ಪಾಲುಗಳು (fractions) – ಭಾಗ 3

ಪಾಲುಗಳ ಕುರಿತು ಕೆಲವು ಹೇಳಿಕೆಗಳು.

ಒಂದು ವಸ್ತು ಅಥವಾ ವಸ್ತುಗಳ ಅಳತೆಗಳನ್ನು ಎಷ್ಟು ಸಮ ಪಾಲುಗಳನ್ನಾಗಿಯಾದರು ಮಾಡಬಹುದು.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮೊದಲನೆಯ ಬರಹದ ಮೊದಲ ಹೇಳಿಕೆಗಳನ್ನು ನೋಡಿ.

ಒಂದು ವಸ್ತು ಅಥವಾ ಅಳತೆಯನ್ನು ಪಾಲುಗಳಲ್ಲಿ ತೋರಿಸಬೇಕೆಂದರೆ ವಸ್ತು ಅಥವಾ ಅಳತೆಯನ್ನು ಪಾಲುಗಳನ್ನಾಗಿಸಲೇಬೇಕು.

ಎರಡು ಪಾಲುಗಳಲ್ಲಿ ಮೇಲೆಣಿಗಳು (Numerators) ಒಂದೇ ಇದ್ದಾಗ ಮತ್ತು ಅದರ ಕೆಳಗೆಣಿ (Denominator) ಚಿಕ್ಕದಿದ್ದಾಗ ಆ ಪಾಲಿನ ಬೆಲೆ (Value of a fraction) ಹೆಚ್ಚಾಗಿರುತ್ತದೆ ಹಾಗು ಕೆಳಗೆಣಿ ದೊಡ್ಡದಿದ್ದಾಗ ಆ ಪಾಲಿನ ಬೆಲೆ ಕಡಿಮೆಯಾಗಿರುತ್ತದೆ.

ಉದಾಹರಣೆ:- 10/20 ಮತ್ತು 10/15 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿ 10 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿಗಳು 20 ಮತ್ತು 15 ಆಗಿವೆ.
ನಾವುಗಳು ಈ ಎರಡು ಪಾಲುಗಳ ಕೆಳಗೆಣಿಗಳು ಸರಿಬರುವಂತೆ ಗುಣಿಸಬೇಕು. ಮೊದಲ ಪಾಲಿನ ಕೆಳಗೆಣಿ 20 ಕ್ಕೆ 3 ರಿಂದ ಗುಣಿಸಿದಾಗ 60 ಆಯಿತು, ಎರಡನೇ ಪಾಲಿನ ಕೆಳಗೆಣಿ 15 ಕ್ಕೆ 4 ರಿಂದ ಗುಣಿಸಿದಾಗ 60 ಆಯಿತು, ಹೀಗಾಗಿ ಈ ಎರಡು ಪಾಲುಗಳು ಸರಿಕೆಳಗೆಣಿ ಪಾಲುಗಳಾದವು (Like Fraction).
ಕೆಳಗೆಣಿಗಳನ್ನು ಸರಿಕೆಳಗೆಣಿಗಳನ್ನಾಗಿಸುವಾಗ ಯಾವ ಸಂಖ್ಯೆಯಿಂದ ಗುಣಿಸುತ್ತೇವೆಯೋ ಆಯಾ ಸಂಖ್ಯೆಯಿಂದ ಆಯಾ ಪಾಲಿನ ಮೇಲೆಣಿಗಳನ್ನು ಗುಣಿಸಿಕೊಳ್ಳಬೇಕು, ಏಕೆಂದರೆ ಪಾಲಿನ ಬೆಲೆ ಬದಲಾಗಬಾರದು, ಇದರಂತೆ ಕೆಳಗೆ ಗುಣಿಸಿಕೊಳ್ಳೋಣ.
ಮೊದಲ ಪಾಲು 10/20 = (10 x 3)/(20 x 3) = 30/60 ನ್ನು ಎರಡನೇ ಪಾಲು 10/15 = (10 x 4)/(15 x 4) = 40/60 ಕ್ಕೆ ಹೋಲಿಸಿದಾಗ ಎರಡನೇ ಪಾಲು ದೊಡ್ಡದಾಗಿದೆ. i.e 10/15 > 10/20. ಈ ಎರಡು ಪಾಲುಗಳಲ್ಲಿ ಎರಡನೇ ಪಾಲಿನ ಕೆಳಗೆಣಿ 15 ಚಿಕ್ಕದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಮೊದಲನೇ ಪಾಲಿನ ಕೆಳಗೆಣಿ 20 ದೊಡ್ಡದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.

