ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 6

ನೆತ್ತರು ಗುಂಪುಗಳು (blood groups) – Rh:

ಹಿಂದಿನ ಬರಹದಲ್ಲಿ ನೆತ್ತರು ಗುಂಪೇರ‍್ಪಾಟುಗಳ ಬಗ್ಗೆ ತಿಳಿಸುತ್ತ, ABO ನೆತ್ತರು ಗುಂಪಿನ ಬಗ್ಗೆ ತಿಳಿಸಿಕೊಡಲಾಯಿತು. ನೆತ್ತರು ಗುಂಪನ್ನು ಸೂಚಿಸುವಾಗ + ಇಲ್ಲವೇ – ಎಂದು ಗುರುತಿಸಲು ಕಾರಣವಾದ Rh ಎಂಬ ಅಂಶದ ಕುರಿತು ಹಾಗು ನೆತ್ತರು ಮಾರೆಡೆಗೊಳಿಸುವಿಕೆಯ (blood transfusion) ಬಗ್ಗೆ ತಿಳಿಸಿಕೊಡಲಾಗುವುದು.

Rh ನೆತ್ತರು ಗುಂಪನ್ನು 1940 ರಲ್ಲಿ ಕಾರ‍್ಲ್ ಲ್ಯಾಂಡ್ ಸ್ಟೇನರ್ (Karl Landsteiner) ಹಾಗು ಅಲೆಗ್ಜಾಂಡರ್ ವಿನರ್ (Alexander Weiner) ಅರಿಗರ ಜೋಡಿಯು ಗುರುತಿಸಿತು. ಈ ಗುಂಪಿನಲ್ಲಿ ನೆತ್ತರು ಬಗೆಯನ್ನು ತೀರ‍್ಮಾನಿಸಲು 45 ಕ್ಕೂ ಹೆಚ್ಚು ಬಗೆಯ ಒಗ್ಗದಿಕಗಳು ಕೆನೆ ಕಣಗಳ (RBC) ಮೇಲೆ ಇರುತ್ತವೆ ಎಂದು ಕಂಡುಹಿಡಿಯಲಾಯಿತು. ನೆತ್ತರು ಗುಂಪುಗಳ ಅರಕೆಯಲ್ಲಿ ಬಳಸಲಾಗುತ್ತಿದ್ದ ರೀಸಸ್ (Rhesus) ಬಗೆಯ ಕೋತಿಗಳಲ್ಲಿ, Rh ಅಂಶವನ್ನು ಮೊದಲ ಬಾರಿಗೆ ಗುರುತಿಸಲಾಯಿತು (ಚಿತ್ರ 1). ಈ ಹಿನ್ನೆಲೆಯಿಂದಾಗಿ ‘Rh ನೆತ್ತರು ಗುಂಪು’ ಎಂಬ ಹೆಸರು. ನೆತ್ತರಿನಲ್ಲಿ Rh ಅಂಶ ಇದೆಯೇ ಇಲ್ಲವೇ ಅನ್ನುವುದರ ಮೇಲೆ ನೆತ್ತರನ್ನು + (Rh ಇದ್ದರೆ), (Rh ಇಲ್ಲವಾದರೆ) ಅಂತಾ ಗುರುತಿಸಲಾಗುತ್ತದೆ.

Cardio_Vascular_System_6_1Rh ಪೀಳಿಯರಿಮೆ (genetics):

Rh ಪೀಳಿಯು D ಹಾಗು d ಎಂಬ ಇಕ್ಕಳಿಗಳನ್ನು ಹೊಂದಿರುತ್ತದೆ. Rh ಪೀಳಿಯ ಮೇಲುಗಯ್ ಸರಿಯಿಕ್ಕಳಿಗಳು (DD) (dominant homozygous) ಇಲ್ಲವೆ ಮೇಲುಗಯ್ ಹೆರಯಿಕ್ಕಳಿಗಳನ್ನು (dominant heterozygous) ಹೊಂದಿರುವವರಲ್ಲಿ Rh+ ತೋರುಮಾದರಿ (phenotype) ಇರುತ್ತದೆ. ಇಳಿಗಯ್ ಸರಿಯಿಕ್ಕಳಿಗಳನ್ನು (dd) (recessive homozygous) ಹೊಂದಿರುವವರಲ್ಲಿ Rh- ತೋರುಮಾದರಿ ಇರುತ್ತದೆ.

ತಾಯಿ ಹಾಗು ಬಸಿರುಗೂಸಿನ (fetus) ನಡುವೆ ಹೊಂದಿಕೆಯಾಗದ Rh ಅಂಶದಿಂದಾಗಿ, ಒಂದಶ್ಟು ಮದ್ದರಿಮೆಯ ತೊಡಕುಗಳು ಉಂಟಾಗುತ್ತವೆ (ಚಿತ್ರ 2). ತಾಯಿಯಲ್ಲಿ Rh- (dd) ಹಾಗು ಬಸಿರುಗೂಸಿನಲ್ಲಿ Rh+ (DD ಇಲ್ಲವೆ Dd) ಇದ್ದಲ್ಲಿ, Rh ಅಂಶದ ಎದುರಾಗಿ ತಾಯಿಯಲ್ಲಿ ಮಾಡಲ್ಪಡುವ Rh ಎದುರುಕಗಳು (antibodies), ಬಸಿರುಗೂಸನ್ನು ಸುತ್ತುವರೆದ ಮಾಸುಚೀಲವನ್ನು (placenta) ದಾಟಿಕೊಂಡು Rh+ ಅಂಶವನ್ನು ಹೊಂದಿರುವ ಬಸಿರುಗೂಸಿನ ಕೆನೆ ಕಣಗಳನ್ನು ಮುದಿಪುಗೆಡಿಸುತ್ತದೆ.

Cardio_Vascular_System_6_2ತಾಯಿಯ ಬಸುರಿನ ಎಣಿಕೆ ಹೆಚ್ಚಿದಂತೆಲ್ಲ, ಹೊಂದಿಕೆಯಿಲ್ಲದ Rh ಅಂಶದಿಂದ ಬಸಿರುಗೂಸಿನ ಮೇಲೆ ಉಂಟಾಗಬಹುದಾದ ಕುತ್ತು ಕೂಡ ಹೆಚ್ಚುತ್ತದೆ. ಈ ಬಗೆಯ ತೊಂದರೆ ಯುರೋಪಿಯನ್ನರಲ್ಲಿ ಹೆಚ್ಚಿರುತ್ತದೆ. ಹುಟ್ಟುವ ಯೂರೋಪಿನ ಮಕ್ಕಳಲ್ಲಿ, 13% ರಶ್ಟು ಮಕ್ಕಳು ಈ ಕುತ್ತಿಗೆ ಒಳಪಡುವ ಸಾದ್ಯತೆಗಳಿವೆ. ಬಳಕೆಯಲ್ಲಿರುವ ಒಳ್ಳೆಯ ಮುನ್ನಾರಯ್ಕೆಯಿಂದ (preventive medicine), ಈ ಕುತ್ತಿನಿಂದ ಉಂಟಾಗಬಹುದಾದ ಕೆಡುಕನ್ನು 1% ಗೂ ಕಡಿಮೆ ಮಟ್ಟಕ್ಕೆ ಇಳಿಸಬಹುದಾಗಿದೆ.

ತಾಯಿ-ಬಸಿರುಗೂಸುಗಳ ನಡುವೆ ಉಂಟಾಗುವ Rh ಹೊಂದಿಕೆಯಿಲ್ಲದಿರುವಿಕೆಗೆ ಕಾರಣವೇನು? ತಂದೆಯಲ್ಲಿ Rh+ ಇದ್ದು, ತಾಯಿಯಲ್ಲಿ Rh- ಇದ್ದಲ್ಲಿ, ಈ ತೊಂದರೆಯು ಉಂಟಾಗುತ್ತದೆ. Rh+ ತಂದೆಯಲ್ಲಿ DD (ಪಟ್ಟಿ 1) ಇಲ್ಲವೆ Dd (ಪಟ್ಟಿ 2) ಇಕ್ಕಳಿಗಳ ಪೀಳಿಮಾದರಿ ಇರುವುದರಿಂದ ಎರಡು ಬಗೆಯ ಜೊತೆಗೂಡಿಕೆಗಳು (mating) ನಡೆಯಬಹುದು. ತಾಯಿಯಲ್ಲಿ Rh- ತೋರುಮಾದರಿಯಿದ್ದು, Rh+ ತಂದೆಯಲ್ಲಿ ಯಾವುದೇ ಪೀಳಿಮಾದರಿ ಇದ್ದರೂ (DD ಇಲ್ಲವೆ Dd), ಬೇನೆಮಂಜುಗರು (doctor), Rh ಹೊಂದಿಕೆಯಿಲ್ಲದಿರುವಿಕೆಯಲ್ಲಿ ಉಂಟಾಗಬಹುದಾದ ತೊಡಕುಗಳನ್ನು ತಡೆಯಲು ಬೇಕಾದ ಹಾರಯ್ಕೆಗಳನ್ನು ಮಾಡುತ್ತಾರೆ. ನಾವು ನೆನಪಿನಲ್ಲಿಡಬೇಕಾದ ತಿಳಿವು ಏನ್ನೆಂದರೆ, Rh+ ಮಕ್ಕಳಲ್ಲಿ (Dd) ಮಾತ್ರ ತೊಂದರೆಗಳು ಇರುತ್ತವೆ.

Cardio_Vascular_System_6_3

Cardio_Vascular_System_6_4

ತಾಯಿ ಹಾಗು ಬಸಿರುಗೂಸಿನಲ್ಲಿ Rh- (dd) ಇದ್ದರೆ, ಮಗುವಿಗೆ ಯಾವುದೇ Rh ಅಂಶಕ್ಕೆ ಸಂಬಂದಿಸಿದ ಕುತ್ತುಗಳು ಬರುವುದಿಲ್ಲ. Rh- ಹೆಣ್ಣಿನ ಮೊದಲ ಬಸುರಿನಲ್ಲಿ, Rh+ ಬಸಿರುಗೂಸಿಗೆ (fetus) ಯಾವುದೇ ತೊಂದರೆಯಾಗುವುದಿಲ್ಲ (ಚಿತ್ರ 2). ಆದರೆ, ಎರಡನೇ ಹಾಗು ಅದರ ಮುಂದಿನ ಬಸಿರುಗಳಲ್ಲಿ, Rh- ತಾಯಿಯ ಬಸುರಿನಲ್ಲಿ ಬೆಳೆಯುವ Rh- ಬಸಿರುಗೂಸಿನಲ್ಲಿ ಉಂಟಾಗಬಹುದಾದ ಕುತ್ತಿನ ಸಾದ್ಯತೆಗಳು ಹೆಚ್ಚು. ಇದು ಹೇಗೆ?

ಮಾಸುಚೀಲವು (placenta), ಬಸಿರುಬಳ್ಳಿಯ (umbilical cord) ನೆರವಿನಿಂದ ಬಸಿರುಗೂಸನ್ನು (fetus) ತಾಯಿಯ ಬಸಿರುಚೀಲದ (uterus) ಗೋಡೆಗೆ ಹೊಂದಿಸುತ್ತದೆ. ಈ ಬಗೆಯ ಹೊಂದಿಸುವಿಕೆಯಿಂದಾಗಿ ಆರಯ್ವಗಳು (nutrients) ಹಾಗು ತಾಯಿಯಲ್ಲಿ ಮಾಡಲ್ಪಡುವ ಎದುರುಕಗಳು (maternal antibodies) ತೊಡಕಿಲ್ಲದೆ ಬಸಿರುಗೂಸನ್ನು ತಲುಪಬಲ್ಲವು. ಚೊಚ್ಚಲ ಬಸುರಿನ ಮೊದಲು Rh- ತಾಯಿಯು Rh+ ನೆತ್ತರಿಗೆ ತೆರದುಕೊಂಡಿರದ್ದಿದರೆ, ಅವಳಲ್ಲಿ Rh+ ಎದುರಾಗಿ Rh ಎದುರುಕಗಳು ಇರುವುದಿಲ್ಲ. ಹಾಗಾಗಿ ತಾಯಿಯ ಎದುರುಕಗಳು ಮೊದಲನೆಯ Rh+ ಬಸಿರುಗೂಸಿನ ನೆತ್ತರನ್ನು ಅಂಟಿಕ್ಕುವುದಿಲ್ಲ (agglutinate) ಹಾಗು ಅದರ ಕೆನೆ ಕಣಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ.

ಹೆರಿಗೆಯಲ್ಲಿ ಮಾಸುಚೀಲ ಹರಿಯುವುದರಿಂದ, ಸ್ವಲ್ಪವಾದರೂ ಬಸಿರುಗೂಸಿನ ನೆತ್ತರು, Rh- ತಾಯಿಯ ಮಯ್ ಏರ‍್ಪಾಟಿಗೆ ನುಸುಳುತ್ತದೆ. Rh+ ನೆತ್ತರು ನುಸುಳುವಿಕೆ, Rh- ತಾಯಿಯಲ್ಲಿ Rh+ ಎದುರಾಗಿ, ಎದುರುಕಗಳನ್ನು ಮಾಡುವಂತೆ ತಾಯಿಯ ಕಾpಪೇರ‍್ಪಾಟನ್ನು ಕೆರಳಿಸುತ್ತದೆ. Rh+ ಕೂಸಿನ ಒಂದು ತೊಟ್ಟು ನೆತ್ತರು, Rh- ತಾಯಿಯ ಮಯ್ಯೇರ‍್ಪಾಟನ್ನು ಸೇರಿದರೂ, ತಾಯಿಯಲ್ಲಿ Rh+ ಎದುರುಕಗಳು ಹುಟ್ಟಿಕೊಳ್ಳುತ್ತವೆ. ಮುಂದಿನ ಬಸುರಿನಲ್ಲಿ, ಈ Rh- ತಾಯಿಯಿಂದ ಬಸಿರುಗೂಸಿಗೆ ಸಾಗಿಸುವ ತಾಯಿಯ ಎದುರುಕಗಳಲ್ಲಿ, Rh+ ಎದುರುಕವೂ ಸೇರಿಕೊಂಡಿರುತ್ತದೆ.

ಬಸಿರುಗೂಸನ್ನು ಸೇರುವ Rh+ ಎದುರುಕವು, ಬಸಿರುಗೂಸಿನ ಕೆನೆ ಕಣಗಳನ್ನು ಹೊಡೆಯುವ ಹಾಗು ನೆತ್ತರನ್ನು ಅಂಟಿಕ್ಕುವ (agglutinate) ಮುದಿಪಿನ ಕೆಲಸದಲ್ಲಿ ತೊಡಗುತ್ತದೆ. ಕೆನೆ ಕಣಗಳನ್ನು ಮುದಿಪುಗೊಳಿಸುವ ಹಮ್ಮುಗೆಯಿಂದಾಗಿ, ಹುಟ್ಟಿದ ಮಗು ಕೆನೆಕಣಕೊರೆಯಿಂದಾಗಿ (anemia) ಸಾಯುವು ಸಾದ್ಯತೆ ಹೆಚ್ಚು. ಕೆನೆಕಣಕೊರೆಯಿಂದಾಗಿ, ನೆತ್ತರಿನಲ್ಲಿ ಉಸಿರುಗಾಳಿಯ ಮಟ್ಟ ತಗ್ಗುತ್ತದೆ. ಇದರಿಂದಾಗಿ ಮಗುವಿನಲ್ಲಿ ಕಾಮಾಲೆ, ಜ್ವರ, ಹುಬ್ಬಿದ ಈಲಿ (liver) ಹಾಗು ತೊಳ್ಳೆ (spleen) ಮುಂತಾದ ಕುರುಹುಗಳನ್ನು ತೋರುವ ಈ ಬೇನೆಯನ್ನು ‘ಎರಿತ್ರೋಬ್ಲಾಸ್ಟೋಸೀಸ್ ಪೀಟಾಲಿಸ್’ (erythroblastosis fetalis) ಎಂದು ಕರೆಯುತ್ತಾರೆ.

ಬಿರುಸಾದ ಬೇನೆ ಕುರುಹುಗಳನ್ನು ತೋರುವ ಮಗುವಿನಲ್ಲಿ ಕಯ್ಗೊಳ್ಳುವ ಮುಕ್ಯ ಆರಯ್ಕೆಯೆಂದರೆ, Rh- ನೆತ್ತರನ್ನು ಮಗುವಿನ ನೆತ್ತರು ಹರಿಯುವಿಕೆಯ ಏರ‍್ಪಾಟಿಗೆ (circulatory system) ಮಾರೆಡೆಗೊಳಿಸುವುದು (blood transfusion) ಹಾಗು Rh+ ಎದುರುಕವನ್ನು ಇಲ್ಲವಾಗಿಸಲು, ಮಗುವಿನ ನೆತ್ತರು ಹರಿಯುವಿಕೆಯ ಏರ‍್ಪಾಟಿನಿಂದ ನೆತ್ತರನ್ನು ಹೊರದೂಡುವುದು. ಇದನ್ನು ಮಗು ಹುಟ್ಟಿದ ಕೂಡಲೇ ಇಲ್ಲವೆ ಹುಟ್ಟುವ ಮುನ್ನ ಮಾಡಬಹುದು. ಮಗುವಿನ Rh+ ಕೆನೆ ಕಣಗಳನ್ನು Rh- ಕೆನೆ ಕಣಗಳಿಂದ ಬದಲಿಸುವುದರಿಂದ, ತಾಯಿಯ Rh+ ಎದುರುಕಗಳಿಂದ ಆಗುವ ಮಗುವಿನ ಕೆನೆ ಕಣಗಳ ಅಂಟಿಕ್ಕುವಿಕೆಯನ್ನು ತಡೆಯಬಹುದು. ಮುಂದೆ ಮಗು ಬೆಳೆದಂತೆ, ಮಗುವಿನಲ್ಲಿ ತುಂಬಿದ Rh- ಕೆನೆ ಕಣಗಳನ್ನು, ಮಗುವಿನಲ್ಲಿ ಹೊಸದಾಗಿ ಮಾಡಲ್ಪಡುವ Rh+ ಕೆನೆ ಕಣಗಳು ತಂತಾನೇ ಬದಲಿಸುತ್ತದೆ. ಮಗುವಿನಲ್ಲಿ ಉಳಿದಿರಬಹುದಾದ ಅಲ್ಪಸ್ವಲ್ಪ ತಾಯಿಯ Rh+ ಎದುರುಕವು ನಿದಾನವಾಗಿ ಕಡಿಮೆಯಾಗಿ, ಕೊನೆಗೆ ಇಲ್ಲವಾಗುತ್ತದೆ.

ನೆತ್ತರು ಮಾರೆಡೆಗೊಳಿಸುವಿಕೆ (blood transfusion):

ಒಬ್ಬ ಮನುಶ್ಯ ಕೆಟ್ಟಾಗುಹ (accident) ಇಲ್ಲವೇ ಒಂದಶ್ಟು ಬೇನೆಗಳಿಗೆ ತುತ್ತಾದಾಗ, ನೆತ್ತರು ಸೋರಿಕೆಯಾಗಬಹುದು. ಇದರಿಂದಾಗಿ ಅವನಲ್ಲಿ ಹರಿಯುವ ನೆತ್ತರಿನ ಮೊತ್ತವು ಕುಗ್ಗುತ್ತದೆ. ಹಾಗೆಯೆ, ಕೊಯ್ಯಾರಯ್ಕೆಗೆ ಒಳಪಡುತ್ತಿರುವವರು, ಕೊಯ್ಯಾರಯ್ಕೆಯ ವೇಳೆ ನೆತ್ತರರನ್ನು ಕೆಳೆದುಕೊಳ್ಳಬಹುದು. ಇಂತಹ ಗೊತ್ತುಪಾಡುಗಳಲ್ಲಿ (condition), ತುತ್ತಾದ ಮಂದಿಗೆ ನೆತ್ತರು ಮಾರೆಡೆಗೊಳಿಸಬೇಕಾಗುತ್ತದೆ. ಇಂತವರು ಯಾರಿಂದ ನೆತ್ತರು ಪಡೆಯಬಹುದು ಎನ್ನುವುದನ್ನು ಅವರ ಹಾಗು ಕೊಡುಗರ (donor) ನೆತ್ತರು ಗುಂಪಿನ ಮೇಲೆ ತೀರ‍್ಮಾನಿಸಲಾಗುತ್ತದೆ. ಯಾರು ಯಾರಿಗೆ ನೆತ್ತರು ನೀಡಬಹುದು ಎಂದು ಪಟ್ಟಿ 3 ರಲ್ಲಿ ಸುಳವಾಗಿ ತೋರಿಸಿಕೊಡಲಾಗಿದೆ.

