುಬು (coccyx/tailbone) – 1

ಪಕ್ಕೆಲುಬುಗಳು (ribs) ಮತ್ತು ಎದೆಚಕ್ಕೆ (sternum): (ಚಿತ್ರ 1, 5, 6)

bones_2_6ಚೂರಿಯ ಆಕಾರದಲ್ಲಿರುವ ಎದೆಚಕ್ಕೆಯು (sternum), ಎದೆಗೂಡಿನ ಮುಂಬಾಗದ ನಡುಗೆರೆಯಲ್ಲಿ (midline) ಇರುತ್ತದೆ. ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ಪಕ್ಕೆಲುಬಿನ (ribs) ಒಂದು ತುದಿಯು, ಎದೆಯ ಮುಂಬಾಗದಲ್ಲಿ ಎದೆಚಕ್ಕೆಗೆ (sternum) ಅಂಟಿಕೊಂಡಿರುತ್ತದೆ.

ಮನುಶ್ಯರಲ್ಲಿ 12 ಜೊತೆ ಪಕ್ಕೆಲುಬುಗಳಿರುತ್ತವೆ. ಇವು ಎದೆಚಕ್ಕೆಯ ಜೊತೆಗೂಡಿ, ಎದೆಬಾಗದಲ್ಲಿ ಎದೆಗೂಡನ್ನು (rib cage) ಮಾಡುತ್ತವೆ. ಮೊದಲ 7 ಜೊತೆ ಪಕ್ಕೆಲುಬುಗಳನ್ನು ’ದಿಟ-ಪಕ್ಕೆಲುಬುಗಳು’ ಎಂದು ಕರೆಯಲಾಗುತ್ತದೆ. ಏಕೆಂದರೆ, ಇವು ಎದೆಗೂಡಿನ ಬೆನ್ನೆಲುಬುಗಳನ್ನು (thoracic vertebrae) ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ನೇರವಾಗಿ ಎದೆಚಕ್ಕೆಗೆ (sternum) ಹೊಂದಿಸುತ್ತವೆ.

8, 9, ಮತ್ತು 10ನೇ  ಪಕ್ಕೆಲುಬುಗಳು, ಏಳನೆಯ ಪಕ್ಕೆಲುಬಿನ ಮೆಲ್ಲೆಲುಬಿನ (costal cartilage) ಮೂಲಕ ಎದೆಚಕ್ಕೆಗೆ ಅಂಟಿಕೊಳ್ಳುವುದರಿಂದ, ಅವುಗಳನ್ನು ’ಹುಸಿ-ಪಕ್ಕೆಲುಬುಗಳು’ (false ribs) ಎಂದು ಕರೆಯುತ್ತಾರೆ.  11 ಮತ್ತು 12ನೇ ಪಕ್ಕೆಲುಬುಗಳೂ ಹುಸಿ-ಪಕ್ಕೆಲುಬುಗಳ ಗುಂಪಿಗೆ ಸೇರಿದ್ದರೂ, ಅವುಗಳನ್ನು ’ತೇಲು-ಪಕ್ಕೆಲುಬು’ಗಳೆಂದು (floating ribs) ವಿಂಗಡಿಸಲಾಗುತ್ತದೆ. ಏಕೆಂದರೆ, ಇವು ಎದೆಚಕ್ಕೆಗೆ ಅಂಟಿಕೊಂಡಿರುವುದಿಲ್ಲ.

ಎದೆಯ ಕಟ್ಟು (pectoral girdle) ಮತ್ತು  ಕಯ್ಗಳು (upper limbs): (ಚಿತ್ರ 1, 6, 7)

ಎದೆಯ ಕಟ್ಟು (pectoral girdle) ಕಯ್ಗಳನ್ನು ನಟ್ಟೊಡಲ ಎಲುಬುಗಳಿಗೆ (axial skeleton) ಜೋಡಿಸಲು  ನೆರವಾಗುತ್ತದೆ. ಎದೆಕಟ್ಟು (pectoral girdle),  ಕೀಲಿಕ/ಹೆಡುಕ (left and right clavicles) ಮತ್ತು ಹೆಗಲೆಲುಬುಗಳಿಂದ (scapula) ಮಾಡಲ್ಪಟ್ಟಿರುತ್ತದೆ.

ಕಯ್ಯಲ್ಲಿನ ಮೇಲ್ಬಾಗದ ಎಲುಬನ್ನು ತೋಳ್ಮೂಳೆ (humerus) ಎಂದು ಕರೆಯಲಾಗುತ್ತದೆ. ಮೇಲ್ತುದಿಯ ತೋಳ್ಮೂಳೆಯು (humerus), ಹೆಗಲೆಲುಬಿನ (scapula) ಜೊತೆಗೂಡಿ ತೋಳಿನಲ್ಲಿ ಒರಳು-ಗುಂಡಿಯ ಜಂಟಿಯನ್ನು (ball & socket joint)  ಮಾಡುತ್ತದೆ.

bones_2_7ಕೆಳತುದಿಯು, ಅರೆಲು (radius) ಹಾಗು ಮೊಣೆಲು (ulna) ಎಂಬ ಮುಂಗಯ್ ಎಲುಬುಗಳ ಜೊತೆಗೂಡಿ, ಮೊಣಕಯ್ ಜಂಟಿಯನ್ನು (elbow joint) ಮಾಡುತ್ತದೆ. ಅರೆಲು (radius) ಮತ್ತು ಮೊಣೆಲು (ulna) ಒಟ್ಟುಗೂಡಿಸಿ ಮುಂದೋಳು (forearm) ಎನ್ನಬಹುದು.

ಮೊಣೆಲು (ulna), ಮುಂದೋಳಿನ ನಡು/ಒಳಬಾಗದಲ್ಲಿದ್ದು (medial), ತೋಳ್ಮೂಳೆಯ (humerus) ಜೊತೆ ಸೇರಿ ತಿರುಗಣೆ ಜಂಟಿಯನ್ನು (hinge joint) ಮಾಡುತ್ತದೆ. ಅರೆಲು (radius), ಮುಂದೋಳನ್ನು (forearm) ಮಣಿಕಟ್ಟಿನ ಜಂಟಿಯ (wrist) ಮಟ್ಟದಲ್ಲಿ ತಿರುಗಿಸಲು ನೆರವಾಗುತ್ತದೆ.

ಮುಂಗಯ್ ಎಲುಬುಗಳು (lower arm bones), ಮಣಿಕಟ್ಟಿನ ಮೂಳೆಗಳ ನೆರವಿನಿಂದ ಮಣಿಕಟ್ಟಿನ ಜಂಟಿಯನ್ನು (wrist) ಮಾಡುತ್ತದೆ. ಈ ಮಣಿಕಟ್ಟಿನ ಎಲುಬುಗಳ ಸಂಕೆ 8. ಇವುಗಳು ಮಣಿಕಟ್ಟಿಗೆ ಬಾಗುವ ಅಳವನ್ನು (flexibility) ಕೊಡುತ್ತವೆ. ಮಣಿಕಟ್ಟಿನ ಎಲುಬುಗಳಿಗೆ  5 ಅಂಗಯ್ ಎಲುಬುಗಳು (metacarpal bones/bones of the hand) ಜೋಡಿಸಲ್ಪಟ್ಟಿರುತ್ತವೆ.

ಒಂದೊಂದು ಅಂಗಯ್ ಎಲುಬುಗಳಿಗೆ (metacarpal bones ), ಒಂದೊಂದು ಬೆರಳುಗಳು ಜೋತುಬಿದ್ದಿರುತ್ತವೆ. ಪ್ರತಿ ಬೆರಳು 3 ಎಲುವೆರಳುಗಳನ್ನು (phalanges) ಹೊಂದಿರುತ್ತವೆ. ಹೆಬ್ಬೆರಳು (thumb) ಮಾತ್ರ 2 ಎಲುವೆರಳುಗಳನ್ನು (phalanges)  ಹೊಂದಿರುತ್ತದೆ.

