ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 4

ಕಾಪೇರ‍್ಪಾಟು ಹಾಗು ಹಾಲ್ರಸದೆರ‍್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ‍್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ.

ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು ಕಾಪಾಡಲು, ನಮ್ಮ ಮಯ್ ಬಗೆಬಗೆಯ ಕಾಯುವಿಕೆಯ ಹಮ್ಮುಗೆಯನ್ನು ಬಳಸುತ್ತದೆ. ಕಾಪೇರ‍್ಪಾಟಿನ ಹಮ್ಮುಗೆಯು ಕಾಯುವ ಮಯ್ ಬಾಗ ಹಾಗು ಕಾಪೇರ‍್ಪಾಟನ್ನು ಪಡೆಯುವ ಬಗೆಗಳ ಮೇಲೆ, ಇವುಗಳನ್ನು ಎರಡು ಬಗೆಗಳಾಗಿ ಗುಂಪಿಸಬಹುದಾಗಿದೆ.

1) ಹೊರಗಾಪು (external defenses) ಮತ್ತು ಒಳಗಾಪು (internal defenses) : ಕೆಡುಕುಕಣಗಳು ನಮ್ಮ ಮಯ್ಯನ್ನು ಹೊಕ್ಕದಂತೆ ಹೊರಗಾಪು ತಡೆದರೆ, ಹೊರಗಾಪನ್ನು ಮಣಿಸಿ ನಮ್ಮ ಮಯ್ಯೊಳಕ್ಕೆ ನುಸುಳಿದ ಕೆಡುಕುಕಣಗಳನ್ನು ಎದುರಿಸಲು ಒಳಗಾಪು ನೆರವಾಗುತ್ತದೆ.

2) ರೂಡಿಯ ಕಾಪೇರ‍್ಪಾಟು (Innate immunity) ಮತ್ತು ಹೊಂದಿಸಿದ ಕಾಪೇರ‍್ಪಾಟು (adaptive immunity): (ಚಿತ್ರ 1)

i) ರೂಡಿಯ ಕಾಪೇರ‍್ಪಾಟು ಒಂದಕ್ಕಿಂತ ಹೆಚ್ಚಿನ ಬಗೆಯ ಕೆಡುಕುಕಣಗಳನ್ನು ಎದುರಿಸುವ ಅಳವನ್ನು ಹೊಂದಿರುತ್ತವೆ. ಇವು ಹೊರಗಾಪು ಇಲ್ಲವೇ ಒಳಗಾಪಿನ ಬಾಗವಾಗಿರಬಹುದು.

ii) ಹೊಂದಿಸಿದ ಕಾಪೇರ‍್ಪಾಟು (adaptive immunity): ಪಡೆದ ಕಾಪೇರ‍್ಪಾಟು (acquired immunity) ಎಂದೂ ಹೇಳಬಹುದಾದ ಇದು ಗೊತ್ತುಮಾಡಿದ (specific) ಕೆಡುಕುಕಣಗಳನಶ್ಟೆ ಎದುರಿಸುತ್ತದೆ. ಸಾಮಾನ್ಯವಾಗಿ ಕೆಡುಕುಕಣಗಳನ್ನು ಎದುರಿಸುವ ಮೂಲಕ ಒಬ್ಬ ಮನುಶ್ಯನ ಕಾಪು ಹಂತ ಹಂತವಾಗಿ ಬೆಳೆಯತೊಡಗುತ್ತದೆ. ಕೆಡುಕುಕಣಗಳಿಗೆ ತೆರೆದುಕೊಳ್ಳದೆಯೂ ಒಂದಶ್ಟು ಬಗೆಯಲ್ಲಿ ಕಾಪನ್ನು ಪಡೆಯಬಹುದಾಗಿದೆ. ಅವು ಯಾವುವೆಂದರೆ,

ಅ) ಮುನ್ಮದ್ದಿಕೆ (vaccination): ಕೆಡುಕುಕಣಗಳ ಒಗ್ಗದಿಕವನ್ನು ಹೊಂದಿರುವ ಅಡಕವನ್ನು ‘ಮುನ್ಮದ್ದು’ (vaccine) ಎಂದು ಹೇಳಬಹುದಾಗಿದೆ. ಮುನ್ಮದ್ದನ್ನು ಮನುಶ್ಯನ ಮಯ್ಯೊಳಕ್ಕೆ ಸೇರಿಸುವ ಎಸಕವನ್ನು ಮುನ್ಮದ್ದಿಕೆ (vaccination) ಎಂದು ಹೇಳಬಹುದು. ಕೆಡುಕುಕಣಗಳ ಒಗ್ಗದಿಕವನ್ನು ಹೊಂದಿರುವ ಮುನ್ಮದ್ದು, ಮುನ್ಮದ್ದನ್ನು ಪಡೆದ ಮನುಶ್ಯನಲ್ಲಿ ಸೋಂಕನ್ನು ಉಂಟುಮಾಡದೇ, ಮುಶ್ಯನ ಕಾಪೇರ‍್ಪಾಟನ್ನು ಕೆರಳಿಸುವುದರ ಮೂಲಕ ಕಾಪನ್ನು ಒದಗಿಸುತ್ತದೆ.

ಆ) ತಾಯಿಯ ಎದುರುಕಗಳು (maternal antibodies): ತಾಯಿಯಲ್ಲಿರುವ ಕೆಲವು ಎದುರುಕಗಳು ಬಸಿರುಚೀಲವನ್ನು (placenta) ದಾಟಿ ಮಗುವನ್ನು ಸೇರಿದರೆ, ಮತ್ತಶ್ಟು ಎದುರುಕಗಳು ತಾಯಿಯ ಮೊಲೆಯ ಹಾಲನ್ನು ಮಗುವಿಗೆ ಉಣಿಸಿದಾಗ, ಮಗುವಿನ ಮಯ್ ಸೇರುತ್ತವೆ. ಈ ಬಗೆಯಾಗಿ ತಾಯಿಯಿಂದ ಪಡೆದ ಎದುರುಕಗಳು, ಮಗುವನ್ನು ಕೆಲವು ಕಾಲ ಕಾಯುತ್ತವೆ.

kaperpatu_4_1

ಹೊರಗಾಪು (external defenses): ಕೆಳಗಿನ ಅಂಶಗಳು ಹೊರಗಾಪನ್ನು ಒದಗಿಸುವಲ್ಲಿ ನೆರವಾಗುತ್ತವೆ.

i) ನಮ್ಮ ಮಯ್ಯನ್ನು ಮುಚ್ಚಿಡುವ ಒಳಗಿನ ಹಾಗು ಹೊರಗಿನ ಹೊದಿಕೆಗಳು (skin & epithelial barrier), ಕೆಡುಕುಕಣಗಳು ಮಯ್ಯೊಳಕ್ಕೆ ನುಸುಳುವುದನ್ನು ತಡೆಯುತ್ತಿರುತ್ತವೆ. ಹೊರತೊಗಲಿನ (epidermal layer of skin) ಗೂಡುಗಳ ಎಡೆಬಿಡದ ಬೆಳೆಯುವಿಕೆ, ಸಾಯುವಿಕೆ ಹಾಗು ಕಳಚಿಬೀಳುವಿಕೆಯ ಹಮ್ಮುಗೆ, ಮಯ್ಗೆ ಹೊಸಹುಟ್ಟಿನ (renew) ತಡೆಗೋಡೆಯನ್ನು ಮಾಡುವ ಮೂಲಕ ಕೆಡುಕುಕಣಗಳು ಮಯ್ಯೊಳಕ್ಕೆ ನುಸುಳದಂತೆ ನೋಡಿಕೊಳ್ಳುತ್ತವೆ.

ii) ಗುಗ್ಗೆ (cerumen), ಲೋಳೆ (mucus), ಕಣ್ಣೀರು ಮತ್ತು ಎಂಜಲುಗಳು ಹಲವು ಬಗೆಯ ಕೆಡುಕುಕಣಗಳನ್ನು ಅಂಟಿಸಿಕೊಂಡು ಮಯ್ಯಿಂದ ಹೊರದೂಡುವುದರ ಜೊತೆಗೆ ಮಯ್ ಮೇಲೆ ಕೂರುವ ಒಂದಶ್ಟು ಬಗೆಯ ದಂಡಾಣುಗಳನ್ನೂ ಕೊಲ್ಲುವ ಅಳವನ್ನು ಹೊಂದಿರುತ್ತವೆ.

iii) ತಿಂದ ಕೂಳನ್ನು ಅರಗಿಸಲು ಹೊಟ್ಟೆಯು ಒಂದು ಬಗೆಯ ಹುಳಿಯನ್ನು (stomach acid) ಸೂಸುತ್ತದೆ. ಈ ಹುಳಿಯು, ಕೂಳಿನಲ್ಲಿ ಇರಬಹುದಾದ ಕೆಡುಕುಕಣಗಳನ್ನು ಕೊಲ್ಲುತ್ತದೆ.

iv) ಒರೆತೆರದ (vaginal) ಸುರಿಕೆಗಳು (secretions) ಹಾಗು ಉಚ್ಚೆ ಕೂಡ ಮಯ್ಯೊಳಕ್ಕೆ ನುಸುಳಲು ಹೊಂಚು ಹಾಕುವ ಕೆಡುಕುಕಣಗಳನ್ನು ಕೊಲ್ಲುವ ಅಳವನ್ನು ಹೊಂದಿರುತ್ತವೆ.

v) ನಮ್ಮ ಮಯ್ ಮೇಲೆ ಹಾಗು ಮಯ್ ಒಳಗೆ ನೆಲೆಸಿರುವ ಒಳಿತಿನ ಸೀರುಸಿರಿಗಳು (beneficial microbes) ಕೆಡುಕಣಗಳೊಡನೆ ಮಯ್ಮೇಲೆ ಹಾಗು ಒಳಗೆ ನೆಲೆಸುವಿಕೆಗೆ ಗುದ್ದಾಡುವುದರ ಮೂಲಕ ಕಾಪನ್ನು ಒದಗಿಸುತ್ತವೆ.