ಈ ಬರಹದೊಂದಿಗೆ, ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಸರಣಿ ಬರಹವನ್ನು ಕೊನೆಗೊಳಿಸಲಾಗುತ್ತಿದೆ. ಮುಂದಿನ ಬರಹದಲ್ಲಿ ಮಯ್ಯಿಯ ಇನ್ನೊಂದು ಏರ‍್ಪಾಟಿನ ಬಗ್ಗೆ ತಿಳಿಸಿಕೊಡಲಾಗುವುದು

(ಮಾಹಿತಿ ನೆರವು ಮತ್ತು ಚಿತ್ರ ಸೆಲೆಗಳು: 1.wikipedia.org, 2.anthro.palomar.edu, 3.nadidewi.blogspot.com, 4.bloodbanker.com)

ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 5

ನೆತ್ತರು ಗುಂಪುಗಳು (blood groups):

 

ಅರಿಕೆ:
ನೆತ್ತರು ಗುಂಪುಗಳ ಬಗ್ಗೆ ಅರಿಯಲು, ಕಾಪೇರ‍್ಪಾಟಿನರಿಮೆ (immunology) ಹಾಗು ಪೀಳಿಯರಿಮೆಯ (genetics) ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನೆತ್ತರು ಗುಂಪಿನ ಬರಹವನ್ನು ಆರಂಬಿಸುವ ಮುನ್ನ, ಬರಹದಲ್ಲಿ ಬಳಸಿರುವ ಪೀಳಿಯರಿಮೆ ಹಾಗು ಕಾಪೇರ‍್ಪಾಟಿನರಿಮೆಯ ಒಂದಶ್ಟು ಪದಗಳ ಹುರುಳನ್ನು ತಿಳಿಸುವ ಪ್ರಯತ್ನವನ್ನು ಕೆಳಗೆ ಮಾಡಲಾಗಿದೆ. ಉಳಿದಂತೆ, ಕಾಪೇರ‍್ಪಾಟು (immune system) ಹಾಗು ಪೀಳಿಯರಿಮೆಯ (genetics) ಬರಹಗಳನ್ನು ಬರೆಯುವಾಗ, ಇವುಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುವುದು.

ಪದಗಳ ಹುರುಳು:

ಒಗ್ಗದಿಕ (antigen) ಮತ್ತು ಎದುರುಕ (antibody):

ಕಾಪೇರ‍್ಪಾಟಿನ ಹಿನ್ನೆಲೆಯಲ್ಲಿ ಹೇಳುವುದಾದರೆ, ಮನುಶ್ಯರ ಮಯ್ಯಲ್ಲಿ ಕಾಪೇರ‍್ಪಾಟನ್ನು (immune system) ಕೆರಳಿಸುವ ಅಂಶವನ್ನು ಒಗ್ಗದಿಕ (ಮಯ್ಯಿಗೆ ಒಗ್ಗದ) (antigen) ಎಂದು ಹೇಳಬಹುದು. ಒಗ್ಗದಿಕಗಳಿಗೆ ಇದಿರಾಗಿ ಸೆಣಸಲು ಮಯ್ಯಲ್ಲಿ ಮಾಡಲ್ಪಡುವ ಅಂಶವನ್ನು ಎದುರುಕ (antibody) ಎಂದು ಹೇಳಬಹುದು. ಹೀಗೆ ಮಾಡಲ್ಪಟ್ಟ ಎದುರುಕವು, ಒಗ್ಗದಿಕಗಳನ್ನು ಸದೆಬಡೆಯುವ ಕೆಲಸವನ್ನು ಮಾಡುತ್ತವೆ.

ಪೀಳಿ (gene): ಜೀವಿಯ ಹುಟ್ಟುಪರಿಚೆಯ (heredity) ಕಿರುತುಣಕನ್ನು (molecular unit) ಪೀಳಿ ಎಂದು ಹೇಳಬಹುದು.

ಇಕ್ಕಳಿ (allele): ಒಂದು ಪೀಳಿಯು ಹಲವು ಬಗೆಗಳಲ್ಲಿ ಇರಬಹುದು. ಪೀಳಿಯ ಒಂದೊಂದು ಬಗೆಯನ್ನು ಒಂದೊಂದು ಇಕ್ಕಳಿ ಎಂದು ಹೇಳಲಾಗುತ್ತದೆ.

ಪೀಳಿಮಾದರಿ (genotype): ಒಂದು ಜೀವಿಯ ಗೊತ್ತುಮಾಡಿದ ಗುಣವನ್ನು ತೀರ‍್ಮಾನಿಸುವ ಪೀಳಿಯ ಒಳಪಿಡಿಯನ್ನು (content) ಪೀಳಿಮಾದರಿ ಎನ್ನಲಾಗುತ್ತದೆ.

ತೋರುಮಾದರಿ (phenotype): ಜೀವಿಯ ಪೀಳಿಮಾದರಿ ಹಾಗು ಜೀವಿಯು ಬದುಕುತ್ತಿರುವ ಸುತ್ತಮುತ್ತಲಿನ ಅಂಶಗಳು ಸೇರಿಕೊಂಡು ಜೀವಿಯ ನಿರ್ದಿಶ್ಟವಾದ ಗುಣವು ಹೊರಗಿನ ಜಗತ್ತಿಗೆ ಕಾಣಿಸುವ ಬಗೆಯೇ ತೋರುಮಾದರಿ.

ಮೇಲುಗಯ್ (dominant) ಮತ್ತು ಇಳಿಗಯ್ (recessive): ಪೀಳಿಯರಿಮೆಯಲ್ಲಿ, ಪೀಳಿಯೊಂದರ ಒಂದು ಇಕ್ಕಳಿಯ (allele) ಹೊಮ್ಮುವಿಕೆ, ತನ್ನ ವಾರಗೆಯ ಇಕ್ಕಳಿಯ ಹೊಮ್ಮುವಿಕೆಗಿಂತ ಹೆಚ್ಚಿನ ಅವಕಾಶ ಪಡೆದರೆ, ಹೊಮ್ಮುವ ಅಳವನ್ನು ಹೊಂದಿರುವ ಇಕ್ಕಳಿಯನ್ನು ‘ಮೇಲುಗಯ್ ಇಕ್ಕಳಿ’ (dominant allele) ಹಾಗು ಮೇಲುಗಯ್ ಇಕ್ಕಳಿ ಇಲ್ಲದಿದ್ದರಶ್ಟೆ ಹೊಮ್ಮುವ ವಾರಗೆಯ ಇಕ್ಕಳಿಯನ್ನು ‘ಇಳಿಗಯ್ ಇಕ್ಕಳಿ’(recessive allele) ಎಂದು ಹೇಳಲಾಗುತ್ತದೆ.

ಕೂಡಿಕ್ಕಳಿ (codominant alleles): ಒಂದು ಪೀಳಿಯ ಇಕ್ಕಳಿಗಳೆರಡಕ್ಕೂ ಹೊಮ್ಮುವ ಸಮಾನ ಅವಕಾಶವಿದ್ದರೆ, ಅವು ಕೂಡಿಕ್ಕಳಿಗಳಾಗುತ್ತವೆ.

ನೆತ್ತರಿನ ಬಗ್ಗೆ ನಮ್ಮ ದಿನದ ಬದುಕಿನಲ್ಲಿ ಕೇಳಿಬರುವ ಒಂದಶ್ಟು ಮಾತುಗಳು ಹೀಗಿರುತ್ತವೆ,

  • ಗೆಳೆಯರೊಬ್ಬರಿಗೆ ಗಾಡಿಯೊಂದು ಗುದ್ದಿ, ಕಯ್ಕಾಲು ಮುರಿದುಕೊಂಡಿದ್ದಾರೆ; ಅವರ ಮಯ್ಯಿಂದ ತುಂಬಾ ನೆತ್ತರು ಸುರಿದಿದ್ದು ಅವರಿಗೆ A+ ನೆತ್ತರು ಕೊಡುವವರು ಬೇಕಾಗಿದ್ದರೆ.
  • ನೆಂಟರೊಬ್ಬರು ಕೊಯ್ಯಾರಯ್ಕೆಗೆ (surgery) ಒಳಪಡುತ್ತಿದ್ದು ಅವರಿಗೆ O+ ನೆತ್ತರು ಬೇಕಾಗಿದೆ. ಈ ಗುಂಪಿನ ನೆತ್ತರಿನವರನ್ನು ಹುಡುಕುತ್ತಿದ್ದೇವೆ.

A+, A-, AB+ ಇಲ್ಲವೆ O+ ನೆತ್ತರುಗಳೆಂದರೇನು? ನೆತ್ತರನ್ನು ಈ ಬಗೆಯಾಗಿ ಗುಂಪಿಸುವುದಾದರೂ ಹೇಗೆ? ತಿಳಿಯೋಣ ಬನ್ನಿ.

ಕೆಂಪು ನೆತ್ತರು ಕಣಗಳ (ಕೆನೆಕ/RBC) ಹೊರ ಮಯ್ ಮೇಲೆ ಗೊತ್ತುಪಡಿಸಿದ ಒಗ್ಗದಿಕಗಳ (antigens) ಇರುವಿಕೆಯ ಆದಾರದ ಮೇಲೆ, ನೆತ್ತರನ್ನು ಹಲವು ಬಗೆಗಳಾಗಿ ಗುಂಪಿಸಬಹುದಾಗಿದೆ. ನೆತ್ತರು ಗುಂಪಿಗೆ ತಕ್ಕಂತೆ ಈ ಒಗ್ಗದಿಕಗಳು ಮುನ್ನು (protein), ಹಿಟ್ಟುಸಕ್ಕರೆ (carbohydrate) ಇಲ್ಲವೇ ಸಕ್ಕರೆಮುನ್ನುಗಳಿಂದ (glycoprotein) ಮಾಡಲ್ಪಟ್ಟಿರುತ್ತವೆ.

ಇಂಟರ‍್ನ್ಯಾಶ್ನಲ್ ಸೊಸಯ್ಟಿ ಆಪ್ ಬ್ಲಡ್ ಟ್ರಾನ್ಸ್ಪ್ಯೂಜನ್ (ISBT) ಪ್ರಕಾರ ಇದುವರೆಗೂ ಮನುಶ್ಯರಲ್ಲಿ 33 ಬಗೆಯ ನೆತ್ತರು ಗುಂಪುಗಳನ್ನು ಗುರುತಿಸಲಾಗಿದೆ. ಈ 33 ನೆತ್ತರು ಗುಂಪುಗಳಲ್ಲಿ, 600 ರಕ್ಕೂ ಹೆಚ್ಚಿನ ಬಗೆಯ ಒಗ್ಗದಿಕಗಳನ್ನು (antigens) ಕಂಡುಕೊಳ್ಳಲಾಗಿದೆ. ಇವು ಮನುಶ್ಯನ ನೆತ್ತರು ಬಗೆಯನ್ನು ತೀರ‍್ಮಾನಿಸುತ್ತವೆ.

ಮನುಶ್ಯನಲ್ಲಿ ಇರಬೇಕಾದ ನೆತ್ತರಿನ ಬಗೆಯನ್ನು, ಅವಳು(ನು) ತನ್ನ ತಂದೆ- ತಾಯಿಗಳಿಂದ ಪಡೆಯುವ ನೆತ್ತರು ಗುಂಪಿನ ಒಗ್ಗದಿಕಗಳ ಪೀಳಿಗಳು ತೀರ‍್ಮಾನಿಸುತ್ತದೆ. ಹೀಗೆ ತೀರ‍್ಮಾನಿಸಲ್ಪಟ್ಟ ನೆತ್ತರು ಗುಂಪು ಆ ಮನುಶ್ಯನ ಬಾಳ್ವಿಕೆಯ ಕಾಲದಲ್ಲಿ (life span) ಬದಲಾಗುವುದಿಲ್ಲ. ಆದರೆ ಕೆಲವು ಬಗೆಯ ಸೋಂಕು (infection), ಏಡಿಹುಣ್ಣು (cancer) ಇಲ್ಲವೆ ತನ್ಮರೆಗಾಪಿನ (autoimmunity) ಬೇನೆಗಳು ನೆತ್ತರು ಬಗೆಯನ್ನು ತೀರ‍್ಮಾನಿಸುವ ಕೆನೆ ಕಣಗಳ ಮೇಲಿನ ಒಗ್ಗದಿಕಗಳನ್ನು ಮರೆಮಾಚಿದಾಗ, ನೆತ್ತರಿನ ಗುಂಪು ಬದಲಾಗಬಹುದು.

ಹಾಗೆಯೇ, ಬೆಳ್-ನೆತ್ತರಿನ ಏಡಿಹುಣ್ಣಿನಂತಹ (leukemia) ಬೇನೆಗಳ ಆರಯ್ಕೆಯಲ್ಲಿ ಮೂಳೆ ಮಜ್ಜೆಯನ್ನು (bone marrow) ಮರುನಾಟಿ (transplant) ಮಾಡಲಾಗುತ್ತದೆ; ಕೊಳ್ಳುಗನ (recipient) ನೆತ್ತರಿನ ಗುಂಪಲ್ಲದ ಮನುಶ್ಯನಿಂದ ಮೂಳೆ ಮಜ್ಜೆಯನ್ನು ಪಡೆದುಕೊಂಡರೆ, ಕೊಳ್ಳುಗನ (recipient) ನೆತ್ತರು ಗುಂಪು, ಕೊಡುಗನ (donor) ನೆತ್ತರು ಗುಂಪಾಗಿ ಬದಲಾಗುತ್ತದೆ.

ಯಾವುದೇ ಒಬ್ಬ ಮನುಶ್ಯನ ನೆತ್ತರು ಬಗೆಯನ್ನು ತೀರ‍್ಮಾನಿಸುವಾಗ, ಹೆಚ್ಚಾಗಿ ABO ಹಾಗು Rh ನೆತ್ತರು ಗುಂಪುಗಳಲ್ಲಿ ಕಂಡು ಬರುವ ಒಗ್ಗದಿಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಉಳಿದ ನೆತ್ತರು ಗುಂಪುಗಳು ಹಾಗು ಸಂಬಂದಿಸಿದ ಒಗ್ಗದಿಕಗಳು ಮನುಶ್ಯರಲ್ಲಿ ಅಶ್ಟಾಗಿ ಕಂಡುಬರುವುದಿಲ್ಲ; ಅವು ಇದ್ದರೂ ಸಣ್ಣ-ಪುಟ್ಟ ಬುಡಕಟ್ಟುಗಳಲ್ಲಿ (ethnicity) ಕಾಣಸಿಗುತ್ತವೆ.

ಬರಹದ ಉಳಿದ ಬಾಗದಲ್ಲಿ ಮುಕ್ಯ ನೆತ್ತರು ಗುಂಪುಗಳಾದ ABO ಮತ್ತು Rh ಗಳ ಬಗ್ಗೆ ತಿಳಿದುಕೊಳ್ಳೋಣ.

ABO ನೆತ್ತರು ಗುಂಪು:
Cardio_vascular_5_1ABO ನೆತ್ತರು ಗುಂಪನ್ನು ಗುರುತಿಸಿದವರಲ್ಲಿ ಆಸ್ಟ್ರಿಯಾ ನಾಡಿನ ಅರಿಗರಾದ (scientist) ಕಾರ‍್ಲ್ ಲ್ಯಾಂಡ್ ಸ್ಟಿನರ್ (Karl Landsteiner) ಮೊದಲಿಗರು (ಚಿತ್ರ 1). ಅವರು 1900 ರಲ್ಲಿ ABO ನೆತ್ತರು ಗುಂಪಿನ A, B, ಮತ್ತು O ನೆತ್ತರು ಬಗೆಗಳನ್ನು ಗುರುತಿಸಿದರು. ಅವರ ಈ ಸಾದನೆಯನ್ನು ಮೆಚ್ಚಿ 1930 ರಲ್ಲಿ, ನೊಬೆಲ್ ಬಿರುದನ್ನು ನೀಡಲಾಯಿತು. ಆಲ್ಪ್ರೆಡ್ ವಾನ್ ಡಿಕಾಸ್ಟೆಲ್ಲೊ (Alfred von Decastello) ಹಾಗು ಎಡ್ರಿಯಾನೊ ಸ್ಟುರ‍್ಲಿ (Adriano Sturli) ಅರಿಗರ ಜೋಡಿಯು 1902 ರಲ್ಲಿ ‘AB’ ನೆತ್ತರು ಬಗೆಯನ್ನು ಗುರುತಿಸಿತು.

ABO ನೆತ್ತರು ಗುಂಪಿನಲ್ಲಿ (blood group) ನಾಲ್ಕು ಬಗೆಯ ನೆತ್ತರು ಬಗೆಗಳು (blood type) ಇರುತ್ತವೆ. ಅವುಗಳೆಂದರೆ A, B, AB, ಹಾಗು O. ಎರಡು ಬಗೆಯ ಒಗ್ಗದಿಕಗಳು (antigens) ಹಾಗು ಎರಡು ಬಗೆಯ ಎದುರುಕಗಳು (antibodies) ABO ನೆತ್ತರು ಗುಂಪಿನ ನೆತ್ತರು ಬಗೆಗಳನ್ನು ತೀರ‍್ಮಾನಿಸುತ್ತವೆ. ABO ನೆತ್ತರು ಗುಂಪಿನಲ್ಲಿ ಒಗ್ಗದಿಕಗಳು ಹಾಗು ಎದುರುಕಗಳ ಪಣುಗೆ-ಸೇರುಗೆಗಳಿಂದ (permutation & combination) ಉಂಟಾಗಬಹುದಾದ ನೆತ್ತರು ಬಗೆಗಳನ್ನು ಪಟ್ಟಿ1 ರಲ್ಲಿ (ಪಟ್ಟಿ 1) ತೋರಿಸಿಕೊಡಲಾಗಿದೆ. (ಉಂಟು=ಒಗ್ಗದಿಕ/ಎದುರುಕ ಇದೆ, ಇಲ್ಲ= ಒಗ್ಗದಿಕ/ಎದುರುಕ ಇಲ್ಲ).

Cardio_vascular_5_2ಉದಾಹರಣೆಗೆ: A ನೆತ್ತರು ಬಗೆಯ ಮನುಶ್ಯರ ಕೆನೆ ಕಣದ (RBC) ಮೇಲೆ A ಒಗ್ಗದಿಕ ಇರುತ್ತದೆ ( ಪಟ್ಟಿ 2). ಆದುದ್ದರಿಂದ, ಇವರಲ್ಲಿ A ಒಗ್ಗದಿಕದ ಇದಿರಾಗಿ, A ಎದುರುಕ ಇರುವುದಿಲ್ಲ. ಏಕೆಂದರೆ, ಈ ಮನುಶ್ಯರಲ್ಲಿ A ಎದುರುಕ ಉಂಟಾದಲ್ಲಿ, ಅದು, ಈ ಮನುಶ್ಯರ ಕೆನೆ ಕಣಗಳನ್ನು ಮುದಿಪುಗೆಡಿಸುತ್ತವೆ. B ಬಗೆಯ ನೆತ್ತರನ್ನು A ನೆತ್ತರು ಬಗೆಯ ಮನುಶ್ಯರ ಹರಿಯುವಿಕೆಯ ಏರ‍್ಪಾಟಿಗೆ ತುಂಬಿದರೆ, ಈ ಮನುಶ್ಯರಲ್ಲಿರುವ B ಎದುರುಕವು, B ಒಗ್ಗದಿಕವನ್ನು ಹೊಂದಿರುವ ಕೆನೆ ಕಣಗಳನ್ನು ಮಯ್ ಹೊರಗಿನ ಅಂಶವೆಂದು (foreign body) ಗುರುತಿಸಿ, ಅವುಗಳನ್ನು ಮುದಿಪುಗೊಳಿಸುತ್ತವೆ.

