ಹುರಿಕಟ್ಟಿನ ಏರ‍್ಪಾಟು – ಮೂಳೆಗಳು 1

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ-1:

ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಮೊದಲ ಬಾಗವಾಗಿ ಹುರಿಕಟ್ಟಿನ ಏರ‍್ಪಾಟಿನಲ್ಲಿ ಒಂದಾದ ಮೂಳೆಗಳ ಬಗ್ಗೆ ಈ ಬರಹದಲ್ಲಿ ತಿಳಿಸಲಾಗುವುದು.

0_hurikattina_erpatu2ಮೂಳೆಗಳನ್ನು ಎಲುಬುಗಳು ಎಂತಲೂ ಕರೆಯುತ್ತಾರೆ. ’ಓಡಾಡುವ ಏರ‍್ಪಾಟು’ ಎಂದೂ ಕರೆಯಬಹುದಾದ ಈ ಏರ‍್ಪಾಟು ಮನುಶ್ಯನ ಎಲುಬುಗಳು ಹಾಗು ಮಾಂಸಗಳ ಮೂಲಕ ಆಕಾರ, ಆಸರೆ (support), ನೆಲೆತ (stability), ಮತ್ತು ಓಡಾಡುವ ಅಳವನ್ನು (ability) ಕೊಡುತ್ತದೆ.

ಈ ಏರ‍್ಪಾಟು ಮುಕ್ಯವಾಗಿ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ,

1) ಮೂಳೆಗಳು/ಎಲುಬುಗಳು  (bones)

2) ಮೂಳೆ ಕೀಲುಗಳು/ಜಂಟಿಗಳು (joints)

3) ಮಾಂಸ (muscle)

4) ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons)

5) ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments)

6) ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳು (cartilage).

ಹುರಿಕಟ್ಟಿನ ಏರ‍್ಪಾಟನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮೊದಲಿಗೆ ಎಲುಬುಗಳ ಬಗ್ಗೆ ಆಮೇಲೆ ಹುರಿಕಟ್ಟಿನ ಇತರ ಬಾಗಗಳು, ಅವುಗಳಿಗೆ ಎರಗುವ ಕುತ್ತುಗಳು ಮತ್ತು ಮದ್ದುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

1. ಎಲುಬಿನ ಏರ‍್ಪಾಟು: 

1.1 ಎಲುಬುಗಳ ಮುಕ್ಯ ಕೆಲಸಗಳು

  • ಆಕಾರ: ಎಲುಬುಗಳು ಒಡಲಿಗೆ ಚವ್ಕಟ್ಟನ್ನು (framework/shape) ಒದಗಿಸುತ್ತವೆ.
  • ಆಸರೆ: ಮಯ್ಯೊಳಗಿನ ಮೆದುವಾದ ಅಂಗಗಳಿಗೆ ಆಸರೆಯನ್ನು ಒದಗಿಸುತ್ತವೆ. ಉದಾ: ಪಕ್ಕೆಗೂಡು (rib cage) ಉಸಿರುಚೀಲ, ಎದೆಗುಂಡಿಗೆಯಂತಹ ನಾಜೂಕಾದ ಅಂಗಗಳನ್ನು ಹೊಂದಿರುವ ಬಗ್ಗರಿ ಗೋಡೆಗೆ (thoracic wall) ಎಲುಬುಗಳು ಆಸರೆಯಾಗುತ್ತವೆ.
  • ಕಾಪು (protection): ತಲೆ ಬುರುಡೆ (skull) ಹಾಗು ಬೆನ್ನೆಲುಬುಗಳು (vertebrae) ನರದ ಏರ‍್ಪಾಟನ್ನು ಕಾಪಾಡಿದರೆ, ಪಕ್ಕೆಲುಬು ಬಗ್ಗರಿಯ (thoracic) ಉಸಿರುಚೀಲ, ಎದೆಗುಂಡಿಗೆಯಂತಹ ಅಂಗಗಳನ್ನು ಕಾಯುತ್ತದೆ.
  • ಓಡಾಟ/ಅಲುಗಾಟ: ಎಲುಬಿಗೆ ಹೊಂದಿಕೊಂಡಿರುವ ಮಾಂಸವು ಎಲುಬನ್ನು ಸನ್ನೆಗೋಲಿನಂತೆ (lever) ಬಳಸಿಕೊಂಡು ನಾವು ಓಡಾಡಲು ಹಾಗು ನಮ್ಮ ಮಯ್ ಬಾಗಗಳನ್ನು ಅಲುಗಾಡಿಸಲು ನೆರವಾಗುತ್ತದೆ.
  • ಕೂಡಿಡುವಿಕೆ (storage): ನಮ್ಮ ಮಯ್ಯಿಗೆ ಬೇಕಾಗಿರುವ ಕೊಬ್ಬು ಹಾಗು ಕನಿಜಗಳನ್ನು (ಕ್ಯಾಲ್ಶಿಯಮ್ & ಪಾಸ್ಪರಸ್) ಕೂಡಿಡಲ ನೆರವಾಗುತ್ತವೆ.
  • ನೆತ್ತರು ಕಣಗಳನ್ನು ಹುಟ್ಟಿಸುವಿಕೆ: ನೆತ್ತರಿನಲ್ಲಿರುವ ಕಣಗಳನ್ನು ಹುಟ್ಟಿಸುವಲ್ಲಿ ಎಲುಬಿನ ನಡುವಿರುವ ಕೊಳವೆಯಲ್ಲಿರುವ ಮೂಳೆಮಜ್ಜೆ (bone marrow) ಸಹಕಾರಿಯಾಗಿದೆ.

