ಜೇನುಹುಳದ ಕುಣಿತ

ರತೀಶ ರತ್ನಾಕರ.

“ಧಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ ತಿಳಿಸುತ್ತೇವೆ ಅಲ್ಲವೇ? ಯಾವ ಯಾವ ಊರಿನಲ್ಲಿ, ಕೇರಿಯಲ್ಲಿ, ಅಂಗಡಿಯಲ್ಲಿ ಯಾವ ತಿನಿಸುಗಳು ಎಲ್ಲಿ ಸಿಗುತ್ತವೆ ಎಂದು ಸರಿಯಾದ ವಿಳಾಸದೊಂದಿಗೆ ನಮ್ಮ ಮಾತಿನ ಮೂಲಕವೋ ಬರಹದ ಮೂಲಕವೋ ಇನ್ನೊಬ್ಬರಿಗೆ ತಿಳಿಸುತ್ತೇವೆ. ನಮ್ಮ ಮಾತಿನದ್ದೇನೋ ಸರಿ, ಆದರೆ ಯಾವುದೋ ಹೂವಿನ ತೋಟದಲ್ಲಿ ಸಿಗುವ ಹೂ ಜೇನಿನ ದಾರಿಯನ್ನು ಒಂದು ಜೇನುಹುಳವು ಮತ್ತೊಂದು ಹುಳಕ್ಕೆ ಹೇಗೆ ತಿಳಿಸಬಹುದು? ಜೇನುಹುಳಗಳು ಒಂದಕ್ಕೊಂದು ಮಾತನಾಡುತ್ತವೆಯೇ? ಅವುಗಳ ನುಡಿ ಯಾವುದು? ಬನ್ನಿ, ಈ ಪ್ರಶ್ನೆಗಳಿಗೆ ಮರುನುಡಿ ಹುಡುಕುವ ಪ್ರಯತ್ನ ಮಾಡೋಣ.

ಜೇನುಹುಳಗಳ ಮೇವು ಎಂದರೆ ಅದು ಹೂವಿನ ಬಂಡು (pollen), ಜೇನು (nectar) ಹಾಗು ನೀರು. ಹೂವಿನ ಬಂಡು ಮತ್ತು ಜೇನನ್ನು ಅವು ಹೂವುಗಳಿಂದಲೇ ಹುಡುಕಿ ತರಬೇಕು. ಹಿಂದಿನ ಬರಹದಲ್ಲಿ ತಿಳಿದಂತೆ ಒಂದು ಜೇನುಗೂಡಿನಲ್ಲಿ ಸವಿಯಾದ ಜೇನನ್ನು ಕೂಡಿಡುವ ಕೆಲಸ ದುಡಿಮೆಗಾರ ಹುಳಗಳದ್ದಾಗಿರುತ್ತದೆ. ಈ ದುಡಿಮೆಗಾರ ಹುಳಗಳಲ್ಲಿ ಸುಮಾರು 5-25% ಹುಳಗಳು ಬೇಹುಗಾರ(scouts) ಹುಳಗಳಾಗಿರುತ್ತವೆ. ಅಂದರೆ, ಮೇವಿಗಾಗಿ ಸುತ್ತಮುತ್ತಲಿನ ಜಾಗದಲ್ಲಿ ಹುಡುಕಾಟವನ್ನು ನಡೆಸಿ, ಸೊಂಪಾಗಿ ಹೂವುಗಳು ಸಿಗುವ ಜಾಗವನ್ನು ಕಂಡುಹಿಡಿದು, ಗೂಡಿಗೆ ಹಿಂತಿರುಗಿ ಉಳಿದ ದುಡಿಮೆಗಾರ ಜೇನುಹುಳಗಳಿಗೆ ಹೂವುಗಳಿರುವ ಜಾಗವನ್ನು ತಿಳಿಸುವುದು ಈ ಬೇಹುಗಾರ ಹುಳಗಳ ಕೆಲಸವಾಗಿರುತ್ತದೆ.

ಹಾಗಾದರೆ ಈ ಬೇಹುಗಾರ ಹುಳಗಳು ಉಳಿದ ಜೇನುಹುಳಗಳಿಗೆ ಹೂವು ಸಿಗುವ ಜಾಗವನ್ನು ಹೇಗೆ ತಿಳಿಸುತ್ತವೆ? ಜೇನುಗೂಡಿನಿಂದ ಹೂವುಗಳು ಎಷ್ಟು ದೂರದಲ್ಲಿವೆ ಮತ್ತು ಯಾವ ದಿಕ್ಕಿನಲ್ಲಿವೆ ಎಂಬ ವಿವರವನ್ನು ಹೇಗೆ ತೋರಿಸುತ್ತವೆ? ಈ ಎಲ್ಲಾ ಕುತೂಹಲಗಳಿಗೆ ಮರುನುಡಿಯೇ ‘ಜೇನುಹುಳದ ಕುಣಿತ‘! ಹೌದು, ಬೇಹುಗಾರ ಜೇನುಹುಳಗಳು ಉಳಿದ ಜೇನುಹುಳಗಳಿಗೆ ಸೊಂಪಾಗಿ ಸಿಗುವ ಮೇವಿನ ಜಾಗದ ವಿವರವನ್ನು ಕುಣಿತದ ಮೂಲಕ ತಿಳಿಸುತ್ತವೆ. ಇದನ್ನೇ ಜೇನುಹುಳದ ಕುಣಿತ ಎನ್ನಲಾಗುತ್ತದೆ.

ಜೇನುಹುಳಗಳು ಹೇಗೆ ಮಾತನಾಡಿಕೊಳ್ಳುತ್ತವೆ ಎನ್ನುವುದನ್ನು ಅರಿಯಲು ಸಾಕಷ್ಟು ಅರಕೆಗಳನ್ನು ಮಾಡಲಾಗಿದೆ. ಬೇಹುಗಾರ ಜೇನುಹುಳಗಳು ಮೇವಿನ ಜಾಗವನ್ನು ಹುಡುಕಾಡಿ, ಅಲ್ಲಿರುವ ಹೂವಿನ ಬಂಡು ಮತ್ತು ಜೇನನ್ನು ಹೊತ್ತುಕೊಂಡು ಗೂಡಿಗೆ ಹಿಂತಿರುಗುತ್ತವೆ. ಬೇಹುಗಾರ ಜೇನುಹುಳವು ತಂದ ಬಂಡಿನ ನರುಗಂಪಿನ (odor) ಜಾಡನ್ನು ಹಿಡಿದು ಉಳಿದ ದುಡಿಮೆಗಾರ ಹುಳಗಳು ಮೇವಿನ ಜಾಗವನ್ನು ಕಂಡುಹಿಡಿಯುತ್ತವೆ ಎಂದು ಈ ಮೊದಲು ನಂಬಲಾಗಿತ್ತು. ಬಳಿಕ ನಡೆದ ಹೆಚ್ಚಿನ ಅರಕೆಗಳಲ್ಲಿ ಜೇನುಹುಳದ ಕುಣಿತವು ಬೆಳಕಿಗೆ ಬಂದಿತು. ಜರ್ಮನಿಯ ಅರಕೆಗಾರ ಕಾರ‍್ಲ್ ವೊನ್ ಪ್ರಿಸ್ಕ್ ಅರಕೆಯನ್ನು ನಡೆಸಿ, ಜೇನುಹುಳದ ಕುಣಿತವನ್ನು ಪರಿಚಯಿಸಿದರು, ಅದಕ್ಕಾಗಿ ಅವರು ನೊಬೆಲ್ ಪ್ರಶಸ್ತಿಯನ್ನು ಕೂಡ ಪಡೆದರು.

ಏನಿದು ಜೇನುಹುಳದ ಕುಣಿತ?
ಮೇವನ್ನು ಅರಸಿ ಗೂಡಿನಿಂದ ಹೊರಹೋದ ಬೇಹುಗಾರ ಹುಳಗಳು ಗೂಡಿನ ಯಾವುದೋ ದಿಕ್ಕಿನಲ್ಲಿರುವ, ಎಷ್ಟೋ ದೂರದಲ್ಲಿರುವ ಹೂಗಳ ರಾಶಿಯನ್ನು ಹುಡುಕುತ್ತವೆ. ಆ ಹೂವಿನಿಂದ ಸಾಕಷ್ಟು ಜೇನನ್ನು ಹೀರಿ, ಹೂವಿನ ಬಂಡನ್ನು ಕೂಡ ತೆಗೆದುಕೊಂಡು ಜೇನುಗೂಡಿಗೆ ಮರಳುತ್ತವೆ. ಜೇನುಗೂಡಿನಲ್ಲಿರುವ ಉಳಿದ ದುಡಿಮೆಗಾರ ಹುಳಗಳಿಗೆ ತಾನು ಕಂಡ ಮೇವಿನ ಜಾಗವನ್ನು ತಿಳಿಸಲು ಅದು ಗೂಡಿನ ಪಕ್ಕದಲ್ಲಿ ಕುಣಿತವನ್ನು ಮಾಡುತ್ತದೆ. ಈ ಕುಣಿತವು ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುತ್ತದೆ! ಅದು ಹೇಗೆ ಎಂದು ಈಗ ನೋಡೋಣ.

ಮೇವು ಸಿಗುವ ದೂರ:
ಮೇವು ಜೇನುಗೂಡಿನಿಂದ 50 ಮೀಟರ್ ಗಿಂತ ಕಡಿಮೆ ದೂರದಲ್ಲಿದ್ದರೆ, ಬೇಹುಗಾರ ಹುಳವು ‘ಸುತ್ತು ಕುಣಿತ’ವನ್ನು (round dance) ಹಾಕುತ್ತದೆ. (ಕೆಳಗಿನ ಚಿತ್ರ ವನ್ನು ನೋಡಿ). ಹುಳವು ಒಂದು ಬಾರಿ ಇಲ್ಲವೇ ಗೂಡಿನ ಸುತ್ತಲೂ ಹಲವು ಬಾರಿ ಸುತ್ತು ಕುಣಿತವನ್ನು ಹಾಕಿ, ಮೇವಿನ ಜಾಗದ ಬಗ್ಗೆ ಮಾಹಿತಿಯನ್ನು ನೀಡುವುದು. ಸುತ್ತು ಕುಣಿತವನ್ನು ಹಾಕಿದ ಮೇಲೆ, ತಾನು ಹೊತ್ತು ತಂದ ಹೂವಿನ ಬಂಡು ಮತ್ತು ಜೇನನ್ನು ಗೂಡಿನಲ್ಲಿರುವ ಮತ್ತೊಂದು ಜೇನಿಗೆ ಸಾಗಿಸಿ, ಮತ್ತೊಂದು ಕಡೆ ಮೇವನ್ನು ಹುಡುಕಲು ಹೋಗುತ್ತದೆ. ಸುತ್ತು ಕುಣಿತವು ಕೇವಲ ದೂರವನ್ನು ತಿಳಿಸುತ್ತದೆ, ಗೂಡಿನಿಂದ ಕೇವಲ 50 ಮೀ ದೂರದಲ್ಲಿ ಇರುವುದರಿಂದ ದಿಕ್ಕನ್ನು ತಿಳಿಸುವ ಅವಶ್ಯಕತೆ ಇಲ್ಲ. ಸುತ್ತು ಕುಣಿತವನ್ನು ನೋಡಿದ ಉಳಿದ ದುಡಿಮೆಗಾರ ಹುಳಗಳು, ಹತ್ತಿರದಲ್ಲೇ ಹೂವು ಇದೆ ಎಂದು ಅರಿತು, ಹೂವಿನ ಕಂಪಿನ ಜಾಡನ್ನು ಹಿಡಿದು ಮೇವನ್ನು ತರಲು ಹೋರಡುತ್ತವೆ.

ಒಂದು ವೇಳೆ ಮೇವು ಸಿಗುವ ಜಾಗವು 50 ರಿಂದ 150 ಮೀಟರ್ ದೂರದಲ್ಲಿ ಇದ್ದರೆ ಆಗ ಬೇಹುಗಾರ ಹುಳವು ‘ಕುಡುಗೋಲು ಕುಣಿತ‘ವನ್ನು(sickle dance) ಹಾಕುತ್ತದೆ. ಹೆಸರೇ ಹೇಳುವಂತೆ ಕುಡುಗೋಲಿನ ಆಕಾರದಲ್ಲಿ ಹುಳವು ಓಡಾಡಿ ಮೇವಿನ ಜಾಗದ ಬಗ್ಗೆ ತಿಳಿಸುತ್ತದೆ. ಕುಡುಗೋಲು ಕುಣಿತವು ಕೂಡ ಕೇವಲ ದೂರವನ್ನು ತಿಳಿಸುತ್ತದೆಯೇ ಹೊರತು ದಿಕ್ಕನ್ನಲ್ಲ.

ಇನ್ನು 150 ಮೀ. ಗಿಂತ ದೂರದಲ್ಲಿರುವ ಮೇವಿನ ಮಾಹಿತಿಯನ್ನು ತಿಳಿಸಲು ಬೇಹುಗಾರ ಹುಳವು ‘ಓಲಾಟದ ಕುಣಿತ‘ವನ್ನು (waggle dance) ಮಾಡುತ್ತದೆ. ಈ ಓಲಾಟದ ಕುಣಿತವು ದೂರ ಮತ್ತು ದಿಕ್ಕು ಎರಡನ್ನೂ ತಿಳಿಸುತ್ತದೆ. ಓಲಾಟದ ಕುಣಿತಕ್ಕೆ ಚಿತ್ರ 2 ನ್ನು ನೋಡಿ. ಓಲಾಟದ ಕುಣಿತದಲ್ಲಿ ಬೇಹುಗಾರ ಹುಳವು ಒಂದಷ್ಟು ದೂರ ನೇರವಾಗಿ ಹಾರುತ್ತದೆ, ಬಳಿಕ ಬಲ/ಎಡಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬಂದು ತಲುಪುತ್ತದೆ, ಮತ್ತೆ ಮೊದಲು ಓಡಿದ ನೇರದಾರಿಯಲ್ಲೇ ಹಾರಿ, ತಿರುಗಿ ಎಡ/ಬಲಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬರುತ್ತದೆ. ಈ ಕುಣಿತದಲ್ಲಿ ಹುಳವು ನೇರದಾರಿಯಲ್ಲಿ ಹಾರುವಾಗ ತನ್ನ ಹೊಟ್ಟೆಯ ಭಾಗವನ್ನುಅಲ್ಲಾಡಿಸಿಕೊಂಡು ಇಲ್ಲವೇ ಓಲಾಡಿಸಿಕೊಂಡು ಹಾರುತ್ತದೆ, ಇದು ಬಾಲವನ್ನು ಅಲ್ಲಾಡಿಸಿದಂತೆ ಕಾಣಿಸುತ್ತದೆ. ಆದ್ದರಿಂದ ಇದನ್ನು ಓಲಾಟದ ಕುಣಿತ ಎನ್ನುತ್ತಾರೆ. ಅಲ್ಲದೇ ನೇರದಾರಿಯಲ್ಲಿ ಹಾರುವಾಗ ‘ಜುಂಯ್’ ಎಂಬ ಸದ್ದನ್ನು ಕೂಡ ಮಾಡಿ ಹಾರುತ್ತದೆ.

ಓಲಾಟದ ಕುಣಿತದಲ್ಲಿ ನೇರದಾರಿಯನ್ನು ಸಾಗಲು ಹುಳವು ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮೇವು ಸಿಗುವ ದೂರವನ್ನು ಲೆಕ್ಕಹಾಕಲಾಗುತ್ತದೆ. ನೇರದಾರಿಯಲ್ಲಿ ಕಡಿಮೆ ಹೊತ್ತು ಹಾರಿದರೆ ಮೇವಿನ ಜಾಗವು ಕಡಿಮೆ ದೂರವೆಂದು, ಹೆಚ್ಚು ಹೊತ್ತು ಹಾರಿದರೆ ಹೆಚ್ಚು ದೂರವೆಂದು ತಿಳಿಯಲಾಗುತ್ತದೆ. ಉದಾಹರಣೆಗೆ, ನೇರದಾರಿಯಲ್ಲಿ 2 ಸೆಕೆಂಡ್ ಹಾರಿದರೆ ಮೇವಿನ ದೂರ 2000 ಮೀ. ಇದೆ ಎಂದು, 4 ಸೆಕೆಂಡ್ ಹಾರಿದರೆ ಸುಮಾರು 4400 ಮೀ. ದೂರದಲ್ಲಿ ಮೇವು ಇದೆ ಎಂದು ಅಂದಾಜಿಸಲಾಗುತ್ತದೆ. ಇದಲ್ಲದೇ, ನೇರದಾರಿಯಲ್ಲಿ ಹಾರುವಾಗ ಮಾಡುವ ಓಲಾಟದ ಉರುಬು (tempo) ಮತ್ತು ಎಷ್ಟು ಹೊತ್ತು ‘ಜಂಯ್’ ಎಂದು ಮಾಡುವ ಸದ್ದು ಮಾಡುವುದು ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡು, ಮೇವು ಇರುವ ದೂರವನ್ನು ದುಡಿಮೆಗಾರ ಹುಳಗಳು ಕಂಡುಕೊಳ್ಳುತ್ತವೆ.