ಕೀಳ್ಗುಳಿಯ ಸುತ್ತುಕಟ್ಟು (pelvic girdle) ಮತ್ತು ಕಾಲುಗಳು (lower limbs): (ಚಿತ್ರ 1, 8, 9)

bones_2_8ಎಡ ಹಾಗು ಬಲ ಚಪ್ಪೆಲುಗಳು (hip bones) ಕೂಡಿ ಮಾಡಲ್ಪಡುವ ಕೀಳ್ಗುಳಿಯ ಸುತ್ತುಕಟ್ಟು (pelvic girdle), ಕಾಲುಗಳನ್ನು ನಟ್ಟೊಡಲಿಗೆ (axial skeleton) ಕೂಡಿಸಲು ನೆರವಾಗುತ್ತದೆ. ತೊಡೆಮೂಳೆ (femur) ಮನುಶ್ಯರಲ್ಲಿ ಕಂಡು ಬರುವ ಅತಿ ದೊಡ್ಡ ಎಲುಬು. ಇದು ತೊಡೆ ಬಾಗದಲ್ಲಿ ಕಂಡುಬರುವ ಒಂದೇ ಒಂದು ಎಲುಬು ಕೂಡ ಹವ್ದು.  ತೊಡೆಮೂಳೆಯು, ಚಪ್ಪೆಲುಬಿನ  ಜೊತೆಗೂಡಿ ಒರಳು-ಗುಂಡಿನ ಜಂಟಿಯನ್ನು (ball and socket joint) ಮಾಡುತ್ತದೆ. ಈ ಜಂಟಿಯನ್ನು ಸೊಂಟಕೀಲು (hip joint) ಎಂದು ಕರೆಯುತ್ತಾರೆ.

ತೊಡೆಮೂಳೆಯ ಮತ್ತೊಂದು ತುದಿಯು, ಕಣಕಾಲೆ (tibia) ಹಾಗು ಮಂಡಿಚಿಪ್ಪುಗಳ (patella) ಜೊತೆಗೂಡಿ ಮಂಡಿ ಜಂಟಿಯನ್ನು (knee joint) ಮಾಡುತ್ತದೆ. ಈ ಮಂಡಿ ಜಂಟಿಯಲ್ಲಿ ಕಂಡು ಬರುವ ಮಂಡಿಚಿಪ್ಪಿನ (patella) ವಿಶೇಶತೆ ಎಂದರೆ, ಈ ಎಲುಬು, ಹುಟ್ಟುವಾಗ ಮನುಶ್ಯರಲ್ಲಿ ಕಂಡುಬರುವುದಿಲ್ಲ. ಆದರೆ, ನಂತರದ ದಿನಗಳಲ್ಲಿ ಮಗು ತೆವಳಲು ಆರಂಬಿಸಿದಾಗ, ಈ ಚಿಪ್ಪು ಮಾಡಲ್ಪಡುತ್ತದೆ.

bones_2_9ಕಣಕಾಲೆ (tibia) ಮತ್ತು ಸೂಚಿಲುಕ (fibula), ಎಂಬ ಎರಡು ಎಲುಬುಗಳು, ಕಾಲಿನ ಕೆಳಬಾಗದಲ್ಲಿ ಇರುತ್ತವೆ. ಇವೆರಡರಲ್ಲಿ ಕಣಕಾಲೆ, ಸೂಚಿಲುಕ್ಕಿಂತ ದೊಡ್ದದಿದ್ದು, ಹೆಚ್ಚು-ಕಡಿಮೆ ಇಡೀ ಮಯ್ ತೂಕವನ್ನು ಹೊರುತ್ತದೆ. ಕಣಕಾಲೆ (tibia) ಮತ್ತು  ಸೂಚಿಲುಕಗಳು (fibula), ಎಳುದಾಲಿನ (talus) ಜೊತಗೂಡಿ, ಹಿಮ್ಮಡಿ ಜಂಟಿಯನ್ನು (ankle joint) ಮಾಡುತ್ತವೆ.

ಮುಂಗಾಲೆಲುತಂಡ/ರೆಪ್ಪದರ (tarsals) ಏಳು ಸಣ್ಣ ಎಲುಬುಗಳ ಗುಂಪು. ಇದು ಕಾಲಿನ ಹಿಂಬಾಗ ಹಾಗು ಹಿಮ್ಮಡಿಯನ್ನು ಮಾಡುತ್ತದೆ. ಮುಂಗಾಲೆಲುತಂಡವು, ಅಯ್ದು ಅಂಗಾಲೆಲುಬುಗಳ (metatarsals)  ಜೊತೆಗೂಡಿ, ಜಂಟಿಗಳನ್ನು ಮಾಡುತ್ತದೆ.

ಒಂದೊಂದು ಅಂಗಾಲೆಲುಬು (metatarsals), ಕಾಲ್ಬೆರಳುಗಳ ಎಲುವೆರಳುಗಳ (phalanges) ಜೊತೆ ಸೇರಿ, ಜಂಟಿಯನ್ನು ಮಾಡುತ್ತದೆ. ಕಾಲಿನ ಹೆಬ್ಬೆರಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕಾಲ್ಬೆರಳುಗಳಲ್ಲಿ 3 ಎಲುವೆರಳುಗಳು (phalanges) ಇರುತ್ತವೆ. ಹೆಬ್ಬರಳಿನಲ್ಲಿ, ಕೇವಲ ಎರಡು ಎಲುವೆರಳುಗಳು (phalanges) ಇರುತ್ತವೆ.

ಇಲ್ಲಿಯವರೆಗೆ ಮನುಶ್ಯರ ’ಎಲುಬುಗಳ’ ಏರ‍್ಪಾಟಿನ ಬಗ್ಗೆ ಎರಡು ಕಂತುಗಳಲ್ಲಿ ತಿಳಿಸಲಾಯಿತು. ಮುಂದಿನ ಬರಹದಲ್ಲಿ ಹುರಿಕಟ್ಟಿನ ಏರ‍್ಪಾಟಿನಲ್ಲಿ ಕಂಡುಬರುವ ಇತರ ಅಂಗಗಳ ಬಗ್ಗೆ ತಿಳಿಸಲಾಗುವುದು.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. wikispaces.com, 2. wikimedia.org, 3. medical-dictionary, 4. daviddarling, 5. wikipedia, 6. dmacc.edu, 7. people.emich.edu, 8. physio-pedia.com, 9. drugs.com, 10. answers.com

(ಈ ಬರಹವು ಹೊಸಬರಹದಲ್ಲಿದೆ)

ಹುರಿಕಟ್ಟಿನ ಏರ‍್ಪಾಟು – ಮೂಳೆಗಳು 1

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ-1:

ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಮೊದಲ ಬಾಗವಾಗಿ ಹುರಿಕಟ್ಟಿನ ಏರ‍್ಪಾಟಿನಲ್ಲಿ ಒಂದಾದ ಮೂಳೆಗಳ ಬಗ್ಗೆ ಈ ಬರಹದಲ್ಲಿ ತಿಳಿಸಲಾಗುವುದು.

0_hurikattina_erpatu2ಮೂಳೆಗಳನ್ನು ಎಲುಬುಗಳು ಎಂತಲೂ ಕರೆಯುತ್ತಾರೆ. ’ಓಡಾಡುವ ಏರ‍್ಪಾಟು’ ಎಂದೂ ಕರೆಯಬಹುದಾದ ಈ ಏರ‍್ಪಾಟು ಮನುಶ್ಯನ ಎಲುಬುಗಳು ಹಾಗು ಮಾಂಸಗಳ ಮೂಲಕ ಆಕಾರ, ಆಸರೆ (support), ನೆಲೆತ (stability), ಮತ್ತು ಓಡಾಡುವ ಅಳವನ್ನು (ability) ಕೊಡುತ್ತದೆ.

ಈ ಏರ‍್ಪಾಟು ಮುಕ್ಯವಾಗಿ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ,

1) ಮೂಳೆಗಳು/ಎಲುಬುಗಳು  (bones)

2) ಮೂಳೆ ಕೀಲುಗಳು/ಜಂಟಿಗಳು (joints)

3) ಮಾಂಸ (muscle)

4) ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons)

5) ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments)

6) ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳು (cartilage).

