ಕೋವಿಡ್-19 ಕುರಿತು ವಿವರವಾದ ಮಾಹಿತಿ

ಧನುಜಾ ಜೆ.
(ಎಂ.ಎಸ್ಸಿ. ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಮೈಸೂರು)

ಮನುಜ ಕೇಂದ್ರಿತವಾದ ಈ ಭೂಮಿಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಿ ಜಗತ್ತಿನಾದ್ಯಂತ ಪಸರಿಸಿಕೊಂಡಿರುವ, ಜೀವಕೋಶವೇ ಇಲ್ಲದ ಒಂದು ಸಣ್ಣ ಸೂಕ್ಷ್ಮಾಣು ಎಂದರೆ ಕೊರೊನಾ ಎಂದು ಕರೆಯಲಾಗುತ್ತಿರುವ 2019-nCoV ಅಥವಾ SARS-CoV-2. ಎರಡು ಬಾರಿ ಘಟಿಸುವ ಎಲ್ಲವೂ ಮೂರನೇ ಬಾರಿಗೆ ಸಂಭವಿಸುತ್ತದೆ ಎನ್ನುವ ಮಾತಿನಂತೆ 2002-03ರಲ್ಲಿ ಮಾರಣಾಂತಿಕ ತೀವ್ರ ಉಸಿರಾಟದ ಸಿಂಡ್ರೋಮ್ (SARS) ಮತ್ತು 2012ರ ಮಧ್ಯ ಪೂರ್ವ ಉಸಿರಾಟದ ಸಿಂಡ್ರೋಮ್ (MERS)ಗಳು ಮರೆಯಾಗಿಲ್ಲ, ಮೂರನೆಯದು ಕೋವಿಡ್-19 ಇತ್ತೀಚೆಗಷ್ಟೇ ಡಿಸೆಂಬರಿನಲ್ಲಿ ಕಾಣಿಸಿಕೊಂಡು ಜಗತ್ತಿನಾದ್ಯಂತ ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಇದರ ವಿವರವಾದ ಮಾಹಿತಿ ಇಲ್ಲಿದೆ.

ವಿಶೇಷವೆಂದರೆ ಈ ಮೂರೂ ಕಾಯಿಲೆಗಳ ವೈರಸ್ಗಳು ಒಂದೇ ಕುಟುಂಬಕ್ಕೆ ಸೇರಿದವು. ಅದುವೇ ಕೊರೊನಾವಿರಡೆ (Coronaviridae). ಈ ಕೊರೊನಾವೈರಸ್ಗಳಲ್ಲಿ ನಾಲ್ಕು ಪಂಗಡಗಳಿವೆ. ಅವುಗಳೆಂದರೆ α−/β−/γ−/δ-(ಆಲ್ಫಾ, ಬೀಟಾ, ಘಾಮಾ ಮತ್ತು ಡೆಲ್ಟಾ) ಕೊರೋನವೈರಸ್ಗಳು. ಇದರಲ್ಲಿ α- ಮತ್ತು β- ಕೊರೋನವೈರಸ್ಗಳು (CoV) ಸಸ್ತನಿಗಳಿಗೆ ಸೋಂಕು ತಗುಲಿಸಿದರೆ, γ- ಮತ್ತು δ-ಕೊರೋನವೈರಸ್ಗಳು ಪಕ್ಷಿಗಳಿಗೆ ಸೋಂಕು ತಗುಲಿಸುತ್ತವೆ.

ಆರು ಕೊರೋನವೈರಸ್‍ಗಳು ಮಾನವ-ಒಳಗಾಗುವ ವೈರಸ್‍ಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಎರಡು α- ಕೊರೋನವೈರಸ್‍ಗಳು, HCoV-229E, HCoV-NL63, ಎರಡು β- ಕೊರೋನವೈರಸ್‍ಗಳು HCoV- HkU1 ಮತ್ತು HCoV- OC43. ಇದರಲ್ಲಿ ಮೊದಲ ನಾಲ್ಕು ವೈರಸ್‍ಗಳು ಕಡಿಮೆ ರೋಗಕಾರಕ ಮತ್ತು ಸಾಮಾನ್ಯ ನೆಗಡಿಯಂತೆ ಕಡಿಮೆ ಪ್ರಮಾಣದ ಉಸಿರಾಟದ ತೊಂದರೆ ಲಕ್ಷಣಗಳನ್ನು ತೋರುತ್ತವೆ. ಇನ್ನುಳಿದ ಎರಡು ವೈರಸ್‍ಗಳು SARS ರೋಗಕ್ಕೆ ಕಾರಣವಾದ ತೀವ್ರವಾದ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್ (SARS-CoV) ಮತ್ತು MERS ರೋಗಕ್ಕೆ ಕಾರಣವಾದ ಮಧ್ಯ ಪೂರ್ವ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್ (MERS-CoV).

ಈ ಪಟ್ಟಿಗೆ ಏಳನೆಯದಾಗಿ ಸೇರ್ಪಡೆಗೊಳ್ಳುವುದು, ಈಗ ಕೋವಿಡ್-19 (ಕೊರೊನಾ ವೈರಸ್‍ನಿಂದ ಉಂಟಾದ ಕಾಯಿಲೆ-2019) ಕಾರಣವಾಗಿರುವ ತೀವ್ರವಾದ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್- 2 (SARS-CoV-2) ಅಥವಾ 2019 ಹೊಸ ಕೊರೋನವೈರಸ್ (2019-nCoV).

ಮೂಲ:

ಮೂಲದಲ್ಲಿ SARS-CoV-2 ಪ್ರಾಣಿಗಳಲ್ಲಿ ಕಂಡುಬರುವ ವೈರಸ್. ಸ್ವಾಭಾವಿಕವಾಗಿ ಬಾವಲಿಗಳಲ್ಲಿ  ಮತ್ತು ಪ್ಯಾಂಗೋಲಿನ್ಗಳಲ್ಲಿ ಜೀವಂತವಾಗಿರುತ್ತದೆ. ಇವು ಚೀನಾದ ವುಹಾನ್ ಸಮುದ್ರ ಪ್ರಾಣಿಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗ ಪ್ರಾಣಿಗಳಿಂದ ಈ ವೈರಸ್ ಮನುಷ್ಯರಿಗೆ ಹೊಕ್ಕಿರಬಹುದು ಎಂದು ಊಹಿಸಲಾಗಿದೆ (ಪುರಾವೆಗಳಿಲ್ಲದ್ದರಿಂದ).

ಮನುಷ್ಯರಿಗೆ ಹೊಕ್ಕಿದ ಮೇಲೆ ಒಬ್ಬರಿಂದ ಒಬ್ಬರಿಗೆ ಹರಡಿ ನ್ಯುಮೋನಿಯಾದಂತಹ ಪ್ರಕರಣಗಳು ಹೆಚ್ಚಾದವು. 31 ಡಿಸೆಂಬರ್ 2019ರಲ್ಲಿ ಒಂದು ರೋಗಾಣು ವರದಿಯಲ್ಲಿ ವೈರಸ್ ಅದರ ಸಂಬಂಧಿಸಿದ SARS-CoV ಗಳಿಗಿಂತ ಬೇರೆ ತರನಾಗಿದೆ ಇದನ್ನು ಹೊಸ ಕೊರೊನಾ ವೈರಸ್ (2019-nCoV) ಎಂದು ಗುರುತಿಸಬೇಕು ಎಂದು ತಿಳಿಸಿತು.

ಈಗಿನ SARS-CoV-2 ವೈರಸ್‍ನೊಳಗಿರುವ ಜೀವತಂತು (ಜೀನೋಮ್), ಬಾವಲಿಗಳ CoV RaTG13 ವೈರಸ್ಗಳಿಗೆ 96.2%ನಷ್ಟು ಹೋಲುತ್ತದೆ. ಆದರೆ ಇದರ ಹತ್ತಿರದ ಸಂಬಂಧಿ SARS-CoV ವೈರಸ್ಗೆ 79.5% ಹೋಲಿಕೆ ಅಷ್ಟೇ ಹಂಚಿಕೊಂಡಿದೆ. ವೈರಸ್ ಜೀವತಂತು ಮಾಹಿತಿ (genome sequencing) ಫಲಿತಾಂಶಗಳು ಮತ್ತು ಅದರ ಬೆಳವಣಿಗೆಯ ವಿಶ್ಲೇಷಣೆಯ ಆಧಾರದ ಮೇಲೆ ಬಾವಲಿಗಳು ಈ ವೈರಸ್‍ನ ನೈಸರ್ಗಿಕ ನೆಲೆಗಳು (Natural host) ಎಂದು ಅಂದಾಜಿಸಲಾಗಿದೆ.

ವೈರಸ್‍ ಹರಡಿಕೆ

spread

ಚೀನಾದ ವುಹಾನ್ ಮೂಲ ಕೇಂದ್ರವಾಗಿ ಹರಡಿದ SARS-CoV-2 ಈಗಾಗಲೇ ಜಗತ್ತಿನಾದ್ಯಂತ ಪಸರಿಸಿದೆ. ಏಪ್ರಿಲ್ 8ರವರೆಗೆ ಒಟ್ಟು  1,450,950   ದೃಢಪಟ್ಟ ಪ್ರಕರಣಗಳು,  83,512  ಸಾವುಗಳು ಮತ್ತು 309,605 ಚೇತರಿಸಿಕೊಂಡು ಪ್ರಕರಣಗಳು ವರದಿಯಾಗಿದೆ. ಚೀನಾ ಕೋವಿಡ್-19  ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು, ಇಟಲಿಯಲ್ಲಿ ಪರಿಸ್ಥಿತಿ ಕೈಗೆ ನಿಲುಕದಂತಾಯಿತು. ಸೋಂಕು ಹೊಂದಿದ ದೇಶಗಳಲ್ಲಿ ಅಮೇರಿಕಾ ಮೊದಲಿದ್ದು ಸ್ಪೈನ್ ಎರಡನೇ ಸ್ಥಾನದಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಚೀನಾ ಜಂಟಿ ಮಿಷನ್ ವರದಿ‌ ಮತ್ತು ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಷನ್ ವರದಿ:

2020 ಫೆಬ್ರವರಿ 28 ಮತ್ತು 11ರ ಹೊತ್ತಿಗೆ ಪ್ರಕಟಿಸಲಾದ ಈ ವರದಿಯಿಂದ ರೋಗದ ಪ್ರಮುಖ ಅಂಶಗಳನ್ನು ತಿಳಿ ಪಡಿಸಿತು. ಕೋವಿಡ್-19 ಪ್ರಕರಣಗಳು, ಸಾವುಗಳ ವಯಸ್ಸು, ಲಿಂಗ ಅನುಪಾತ ಮತ್ತು  ರೋಗಿಯ ವೈದ್ಯಕೀಯ ಚಾರಿತ್ರಿಕ ಹಿನ್ನೆಲೆ ಮೇಲೆ ರೋಗದ ಪರಿಣಾಮಗಳನ್ನು ದಾಖಲೆಯಾಗಿ ಬಿಡುಗಡೆ ಮಾಡಿತು.

ಕೋವಿಡ್-19 ದೃಢಪಡಿಸಿದ  ಪ್ರಕರಣಗಳು:

Picture1

ಕೋವಿಡ್-19 ಸಾವಿನ ಪ್ರಮಾಣ

ದೃಢಪಡಿಸಿದ ಪ್ರಕರಣಗಳಲ್ಲಿ ಸಾವಿನ ಪ್ರಮಾಣವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಮತ್ತು ಮಕ್ಕಳಲ್ಲಿ ಕಡಿಮೆ ಪ್ರಕರಣಗಳು ಕಂಡು ಬಂದಿವೆ.

Picture2( ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11 2020)

 

ಕೋವಿಡ್-19 ಸಾವಿನ ಲಿಂಗ ಅನುಪಾತದ ಪ್ರಮಾಣ:

ಪುರುಷರಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಧೂಮಪಾನವು ಉಸಿರಾಟದ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Picture3( ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11)

ರೋಗಿಯ ವೈದ್ಯಕೀಯ ಚಾರಿತ್ರಿಕ ಹಿನ್ನೆಲೆ:

ಇದನ್ನು ಕೊಮೊಬ್ರಿಡಿಟೀಸ್ ಎಂದು ಕರೆಯುತ್ತಾರೆ. ಹಿಂದೆಯೇ ಯಾವುದಾದರೂ ರೋಗದ ಇತಿಹಾಸ ಹೊಂದಿರುವ ರೋಗಿಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ ಸಾಯುವ ಅಪಾಯ ಹೆಚ್ಚಿರುತ್ತದೆ.

Picture4(ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11)

ವೈದ್ಯಕೀಯ ತೀವ್ರತೆಯ ಪ್ರಮಾಣ:

11 ಫೆಬ್ರವರಿಯಲ್ಲಿ ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಷನ್ (ಸಿಸಿಡಿಸಿ) ಸಂಸ್ಥೆಯ ವರದಿ ಪ್ರಕಾರ ಒಟ್ಟಾರೆ 72,314 ಪ್ರಕರಣಗಳಲ್ಲಿ, ವರದಿಯಾದ 81% ಪ್ರಕರಣಗಳು ಸೌಮ್ಯ ರೋಗ ಲಕ್ಷಣ ತೋರಿದ್ದು ಇದರಲ್ಲಿ ನ್ಯುಮೋನಿಯಾ ಮತ್ತು ನ್ಯೂಮೋನಿಯಾವಲ್ಲದ ರೋಗಗಳು ಸೇರಿವೆ.  14% ಪ್ರಕರಣಗಳಲ್ಲಿ ರೋಗದ ತೀವ್ರತೆ ಹೊಂದಿದ್ದು ಡಿಸ್ಪ್ನಿಯಾ, ಮತ್ತು ಉಸಿರಾಟದ ತೊಂದರೆ ಸೇರಿದೆ. ಮತ್ತು 5% ಪ್ರಕರಣಗಳು ನಿರ್ಣಾಯಕ ಹಂತ ಹೊಂದಿದ್ದವು. ಈ ಹಂತದಲ್ಲಿ ಉಸಿರಾಟದ ವೈಫಲ್ಯ, ಸೆಪ್ಟಿಕ್ ಆಘಾತ ಮತ್ತು ಅಂಗಾಂಗ ವೈಫಲ್ಯ ತೊಂದರೆಗಳು ಕಂಡವು.

Picture8

(ಚಿತ್ರ2: ವೈದ್ಯಕೀಯ ತೀವ್ರತೆಯ ಪ್ರಮಾಣ)

ಜೀವತಂತುವಿನ (ಜೀನೋಮ್) ರಚನೆ ಮತ್ತು ಪ್ರಮುಖ ವೈರಲ್ ಅಂಶಗಳು:

Picture6(ಚಿತ್ರ 4: ವೈರಸ್ ರಚನೆ)

SARS-CoV-2 ಒಂದು ಕವಚ ಹೊಂದಿದ ಏಕೈಕ ಎಳೆಯ ಆರ್ ಎನ್ ಎ (RNA- ರೈಬೋ ನ್ಯೂಕ್ಲಿಕ್ ಆಮ್ಲ) ವೈರಸ್. ಇದು  29,900 ನ್ಯೂಕ್ಲಿಯೋಟೈಡ್ಸ್ಗಳಿಂದ ಮಾಡಲ್ಪಟ್ಟಿದ್ದು ಧನಾತ್ಮಕ (ಆರ್ ಎನ್ ಎ 5’-3’ ದಿಕ್ಕಿನಲ್ಲಿದ್ದು ನೇರವಾಗಿ ಪ್ರೋಟೀನನ್ನು ಅನುವಾದಿಸಬಲ್ಲದು) ಆರ್ ಎನ್ ಎ ಹೊಂದಿದೆ. ಇದು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಡಿಯಲ್ಲಿ ಕಿರೀಟದಂತಹ (crown) ಮೇಲ್ಮೈನ ಪ್ರೋಟೀನಗಳು ಕಂಡುಬಂದರಿಂದ ಕೊರೋನವೈರಸ್ ಎಂದು ಕರೆಯಲ್ಪಡುತ್ತದೆ.

ಇದರ ಜೀವತಂತು 6 ರಿಂದ 11 ಓಪನ್ ರೀಡಿಂಗ್ ಫ್ರೇಮ್ಗಳನ್ನು (ORF) [ಆರ್ ಎನ್ ಎಯಲ್ಲಿ ಅಮೈನೋ ಆಮ್ಲಗಳಿಂದ ಪ್ರೋಟೀನನ್ನು ಸಂಕೇತಿಸುವ ಕೋಡಾನುಗಳು ನಿರಂತರವಾಗಿದ್ದು, ನಿರಂತರವಾಗಿಯೇ ಪ್ರೋಟೀನ್ಗಳನ್ನು ಅನುವಾದಿಸುತ್ತದೆ. ಇದರಲ್ಲಿ ಆರಂಭಿಕ ಮತ್ತು ಕೊನೆಯ ಕೋಡಾನ್ಗಳು ಇರುತ್ತದೆ] ಹೊಂದಿದೆ. ಈ ವೈರಸ್ಸಿನ ಆರ್ ಎನ್ ಎಯಲ್ಲಿ ಮೊದಲನೆಯ ಓ ಆರ್ ಎಫ್ (ORF 1a/1b) ಬಹುತೇಕ ಭಾಗದಷ್ಟಿದೆ. ಇದು ಎರಡು ಪಾಲಿಪ್ರೋಟೀನ್ಗಳಾದ pp1a ಮತ್ತು pp1b ಸಂಕೇತಿಸುತ್ತದೆ, ಅವು ವೈರಸ್ಸಿನ ರಚನೆಗೆ ಒಳಪಡದ ರಚನಾತ್ಮಕವಲ್ಲದ (Non Structural Protein) 16 ಪ್ರೋಟೀನ್ಗಳನ್ನು  ಸಂಕೇತಿಸುತ್ತದೆ. ಈ ಪ್ರೋಟೀನ್ಗಳು ಜೀವತಂತುವಿನ ಪ್ರತಿಮಾಡುವ (Replication)  ಮೂಲಕ ಪ್ರತಿಕೃತಿಗಳನ್ನು ಹೆಚ್ಚಿಸುವಲ್ಲಿ ಕಾರ್ಯ ನಿರ್ವಹಿಸುತ್ತವೆ. ಜೀವತಂತುವಿನ ಇನ್ನುಳಿದ ಭಾಗ ವೈರಸ್ಸಿನ ರಚನೆಗೆ ಬೇಕಾದ ಅನೇಕ  ರಚನಾತ್ಮಕ ಪ್ರೋಟೀನ್ಗಳನ್ನು (Structural Protein) ಸಂಕೇತಿಸುತ್ತದೆ, ಇದರಲ್ಲಿ ಮುಖ್ಯವಾಗಿ ವೈರಸ್ಸಿನ ಹೊದಿಕೆ ಮುಳ್ಳು (S) ಗ್ಲೈಕೊಪ್ರೋಟೀನ್, ಹೊದಿಕೆ (E) ಪ್ರೋಟೀನ್, ಪದರ (M) ಪ್ರೋಟೀನ್ ಮತ್ತು ಕೋಶಕೇಂದ್ರದ ಕವಚ (N) ಪ್ರೋಟೀನ್ ಹೊಂದಿದೆ.

SARS-CoV-2ನ ವಿಶೇಷವಾದ ಒಂದು ಅಂಶವೆಂದರೆ ಇದರ ಹತ್ತಿರ ಸಂಬಂಧಿ SARS-CoV ನಂತೆ ಮನುಷ್ಯರ ನಿನ್ನ ಶ್ವಾಸನಾಳದ ಜೀವಕೋಶಗಳಿಗೆ ಸೋಂಕು ತಗುಲಿಸುವಲ್ಲಿ ಒಂದೇ ತೆರನಾದ ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ 2 (ACE2) ಪಡೆಯುಕಗಳನ್ನು (receptor) ಉಪಯೋಗಿಸುತ್ತವೆ. ಆದರೆ SARS-CoV-2 ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನಿನಲ್ಲಿ ಕೆಲವು ಪರಿವರ್ತನೆಗಳಾಗಿದ್ದು ಇದು ಸಾಂಕ್ರಾಮಿಕ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದು ಹಿಂದಿನ SARS-CoVಗಿಂತ ಬೇಗನೆ ಜನರಲ್ಲಿ ಹರಡಲು ಕಾರಣವಾಗಿದೆ.

ವೈದ್ಯಕೀಯ ಲಕ್ಷಣಗಳು:

ಪ್ರೊಫೆಸರ್ ವ್ಯಾನ್ ಶಾನ್ ಝಾಂಗ್ ತಂಡದ ಪ್ರಕಾರ, 1099 ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳಲ್ಲಿ ಕೋವಿಡ್-19 ರೋಗ ಹೊಂದಿದ ಜನರಲ್ಲಿ ಜ್ವರ (88.7%), ಒಣಕೆಮ್ಮು (67.8%), ಆಯಾಸ (38.1%), ಕಫ ಉತ್ಪಾದನೆ (33.4%), ಉಸಿರಾಟದ ತೊಂದರೆ (18.6%), ಗಂಟಲು ಕೆರೆತ (13.9%), ಮತ್ತು ತಲೆನೋವು (13.6%) ರೋಗ ಲಕ್ಷಣಗಳು ಕಂಡುಬಂದಿದೆ. ಇದರ ಜೊತೆಗೆ ಕೆಲವು ರೋಗಿಗಳು ಜಠರಗರುಳಿನ ರೋಗಲಕ್ಷಣಗಳನ್ನು ವ್ಯಕ್ತಪಡಿಸಿದ್ದಾರೆ, ಇವುಗಳೆಂದರೆ ವಾಂತಿ (5%) ಮತ್ತು ಭೇದಿ (3.8%). ಇವೆರಡು ಸಾಮಾನ್ಯವಾಗಿಯೇ ಎಲ್ಲಾ ಕೊರೋನಾ ವೈರಸ್ಗಳಲ್ಲಿ ಕಂಡುಬರುವ ರೋಗಲಕ್ಷಣಗಳು.

ಇವುಗಳಲ್ಲಿ ಜ್ವರ, ಒಣಕೆಮ್ಮು ಮತ್ತು ಆಯಾಸದ ಲಕ್ಷಣಗಳು ಕೋವಿಡ್-19 ದೃಢಪಡಿಸಿದ ರೋಗಿಗಳಲ್ಲಿ ಕಂಡುಬಂದಿದೆ. ಗಂಟಲು ಕೆರೆತ ರೋಗದ ಮೊದಮೊದಲು ಕಂಡುಬರುತ್ತದೆ. ರೋಗ ತೀವ್ರತೆಗೆ ಬಂದಂತೆ ಉಸಿರಾಟದ ತೊಂದರೆ ಕಾಣಿಸುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ಈ ರೋಗವು ತೀವ್ರವಾಗಿ ಭಾದಿಸುವ ಸಂಭಾವ್ಯತೆ ಜಾಸ್ತಿ ಇದ್ದು ಅದರಲ್ಲಿಯೂ ಕೆಲವು ರೋಗಗಳ ಹಿನ್ನೆಲೆ ಹೊಂದಿದ್ದರೆ ಉದಾಹರಣೆಗೆ ಹೃದ್ರೋಗ, ಸಕ್ಕರೆ ಕಾಯಿಲೆ, ದೀರ್ಘಕಾಲದ ಉಸಿರಾಟದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಇರುವರಲ್ಲಿ ರೋಗವು ತೀವ್ರತೆಗೆ ತಿರುಗುತ್ತದೆ.

Picture9ರೋಗಲಕ್ಷಣಗಳು ಕಾಣಿಸಲು ತೆಗೆದುಕೊಳ್ಳುವ ದಿನಗಳು:

ಸೋಂಕಿನ ಮೊದಲ ದಿನದಿಂದ ಹಿಡಿದು ಏಳನೇ ದಿನದವರೆಗೆ ಮೊದಲ ರೋಗದ ಲಕ್ಷಣವಾದ ಜ್ವರ ಕಾಣಿಸಿಕೊಳ್ಳುತ್ತದೆ, 3 ರಿಂದ 4 ದಿನಗಳ ಒಳಗೆ ಒಣಕೆಮ್ಮು ಬರುತ್ತದೆ, ಇಷ್ಟರೊಳಗೆ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದರೆ ಉಸಿರಾಟದ ತೊಂದರೆ 5 ನೇ ದಿನದಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿನ ವ್ಯಕ್ತಿಗಳು ಹಿರಿಯ ವಯಸ್ಸಿನವರಾಗಿದ್ದರೆ ತೀವ್ರತೆ ಹೆಚ್ಚಾಗಿ 7 ರಿಂದ 8 ನೇ ದಿನಕ್ಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. 6 ರಿಂದ 12 ದಿನಗಳಲ್ಲಿ ತೀವ್ರ ಉಸಿರಾಟದ ತೊಂದರೆ ಉಂಟಾಗಿ ವೆಂಟಿಲೇಟರ್ ನೆರವು ಪಡೆಯುತ್ತಾರೆ.

Picture10ರೋಗ ಹೊಮ್ಮುವ ಕಾಲಾವಧಿ:

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ ಎಚ್ ಸಿ) ಸೋಂಕಿನಿಂದ ಹಿಡಿದು ರೋಗ ಲಕ್ಷಣಗಳನ್ನು ತೋರಿಸುವ ಕಾಲಾವಧಿಯನ್ನು 10 ರಿಂದ 14 ದಿನಗಳು ಎಂದು ಅಂದಾಜಿಸಿದೆ. ಈ ಅವಧಿಯು ರೋಗಿಗಳ ಮೇಲೆ ಅವಲಂಬಿಸಿದ್ದು ದಿನಗಳ ಸಂಖ್ಯೆ ಬದಲಾಗಬಹುದು. ಒಟ್ಟು ಸರಾಸರಿ ರೋಗ ಹೊಮ್ಮುವ ಕಾಲ 5.2 ದಿನಗಳು ಎಂದು ಅಂದಾಜಿಸಿದೆ. ಅಂದರೆ 5 ರಿಂದ 7 ದಿನಗಳಲ್ಲಿ ತುತ್ತಾದ ಜನರು ರೋಗ ಲಕ್ಷಣಗಳನ್ನು ತೋರಿಸಬಹುದು.

ರೋಗ ಹೊಂದಿದ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಸೋಂಕನ್ನು ಪಸರಿಸುವ Ro ಸಂಖ್ಯೆ 2.2 ನಿಂದ 4 ಹೊಂದಿದೆ. ಅಂದರೆ ಸಾಮಾನ್ಯವಾಗಿ ರೋಗ ಹೊಂದಿದ ಒಬ್ಬ ವ್ಯಕ್ತಿ 2 ರಿಂದ 4 ಜನರಿಗೆ ಸೋಂಕನ್ನು ಹರಡಬಹುದು. ಆದರೆ ಇದು ಕೆಲವೊಮ್ಮೆ ನೂರರಿಂದ ಸಾವಿರಾರು ಜನರಿಗೆ ಹರಡುವ ಸಾಧ್ಯತೆಯಿದ್ದು, ಇದು ಸೋಂಕಿತ ವ್ಯಕ್ತಿಯ ಕೆಲಸ ಮತ್ತು ವ್ಯಕ್ತಿಗಳ ದೈಹಿಕ ಸಂಪರ್ಕದ ಮೇಲೆ ಅವಲಂಬಿತವಾಗಿರುತ್ತದೆ.  ಸೋಂಕು ತಾಗಿದ ಸಾಧ್ಯತೆಯಿರುವ ವ್ಯಕ್ತಿಗಳನ್ನು (ಉದಾ: ಸೋಂಕು ಪೀಡಿತ ದೇಶಗಳಿಂದ ಬಂದವರು) 14 ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸುತ್ತಾರೆ.

 ಸೋಂಕಿನ ಹರಡುವಿಕೆ:

SARS-CoV-2 ಮುಖ್ಯವಾಗಿ ಹರಡುತ್ತಿರುವ ಮಾರ್ಗವೆಂದರೆ ರೋಗ ಹೊಂದಿದ ವ್ಯಕ್ತಿ ಸೀನಿದಾಗ ಬರುವ ಸೀನು ಹನಿಗಳಿಂದ, ಕೆಮ್ಮಿದಾಗ ಅಥವಾ ಮಾತನಾಡುವಾಗ ಹೊಮ್ಮುವ ಹನಿಗಳಿಂದ,  ಅವರ ಮುಕ್ತ ಸಂಪರ್ಕದಿಂದ ಅಂದರೆ ಸೋಂಕಿತ ವ್ಯಕ್ತಿಗಳ ಜೊತೆ ಒಂದು ಮೀಟರ್ ಒಳಗೆ ಇರುವರಿಗೆ ಹರಡುತ್ತದೆ.

ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಹರಡುತ್ತಿರುವುದು ಅವರ ನಿಕಟ ಸಂಪರ್ಕದಿಂದ, ಇದರಲ್ಲಿ ಬಹುತೇಕ ಅವರ ಕುಟುಂಬದ ಸದಸ್ಯರು ಮತ್ತು ರೋಗದ ಗುಣಲಕ್ಷಣಗಳೇ ತೋರದವರಲ್ಲಿ ಹರಡುವಿಕೆಯು ಸಹ ಕಂಡುಬಂದಿದೆ.

ರೋಗ ಹೊಂದಿದ ಒಬ್ಬ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ (ಕೆಲವು ಬಾರಿ ಮಾತನಾಡುವಾಗಲೂ) ಲಕ್ಷಾಂತರ ಹನಿಗಳು ಚಿಮ್ಮುತ್ತವೆ. ಈ ಹನಿಗಳಲ್ಲಿ ಅವಿತುಕೊಂಡಿರುವ ವೈರಸ್ಗಳು ಇತರ ವ್ಯಕ್ತಿಗಳ ಸಂಪರ್ಕ ಬಂದರೆ, ಅಂದರೆ ಸೋಂಕಿನ ಹನಿಗಳಿರುವ ವಸ್ತುವನ್ನು ಮುಟ್ಟಿ ನಂತರ ತನ್ನ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಂಡರೆ ವೈರಸ್ ದೇಹದ ಒಳಗೆ ಲೋಳೆ ಪದರಗಳನ್ನು ತಲುಪಬಹುದು, ಅದು ಸೋಂಕಿಗೆ ಕಾರಣವಾಗುತ್ತದೆ. ಹಾಗೂ ಸೀನು ಹನಿಗಳು ಒಣಗಿದ ಮೇಲೆ ಅವುಗಳನ್ನು ಕದಡಿದರೆ ಗಾಳಿಯಲ್ಲಿನ ಕಣಗಳಿಗೆ ಸೇರಿ ಉಸಿರಾಟದ ಮೂಲಕ ಶ್ವಾಸನಾಳದ ಒಳಗೆ ಪ್ರವೇಶ ಪಡೆಯುತ್ತವೆ.

ರೋಗಾಣು ಹಿಮ್ಮಡಿಕೆ ಮತ್ತು ರೋಗೋತ್ಪತ್ತಿ:

ಈ SARS-CoV-2 ಇಷ್ಟೊಂದು ಸಾಂಕ್ರಾಮಿಕವಾಗಿ ಹರಡುವುದಕ್ಕೆ ಮುಖ್ಯ ಕಾರಣವೆಂದರೆ ಅವುಗಳ ರೋಗೋತ್ಪತ್ತಿ. SARS-CoV2 ವೈರಸ್‍ಗಳು ಮಾನವ ಜೀವಕೋಶದ ACE2 ಪಡೆಯುಕಗಳನ್ನು (receptor) ಬಳಸಿಕೊಂಡು, ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳ ಮರುಸಂಯೋಜನೆಗಳಿಂದ ಬಹಳ ಅಚ್ಚರಿಗೊಳಿಸುವಂತೆ ಮಾನವ ಜೀವಕೋಶವನ್ನು ಸೇರಿಕೊಳ್ಳುತ್ತವೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಬಹು ವೇಗವಾಗಿ ಹರಡಲು ಕಾರಣವಾಗುತ್ತಿರುವ ಅಂಶ.

SARS-CoV-2 ಕೆಳ ಮತ್ತು ಮೇಲಿನ ಎರಡೂ ಶ್ವಾಸನಾಳಕ್ಕೆ ಸೋಂಕು ತಗುಲಿಸುತ್ತದೆ. ಈ  ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳಲ್ಲಿ ಎರಡು ಉಪವಿಭಾಗಗಳಿರುತ್ತವೆ. S1 ಮತ್ತು S2. S1 ಉಪವಿಭಾಗಗಳು ಮಾನವ ಜೀವಕೋಶಗಳ ಪಡೆಯುಕಗಳಿಗೆ ಬಂಧಿಸುವ RBD ಅಂಶಗಳನ್ನು (RBD- Receptor Binding Domain)  ಹೊಂದಿದೆ. S2 ಉಪವಿಭಾಗಗಳು ವೈರಸ್ ಮತ್ತು ಮಾನವ ಜೀವಕೋಶಗಳ ಪದರಗಳನ್ನು ಕೂಡುವುದಕ್ಕೆ ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ವೈರಸ್ ಜೀವಕೋಶಗಳ ಒಳಗೆ ಒಂದು ಕೋಶಕದ ಮೂಲಕ ನುಗ್ಗುತ್ತದೆ ಇದನ್ನು ಎಂಡೋಸೈಟಾಸಿಸ್ ಎಂದು ಕರೆಯುತ್ತಾರೆ (ಆದರೆ ಈ ವೈರಸ್ಗಳಲ್ಲಿ ಈ ಕ್ರಿಯೆ ಮಾಡುವ ಪ್ರೋಟೀನ್ಗಳು ಬಗ್ಗೆ ಇನ್ನು ಹೆಚ್ಚು ಗೊತ್ತಿಲ್ಲ). ಬಳಿಕ ತನ್ನಲ್ಲಿರುವ ಜೀವತಂತು ಆರ್ ಎನ್ ಎ ಕೋಶ ದ್ರಾವ್ಯಕ್ಕೆ ಬಿಡುಗಡೆ ಮಾಡುತ್ತದೆ. ಈ ಕವಚವಿಲ್ಲದ ಆರ್ ಎನ್ ಎ ಎರಡು ಪಾಲಿಪ್ರೋಟೀನ್ಗಳನ್ನು ಅನುವಾದಿಸುತ್ತದೆ. ಇವು 16 ರಚನಾತ್ಮಕವಲ್ಲದ ಪ್ರೋಟೀನ್ಗಳನ್ನು ಸಂಕೇತಿಸುತ್ತದೆ.

ಈ ಪ್ರೋಟೀನ್ಗಳು ಒಳಬಂದ ಆರ್ ಎನ್ ಎ ಜೊತೆಗೂಡಿ, ಪ್ರತಿಮಾಡುವ-ಟ್ರಾನ್ಸ್ ಕ್ರಿಪ್ಷನ್ ಸಂಕೀರ್ಣವನ್ನು (Replication-Transcription Complex- RTC)  ಕೋಶಕ (vesicle)ದೊಳಗೆ ನಿರ್ಮಿಸುತ್ತವೆ. ಈ ಆರ್ ಟಿ ಸಿ ಸಂಕೀರ್ಣಗಳು ಜೀವತಂತು ಆರ್ ಎನ್ ಎ ಪ್ರತಿಕೃತಿಗಳನ್ನು ಹಾಗೂ ಅದರ ಕೆಲವು ಭಾಗಗಳನ್ನು ಹೆಚ್ಚಿಸುತ್ತವೆ. ಇವು ವೈರಸ್ಸಿಗೆ ಬೇಕಾದ ಸಹಾಯಕ ಮತ್ತು ರಚನಾತ್ಮಕ ಪ್ರೋಟೀನ್ಗಳನ್ನು ಆಧಾರಿತ ಜೀವಕೋಶದ ಅಂಗಗಳಾದ ಎಂಡೋಪ್ಲಾಸ್ಮಿಕ್ ರೆಟ್ಯಿಕುಲಮ್ ಮತ್ತು ಗಾಲ್ಗಿ ಬಾಡೀಸ್ಗಳಲ್ಲಿ (ಎರಡೂ, ಜೀವಕೋಶಗಳಲ್ಲಿ ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ಅಂಗ) ತನ್ನ ಎಲ್ಲಾ ಪ್ರೋಟೀನ್ಗಳನ್ನು ಸಂಶ್ಲೇಷಿಸಿಕೊಳ್ಳುತ್ತವೆ. ಈ ಎಲ್ಲಾ ಹೊಸದಾಗಿ ಪ್ರತಿಮಾಡಿದ ಜೀವತಂತು ಆರ್ ಎನ್ ಎ ಪ್ರತಿಕೃತಿಗಳನ್ನು, ಕೋಶಕೇಂದ್ರದ ಕವಚ ಪ್ರೋಟೀನ್ಗಳನ್ನು, ಹೊದಿಕೆ ಪ್ರೋಟೀನ್ಗಳನ್ನು ಮತ್ತು ಗ್ಲೈಕೋಪ್ರೋಟೀನ್ಗಳನ್ನು ಸೇರಿಸಿಕೊಂಡು ಹೊಸ ವೈರಸ್ಗಳಾಗಿ ಒಂದು ಕೋಶಕದೊಳಗೆ ಸೃಷ್ಟಿಸುತ್ತದೆ. ಅದು ಕೊನೆಗೆ ಪ್ಲಾಸ್ಮಾ ಹೊರಪದರದಲ್ಲಿ ಕೂಡಿಕೊಂಡು ಪದರ ಹರಿದ ನಂತರ ರೂಪಗೊಂಡ ಹೊಸ ವೈರಸ್ಗಳ ಬಿಡುಗಡೆ ಮಾಡುತ್ತದೆ. ಇದರಿಂದ ಆಧಾರಿತ ಜೀವಕೋಶಗಳು ನಾಶವಾಗುತ್ತವೆ. ಹೊರಬಂದ ವೈರಸ್ಸುಗಳು ಹೊಸ ಜೀವಕೋಶಗಳನ್ನು ಸೋಂಕಿಸುವುದಕ್ಕೆ ಹೊರಡುತ್ತವೆ.

Picture5ಇನ್ನು ಈ ವೈರಸ್ಗಳು ಜೀವಕೋಶಗಳ ACE2 ಪಡೆಯುಕಗಳಿಗೆ ಬಂಧಿಸುವ ಮೂಲಕ ಜೀವಕೋಶಗಳ ಒಳಗೆ ಪ್ರವೇಶ ಪಡೆಯುತ್ತವೆ. ಈ ಹಂತವು ನಿರ್ಣಾಯಕವಾಗಿದ್ದು ಇದನ್ನು ತಡೆಗಟ್ಟಿದರೆ ವೈರಸ್ ಸೋಂಕಿಸಲು ಸಾಧ್ಯವಿಲ್ಲ ಆದ್ದರಿಂದ ವಿಜ್ಞಾನಿಗಳು ಈ ಹಂತದಲ್ಲಿ ಪ್ರತಿಬಂಧ ಒಡ್ಡಲು ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಪಡೆಯುಕ ಬಂಧಿಯು ಪ್ರಬಲವಾಗಿರುವುದರಿಂದ SARS-CoVಗಿಂತ ಹೆಚ್ಚಾಗಿ ಹರಡುವಲ್ಲಿ ಕಾರಣವಾಗಿದೆ.

ವೈರಸ್ಸಿನ ಹೊದಿಕೆ ಮುಳ್ಳು (S) ಗ್ಲೈಕೋಪ್ರೋಟೀನ್ಗಳು ACE2 ಪಡೆಯುಕಗಳ ಮೇಲೆ ಬಂದು ಕೂತಾಗ ಜೀವಕೋಶಗಳ  ಪದರಗಳಲ್ಲಿ ಒಳಹೊಕ್ಕಿರುವ ಪ್ರೋಟೀಏಸ್ (ಪ್ರೋಟೀನ್ಗಳನ್ನು ಕತ್ತರಿಸುವ) ಪ್ರೋಟೀನ್ಗಳು ಇವುಗಳಲ್ಲಿ ಸಾಮಾನ್ಯವಾಗಿ ಸೆರೀನ್ 2 (ಫ್ಯುರಿನ್) ಪ್ರೋಟೀಏಸ್ ಮತ್ತು ಕ್ಯಾಥೆಸ್ಪಿನ್ ಪ್ರೋಟೀಏಸ್ಗಳು S ಪ್ರೋಟೀನ್ನನ್ನು S1 ಮತ್ತು S2 ಉಪವಿಭಾಗವಾಗಿ ತುಂಡಾಗಿಸುತ್ತದೆ. ಇದು S2 ಉಪವಿಭಾಗವನ್ನು ಬಿಡುಗಡೆ ಮಾಡುತ್ತದೆ. ನಂತರ ಇದು ವೈರಸ್ಸನ್ನು ಮತ್ತು ಜೀವಕೋಶಗಳ ಪದರಕ್ಕೆ ಸೇರುವಂತೆ ಮಾಡಿ ಜೀವಕೋಶದ ಒಳಗೆ ವೈರಸ್ಸನ್ನು ನುಗ್ಗುವುದಕ್ಕೆ ಸಹಾಯ ಮಾಡಿಕೊಡುತ್ತದೆ. ಇನ್ನು ಈ ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳ ರಚನೆಗಳ ಅಧ್ಯಯನದಿಂದ ಕಂಡುಬಂದ ಅಂಶವೆಂದರೆ S1 ಉಪವಿಭಾಗದ ಆರ್ ಬಿ ಡಿಗಳು ಸ್ವಾತಂತ್ರವಾಗಿ ಪಡೆಯುಕಗಳಿಗೆ ಬಂಧಿಸುವಂತೆ ಮಡಚಿಕೊಳ್ಳುವ ಸಾಮಥ್ರ್ಯ ಹೊಂದಿದೆ ಎಂದು ತಿಳಿದುಬಂದಿದೆ.

Picture7ರೋಗದ ಚಿಕಿತ್ಸೆ:

ಕೋವಿಡ್-19ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಈ ಸಂದರ್ಭದಲ್ಲಿ ಸೋಂಕನ್ನು ಹರಡದಂತೆ ತಡೆಗಟ್ಟುವುದೇ ನಮ್ಮ ಅತ್ಯುತ್ತಮ ಅಸ್ತ್ರವಾಗಿದೆ. WHO ಈಗ ಎರಡು ತಂತ್ರಗಳನ್ನು ಬಳಸಿಕೊಳ್ಳಲು ಸೂಚಿಸಿದೆ, ಎಕ್ಸಾಕಾರ್ಪೊರಿಯಲ್ ಮೆಂಬ್ರೇನ್ ಆಮ್ಲಜನಕೀಕರಣ (ECMO) ಎಂದು ಹೇಳಲಾದ ಇದು ಹೃದಯ-ಶ್ವಾಸಕೋಶದ ಯಂತ್ರ ಇದ್ದಂತೆ ಆಮ್ಲಜನಕೀಕರಣದ ಮೂಲಕ ರಕ್ತವನ್ನು ಪರಿಚಲನೆ ಮಾಡುವ ಜೀವ ಬೆಂಬಲ ವ್ಯವಸ್ಥೆ, ಇದನ್ನು ಹೈಪೋಕ್ಸಿಮಿಯಾ ಇರುವವರಿಗೆ ನೀಡಲಾಗುತ್ತದೆ ಮತ್ತು ಗುಣಪಡಿಸಿದ ರಕ್ತದ ಪ್ಲಾಸ್ಮಾ ಮತ್ತು ಇಮ್ಯುನೊಗ್ಲಾಬ್ಯುಲಿನ್-ಜಿ (Ig-G) ಪ್ರತಿಕಾಯಗಳನ್ನು ಕೆಲವು ನಿರ್ಣಾಯಕ ಪ್ರಕರಣಗಳಿಗೆ ಕೊಡುವುದಕ್ಕೆ ತಿಳಿಸಿದೆ.

ವೈರಸ್ ವಿರೋಧಿ (anti-viral) ಚಿಕಿತ್ಸೆಗಳು:

ಹಿಂದೆ ಕಂಡ SARS ಮತ್ತು MERS ರೋಗಗಳಿಗೆ ವೈರಸ್ ವಿರೋಧಿ ‌ ಔಷಧಿಗಳನ್ನು ಕೊಟ್ರಿಕೊಸ್ಟೀರಾಯ್ಡ್ಸ್ ಗಳ ಜೊತೆ ಕೊಡುತ್ತಿದ್ದರು ಇವು ಈಗ ಕೋವಿಡ್-19ಗೆ ಬಳಸುತ್ತಿಲ್ಲ. ರೆಮ್ಡೆಸಿವಿರ್ (ಜಿ ಎಸ್- 5734) ಒಂದು ನ್ಯೂಕ್ಲಿಯೋಟೈಡ್ ಹೋಲಿಕೆಯುಳ್ಳ ಔಷಧಿಯಾಗಿದ್ದು ಇದನ್ನು ಸಾಕಷ್ಟು ಆರ್ ಎನ್ ಎ ವೈರಸ್ಗಳಿಗೆ ವ್ಯಾಪಕವಾದ ಔಷಧಿಯಾಗಿ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಅಮೇರಿಕಾದಲ್ಲಿ ಕೋವಿಡ್-19ನಿಂದ ಯಶಸ್ವಿಯಾಗಿ ಚಿಕಿತ್ಸೆ ಫಲಕಾರಿಯಾದ ಮೊದಲ ಪ್ರಕರಣ ದಾಖಲಾಗಿದೆ. ಇನ್ನೊಂದು ಮಲೇರಿಯಾದ ಚಿಕಿತ್ಸೆಗಾಗಿ ಬಳಸುವ ಹೈಡ್ರಾಕ್ಸಿಕ್ಲೋರೊಕ್ವೀನ್ ಕೋವಿಡ್-19ಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಪುನರಾವರ್ತಿತ ಔಷಧವಾಗಿದೆ.  ಹಾಗೂ ಲೊಪಿನವಿರ್ ಮತ್ತು ರಿಟೋನವಿರ್ ಎರಡರ ಸಂಯೋಜನೆ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಇನ್ನು ಈ ವೈರಸ್ವಿಗೆ ಲಸಿಕೆ ನೀಡುವ ವಿಷಯಕ್ಕೆ ಬಂದರೆ ಅದು ಒಂದು ವರ್ಷದಿಂದ ಹದಿನೆಂಟು ತಿಂಗಳ ದೂರದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೊಸ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು ಸಮಯ ತೆಗೆದುಕೊಳ್ಳುತ್ತದೆ. ಅವುಗಳನ್ನು ಮಾನವರಲ್ಲಿ ಬಳಸಲು ವಾಡಿಕೆಯಂತೆ ಮೊದಲು ಕಠಿಣವಾಗಿ ಪರೀಕ್ಷಿಸಬೇಕು ಮತ್ತು ವೈದ್ಯಕೀಯ ಪ್ರಯೋಗಗಳ ಮೂಲಕ ಸುರಕ್ಷಿತವಾಗಿದೆ ಎಂದು ದೃಢೀಕರಿಸಬೇಕು.

ಅನೇಕ ನ್ಯೂಕ್ಲಿಕ್ ಆಮ್ಲಗಳ ಲಸಿಕೆಗಳು (ಸಣ್ಣ ಮೂಲಭೂತವಾದ ಅನುವಂಶಿಕವನ್ನು ನ್ಯೂಕ್ಲಿಯೋಟೈಡ್ಸ್ಗಳಾಗಿ ಹೊಂದಿರುತ್ತದೆ) ಅನೇಕ ಬಯೋಟೆಕ್ ಕಂಪನಿಗಳು ಇದರಲ್ಲಿ ಮಾಡರ್ನಾ ಎಂಬುದು S ಪ್ರೋಟೀನ್ ಅನುವಂಶಿಕ ಸಂಕೇತದ ಒಂದು ಭಾಗವನ್ನು ಇಟ್ಟುಕೊಂಡು ದೇಹಕ್ಕೆ ಚುಚ್ಚಬಹುದಾದ ಕೊಬ್ಬಿನ ನ್ಯಾನೋಪಾಟ್ರಿಕಲ್ನೊಂದಿಗೆ ಬೆಸೆಯುವ ಮೂಲಕ ಲಸಿಕೆ ವಿನ್ಯಾಸ ಮಾಡಿದ್ದಾರೆ. ಪಿನ್ಸಿಲ್ವೇನಿಯಾ ಬಯೋಟೆಕ್ ಕಂಪನಿ ಇನೋವಿಯಾ, ಡಿ ಎನ್ ಎ (DNA) ಎಳೆಗಳನ್ನು ಉತ್ಪಾದಿಸುತ್ತಿದ್ದು ಅದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತಾರೆ. ಈ ರೀತಿಯ ಲಸಿಕೆಗಳನ್ನು ತ್ವರಿತವಾಗಿ ರಚಿಸಬಹುದಾದರೂ ಯಾವುದೂ ಮಾರುಕಟ್ಟೆಗೆ ಬಂದಿಲ್ಲ.

ಆದರೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಸಂಸ್ಥೆಯು ಲಸಿಕೆಯನ್ನು ಕಂಡುಹಿಡಿದಿದ್ದು ಆ ತನಿಖಾ ಲಸಿಕೆಯ ಸುರಕ್ಷತೆಯನ್ನು ಪರೀಕ್ಷಿಸಲು 45 ಆರೋಗ್ಯವಂತ ವಯಸ್ಕ ಸ್ವಯಂಸೇವಕರಲ್ಲಿ ಮೊದಲನೇ ಹಂತದ ವೈದ್ಯಕೀಯ ಪ್ರಯೋಗವನ್ನು ಈಗಾಗಲೇ ಸಿಯಾಟಲನಲ್ಲಿ ಪ್ರಾರಂಭಿಸಿದೆ.

ರೋಗ ತಪಾಸಣೆಯ ವಿಧಾನಗಳು:

ರೋಗಿಗಳ ಕಫಗಳನ್ನು, ಮೂಗಿನ ಮತ್ತು ಗಂಟಲಿನ‌  ಸ್ವಾಬ್ಸ್ ತೆಗೆದುಕೊಂಡು ಅದನ್ನು ವೈರಸ್ಸಿನ ಅನುವಂಶಿಕಗಾಗಿ ಹುಡುಕುತ್ತಾರೆ. ಇದನ್ನು ರಿಯಲ್-ಟೈಮ್ ಪಿ ಸಿ ಆರ್ (RT-PCR) ಮೂಲಕ ವೈರಸ್ಸಿನ ಹೊದಿಕೆ E ಜೀನ್ ಆರ್ ಎನ್ ಎ ಅನ್ನು ಮೊದಲು ಹುಡುಕುತ್ತಾರೆ ಇದು ಎಲ್ಲಾ β-ಕೊರೋನಾ ವೈರಸ್ಗಳಿಗೆ ಸಾಮಾನ್ಯವಾಗಿರುತ್ತದೆ. ಇದು  ದೃಢಪಡಿಸಿದರೆ, ಖಚಿತಪಡಿಕೊಳ್ಳಲು ORF1 ಜೀನ್ ಮತ್ತು RdRp (ಆರ್ ಎನ್ ಎ ಡಿಪೆಂಡೆಂಟ್ ಆರ್ ಎನ್ ಎ ಪಾಲಿಮರೇಸ್) ಜೀನ್ ಅನ್ನು ಬಳಸಿಕೊಳ್ಳುತ್ತಾರೆ. ಇದು 2019-nCoVಗೆ ನಿರ್ದಿಷ್ಟವಾಗಿರುತ್ತದೆ. ಈ ಆರ್ ಟಿ- ಪಿ ಸಿ ಆರ್ ವಿಧಾನವು ಪ್ರಸ್ತುತ ಚಾಲ್ತಿಯಲ್ಲಿರುವುದು,  ದೃಢೀಕೃತವು ಮತ್ತು ನಿಖರವಾಗಿರುತ್ತದೆ.

ರೋಗ ತಡೆಗಟ್ಟುವ ವಿಧಾನಗಳು:

ಪ್ರಸ್ತುತ ಯಾವುದೇ ಲಸಿಕೆಗಳಾಗಲಿ ಚಿಕಿತ್ಸೆಗಳಾಗಲಿ ಕೋವಿಡ್-19ಗೆ ಇಲ್ಲ. ಆದ್ದರಿಂದ ಸೋಂಕಿನ ಹರಡುವಿಕೆಯನ್ನು ತಡೆಯುವುದೇ ಈಗಿನ ಪರಿಸ್ಥಿತಿಯ ಮೊದಲ ಗುರಿಯಾಗಿದೆ. SARS-CoV-2 ಬಹುಮುಖ್ಯವಾಗಿ ಪ್ರಸರಣಗೊಳ್ಳುತ್ತಿರುವುದು ಒಬ್ಬ ವ್ಯಕ್ತಿಗಳಿಂದ ಮತ್ತೊಬ್ಬರಿಗೆ, ಇದನ್ನು ತಡೆಗಟ್ಟಲು ಸರ್ಕಾರವು ಎಲ್ಲಾ ಜನ ಸಾಂದ್ರತೆ ಹೊಂದುವ ಕಾರ್ಯಕ್ರಮಗಳು, ಪ್ರದೇಶಗಳು, ಸರ್ಕಾರೀ ಕೃತ, ಅನುದಾನಿತ ಕಛೇರಿ ಸಂಸ್ಥೆಗಳು, ಸಂಪೂರ್ಣವಾಗಿ ದೇಶಕ್ಕೆ ದೇಶವೇ ಮನೇಲಿರುವಂತೆ ಜನರಿಗೆ ಹೇಳಿ ಬಂಧಿಸಿದೆ.

ಹರಡುವಿಕೆ ತಡೆಯಲು ಜನರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಿದೆ. ಆಗಾಗ ತಮ್ಮ ಕೆಲಸದ ಜಾಗ ವಸ್ತುಗಳನ್ನು ಸ್ಯಾನಿಟೈಜರ್ ಅಥವಾ 70% ಆಲ್ಕೊಹಾಲ್ ಬಳಸಿ ಸ್ವಚ್ಛಗೊಳಿಸುತ್ತಿರಬೇಕು. ಸಂಚರಿಸಬೇಕಾದ ಸಂದರ್ಭದಲ್ಲಿ ಮೂಗು ಬಾಯಿಗಳನ್ನು ಮುಖಗವುಸುಗಳಿಂದ ಮುಚ್ಚಿಕೊಂಡು ಓಡಾಡುವುದು ಆಕಸ್ಮಿಕ ವೈರಸ್ ದಾಳಿಯನ್ನು ತಡೆಯಬಹುದು ಆದರೆ ಯಾವುದೇ ಕಾರಣಕ್ಕೂ ಬೆವರು ಎಂದು ಬರಿಕೈಯಿಂದ ಮುಸುಕನ್ನು ಮುಟ್ಟುವುದು ವೈರಸ್ಗೆ ಒಳಗೆ ಬರಲು ದಾರಿ ಕೊಟ್ಟಂತೆ. ಇನ್ನು WHO ಐದು ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಲು ಹೇಳಿದೆ. ಅವುಗಳೆಂದರೆ, 1. ಕೈಗಳನ್ನು ಆಗಾಗ್ಗೆ 20 ಸೆಕೆಂಡ್ಗಳ ಕಾಲ ಸೋಪು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ನಿಂದ ತೊಳೆಯುವುದು. 2. ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯೂ ಪೇಪರನಲ್ಲಿ ಅಥವಾ ಮೊಣಕೈ ಅಡ್ಡವಾಗಿಟ್ಟುಕೊಳ್ಳುವುದು. 3. ಮೂಗು, ಬಾಯಿ, ಕಣ್ಣು ಮತ್ತು ಮುಖವನ್ನು ಆಗಾಗ್ಗೆ ಮುಟ್ಟಿಕೊಳ್ಳದಿರುವುದು. 4. ಜನರಿಂದ ಕನಿಷ್ಠ ಒಂದು ಮೀಟರ್ ದೂರದಲ್ಲಿರುವುದು. 5. ಮನೆಯಲ್ಲಿಯೇ ಉಳಿಯುವುದು ಮತ್ತು ಎಲ್ಲರಿಂದ ಪ್ರತ್ಯೇಕವಾಗಿರುವುದು.

ಸ್ಥಳೀಯ ಹರಡುವಿಕೆ ತಡೆಯಲು ಹೊರದೇಶಗಳಿಂದ ಬಂದ ಜನರನ್ನು ಪರೀಕ್ಷೆಗೆ ಒಳಪಡಿಸಿ ಅವರು ರೋಗ ಲಕ್ಷಣಗಳಿಗೆ ಮತ್ತು ರೋಗತಪಾಸಣೆಯಿಂದ ದೃಢಪಡಿಸಿದರೆ ಪ್ರತ್ಯೇಕಿಸಿ ನಿಗಾ ಘಟಕದಲ್ಲಿಡುವುದು. ಅನುಮಾನ ಬಂದ ಪ್ರಕರಣಗಳನ್ನು 14 ದಿನಗಳ ವೈದ್ಯಕೀಯ ವೀಕ್ಷಣೆಯಲ್ಲಿಟ್ಟು ಮನೆಯಲ್ಲಿ ಪ್ರತ್ಯೇಕವಾಗಿರಲು ಹೇಳಿ, ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 104 (ರಾಜ್ಯದ) ಮತ್ತು 91-11-23978046 (ಕೇಂದ್ರದ) ಕರೆಮಾಡಿ ಚಿಕಿತ್ಸೆ ತೆಗೆದುಕೊಳ್ಳುವುದು. ಸಾಮಾಜಿಕವಾಗಿ ಜನರಿಂದ ಕೋವಿಡ್-19ಗೆ ಬಂದ ಪ್ರತಿಕ್ರಿಯೆಗಳು ಎಂದರೆ ಸಾಮಾಜಿಕ ದೂರೀಕರಿಸುವಿಕೆ (social distancing), ಪ್ರತ್ಯೇಕೀಕರಣ, ಸಮುದಾಯದಿಂದ ದೂರ ಉಳಿಯುವುದು (community containment).