ಒಳಗಾಪು (internal defense): ಒಳಗಾಪನ್ನು ಒದಗಿಸುವಲ್ಲಿ ಕೆಳಗಿನ ಹಮ್ಮುಗೆಗಳು ಪಾಲ್ಗೊಳ್ಳುತ್ತವೆ.

i) ಜ್ವರ (fever): ಮಯ್ಗೆ ಸೋಂಕು ತಗುಲಿದಾಗ, ಮಯ್ ಬಿಸುಪು (temperature) ಹೆಚ್ಚುವ ಮೂಲಕ ಜ್ವರ ಉಂಟಾಗಬಹುದು. ಜ್ವರ ಕಾಪೇರ‍್ಪಾಟಿನ ಚುರುಕಿನ ಗತಿಯನ್ನು ಹೆಚ್ಚಿಸುತ್ತದೆ ಹಾಗು ಕೆಡುಕುಕಣಗಳ ಮರುಹುಟ್ಟಿಸುವಿಕೆಯ ಹಮ್ಮುಗೆಯನ್ನು ಕಡಿಮೆಮಾಡಿ, ಅವುಗಳ ಸಂಕ್ಯೆ ಮಯ್ಯಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ii) ಉರಿಯೂತ (Inflammation): ಸೋಂಕು ತಗುಲಿದ ಬಾಗದ ನೆತ್ತರುಗೊಳವೆಗಳು (blood vessels) ಹಿಗ್ಗುವ (dilate) ಮೂಲಕ ಹೆಚ್ಚಿನ ನೆತ್ತರು ಈ ಬಾಗಕ್ಕೆ ಹರಿಯುವಂತೆ ನೋಡಿಕೊಳ್ಳುತ್ತವೆ. ಹೆಚ್ಚಿದ ನೆತ್ತರು ಹರಿಯುವಿಕೆ, ಕೆಡುಕುಕಣಗಳನ್ನು ಕೊಲ್ಲುವ ಬೆನೆ ಕಣಗಳು (WBC) ಸೋಂಕು ತಗುಲಿದ ಬಾಗಕ್ಕೆ ಬೇಗನೆ ಹಾಗು ಹೆಚ್ಚಿನ ಸಂಕ್ಯೆಯಲ್ಲಿ ತಲುಪಲು ನೆರವಾಗುತ್ತದೆ.

ಹಿಗ್ಗಿದ ನೆತ್ತರುಗೊಳವೆಗಳು, ಸೋಂಕು ತಗುಲಿದ ಗೂಡುಕಟ್ಟುಗಳಿಗೆ (tissue) ನೆತ್ತರಿನ ಹರಿಕ (fluid) ಹಾಗು ನೆತ್ತರು ಗೂಡುಗಳು (blood cells) ಜಿನುಗುವಂತೆ ಮಾಡುತ್ತವೆ. ಇದರಿಂದ ಆ ಬಾಗದಲ್ಲಿ ಊತ (swelling) ಉಂಟಾಗುತ್ತದೆ. ಬೆಳ್ ನೆತ್ತರ (ಬೆನೆ) ಕಣಗಳು ಕೆಡುಕುಕಣಗಳ ಎದುರಾಗಿ ಸೆಣಸುವಾಗ ಉಂಟಾಗುವ ಇರ‍್ಪುಗಳಿಂದ (chemicals) ಸ್ವಲ್ಪ ಮಟ್ಟಿಗೆ ಉರಿಯುವಿಕೆಯಾಗುತ್ತದೆ. ಸೋಂಕು ತಗುಲಿದ ಮಯ್ಬಾಗದಲ್ಲಿ ಹೀಗೆ ಉಂಟಾದ ಉರಿ + ಊತದ ಹಮ್ಮುಗೆಯು ಸೋಂಕು ಹರಡದಂತೆ ನೋಡಿಕೊಳ್ಳುತ್ತವೆ.

iii) ಹುಟ್ಟುಕೊಲ್ಲು ಕಣಗಳು/ಹುಕೊ ಕಣಗಳು (natural killer cells/NK cells): ನಂಜುಳಗಳು (virus) ಹೊಕ್ಕಿರುವ ಗೂಡುಗಳು ಹಾಗು ಏಡಿ ಹುಣ್ಣಿನ ಗೂಡುಗಳನ್ನು (cancer cells) ಗುರುತಿಸುವ ಹಾಗು ಕೊಲ್ಲುವ ಕಸುವನ್ನು ಹೊಂದಿರುವ ಇವು ಹಾಲ್ರಸಕಣಗಳಲ್ಲೇ (lymphocytes) ತನಿಬಗೆಯದು (special).

ಹದುಳದ ಗೂಡುಗಳ ಮೇಲೆ ಗೊತ್ತುಪಡಿಸಿದ ಹೊರಮಯ್ ಗುರುತುಗಳು (surface markers) ಇರುತ್ತವೆ. ಹಾಗು ಇವುಗಳ ಸಂಕ್ಯೆಯು ಇಂತಿಶ್ಟೆ ಇರಬೇಕು ಎಂದು ಗೊತ್ತುಪಡಿಸಲಾಗಿರುತ್ತದೆ. ಹುಕೊ ಕಣ ಗೂಡುಗಳ ಈ ಗುರುತುಗಳ ಬಗೆ ಹಾಗು ಸಂಕ್ಯೆಯನ್ನು ಗುರುತಿಸುವ ಅಳವನ್ನು ಹೊಂದಿರುತ್ತವೆ.

ಗೂಡುಗಳಿಗೆ ಏಡಿ ಹುಣ್ಣಿನ ಬೇನೆ (cancer) ಇಲ್ಲವೇ ಇನ್ನಾವುದೇ ಸೋಂಕು ತಗುಲಿದಾಗ, ಗೂಡುಗಳ ಈ ಹೊರಮಯ್ ಗುರುತುಗಳ ಸಂಕೆ ಏರುಪೇರಾಗಬಹುದು. ಈ ಏರುಪೇರನ್ನು ಗುರುತಿಸಬಲ್ಲ ಹುಕೊ ಕಣಗಳು, ಏಡಿ ಹುಣ್ಣಿನ ಗೂಡುಗಳು ಹಾಗು ಸೋಂಕು ತಗುಲಿದ ಗೂಡುಗಳು ಮಯ್ಯಲ್ಲಿ ಹರಡುವ ಮುನ್ನ, ಅವುಗಳನ್ನು ಗುರುತಿಸಿ ಕೊಲ್ಲುತ್ತವೆ.

iv) ತಿನಿಗೂಡುಗಳು (phagocytes): ಕೆಡುಕುಕಣಗಳನ್ನು ನುಂಗುವ ಹಾಗು ಅರಗಿಸಿಕೊಳ್ಳುವ ಕಸುವನ್ನು ಹೊಂದಿರುವ ಸಪ್ಪೆಬಣ್ಣೊಲವುಕಣಗಳು (neutrophils) ಮತ್ತು ಡೊಳ್ಳುಮುಕ್ಕಗಳಂತ (macrophages) ಗೂಡುಗಳನ್ನು ‘ತಿನ್ನುವ ಗೂಡು’ಗಳು ಇಲ್ಲವೆ ‘ತಿನಿಗೂಡುಗಳು’ ಎಂದು ಹೇಳಬಹುದು. ತಿನಿಗೂಡುಗಳು ಕೆಡುಕುಕಣಗಳಲ್ಲದೆ, ಮುರಿದ ಹಾಗು ಸತ್ತ ಗೂಡುಗಳನ್ನೂ ಗುರುತಿಸುವ ಹಾಗು ತಿನ್ನುವುದರಿಂದ ನಮ್ಮ ಮಯ್ಯನ್ನು ಹಸನ (clean) ಮಾಡುವಲ್ಲಿ ನೆರವಾಗುತ್ತವೆ.

v) ಗೂಡ್ಬಗೆ ಕಾಪೇರ‍್ಪಾಟು (cell-mediate immunity): (ಚಿತ್ರ 2 & 3) ನುಸುಳುವ ಕೆಡುಕುಕಣಗಳನ್ನು ರೂಡಿಯ ಕಾಪೇರ‍್ಪಾಟಿನ (innate immunity) ಡೊಳ್ಳುಮುಕ್ಕಗಳು (macrophages) ಹಾಗು ಕವಲ್ಗೂಡುಗಳು (dendritic cells) ಎದುರುಗೊಳ್ಳುತ್ತವೆ, ಕೆಡುಕುಕಣಗಳನ್ನು ನುಂಗುವ ಹಾಗು ಅವುಗಳ ಒಗ್ಗದಿಕವನ್ನು (antigen) ಅಣಿಗೊಳಿಸುವ ಮೂಲಕ ‘ಒಗ್ಗದಿಕ ಒಪ್ಪಿಸುವ ಗೂಡು’ಗಳಾಗಿ (ಒಗ್ಗೂಡು) (antigen presenting cells/APC) ಬದಲಾಗುತ್ತವೆ. ಕೆಡುಕುಕಣಗಳ ಒಗ್ಗದಿಕಗಳನ್ನು ತಮ್ಮ ಹೊರ ಮಯ್ಮೇಲೆ ಏರಿಸಿಕೊಂಡ ಒಗ್ಗೂಡುಗಳು (APCs), ಹಾಲ್ರದೇರ‍್ಪಾಟಿನ ಹಾದಿಯಲ್ಲಿ ಸಾಗಿ, ಕೆಡುಕುಕಣಗಳ ಒಗ್ಗದಿಕಗಳನ್ನು T-ಗೂಡು ಹಾಗು B-ಗೂಡುಗಳಿಗೆ ಒಪ್ಪಿಸುತ್ತವೆ.

kaperpatu_4_2

ಚುರುಕಲ್ಲದ T-ಗೂಡುಗಳು ಹಾಲ್ರಸದ ಗೂಡುಕಟ್ಟುಗಳಲ್ಲಿ ನೆಲೆಸಿರುತ್ತವೆ. ಒಂದಶ್ಟು T-ಗೂಡುಗಳು ಕೆಡುಕುಕಣಗಳ ಒಗ್ಗದಿಕವನ್ನು ಗುರುತಿಸುವ ಪಡೆಕಗಳನ್ನು (receptors) ಹೊಂದಿರುತ್ತವೆ. ಒಗ್ಗೂಡುಗಳು ಕೆಡುಕುಕಣಗಳ ಒಗ್ಗದಿಕಗಳನ್ನು T-ಗೂಡುಗಳಿಗೆ ಒಪ್ಪಿಸುತ್ತಿದ್ದಂತೆ, T-ಗೂಡುಗಳು ಚುರುಕುಗೊಳ್ಳುತ್ತವೆ ಹಾಗು ಮರುಹುಟ್ಟಿಸುವ (reproduce) ಹಮ್ಮುಗೆಯ ಮೂಲಕ ಬಿರುಸಿನಿಂದ ತಮ್ಮ ಸಂಕ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಎಚ್ಚೆತ್ತುಕೊಂಡ ಚುರುಕಿನ T-ಗೂಡಿನ (activated T-cells) ದಂಡು, ಮಯ್ಯಲ್ಲೆಲ್ಲಾ ಹರಡಿ, ಕೆಡುಕುಕಣಗಳ ಎದುರಾಗಿ ಸೆಣಸುತ್ತವೆ.