ಹೀಗೆ ಮೇವಿನ ದೂರವನ್ನು ಓಲಾಟದ ಕುಣಿತದಲ್ಲಿ ಲೆಕ್ಕಹಾಕಲಾಗುತ್ತದೆ. ಮೇವಿನ ದೂರ ಮತ್ತು ನೇರದಾರಿಯಲ್ಲಿ ಹಾರುವ ಹೊತ್ತಿನ ನಡುವೆ ಇರುವ ನಂಟನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಮೇವು ಇರುವ ದಿಕ್ಕು ಮತ್ತು ಓಲಾಟದ ಕುಣಿತ:

ಓಲಾಟದ ಕುಣಿತದಲ್ಲಿ ಮೇವು ಇರುವ ದಿಕ್ಕು ಕಂಡುಹಿಡಿಯುವುದನ್ನು ನೋಡಿದರೆ, ಜೇನುಹುಳಗಳು ಲೆಕ್ಕದಲ್ಲಿ ಎತ್ತಿದ ಕೈ ಎನ್ನಬಹುದು. ಓಲಾಟದ ಕುಣಿತದ ನೇರದಾರಿಯಲ್ಲಿ ಜೇನುಹುಳವು ಯಾವ ದಿಕ್ಕಿನಲ್ಲಿ ಹಾರುತ್ತದೆ, ಜೇನುಗೂಡಿಗೆ ಯಾವ ಕೋನದಲ್ಲಿ ಹಾರುತ್ತಿದೆ ಮತ್ತು ನೇಸರನು ಯಾವ ದಿಕ್ಕಿನಲ್ಲಿ ಇದ್ದಾನೆ ಎಂಬುದರ ಮೇಲೆ ದಿಕ್ಕನ್ನು ಕಂಡುಕೊಳ್ಳಲಾಗುತ್ತದೆ. ಇದನ್ನು ಸುಳುವಾಗಿ ತಿಳಿಸಲು ಈ ಕೆಳಗಿನ ಚಿತ್ರವನ್ನು ನೋಡಿ.

– ಮೇವು ಸಿಗುವ ಜಾಗವು ನೇಸರನು ಇರುವ ದಿಕ್ಕಿನ ಕಡೆ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ (parallel) ಇರುತ್ತದೆ (ಅಂದರೆ 0 ಡಿಗ್ರಿ ಕೋನ) ಮತ್ತು ನೇರದಾರಿಯ ದಿಕ್ಕು ಗೂಡಿನ ಮೇಲ್ಮುಖವಾಗಿ ಇರುತ್ತದೆ.

– ಮೇವು ಸಿಗುವ ಜಾಗವು ನೇಸರನ ಎದುರು ದಿಕ್ಕಿನಲ್ಲಿ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ ಇರುತ್ತದೆ ಆದರೆ ಹಾರಾಟದ ದಿಕ್ಕು ಗೂಡಿನ ಕೆಳಮುಖವಾಗಿ ಇರುತ್ತದೆ.

– ಒಂದು ವೇಳೆ ಮೇವು ಸಿಗುವ ಜಾಗವು ನೇಸರನಿಂದ ಬಲಕ್ಕೆ ಸುಮಾರು 30 ಡಿಗ್ರಿ ಕೋನದಲ್ಲಿ ಇದ್ದರೆ. ಕುಣಿತದ ನೇರದಾರಿಯ ಕೋನವು ಗೂಡಿನಿಂದ 30 ಡಿಗ್ರಿ ಬಲಕ್ಕೆ ಬಾಗಿರುತ್ತದೆ.

– ಹಾಗೆಯೇ ಮೇವು ನೇಸರನಿಂದ ಎಡಕ್ಕೆ 90 ಡಿಗ್ರಿಯಲ್ಲಿ ಇದ್ದರೆ ಕುಣಿತದ ನೇರದಾರಿಯ ಕೋನವು ಗೂಡಿಗೆ 90 ಡಿಗ್ರಿಯಲ್ಲಿ ಬಲಕ್ಕೆ ಬಾಗಿರುತ್ತದೆ.

ಈ ಓಲಾಟದ ಕುಣಿತವು ನೇಸರನ ಜಾಗದ ಮೇಲೆ ಹೆಚ್ಚು ನೆಚ್ಚಿಕೊಂಡಿರುತ್ತದೆ. ಉದಾಹರಣೆಗೆ, ಬೇಹುಗಾರ ಹುಳವು ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಉಳಿದ ಹುಳಗಳಿಗೆ ತಿಳಿಸಬೇಕಿದೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಬೆಳಗಿನ ಹೊತ್ತು ಆ ದಿಕ್ಕನ್ನು ತಿಳಿಸಬೇಕೆಂದರೆ ಬೇಹುಗಾರ ಹುಳವು ತನ್ನ ಕುಣಿತದ ನೇರದಾರಿಯಲ್ಲಿ ಮೇಲ್ಮುಖವಾಗಿ ಸಾಗಬೇಕು, ಏಕೆಂದರೆ ನೇಸರ ಮತ್ತು ಮೇವು ಒಂದೇ ದಿಕ್ಕಿನಲ್ಲಿವೆ. ಅದೇ ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಸಂಜೆಯ ಹೊತ್ತು ತಿಳಿಸಬೇಕೆಂದರೆ ಹುಳವು ಕುಣಿತದ ನೇರದಾರಿಯಲ್ಲಿ ಕೆಳಮುಖವಾಗಿ ಸಾಗಬೇಕು. ಏಕೆಂದರೆ ನೇಸರನು ಈಗ ಪಡುವಣ ದಿಕ್ಕಿನಲ್ಲಿ ಇದ್ದಾನೆ ಮತ್ತು ಮೇವು ನೇಸರನ ಎದುರು ದಿಕ್ಕಿನಲ್ಲಿದೆ.

ಇದು ಬೇಹುಗಾರ ಹುಳಗಳು ತಮ್ಮದೇ ಆದ ಕುಣಿತದ ಮೂಲಕ ಗೂಡಿನ ಉಳಿದ ಹುಳಗಳಿಗೆ ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುವ ಬಗೆ. ಈ ಕುಣಿತವಷ್ಟೆ ಅಲ್ಲದೆ ಬೇಹುಗಾರ ಹುಳಗಳು ಹೊತ್ತು ತರುವ ಹೂವಿನ ಬಂಡು ಮತ್ತು ಜೇನಿನ ನರುಗಂಪಿನ ನೆರವನ್ನು ಪಡೆದುಕೊಂಡು, ದುಡಿಮೆಗಾರ ಹುಳಗಳು ಹೂವು ಸಿಗುವ ಜಾಗವನ್ನು ಕಂಡುಹಿಡಿಯುತ್ತವೆ. ಬಳಿಕ ಗೂಡಿಗೆ ಬೇಕಾದ ಜೇನನ್ನು ಹೊತ್ತು ತಂದು ಕೂಡಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬಿನಲ್ಲಿರುವ ಕೆಲವು ವೀಡಿಯೊಗಳು:

(ಮಾಹಿತಿ ಮತ್ತು ಚಿತ್ರ ಸೆಲೆ: cals.ncsuusers.rcn.comwestmtnapairypinterest.com)

ಭೂಮಿಯನ್ನು ಅಳೆದವರಾರು?

ದುಂಡಾಕಾರವಾಗಿರುವ ಭೂಮಿಯ ದುಂಡಗಲ (diameter) 12,756 ಕಿಲೋ ಮೀಟರಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇಂತಹ ಸಾಲುಗಳನ್ನು ಓದಿದೊಡನೆ ಮುಖ್ಯವಾಗಿ ಎರಡು ವಿಷಯಗಳು ಬೆರೆಗುಗೊಳಿಸುತ್ತವೆ. ಮೊದಲನೆಯದು ಇಷ್ಟೊಂದು  ದೊಡ್ಡದಾದ ಅಂಕಿಗಳು ಮತ್ತು ಎರಡನೆಯದು ಅವುಗಳನ್ನು ಅಳೆದುದು ಹೇಗೆ?.

Image EM1
ಇನ್ನೊಂದು ಅಚ್ಚರಿಯ ವಿಷಯವೆಂದರೆ ಭೂಮಿಯ ದುಂಡಗಲವನ್ನು ಮೊಟ್ಟಮೊದಲ ಬಾರಿಗೆ ಅಳೆದದ್ದು ಸರಿಸುಮಾರು 2200 ವರುಶಗಳ ಹಿಂದೆ! ಬನ್ನಿ, ಅವರಾರು? ಹೇಗೆ ಅಳೆದರು? ಎಂದು ತಿಳಿದುಕೊಳ್ಳೋಣ.
ಕ್ರಿ.ಪೂ. ಸುಮಾರು 200 ರಲ್ಲಿ ಈಜಿಪ್ಟಿನ ಎರತೊಸ್ತನೀಸ್ (Eratosthenes) ಎಂಬ ಗಣಿತದರಿಗ ಭೂಮಿಯ ದುಂಡಗಲವನ್ನು ಅಳೆದವರಲ್ಲಿ ಮೊದಲಿಗ. ಅದೂ ತನ್ನ ನಾಡಿನಲ್ಲೇ ಇದ್ದುಕೊಂಡು ಅರಿಮೆಯ ನೆರವಿನಿಂದ ಈ ಕೆಲಸವನ್ನು ಮಾಡಿ ತೋರಿಸಿದಾತ.

ಎರತೊಸ್ತನೀಸ್‍ರಿಗೆ ತನ್ನ ಸುತ್ತಮುತ್ತಲಿನ ಆಗುಹೋಗುಗಳು ತುಂಬಾ ಕುತೂಹಲ ಮೂಡಿಸಿದಂತವು. ಬೇಸಿಗೆಯ ಒಂದು ಗೊತ್ತುಪಡಿಸಿದ ಹೊತ್ತಿನಂದು ಸಿಯನ್ ಊರಿನ ಬಾವಿಯ ಮೇಲೆ ಹಾದುಹೋಗುವ ಸೂರ್ಯನ ಕಿರಣಗಳು, ಆ ಬಾವಿಯ ನಟ್ಟನಡುವೆ ಬೀಳುತ್ತಿದ್ದುದು ಮತ್ತು ಅದೇ ಹೊತ್ತಿಗೆ ಅಲ್ಲಿಂದ ಸುಮಾರು 750 ಕೀಲೋ ಮೀಟರಗಳಷ್ಟು ದೂರವಿರುವ ಅಲೆಕ್ಸಾಂಡ್ರಿಯಾದ ಕಂಬವೊಂದರ ಮೇಲೆ ಸೂರ್ಯನ ಬೆಳಕಿನಿಂದ ಉಂಟಾಗುವ ನೆರಳು ನೇರವಾಗಿರದೇ ಒಂದು ಕೋನದಲ್ಲಿ ಇರುತ್ತಿದ್ದುದು, ಎರತೋಸ್ತೇನಸ್ ರ ಕುತೂಹಲ ಕೆರಳಿಸಿದ್ದವು.

ಸೂರ್ಯನ ನೆಟ್ಟ ನೇರವಾದ ಕಿರಣಗಳು ಉಂಟುಮಾಡುವ ನೆರಳು ಸಿಯಾನ್ ಊರಿನಲ್ಲಿ ನೇರವಾಗಿ ಮತ್ತು ಅದೇ ಹೊತ್ತಿಗೆ ಅಲೆಕ್ಸಾಂಡ್ರಿಯಾದಲ್ಲಿ ಒಂದು ಕೋನದಲ್ಲಿದ್ದದ್ದು, ನಮ್ಮ ಭೂಮಿ ಚಪ್ಪಟೆಯಾಗಿರದೇ ದುಂಡಾಗಿದೆ ಅನ್ನುವಂತ ವಿಷಯವನ್ನು ಎರತೊಸ್ತನೀಸ್‍ರಿಗೆ ತೋರಿಸಿಕೊಟ್ಟಿದ್ದವು. ಗಣಿತವನ್ನರಿತಿದ್ದ ಎರತೊಸ್ತನೀಸ್‍ರಿಗೆ ಇದನ್ನು ಬಳಸಿಯೇ ಭೂಮಿಯ  ಸುತ್ತಳತೆಯನ್ನು ಅಳೆಯುವ ಹೊಳಹು ಹೊಮ್ಮಿತು.

Image EM2ಸಿಯಾನ್ ಊರಿನ ಬಾವಿಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದ ಹೊತ್ತಿಗೆ ತನ್ನೂರು ಅಲೆಕ್ಸಾಂಡ್ರಿಯಾದಲ್ಲಿದ್ದ ಕಂಬದ ನೆರಳು ಬೀಳುತ್ತಿದ್ದ ಕೋನವನ್ನು ಎರತೋಸ್ತೇನಸ್ ಅಳೆದರು. ಕಂಬ ಉಂಟುಮಾಡುತ್ತಿದ್ದ ನೆರಳಿನ ಕೋನವು 7.2°  ಎಂದು ಗೊತ್ತಾಯಿತು.

ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ದೂರ ತಿಳಿದಿದ್ದ ಎರತೋಸ್ತೇನಸ್ ಗಣಿತದ ನಂಟುಗಳನ್ನು ಬಳಸಿ ಭೂಮಿಯ ಸುತ್ತಳತೆ ಮತ್ತು ದುಂಡಗಲವನ್ನು ಈ ಕೆಳಗಿನಂತೆ ಎಣಿಕೆಹಾಕಿದರು.

Image EM3ಅಲೆಕ್ಸಾಂಡ್ರಿಯಾ ಕಂಬದ ನೆರಳಿನ ಕೋನ = 7.2°

ಒಂದು ಸುತ್ತಿನಲ್ಲಿ ಇರುವ ಕೋನಗಳು = 360°

ಅಂದರೆ, ದುಂಡಾಗಿರುವ ಭೂಮಿಯ ಸುತ್ತಳತೆ ಅಲೆಕ್ಸಾಂಡ್ರಿಯಾ ಮತ್ತು ಸಿಯಾನ್ ಊರುಗಳ ದೂರದ 360/7.2 = 50 ರಷ್ಟು ಇರಬೇಕು.

ಇನ್ನು, ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ನಡುವಿನ ದೂರ = 5000 ಸ್ಟೇಡಿಯಾ
(ಸ್ಟೇಡಿಯಾ/Stadia – ದೂರವನ್ನು ಅಳೆಯಲು ಎರತೊಸ್ತನೀಸ್ ಬಳಸಿದ ಅಳತೆಗೋಲು)

ಹಾಗಾಗಿ,  ಭೂಮಿಯ ಸುತ್ತಳತೆ = 50 x 5000 = 250000 ಸ್ಟೇಡಿಯಾ = 40,000 ಕಿಲೋ ಮೀಟರಗಳು
(1 ಸ್ಟೇಡಿಯಾ = 0.15 ಕಿ.ಮೀ.)

ನಮಗೆ ಗೊತ್ತಿರುವಂತೆ, ಸುತ್ತಳತೆ = 3.142 x ದುಂಡಗಲ (Circumference = 3.142 x diameter)

ಹಾಗಾಗಿ, ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯ ದುಂಡಗಲ (diameter) = 40000/3.142 = 12730.7 ಕಿ.ಮೀ.

ಹೀಗೆ ಸುಮಾರು 2200 ವರುಶಗಳ ಹಿಂದೆ ಕೋನಗಳನ್ನು  ಬಳಸಿ ಎರತೋಸ್ತೇನಸ್ ಅಳೆದದ್ದು, ಹೊಸಜಗತ್ತಿನಲ್ಲಿ ಉಪಗ್ರಹಗಳನ್ನು ಬಳಸಿ ಕರಾರುವಕ್ಕಾಗಿ ಅಳೆಯಲಾದ ಭೂಮಿಯ ದುಂಡಗಲ 12,756 ಕಿಲೋ ಮೀಟರಗಳಿಗೆ ತುಂಬಾ ಹತ್ತಿರವಾಗಿದೆ ಎಂಬುದನ್ನು ನೋಡಿದರೆ ಅರಿಮೆಯ ’ಹಿರಿಮೆ’  ಮನದಟ್ಟಾಗುತ್ತದೆ.

(ಸೆಲೆ: heasarc.nasa.govhte.si.edu, en.wikipedia.org, emaze.com)

ನೆಲದಾಳದ ಕೊರೆತ

ವೋಯೇಜರ್-1 ಎಂಬ ಬಾನಬಂಡಿ (spacecraft) ನಮ್ಮ ನೆಲದಿಂದ ಸರಿಸುಮಾರು 141 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 2.11 x 1010 km ದೂರದಲ್ಲಿ ಸಾಗುತ್ತಿದೆ. ಇಷ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಮನುಷ್ಯರ ಅರಿವಿನ ಎಲ್ಲೆ ಚಾಚಿಕೊಂಡಿದೆ. ಆದರೆ ಈ ಬರಹದಲ್ಲಿ  ಹೇಳಹೊರಟಿರುವುದು ವೋಯೇಜರ್ ಬಗ್ಗೆ ಅಲ್ಲ. ಬಾನಾಳದಲ್ಲಿ ಇಷ್ಟು ದೂರ ಸಾಗಬಲ್ಲೆವಾದರೂ ನಾವು ನೆಲೆ ನಿಂತಿರುವ ನೆಲದಲ್ಲಿ ಎಷ್ಟು ಆಳವನ್ನು ತಲುಪಲು ಇಲ್ಲಿಯವರೆಗೆ ಆಗಿದೆ ಅನ್ನುವುದರ ಕುರಿತು.

ನಿಮಗೆ ಬೆರಗಾಗಬಹುದು, ಮೇಲ್ಮೈಯಿಂದ ಅದರ ನಡುವಿನವರೆಗೆ ಸುಮಾರು 6378 ಕಿ.ಮೀ. ಆಳವಿರುವ ನೆಲದಲ್ಲಿ ಇಲ್ಲಿಯವರೆಗೆ ಮನುಷ್ಯರಿಗೆ ತಮ್ಮ ಸಲಕರಣೆಗಳನ್ನು ತೂರಲು ಆಗಿರುವುದು 12.26 ಕಿ.ಮೀ. ಅಷ್ಟೇ! ಅಂದರೆ ನೆಲದಾಳದ ಬರೀ 0.2%! ನೆಲದಾಳದಲ್ಲಿರುವ ಕಾವಳತೆ (temperature), ಒತ್ತಡ ಮನುಷ್ಯರು ಮಾಡಿದ ಸಲಕರಣೆಗಳು ತೂರಲಾಗದ ಮಟ್ಟದಲ್ಲಿದ್ದು, ಬಾನಾಳವನ್ನು ಗೆಲ್ಲುವಷ್ಟು ಸುಲಭವಲ್ಲ. ಆದರೆ ಎಂದಿನಂತೆ ಮನುಷ್ಯರು ಈ ನಿಟ್ಟಿನಲ್ಲಿ ಸಾಹಸವನ್ನಂತೂ ಮಾಡುತ್ತಲೇ ಬಂದಿದ್ದಾರೆ.