ಈ ಎಲ್ಲಾ ಪ್ರಯತ್ನಗಳು ಹರಡುವಿಕೆಯನ್ನು ತಡೆಗಟ್ಟುವಿಕೆಗಾಗಿ ನಡೆಯುತ್ತಿದ್ದು ಇನ್ನೂ ವೈರಸ್ಸನ್ನು ಹಾಗೆಯೇ ಇಟ್ಟುಕೊಂಡಿರುವುದು ವಾಸ್ತವ. ಹೀಗಾಗಿ ನಿರ್ಲಕ್ಷ್ಯತೋರದೆ ಜನರ ಹಿತಕ್ಕಾಗಿ ಸರ್ಕಾರ ತರುತ್ತಿರುವ ನೀತಿಗಳನ್ನು ಪಾಲಿಸಿ SARS-CoV-2 ಎದುರು ಹೋರಾಡಬೇಕಿದೆ.

ಜೀನ್ ಮತ್ತು ಜೀನ್ ಎಡಿಟಿಂಗ್

dna640

ಗ್ರೆಗರ್ ಮೆಂಡೆಲ್ ಬಟಾಣಿ ಗಿಡದ ಗುಣಗಳನ್ನು ಅರಿಯಲು ನಡೆಸಿದ ಸಂಶೋಧನೆ ಮುಂದೆ ಜೆನೆಟಿಕ್ಸ್ ಅನ್ನುವ ಅರಿವಿನ ಕವಲು ಹೊರಹೊಮ್ಮಲು ಕಾರಣವಾಯಿತು. ಎತ್ತರ, ಬಣ್ಣ ರೋಗತಡೆಯುವ ಗುಣ ಜಾಣತನದ ಮಟ್ಟ ಹೀಗೆ ನಮ್ಮ ಹಲವು ಗುಣಗಳ ಮೂಲದಲ್ಲಿರುವುದು ಜೀನ್ಸ್ . ಇತ್ತೀಚಿನ ದಿನಗಳಲ್ಲಿ ಜೀನ್ ಮಾರ್ಪಾಟು ಮಾಡುವ ಸಂಶೋಧನೆಗಳು ಮುನ್ನೆಲೆಯಲ್ಲಿದ್ದು ಇದನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಜೀನ್ ಮಾರ್ಪಾಟು ಎಂದಕೂಡಲೆ ಸಾಮಾನ್ಯ ಜನರಲ್ಲಿ ಗಾಬರಿ ಅಚ್ಚರಿ ಎಲ್ಲವೂ ಒಮ್ಮೆಲೇ ಆಗುವುದು ಅತೀ ಸಹಜ. ಸಿನಿಮಾಗಳಲ್ಲಿ ನೋಡಿರುವಂತೆ ಡಿಎನ್ಎಯಲ್ಲಿ ಬದಲಾವಣೆ ಆದ ಕಾರಣ ಒಬ್ಬ ಸಾಮಾನ್ಯ ಮನುಷ್ಯ ಸ್ಪೈಡರ್-ಮ್ಯಾನ್ ಆಗಿ ರೂಪ ಪಡೆಯುತ್ತಾನೆ. ಹಾಗಾದರೆ ಇದು ಸಾಧ್ಯನಾ ? ಹೌದು ಎಂದರೆ ತಪ್ಪೇನು ಇಲ್ಲ. ಪ್ರಕೃತಿಯಲ್ಲಿ ಇದು ದಿನನಿತ್ಯವೂ ನಡೆಯುವ ಕ್ರಿಯೆ ಆದರೆ, ಪ್ರಕೃತಿ ಒಮ್ಮೆಲೆಗೆ ಸ್ಪೈಡರ್ ಮ್ಯಾನನ್ನು ಹುಟ್ಟುಹಾಕಿಲ್ಲ ! ಬದಲಾಗಿ ಭೂಮಿಯಲ್ಲಿ ಜೀವಿಗಳ ಬೆಳವಣಿಗೆ ನಿಧಾನವಾಗಿ ನಡೆಯುತ್ತಲಿದ್ದು ಮುಂದೊಂದು ದಿನ ಸ್ಪೈಡರ್ ಮ್ಯಾನ್ ಆಗಲು ಬಹುದು!

ಹಾಗಾದರೆ ಜೀವಿಗಳ ಬೆಳವಣಿಗೆಗೆ ಕಾರಣವಾದ ಅಂಶ ಯಾವುದು? ಮಾನವಕುಲದ ಒಳಿತಿನೆಡೆ ಮನುಷ್ಯ ಪ್ರಯೋಗಾಲಯದಲ್ಲಿ ಮಾಡಿರುವ, ಮಾಡುತ್ತಿರುವ ಹಾಗು ಮಾಡಬಹುದಾದ ಜೆನೆಟಿಕ್ ಇಂಜಿನಿಯರಿಂಗ್ ಸಂಶೋಧನೆಗಳು ಏನು ? ಇದರ ಬಗ್ಗೆ ಒಂದು ಚಿಕ್ಕ ಪರಿಚಯ.

gene

ಜೀವಿಗಳ ಲಕ್ಷಣಗಳು ಅದರ ಅನುವಂಶಿಕ ವಸ್ತುವಿನಲ್ಲಿ (nucleic acid) ಅಡಗಿರುತ್ತದೆ. ಈ ವಸ್ತುವು DNA ಅಥವಾ RNA ಆಗಿರುತ್ತದೆ. ಮಾನವ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯ, ವೈರಸ್ ಹೀಗೆ ಎಲ್ಲಾ ಜೀವಿಗಳ ಜೀವಕೋಶಗಳು DNA ಯನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ಡಿಎನ್ಎ ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾಯಿಸಲ್ಪಡುತ್ತದೆ. ‘ಜೀನೋಮ್’ ಎಂಬ ಪದವು ಸಾಮಾನ್ಯವಾಗಿ ಜೀವಿಗಳ ಸಂಪೂರ್ಣ ಡಿಎನ್ಎ ಅನುಕ್ರಮವನ್ನು ಸೂಚಿಸುತ್ತದೆ, ಜಿನೊಮ್ ಜೀನ್ಸ್ ಒಳಗೊಂಡಿರುತ್ತದೆ.

ಜೀನ್ ಎಂದರೆ ನಿರ್ದಿಷ್ಟ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ, ಪ್ರೋಟೀನ್ ತಯಾರಿಕೆಯ ಮಾಹಿತಿ ಹೊಂದಿರುವ ಡಿಎನ್ಎ ಸರಣಿಗಳು. ಜೀನೋಮಿನಲ್ಲಿ ಜೀನ್ ಗಳ ಜೊತೆ ಜೀನ್ ಚಟುವಟಿಕೆಗಳನ್ನು ಹೆಚ್ಚಿಸುವ ಅಥವಾ ತಡೆಯುವ ಡಿಎನ್ಎ ಸರಣಿಗಳೂ ಇರುತ್ತವೆ. ಸರಳವಾಗಿ ಹೇಳುವುದಾದರೆ ಡಿಎನ್ಎ ಯ ಉದ್ದೇಶಪೂರ್ವಕ ಬದಲಾವಣೆಯ ತಂತ್ರವನ್ನು ಜೀನ್ ಎಡಿಟಿಂಗ್ ಎನ್ನಲಾಗುತ್ತದೆ.

ಜೀವವಿಜ್ಞಾನದ ಈ ವಿಭಾಗವು ಬೆಳೆದು ಬಂದ ದಾರಿಯು ಒಂದು ಸೋಜಿಗ! ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದ ಈಗಿನ ಆಳ, ಹರಿವುಗಳನ್ನು ಅರ್ಥಮಾಡಿಕೊಳ್ಳಲು ಅದರ ಹುಟ್ಟಿನ ಮತ್ತು ಪ್ರಗತಿಯ ಇತಿಹಾಸವನ್ನು ಅತಿ ಮುಖ್ಯವಾಗಿ ಅರಿತುಕೊಳ್ಳಬೇಕಾಗುತ್ತದೆ. 1953 ಜೇಮ್ಸ್ ವಾಟ್ಸನ್, ಫ್ರಾನ್ಸಿಸ್ ಕ್ರಿಕ್ ಮತ್ತು ರೋಸಲಿಂಡ್ ಫ್ರಾಂಕ್ಲಿನ್ರವರು ಡಿಎನ್ಎ ರಚನೆಯ ಡಬಲ್ ಹೆಲಿಕ್ಸ್ ರಚನೆಯನ್ನು ಪ್ರಕಟಿಸಿದ್ದು ಬಹುಮುಖ್ಯ ಆಯಾಮವಾಯಿತು. 1958 ರಲ್ಲಿ ಮೊದಲ ಸಲ ಡಿಎನ್ಎ ಟೆಸ್ಟ್ ಟ್ಯೂಬಿನಲ್ಲಿ ತಯಾರಿಸಲ್ಪಟ್ಟಿತು (ಆರ್ಥರ್ ಕೊರ್ನ್ಬರ್ಗ್ ). ನಂತರದ ದಿನಗಳಲ್ಲಿ ವೆರ್ನೆರ್ ಆರ್ಬರ್ ರವರು ನಿರ್ಬಂಧಿತ ಕಿಣ್ವಗಳನ್ನು (Restriction enzymes) ಹಾಗು ಗೆಲ್ಲೆರ್ಟ್ಲೆ, ಲೆಹ್ಮಾನ್, ರಿಚರ್ಡಸನ್ ಮತ್ತು ಹರವಿಟ್ಜ್ ಲಾಬೊರೇಟರೀಸ್, ಲೈಗೇಸ್ ಕಿಣ್ವದ ಸಹಾಯದಿಂದ ಡಿಎನ್ಎ ತುಂಡುಗಳ ಜೋಡಣೆಮಾಡಲು ಸಾಧ್ಯ ಎನ್ನುವುದನ್ನು ಪ್ರಕಟಿಸಿದರು. ಹರ್ ಗೋವಿಂದ ಖೋರಾನಾರವರು ನ್ಯೂಕ್ಲಿಕ್ ಅಸಿಡ್ ಮತ್ತು ನ್ಯೂಕ್ಲಿಯೊಟೈಡ್ಸ್ ನಿಂದ (Adenine, Thymine, Guanidine and Cytosine) ಮಾಡಲಾಗಿದೆಯೆಂಬುದನ್ನು ತೋರಿಸಿದರು, ಅದು ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುತ್ತದೆ ಮತ್ತು ಪ್ರೋಟೀನ್ಗಳು ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ಪ್ರಕಟಿಸಿದರು. ಇನ್ನು ಹತ್ತು ಹಲವು ಬಗೆಯ ಸಂಶೋಧನೆಗಳ ಆಧಾರದ ಮೇಲೆ ಮಂದಗತಿಯಲ್ಲಿ ನಡೆದು ಬಂದು ಈಗ ವಿಜ್ಞಾನದ ಒಂದು ಪ್ರಮುಖ ಹಾಗು ಅತೀ ಅಗತ್ಯವಾದ ವಿಭಾಗವಾಗಿ ಹೊಮ್ಮಿದೆ.

ಎಲ್ಲಾ ಜೆನೆಟಿಕ್ ಬದಲಾವಣೆಗಳು ಪ್ರೋಟೀನ್ ತಯಾರಿಕೆಯ ಮೇಲೆ ಪ್ರಭಾವ ಹೊಂದಿದ್ದು ಪ್ರೋಟೀನ್ ತಯಾರಿಕೆಯ ಬದಲಾವಣೆಗಳು ಜೀವಿಯ ಗುಣಗಳಲ್ಲಿ ಬದಲಾವಣೆ ತರುತ್ತವೆ. ಜೀನ್ ಎಡಿಟಿಂಗ್ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಹೊಸ ಜೀನ್‍ಗಳ ಜೋಡಣೆ, ಇರುವ ಜೀನ್‍ಗಳ ಬದಲಾವಣೆ, ಬೇಡದೆ ಇರುವ ಜೀನ್‍ಗಳನ್ನು ತೆಗೆಯುವುದು, ತಪ್ಪು ಪ್ರೋಟೀನ್ ತಯಾರಿಕೆಯಲ್ಲಿ ತೊಡಗಿರುವ ಜೀನ್‍ಗಳನ್ನು ಸರಿಪಡಿಸುವುದು. ಇದನ್ನು ಸಾಧಿಸಲು ಬೇಕಾಗುವ ಮುಖ್ಯ ಸಾಧನಗಳೆಂದರೆ ವೆಕ್ಟರ್ (ಹೊತ್ತೊಯ್ಯುಕ), ನಿರ್ಬಂಧಿತ ಕಿಣ್ವಗಳು, ಡಿಎನ್ಎ ಲೈ ಗೇಸ್ (ಜೋಡಕ ಕಿಣ್ವ ) ಮತ್ತು ಡಿಎನ್ಎ ಪಾಲಿಮರೇಸ್ (ನ್ಯೂಕ್ಲಿಯೋಟೈದೆ ಜೋಡಣೆ ಮಾಡುವ ಕಿಣ್ವ ). ಈ ಎಲ್ಲ ಸಾಧನಗಳ ಬಳಕೆ ಇಂದ ಕ್ಲೋನಿನ್ ಸಾಧ್ಯ.

ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನದ ಉಪಯೋಗಗಳು ಬಹಳ. ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಸುಲಭ ರೀತಿಯಲ್ಲಿ ರೋಗನಿರೋಧಕಗಳ ತಯಾರಿಸುವಿಕೆ, ಇನ್ಸುಲಿನ್ ತಯಾರಿಸುವಿಕೆ. ಕ್ಯಾನ್ಸರಿನಂತಹ ಮಾರಕ ರೋಗಗಳನ್ನು ಗುಣಪಡಿಸುವಲ್ಲಿ ಕ್ರಿಸ್ಪರ್ (CRISPR) ಎಂಬ ಜೆನೆಟಿಕ್ ತಂತ್ರಜ್ಞಾನ ಹೊಮ್ಮುತ್ತಿದೆ. ಕೃಷಿ ಕ್ಷೇತ್ರದಲ್ಲಿ ಕೀಟ ತಡೆ, ಹೆಚ್ಚು ಇಳುವರಿ ಕೊಡುವ ತಳಿಗಳನ್ನು ತಯಾರಿಸುವುದು ಮತ್ತು ಅದರ ಬಳಕೆ. ಉದಾಹರಣೆಗೆ, ಬಿಟಿ ಹತ್ತಿ, ಬಿಟಿ ಬದನೆಕಾಯಿ, ಬಿಟಿ ಮೆಕ್ಕೆಜೋಳ. ಹಾಗೆನೇ ಕಸ ಹಾಗು ಕೊಳಚೆ ನಿರ್ಮೂಲನೆ ನಿಟ್ಟಿನಲ್ಲಿ ಕೆಲಸ ನೆಡೆದಿದ್ದು ಪ್ಲಾಸ್ಟಿಕ್ ಕೊಳೆಸುವಿಕೆ, ಇಂಧನ ತಯಾರಿಸುವ ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯುವ ಸಂಶೋಧನೆ ನಡೆಯುತ್ತಿದೆ.

ಯಾವುದೇ ವೈಜ್ಞಾನಿಕ ಕ್ಷೇತ್ರದಲ್ಲಿಕಂಡುಬರುವ ಹಾಗೆ ಇದರಲ್ಲೂ ಪರ ಮತ್ತು ವಿರೋಧದ ಚರ್ಚೆಗಳು ಬಿರುಸಾಗಿವೆ. ಜೆನೆಟಿಕ್ ಇಂಜಿನಿಯರಿಂಗ್ ನ ಪರಿಣಾಮಗಳನ್ನು ವೈಜ್ಞಾನಿಕ ನೆಲೆಯಲ್ಲಿ ಪೂರ್ತಿಯಾಗಿ ತಿಳಿಯದೆ ಮುನ್ನಡೆದರೆ ದುಶ್ಪರಿಣಾಮಗಳು ಸಂಭವಿಸುತ್ತವೆ ಎನ್ನುವುದು ಕೆಲ ವಿಜ್ಞಾನಿಗಳ ಅಭಿಪ್ರಾಯ. ಉದಾಹರಣೆಗೆಇದರದುರ್ಬಳಕೆಯಿಂದಜೈವಿಕ ಯುದ್ಧಗಳು ನಡೆಯಬಹುದು.

ಈ ಇಬ್ಬರು ಮಹನೀಯರು ಹೇಳಿರುವ ಹಾಗೆ, ಇದೊಂದು ವಿಸ್ಮಯ ಜಗತ್ತು, ಪ್ರಕೃತಿಯಲ್ಲಿ ಈ ಎಲ್ಲಾ ಕ್ರಿಯೆಗಳು ದಿನ ನಿತ್ಯ ನಡೆಯುತ್ತಲಿವೆ ಅದನ್ನು ಮನುಷ್ಯ ಅರ್ಥ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಅದನ್ನು ಬಳಸಿದರೆ ಒಳಿತು…

ಪ್ರಕೃತಿಯೊಳಗೆ ಆಳವಾಗಿ ಇಳಿದಷ್ಟು ಎಲ್ಲವನ್ನೂಇನ್ನಷ್ಟುಚೆನ್ನಾಗಿಅರಿತುಕೊಳ್ಳಬಹುದು

– ಅಲ್ಬರ್ಟ್ ಐನ್ಸ್ಟೀನ್

ವಿಜ್ಞಾನ ಮಾನವೀಯತೆಗೆ ಒಂದು ಸುಂದರ ಕೊಡುಗೆಯಾಗಿದೆ; ನಾವು ಅದನ್ನು ವಿರೂಪಗೊಳಿಸಬಾರದು.

– ಎ. ಪಿ. ಜೆ. ಅಬ್ದುಲ್ ಕಲಾಂ

 

(ಚಿತ್ರಸೆಲೆಗಳು: the anatomy of evolution, Northwestern Now – Northwestern University)

ಹರಿಯುವ ಕರೆಂಟ್

ಕರೆಂಟ್ ಕುರಿತಾದ ಕಳೆದ ಬರಹವನ್ನು ಮೆಲುಕು ಹಾಕುತ್ತಾ,

  • ವಸ್ತುಗಳು ಕೋಟಿಗಟ್ಟಲೇ ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಅಣುಗಳ ನಡುವಣದಲ್ಲಿ (Nucleus) ಪ್ರೋಟಾನ್ಗಳು ಮತ್ತು ನ್ಯೂಟ್ರಾನ್ಗಳು ಇದ್ದರೆ, ನಡುವಣದ ಸುತ್ತ ಎಲೆಕ್ಟ್ರಾನ್ಗಳು ಇರುತ್ತವೆ.
  • ಪ್ರೋಟಾನ್ಗಳು (ಕೂಡುವಣಿಗಳು) ‘+’ (ಕೂಡು) ಗುರುತಿನ ಹುರುಪು ಹೊಂದಿದ್ದರೆ, ಎಲೆಕ್ಟ್ರಾನ್ಗಳು (ಕಳೆವಣಿಗಳು)  ‘–’  (ಕಳೆ) ಗುರುತಿನ ಹುರುಪು ಹೊಂದಿರುತ್ತವೆ. ಇಲ್ಲಿ ‘+’ ಮತ್ತು ‘–’ ಗುರುತುಗಳನ್ನು ತಳುಕುಹಾಕಿರುವುದು ತಿಳುವಳಿಕೆಯನ್ನು ಸುಲಭವಾಗಿಸಲಷ್ಟೇ ಅನ್ನುವುದನ್ನು ನೋಡಿದೆವು.
  • ಕೆಲವು ವಸ್ತುಗಳನ್ನು ಒಂದಕ್ಕೊಂದು ಉಜ್ಜಿದಾಗ ಒಂದರಿಂದ ಇನ್ನೊಂದು ವಸ್ತುವಿಗೆ ಎಲೆಕ್ಟ್ರಾನ್ಗಳು ಸಾಗಿ ‘ಹುರುಪು’ (charge) ಉಂಟಾಗುತ್ತದೆ. ಈ ಬಗೆಯಲ್ಲಿ ಎಲೆಕ್ಟ್ರಾನ್ಗಳ ಕೊಡುಕೊಳ್ಳುವಿಕೆಯಿಂದ ಉಂಟಾದ ಕಸುವನ್ನು ‘ನೆಲಸಿದ ಮಿಂಚು’ (static current) ಎಂದು ಕರೆಯುತ್ತಾರೆ.

‘ಕರೆಂಟ್’ ಎಂದು ಕರೆಯಲಾಗುವ ‘ಕಸುವು’ ನಮಗೆ ದೊರಕುವುದು ಮುಖ್ಯವಾಗಿ ಎಲೆಕ್ಟ್ರಾನ್ಗಳ ಹರಿಯುವಿಕೆಯಿಂದ. ಹಾಗಾದರೆ ಎಲೆಕ್ಟ್ರಾನ್ಗಳು ಯಾಕೆ ಹರಿಯುತ್ತವೆ, ಹರಿಯುವಂತೆ ಹೇಗೆ ಮಾಡಬಹುದು? ಎಲ್ಲಾ ವಸ್ತುಗಳ ಅಣುಗಳಲ್ಲಿನ ಎಲೆಕ್ಟ್ರಾನ್ಗಳು ಹೀಗೇ ಹರಿಯಬಲ್ಲವೇ? ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಈಗ ಮುಂದುವರೆಯೋಣ.

ಅಣುವಿನ ನಡುವಣದ (nucleus) ಸುತ್ತ ಗೊತ್ತಾದ ಸುತ್ತುಗಳಲ್ಲಿರುವ ಎಲೆಕ್ಟ್ರಾನ್ಗಳನ್ನು ಅವುಗಳ ಸುತ್ತುಗಳಲ್ಲಿಯೇ ಇರುವಂತೆ ಒಂದು ಬಗೆಯ ‘ಕಸುವು’ ಹಿಡಿದಿಟ್ಟಿರುತ್ತದೆ. ಎಲೆಕ್ಟ್ರಾನ್ಗಳನ್ನು ಹಿಡಿದಿಡುವ ಈ ಕಸುವಿನ ಮಟ್ಟ ವಸ್ತುವಿನಿಂದ ವಸ್ತುವಿಗೆ ಬೇರೆ-ಬೇರೆಯಾಗಿರುತ್ತದೆ.

ಕಟ್ಟಿಗೆ, ಕಲ್ಲಿನಂತಹ ವಸ್ತುಗಳ ಅಣುಗಳಲ್ಲಿ ಈ ‘ಕಸುವಿನ ಮಟ್ಟ’ ತುಂಬಾ ಹೆಚ್ಚಾಗಿದ್ದರೆ, ಕಬ್ಬಿಣ, ತಾಮ್ರದಂತಹ ವಸ್ತುಗಳಲ್ಲಿ ಇದು ಕಡಿಮೆಯಾಗಿರುತ್ತದೆ. ಅಂದರೆ ತಾಮ್ರ ಮತ್ತು ಕಬ್ಬಿಣದಂತಹ ವಸ್ತುಗಳಲ್ಲಿ ಎಲೆಕ್ಟ್ರಾನ್ಗಳನ್ನು ತನ್ನ ಅಣುವಿನಿಂದ ಹೊರತಂದು, ವಸ್ತುವಿನೆಲ್ಲೆಡೆ ಬಿಡುವಾಗಿ ಹರಿದಾಡುವಂತೆ ಮಾಡುವುದಕ್ಕೆ ಕಡಿಮೆ ಕಸುವು ಬೇಕು. ಅದೇ ಕಟ್ಟಿಗೆಯಲ್ಲಿ ಹೆಚ್ಚಿನ ಕಸುವು ಕೊಟ್ಟರೂ ಎಲೆಕ್ಟ್ರಾನ್ಗಳು ಅದರ ಅಣುಗಳಿಂದ ಹೊರಬಂದು ಹರಿಯಲಾರವು.

ಈಗ ನಿಮಗೆ ಗೊತ್ತಾಗಿರಬಹುದು ಕರೆಂಟ್ ತಂತಿಗಳು ತಾಮ್ರದಂತಹ ವಸ್ತುಗಳಿಂದ ಏಕೆ ಮಾಡಿರುತ್ತವೆ ಮತ್ತು ಕಟ್ಟಿಗೆಯಲ್ಲಿ ಏಕೆ ಕರೆಂಟ್ ಹರಿಯುವುದಿಲ್ಲವೆಂದು! ತಾಮ್ರದಲ್ಲಿ ಕಡಿಮೆ ಕಸುವು ಕೊಟ್ಟು ಕರೆಂಟ್ (ಕಳೆವಣಿಗಳನ್ನು) ಹರಿಸಬಹುದು.

ಕರೆಂಟ್ (ಎಲೆಕ್ಟ್ರಾನ್ಗಳು) ಹರಿಯಲು ಅನುವು ಮಾಡಿಕೊಡುವ ವಸ್ತುಗಳನ್ನು ‘ಬಿಡುವೆಗಳು’ (Conductors) ಎಂದು ಕರೆದರೆ, ಕರೆಂಟ್ ಹರಿಯಗೊಡದ ವಸ್ತುಗಳನ್ನು ‘ತಡೆವೆಗಳು’ (Insulators) ಅಂತಾ ಕರೆಯುತ್ತಾರೆ. ತಾಮ್ರ ‘ಬಿಡುವೆ’ಯಾದರೆ, ಕಟ್ಟಿಗೆ ಕರೆಂಟಿಗೆ ‘ತಡೆವೆ’ ಆಗುತ್ತದೆ.

 

Conductors

ಹಾ! ಎಲೆಕ್ಟ್ರಾನ್ಗಳನ್ನು ತಾಮ್ರದಂತಹ ಬಿಡುವೆಗಳಲ್ಲಿ (conductors) ಕಡಿಮೆ ಕಸುವು ನೀಡಿ ಹರಿಯುವಂತೆಯೂ ಮಾಡಬಹುದು ಆದರೆ ಹೋಲಿಕೆಯಿಂದ ಕಡಿಮೆಯಾದರೂ ವಸ್ತುಗಳಲ್ಲಿ ಎಲೆಕ್ಟ್ರಾನ್ಗಳನ್ನು ಹರಿಯುವಂತೆ ಮಾಡುವ ಈ ‘ಕಸುವು’ ದೊರೆಯುವುದೆಲ್ಲಿಂದ ?  ಇದನ್ನು ಅರಿತುಕೊಳ್ಳಲು ಮಯ್ಕಲ್ ಪಾರಡೆ ಅವರು ತೋರಿಸಿಕೊಟ್ಟ ದಿಟವನ್ನು ಈಗ ತಿಳಿಯೋಣ.

ಮಯ್ಕಲ್ ಪಾರಡೆ (Michel Faraday, 1791-1867) ಅವರು ತಮ್ಮ ಸಂಶೋಧನೆಯಿಂದ ಈ ಕೆಳಗಿನ ವಿಷಯಗಳನ್ನು ತೋರಿಸಿಕೊಟ್ಟಿದ್ದರು,

1)   ಮಾರ್ಪಡುವ ಸೆಳೆತದ ಬಯಲಿನಲ್ಲಿ (changing magnetic field) ತಾಮ್ರದಂತಹ ಬಿಡುವೆ ವಸ್ತುಗಳನ್ನು ಇಟ್ಟರೆ ಅದರಲ್ಲಿ ಕರೆಂಟ್ (ಎಲೆಕ್ಟ್ರಾನ್ಗಳು) ಹರಿಯತೊಡುಗುತ್ತದೆ. ಅಂದರೆ ಸೆಳೆಗಲ್ಲುಗಳ (magnets) ನೆರವಿನಿಂದ ಕಸುವು ಉಂಟುಮಾಡಿ, ಆ ಕಸುವನ್ನು ಬಿಡುವೆಗಳಲ್ಲಿ ಸಾಗಿಸಿ, ಎಲೆಕ್ಟ್ರಾನ್ಗಳು ಹರಿಯುವಂತೆ ಅಂದರೆ ಕರೆಂಟ್ ದೊರೆಯುವಂತೆ ಮಾಡಬಹುದು.

2)   ಬಿಡುವೆಗಳಲ್ಲಿ ಕರೆಂಟ್ ಹರಿಯುತ್ತಿರುವಾಗ ಅದರ ಸುತ್ತ ‘ಸೆಳೆತದ ಬಯಲು’ (magnetic field) ಉಂಟಾಗುತ್ತದೆ. ಅಂದರೆ ಇದು ಮೇಲಿನ ದಿಟವನ್ನು ಇನ್ನೊಂದು ಬಗೆಯಲ್ಲಿ ಹೇಳಿದಂತೆ. ಒಗ್ಗೂಡಿಸಿ ಹೇಳಬೇಕೆಂದರೆ,

“ಮಾರ್ಪಡುವ ಸೆಳೆತದ ಬಯಲಿನಿಂದ ಕರೆಂಟ್ ಪಡೆಯುವಂತಾದರೆ, ಕರೆಂಟ್ ಹರಿದಾಗ ಸೆಳೆತದ ಬಯಲು ಉಂಟಾಗುತ್ತದೆ “.