ಎಚ್ಚೆತ್ತುಕೊಂಡ T-ಗೂಡುಗಳಲ್ಲಿ ಎರಡು ಬಗೆ: ‘ಗೂಡ್ನಂಜಿನ T-ಗೂಡು’ (cytotoxic T-cell) ಹಾಗು ‘ನೆರವಿನ T-ಗೂಡು’ (helper T-cell). ಗೂಡ್ನಂಜಿನ T-ಗೂಡುಗಳು ನೇರವಾಗಿ ಕೆಡುಕುಕಣ ಹಾಗು ನಂಜುಳಗಳ ಸೋಂಕು ತಗುಲಿದ ಗೂಡುಗಳಿಗೆ ಅಂಟಿಕೊಂಡು, ತನ್ನ ನಂಜಿನ (toxin) ನೆರವಿನಿಂದ ಅವುಗಳನ್ನು ಕೊಲ್ಲುತ್ತವೆ. ನೆರವಿನ T-ಗೂಡುಗಳು, B-ಗೂಡು ಹಾಗು ಡೊಳ್ಳುಮುಕ್ಕಗಳನ್ನು ಬಡಿದೆಬ್ಬಿಸುವ ಮೂಲಕ, ಕಾಪೇರ‍್ಪಾಟಿನಲ್ಲಿ ಪಾಲ್ಗೊಳ್ಳುತ್ತವೆ.

kaperpatu_4_3

ಸೋಂಕನ್ನು ಹಿಮ್ಮೆಟ್ಟಿಸಿದ ಮೇಲೆ, ಸೋಂಕನ್ನು ಉಂಟುಮಾಡಿದ್ದ ಕೆಡುಕುಕಣದ ಒಗ್ಗದಿಕವನ್ನು ‘ನೆನಪಿನ T- ಗೂಡು’ಗಳು (memory T cells) ನೆನಪಿನಲ್ಲಿಟ್ಟುಕೊಂಡಿರುತ್ತವೆ. ಹಿಂದೆ ಸೋಂಕನ್ನು ಉಂಟುಮಾಡಿದ್ದ ಕೆಡುಕುಕಣಗಳು ಮತ್ತೆ ಲಗ್ಗೆ ಇಟ್ಟರೆ ನೆನಪಿನ T-ಗೂಡುಗಳು ಕೆಡುಕುಕಣಗಳ ಒಗ್ಗದಿಕಗಳನ್ನು (antigen) ತುಂಬಾ ಕಡಿಮೆ ವೇಳೆಯಲ್ಲಿ ಗುರುತಿಸಿ, ಅವುಗಳನ್ನು ಸದೆಬಡಿಯುತ್ತವೆ.

ಕೆಲವು ಕೆಡುಕುಕಣಗಳ ಒಗ್ಗದಿಕಗಳ ಗುರುತನ್ನು, ನೆನಪಿನ T-ಗೂಡುಗಳು ಕೆಲವು ವರುಶಗಳವರೆಗೆ ನೆನಪಿನಲ್ಲಿ ಇಟ್ಟುಕೊಂಡರೆ, ಹೆಚ್ಚಿನ ಕೆಡುಕುಕಣಗಳ ಒಗ್ಗದಿಕಗಳ ನೆನಪನ್ನು ಸೋಂಕು ತಗುಲಿದ್ದ ಮನುಶ್ಯನ ಬಾಳ್ವಿಕೆಯುದ್ದಕ್ಕೂ (life time) ನೆನಪಿನಲ್ಲಿ ಇಟ್ಟುಕೊಂಡಿರುತ್ತವೆ.

vi) ಎದುರುಕಬಗೆ ಕಾಪೇರ‍್ಪಾಟು (antibody-mediated immunity): (ಚಿತ್ರ 3 & 4) ಸೋಂಕು ತಗುಲಿದಾಗ ಒಗ್ಗೂಡುಗಳಾಗಿ (APC) ಮಾರ‍್ಪಡುವ ಡೊಳ್ಳುಮುಕ್ಕಗಳು ಹಾಗು ಕವಲ್ಗೂಡುಗಳು, ಹಾಲ್ರಸದ ಗೂಡುಕಟ್ಟುಗಳ T-ಗೂಡುಗಳಲ್ಲದೆ, ಎದುರುಕಗಳನ್ನು (antibody) ಮಾಡುವ ಕಸುವನ್ನು ಹೊಂದಿರುವ B-ಗೂಡುಗಳನ್ನೂ ಚುರುಕುಗೊಳಿಸುತ್ತವೆ. ನೆರವಿನ T-ಗೂಡು ಕೂಡ B-ಗೂಡುಗಳನ್ನು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ.

kaperpatu_4_4

ಚುರುಕುಗೊಂಡ B-ಗೂಡುಗಳು ರಸಗೂಡು (plasma cells) ಹಾಗು ನೆನಪಿನ B-ಗೂಡುಗಳಾಗಿ (memory B-cells) ಬದಲಾಗುತ್ತವೆ. ರಸಗೂಡುಗಳು ಸಾವಿರಾರು ಬಗೆಯ ಎದುರುಕಗಳನ್ನು ಮಾಡುವ ಕಸುವನ್ನು ಹೊಂದಿರುತ್ತವೆ. ನೆನಪಿನ B-ಗೂಡುಗಳು ಹಾಲ್ರಸದೇರ‍್ಪಾಟಿನಲ್ಲಿ ಇದ್ದುಕೊಂಡು, ಕೆಡುಕುಕಣದಿಂದ ಒಮ್ಮೆ ಉಂಟಾದ ಸೋಂಕು ಮತ್ತೊಮ್ಮೆ ತಗುಲಿದರೆ, ತಿರುಗಿಬೀಳಲು ಕಾಯುತ್ತಿರುತ್ತವೆ.

ಮುನ್ನುಗಳಿಂದ ಮಾಡಲ್ಪಟ್ಟ ಎದುರುಕಗಳು, ದಂಡಾಣು, ಗೂಡು ಹಾಗು ನಂಜುಳಗಳ ಮೇಲೆ ಇರುವ ಗೊತ್ತುಮಾಡಿದ (specific) ಒಗ್ಗದಿಕಗಳಿಗೆ ಅಂಟಿಕೊಂಡು, ಅವುಗಳನ್ನು ಸಯ್ಗೊಳಿಸುತ್ತವೆ (neutralize). ಈ ಬಗೆಯ ಸಯ್ಗೊಳಿಸುವಿಕೆ, ನಂಜುಳ/ಗೂಡು/ಕೆಡುಕುಕಣಗಳ ಮರುಹುಟ್ಟುವಿಕೆ ಹಾಗು ಹರಡುವಿಕೆಯನ್ನು ತಡೆಯಲು ನೆರವಾಗುತ್ತದೆ. ಎದುರುಕವು ಕೆಡುಕುಕಣಗಳನ್ನು ಸಯ್ಗೊಳಿಸಿದರೆ, ತಿನಿಗೂಡುಗಳು ಕೆಡುಕುಕಣಗಳನ್ನು ನುಂಗಲು ಸುಳುವಾಗುತ್ತದೆ.

ಒಟ್ಟಾರೆ, ತನಿಬಗೆಯ (special) ಗೂಡುಗಳು, ಮುನ್ನುಗಳು (proteins), ಗೂಡಿನಕಟ್ಟು (tissues) ಹಾಗು ಅಂಗಗಳನ್ನು ಹೊಂದಿರುವ ಕಾಪು ಹಾಗು ಹಾಲ್ರಸದ ಏರ‍್ಪಾಟುಗಳು ದಂಡಾಣು (bacteria), ನಂಜುಳ (virus) ಹಾಗು ಇನ್ನಿತರ ಅಂಶಗಳಿಂದ ನಮ್ಮ ಮಯ್ಯಯಿಗೆ ಕೆಡುಕುಂಟಾಗದಂತೆ ಕಾವಲು ಕಾಯುವುದರ ಜೊತೆಗೆ ಗೂಡುಗಳ ನಡುವೆ ಇರುವು ಹರಿಕಗಳನ್ನು (fluids) ತೆಗೆಯುವುದು, ಸಾಗಿಸುವುದು ಮತ್ತು ತರುಮಾರ‍್ಪಿಸುವ (metabolization) ಕೆಲಸವನ್ನೂ ಮಾಡುತ್ತವೆ.

ಈ ಬರಹದೊಂದಿಗೆ, ಕಾಪೇರ‍್ಪಾಟು ಹಾಗು ಹಾಲ್ರಸದೇರ‍್ಪಾಟುಗಳ ಸರಣಿ ಬರಹಗಳನ್ನು ಕೊನೆಗೊಳಿಸುತ್ತಿದ್ದೇನೆ. ಮುಂದಿನ ಬರಹದಲ್ಲಿ ಮತ್ತೊಂದು ಏರ‍್ಪಾಟಿನ ಬಗ್ಗೆ ತಿಳಿಸಿಕೊಡಲಿದ್ದೇನೆ.

(ಚಿತ್ರ ಮತ್ತು ತಿಳಿವಿನ ಸೆಲೆಗಳು: 1. classes.midlandstech.com, 2. medialib.glogster.com, 3.docstoccdn.com, 4. stanford.edu5. innerbody.com)

ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 3

ಹಿಂದಿನ ಬರಹದಲ್ಲಿ ಕಾಪೇರ‍್ಪಾಟು ಹಾಗು ಹಾಲ್ರಸದೇರ‍್ಪಾಟುಗಳಲ್ಲಿ ಬಾಗವಹಿಸುವ ಇಟ್ಟಳಗಳ ಬಗ್ಗೆ ತಿಳಿಸಿಕೊಡಲಾಯಿತು.

ಆ ಬರಹದಲ್ಲಿ ತಿಳಿದುಕೊಂಡಂತೆ, ಹಾಲ್ರಸದೇರ‍್ಪಾಟು, ಹಾಲ್ರಸವೆಂಬ (lymph) ಹರಿಕವನ್ನು (liquid) ಗೂಡುಕಟ್ಟುಗಳಿಂದ (tissue) ನೆತ್ತರಿನ ಏರ‍್ಪಾಟಿಗೆ ಹಿಂತಿರುಗಿಸುವ ಕೆಲಸವನ್ನು ಮಾಡುತ್ತದೆ. ಗೂಡುಕಟ್ಟುಗಳಿಂದ ಒಟ್ಟುಗೂಡಿಸುವ ಹರಿಕವನ್ನು ನೆತ್ತರಿನ ಏರ‍್ಪಾಟಿಗೆ ತಲುಪಿಸುವ ಮುನ್ನ, ಹರಿಕದಲ್ಲಿರಬಹುದಾದ ಕಸ, ಬೇಡವಾದ ಸೂಲುಗೂಡುಗಳು ಇಲ್ಲವೆ ಗೂಡುಕಟ್ಟುಗಳನ್ನು ಹೊಕ್ಕಿರಬಹುದಾದ ಯಾವುದೇ ಬಗೆಯ ಕೆಡುಕುಕಣಗಳನ್ನು (pathogens) ಸೋಸುವ ಕೆಲಸವನ್ನು ಹಾಲ್ರಸದೇರ‍್ಪಾಟು ಮಾಡುತ್ತದೆ.