ನೆಲದ ಆಳಕ್ಕೆ ತೂರುವ ಕೋಲಾ ಕಡು ಆಳದ ಕೊರೆತ (Kola Super-deep Borehole) ಎನ್ನುವ ಯೋಜನೆಯನ್ನು ರಷ್ಯಾ 24.05.1970 ರಲ್ಲಿ ಆರಂಭಿಸಿತು. ಈ ಯೋಜನೆಯನ್ನು ಶುರು ಮಾಡುವಾಗ ಸುಮಾರು 15 ಕಿ.ಮೀ. ಆಳಕ್ಕೆ ತೂತು ಕೊರೆಯುವ ಗುರಿಯನ್ನು ಇಟ್ಟುಕೊಂಡಿದ್ದ ರಷ್ಯಾ, 19 ವರುಶಗಳ ಬಳಿಕ 1989 ರಲ್ಲಿ 12.26 ಕಿ.ಮೀ. ಆಳ ತಲುಪಿ ಅಲ್ಲಿಂದ ಇನ್ನೂ ಆಳಕ್ಕೆ ಇಳಿಯಲು ತನ್ನ ಸಲಕರಣೆಗಳಿಂದ ಆಗದು ಎನ್ನುವ ತೀರ್ಮಾನವನ್ನು ಕೈಗೊಂಡು ಯೋಜನೆಯನ್ನು ಕೊನೆಗೊಳಿಸಿತು.

1                          (ರಷ್ಯಾದ ತೂತು ಕೊರೆಯುವ ಯೋಜನೆಯ ತಾಣ)

ಅಮೇರಿಕಾ ಅದಕ್ಕೂ ಮುಂಚೆ ಇಂತಹ ಆಳದ ತೂತು ಕೊರೆಯುವ ಕೆಲಸಕ್ಕೆ ಕೈಹಾಕಿ 9.583 ಕೀ.ಮೀ. ಆಳಕ್ಕೆ ಇಳಿಯಿತಾದರೂ, ರಷ್ಯಾ ತಲುಪಿದ ಆಳವನ್ನು ತಲುಪಲು ಅದಕ್ಕೆ ಆಗಲಿಲ್ಲ. ರಷ್ಯಾ ಕೊರೆದ ತೂತು ಮನುಷ್ಯರು ಮಾಡಿದ ಎಲ್ಲಕ್ಕಿಂತ ನೆಲದಾಳದ ತೂತು ಎಂಬ ತನ್ನ ಹಿರಿಮೆಯನ್ನು ಇಂದು ಕೂಡ ಕಾಯ್ದುಕೊಂಡಿದೆ.

ರಷ್ಯಾ ಕೈಗೊಂಡಿದ್ದ ಯೋಜನೆಯಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತೊಡಕುಗಳು ಅದಕ್ಕೆ ಎದುರಾದವು. 1984 ರಲ್ಲಿ ಸುಮಾರು 12000 ಮೀ (12 ಕಿ.ಮೀ.) ಆಳ ತಲುಪಿದಾಗ ಕೊರೆತದ ಸಲಕರಣೆಯ ಸುಮಾರು 5000 ಮೀ ಉದ್ದದ ಎಳೆ ನೆಲದೊಳಗೆ ಮುರಿದುಹೋಯಿತು. ಆಗ ಆ ಆಳವನ್ನು ಬಿಟ್ಟು ಸುಮಾರು 7000 ಮೀ ಆಳದಿಂದ ಬೇರೆ ದಾರಿಯಲ್ಲಿ ತೂತು ಕೊರೆಯುವ ಕೆಲಸವನ್ನು ಮುಂದುವರೆಸಬೇಕಾಯಿತು. ಮುಂದೆ 1989 ರಲ್ಲಿ 12262 ಮೀ. ತಲುಪಿದ ಕೊರೆತ ಅದೇ ವರುಶ 13500 ಮೀ ಮತ್ತು 1990 ರಲ್ಲಿ 15000 ಮೀ ತಲುಪಲಿದೆಯೆಂದು ರಷ್ಯಾ ಅಂದುಕೊಂಡಿತ್ತು.

ಆದರೆ 12262 ಮೀ. ಆಳ ತಲುಪುತ್ತಿದ್ದಂತೆ ನೆಲದಾಳದ ಕಾವು ಸುಮಾರು 180 ಡಿಗ್ರಿ ಸೆಲ್ಸಿಯಸ್ ಇರುವುದು ಗೊತ್ತಾಯಿತು. ಈ ಮಟ್ಟದ ಕಾವು (temperature) ಮುಂದುವರೆದರೆ 15000 ಮೀ ಆಳದಲ್ಲಿ ಕಾವು ಸುಮಾರು 300 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಅಷ್ಟು ಬಿಸುಪನ್ನು ತಡೆದುಕೊಳ್ಳಲು ಕೊರೆತದ ಸಲಕರಣೆಗೆ ಆಗದೆನ್ನುವ ತೀರ್ಮಾನಕ್ಕೆ ರಷ್ಯಾ ಬಂದಿತು. ಹಾಗಾಗಿ 12262 ಮೀ. ಆಳವೇ ಆ ಯೋಜನೆಯ ಕೊನೆಯಾಯಿತು.

2(ತೂತು ಕೊರೆಯುವ ಯೋಜನೆಯ ಚಿತ್ರ)

3 (ತೂತು ಕೊರೆಯಲು ಬಳಸಿದ ಸಲಕರಣೆ)

            ತಾನು ಅಂದುಕೊಂಡಿದ್ದ ಆಳವನ್ನು ತಲುಪಲು ಆಗದಿದ್ದರೂ, ರಷ್ಯಾ ಕೈಗೊಂಡ ಈ ಯೋಜನೆಯಲ್ಲಿ ಹಲವಾರು ಹೊಸದಾದ ವಿಷಯಗಳು ತಿಳಿದುಬಂದವು. ನೆಲದ ತೊಗಟೆಯ ಕಟ್ಟಣೆಯ ಬಗ್ಗೆ ಹಲವು ವಿಷಯಗಳು ಗೊತ್ತಾದವು. ಈ ಯೋಜನೆಯಲ್ಲಿ  ಕಂಡುಕೊಂಡ ಬೆರಗುಗೊಳಿಸಿದ ವಿಷಯಗಳೆಂದರೆ,

  1. ಸುಮಾರು 7 ಕಿ.ಮೀ. ಆಳದಲ್ಲಿ ಪೆಡಸುಕಲ್ಲುಗಳ(granite) ಮೇರೆ ಕೊನೆಯಾಗಿ ಕಪ್ಪುಗಲ್ಲುಗಳ (basalt) ಹರವು ಶುರುವಾಗದಿರುವುದು. ಈ ಆಳದ ಬಳಿಕ ಪೆಡಸುಕಲ್ಲುಗಳ ಮಾರ್ಪಟ್ಟ ರೂಪದ ಕಲ್ಲುಗಳೇ ಮುಂದುವರೆದಿರುವುದು ಈ ಯೋಜನೆಯಲ್ಲಿ ಕಂಡುಬಂದಿತು. ಅಷ್ಟೇ ಅಲ್ಲದೆ ಮಾರ್ಪಟ್ಟ ಈ ಪೆಡಸುಕಲ್ಲುಗಳಲ್ಲಿ ಬಿರುಕುಗಳಿದ್ದು, ಅಲ್ಲಿ ನೀರು ತುಂಬಿಕೊಂಡಿರುವುದು ಅರಿಮೆಗಾರರನ್ನು ಬೆರಗುಗೊಳಿಸಿತು. ಈ ನೀರು ನೆಲದ ಮೇಲ್ಮೈಯಿಂದ ಬರದೇ ನೆಲದ ಆಳದಿಂದ ಬಂದಿದ್ದೆಂದು ಅರಿಗರು ಎಣಿಸಿದ್ದಾರೆ.
  1. ನೆಲದಾಳದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹೈಡ್ರೋಜನ್ ಆವಿ ಕಂಡುಬಂದಿದ್ದು. ಯೋಜನೆಯಲ್ಲಿ ಪಾಲ್ಗೊಂಡಿದ್ದ ಅರಿಗರು ಹೇಳುವಂತೆ ಆಳದ ಕೊಳವೆಯಿಂದ ಹೊಮ್ಮುತ್ತಿದ್ದ ಮಣ್ಣು ಹೈಡ್ರೋಜನ್ ಆವಿಯಿಂದ ಕುದಿಯುತ್ತಿರುವಂತೆ ಕಂಡುಬಂದಿತಂತೆ.

ನೇಸರನ ಕುಟುಂಬದಲ್ಲೇ ವಿಶೇಷವಾದ ಸುತ್ತಣವನ್ನು ಹೊಂದಿರುವ ನಮ್ಮ ನೆಲದ ಒಳರಚನೆಯನ್ನು ತಿಳಿದುಕೊಳ್ಳುವ, ಅದರ ರಚನೆಯ ಏರ್ಪಾಟನ್ನು ಅರಿತುಕೊಳ್ಳುವ ಇಂತಹ ಕುತೂಹಲ ಮನುಷ್ಯರಿಗೆ ಹಿಂದಿನಿಂದಲೂ ಇರುವಂತದು. ನೆಲದ ಮೇಲ್ಮೈಯಲ್ಲಿ ಕಡಲುಗಳು ಹೇಗೆ ಉಂಟಾದವು? ಅದರ ಆಳದಲ್ಲೂ ನೀರಿದೆಯೆ? ಅದರ ಆಳದಲ್ಲಿ ಅದಿರುಗಳು, ಜಲ್ಲಿಗಳು ಯಾವ ರೂಪದಲ್ಲಿವೆ? ನೆಲದ ಒಳಪದರುಗಳ ಹಂಚಿಕೆ ಹೇಗಿದೆ? ಹೀಗೆ ಹತ್ತಾರು ಪ್ರಶ್ನೆಗಳು ಮಂದಿಯ ತಲೆಯನ್ನು ಕೊರೆಯುತ್ತ ಬಂದಿವೆ. ಆದರೆ ನೆಲದಾಳಕ್ಕೆ ತೂರಿ ಇವುಗಳನ್ನು ತಿಳಿದುಕೊಳ್ಳುವಂತಹ ಅಳವು ದಕ್ಕಿಸಿಕೊಳ್ಳಲು ಮಾತ್ರ ಇಲ್ಲಿಯವರೆಗೆ ಮನುಷ್ಯರಿಗೆ ಆಗಿಲ್ಲ.

ನೇರವಾಗಿ ಆಳಕ್ಕೆ ತೂರಿ ತಿಳಿದುಕೊಳ್ಳಲು ಆಗದಿದ್ದರೂ, ಎಂದಿನಂತೆ ಅರಿಮೆಯ ಚಳಕವನ್ನು ಬಳಸಿ ನೇರವಲ್ಲದ ದಾರಿಯಲ್ಲೇ ನೆಲದ ರಚನೆಯನ್ನು ತಕ್ಕಮಟ್ಟಿಗೆ ಕಂಡುಕೊಳ್ಳುವಲ್ಲಿ  ಮುಂದಡಿಯಿಡಬೇಕಾಯಿತು. ಅದರಂತೆ ನೆಲನಡುಕದ ಅಲೆಗಳು (seismic waves) ಸಾಗುವ ಬಗೆಯನ್ನು ಅರಿತುಕೊಂಡು ನೆಲದ ರಚನೆಯನ್ನು ಕೆಳಗಿನಂತೆ ಗುರುತಿಸಲಾಗಿದೆ.

4

ಹೀಗೆ ಗುರುತಿಸಿದ ಇಟ್ಟಳವು (structure) ತಕ್ಕಮಟ್ಟಿಗೆ ಸರಿಯಿದೆಯೆಂದು ಅರಿಮೆಗಾರರು ಒಪ್ಪಿದ್ದರೂ ಆಗಾಗ ಇದರಲ್ಲಿ ಹೊಸ ಕಂಡುಕೊಳ್ಳುವಿಕೆಗಳು ಹೊರಹೊಮ್ಮುತ್ತಲಿವೆ. ಮೇಲ್ಮೈಯಲ್ಲಿರುವ ಕಡಲ ನೀರಿಗಿಂತ ಹಲವು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿದೆ ಎಂಬಂತಹ ಸುದ್ದಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಏನೇ ಆಗಲಿ, ಮನುಷ್ಯರ ಮೈ ಶಕ್ತಿಗಿಂತ ಅವರ ಅರಿವಿನ ಹಿರಿಮೆ ಹೆಚ್ಚಿನದು. ನಮ್ಮ ನೆಲದಾಳಕ್ಕೆ ಇನ್ನೂ ಆಳದ ’ಅರಿವಿನ ತೂತು’ ಕೊರೆದು, ಒಡಲಾಳದ ತಿಳುವಳಿಕೆಯನ್ನು ತನ್ನದಾಗಿಸಿಕೊಳ್ಳುವಲ್ಲಿ  ಮುಂದಿನ ದಿನಗಳಲ್ಲಿ ಇನ್ನಷ್ಟು ಗೆಲುವು ಸಿಗಬಹುದು.

 (ಮಾಹಿತಿಯ ಮೂಲ: https://en.wikipedia.org/wiki/Kola_Superdeep_Borehole, http://www.autoorb.com)

ಸೂರ್ಯನ ಬಗ್ಗೆ ಗೊತ್ತೇ?

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ

1

ನೇಸರ, ಸೂರ್ಯ ಹೀಗೆ ಹಲವು ಹೆಸರುಗಳನ್ನು ಹೊತ್ತ ಬಾನಂಗಳದ ಬೆರಗು, ನಮ್ಮ ಇರುವಿಕೆಗೆ, ಬಾಳಿಗೆ ಮುಖ್ಯ  ಕಾರಣಗಳಲ್ಲೊಂದು. ನೇಸರನಿಂದ ದೊರೆಯುವ ಶಕ್ತಿಯನ್ನು ಬಳಸಿಕೊಂಡೇ ನೆಲದಲ್ಲಿರುವ ಕೋಟಿಗಟ್ಟಲೆ ಜೀವಿಗಳು ತಮ್ಮ ಬದುಕನ್ನು ಸಾಗಿಸುತ್ತಿವೆ. ಕಬ್ಬಿಗರ ಕವಿತೆಗಳಿಗೆ ನೇಸರನ ಚೆಲುವು ಹೇಗೆ ಹುರುಪು ತುಂಬತ್ತದೋ ಅಂತದೇ ಅಚ್ಚರಿಯ ವಿಷಯಗಳನ್ನು ಅರಿಮೆಯ ನೆಲೆಯಲ್ಲಿ ತನ್ನ ಒಡಲೊಳಗೆ ನೇಸರ ಅಡಗಿಸಿಕೊಂಡಿದ್ದಾನೆ. ಈ ಅಚ್ಚರಿಯ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸೂರ್ಯ ಭೂಮಿಯಿಂದ ಸುಮಾರು 15,00,00,000 ಕಿ.ಮೀ. ದೂರದಲ್ಲಿದ್ದಾನೆ. ಪ್ರತಿ ಸೆಕೆಂಡಿಗೆ ಸುಮಾರು 3,00,000 ಕಿ.ಮೀ. ವೇಗದಲ್ಲಿ ಸಾಗುವ ಬೆಳಕಿಗೆ ಸೂರ್ಯನಿಂದ ಹೊರಟು ನೆಲವನ್ನು ತಲುಪಲು ಸರಿಸುಮಾರು 8 ನಿಮಿಷ, 19 ಸೆಕೆಂಡುಗಳು ಬೇಕಾಗುತ್ತವೆ. ಸೂರ್ಯನ ದುಂಡಗಲ (diameter) ಸುಮಾರು 13,92,684 ಕಿ.ಮೀ. ಅಂದರೆ ಇದು ನಮ್ಮ ಭೂಮಿಯ ಸುಮಾರು 109 ಪಟ್ಟು! ಸೂರ್ಯನ ಅಳವಿ (volume) 1.41×1018 ಕಿ.ಮೀ. ಇದು ಭೂಮಿಯ ಅಳವಿಯ ಸುಮಾರು 13,00,000 ಪಟ್ಟು! ಸೂರ್ಯನ ರಾಶಿ (mass) 1.98855×1030 ಕೆ.ಜಿ.ಗಳು, ಈ ರಾಶಿ ಭೂಮಿ ರಾಶಿಯ ಸುಮಾರು 3,33,000 ಪಟ್ಟು!.

ಬುಧ, ಮಂಗಳ, ಭೂಮಿ, ಶುಕ್ರ, ಶನಿ, ಗುರು ಹೀಗೆ ಹಲವು ಬಾನಕಾಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ನೇಸರನ ಹೇರಳತೆಯ ಬಗ್ಗೆ ನಿಮಗೀಗ ಅರಿವಾಗಿರಬಹುದು. ಇತರ ಬಾನಕಾಯಗಳೊಂದಿಗೆ ಹೋಲಿಸುವ ಈ ಕೆಳಗಿನ ಚಿತ್ರವನ್ನು ನೋಡಿದರೆ ನಿಮಗೆ ಇನ್ನಷ್ಟು ಅಚ್ಚರಿಯಾಗಬಹುದು.