ಮಿಂಚು (ಕರೆಂಟ್) ಮತ್ತು ಸೆಳೆತನದ (magnetism) ಈ ನಂಟನ್ನು ‘ಮಿಂಚು-ಸೆಳೆತನ’ ಇಲ್ಲವೇ ‘ಮಿನ್ಸೆಳೆತನ’ (electromagnetism) ಎಂದು ಕರೆಯಲಾಗುತ್ತದೆ. ನೆಲಸೆಳೆತದಂತೆ (gravitation) ಮಿನ್ಸೆಳೆತನವು (electromagnetism) ಜಗತ್ತಿನ ಹಲವಾರು ಅರಿಮೆಯ ವಿಷಯಗಳಿಗೆ ಇಂದು ಅಡಿಪಾಯವಾಗಿದೆ.

ಮುಂದಿನ ಬರಹದಲ್ಲಿ ಸೆಳೆತದ ಬಯಲಿನಿಂದ (magnetic field) ಕರೆಂಟ್ ಅನ್ನು ಹೇಗೆ ಪಡೆಯಲಾಗುತ್ತದೆ? ವೋಲ್ಟೇಜ್ ಅಂದರೇನು? ಹೀಗೆ ಕರೆಂಟಿನ ಇನ್ನೊಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳೋಣ.

ಕರೆಂಟ್ ಮತ್ತು ಅಣುಗಳ ನಂಟು

ಕರೆಂಟ್ ಅಂದರೇನು ? ಕರೆಂಟನ್ನು ತಾಮ್ರ, ಕಬ್ಬಿಣದಂತಹ ವಸ್ತುಗಳಷ್ಟೇ ಏಕೆ ತನ್ನ ಮೂಲಕ ಹಾಯ್ದು ಹೋಗಲು ಬಿಡುತ್ತವೆ ? ವೋಲ್ಟೇಜ್ ಅಂದರೇನು ? ಹೀಗೆ ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡಬಹುದು. ಮುಂದಿನ ಕೆಲವು ಬರಹಗಳಲ್ಲಿ ‘ಮೊದಲ’ ಹಂತದಿಂದ ವಿಷಯವನ್ನು ಅರಿಯಲು ಪ್ರಯತ್ನಿಸೋಣ.

 

comb-static-electricity

ಮೊದಲಿಗೆ ನಮ್ಮ ಎಂದಿನ ಬದುಕಿನಲ್ಲಿ ಕಂಡುಬರುವ ಈ ಉದಾಹರಣೆಗಳನ್ನು ನೋಡಿ,

  • ಬಾಚಣಿಗೆಯಿಂದ ಕೂದಲು ಬಾಚಿ, ಅದೇ ಬಾಚಣಿಗೆಯನ್ನು ಹಾಳೆಯ ತುಂಡುಗಳೆಡೆಗೆ ಹಿಡಿದಾಗ ಹಾಳೆಯ ತುಂಡುಗಳು ಬಾಚಣಿಗೆಯತ್ತ ಸೆಳೆಯಲ್ಪಡುತ್ತವೆ.
  • ರೇಷ್ಮೆ ಬಟ್ಟೆಗೆ ಮಯ್ಯಿ ತಾಕಿದಾಗ ಕೆಲವು ಸಲ ಚುರುಕೆನ್ನುವಂತ ಅನುಭವವಾಗುತ್ತದೆ.

ಮೇಲಿನ ಎರಡು ಉದಾಹರಣೆಗಳ ಹಿಂದೆ ಇರುವುದು ವಸ್ತುಗಳ ನಡುವೆ ಆಗುವ ಮಿಂಚಿನಂತಹ ಅಂದರೆ ಕರೆಂಟನಂತಹ ಕಸುವಿನ ಸಾಗಾಟ. ಇದನ್ನು ಇಂಗ್ಲೀಶಿನಲ್ಲಿ ‘ಚಾರ್ಜ್’ (Charge) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಇದಕ್ಕೆ ‘ಹುರುಪು’ ಎನ್ನಬಹುದು. ಬಾಚಣಿಗೆಯಲ್ಲಿದ್ದ ಒಂದು ಬಗೆಯ ಮಿಂಚಿನ ‘ಹುರುಪು’ (electric charge) ಹಾಳೆಯಲ್ಲಿದ್ದ ಇನ್ನೊಂದು ಬಗೆಯ ಮಿಂಚಿನ ಹುರುಪನ್ನು ತನ್ನೆಡೆಗೆ ಸೆಳೆಯುವುದರಿಂದ ನಮಗೆ ಮಿಂಚು ಹರಿವಿನ ಅನುಭವಾಗುತ್ತದೆ. ಇದೇನಿದು ‘ಒಂದು ಬಗೆ’ ಮತ್ತು ‘ಇನ್ನೊಂದು ಬಗೆ’ಯ ಹುರುಪು (charge) ? ಹಾಗಾದರೆ ಬನ್ನಿ ಈಗ ಕರೆಂಟ್ ಹೊರತಾದ ವಸ್ತುಗಳ ಒಳಗಡೆ ಇಣುಕೋಣ.

1) ವಸ್ತುಗಳ ಒಳಗಡೆಯ ಕಿರಿದಾದ ರೂಪಕ್ಕೆ ‘ಅಣು’/’ಸೀರು’ (atom) ಎಂದು ಕರೆಯಲಾಗುತ್ತದೆ. ಕಬ್ಬಿಣ, ಕಟ್ಟಿಗೆ, ನೀರು, ಹಾಳೆ ಮುಂತಾದ ಎಲ್ಲಾ  ವಸ್ತುಗಳೂ ಕೋಟಿಗಟ್ಟಲೇ ಕಿರಿದಾದ ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ವಸ್ತುವಿನ ಅಣುಗಳು ಅವುಗಳ ಗುಣವನ್ನು ತೀರ್ಮಾನಿಸುತ್ತವೆ.

Atom

 

2) ವಸ್ತುಗಳ ಅಣುವಿನಲ್ಲಿ ಈ ಕೆಳಗಿನ ಭಾಗಗಳಿರುತ್ತವೆ.

  •  ನಡುವಣ (nucleus): ಇದು ಅಣುವಿನ ನಟ್ಟ ನಡುವಿನ ಭಾಗವಾಗಿದ್ದು ಇದರಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳು ಇರುತ್ತವೆ.
  • ಪ್ರೋಟಾನ್ಗಳನ್ನು ‘ಸೆಳೆತದ ಬಯಲಿಗೆ’ (magnetic field) ಒಳಪಡಿಸಿದಾಗ ಅವುಗಳು ಬಯಲಿಗೆ ಎದುರಾಗಿ ಸಾಗುವುದರಿಂದ ಅವುಗಳು ಒಂದು ಬಗೆಯ ‘ಹುರುಪು’ (charge) ಹೊಂದಿವೆ ಎಂದು ಗುರುತಿಸಲಾಗುತ್ತದೆ. ತಿಳುವಳಿಕೆಯನ್ನು ಸುಲಭವಾಗಿಸಲು ಪ್ರೋಟಾನ್ಗಳು ತೋರುವ ಈ ಎದುರು ಬಗೆಯ ಹುರುಪಿಗೆ (charge) ‘ಕೂಡು’ ಅಂದರೆ + (positive) ಗುರುತನ್ನು ತಳುಕುಹಾಕಲಾಗಿದೆ, ಹಾಗಾಗಿ ಪ್ರೋಟಾನ್ಗಳನ್ನು ‘ಪಾಸಿಟಿವಲಿ ಚಾರ್ಜ್ಡ್’ (positively charged) ಅನ್ನಲಾಗುತ್ತದೆ. ಈ ಗುಣವನ್ನು ಬಳಸುತ್ತಾ ಕನ್ನಡದಲ್ಲಿ ಪ್ರೋಟಾನ್ಗಳನ್ನು ‘ಕೂಡು-ಹುರುಪಿನವು’ ಇಲ್ಲವೇ ‘ಕೂಡುವಣಿಗಳು’ ಎಂದು ಕರೆಯಬಹುದು.
  • ಅದೇ ನ್ಯೂಟ್ರಾನ್ಗಳನ್ನು ‘ಸೆಳೆತದ ಬಯಲಿಗೆ’  (magnetic field) ಒಳಪಡಿಸಿದಾಗ ಅವುಗಳು ಯಾವುದೇ ಒಂದು ಬಗೆಯ ಹುರುಪು (charge) ತೋರಗೊಡುವುದಿಲ್ಲ (ಒಂದು ಬಗೆಯ ಹುರುಪಿಲ್ಲದೇ ನೆಲೆಗೊಂಡಿರುವುದರಿಂದ ಕನ್ನಡದಲ್ಲಿ ನ್ಯೂಟ್ರಾನ್ಗಳನ್ನು ‘ನೆಲೆವಣಿಗಳು’ ಅನ್ನಬಹುದು).
  • ನಡುವಣದ (nucleus) ಸುತ್ತ ಸುತ್ತುವ ತುಣುಕುಗಳೇ ಇಲೆಕ್ಟ್ರಾನ್ಸ್.  ಇವುಗಳನ್ನು ‘ಸೆಳೆತದ ಬಯಲಿಗೆ’  (magnetic field) ಒಳಪಡಿಸಿದಾಗ, ಬಯಲಿನೆಡೆಗೆ ಸಾಗುವುದರಿಂದ ಇವುಗಳು ಪ್ರೋಟಾನ್ಗಗಿಂತ ಬೇರೆ ಬಗೆಯ ಹುರುಪನ್ನು (charge) ಹೊಂದಿವೆ ಎಂದು ತಿಳಿದುಕೊಳ್ಳಲಾಗಿದೆ. ಆದ್ದರಿಂದ ಪ್ರೋಟಾನ್ಗಳಿಗೆ ‘ಕೂಡು’ (+) ಗುರುತು ತಳುಕುಹಾಕಿದಂತೆ ಇಲೆಕ್ಟ್ರಾನ್ಗಳಿಗೆ ಕಳೆ (-) ಗುರುತು ತಳುಕಿಸಲಾಗಿದೆ. ಅಂದರೆ ಇಲೆಕ್ಟ್ರಾನ್ಸಗಳು ‘ನೆಗೆಟಿವ್ ಚಾರ್ಜ್ಡ್’ (negative charge) ಹೊಂದಿರುತ್ತವೆ. ಹಾಗಿದ್ದರೆ ಇಲೆಕ್ಟ್ರಾನ್ಗಳನ್ನು ಕನ್ನಡದಲ್ಲಿ ‘ಕಳೆ-ಹುರುಪಿನವು’ ಇಲ್ಲವೇ ‘ಕಳೆವಣಿಗಳು’ ಅನ್ನಬಹುದು.
  • ಒಂದು ಅಣುವಿನಲ್ಲಿ ಕೂಡುವಣಿಗಳು (protons) ಮತ್ತು ಕಳೆವಣಿಗಳು (electrons) ಅಷ್ಟೇ ಸಂಖ್ಯೆಯಲ್ಲಿದ್ದರೆ ಆ ವಸ್ತುಗಳು ಕರೆಂಟಿಗೆ ಅನುವು ಮಾಡಿಕೊಡುವುದಿಲ್ಲ. ಅದೇ ಕಳೆವಣಿಗಳು (electrons) ಮತ್ತು ಕೂಡುವಣಿಗಳ (protons) ಸಂಖ್ಯೆಯು ಅಣುವಿನಲ್ಲಿ ಬೇರೆ ಬೇರೆ ಸಂಖ್ಯೆಯಲ್ಲಿದ್ದರೆ ಆ  ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಕಳೆವಣಿಗಳ (electrons) ಕೊಡುಕೊಳ್ಳುವಿಕೆಯಾಗಿ ಕರೆಂಟ್ ಉಂಟಾಗುತ್ತದೆ.

ಬಾಚಣಿಗೆಯಿಂದ ಕೂದಲು ಬಾಚಿದಾಗ ಮತ್ತು ಬಾಚಣಿಗೆಯನ್ನು ಹಾಳೆಯೆಡೆಗೆ ಹಿಡಿದಾಗ ಆದದ್ದು ಇದೇ, ಕೂದಲಿನ ಅಣುಗಳು ಇಲೆಕ್ಟ್ರಾನ್ಗಳನ್ನು ಕಳೆದುಕೊಂಡರೆ ಬಾಚಣಿಕೆಯ ಅಣುಗಳು ಇಲೆಕ್ಟ್ರಾನ್ಗಳನ್ನು ಪಡೆದುಕೊಂಡವು. ಹೀಗೆ ಇಲೆಕ್ಟ್ರಾನ್ಗಳ ಜಿಗಿತದಿಂದ ಉಂಟಾದದ್ದೇ ಕರೆಂಟ್.  ಈ ಬಗೆಯಲ್ಲಿ ಎರಡು ವಸ್ತುಗಳ ಉಜ್ಜುವಿಕೆ/ತಾಕುವಿಕೆಯಿಂದ ಉಂಟಾಗುವ ಕರೆಂಟನ್ನು ನೆಲೆಸಿದ ಕರೆಂಟ್ (static current/electricity) ಎಂದು ಕರೆಯಲಾಗುತ್ತದೆ.

ನಮ್ಮ ಮನೆಗೆ ಹರಿಯುವ ಕರೆಂಟ್ ವಸ್ತುಗಳ ಅಣುಗಳಲ್ಲಿರುವ ಇಲೆಕ್ಟ್ರಾನ್ಗಳ ಹರಿವಿನಿಂದಲೇ ದೊರೆಯುವುದು ಆದರೆ ಅದು ನೆಲೆಸಿದ ಕರೆಂಟಗಿಂತ (static current) ಒಂಚೂರು ಬೇರೆ ಬಗೆಯದು. ಈ ಕುರಿತು ಮುಂದಿನ ಬರಹದಲ್ಲಿ ನೋಡೋಣ.

ಮಯ್ಯರಿಮೆಯ ಪದಪಟ್ಟಿ

ಕನ್ನಡದಲ್ಲಿ ಹಲವು ಬಗೆಯ ಅರಿವಿನ ಕವಲುಗಳನ್ನು ಕಟ್ಟ ಬೇಕಾದರೆ ಪದಕಟ್ಟಣೆ ಮಾಡುವುದು ಅಗತ್ಯ. ಡಾ.ಡಿ.ಎಸ್.ಶಿವಪ್ಪ ಅವರು 1970 ರಷ್ಟು ಮುಂಚೆನೇ ಕನ್ನಡದಲ್ಲಿ ವೈದ್ಯ ಪದಕೋಶವನ್ನು ಅಣಿಗೊಳಿಸಿದ್ದರು. ಡಾ. ಶಿವಪ್ಪ ಅವರಲ್ಲದೇ ಇನ್ನೂ ಹಲವು ಮಹನೀಯರು ಈ ಕುರಿತು ಕೆಲಸ ಮಾಡಿದ್ದಾರೆ. ಈ ಕೆಲಸವನ್ನು ಮುಂದುವರೆಸಬೇಕಿದೆ.

ಈ ನಿಟ್ಟಿನಲ್ಲಿ ಕಟ್ಟಿದ ಮಯ್ಯರಿಮೆಯ ಪದಪಟ್ಟಿಯನ್ನು ಕೆಳಗಿನ ಕಡತದಲ್ಲಿ ಕಾಣಬಹುದು.

medical_dictionary_horaputa

 

ವಿಜ್ಞಾನದಲ್ಲಿ ಒಲವು ಮೂಡಿಸುವುದು ಹೇಗೆ? – ಒಂದು ಅನುಭವ

– ಪ್ರಶಾಂತ ಸೊರಟೂರ.

ವಿಜ್ಞಾನದ ಉಪಯೋಗಗಳನ್ನು ನಾವು ಪ್ರತಿದಿನ ಪಡೆಯುತ್ತಿದ್ದರೂ, ವಿಜ್ಞಾನ ಹೊಮ್ಮಿಸಿದ ತಂತ್ರಜ್ಞಾನಗಳ ಬಳಕೆಯಿಲ್ಲದೇ ಇಂದು ಬದುಕು ಕಷ್ಟ ಅಂತಾ ಅನುಭವಕ್ಕೆ ಬಂದರೂ, ಅದರ ಕಲಿಕೆಯಲ್ಲಿ ನಾವು ಇನ್ನೂ ಹಿಂದೇಟು ಹಾಕುತ್ತೇವೆ. ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವೆಂದರೆ ಕಬ್ಬಿಣದ ಕಡಲೆಯೇ ಸರಿ! “ಅದ್ಯಾಕೇ ಈ ವಿಷಯಗಳು ಇವೆ?” ಅಂತಾ ಹಲವು ಮಕ್ಕಳಿಗೆ ಅನ್ನಿಸುತ್ತಿರುವುದನ್ನು ಕಾಣಬಹುದು. ಪದವಿಯ ಹಂತಕ್ಕೆ ಹೋಗುವ ವಿದ್ಯಾರ್ಥಿಗಳೂ ಕೂಡ ಕಾಟಾಚಾರಕ್ಕೆ ಇಲ್ಲವೇ ತಂತ್ರಜ್ಞಾನ ಕಲಿಕೆಯಿಲ್ಲದೆ ಉದ್ಯೋಗ ಸಿಗುವುದಿಲ್ಲ ಅನ್ನುವ ಕಾರಣಕ್ಕಾಗಿಯೇ ಕಲಿಯುತ್ತಾರೆ ಹೊರತು ನಿಜವಾಗಿ ಅದರಲ್ಲಿ ಆಸಕ್ತಿ ಇಟ್ಟುಕೊಂಡು ಕಲಿಯುವುದು ತುಂಬಾ ಕಡಿಮೆ.

“ವಿಜ್ಞಾನದಲ್ಲಿ ಯಾಕೆ ಮಕ್ಕಳಿಗೆ ಅಷ್ಟು ಆಸಕ್ತಿ ಹುಟ್ಟುವುದಿಲ್ಲ” ಅನ್ನುವುದಕ್ಕೆ ಹಲವು ಕಾರಣಗಳಿರಬಹುದು. ಈ ನಿಟ್ಟಿನಲ್ಲಿ ಹಲವಾರು ಶಾಲೆಯ ಮಕ್ಕಳೊಂದಿಗೆ ಒಡನಾಡಿದಾಗ ನನಗಾದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ, ಕನ್ನಡಿಗರ ಏಳಿಗೆಗೆ ಸಂಬಂಧಿಸಿದ ಪುಸ್ತಕಗಳಿಗೆ ಮೀಸಲಾದ ಮಳಿಗೆಯಾಗಿದ್ದು, ಅದರ ಜತೆಗೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಭೇಟಿಕೊಟ್ಟು ದಾನಿಗಳ ನೆರವಿನಿಂದ ಮಕ್ಕಳಿಗೆ ವಿಜ್ಞಾನದ ಪುಸ್ತಕಗಳನ್ನು ಹಂಚುವ ಕೆಲಸವನ್ನು ಮಾಡುತ್ತಿದೆ. ಕನ್ನಡದಲ್ಲಿ ವಿಜ್ಞಾನದ ಬರಹಗಳನ್ನು ಮೂಡಿಸುತ್ತಿರುವ ನಮ್ಮ ಅರಿಮೆ ತಂಡ, ಮುನ್ನೋಟ ತಂಡದೊಂದಿಗೆ ಸೇರಿ ಹಲವು ಶಾಲೆಗಳಿಗೆ ಭೇಟಿಕೊಟ್ಟಾಗ ಆಗಿರುವ ಅನುಭವದ, ಚರ್ಚೆಯ ಸಾರಾಂಶವನ್ನು ಇಲ್ಲಿ ಬರೆದಿರುವೆ.

FB_IMG_1530981351900

ಶಾಲೆಯ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲು ಶುರು ಮಾಡಿದಾಗ “ಯಾರಿಗೆ ವಿಜ್ಞಾನ ಇಷ್ಟ?” ಅನ್ನುವ ಪ್ರಶ್ನೆ ಕೇಳಿದಾಗ ಹೆಚ್ಚು ಕಡಿಮೆ ಎಲ್ಲ ಮಕ್ಕಳೂ “ನನಗಿಷ್ಟ” ಅನ್ನುತ್ತಾರೆ. “ಇಷ್ಟ ಇಲ್ಲ” ಅಂದರೆ ಶಿಕ್ಷಕರು ಬಯ್ಯಬಹುದು ಇಲ್ಲವೇ ಗುಂಪಿನಲ್ಲಿ ಎಲ್ಲರೂ “ಇಷ್ಟ” ಅನ್ನುತ್ತಿದ್ದಾರೆ ನಾನು ಹೇಗೆ “ಇಲ್ಲ” ಅನ್ನಲಿ ಅನ್ನುವ ಅಳುಕು ಮಕ್ಕಳಲ್ಲಿ ಇರುವುದು ಗಮನಕ್ಕೆ ಬಂದಿತು. ಮುಂದಿನ ಪ್ರಶ್ನೆಯಾಗಿ “ವಿಜ್ಞಾನ ಯಾಕೆ ಇಷ್ಟ?” ಅಂತಾ ಕೇಳಿದಾಗ, ಹೆಚ್ಚಿನ ಮಕ್ಕಳು “ಅದರಲ್ಲಿ ಪ್ರಯೋಗಗಳಿರುತ್ತವೆ ಅದಕ್ಕೆ ಇಷ್ಟ” ಎಂದು ಹೇಳುತ್ತಾರೆ.

ಮುಂದುವರೆಯುತ್ತಾ, “ಹಾಗಾದರೆ ವಿಜ್ಞಾನ ಅಂದರೇನು? ಯಾಕೆ ಅದನ್ನು ಕಲಿಯಬೇಕು?” ಅಂತಾ ಕೇಳಿದಾಗ ಹೆಚ್ಚಿನ ಮಕ್ಕಳು ನಿಜವಾಗಿ ಅವಕ್ಕಾಗಿ ಉತ್ತರಕ್ಕೆ ತಡಕಾಡುತ್ತಿರುವುದನ್ನು ಕಂಡೆ. ಕೆಲವು ಮಕ್ಕಳು ಈ ಪ್ರಶ್ನೆಗೆ ಉತ್ತರವಾಗಿ ಜೀವಕೋಶಗಳು, ಪರಿಸರ ಮುಂತಾದ ಪಠ್ಯಪುಸ್ತಗಳಲ್ಲಿರುವ ಪಾಠದ ಹೆಸರಗಳನ್ನು ಹೇಳಿದರು. ಕೆಲವೇ ಕೆಲವು ಮಕ್ಕಳು “ವಿಜ್ಞಾನ ಕಲಿತರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು” ಅನ್ನುವಂತಹ ಉತ್ತರಗಳನ್ನು ನೀಡಿದರು.

ಈ ಮೇಲಿನ ಪ್ರಶ್ನೋತ್ತರಗಳಿಂದ ಕಂಡುಬಂದಿದ್ದೇನೆಂದರೆ,

  • ಹೆಚ್ಚಿನ ಮಕ್ಕಳಿಗೆ “ವಿಜ್ಞಾನ” ಎಂಬುದು ಒಂದು “ಪಠ್ಯಪುಸ್ತಕದ ವಿಷಯ” ಅಷ್ಟೆ.
  • ಪ್ರಯೋಗಗಳ (ಅಂದರೆ ಮಾಡಿನೋಡುವುದರ) ಮೂಲಕ ಹೇಳಿದರೆ ವಿಜ್ಞಾನ ಕಲಿಯುವುದು ಮಕ್ಕಳಿಗೆ ಇಷ್ಟ.

ಮಾತುಕತೆಯ ಮುಂದಿನ ಅಂಗವಾಗಿ ಅವರಿಗೆ ವಿಜ್ಞಾನಿಗಳ ಬದುಕನ್ನು ಚಿಕ್ಕ ಕತೆಗಳ ರೂಪದಲ್ಲಿ ಹೇಳಿದೆ.

  • ಗೆಲಿಲಿಯೋ ಮೊದಲ ಬಾರಿಗೆ ಭೂಮಿಯ ಸುತ್ತ ಗ್ರಹಗಳು ಮತ್ತು ಸೂರ್ಯ ಸುತ್ತುವುದಿಲ್ಲ ಬದಲಾಗಿ ಸೂರ್ಯ ನಡುವಿನಲ್ಲಿದ್ದು ಭೂಮಿ ಸೇರಿದಂತೆ ಉಳಿದ ಗ್ರಹಗಳು ಆತನ ಸುತ್ತ ಸುತ್ತುತ್ತವೆ ಅಂತಾ ಹೇಳಿದ್ದು ಮತ್ತು ಅದಕ್ಕೆ ಸಮಾಜ ಅವರನ್ನು ಹೀಯಾಳಿಸಿದ್ದರ ಬಗ್ಗೆ ಮತ್ತು ಹೀಯಾಳಿಕೆಗೆ ಎದೆಗುಂದದೆ ಗೆಲಿಲಿಯೋ ಮುನ್ನಡೆದುದರ ಕುರಿತಾಗಿಯೂ ಹೇಳಿದೆ.
  • ಅಲೆಕ್ಸಾಂಡರ್ ಗ್ರಾಹಂ ಬೆಲ್ ಅವರು ತಮ್ಮ ತಾಯಿಯ ಕಿವುಡುತನದಿಂದ ನೊಂದು ಸುಮ್ಮನಾಗಿರದೇ ಶಬ್ದ ಮತ್ತು ಅದರ ಸಾಗಾವಿಕೆಯ ಬಗ್ಗೆ ಅಧ್ಯಯನ ನಡೆಸಿದರು. ಇದೇ ಮುಂದೆ ಅವರು ಟೆಲಿಫೋನ್ ಕಂಡುಹಿಡಿಯಲು ಅಡಿಪಾಯವಾಗಿದ್ದರ ಕುರಿತು ತಿಳಿಸಿದೆ.
  • ಶ್ರೀನಿವಾಸ ರಾಮಾನುಜನ್ ತುಂಬಾ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡರೂ, ಅವರು ಗಣಿತದಲ್ಲಿ ಮಾಡಿದ ಮೇರುಮಟ್ಟದ ಕೆಲಸದ ಬಗ್ಗೆ ಹೇಳಿದೆ.
  • ವಿಶ್ವೇಶ್ವರಯ್ಯನವರು ಜೋಗದಿಂದ ದುಮ್ಮಿಕ್ಕುವ ನೀರು ಕಂಡು ಬೇರೆಯವರಂತೆ ಬರೀ ಮುದಗೊಳ್ಳದೇ ಅದರಲ್ಲಿ ಅಡಗಿರುವ ಶಕ್ತಿಯ ಬಳಕೆಯ ಬಗ್ಗೆ ಮುಂದಾಗಿದ್ದರ ಕುರಿತು ಹೇಳಿದೆ.

ಕತೆಯ ಜತೆಗೆ ಆಯಾ ವಿಜ್ಞಾನಿಗಳ ಚಿತ್ರ ಗುರುತಿಸಲು ಇಲ್ಲವೇ ಅವರು ಮಾಡಿದ ಕೆಲಸದ ಬಗ್ಗೆ ಪ್ರಶ್ನೆ ಕೇಳಿ ಅದಕ್ಕೆ ಸರಿಯಾಗಿ ಉತ್ತರಿಸಿದ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಿದೆ. ಕತೆ ಮತ್ತು ಬಹುಮಾನ ಮಕ್ಕಳಿಗೆ ಇಷ್ಟವಾದವು ಅನ್ನಿಸಿತು. ವಿಜ್ಞಾನಿಗಳು ತಮ್ಮ ಜೀವನದುದ್ದಕ್ಕೂ ಹಲವು ಕಷ್ಟಗಳನ್ನು ಎದುರಿಸಿದರೂ ಹೇಗೆ ಸಾಧನೆ ಮಾಡಿದರು ಅನ್ನುವುದನ್ನು ಮನವರಿಕೆ ಮಾಡುವ ಉದ್ದೇಶದಿಂದ ಮಾತುಕತೆಯಲ್ಲಿ ಈ ಮೇಲಿನ ಬಗೆ ಅಳವಡಿಸಿಕೊಂಡೆ.