1.2 ಎಲುಬಿನ ಬಗೆಗಳು:

titta-1_elubina-aakaaragalu1ಗೂಡುಕಟ್ಟುಗಳ (tissue) ಅನುಗುಣವಾಗಿ ಎಲುಬುಗಳನ್ನು ದಟ್ಟೆಲುಬು (compact bone) ಹಾಗು ಹೀರುಗದೆಲುಬುಗಳೆಂದು (spongy bone) ಗುಂಪಿಸಬಹುದಾಗಿದೆ. ದಟ್ಟೆಲುಬುಗಳು ಒತ್ತಾಗಿಯೂ, ನುಣುಪಾಗಿಯೂ ಕಾಣುತ್ತವೆ ಹಾಗು ಎಲುಬಿನ ಎಲ್ಲೆಡೆಯೂ ಒಂದೆತೆರನಾಗಿರುತ್ತವೆ (homogeneous). ಹೀರುಗದೆಲುಬು ಸಣ್ಣ ಸೂಜಿಯಂತಹ ಇಟ್ಟಳ (structure) ಇಲ್ಲವೆ ಚಪ್ಪಟೆಯಾದ ಚೂರುಗಳಂತೆ ಇರುತ್ತದೆ.

ಎಲುಬನ್ನು ಅವುಗಳ ಆಕಾರದ ಅನುಗುಣವಾಗಿ 4 ಗುಂಪುಗಳಾಗಿಸಬಹುದು: (ಚಿತ್ರ 1 ನೋಡಿ)

1) ಉದ್ದನೆಯ ಎಲುಬುಗಳು (long bones): ಇವು ನಡುಗಡ್ಡಿ (shaft) ಹಾಗು ಎರಡು ತುದಿಗಳನ್ನು ಹೊಂದಿರುತ್ತವೆ. ಈ ಬಗೆಯ ಎಲುಬುಗಳು ಹೆಚ್ಚಿನ ಮಟ್ಟದಲ್ಲಿ ದಟ್ಟೆಲುಬುಗಳಿಂದ ಮಾಡಲ್ಪಟ್ಟಿರುತ್ತವೆ. ಮಂಡಿಚಿಪ್ಪು (patella), ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟುಗಳನ್ನು (wrist/carpus) ಹೊರತುಪಡಿಸಿ, ಕಯ್ಕಾಲುಗಳಲ್ಲಿ ಕಂಡು ಬರುವ ಉಳಿದೆಲ್ಲ ಎಲುಬುಗಳು ಈ ಗುಂಪಿಗೆ ಸೇರುತ್ತವೆ.

2) ತುಂಡೆಲುಬುಗಳು (short bones): ಈ ಬಗೆಯ ಎಲುಬುಗಳು ಹೀರುಗದ ಎಲುಬುಗಳಿಂದ (spongy bone) ಮಾಡಲ್ಪಟ್ಟಿರುತ್ತವೆ. ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟಿನ (wrist/carpus) ಎಲುಬುಗಳು ತುಂಡೆಲುಬುಗಳ ಅಡಿಯಲ್ಲಿ ಬರುತ್ತವೆ.