2

ಸೂರ್ಯ ಹುಟ್ಟು:

ಬಾನಂಗಳದಲ್ಲಿ ಇಷ್ಟೊಂದು ಕರಾರುವಕ್ಕಾಗಿ ಏರ್ಪಟ್ಟಿರುವ  ‘ಸೂರ್ಯ’ (Sun) ಎಂಬ ಬಾನಕಾಯದ ಹುಟ್ಟು, ಇತರ ನಕ್ಷತ್ರಗಳ ಹುಟ್ಟಿನಂತೆಯೇ ಆಗಿದೆ ಎಂದು ಅರಿಮೆಯ ನೆಲೆಯಲ್ಲಿ ಊಹಿಸಲಾಗಿದೆ. ಸುಮಾರು 4.57 ಬಿಲಿಯನ್ ವರುಷಗಳ ಹಿಂದೆ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳಿಂದ ಕೂಡಿದ್ದ ದೈತ್ಯ ಅಣುಮೋಡದ ಕುಸಿತದಿಂದ ಸೂರ್ಯ ಉಂಟಾಗಿದೆಯೆಂದು ಅರಿಗರು ಅಂದಾಜಿಸಿದ್ದಾರೆ. ಈ ಕುಸಿತ ಉಂಟಾದಾಗ ಹೇರಳವಾದ ಶಕ್ತಿ ಸೂರ್ಯನ ನಡುವಿನಲ್ಲಿ ಅಡಕಗೊಂಡು, ಅಳಿದುಳಿದ ಶಕ್ತಿಯು ತಟ್ಟೆಯ ಆಕಾರದಲ್ಲಿ ಹಲವು ಲಕ್ಷ ಕಿ.ಲೋ.ಗಳಷ್ಟು ದೂರ ಚದುರಿ, ಭೂಮಿಯೂ ಸೇರಿದಂತೆ ಸೂರ್ಯ ಏರ್ಪಾಟಿನಲ್ಲಿರುವ (Solar system) ಇತರ ಬಾನಕಾಯಗಳು ಉಂಟಾಗಿವೆ ಎಂಬುದು ಬಾನರಿಗರ ಅನಿಸಿಕೆ.

ಈ ಮುಂಚೆ ಸೂರ್ಯನಷ್ಟು ಹೊಳಪಿರುವ ಲೆಕ್ಕವಿಲ್ಲದಷ್ಟು ನಕ್ಶತ್ರಗಳು ಬಾನಂಗಳದಲ್ಲಿ ಇವೆಯೆಂದು ನಂಬಲಾಗಿತ್ತು ಆದರೆ ಇತ್ತೀಚಿನ ಅರಕೆಯಲ್ಲಿ ಕಂಡುಬಂದಿರುವುದೇನೆಂದರೆ ಸೂರ್ಯನ ಹೊಳಪು (brightness), ಹಾಲುಹಾದಿ  (milkyway) ಗ್ಯಾಲಕ್ಸಿಯಲ್ಲಿರುವ ಸುಮಾರು 85% ನಕ್ಶತ್ರಗಳಿಗಿಂತ ಹೆಚ್ಚಿನದಂತೆ. ಹೊಳಪಿನ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿರುವ ಸಿರಿಯುಸ್ (Sirius) ನಕ್ಷತ್ರದ ಹೊಳಪಿಗಿಂತ ನೇಸರನ ಹೊಳಪು ಸುಮಾರು 13 ಬಿಲಿಯನ್ ಪಟ್ಟು ಹೆಚ್ಚಾಗಿದೆ!.

ಸೂರ್ಯನ ಏರ್ಪಾಡು:

ಬೆಂಕಿಯನ್ನು ಉಗುಳುವ ಬಾನುಂಡೆಯಂತೆ ಕಾಣುವ ಸೂರ್ಯನಲ್ಲಿ ಮುಖ್ಯವಾಗಿ ತಿರುಳು (core), ಸೂಸಿಕೆಯ ಹರವು (radiative zone), ಒಯ್ಯಿಕೆಯ ಹರವು (convective zone), ಬೆಳಕುಗೋಳ (photosphere), ಬಣ್ಣಗೋಳ (chromosphere), ಹೊಳಪುಗೋಳ (corona) ಎಂಬ ಭಾಗಗಳನ್ನು ಗುರುತಿಸಲಾಗಿದೆ.

3

ತಿರುಳು (core): ಇದು ಸೂರ್ಯನ ನಟ್ಟನಡುವಿನ ಭಾಗ. ಈ ಒಳಭಾಗ ಸೂರ್ಯನ ಒಟ್ಟು ಅಳತೆಯ ಸುಮಾರು 20-25% ನಷ್ಟಿದೆ. ನೇಸರನಲ್ಲಿ ಉಂಟಾಗುವ ಶಕ್ತಿಯ ಪ್ರಮಾಣದಲ್ಲಿ ಸುಮಾರು 99% ಶಕ್ತಿಯು ಈ ಭಾಗದಲ್ಲಿಯೇ ಉಂಟಾಗುತ್ತದೆ. ಹೇರಳವಾದ ಶಕ್ತಿ ಬಿಡುಗಡೆಯಾಗುವ ಈ ಭಾಗದಲ್ಲಿರುವ ಬಿಸುಪು (temperature) ಸುಮಾರು 1,50,00,000 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ! ಹೈಡ್ರೋಜನ್ ಅಣುಗಳ ಬೆಸುಗೆಯಿಂದಾಗಿ (nuclear fusion) ತಿರುಳಿನ ಭಾಗದಲ್ಲಿ ಹೇರಳವಾದ ಶಕ್ತಿ ಬಿಡುಗಡೆಯಾಗುತ್ತದೆ. ಹೈಡ್ರೋಜನ್ ಅಣುಗಳ ಬೆಸುಗೆಯ ಬಳಿಕ ಅವುಗಳು ಹೀಲಿಯಂ ಅಣುಗಳಾಗಿ ಬದಲಾಗುತ್ತವೆ. ಈ ಬೆಸುಗೆಯಲ್ಲಿ ಅಣುಗಳ ರಾಶಿಯ ಕೊಂಚ ಪಾಲು ಶಕ್ತಿಯಾಗಿ ಮಾರ್ಪಡುತ್ತದೆ.

ಸೂಸಿಕೆಯ ಹರವು (radiative zone): ತಿರುಳಿನಲ್ಲಿ ಉಂಟಾಗುವ ಶಕ್ತಿ ನೇಸರನ ಮೇಲ್ಮೈವರೆಗೆ ತಲುಪಿಸುವಲ್ಲಿ ಇದು ಮೊದಲ ಹಂತ. ಇಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳು ಬೆಳಕಿಗಳ (photon) ರೂಪದಲ್ಲಿ ಕಾವನ್ನು ಸೂಸಿ ಇತರ ಭಾಗಗಳಿಗೆ ಶಕ್ತಿಯನ್ನು ಸಾಗಿಸುತ್ತವೆ.

 ಒಯ್ಯಿಕೆಯ ಹರವು (convective zone): ಸೂಸಿಕೆಯ ಹರವಿನ ಬಳಿಕ ಬರುವ ಈ ಭಾಗದಲ್ಲಿ ಅಣುಗಳು ತಮ್ಮ ಸಾಗಾಟಾದ ಮೂಲಕ ಕಾವನ್ನು (heat) ಇತರ ಭಾಗಗಳಿಗೆ ಒಯ್ಯುತ್ತವೆ. ತಿರುಳು ಮತ್ತು ಸೂಸಿಕೆಯ ಹರವಿಗೆ ಹೋಲಿಸಿದರೆ ಈ ಭಾಗದಲ್ಲಿ ಬಿಸುಪು ತುಂಬಾ ಕಡಿಮೆ ಇರುತ್ತದೆ. 1.5 ಕೋಟಿ ಡಿಗ್ರಿ ಸೆಲ್ಸಿಯಸ್ ಇದ್ದ ಬಿಸುಪು, ಈ ಭಾಗದಲ್ಲಿ ಸುಮಾರು 5700 ಡಿಗ್ರಿ ಸೆಲ್ಸಿಯಸ್‍ಗೆ ಇಳಿಯುತ್ತದೆ.

ಬೆಳಕುಗೋಳ (photosphere): ಹೆಸರೇ ಸೂಚಿಸುವಂತೆ ಸೂರ್ಯನಲ್ಲಿ ಉಂಟಾಗುವ ಶಕ್ತಿ ಬೆಳಕಿನ ರೂಪದಲ್ಲಿ ನಮಗೆ ಕಾಣುವುದು ಈ ಭಾಗದಿಂದಾಗಿಯೇ. ಅಚ್ಚರಿಯ ವಿಷಯವೆಂದರೆ ಇಲ್ಲಿ ಉಂಟಾಗುವ ಶಕ್ತಿಯ ರೂಪವಾದ ’ಬೆಳಕು’ ಸೂರ್ಯನ ಮೇಲ್ಮೈ ಕಡೆಗೆ ಮತ್ತು ಅದರಾಚೆಗೆ ತೆರುವಿನಲ್ಲಿ (space) ಸಾಗಬಲ್ಲದು ಆದರೆ ಅದು ಸೂರ್ಯನ ಒಳಭಾಗಕ್ಕೆ ಸಾಗಲಾರದು.

ಬೆಳಕುಗೋಳದ ಬಳಿಕ ಸುಮಾರು 500 ಕಿ.ಮೀ. ವರೆಗೆ ಬಿಸುಪು (temperature) ತುಂಬಾ ಕಡಿಮೆಯಾಗುತ್ತದೆ. ಒಂದು ಹಂತದಲ್ಲಿ ಬಿಸುಪು ಸೂರ್ಯನ ಇತರೆಡೆಗಳಿಗಿಂತ ಎಲ್ಲಕ್ಕಿಂತ ಕಡಿಮೆ ಎನ್ನಬಹುದಾದ 4700 ಡಿಗ್ರಿ ಸೆಲ್ಸಿಯಸ್ ಮಟ್ಟವನ್ನು ತಲಪುತ್ತದೆ. ಬೆಳಕುಗೋಳವಾದ ಮೇಲೆ ಕಾಣುವ ಬಣ್ಣಗೋಳ, ಹೊಳಪುಗೋಳ ಮುಂತಾದ ನೇಸರನ ಇತರೆ ಭಾಗಗಳನ್ನು ಒಟ್ಟಾರೆಯಾಗಿ ಸೂರ್ಯನ ಸುತ್ತಣ (Sun’s atmosphere) ಎಂದು ಗುರುತಿಸಲಾಗುತ್ತದೆ.

ಬಣ್ಣಗೋಳ (chromosphere): ಕಡಿಮೆ ಬಿಸುಪು ಹೊಂದಿರುವ ಭಾಗದ ಬಳಿಕ ಇರುವುದೇ ಬಣ್ಣಗೋಳ. ಸುಮಾರು 2000 ಕಿ.ಮೀ. ಆಳದಷ್ಟು ಹರಡಿಕೊಂಡಿರುವ ಈ ಭಾಗದಲ್ಲಿ ಬಿಸುಪು ಮತ್ತೇ ಏರತೊಡಗುತ್ತದೆ. ಈ ಭಾಗದ ಹೊರಮೈಯಲ್ಲಿ ಸರಿಸುಮಾರು 20,000 ಡಿಗ್ರಿ ಸೆಲ್ಸಿಯಸ್ ಬಿಸುಪಿರುತ್ತದೆ. ಗ್ರಹಣ (Solar eclipse) ಉಂಟಾದಾಗ ಈ ಭಾಗ ಬಣ್ಣದ ಮಿಂಚಿನಂತೆ ಹೊಳೆಯುವುದರಿಂದ ಇದನ್ನು ಬಣ್ಣಗೋಳ ಅಂತಾ ಕರೆಯಲಾಗುತ್ತದೆ.

ಹೊಳಪುಗೋಳ (corona): ಇದು ಬಣ್ಣಗೋಳದ ಬಳಿಕ ಬರುವ ನೇಸರನ ಸುತ್ತಣದ ಭಾಗ. ಈ ಭಾಗದಲ್ಲಿ ಬಿಸುಪು ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಬಿಸುಪು ಸುಮಾರು 20,00,000 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ. ಬಣ್ಣಗೋಳ ಮತ್ತು ಹೊಳಪುಗೋಳದಲ್ಲಿ ಬಿಸುಪು ಹೆಚ್ಚಿರಲು ಕಾರಣವೇನೆಂದು ಇನ್ನೂ ಸರಿಯಾಗಿ ತಿಳಿದಿಲ್ಲವಾದರೂ, ಇದಕ್ಕೆ ಆಲ್ಪವಿನ್ ಅಲೆಗಳು (Alfvén waves) ಎಂದು ಕರೆಯಲಾಗುವ ಕಾವಿನ ಅಲೆಗಳು ಕಾರಣವೆಂದು ಊಹಿಸಲಾಗಿದೆ. ಗ್ರಹಣದ ಹೊತ್ತಿನಲ್ಲಿ ಈ ಭಾಗ ಸೂರ್ಯನ ಸುತ್ತ ಉಂಗುರದಂತೆ ಹೊಳೆಯುತ್ತದೆ.

ಹೊಳಪುಗೋಳವು ಸೂರ್ಯನ ಹೊರಭಾಗವಾಗಿದ್ದರೂ ಅದಾದ ಮೇಲೆಯೂ ಹಲವು ಲಕ್ಷ ಕಿ.ಮೀ.ಗಳಷ್ಟು ದೂರದವರೆಗೆ ಸೂರ್ಯನಲ್ಲಿ ಉಂಟಾಗುವ ಕಾವಿನ ಅಲೆಗಳು ಹಬ್ಬುತ್ತವೆ. ಒಟ್ಟಾರೆಯಾಗಿ ಈ ಅಲೆಗಳನ್ನು ಸೂರ್ಯನ ಗಾಳಿ (Solar wind) ಎಂದು ಕರೆಯಲಾಗುತ್ತದೆ.

ಸೂರ್ಯನಲ್ಲಿರುವ ಅಡಕಗಳು:

ಸೂರ್ಯನಲ್ಲಿ ಶಕ್ತಿ ಉಂಟಾಗಲು ಕಾರಣವಾದ ಹೈಡ್ರೋಜನ್ ಹೆಚ್ಚಿನ ಪ್ರಮಾಣದಲ್ಲಿದೆ. ಸೂರ್ಯನಲ್ಲಿರುವ ಅಡಕಗಳ ಪ್ರಮಾಣವನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

4

ಸೂರ್ಯನ ಸಾವು:

ಹುಟ್ಟಿದ ಎಲ್ಲವೂ ಒಂದು ದಿನ ಸಾವಿಗೆ ಶರಣಾಗಬೇಕು ಅನ್ನುವ ಮಾತು ಅರಿಮೆಯ ನೆಲೆಯಲ್ಲಿ ಸೂರ್ಯನಿಗೂ ತಪ್ಪಿದ್ದಲ್ಲ. ಸೂರ್ಯನಲ್ಲಿ ಶಕ್ತಿ ಉಂಟಾಗಲು ಕಾರಣವಾದ ಹೈಡ್ರೋಜನ್ ಅಣುಗಳು ತೀರಿದ ಮೇಲೆ, ಸೂರ್ಯ ಸಾವಿನಂಚಿಗೆ ತಲುಪಲಿದ್ದಾನೆ. ಈ ಹಂತದಲ್ಲಿ ಸೂರ್ಯನ ಗಾತ್ರ ದೊಡ್ದದಾಗುತ್ತ ಹೋಗಿ ಬುಧ, ಶುಕ್ರ ಮತ್ತು ಭೂಮಿಯ ದೂರವನ್ನು ನುಂಗಿಹಾಕುವಷ್ಟು ಅಗಲವಾಗಿ ಬೆಳೆಯುತ್ತಾನೆ. ಹಾ! ಈಗಲೇ ಚಿಂತಿಸಬೇಡಿ ಅದಕ್ಕಿನ್ನೂ 5.7 ಬಿಲಿಯನ್ ವರ್ಷಗಳು ಬೇಕು.

(ಮಾಹಿತಿ ಸೆಲೆಗಳು: http://www.dirish.com/http://en.wikipedia.org/wiki/Sunhttp://www.thunderbolts.info/)

ಬೀಳುವಿಕೆಯ ಬೆರಗು

ಹೀಗೊಂದು ಪ್ರಶ್ನೆ,

ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?

ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ ಗುಂಡು ಮೊದಲು ನೆಲವನ್ನು ತಲುಪುತ್ತದೆ ಅಂತಾ ನೀವನ್ನಬಹುದು. ಉತ್ತರ ಸರಿಯಾಗಿಯೇ ಇದೆ.

ವಸ್ತುವೊಂದು ನೆಲದೆಡೆಗೆ ಬೀಳಲು ನೆಲಸೆಳೆತ (earth’s gravity) ಕಾರಣ ಮತ್ತು ಈ ಸೆಳೆತವು ವಸ್ತುವಿನ ರಾಶಿಗೆ (mass) ತಕ್ಕಂತೆ ಇರುತ್ತದೆ ಅಂದರೆ ಹೆಚ್ಚಿನ ರಾಶಿವುಳ್ಳ ವಸ್ತುವು ಹೆಚ್ಚಿನ ನೆಲಸೆಳೆತಕ್ಕೆ ಒಳಗಾಗಿ ಬೇಗನೇ ನೆಲಕ್ಕೆ ಬೀಳುತ್ತದೆ ಅನ್ನುವ ಹೆಚ್ಚಿನ ವಿಷಯವನ್ನೂ ನೀವು ಮೇಲಿನ ಪ್ರಶ್ನೆಗೆ ಉತ್ತರವಾಗಿ ನೀಡಬಹುದು.

ಈಗ ಮೇಲಿನ ಪ್ರಶ್ನೆಗೆ ತುಸು ಕಟ್ಟುಪಾಡು ಹಾಕೋಣ,

ಅದೇ ಎತ್ತರದಿಂದ ಗಾಳಿಯಿರದ ಬರಿದುದಾಣದಲ್ಲಿ (vacuum chamber) ಅದೇ ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯನ್ನು ನೆಲದೆಡೆಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತದೆ?

ಎರಡೂ ಒಂದೇ ಹೊತ್ತಿಗೆ ನೆಲವನ್ನು ತಲಪುತ್ತವೆ.

ಅನ್ನುವ ಉತ್ತರವನ್ನು ಕೇಳಿದರೆ ಅಚ್ಚರಿಯಾಗಬಹುದು.