Cardio_vascular_5_3O ನೆತ್ತರು ಬಗೆಯನ್ನು ಹೊಂದಿರುವ ಮಂದಿಗಳಲ್ಲಿ, ABO ಒಗ್ಗದಿಕಗಳು (antigens) ಇರುವುದಿಲ್ಲ. ಹಾಗಾಗಿ, ಈ ಬಗೆಯ ನೆತ್ತರನ್ನು ABO ನೆತ್ತರು ಗುಂಪಿನ ಯಾವುದೇ ಬಗೆಯ ನೆತ್ತರನ್ನು ಹೊಂದಿರುವ ಮಂದಿಗೆ ಕೊಡಲು ತೊಡಕಾಗುವುದಿಲ್ಲ. ಈ ಕಾರಣದಿಂದ, ನೆತ್ತರು ಮಾರೆಡೆಗೊಳಿಕೆಯಲ್ಲಿ (blood transfusion) O ನೆತ್ತರು ಬಗೆಯವರನ್ನು ‘ಎಲ್ಲೆಯಿಲ್ಲದ ಕೊಡುಗರು’ (universal donors) ಎಂದು ಹೇಳಲಾಗುತ್ತದೆ. ಆದರೆ O ಗುಂಪಿನವರು, ಬರಿ O ಗುಂಪಿನವರಿಂದ ನೆತ್ತರನ್ನು ಪಡೆಯಲು ಸಾದ್ಯ (ಪಟ್ಟಿ 3).

AB ನೆತ್ತರು ಬಗೆಯನ್ನು ಹೊಂದಿರುವವರನ್ನು ‘ಎಲ್ಲೆಯಿಲ್ಲದ ಕೊಳ್ಳುಗರು’ (universal recipients) ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ, AB ಬಗೆಯ ನೆತ್ತರಿನವರಲ್ಲಿ ಯಾವುದೇ ಬಗೆಯ ABO ಎದುರುಕಗಳು (antibodies) ಇರುವುದಿಲ್ಲ; ಈ ಗುಂಪಿನವರು AB ಬಗೆಯ ನೆತ್ತರಲ್ಲದೆ, ABO ಗುಂಪಿನ ಯಾವುದೇ ನೆತ್ತರು ಬಗೆಯನ್ನು ಪಡೆಯಬಹುದು. ಆದರೆ, AB ನೆತ್ತರು ಬಗೆಯವರು A ಮತ್ತು B ಎರಡೂ ಬಗೆಯ ಒಗ್ಗದಿಕಗಳನ್ನು ಹೊಂದಿರುವುದರಿಂದ, ನೆತ್ತರನ್ನು ಉಳಿದ ABO ಗುಂಪಿನವರಿಗೆ ಕೊಡಲು ಬರುವುದಿಲ್ಲ (ಪಟ್ಟಿ 3).

Cardio_vascular_5_4ನೆತ್ತರು ಅಂಟಿಕ್ಕುವಿಕೆಯ ಒರೆತ (blood agglutination test) (ಚಿತ್ರ 2): ನೆತ್ತರು ಬಗೆಯನ್ನು ತಿಳಿಯಲು ಇರುವ ಸುಲಬವಾದ ದಾರಿಯಿಂದರೆ, ನೆತ್ತರನ್ನು ಅಂಟಿಕ್ಕುವಿಕೆಯ ಒರೆತಕ್ಕೆ ಒಳಪಡಿಸುವುದು. ನೆತ್ತರಿನಿಂದ ನೆತ್ತರು ಕಣಗಳು ಹಾಗು ಹೆಪ್ಪುಗಟ್ಟಿಸುವ ಅಂಶಗಳನ್ನು ಬೇರ‍್ಪಡಿಸಿದಾಗ ರಸಿಕೆ (serum) ಎಂಬ ಅಡಕವು ಸಿಗುತ್ತದೆ. ಈ ಅಡಕಗಳ ನೆರವಿನಿಂದ ನೆತ್ತರು ಬಗೆಯನ್ನು ಒರೆ ಹಚ್ಚಬಹುದು.

Cardio_Vascular_System_5_5

ಒರೆ ಹಚ್ಚಬೇಕಾದ ನೆತ್ತರಿನ ಒಂದು ಬಾಗವನ್ನು A ಎದುರುಕವನ್ನು ಹೊಂದಿರುವ ರಸಿಕೆಯೊಡನೆಯು (serum), ಮತ್ತೊಂದು ನೆತ್ತರಿನ ಬಾಗವನ್ನು B ಎದುರುಕವನ್ನು ಹೊಂದಿರುವ ರಸಿಕೆಯೊಡನೆಯೂ ಬೆರೆಸಲಾಗುತ್ತದೆ. ಈ ಎರಡು ಬಗೆಯ ಬೆರೆಸುವಿಕೆಗಳಲ್ಲಿ, ಯಾವುದರಲ್ಲಿ ಅಂಟಣೆ (agglutination) ಉಂಟಾಗುತ್ತದೆ ಎನ್ನುವುದರ ಮೇಲೆ, ನೆತ್ತರು ಗುಂಪನ್ನು ಕಂಡು ಹಿಡಿಯಬಹುದು. ಉದಾಹರಣೆಗೆ: ಒರೆನೋಡಿದ ನೆತ್ತರು, A ಎದುರುಕದೊಡನೆ ಅಂಟಿ, B ಎದುರುಕದೊಡನೆ ಅಂಟದಿದ್ದರೆ, ನೆತ್ತರಿನಲ್ಲಿ A ಒಗ್ಗದಿಕ ಇದೆ ಎಂದು ಸೂಚಿಸುತ್ತದೆ. ಹಾಗಾಗಿ, ಒರೆ ಹಚ್ಚಿದ ನೆತ್ತರು A ಬಗೆಯದ್ದಾಗಿದೆ ಎಂದು ತಿಳಿದುಕೊಳ್ಳಬಹುದು.

ABO ನೆತ್ತರು ಗುಂಪಿನ ಪೀಳಿಯರಿಮೆ (genetics of ABO blood group): ಬರಹದ ಆರಂಬದಲ್ಲಿ ತಿಳಿಸಿರುವಂತೆ, ಮನುಶ್ಯರ ನೆತ್ತರು ಬಗೆಯನ್ನು, ಅವರು ಹೆತ್ತವರಿಂದ ಪಡೆದುಕೊಂಡ ಪೀಳಿಗಳು (genes) ತೀರ‍್ಮಾನಿಸುತ್ತವೆ. ABO ನೆತ್ತರು ಗುಂಪಿನ ಪೀಳಿಯರಿಮೆಯ ಬಗ್ಗೆ ಅರಕೆಗಳನ್ನು (research) ನಡೆಸಿದವರಲ್ಲಿ ಜರ‍್ಮನಿಯ ಲುಡ್ವಿಕ್ (Ludwik Hirszfeld) ಹಾಗು ಎಮಿಲ್ ವಾನ್ ಡನ್ಜರ‍್ನ್ (Emil von Dungern) ಮೊದಲಿಗರು. 1910-1911 ರಲ್ಲಿ ಅರಿಗರ ಈ ಜೋಡಿಯು ABO ನೆತ್ತರು ಗುಂಪಿನ ಪೀಳಿಗಳ ಮರುಪಡೆಯುವಿಕೆಯ (genetic inheritance) ಬಗ್ಗೆ ತಿಳಿಸಿಕೊಟ್ಟರು.

ಈ ದಿಕ್ಕಿನಲ್ಲಿ ಸದ್ಯದ ಮಟ್ಟಿಗೆ ನಮಗೆ ತಿಳಿದಿರುವ ತಿಳಿವುಗಳೆಂದರೆ, ABO ನೆತ್ತರು ಬಗೆಯನ್ನು ತೀರ‍್ಮಾನಿಸುವ ಪೀಳಿಗಳು ಮನುಶ್ಯನ ಒಂಬತ್ತನೆಯ ಅಂಬಿಸಿಂಬಿಯ/ಬಣ್ಣದಸಿಂಬಿಯ (chromosome) ಮೇಲೆ ಇರುತ್ತವೆ ಹಾಗು ಒಬ್ಬ ಮನುಶ್ಯನ ABO ನೆತ್ತರು ಬಗೆ, ಅವನ ಬಾಳ್ವೆಯ ಕಾಲದಲ್ಲಿ ಬದಲಾಗುವುದಿಲ್ಲ. ಒಬ್ಬ ಮನುಶ್ಯನ ABO ನೆತ್ತರು ಬಗೆ, ಅವಳು(ನು) ABO ನೆತ್ತರು ಪೀಳಿಯ ಮೂರು (A, B, ಅತವ O) ಇಕ್ಕಳಿಗಳಲ್ಲಿ (alleles) ಯಾವುದನ್ನು ಹೆತ್ತವರಿಂದ ಮರುಪಡೆಯುತ್ತಾಳೆ(ನೆ) (inherit) ಎನ್ನುವ ಅಂಶ ತೀರ‍್ಮಾನಿಸುತ್ತದೆ. ಮನುಶ್ಯನು ಮರುಪಡೆಯಬಹುದಾದ ಇಕ್ಕಳಿ (allele) ಹಾಗು ನೆತ್ತರು ಬಗೆಯ ತಿರುಳನ್ನು ಪಟ್ಟಿಯಲ್ಲಿ (ಪಟ್ಟಿ 4) ಕೊಡಲಾಗಿದೆ.

Cardio_vascular_5_6[ಪಟ್ಟಿ 4 ರ ವಿವರ: ಸಾದ್ಯವಾಗಬಹುದಾದಂತ ಹೆತ್ತವರ ಜೋಡಿಯಲ್ಲಿ ಒಬ್ಬರ ABO ಇಕ್ಕಳಿಗಳನ್ನು ಮೇಲಿನ ಸಾಲಿನಲ್ಲೂ, ಮತ್ತೊಬ್ಬರ ಇಕ್ಕಳಿಗಳನ್ನು ಎಡ ಸಾಲಿನಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಮಗುವಿನ ಪೀಳಿಮಾದರಿಯನ್ನು (genotype) ಹಸಿರು ಬಣ್ಣದಲ್ಲಿ ಹಾಗು ತೋರುಮಾದರಿಯನ್ನು (phenotype) ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ.]

A ಮತ್ತು B ಗಳೆರಡೂ ಮೇಲುಗಯ್ ಇಕ್ಕಳಿಗಳಾಗಿದ್ದು (dominant allele), ಇಳಿಗಯ್ ಇಕ್ಕಳಿಯಾದ (recessive allele) O ಇಕ್ಕಳಿಯ ತೋರುಮಾದರಿಯ (phenotype) ಮೇಲೆ ಮೇಲುಗಯ್ ಸಾದಿಸುತ್ತವೆ. ಹಾಗಾಗಿ, AO ಪೀಳಿಮಾದರಿಯನ್ನು (genotype) ಹೊಂದಿರುವ ಮನುಶ್ಯನಲ್ಲಿ, A ತೋರುಮಾದರಿ ಇರುತ್ತದೆ. OO ಪೀಳಿಮಾದರಿ ಇರುವವರಲ್ಲಿ, O ತೋರುಮಾದರಿ ಇರುತ್ತದೆ. A ಹಾಗು B ಇಕ್ಕಳಿಗಳು ಒಂದಕ್ಕೊಂದು ಕೂಡು-ಮೇಲುಗಯ್ (co-dominant) ಇಕ್ಕಳಿಗಳಾಗಿವೆ. ಹೆತ್ತವರ ಪಯ್ಕಿ, ಒಬ್ಬರಿಂದ A ಹಾಗು ಮತ್ತೊಬ್ಬರಿಂದ B ಇಕ್ಕಳಿಗಳನ್ನು ಮಗು ಪಡೆದರೆ, ಮಗುವಿನ ತೋರುಮಾದರಿ AB ಯಾಗಿರುತ್ತದೆ.

ABO ನೆತ್ತರು ಗುಂಪಿನ ಪೀಳಿಯರಿಮೆಯ ಬಗ್ಗೆ ತಿಳಿದುಕೊಳ್ಳಬೇಕಾದ ಮತ್ತೊಂದು ಮುಕ್ಯವಾದ ವಿಶಯ ಎಂದರೆ ‘‘ಬಾಂಬೆ ತೋರುಮಾದರಿ’ (Bombay phenotype). ಪೀಳಿಯರಿಮೆಯ ಹಿನ್ನೆಲೆಯಲ್ಲಿ, ಹೆತ್ತವರ ತೋರುಮಾದರಿಯನ್ನು (phenotype) ಆದರಿಸಿ ಮಗುವಿನ ABO ನೆತ್ತರು ಗುಂಪನ್ನು ಗುರುತಿಸುವಾಗ ಎಚ್ಚರ ವಹಿಸಬೇಕಾಗುತ್ತದೆ. ಏಕೆಂದರೆ ABO ಒಗ್ಗದಿಕಗಳಲ್ಲದೆ, H ಎಂಬ ಮತ್ತೊಂದು ಬಗೆಯ ಒಗ್ಗದಿಕವೂ ABO ನೆತ್ತರು ಗುಂಪನ್ನು ತೀರ‍್ಮಾನಿಸುವಲ್ಲಿ ಪಾಲ್ಗೊಳ್ಳುತ್ತದೆ.

ಸಾಮಾನ್ಯವಾಗಿ, A ನೆತ್ತರು ಬಗೆಯ ತಾಯಿಗೆ O ನೆತ್ತರು ಬಗೆಯ ಮಗುವಿದ್ದರೆ, ತಂದೆಯು O ನೆತ್ತರು ಗುಂಪನ್ನು ಹೊಂದಿರುತ್ತಾನೆ ಇಲ್ಲವೇ O ಇಕ್ಕಳಿಗಳ ಪೀಳಿಮಾದರಿಯನ್ನು (OO, AO, ಇಲ್ಲವೆ BO ಪೀಳಿಮಾದರಿ) ಹೊಂದಿರುತ್ತಾನೆ (ಚಿತ್ರ 3). ಈ ಬಗೆಯ ಮರುಪಡೆಯುವಿಕೆಯಲ್ಲಿ (inheritance), ಮಗು ತಂದೆಯ ಹಾಗು ತಾಯಿಗಳಿಬ್ಬರಿಂದ ಒಂದೊಂದು O ಪೀಳಿಯ ಇಕ್ಕಳಿಯನ್ನು ಪಡೆದುಕೊಂಡಿರುತ್ತದೆ. ಕೆಲವೊಮ್ಮೆ, O ಇಕ್ಕಳಿಗಳನ್ನು ಹೊಂದಿರದ ಹೆತ್ತವರಿಂದ O ನೆತ್ತರು ಬಗೆಯನ್ನು ಹೊಂದಿರುವ ಮಗು ಹುಟ್ಟಬಹುದು. ಇದಕ್ಕೆ ಕಾರಣ, ತಂದೆ-ತಾಯಿಗಳಿಂದ ಮಗು H ಒಗ್ಗದಿಕದ ಇಳಿಗಯ್ (recessive) ಇಕ್ಕಳಿಗಳನ್ನು ಮರುಪಡೆಯುವುದು.

Cardio_Vascular_System_5_7ಹಾಗಾದರೆ H ಒಗ್ಗದಿಕದ ತನಿಬಗೆ (specialty) ಏನು? ಯಾವುದೇ ಒಂದು ಅಡಕವನ್ನು (material) ಮಾಡಲು ಗೊತ್ತುಮಾಡಿದ ಮುನ್ನಡಕ (raw material/precursor) ಬೇಕು. ABO ನೆತ್ತರು ಗುಂಪಿಗೆ ಸಂಬಂದಿಸಿದಂತೆ A ಹಾಗು B ಅಡಕಗಳನ್ನು (ಒಗ್ಗದಿಕ ಕೂಡ ಒಂದು ಬಗೆಯ ಅಡಕ ಎಂದು ತಿಳಿದುಕೊಳ್ಳುವುದು) ಮಾಡಲು H ಒಗ್ಗದಿಕ ಎನ್ನುವ ಮುನ್ನಡಕ (precursor) ಬೇಕೇಬೇಕು.

ಜೊತೆಗೆ H ಮುನ್ನಡವನ್ನು B ಒಗ್ಗದಿಕವನ್ನಾಗಿಸಲು B ಎನ್ನುವ ದೊಳೆ (enzyme) ಕೂಡ ಇರಬೇಕು. B ದೊಳೆಯನ್ನು ಮಾಡಲು, ಆ ಮನುಶ್ಯನಲ್ಲಿ B ಇಕ್ಕಳಿಯು ಇರಬೇಕು. ಹಾಗೆಯೇ H ಮುನ್ನಡಕವನ್ನು A ಒಗ್ಗದಿಕವನ್ನಾಗಿಸಲು, A ದೊಳೆಯನ್ನು ಮಾಡುವ A ಇಕ್ಕಳಿಯು ಇರಬೇಕು. ಉದಾಹರಣೆಗೆ: B ಒಗ್ಗದಿಕವನ್ನು ಮಾಡಲು H ಮುನ್ನಡಕ ಹಾಗು B ದೊಳೆ ಇರಬೇಕು.

H ಮುನ್ನಡಕವನ್ನು ಮಾಡಲು, ಆ ಮನುಶ್ಯನಲ್ಲಿ H ಒಗ್ಗದಿಕದ ಮೇಲುಗಯ್ ಪೀಳಿಮಾದರಿ (HH/Hh) ಇರಬೇಕು. ಆದರೆ, ಚಿತ್ರ 4 ರಲ್ಲಿ ತೋರಿಸಿರುವಂತೆ (ಚಿತ್ರ 4) ತಂದೆ-ತಾಯಿಗಳಿಬ್ಬರಿಂದಲೂ H ಒಗ್ಗದಿಕದ ಇಳಿಗಯ್ ಇಕ್ಕಳಿಗಳನ್ನು (h) ಮಗು ಪಡೆದರೆ, ಮಗುವಿನಲ್ಲಿ ಇಳಿಗಯ್ ಪೀಳಿಮಾದರಿ (recessive phenotype) (hh) ಇರುತ್ತದೆ. ಈ ಮಗುವಿನಲ್ಲಿ H ಮುನ್ನಡಕವು ಇರುವುದಿಲ್ಲ. H ಮುನ್ನಡಕ ಇರದ ಕಾರಣ, A ಮತ್ತು/ಅತವ B ಒಗ್ಗದಿಕಗಳು ಇಲ್ಲವಾಗುತ್ತವೆ.

ಪೀಳಿಯರಿಮೆಯ ಮೂಲಕ ತಿಳಿದಿರುವುದೇನೆಂದರೆ, ಮೇಲುಗಯ್ ಪೀಳಿಮಾದರಿ (dominant genotype) ಇಲ್ಲದ ಹೊತ್ತಿನಲ್ಲಿ, ಇಳಿಗಯ್ ಪೀಳಿಮಾದರಿಯು (recessive genotype) ಹೊಮ್ಮಲು (expression) ಅವಕಾಶವಿಕೆ. A ಮತ್ತು B ಒಗ್ಗದಿಕಗಳನ್ನು ಮಾಡುವ ಮೇಲುಗಯ್ ಪೀಳಿ ಇಕ್ಕಳಿಗಳು ಇಲ್ಲದ ಕಾರಣ, ಈ ಮಗುವಿನಲ್ಲಿ O ಒಗ್ಗದಿಕದ ತೋರುಮಾದರಿಯು ಹೊಮ್ಮುತ್ತದೆ. ತೀರ ಕಡಿಮೆ ಜನಗಳಲ್ಲಿ ಕಾಣಸಿಗುವ ಈ ಬಗೆಯ ನೆತ್ತರುಗುಂಪಿನ ಮರುಪಡೆಯುವಿಕೆಯನ್ನು ಮೊದಲು ಗಮನಿಸಿದ್ದು ಬಾರತದ ಬಾಂಬೆ (ಇಂದಿನ ಮುಂಬಯ್) ಊರಿನಲ್ಲಿ. ಹಾಗಾಗಿ, ಇದಕ್ಕೆ ‘ಬಾಂಬೆ ತೋರುಮಾದರಿ’ (Bombay phenotype) ಎಂಬ ಹೆಸರು ಬಂತು.