ಹಾಲ್ರಸದೇರ‍್ಪಾಟಿನ ಮುಕ್ಯ ಕೆಲಸಗಳೆಂದರೆ ಹಾಲ್ರಸದ ಹರಿಸುವಿಕೆ (lymph circulation) ಹಾಗು ಮುನ್ಗೊಬ್ಬುಂಡೆಗಳ ಸಾಗಿಸುವಿಕೆ (transportation of chylomicrons).

ಹಾಲ್ರಸದ ಹರಿಸುವಿಕೆ (circulation of lymph):

ಗೂಡುಕಟ್ಟುಗಳಿಂದ (tissue) ಹಾಲ್ರಸವನ್ನು (lymph) ಒಟ್ಟುಗೂಡಿಸಿ ನೆತ್ತರು ಹರಿಸುವಿಕೆಯ ಏರ‍್ಪಾಟಿಗೆ (circulatory system) ತಲುಪಿಸುವುದು ಹಾಲ್ರಸದ ಹರಿಸುವಿಕೆಯ ಏರ‍್ಪಾಟಿನ ಕೆಲಸಗಳಲ್ಲಿ ಒಂದು. ನವಿರುಹಾಲ್ರಸಗೊಳವೆ (lymph capillary) ಹಾಗು ಹಾಲ್ರಸಗೊಳವೆಗಳಲ್ಲಿ (lymphatic vessel) ಹೆಚ್ಚಿನ ಒತ್ತಡವಿಲ್ಲದೆ ಹಾಲ್ರಸವು ಸಾಗುತ್ತದೆ. ಹಾಲ್ರಸಗೊಳವೆಗಳಲ್ಲಿ ಮುಂದೆ ಸಾಗಿದ ಹಾಲ್ರಸವು ಹಿಮ್ಮುಕವಾಗಿ ಹರಿಯುವುದನ್ನು ತಡೆಯಲು, ಅಲ್ಲಲ್ಲಿ ಒಮ್ಮುಕ ತಡೆ ತೆರಪುಗಳು (one-way check valves) ಇರುತ್ತವೆ.

ಕಯ್ಕಾಲುಗಳ ಕಟ್ಟಿನ ಕಂಡಗಳ (skeletal muscles) ಕುಗ್ಗುವಿಕೆಯು, ಹಾಲ್ರಸಗೊಳವೆಗಳ ಗೋಡೆಗಳನ್ನು ಅದುಮುತ್ತವೆ. ಈ ಬಗೆಯ ಅದುಮುವಿಕೆ ಹಾಲ್ರಸಗೊಳವೆಗಳಲ್ಲಿ ಇರುವು ಹಾಲ್ರಸವು ತಡೆ ತೆರಪುಗಳನ್ನು ತಳ್ಳಿಕೊಂಡು ಮುಂದೆ ಸಾಗಲು ನೆರವಾಗುತ್ತದೆ.

ಎದೆ ಹಾಗು ಹೊಟ್ಟೆಯ ಬಾಗವನ್ನು ಬೇರ‍್ಪಡಿಸುವ ತೊಗಲ್ಪರೆಯು (diaphragm) ಉಸಿರನ್ನು ಎಳೆದುಕೊಂಡಾಗ ಹೊಟ್ಟೆಯ ಬಾಗಕ್ಕೆ ಬಾಗುತ್ತದೆ. ತೊಗಲ್ಪರೆಯ ಬಾಗುವಿಕೆ ಹೊಟ್ಟೆಬಾಗದ ಒತ್ತಡವನ್ನು ಏರಿಸುತ್ತದೆ. ಏರಿದ ಹೊಟ್ಟೆಬಾಗದ ಒತ್ತಡವು ಕೆಳಮಟ್ಟದ ಒತ್ತಡವನ್ನು ಹೊಂದಿರುವ ಎದೆಬಾಗಕ್ಕೆ ಹಾಲ್ರಸವನ್ನು ತಳ್ಳುತ್ತದೆ.

ಉಸಿರನ್ನು ಹೊರಹಾಕುವ ಹಮ್ಮುಗೆಯಲ್ಲಿ, ಎದೆಬಾಗದ ಒತ್ತಡವು ಹೆಚ್ಚಿದರೆ, ಹೊಟ್ಟೆಬಾಗದ ಒತ್ತಡ ಇಳಿಯುತ್ತದೆ. ಈ ಒತ್ತಡದ ಏರು-ಪೇರು ಇದ್ದರೂ, ಹಾಲ್ರಸವು ಎದೆಯಿಂದ ಹೊಟ್ಟೆಯ ಬಾಗಕ್ಕೆ ಹೋಗಲು ಆಗುವುದಿಲ್ಲ. ಯಾಕೆಂದರೆ ಹಾಲ್ರಸಗೊಳವೆಗಳಲ್ಲಿ ಇರುವ ತಡೆ ತೆರಪುಗಳು, ಹಾಲ್ರಸವು ಹಿಮ್ಮುಕವಾಗಿ ಹೊಟ್ಟೆಯಬಾಗದ ಕಡೆ ಹರಿಯುವುದನ್ನು ತಡೆಯುತ್ತದೆ.

ಮುನ್ಗೊಬ್ಬುಂಡೆಗಳ (chylomicrons) ಸಾಗಿಸುವಿಕೆ: (ಚಿತ್ರ 1 & 2)

ಹಾಲ್ರಸದೇರ‍್ಪಾಟಿನ ಮತ್ತೊಂದು ಮುಕ್ಯವಾದ ಕೆಲಸವೆಂದರೆ, ಅರಗೇರ‍್ಪಾಟಿನಿಂದ (digestion system) ಕೊಬ್ಬನ್ನು ಸಾಗಿಸುವುದು. ಅರಗೇರ‍್ಪಾಟು, ಕೂಳಿನಲ್ಲಿ ಇರುವ ಹಿಟ್ಟುಸಕ್ಕರೆ (carbohydrate), ಮುನ್ನುಗಳು (proteins) ಹಾಗು ಕೊಬ್ಬುಗಳ ದೊಡ್ಡತುಣುಕುಗಳನ್ನು ಒಡೆದು ಸಣ್ಣ ಆರಯ್ವಗಳನ್ನಾಗಿಸುತ್ತದೆ (nutrients). ಈ ಆರಯ್ವಗಳನ್ನು ಕರುಳಿನ ಗೋಡೆಗಳಲ್ಲಿ ಇರುವ ಎಳೆಗೊಂಡೆಗಳ (villi) ನೆರವಿನಿಂದ ಹೀರಿಕೊಳ್ಳಲಾಗುತ್ತದೆ. ಗೋಡೆಗಳಲ್ಲಿ ಸಾಗುವ ನೆತ್ತರು ಹೆಚ್ಚು-ಕಡಿಮೆ ಎಲ್ಲಾ ಬಗೆಯ ಆರಯ್ವಗಳನ್ನು ಹೀರಿಕೊಳ್ಳುತ್ತದೆ. ಆದರೆ ಕೊಬ್ಬಿನ ಬಾಗವನ್ನು ಹೀರಿಕೊಳ್ಳಲು ಹಾಲ್ರಸದೇರ‍್ಪಾಟು ಬೇಕೆಬೇಕು.

kaperpatu_3_1

ಕೂಳಿನಲ್ಲಿರುವ ಕೊಬ್ಬಿನ ಬಾಗವನ್ನು ಅರಗೇರ‍್ಪಾಟು (digestive system), ಮುನ್ಗೊಬ್ಬುಂಡೆಗಳನ್ನಾಗಿ ಬದಲಾಯಿಸುತ್ತದೆ [ಮುನ್ಗೊಬ್ಬು = ಮುನ್ನು + ಕೊಬ್ಬು = lipid + protein = lipoprotein; ಮುನ್ಗೊಬ್ಬುಗಳನ್ನು ಹೊಂದಿರುವ ಉಂಡೆ = ಮುನ್ಗೊಬ್ಬುಂಡೆ = chylomicrons]. ಮುನ್ಗೊಬ್ಬುಂಡೆ ಮೂರು ಬಗೆಯ ಕೊಬ್ಬುಗಳನ್ನು ಹೊಂದಿರುತ್ತದೆ: ಟ್ರಯ್-ಗ್ಲಿಜರಯ್ಡ್ ಗಳು (triglycerides), ಪಾಸ್ಪೋ-ಕೊಬ್ಬುಗಳು (phospholipids) ಹಾಗು ಕೊಲೆಸ್ಟ್ರಾಲ್ (cholesterol).

ಸಣ್ಣ ಕರುಳಿನ ಎಳೆಗೊಂಡೆಗಳಲ್ಲಿ (villi) ಇರುವ ನವಿರುಹಾಲ್ರಸಗೊಳವೆಗಳನ್ನು (lymph vessels) ಕೊಬ್ಬು-ಹಾಲ್ರಸಗೊಳವೆಗಳೆಂದೂ (lacteals) ಹೇಳಲಾಗುತ್ತದೆ. ಕೊಬ್ಬು-ಹಾಲ್ರಸಗೊಳವೆಗಳು (lacteals) ಸಣ್ಣ ಕರುಳಿನಿಂದ, ಮುನ್ಗೊಬ್ಬುಂಡೆಗಳನ್ನು ಹೀರಿಕೊಳ್ಳುವ ಹಾಗು ಹಾಲ್ರಸದೊಡನೆ ಅವುಗಳನ್ನು ಸಾಗಿಸುವಲ್ಲಿ ನೆರವಾಗುತ್ತವೆ.

kaperpatu_3_2

ಮುನ್ಗೊಬ್ಬುಂಡೆಗಳಿಂದಾಗಿ ಸಣ್ಣ ಕರುಳುಗಳಿಂದ ಒಟ್ಟುಗೂಡಿಸಿದ ಹಾಲ್ರಸವು ಹಾಲಿನ ಬಣ್ಣವನ್ನು ಹೊಂದಿರುತ್ತದೆ. ಈ ಬಗೆಯ ಹಾಲ್ರಸವನ್ನು ಕೊಬ್ಬಾಲ್ರಸ (chyle) ಎಂದು ಹೇಳಬಹುದು. ಕೊಬ್ಬಾಲ್ರಸವು ಹಾಲ್ರಸಗೊಳವೆಗಳ ಮೂಲಕ ಹರಿದು ಎದೆ-ದೊಡ್ಡಾಲ್ರಸಗೊಳವೆಯನ್ನು (thoracic duct) ಸೇರುತ್ತದೆ. ಎದೆ-ದೊಡ್ಡಾಲ್ರಸಗೊಳವೆಯಿಂದ, ಅದು ನೆತ್ತರು ಹರಿಸುವಿಕೆಯೇರ‍್ಪಾಟನ್ನು ತಲುಪುತ್ತದೆ. ನೆತ್ತರು-ಹೊನಲಿನ (blood stream) ನೆರವಿನಿಂದ ಈಲಿ (liver), ಕಟ್ಟಿನಕಂಡ (skeletal muscle) ಮುಂತಾದ ಗೂಡುಕಟ್ಟುಗಳನ್ನು ಸೇರುವ ಮುನ್ಗೊಬ್ಬುಂಡೆಗಳು ತರುಮಾರ‍್ಪಿಸುವಿಕೆಗೆ (metabolism) ಒಳಪಡುತ್ತವೆ.