ಮುಂದುವರೆಯುತ್ತಾ, ಕಣ್ಕಟ್ಟಿನ ಮಾದರಿಗಳಲ್ಲಿ ಒಂದಾದ “ತಿರುಗುವ ಹಾವುಗಳು” (Rotating Snakes) ಚಿತ್ರವನ್ನು ಮಕ್ಕಳಿಗೆ ತೋರಿಸಿದಾಗ, ಚಿತ್ರಗಳು ತಿರುಗುತ್ತಿರುವಂತೆ ಕಾಣುವುದು ಆದರೆ ನಿಜವಾಗಿ ಅವು ತಿರುಗದೇ ನಮ್ಮ ಮಿದುಳಿಗೆ ಉಂಟಾಗುವ “ಅನಿಸಿಕೆ” ಎಂದು ತಿಳಿಸಿದೆ. ಹಾಗೆನೇ ವಿಜ್ಞಾನ ಕೂಡ ಬರೀ ಕಣ್ಣಿಗೆ ಕಾಣುವುದನ್ನು ನಿಜವೆಂದು ಬಗೆಯದೇ ವಿಷಯದ ಆಳಕ್ಕೆ ಇಳಿಯಲು ನೆರವಾಗುತ್ತದೆ ಎಂದು ಕೊಂಡಿ ಬೆಸೆಯಲು ಪ್ರಯತ್ನಿಸಿದೆ.

Rotating Sankes

ಲಕ್ಷಗಟ್ಟಲೇ ವರುಷಗಳಿಂದ ಮನುಷ್ಯ ಹಂತ ಹಂತವಾಗಿ ಹೇಗೆ ತನ್ನ ಅರಿವನ್ನು ಹಿಗ್ಗಿಸಿಕೊಳ್ಳುತ್ತಾ ಬಂದಿದ್ದಾನೆ ಎನ್ನುವುದನ್ನು ಕೆಳಗಿನ ಚಿತ್ರದ ಮೂಲಕ ಚರ್ಚಿಸಿದೆ. ಸುತ್ತಣವನ್ನು ಅರಿಯದೇ ಹಾಗೆಯೇ ಇದ್ದು ಬಿಟ್ಟಿದ್ದರೆ ಮನುಷ್ಯ ಕೂಡ ಇತರೆ ಪ್ರಾಣಿಗಳಂತೆ ಆಗಿ ಬಿಡುತ್ತಿದ್ದ. ಚಿಕ್ಕ-ಚಿಕ್ಕದಾಗಿ ಎಡೆಬಿಡದೇ ಇಟ್ಟ ಕಲಿಕೆಯ ಹೆಜ್ಜೆಗಳು ಇಂದು ನಮ್ಮ ನೆರವಿಗೆ ಬಂದಿವೆ. ಹಾಗಾಗಿ ವಿಜ್ಞಾನದಲ್ಲಿ ಪ್ರತಿಯೊಬ್ಬರ ಯೋಚನೆ, ತೊಡಗುವಿಕೆ ಮನುಕುಲಕ್ಕೆ ಬೇಕಾಗಿದೆಯೆಂದೆ. (ಮಕ್ಕಳೆಡೆಗೆ ಕೈ ತೋರಿಸುತ್ತಾ)

Evolution_Science

ಮಕ್ಕಳನ್ನು ಮಾತುಕತೆಯಲ್ಲಿ ಇನ್ನಷ್ಟು ತೊಡಗಿಸಲು ಮತ್ತು ನಿಜವಾಗಿ ವಿಜ್ಞಾನ ಎಂದರೇನು ಅಂತಾ ಮನವರಿಕೆ ಮಾಡಲು ಏನು? ಏಕೆ? ಹೇಗೆ?” ಅನ್ನುವ ಚಟುವಟಿಕೆಯೊಂದನ್ನು ರೂಪಿಸಿದೆ. ಮಕ್ಕಳಿಗೆ ಇಷ್ಟವಾಗುವಂತೆ ಮಲ್ಲಿಗೆ, ಸಂಪಿಗೆ, ಗುಲಾಬಿ, ತಾವರೆ ಎಂಬ ಹೆಸರು ಆಯ್ದುಕೊಂಡು ಮೂರು-ನಾಲ್ಕು ತಂಡಗಳನ್ನು ಮಾಡಿದೆ.

FB_IMG_1530981332618

ಈ ಚಟುವಟಿಕೆಯಲ್ಲಿ ಪ್ರತಿಯೊಂದು ತಂಡ ಮೂರು ಪ್ರಶ್ನೆಗಳನ್ನು ಕೇಳಬೇಕು. ಆ ಪ್ರಶ್ನೆಗಳು ಹೇಗಿರಬೇಕೆಂದರೆ,

– ಸುತ್ತಮುತ್ತ ಕಾಣುವ ಏನೇ ಕುತೂಹಲ, ಅಚ್ಚರಿಗಳನ್ನು ಹುಟ್ಟಿಸಿದ ಪ್ರಶ್ನೆಗಳಾಗಿರಬೇಕು.

– ಕೇಳುವ ಪ್ರಶ್ನೆಗಳು ಅವರ ಅನುಭವಗಳಾಗಿರಬೇಕು ಹೊರತು ಪಠ್ಯಪುಸ್ತಕಗಳಿಂದ ಎತ್ತುಕೊಂಡಿದ್ದು ಆಗಿರಬಾರದು.

– ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕಂತಿಲ್ಲ, ಬರೀ ಚಂದದ ಪ್ರಶ್ನೆಗಳನ್ನು ಕೇಳಿದರೆ ಸಾಕು.

ಪ್ರಶ್ನೆಗಳನ್ನು ಕಲೆಹಾಕಲು 10 ನಿಮಿಷಗಳ ಸಮಯ ಗೊತ್ತುಪಡಿಸಿದೆ.

ಚಟುವಟಿಕೆ ಶುರು ಮಾಡುತ್ತಿರುವಂತೆ ಕೆಲವು ಮಕ್ಕಳು ಗುನುಗುಟ್ಟುತ್ತಾ ಕುಳಿತರು ಇನ್ನು ಕೆಲವು ಮಕ್ಕಳು ಬೇರೆಯ ಮಕ್ಕಳೊಂದಿಗೆ ಬೆರೆಯದೇ ಒಬ್ಬಂಟಿಯಾಗಿ ಕುಳಿತುಕೊಂಡಿದ್ದರು. ಚಟುವಟಿಕೆಯ ಬಗ್ಗೆ ಇನ್ನಷ್ಟು ತಿಳಿಸಲು,

“ನೋಡಿ ಮಕ್ಕಳೇ ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ತಿಂಡಿ ತಿಂದು, ಶಾಲೆಗೆ ಬಂದು ಪಾಠ ಓದಿ, ಊಟ ಮಾಡಿ, ಆಟವಾಡಿ, ಸಂಜೆ ಮನೆಗೆಲಸ ಮಾಡಿ, ರಾತ್ರಿ ಊಟ ಮಾಡಿ ಮಲಗುವವರೆಗೂ ಹಲವಾರು ವಿಷಯಗಳು ನಿಮಗೆ ಕಂಡಿರುತ್ತವೆ. ಕೆಲವು ವಿಷಯಗಳನ್ನು ನಿಮ್ಮನ್ನು ಕುತೂಹಲಕ್ಕೆ ಈಡು ಮಾಡಿರಬಹುದು. ಉದಾ: ನಾವೇಕೆ ನಿದ್ದೆ ಮಾಡುತ್ತೇವೆ? ಎಲೆಗಳು ಹಸಿರಾಗೇಕೆ ಇರುತ್ತವೆ? ಮಣ್ಣು ಹೇಗೆ ಉಂಟಾಯಿತು? ನೀರಡಿಕೆ ಏಕೆ ಆಗುತ್ತದೆ? ಮುಂತಾದ ಕುತೂಹಲದ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿರಬಹುದು. ಅಂತಹ ಪ್ರಶ್ನೆಗಳನ್ನು ಕೇಳುವುದೇ ಇಂದಿನ ಆಟ. ಹಾಗಾಗಿ ಪಠ್ಯಪುಸ್ತಕಗಳನ್ನು ಪಕ್ಕಕ್ಕಿಟ್ಟು ನಿಮ್ಮ ಸುತ್ತಮುತ್ತಲಿನಲ್ಲಿ ಕಂಡುಬಂದ ಅಚ್ಚರಿಯ ವಿಷಯಗಳ ಬಗ್ಗೆ ಗಮನಿಸಿ”

ಅಂದಾಗ, ಮಕ್ಕಳು ಒಗ್ಗೂಡಿ ಪ್ರಶ್ನೆಗಳನ್ನು ಕಲೆಹಾಕಲು ಮುಂದಾದರು. “ಪಠ್ಯಪುಸ್ತಕದಾಚೆಗೆ, ಎಷ್ಟೇ ಚಿಕ್ಕದಾದ, ಸುಲಭವೆನಿಸುವ ಪ್ರಶ್ನೆಗಳನ್ನು ಕೇಳಬಹುದು” ಅಂದಾಗ ಅವರಲ್ಲಿ ಹುರುಪು ಹೆಚ್ಚಿದ್ದನ್ನು ಗಮನಿಸಿದೆ. ಪ್ರತಿಯೊಂದು ತಂಡದ ಪರವಾಗಿ ಯಾರಾದರೂ ಒಬ್ಬರು ಪ್ರಶ್ನೆ ಕಲೆಹಾಕಿ, ಕೇಳಲು ಹೇಳಿದೆ.

ಪ್ರಶ್ನೆ ಕಲೆಹಾಕುವಾಗ ಹೆಚ್ಚಿನ ಮಕ್ಕಳು ಆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡಿತು. ಗೊತ್ತುಪಡಿಸಿದ ಹೊತ್ತು ಮುಗಿಯುತ್ತಿದ್ದಂತೆ ಹಲವು ಮಕ್ಕಳು ಕೈ ಎತ್ತಿ, “ನಾನು ಕೇಳುತ್ತೇನೆ…ನಾನು ಕೇಳುತ್ತೇನೆ” ಅಂತಾ ಮುಂದಾದರು.

IMG-20180804-WA0002

ಮಕ್ಕಳು ಕೇಳಿದ ಮೊದಲ ಕೆಲವು ಪ್ರಶ್ನೆಗಳು ಮತ್ತೇ ಪಠ್ಯಪುಸ್ತಕಗಳಿಂದ ಆಯ್ದುಕೊಂಡಿದ್ದು ಆಗಿದ್ದವು. (ಉದಾ: ಜೀವಕೋಶದಲ್ಲಿ ಮೈಟೋಕಾಂಡ್ರಿಯಾದ ಕೆಲಸವೇನು?) ಆದರೆ ಚಟುವಟಿಕೆ ಮುಂದುವರೆದಂತೆ ಅವರಿಗೆ ಇನ್ನಷ್ಟು ಒಳ್ಳೊಳ್ಳೆ ಪ್ರಶ್ನೆಗಳು ಬರಲು ತೊಡಗಿದವು. ಮಕ್ಕಳು ಕೇಳಿದ ಕೆಲವು ಪ್ರಶ್ನೆಗಳನ್ನು ಕೆಳಗೆ ಕೊಟ್ಟಿರುವೆ,

  • ನಾವು ಆಕಳಿಸಿದಾಗ ಕಣ್ಣೀರು ಏಕೆ ಬರುತ್ತದೆ?!
  • ಮನುಷ್ಯ ಸತ್ತ ಕೆಲವು ಗಂಟೆಗಳಲ್ಲಿ ವಾಸನೆ ಏಕೆ ಬರುತ್ತದೆ?! [ಈ ಪ್ರಶ್ನೆ ಕೇಳಿದ ಮಗು ಕೆಲವು ದಿನಗಳ ಮುಂಚೆ ತನ್ನ ಮನೆಯ ಪಕ್ಕ ಯಾರೋ ತೀರಿಹೋದದ್ದನ್ನು ಗಮನಿಸಿತ್ತು]
  • ನಾವು ವರುಷಗಳು ಕಳೆದಂತೆ ಏಕೆ, ಹೇಗೆ ಬೆಳೆಯುತ್ತೇವೆ?!
  • ಈರುಳ್ಳಿ ಹೆಚ್ಚುವಾಗ ಕಣ್ಣೀರು ಏಕೆ ಬರುತ್ತದೆ!? [ಈ ಪ್ರಶ್ನೆ ಕೇಳಿದ ಮಗು ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತದೆ. ಆಗ ಈ ಪ್ರಶ್ನೆ ಬಂದಿತಂತೆ]
  • ನಮ್ಮ ಮೈಯಲ್ಲಿ ರಕ್ತ ಹೇಗೆ ಉಂಟಾಗುತ್ತದೆ?!

ಹೌದು, ಹೌದು ಅನ್ನಿಸುವ ಮೇಲಿನಂತಹ ಪ್ರಶ್ನೆಗಳಲ್ಲದೇ ಮೇಲ್ನೋಟಕ್ಕೆ ಸ್ವಲ್ಪ ತಮಾಶೆ ಅನ್ನಿಸಿದರೂ, ಮಕ್ಕಳ ಎಲ್ಲೆಯಿಲ್ಲದ ಕುತೂಹಲವನ್ನು ತೋರ್ಪಡಿಸುವ ಕೆಳಗಿನ ಪ್ರಶ್ನೆಗಳನ್ನೂ ಕೇಳಿದರು,

  • ಮನುಷ್ಯರು ಮಾತಾಡುತ್ತಾರೆ ಆದರೆ ನಮ್ಮ ಮನೆಯ ಹಸು ಏಕೆ ಮಾತಾಡುವುದಿಲ್ಲ?! [ಈ ಮಗುವಿಗೆ ತಮ್ಮ ಹಸುವಿನ ಕೊಟ್ಟಿಗೆಯಲ್ಲಿ ಈ ಪ್ರಶ್ನೆ ಮೂಡಿತ್ತಂತೆ]
  • ಚುಕ್ಕೆ ಬಾಳೆಹಣ್ಣಿನ ಮೇಲೆ ಚುಕ್ಕೆಗಳಿರುತ್ತವೆ ಆದರೆ ಏಲಕ್ಕಿ ಬಾಳೆಹಣ್ಣಿನಲ್ಲಿ ಏಲಕ್ಕಿ ಏಕಿರುವುದಿಲ್ಲ!?
  • ಬಸ್ಸು, ರೈಲು ಗಾಡಿಗಳಿದ್ದರೂ ವಿಮಾನ ಏಕೆ ಕಂಡುಹಿಡಿದರು?

ಚಟುವಟಿಕೆಯಲ್ಲಿ ಒಳ್ಳೆಯ ಪ್ರಶ್ನೆ ಕೇಳಿ ಗೆದ್ದ ತಂಡದಿಂದ ಶಾಲೆಗೆ ಉಡುಗೊರೆಯಾಗಿ ವಿಜ್ಞಾನದ ಪುಸ್ತಕವೊಂದನ್ನು ಕೊಡಲಾಯಿತು. ಚಟುವಟಿಕೆಯ ಬಳಿಕ ಮನೆಯಲ್ಲಿಯೇ ಮಾಡಬಹುದಾದ ವಿಜ್ಞಾನ ಪ್ರಯೋಗಗಳ ಪುಸ್ತಕಗಳನ್ನು ಎಲ್ಲ ಮಕ್ಕಳಿಗೆ ಕೊಡಲಾಯಿತು.

IMG-20180825-WA0005

ಒಟ್ಟಾರೆಯಾಗಿ ಈ ಚಟುವಟಿಕೆ ಮಕ್ಕಳನ್ನು ತುಂಬಾ ಹುರುಪುಗೊಳಿಸಿದ್ದು ಕಂಡು ಬಂದಿತು. “ಮಕ್ಕಳು ಇಷ್ಟು ಹುರುಪಿನಿಂದ ನಮ್ಮೊಡನೆ ಒಡನಾಡುವುದಿಲ್ಲ. ಪ್ರಶ್ನೆ ಕೇಳುವುದಕ್ಕೆ ಮುಂದೆ ಬರುವುದಿಲ್ಲ” ಅನ್ನುವಂತಹ ಅನುಭವಗಳನ್ನು ಶಾಲೆಯ ಶಿಕ್ಷಕರು ಹಂಚಿಕೊಂಡರು.

ವಿಜ್ಞಾನವೆಂದರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಸುತ್ತ ಕುತೂಹಲ ಬೆಳೆಸಿಕೊಳ್ಳುವುದು, ಅವುಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದೇ ವಿಜ್ಞಾನದ ಗುರಿಯಾಗಿದೆ. ಸರಿ ಯಾವುದೆಂದು ಮೇಲ್ನೋಟಕ್ಕೆ ನೋಡದೇ ಆಳವಾಗಿ ಒರೆಗೆಹಚ್ಚುವುದು ವಿಜ್ಞಾನದ ತಳಹದಿ. ಪಠ್ಯಪುಸ್ತಕಗಳಲ್ಲಿರುವ ಪಾಠಗಳನ್ನು ಓದಿ, ಪರೀಕ್ಷೆ ಬರೆಯುವುದಷ್ಟೇ ವಿಜ್ಞಾನವಲ್ಲ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕೆಂದು ತಿಳಿಸಿದಾಗ ಮಕ್ಕಳು ಚಟುವಟಿಕೆಗಳಲ್ಲಿ ಪಾಲ್ಗೊಂಡ ನಲಿವಿನೊಂದಿಗೆ ಹೌದೆನ್ನುವಂತೆ ತಲೆತೂಗಿದರು.

ಮೇಲಿನ ಶಾಲೆಯ ಮಕ್ಕಳೊಂದಿಗಿನ ಒಡನಾಟದಿಂದ ನನಗಾದ ಕಲಿಕೆಯೆಂದರೆ,

1. ವಿಜ್ಞಾನ ಕಲಿಸುವುದರಲ್ಲಿ ನಾವು ಮುಖ್ಯವಾಗಿ ಎಡವುತ್ತಿರುವುದೆಲ್ಲಿ ಎಂದರೆ, ವಿಜ್ಞಾನ ನಮ್ಮ ಬದುಕಿನ ಸುತ್ತನೇ ಇರುವ, ನಮ್ಮ ಸುತ್ತಣದ ತಿಳುವಳಿಕೆ ಅನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡುವಲ್ಲಿ ಸೋಲುತ್ತಿರುವುದು. ವಿಜ್ಞಾನ ಹೇಗೆ ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ ಅನ್ನುವುದನ್ನು ಮೊದಲು ತಿಳಿಸಬೇಕು ಅದಾದ ಬಳಿಕವೇ ಪಠ್ಯಪುಸ್ತಕದಲ್ಲಿರುವ ಪಠ್ಯಕ್ರಮದಂತೆ ಕಲಿಸಲು ಮುಂದಾಗಬಹುದು. ಈ ಬಗೆಯನ್ನು ಪ್ರತಿಯೊಂದು ಪಾಠಕ್ಕೂ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ’ಅಣು’ ಪಾಠವನ್ನು ಕಲಿಸುವ ಮುನ್ನ, ನಮ್ಮ ಸುತ್ತಮುತ್ತ ಕಾಣುವ ವಸ್ತುಗಳ ಜತೆಗೆ ನಮ್ಮ ಮೈ ಕೂಡ ಮೂಲದಲ್ಲಿ ಅಣುಗಳಿಂದ ಆಗಿರುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ’ಅಣು’ಗಳ ಬಗ್ಗೆ ಅಧ್ಯಯನ ನಡೆಸಿದುದರಿಂದ ಉದಾಹರಣೆಗೆ ನೀರಿನ ಗುಣಗಳನ್ನು ಚನ್ನಾಗಿ ತಿಳಿಯಲು ಆಯಿತು, ಹೆಚ್ಚು ಗಟ್ಟಿಯಾದ, ಹಗುರವಾದ ವಸ್ತುಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು, ವಸ್ತುವೊಂದು ಇನ್ನೊಂದು ವಸ್ತುವಿನೊಡನೆ ಹೇಗೆ ಬೆರೆಯುತ್ತದೆ ಅನ್ನುವುದನ್ನು ಅರಿಯಲು ನೆರವಾಯಿತು ಹೀಗೆ ಮುಂದುವರೆಯಬಹುದು.

2. ಕಲಿಕೆಯಲ್ಲಿ ಮಕ್ಕಳ “ಪಾಲ್ಗೊಳ್ಳುವಿಕೆ” ತುಂಬಾ ಮುಖ್ಯ. ಹಾಗಾಗಿ ಶಾಲೆಯ ಕೋಣೆಯಲ್ಲಿ ಕಲಿಕೆ ಬರೀ ಶಿಕ್ಷಕರಿಂದ ಮಕ್ಕಳೆಡೆಗೆ ಹರಿಯದೇ, ಎರಡೂ ಬದಿಯಿಂದ ಚರ್ಚೆಯ, ಪ್ರಶ್ನೋತ್ತರಗಳ ರೂಪದಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಮಕ್ಕಳು ಹೆಚ್ಚು ತೊಡಗಿದಷ್ಟು ಕಲಿಕೆ ಸುಲಭ.

3. ವಿಜ್ಞಾನ ಕಲಿಕೆಯಲ್ಲಿ “ಓದಿ” ಕಲಿಯುವುದರ ಜತೆಗೆ “ಮಾಡಿ” ಕಲಿಯುವುದಕ್ಕೆ ಒತ್ತುಕೊಡಬೇಕು. ಈ ನಿಟ್ಟಿನಲ್ಲಿ ಕಿರಿದಾದರೂ ಪರವಾಗಿಲ್ಲ ಪ್ರತಿಯೊಂದು ಶಾಲೆ ವಿಜ್ಞಾನದ ಪ್ರಯೋಗಮನೆಯನ್ನು ಹೊಂದಿರಬೇಕು. ಶಾಲೆಯ ಕೋಣೆಯಲ್ಲಿ ಕಲಿಸುವಾಗಲೂ ಕೂಡಾ ಶಿಕ್ಷಕರು ಪಾಠಕ್ಕೆ ಸಂಬಂಧಿಸಿದ ಕಿರು ಪ್ರಯೋಗಗಳನ್ನು ಮಾಡಿ ತೋರಿಸಬಹುದು.

4. ಮಕ್ಕಳ ಯೋಚನೆಯ ಹರಿವನ್ನು ಕಟ್ಟಿಹಾಕುವುದಾಗಲಿ ಇಲ್ಲವೇ “ಇದೇ ದಾರಿ ಸರಿಯಾದುದು”, “ಹೀಗೆನೇ ಯೋಚನೆ ಮಾಡಬೇಕು” ಅನ್ನುವುದನ್ನು ಕಲಿಸುಗರು ಮಾಡಬಾರದು. ಮಕ್ಕಳಿಗೆ ರೆಕ್ಕೆ ಬಡಿಯಲು ಬಿಟ್ಟಷ್ಟು ಅವರು ಹೊಸ ದಿಕ್ಕುಗಳನ್ನು ಅರಸಲು ಸಾಧ್ಯವಾಗುತ್ತದೆ. ಕಲಿಸುಗರು ಮಕ್ಕಳೊಂದಿಗೆ ಗೆಳೆಯ/ಗೆಳತಿಯಂತೆ ಬೆರೆತಷ್ಟೂ ಕಲಿಕೆ, ಕಲಿಸುವಿಕೆ ಸುಲಭವಾಗುತ್ತದೆ. [ಹಾಗಂತ ಬರೀ ತರ್ಲೆ ಮಾಡಲು ಬಿಡುವುದು ಅಂತಲ್ಲಾ:-) ]

5. ಪಠ್ಯಪುಸ್ತಕಗಳು ಕನ್ನಡದ ನುಡಿ ಸೊಗಡಿಗೆ ಒಗ್ಗುವಂತೆ ಮಾಡಬೇಕು. ಈಗಿರುವ ಪಠ್ಯಪುಸ್ತಕಗಳಲ್ಲಿ ತುಂಬಾ ಕಷ್ಟಕರವಾದ ಪದಗಳು, ವಾಕ್ಯಗಳ ಬಳಕೆ ಮಾಡಲಾಗಿದೆ. ವಿಜ್ಞಾನ ಅವರಿಗೆ ಬರೀ ಪಠ್ಯಕ್ರಮದ ವಿಷಯ, ಅದಕ್ಕೂ ಅವರ ಪರಿಸರಕ್ಕೂ ನಂಟಿಲ್ಲ ಅನ್ನಿಸುವುದಕ್ಕೆ ಇದು ಕೂಡ ಕಾರಣ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಸರಕಾರ ಕೂಡಲೇ ಗಮನಹರಿಸಿ, ಸರಿಪಡಿಸಬೇಕು. ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆಯ ಪ್ರಯೋಜನ ಮಕ್ಕಳು ಪಡೆಯುವಂತಾಗಲು ಇದು ಆಗಬೇಕು. ಇಲ್ಲವಾದರೆ ಪಠ್ಯಪುಸ್ತಕಗಳ ಚೌಕಟ್ಟಿನಲ್ಲಿ ನೋಡಿದಾಗ ಇಂಗ್ಲೀಶ್ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯತ್ಯಾಸವೇನೂ ಉಳಿಯುವುದಿಲ್ಲ. ಎರಡೂ ಪಠ್ಯಪುಸ್ತಕಗಳೂ ಮಕ್ಕಳಿಗೆ ದೂರವಾದ ಪದಗಳಿಂದ ಪರಕೀಯವಾಗಿ ಬಿಡುತ್ತವೆ.

[ಪದಗಳ ಬಳಕೆಯ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನು ಓದಲು ಇಲ್ಲಿಗೆ ಹೋಗಿ ]

ಶಾಲೆಯ ಮಕ್ಕಳೊಂದಿಗೆ ಒಡನಾಡುವ ನಮ್ಮ ತಂಡದ ಕೆಲಸ ಮುಂದುವರೆಯಲಿರುವುದರಿಂದ, ಈ ನಿಟ್ಟಿನಲ್ಲಿ ಇನ್ನಷ್ಟು ಕಲಿಕೆಯಾಗುವುದಂತೂ ನಿಜ. ಹಾಗಾಗಿ ಈ ಬರಹ ಮುಂದೊಮ್ಮೆ ಮತ್ತಷ್ಟು ಹಿಗ್ಗಬಹುದು.

ಕ್ವಾಂಟಮ್ ಕಟ್ಟಳೆಯ ಬೆರಗು, ಬೆಡಗು!

090DB34C-DA88-45AF-9F01B627A5921A0B

ಒಂದು ಗೋಡೆಯ ಈ ಬದಿಯಲ್ಲಿ ನೀವು ಯಾವುದೋ ಕೆಲಸದಲ್ಲಿ ತೊಡಗಿದ್ದೀರಿ. ಇನ್ನೊಂದು ಬದಿಯಲ್ಲಿ ನಿಮ್ಮ ಗೆಳೆಯರು ಕಾಲ್ಚೆಂಡು ಆಡುತ್ತಿದ್ದಾರೆ. ಆ ಚೆಂಡು ಗೋಡೆಗೆ ಬಡಿಯುತ್ತದೆ. ಬಡಿದು ಹಿಂಪುಟಿದು ಅವರ ಕಡೆಗೇ ಸಾಗುತ್ತದೆಯಲ್ಲವೇ? ಒಂದುವೇಳೆ, ಗೋಡೆಯನ್ನು ತೂರಿ (ಗೋಡೆ ಒಡೆಯದೆಯೇ), ಆ ಚೆಂಡು ನಿಮ್ಮ ತಲೆ ಕುಟುಕುವಂತಿದ್ದರೆ?

ಹೀಗೂ ಯೋಚಿಸೋಣ. ಒಂದು ಪೆಟ್ಟಿಗೆಯಲ್ಲಿ ಯಾರೋ ಬೆಕ್ಕನ್ನಿಟ್ಟು ನಿಮಗೆ ಉಡುಗೊರೆಯಾಗಿ ನೀಡುತ್ತಾರೆ. ಆ ಪೆಟ್ಟಿಗೆಯನ್ನು ತೆಗೆದಾಗ ಮುದ್ದಾದ ಬೆಕ್ಕು ಮಿಯವ್ ಎನ್ನುತ್ತದೆ. ಒಂದು ವೇಳೆ ಉಸಿರು ಕಟ್ಟಿದ್ದಿದ್ದರೆ, ಪಾಪ, ನೀವು ನೋಡಿದಾಗ ಸತ್ತು ಹೋಗಿರುತ್ತದೆ. ಆದರೆ, ನೀವು ಆ ಪೆಟ್ಟಿಗೆ ತೆಗೆಯುವ ಮುನ್ನ ಅದು ಬದುಕಿತ್ತೋ, ಸತ್ತಿತ್ತೋ? ಯಾರೋ ಒಬ್ಬ ವಿಜ್ಞಾನಿ ಬಂದು “ಅದು ಬದುಕಿಯೂ ಇತ್ತು, ಸತ್ತೂ ಇತ್ತು” ಎಂದರೆ?