ಹುರಿಕಟ್ಟಿನ ಏರ‍್ಪಾಟನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮೊದಲಿಗೆ ಎಲುಬುಗಳ ಬಗ್ಗೆ ಆಮೇಲೆ ಹುರಿಕಟ್ಟಿನ ಇತರ ಬಾಗಗಳು, ಅವುಗಳಿಗೆ ಎರಗುವ ಕುತ್ತುಗಳು ಮತ್ತು ಮದ್ದುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

1. ಎಲುಬಿನ ಏರ‍್ಪಾಟು: 

1.1 ಎಲುಬುಗಳ ಮುಕ್ಯ ಕೆಲಸಗಳು

  • ಆಕಾರ: ಎಲುಬುಗಳು ಒಡಲಿಗೆ ಚವ್ಕಟ್ಟನ್ನು (framework/shape) ಒದಗಿಸುತ್ತವೆ.
  • ಆಸರೆ: ಮಯ್ಯೊಳಗಿನ ಮೆದುವಾದ ಅಂಗಗಳಿಗೆ ಆಸರೆಯನ್ನು ಒದಗಿಸುತ್ತವೆ. ಉದಾ: ಪಕ್ಕೆಗೂಡು (rib cage) ಉಸಿರುಚೀಲ, ಎದೆಗುಂಡಿಗೆಯಂತಹ ನಾಜೂಕಾದ ಅಂಗಗಳನ್ನು ಹೊಂದಿರುವ ಬಗ್ಗರಿ ಗೋಡೆಗೆ (thoracic wall) ಎಲುಬುಗಳು ಆಸರೆಯಾಗುತ್ತವೆ.
  • ಕಾಪು (protection): ತಲೆ ಬುರುಡೆ (skull) ಹಾಗು ಬೆನ್ನೆಲುಬುಗಳು (vertebrae) ನರದ ಏರ‍್ಪಾಟನ್ನು ಕಾಪಾಡಿದರೆ, ಪಕ್ಕೆಲುಬು ಬಗ್ಗರಿಯ (thoracic) ಉಸಿರುಚೀಲ, ಎದೆಗುಂಡಿಗೆಯಂತಹ ಅಂಗಗಳನ್ನು ಕಾಯುತ್ತದೆ.
  • ಓಡಾಟ/ಅಲುಗಾಟ: ಎಲುಬಿಗೆ ಹೊಂದಿಕೊಂಡಿರುವ ಮಾಂಸವು ಎಲುಬನ್ನು ಸನ್ನೆಗೋಲಿನಂತೆ (lever) ಬಳಸಿಕೊಂಡು ನಾವು ಓಡಾಡಲು ಹಾಗು ನಮ್ಮ ಮಯ್ ಬಾಗಗಳನ್ನು ಅಲುಗಾಡಿಸಲು ನೆರವಾಗುತ್ತದೆ.
  • ಕೂಡಿಡುವಿಕೆ (storage): ನಮ್ಮ ಮಯ್ಯಿಗೆ ಬೇಕಾಗಿರುವ ಕೊಬ್ಬು ಹಾಗು ಕನಿಜಗಳನ್ನು (ಕ್ಯಾಲ್ಶಿಯಮ್ & ಪಾಸ್ಪರಸ್) ಕೂಡಿಡಲ ನೆರವಾಗುತ್ತವೆ.
  • ನೆತ್ತರು ಕಣಗಳನ್ನು ಹುಟ್ಟಿಸುವಿಕೆ: ನೆತ್ತರಿನಲ್ಲಿರುವ ಕಣಗಳನ್ನು ಹುಟ್ಟಿಸುವಲ್ಲಿ ಎಲುಬಿನ ನಡುವಿರುವ ಕೊಳವೆಯಲ್ಲಿರುವ ಮೂಳೆಮಜ್ಜೆ (bone marrow) ಸಹಕಾರಿಯಾಗಿದೆ.

1.2 ಎಲುಬಿನ ಬಗೆಗಳು:

titta-1_elubina-aakaaragalu1ಗೂಡುಕಟ್ಟುಗಳ (tissue) ಅನುಗುಣವಾಗಿ ಎಲುಬುಗಳನ್ನು ದಟ್ಟೆಲುಬು (compact bone) ಹಾಗು ಹೀರುಗದೆಲುಬುಗಳೆಂದು (spongy bone) ಗುಂಪಿಸಬಹುದಾಗಿದೆ. ದಟ್ಟೆಲುಬುಗಳು ಒತ್ತಾಗಿಯೂ, ನುಣುಪಾಗಿಯೂ ಕಾಣುತ್ತವೆ ಹಾಗು ಎಲುಬಿನ ಎಲ್ಲೆಡೆಯೂ ಒಂದೆತೆರನಾಗಿರುತ್ತವೆ (homogeneous). ಹೀರುಗದೆಲುಬು ಸಣ್ಣ ಸೂಜಿಯಂತಹ ಇಟ್ಟಳ (structure) ಇಲ್ಲವೆ ಚಪ್ಪಟೆಯಾದ ಚೂರುಗಳಂತೆ ಇರುತ್ತದೆ.

ಎಲುಬನ್ನು ಅವುಗಳ ಆಕಾರದ ಅನುಗುಣವಾಗಿ 4 ಗುಂಪುಗಳಾಗಿಸಬಹುದು: (ಚಿತ್ರ 1 ನೋಡಿ)

1) ಉದ್ದನೆಯ ಎಲುಬುಗಳು (long bones): ಇವು ನಡುಗಡ್ಡಿ (shaft) ಹಾಗು ಎರಡು ತುದಿಗಳನ್ನು ಹೊಂದಿರುತ್ತವೆ. ಈ ಬಗೆಯ ಎಲುಬುಗಳು ಹೆಚ್ಚಿನ ಮಟ್ಟದಲ್ಲಿ ದಟ್ಟೆಲುಬುಗಳಿಂದ ಮಾಡಲ್ಪಟ್ಟಿರುತ್ತವೆ. ಮಂಡಿಚಿಪ್ಪು (patella), ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟುಗಳನ್ನು (wrist/carpus) ಹೊರತುಪಡಿಸಿ, ಕಯ್ಕಾಲುಗಳಲ್ಲಿ ಕಂಡು ಬರುವ ಉಳಿದೆಲ್ಲ ಎಲುಬುಗಳು ಈ ಗುಂಪಿಗೆ ಸೇರುತ್ತವೆ.

2) ತುಂಡೆಲುಬುಗಳು (short bones): ಈ ಬಗೆಯ ಎಲುಬುಗಳು ಹೀರುಗದ ಎಲುಬುಗಳಿಂದ (spongy bone) ಮಾಡಲ್ಪಟ್ಟಿರುತ್ತವೆ. ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟಿನ (wrist/carpus) ಎಲುಬುಗಳು ತುಂಡೆಲುಬುಗಳ ಅಡಿಯಲ್ಲಿ ಬರುತ್ತವೆ.

3) ಚಪ್ಪಟ್ಟೆ ಎಲುಬುಗಳು (flat bones): ಈ ಬಗೆಯ ಎಲುಬುಗಳು ಹೆಚ್ಚು-ಕಡಿಮೆ ಚಪ್ಪಟ್ಟೆಯಾಗಿಕಾರವಿದ್ದು, ತುದಿಗಳಲ್ಲಿ ಸ್ವಲ್ಪಮಟ್ಟಿಗೆ ಬಾಗಿರುತ್ತವೆ. ಇವು ತೆಳುವಾದ ಎರಡು ದಟ್ಟೆಲುಬಿನ ಹಲಗೆಗಳ (sheet) ನಡುವೆ ಹೀರೆಲುಬಿನ ಪದರವನ್ನು ಹೊಂದಿರುತ್ತದೆ. ಉದಾ: ಎದೆಚಕ್ಕೆ (sternum).

4) ಅಂಕುಡೊಂಕಾದ ಎಲುಬುಗಳು (irregular bones): ಮೇಲೆ ತಿಳಿಸಿರುವ ಯಾವುದೇ ಗುಂಪುಗಳಿಗೆ ಸೇರಿಸಲಾಗದ ಎಲುಬುಗಳಿವು. ಇವುಗಳ ಆಕಾರ ಹಾಗು ಇಟ್ಟಳ ಇತರ ಎಲುಬುಗಳಿಗೆ ಹೋಲಿಸಿದರೆ ಸ್ವಲ್ಪ ಸಿಕ್ಕಲಾಗಿರುತ್ತವೆ. ಬೆನ್ನೆಲುಬು (vertebrae), ಚಪ್ಪೆ/ಚಪ್ಪೆಲುಬು (hipbone) ಮತ್ತು ಕೆಲವು ತಲೆಬುರುಡೆ ಮೂಳೆಗಳು ಈ ಗುಂಪಿನಡಿ ಬರುತ್ತವೆ.

1.3 ಎಲುಬಿನ ಇಟ್ಟಳ (bone structure):

titta2_elubina-ittala1ಒಂದೆರಡು ಎಲುಬುಗಳನ್ನು ಹೊರತುಪಡಿಸಿ, ಎಲ್ಲಾ ಎಲುಬುಗಳ ಸಾಮಾನ್ಯ ಇಟ್ಟಳ (structure) ಹೆಚ್ಚು-ಕಡಿಮೆ ಒಂದೇ ತೆರನಾಗಿರುತ್ತದೆ.