ಮುಂದಿನ ಕಂತಿನಲ್ಲಿ ಕಾಪೇರ‍್ಪಾಟಿನ ಉಸಿರಿಯರಿಮೆಯನ್ನು (physiology) ತಿಳಿಸಿಕೊಡಲಾಗುವುದು.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. innerbody.com, 2. biology-igcse.weebly.com, 3. gutcritters.com)

ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 2

ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟಿನ ಬರಹದ ಈ ಕಂತಿನಲ್ಲಿ, ಹಾಲ್ರಸದೇರ‍್ಪಾಟಿನ (lymphatic system) ಒಡಲರಿಮೆಯ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಕಂತಿನಲ್ಲಿ ತಿಳಿಸಿರುವಂತೆ, ಹಾಲ್ರಸದೇರ‍್ಪಾಟಿನ ಮುಕ್ಯ ಬಾಗಗಳೆಂದರೆ ನವಿರುಹಾಲ್ರಸಗೊಳವೆಗಳು (lymphatic capillaries), ಹಾಲ್ರಸಗೊಳವೆಗಳು (lymphatic vessels) ಹಾಗು ಹಾಲ್ರಸಗಡ್ಡೆಗಳು (lymph nodes).

baaga 2_titta 1

ನವಿರುಹಾಲ್ರಸಗೊಳವೆಗಳು (lymph capillaries): ( ಚಿತ್ರ 1, 2, 3& ಬಾಗ 1ರ ಚಿತ್ರ 1)
ನೆತ್ತರು ಗೂಡುಕಟ್ಟುಗಳ (tissues) ಮೂಲಕ ಸಾಗುವಾಗ, ಆರಯ್ವ (nutrients) ಹಾಗು ಆವಿಗಳ (gases) ಅದಲು-ಬದಲಿಕೆಗೆ ನೆರವಾಗಲು, ನೆತ್ತರು ತೆಳುವಾದ ಗೋಡೆಯನ್ನು ಹೊಂದಿರುವ ನವಿರುನೆತ್ತರುಗೊಳವೆಗಳನ್ನು (blood capillaries) ಸೇರುತ್ತದೆ. ನವಿರುನೆತ್ತರುಗೊಳವೆಗಳಲ್ಲಿ ಸಾಗುವಾಗ, ನೆತ್ತರುರಸ (plasma), ಸೂಲುಗೂಡುಗಳ ನಡುವೆ ಇರುವ ತಾಣಕ್ಕೆ (interstitial space) ಜಾರಿಕೊಳ್ಳುತ್ತದೆ.

ಹೀಗೆ ಜಾರಿಕೊಡ ನೆತ್ತರುರಸದ ಒಂದಶ್ಟು ಬಾಗ, ಮತ್ತೆ ನವಿರನೆತ್ತರುಗೊಳವೆಯೊಳಕ್ಕೆ ಹಿಂದಿರುಗುತ್ತದೆ. ಆದರೆ, ಉಳಿದ ನೆತ್ತರುರಸದ ಬಾಗವು, ಗೂಡುಗಳ ನಡುವೆ ಇರುವ ತಾಣದಲ್ಲಿ ಗೂಡುನಡುವಿನ ಹರಿಕವಾಗಿ (interstitial fluid) ಉಳಿದುಕೊಳ್ಳುತ್ತದೆ.

ಬೇಕಾಗಿರುವುದಕ್ಕಿಂತ ಹೆಚ್ಚಿನ ಮಟ್ಟದ ಗೂಡುನಡುವಿನ ಹರಿಕದ ಮೊತ್ತವು ಗೂಡುನಡುವಿನ ತಾಣದಲ್ಲಿ ಸೇರಿಕೊಳ್ಳುವುದನ್ನು ತಡೆಯಲು, ಈ ತಾಣಗಳಿಗೆ ಒಂದು ಬಗೆಯ ಕೊಳವೆಯೇರ‍್ಪಾಟು ಚಾಚಿಕೊಂಡಿರುತ್ತದೆ. ಈ ಸಣ್ಣ ಕೊಳವೆಗಳನ್ನು ನವಿರುಹಾಲ್ರಸಗೊಳವೆಗಳು (lymph capillaries) ಎಂದು ಹೇಳಬಹುದು. ನವಿರುಹಾಲ್ರಸಗೊಳವೆಗಳು, ಬೇಕಿರುವ ಮಟ್ಟಕ್ಕಿಂತ ಹೆಚ್ಚಿರುವ ಗೂಡುನಡುವಿನ ಹರಿಕವನ್ನು ಹೀರಿಕೊಂಡು, ನೆತ್ತರು ಹರಿಯುವಿಕೆಯ ಏರ‍್ಪಾಟಿಗೆ (circulatory system) ಹಿಂತಿರುಗಿಸುತ್ತದೆ.

baaga 2_titta 2

ಹಾಲ್ರಸ (lymph):
ಸೂಲುಗೂಡುಗಳ ನಡುವಿನಿಂದ ನವಿರುಹಾಲ್ರಸಗೊಳವೆಗಳು ಹೀರಿಕೊಳ್ಳುವ ಗೂಡುನಡುವಿನ ಹರಿಕವನ್ನು (interstitial fluid) ಹಾಲ್ರಸ (lymph) ಎಂದು ಹೇಳಬಹುದು. ಹಾಲ್ರಸವು ಸೇರುನವಿರುನೆತ್ತರುಗೊಳವೆಗಳಲ್ಲಿ (veins) ಇರುವ ನೆತ್ತರುರಸವನ್ನು ಹೋಲುತ್ತದೆ.

ಹಾಲ್ರಸವು 90 ಬಾಗ ನೀರು ಹಾಗು 10 ಬಾಗ ಮುನ್ನುಗಳು (proteins), ಗೂಡಿನ ತರುಮಾರ‍್ಪಿನಿಂದ ಉಂಟಾದ ಕಸಗಳು (metabolic waste), ಕರಗಿದ ಆವಿ ಹಾಗು ಸುರಿಗೆಗಳ (hormone) ಕರಗಿಕಗಳನ್ನು (solutes) ಹೊಂದಿರುತ್ತದೆ. ಇವುಗಳಲ್ಲದೆ, ಕೆಡುಕುಕಣಗಳಿಂದ ದಾಳಿಗೆ ಒಳಪಟ್ಟ ಮಯ್ ಬಾಗದ ಗೂಡುಕಟ್ಟುಗಳಿಂದ ಬರುವ ಹಾಲ್ರಸವು, ಕೆಡುಕುಕಣಗಳನ್ನು ಹಾಗು ಕೆಡುಕುಕಣಗಳ ಎದುರಾಗಿ ಸೆಣಸುವ ಬೆನೆಕಣಗಳನ್ನು ಹೊಂದಿರುತ್ತದೆ.

ಏಡಿಹುಣ್ಣಿನಿಂದ (cancer) ಬಳಲುತ್ತಿರುವವರಲ್ಲಿ, ಏಡಿಹುಣ್ಣುಗಳ ಬಿಡಿಹಬ್ಬಿಕೆಯಿಂದಾಗಿ (metastasis) ಹಾಲ್ರಸದಲ್ಲಿ ಏಡಿಹುಣ್ಣಿನ ಗೂಡುಗಳು ಕಾಣಿಸಿಕೊಳ್ಳಬಹುದು. ಅರೆಗೇರ‍್ಪಾಟಿನಿಂದ ಸೋಸಲ್ಪಡುವ ಹಾಲ್ರಸವು, ಕರುಳಿನ ಗೊಂಡೆಗಳು (intestinal villi) ಹೀರಿಕೊಂಡ ಕೊಬ್ಬಿನ ಅಂಶಗಳನ್ನು ಹೊಂದಿರುತ್ತವೆ. ಕೊಬ್ಬಿನಿಂದಾಗಿ ಅರಗೇರ‍್ಪಾಟಿನ ಹಾಲ್ರಸವು ಹಾಲಿನ ಬಣ್ಣದಲ್ಲಿರುತ್ತದೆ. ಈ ಕಾರಣದಿಂದ ಅರಗೇರ‍್ಪಾಟಿನ ಹಾಲ್ರಸವನ್ನು ಕೊಬ್ಬಾಲ್ರಸ (chyle) ಎಂದೂ ಕರೆಯುವುದುಂಟು.

ಹಾಲ್ರಸಗೊಳವೆಗಳು (lymph vessels): ( ಚಿತ್ರ 1, 2, 3 & ಬಾಗ 1ರ ಚಿತ್ರ 1)
ಗೂಡುಕಟ್ಟುಗಳಿಂದ ಒಟ್ಟುಗೂಡಿಸಿದ ಹಾಲ್ರಸವನ್ನು ನವಿರುಹಾಲ್ರಸಗೊಳವೆಗಳು (lymph capillary), ಹಾಲ್ರಸಗೊಳವೆಗಳಿಗೆ (lymph vessels) ಸಾಗಿಸುತ್ತವೆ. ಹಾಲ್ರಸಗೊಳವೆಗಳ ಇಟ್ಟಳವು ಸೇರುನೆತ್ತರುಗೊಳವೆಗಳನ್ನು (veins) ಹೋಲುತ್ತವೆ. ಯಾಕೆಂದರೆ, ಸೇರುನೆತ್ತರುಗೊಳವೆಗಳಂತೆ, ಹಾಲ್ರಸಗೊಳವೆಗಳ ಗೋಡೆಯು ತೆಳುವಾಗಿರುವುದರ ಜೊತೆಗೆ ತೆರಪುಗಳನ್ನು (valves) ಹೊಂದಿರುತ್ತವೆ.