3) ಚಪ್ಪಟ್ಟೆ ಎಲುಬುಗಳು (flat bones): ಈ ಬಗೆಯ ಎಲುಬುಗಳು ಹೆಚ್ಚು-ಕಡಿಮೆ ಚಪ್ಪಟ್ಟೆಯಾಗಿಕಾರವಿದ್ದು, ತುದಿಗಳಲ್ಲಿ ಸ್ವಲ್ಪಮಟ್ಟಿಗೆ ಬಾಗಿರುತ್ತವೆ. ಇವು ತೆಳುವಾದ ಎರಡು ದಟ್ಟೆಲುಬಿನ ಹಲಗೆಗಳ (sheet) ನಡುವೆ ಹೀರೆಲುಬಿನ ಪದರವನ್ನು ಹೊಂದಿರುತ್ತದೆ. ಉದಾ: ಎದೆಚಕ್ಕೆ (sternum).

4) ಅಂಕುಡೊಂಕಾದ ಎಲುಬುಗಳು (irregular bones): ಮೇಲೆ ತಿಳಿಸಿರುವ ಯಾವುದೇ ಗುಂಪುಗಳಿಗೆ ಸೇರಿಸಲಾಗದ ಎಲುಬುಗಳಿವು. ಇವುಗಳ ಆಕಾರ ಹಾಗು ಇಟ್ಟಳ ಇತರ ಎಲುಬುಗಳಿಗೆ ಹೋಲಿಸಿದರೆ ಸ್ವಲ್ಪ ಸಿಕ್ಕಲಾಗಿರುತ್ತವೆ. ಬೆನ್ನೆಲುಬು (vertebrae), ಚಪ್ಪೆ/ಚಪ್ಪೆಲುಬು (hipbone) ಮತ್ತು ಕೆಲವು ತಲೆಬುರುಡೆ ಮೂಳೆಗಳು ಈ ಗುಂಪಿನಡಿ ಬರುತ್ತವೆ.

1.3 ಎಲುಬಿನ ಇಟ್ಟಳ (bone structure):

titta2_elubina-ittala1ಒಂದೆರಡು ಎಲುಬುಗಳನ್ನು ಹೊರತುಪಡಿಸಿ, ಎಲ್ಲಾ ಎಲುಬುಗಳ ಸಾಮಾನ್ಯ ಇಟ್ಟಳ (structure) ಹೆಚ್ಚು-ಕಡಿಮೆ ಒಂದೇ ತೆರನಾಗಿರುತ್ತದೆ.

ಒಳೆಲುಮೊಳೆ (diaphysis): ಎಲುಬಿನ ನಡುಗಡ್ಡಿಯನ್ನು (shaft) ಒಳೆಲುಮೊಳೆ ಎಂದು ಕರೆಯಬಹುದು. ಇದು ಕೊಳವೆಯನ್ನು ಹೊಂದಿರುವ ಮಂದವಾದ ಕಂಬದಂತಿದ್ದು, ದಟ್ಟೆಲುಬಿನಿಂದ ಮಾಡಲ್ಪಟ್ಟಿದೆ. ಒಳಗಿನ ಕೊಳವೆಬಾಗವು ಅರಿಶಿನ ಬಣ್ಣದ ಕೊಬ್ಬನ್ನು ಹೊಂದಿದ್ದು, ಇದನ್ನು ಹಳದಿ ಮೂಳೆಮಜ್ಜೆ (yellow bone marrow) ಎಂದು ಕರೆಯಲಾಗುತ್ತದೆ.

ಮೇಲೆಲುಮೊಳೆ (epiphysis): ಎಲುಬಿನ ತುದಿಗಳೆ ಮೇಲೆಲುಮೊಳೆ. ಒಳೆಲುಮೊಳೆಗೆ (diaphysis)  ಹೋಲಿಸಿದರೆ, ಇದು ಸ್ವಲ್ಪ ಅಗಲವಾಗಿಯೂ, ದುಂಡಾಗಿಯೂ ಇರುತ್ತದೆ. ಹೀರೆಲುಬುಗಳಿಂದ ಮಾಡಲ್ಪಟ್ಟಿರುವುದರಿಂದ, ಎಲುಬಿನ ಈ ಬಾಗದಲ್ಲಿ ಸಂದುಗಳಲ್ಲಿದು, ರಕ್ತಕಣಗಳನ್ನು ಮಾಡಲು ಸಹಕಾರಿಯಾಗಿರುವ  ಕೆಂಪು ಮೂಳೆಮಜ್ಜೆಯನ್ನು (red bone marrow) ಹೊಂದಿರುತ್ತದೆ.