ಗಾಳಿಯನ್ನಷ್ಟೇ  ತೆಗೆದು ತಾಣವನ್ನು ಬರಿದಾಗಿಸಿದಾಗ ವಸ್ತುಗಳ ರಾಶಿಯಂತೂ ಬದಲಾಗುವುದಿಲ್ಲ ಹಾಗಾಗಿ ನೆಲಸೆಳೆತವು ಬದಲಾಗದು ಆದರೂ ತೂಕದ ಗುಂಡು ಮತ್ತು ಹಗುರವಾದ ಗರಿ ನೆಲವನ್ನು ಸೇರಲು ಅಷ್ಟೇ ಹೊತ್ತನ್ನು ಹೇಗೆ ತೆಗೆದುಕೊಂಡವು? ಉತ್ತರವನ್ನು ಕಂಡುಕೊಳ್ಳುವ ಮುನ್ನ, ಅಮೇರಿಕಾದ ನಾಸಾ ಬರಿದುದಾಣದಲ್ಲಿ (vacuum chamber) ನಡೆಸಿದ ಈ ಮೇಲಿನ ಎರಡೂ ಪ್ರಯೋಗಗಳನ್ನು ಕೆಳಗಿನ ವಿಡಿಯೋದಲ್ಲಿ  ನೋಡೋಣ

  1. ಗಾಳಿ ಇರುವಾಗ ವಸ್ತುಗಳ ಬೀಳುವಿಕೆ:

  1. ಗಾಳಿ ಬರಿದಾಗಿಸಿದಾಗ ವಸ್ತುಗಳ ಬೀಳುವಿಕೆ:

ಬೀಳುವಿಕೆಯ ಈ ಹಿನ್ನೆಲೆಯನ್ನು ತಿಳಿದುಕೊಳ್ಳೊಲು ಮೊದಲು ’ವೇಗಮಾರ್ಪು’ ಅನ್ನುವುದನ್ನು ಅರಿಯೋಣ. ವೇಗ (velocity) ಮಾರ್ಪಡುವ ಮಟ್ಟವನ್ನು ವೇಗಮಾರ್ಪು (acceleration) ಅನ್ನುತ್ತಾರೆ. ಉದಾಹರಣೆಗೆ: ಕಾರೊಂದನ್ನು 50 km/h ಅಷ್ಟು ವೇಗದಲ್ಲಿ ಓಡಿಸುತ್ತಿದ್ದೀರಿ ಅಂದುಕೊಳ್ಳೋಣ. ಈ ವೇಗ ಬದಲಾಗದೇ ಅಷ್ಟೇ ಇದ್ದರೆ ಅದರ ವೇಗಮಾರ್ಪು ಸೊನ್ನೆಯಾಗಿರುತ್ತದೆ. ಏಕೆಂದರೆ ಕಾರಿನ ವೇಗ ಮಾರ್ಪಡದೆ ಅಷ್ಟೇ ಇದೆ. ಈಗ ಕಾರಿನ ವೇಗ ಸೆಕೆಂಡಿಗೆ 1 km ನಷ್ಟು ಬದಲಾಗುತ್ತಾ ಹೊರಟರೆ ಅದರ ವೇಗಮಾರ್ಪು 1 km/s2  ಆಗಿರುತ್ತದೆ.

ವಸ್ತುವೊಂದು ನೆಲಸೆಳೆತಕ್ಕೆ ಒಳಗಾದಾಗ ಅದರ ವೇಗಮಾರ್ಪು 9.81 m/s2  ನಷ್ಟಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಇದನ್ನು ನೆಲಸೆಳೆತದಿಂದಾದ ವೇಗಮಾರ್ಪು (acceleration due to gravity) ಎಂದು ಕರೆಯುತ್ತಾರೆ. ಇದನ್ನು ‘g’ ಗುರುತಿನಿಂದ ಗುರುತಿಸಲಾಗುತ್ತದೆ. ನೆಲದ ಮೇಲ್ಮೈಯ ಎತ್ತರಕ್ಕೆ ಅನುಗುಣವಾಗಿ ಇದರ ಬೆಲೆ ತುಸು ಬದಲಾದರೂ ಸರಾಸರಿಯಾಗಿ 9.81 m/s2  ಅಂತಾ ಬಳಸುವುದರಿಂದಲೆಕ್ಕಾಚಾರದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ.

ಕೆಳಗಿನ ಚಿತ್ರದಲ್ಲಿ ನೆಲಸೆಳೆತದಿಂದಾಗುವ ವೇಗದ ಬದಲಾವಣೆಯನ್ನು ಅಂದರೆ ವೇಗಮಾರ್ಪನ್ನು  ತೋರಿಸಲಾಗಿದೆ. ವಸ್ತುವೊಂದನ್ನು ಕೈಯಲ್ಲಿ ಹಿಡಿದಿರುವಾಗ ಅದರ ವೇಗ ’0’ ಆಗಿರುತ್ತದೆ ಅದೇ ನೆಲದೆಡೆಗೆ ಅದನ್ನು ಬಿಟ್ಟರೆ ಅದರ ವೇಗ ಪ್ರತಿ ಸೆಕೆಂಡಿಗೆ 9.81 ಮೀಟರ್‍ ನಷ್ಟು ಬದಲಾಗುತ್ತಾ ಹೋಗುತ್ತದೆ. ಕೈಬಿಟ್ಟ ಮೊದಲ ಸೆಕೆಂಡಿಗೆ ಅದರ ವೇಗ 9.81 m/s ಆಗಿದ್ದರೆ, ಎರಡನೇ ಸೆಕೆಂಡಿಗೆ ಅದು 9.81 X 2 = 19.6 m/s, ಮೂರನೇ ಸೆಕೆಂಡಿಗೆ 9.81 X 3 = 29.4 m/s ಆಗಿರುತ್ತದೆ. ಹೀಗೆ ನೆಲ ತಲುಪುವವರೆಗೂ ಅದರ ವೇಗ ಒಂದೇ ಮಟ್ಟದಲ್ಲಿ ಬದಲಾಗುತ್ತಾ ಹೋಗುತ್ತದೆ.

acceleration-gravity

ವಸ್ತುವೊಂದರ ವೇಗವು ಯಾವ ಮಟ್ಟದಲ್ಲಿರುತ್ತದೆ ಮತ್ತು ಆ ವೇಗ ಯಾವ ಮಟ್ಟದಲ್ಲಿ ಮಾರ್ಪಡುತ್ತದೆ ಅನ್ನುವುದರ ಮೇಲೆ, ಆ ವಸ್ತುವು ಎಷ್ಟು ಬೇಗ ಸಾಗುತ್ತದೆ ಅನ್ನುವುದು ತೀರ್ಮಾನವಾಗುತ್ತದೆ. ಬೇರಾವುದೇ ಬಲಕ್ಕೆ ಒಳಪಡದೆ ಬರೀ ನೆಲಸೆಳತದ ಬಲಕ್ಕೆ ಒಳಪಟ್ಟ ವಸ್ತುಗಳ ವೇಗಮಾರ್ಪಿನ ಮಟ್ಟ ಒಂದೇ ಆಗಿರುತ್ತದೆ. ಅಂದರೆ ಅದಾವುದೇ ವಸ್ತುವಿದ್ದರೂ ಅದರ ವೇಗ ಪ್ರತಿ ಸೆಕೆಂಡಿಗೆ 9.81 m/s ನಷ್ಟು ಬದಲಾಗುತ್ತದೆ.

ಈಗ ಈ ಬರಹದ ಮೊದಲ ಭಾಗದಲ್ಲಿರುವ ಪ್ರಶ್ನೆಗಳು ಮತ್ತು ವೇಗಮಾರ್ಪಿನ ಮೇಲಿನ ತಿಳುವಳಿಕೆಯನ್ನು ತಳಕುಹಾಕಿದರೆ, ಬರಿದುದಾಣದಲ್ಲಿ (vaccum) ವಸ್ತುಗಳು ನೆಲವನ್ನು ಸೇರಲು ತೆಗೆದುಕೊಳ್ಳವ ಹೊತ್ತು ’ವೇಗಮಾರ್ಪಿನ’ ಮೇಲೆ ನಿಂತಿದೆ ಹೊರತು ಅವುಗಳ ’ರಾಶಿಯ’ (mass) ಮೇಲಲ್ಲ ಅನ್ನುವುದು ತಿಳಿದುಬರುತ್ತದೆ. ನೆಲಸೆಳೆತದಿಂದಾಗುವ ವೇಗಮಾರ್ಪು ಬದಲಾಗದಿರುವುದರಿಂದ ತೂಕದ ಮತ್ತು ಹಗುರವಾದ ಎರಡೂ ವಸ್ತುಗಳೂ ಒಂದೇ ಹೊತ್ತಿಗೆ ನೆಲವನ್ನು ಸೇರುತ್ತವೆ.

ಈ ತಿಳುವಳಿಕೆಯನ್ನು ನ್ಯೂಟನ್‍ರ ಎರಡನೇ ಕಟ್ಟಲೆಯಿಂದಲೂ ಕೆಳಗಿನಂತೆ ತೋರಿಸಬಹುದು.  ಈ ಕಟ್ಟಲೆಯ ಪ್ರಕಾರ,

            ಬಲ = ರಾಶಿ X ವೇಗಮಾರ್ಪು

           >> F = m X a

        ಇಲ್ಲಿ, ವೇಗಮಾರ್ಪು ‘ನೆಲಸೆಳೆತದಿಂದಾದ ವೇಗಮಾರ್ಪು’ ಆಗಿರುವುದರಿಂದ a = g = 9.81 m/s2  ಆಗಿರುತ್ತದೆ.

         ಈಗ ತೂಕದ ವಸ್ತುವನ್ನು 1 ರಿಂದ ಮತ್ತು ಹಗುರವಾದ ವಸ್ತುವನ್ನು 2 ರಿಂದ ಸೂಚಿಸೋಣ.

         ತೂಕದ ವಸ್ತು       : F1 = m1 X g
         ಹಗರುವಾದ ವಸ್ತು : F2 = m2 X g

              >> F1/m1 = F2/m2

ಮೇಲಿನ ನಂಟಿನಿಂದ ತಿಳಿದುಬರುವುದೇನೆಂದರೆ, ತೂಕದ ಮತ್ತು ಹಗುರವಾದ ವಸ್ತುಗಳ ನೆಲಸೆಳೆತದ ಬಲ ಮತ್ತು ರಾಶಿಗಳ ಅನುಪಾತ ಒಂದೇ ಆಗಿರುತ್ತದೆ. ಅಂದರೆ ತೂಕದ ವಸ್ತುವು ಹೆಚ್ಚಿನ ನೆಲಸೆಳೆತದ ಬಲಕ್ಕೆ ಒಳಪಟ್ಟರೂ ಅದರ ಹೆಚ್ಚಿನ ರಾಶಿ ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ.

 

ಸರಿ. ಬರಿದುದಾಣದಲ್ಲಿ ತೂಕದ ಮತ್ತು ಹಗುರವಾದ ವಸ್ತುಗಳು ನೆಲ ತಲುಪಲು ಅಷ್ಟೇ ಹೊತ್ತನ್ನು ತೆಗೆದುಕೊಳ್ಳುವುದೇಕೆ ಎಂದು ತಿಳಿದೆವು. ಆದರೆ ಗಾಳಿಯ ಸುತ್ತಣ ಇದ್ದಾಗ ಏನಾಗುತ್ತದೆ? ನಮ್ಮ ದಿನದ ಬದುಕಿನಲ್ಲಿ ಕಾಣುವಂತೆ ತೂಕದ ವಸ್ತುವೇಕೆ ಮೊದಲು ನೆಲವನ್ನು ತಲಪುತ್ತದೆ? ಅನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ ಅಲ್ಲವೇ.

 

ಗಾಳಿಯ ಸುತ್ತಣದಲ್ಲಿ ವಸ್ತುಗಳನ್ನು ಬಿಟ್ಟಾಗ ನೆಲಸೆಳೆತದ ಜತೆಗೆ ಇನ್ನೊಂದು ಬಲವು ವಸ್ತುಗಳ ಮೇಲೆ ಎರಗುತ್ತದೆ. ಅದೇ ಎಳೆತದ ಬಲ (drag force) ಇಲ್ಲವೇ ಗಾಳಿತಡೆ (air resistance). ಈ ಬಲವು ವಸ್ತುಗಳ ಸಾಗಾಣೆಯ ಎದುರಾಗಿ ಕೆಲಸ ಮಾಡುತ್ತದೆ ಅಂದರೆ ನೆಲಸೆಳೆತದಿಂದಾಗಿ ಕೆಳಗೆ ಸಾಗುತ್ತಿರುವ ವಸ್ತುವಿನ ಮೇಲೆ ಗಾಳಿಯ ಎಳೆತದ ಬಲವು ಮೇಲ್ಮುಖವಾಗಿರುತ್ತದೆ.

 

ಗಾಳಿಯ ಸುತ್ತಣದಿಂದಾಗುವ ಈ ಎಳೆತ ಬಲದ ಮಟ್ಟವು ವಸ್ತುವಿನ ದಟ್ಟಣೆ (density), ವೇಗ (velocity), ಹರವಿಗೆ (area) ತಕ್ಕಂತೆ ಇರುತ್ತದೆ. ಒಂದೇ ಹರವಿನ ಆದರೆ ಎರಡು ಬೇರೆ ತೂಕವುಳ್ಳ ವಸ್ತುಗಳನ್ನು ಹೋಲಿಸಿದರೆ, ತೂಕದ ವಸ್ತುವಿನ ಮೇಲೆ ಈ ಎಳೆತ ಬಲದ ಪರಿಣಾಮ ಕಡಿಮೆ ಇರುತ್ತದೆ. ಇದನ್ನು ಗಣಿತದ ನಂಟುಗಳಿಂದ ಈ ಕೆಳಗಿನಂತೆ ತೋರಿಸಬಹುದು.

ತೂಕದ ವಸ್ತುವಿನ ಮೇಲೆ ಎರಗುವ,

ಒಟ್ಟು ಬಲ = ನೆಲಸೆಳೆತದ ಬಲ (gravitational force) – ಎಳೆತದ ಬಲ (drag force),

Fn = F1 – Fd

ಇಲ್ಲಿ, F1 = ನೆಲಸೆಳೆತದ ಬಲ, Fd = ಎಳೆತದ ಬಲ.
ಎಳೆತದ ಬಲವು ಸಾಗಾಟದ ಎದುರಾಗಿ ಕೆಲಸ ಮಾಡುವುದರಿಂದ ಕಳೆ ಗುರುತನ್ನು ಬಳಸಲಾಗಿದೆ.

>> Fn = F1 – Fd ನಂಟಿಗೆ ತೂಕದ ವಸ್ತುವಿನ ರಾಶಿ ’m1′ ನಿಂದ ಬಾಗಿಸಿದಾಗ (divide),

>> Fn/m1 = F1/m1 – Fd/m1

>> a1 = g – Fd/m1

ಇಲ್ಲಿ, a1 = ತೂಕದ ವಸ್ತುವಿನ ಒಟ್ಟಾರೆ ವೇಗಮಾರ್ಪು, g = ನೆಲಸೆಳೆತದಿಂದಾದ ವೇಗಮಾರ್ಪು

ಈ ಮೇಲಿನ ನಂಟು ನಾವು ಈ ಮೊದಲು ಕಂಡುಕೊಂಡ ವಿಷಯವನ್ನೇ ಹೇಳುತ್ತದೆ. ರಾಶಿ ಹೆಚ್ಚಿರುವ ವಸ್ತುವಿನ ಮೇಲೆ ಗಾಳಿ ಎಳೆತದ ಪರಿಣಾಮ ಕಡಿಮೆ ಇರುತ್ತದೆ ಏಕೆಂದರೆ ರಾಶಿ ಹೆಚ್ಚಿದಂತೆ ‘Fd/m1’ ನ ಬೆಲೆ ಕಡಿಮೆಯಾಗುತ್ತದೆ ಮತ್ತು ಆ ಮೂಲಕ ವಸ್ತುವಿನ ಒಟ್ಟು ವೇಗಮಾರ್ಪು ‘a1’ ಹೆಚ್ಚುತ್ತದೆ.

ಹಾಗಾಗಿ ಗಾಳಿಯ ಸುತ್ತಣವಿರುವಾಗ ತೂಕದ ವಸ್ತುವು ಹಗುರವಾದ ವಸ್ತುವಿಗಿಂತ ಬೇಗನೆ ನೆಲವನ್ನು ತಲಪುತ್ತದೆ ಮತ್ತು ಬರಿದಿನಲ್ಲಿ (vacuum) ಗಾಳಿ ಎಳೆತದ ಬಲ ಇಲ್ಲದಿರುವುದರಿಂದ, ನೆಲಸೆಳೆತದ ವೇಗಮಾರ್ಪು ಬದಲಾಗದಿರುವುದರಿಂದ ತೂಕ ಮತ್ತು ಹಗುರವಾದ ಎರಡೂ ವಸ್ತುಗಳು ಒಂದೇ ಹೊತ್ತಿಗೆ ನೆಲವನ್ನು ತಲಪುತ್ತವೆ.

’ಸ್ಪೇಸ್ ಸೂಟ್’ ಅಂದರೇನು?

ದೂರದ ಬಾನಂಗಳದಲ್ಲಿ ಪಯಣಿಸುತ್ತ ನೆಲದಾಚೆಗಿನ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆಯಲ್ಲಿ ಮನುಷ್ಯರು ಚಂದ್ರನಲ್ಲಿ ಇಳಿಯುವಲ್ಲಿ ಗೆಲುವು ಕಂಡಿದ್ದಾರೆ. ಆಗಸವನ್ನು ಅರಸುವ ಕೆಲಸಕ್ಕಾಗಿ ನೆಲದಿಂದ ಸುಮಾರು 400 ಕಿ.ಮೀ. ಎತ್ತರದಲ್ಲಿ ತಮ್ಮದೊಂದು ಬಾನ್ನೆಲೆಯನ್ನೂ (space station) ಕಟ್ಟಿಕೊಂಡಿದ್ದಾರೆ.