Cardio_Vascular_System_5_8ಬರಹದ ಮುಂದಿನ ಕಂತಿನಲ್ಲಿ Rh ನೆತ್ತರು ಗುಂಪು ಹಾಗು ನೆತ್ತರು ಮಾರೆಡೆಗೊಳಿಸುವಿಕೆಯ (blood transfusion) ಬಗ್ಗೆ ತಿಳಿಸಿಕೊಡಲಾಗುವುದು

(ಮಾಹಿತಿ ಮತ್ತು ಚಿತ್ರ ಸೆಲೆಗಳು:1. anthro.palomar.edu,2. nobelprize.org, 3. medicine.mcgill.ca ) 

ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 4

ನೆತ್ತರು / ರಕ್ತ (Blood):

ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಹಿಂದಿನ ಬರಹವನ್ನು ಮುಂದುವರೆಸುತ್ತಾ, ಈ ಬಾಗದಲ್ಲಿ ನೆತ್ತರು ಇಲ್ಲವೇ ರಕ್ತ (blood) ಎಂದು ಗುರುತಿಸಲಾಗುವ ಹರಿಕದ (fluid) ಬಗ್ಗೆ ತಿಳಿಯೋಣ.

ಒಬ್ಬ ಮನುಶ್ಯನಲ್ಲಿ ನಾಲ್ಕರಿಂದ ಅಯ್ದು ಲೀಟರ್‍ನಶ್ಟು ನೆತ್ತರು ಇರುತ್ತದೆ. ನೆತ್ತರನ್ನು ’ನೀರ‍್ಬಗೆಯ ಕೂಡಿಸುವ ಗೂಡುಕಂತೆ’ (liquid connective tissue) ಎಂದು ಹೇಳಬಹುದು. ನೆತ್ತರು ಹತ್ತು ಹಲವು ಬಗೆಯ ಅಡಕಗಳನ್ನು (materials) ಸಾಗಿಸುವುದರ ಜೊತೆಗೆ ಆವಿ (gas), ಕಸ ಹಾಗು ಆರಯ್ವಗಳ (nutrients) ಒನ್ನೆಲೆತವನ್ನು (homeostasis) ಹತೋಟಿಯಲ್ಲಿಡುತ್ತದೆ. ನೆತ್ತರು ಮುಕ್ಯವಾಗಿ ನೆತ್ತರು ಗೂಡುಗಳು (blood cells) ಮತ್ತು ನೆತ್ತರ ರಸಗಳನ್ನು (plasma) ಹೊಂದಿರುತ್ತದೆ.

Cardio_Vascular_System_4_1ನೆತ್ತರು ಗೂಡುಗಳು: (ಚಿತ್ರ 1, 2, 3)
ನೆತ್ತರು ಗೂಡುಗಳಲ್ಲಿ ಮೂರು ಬಗೆ. ಕೆಂಪು ನೆತ್ತರು ಕಣಗಳು (red blood cells/RBC) , ಬೆಳ್ ನೆತ್ತರು ಕಣಗಳು (white blood cells/WBC), ಚಪ್ಪಟಿಕಗಳು ಇಲ್ಲವೇ ನೆತ್ತರುತಟ್ಟೆಗಳು (platelets). ಬರಹದ ಉಳಿದ ಬಾಗದಲ್ಲಿ ಕೆಳಗಿನ ಚುಟುಕ ಪದಗಳನ್ನು ಬಳಸಲಾಗುವುದು: ಕೆಂಪು ನೆತ್ತರು ಕಣ =ಕೆನೆ ಕಣ, ಬೆಳ್ ನೆತ್ತರು ಕಣ = ಬೆನೆ ಕಣ

Cardio_Vascular_System_4_2Cardio_Vascular_System_4_3

ಕೆನೆ ಕಣ (RBC): (ಚಿತ್ರ 1, 2, 3, 4, 5)

ಉಳಿದ ನೆತ್ತರು ಕಣಗಳಿಗೆ ಹೋಲಿಸಿದರೆ, ಹೆಚ್ಚಿನ ಸಂಕ್ಯೆಯಲ್ಲಿರುವ ಕೆನೆ ಕಣಗಳು, ಒಬ್ಬ ಹರಯದ ಮನುಶ್ಯನಲ್ಲಿ 2-3 x 1013 ರಶ್ಟು ಸಂಕ್ಯೆಯಲ್ಲಿರುತ್ತವೆ. ಇವುಗಳನ್ನು ಕೆಂಪು ಮೂಳೆಮಜ್ಜೆಯ (red bone marrow) ಕಾಂಡಗೂಡುಗಳು (stem cells) ಮಾಡುತ್ತವೆ. ಕ್ಶಣವೊಂದಕ್ಕೆ ಎರಡು ಮಿಲಿಯನ್ ನಶ್ಟು ಕೆನೆ ಕಣಗಳು ನಮ್ಮ ಮಯ್ಯಲ್ಲಿ ಮಾಡಲ್ಪಡುತ್ತವೆ.

ಇರ್‍ತಗ್ಗಿನ (biconcave) ಆಕಾರದಲ್ಲಿರುವ ಕೆನೆಕಣಗಳು, ತಗ್ಗಿನಿಂದಾಗಿ ನಡುವಿನಲ್ಲಿ ತೆಳ್ಳಗಿದ್ದು, ಉಬ್ಬಿದ ಹೊರಬಾಗವು ದಪ್ಪಗಿರುತ್ತದೆ. ಈ ಬಗೆಯ ರಚನೆಯು ಕೆನೆ ಕಣದ ಹೊರಮಯ್ ಹರವನ್ನು (surface area) ಹೆಚ್ಚಿಸುವುದರ ಜೊತೆಗೆ, ಸಣ್ಣ ನವಿರುನೆತ್ತರುಗೊಳವೆಗಳಲ್ಲಿ (capillary) ತೊಡಕಿಲ್ಲದೆ ನುಸುಳಲು ನೆರವಾಗುತ್ತದೆ.

Cardio_Vascular_System_4_4ಬಲಿಯುವಿಕೆಯ (mature) ಮಟ್ಟವನ್ನು ತಲುಪುತ್ತಿದ್ದಂತೆ ಕೆನೆ ಕಣಗಳಲ್ಲಿ ಕಂಡುಬರುವ ನಡುವಿಟ್ಟಳಗಳು (nucleus) ಕೆನೆ ಕಣದಿಂದ ಹೊರದೂಡಲ್ಪಡುತ್ತವೆ. ಈ ಬಗೆಯ ಮಾರ‍್ಪಾಟು, ಬಲಿತ ಕೆನೆ ಕಣಗಳಿಗೆ ಇರ್‍ತಗ್ಗಿನ ಆಕಾರ ಹಾಗು ಹೆಚ್ಚಿನ ಮಟ್ಟದ ಬಾಗುವಿಕೆಯ ಗುಣವನ್ನು ಕೊಡುತ್ತದೆ. ನಡುವಿಟ್ಟಳದಲ್ಲಿರುವ (nucleus) ಡಿ.ಎನ್.ಎ (DNA), ಗೂಡುಗಳಲ್ಲಿ ಉಂಟಾಗುವ ತೊಡಕುಗಳನ್ನು ಸರಿಪಡಿಸಲು ನೆರವಾಗುತ್ತದೆ. ಆದರೆ, ನಡುವಿಟ್ಟಳವನ್ನು ಹೊರದೂಡುವುದರಿಂದ, ಬಲಿತ ಕೆನೆ ಕಣದಲ್ಲಿ ಡಿ.ಎನ್.ಎ (DNA) ಇಲ್ಲವಾಗುತ್ತದೆ. ಡಿ.ಎನ್.ಎ ಇಲ್ಲದ ಕಾರಣ ಕೆನೆ ಕಣಗಳು, ತಮ್ಮಲ್ಲಿ ಉಂಟಾಗುವ ತೊಂದರೆಗಳನ್ನು ಸರಿಪಡಿಸಿಕೊಳ್ಳಲಾಗುವುದಿಲ್ಲ.

ಕೆನೆ ಕಣಗಳು ಉಸಿರುಚೀಲಗಳಿಂದ (lungs), ಗೂಡುಗಳಿಗೆ (cells) ಉಸಿರುಗಾಳಿಯನ್ನು (oxygen) ಹಾಗು ಗೂಡುಗಳಿಂದ ಉಸಿರುಚೀಲಗಳಿಗೆ ಕಾರ್ಬನ್ ಡಯಾಕ್ಸಾಯಡ್‍ನ್ನು (carbon dioxide) ಸಾಗಿಸಲು ನೆರವಾಗುತ್ತವೆ. ಈ ಕೆಲಸವನ್ನು ಮಾಡಲು ಕೆನೆ ಕಣಗಳು ರಕ್ತಬಣ್ಣಕ (hemoglobin) ಎಂಬ ಹೊಗರನ್ನು (pigment) ಹೊಂದಿರುತ್ತವೆ.

Cardio_Vascular_System_4_5ರಕ್ತಬಣ್ಣಕವು ಕಬ್ಬಿಣವನ್ನು ಹೊಂದಿರುವ ಮುನ್ನುಗಳಿಂದ (protein) ಮಾಡಲ್ಪಟ್ಟಿದೆ. ಗ್ಲೊಬುಲಿನ್ ಮುನ್ನು ಹಾಗು ಹೀಮ್ ತುಣುಕು ಒಟ್ಟಾಗಿ ಸೇರಿ ರಕ್ತಬಣ್ಣಕವನ್ನು ಮಾಡುತ್ತವೆ. ಹೀಮ್ ತುಣುಕು ಕಬ್ಬಿಣದ ಕಿರುತುಣುಕನ್ನು (ferrous ion) ಹೊಂದಿರುತ್ತದೆ. ಉಸಿರುಗಾಳಿಯನ್ನು ಕಬ್ಬಿಣದ ಕಿರುತುಣುಕು ಹಿಡಿದಿಟ್ಟುಕೊಳ್ಳುವ ಹರವನ್ನು ಹೊಂದಿದೆ. ಈ ಬಗೆಯಾಗಿ ಕಬ್ಬಿಣದ ಕಿರುತುಣುಕುಗಳನ್ನು ಹೊಂದಿರುವ ಕೆನೆ ಕಣದ ರಕ್ತಬಣ್ಣಕಗಳು ಉಸಿರುಗಾಳಿಯನ್ನು ದೊಡ್ಡ ಮಟ್ಟದಲ್ಲಿ ಕೂಡಿಡುವ ಹಾಗು ಸಾಗಿಸುವ ಅಳವನ್ನು ಪಡೆದುಕೊಂಡಿವೆ.

ಬೆನೆ ಕಣಗಳು (WBC): (ಚಿತ್ರ 1, 2, 3)
ನೆತ್ತರಿನಲ್ಲಿ ಬೆನೆ ಕಣಗಳ ಸಂಕ್ಯೆ ಕಡಿಮೆಯಿದ್ದರೂ, ಕಾಪೇರ‍್ಪಾಟಿನಲ್ಲಿ (immune system) ಇವುಗಳ ಪಾಲು ತುಂಬಾ ಹಿರಿದು. ನಮ್ಮ ಮಯ್ಯಿಗೆ ಎರಗುವ ಕುತ್ತುಗಳೊಡನೆ, ಹೊರಕುಳಿ (parasites), ಕೆಡುಕುಕಣಗಳೊಡನೆ (pathogens) ಹೋರಾಡಿ, ನಮ್ಮ ಮಯ್ಯನ್ನು ಕಾಪಾಡುವುದು ಬೆನೆ ಕಣಗಳ ಮುಕ್ಯ ಕೆಲಸ. ಈ ಬರಹದಲ್ಲಿ ಬೆನೆ ಕಣಗಳ ಚುಟುಕು ವಿವರವನ್ನು ಕೊಡಲಾಗುವುದು. ಕಾಪೇರ‍್ಪಾಟಿನ ಬಾಗದಲ್ಲಿ ಇವುಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುವುದು.

ಬೆನೆಕಣಗಳಲ್ಲಿ ಎರಡು ಬಗೆಗಳಿವೆ: ನುಚ್ಚಿನಕಣ (granulocytes) ಹಾಗು ನುಚ್ಚಿಲ್ಲದಕಣ (agranulocytes).

1) ನುಚ್ಚಿನಕಣಗಳು (granulocytes): ಈ ಬಗೆಯ ಬೆನೆ ಕಣಗಳು ತಮ್ಮ ಗೂಡುಕಟ್ಟುಗಳಲ್ಲಿ (cytoplasm) ದೊಳೆ ಗುಳ್ಳೆಗಳನ್ನು (enzyme vesicles) ಹೊಂದಿರುತ್ತವೆ. ದೊಳೆ ಗುಳ್ಳೆಗಳು, ನುಚ್ಚಿನಂತೆ (granular) ಕಾಣುವುದರಿಂದ, ಇವುಗಳನ್ನು ನುಚ್ಚಿನಕಣಗಳು ಎಂದು ಹೇಳಲಾಗುತ್ತದೆ.

ನುಚ್ಚಿನ ಕಣಗಳಲ್ಲಿ ಮೂರು ಬಗೆ: i) ಸಪ್ಪೆಬಣ್ಣೊಲವುಕಣ (neutrophils), ii) ಕೆಂಬಣ್ಣೊಲವುಕಣ (eosinophils), iii) ಮರುಹುಳಿಯೊಲವುಕಣ (basophils). ನುಚ್ಚಿನಕಣಗಳಲ್ಲಿರುವ ದೊಳೆಯ ಬಗೆ ಹಾಗು ಬಣ್ಣಗಳ ಜೊತೆ ನುಚ್ಚಿನಕಣಗಳನ್ನು ಬೆರೆಸಿದಾಗ ಅವು ಯಾವ ಬಣ್ಣದೆಡೆಗೆ ಒಲವು ತೋರುತ್ತವೆ ಎಂಬ ಅಂಶಗಳ ಮೇಲೆ ನುಚ್ಚಿನಕಣಗಳನ್ನು ಹೆಸರಿಸಲಾಗಿದೆ.

i) ಸಪ್ಪೆಬಣ್ಣೊಲವುಕಣ (neutrophils): 40-70% ಬೆನೆ ಕಣಗಳು ಸಪ್ಪೆಬಣ್ಣೊಲವುಕಣಗಳಾಗಿರುತ್ತವೆ. ಮೂಳೆಮಜ್ಜೆಯ (bone marrow) ಕಾಂಡಗೂಡುಗಳಿಂದ (stem cells) ಮಾಡಲ್ಪಡುವ ಇವು, ಕೆಡುಕುಕಣಗಳು (pathogens), ಅದರಲ್ಲೂ ದಂಡಾಣುಗಳು (bacteria) ನಮ್ಮ ಮಯ್ಯನ್ನು ಹೊಕ್ಕಾಗ, ಕಾಪೇರ‍್ಪಾಟಿನ ಮುಂಚೂಣಿಯ ಮೊನೆಯಾಳುಗಳಾಗಿ (soldiers) ಎಚ್ಚೆತ್ತು ನೆತ್ತರಿನಿಂದ ಕೆಡುಕುಕಣಗಳು ನುಸುಳಿದ ಮಯ್ ಬಾಗಕ್ಕೆ ಓಡುತ್ತವೆ. ಹಾಗು ದಂಡಾಣುಗಳಿಂದ ಮಯ್ಯಿಗೆ ತಗಲಬಹುದಾದ ತೊಡಕುಗಳನ್ನು ತಡೆಯುತ್ತವೆ.

ii) ಕೆಂಬಣ್ಣೊಲವುಕಣ (eosinophils): ಒಟ್ಟು ಬೆನೆ ಕಣಗಳಲ್ಲಿ 1-6% ಅಶ್ಟು ಕೆಂಬಣ್ಣೊಲವುಕಣಳಾಗಿರುತ್ತವೆ. ನಮ್ಮ ಮಯ್ಯನ್ನು ಹೊಕ್ಕುವ ಹೊರಕುಳಿಗಳನ್ನು (parasites) ಸದೆಬಡಿಯಲು ನೆರವಾಗುತ್ತವೆ.

iii) ಮರುಹುಳಿಯೊಲವುಕಣ (basophils): ತುಂಬಾ ಕಡಿಮೆ ಮಟ್ಟದಲ್ಲಿರುವ ಇವು, ನೆತ್ತರಿನಲ್ಲಿ ಹರಿದಾಡುವ ಬೆನೆ ಕಣಗಳ 0.01%-0.3% ಅಶ್ಟು ಬಾಗಗಳನ್ನು ಮಾಡುತ್ತವೆ. ಮರುಹುಳಿಯೊಲವುಕಣಗಳು, ಒಗ್ಗದಿಕೆಯಂತಹ (allergy) ಒಂದಶ್ಟು ಗೊತ್ತುಮಾಡಿದ ಉರಿಯೂತಗಳ (inflammation) ಹಮ್ಮುಗೆಗಳಲ್ಲಿ ಪಾಲ್ಗೊಳ್ಳುತ್ತದೆ.

2) ನುಚ್ಚಿಲ್ಲದಕಣಗಳು (agranulocytes): ಗೂಡುಕಟ್ಟುಗಳಲ್ಲಿ (cytoplasm) ದೊಳೆ ಗುಳ್ಳೆಗಳನ್ನು (enzyme vesicles) ಹೊಂದಿರದ ಬೆನೆ ಕಣಗಳನ್ನು ನುಚ್ಚಿಲ್ಲದಕಣಗಳು ಎಂದು ಕರೆಯಬಹುದು. ಇವುಗಳಲ್ಲಿ ಎರಡು ಬಗೆ.

i) ಹಾಲ್ರಸ ಕಣ (lymphocytes): 30% ರಶ್ಟು ಬೆನೆ ಕಣಗಳು ಹಾಲ್ರಸ ಕಣಗಳಾಗಿರುತ್ತವೆ. ಇವು ಮುಕ್ಯವಾಗಿ ನಮ್ಮ ಮಯ್ಯೊಳಕ್ಕೆ ನುಸುಳುವ ಕೆಡುಕುಕಣಗಳ (pathogens) ಎದುರಾಗಿ ಉಸಿರಿ-ಎದುರುಕಗಳನ್ನು (antibody) ಮಾಡುವ ಹಾಗು ನಂಜುಕಣಗಳಿಗೆ (virus) ಮುತ್ತಿಗೆ ಹಾಕುವ ಕೆಲಸವನ್ನು ಮಾಡುತ್ತವೆ.

ii) ಒಂಜೀವಕಣ (monocytes): ಬೆನೆ ಕಣಗಳಲ್ಲೇ ದೊಡ್ಡ ಗಾತ್ರದ ಗೂಡಾದ ಒಂಜೀವಕಣಗಳು, ಬೆನೆ ಕಣಗಳ 2-10% ನಶ್ಟರಿತ್ತವೆ. ಮಯ್ಯಲ್ಲಿ ಡೊಳ್ಳುಮುಕ್ಕಗಳ (macrophages) ಸಂಕೆ ಕಡಿಮೆಯಾದಾಗ ಇಲ್ಲವೆ ಉರಿಯೂತದ ಹಮ್ಮುಗೆಯಲ್ಲಿ ಹೆಚ್ಚಿನ ಸಂಕೆಯ ಡೊಳ್ಳುಮುಕ್ಕಗಳು ಬೇಕಾದಾಗ, ಒಂಜೀವಕಣಗಳು, ಡೊಳ್ಳುಮುಕ್ಕಗಳಾಗಿ ಬದಲಾಗಿ, ಕಾಪೇರ‍್ಪಾಟಿನಲ್ಲಿ (immune system) ಪಾಲ್ಗೊಳ್ಳುತ್ತವೆ.