ಇಂತಹ ಬೆರಗನ್ನೂ, ಬೆಡಗನ್ನೂ ಮೂಡಿಸುವ ಭೌತಶಾಸ್ತ್ರದ ಕವಲೇ ಬಿಡಿ ಕಟ್ಟಳೆ (Quantum Theory). ಇದು ಹೊಮ್ಮಿದ ಬರೀ 30 ವರುಷಗಳಲ್ಲಿ, ನಮ್ಮ ಸುತ್ತಣದ ಅರಿವನ್ನೇ ಮೇಲೆಕೆಳಗೆ ಮಾಡಿದ ಕಟ್ಟಳೆ ಇದು. ಬನ್ನಿ, ಆ ಕಟ್ಟಳೆಯ ಕಟ್ಟೆಯೊಳಗೊಮ್ಮೆ ಇಳಿದುಬರೋಣ.

೧೯ನೇ ಶತಮಾನದ ಕೊನೆಯಲ್ಲಿ, ಜಗತ್ತಿನ ಹೆಚ್ಚಿನ ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದರು. ತಿಳಿಯಬೇಕಾದ್ದನ್ನೆಲ್ಲ ಈಗಾಗಲೇ ತಿಳಿಯಲಾಗಿದೆ, ಇನ್ನು ಹೊಸದಾಗಿ ಕಂಡುಹಿಡಿಯುವಂತದ್ದು ಏನೂ ಇಲ್ಲ ಎಂದು! ಅವರ ಪ್ರಕಾರ, ಒಂದು ವಸ್ತುವಿನ, ಈ ಹೊತ್ತಿನ ಇರುವು ಮತ್ತು ವೇಗವನ್ನು ಗೊತ್ತುಪಡಿಸಿದರೆ, ಮುಂದಿನ ಎಲ್ಲ ಹೊತ್ತುಗಳಲ್ಲಿ ಆ ವಸ್ತುವಿನ ಇರುವು ಮತ್ತು ವೇಗವನ್ನು, ಯಾವುದೇ ಗೊಂದಲಕ್ಕೆ ಎಡೆಯಿಲ್ಲದಂತೆ, ಕಂಡುಹಿಡಿಯಬಹುದಾಗಿತ್ತು. ಇದಕ್ಕೆ, ಹಳೆಯ ಇಲ್ಲವೇ ವಾಡಿಕೆಯ ಕದಲರಿಮೆ (Classical Mechanics) ಎಂದು ಕರೆಯಬಹುದು. ಇದರ ಪ್ರಕಾರ, ಜಗತ್ತಿನಲ್ಲಿ ಎಲ್ಲವೂ ನಿಶ್ಚಿತ. ಈ ತಿಳುವಳಿಕೆಯಲ್ಲಿ ತೇಲುತ್ತಿದ್ದ ಭೌತಶಾಸ್ತ್ರಜ್ಞರನ್ನು ಒಮ್ಮೆಲೆ ಬಡಿದೆಬ್ಬಿಸಿದ್ದು ಹಲವು ಪ್ರಯೋಗಗಳು. ಅವುಗಳಲ್ಲಿ ಮುಖ್ಯವಾದವು; ಬೆಳುಕು-ವಿದ್ಯುತ್ ಪರಿಣಾಮ(Photoelectric Effect) ಮತ್ತು ಎಲೆಕ್ಟ್ರಾನ್ ಮೇಲ್ವಾಯುವಿಕೆ (Interference).

ಒಂದು ಲೋಹದ ಪಟ್ಟಿಯ ಮೇಲೆ ಬೆಳಕನ್ನು ಚೆಲ್ಲಿದಾಗ, ಇಲೆಕ್ಟ್ರಾನ್ಸ್ ಹೊರಹೊಮ್ಮುವ ಘಟನೆಗೆ, ಬೆಳುಕು-ವಿದ್ಯುತ್ ಪರಿಣಾಮ ಎಂದು ಕರೆಯುತ್ತಾರೆ. ಬೆಳಕನ್ನು ಅಲೆಯೆಂದು ತಿಳದು, ಈ ಘಟನೆಯನ್ನು ಮುಂಗಂಡರೆ, ಅದು ಕೊಡುತ್ತಿದ್ದ ಉತ್ತರಗಳೇ ಬೇರೆ. ಅರಸಿಕೆಯಲ್ಲಿ ಕಂಡುಬಂದಂತಹ ಫಲಿತಾಂಶಗಳೇ ಬೇರೆ! ಆದರೆ, ಅಲೆಬಾಗುವಿಕೆ (diffraction) ಮತ್ತು ಮೇಲ್ವಾಯುವಿಕೆಗಳೆಂಬ ವಿಚಾರಗಳಲ್ಲಿ ಬೆಳಕನ್ನು ಅಲೆಯೆಂದು ಅಂದುಕೊಳ್ಳದೇ ವಿಧಿಯಿಲ್ಲ. ಇಲ್ಲಿ, ಅಲೆಯೆಂದು ತಿಳಿದರೆ ಫಲಿತಾಂಶ ಸರಿಹೊಂದುವುದಿಲ್ಲ. ಹಾಗಾಗಿ, ಬೆಳಕು ಸಣ್ಣ ಸಣ್ಣ ತುಣುಕುಗಳೂ(particles) ಆಗಿರಬೇಕು ಎಂಬುದನ್ನು ವಿಜ್ಞಾನಿಗಳು ಮನಗಂಡರು. ಆ ತುಣುಕುಗಳು ಬಿಡಿ ಬಿಡಿಯಾಗಿಯೇ (quantum) ಸಾಮರ್ಥ್ಯವನ್ನು ಹೊಂದಿರುತ್ತವೆ.

ಇನ್ನೊಂದೆಡೆ, ಇಲೆಕ್ಟ್ರಾನ್‍ಗಳು ಎರಡು ಕುಳಿಗಳಿರುವ ತೆರೆಯ ಕಡೆಗೆ ಬಿಟ್ಟು, ಆ ತೆರೆಯ ಹಿಂದೆ ಇನ್ನೊಂದು ತೆರೆಯನ್ನಿಟ್ಟು, ಇಲೆಕ್ಟ್ರಾನ್ ಎಲ್ಲಿ ಬಂದು ಬಿದ್ದಿತು ಎಂದು ನೋಡುವ ಪ್ರಯೋಗವನ್ನು ಕೈಗೊಳ್ಳಲಾಯಿತು. ಇದರ ಫಲಿತಾಂಶವೂ ಸೋಜಿಗವನ್ನುಂಟುಮಾಡಿತ್ತು. ಯಾವ ಕುಳಿಯಿಂದ ಹಾದು ಬಂದಿತು ಎಂದು ತಿಳಿಯಲು ಹೋಗದಿದ್ದರೆ, ಇಲೆಕ್ಟ್ರಾನ್ ಒಂದು ಅಲೆಯಂತೆ ನಡೆದುಕೊಳ್ಳುತ್ತಿತ್ತು. ಒಂದುವೇಳೆ, ಯಾವ ಕುಳಿಯಿಂದ ಬಂದಿತೆಂದು ತಿಳಿಯಹೊರಟರೆ, ಅದು ತನ್ನ ಅಲೆಯ ತೊಡಗನ್ನು ಕಳಚಿ, ತುಣುಕಿನ ಅರಿವೆಯನ್ನು ತೊಡುತ್ತಿತ್ತು! ಈ ಪ್ರಯೋಗವನ್ನು ಕೆಳಗಿನ ಓಡುಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.

 

ಪ್ರಯೋಗಗಳನ್ನ ಮಾಡದೆ, ಒಂದು ಎಲೆಕ್ಟ್ರಾನು ಇದೇ ಕುಳಿಯ ಮೂಲಕ ಹೋದೀತು ಎಂದು ಬರಿದೇ ಕಲ್ಪಿಸಿದರೆ, ಕಡ್ಡಾಯವಾಗಿ ನಮ್ಮ ಊಹೆ ಕೆಟ್ಟೀತು! ನಾವು ಗಮನಿಸದೇ ಇದ್ದರೆ, ಹಲವು ಕುಳಿಗಳ ಮೂಲಕ ಒಂದೇ ಎಲೆಕ್ಟ್ರಾನು, ಒಂದೇ ಹೊತ್ತಿನಲ್ಲಿ ಸಾಗುವ ಬೆಡಗನ್ನು ಹೊಂದಿರುವುದು ಕಂಡುಬಂದಿತು. ಆಗ, ವಿಜ್ಞಾನಿಗಳ ತಲೆಯಲ್ಲಿ ಮೂಡಿದ್ದ ಪ್ರಶ್ನೆ ಎಂದರೆ “ಎಲೆಕ್ಟ್ರಾನ್ ಅಲೆಯೋ, ತುಣುಕೋ? ಇಲ್ಲ, ಎರಡೂನೋ? ಇಲ್ಲ, ಬೇರೆಯೇನೋ?” ಈ ಬಗೆಯ ಗೊಂದಲಕ್ಕೆ ಅಲೆ-ತುಣುಕಿನ ಇಬ್ಬಗೆತನ (Wave Particle Duality) ಎಂದು ಕರೆಯುತ್ತಾರೆ.

ಇಂತಹ ಹಲವಾರು ಬೆರಗುಗಳ ಬೆನ್ನು ಹತ್ತಿ ಅರಸಿದಾಗ, ವಿಜ್ಞಾನಿಗಳು ಕಂಡುಕೊಂಡ ದಿಟ, ನಿಜಕ್ಕೂ ನೆಲೆಬಿರಿಯುವಂತದ್ದಾಗಿತ್ತು. ನಾವು ಗಮನಿಸದೇ, ಇಲ್ಲ, ಒರೆದು ನೋಡದೆ, ಯಾವುದೇ ಒಂದು ವಸ್ತು (ಅಣು ಅಳತೆಯ ವಸ್ತುಗಳು), ಅಲೆಯೋ ಇಲ್ಲ, ತುಣುಕೋ ಎಂದು ಹೇಳಲು ಬರುವುದಿಲ್ಲ. ಮೊದಲನೆಯದಾಗಿ, ಅಲೆ ಮತ್ತು ತುಣುಕು ಎಂಬ ಬೇರ್ಮೆಗಳೇ ನಿರ್ದಿಷ್ಟವಾಗಿ ನಮ್ಮ ಜಗತ್ತಿನಲ್ಲಿ ಇಲ್ಲ! ಈ ಬೇರ್ಮೆಗಳು, ನಮ್ಮ ಹೊರಗಣ್ಣಿಗೆ, ಮನಸ್ಸಿಗೆ ಕಾಣುವ ಹುಸಿ ರೂಪಗಳಷ್ಟೆ.

ನಾವು, ಅಣು ಅಳತೆಯ ಕಣಗಳ ಕುರಿತು ಮಾತನಾಡುವಾಗ, ಅವು ಒಂದು ನಿರ್ದಿಷ್ಟ ಎಡೆಯಲ್ಲಿ ದೊರಕುವ ಇಲ್ಲ, ನಿರ್ದಿಷ್ಟ ಬಿರುಸಿನಲ್ಲಿ ಸಾಗುವ ಆಗುವಳೆಯನ್ನಷ್ಟೇ (probability) ಹೇಳಬಹುದು. ಒಂದು ಎಡೆಯಲ್ಲಿ ಎಲೆಕ್ಟ್ರಾನಿನ ಇರುವಿನ ಆಗುವಳೆಯು ಹೆಚ್ಚಿದ್ದರೆ, ಅಲ್ಲಿ ಆ ಎಲೆಕ್ಟಾನ್ ಹೆಚ್ಚಿನ ಸಲ ಕಂಡುಬರುವುದು ಎಂದಷ್ಟೇ ಹೇಳಬಹುದೇ ಹೊರತು, ಯಾವತ್ತಿಗೂ ಅಲ್ಲೇ ಕಂಡುಬರುತ್ತದೆ ಎಂದು ಹೇಳಬರುವುದಿಲ್ಲ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಈ ಜಗತ್ತು ಅನಿಶ್ಚಿತತೆಯಿಂದ ಕೂಡಿದೆ.

ಹಾಗಾದರೆ, ಈ ಕಣಗಳು ಒಳಪಡುವ ಕಟ್ಟಳೆಗಳು ಯಾವುವು? ಎಂದು ಅರಸಹೊರಟರೆ, ನಮಗೆ ಸಿಗುವುದು ಅಲೆಯ ಎಣಿನಂಟು (Wave Function). ಈ ಎಣಿನಂಟು, ಒಂದು ವಸ್ತುವಿನ ಸ್ಥಿತಿಯ ಮಾಹಿತಿಯನ್ನು ಹೊಂದಿರುತ್ತದೆ. ಹಾಗೆಯೇ ಈ ಗಣಿತದ ನಂಟು, ಆ ಸ್ತಿತಿಯ ಎಲ್ಲಾ ಸಾಧ್ಯತೆಗಳನ್ನು ತನ್ನ ಒಡಲೊಳಗೆ, ನೇರಣಿಗೆಯಲ್ಲಿ(Linear superposition) ಅವಿತಿಟ್ಟುಕೊಂಡಿರುತ್ತದೆ. ಆ ವಸ್ತುವನ್ನು ಗಮನಿಸಿದಾಗ, ಯಾವುದೋ ಒಂದು ಸಾಧ್ಯತೆಯಷ್ಟೇ ಉಳಿದು, ಮಿಕ್ಕೆಲ್ಲಾ ಸಾಧ್ಯತೆಗಳು ಕುಸಿಯುತ್ತವೆ. ಯಾವ ಸಾಧ್ಯತೆ ಉಳಿಯುತ್ತದೆ ಎಂಬುದು, ಅದರ ಆಗುವಳೆಯ ಮೇಲೆ ನಿಂತಿದೆ.

ಉದಾಹರಣೆಗೆ, ತುಂಬ ಸರಳಗೊಳಿಸಿ ಹೇಳುವುದಾದರೆ, ಒಂದು ನಾಣ್ಯವನ್ನು ಮೆಲಕ್ಕೆ ಹಾರಿಸಿದಾಗ, ಅದರ “ತಲೆಯೋ, ಬಾಲವೋ” ಎಂಬ ಸ್ಥಿತಿಗಳೆರಡರ ಬೆರಕೆಯಾಗಿದೆ. |ತ>ಅನ್ನು “ತಲೆ”ಗೂ, |ಬ>ಅನ್ನು “ಬಾಲ”ಕ್ಕೂ ಗುರುತಿಸಿದರೆ, ಆ ಸ್ಥಿತಿಯು, a|ತ> + b|ಬ> ಆಗಿದೆ. ಇಲ್ಲಿ, a ಮತ್ತು b ಗಳು ಸ್ಥಿರಾಂಕಗಳು (constants). ಅಂದರೆ, ನಾಣ್ಯವು ನೆಲಕ್ಕೆ ಬೀಳುವವರೆಗೂ, ಅದರ ಸ್ಥಿತಿಯು ತಲೆಯೂ ಹೌದು, ಬಾಲವೂ ಹೌದು. ಆ ಎರಡೂ ಸ್ಥಿತಿಗಳ ಬೆರಕೆಯಲ್ಲಿ ಇರುತ್ತದೆ. ಆದರೆ, ಕೊನೆಯಲ್ಲಿ ಆ ನಾಣ್ಯವು ನೆಲಕ್ಕೆ ಬಿದ್ದಾಗ, ಯಾವುದಾದರೂ ಒಂದು ಸ್ಥಿತಿ ಉಳಿದು, ಮಿಕ್ಕವು ಕುಸಿದುಹೋಗುತ್ತವೆ (“ತಲೆ” ಉಳಿದರೆ“ಬಾಲ” ಅಳಿದುಹೋಗುತ್ತದೆ).

ಇದೇ ತಿಳುವಳಿಕೆಯನ್ನು ಬೆಳಕಿಗೆ ಚಾಚಿದರೆ, ನಮಗೆ ಆ ಬೆಳಕು-ವಿದ್ಯುತ್ ಪರಿಣಾಮದ ಒಳತಿರುಳು ಗೊತ್ತಾಗುತ್ತದೆ. ಬೆಳಕು, ಆ ಲೋಹದೊಳಗಣ ಇಲೆಕ್ಟ್ರಾನ್ ಜೊತೆ ಸಂಪರ್ಕವನ್ನು ಏರ್ಪಡಿಸುವಾಗ, ಎಣಿನಂಟಿನ ಹಲವು ಸಾಧ್ಯತೆಗಳು ಕುಸಿದು, ಯಾವುದೋ ಒಂದು ಸಾಧ್ಯತೆ ಉಳಿದುಕೊಳ್ಳುತ್ತದೆ. ಹಾಗಾಗಿ, ಬೆಳಕನ್ನು “ತುಣುಕು” ಎಂದು ಪರಿಗಣಿಸಬೇಕು. ಆದರೆ, ಅದು ಹಲವು ಕುಳಿಗಳ ಮೂಲಕ ಸಾಗುವಾಗಲೋ, ಇಲ್ಲ, ಒಂದು ಕಿರುವಸ್ತುವಿನ ಸುತ್ತ ಬಾಗುವಾಗಲೋ, ಎಲ್ಲ ಬಗೆಯ ಸಾಧ್ಯತೆಗಳನ್ನು ನಾವು ಪರಿಗಣಿಸಿ, ಬೆಳಕನ್ನು “ಅಲೆ”ಯೆಂದು ಗುರುತಿಸಬೇಕು. ಇದೇ ತೆರನಾದ ವಾದವನ್ನು ಎಲೆಕ್ಟ್ರಾನ್‍ಗಳಿಗೂ ಇಲ್ಲವೇ ಯಾವುದೇ ಕಣಕ್ಕೂ ಹೂಡಬೇಕು!

ಈಗ ಈ ಅರಿವನ್ನು, ನಮ್ಮ ಪೆಟ್ಟಿಗೆಯೊಳಗಿನ ಬೆಕ್ಕಿನ ಮೇಲೆ ಪ್ರಯೋಗ ಮಾಡೋಣ. ಈ ಪ್ರಯೋಗಕ್ಕೆ ಶ್ರೋಡಿಂಜರನ ಬೆಕ್ಕು (Schrodinger’s Cat) ಇಲ್ಲವೇ “ಶ್ರೋಡಿಂಜರನ ಯೋಚನೆಯ ಪ್ರಯೋಗ” (Schrodinger’s thought experiment) ಎಂಬ ಹೆಸರಿದೆ. ಅವನೇ ಈ ಪ್ರಯೋಗದ ಹೊಳಹನ್ನು ಮೊದಲು ಐನಸ್ಟೀನ್‍ಗೆ ತಿಳಿಸಿದ್ದು. ಅದರಂತೆ, ಆ ಪೆಟ್ಟಿಗೆಯೊಳಗೆ, ಒಂದಿಷ್ಟು ಸೂಸುವಿಕೆಗೆ (radioactive) ಒಳಪಡುವ ಅಣುಗಳನ್ನು ಇರಿಸಬೇಕು. ಅವುಗಳ ರಚನೆ ಹೇಗಿರಬೇಕೆಂದರೆ, ಒಂದು ವೇಳೆ ಸೂಸುವಿಕೆ ಮೂಡಿದಲ್ಲಿ, ಮಗ್ಗುಲಲ್ಲಿರುವ ಒಂದು ಕೊಡಲಿ “ಹೈಡ್ರೋಸಯಾನಿಕ್ ಆಸಿಡ್” ಅನ್ನು ತುಂಬಿರುವ ಒಂದು ಶೀಶದ ಮೇಲೆ ಬೀಳಬೇಕು ಮತ್ತು, ಅದು ಒಡೆದಾಗ ಹೊರಸೂಸುವ ವಾಸನೆಯಿಂದ ಬೆಕ್ಕು ಸಾಯಬೇಕು.

Schrodingers_cat_svg

ಈಗ, ನಮ್ಮ ಗಮನದಲ್ಲಿರಬೇಕಾದದ್ದು ಏನೆಂದರೆ, ಸೂಸುವಿಕೆ “ಕ್ವಾಂಟಮ್” ಕಟ್ಟಳೆಗೆ ಒಳಪಡುತ್ತದೆ. ಅಂದರೆ, ನಾವು ಪೆಟ್ಟಿಗೆ ತೆಗೆದು ಗಮನಿಸುವವರೆಗೂ, ಅದು ಒಂದೇ ಹೊತ್ತಿನಲ್ಲಿ “ಸೂಸುವ” ಮತ್ತು “ಸೂಸದ” ಸ್ಥಿತಿಗಳಲ್ಲಿ “ಬೆರೆತು” ಇರಬೇಕು. ನಾವು ನೋಡಿದಾಗಷ್ಟೇ, ಒಂದು ಸ್ಥಿತಿ ಉಳಿದು, ಮಿಕ್ಕದ್ದು ಅಳಿಯುತ್ತದೆ. ಈಗ ಇಲ್ಲಿದೆಮಜಾ! ಬೆಕ್ಕಿನ “ಬದುಕು” ಮತ್ತು “ಸಾವು” ಎಂಬ ಪಾಡುಗಳು ಈ “ಸೂಸುವ” ಮತ್ತು “ಸೂಸದ” ಪಾಡುಗಳ ಮೇಲೆ ನಿಂತಿವೆ! ಹಾಗಾಗಿ, ನಾವು ಪೆಟ್ಟಿಗೆಯನ್ನು ತೆರೆದು ನೋಡದವರೆಗೂ, ಬೆಕ್ಕು “ಬದುಕು” ಮತ್ತು “ಸಾವು” ಎಂಬುದರ ಕಲಬೆರಕೆಯ ಸ್ಥಿತಿಯಲ್ಲಿ ಇರುತ್ತದೆ! ನಾವು ತೆರೆದು ನೋಡಿದಾಗಲೇ, ಒಂದು ಸ್ಥಿತಿ ಉಳಿದು, ಮಿಕ್ಕದ್ದು ಅಳಿಯುತ್ತದೆ! (ಈ ಬಗೆಯ ಹುರುಳಿಕೆಗೆ “ಕೋಪನ್ಹೇಗನ್ ಹುರುಳಿಕೆ” (Copenhagen Interpretation) ಎಂಬ ಹೆಸರಿದೆ).

ಬಿಡಿ ಕಟ್ಟಳೆಯ ಅರಿವು, ನಮ್ಮ ಜಗತ್ತನ್ನು ನೋಡುವ ಮತ್ತು ಅರ್ಥೈಸುವ ನಿಟ್ಟಿನಲ್ಲಿ ಹೊಸ ಕಣ್ಣನ್ನೇ ಒದಗಿಸಿದೆ. ಅದರ ಬಳಕೆಯಿಂದ ಲೇಸರ್, ಸೂಪರ್ ಕಂಡಕ್ಟರ್, ಕ್ವಾಂಟಮ್ ಕಂಪ್ಯೂಟರ್ ನಂತಹ, ಮನುಜನ ಬೆಳವಣಿಗೆಯ ಗತಿಯನ್ನೇ ಮಾರ್ಪಡಿಸುವ ತಂತ್ರಜ್ಞಾನಗಳು ಹುಟ್ಟಿಕೊಂಡಿವೆ, ಹುಟ್ಟುಕೊಳ್ಳುವವೂ ಕೂಡ.

ಬಿಡಿಕಟ್ಟಳೆಯ ವಿಸ್ಮಯ ಹೇಳುತ್ತಾ ಹೊರಟರೆ ಮುಗಿಯತೀರದು. ಜಗತ್ತಿನ ಗುಟ್ಟನ್ನು ರಟ್ಟುಮಾಡುವಲ್ಲಿ ಮೂಡಿರುವ ಎಲ್ಲಾ ಥಿಯರಿಗಳ ಬೆನ್ನೆಲುಬು ಬಿಡಿ ಕಟ್ಟಳೆ. ತಾನೇ ಕಟ್ಟಲು ನೆರವಾಗಿದ್ದ ಈ ಕಟ್ಟಳೆಯನ್ನು, “ದೇವರು ಜೂಜಾಡುವುದಿಲ್ಲ” ಎನ್ನುತ್ತಾ, ಅಲ್ಲಗಳೆದಿದ್ದ ಐನಸ್ಟೀನ್ ಆದರೆ, ದೇವರು ಬರೀ ಜೂಜಾಡುತ್ತಿಲ್ಲ, ತಾನೇ ಆ ಜೂಜಿನಲ್ಲಿ ಸಿಲುಕಿ, ಹೊರಬರಲಾರದೆ ಒದ್ದಾಡುತ್ತಿದ್ದಾನೆ. ಅವನ ಇರುವು “ಕ್ವಾಂಟಮ್” ಕಟ್ಟಳೆಯೊಳಗೆ ಸೆರೆಯಾಗಿದೆ!

(ಚಿತ್ರಸೆಲೆಗಳು: ವಿಕಿಪೀಡಿಯಾ, www.scientificamerican.com)

 

(ಅರಿಮೆ ತಂಡ ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆಯೊಂದಿಗೆ ಒಡಗೂಡಿ ಕನ್ನಡದಲ್ಲಿ ತಿಂಗಳಿಗೊಮ್ಮೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾತುಕತೆ್ಯನ್ನು ಏರ್ಪಡಿಸುತ್ತಿದೆ. ಇಂತಹ ಮಾತುಕತೆಯೊಂದರ ಬರಹ ರೂಪವಿದು)

 

ಹುದುಗುವಿಕೆಯ ಚಳಕ ಮತ್ತು ಅದರ ಬಳಕೆ

ನಮ್ಮ ನಮ್ಮ ಮನೆಗಳಲ್ಲಿ ಅಮ್ಮ ಮಾಡುವ ರುಚಿಯಾದ ಇಡ್ಲಿ ಅಥವಾ ದೋಸೆ ತಿನ್ನುತ್ತಾ ತಿಂಡಿಗಳು ಹೇಗೆ ಇಷ್ಟು ರುಚಿಯಾಗಿ, ಮೆದುವಾಗಿವೆ ಎಂದು ಯೋಚಿಸಿದ್ದೀರಾ? ಹಾಲು ಹೇಗೆ ತನ್ನಷ್ಟಕ್ಕೆ ತಾನೇ ಮೊಸರಾಗುತ್ತದೆ? ಹಾಗೆ ಅಜ್ಜಿ ಮಾಡಿಟ್ಟ ಉಪ್ಪಿನಕಾಯಿ ಹೇಗೆ ತಿಂಗಳುಗಟ್ಟಲೆ ಕೆಡದೆ ಅದರ ವಿಶಿಷ್ಟ ರುಚಿ ಉಳಿಯತ್ತೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇವುಗಳ ಹಿಂದಿರುವ ಚಳಕವೇ ಹುದುಗುವಿಕೆ ಅಥವಾ ಹುಳಿಯುವಿಕೆ (Fermentation). ಇದನ್ನು ಮನುಷ್ಯರು ನೂರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇಂದಿಗೂ ದಿನನಿತ್ಯದ ಬದುಕಿನಲ್ಲೂ ಇದರ ಬಳಕೆ ಬಹಳ ಸಾಮಾನ್ಯ.

 ಏನಿದು ಹುದುಗುವಿಕೆ ?

ಫಂಗೈ ಹಾಗು ಬ್ಯಾಕ್ಟೀರಿಯಾದಂತಹ ಕಿರುಜೀವಿಗಳು ನಮ್ಮ ಆಹಾರವನ್ನು ಗಾಳಿಯ ಆಮ್ಲಜನಕ ಇರುವೆಡೆ ಇಲ್ಲವೇ ಗಾಳಿಯಿಲ್ಲದೆಡೆ, ಸಕ್ಕರೆಯ ಅಂಶ (ಗ್ಲುಕೋಸ್) ಸೇವಿಸಿ ಬೇರೆ ಪದಾರ್ಥಗಳನ್ನು ತಯಾರಿಸುವ ಬಗೆಯೇ ಹುದುಗುವಿಕೆಗೆ ಕಾರಣ. ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯ ಕೊರತೆ ಇರುವುದಿಲ್ಲ, ಬಗೆಯ ಸೇವನೆಯನ್ನು ಏರೋಬಿಕ್ ಮೆಟಾಬೋಲಿಸಮ್ (Aerobic metabolism) ಎನ್ನುತ್ತಾರೆ. ಆಮ್ಲಜನಕದ ಕೊರತೆಯಿದ್ದಾಗ ಕಿರುಜೀವಿಗಳ ಸೇವನೆಯ ಬಗೆ ಬೇರೆಯಾಗಿರುತ್ತದೆ, ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ (Anaerobic Metabolism) ಎನ್ನುತ್ತಾರೆ. ಹೀಗೆ ಎರಡೂ ಬಗೆಯಲ್ಲಿ ಸೇವಿಸುವ ಜೊತೆಗೆ ಅವು ಆಲ್ಕೋಹಾಲ್ ಅಥವಾ ಇನ್ನಿತರ ರಾಸಾಯನಿಕ ಪದಾರ್ಥವನ್ನು ತಯಾರಿಸುತ್ತವೆ. ಫಂಗೈ ಹಾಗು ಬ್ಯಾಕ್ಟೀರಿಯಾಗಳ ಗುಣವನ್ನು ಜನರು ತಮ್ಮ ಅನುಕೂಲಕ್ಕೆ ಬಳಸುವ ಚಳಕವೇ ಹುದುಗುವಿಕೆ.