ಪಾಲುಗಳಲ್ಲಿ ಕೆಳಗೆಣಿಗಳು (Denominators) ಒಂದೇ ಇದ್ದಾಗ ಹಾಗು ಅದರ ಮೇಲೆಣಿ  (Numerator) ಚಿಕ್ಕದಿದ್ದಾಗ ಆ ಪಾಲಿನ ಬೆಲೆ (Value of a fraction) ಕಡಿಮೆಯಾಗಿರುತ್ತದೆ ಹಾಗು ಅದರ ಮೇಲೆಣಿ ದೊಡ್ಡದಿದ್ದಾಗ ಆ ಪಾಲಿನ ಬೆಲೆ ಹೆಚ್ಚಾಗಿರುತ್ತದೆ.

ಉದಾಹರಣೆ:- 5/9 ಮತ್ತು 4/9 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 9 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 5 ಮತ್ತು 4 ಆಗಿವೆ. ಮೊದಲ ಪಾಲು 5/9 ನ್ನು ಎರಡನೇ ಪಾಲು 4/9 ಕ್ಕೆ ಹೋಲಿಸಿದಾಗ ಮೊದಲನೇ ಪಾಲು ದೊಡ್ಡದಾಗಿದೆ. i.e 5/9 > 4/9. ಈ ಎರಡು ಪಾಲುಗಳಲ್ಲಿ ಮೊದಲನೇ ಪಾಲಿನ ಮೇಲೆಣಿ 5 ದೊಡ್ಡದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಎರಡನೇ ಪಾಲಿನ ಮೇಲೆಣಿ 4 ಚಿಕ್ಕದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.

ಪಾಲಿನಲ್ಲಿ ಬಿಡಿಪಾಲು (Unit Fraction) ಎಂದರೆ ಪಾಲಿನ ಮೇಲೆಣಿ ಯಾವಾಗಲೂ ಒಂದು (1) ಆಗಿರುತ್ತದೆ.

ಉದಾಹರಣೆ:- 1/2, 1/4, 1/5, 1/23, 1/41.

ಸರಿಕೆಳಗೆಣಿ ಪಾಲುಗಳಲ್ಲಿ (Like Fraction) ಕೆಳಗೆಣಿಗಳು ಒಂದೇ ರೀತಿಯಲ್ಲಿರುವುದರಿಂದ ಆಗುವ ಅನುಕೂಲಗಳು.