ಮೇಲೆಲುಬಿನ ತಟ್ಟೆ (epiphyseal plate): ಒಳೆಲುಮೊಳೆ (diaphysis) ಹಾಗು ಮೇಲೆಲುಮೊಳೆಗಳ (epiphysis) ನಡುವೆ ಕಂಡುಬರುವ ಮೇಲೆಲುಬಿನ ತಟ್ಟೆ (epiphyseal plate), ಮಕ್ಕಳಲ್ಲಿ ಮೆಲ್ಲೆಲುಬಿನಿಂದ (cartilage) ಮಾಡಲ್ಪಟ್ಟಿದ್ದು, ಈ ಬಾಗದಲ್ಲಿ ನಡೆಯುವ ಬೆಳವಣಿಗೆಯು, ಎಲುಬುಗಳ ಉದ್ದವನ್ನು ಹೆಚ್ಚಿಸಲು ನೆರವಾಗುತ್ತದೆ. ಮನುಶ್ಯರು ದೊಡ್ಡವರಾದ ಮೇಲೆ, ಮೇಲೆಲುಬಿನ ತಟ್ಟೆಯ ಮೆಲ್ಲೆಲುಬು, ಎಲುಬಾಗಿ ರೂಪುಗೊಂಡು ಮೇಲೆಲುಬಿನ ಗೆರೆಯಾಗಿ (epiphyseal line) ಮಾರ‍್ಪಟ್ಟು, ಎಲುಬುಗಳ ಬೆಳೆಯುವಿಕೆ ನಿಲ್ಲುತ್ತದೆ.

ಎಲುಸುತ್ಪರೆ (periosteum): ಒಳೆಲುಮೊಳೆಯ (diaphysis) ಹೊರ ಬಾಗಕ್ಕೆ ಹೊದಿಕೆಯನ್ನು ಕೊಡುವ ಪದರವೇ ಎಲುಸುತ್ಪರೆ (periosteum). ಈ ಪದರವು ಎಲುಬನ್ನು ಮಾಡುವ ಎಲುನನೆಕಣಗಳನ್ನು (osteoblasts) ಹೊಂದಿರುತ್ತವೆ. ಜೊತೆಗೆ, ಕಂಡರಗಳು (tendons) ಹಾಗು ತಂತುಗಟ್ಟುಗಳು (ligaments) ಎಲುಬಿನ ಮೇಲೆ  ಅಂಟಲು ನೆಲೆಯನ್ನು ಮಾಡಿಕೊಡುತ್ತದೆ.

ಎಲುಬೊಳ್ಪರೆ (endosteum): ಇದು ಎಲುಬಿನ ಒಳಬಾಗಕ್ಕೆ ಹಾಗು ಹೀರೆಲುಬುಗಳಲ್ಲಿ ಕಂಡುಬರುವ ಸಣ್ಣ-ಸಣ್ಣ ಕೋಣೆಗಳ ಗೋಡೆಗಳಿಗೆ ಹೊದಿಕೆಯನ್ನು ಕೊಡುತ್ತದೆ.

ಜಂಟಿಯ ಮೆಲ್ಲೆಲುಬು (articular cartilage): ಉದ್ದನೆಯ ಮೂಳೆಗಳು ಒಂದಕ್ಕೊಂದು ಜೋಡಣೆಯಾಗುವಾಗ, ಎಲುಗಳ ತುದಿಗಳ ಹೊರಮಯ್ ಮೇಲೆ ಮೆಲ್ಲೆಲುಬುಗಳ (articular cartilage) ಪದರವಿರುತ್ತದೆ. ಈ ಪದರವು ಎರಡು ಎಲುಬುಗಳ ನಡುವೆ ಉಂಟಾಗುವ ಒತ್ತಡವನ್ನೂ ಹೀರಿಕೊಳ್ಳಲು ನೆರವಾಗುತ್ತದೆ.

1.4 ಎಲುಬಿನ ಕಿರುದೋರುಕದ ಇಟ್ಟಳ (microscopic structure):

titta3_seerutorpu1

titta4_elurule-erpaatu1ಕಿರುದೋರುಕದಲ್ಲಿ (microscope) ನೋಡಿದಾಗ ಎಲುಬಿನಲ್ಲಿ ಬಹಳಶ್ಟು ಕಾಲುವೆಗಳಂತಹ (canal) ರಚನೆಗಳಿದ್ದು, ಇವು ನರಗಳು, ರಕ್ತಗೊಳವೆಗಳು ಹಾಗು ಹಾಲ್ರಸದ ಕೊಳವೆಗಳು (lymphatic vessels) ಗಟ್ಟಿಯಾದ ಎಲುಬುಗಳಲ್ಲಿ ಸರಾಗವಾಗಿ ಹಾದುಹೋಗಲು ನೆರವಾಗುತ್ತವೆ.