 36383574_1760910227333441_1638605155286908928_n

ಹುದುಗುವಿಕೆ ಚಳಕದ ಬಳಕೆ: 

ಸಾಮಾನ್ಯವಾಗಿ ಅಡುಗೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗೈನ ಕೆಲಸ ಇರುವುದಿಲ್ಲ, ಆದರೆ ಹುದುಗಿದ ತಿನಿಸು ಹಾಗು ಅಡಿಗೆಯಲ್ಲಿ ಬ್ಯಾಕ್ಟೀರಿಯಾ ಹಾಗು ಫಂಗೈನ ಕೆಲಸದಿಂದ ಅಡುಗೆಯ ರುಚಿ, ಪೌಷ್ಟಿಕತೆ, ಗುಣಗಳನ್ನು ಹೆಚ್ಚಿಸುತ್ತವೆ, ಕಾರಣಕ್ಕೆ ಹುದುಗಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇಡ್ಲಿ, ದೋಸೆ, ಉಪ್ಪಿನಕಾಯಿ ಇವುಗಳ ರುಚಿ ಹೆಚ್ಚುವುದು ಹುದುಗುವಿಕೆಯಿಂದಲೇ. ಇಡ್ಲಿ ಹಾಗು ದೋಸೆ ಮಾಡವ ಹಿಂದಿನ ದಿನ ಹಿಟ್ಟನ್ನು ನೆನಸಿಟ್ಟಾಗ ಕಿರುಜೀವಿಗಳು ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ ಮೂಲಕ ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುತ್ತದೆ ಹಾಗೆಯೆ ಹಿಟ್ಟು ಮೆದುವಾಗುತ್ತದೆ.

ಉಪ್ಪಿನಕಾಯಿ ಮಾಡುವಾಗ ಕಾಯಿಯ ತುಂಡುಗಳನ್ನು ಉಪ್ಪಿನಲ್ಲಿ ಕಲಸಿ ಗಾಳಿಯಾಡದಂತೆ ಮುಚ್ಚಿಟ್ಟಾಗ ಕಾಯಿಯ ಸಿಪ್ಪೆಯಲ್ಲಿದ್ದ ಲ್ಯಾಕ್ಟೊಬಸಿಲ್ಲುಸ್ (Lactobacillus) ಎಂಬ ಬ್ಯಾಕ್ಟೀರಿಯಾ ಕಾಯಿಯನ್ನು ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುವುದರ ಪರಿಣಾಮ ಉಪ್ಪಿನಕಾಯಿಗೆ ತನ್ನದೇ ಆದ ರುಚಿ ಒದಗುತ್ತದೆ, ಅಲ್ಲದೇ ಉಪ್ಪಿನೊಂದಿಗೆ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ಅದು ಕೆಡದೆ ಬಹಳ ಕಾಲ ಇರುತ್ತದೆ. ಇದೇ ಬ್ಯಾಕ್ಟೀರಿಯಾದ ಇಂತಹದೇ ಕೈಚಳಕದಿಂದ ಹಾಲು ಮೊಸರಾಗುವುದು ಕೂಡ. ಅಲ್ಲದೆ ಎಲ್ಲಾ ತರಹದ ಹೆಂಡಗಳು (ರಮ್, ವೈನ್, ವಿಸ್ಕಿ, ಇತ್ಯಾದಿ) ಎಲ್ಲವೂ ತಯಾರಾಗುವುದು ಹುದುಗುವಿಕೆಯಿಂದಲೇ. ಬ್ಯಾಕ್ಟೀರಿಯಾಗಳು ಹಣ್ಣು ಹಾಗು ತರಕಾರಿಗಳ ರಸವನ್ನು ಗಾಳಿಯಿಲ್ಲದ ಸಂದರ್ಭದಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತದೆ. ಬಗೆ ಬಗೆಯ ಹಣ್ಣು ಹಾಗು ತರಕಾರಿಗಳನ್ನು ಬಳಸಿ ಬಗೆ ಬಗೆಯ ಹೆಂಡಗಳನ್ನು ತಯಾರಿಸುತ್ತಾರೆ.

 ಹುದುಗುವಿಕೆಯ ಇತಿಹಾಸ:

ಯಾವಾಗ ಜನರು ಹಾಲನ್ನು ಮೊಸರು ಮಾಡುವುದನ್ನು ಕಲಿತರೋ, ಇಡ್ಲಿ, ದೋಸೆ, ಉಪ್ಪಿನಕಾಯಿ ಮಾಡಲು ಶುರುಮಾಡಿದರೋ, ಹೆಂಡ ತಯಾರಿಸಲು ಕಲಿತುಕೊಂಡರೋ ಅಂದೇ ಹುದುಗುವಿಕೆಯ ಬಳಕೆ ಶುರುವಾಯಿತು. ಸರಿ ಸುಮಾರು 6000 B.C.E ಯಲ್ಲಿ ಚೀನಾದ ಒಂದು ಪ್ರಾಂತ್ಯದಲ್ಲಿ ಒಂದು ಬಗೆಯ ಮದ್ಯ ತಯಾರಿಸಿದ ಪುರಾವೆ ಸಿಕ್ಕಿದೆ. ಹೀಗೆ ಬಗೆ ಬಗೆಯ ಹುದುಗಿದ ತಿನಿಸುಗಳನ್ನು ಸಾವಿರಾರು ವರುಷಗಳಿಂದ ತಯಾರಿಸಿದ ಪುರಾವೆಗಳು ಬಹಳಷ್ಟು ಇವೆ. ಆದರೆ ಇದರ ವೈಜ್ಞಾನಿಕ ಹಿನ್ನಲೆ ಯಾರು ಅರಿತಿರಲಿಲ್ಲ.

ಹುದುಗುವಿಕೆ ಹಿಂದಿನ ವಿಜ್ಞಾನವನ್ನು ಮೊದಲು ಅರಕೆ ಮಾಡಿದ್ದು ಫ್ರಾನ್ಸ್ ಮೂಲದ ಹೆಸರಾಂತ ವಿಜ್ಞಾನಿ ಲೂಯಿಸ್ ಪಾಶ್ಚರ್ (Louis Pasteur). ಸುಮಾರು 18ನೇ ಶತಮಾನದಲ್ಲಿ ಹಲವಾರು ವಿಜ್ಞಾನಿಗಳು ಹುದುಗುವಿಕೆ ಒಂದು ರಾಸಾಯನಿಕ ಕ್ರಿಯೆ ಎಂದು ಭಾವಿಸಿದ್ದರು, ಆದರೆ 1856ರಲ್ಲಿ ಪಾಶ್ಚರ್ ಅವರನ್ನು ಅವರ ಶಿಷ್ಯರ ತಂದೆಯೊಬ್ಬರು ತಮ್ಮ ವೈನ್ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಸೂಚಿಸಲು ಕೇಳಿಕೊಂಡರು. ಅವರ ತೊಂದರೆ ಏನೆಂದರೆ, ಇವರು ಸರಿ ತಿಳಿದ ದಾರಿಯಲ್ಲಿ ತಯಾರು ಮಾಡುತ್ತಿದ್ದ ವೈನ್ ರುಚಿ ಹಾಳಾಗುತ್ತಿತ್ತು. ಆಗ ತೊಂದರೆಯಿಂದ ಕುತೂಹಲಗೊಂಡ ಪಾಶ್ಚರ್ ಅವರು ವೈನ್ ಮಾಡುವ ಬಗೆಯ ಬಗ್ಗೆ ತನಿಕೆ ಮಾಡಿದಾಗ ಹೊಸ ವಿಷಯವೊಂದು ಇವರ ಗಮನಕ್ಕೆ ಬಂತು

ಹಣ್ಣಿನ ರಸವನ್ನು ವೈನ್ ಮಾಡಲು ಯೀಸ್ಟ್ ಅನ್ನು ಬಳಸುತ್ತಿದ್ದರು, ಇದು ಹಣ್ಣಿನ ಸಕ್ಕರೆ ಅಂಶವನ್ನು ಗಾಳಿಯಿಲ್ಲದ ಏರ್ಪಾಡಿನಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತಿತ್ತು, ಇದೆ ವೈನ್ ಆಗುವ ಬಗೆ ಎಂದು ತಿಳಿಯಿತು. ವೈನ್ ಕೆಡುವುದಕ್ಕೆ ಕಾರಣವು ಮತ್ತೊಂದು ಬಗೆಯ ಯೀಸ್ಟ್ ಎಂಬುದು ತಿಳಿಯಿತು. ಯೀಸ್ಟ್, ಫಂಗೈ ಇವುಗಳು ಕಿರುಜೀವಿಗಳ ಬಗೆಗಳಾಗಿವೆ, ಇವುಗಳಲ್ಲಿ ಬಗೆ ಬಗೆಯ ಜಾತಿಗಳಿರುತ್ತವೆ. ಹೇಗೆ ಒಂದು ಜಾತಿಯ ಯೀಸ್ಟ್ ಸಕ್ಕರೆ ಅಂಶವನ್ನು ಆಲ್ಕೋಹಾಲ್ ಬದಲಿಗೆ ಲ್ಯಾಕ್ಟಿಕ್ ಆಸಿಡ್ ಆಗಿ ಬದಲಿಸುತ್ತಿತ್ತು. ಹೆಚ್ಚಿನ ಅರಕೆ ನಡೆಸಿದಾಗ ವೈನ್ ತಯಾರಿಸಲು ಬಳಸುತ್ತಿದ್ದ ಯೀಸ್ಟ್ ಮಿಶ್ರಣದಲ್ಲಿ, ಬೇರೊಂದು ಜಾತಿಯ ಯೀಸ್ಟ್ ಸೇರಿಕೊಂಡಿದ್ದು ತಿಳಿಯಿತು. ವೈನ್‍ನ ರುಚಿ ಕೆಡಲು ಇದೇ ಕಾರಣ!.

36343675_1760912287333235_2991375452431450112_n

(ಹುದುಗುವಿಕೆಯ ಸಂಶೋಧನೆಯಲ್ಲಿ ಲೂಯಿಸ್ ಪಾಶ್ಚರ್)

ತನಿಕೆಯಿಂದ ಹುದುಗುವಿಕೆಯ ಕ್ರಿಯೆ ಕಿರುಜೀವಿಗಳ ಕೈಚಳಕ ಎಂದು ಸಾಬೀತಾಯಿತು. ಅಲ್ಲದೆ, ಬಗೆ ಬಗೆಯ ಬ್ಯಾಕ್ಟೀರಿಯಾಗಳು ಹಾಗು ಫಂಗೈಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಹಾರ ಸೇವಿಸಿ ಆಲ್ಕೋಹಾಲ್ ಅಥವಾ ಆಸಿಡ್‍ಗಳನ್ನು ತಯಾರಿಸುತ್ತದೆ ಎಂದು ತಿಳಿಯಿತು. ಪಾಶ್ಚರ್ ಅವರ ತನಿಕೆಯಿಂದ ಅವರಿಗೆ ಹುದುಗುವಿಕೆ ಚಳಕದ ತಂದೆ (Father of Fermentation Technology) ಎಂಬ ಪಟ್ಟ ಸಿಕ್ಕಿತು.

ಪಾಶ್ಚರ್ ಅವರ ಹೊಸ ಹುಡುಕಿನಿಂದ ಜನ ಕಿರುಜೀವಿಗಳನ್ನು ನೋಡುವ ಬಗೆಯೇ ಬದಲಾಯಿತು. ಬ್ಯಾಕ್ಟೀರಿಯಾ ಹಾಗು ಫಂಗೈ ಬರೀ ಮನುಷ್ಯರಿಗೆ ಹಾನಿ ಮಾಡುತ್ತದೆ, ಇವುಗಳಿಂದ ಯಾವುದೇ ಒಳಿತಿಲ್ಲ ಎಂಬ ನಂಬಿಕೆಗೆ ಬದಲಾಗಿ ಇವುಗಳು ನಮಗೆ ತಿಳಿಯದೆ ನಮಗೆ ಸಾವಿರಾರು ವರುಷಗಳಿಂದ ನಮಗೆ ಏನೆಲ್ಲಾ ಉಪಕಾರ ಮಾಡಿವೆ ಎಂಬ ಮನಸ್ಥಿತಿ ಹುಟ್ಟಿತು. ಪಾಶ್ಚರ್ ಅವರ ಸಂಶೋಧನೆಯ ನಂತರ ಹುದುಗುವಿಕೆಯ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿತು

1897 ರಲ್ಲಿ ಎಡ್ವರ್ಡ್ ಬುಕ್ನೆರ್, ಜರ್ಮನಿಯ ವಿಜ್ಞಾನಿಯೊಬ್ಬರು ಕಿರುಜೀವಿಗಳು ಬದುಕಿಲ್ಲದಿದ್ದರೂ ಅವುಗಳಿಂದ ತೆಗೆದ ರಸದಿಂದಲೇ ಹುದುಗುವಿಕೆಯಾಗುತ್ತದೆ ಎಂದು ತೋರಿಸಿದರು. ಸತ್ತ ಯೀಸ್ಟ್ ಇಂದ ತೆಗೆದ ರಸದಿಂದ ಸಕ್ಕರೆ ಆಲ್ಕೋಹಾಲ್ ಆಗಿ ಬದಲಾಗಿದ್ದನ್ನು ಗಮನಿಸಿ ತನಿಕೆ ಮಾಡಿದಾಗ ಯೀಸ್ಟ್ ತಯಾರಿಸಿದ ಕಿಣ್ವವೊಂದು(Enzymes) ಕೆಲಸ ಮಾಡುತಿದ್ದನ್ನು ಕಂಡುಹಿಡಿದರು. ಅದಕ್ಕೆ ಜೈಮೇಸ್ಎಂದು ಹೆಸರಿಟ್ಟರು. ಇದರಿಂದ, ಹುದುಗುವಿಕೆ ಬ್ಯಾಕ್ಟೀರಿಯಾ ಹಾಗು ಫಂಗೈಗಳು ತಯಾರಿಸುವ ಕಿಣ್ವಗಳಿಂದ ಹುದುಗುವಿಕೆಯಾಗುತ್ತದೆ ಎಂದು ಸಾಬೀತಾಯಿತು. ಇದನ್ನು ಕಂಡುಹಿಡಿದಿದ್ದಕ್ಕೆ ಎಡ್ವರ್ಡ್ ಬುಕ್ನೆರ್ ಅವರಿಗೆ 1907 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು.

20ನೇ ಶತಮಾನದ ಶುರುವಿನೊಂದಿಗೆ ಹುದುಗುವಿಕೆಯ ಚಳಕ ಬೆಳೆಯತೊಡಗಿತು. ಪಾಶ್ಚರ್ ಅವರು ಕಿರುಜೀವಿಗಳು ಹೇಗೆ ಹುದುಗುವಿಕೆ ಮಾಡುತ್ತದೆ ಎಂದು ತೋರಿಸಿಕೊಟ್ಟಿದ್ದರು. ಹಾಗೆ 19ನೇ ಶತಮಾನದಲ್ಲಿ ಶುರುವಾಗಿದ್ದ ಕಿಣ್ವಗಳ ಕುತೂಹಲಕ್ಕೆ ಎಡ್ವರ್ಡ್ ಬುಕ್ನೆರ್ ಅವರು ಕಂಡುಹಿಡಿದ ಹುದುಗುವಿಕೆಯಲ್ಲಿ ಕಿಣ್ವಗಳ ಪಾತ್ರದ ವಿಚಾರ ಚಳಕಕ್ಕೆ ನಾಂದಿ ಹಾಡಿತು. ಅಲ್ಲದೆ, 1930ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಪೆನಿಸಿಲಿಯಮ್ ಎಂಬ ಫಂಗೈಯಿಂದ ಮೊಟ್ಟಮೊದಲ ಆಂಟಿಬಯೋಟಿಕ್ (Anti-biotic), ಪೆನಿಸಿಲಿನ್ ಅನ್ನು ತಯಾರಿಸಬಹುದು ಎಂದು ಕಂಡುಕೊಟ್ಟರು, ಇದೇ ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯ ಚಳಕದಿಂದ ತಯಾರಿಸಬಹುದು ಎಂಬ ಸುದ್ದಿ ಉದ್ಯಮಿಗಳ ಹುಬ್ಬೇರಿಸಿತು. ಹೀಗೆ 20ನೇ ಶತಮಾನದುದ್ದಕ್ಕೂ ವಿಜ್ಞಾನಿಗಳು, ಉದ್ಯಮಿಗಳು ಹುದುಗುವಿಕೆಯ ಚಳಕದಿಂದ ಕಿರುಜೀವಿಗಳಿಂದ ಏನೆಲ್ಲಾ ತಯಾರಿಸಬಹುದೆಂದು ತಿಳಿಯುತ್ತಾಹೋದಂತೆ ಪ್ರಪಂಚದ ಗಮನ ಹುದುಗುವಿಕೆಯ ಚಳಕದ ಮೇಲೆ ಹೆಚ್ಚಾಯಿತು!

ಪ್ರಪಂಚವನ್ನಾಳುತ್ತಿರುವ ಹುದುಗುವಿಕೆಯ ಚಳಕ:

ಇಂದು ಹುದುಗುವಿಕೆಯ ಚಳಕವೆಂದರೆ ಕಿರುಜೀವಿಗಳನ್ನು ಬಳಸಿ ಯಾವುದೋ ಒಂದು ಉಪಯುಕ್ತ ಪದಾರ್ಥವನ್ನು ತಯಾರಿಸುವ ಅಥವಾ ಒಂದು ಪದಾರ್ಥವನ್ನು ಕಿರುಜೀವಿಗಳ ಸಹಾಯದಿಂದ ಮತ್ತೊಂದು ಉಪಯುಕ್ತ ಪದಾರ್ಥವಾಗಿ ಮಾರ್ಪಾಟು ಮಾಡುವ ಚಳಕವಾಗಿ ಬೆಳೆದಿದೆ.

36343658_1760910237333440_4097575942015156224_n (1)

ಪಾಶ್ಚರ್ ಅವರು ಹುದುಗುವಿಕೆಯನ್ನು ಕಂಡುಹಿಡಿದ ನಂತರ, ವರುಷಗಳು ಕಳೆದಂತೆ ವಿಜ್ಞಾನಿಗಳು ಹೊಸ ಬಗೆಯ ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಕಂಡುಹಿಡಿಯಲು ಶುರುಮಾಡಿದರು, ಹಾಗೆ ಇವುಗಳಿಂದ ತಯಾರಿಸಬಹುದಾದಂತ ಜನರಿಗೆ ಉಪಯೋಗವಾಗುವ ಪದಾರ್ಥಗಳನ್ನು ಕಂಡುಹಿಡಿಯಲು ಶುರುಮಾಡಿದರು. 1942ರಲ್ಲಿ ಫಂಗೈ ಬಳಸಿ ಪೆನಿಸಿಲಿನ್ಅನ್ನು ಹೆಚ್ಚು ಹೆಚ್ಚು ತಯಾರಿಸಲು ಶುರುವಾಯಿತು. ಹೀಗೆ ಪ್ರತಿಯೊಂದು ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯಿಂದ ತಯಾರಿಸಲು ಶುರುವಾಯಿತು. ಹುದುಗುವಿಕೆಯ ಚಳಕ ಬೆಳೆದಂತೆ ಅದರ ಬಳಕೆಯ ಬಗೆ ಬದಲಾಗತೊಡಗಿತು.

ಜೆನೆಟಿಕ್ ಇಂಜಿನಿಯರಿಂಗ್ (Genetic engineering) ಇಂದ ಜನರು ಬ್ಯಾಕ್ಟೀರಿಯಾ ಹಾಗು ಇತರೆ ಜೀವಿಗಳ ಜೀನ್ ಹಾಗು ಅವುಗಳ ಜಿನೊಮ್ ಅನ್ನು ನಮ್ಮ ಬಳಕೆಗೆ ಅನುಗುಣವಾಗಿ ಬದಲಾಯಿಸಬಲ್ಲ ಚಳಕದ ಬಗ್ಗೆ ಹೆಚ್ಚು ತಿಳಿಯುತ್ತ ಹೋದಂತೆ, ಹುದುಗುವಿಕೆಯಲ್ಲಿ ಬಳಸುವ ಜೀವಿಗಳ ಗುಣಗಳನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬದಲಾಯಿಸಲು ಶುರುಮಾಡಿದರು. ಮೈಕ್ರೋಬಯಾಲಜಿ (Microbiology) ಹಾಗು ಮೊಲಿಕ್ಯುಲರ್ ಬಯಾಲಜಿ(Molecular Biology)ಗಳಲ್ಲಿ ಜನರ ಅರಿವು ಹೆಚ್ಚಾದಂತೆ, ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಬಳಸಿ ಯಾವುದೇ ಬಗೆಯ ಬಯೋಮಾಲಿಕ್ಯುಲನ್ನು (Biomolecule) ಹುದುಗುವಿಕೆಯ ಮೂಲಕ ಹೆಚ್ಚು ಹೆಚ್ಚು ತಯಾರಿಸಬಹುದು ಎಂದು ಅರಿತರು.

ಕಿಣ್ವಗಳ ಬಗ್ಗೆ ತಿಳಿವು ಹೆಚ್ಚಾದಂತೆ ಇವುಗಳ ಉಪಯೋಗಗಳು ಜನ ಜೀವನದಲ್ಲಿ ಬಹಳಷ್ಟಿದೆ ಎಂಬುದನ್ನು ಅರಿತುಕೊಂಡರು. ಕಿಣ್ವಗಳು ಪ್ರತಿ ಜೀವಿಯು ಬದುಕಿ ಬಾಳಲು ಅಗತ್ಯ, ಏಕೆಂದರೆ ಯಾವುದೇ ಜೀವಿಯು ಆಹಾರ ಸೇವಿಸಬೇಕಾದರೆ, ಅದನ್ನು ಜೀರ್ಣಿಸಲು ಹಾಗು ಅದರಿಂದ ಪೌಷ್ಟಿಕತೆ ಪಡೆದು ಎಲ್ಲಾ ಬಗೆಯ ಚಟುವಟಿಕೆಗೆ ಬಳಸಲು ಕಿಣ್ವಗಳು ಬೇಕೇ ಬೇಕು. ಹೇಗೆ ಕಿಣ್ವಗಳ ಕೆಲಸವನ್ನು ಜನರ ಬದುಕಿನ ಚಟುವಟಿಕೆಗಳಲ್ಲೂ ಬಳಸಬಹುದೆಂದು ತಿಳಿದಾಗ, ಇದನ್ನು ಹೆಚ್ಚು ಬಳಕೆ ಮಾಡಲು ಶುರುವಾಯಿತು. ಯಾವುದೇ ಬಗೆಯ ಕಿಣ್ವಗಳನ್ನು ಬ್ಯಾಕ್ಟೀರಿಯಾ ಅಥವಾ ಫಂಗೈಗಳಲ್ಲಿ ತಯಾರಿಸಬಹುದು ಎಂದು ತಿಳಿಯಿತು, ಹೀಗೆ ಹುದುಗುವಿಕೆಯ ಮೂಲಕ ಕಿಣ್ವಗಳನ್ನು ತಯಾರಿಸುವ ಬಗೆ ಬೆಳಕಿಗೆ ಬಂತು.

ರಾಸಾಯನಿಕ ಉತ್ಪನ್ನಗಳ ಕೆಟ್ಟ ಪರಿಣಾಮಗಳಿಂದ ಅದರ ಬದಲಿಗೆ ಜೈವಿಕ ಉತ್ಪನ್ನಗಳ ತಯಾರಿಕೆಯ ಬಗ್ಗೆ ಜನರ ಒಲವು ಹೆಚ್ಚಾದಾಗ ಹುದುಗುವಿಕೆಯ ಚಳಕದ ಮೂಲಕ ಬಗೆ ಬಗೆಯ ರಾಸಾಯನಿಕಗಳ ಬದಲಿ ಪದಾರ್ಥಗಳನ್ನು ತಯಾರಿಸಲು ಶುರುಮಾಡಿದರು. ಇಂದು ಕುಗ್ಗುತಿರುವ ಪೆಟ್ರೋಲ್ ಹಾಗು ಡೀಸೆಲ್ ಪ್ರಮಾಣದಿಂದ ಇಂಧನ ಬಳಕೆಗೆ ಬದಲಿ ಪದಾರ್ಥ ಕಂಡುಹಿಡಿಯ ಬೇಕಾದ ಅವಶ್ಯಕತೆ ಎದುರಾಗಿದೆ. ಇದಕ್ಕೆ ಕೂಡ ಅಲ್ಗೆಯನ್ನು (Algae) ಬಳಸಿ ಬಯೋಡೀಸೆಲ್ (Bio-Diesel) ಅನ್ನು ಹುದುಗುವಿಕೆಯ ಮೂಲಕ ತಯಾರಿಸುವ ಸಂಶೋಧನೆ ನಡೆಯುತ್ತಿದೆ. ಸಕ್ಕರೆ ತಯಾರಿಕೆಯಲ್ಲಿ ಬಾಕಿ ಉಳಿಯುವ ಕಾಕಂಬಿಯಿಂದ ಹಾಗು ಬೇಸಾಯದಿಂದ ಬಾಕಿ ಉಳಿಯುವ ತೆನೆಗಳಲ್ಲಿ ಇರುವ ಸೆಲ್ಯುಲೋಸ್ (Cellulose) ಅಂಶವನ್ನು ಬ್ಯಾಕ್ಟೀರಿಯಾ ಹಾಗು ಫಂಗೈ ಹುದುಗುವಿಕೆಯಿಂದ ಎಥನಾಲ್ (Ethanol) ಆಗಿ ಪರಿವರ್ತಿಸಿ ಅದನ್ನು ಪೆಟ್ರೋಲ್ ಬದಲು ಬಂಡಿಗಳಲ್ಲಿ ಬಳಸುವ ಉರುವಲುಗಳನ್ನಾಗಿ ತಯಾರಿಸುವ ಸೋಶೋಧನೆ ಕೂಡ ಇಂದು ಭರದಿಂದ ಸಾಗಿದೆ.

ಬಯೋ ಟೆಕ್ನಾಲಜಿಯಿಂದ ಯಾವುದೇ ಉತ್ಪನ್ನ ತಯಾರಿಕೆ ಆಗಬೇಕಾದರೆ ಅದನ್ನು ಹೆಚ್ಚಾಗಿ ಹುದುಗುವಿಕೆಯಿಂದಲೇ ತಯಾರಿಸಬೇಕಾಗುತ್ತದೆ. ಇಂದು ಹುದುಗುವಿಕೆ ಕೇವಲ ಬ್ಯಾಕ್ಟೀರಿಯಾ ಹಾಗು ಫಂಗೈ ಅಂತಹ ಕಿರುಜೀವಿಗಳಿಗೆ ಮೀಸಲಾಗಿಲ್ಲ, ಗಿಡಗಳ ಜೀವ ಕಣಗಳು, ಪ್ರಾಣಿಗಳ ಹಾಗು ಮನುಷ್ಯರ ಜೀವ ಕಣಗಳಿಂದಲೂ ಹುದುಗುವಿಕೆ ಮಾಡುತ್ತಾರೆ. ಉತ್ಪನ್ನದ ಗುಣ ಹಾಗು ಅದು ಯಾವ ಜಾತಿಯ ಜೀವಿಯಲ್ಲಿ ಹೆಚ್ಚು ತಯಾರಿಕೆಯಾಗುತ್ತದೆಯೋ ಅದೇ ಜೀವಿಯ ಕಣಗಳನ್ನು ಹುದುಗುವಿಕೆಯಲ್ಲಿ ಬಳಸಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಯೋ ಟೆಕ್ನಾಲಜಿಲ್ಲಿ ನಡಿಯುತ್ತಿರುವ ಸಂಶೋಧನೆಗಳು ಯಾರಲ್ಲಾದರೂ ಅಚ್ಚರಿ ಹಾಗು ಕುತೂಹಲ ಮೂಡಿಸದೇ ಇರದು.