ಚಪ್ಪಟಿಕಗಳು ಇಲ್ಲವ ೇನೆತ್ತರುತಟ್ಟೆಗಳು (platelets): (ಚಿತ್ರ 1, 2, 3, 6)

ಕೆಂಪು ಮೂಳೆಮಜ್ಜೆಯಲ್ಲಿ (red bone marrow) ನೆಲೆಸಿರುವ ಹಿರಿನಡುವಣಕಣಗಳ (megakaryocyte) ಚೂರಾಗುವಿಕೆಯಿಂದ ಸಾವಿರಾರು ಸಂಕ್ಯೆಯಲ್ಲಿ ಮಾಡಲ್ಪಡುವ ಚಪ್ಪಟಿಕಗಳು, ಹರಿಸುವಿಕೆಯ ಏರ‍್ಪಾಟಿನಲ್ಲಿರುವ ನೆತ್ತರಿನ ಜರಿಯನ್ನು ಸೇರುತ್ತದೆ. ನಡುವಿಟ್ಟಳವಿಲ್ಲದ (nucleus), ಈ ಚಪ್ಪಟಿಕಗಳು ಹೆಚ್ಚೆಂದರೆ ಒಂದು ವಾರದವರೆಗೆ ಬದುಕಬಹುದು.

ಚಪ್ಪಟ್ಟೆಯಾದ ಕಿರುಬಿಲ್ಲೆಗಳಂತಿರುವ ಚಪ್ಪಟಿಕಗಳು, ನೆತ್ತರು ಹೆಪ್ಪುಗಟ್ಟುವಿಕೆಯಲ್ಲಿ (blood clotting) ನೆರವಾಗುತ್ತದೆ. ನೆತ್ತರುಗೊಳವೆಗಳ ಗೋಡೆಯಲ್ಲಿ ಬಿರುಕು ಇಲ್ಲವೇ ಇನ್ಯಾವುದೇ ತೊಂದರೆಯಾದಾಗ, ಕೊಳವೆಗಳ ಹೊರಕ್ಕೆ ನೆತ್ತರು ಜಿನುಗದಂತೆ ತಡೆಯುವ ಮೂಲಕ ನೆತ್ತರಿನ ಹೆಪ್ಪುಗಟ್ಟುವಿಕೆ ಮಯ್ ಒನ್ನೆಲೆತವನ್ನು (homeostasis) ಕಾಪಾಡುತ್ತದೆ. ಗಾಯವಾದಾಗ ಮಯ್ಯಿಂದ ಹೊರಗೆ ನೆತ್ತರು ಸೋರದಂತೆ, ನೆತ್ತರನ್ನು ಹೆಪ್ಪುಗಟ್ಟುವಂತೆ ಮಾಡುವುದು ಈ ಚಪ್ಪಟಿಕಗಳೇ.

ನೆತ್ತರು ಹೇಗೆ ಹೆಪ್ಪುಗಟ್ಟುತ್ತದೆ?: (ಚಿತ್ರ 6)

ಅಂಟಿಕೊಳ್ಳುವಿಕೆ (adhesion): ನೆತ್ತರುಗೊಳವೆಯ ಗೋಡೆಯಲ್ಲಿ ಬಿರುಕುಂಟಾದ ಬಾಗದ ಸುತ್ತ-ಮುತ್ತ ಚಪ್ಪಟಿಕಗಳು ಅಂಟಿಕೊಳ್ಳುತ್ತವೆ. ii) ಚುರುಕುಗೊಳಿಸುವಿಕೆ (activation): ಗೋಡೆಗೆ ಅಂಟಿಕೊಂಡ ಚಪ್ಪಟಿಗಳು, ತಮ್ಮ ಆಕಾರವನ್ನು ಬದಲಿಸಿಕೊಳ್ಳುವ ಮೂಲಕ ತಮಲ್ಲಿರುವ ಪಡೆಕಗಳನ್ನು (receptors) ಚುರುಕುಗೊಳಿಸಿಕೊಳ್ಳುತ್ತವೆ (activation). iii) ಒಗ್ಗೂಡುವಿಕೆ (aggregation): ಚುರುಕುಗೊಂಡ ಪಡೆಕಗಳ ನೆರವಿನಿಂದ, ಚಪ್ಪಟಿಕಗಳು ಒಂದಕ್ಕೊಂದು ಬೆಸಿದುಕೊಳ್ಳುವ ಮೂಲಕ ನೆತ್ತರುಗೊಳವೆಯ ಬಿರುಕಿನ ಬಾಗದಲ್ಲಿ ‘ಚಪ್ಪಟಿಕ ಬೆಣೆ’ಯನ್ನು (platelet plug) ಮಾಡುತ್ತವೆ. ಚಪ್ಪಟಿಕ ಬೆಣೆಯು, ಒನ್ನೆಲೆತವನ್ನು ಉಂಟುಮಾಡುವ ಮೊದಲನೆಯ ಹಂತವಾಗಿದೆ (primary hemostasis).

Cardio_Vascular_System_4_6ಎರಡನೆಯ ಹಂತವಾಗಿ ಚಪ್ಪಟಿಕ ಬೆಣೆಯು, ಹೆಪ್ಪುಗಟ್ಟುವಿಕೆಯ ಜರಿಯನ್ನು (coagulation cascade) ಚುರುಕುಗೊಳಿಸುತ್ತದೆ. ಈ ಜರಿಯಲ್ಲಿ ಹಲವು ಬಗೆಯ ಕ್ರಿಯೆ ಹಾಗು ಪ್ರತಿಕ್ರಿಯೆಗಳು ಉಂಟಾಗಿ, ತಂತುಗಳು (fibrin) ಮಾಡಲ್ಪಡುತ್ತವೆ. ಹೀಗೆ ಮಾಡಲ್ಪಟ್ಟ ತಂತು, ಚಪ್ಪಟಿಕ ಬೆಣೆಯ ಮೇಲೆ ಹರಡಿಕೊಳ್ಳುತ್ತವೆ. ಚಪ್ಪಟಿಕ ಬೆಣೆಯ ಮೇಲೆ ಹರಡಿಕೊಂಡ ತಂತು ಬಲೆಯು ಕೆನೆ ಕಣಗಳನ್ನೂ ತನ್ನ ಬಲೆಗೆ ಬೀಳಿಸಿಕೊಳ್ಳುತ್ತವೆ. ಈ ಬಗೆಯಾಗಿ ಬಿರುಕಾದ ನೆತ್ತರುಗೊಳವೆಯ ಗೋಡೆಯಲ್ಲಿ ಹೆಪ್ಪು (clot) ಮಾಡಲ್ಪಡುತ್ತದೆ. ನಿದಾನವಾಗಿ ನೆತ್ತರುಗೊಳವೆಯ ಗಾಯವು ಮಾಯುತ್ತಿದ್ದಂತೆ (heal), ಚಪ್ಪಟಿ-ತಂತು ಬೆಣೆ ಕರಗುತ್ತಾ ಹೋಗುತ್ತದೆ.

ನೆತ್ತರು ಕಣಗಳ ಬಗೆ ಹಾಗು ಅವು ಮಾಡುವ ಕೆಲಸಗಳ ಬಗೆಗಳನ್ನು ಕೆಳಗಿನ ಅನಿಮೇಶನ್‍ಲ್ಲಿ ತುಂಬಾ ಸುಲಬವಾಗಿ ತಿಳಿಯುವಂತೆ ತೋರಿಸಲಾಗಿದೆ.

ನೆತ್ತರುರಸ/ರಕ್ತರಸ (plasma):

ನೀರ‍್ಬಗೆ (liquid) ಬಾಗವಾದ ನೆತ್ತರು-ರಸವು ನೆತ್ತರಿನ ಒಟ್ಟು ಮೊತ್ತದಲ್ಲಿ 55% ರಶ್ಟಿರುತ್ತದೆ. ನೆತ್ತರು-ರಸವು ಮುಕ್ಯವಾಗಿ ನೀರು, ಮುನ್ನುಗಳು, ಕರಗಿದ ಅಂಶಗಳು, ಹೀಗೆ ಹತ್ತು ಹಲವು ಬಗೆಯ ಅಡಕಗಳನ್ನು ಒಳಗೊಂಡಿದೆ. 90% ರಶ್ಟು ನೆತ್ತರುರಸವು ನೀರಿನಿಂದ ಮಾಡಲ್ಪಟ್ಟಿದೆ. ನೆತ್ತರುರಸದಲ್ಲಿರುವ ಮುನ್ನುಗಳಲ್ಲಿ ಮುಕ್ಯವಾಗಿ ಉಸಿರಿ-ಎದುರುಕಗಳು (antibody) ಹಾಗು ಆಲ್ಬುಮಿನ್ (albumin) ಒಳಗೊಂಡಿದೆ.

ಕಾಪೇರ‍್ಪಾಟಿನ ಬಾಗವಾದ ಉಸಿರಿ-ಎದುರುಕಗಳು, ನಮ್ಮ ಮಯ್ಯನ್ನು ಹೊಕ್ಕುವ ಕೆಡುಕುಕಣಗಳ (pathogens) ಹೊರಮಯ್ ಮೇಲಿರುವ ಒಗ್ಗದಿಕಗಳಿಗೆ (antigen) ಬೆಸಿದುಕೊಳ್ಳುತ್ತವೆ. ಆಲ್ಬುಮಿನ್, ಗೂಡುಗಳಿಗೆ ಸಮಬಿಗುಪಿನ (isotonic) ನೀರ‍್ಬಗೆಯನ್ನು ಒದಗಿಸುವ ಮೂಲಕ ಮಯ್ಯಲ್ಲಿನ ಪರೆತೂರ‍್ಪಿನ (osmotic) ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ನೆತ್ತರು-ರಸವು ಹತ್ತು ಹಲವು ಬಗೆಯ ಅಂಶಗಳನ್ನು ಕರಗಿದ ರೂಪದಲ್ಲಿ ಹಿಡಿದಿಟ್ಟುಕೊಂಡಿರುತ್ತದೆ; ಅವುಗಳಲ್ಲಿ ಮುಕ್ಯವಾದ ಅಂಶಗಳೆಂದರೆ, ಗ್ಲುಕೋಸ್, ಉಸಿರುಗಾಳಿ (oxygen), ಕಾರ್ಬನ್ ಡಾಯಾಕ್ಸಾಯಡ್, ಮಿಂಚೋಡುಕಗಳು (electrolytes), ಆರಯ್ವಗಳು (nutrients) ಹಾಗು ಗೂಡುಗಳಿಂದ ಹೊರದೂಡಲ್ಪಡುವ ತರುಮಾರ‍್ಪಿನ ಕಸಗಳು (metabolic waste). ನೆತ್ತರು ಮಯ್ಬಾಗಗಳಲ್ಲಿ ಹರಿದಾಡುವಾಗ, ನೆತ್ತರು-ರಸವು ಈ ಎಲ್ಲಾ ಅಂಶಗಳನ್ನು ಸಾಗಿಸುವ ಒಯ್ಯುಗದ (medium) ಕೆಲಸವನ್ನು ಮಾಡುತ್ತದೆ.

ಸರಣಿಯ ಮುಂದಿನ ಬಾಗದಲ್ಲಿ ನೆತ್ತರು/ರಕ್ತದ ಗುಂಪುಗಳ ಬಗ್ಗೆ ತಿಳಿಸಲಾಗುವುದು.

(ಮಾಹಿತಿ ಮತ್ತು ಚಿತ್ರಗಳ ಸಲೆಗಳು: 1) britannica.com, 2) wikipedia.org, 3) healtheducare.com, 4) seplessons.ucsf.edu, 5) bio.utexas.edu
6) classroom.sdmesa.edu, 7) www.innerbody.com)

ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 3

ನೆತ್ತರು ಹರಿಯುವಿಕೆಯ ಏರ‍್ಪಾಟು:

ಹಿಂದಿನ ಎರಡು  ಕಂತುಗಳಲ್ಲಿ (1, 2) ಎದೆಗುಂಡಿಗೆ (heart) ಹಾಗು ನೆತ್ತರುಗೊಳವೆಗಳ (blood vessels) ರಚನೆಯ ಬಗ್ಗೆ ತಿಳಿಸಿಕೊಡಲಾಗಿತ್ತು. ಈ ಕಂತಿನಲ್ಲಿ ಗುಂಡಿಗೆ-ನೆತ್ತರುಗೊಳವೆಗಳಲ್ಲಿ ನೆತ್ತರು ಹರಿಯುವ ಬಗೆಗಳನ್ನು ತಿಳಿದುಕೊಳ್ಳೋಣ.

ನಮ್ಮ ಮಯ್ಯಲ್ಲಿ ನೆತ್ತರು (ರಕ್ತ) ಮುಕ್ಯವಾಗಿ ಎರಡು ಬಗೆಯಲ್ಲಿ ಹರಿಯುತ್ತದೆ. ಅವು ಯಾವುವೆಂದರೆ ಉಸಿರುಚೀಲದ ಹರಿಯುವಿಕೆ (pulmonary circulation) ಹಾಗು ಏರ‍್ಪಡಿತದ ಹರಿಯುವಿಕೆ (systemic circulation).

ಈ ಎರಡು ಬಗೆಗಳಲ್ಲದೆ, ಮತ್ತೆರಡು ಬಗೆಯ ನೆತ್ತರು ಹರಿಯುವಿಕೆಗಳನ್ನು ಕಾಣಬಹುದು:

1) ಗುಂಡಿಗೆಯ ಹರಿಯುವಿಕೆ (coronary circulation)

2) ಈಲಿ-ತೂರುಗಂಡಿಯ ಹರಿಯುವಿಕೆ (hepatic portal circulation).

Cardio_Vascular_System_3_1ಈಗ ಈ ನಾಲ್ಕೂ ಬಗೆಯ ಹರಿಯುವಿಕೆಗಳ ಬಗ್ಗೆ ತಿಳಿಯೋಣ.

ಉಸಿರುಚೀಲದ ಹರಿಯುವಿಕೆ (pulmonary circulation):

ಉಸಿರುಚೀಲದ ಹರಿಯುವಿಕೆಯಲ್ಲಿ ನೆತ್ತರು (ರಕ್ತ), ಗುಂಡಿಗೆಯಿಂದ ಉಸಿರುಚೀಲಗಳಿಗೆ (lungs) ಹಾಗು ಉಸಿರುಚೀಲದಿಂದ ಗುಂಡಿಗೆಗೆ ಹರಿಯುತ್ತದೆ. ಈ ಬಗೆಯ ಹರಿಯುವಿಕೆಯಲ್ಲಿ:

i) ಮಯ್ ಬಾಗಗಳಿಂದ ಒಟ್ಟುಗೂಡಿಸಲ್ಪಟ್ಟ ಕಡಿಮೆ ಮಟ್ಟದಲ್ಲಿ ಉಸಿರುಗಾಳಿಯನ್ನು (oxygen) ಹೊಂದಿರುವ ನೆತ್ತರು ಮೇಲಿನ ಹಾಗು ಕೆಳಗಿನ ಉಸಿರಿಳಿ-ನೆತ್ತರುಗೊಳವೆಗಳ (vena cava) ಮೂಲಕ ಬಲ ಸೇರುಗೋಣೆಯನ್ನು (right atrium) ತಲುಪುತ್ತದೆ.

ii) ಬಲ ಸೇರುಗೋಣೆಯ (right atrium) ನೆತ್ತರು ಮೂರ‍್ತುದಿ ತೆರಪನ್ನು (tricuspid valve) ತಳ್ಳಿಕೊಂಡು, ಬಲ ತೊರೆಕೋಣೆಯನ್ನು (right ventricle) ಸೇರುತ್ತದೆ.

iii) ಗುಂಡಿಗೆಯ ಬಲ ತೊರೆಗೋಣೆಯಲ್ಲಿನ ನೆತ್ತರು ಉಸಿರುಚೀಲದ ತೊರೆನೆತ್ತರುಗೊಳವೆಗಳ (pulmonary artery) ನೆರವಿನಿಂದ ಉಸಿರುಚೀಲವನ್ನು (lungs) ಮುಟ್ಟುತ್ತದೆ.

iv) ಉಸಿರುಚೀಲವು ನೆತ್ತರನ್ನು ಉಸಿರುಗಾಳಿಯಿಂದ ತಣಿಸುತ್ತದೆ (ಉಸಿರುಚೀಲವು ನೆತ್ತರನ್ನು ಉಸಿರುಗಾಳಿಯಿಂದ ತಣಿಸುವ ಹಮ್ಮುಗೆಯ ಬಗ್ಗೆ ಮತ್ತಶ್ಟು ತಿಳಿದುಕೊಳ್ಳಲು ಉಸಿರೇರ‍್ಪಾಟಿನ ಹೊರ ಉಸಿರಾಟದ ಬರಹವನ್ನು ಓದುವುದು).

v) ಉಸಿರುಗಾಳಿಯಿಂದ ಹುಲುಸಾದ ನೆತ್ತರು ಉಸಿರುಚೀಲದ ಸೇರುಗೊಳವೆಗಳ (pulmonary vein) ಮೂಲಕ ಎಡ ಸೇರುಗೋಣೆಯನ್ನು (left atrium) ತಲುಪುತ್ತದೆ.

vi) ಎಡ ಸೇರುಗೋಣೆಯಿಂದ ನೆತ್ತರು, ಇರ‍್ತುದಿ ತೆರಪುಗಳ (bicuspid valve) ಮೂಲಕ ಎಡತೊರೆಗೋಣೆಯನ್ನು (left ventricle) ಸೇರುತ್ತದೆ.

ಏರ‍್ಪಡಿತದ ಹರಿಯುವಿಕೆ (systemic circulation): (ಚಿತ್ರ 1)

ಗುಂಡಿಗೆ ಮತ್ತು ಉಸಿರುಚೀಲಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮಯ್ ಬಾಗಗಳ ಗೂಡುಕಟ್ಟುಗಳಿಗೆ (tissues) ಉಸಿರುಗಾಳಿಯಿಂದ (oxygen) ಹುಲುಸಾದ ನೆತ್ತರನ್ನು ತಲುಪಿಸುವ ಹಾಗು ಉಸಿರುಗಾಳಿಯಿಂದ (oxygen) ಬರಿದಾದ ನೆತ್ತರನ್ನು ಗುಂಡಿಗೆಗೆ ಮರಳಿಸುವಲ್ಲಿ ನೆರವಾಗುವ ಹರಿಯುವಿಕೆಯನ್ನು ಏರ‍್ಪಡಿತ ಹರಿಯುವಿಕೆ ಎಂದು ಹೇಳಲಾಗುತ್ತದೆ. ಈ ಸುತ್ತಿನ (loop) ಹರಿಯುವಿಕೆ ಹೀಗಿದೆ:

i) ಉಸಿರುಚೀಲದ ಹರಿಯುವಿಕೆಯ (pulmonary circulation) ನೆರವಿನಿಂದ ಎಡ ತೊರೆಗೋಣೆಯನ್ನು (left ventricle) ತಲುಪಿದ ಉಸಿರುಗಾಳಿಯಿಂದ ಕೂಡಿದ ನೆತ್ತರು ಉಸಿರು-ನೆತ್ತರುಗೊಳವೆಯನ್ನು (aorta) ಸೇರುತ್ತದೆ.

ii) ಉಸಿರು-ನೆತ್ತರುಗೊಳವೆಯಿಂದ (aorta) ದೊಡ್ಡತೊರೆನೆತ್ತರುಗೊಳವೆಗಳು (large arteries) , ಸಣ್ಣತೊರೆನೆತ್ತರುಗೊಳವೆಗಳು (small arteries) ಹಾಗು ನವಿರು ತೊರೆನೆತ್ತರುಗೊಳವೆಗಳ (arterioles) ಮೂಲಕ ನವಿರುನೆತ್ತರುಗೊಳವೆಯನ್ನು (capillaries) ತಲುಪುತ್ತದೆ.

iii) ನವಿರುನೆತ್ತರುಗೊಳವೆಗಳಲ್ಲಿ ನೆತ್ತರಿನ ಉಸಿರುಗಾಳಿಯು ಗೂಡುಕಟ್ಟುಗಳನ್ನೂ, ಗೂಡುಕಟ್ಟುಗಳ ಕಾರ‍್ಬನ್ ಡಯಾಕಾಯ್ಡ್ (carbon di-oxide) ನೆತ್ತರನ್ನು ಸೇರಿಕೊಳ್ಳುತ್ತದೆ. (ಇದರ ಬಗ್ಗೆ ಮತ್ತಶ್ಟು ತಿಳಿದುಕೊಳ್ಳುವ ಒಲವಿದ್ದರೆ, ಉಸಿರೇರ‍್ಪಾಟಿನ ಒಳ ಉಸಿರಾಟದ ಬಾಗವನ್ನು ಓದುವುದು).

iv) ಉಸಿರುಗಾಳಿಯಿಂದ ಬರಿದಾದ, ಕಾರ‍್ಬನ್ ಡಯಾಕಾಯ್ಡ್ ನಿಂದ ತುಂಬಿದ ನೆತ್ತರು, ನವಿರುಸೇರುಗೊಳವೆಗಳು (venules) ಹಾಗು ಸೇರುನೆತ್ತರುಗೊಳವೆಗಳಲ್ಲಿ (veins) ಸಾಗಿ, ಉಸಿರಿಳಿ-ನೆತ್ತರುಗೊಳವೆಗಳನ್ನು (vena cava) ಹಾಯ್ದು, ಗುಂಡಿಗೆಯ ಬಲ ಸೇರುಗೋಣೆಯನ್ನು (right atrium) ತಲುಪುತ್ತದೆ.