ಒಳೆಲುಮೊಳೆ (diaphysis): ಎಲುಬಿನ ನಡುಗಡ್ಡಿಯನ್ನು (shaft) ಒಳೆಲುಮೊಳೆ ಎಂದು ಕರೆಯಬಹುದು. ಇದು ಕೊಳವೆಯನ್ನು ಹೊಂದಿರುವ ಮಂದವಾದ ಕಂಬದಂತಿದ್ದು, ದಟ್ಟೆಲುಬಿನಿಂದ ಮಾಡಲ್ಪಟ್ಟಿದೆ. ಒಳಗಿನ ಕೊಳವೆಬಾಗವು ಅರಿಶಿನ ಬಣ್ಣದ ಕೊಬ್ಬನ್ನು ಹೊಂದಿದ್ದು, ಇದನ್ನು ಹಳದಿ ಮೂಳೆಮಜ್ಜೆ (yellow bone marrow) ಎಂದು ಕರೆಯಲಾಗುತ್ತದೆ.

ಮೇಲೆಲುಮೊಳೆ (epiphysis): ಎಲುಬಿನ ತುದಿಗಳೆ ಮೇಲೆಲುಮೊಳೆ. ಒಳೆಲುಮೊಳೆಗೆ (diaphysis)  ಹೋಲಿಸಿದರೆ, ಇದು ಸ್ವಲ್ಪ ಅಗಲವಾಗಿಯೂ, ದುಂಡಾಗಿಯೂ ಇರುತ್ತದೆ. ಹೀರೆಲುಬುಗಳಿಂದ ಮಾಡಲ್ಪಟ್ಟಿರುವುದರಿಂದ, ಎಲುಬಿನ ಈ ಬಾಗದಲ್ಲಿ ಸಂದುಗಳಲ್ಲಿದು, ರಕ್ತಕಣಗಳನ್ನು ಮಾಡಲು ಸಹಕಾರಿಯಾಗಿರುವ  ಕೆಂಪು ಮೂಳೆಮಜ್ಜೆಯನ್ನು (red bone marrow) ಹೊಂದಿರುತ್ತದೆ.

ಮೇಲೆಲುಬಿನ ತಟ್ಟೆ (epiphyseal plate): ಒಳೆಲುಮೊಳೆ (diaphysis) ಹಾಗು ಮೇಲೆಲುಮೊಳೆಗಳ (epiphysis) ನಡುವೆ ಕಂಡುಬರುವ ಮೇಲೆಲುಬಿನ ತಟ್ಟೆ (epiphyseal plate), ಮಕ್ಕಳಲ್ಲಿ ಮೆಲ್ಲೆಲುಬಿನಿಂದ (cartilage) ಮಾಡಲ್ಪಟ್ಟಿದ್ದು, ಈ ಬಾಗದಲ್ಲಿ ನಡೆಯುವ ಬೆಳವಣಿಗೆಯು, ಎಲುಬುಗಳ ಉದ್ದವನ್ನು ಹೆಚ್ಚಿಸಲು ನೆರವಾಗುತ್ತದೆ. ಮನುಶ್ಯರು ದೊಡ್ಡವರಾದ ಮೇಲೆ, ಮೇಲೆಲುಬಿನ ತಟ್ಟೆಯ ಮೆಲ್ಲೆಲುಬು, ಎಲುಬಾಗಿ ರೂಪುಗೊಂಡು ಮೇಲೆಲುಬಿನ ಗೆರೆಯಾಗಿ (epiphyseal line) ಮಾರ‍್ಪಟ್ಟು, ಎಲುಬುಗಳ ಬೆಳೆಯುವಿಕೆ ನಿಲ್ಲುತ್ತದೆ.

ಎಲುಸುತ್ಪರೆ (periosteum): ಒಳೆಲುಮೊಳೆಯ (diaphysis) ಹೊರ ಬಾಗಕ್ಕೆ ಹೊದಿಕೆಯನ್ನು ಕೊಡುವ ಪದರವೇ ಎಲುಸುತ್ಪರೆ (periosteum). ಈ ಪದರವು ಎಲುಬನ್ನು ಮಾಡುವ ಎಲುನನೆಕಣಗಳನ್ನು (osteoblasts) ಹೊಂದಿರುತ್ತವೆ. ಜೊತೆಗೆ, ಕಂಡರಗಳು (tendons) ಹಾಗು ತಂತುಗಟ್ಟುಗಳು (ligaments) ಎಲುಬಿನ ಮೇಲೆ  ಅಂಟಲು ನೆಲೆಯನ್ನು ಮಾಡಿಕೊಡುತ್ತದೆ.

ಎಲುಬೊಳ್ಪರೆ (endosteum): ಇದು ಎಲುಬಿನ ಒಳಬಾಗಕ್ಕೆ ಹಾಗು ಹೀರೆಲುಬುಗಳಲ್ಲಿ ಕಂಡುಬರುವ ಸಣ್ಣ-ಸಣ್ಣ ಕೋಣೆಗಳ ಗೋಡೆಗಳಿಗೆ ಹೊದಿಕೆಯನ್ನು ಕೊಡುತ್ತದೆ.

ಜಂಟಿಯ ಮೆಲ್ಲೆಲುಬು (articular cartilage): ಉದ್ದನೆಯ ಮೂಳೆಗಳು ಒಂದಕ್ಕೊಂದು ಜೋಡಣೆಯಾಗುವಾಗ, ಎಲುಗಳ ತುದಿಗಳ ಹೊರಮಯ್ ಮೇಲೆ ಮೆಲ್ಲೆಲುಬುಗಳ (articular cartilage) ಪದರವಿರುತ್ತದೆ. ಈ ಪದರವು ಎರಡು ಎಲುಬುಗಳ ನಡುವೆ ಉಂಟಾಗುವ ಒತ್ತಡವನ್ನೂ ಹೀರಿಕೊಳ್ಳಲು ನೆರವಾಗುತ್ತದೆ.

1.4 ಎಲುಬಿನ ಕಿರುದೋರುಕದ ಇಟ್ಟಳ (microscopic structure):

titta3_seerutorpu1

titta4_elurule-erpaatu1ಕಿರುದೋರುಕದಲ್ಲಿ (microscope) ನೋಡಿದಾಗ ಎಲುಬಿನಲ್ಲಿ ಬಹಳಶ್ಟು ಕಾಲುವೆಗಳಂತಹ (canal) ರಚನೆಗಳಿದ್ದು, ಇವು ನರಗಳು, ರಕ್ತಗೊಳವೆಗಳು ಹಾಗು ಹಾಲ್ರಸದ ಕೊಳವೆಗಳು (lymphatic vessels) ಗಟ್ಟಿಯಾದ ಎಲುಬುಗಳಲ್ಲಿ ಸರಾಗವಾಗಿ ಹಾದುಹೋಗಲು ನೆರವಾಗುತ್ತವೆ.

ಎಲುಬಿನ ಕೆಲಸದ ಗಟಕವನ್ನು (functional unit) ಎಲುರುಳೆ ಏರ‍್ಪಾಡು (osteon/ haversian system) ಎಂದು ಕರೆಯಬಹುದು. ಒಂದೊಂದು ಎಲುರುಳೆಯು (osteon), ಉದ್ದನೆಯ ಉರುಳೆಯಂತಿದ್ದು (cylinder), ಹಲವು ಪದರಗಳನ್ನು ಹೊಂದಿರುವ ಬಾರ-ಹೊರುವ ಸಣ್ಣ-ಸಣ್ಣ ಕಂಬಗಳಂತೆ ಕಾಣುತ್ತವೆ. ಈ ಪದರಗಳನ್ನು ತೆಳ್ಪರೆ (lamella) ಎಂದು ಕರೆಯಲಾಗುತ್ತದೆ. ಈ ಪದರಗಳಲ್ಲಿ ಅಂಟುಬೆಳೆ (collagen) ಎಂಬ ನಾರುಗಳಿರುತ್ತವೆ (fiber).

ಒಂದು ಪದರದ ನಾರುಗಳು ಒಂದೇ ದಿಕ್ಕಿನಲ್ಲಿ ಜೋಡಿಸಲ್ಪಟ್ಟಿದ್ದರೆ, ಈ ಪದರದ ಅಕ್ಕ-ಪಕ್ಕದಲ್ಲಿರುವ ಪದರಗಳಲ್ಲಿ ನಾರುಗಳು ಮತ್ತೊಂದು ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ರಚನೆ, ಎಲುಬಿಗೆ ಗಟ್ಟಿತನವನ್ನೂ ಹಾಗು ಎಲುಬುಗಳ ಮೇಲೆ ಬೀಳುವ ಹೊರೆ/ಒತ್ತಡವನ್ನು ತಾಳಿಕೊಳ್ಳುವ ಕಸುವು ಕೊಡುತ್ತದೆ. ಎಲುರುಳೆಯ (osteon), ನಡುಬಾಗದಲ್ಲಿ ಸಣ್ಣ ರಕ್ತಗೊಳವೆ ಹಾಗು ನರದನಾರುಗಳನ್ನು (nerve fibers) ಹೊಂದಿರುವ ನಡುಗಾಲುವೆ/ಹವರ‍್ಸಿಯನ್ ಕಾಲುವೆ (haversian canal) ಇರುತ್ತದೆ.