ಹೀಗೆ ಹಲವು ಬಗೆಯ ಉತ್ಪನ್ನಗಳನ್ನು ಇಂದು ಹುದುಗುವಿಕೆಯಿಂದ ತಯಾರಿಸಲಾಗುತ್ತಿದೆ. ಇಂದು ತಯಾರಾಗುವ ಪ್ರತಿಯೊಂದು ಆಂಟಿಬಯೋಟಿಕ್ ಹುದುಗುವಿಕೆಯಿಂದಲೇ ತಯಾರಾಗುವುದು. ಹಲವು ರೋಗಗಳಿಗೆ ಮದ್ದಾಗಿ ಸಿಗುವ ಗಿಡಗಳ ಪದಾರ್ಥಗಳನ್ನು ಹೆಚ್ಚಾಗಿ ತಯಾರಿಸಲು ಮದ್ದಿನ ಅಂಶವನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಹುದುಗುವಿಕೆಯಿಂದ ಕಿರುಜೀವಿಗಳಲ್ಲಿ ತಯಾರಾಗುವಂತೆ ಮಾಡುತ್ತಿದ್ದಾರೆ. ಹುದುಗುವಿಕೆಯಿಂದ ಹೆಚ್ಚಾಗಿ ತಯಾರಿಸುತ್ತಿರುವ ಕಿಣ್ವಗಳು ಇಂದು ಜನರಿಗೆ ಅರಿವೇ ಇಲ್ಲದೆ ಎಲ್ಲೆಡೆ ಬಳಕೆಯಾಗುತ್ತಿದೆ. ಬಟ್ಟೆಗಳನ್ನು ತೊಳೆಯಲು ಬಳಸುವ ಸೋಪುಗಳಲ್ಲಿ, ಬಟ್ಟೆಗಳನ್ನು ನವಿರಾಗಿಸಲು, ನೂಲಿನ ತಯಾರಿಕೆಯಲ್ಲಿ, ಅಣಿಯಾಗಿರುವ ತಿನುಸುಗಳನ್ನು ತಯಾರಿಸಲು, ಹಣ್ಣುಗಳ ರಸದ ಉತ್ಪನ್ನಗಳಲ್ಲಿ, ಹೀಗೆ ದಿನ ನಿತ್ಯದ ಬಳಕೆಯಲ್ಲದೆ ಎಲ್ಲಾ ಬಗೆಯ ಕೈಗಾರಿಕೆಗಳಲ್ಲಿ ಕಿಣ್ವಗಳನ್ನು ಬಳಸುತಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಗಾಡಿಗಳೆಲ್ಲವೂ ಓಡುವುದು ಹುದುಗುವಿಕೆಯಿಂದ ಬಂದ ಬಯೋಡೀಸೆಲ್ ಹಾಗು ಬಯೋಎಥನಾಲ್ ಇಂದಲೇ ಎಂಬುವುದು ಒಂದು ವಾದ. ಇಷ್ಟಲ್ಲದೆ, ಇವತ್ತಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಎಲ್ಲಾ ಕೈಗಾರಿಕೆಗಳು ಪರಿಸರ ಸ್ನೇಹಿ ಚಳಕಗಳ ಹುಡುಕಿನಲ್ಲಿವೆ, ಇದುವರೆಗೂ ತಯಾರಿಕೆಯಲ್ಲಿದ್ದ ರೀತಿಯ ಬದಲಿಗೆ ಹುದುಗುವಿಕೆಯನ್ನು ಅಳವಡಿಸುವ ಪ್ರಯತ್ನಗಳು ಜಗತಿನ್ನೆಲ್ಲೆಡೆ ನಡೆಯುತ್ತಿದೆ. ಹೀಗೆ ವಿಜ್ಞಾನವು ಬ್ಯಾಕ್ಟೀರಿಯಾ, ಫಂಗೈ, ಅಲ್ಗೆ, ಗಿಡ ಹಾಗು ಪ್ರಾಣಿಗಳ ಜೀವಕಣಗಳ ಬಗ್ಗೆ ಹೆಚ್ಚು ಹೆಚ್ಚು ಕಂಡುಹಿಡಿಯುತ್ತಾ ಹೋದಂತೆ, ಅವುಗಳಿಂದ ಹೇಗೆ ಎಲ್ಲಾ ಬಗೆಯ ಪದಾರ್ಥಗಳನ್ನು ಹುದುಗುವಿಕೆಯ ಮೂಲಕ ತಯಾರಿಸಹಬಹುದು ಎಂದು ಚಳಕಗಾರರು ಕಂಡುಹಿಡಿಯಲು ಮಾಡುತ್ತಿದ್ದಾರೆ.

ಸಾವಿರಾರು ವರುಷಗಳಿಂದ ಕೇವಲ ಇಡ್ಲಿ, ದೋಸೆ, ಉಪ್ಪಿನಕಾಯಿ ಅಂತಹ ತಿನಿಸುಗಳಲ್ಲಿ ಅಡಗಿದ್ದ ಹುದುಗುವಿಕೆಯ ಚಳಕ, ಕಳೆದ ನೂರು ವರುಷಗಳಲ್ಲಿ ಜನರ ಬದುಕಿನ ಎಲ್ಲಾ ನಡೆಯಲ್ಲೂ ಅನುಕೂಲ ನೀಡುವ ದೊಡ್ಡ ಚಳಕವಾಗಿ ಬೆಳೆದು ನಿಂತಿರುವುದು ಅಚ್ಚರಿಯೇ ಸರಿ!.

(ಮಾಹಿತಿ ಮೂಲ: www.ncbi.nlm.nih.gov, www.libguides.lindahall.org, www.wikipedia.org)

 

 

ಇಂದು ಹಾರಲಿದೆ ಸೂರ್ಯನತ್ತ ಪಾರ್ಕರ್ ಬಾನಬಂಡಿ

ಅಮೆರಿಕಾದ ನಾಸಾ (NASA) ಕೂಟ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಇಂದು ಪಾರ್ಕರ್ ಸೋಲಾರ್ ಪ್ರೋಬ್ ಎಂಬ ಬಾನಬಂಡಿಯನ್ನು ಹಾರಿಸಲಿದೆ. ಇನ್ನು ಎರಡು ಗಂಟೆಗಳಲ್ಲಿ ಅಂದರೆ ಭಾರತದ ಹೊತ್ತು ಮಧ್ಯಾಹ್ನ ಸುಮಾರು 1 ಗಂಟೆಗೆ ಈ ಬಾನಬಂಡಿ ಬಾನಿಗೆ ನೆಗೆಯಲಿದೆ. ಈ ಮೂಲಕ ವಿಜ್ಞಾನದ ಹೊಸದೊಂದು ಮೈಲಿಗಲ್ಲು ದಾಟಲು ಮನುಕುಲ ಎದುರುನೋಡುತ್ತಿದೆ.

260px-Parker_Solar_Probe

ಭೂಮಿಯ ವಾತಾವರಣ, ಜೀವಿಗಳು ಬೆಳೆಯಲು ಬೇಕಾದ ಶಕ್ತಿಮೂಲವಾದ ಸೂರ್ಯನ ಹತ್ತಿರಕ್ಕೆ ಹೋಗಲು ಇಲ್ಲಿಯವರಿಗೆ ಆಗಿಲ್ಲ ಏಕೆಂದರೆ ಸೂರ್ಯನ ಮೇಲ್ಮೈ ತುಂಬಾ ಬಿಸಿಯಾಗಿದ್ದು, ಆ ಬಿಸಿಯನ್ನು ತಡೆದುಕೊಳ್ಳುವ ಸಲಕರಣೆಗಳನ್ನು ಮಾಡುವುದು ತುಂಬಾ ಕಷ್ಟ. ಸೂರ್ಯನ ಮೇಲ್ಮೈಯ ಸುತ್ತಣದ ಭಾಗದಲ್ಲಿ ಕಾವಳತೆ ಸುಮಾರು 20,00,000 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ!

ಹಾಗೆನೇ ಭೂಮಿಯಿಂದ ಸೂರ್ಯನಿರುವ ದೂರ, ಸಲಕರಣೆಗಳನ್ನು ಕಳಿಸಲು ಇನ್ನೊಂದು ಸವಾಲು ಒಡ್ದುತ್ತದೆ. ಸೂರ್ಯ ಮತ್ತು ಭೂಮಿಯ ನಡುವಿನ ಸರಾಸರಿ ದೂರ ಸುಮಾರು 15 ಕೋಟಿ ಕಿಲೋ ಮೀಟರ್! ಪಾರ್ಕರ್ ಬಾನಬಂಡಿ ಸೂರ್ಯನ ಮೇಲ್ಮೈಯಿಂದ ಸುಮಾರು 60 ಲಕ್ಷ ಕಿ.ಮೀ. ನಷ್ಟು ಹತ್ತಿರ ಹೋಗಲಿದ್ದು, ಇಷ್ಟು ಹತ್ತಿರಕ್ಕೆ ಹೋಗುವ ಮೊದಲ ಸಲಕರಣೆ ಇದಾಗಲಿದೆ.

ನೇಸರ, ಸೂರ್ಯ, ರವಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಈ ನಕ್ಷತ್ರ ನಮಗೆ ಶಕ್ತಿಯ ಮೂಲ. ಹೈಡ್ರೋಜನ್ ಅಣುಗಳ ಬೆಸುಗೆಯಿಂದಾಗಿ ಸೂರ್ಯನಲ್ಲಿ ಹೇರಳವಾದ ಶಕ್ತಿ ಬಿಡುಗಡೆಯಾಗುತ್ತದೆ. ಸುಮಾರು 4.57 ಬಿಲಿಯನ್ ವರುಷಗಳ ಹಿಂದೆ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳಿಂದ ಕೂಡಿದ್ದ ದೈತ್ಯ ಅಣುಮೋಡದ ಕುಸಿತದಿಂದ ಸೂರ್ಯ ಉಂಟಾಗಿದ್ದು, ತನ್ನ ಬದುಕಿನ ಅರ್ಧ ಆಯುಷ್ಯವನ್ನು ಸೂರ್ಯ ಈಗಾಗಲೇ ಕಳೆದಿದ್ದಾನೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸೂರ್ಯನಲ್ಲಿ ಮುಖ್ಯವಾಗಿ ತಿರುಳು (core), ಸೂಸಿಕೆಯ ಹರವು (radiative zone), ಒಯ್ಯಿಕೆಯ ಹರವು (convective zone), ಬೆಳಕುಗೋಳ (photosphere), ಬಣ್ಣಗೋಳ (chromosphere), ಹೊಳಪುಗೋಳ (corona) ಎಂಬ ಭಾಗಗಳನ್ನು ಗುರುತಿಸಲಾಗಿದೆ. ಈ ಭಾಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

3

ತಿರುಳಿನ ಭಾಗದಲ್ಲಿ ಹೈಡ್ರೋಜನ್ ಅಣುಗಳ ಬೆಸುಗೆಯಿಂದ ಬಿಡುಗಡೆಯಾಗುವ ಶಕ್ತಿ ಉಳಿದ ಭಾಗಗಳನ್ನು ದಾಟಿ ಹೊರಸೂಸುತ್ತದೆ. ನಾಸಾ ಇಂದು ಹಾರಿಸಲಿರುವ ಬಾನಬಂಡಿ ಸುಮಾರು 88 ದಿನಗಳ ಪ್ರಯಾಣದ ಬಳಿಕ ಸೂರ್ಯನ ಸುತ್ತಣದ ಭಾಗವಾದ ಹೊಳಪುಗೋಳದ ಹತ್ತಿರಕ್ಕೆ ಮೊದಲ ಬಾರಿಗೆ ಹೋಗಲಿದೆ.

ಸೋಲಾರ್ ಪಾರ್ಕರ್ ಬಾನಬಂಡಿ ಸುಮಾರು ಏಳು ವರುಶಗಳ ಕಾಲ ಸೂರ್ಯನ ಸುತ್ತ ಅಧ್ಯಯನ ನಡೆಸಲಿದ್ದು, ಅದರ ಒಟ್ಟಾರೆ ಪ್ರಯಾಣವನ್ನು ದಿನಾಂಕಕ್ಕೆ ತಕ್ಕಂತೆ ಕೆಳಗಿನ ಓಡುಚಿತ್ರದಲ್ಲಿ ತೋರಿಸಲಾಗಿದೆ. (ಚಿತ್ರಸೆಲೆ: ವಿಕಿಪೀಡಿಯಾ)

Animation_of_Parker_Solar_Probe_trajectory

(ಚಿತ್ರದಲ್ಲಿನ ಬಣ್ಣಗಳ ವಿವರ – ಹಳದಿ: ಸೂರ್ಯ, ಹಸಿರು: ಬುಧ, ತಿಳಿನೀಲಿ: ಶುಕ್ರ, ಕಡುನೀಲಿ: ಭೂಮಿ, ನವಿರುಗೆಂಪು: ಪಾರ್ಕರ್ ಪ್ರೋಬ್)

ಬಾನಬಂಡಿಯ ಭಾಗಗಳು:

ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಸುತ್ತಣದಲ್ಲಿ ಎದುರಾಗುವ ಹೆಚ್ಚಿನ ಕಾವಳತೆಯನ್ನು ತಡೆದುಕೊಳ್ಳುವಂತೆ ಅಣಿಗೊಳಿಸಲಾಗಿದೆ. ಇದಕ್ಕಾಗಿ ಕಾರ್ಬನ್ ಎಳೆಗಳಿಂದ ಮಾಡಲ್ಪಟ್ಟ ಸಿ.ಎಫ್.ಆರ್.ಸಿ. ಎಂಬ ವಸ್ತುವನ್ನು ಬಳಸಲಾಗಿದೆ. ಇದು ಸುಮಾರು 1377 ಡಿಗ್ರಿ ಸೆಲ್ಸಿಯಸ್ ವರೆಗಿನ ಕಾವಳತೆಯನ್ನು ತಡೆದುಕೊಳ್ಳಬಲ್ಲದು.

parker_probe

(ಚಿತ್ರಸೆಲೆ: KnowledgeSuttra.com )

ಬಾನಬಂಡಿಗೆ ಏನಾದರೂ ತೊಂದರೆಯಾದರೆ ಭೂಮಿಗೆ ಮಾಹಿತಿಯನ್ನು ಕಳಿಸಲು ಸುಮಾರು 8 ನಿಮಿಶಗಳು ತಗಲುವುದರಿಂದ, ಈ ಹೊತ್ತಿನಲ್ಲಿ ತಂತಾನೇ ತೀರ್ಮಾನ ಕೈಗೊಳ್ಳುವಂತೆ ಬಾನಬಂಡಿಯನ್ನು ಸಜ್ಜುಗೊಳಿಸಲಾಗಿದೆ. ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಬೇಕಿರುವ ವೈಜ್ಞಾನಿಕ ಸಲಕರಣೆಗಳನ್ನು ಬಾನಬಂಡಿಯ ನಡುವಿನ ಭಾಗದಲ್ಲಿ ಇರಿಸಲಾಗಿದೆ. ಬಾನಬಂಡಿಯಲ್ಲಿ ಎರಡು ಸೋಲಾರ್ ಸಾಲುತಟ್ಟೆಗಳಿದ್ದು, ಅಧ್ಯಯನಕ್ಕೆ ಬೇಕಾದ ವಿದ್ಯುತ್ ಶಕ್ತಿಯನ್ನು ಒದಗಿಸುತ್ತವೆ.

ಬಾನಬಂಡಿಯ ಕೆಲಸಗಳು:

ಇಂದು ಬಾನಿಗೇರಿ 2025 ರವರೆಗೆ ಸೂರ್ಯನ ಸುತ್ತ ಅಧ್ಯಯನ ನಡೆಸುವ ಪಾರ್ಕರ್ ಬಾನಬಂಡಿ ಈ ಕೆಳಗಿನ ಮುಖ್ಯ ಅಧ್ಯಯನದ ಗುರಿಗಳನ್ನು ಹೊಂದಿದೆ,

1. ಹೊಳಪುಗೋಳದ (ಕರೋನಾ) ಕಾವು ಮತ್ತು ಆ ಮೂಲಕ ಸೂರ್ಯ ಅಲೆಗಳ ವೇಗಹೆಚ್ಚುವಿಕೆಗೆ ಕಾರಣವಾದ ಶಕ್ತಿ ಹರಿವಿನ ಮೂಲವನ್ನು ತಿಳಿದುಕೊಳ್ಳುವುದು.

2. ಸೂರ್ಯನ ಸುತ್ತಣದಲ್ಲಿ ಉಂಟಾಗುವ ಕಾಂತ ಬಯಲಿನ (magnetic filed) ರಚನೆ ಮತ್ತು ಅದರ ಏರಿಳಿತದ ಕುರಿತು ಅರಿತುಕೊಳ್ಳುವುದು.

3. ಸೂರ್ಯನ ಸುತ್ತಣದಿಂದ ಹೊಮ್ಮುವ ಶಕ್ತಿದುಂಬಿದ ಕಣಗಳು ಹೇಗೆ ವೇಗಹೆಚ್ಚಿಸಿಕೊಳ್ಳುತ್ತವೆ ಮತ್ತು ಅವುಗಳು ಹೇಗೆ ಸಾಗಣಿಕೆಗೊಳ್ಳುತ್ತವೆ ಎಂದು ಅರಿಯುವುದು.

ಈ ಮೇಲಿನ ಮೂರು ಮುಖ್ಯ ಗುರಿಗಳ ಜತೆಗೆ ಸೂರ್ಯನ ಕುರಿತು ಇನ್ನೂ ಹತ್ತು ಹಲವಾರು ಹೊಸ ವಿಷಯಗಳು ತಿಳಿಯಲಿವೆ ಎಂದು ವಿಜ್ಞಾನಿಗಳು ಅಂದುಕೊಂಡಿದ್ದಾರೆ.

ಸೂರ್ಯನ ಬಗ್ಗೆ ಹಲವಾರು ವರುಷಗಳಿಂದ ಅಧ್ಯಯನ ಕೈಗೊಳ್ಳುತ್ತಾ ಬಂದಿರುವ ವಿಜ್ಞಾನಿ ಯುಜೀನ್ ಪಾರ್ಕರ್ (Eugene Parker) ಅವರ ಹೆಸರಿನಲ್ಲಿ ಈ ಬಾನಬಂಡಿಯನ್ನು ಗುರುತಿಸಲಾಗಿದೆ. ವಿಜ್ಞಾನಿಯೊಬ್ಬ ಬದುಕಿರುವಾಗಲೇ ಅವರ ಹೆಸರನ್ನು ಬಾನಬಂಡಿಗೆ ಇಟ್ಟಿದ್ದು ಇದೇ ಮೊದಲ ಬಾರಿ.

ಬಾನಬಂಡಿಯನ್ನು ಹಾರಿಸಲು ಈ ಮುಂಚೆ ನಿಗದಿಪಡಿಸಿದ್ದ ದಿನಾಂಕಗಳನ್ನು ಹಲವು ಬಾರಿ ಮುಂದೂಡಲಾಗಿದ್ದು, ಇಂದು ಈ ಹಮ್ಮುಗೆ ನೆರವೇರಲಿ ಎಂದು ಹಾರೈಸೋಣ.

ಮಾಹಿತಿ: 11.08.2018 ರಂದು ಹಾರಿಕೆಗೆ 4 ನಿಮಿಷಗಳ ಮುಂಚೆ ಕೆಲವು ತೊಡಕುಗಳು ಕಂಡುಬಂದಿದ್ದರಿಂದ ಹಾರಿಕೆಯನ್ನು 1 ದಿನ ಮುಂದೂಡಲಾಯಿತು. ಇಂದು ಅಂದರೆ 12.08.2018 ರಂದು ಭಾರತದ ಹೊತ್ತು ಮಧ್ಯಾಹ್ನ ಸುಮಾರು 1 ಗಂಟೆಗೆ ಪಾರ್ಕರ್ ಸೋಲಾರ್ ಪ್ರೋಬ್ ಬಾನಿಗೇರಿತು.

ನೆಲದಿಂದ ನೆಗೆದ 45 ನಿಮಿಷಗಳ ಬಳಿಕ ಡೆಲ್ಟಾ 4 ಏರುಬಂಡಿಯಿಂದ(rocket) ಸೋಲಾರ್ ಪ್ರೋಬ್ ಬಾನಬಂಡಿ(spacecraft) ಬೇರ್ಪಟ್ಟು ಸೂರ್ಯನೆಡೆಗೆ ಪಯಣ ಬೆಳೆಸಿತು. ಇದೆ ವರುಷದ ಕೊನೆಗೆ ಅದು ಸೂರ್ಯನ ಹತ್ತಿರಕ್ಕೆ ತಲುಪುವ ನಿರೀಕ್ಷೆಯಿದೆ.

ಭೂಮಿಯನ್ನು ಅಳೆದವರಾರು?

ದುಂಡಾಕಾರವಾಗಿರುವ ಭೂಮಿಯ ದುಂಡಗಲ (diameter) 12,756 ಕಿಲೋ ಮೀಟರಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇಂತಹ ಸಾಲುಗಳನ್ನು ಓದಿದೊಡನೆ ಮುಖ್ಯವಾಗಿ ಎರಡು ವಿಷಯಗಳು ಬೆರೆಗುಗೊಳಿಸುತ್ತವೆ. ಮೊದಲನೆಯದು ಇಷ್ಟೊಂದು  ದೊಡ್ಡದಾದ ಅಂಕಿಗಳು ಮತ್ತು ಎರಡನೆಯದು ಅವುಗಳನ್ನು ಅಳೆದುದು ಹೇಗೆ?.

Image EM1
ಇನ್ನೊಂದು ಅಚ್ಚರಿಯ ವಿಷಯವೆಂದರೆ ಭೂಮಿಯ ದುಂಡಗಲವನ್ನು ಮೊಟ್ಟಮೊದಲ ಬಾರಿಗೆ ಅಳೆದದ್ದು ಸರಿಸುಮಾರು 2200 ವರುಶಗಳ ಹಿಂದೆ! ಬನ್ನಿ, ಅವರಾರು? ಹೇಗೆ ಅಳೆದರು? ಎಂದು ತಿಳಿದುಕೊಳ್ಳೋಣ.
ಕ್ರಿ.ಪೂ. ಸುಮಾರು 200 ರಲ್ಲಿ ಈಜಿಪ್ಟಿನ ಎರತೊಸ್ತನೀಸ್ (Eratosthenes) ಎಂಬ ಗಣಿತದರಿಗ ಭೂಮಿಯ ದುಂಡಗಲವನ್ನು ಅಳೆದವರಲ್ಲಿ ಮೊದಲಿಗ. ಅದೂ ತನ್ನ ನಾಡಿನಲ್ಲೇ ಇದ್ದುಕೊಂಡು ಅರಿಮೆಯ ನೆರವಿನಿಂದ ಈ ಕೆಲಸವನ್ನು ಮಾಡಿ ತೋರಿಸಿದಾತ.

ಎರತೊಸ್ತನೀಸ್‍ರಿಗೆ ತನ್ನ ಸುತ್ತಮುತ್ತಲಿನ ಆಗುಹೋಗುಗಳು ತುಂಬಾ ಕುತೂಹಲ ಮೂಡಿಸಿದಂತವು. ಬೇಸಿಗೆಯ ಒಂದು ಗೊತ್ತುಪಡಿಸಿದ ಹೊತ್ತಿನಂದು ಸಿಯನ್ ಊರಿನ ಬಾವಿಯ ಮೇಲೆ ಹಾದುಹೋಗುವ ಸೂರ್ಯನ ಕಿರಣಗಳು, ಆ ಬಾವಿಯ ನಟ್ಟನಡುವೆ ಬೀಳುತ್ತಿದ್ದುದು ಮತ್ತು ಅದೇ ಹೊತ್ತಿಗೆ ಅಲ್ಲಿಂದ ಸುಮಾರು 750 ಕೀಲೋ ಮೀಟರಗಳಷ್ಟು ದೂರವಿರುವ ಅಲೆಕ್ಸಾಂಡ್ರಿಯಾದ ಕಂಬವೊಂದರ ಮೇಲೆ ಸೂರ್ಯನ ಬೆಳಕಿನಿಂದ ಉಂಟಾಗುವ ನೆರಳು ನೇರವಾಗಿರದೇ ಒಂದು ಕೋನದಲ್ಲಿ ಇರುತ್ತಿದ್ದುದು, ಎರತೋಸ್ತೇನಸ್ ರ ಕುತೂಹಲ ಕೆರಳಿಸಿದ್ದವು.

ಸೂರ್ಯನ ನೆಟ್ಟ ನೇರವಾದ ಕಿರಣಗಳು ಉಂಟುಮಾಡುವ ನೆರಳು ಸಿಯಾನ್ ಊರಿನಲ್ಲಿ ನೇರವಾಗಿ ಮತ್ತು ಅದೇ ಹೊತ್ತಿಗೆ ಅಲೆಕ್ಸಾಂಡ್ರಿಯಾದಲ್ಲಿ ಒಂದು ಕೋನದಲ್ಲಿದ್ದದ್ದು, ನಮ್ಮ ಭೂಮಿ ಚಪ್ಪಟೆಯಾಗಿರದೇ ದುಂಡಾಗಿದೆ ಅನ್ನುವಂತ ವಿಷಯವನ್ನು ಎರತೊಸ್ತನೀಸ್‍ರಿಗೆ ತೋರಿಸಿಕೊಟ್ಟಿದ್ದವು. ಗಣಿತವನ್ನರಿತಿದ್ದ ಎರತೊಸ್ತನೀಸ್‍ರಿಗೆ ಇದನ್ನು ಬಳಸಿಯೇ ಭೂಮಿಯ  ಸುತ್ತಳತೆಯನ್ನು ಅಳೆಯುವ ಹೊಳಹು ಹೊಮ್ಮಿತು.

Image EM2ಸಿಯಾನ್ ಊರಿನ ಬಾವಿಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದ ಹೊತ್ತಿಗೆ ತನ್ನೂರು ಅಲೆಕ್ಸಾಂಡ್ರಿಯಾದಲ್ಲಿದ್ದ ಕಂಬದ ನೆರಳು ಬೀಳುತ್ತಿದ್ದ ಕೋನವನ್ನು ಎರತೋಸ್ತೇನಸ್ ಅಳೆದರು. ಕಂಬ ಉಂಟುಮಾಡುತ್ತಿದ್ದ ನೆರಳಿನ ಕೋನವು 7.2°  ಎಂದು ಗೊತ್ತಾಯಿತು.

ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ದೂರ ತಿಳಿದಿದ್ದ ಎರತೋಸ್ತೇನಸ್ ಗಣಿತದ ನಂಟುಗಳನ್ನು ಬಳಸಿ ಭೂಮಿಯ ಸುತ್ತಳತೆ ಮತ್ತು ದುಂಡಗಲವನ್ನು ಈ ಕೆಳಗಿನಂತೆ ಎಣಿಕೆಹಾಕಿದರು.

Image EM3ಅಲೆಕ್ಸಾಂಡ್ರಿಯಾ ಕಂಬದ ನೆರಳಿನ ಕೋನ = 7.2°

ಒಂದು ಸುತ್ತಿನಲ್ಲಿ ಇರುವ ಕೋನಗಳು = 360°

ಅಂದರೆ, ದುಂಡಾಗಿರುವ ಭೂಮಿಯ ಸುತ್ತಳತೆ ಅಲೆಕ್ಸಾಂಡ್ರಿಯಾ ಮತ್ತು ಸಿಯಾನ್ ಊರುಗಳ ದೂರದ 360/7.2 = 50 ರಷ್ಟು ಇರಬೇಕು.

ಇನ್ನು, ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ನಡುವಿನ ದೂರ = 5000 ಸ್ಟೇಡಿಯಾ
(ಸ್ಟೇಡಿಯಾ/Stadia – ದೂರವನ್ನು ಅಳೆಯಲು ಎರತೊಸ್ತನೀಸ್ ಬಳಸಿದ ಅಳತೆಗೋಲು)

ಹಾಗಾಗಿ,  ಭೂಮಿಯ ಸುತ್ತಳತೆ = 50 x 5000 = 250000 ಸ್ಟೇಡಿಯಾ = 40,000 ಕಿಲೋ ಮೀಟರಗಳು
(1 ಸ್ಟೇಡಿಯಾ = 0.15 ಕಿ.ಮೀ.)

ನಮಗೆ ಗೊತ್ತಿರುವಂತೆ, ಸುತ್ತಳತೆ = 3.142 x ದುಂಡಗಲ (Circumference = 3.142 x diameter)

ಹಾಗಾಗಿ, ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯ ದುಂಡಗಲ (diameter) = 40000/3.142 = 12730.7 ಕಿ.ಮೀ.

ಹೀಗೆ ಸುಮಾರು 2200 ವರುಶಗಳ ಹಿಂದೆ ಕೋನಗಳನ್ನು  ಬಳಸಿ ಎರತೋಸ್ತೇನಸ್ ಅಳೆದದ್ದು, ಹೊಸಜಗತ್ತಿನಲ್ಲಿ ಉಪಗ್ರಹಗಳನ್ನು ಬಳಸಿ ಕರಾರುವಕ್ಕಾಗಿ ಅಳೆಯಲಾದ ಭೂಮಿಯ ದುಂಡಗಲ 12,756 ಕಿಲೋ ಮೀಟರಗಳಿಗೆ ತುಂಬಾ ಹತ್ತಿರವಾಗಿದೆ ಎಂಬುದನ್ನು ನೋಡಿದರೆ ಅರಿಮೆಯ ’ಹಿರಿಮೆ’  ಮನದಟ್ಟಾಗುತ್ತದೆ.

(ಸೆಲೆ: heasarc.nasa.govhte.si.edu, en.wikipedia.org, emaze.com)