ಮೇಲಿನ ಹರಿಯುವಿಕೆಯ ಹಂತಗಳಿಂದ ತಿಳಿದುಬರುವುದೇನೆಂದರೆ, ಮಯ್ಯ ಇತರ ಅಂಗಗಳಿಂದ ತಂದ, ಉಸಿರ‍್ಗಾಳಿ ಕಡಿಮೆಯಿರುವ ನೆತ್ತರಿಗೆ ಸಾಕಶ್ಟು ಉಸಿರ‍್ಗಾಳಿಯನ್ನು ತುಂಬುವ ಅರಿದಾದ ಕೆಲಸ ಇಲ್ಲಿ ನಡೆಯುತ್ತದೆ. ನೆತ್ತರು ಹರಿಯುವಿಕೆಯಲ್ಲಿ ಉಸಿರ‍್ಗಾಳಿ (oxygen) ಮತ್ತು ಕಾರ‍್ಬನ್ ಡಯಾಕಾಯ್ಡ್ ಮಟ್ಟವನ್ನು ಕೆಳಗಿನ ಅನಿಮೇಶನ್ ನಲ್ಲಿ ನೋಡಬಹುದು.

cardio-vasuclar_system_3_2(ಉಸಿರುಚೀಲದಲ್ಲಿ ಉಸಿರ‍್ಗಾಳಿಯಿಂದ ತಣಿದ ನೆತ್ತರು ಮಯ್ಯಯ ಎಲ್ಲ ಬಾಗಕ್ಕೂ ತಲುಪಿ, ಅವುಗಳಿಗೆ ಕಸುವು ಉಣಿಸಿ ಮರಳುವಾಗ ಕರಿಗಾಳಿಯನ್ನು ಪಡೆದುಕೊಂಡು ಗುಂಡಿಗೆಯ ಬಲ ಸೇರುಗೋಣೆಗೆ ಸೇರುತ್ತಿರುವುದನ್ನು ತಿಟ್ಟದಲ್ಲಿ ಚುಕ್ಕಿಯ ಸಾಗಾಟದ ಮೂಲಕ ಕಾಣಬಹುದು.)

ಗುಂಡಿಗೆಯ ಹರಿಯುವಿಕೆ (coronary circulation):

Cardio_Vascular_System_3_3ಮಯ್ಯಲ್ಲಿನ ಎಲ್ಲಾ ಬಾಗಕ್ಕೂ ನೆತ್ತರನ್ನು ತಲುಪಿಸುವ ಕೆಲಸವನ್ನು ಮಾಡುವ ಗುಂಡಿಗೆಗೂ (heart) ಉಸಿರುಗಾಳಿ ಹಾಗು ಆರಯ್ವಗಳು ಬೇಕು. ಇದಕ್ಕಾಗಿ ಗುಂಡಿಗೆಯು ತನ್ನದೇ ಒಂದು ನೆತ್ತರುಗೊಳವೆಗಳ ಗುಂಪನ್ನು ಹೊಂದಿರುತ್ತದೆ. ಉಸಿರು-ನೆತ್ತರುಗೊಳವೆಯಿಂದ (aorta) ಎಡ ಮತ್ತು ಬಲ ಗುಂಡಿಗೆ ತೊರೆನೆತ್ತರುಗೊಳವೆಗಳು (coronary arteries) ಕವಲೊಡೆದು, ಗುಂಡಿಯ ಎಡ ಹಾಗು ಬಲ ಬಾಗಗಳಿಗೆ ನೆತ್ತರನ್ನು ಸಾಗಿಸುತ್ತವೆ.

ಗುಂಡಿಗೆಯ ಹಿಂಬದಿಯಲ್ಲಿ ಗುಂಡಿಗೆಗುಳಿ (coronary sinus) ಎಂಬ ಸೇರುಗೊಳವೆಯು (vein), ಗುಂಡಿಗೆ ಕಂಡಗಳಿಂದ ಉಸಿರುಗಾಳಿಯು ಬರಿದಾದ ನೆತ್ತರನ್ನು ಉಸಿರಿಳಿ-ಸೇರುಗೊಳವೆಗೆ (vena cava) ಬಸಿಯುತ್ತದೆ. ಉಸಿರಿಳಿ-ನೆತ್ತರುಗೊಳವೆಯಿಂದ ನೆತ್ತರು ಬಲ ಸೇರುಗೋಣೆಯನ್ನು (right atrium) ಸೇರುತ್ತದೆ. ಈ ನೆತ್ತರು ಉಸಿರುಗಾಳಿಯಿಂದ ಕಳೆಯೇರಿಸಿಕೊಳ್ಳಲು (rejuvenate) ಉಸಿರುಚೀಲದ ಹರಿಯುವಿಕೆಯ ನೆರವಿನಿಂದ, ಉಸಿರುಚೀಲದೆಡೆಗೆ ಸಾಗುತ್ತದೆ.

ಈಲಿ-ತೂರುಗಂಡಿಯ ಹರಿಯುವಿಕೆ (hepatic portal circulation):

Cardio_Vascular_System_3_4
ಸಾಮಾನ್ಯವಾಗಿ ಸೇರುನೆತ್ತರುಗೊಳವೆಗಳು (veins) ನೆತ್ತರನ್ನು ಗುಂಡಿಗೆಯ ಕಡೆ ಸಾಗಿಸುತ್ತವೆ. ಆದರೆ ಹೊಟ್ಟೆ ಹಾಗು ಕರುಳುಗಳ (intestine) ಸೇರುನೆತ್ತರುಗೊಳವೆಗಳು ನೆತ್ತರನ್ನು, ಈಲಿ-ತೂರುಗಂಡಿಯ ಸೇರುನೆತ್ತರುಗೊಳವೆಯ (hepatic portal vein) ಮೂಲಕ, ನೆತ್ತರನ್ನು ಈಲಿಗೆ (liver) ಸಾಗಿಸುತ್ತವೆ.

ಅರಗೇರ‍್ಪಾಟಿನ (digestive system) ಬಾಗಗಳಾದ ಹೊಟ್ಟೆ ಹಾಗು ಕರುಳುಗಳು ಸೇರುನೆತ್ತರುಗೊಳವೆಗಳ ನೆತ್ತರು, ಆಹಾರದಿಂದ ಹೀರಿಕೊಂಡ ಆರಯ್ವ (nutrients) ಹಾಗು ರಾಸಾಯನಿಕಗಳಿಂದ (chemicals) ಕೂಡಿರುತ್ತದೆ. ನೆತ್ತರು ಈಲಿಯನ್ನು (liver) ತಲುಪಿದಾಗ, ಈಲಿಯು 1) ನೆತ್ತರಿನಲ್ಲಿರುವ ಸಕ್ಕರೆ ಅಂಶವನ್ನು ಹೀರಿಕೊಂಡು ಕೂಡಿಟ್ಟುಕೊಳ್ಳುತ್ತದೆ. 2) ಆಹಾರದಿಂದ ಹೀರಿಕೊಂಡ ಆರಯ್ವಗಳನ್ನು ನಮ್ಮ ಸೂಲುಗೂಡುಗಳು (cells) ಬಳಸಿಕೊಳ್ಳಲು ನೆರವಾಗುವಂತೆ ತರುಮಾರ‍್ಪಿಸುತ್ತದೆ (metabolize). 3) ಆಹಾರದಿಂದ ಹೀರಿಕೊಂಡ ನಂಜು ಕಣಗಳು (toxic elements) ಹಾಗು ಆಹಾರದ ಅಂಶಗಳ ತರುಮಾರ‍್ಪಿಸುವಿಕೆಯಿಂದ ಉಂಟಾದ ನಂಜನ್ನು (toxins) ತೆಗೆಯುತ್ತದೆ.

ನಂಜನ್ನು ತೆಗೆದು ಚೊಕ್ಕಮಾಡಿದ, ಗೂಡುಕಟ್ಟುಗಳು ಬಳಸಲು ಯೋಗ್ಯವಾದ ರೂಪದಲ್ಲಿರುವ ಆರಯ್ವಗಳನ್ನು ಹೊತ್ತ ನೆತ್ತರು ಈಲಿಯಿಂದ ಕೆಳ ಉಸಿರಿಳಿ-ಸೇರುಗೊಳವೆಯ (inferior vena cava) ಮೂಲಕ ಗುಂಡಿಗೆಯನ್ನು ಸೇರುತ್ತದೆ. ಮುಂದೆ ಈ ನೆತ್ತರು, ಉಸಿರುಚೀಲದ ಹರಿಯುವಿಕೆಯ ನೆರವಿನಿಂದ ಉಸಿರುಗಾಳಿಯನ್ನು ತುಂಬಿಕೊಂಡರೆ, ಉಸಿರುಗಾಳಿಯ ಹಾಗು ಆರಯ್ವಗಳನ್ನು ಹೊತ್ತ ನೆತ್ತರು ಏರ‍್ಪಡಿತ ಹರಿಯುವಿಕೆಯ ನೆರವಿನಿಂದ, ನಮ್ಮ ಎಲ್ಲಾ ಮಯ್ಬಾಗಗಗಳನ್ನೂ ತಲುಪುತ್ತದೆ.

ಮುಂದಿನ ಕಂತಿನಲ್ಲಿ ನೆತ್ತರಿನ (blood) ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1) what-when-how.com, 2) wikipedia.org, 3) what-when-how.com/nursing, 4) innerbody.com)

ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 2

ನೆತ್ತರುಗೊಳವೆಗಳು:

ಈ ಬರಹದಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಮುಕ್ಯ ಕವಲುಗಳಾದ ನೆತ್ತರುಗೊಳವೆಗಳು ಇಲ್ಲವೇ ರಕ್ತಗೊಳವೆಗಳು (blood vessels) ಎಂದು ಗುರುತಿಸಲಾಗುವ ಬಾಗಗಳ ಬಗ್ಗೆ ತಿಳಿದುಕೊಳ್ಳೋಣ. ನೆತ್ತರುಗೊಳವೆಗಳ ಬಗೆಗಳು, ಅವುಗಳ ಕಟ್ಟಣೆ ಮುಂತಾದ ವಿಶಯಗಳನ್ನು ಈ ಬರಹದಲ್ಲಿ ಅರಿತುಕೊಳ್ಳೋಣ.

ನೆತ್ತರುಗೊಳವೆಗಳು (blood vessels) ಚುರುಕಾಗಿ ಹಾಗು ಸರಾಗವಾಗಿ ಗುಂಡಿಗೆಯಿಂದ ಮಯ್ ಬಾಗಗಳಿಗೆ ಹಾಗು ಮಯ್ ಬಾಗಗಳಿಂದ ಗುಂಡಿಗೆಯೆಡೆಗೆ ನೆತ್ತರು (ರಕ್ತವು) ಹರಿಯಲು ಅನುವು ಮಾಡಿಕೊಡುತ್ತವೆ.

Cardio_Vascular_System_2_1ನೆತ್ತರುಗೊಳವೆಗಳ ಗಾತ್ರ & ಇಟ್ಟಳ: (ಚಿತ್ರ 1 & 2) ನೆತ್ತರುಗೊಳವೆಗಳು ತಮ್ಮಲ್ಲಿ ಹರಿಯುವ ನೆತ್ತರಿನ ಮೊತ್ತವನ್ನು ಸರಿದೂಗಿಸಲು ಬೇಕಾದ ಗಾತ್ರವನ್ನು ಹೊಂದಿರುತ್ತವೆ. ಎಲ್ಲಾ ನೆತ್ತರುಗೊಳವೆಗಳು ನೆತ್ತರನ್ನು ಸಾಗಿಸಲು ಟೊಳ್ಳಾದ ನಾಳಗುಂಡಿಯನ್ನು (lumen) ಹಾಗು ಈ ಗುಂಡಿಯನ್ನು ಸುತ್ತುವರಿದ ನೆತ್ತರುಗೊಳವೆಯ ಗೋಡೆಗಳನ್ನು (blood vessel wall) ಹೊಂದಿರುತ್ತವೆ. ನೆತ್ತರುಗೊಳವೆಗಳ ಗೋಡೆಯು ಮೂರು ಪದರಗಳಿಂದ ಮಾಡಲ್ಪಟ್ಟಿರುತ್ತದೆ.

1) ಒಳ ಪದರ (tunica intima): ಒಳ ಪದರವು, ಒಳ ಹಿಂಪುಟಿ ಪರೆ (inner elastic lamina), ತಳ ಪರೆ (basement membrane) ಹಾಗು ಒಳ ಪರೆಗಳನ್ನು (endothelium) ಹೊಂದಿರುತ್ತದೆ. ಹುರುಪೆ ಮೇಲ್ಪರೆಯ (squamous epithelium) ಹೊದಿಕೆಯನ್ನು ಹೊಂದಿರುವ ಒಳ ಪರೆಯು ನೆತ್ತರುಕಣಗಳನ್ನು (blood cells) ನೆತ್ತರುಗೊಳವೆಗಳಲ್ಲೇ ಇರುವಂತೆ ನೋಡಿಕೊಳ್ಳುವುದರ ಜೊತೆಗೆ, ನೆತ್ತರು ಹೆಪ್ಪುಗಟ್ಟುವುದನ್ನೂ ತಡೆಯುತ್ತದೆ.

2) ನಡು ಪದರ (tunica media): ಹೊರ ಹಾಗು ಒಳಪದರಗಳ ನಡುವೆ ಇರುವ ಈ ಪದರವು ನುಣುಪು ಕಂಡ (smooth muscle) ಹಾಗು ಹಿಂಪುಟಿ ನಾರುಗಳಿಂದ (elastic fibers) ಮಾಡಲ್ಪಟ್ಟಿದೆ.

3) ಹೊರ ಪದರ (tunica externa): ಈ ಪದರವು ಕೂಡಿಕೆಯ ಗೂಡುಕಟ್ಟುಗಳಿಂದ (connective tissue) ಮಾಡಲ್ಪಟ್ಟಿರುತ್ತದೆ.

ನೆತ್ತರುಗೊಳವೆಗಳ ಬಗೆಗಳು:

ಮಕ್ಯವಾಗಿ ಮೂರು ಬಗೆಯ ನೆತ್ತರುಗೊಳವೆಗಳು ಇರುತ್ತವೆ.

1) ತೊರೆನೆತ್ತರುಗೊಳವೆಗಳು (arteries)
2) ಸೇರುನೆತ್ತರುಗೊಳವೆಗಳು (veins)
3) ನವಿರುನೆತ್ತರುಗೊಳವೆಗಳು (capillaries)

ತೊರೆನೆತ್ತರುಗೊಳವೆಗಳು & ನವಿರುನೆತ್ತರುತೊರೆಗೊಳವೆಗಳು (arteries & arterioles): (ಚಿತ್ರ 1 & 2i)
ಎದೆಗುಂಡಿಗೆಯಿಂದ (ಹ್ರುದಯ/heart) ನೆತ್ತರನ್ನು ಹೊರ ಸಾಗಿಸುವ ನೆತ್ತರುಗೊಳವೆಗಳನ್ನು ತೊರೆನೆತ್ತರುಗೊಳವೆಗಳು (arteries) ಎಂದು ಕರೆಯಬಹುದು. ಸಾಮಾನ್ಯವಾಗಿ ತೊರೆಗೊಳವೆಗಳಿಂದ ಸಾಗಿಸಲ್ಪಡುವ ನೆತ್ತರು, ಉಸಿರುಗಾಳಿಯಿಂದ (oxygen) ಹುಲುಸಾಗಿರುತ್ತದೆ. ಇದಕ್ಕೆ ಹೊರತಾದ ತೊರೆನೆತ್ತರುಗೊಳವೆಯೆಂದರೆ ಉಸಿರುಚೀಲದ ತೊರೆನೆತ್ತರುಗೊಳವೆಗಳು (pulmonary arteries); ಇವು ಕಡಿಮೆ ಮಟ್ಟದಲ್ಲಿ ಉಸಿರುಗಾಳಿಯನ್ನು ಹೊಂದಿರುವ ನೆತ್ತರನ್ನು ಎದೆಗುಂಡಿಗೆಯಿಂದ ಉಸಿರುಚೀಲದೆಡೆಗೆ ಸಾಗಿಸುತ್ತವೆ.

ದೊಡ್ಡ ತೊರೆನೆತ್ತರುಗೊಳವೆಗಳು (large arteries): ಎದೆಗುಂಡಿಗೆಯ ಒತ್ತುವಿಕೆಯಿಂದ ನೆತ್ತರು ರಬಸವಾಗಿ ತೊರೆನೆತ್ತರುಗೊಳವೆಯೊಳಕ್ಕೆ ತಳ್ಳಲ್ಪಡುತ್ತದೆ. ಹೀಗೆ ತಳ್ಳಲ್ಪಟ್ಟ ನೆತ್ತರು ತೊರೆನೆತ್ತರುಗೊಳವೆಗಳ ಮೇಲೆ ಒತ್ತಡವನ್ನು ಹಾಕುತ್ತದೆ. ಈ ಒತ್ತಡವನ್ನು ತಡೆದುಕೊಳ್ಳಲು, ತೊರೆನೆತ್ತರುಗೊಳವೆಗಳ ಗೋಡೆಗಳು: i) ಹೆಚ್ಚಿನ ಮಟ್ಟದ ಕಂಡಗಳಿಂದ ಮಾಡಲ್ಪಟ್ಟಿರುತ್ತವೆ, ii) ಮಂದತೆ ಹಾಗು ಹಿಗ್ಗುವ ಗುಣವನ್ನು ಹೊಂದಿರುತ್ತವೆ. ಇವುಗಳ ಹಿಗ್ಗುವಿಕೆಗೆ ನೆರವಾಗಲು ದೊಡ್ಡ ತೊರೆನೆತ್ತರುಗೊಳವೆಗಳಲ್ಲಿ ಹೆಚ್ಚಿನ ಮಟ್ಟದ ಹಿಂಪುಟಿ ಗೂಡುಕಟ್ಟು (elastic tissue) ಇರುತ್ತದೆ. ಉದಾ:ಉಸಿರು-ನೆತ್ತರುಗೊಳವೆ (aorta).