ಸೇರುಗೊಳವೆಗಳು ನೆತ್ತರನ್ನು ಗುಂಡಿಗೆಯೆಡೆಗೆ (heart) ಸಾಗಿಸಿದರೆ, ಹಾಲ್ರಸಗೊಳವೆಗಳು, ನೆತ್ತರು ಹರಿಯುವಿಕೆಯ ಏರ‍್ಪಾಟಿನಿಂದ ಸೋರಿದ ನೆತ್ತರಿನ ಹರಿಕವನ್ನು (ಹಾಲ್ರಸ/ನೆತ್ತರುರಸ) ಗುಂಡಿಗೆಯೆಡೆಗೆ ಸಾಗಿಸುವಲ್ಲಿ ನೆರವಾಗುತ್ತವೆ. ಹಾಲ್ರಸಗೊಳವೆಗಳು ಕಟ್ಟಿನ ಕಂಡಗಳ (skeletal muscles) ನಡುವೆ ಸಾಗುತ್ತವೆ. ಕಟ್ಟಿನ ಕಂಡಗಳು ಕುಗ್ಗಿದಾಗ (contract), ಅವು ಹಾಲ್ರಸಗೊಳವೆಗಳ ಮೇಲೆ ಒತ್ತಡವನ್ನು ಹೇರುತ್ತವೆ. ಈ ಒತ್ತಡದಿಂದಾಗಿ, ಹಾಲ್ರಸವು ಗುಂಡಿಗೆಯೆಡೆಗೆ ತಳ್ಳಲ್ಪಡುತ್ತದೆ. ಹಾಲ್ರಸಗೋಡೆಗಳ ಒಳಬಾಗದಲ್ಲಿರುವ ತಡೆ ತೆರಪುಗಳು (check valve), ಹಾಲ್ರಸವು ಹಿಮ್ಮುಕವಾಗಿ ಹರಿಯುವುದನ್ನು ತಡೆಯುತ್ತವೆ.

ಹಾಲ್ರಸಗಡ್ಡೆಗಳು (lymph nodes): ( ಚಿತ್ರ 1, 2, 3 & ಬಾಗ 1ರ ಚಿತ್ರ 1)
ಮಯ್ಯಲ್ಲೆಲಾ ಹರಡಿಕೊಂಡಿರುವ ಹುರಳಿಕಾಯಿಯಂತಿರುವ ಹಾಲ್ರಸಗಡ್ಡೆಗಳು ಕಂಕಳು (arm pit) ಹಾಗು ತೊಡೆಸಂದಿಗಳಲ್ಲಿ (groin/inguinal region) ಹೆಚ್ಚಿನ ಸಂಕೆಯಲ್ಲಿ ಇರುತ್ತವೆ. ಹಾಲ್ರಸಗಡ್ಡೆಯ ಹೊರಬಾಗವು ಮಂದವಾದ ತಂತುಗೂಡುಕಟ್ಟಿನಿಂದ ಮಾಡಲ್ಪಟ್ಟ ಹೊರಪೊರೆಯನ್ನು (capsule) ಹೊಂದಿರುತ್ತದೆ. ಗಡ್ಡೆಯ ಒಳಬಾಗವು ಬಲೆಬಗೆಯ (reticular) ಗೂಡುಕಟ್ಟುಗಳಿಂದ ತುಂಬಿಕೊಂಡಿರುತ್ತದೆ.

baaga 2_titta 3

ಬಲೆಗಳ ಸಂದುಗಳಲ್ಲಿ, ಹಾಲ್ರಸಕಣಗಳು (lymphocytes) ಹಾಗು ಡೊಳ್ಳುಮುಕ್ಕಗಳು (macrophages) ನೆಲೆಸಿರುತ್ತವೆ. ಸೇರುಹಾಲ್ರಸಗೊಳವೆಗಳು (afferent lymph vessels) ಹೊತ್ತು ತರುವ ಹಾಲ್ರಸವನ್ನು ಸೋಸುವ (filter) ಕೆಲಸವನ್ನು ಹಾಲ್ರಸಗಡ್ಡೆಯು ಮಾಡುತ್ತದೆ.

ಗಡ್ಡೆಯ ಬಲೆಬಗೆ ನಾರುಗಳು (reticular fibers) ಹಾಲ್ರಸದಲ್ಲಿರಬಹುದಾದ ಕಸ, ಕೆಡುಕುಕುಕಣ ಹಾಗು ಗೂಡುಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತವೆ. ಗಡ್ಡೆಯಲ್ಲಿರುವ ಡೊಳ್ಳುಮುಕ್ಕಗಳು ಹಾಗು ಹಾಲ್ರಸಕಣಗಳು ಗಡ್ಡೆಯ ಬಲೆಗೆ ಬಿದ್ದ ಕೆಡುಕುಕಣಗಳ ಮೇಲೆ ಎರಗಿ ಕೊಲ್ಲುತ್ತವೆ. ಹಾಲ್ರಸಗಡ್ದೆಯಲ್ಲಿ ಚೊಕ್ಕಗೊಂಡ ಹಾಲ್ರಸವು ತೊರೆಹಾಲ್ರಸಗೊಳವೆಗಳ (efferent lymph vessels) ಮೂಲಕ ದೊಡ್ಡಾಲ್ರಸಗೋಳವೆಗಳೆಡೆಗೆ (lymphatic ducts) ಸಾಗುತ್ತದೆ.

ದೊಡ್ಡ ಹಾಲ್ರಸಗೊಳವೆಗಳು (lymphatic ducts): (ಚಿತ್ರ 1)
ಹಾಲ್ರಸವನ್ನು ಹೊತ್ತ ಎಲ್ಲಾ ಹಾಲ್ರಸಗೊಳವೆಗಳು ದೊಡ್ಡಾಲ್ರಸಗೊಳವೆಗಳಿಗೆ ಸೇರಿಸುತ್ತವೆ. ದೊಡ್ಡಾಲ್ರಸಗೊಳವೆಗಳು, ಹಾಲ್ರಸವನ್ನು ಸೇರುನೆತ್ತರೇರ‍್ಪಾಟಿಗೆ ಸೇರಿಸುತ್ತವೆ (venous blood supply). ಮನುಶ್ಯರ ಮಯ್ಯಲ್ಲಿ ಎರಡು ದೊಡ್ಡಾಲ್ರಸಗೊಳವೆಗಳು ಇರುತ್ತವೆ.

ಎದೆ-ದೊಡ್ಡಾಲ್ರಸಗೊಳವೆ (thoracic duct): ಕಾಲುಗಳು, ಹೊಟ್ಟೆಯ ಬಾಗ (abdomen), ಎಡಗಯ್, ತಲೆ & ಕತ್ತಿನ ಎಡಬಾಗ ಮತ್ತು ಬಲ ತೋಳ್ತಲೆ ಸೇರುಗೊಳವೆಯ (right brachiocephalic vein) ಎಡಬಾಗದ ಎದೆ; ಈ ಬಾಗಗಳಿಂದ ಹೊಮ್ಮುವ ಹಾಲ್ರಸಗೊಳವೆಗಳು, ಎದೆ-ದೊಡ್ಡಾಲ್ರಸಗೊಳವೆಗೆ ಹಾಲ್ರಸವನ್ನು ಸುರಿಯುತ್ತವೆ.

ಬಲ-ದೊಡ್ಡಾಲ್ರಸಗೊಳವೆ (right lymphatic duct): ಬಲ ತೋಳು, ತಲೆ & ಕತ್ತಿನ ಬಲ ಬಾಗ, ಬಲ ತೋಳ್ತಲೆ ಸೇರುಗೊಳವೆಯ (right brachiocephalic vein) ಬಲ ಬಾಗದ ಎದೆಯ ಹಾಲ್ರಸಗೊಳವೆಗಳು ಒಟ್ಟುಗೂಡಿಸಿದ ಹಾಲ್ರಸವು ಬಲ-ದೊಡ್ಡಾಲ್ರಸಗೊಳವೆಯನ್ನು ಸೇರಿಕೊಳ್ಳುತ್ತದೆ.

ಹಾಲ್ರಸತೇಪೆಗಳು (lymphatic nodules): (ಚಿತ್ರ 1, 2, 3 & ಬಾಗ 1ರ ಚಿತ್ರ 1)
ಹಾಲ್ರದೇರ‍್ಪಾಟಿನ ಹಾಲ್ರಸಗಡ್ಡೆ ಹಾಗು ಹಾಲ್ರಸಗೊಳವೆಗಳಿಗೆ ಹೊಂದಿಕೊಂಡಿರದ ಹಾಲ್ರಸಗೂಡುಕಟ್ಟುಗಳನ್ನೂ (lymphatic tissues) ಕಾಣಬಹುದು. ಇವುಗಳಲ್ಲಿ ಹೊರಪೊರೆ (capsule) ಇರುವುದಿಲ್ಲ. ಇವುಗಳನ್ನು ಒಟ್ಟಾಗಿ ಹಾಲ್ರಸತೇಪೆಗಳು ಎಂದು ಹೇಳಲಾಗುತ್ತದೆ.

ಇವು ಹೆಚ್ಚಾಗಿ ಲೋಳೆ ಪದರಗಳಲ್ಲಿ (mucus membrane) ಕಾಣಬಹುದು. ನಮ್ಮ ಮಯ್ಯೊಳಕ್ಕೆ ನುಸುಳುವ ಕೆಡುಕುಕಣಗಳನ್ನು ಮೊದಲು ಎದುರುಗೊಳ್ಳುವ ಇಟ್ಟಳವೆಂದರೆ ಲೋಳೆ ಪದರಗಳು. ಈ ಪದರಗಳಿಗೆ ಕಾಪನ್ನು ಒದಗಿಸಲು ಹಾಲ್ರಸತೇಪೆಗಳು ನೆರವಾಗುತ್ತವೆ.

1) ಬಾಯ್ತೇಪೆಗಳು (tonsils): ಇವುಗಳ ಸಂಕೆ 5. ಎರಡು ನಾಲಿಗೆ ತೇಪೆ (lingual), ಎರಡು ಅಂಗಳ ತೇಪೆ (palatine) ಹಾಗು ಒಂದು ಗಂಟಲ್ಗೂಡು ತೇಪೆಗಳನ್ನು (pharyngeal) ಒಳಗೊಂಡಿರುತ್ತದೆ. ಬಾಯ್ತೇಪೆಗಳು T-ಗೂಡು ಹಾಗು B-ಗೂಡುಗಳನ್ನು ಹೊಂದಿದ್ದು, ತಿನ್ನುವಾಗ ಇಲ್ಲವೆ ಉಸಿರಾಡುವಾಗ ಒಳನುಗ್ಗುವ ಕೆಡುಕುಕಣಗಳನ್ನು ಮಟ್ಟ ಹಾಕಲು ಈ ಗೂಡುಗಳು ನೆರವಾಗುತ್ತವೆ.