ತುಸು ಹೆಚ್ಚಿನ ಚಳಿ ಇಲ್ಲವೇ ಹೆಚ್ಚಿನ ಎತ್ತರಕ್ಕೆ ಸಾಗುವಾಗ ಆಗುವ ತೊಡಕುಗಳನ್ನು ತಾಳಿಕೊಳ್ಳಲು ಹೆಣಗಾಡುವ ಮನುಷ್ಯರ ಮೈ, ಬಾನಿನಲ್ಲಿ ಅಷ್ಟೊಂದು ಎತ್ತರದಲ್ಲಿ, ಚಳಿ-ಬಿಸಿ ಎಲ್ಲೆ ಮೀರಿದ ಹೊಯ್ದಾಟದಲ್ಲಿ ಹೇಗೆ ಗಟ್ಟಿಯಾಗಿಯಿರಬಲ್ಲದು? ಗಾಳಿ-ಚಳಿ-ಬಿಸಿ-ಒತ್ತಡಗಳ ಏರುಪೇರುಗಳ ನಡುವೆ ಬಾನದೆರವಿನಲ್ಲಿ (space) ಬಾನಾಡಿಗರನ್ನು ಕಾಪಾಡುವುದೇ ಅವರು ತೊಡುವ ಉಡುಪು. ಬನ್ನಿ, ಬಾನುಡುಪುಗಳ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ.

apollo_moonwalk2_space_suit

ನೆಲದಿಂದ ಸುಮಾರು 15-19 ಕಿ.ಮೀ. ಎತ್ತರಕ್ಕೆ ತಲುಪಿದಂತೆ ವಾತಾವರಣದಲ್ಲಿ ಉಂಟಾಗುವ ಏರುಪೇರುಗಳು ಮನುಷ್ಯರ ಮೈ ತಾಳಿಕೊಳ್ಳಲಾಗದ ಮಟ್ಟವನ್ನು ತಲುಪುತ್ತವೆ. ನೆಲದಿಂದ 19 ಕಿ.ಮೀ. ಎತ್ತರವನ್ನುಆರ‍್ಮಸ್ಟ್ರಾಂಗ್ ಗೆರೆ (Armstrong line) ಇಲ್ಲವೇ ಆರ‍್ಮಸ್ಟ್ರಾಂಗ್ ಎಲ್ಲೆ (Armstrong limit) ಅಂತಾ ಕರೆಯಲಾಗುತ್ತದೆ. ಈ ಎತ್ತರದಲ್ಲಿ ಗಾಳಿಯೊತ್ತಡ ತುಂಬಾನೇ ಕಡಿಮೆಯಾಗಿ 0.0618 bar ಒತ್ತಡ ತಲುಪುತ್ತದೆ. ಅಂದರೆ ನೆಲದ ಮೇಲ್ಮೆಯಲ್ಲಿ ಸಾಮಾನ್ಯವಾಗಿ 1 bar ಇರುವ ಗಾಳಿಯೊತ್ತಡ ಆರ‍್ಮಸ್ಟ್ರಾಂಗ್ ಎಲ್ಲೆಯಲ್ಲಿ ಅದರ ಬರೀ 6% ಒತ್ತಡವನ್ನು ತಲುಪುತ್ತದೆ. ಈ ಎತ್ತರದಲ್ಲಿ ಸಾಮಾನ್ಯ ಮೈ ಕಾವಳತೆ ಅಂದರೆ ಸುಮಾರು 37°C ನಲ್ಲೂ ನೀರು ಕುದಿಯುವ ಮಟ್ಟವನ್ನು ಮುಟ್ಟುತ್ತದೆ.

[ಗಮನಕ್ಕೆ: 1 bar ನಷ್ಟು ಒತ್ತಡದಲ್ಲಿ ನೀರಿನ ಕುದಿಯುವ ಮಟ್ಟ 100°C ಆಗಿರುತ್ತದೆ. ಒತ್ತಡ ಹೆಚ್ಚಾಂದತೆ ಅದರ ಕುದಿಯುವ ಮಟ್ಟ ಏರುತ್ತಾ ಹೋದರೆ, ಒತ್ತಡ ಇಳಿದಂತೆ ಕುದಿಯುವ ಮಟ್ಟದಲ್ಲಿ ಇಳಿತವಾಗುತ್ತದೆ. ಅಂದರೆ ನಮ್ಮ ದಿನಬಳಕೆಯಲ್ಲಿ ನೀರು ಕುದಿಯುವಂತೆ ಮಾಡಲು 100°C ಕಾವಳತೆ (temperature) ಬೇಕಾದರೆ ಆ ನೀರನ್ನೇ ಎತ್ತರಕ್ಕೆ, ಕಡಿಮೆ ಒತ್ತಡದ ಮಟ್ಟಕ್ಕೆ ಒಯ್ದದಂತೆಲ್ಲಾ ಅದನ್ನು ಕುದಿಯುವಂತೆ ಮಾಡಲು ಕಡಿಮೆ ಕಾವಳತೆ ಸಾಕಾಗುತ್ತದೆ.]

ಇಷ್ಟೊಂದು ಕಡಿಮೆ ಗಾಳಿಯೊತ್ತಡಕ್ಕೆ ಒಡ್ಡಿದಾಗ ಮನುಷ್ಯರ ಮೈಯಲ್ಲಿ ಈ ಕೆಳಗಿನ ತೊಂದರೆಗಳು ಉಂಟಾಗಬಲ್ಲವು,

1. ಮೈಯಲ್ಲಿ ನೀರ‍್ಬಗೆಯಲ್ಲಿರುವ ಉಗುಳು, ಕಣ್ಣೀರು, ಗಾಳಿಗೂಡಿನಲ್ಲಿರುವ ನೀರಿನಂಶ ಕುದಿಯತೊಡಗುತ್ತವೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ರಕ್ತನಾಳದಲ್ಲಿನ ಒತ್ತಡದಿಂದಾಗಿ ರಕ್ತ ಕುದಿಯದೇ ಎಂದಿನ ಸ್ಥಿತಿಯಲ್ಲೇ ಇರುತ್ತದೆ.

2. ಹೊರಗೆ ಕಡಿಮೆ ಒತ್ತಡ, ಮೈಯೊಳಗೆ ಹೆಚ್ಚಿನೊತ್ತಡದಿಂದಾಗಿ ಮಾಂಸಖಂಡಗಳು ಸಾಮಾನ್ಯ ಅಳತೆಗಿಂತ ಸುಮಾರು ಎರಡು ಪಟ್ಟು ಉಬ್ಬುತ್ತವೆ.

3. ಕಡಿಮೆ ಒತ್ತಡದಿಂದಾಗಿ ಉಸಿರುಚೀಲಗಳು ಎಲ್ಲಕ್ಕಿಂತ ಹೆಚ್ಚಿನ ತೊಂದರೆಗೆ ಈಡಾಗುತ್ತವೆ. ಕಡುಕಡಿಮೆ ಒತ್ತಡದಲ್ಲಿ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗದೇ, ಉಸಿರು ಬಿಡುವಾಗ ಉಂಟಾಗುವ ಸಿಡಿಯುವಂತಹ ಒತ್ತಡದ ಇಳಿತದಿಂದಾಗಿ ಉಸಿರುಚೀಲಗಳು ಹಾನಿಗೊಳಗಾಗುತ್ತವೆ. ಕಡಿಮೆ ಗಾಳಿಯೊತ್ತಡದ ಇಂತಹ ಪಾಡನ್ನು ತಾಳಿಕೊಂಡು ಮನುಷ್ಯರು ಹೆಚ್ಚೆಂದರೆ 15 ಸೆಕೆಂಡುಗಳಷ್ಟೇ ಬದುಕಬಲ್ಲರು.

ಆರ‍್ಮಸ್ಟ್ರಾಂಗ್ ಎಲ್ಲೆಯಷ್ಟು ಎತ್ತರಕ್ಕೆ ಏರಿದಾಗ ಕಡುಕಡಿಮೆ ಒತ್ತಡವಷ್ಟೇ ಅಲ್ಲ, ಬಿಸುಪಿನಲ್ಲಾಗುವ ಏರುಪೇರುಗಳು, ಬಾನಲ್ಲಿ ಸಿಡಿಲಿನಂತೆ ಅಪ್ಪಳಿಸುವ ಚೂರುಗಳು, ಅತಿ ನೇರಳೆ ಕೆಡುಕದಿರುಗಳು ಬಾನಾಡಿಗರಿಗೆ ತೊಂದರೆಯನ್ನು ಒಡ್ಡುತ್ತವೆ. ಇವೆಲ್ಲ ತೊಡಕುಗಳನ್ನು ಮೀರಿ ಬಾನಾಡಿಗರು ಬಾನಬಂಡಿಯಾಚೆ ತಮ್ಮ ಕೆಲಸವನ್ನು ಮಾಡುವಂತೆ ಬಾನುಡುಪುಗಳನ್ನು ಅಣಿಗೊಳಿಸಲಾಗುತ್ತದೆ. ಬಾನಬಂಡಿಯಲ್ಲಿ (space craft) ಸರಿಯಾದ ಒತ್ತಡವನ್ನು ಕಾಯ್ದುಕೊಳ್ಳುವುದರಿಂದ ಬಾನಾಡಿಗರು ಬಾನಬಂಡಿಯಾಚೆಗೆ ಬಂದಾಗಲಷ್ಟೇ ಬಾನುಡುಪು ತೊಡುವುದು ಕಡ್ಡಾಯವಾಗಿರುತ್ತದೆ.

ಬಾನುಡುಪು (space suit), ಒತ್ತಡದ ಉಡುಪು (pressure suit) ಇಲ್ಲವೇ ಬಂಡಿಯಾಚೆ ಬಳಸುವ ಉಡುಪು (Extravehicular Mobility Unit- EMU) ಎಂದು ಕರೆಯಲಾಗುವ ಬಾನಾಡಿಗರು ತೊಟ್ಟ ಉಡುಪು ಈ ಕೆಳಗಿನ ಕೆಲಸಗಳನ್ನು ಮಾಡುತ್ತದೆ,

space_suit

1. ಒತ್ತಡವನ್ನು ಕಾಯ್ದುಕೊಳ್ಳುವುದು:
ಬಾನಾಡಿಗರಿಗೆ ಉಸಿರಾಡಲು ಮತ್ತು ಮೇಲೆ ತಿಳಿಸಿದ ತೊಂದರೆಗಳನ್ನು ನೀಗಲು ಬೇಕಾದ ಒತ್ತಡವನ್ನು ಕಾಯ್ದುಕೊಳ್ಳುತ್ತದೆ. ಬಾನುಡುಪಿನಲ್ಲಿ ಸುಮಾರು 0.32 bar ನಷ್ಟು ಗಾಳಿಯೊತ್ತಡವನ್ನು ಕಾಯ್ದುಕೊಳ್ಳಲಾಗುತ್ತದೆ. ಅಂದರೆ ನೆಲದ ಮೇಲ್ಮೆಯ ಸುಮಾರು 32% ನಷ್ಟು ಒತ್ತಡ. ನೆಲದ ಮೇಲ್ಮೆಯ ವಾತಾವರಣದಲ್ಲಿ ನೈಟ್ರೋಜನ್ ಹೆಚ್ಚಿರುವುದರಿಂದ ಗಾಳಿಯೊತ್ತಡ ಹೆಚ್ಚಿರುತ್ತದೆ. ಆದರೆ ಮನುಷ್ಯರು ಉಸಿರಾಡಲು ಉಸಿರ‍್ಗಾಳಿ (oxygen) ಇದ್ದರಷ್ಟೇ ಸಾಕು, ನೈಟ್ರೋಜನ್‍ ಅಗತ್ಯವಿಲ್ಲ. ಆದುದರಿಂದ ಬಾನುಡುಪಿನಲ್ಲಿ ನೆಲದ 32% ನಷ್ಟು ಒತ್ತಡವಿದ್ದರೂ ಬಾನಾಡಿಗರು ಸರಿಯಾಗಿ ಉಸಿರಾಡಬಲ್ಲರು.

2. ಉಸಿರ‍್ಗಾಳಿಯ ಪೂರೈಕೆ:
ಬಾನದೆರವು (space), ಗಾಳಿಯಿಲ್ಲದ ಬರಿದು ನೆಲೆಯಾಗಿರುವುದರಿಂದ ಬಾನಾಡಿಗರಿಗೆ ಬಾನಬಂಡಿಯಾಚೆ ಉಸಿರಾಡಲು ಬೇಕಾದ ಉಸಿರ‍್ಗಾಳಿಯನ್ನು ಬಾನುಡುಪುಗಳ ಮೂಲಕ ಒದಗಿಸಲಾಗುತ್ತದೆ. ಬಾನಬಂಡಿಯೊಳಗೆ ಉಸಿರ‍್ಗಾಳಿಯನ್ನು ಕೂಡಿಡಲಾಗಿದ್ದು, ಬಾನುಡುಪಿನ ಹಿಂದಿನ ಭಾಗದಿಂದ ಕೊಳವೆಗಳ ಮೂಲಕ ಉಸಿರ‍್ಗಾಳಿಯನ್ನು ಒದಗಿಸಲಾಗುತ್ತದೆ. ಬಾನಾಡಿಗರ ಉಸಿರಾಟದಿಂದ ಹೊರಡುವ ಕಾರ‍್ಬನ್ ಡೈಆಕ್ಸೈಡ್‍ನ್ನು ಕೊಳವೆಗಳ ಮೂಲಕ ಬಾನಬಂಡಿಯೊಳಗೆ ಸಾಗಿಸಲಾಗುತ್ತದೆ.

3. ಕದಲುವಿಕೆ (mobility):

ಬಾನಾಡಿಗರು ಸರಾಗವಾಗಿ ನಡೆದಾಡಲು ಬಾನುಡುಪಿನಲ್ಲಿರುವ ಒತ್ತಡವು ತಡೆಯೊಡ್ಡಬಲ್ಲದು. ಈ ತಡೆಯನ್ನು ಕಡಿಮೆಗೊಳಿಸುವಂತೆ ಬಾನುಡುಪನ್ನು ತಯಾರಿಸಲಾಗಿರುತ್ತದೆ. ಬಾನುಡುಪಿನ ಕಟ್ಟಣೆಯಲ್ಲಿ ಕದಲುವಿಕೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗಮನದಲ್ಲಿಡಲಾಗುತ್ತದೆ. ಬಾನಾಡಿಗರು ಬಾನುಡುಪನ್ನು ತೊಟ್ಟು ಒಂದು ನೆಲೆಯಿಂದ ಕದಲಿ ಮತ್ತೆ ಮರಳಿ ಅದೇ ನೆಲೆಗೆ ಬರಬೇಕಾದರೆ, ಅವರು ಮಾಡಬೇಕಾದ ಕೆಲಸ ಆದಷ್ಟು ಕಡಿಮೆಯಿರಬೇಕು. ಇಲ್ಲವಾದರೆ ಅವರಿಗೆ ತುಂಬಾ ದಣಿವಾಗಬಲ್ಲದು. ಇದನ್ನು ಇನ್ನೊಂದು ಬಗೆಯಲ್ಲಿ ನೋಡಬಹುದು. ದಪ್ಪನೆಯ ಕೋಟೊಂದನ್ನು ಹಾಕಿಕೊಂಡು ಬಾಗುವುದು, ಏಳುವುದು ಎಶ್ಟೊಂದು ಕಷ್ಟವಲ್ಲವೇ? ಹಾಗೆನೇ ಬಾನುಡುಪು ಬಾನಾಡಿಗರಿಗೆ ಹೊರೆಯಾಗಬಲ್ಲದು.

ಬಾನುಡುಪನ್ನು ಕದಲಿಸಲು ಬೇಕಾದ ಕೆಲಸದ ಪ್ರಮಾಣವನ್ನು ಕೆಳಗಿನ ಗಣಿತದ ನಂಟಿನಿಂದ ಲೆಕ್ಕಹಾಕಬಹುದು.

work relation

ಇಲ್ಲಿ, W = ಕೆಲಸ (Work), P = ಒತ್ತಡ (Pressure), V = ಆಳವಿ (Volume), Vi = ಮೊದಲಿದ್ದ ಆಳವಿ, Vf = ಬಳಿಕದ ಆಳವಿ, dV = ಆಳವಿಯಲ್ಲಾದ ಮಾರ‍್ಪಾಟು (Change in Volume)

ಮೇಲಿನ ಗಣಿತದ ನಂಟಿನಿಂದ ತಿಳಿದುಬರುವುದೇನೆಂದರೆ, ಕೆಲಸವನ್ನು ಕಡಿಮೆಗೊಳಿಸಬೇಕೆಂದರೆ ಉಡುಪಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡಬೇಕು ಇಲ್ಲವೇ ಆಳವಿಯ ಮಾರ‍್ಪಾಟನ್ನು ಕಡಿಮೆ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಿದರೆ ಉಸಿರಾಟಕ್ಕೆ ತೊಂದರೆಯಾಗಬಲ್ಲದು ಹಾಗಾಗಿ ಇನ್ನು ಉಳಿದದ್ದು ಆಳವಿಯ ಮಾರ‍್ಪಾಟನ್ನು ಕಡಿಮೆ ಮಾಡುವುದು. ಹೆಚ್ಚಿನ ಬಾನುಡುಪಗಳು ’ಆಳವಿಯ ಮಾರ‍್ಪಾಟನ್ನು’ ಕಡಿಮೆ ಮಾಡುವುದರ ಅಡಿಪಾಯದ ಮೇಲೆಯೇ ಅಣಿಗೊಂಡಿರುತ್ತವೆ.
ಹಾಗಾದರೆ ಆಳವಿಯ ಮಾರ‍್ಪಾಟನ್ನು ಕಡಿಮೆಗೊಳಿಸುವುದು ಹೇಗೆ?

ಇದಕ್ಕಾಗಿ ಬಾನುಡುಪುಗಳನ್ನು ಹಲವು ಪದರುಗಳಲ್ಲಿ ಹೆಣೆಯಲಾಗಿರುತ್ತದೆ ಮತ್ತು ಪದರುಗಳೊಳೆಗೆ ಅಲ್ಲಲ್ಲಿ ಒತ್ತಡದಲ್ಲಿ ತೆರೆದುಕೊಳ್ಳುವ ಕಿಂಡಿಯಂತಹ ವಿನ್ಯಾಸಗಳನ್ನು ಮಾಡಲಾಗುತ್ತದೆ. ಬಾನಾಡಿಗರು ಬಾಗಿದಾಗ ಅವರ ಇಡಿಯಾದ ಉಡುಪು ಬಾಗದೇ ಅದರೊಳಗಿನ ಪದರಗಳಷ್ಟೇ ಬಾಗುವುದರಿಂದ ಅವರಿಗಾಗುವ ದಣಿವು ಕಡಿಮೆಯಾಗುತ್ತದೆ.