ಸಣ್ಣ ತೊರೆನೆತ್ತರುಗೊಳವೆಗಳು (small arteries) : ಸಣ್ಣ ತೊರೆನೆತ್ತರುಗೊಳವೆಗಳ ಗೋಡೆಗಳು ಹೆಚ್ಚಿನ ಮಟ್ಟದ ಕಂಡವನ್ನು ಹೊಂದಿರುತ್ತವೆ. ಇವುಗಳಲ್ಲಿರುವ ನುಣುಪು ಕಂಡಗಳ (smooth muscles) ಹಿಗ್ಗುವಿಕೆ ಇಲ್ಲವೆ ಕುಗ್ಗುವಿಕೆ, ಕೊಳವೆಯ ನಾಳಗುಂಡಿಗಳಲ್ಲಿ ಹರಿಯುವ ನೆತ್ತರಿನ ಮಟ್ಟವನ್ನು ಅಂಕೆಯಲ್ಲಿಡುತ್ತದೆ. ಈ ಬಗೆಯಲ್ಲಿ, ನಮ್ಮ ಮಯ್ಯಿಯ ಯಾವ ಬಾಗಕ್ಕೆ ಎಶ್ಟು ನೆತ್ತರು ಹರಿಯಬೇಕು ಎಂಬುವುದು ತೀರ‍್ಮಾನವಾಗುತ್ತದೆ.

ಸಣ್ಣ ತೊರೆನೆತ್ತರುಗೊಳವೆಗಳ ಕುಗ್ಗಿಸುವಿಕೆಯಿಂದಾಗಿ ಅವುಗಳ ನಾಳದ ಗಾತ್ರ ಕುಗ್ಗುತ್ತದೆ; ಕುಗ್ಗಿದ ನಾಳಗಳಲ್ಲಿ ಹರಿಯುವ ನೆತ್ತರು ನೆತ್ತರೊತ್ತಡವನ್ನು (blood pressure) ಹೆಚ್ಚಿಸುತ್ತದೆ. ಹಾಗೆಯೇ, ಸಣ್ಣ ನೆತ್ತರುನಾಳಗಳು ಹಿಗ್ಗಿದಾಗ, ನೆತ್ತರೊತ್ತಡ ತಗ್ಗುತ್ತದೆ. ಈ ಬಗೆಯಾಗಿ ಸಣ್ಣ ನೆತ್ತರುಗೊಳವೆಗಳಲ್ಲಿ ಹರಿಯುವ ನೆತ್ತರನ್ನು ಅಂಕೆಯಲ್ಲಿಡುವ ಹಮ್ಮುಗೆಯು ನಮ್ಮ ನೆತ್ತರೊತ್ತಡದ ಮಟ್ಟವನ್ನು ತೀರ‍್ಮಾನಿಸುವಲ್ಲಿ ಪಾಲ್ಗೊಳ್ಳುತ್ತದೆ.

ನವಿರು ತೊರೆನೆತ್ತರುಗೊಳವೆಗಳು (arterioles): ಸಣ್ಣ ತೊರೆನೆತ್ತರುಗೊಳವೆಗಳ ತುದಿಗಳು ಕವಲೊಡೆದು ನವಿರು ತೊರೆನೆತ್ತರುಗೊಳವೆಗಳಾಗುತ್ತವೆ. ಇವು ನೆತ್ತರನ್ನು ನವಿರುನೆತ್ತರುಗೊಳವೆಗಳಿಗೆ (capillaries) ಸಾಗಿಸಲು ನೆರವಾಗುತ್ತವೆ. ನವಿರು ತೊರೆನೆತ್ತರುಗೊಳವೆಗಳಲ್ಲಿ ನೆತ್ತರೊತ್ತಡ (blood pressure) ಕಡಿಮೆಯಿರುತ್ತದೆ.

ಇದಕ್ಕೆ ಮೂರು ಕಾರಣಗಳು: ದೊಡ್ಡ ಮತ್ತು ಸಣ್ಣ ತೊರೆನೆತ್ತರುಗೊಳವೆಗಳಿಗೆ ಹೋಲಿಸಿದರೆ 1) ಇವುಗಳ ಸಂಕೆ ಹೆಚ್ಚು, 2) ಹರಿಯುವ ನೆತ್ತರಿನ ಮೊತ್ತ ಕಡಿಮೆಯಿರುತ್ತದೆ, 3) ಎದೆಗುಂಡಿಗೆಯಿಂದ ಇವು ದೂರವಿರುವುದರಿಂದ, ಎದೆಗುಂಡಿಗೆಯಿಂದ ಹೊಮ್ಮುವ ಒತ್ತಡ ಇವುಗಳ ಮೇಲೆ ಕಡಿಮೆ ಇರುತ್ತದೆ.

ಹೀಗಾಗಿ, ದೊಡ್ಡ ಮತ್ತು ಸಣ್ಣ ತೊರೆನೆತ್ತರುಗೊಳವೆಗಳಿಗೆ ಹೋಲಿಸಿದರ ನವಿರು ತೊರೆನೆತ್ತರುಗೊಳವೆಗಳ ಗೋಡೆಗಳು ತೆಳುವಾಗಿರುತ್ತವೆ. ಸಣ್ಣ ತೊರೆನೆತ್ತರುಗೊಳವೆಗಳಂತೆ, ನವಿರು ತೊರೆನೆತ್ತರಗೊಳವೆಗಳು ಕೊಡ ನುಣುಪುಕಂಡದ ನೆರವಿನಿಂದ, ನಾಳಗುಂಡಿಯ (lumen) ಗಾತ್ರವನ್ನು ಹಿಗ್ಗಿಸುವ-ಕುಗ್ಗಿಸುವುದರಿಂದ, ನೆತ್ತರೊತ್ತಡವನ್ನು (blood pressure) ಅಂಕೆಯಲ್ಲಿಡುವ ಹಮ್ಮುಗೆಯಲ್ಲಿ ಪಾಲ್ಗೊಳ್ಳುತ್ತವೆ.

Cardio_Vascular_System_2_2ನವಿರುನೆತ್ತರುಗೊಳವೆಗಳು (capillaries/blood capillaries): (ಚಿತ್ರ 1 & 2iii)

ನವಿರು ನೆತ್ತರುಗೊಳವೆಗಳು, ನೆತ್ತರುಗೊಳವೆಗಳಲ್ಲೇ ತೀರ ಸಣ್ಣ ಹಾಗು ಇವುಗಳ ಗೋಡೆಗಳು ತುಂಬಾ ತೆಳು. ಇವು ಎಲ್ಲಾ ಬಗೆಯ ಗೂಡುಕಟ್ಟುಗಳಲ್ಲಿಯೂ (tissues) ಇರುತ್ತವೆ. ನವಿರು ನೆತ್ತರುಗೊಳವೆಗಳ ಒಂದು ತುದಿ ನವಿರು ತೊರೆನೆತ್ತರುಗೊಳವೆಗಳ ಜೊತೆಗೂಡಿದರೆ, ಮತ್ತೊಂದು ಬದಿಯ ತುದಿಯು ನವಿರು ಸೇರುನೆತ್ತರುಗೊಳವೆಗಳ (venules) ಜೊತೆಗೂಡುತ್ತವೆ.

ನವಿರುನೆತ್ತರುಗೊಳವೆಗಳು, ನೆತ್ತರನ್ನು ಗೂಡುಕಟ್ಟುಗಳ (tissues) ಸೂಲುಗೂಡಿನ (cell) ಹತ್ತಿರಕ್ಕೆ ಕೊಂಡೊಯ್ಯುವ ಮೂಲಕ ಆವಿಗಳ ಅದಲು-ಬದಲಿಕೆಯ (gaseous exchange) ಹಮ್ಮುಗೆ, ಆರಯ್ವಗನ್ನು (nutrients) ಗೂಡುಗಳಿಗೆ ಬಡಿಸುವ ಹಾಗು ತರುಮಾರ‍್ಪಿನ (metabolic) ಕಸವನ್ನು ಗೂಡುಗಳಿಂದ ತೆಗೆಯುವ ಕೆಲಸಗಳನ್ನು ಮಾಡುತ್ತದೆ.

ಇದಕ್ಕೆ ನೆರವಾಗಲೆಂದು ಹಾಗು ನೆತ್ತರು-ಸೂಲುಗೂಡುಗಳ ನಡುವಿನ ದೂರವನ್ನು ಕಡಿಮೆ ಮಾಡಲು, ನವಿರುನೆತ್ತರುಗೊಳವೆಗಳ ಗೋಡೆಯು ಒಂದು ಪದರದ ಒಳ ಪರೆಯನಶ್ಟೇ (endothelium) ಹೊಂದಿರುತ್ತದೆ. ನವಿರುನೆತ್ತರುಗೊಳವೆಯ ಒಳಪರೆಯು ಜರಡಿಯಂತೆ ಕೆಲಸ ಮಾಡುತ್ತದೆ. ಇದು ನೆತ್ತರುಕಣಗಳನ್ನು (blood cells) ನೆತ್ತರುಗೊಳವೆಯಲ್ಲೇ ಉಳಿಸಿಕೊಂಡು, ಹರಿಕ (fluid), ಕರಗಿದ ಆವಿ (dissolved gases) ಹಾಗು ಇತರ ರಾಸಾಯನಿಕಗಳು (chemicals) ಗೂಡುಕಟ್ಟಿನೆಡೆಗೆ ಇಲ್ಲವೇ ನೆತ್ತರಿನ ಎಡೆಗೆ ಸಾಗಲು ನೆರವಾಗುತ್ತದೆ.

ನವಿರು ತೊರೆನೆತ್ತರುಗೊಳವೆ ಹಾಗು ನವಿರುನೆತ್ತರುಗೊಳವೆಗಳು ಕೂಡಿಕೊಳ್ಳುವ ಬಾಗದಲ್ಲಿ ಮುನ್ನವಿರುನೆತ್ತರುಗೊಳವೆ ಗೆಂಡೆಗಳಿರುತ್ತವೆ (precapillary sphincters). ಈ ಗೆಂಡೆಗಳು, ನವಿರು ನೆತ್ತರುಗೊಳವೆಗಳ ಒಳಕ್ಕೆ ನುಗ್ಗುವ ನೆತ್ತರಿನ ಮಟ್ಟವನ್ನು ಅಂಕೆಯಲ್ಲಿಡುತ್ತವೆ. ಮಾಡಬೇಕಾದ ಕೆಲಸಕ್ಕೆ ತಕ್ಕಂತೆ ಗೂಡುಕಟ್ಟುಗಳ ಬಗೆಗಳೂ ಹಲವು. ಈ ಗೂಡುಕಟ್ಟುಗಳು ತೊಡಗಿಕೊಳ್ಳುವ ಕೆಲಸದ ಮಟ್ಟದ ಮೇಲೆ ಅವುಗಳನ್ನು ತಲುಪುವ ನವಿರುನೆತ್ತರುಗೊಳವೆಗಳ ಸಂಕೆ ಹಾಗು ನೆತ್ತರಿನ ಮೊತ್ತ ತೀರ‍್ಮಾನವಾಗುತ್ತದೆ.

ಚುರುಕಾದ ಕೆಲಸಗಳಲ್ಲಿ ತೊಡಗಿಕೊಳ್ಳುವ ಗೂಡುಕಟ್ಟುಗಳಲ್ಲಿ ನವಿರು ನೆತ್ತರುಗೊಳವೆಗಳ ಸಂಕೆ ಹೆಚ್ಚಿದ್ದರೆ, ಚುರುಕಲ್ಲದ ಕೆಲಸ ಮಾಡುವ ಗೂಡುಕಟ್ಟುಗಳಲ್ಲಿ ಕಡಿಮೆಯಿರುತ್ತದೆ. ಇನ್ನು, ಗೂಡುಕಟ್ಟುಗಳನ್ನು ತಲುಪುವ ನೆತ್ತರಿನ ಮೊತ್ತವನ್ನು ತೆರೆದುಕೊಳ್ಳುವ ಇಲ್ಲವೆ ಮುದುಡಿಕೊಳ್ಳುವ ಮೂಲಕ ಮುನ್ನವಿರುನೆತ್ತರುಗೊಳವೆಗಳ ಗೆಂಡೆಗಳು ಅಂಕೆಯಲ್ಲಿಡುತ್ತವೆ.

ಸೇರುನೆತ್ತರುಗೊಳವೆಗಳು ಮತ್ತು ನವಿರು-ಸೇರುನೆತ್ತರುಗೊಳವೆಗಳು (veins and venules): (ಚಿತ್ರ 1 & 2ii)
ಗುಂಡಿಗೆಯಿಂದ ಹೊರಟು ತೊರೆನೆತ್ತರುಗೊಳವೆಗಳ ಮೂಲಕ ಗೂಡುಕಟ್ಟುಗಳ ಮಟ್ಟವನ್ನು ತಲುಪುವ ನೆತ್ತರನ್ನು, ಗುಂಡಿಗೆಗೆ ಮರಳಿಸುವ ಕೆಲಸವನ್ನು ಸೇರುನೆತ್ತರುಗೊಳವೆಗಳು (veins) ಮಾಡುತ್ತವೆ. ಗುಂಡಿಗೆಯ ಒತ್ತುವಿಕೆಯಿಂದ ಉಂಟಾಗುವ ಒತ್ತಡವನ್ನು ತೊರೆನೆತ್ತರುಗೊಳವೆಗಳು (arteries) ಹೀರಿಕೊಳ್ಳುವುದರಿಂದ ಸೇರುನೆತ್ತರುಗೊಳವೆಗಳಲ್ಲಿ (veins) ನೆತ್ತರೊತ್ತಡ ತುಂಬಾ ಕಡಿಮೆ. ಈ ಕಾರಣದಿಂದ ತೊರೆನೆತ್ತರುಗೊಳವೆಗಳಿಗೆ ಹೋಲಿಸಿದರೆ ಸೇರುನೆತ್ತರುಗೊಳವೆಗಳ ಗೋಡೆಗಳು ತೆಳ್ಳಗಿರುತ್ತವೆ. ಜೊತೆಗೆ ನುಣುಪುಕಂಡದ (smooth muscle) ಮಟ್ಟ ಹಾಗು ಹಿಂಪುಟಿತನವೂ (elasticity) ಕಡಿಮೆ.

ಸೇರುನೆತ್ತರುಗೊಳವೆಗಳು ನೆಲಸೆಳೆತ (gravity), ಕದಲ್ತಡೆ (inertia) ಹಾಗು ಕಟ್ಟಿನ ಕಂಡಗಳ (skeletal muscles) ಕುಗ್ಗಿಸುವಿಕೆಯಿಂದ ಉಂಟಾಗುವ ಒತ್ತಡಗಳ ನೆರವಿನಿಂದ ನೆತ್ತರನ್ನು ಗುಂಡಿಗೆಯೆಡೆಗೆ ತಳ್ಳುತ್ತವೆ. ಕೆಲವು ಸೇರುನೆತ್ತರುಗೊಳವೆಗಳು, ನೆತ್ತರು ಹಿಮ್ಮುಕವಾಗಿ ಹರಿಯುವುದನ್ನು ತಡೆಯಲು, ಗುಂಡಿಗೆಯ ದಿಕ್ಕಿನಲ್ಲಶ್ಟೇ ತೆರೆದುಕೊಳ್ಳುವ ಒಮ್ಮುಕ ತೆರಪುಳನ್ನು (valves) ಹೊಂದಿರುತ್ತವೆ. ಕಟ್ಟಿನ ಕಂಡಗಳ ಕುಗ್ಗುವಿಕೆಯು, ಅವುಗಳ ಅಕ್ಕ-ಪಕ್ಕದಲ್ಲಿರುವ ಸೇರುನೆತ್ತರುಗೊಳವೆಗಳನ್ನು ಹಿಂಡಿದಾಗ, ಅವುಗಳಲ್ಲಿರುವ ನೆತ್ತರು, ತೆರಪುಗಳನ್ನು (valves) ತಳ್ಳಿಕೊಂಡು ಗುಂಡಿಗೆಯೆಡೆಗೆ ಸಾಗುತ್ತದೆ.

ಕಟ್ಟಿನಕಂಡಗಳು ಸಡಿಲಗೊಂಡಾಗ, ಸೇರುನೆತ್ತರುಗೊಳವೆಗಳಲ್ಲಿರುವ ನೆತ್ತರು ಹಿಮ್ಮುಕವಾಗಿ ಹರಿಯದಂತೆ ತೆರಪುಗಳು ತಡೆಯೊಡ್ಡುವ ಕೆಲಸ ಮಾಡುತ್ತದೆ. ನವಿರು ಸೇರುನೆತ್ತರುಗೊಳವೆಗಳು (venules) ನವಿರುನೆತ್ತರುಗೊಳವೆಗಳಲ್ಲಿರುವ ನೆತ್ತರನ್ನು ಒಟ್ಟುಗೂಡಿಸಿ, ಸೇರುನೆತ್ತರುಗೊಳವೆಗಳಿಗೆ (veins) ಸಾಗಿಸುತ್ತದೆ. ಸೇರುನೆತ್ತರುಗೊಳವೆಗಳಲ್ಲಿನ ನೆತ್ತರು ಉಸಿರಿಳಿ-ನೆತ್ತರುಗೊಳವೆಗಳ (venacava) ಮೂಲಕ ಗುಂಡಿಗೆಯನ್ನು ಸೇರುತ್ತದೆ.

ಮುಂದಿನ ಬಾಗದಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಮತ್ತಶ್ಟು ವಿಶಯಗಳನ್ನು ತಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು:  1) www.studyblue.com, 2) bioserv.fiu.edu , 3) www.innerbody.com)

(ಈ ಬರಹವು ಹೊಸಬರಹದಲ್ಲಿದೆ)

ಗುಂಡಿಗೆ ಕೊಳವೆಗಳ ಏರ‍್ಪಾಟು – ಬಾಗ 1

ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system):

ಮಯ್ಯರಿಮೆಯ ಸರಣಿ ಬರಹಗಳನ್ನು ಮುಂದುವರೆಸುತ್ತಾ, ಮುಂದಿನ ನಾಲ್ಕು ಕಂತುಗಳಲ್ಲಿ ಗುಂಡಿಗೆ-ಕೊಳವೆಗಳ ಏರ‍್ಪಾಟಿನ ಬಾಗಗಳು, ಅವುಗಳ ರಚನೆ ಹಾಗು ಅವು ಕೆಲಸ ಮಾಡುವ ಬಗೆಯನ್ನು ತಿಳಿಯೋಣ.

ಈ ಏರ‍್ಪಾಟಿನ ಕೆಲಸವೇನು?

ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system) ಇಲ್ಲವೇ ಹರಿಯುವಿಕೆಯ ಏರ‍್ಪಾಟು (circulatory system) ಎಂದು ಕರೆಯಲಾಗುವ ಈ ಏರ‍್ಪಾಟು, ಮಯ್ ಬಾಗಗಳಿಗೆ ಉಸಿರುಗಾಳಿ (oxygen), ಸುರಿಕೆಗಳು (harmones) ಮತ್ತು ಆರಯ್ವಗಳನ್ನು (nutrients) ತಲುಪಿಸುತ್ತದೆ ಹಾಗು ತರುಮಾರ‍್ಪಿಸುವಿಕೆಯಿಂದ (metabolism) ಉಂಟಾಗುವ ಕಸಗಳನ್ನು ಮಯ್ಯಿಂದ ಹೊರ ಹಾಕುವ ಅಂಗಗಳಿಗೆ ಸಾಗಿಸುವಲ್ಲಿ ಈ ಏರ‍್ಪಾಟು ನೆರವಾಗುತ್ತದೆ.