ಈ ಕಾಲುವೆಗಳಿಗೆ ನೇರಡ್ಡವಾಗಿ (perpendicular) ವೋಲ್ಕ್ಮನ್ ಕಾಲುವೆ (volkmann’s  canal) ಸಾಗುತ್ತದೆ. ವೋಲ್ಕ್ಮನ್ ಕಾಲುವೆ (volkmann’s canal), ಎಲುರುಳೆಗಳ (osteon) ನಡುಬಾಗ ಹಾಗು ಎಲುಬಿನ ಮಜ್ಜೆಯ ಗೂಡನ್ನು (medullary cavity), ಎಲುಸುತ್ಪರೆಯ (pperiosteum) ರಕ್ತಗೊಳವೆ ಹಾಗು ನರಗಳೊಂದಿಗೆ ಸಂಪರ‍್ಕ ಹೊಂದಲು ನೆರವಾಗುತ್ತವೆ.

ಇಲ್ಲಿಯವರೆಗೆ ಎಲುಬಿನ ಕೆಲಸ, ಬಗೆಗಳು ಹಾಗು ಇಟ್ಟಳಗಳ ಕುರಿತು ತಿಳಿಸಿಕೊಡಲಾಗಿದೆ. ಎಲುಬು ಏರ‍್ಪಾಟಿನ ಉಳಿದ ವಿಶಯಗಳನ್ನು ಮುಂದಿನ ಬಾಗದಲ್ಲಿ ವಿವರಿಸಲಾಗುವುದು.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: 1. visual.merriam, 2. classes.midlandstech.edu, 3. wikipedia, 4. augustatech.edu, 5. danceguadagno, 6. innerbody.com )

(ಈ ಬರಹವು ಹೊಸಬರಹದಲ್ಲಿದೆ)

ಮನುಶ್ಯರ ಮಯ್ಯಿ

ಮನುಶ್ಯನ ಮಯ್ಯನ್ನು ಹೊರಗಿನಿಂದ ತಲೆ, ಕುತ್ತಿಗೆ, ಸೊಂಟ, ಎರಡು ಕಾಲು ಹಾಗು ಎರಡು ಕಯ್ಯಿಗಳಾಗಿ ಗುಂಪಿಸಬಹುದು. ಮೇಲಿನಿಂದ ಕಾಣುವ ಇವೆಲ್ಲವುಗಳನ್ನು ಹಿಡಿತದಲ್ಲಿಡಲು ಮಯ್ಯಿಯ ಒಳಗೆ ಹಲವು ಬಗೆಯ, ತುಂಬಾ ಅಚ್ಚುಕಟ್ಟಾದ ಏರ‍್ಪಾಟುಗಳಿವೆ.

ನಮ್ಮ ಮಯ್ಯಿಯೊಳಗಿನ ಮುಕ್ಯವಾದ ಏರ‍್ಪಾಟುಗಳು ಮತ್ತು ಅವುಗಳ ಕೆಲಸಗಳು ಈ ಕೆಳಗಿನಂತಿವೆ,

1) ಹುರಿಕಟ್ಟಿನ ಏರ‍್ಪಾಟು (musculo-skeletal system): 

ಈ ಏರ‍್ಪಾಟು ಮುಕ್ಯವಾಗಿ ಮೂಳೆಗಳು, ಮೂಳೆ ಕೀಲುಗಳು, ಮೂಳೆಗಳಿಂದ ಮಾಡಲ್ಪಟ್ಟ ಎಲುಬಿನ ಗೂಡುಗಳನ್ನು ಹೊಂದಿರುತ್ತದೆ. ಮಾಂಸ, ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons), ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments) ಹಾಗು ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳೂ (cartilage) ಹುರಿಕಟ್ಟಿನ ಇತರ ಬಾಗಗಳಾಗಿವೆ.

ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ 206 ಮೂಳೆಗಳು ಮತ್ತು 230 ಮೂಳೆ ಕೀಲುಗಳಿದ್ದು, ಅವುಗಳ ಮೇಳಯ್ಸಿದ ಕೆಲಸದಿಂದಾಗಿ ಮನುಶ್ಯನು ತನ್ನ ಇತರ ಮಯ್ ಬಾಗಗಳನ್ನು ಅಲುಗಾಡಿಸಲು ಇಲ್ಲವೇ ಬಳಸುವಂತಾಗುವುದು.

2) ನರಗಳ ಏರ‍್ಪಾಟು (nervous system):

ಇದು ಸುತ್ತ-ಮುತ್ತಲಿನ ಅರಿವನ್ನು ತಿಳಿಸುವ ಸೂಚನೆಗಳನ್ನು ಸಾಗಿಸುವ ಗೂಡುಗಳನ್ನು ಹೊಂದಿರುತ್ತದೆ. ಮಿದುಳು, ಮಿದುಳು ಬಳ್ಳಿ (spinal cord) ಹಾಗು ಇವುಗಳಿಗೆ ಹೊಂದಿಕೊಂಡ ನರಗಳು ಇದರ ಮುಕ್ಯ ಬಾಗಗಳು.

anatomy_overview_1.docx

3) ಉಸಿರಾಟದ ಏರ‍್ಪಾಟು (respiratory system):

ಉಸಿರಾಟದ ಏರ‍್ಪಾಟು ಮೂಗು, ಮುನ್ಗಂಟಲು (pharynx), ಉಲಿಪೆಟ್ಟಿಗೆ/ಗಂಟಲಗೂಡು (larynx), ಉಸಿರುಗೊಳವೆ (trachea), ಕವಲುಗೊಳವೆ (bronchial tube), ನವಿರ‍್ಗೊಳವೆಗಳು (bronchioles) ಹಾಗು ಗಾಳಿಗೂಡುಗಳನ್ನು (alveoli) ಹೊಂದಿರುತ್ತದೆ. ಮನುಶ್ಯನೊಬ್ಬ 70 ವರುಶದ ಹರೆಯ ಮುಟ್ಟುವಶ್ಟರಲ್ಲಿ ಒಟ್ಟು 600 ಮಿಲಿಯನ್ ಸಲ ಉಸಿರಾಡುತ್ತಾನೆಂದರೆ ಈ ಏರ‍್ಪಾಟು ಎಶ್ಟು ಮುಕ್ಯ ಅನ್ನುವುದು ಗೊತ್ತಾಗುತ್ತದೆ.

4) ನೆತ್ತರು ಹರಿಸುವಿಕೆಯ ಏರ‍್ಪಾಟು (circulatory system) ಇಲ್ಲವೇ ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system):

ಇದು ಎದೆ-ಗುಂಡಿಗೆ (heart), ತೊರೆಗೊಳವೆ (arteries), ಸೇರುಗೊಳವೆ (veins), ನವಿರು-ನೆತ್ತರಗೊಳವೆಗಳು (capillaries), ಹಾಗು ನೆತ್ತರನ್ನು (blood) ಒಳಗೊಂಡಿರುತ್ತದೆ. ಎದೆಗುಂಡಿಗೆಯ ಮುಕ್ಯ ಕೆಲಸವೆಂದರೆ ನೆತ್ತರನ್ನು ನಮ್ಮ ಮಯ್ ಬಾಗಗಳಿಗೆ ಹರಿಸುವುದು. ನೆತ್ತರನ್ನು ಸುತ್ತಾಡಿಸುತ್ತಾ ಗೂಡು, ಗೂಡುಕಟ್ಟು ಮತ್ತು ಇತರ ಏರ‍್ಪಾಟುಗಳಿಗೆ ಬೇಕಾದ ಉಸಿರುಗಾಳಿ (oxygen) ಹಾಗು ಆರಯ್ವಗಳನ್ನು (nutrients) ತಲುಪಿಸುವುದೇ ಈ ಏರ್‍ಪಾಟಿನ ಗುರಿ.