  • ಪಾಲುಗಳನ್ನು ಸುಲಭವಾಗಿ ಕೂಡಬಹುದು (Addition).
    ಉದಾಹರಣೆ:- 3/7 ಮತ್ತು 2/7 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 7 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 3 ಮತ್ತು 2 ಆಗಿವೆ.
    ಇವುಗಳನ್ನು ಹೀಗೆ ಸುಲಭವಾಗಿ ಕೂಡಬಹುದು:
    3/7 + 2/7 = (3 + 2)/7 = 5/7
  • ಪಾಲುಗಳನ್ನು ಸುಲಭವಾಗಿ ಕಳೆಯಬಹುದು (Subtraction).
    ಉದಾಹರಣೆ:- 5/8 ಮತ್ತು 1/8 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 7 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 5 ಮತ್ತು 1 ಆಗಿವೆ.
    ಇವುಗಳನ್ನು ಹೀಗೆ ಸುಲಭವಾಗಿ ಕಳೆಯಬಹುದು.
    5/8 – 1/8 = (5-1)/8 = 4/8
  • ಪಾಲುಗಳನ್ನು ಸುಲಭವಾಗಿ ಭಾಗಿಸಬಹುದು (Division).
    ಉದಾಹರಣೆ: 7/9 ಮತ್ತು 5/9 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 9 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 7 ಮತ್ತು 5 ಆಗಿವೆ.
    ಇವುಗಳನ್ನು ಹೀಗೆ ಸುಲಭವಾಗಿ ಕಳೆಯಬಹುದು.
    (7/9) / (5/9 ) = 7/5
    ಇಲ್ಲಿ ಕೆಳಗೆಣಿಗಳು ಒಂದೇ ರೀತಿಯಲ್ಲಿರುವುದರಿಂದ ಭಾಗಿಸುವಾಗ ಕೆಳಗೆಣಿಗಳು ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತವೆ.
  • ಪಾಲುಗಳನ್ನು ಸುಲಭವಾಗಿ ಪೆಚ್ಚಿಸಬಹುದು (Multiplication).
    ಉದಾಹರಣೆ: 2/5 ಮತ್ತು 3/5 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 5 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 2 ಮತ್ತು 3 ಆಗಿವೆ.
    (2/5) x (3/5) = (2×3)/(5 x 5 ) = (2×3)/(25 ) = 6/25.
  • ಪಾಲುಗಳನ್ನು ಸುಲಭವಾಗಿ ದೊಡ್ಡದು ಚಿಕ್ಕದೆಂದು ಕಂಡುಹಿಡಿಯಹುದು.
    ಉದಾಹರಣೆ:- 8/12 ಮತ್ತು 7/12 ಎಂಬ ಎರಡು ಪಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೇ ಮತ್ತು ಎರಡನೇ ಪಾಲಿನ ಕೆಳಗೆಣಿ 12 ಆಗಿದೆ, ಮೊದಲನೇ ಮತ್ತು ಎರಡನೇ ಪಾಲಿನ ಮೇಲೆಣಿಗಳು 8 ಮತ್ತು 7 ಆಗಿವೆ.
    ಮೊದಲ ಪಾಲು 8/12 ನ್ನು ಎರಡನೇ ಪಾಲು 7/12 ಕ್ಕೆ ಹೋಲಿಸಿದಾಗ ಮೊದಲನೇ ಪಾಲು ದೊಡ್ಡದಾಗಿದೆ.
    ಈ ಎರಡು ಪಾಲುಗಳಲ್ಲಿ ಮೊದಲನೇ ಪಾಲಿನ ಮೇಲೆಣಿ 8 ದೊಡ್ಡದು ಮತ್ತು ಆ ಪಾಲಿನ ಬೆಲೆ ದೊಡ್ಡದಾಗಿದೆ. ಹಾಗು ಎರಡನೇ ಪಾಲಿನ ಮೇಲೆಣಿ 7 ಚಿಕ್ಕದು ಮತ್ತು ಆ ಪಾಲಿನ ಬೆಲೆ ಚಿಕ್ಕದಾಗಿದೆ.
    ∴ 8/12 > 7/12.