2) ಪೇಯರ‍್ನ ತೇಪೆಗಳು (peyer’s patches): ಈ ತೇಪೆಗಳನ್ನು ಮೊಟ್ಟಮೊದಲಿಗೆ ಕಂಡುಕೊಂಡ ಜೊಹಾನ್ ಕೋನಾರ‍್ಡ್ ಪೆಯರ್ (Johann Conard Peyer) ಅವರ ನಿನಪಿಗಾಗಿ, ಪೇಯರ‍್ನ ತೇಪೆಗಳು ಎಂದು ಹೆಸರಿಸಲಾಗಿದೆ. ಸಣ್ಣ ಕರುಳಿನ ಬಾಗವಾದ ಮುರಿಗರುಳಿನಲ್ಲಿ (ileum) ಇವು ಇರುತ್ತವೆ. T-ಗೂಡು ಹಾಗು B-ಗೂಡುಗಳನ್ನು ಹೊಂದಿರುವ ಇವು, ಕರುಳಿನ ಬಾಗದಲ್ಲಿ ಸುಳಿದಾಡುವ ಕೆಡುಕುಕಣಗಳ ಮೇಲೆ ಕಣ್ಣಿಟ್ಟಿರುತ್ತವೆ. T-ಗೂಡು ಹಾಗು B-ಗೂಡುಗಳು ಕೆಡುಕುಕಣಗಳ ಒಗ್ಗದಿಕಗಳನ್ನು (antigen) ಗುರುತಿಸಿದ ಕೂಡಲೆ, T-ಗೂಡು ಹಾಗು B-ಗೂಡುಗಳು ಮಯ್ ಬಾಗಗಳಿಗೆಲ್ಲಾ ಹರಡಿ, ಕೆಡುಕುಕಣಗಳ ನುಸುಳುವಿಕೆಯ ಸುದ್ದಿಯನ್ನು ಸಂಬಂದಪಟ್ಟ ಕಾಪಿನ ಬಾಗಗಳಿಗೆ ಮುಟ್ಟಿಸುವ ಮೂಲಕ ತಗುಲಬಹುದಾದ ಸೋಂಕನ್ನು ತಡೆಯಲು ಮಯ್ಯನ್ನು ಸಜ್ಜುಗೊಳಿಸುತ್ತವೆ.

3) ತೊಳ್ಳೆ (spleen): ಮೊಟ್ಟೆಯಾಕಾರದ ಚಪ್ಪಟೆಯಂತಿರುವ ತೊಳ್ಳೆಯು, ಹೊಟ್ಟೆಯ ಎಡಮೇಲ್ಬಾಗದಲ್ಲಿ ಇರುತ್ತದೆ. ತೊಳ್ಳೆಯ ಹೊರಪರೆಯು ಮಂದವಾದ ತಂತುಗೂಡುಕಟ್ಟಿನಿಂದ ಮಾಡಲ್ಪಟ್ಟಿರುತ್ತದೆ. ತೊಳ್ಳೆಯ ಒಳಬಾಗವು ಕೆಂಪು ತಿರುಳು (red pulp) ಹಾಗು ಬಿಳಿ ತಿರುಳುಗಳಿಂದ (white pulp) ಮಾಡಲ್ಪಟ್ಟಿರುತ್ತವೆ.
ತೊಳ್ಳೆಯ ಹೆಚ್ಚಿನ ಬಾಗವು ಕೆಂಪು ತಿರುಳನ್ನು ಹೊಂದಿದೆ. ಕೆಂಪು ತಿರುಳು ಗುಳಿಗಳನ್ನು (sinus) ಹೊಂದಿದ್ದು, ಈ ಗುಳಿಗಳು ನೆತ್ತರನ್ನು ಸೋಸುವಲ್ಲಿ ನೆರವಾಗುತ್ತದೆ. ಕೆಂಪು ತಿರುಳಿನ ಬಲೆಬಗೆ (reticular) ಗೂಡುಕಟ್ಟುಗಳ ನಾರುಗಳು ಮುರಿದ ಹಾಗು ವಯಸ್ಸಾದ ಕೆನೆ ಕಣಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.

ಕೆಂಪು ತಿರುಳಿನಲ್ಲಿರುವ ಡೊಳ್ಳುಮುಕ್ಕಗಳು (macrophages) ಕೆಟ್ಟಿರುವ ಹಾಗು ವಯಸ್ಸಾದ ಕೆನೆಕಣಗಳನ್ನು ಅರಗಿಸಿ, ಕೆನೆಕಣಗಳಲ್ಲಿರುವ ರಕ್ತಬಣ್ಣಕಗಳನ್ನು (hemoglobin) ಮರುಬಳಕೆಗೆ (recycle) ರವಾನಿಸುತ್ತವೆ. ಕೆಂಪು ತಿರುಳು, ಚಪ್ಪಟಿಕಗಳನ್ನು (platelets) ಕೂಡಿಡುವ ಹಳವನ್ನು ಹೊಂದಿದ್ದು, ಮಯ್ಯಲ್ಲಿ ನೆತ್ತರಿನ ಕೊರತೆಯು ಉಂಟಾದಾಗ, ಈ ಚಪ್ಪಟಿಕಗಳನ್ನು ನೆತ್ತರು ಹರಿಯುವಿಕೆಯ ಏರ‍್ಪಾಟಿಗೆ ಬಿಡುಗಡೆಗೊಳಿಸುತ್ತವೆ.

ಕೆಂಪು ತಿರುಳುಗಳ ನಡುಬಾಗದಲ್ಲಿ ಬಿಳಿ ತಿರುಳುಗಳು ನೆಲೆಸಿರುತ್ತವೆ. ಬಿಳಿ ತಿರುಳು ಹಾಲ್ರಸದ ಗೂಡುಕಟ್ಟುಗಳಿಂದ ಮಾಡಲ್ಪಟ್ಟಿದ್ದು, T-ಗೂಡುಗಳು, B-ಗೂಡುಗಳು ಹಾಗು ಡೊಳ್ಳುಮುಕ್ಕಗಳನ್ನು ಹೊಂದಿರುತ್ತವೆ.

4) T-ನೆರೆನೆರು (thymus): ಮುಮ್ಮೂಲೆಯ (triangle) ಆಕಾರವಿರುವ T-ನೆರೆನೆರು ಗುಂಡಿಗೆ ಹಾಗು ಎದೆಚಕ್ಕೆಗಳ (sternum) ನಡುವೆ ಇರುತ್ತದೆ. ಪಿಂಡಗೂಸು (fetus) ಹಾಗು ಎಳವೆಯ ಹಂತಗಳಲ್ಲಿ, T-ನೆರೆನೆರು, T-ಗೂಡುಗಳನ್ನು ಮಾಡುವ ಹಾಗು ಅವುಗಳನ್ನು ನೆರೆಸುವ (mature) ಹಮ್ಮುಗೆಯಲ್ಲಿ ತೊಡಗುತ್ತದೆ.

ಕೆಂಪು ಮೂಳೆಮಜ್ಜೆಯಲ್ಲಿ ಮಾಡಲ್ಪಡುವ T-ಗೂಡುಗಳೂ T-ನೆರೆನೆರಿನಲ್ಲಿ ನೆರೆಯುತ್ತವೆ. ಮಯ್ನೆರೆಯುವಿಕೆಯ (puberty) ಹಂತವನ್ನು ತಲುಪುತ್ತಿದಂತೆ, ಮನುಶ್ಯರ ಕಾಪೇರ‍್ಪಾಟಿನಲ್ಲಿ T-ನೆರೆನೆರಿನ ಕೆಲಸ ಇಳಿಯುತ್ತಾ ಹೋಗುತ್ತದೆ. ಮನುಶ್ಯರು ದೊಡ್ಡವರಾದ ಕೂಡಲೇ, ಚಟುವಟಿಕೆಯನ್ನು ಕಡಿಮೆಮಾಡಿಕೊಂಡ ಮೇಲೆ ನೆರನೆರಿನ ಹಾಲ್ರಸದ ಗೂಡುಕಟ್ಟು ಕೊಬ್ಬಿನ ಗೂಡುಕಟ್ಟುಗಳಾಗಿ ಮಾರ‍್ಪಡುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. embryology.med 2. en.wikipedia.org, 3. biology-forums.com , 4. remnanthealth.com, 5. niaid.nih.gov, 6. innerbody.com)

ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 1

ನಮ್ಮ ಮಯ್ಯಲ್ಲಿರುವ ಹಲವು ಏರ‍್ಪಾಟುಗಳ ಬಗ್ಗೆ ಹಿಂದಿನ ಬರಹಗಳಲ್ಲಿ ತಿಳಿಸುತ್ತಾ ಬರಲಾಗಿದೆ. ನಮ್ಮ ಮಯ್ಯ ಕುರಿತ ಈ ಬರಹಗಳನ್ನು ಮುಂದುವರೆಸುತ್ತಾ ಮುಂದಿನ ಕೆಲವು ಕಂತುಗಳಲ್ಲಿ ನಮ್ಮ ಮಯ್ಯನ್ನು ಕಾಪಾಡುವ ಏರ‍್ಪಾಟುಗಳತ್ತ ಅರಿವಿನ ನೋಟ ಬೀರೋಣ.

ನಮ್ಮ ಮಯ್ಯನ್ನು ಕಾಪಾಡಲು ಅಣಿಗೊಂಡಿರುವ ಎರಡು ಏರ‍್ಪಾಟುಗಳಾದ ಕಾಪೇರ‍್ಪಾಟು (immune system) ಹಾಗು ಹಾಲ್ರಸದೇರ‍್ಪಾಟುಗಳ (lymphatic system) ಹಲವಾರು ಇಟ್ಟಳ (structure) ಹಾಗು ಕೆಲಸಗಳು ಒಂದೇ ತರನಾಗಿರುವುದರಿಂದ ಇವುಗಳನ್ನು ಒಟ್ಟಾಗಿ ತಿಳಿದುಕೊಳ್ಳುವುದು ಒಳಿತು.