5) ತೊಗಲಿನ ಏರ‍್ಪಾಟು (integumentary system):

ಇದು ನಮ್ಮ ಮಯ್ಯಿಯ ದೊಡ್ಡ ಏರ್‍ಪಾಟು. ಇದು ನಮ್ಮ ಮಯ್ಯನ್ನು ಹೊರಗಿನ ಅಂಶಗಳಿಂದ ಕಾಪಾಡುತ್ತದೆ ಹಾಗು ಮಯ್ ಕಾವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ. ಈ ಏರ್‍ಪಾಟು ತೊಗಲಿನ ಜೊತೆಗೆ, ಬೆವರು ಸುರಿಕೆಗಳು (sweat glands), ಮಯ್ ಜಿಡ್ಡಿನ ಸುರಿಕೆಗಳು ( sebaceous glands) , ಕೂದಲು, ಉಗುರುಗಳು, ಕೂದಲಿನ ಬುಡದಲ್ಲಿರುವ ಅರ್‍ರೆಕ್ಟೊರೆಸ್ ಪಯ್ಲೋರಂ (arrectores pillorum) ಎಂಬ ನವಿರಾದ ಮಾಂಸಗಳನ್ನು ಒಳಗೊಂಡಿದೆ.

anatomy_overview_2.docx

6) ಹಾಲಿರ‍್ಪಿನ ಏರ‍್ಪಾಟು (lymphatic system):

ಗೂಡುಗಳ ನಡುವೆ ಇರುವ ಹರಿಕಗಳನ್ನು (fluids) ತೆಗೆಯುವುದು, ಸಾಗಿಸುವುದು, ತರುಮಾರ‍್ಪಿಸುವುದು (metabolization) ಈ ಏರ‍್ಪಾಟಿನ ಗುರಿ. ಇದರ ಮುಕ್ಯ ಬಾಗಗಳೆಂದರೆ ಹಾಲ್ರಸಗಡ್ಡೆ (lymph nodes), ಹಾಲ್ರಸದ ಕೊಳವೆಗಳು (lymphatic vessels), ಮತ್ತು ಹಾಲ್ರಸ (lymph).

7) ಸುರಿಕೆ ಏರ‍್ಪಾಟು (endocrine system):

ಈ ಏರ್‍ಪಾಟು ಬಗೆಬಗೆಯ ಸುರಿಗೆಗಳನ್ನು (glands) ಒಳಗೊಂಡಿದೆ. ಇವು ಜೀವಿಯ ಕೆಲಸಗಳು ಮಾರ್‍ಪಡದಂತೆ (homeostasis) ಕಾಯ್ದುಕೊಳ್ಳಲು ಬೇಕಾಗುವ ಸುರಿಕೆಗಳನ್ನು (hormones) ಸುರಿಸುತ್ತವೆ. ಈ ಏರ್‍ಪಾಟಿನ ಮುಕ್ಯ ಅಂಗಗಳೆಂದರೆ ಕೆಳಶಿರಗುಳಿ/ಕಿರುಮಿದುಳು (hypothalamus), ತೆಮಡಿಕ ಸುರಿಕೆ (pituitary gland), ಗುರಾಣಿಕ ಸುರಿಕೆ (thyroid gland) ಮತ್ತು ಬಿಕ್ಕು (kidneys).

8) ಅರಗಿಸುವ ಏರ‍್ಪಾಟು (digestive system):

ನಾವು ತಿನ್ನುವ ಕೂಳನ್ನು ಅರಗಿಸುವುದು, ಅರಗಿದ ಕೂಳನ್ನು ಆರಯ್ವಗಳನ್ನಾಗಿ ಮಾರ‍್ಪಡಿಸುವುದು ಹಾಗು ತಿಂದ ಕೂಳಿನ ಕಸವನ್ನು ಹೊರಗೆಡುವುದು ಅರಗೇರ್‍ಪಾಟಿನ ಮುಕ್ಯ ಗೆಯ್ಮೆ. ಈ ಏರ‍್ಪಾಟು ಬಾಯಿ ( buccal cavity), ಅನ್ನನಾಳ (esophagus), ಹೊಟ್ಟೆ ( stomach), ಸಣ್ಣ ಕರುಳು (small intestine), ದೊಡ್ಡ ಕರುಳು ( large intestine), ನೆಟ್ಟಗರುಳು (rectum) ಮತ್ತು ಗೊಳ್ಳೆ (anus) ಎಂಬ ಬಾಗಗಳನ್ನು ಒಳಗೊಂಡಿದೆ.

anatomy_overview_3.docx

9) ಉಚ್ಚೆಕಟ್ಟಿನ ಏರ‍್ಪಾಟು (urinary system):

ನಾವು ತಿನ್ನುವ ಕೂಳನ್ನು ಕಸುವನ್ನಾಗಿ ಮಾರ‍್ಪಡಿಸಿದ ಮೇಲೆ ಕೆಲವು ನಂಜಿನ ಅಂಶಗಳು ಉಳಿಯುತ್ತವೆ. ಇದನ್ನು ನಮ್ಮ ಮಯ್ಯಿಯಿಂದ ಹೊರಹಾಕಲು ಅಣಿಗೊಂಡಿರುವುದೇ ಉಚ್ಚೆಕಟ್ಟಿನ ಏರ‍್ಪಾಟು. ಉಚ್ಚೆಕಟ್ಟಿನ ಏರ‍್ಪಾಟಿನ ಮುಕ್ಯ ಬಾಗಗಳೆಂದರೆ ಬಿಕ್ಕು (kidney), ಮೇಲಿನ ಉಚ್ಚೆಗೊಳವೆ (ureters), ಉಚ್ಚೆಚೀಲ (urinary bladder), ಮತ್ತು ಕೆಳಗಿನ ಉಚ್ಚೆಗೊಳವೆ (urethera).

10) ಹುಟ್ಟಿಸುವಿಕೆಯ ಏರ‍್ಪಾಟು (reproductive system):

ಈ ಏರ‍್ಪಾಟು ಗಂಡು ಮತ್ತು ಹೆಣ್ಣುಗಳಲ್ಲಿ ಬೇರೆಯಾಗಿದ್ದು ಅವರಿಬ್ಬರ ಕೂಡುವಿಕೆಯಿಂದ ಹೊಸ ಹುಟ್ಟು ಮಯ್ದಾಳುತ್ತದೆ. ತುಣ್ಣೆ (penis), ತರಡುಗಳು (testicles) ಗಂಡಿನಲ್ಲಿರುವ ಹುಟ್ಟಿಸುವ ಏರ‍್ಪಾಟಿನ ಮುಕ್ಯ ಬಾಗಗಳಾದರೆ ಒರೆತೆರ (vagina), ಬಸಿರುಚೀಲ (uterus) ಮತ್ತು ಮೊಟ್ಟೆದಾಣಗಳು ಹೆಣ್ಣಿನಲ್ಲಿರುವ ಮುಕ್ಯ ಬಾಗಗಳಾಗಿವೆ.

anatomy_overview_4.docx

11) ಕಾಪುವಿಕೆಯ ಏರ‍್ಪಾಟು (immune system):

ತನಿಬಗೆಯ (special) ಗೂಡುಗಳು, ಮುನ್ನುಗಳು (proteins), ಗೂಡಿನಕಟ್ಟು (tissues) ಹಾಗು ಅಂಗಗಳನ್ನು ಹೊಂದಿರುವ ಈ ಏರ‍್ಪಾಟು ದಂಡಾಣು (bacteria), ನಂಜುಳ (virus) ಹಾಗು ಇನ್ನಿತರ ಅಂಶಗಳಿಂದ ನಮ್ಮ ಮಯ್ಯಯಿಗೆ ಕೆಡುಕುಂಟಾಗದಂತೆ ಕಾವಲು ಕಾಯುತ್ತದೆ.

ಮುಂದಿನ ಬರಹಗಳಲ್ಲಿ ಈ ಎಲ್ಲ ಏರ‍್ಪಾಟುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

(ಚಿತ್ರ ಸೆಲೆಗಳು: cnx.org )

(ಈ ಬರಹವು ಹೊಸಬರಹದಲ್ಲಿದೆ)

ಅಣು

ಅಣು ಎಂದರೇನು?

ವಸ್ತುವೊಂದನ್ನು ಒಡೆಯುತ್ತಾ ಹೋದಂತೆ ಅದು ತುಣುಕುಗಳಿಂದ, ಚಿಕ್ಕ ತುಣುಕುಗಳಿಂದ, ಕೊನೆಗೆ ಇನ್ನಷ್ಟು ಒಡೆಯಲು ಕಷ್ಟವಾಗುವ ಕಿರುತುಣುಕುಗಳಿಂದ ಮಾಡಲ್ಪಟ್ಟಿರುವುದು ಕಂಡುಬರುತ್ತದೆ. ಇಂತಹ ಕಿರುತುಣುಕೊಂದು ತನ್ನಲ್ಲಿ ಇನ್ನಷ್ಟು ಕಿರಿದಾದ ರಚನೆಗಳನ್ನು ಅಡಕವಾಗಿಸಿಕೊಂಡಿದ್ದು, ಈ ರಚನೆಗಳು ಒಗ್ಗೂಡಿ ನಿರ್ದಿಷ್ಟವಾದ ಕೆಲವು ಗುಣಗಳನ್ನು ಹೊಮ್ಮಿಸುತ್ತವೆ.