4. ಕಾವಳತೆಯನ್ನು ಹಿಡಿತದಲ್ಲಿಡುವುದು: ಬಾನಿನಲ್ಲಿ ಕಾವಳತೆ (temperature) ಎಲ್ಲೆ ಮೀರಿದ ಏರಿಳಿತವನ್ನು ಕಾಣಬಹುದು. ಕಾವಳತೆಯಲ್ಲಿ −150°C ಇಂದ +120°C ನಷ್ಟು ಬದಲಾವಣೆಯಾಗಬಹುದು. ಕಾವಳತೆಯ ಇಂತಹ ಏರಿಳಿತದಿಂದ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳನ್ನು ತಡೆವೆ (insulators) ವಸ್ತುಗಳಿಂದ ಮಾಡಿರುತ್ತಾರೆ ಜತೆಗೆ ತಂಪಾಗಿಸುವಿಕೆ ಮತ್ತು ಗಾಳಿ ಹೊಯ್ದಾಟಕ್ಕೆ ಒಳಪದರವೊಂದನ್ನು ಮಾಡಿರುತ್ತಾರೆ. ಈ ಒಳಪದರದಲ್ಲಿ ನೀರಿನ ಕೊಳವೆಗಳ ಹಲವು ಸುತ್ತುಗಳಿರುತ್ತವೆ. ಬಾನಾಡಿಗರ ಮೈಯಿಂದ ಹೊಮ್ಮುವ ಕಾವನ್ನು ಇವು ತಂಪಾಗಾಗಿಸುತ್ತವೆ.

5. ಕಾಪುವಿಕೆ: ಅತಿ ನೇರಳೆ ಮತ್ತು ಇತರ ಕೆಡು ಕದಿರುಗಳಿಂದ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳ ಹೊರಪದರನ್ನು ಮ್ಯಾಲಾರ‍್(Mylar)ನಂತಹ ವಿಷೇಶ ವಸ್ತುಗಳಿಂದ ಮಾಡಿರುತ್ತಾರೆ. ಹಾಗೆನೇ ಬಾನಲ್ಲಿ ಕೆಲವು ಸಲ ಎಲ್ಲಿಂದಲೋ ಚಿಮ್ಮಿ ಬರುವ ತುಣುಕುಗಳು ಬಾನಾಡಿಗರ ಮೈ ಸೋಕದಂತೆ, ಬಾನುಡುಪಗಳ ಮತ್ತೊಂದು ಹೊರಪದರನ್ನು ಸಾಮಾನ್ಯವಾಗಿ ಗುಂಡುತಡೆ ಅಂಗಿಗಳನ್ನು ಮಾಡಲು ಬಳಸುವ ಕೆವ್ಲಾರ್‍ (Kevlar)ನಂತಹ ವಸ್ತುಗಳಿಂದ ಮಾಡಿರುತ್ತಾರೆ.

6. ಕೊಳೆತೆಗೆತ: ಬಾನಾಡಿಗರ ಮೈಯಿಂದ ಹೊರಬರುವ ಉಚ್ಚೆ ಮತ್ತು ಇನ್ನಿತರ ಕೊಳೆಯನ್ನು ಬಾನುಡುಪು ತನ್ನಲ್ಲೇ ಹಿಡಿದುಕೊಳ್ಳುವಂತೆ ಅಣಿಯಾಗಿರುತ್ತದೆ.

7. ಒಡನಾಟ: ಬಾನಾಡಿಗರು ಬಾನಬಂಡಿಯಾಚೆ ಇರುವಾಗ ಇತರರೊಡನೆ ಒಡನಾಡಲು ರೆಡಿಯೋ ಅಲೆಗಳನ್ನು ಪಡೆಯುವ/ಕಳಿಸುವ ಸಲಕರಣೆ, ಮೈಕ್ರೋಪೋನ್ ಮುಂತಾದ ಸಲಕರಣೆಗಳನ್ನು ಬಾನುಡುಪಿನ ಬಾಗವಾಗಿ ಅಣಿಗೊಳಿಸಲಾಗಿರುತ್ತದೆ.

ಹೀಗೆ ಹಲವು ಅಡೆತಡೆಗಳ ನಡುವೆಯೂ ಬಾನಾಡಿಗರನ್ನು ಕಾಪಾಡಲು ಬಾನುಡುಪುಗಳು ಸಜ್ಜಾಗಿರುತ್ತವೆ. ಅಂದ ಹಾಗೆ ಎಲ್ಲ ಸಲಕರಣೆಗಳನ್ನು ಒಳಗೊಂಡ ಒಂದು ಬಾನುಡುಪಿನ ಬೆಲೆ ಸುಮಾರು 12 ಮಿಲಿಯನ್ ಡಾಲರ್ (ಸುಮಾರು 72 ಕೋಟಿ ರೂಪಾಯಿಗಳು)

(ಮಾಹಿತಿ ಮತ್ತು ಚಿತ್ರಸೆಲೆಗಳು: wikipedia.org, science.howstuffworks,proxy.flss.edu.hkstyleguise.net)

ವಿಮಾನದ ಮೇಲೆ ಪಟ್ಟಿಗಳೇಕಿರುತ್ತವೆ?

ಕಳೆದ ಬರಹದಲ್ಲಿ ವಿಮಾನ ಹೇಗೆ ಹಾರುತ್ತದೆ? ಅದರ ಮೇಲೆ ಎರಗುವ ಬಲಗಳಾವವು ಎಂದು ತಿಳಿದುಕೊಂಡಿದ್ದೆವು. ರೆಕ್ಕೆಗಳ ಆಕಾರದ ನೆರವಿನೊಂದಿಗೆ ಹಾರಾಟಕ್ಕೆ ತಡೆಯೊಡ್ಡುವ ಗಾಳಿ ಎಳೆತ ಮತ್ತು ನೆಲಸೆಳೆತವನ್ನು ಮೀರಿಸಿ ನೂಕುವಿಕೆ ಮತ್ತು ಎತ್ತುವಿಕೆಯು ವಿಮಾನ ಹಾರಲು ಅಡಿಪಾಯವಾಗಿರುವುದನ್ನು ಕಂಡುಕೊಂಡಿದ್ದೆವು.

ವಿಮಾನ ಬಾನಿಗೆ ಏರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹಾರಿದ ವಿಮಾನವನ್ನು ಹಿಡಿತದಲ್ಲಿಡುವುದು. ವಿಮಾನ ಸರಿಯಾದ ಎತ್ತರದಲ್ಲಿ ಹಾರುವಂತಾಗಲು ಅದರ ಏರಿಳಿತವನ್ನು ಮತ್ತು ಸರಿಯಾದ ದಾರಿಯಲ್ಲಿ ಸಾಗಲು ಅದರ ದಿಕ್ಕನ್ನು ಹಿಡಿತದಲ್ಲಿಡಬೇಕಾಗುತ್ತದೆ. ಈ ಕೆಲಸವನ್ನು ಮಾಡಲು ವಿಮಾನದ ರೆಕ್ಕೆಗಳ ಮೇಲೆ ಹಲವು ಬಗೆಯ ಪಟ್ಟಿಗಳನ್ನು ಅಳವಡಿಸಲಾಗಿರುತ್ತದೆ. ಆ ಪಟ್ಟಿಗಳ ಕುರಿತು ಈ ಬರಹದಲ್ಲಿ ತಿಳಿದುಕೊಳ್ಳೋಣ.

ವಿಮಾನ ಮುಖ್ಯವಾಗಿ ಮೂರು ಬಗೆಯ ಸಾಗಾಟವನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳೆಂದರೆ,

1) ಏರಿಳಿಕೆ (pitch): ಹಾರಾಟದ ಎತ್ತರವನ್ನು ಹಿಡಿತದಲ್ಲಿಡಲು ವಿಮಾನ ಮೇಲೆ ಇಲ್ಲವೇ ಕೆಳಗೆ ಸಾಗಬೇಕಾಗುತ್ತದೆ. ಇದಕ್ಕಾಗಿ ವಿಮಾನವು ತನ್ನ ಮೈಗೆ ಸಮಾನವಾದ ನಡುಗೆರೆಯಲ್ಲಿ ತನ್ನ ಮುಂದಿನ ಮತ್ತು ಹಿಂದಿನ ಭಾಗವನ್ನು ಬಾಗಿಸಬೇಕಾಗುತ್ತದೆ. ಈ ಬಗೆಯ ಸಾಗಾಟವನ್ನು ’ಏರಿಳಿಕೆ’ ಇಲ್ಲವೇ ’ಬಾಗು’ ಅಂತಾ ಕರೆಯಬಹುದು.

2) ಹೊರಳುವಿಕೆ (yaw): ವಿಮಾನ ಎಡಕ್ಕೆ ಇಲ್ಲವೇ ಬಲಕ್ಕೆ ಹೊರಳುವ ಸಾಗಾಟವನ್ನು ಇದು ಸೂಚಿಸುತ್ತದೆ. ಇದಕ್ಕಾಗಿ ವಿಮಾನವು ತನ್ನ ಮೈಗೆ ನೇರವಾದ ನಡುಗೆರೆಯಲ್ಲಿ ಹೊರಳಬೇಕಾಗುತ್ತದೆ.

3) ಉರುಳುವಿಕೆ (roll): ವಿಮಾನದ ದಿಕ್ಕು ಮತ್ತು ಎತ್ತರವನ್ನು ಈ ಸಾಗಾಟದಿಂದ ಬದಲಾಯಿಸಬಹುದು.

airplane_pitch-yaw-roll-2

 

airplane_pitch-yaw-roll-1

ರೆಕ್ಕೆಯ ಮೇಲಿರುವ ಪಟ್ಟಿಗಳನ್ನು ಆಡಿಸುವ ಮೂಲಕ ಮೇಲಿನ ಮೂರು ಬಗೆಯ ಸಾಗಾಟವನ್ನು ವಿಮಾನ ಹಾರಾಟಗಾರ (pilot) ಹಿಡಿತದಲ್ಲಿಡುತ್ತಾರೆ. ಆ ರೆಕ್ಕೆಯ ಪಟ್ಟಿಗಳಾವವು ಅಂತಾ ಈಗ ಅರಿಯೋಣ.

1) ಉರುಳುಪಟ್ಟಿ (Aileron): ವಿಮಾನದ ದಿಕ್ಕು ಮತ್ತು ತುಸು ಎತ್ತರವನ್ನು ಬದಲಾಯಿಸಲು ಮುಂದಿನ ರೆಕ್ಕೆಯ ಮೇಲೆ ’ಉರುಳುಪಟ್ಟಿ’ಗಳನ್ನು ಅಳವಡಿಸಲಾಗಿರುತ್ತದೆ. ಮುಂದಿನ ರೆಕ್ಕೆಯ ಎಡ ಮತ್ತು ಬಲಭಾಗದಲ್ಲಿರುವ ಈ ಪಟ್ಟಿಗಳು ಒಂದಕ್ಕೊಂದು ಎದುರುಬದುರಾಗಿ ಕೆಲಸ ಮಾಡುತ್ತವೆ. ಅಂದರೆ ಎಡ ಉರುಳುಪಟ್ಟಿ ಮೇಲೆದ್ದರೆ, ಬಲಭಾಗದ ಪಟ್ಟಿ ಕೆಳಗಿಳಿಯುತ್ತದೆ. ವಿಮಾನ ಬಲಕ್ಕೆ ತಿರುಗಿ ತುಸು ಕೆಳಗಿಳಿಯಬೇಕಾದರೆ ಎಡ ಉರುಳುಪಟ್ಟಿಯನ್ನು ಕೆಳಕ್ಕೆ ಮತ್ತು ಬಲ ಉರುಳುಪಟ್ಟಿಯನ್ನು ಮೇಲಕ್ಕೆ ಹೊರಳಿಸಬೇಕಾಗುತ್ತದೆ.

aileron_roll

2) ಏರಿಳಿಪಟ್ಟಿ (Elevator) ಮತ್ತು ಬಡಿತಪಟ್ಟಿ (Flap): ವಿಮಾನದ ಏರಿಳಿತವನ್ನು ಹಿಡಿತದಲ್ಲಿಡಲು, ಹಿಂದಿನ ರೆಕ್ಕೆಯಲ್ಲಿ ಮತ್ತು ಮುಂದಿನ ರೆಕ್ಕೆಯ ನಡುವಿನಲ್ಲಿ ಪಟ್ಟಿಗಳನ್ನು ಅಳವಡಿಸಲಾಗಿರುತ್ತದೆ. ಹಿಂದಿನ ರೆಕ್ಕೆಯಲ್ಲಿರುವ ಪಟ್ಟಿಗಳನ್ನು ಏರಿಳಿಪಟ್ಟಿ ಅಂತಾ ಕರೆದರೆ ಮುಂದಿರುವ ಪಟ್ಟಿಯನ್ನು ಬಡಿತಪಟ್ಟಿ ಅನ್ನಬಹುದು. ವಿಮಾನವನ್ನು ಮೇಲೇರಿಸಬೇಕಾದರೆ ಹಿಂದಿನ ರೆಕ್ಕೆಯಲ್ಲಿರುವ ಏರಿಳಿಪಟ್ಟಿಗಳನ್ನು ವಿಮಾನ ಹಾರಾಟಗಾರ ಮೇಲೆ ಎತ್ತುತ್ತಾರೆ. ಇದರಿಂದಾಗಿ ಗಾಳಿಯ ಒತ್ತಡ ಹಿಂದಿನ ಭಾಗದಲ್ಲಿ ಹೆಚ್ಚಾಗಿ ವಿಮಾನದ ಬಾಲ ಕೆಳಗೆ ಬಾಗಿದರೆ, ಮುಂದಿನ ಮೂಗಿನ ಭಾಗ ಮೇಲೇರುತ್ತದೆ.

elevator_pitch

3) ಹೊರಳುಪಟ್ಟಿ (Rudder): ವಿಮಾನ ಎಡಕ್ಕೆ ಇಲ್ಲವೇ ಬಲಕ್ಕೆ ತಿರುಗುವಂತೆ ಮಾಡಲು ಹಿಂದಿನ ರೆಕ್ಕೆಗೆ ನೇರವಾಗಿ ಪಟ್ಟಿಗಳನ್ನು ಅಳವಡಿಸಲಾಗಿರುತ್ತದೆ. ಈ ಪಟ್ಟಿಯನ್ನು ಹೊರಳುಪಟ್ಟಿ ಅನ್ನುತ್ತಾರೆ. ವಿಮಾನವನ್ನು ಎಡಕ್ಕೆ ತಿರುಗಿಸಬೇಕಾದಾಗ ಹಾರಾಟಗಾರ ಹೊರಳುಪಟ್ಟಿಯನ್ನು ಎಡಕ್ಕೆ ಹೊರಳಿಸುತ್ತಾರೆ ಇದರಿಂದ ವಿಮಾನದ ಬಾಲದ ಭಾಗವು ಬಲಕ್ಕೆ ಮತ್ತು ಮುಂದಿನ ಮೂಗಿನ ಭಾಗವು ಎಡಕ್ಕೆ ಹೊರಳುತ್ತದೆ.

rudder_yaw

ಹೀಗೆ ರೆಕ್ಕೆಯ ಮೇಲೆ ಪಟ್ಟಿಗಳನ್ನು ಅಳವಡಿಸಿ ವಿಮಾನದ ಹಾರಾಟವನ್ನು ಹಿಡಿತದಲ್ಲಿಡಲಾಗುತ್ತದೆ.

baanoda_airplane_pattigalu1

ಮೇಲೆ ತಿಳಿಸಿರುವ ಪಟ್ಟಿಗಳನ್ನು ಹಿಡಿತದಲ್ಲಿಡಲು ಅನುವಾಗುವಂತೆ ಎಲ್ಲ ಪಟ್ಟಿಗಳನ್ನು ಬೇರೆ-ಬೇರೆಯಾಗಿ ತಂತಿಗಳಿದ್ದ ಬೆಸೆಯಲಾಗಿರುತ್ತದೆ ಮತ್ತು ಈ ತಂತಿಗಳ ಹಿಡಿತವನ್ನು ವಿಮಾನ ಹಾರಾಟಗಾರರ ಕೈಯಲ್ಲಿರುವ ಸಲಕರಣೆಗೆ ಅಳವಡಿಸಲಾಗಿರುತ್ತದೆ.

Picture1

(ಮಾಹಿತಿ ಮತ್ತು ಚಿತ್ರಸೆಲೆಗಳು: HowStuffWorks, Wikipedia, NASA, howitworks)

ವಿಮಾನ ಹೇಗೆ ಹಾರಬಲ್ಲದು?

vimana_1_1

ಹಕ್ಕಿಯಂತೆ ಹಾರುವ ಹಂಬಲ ಮತ್ತು ಅದರೆಡೆಗೆ ಮಾಡಿದ ಹಲವಾರು ಮೊಗಸುಗಳು ಮನುಷ್ಯರ ಏಳಿಗೆಯ ಹಾದಿಯಲ್ಲಿ ತುಂಬಾ ಮುಖ್ಯವಾದ ಹೆಜ್ಜೆಗಳಾಗಿವೆ.