ಪಾಲಿನ ಹಳಮೆ

  • ಸುಮಾರು 1000 BC ಹೊತ್ತಿನಲ್ಲಿ ಈಜಿಪ್ಟಿನ ಎಣಿಕೆಯರಿಗರು ಬಿಡಿಪಾಲುಗಳನ್ನು (Unit Fractions) ಕೂಡುತ್ತಿದ್ದರು, ಇದರಲ್ಲಿ ಮೇಲೆಣಿ ಯಾವಾಗಲೂ ಒಂದು (1) ಆಗಿರುತ್ತಿತ್ತು ಮತ್ತು ಕೆಳಗೆಣಿ ಯಾವುದಾದರೂ ಬಿಡಿ ಎಣಿಕೆ (Whole Number) ಆಗಿರುತ್ತಿತ್ತು. ಇದನ್ನು ಈಜಿಪ್ಟಿನ ಪಾಲೆಣಿಕೆ (Egyptian Fractions) ಎಂದು ಕರೆಯುವರು.
    ಉದಾಹರಣೆಗೆ.
    1/2 + 1/3 +1/16
  • ಸ್ಕಾಟ್ಲೆಂಡಿನ ಅರಕೆಗಾರ ಅಲೆಕ್ಸಾಂಡರ್ ಹೆನ್ರಿ ರಿಂಡ್ ಈಜಿಪ್ಟಿನಲ್ಲಿ ಅರಕೆ ಮಾಡುವಾಗ ಸಿಕ್ಕ 1650 BC – 1550 BC ಹೊತ್ತಿನ ಜೊಂಡುಹುಲ್ಲಿನ ಕಾಗದದಲ್ಲಿ (Papyrus) ಪಾಲುಗಳ ಬಗ್ಗೆ ತಿಳಿಸಲಾಗಿದೆ. ಅದನ್ನು ಈಗ ಅದನ್ನು ರಿಂಡ್ ಮೆತಮೆಟಿಕಲ್ ಪ್ಯಾಪಿರಸ್ (Rhind Mathematical Papyrus) ಎಂದು ಕರೆಯುವರು.
    300px-Rhind_Mathematical_Papyrus
  • ಎರಡು ಸಾವಿರ ವರ್ಷಗಳ ಹಿಂದೆ ಗ್ರೀಕರು ಬಿಡಿಪಾಲುಗಳ (Unit Fractions) ಬಗ್ಗೆ ಅರಕೆ ನಡೆಸಿದ್ದರು, ಗ್ರೀಕಿನ ಪೈತಾಗೋರಸ್ (500 BC) ಕೂಡ ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
  • ಸುಮಾರು 100 B.C ಹೊತ್ತಿಗೆ ಸೇರಿದ ಜೈನರ ಸ್ತಾನಂಗ ಸೂತ್ರ (Sthananga Sutra) ಎಂಬ ಅರಕೆಯ ಹೊತ್ತಗೆಯಲ್ಲಿ ಪಾಲುಗಳ ಬಗ್ಗೆ ಹೇಳಲಾಗಿದೆ.
  • 600 A.D ಹೊತ್ತಿಗೆ ಸೇರಿದ ಬಂಗಾಳದ ಎಣಿಕೆಯರಿಗ ಭಾಸ್ಕರನು (Bhaskara I) ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
  • ಸುಮಾರು 1200 A.D ಗೆ ಸೇರಿದ ಮೊರೊಕ್ಕೋದ (Morocco) ಎಣಿಕೆಯರಿಗ ಅಲ್-ಹಸರ್ (Al-Hassar) ಪಾಲುಗಳ ಬಗ್ಗೆ ಅರಕೆ ಮಾಡಿದ್ದನು.
  • ಸುಮಾರು ಹದಿನೈದು ನೂರರ ನಂತರ ಯುರೋಪಿನಲ್ಲಿ ಹತ್ತರ ಪಾಲುಗಳ ಬಗ್ಗೆ (Decimal Fractions) ಹಲವಾರು ಅರಕೆಗಳು ನಡೆದವು.

ಚಟುವಟಿಕೆ: 

ನೀವುಗಳು ದಿನಾಲು ನೋಡುವ ಒಂದಿಶ್ಟು ವಸ್ತುಗಳ ಪಾಲುಗಳನ್ನು ಪಟ್ಟಿಮಾಡಿ ಮತ್ತು ಅವುಗಳು ತಕ್ಕು ಪಾಲುಗಳು , ತಕ್ಕುದಲ್ಲದ ಪಾಲುಗಳು, ಸರಿ ಪಾಲುಗಳು, ಬೆರಕೆ ಪಾಲುಗಳು, ಸರಿಕೆಳಗೆಣಿ ಪಾಲುಗಳು ಮತ್ತು ಹೋಲದ ಕೆಳಗೆಣಿ ಪಾಲುಗಳಾಗಿವೆಯೇ ಎಂದು ತಾಳೆಹಚ್ಚಿ ನೋಡಿ.
ಹೆಚ್ಚಿನ ಮಾಹಿತಿಗೆ ಒಂದನೇ ಬರಹ ಮತ್ತು ಎರಡನೇ ಬರಹಗಳನ್ನು ನೋಡಿ.

ಸೆಲೆಗಳು:

  1. https://www.learnnext.com/nextgurukul/wiki/concept/CBSE/VI/Maths/Types-of-Fractions.htm
  2. http://www.ask-math.com/Types-of-fractions.html
  3. http://metal.brightcookie.com/1_calc/calc_t4/htm/calc4_2_1.htm
  4. http://study.com/academy/lesson/what-is-a-fraction-definition-and-types.html
  5. http://www.basic-math-explained.com/types-of-fractions.html#.V-9Y4SF97IU
  6. http://www.math-only-math.com/Types-of-Fractions.html
  7. http://images.tutorvista.com/cms/images/41/like-and-unlike-fractions.png
  8. http://www.ilmoamal.org/bms/attachments/course_pics/4mixedfrac.JPG
  9. ಐದನೇ ತರಗತಿಯ ಗಣಿತ ಪಟ್ಯಪುಸ್ತಕ
Bookmark the permalink.

One Comment

  1. Pingback: meritking

Comments are closed