ತನ್ನಲ್ಲಿರುವ ಕಿರು ರಚನೆಗಳೊಂದಿಗೆ ಒಟ್ಟಾಗಿ ನಿರ್ದಿಷ್ಟವಾದ ಕೆಲವು ಗುಣಗಳನ್ನು ಹೊಮ್ಮಿಸುವಂತಹ, ಎಲ್ಲಕ್ಕಿಂತ ಕಿರಿದಾದ ಈ ಅಡಕವನ್ನು (constituent) ಅಣು (atom) ಎಂದು ಕರೆಯುತ್ತಾರೆ.

 

matter_atoms(ವಸ್ತುವೊಂದರಲ್ಲಿ ಅಣುಗಳ ಇರುವಿಕೆಯನ್ನು ತೋರಿಸುವ ಚಿತ್ರ)

 

ವಸ್ತುವೊಂದು ಇಂತಹ ಹಲವು ಕೋಟಿಗಳಷ್ಟು ಅಣುಗಳನ್ನು ಹೊಂದಿರುತ್ತದೆ. ಉದಾಹರಣೆಗೆ 1 cm3 ಅಳತೆಯ ತಾಮ್ರದ ತುಣುಕಿನಲ್ಲಿ ಸರಿ ಸುಮಾರು 8.49 × 1022 ಅಣುಗಳಿರುತ್ತವೆ. ವಸ್ತುವೊಂದರ ರಾಸಾಯನಿಕ ಗುಣ (ಬೇರೆ ವಸ್ತುಗಳೊಡನೆ ಹೇಗೆ ಒಡನಾಡುತ್ತದೆ ಎಂಬ ಗುಣ), ಮಿಂಚಿನ (ವಿದ್ಯುತ್ / electric) ಗುಣ, ಗಟ್ಟಿತನದ ಗುಣ ಮುಂತಾದ ಇತರೆ ಹಲವು ಗುಣಗಳು ಅದರಲ್ಲಿರುವ ಅಣುಗಳ ಗುಣಗಳನ್ನು ಅವಲಂಬಿಸಿರುತ್ತವೆ.

ಜೀವಿಗಳು ಕೂಡ ಮೂಲದಲ್ಲಿ ಅಣುಗಳಿಂದ ಮಾಡಲ್ಪಟ್ಟಿವೆ. ಉದಾಹರಣೆಗೆ ಜೀವಿಗಳಲ್ಲಿರುವ ಪ್ರೋಟೀನ್, ಅಮಿನೊ ಅಸಿಡ್ ಗಳಿಂದ ಮಾಡಲ್ಪಟ್ಟಿದ್ದರೆ, ಅಮಿನೊ ಅಸಿಡ್ ಗಳು ನೈಟ್ರೋಜನ್, ಉಸಿರ್ಗಾಳಿ (ಆಕ್ಸಿಜನ್), ನೀರುಟ್ಟುಕ (ಹೈಡ್ರೋಜನ್) ಮತ್ತು ಕರಿಗೆಗಳ (ಕಾರ್ಬನ್) ಅಣುಗಳಿಂದ ಮಾಡಲ್ಪಟ್ಟಿವೆ. ಮನುಷ್ಯರ ಮೈಯ ಹೆಚ್ಚಿನ ಭಾಗ ನೀರಿನಿಂದ ಕೂಡಿದ್ದು, ನೀರು ಮೂಲದಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳಿಂದ ಮಾಡಲ್ಪಟ್ಟಿದೆ.

organisms_atoms(ಜೀವಿಗಳಲ್ಲಿ ಅಣುಗಳ ಇರುವಿಕೆಯನ್ನು ತೋರಿಸುವ ಚಿತ್ರ)

ಅಣುಗಳ ರಚನೆ (structure of atom):

ಅಣುಗಳಿಗೆ ಗೊತ್ತುಪಡಿಸಿದ ಇಂತದೇ ಆಕಾರವಿದೆ ಎಂದು ಹೇಳಲು ಕಷ್ಟವಾದರೂ, ಹೆಚ್ಚಾಗಿ ಅವುಗಳನ್ನು ದುಂಡನೆ ಆಕಾರದಿಂದ ಗುರುತಿಸಲಾಗುತ್ತದೆ. ಅಣುವಿನ ದುಂಡಿ (radius) ಸುಮಾರು 30 pm ನಿಂದ 300 pm ವರೆಗೆ ಇರುತ್ತದೆ. (pm = picometer / ಪಿಕೊಮೀಟರ್ = 1×10−12 m).

ಅಣುವು ಕೆಳಗಿನ ಮೂರು ಮುಖ್ಯ ಭಾಗಗಳನ್ನು ಹೊಂದಿರುತ್ತದೆ,

1. ನಡುವಿನ ಭಾಗ

2. ನಡುವಿನಲ್ಲಿರುವ ರಚನೆಗಳು

3. ನಡುವಿನ ಭಾಗದ ಸುತ್ತ ಸುತ್ತುವ ರಚನೆಗಳು

 

atom_structure

1. ನಡುವಿನ ಭಾಗ:
ಅಣುವಿನ ಈ ಭಾಗವನ್ನು ನಡುವಣ (nucleus) ಎನ್ನುತ್ತಾರೆ. ಅಣುವಿನ ಒಟ್ಟು ರಾಶಿಯ (mass) ಹೆಚ್ಚಿನ ಪಾಲು ಈ ಭಾಗದಲ್ಲಿ ಅಡಕವಾಗಿರುತ್ತದೆ. ಇದರ ದುಂಡಗಲ (diameter) 1.75 fm ನಿಂದ 15 fm ನಷ್ಟಿರುತ್ತದೆ. (fm = femtometer / ಪೆಮ್ಟೊಮೀಟರ್ = 1 × 10−15 m). ಅಣುವಿನ ಒಟ್ಟಾರೆ ಅಳತೆಗೆ ಹೋಲಿಸಿದಾಗ ನಡುವಣವು ಅಳತೆಯಲ್ಲಿ ತುಂಬಾ ಕಿರಿದಾಗಿರುತ್ತದೆ.

2. ನಡುವಣದಲ್ಲಿರುವ ರಚನೆಗಳು:

ನಡುವಣದಲ್ಲಿ ಎರಡು ಬಗೆಯ ಕಿರುತುಣುಕುಗಳಿರುತ್ತವೆ. ಈ ಕಿರುತುಣುಕುಗಳಿಗೆ ತಮ್ಮದೇ ಆದ ವಿಶೇಷ ಗುಣಗಳಿರುತ್ತವೆ. ಇಂತಹ ಗುಣಗಳಲ್ಲಿ ಒಂದೆಂದರೆ ಸೆಳೆಗಲ್ಲಿನ ಬಯಲಿಗೆ (magnetic field) ಒಳಪಡಿಸಿದಾಗ ಅವುಗಳು ಹೇಗೆ ನಡೆದುಕೊಳ್ಳುತ್ತವೆ ಎಂಬಂತಹ ಗುಣ. ಸೆಳೆಗಲ್ಲಿನ ಪರಿಣಾಮಕ್ಕೆ ಇವುಗಳನ್ನು ಒಡ್ಡಿದಾಗ, ಇವುಗಳಲ್ಲಿ ಒಂದು ಬಗೆಯ ಕಿರುತುಣುಕುಗಳು ಸೆಳೆಗಲ್ಲಿನ ಬಯಲಿಗೆ (magnetic field) ಎದುರಾಗಿ ಸಾಗುತ್ತವೆ ಮತ್ತು ಇನ್ನೊಂದು ಬಗೆಯ ಕಿರುತುಣುಕುಗಳು ಸೆಳೆಗಲ್ಲಿನ ಬಯಲಿಗೆ ಯಾವುದೇ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ.