Cardio_Vascular_System_1_1ಒಟ್ಟಾರೆ ಗುಂಡಿಗೆ-ಕೊಳವೆಗಳ ಏರ‍್ಪಾಟು ಎದೆಗುಂಡಿಗೆ (ಹ್ರುದಯ / heart), ತೊರೆಗೊಳವೆಗಳು (arteries), ಸೇರುಗೊಳವೆಗಳು (veins), ನವಿರು-ನೆತ್ತರಗೊಳವೆಗಳು (capillaries) ಹಾಗು ಹೆಚ್ಚು-ಕಡಿಮೆ 5 ಲೀಟರ‍್ ನಶ್ಟು ನೆತ್ತರನ್ನು (ರಕ್ತ / blood) ಒಳಗೊಂಡಿರುತ್ತದೆ. ಮೊದಲು ಇವುಗಳ ಒಡಲರಿಮೆಯ (anatomy) ಅಂದರೆ ಅವುಗಳ ರಚನೆಯ ಬಗ್ಗೆ ತಿಳಿಯೋಣ. ಮುಂದೆ ಅವುಗಳ ಉಸಿರಿಯರಿಮೆ (physiology) ಅಂದರೆ ಅವುಗಳು ಒಗ್ಗೂಡಿ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿಸಿಕೊಡಲಾಗುವುದು.

ಎದೆಗುಂಡಿಗೆ ಇಲ್ಲವೇ ಗುಂಡಿಗೆ (the heart): (ಚಿತ್ರ 1, 2, 3)
ಕಂಡದ ಒತ್ತುಕದ (muscular pump) ಅಂಗವಾಗಿರುವ ಗುಂಡಿಗೆಯು, ಎದೆಗೂಡಿನಲ್ಲಿರುವ ಎಡ-ಬಲ ಉಸಿರುಚೀಲಗಳ (lung) ನಡುವಿನ ನಡುಗೆರೆಯಲ್ಲಿ ಇರುತ್ತದೆ. ನೆತ್ತರು ಇಡಿ ಮಯ್ಯಲ್ಲಿ ಹರಿದಾಡಲು ಬೇಕಾದ ಒತ್ತಡವನ್ನು ಉಂಟುಮಾಡುವುದು ಇದರ ಮುಕ್ಯ ಕೆಲಸ. ಚೂಪಾಗಿರುವ ಗುಂಡಿಗೆಯ ಕೆಳಬಾಗವನ್ನು ‘ತುದಿ’ (apex) ಹಾಗು ಅಗಲವಾಗಿರುವ ಮೇಲ್ ಬಾಗವನ್ನು ‘ತಾಳು’ (base) ಎಂದು ಕರೆಯಬಹುದು.

Cardio_Vascular_System_1_2ಗುಂಡಿಗೆಯ ತುದಿಯು ಎಡಬಾಗಕ್ಕೆ ವಾಲಿಕೊಂಡಿರುತ್ತದೆ. ಇದರಿಂದಾಗಿ ಗುಂಡಿಗೆಯ 2/3ರಶ್ಟು ಮಯ್-ನಡುಗೆರೆಯ (body midline) ಎಡಬಾಗದಲ್ಲಿದ್ದರೆ, 1/3ರಶ್ಟು ಬಲಬಾಗದಲ್ಲಿರುತ್ತದೆ. ಗುಂಡಿಗೆಯ ತಾಳು ನಮ್ಮ ಮಯ್ಯಲ್ಲಿನ ದೊಡ್ಡ ನೆತ್ತರಗೊಳವೆಗಳಾದ ಉಸಿರು-ನೆತ್ತರಗೊಳವೆ (aorta), ಉಸಿರಿಳಿ-ನೆತ್ತರಗೊಳವೆ (vena cava), ಉಸಿರುಚೀಲದ ತೊರೆಗೊಳವೆ (pulmonary trunk), ಹಾಗು ಉಸಿರುಚೀಲದ ಸೇರುಗೊಳವೆಗಳನ್ನು (pulmonary veins) ಗುಂಡಿಗೆಗೆ ಹೊಂದಿಸುತ್ತದೆ.

ಗುಂಡಿಗೆ ಕಂಡದಿಂದ (cardiac muscle) ಮಾಡಲ್ಪಟ್ಟ ಟೊಳ್ಳಿನ ಅಂಗವಾದ ಗುಂಡಿಗೆಯ ಮುಕ್ಯ ಬಾಗಗಳೆಂದರೆ: ಗುಂಡಿಗೆ ಕೋಣೆಗಳು (heart chambers), ತೆರಪುಗಳು/ತಡೆಬಾಗಿಲುಗಳು (valves), ಗುಂಡಿಗೆ ಗೋಡೆ (heart wall) ಹಾಗು ಗುಂಡಿಗೆ ಬಡಿಕ (cardiac pacemaker).

ಗುಂಡಿಗೆ ಕೋಣೆಗಳು (heart chambers): (ಚಿತ್ರ 2, 3) ಗುಂಡಿಗೆಯ ಟೊಳ್ಳಿನ ಒಳಬಾಗವು ನಾಲ್ಕು ಕೋಣೆಗಳಾಗಿ ಬೇರ‍್ಪಟ್ಟಿರುತ್ತದೆ,

i) ಬಲ ಮೇಲ್ಕೋಣೆ (right atrium)

ii) ಬಲ ಕೆಳಕೋಣೆ (right ventricle)

iii) ಎಡ ಮೇಲ್ಕೋಣೆ (left atrium)

iv) ಎಡ ಕೆಳಕೋಣೆ (left ventricle)

ಬಲ ಮೇಲ್ಕೋಣೆಗೆ ಉಸಿರಿಳಿ-ನೆತ್ತರಗೊಳವೆಗಳು (vena cava) ತೆರೆದುಕೊಂಡರೆ, ಬಲ ಮೇಲ್ಕೋಣೆಯು ಬಲ ಕೆಳಕೋಣೆಗೆ ತೆರೆದುಕೊಂಡಿರುತ್ತದೆ. ಬಲ ಕೆಳಕೋಣೆಯು ಉಸಿರುಚೀಲದ ತೊರೆಗೊಳವೆಗೆ (pulmonary artery) ತೆರೆದುಕೊಳ್ಳುತ್ತದೆ. ಗುಂಡಿಗೆಯ ಎಡ ಬಾಗದ ಕೋಣೆಗಳಲ್ಲಿ, ಉಸಿರುಚೀಲದ ಸೇರುಗೊಳವೆ (pulmonary vein) ಎಡ ಮೇಲ್ಕೋಣೆಗೆ ತೆರೆದುಕೊಳ್ಳುತ್ತದೆ. ಎಡ ಮೇಲ್ಕೋಣೆಯು ಎಡ ಕೆಳಕೋಣೆಗೆ ತೆರೆದು ಕೊಂಡಿರುತ್ತದೆ. ಎಡ ಕೆಳಕೋಣೆಯು ಉಸಿರು-ನೆತ್ತರುಗೊಳವೆಗೆ (aorta) ತೆರೆದುಕೊಂಡಿರುತ್ತದೆ.

Cardio_Vascular_System_1_3ಗುಂಡಿಗೆ ತೆರಪುಗಳು (heart valves): (ಚಿತ್ರ 3) ಗುಂಡಿಗೆಯಲ್ಲಿ ನೆತ್ತರು ಒಮ್ಮುಕವಾಗಿ ಹರಿಯಲು ತಡೆಬಾಗಿಲುಗಳು ಬೇಕು. ನೆತ್ತರು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತಳ್ಳಲ್ಪಡುತ್ತದೆ. ಹೀಗೆ ತಳ್ಳಲ್ಪಟ್ಟ ನೆತ್ತರು ಹಿಮ್ಮುಕವಾಗಿ ಹರಿಯುವುದನ್ನು ತಡೆಯಲು ಗುಂಡಿಗೆಯ ತೆರಪುಗಳು ನೆರವಾಗುತ್ತವೆ. ತೆರಪುಗಳಲ್ಲಿ ಎರಡು ಬಗೆಗಳಿರುತ್ತವೆ. ಅವುಗಳೆಂದರೆ,

1) ಮೇಲ್-ಕೆಳಕೋಣೆ ತೆರಪುಗಳು (atrio-ventricular valves): ಬಲ ಮೇಲ್ಕೋಣೆ ಹಾಗು ಕೆಳಕೋಣೆಗಳ ನಡುವೆ ಮೂರ‍್ತುದಿ ತೆರಪು (tricuspid valve) ಎಂಬ ತಡೆಬಾಗಿಲು ಇರುತ್ತದೆ. ಹಾಗೆಯೇ ಇರ‍್ತುದಿ ತೆರಪು (bicuspid/mitral valve) ಎಡ ಮೇಲ್ಕೋಣೆ ಹಾಗು ಎಡ ಕೆಳಕೋಣೆಯ ಕಂಡಿಯನ್ನು ಕಾಯುತ್ತದೆ. ಮೂರ‍್ತುದಿ ತೆರಪು ಹಾಗು ಇರ‍್ತುದಿ ತೆರಪುಗಳು ಕಂಡರದ ಬಳ್ಳಿಗಳ (chordae tendinae) ನೆರವಿನಿಂದ ಗುಂಡಿಗೆಯ ಗೋಡೆಗೆ ಅಂಟಿಕೊಂಡಿರುತ್ತವೆ.

2) ಅರೆಚಂದಿರ ತೆರಪುಗಳು (semilunar valves): ಅರ‍್ದ ಚಂದ್ರನಂತೆ ಕಾಣುವ ಈ ತೆರಪುಗಳ ಸಂಕ್ಯೆ ಎರಡು. ಅವುಗಳೆಂದರೆ ಬಲ ಕೆಳಕೋಣೆಯು ಉಸಿರುಚೀಲದ ತೊರೆಗೊಳವೆಗಳಿಗೆ ತೆರೆದುಕೊಳ್ಳುವ ಬಾಗದಲ್ಲಿ ಇರುವ ‘ಉಸಿರುಚೀಲದ ತೆರಪು’ (pulmonary valve) ಹಾಗು ಎಡ ಕೆಳಕೋಣೆಯು ಉಸಿರು-ನೆತ್ತರುಗೊಳವೆಗೆ (aorta) ತೆರೆದುಕೊಳ್ಳುವಲ್ಲಿ ಇರುವ ‘ಉಸಿರುನೆತ್ತರಿನ ತೆರಪು’ (aortic valve).

ಒಬ್ಬ ಹದುಳವಾದ ಮನುಶ್ಯನಲ್ಲಿ ‘ಲಬ್’ & ‘ಡಬ್’ ಎಂಬ ಎದೆಬಡಿತದ ಸಪ್ಪಳಗಳು ಕೇಳಿಸುತ್ತವೆ. ಮೂರ‍್ತುದಿ ಹಾಗು ಇರ‍್ತುದಿ ತೆರಪುಗಳ ಮುಚ್ಚುವಿಕೆಯಿಂದ ಎದೆಬಡಿತದ ‘ಲಬ್’ ಸಪ್ಪಳ ಉಂಟಾದರೆ, ಅರೆಚಂದಿರ ತೆರಪುಗಳ ಮುಚ್ಚುವಿಕೆಯಿಂದ ‘ಡಬ್’ ಸಪ್ಪಳ ಮೂಡುತ್ತದೆ.

ಗುಂಡಿಗೆಯ ಗೋಡೆ (heart wall): (ಚಿತ್ರ 4) ಗುಂಡಿಗೆಯ ಗೋಡೆಯು ಗುಂಡಿಗೆ ಒಳಪರೆ (endocardium), ಗುಂಡಿಗೆ ಕಂಡಪರೆ (myocardium), ಗುಂಡಿಗೆ ಹೊರಪರೆ (epicardium) ಎಂಬ ಪದರಗಳನ್ನು ಹೊಂದಿರುತ್ತದೆ. ಮೂರು ಪದರವನ್ನು ಹೊಂದಿರುವ ಗುಂಡಿಗೆ ಗೋಡೆಯ ಸುತ್ತಲು, ಚೀಲದಂತಿರುವ ಗುಂಡಿಗೆ ಸುತ್ಪರೆಯ (pericardium) ಹೊದಿಕೆ ಇರುತ್ತದೆ.

Cardio_Vascular_System_1_4ಗುಂಡಿಗೆ ಒಳಪರೆ (endocardium): ಗುಂಡಿಗೆಯ ಒಳಬಾಗದ ಹೊದಿಕೆಯನ್ನು ಗುಂಡಿಗೆ ಒಳಪರೆ ಎಂದು ಹೇಳಬಹುದು. ಈ ಪದರವು ಸುಳುವಾದ ಹುರುಪೆ ಮೇಲ್ಪರೆಯಿಂದ ಮಾಡಲ್ಪಟ್ಟಿದೆ (simple squamous epithelium). ಒಳಪರೆಯು ಗುಂಡಿಗೆಯ ಕೋಣೆ ಹಾಗು ತೆರಪುಗಳಿಗೆ ಕಾಪನ್ನು (protection) ಒದಗಿಸುವುದರ ಜೊತೆಗೆ ನೆತ್ತರು-ಗುಂಡಿಗೆ-ಬೇರ‍್ಮೆಯಾಗಿ (blood-heart-barrier) ಕೆಲಸ ಮಾಡುವುದರ ಮೂಲಕ ಗುಂಡಿಗೆ ಕಂಡದ ಗೂಡುಗಳಲ್ಲಿನ ಮಿನ್ತುಣುಕುಗಳ (ions) ಮಟ್ಟವನ್ನು ಅಂಕೆಯಲ್ಲಿಡಲು ನೆರವಾಗುತ್ತದೆ.

ಗುಂಡಿಗೆ ಕಂಡದಪರೆ (myocardium): ಗುಂಡಿಗೆಕಂಡದಿಂದ (cardiac muscle) ಮಾಡಲ್ಪಟ್ಟ ಈ ಪದರವು ಉಳಿದ ಗುಂಡಿಗೆ ಪದರಗಳಿಗೆ ಹೋಲಿಸಿದರೆ ತುಂಬಾ ದಪ್ಪವಾಗಿರುತ್ತದೆ. ಇದು ಒಳಗಿನ ಒಳಪರೆ (endocardium) ಹಾಗು ಹೊರಗಿನ ಹೊರಪರೆಗಳ (epicardium) ನಡುವೆ ಕಂಡುಬರುತ್ತದೆ. ಗುಂಡಿಗೆಕಂಡದ ಗೂಡುಗಳ ಹೊಂದಾಣಿಕೆಯ ಕುಗ್ಗಿಸುವಿಕೆಯು ಗುಂಡಿಗೆಯೊಳಗಿನ ನೆತ್ತರನ್ನು ಮೇಲ್ಕೋಣೆಯಿಂದ ಕೆಳಕೋಣೆಗಳಿಗೆ ಹಾಗು ಕೆಳಕೋಣೆಗಳಿಂದ ನೆತ್ತರುಗೊಳವೆಗಳಿಗೆ ದಬ್ಬಲು ನೆರವಾಗುತ್ತದೆ.

ಗುಂಡಿಗೆಯ ಹೊರಪರೆ (epicardium): ಇದು ಗುಂಡಿಗೆಯ ಹೊರಗಿನ ಪದರ. ಕೆಲವು ಸಲ ಈ ಪದರವನ್ನು ನೀರ‍್ಬಗೆ ಸುತ್ಪರೆಯ (serous pericardium) ಒಳಪದರ ಎಂದು ಲೆಕ್ಕಕೆ ತೆಗೆದುಕೊಳ್ಳುವುದುಂಟು. ಹೆಚ್ಚಿನ ಮಟ್ಟದಲ್ಲಿ ಕೂಡಿಸುವ ಗೂಡುಕಟ್ಟನ್ನು (connective tissue) ಹೊಂದಿರುವ ಗುಂಡಿಗೆ ಹೊರಪರೆ, ಗುಂಡಿಗೆಗೆ ಕಾಪು (protection) ಒದಗಿಸುತ್ತದೆ.

ಗುಂಡಿಗೆ ಸುತ್ಪರೆ (pericardial membrane): ಗುಂಡಿಗೆ ಸುತ್ಪರೆಯು ಗುಂಡಿಗೆ ಹಾಗು ಗುಂಡಿಗೆಯಿಂದ ಹೊಮ್ಮುವ ಮುಕ್ಯ ನೆತ್ತರುಗೊಳವೆಗಳನ್ನು ಸುತ್ತುವರೆದಿರುವ ಚೀಲ. ಗುಂಡಿಗೆ ಸುತ್ಪರೆಯಲ್ಲಿ ಎರಡು ಪದರಗಳಿರುತ್ತವೆ:

1) ಹೊರಗಿನ ತಂತುಗೂಡಿನ ಸುತ್ಪರೆ (fibrous pericardium): ಮಂದವಾದ ಕೂಡಿಸುವ ಗೂಡುಕಟ್ಟನ್ನು ಹೊಂದಿರುವ ತಂತುಗೂಡಿನ ಸುತ್ಪರೆಯು ತೊಗಲ್ಪರೆ (diaphragm), ಎದೆಚಕ್ಕೆ (sternum) ಹಾಗು ಪಕ್ಕೆಲುಬಿನ ಮೆಲ್ಲೆಲುಬುಗಳಿಗೆ (costal cartilage) ಅಂಟುವ ಮೂಲಕ ಚೀಲದೊಳಗಿನ ಗುಂಡಿಗೆಗೆ ಕಾಪು (protection) ಮತ್ತು ಆನಿಕೆಯನ್ನು (support) ಕೊಡುತ್ತದೆ.

2) ನೀರ‍್ಬಗೆ ಸುತ್ಪರೆ (serous pericardium): ಸುಳುವಾದ ಹುರುಪೆ ಮೇಲ್ಪರೆಯಿಂದ (simple squamous epithelium) ಮಾಡಲ್ಪಟ್ಟಿರುವ ನೀರ‍್ಬಗೆ ಸುತ್ಪರೆಯಲ್ಲಿ ಹೊರ ನೀರ‍್ಬಗೆ ಸುತ್ಪರೆ (parietal serous pericardium), ಒಳ ನೀರ‍್ಬಗೆ ಸುತ್ಪರೆ (visceral serous pericardium) ಎಂಬ ನುಣುಪಾದ ಎರಡು ಹೊದಿಕೆಗಳಿರುತ್ತವೆ. ಈ ಎರಡು ಪದರಗಳ ನಡುವೆ ಇರುವ ನಾಳವನ್ನು (lumen), ಸುತ್ಪರೆ ಕುಳಿ (pericardial cavity) ಎಂದು ಹೇಳಬಹದು.

ಸುತ್ಪರೆ ಕುಳಿಯು ನೀರ‍್ಬಗೆ ಸುತ್ಪರೆಯ ಪದರಗಳು ಸೂಸುವ ಸುತ್ಪರೆ ಹರಿಕದಿಂದ (pericardial fluid) ತುಂಬಿಕೊಂಡಿರುತ್ತದೆ. ಈ ಪರೆಯ ಮುಕ್ಯ ಕೆಲಸಗಳೆಂದರೆ ಗುಂಡಿಗೆ ಸುತ್ತಲಿನ ಸೋಂಕು (infection) ಮತ್ತು ಉರಿಯೂತಗಳು (inflammation) ಗುಂಡಿಗೆಗೆ ಹಬ್ಬುವುದನ್ನು ತಡೆಯುವುದು, ಗುಂಡಿಗೆಯ ಹಿಗ್ಗುವಿಕೆಯನ್ನು ಅಂಕೆಯಲ್ಲಿಡುವುದು ಹಾಗು ಸುತ್ಪರೆ ಹರಿಕದ (pericardial fluid) ನೆರವಿನಿಂದ ಎದೆಗುಂಡಿಗೆ ಹಾಗು ಸುತ್ಪರೆಗಳ ನಡುವೆ ಉಂಟಾಗುವ ತಿಕ್ಕಾಟವನ್ನು ತಡೆಯುವುದು.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು:1) cnx.org, 2) docstoc.com, 3) wikipedia 4) innerbody.com, 5) cnx.org/latest)

(ಈ ಬರಹವು ಹೊಸಬರಹದಲ್ಲಿದೆ)