ಹಿಂದಿನಿಂದಲೂ ಹಾರಾಟದೆಡೆಗೆ ತುಡಿತಗಳು, ಕೆಲಸಗಳು ನಡೆದಿರುವುದು ತಿಳಿದಿವೆಯಾದರೂ, ಅಮೇರಿಕಾದ ಆರವಿಲ್ ರೈಟ್ (Orville Wright) ಮತ್ತು ವಿಲ್ಬರ್ ರೈಟ್ (Wilbur Wright) ಎಂಬ ಅಣ್ಣ ತಮ್ಮಂದಿರು ಡಿಸೆಂಬರ್ 17, 1903 ರಂದು ಮೊಟ್ಟಮೊದಲ ಬಾರಿಗೆ ವಿಮಾನವನ್ನು ಹಾರಿಸುವಲ್ಲಿ ಗೆಲುವು ಕಂಡರು. ಅಲ್ಲಿಂದೀಚೆಗೆ ಬಾನೋಡ, ವಿಮಾನ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಏರ್‍ಪ್ಲೇನ್‍ಗಳು ಸಾಗಾಣಿಕೆಯ ಹೊತ್ತನ್ನು ಬೆರಗುಗೊಳಿಸಿಸುವಂತೆ ಇಳಿಸಿವೆ.

ತೂಕದ ವಸ್ತುವೊಂದು ನಮ್ಮನ್ನು ಮತ್ತು ನಮ್ಮ ಸರಕುಗಳನ್ನು ಹೊತ್ತು ಹೇಗೆ ಹಾರಬಲ್ಲದು? ಅದರ ಹಿಂದಿರುವ ಚಳಕವೇನು? ಮುಂತಾದ ವಿಮಾನಗಳ ವಿಷಯಗಳನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ಹಾರಾಟ ನಡೆಸಲು ಪ್ರಯತ್ನಿಸುವ ವಸ್ತುವು ಮುಖ್ಯವಾಗಿ ನಾಲ್ಕು ಬಗೆಯ ಬಲಗಳಿಗೆ ಒಳಪಡುತ್ತದೆ. ಇವುಗಳಲ್ಲಿ ಎರಡು ಬಲಗಳು ಸುತ್ತಣ (environment) ಒಡ್ಡುವ ತಡೆಗಳಾಗಿದ್ದರೆ ಉಳಿದೆರಡು ಬಲಗಳು ಆ ತಡೆಗಳನ್ನು ಮೀರಿ ಹಾರಾಟಕ್ಕೆ ಕಾರಣವಾಗುವಂತವು. ಈ ಬಲಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

forces-airplane

1) ನೆಲಸೆಳೆತ: ವಸ್ತುವೊಂದು ತನ್ನೊಳಗೆ ಅಡಕಗೊಳಿಸಿಕೊಂಡಿರುವ ಪ್ರಮಾಣವನ್ನು ’ರಾಶಿ’ (mass) ಅನ್ನುತ್ತಾರೆ. ಉದಾಹರಣೆಗೆ, ಒಂದು ಗಾತ್ರದ ’ಕಲ್ಲು’ ಹೆಚ್ಚಿನ ವಸ್ತುವನ್ನು ಅಡಕಗೊಳಿಸಿಕೊಂಡು, ಹೆಚ್ಚಿನ ರಾಶಿ ಹೊಂದಿದ್ದರೆ, ಅಷ್ಟೇ ಗಾತ್ರದ ’ಹತ್ತಿ’ (cotton) ಕಡಿಮೆ ವಸ್ತುವನ್ನು ಅಡಕಗೊಳಿಸಿಕೊಂಡು, ಕಡಿಮೆ ರಾಶಿಯನ್ನು ಹೊಂದಿರುತ್ತದೆ.

ವಸ್ತುವಿನ ರಾಶಿಗೂ (mass) ಮತ್ತು ತೂಕಕ್ಕೂ (weight) ನೇರವಾದ ನಂಟಿದೆ. ರಾಶಿ ಹೆಚ್ಚಿದೆ ಅಂದರೆ ಅದರ ತೂಕವೂ ಹೆಚ್ಚಿದೆ ಅಂತಾನೂ ತಿಳಿಯಬಹುದು.

ಐಸಾಕ್ ನ್ಯೂಟನ್ (Isaac Newton) ಅವರು ತಮ್ಮ ಅರಕೆಯಿಂದ ವಸ್ತುಗಳ ಕುರಿತಾಗಿ ಈ ಕೆಳಗಿನದನ್ನು ತೋರಿಸಿಕೊಟ್ಟಿದ್ದಾರೆ,

ಎರಡು ವಸ್ತುಗಳ ರಾಶಿಗೆ (mass) ಸಾಟಿಯಾಗಿ ಮತ್ತು ಅವುಗಳ ನಡುವಿರುವ ದೂರಕ್ಕೆ ತಿರುವಾಗಿ (inversely proportional) ಸೆಳೆಯುವ ಬಲವೊಂದಿರುತ್ತದೆ. ಈ ಬಲವನ್ನು ರಾಶಿಸೆಳೆತ ಇಲ್ಲವೇ ಗುರುತ್ವಾಕರ್ಷಣೆ (gravity) ಎಂದು ಕರೆಯುತ್ತಾರೆ.

 

ಈ ನಂಟನ್ನು ಗಣಿತದ ಕಟ್ಟಲೆಗಳಿಂದ ಹೀಗೆ ತೋರಿಸಬಹುದು,

F = (G * m1 * m2) / r2

ಇಲ್ಲಿ, m1= ವಸ್ತು-1 ರ ರಾಶಿ, m2 = ವಸ್ತು-2 ರ ರಾಶಿ, G= ರಾಶಿಸೆಳೆತದಿಂದಾಗುವ ವೇಗಮಾರ‍್ಪು (acceleration due to gravity), r = ವಸ್ತುಗಳ ನಡುವಿರುವ ದೂರ

ಇದನ್ನು ನೆಲ ಮತ್ತು ನೆಲದ ಮೇಲಿನ ವಸ್ತುವೊಂದಕ್ಕೆ ಹೊಂದಿಸಿದಾಗ, ನೆಲದ ರಾಶಿ ವಸ್ತುವೊಂದರ ರಾಶಿಗಿಂತ ತುಂಬಾ ಹೆಚ್ಚಾಗಿರುವುದರಿಂದ, ನೆಲ ವಸ್ತುಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಇದನ್ನೇ ‘ನೆಲಸೆಳೆತ’ (Earth’s gravity) ಅನ್ನುತ್ತಾರೆ. ಇದರಿಂದ ತಿಳಿದುಬರುವುದೇನೆಂದರೆ, ಹೆಚ್ಚು ರಾಶಿಯಿರುವ ವಸ್ತುವನ್ನು ನೆಲಸೆಳೆತದ ಎದುರಾಗಿ ಸಾಗಿಸಲು ಹೆಚ್ಚು ಬಲ ಬೇಕಾಗುತ್ತದೆ. ಅಂದರೆ ವಿಮಾನವನ್ನು ನೆಲಸೆಳೆತದ ಎದುರಾಗಿ ಮೇಲೆತ್ತಲು ಅದರ ತೂಕಕ್ಕೆ ತಕ್ಕಂತೆ ಹೆಚ್ಚಿನ ಬಲ ಹಾಕಬೇಕಾಗುತ್ತದೆ.

2) ಎತ್ತುವಿಕೆ: ನೆಲಸೆಳೆತಕ್ಕೆ ಎದುರಾಗಿ ವಿಮಾನವನ್ನು ಮೇಲೆ ಹಾರಿಸಬಲ್ಲ ಬಲವಿದು. ನೆಲಸೆಳೆತಕ್ಕಿಂತ ಎತ್ತುವಿಕೆಯ ಬಲವು ಹೆಚ್ಚಾದಂತೆಲ್ಲಾ ವಿಮಾನ ಮೇಲೆ ಹಾರುತ್ತದೆ. ಅದೇ ಎತ್ತುವಿಕೆಯ ಬಲ ಕಡಿಮೆಯಾದಂತೆ ವಿಮಾನ ಕೆಳಗಿಳಿಯುತ್ತದೆ. ವಿಮಾನ ಹಾರುವಂತೆ ಮಾಡುವ ’ಎತ್ತುವಿಕೆಯ ಬಲ’ವನ್ನು ಹೇಗೆ ಉಂಟುಮಾಡಬಹುದೆಂದು ಮುಂದೆ ನೋಡೋಣ.

3) ಎಳೆತ: ಗಾಳಿಯಲ್ಲಿ ವಸ್ತುವೊಂದು ಸಾಗುವಾಗ ಇಲ್ಲವೇ ಬೀಸುವ ಗಾಳಿಯಲ್ಲಿಯೇ ವಸ್ತುವೊಂದು ನೆಲೆನಿಂತಾಗ, ವಸ್ತುವಿನ ಮೇಲೆ ಒಂದು ಬಗೆಯ ಬಲ ಉಂಟಾಗುತ್ತದೆ. ಇದನ್ನು ’ಎಳೆತ’ ಅನ್ನುತ್ತಾರೆ. ರೈಲುಬಂಡಿಯಲ್ಲಿ ಸಾಗುವಾಗ ಕೈಯನ್ನು ಹೊರಗೆ ಚಾಚಿದರೆ ಕೈಗೆ ಗಾಳಿ ತಾಕಿ, ಒಂದು ತರಹದ ’ಎಳೆದುಕೊಂಡು’ ಹೋಗುವಂತ ಅನುಬವ ನಿಮಗೂ ಆಗಿರಬಹುದು. ಇದೇ ಗಾಳಿಯ ’ಎಳೆತ’. ವಿಮಾನ ಗಾಳಿಯಲ್ಲಿ ಸಾಗುವಾಗ ಅದಕ್ಕೆ ತಡೆಯೊಡ್ಡುವ ಬಲವಿದು.

4) ನೂಕುವಿಕೆ: ಗಾಳಿ ಒಡ್ಡುವ ಎಳೆತವನ್ನು ಮೀರಿ ವಿಮಾನವು ಮುಂದೆ ಸಾಗಬೇಕಾದರೆ ಅದಕ್ಕೆ ಎಳೆತವನ್ನು ಹಿಮ್ಮೆಟ್ಟಿಸುವ ಬಲವೊಂದು ಬೇಕು. ಇದೇ ’ನೂಕುವಿಕೆ’. ಗಾಳಿಯನ್ನು ನೂಕುತ್ತಾ ಸಾಗಲು ಬೇಕಾದ ಈ ಬಲವನ್ನು ಪಡೆಯಲು ಅಳವಡಿಸಿರುವ ಏರ‍್ಪಾಟು ವಿಮಾನದ ತುಂಬಾ ಮುಖ್ಯವಾದ ಭಾಗ.

ನೂಕುವಿಕೆಯ ಬಲವನ್ನು ಪಡೆಯಲು ಹಳೆ ತಲೆಮಾರಿನ ವಿಮಾನಗಳಲ್ಲಿ (ಚಿಕ್ಕ ವಿಮಾನಗಳಲ್ಲಿ ಇಂದು ಕೂಡ) ತಳ್ಳುಕ ಇಂಜಿನ್ (propeller engine) ಬಳಸುತ್ತಾರೆ. ಈ ಬಗೆಯ ಇಂಜಿನ್‍ನಲ್ಲಿ ಕಾರಿನಲ್ಲಿರುವಂತೆ ಆಡುಬೆಣೆಯ ಇಂಜಿನ್ (reciprocating engine) ಅಳವಡಿಸಲಾಗಿರುತ್ತದೆ. ಇಂಜಿನ್‍ನಲ್ಲಿ ಉರುವಲು ಉರಿದಾಗ ಹೊಮ್ಮುವ ಕಸುವಿನಿಂದ ತಳ್ಳುಕವನ್ನು ತಿರುಗಿಸಲು ಬಳಸಲಾಗುತ್ತದೆ.

ಹೊಸ ತಲೆಮಾರಿನ ವಿಮಾನಗಳಲ್ಲಿ ನೂಕುವಿಕೆಯನ್ನು ಉಂಟುಮಾಡಲು ಹೆಚ್ಚಾಗಿ ಗಾಳಿದೂಡುಕ (gas turbine) ಇಂಜಿನ್ ಬಳಸುತ್ತಾರೆ. ಇದರಲ್ಲಿ ಸುತ್ತಲಿನ ಗಾಳಿಯನ್ನು ಒಳಗೆ ಎಳೆದುಕೊಂಡು ಉರುವಲಿನ ಜೊತೆ ಉರಿಸಿ ಬಿಸಿಗಾಳಿಯನ್ನು ಹೊರಗಡೆ ಚಿಮ್ಮಲಾಗುತ್ತದೆ. ಹೀಗೆ ಚಿಮ್ಮಲ್ಪಟ್ಟ ಉರಿಗಾಳಿಯು ನೂಕುವಿಕೆಯ ಬಲವನ್ನು ಒದಗಿಸುತ್ತದೆ.

propeller-turbo1

ಮೇಲೆ ತಿಳಿದುಕೊಂಡ ನಾಲ್ಕು ಬಲಗಳಾದ ನೆಲಸೆಳೆತ, ಎಳೆತ, ಎತ್ತುವಿಕೆ ಮತ್ತು ನೂಕುವಿಕೆಗಳು, ವಿಮಾನ ಹಾರಲು ಇಲ್ಲವೇ ಇಳಿಯಲು ಹೇಗೆ ನೆರವಾಗುತ್ತವೆ ಎಂದು ಈಗ ಅರಿಯೋಣ.

ವಿಮಾನದಲ್ಲಿ ಅಳವಡಿಸಲಾಗಿರುವ ಇಂಜಿನ್ ಉರಿಗಾಳಿಯನ್ನು ಚಿಮ್ಮುತ್ತಾ ಹೊರಟಂತೆ ’ನೂಕುವಿಕೆ’ಯ ಬಲವು ಇಡೀ ವಿಮಾನವನ್ನು ಮುಂದೆ ತಳ್ಳುತ್ತದೆ. ವಿಮಾನ ಹೀಗೆ ನೂಕುವಿಕೆಯಿಂದ ಮುಂದೆ ಬಿರುಸಾಗಿ ಓಡುತ್ತಿರುವಾಗ ಗಾಳಿಯ ’ಎಳೆತ’ ಅದಕ್ಕೆ ತಡೆಯೊಡ್ಡುತ್ತದೆ. ಈಗ ಕೆಲಸಕ್ಕೆ ಇಳಿಯುವುದೇ ವಿಮಾನದ ರೆಕ್ಕೆಗಳು. ಈ ರೆಕ್ಕೆಗಳು ಬಿರುಸಾಗಿ ಸಾಗುತ್ತಿರುವ ಗಾಳಿಯ ದಾರಿಯನ್ನು ಎರಡು ಕವಲುಗಳಾಗಿ ಸೀಳುತ್ತವೆ.

ವಿಮಾನದ ಮೈ ಅದರಲ್ಲೂ ಮುಖ್ಯವಾಗಿ ಅದರ ರೆಕ್ಕೆಗಳು ಮೇಲ್ಗಡೆ ಭಾಗದಲ್ಲಿ ಉಬ್ಬಿರುವ ಆಕಾರ ಹೊಂದಿರುತ್ತವೆ. ಈ ಆಕಾರದಿಂದಾಗಿ ಎರಡು ಕವಲುಗಳಾಗಿ ಸೀಳಲ್ಪಟ್ಟ ಗಾಳಿಯ ದಾರಿ, ಎರಡು ಬೇರೆ ಬೇರೆ ದೂರವನ್ನು ದಾಟಬೇಕಾಗುತ್ತದೆ. ಉಬ್ಬಿದ ಆಕಾರದಿಂದಾಗಿ ರೆಕ್ಕೆಯ ಕೆಳಗಡೆಯ ದಾರಿ ಗಾಳಿಗೆ ಹತ್ತಿರವಾದರೆ, ಮೇಲಗಡೆ ಸಾಗುವ ದಾರಿ ದೂರವಾಗುತ್ತದೆ. ಇದರಿಂದಾಗಿ ರೆಕ್ಕೆಯ ಮೇಲಗಡೆ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಅದೇ ರೆಕ್ಕೆಯ ಕೆಳಗಡೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಇದನ್ನು ಕೆಳಗಡೆಯ ಚಿತ್ರದಲ್ಲಿ ನೋಡಬಹುದು.

rekkeya_seelunota

ಹೀಗೆ ವಿಮಾನದ ರೆಕ್ಕೆಯ ಕೆಳಗಡೆ ಏರ‍್ಪಟ್ಟ ಹೆಚ್ಚಿನ ಒತ್ತಡ ವಿಮಾನವನ್ನು ಮೇಲೆತ್ತಲು ತೊಡಗುತ್ತದೆ. ಎತ್ತುವಿಕೆ ಹೆಚ್ಚಬೇಕಾದರೆ ನೂಕುವಿಕೆಯನ್ನು ಹೆಚ್ಚಿಸಬೇಕು ಇಲ್ಲವೇ ರೆಕ್ಕೆಯ ಆಕಾರಗಳನ್ನು ಹೊಂದಿಸುತ್ತಾ ಇರಬೇಕು ಅನ್ನುವುದನ್ನು ಗಮನಿಸಬಹುದು. ಹೀಗೆ ಉಂಟಾದ ’ಎತ್ತುವಿಕೆ’ಯ ಬಲ ನೆಲಸೆಳೆತಕ್ಕಿಂತ ಹೆಚ್ಚಾದಂತೆಲ್ಲಾ ವಿಮಾನ ಮೇಲೆ ಹಾರುತ್ತದೆ. ಈ ತರನಾಗಿ ಗಾಳಿಯ ಬೀಸುವಿಕೆಯನ್ನೇ ಹಾರಾಟದ ಸಲಕರಣೆಯಾಗಿ ವಿಮಾನ ತನ್ನ ಮೈ ಆಕಾರ ಮತ್ತು ರೆಕ್ಕೆಯ ಮೂಲಕ ಬಳಸಿಕೊಳ್ಳುತ್ತದೆ.

ಮೇಲೆ ಹಾರಿದ ವಿಮಾನವನ್ನು ಹೇಗೆ ಹಿಡಿತದಲ್ಲಿಡಲಾಗುತ್ತದೆ? ವಿಮಾನದ ಮೈಗೆ ಅಂಟಿರುವ ಬಾಲ ಮತ್ತು ಪಟ್ಟಿಗಳ ಕೆಲಸವೇನು? ಮುಂತಾದ ವಿಷಯಗಳನ್ನು ಮುಂದಿನ ಬರಹದಲ್ಲಿ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: howstuffworks, wikipedia, engineeringexpert, fineartamerica, hdwallpaperstop