ತಿಳುವಳಿಕೆಯನ್ನು ಸುಲಭಗೊಳಿಸಲು ಸೆಳೆಗಲ್ಲಿನ ಬಯಲಿಗೆ ಎದುರಾಗಿ ಸಾಗುವ ತುಣುಕುಗಳು ’+’ ಹುರುಪು (charge) ಹೊಂದಿವೆ ಎಂದು ಗುರುತಿಸಲಾಗುತ್ತದೆ ಮತ್ತು ಇವುಗಳನ್ನು ಪ್ರೋಟಾನ್‍ಗಳೆಂದು (proton) ಕರೆಯಲಾಗುತ್ತದೆ. ’ಕೂಡು’ (+) ಗುರುತಿನಿಂದ ಸೂಚಿಸಲ್ಪಡುವ ಈ ತುಣುಕುಗಳನ್ನು ಕನ್ನಡದಲ್ಲಿ ಕೂಡುವಣಿಗಳು ಎಂದು ಕರೆಯಬಹುದು. ಸೆಳೆಗಲ್ಲಿಗೆ ಯಾವುದೇ ಪ್ರತಿಕ್ರಿಯೆಯನ್ನು ತೋರಿಸದ ಕಿರುತುಣುಕುಗಳನ್ನು ನ್ಯೂಟ್ರಾನ್‍ಗಳೆಂದು (neutron) ಕರೆಯುತ್ತಾರೆ. ಇವುಗಳನ್ನು ಕನ್ನಡದಲ್ಲಿ ನೆಲೆವಣಿಗಳು ಎನ್ನಬಹುದು.

 

proton_nuetron

ಕೂಡುವಣಿಗಳು (protons) ಮತ್ತು ನೆಲೆವಣಿಗಳು (neutrons) ಇನ್ನೂ ಚಿಕ್ಕದಾದ ರಚನೆಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಕಿರಿವಣಿಗಳು (quarks) ಎನ್ನುತ್ತಾರೆ. ಪ್ರತಿಯೊಂದು ಕೂಡುವಣಿ ಇಲ್ಲವೇ ನೆಲೆವಣಿಯಲ್ಲಿ ಮೂರು ಕಿರಿವಣಿಗಳಿದ್ದು, ಅಂಟುವಣಿ (gluon) ಎಂಬ ರಚನೆಗಳು ಇವುಗಳನ್ನು ಒಂದಕ್ಕೊಂದು ಹಿಡಿದಿಟ್ಟಿರುತ್ತವೆ.

quarks(ಅಣುವಿನಲ್ಲಿ ಕಿರಿವಣಿಗಳ ಸ್ಥಾನವನ್ನು ತೋರಿಸುವ ಚಿತ್ರ)

quarks_gluons(ಕೂಡುವಣಿ ಮತ್ತು ನೆಲೆವಣಿಗಳ ಒಳರಚನೆ)

  3. ನಡುವಣದ ಸುತ್ತ ಸುತ್ತುವ ರಚನೆಗಳು:

ನಡುವಣದ ಸುತ್ತ ಹಲವು ಸುತ್ತುಹಾದಿಗಳಲ್ಲಿ ಇನ್ನೊಂದು ಬಗೆಯ ಕಿರುತುಣುಕುಗಳು ಸುತ್ತುತ್ತಿರುತ್ತವೆ. ಸೆಳೆಗಲ್ಲಿನ ಪರಿಣಾಮಕ್ಕೆ ಈ ಕಿರುತುಣುಕುಗಳನ್ನು ಒಳಪಡಿಸಿದಾಗ, ಇವುಗಳು ಸೆಳೆಗಲ್ಲಿನ ಬಯಲಿನ ಕಡೆಗೆ ಸಾಗುತ್ತವೆ. ತಿಳುವಳಿಕೆಯನ್ನು ಸುಲಭಗೊಳಿಸಲು ಪ್ರೋಟಾನ್‍ಗಳನ್ನು ’ಕೂಡು’(+) ಗುರುತಿನಿಂದ ಗುರುತಿಸುವಂತೆ, ಈ ಕಿರುತುಣುಕಗಳನ್ನು ಕಳೆ (-) ಗುರುತಿನಿಂದ ಸೂಚಿಸಲಾಗುತ್ತದೆ ಮತ್ತು ಇವುಗಳು ಕಳೆ ಹುರುಪು (negatively charged) ಹೊಂದಿವೆ ಎಂದು ಗುರುತಿಸಲಾಗುತ್ತದೆ. ಕಳೆ ಹುರುಪು ಹೊಂದಿರುವ ಈ ಕಿರುತುಣುಕುಗಳನ್ನು ಇಲೆಕ್ಟ್ರಾನ್‍ಗಳೆಂದು ಕರೆಯುತ್ತಾರೆ. ಕನ್ನಡದಲ್ಲಿ ಇವುಗಳನ್ನು ಕಳೆವಣಿಗಳು ಎನ್ನಬಹುದು.

 

electron spread

ಕಳೆವಣಿಗಳು (electrons) ನಡುವಣದ ಸುತ್ತ ಬರೀ ದುಂಡನೆಯ ಹಾದಿಗಳಲ್ಲಿ ಸುತ್ತುತ್ತವೆ ಎಂದು ಮೊದಲೆಲ್ಲಾ ಅಂದುಕೊಳ್ಳಲಾಗಿತ್ತು ಆದರೆ ಈ ಕುರಿತಾಗಿ ನಡೆದ ಹೆಚ್ಚಿನ ಅರಕೆಗಳು, ಕಳೆವಣಿಗಳ ಈ ಸುತ್ತುಹಾದಿಗಳು ದುಂಡನೆಯ ಆಕಾರವನ್ನಷ್ಟೇ ಹೊಂದಿರದೇ ಹಲವು ಬೇರೆ ಆಕಾರಗಳನ್ನೂ ಹೊಂದಿವೆ ಎಂದು ತಿಳಿದುಬಂತು. (ಕಳೆವಣಿಗಳ ಈ ಸುತ್ತುಹಾದಿಗಳ ಬಗ್ಗೆ ವಿವರವಾಗಿ ಬೇರೆ ಬರಹದಲ್ಲಿ ತಿಳಿಸಲಾಗುವುದು)

ತಿಳುವಳಿಕೆಯನ್ನು ಸುಲಭಗೊಳಿಸಲು ಕಳೆವಣಿಗಳ ದುಂಡನೆಯ ಹಾದಿಗಳನ್ನಷ್ಟೇ ಎಣಿಕೆಗೆ ತೆಗೆದುಕೊಂಡರೆ ಅಣುವಿನ ಒಟ್ಟಾರೆ ಚಿತ್ರಣವನ್ನು ಈ ಕೆಳಗಿನಂತೆ ತೋರಿಸಬಹುದು.

atom_structure_2

ಮೂಲ ಕಿರುತುಣುಕುಗಳು:

ಅಣುಗಳ ಒಳರಚನೆಗಳಾದ ಕಿರಿವಣಿಗಳು (quarks), ಅಂಟುವಣಿಗಳು (gluons) ಮತ್ತು ಕಳೆವಣಿಗಳ (electrons) ಒಳಗೆ ಇನ್ನಾವುದೇ ರಚನೆಗಳು ಇಲ್ಲವಾದುದರಿಂದ (ಅವುಗಳನ್ನು ಇನ್ನಷ್ಟು ಕಿರುತುಣುಕುಗಳಾನ್ನಾಗಿಸಲು ಆಗದಿರುವುದರಿಂದ) ಇವುಗಳನ್ನು ಮೂಲ ಕಿರುತುಣುಕುಗಳು (elementary particles) ಎಂದು ಕರೆಯುತ್ತಾರೆ.

ನಮ್ಮ ಸುತ್ತುಮುತ್ತ ಕಂಡುಬರುವ ವಸ್ತುಗಳು, ಜೀವಿಗಳು ಈ ’ಮೂಲ ಕಿರುತುಣುಕು’ಗಳಿಂದ ಮಾಡಲ್ಪಟ್ಟಿರುತ್ತವೆ. ಮೂಲ ಕಿರುತುಣುಕುಗಳಿಂದಾದ ವಸ್ತು ಮತ್ತು ಜೀವಿಗಳ ಒಟ್ಟುನೋಟವನ್ನು ಈ ಕೆಳಗಿನಂತೆ ತೋರಿಸಬಹುದು.

elementary particles

 

ಕೂಡುವಣಿ, ನೆಲೆವಣಿ ಮತ್ತು ಕಳೆವಣಿಗಳ ಸಂಖ್ಯೆ ಹೇಗೆ ಅಣುವೊಂದರ ಗುಣವನ್ನು ತೀರ್ಮಾನಿಸುತ್ತದೆ? ಮೂಲವಸ್ತು ಎಂದರೇನು? ಐಸೋಟೋಪ್‍ಗಳು ಅಂದರೇನು? ಮುಂತಾದ ವಿಷಯಗಳನ್ನು ಮುಂದಿನ ಬರಹದಲ್ಲಿ ತಿಳಿಸಲಾಗುವುದು.

 

(ಚಿತ್ರಸೆಲೆಗಳು: www.studyblue.com, wikipedia.org)