ಎಲುಬಿನ ಕೆಲಸದ ಗಟಕವನ್ನು (functional unit) ಎಲುರುಳೆ ಏರ‍್ಪಾಡು (osteon/ haversian system) ಎಂದು ಕರೆಯಬಹುದು. ಒಂದೊಂದು ಎಲುರುಳೆಯು (osteon), ಉದ್ದನೆಯ ಉರುಳೆಯಂತಿದ್ದು (cylinder), ಹಲವು ಪದರಗಳನ್ನು ಹೊಂದಿರುವ ಬಾರ-ಹೊರುವ ಸಣ್ಣ-ಸಣ್ಣ ಕಂಬಗಳಂತೆ ಕಾಣುತ್ತವೆ. ಈ ಪದರಗಳನ್ನು ತೆಳ್ಪರೆ (lamella) ಎಂದು ಕರೆಯಲಾಗುತ್ತದೆ. ಈ ಪದರಗಳಲ್ಲಿ ಅಂಟುಬೆಳೆ (collagen) ಎಂಬ ನಾರುಗಳಿರುತ್ತವೆ (fiber).

ಒಂದು ಪದರದ ನಾರುಗಳು ಒಂದೇ ದಿಕ್ಕಿನಲ್ಲಿ ಜೋಡಿಸಲ್ಪಟ್ಟಿದ್ದರೆ, ಈ ಪದರದ ಅಕ್ಕ-ಪಕ್ಕದಲ್ಲಿರುವ ಪದರಗಳಲ್ಲಿ ನಾರುಗಳು ಮತ್ತೊಂದು ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ರಚನೆ, ಎಲುಬಿಗೆ ಗಟ್ಟಿತನವನ್ನೂ ಹಾಗು ಎಲುಬುಗಳ ಮೇಲೆ ಬೀಳುವ ಹೊರೆ/ಒತ್ತಡವನ್ನು ತಾಳಿಕೊಳ್ಳುವ ಕಸುವು ಕೊಡುತ್ತದೆ. ಎಲುರುಳೆಯ (osteon), ನಡುಬಾಗದಲ್ಲಿ ಸಣ್ಣ ರಕ್ತಗೊಳವೆ ಹಾಗು ನರದನಾರುಗಳನ್ನು (nerve fibers) ಹೊಂದಿರುವ ನಡುಗಾಲುವೆ/ಹವರ‍್ಸಿಯನ್ ಕಾಲುವೆ (haversian canal) ಇರುತ್ತದೆ.

ಈ ಕಾಲುವೆಗಳಿಗೆ ನೇರಡ್ಡವಾಗಿ (perpendicular) ವೋಲ್ಕ್ಮನ್ ಕಾಲುವೆ (volkmann’s  canal) ಸಾಗುತ್ತದೆ. ವೋಲ್ಕ್ಮನ್ ಕಾಲುವೆ (volkmann’s canal), ಎಲುರುಳೆಗಳ (osteon) ನಡುಬಾಗ ಹಾಗು ಎಲುಬಿನ ಮಜ್ಜೆಯ ಗೂಡನ್ನು (medullary cavity), ಎಲುಸುತ್ಪರೆಯ (pperiosteum) ರಕ್ತಗೊಳವೆ ಹಾಗು ನರಗಳೊಂದಿಗೆ ಸಂಪರ‍್ಕ ಹೊಂದಲು ನೆರವಾಗುತ್ತವೆ.

ಇಲ್ಲಿಯವರೆಗೆ ಎಲುಬಿನ ಕೆಲಸ, ಬಗೆಗಳು ಹಾಗು ಇಟ್ಟಳಗಳ ಕುರಿತು ತಿಳಿಸಿಕೊಡಲಾಗಿದೆ. ಎಲುಬು ಏರ‍್ಪಾಟಿನ ಉಳಿದ ವಿಶಯಗಳನ್ನು ಮುಂದಿನ ಬಾಗದಲ್ಲಿ ವಿವರಿಸಲಾಗುವುದು.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: 1. visual.merriam, 2. classes.midlandstech.edu, 3. wikipedia, 4. augustatech.edu, 5. danceguadagno, 6. innerbody.com )

(ಈ ಬರಹವು ಹೊಸಬರಹದಲ್ಲಿದೆ)

Bookmark the permalink.

Comments are closed.

Comments are closed