ಕಾಪೇರ‍್ಪಾಟು ನಮ್ಮ ಮಯ್ಯೊಳಕ್ಕೆ ನುಸುಳುವ ನಂಜುಳ (virus), ದಂಡಾಣು (bacteria), ಬೂಸು (fungus) ಹಾಗು ಹೊರಕುಳಿ (parasite) ಮುಂತಾದ ಕೆಡುಕು-ಕಣಗಳೊಡನೆ (pathogens) ಹೊಡೆದಾಡಿ, ನಮ್ಮ ಮಯ್ಯಿಗೆ ತೊಡಕುಂಟಾಗದಂತೆ ಕಾಯುವ ಕೆಲಸವನ್ನು ಮಾಡುತ್ತದೆ.

ಹಾಲ್ರಸದೇರ‍್ಪಾಟು, ಹಾಲ್ರಸವೆಂಬ (lymph) ಹರಿಕವನ್ನು (liquid) ಗೂಡುಕಟ್ಟುಗಳಿಂದ (tissue) ನೆತ್ತರಿನ ಏರ‍್ಪಾಟಿಗೆ ಹಿಂತಿರುಗಿಸುವ ಕೆಲಸವನ್ನು ಮಾಡುತ್ತದೆ. ಗೂಡುಕಟ್ಟುಗಳಿಂದ ಒಟ್ಟುಗೂಡಿಸುವ ಹರಿಕವನ್ನು ನೆತ್ತರಿನ ಏರ‍್ಪಾಟಿಗೆ ತಲುಪಿಸುವ ಮುನ್ನ, ಹರಿಕದಲ್ಲಿರಬಹುದಾದ ಕಸ, ಬೇಡವಾದ ಸೂಲುಗೂಡುಗಳು ಇಲ್ಲವೆ ಗೂಡುಕಟ್ಟುಗಳನ್ನು ಹೊಕ್ಕಿರಬಹುದಾದ ಯಾವುದೇ ಬಗೆಯ ಕೆಡುಕುಕಣಗಳನ್ನು (pathogens) ಸೋಸುವ ಕೆಲಸವನ್ನು ಹಾಲ್ರಸದೇರ‍್ಪಾಟು ಮಾಡುತ್ತದೆ.

ಕರುಳಿನಿಂದ ಹೀರಿಕೊಂಡ ಕೊಬ್ಬುಳಿಗಳನ್ನು (fatty acids), ನೆತ್ತರೇರ‍್ಪಾಟಿಗೆ ತಲುಪಿಸುವ ಕೆಲಸದಲ್ಲೂ ಹಾಲ್ರಸದೇರ‍್ಪಾಟು ಪಾಲ್ಗೊಳ್ಳುತ್ತದೆ. ಈ ಏರ‍್ಪಾಟು ನವಿರುಹಾಲ್ರಸಗೊಳವೆಗಳು (lymphatic capillaries), ಹಾಲ್ರಸಗೊಳವೆಗಳು (lymphatic vessels) ಹಾಗು ಹಾಲ್ರಸಗಡ್ಡೆಗಳನ್ನು (lymph nodes) ಒಳಗೊಂಡಿರುತ್ತದೆ.

ಬರಹದ ಮೊದಲ ಎರಡು ಕಂತುಗಳಲ್ಲಿ ಈ ಏರ‍್ಪಾಟುಗಳ ಒಡಲರಿಮೆಯನ್ನು (anatomy) ತಿಳಿದುಕೊಳ್ಳೋಣ. ಮೂರನೇ ಕಂತಿನಲ್ಲಿ ಉಸಿರಿಯರಿಮೆಯ (physiology) ಬಗ್ಗೆ ತಿಳಿಸಿಕೊಡಲಾಗುವುದು.

ಹಾಲ್ರಸದೇರ‍್ಪಾಟು ಹಾಗು ಕಾಪೇರ‍್ಪಾಟುಗಳ ಮುಕ್ಯ ಬಾಗಗಳೆಂದರೆ ಕೆಂಪು ಮೂಳೆಮಜ್ಜೆ (red bone marrow) ಹಾಗು ಬೆಳ್-ನೆತ್ತರು (ಬೆನೆ) ಕಣಗಳು (ಚಿತ್ರ 1, 2).

ಕೆಂಪು ಮೂಳೆಮಜ್ಜೆ ನೆತ್ತರುಮಾಡುವ (hematopoietic) ಗೂಡುಕಟ್ಟು (tissue). ಇದು ಹೀರುಗದೆಲುಬುಗಳಿಂದ (spongy bone) ಮಾಡಲ್ಪಟ್ಟಿರುವ ಚಪ್ಪಟ್ಟೆ ಎಲುಬುಗಳಲ್ಲಿ (flat bones)ಇರುತ್ತದೆ. ಈ ಗೂಡುಕಟ್ಟಿನಲ್ಲಿ ನೆತ್ತರುಕಣಗಳನ್ನು (blood cells) ಮಾಡುವ ಬುಡಗೂಡುಗಳು (stem cells) ಇರುತ್ತವೆ. ಕಾಪೇರ‍್ಪಾಟಿನಲ್ಲಿ ಪಾಲ್ಗೊಳ್ಳುವ ಎಲ್ಲಾ ಬಗೆಯ ಬೆನೆಕಣಗಳು (white blood cells), ಕೆಂಪು ಮೂಳೆಮಜ್ಜೆಯಲ್ಲಿ ಮಾಡಲ್ಪಡುತ್ತವೆ.

kaperpatu_1_1

ಬೆನೆಕಣಗಳು (WBC) ಎರಡು ಬಗೆಯ ಬುಡಗೂಡುಗಳಿಂದ ಹುಟ್ಟುತ್ತವೆ. ಅವುಗಳೆಂದರೆ,

1) ಮುನ್ನುಚ್ಚಿನ (myeloid) ಬುಡಗೂಡಿನಿಂದ ಒಂಜೀವ ಕಣ (monocytes) ಹಾಗು ನುಚ್ಚಿನಕಣಗಳು (granulocytes) ಹುಟ್ಟುತ್ತವೆ.

2) ಹಾಲ್ರಸಬಗೆ ಬುಡಗೂಡುನಿಂದ ಹುಟ್ಟುಕೊಲ್ಲುಗೂಡುಗಳು/ಹುಕೊಗೂಡು (natural killer cells) ಮತ್ತು ಹಾಲ್ರಸಕಣಗಳು (lymphocytes) ಮಾಡಲ್ಪಡುತ್ತವೆ.

1.1) ಒಂಜೀವ ಕಣಗಳು: (ಚಿತ್ರ 2)

ನುಚ್ಚಿಲ್ಲದ (agranulocyte) ಬೆನೆಕಣವಾದ ಒಂಜೀವಕಣವು ಡೊಳ್ಳುಮುಕ್ಕ (macrophage) ಇಲ್ಲವೆ ಕವಲ್ಗೂಡುಗಳಾಗಿ (dendritic cells) ಮಾರ‍್ಪಡುವ ಅಳವನ್ನು ಹೊಂದಿವೆ.
ಡೊಳ್ಳುಮುಕ್ಕ (macrophages): ನುಚ್ಚಿನ ಕಣಗಳಿಗೆ ಹೋಲಿಸಿದರೆ, ಒಂಜೀವ ಕಣಗಳು ಮಯ್ಗೆ ತಗುಲುವ ಸೋಂಕಿಗೆ ಸ್ವಲ್ಪ ತಡವಾಗಿ ಎಚ್ಚೆತ್ತುಕೊಳ್ಳುತ್ತವೆ. ಸೋಂಕು ತಗುಲಿದ ಮಯ್ ತಾಣವನ್ನು ತಲುಪುವ ಒಂಜೀವ ಕಣಗಳು ಡೊಳ್ಳುಮುಕ್ಕಗಳಾಗಿ ಬದಲಾಗುತ್ತವೆ.

ತಿನಿಗೂಡುಗಳ (phagocytes) ಬಗೆಗಳಲ್ಲಿ ಒಂದಾದ ಡೊಳ್ಳುಮುಕ್ಕವು ಕೆಡುಕುಕಣಗಳನ್ನು ನುಂಗಿ ಅರಗಿಸಿಕೊಳ್ಳುವ ಗುಣವನ್ನು ಹೊಂದಿದೆ. ಸೋಂಕನ್ನು ತಡೆಯುವುದರ ಜೊತೆಗೆ, ಸೋಂಕು ಕೊನೆಗೊಂಡ ಮೇಲೆ ಕೆಡುಕುಕಣ ಹಾಗು ಕಾಪೆರ‍್ಪಾಟುಗಳ ಕಾದಾಟದಿಂದ ಉಂಟಾಗುವ ಕಸಗಳನ್ನೂ ತೆಗೆಯುವ ಕೆಲಸವನ್ನು ಮಾಡುತ್ತದೆ.

ಕವಲ್ಗೂಡುಗಳು (dendritic cells): ತೊಗಲು ಹಾಗು ಲೋಳ್ಪದರದ (mucus membrane) ಗೂಡುಕಟ್ಟುಗಳಲ್ಲಿ ಒಂಜೀವ ಕಣಗಳು ಕವಲ್ಗೂಡುಳಾಗಿ ಮಾರ‍್ಪಡುತ್ತವೆ. ಕವಲ್ಗೂಡುಗಳು ಕೆಡುಕುಕಣಗಳ ಒಗ್ಗದಿಕಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತವೆ. ಒಗ್ಗದಿಕಗಳನ್ನು ಗುರುತಿಸುವಿಕೆ T ಹಾಗು B ಎಂಬ ಹಾಲ್ರಸಕಣಗಳನ್ನು ಚುರುಕುಗೊಳಿಸುವ ಕೆಲಸವನ್ನು ಮಾಡುತ್ತದೆ.

1.2) ನುಚ್ಚಿನ ಕಣಗಳು: (ಚಿತ್ರ 2)
ಇವುಗಳಲ್ಲಿ ಮೂರು ಬಗೆ.

ಕೆಂಬಣ್ಣೊಲವುಕಣಗಳು (eosinophils): ಒಗ್ಗದಿಕೆಯ ಉರಿಯೂತಗಳನ್ನು (allergic inflammation) ಕಡಿಮೆ ಮಾಡುವ ಹಾಗು ಮಯ್ಯೊಳಕ್ಕೆ ನುಸುಳುವ ಹೊರಕುಳಿಗಳ (parasites) ಮೇಲೆ ದಾಳಿಮಾಡುವಲ್ಲಿ ನೆರವಾಗುತ್ತವೆ.

ಮರುಹುಳಿಯೊಲವುಕಣಗಳು (basophils): ಹೊರಕುಳಿ ಹಾಗು ಹಲವು ಬಗೆಯ ಒಗ್ಗದಿಕಗಳು (antigens) ಮಯ್ಯನ್ನು ಹೊಕ್ಕಾಗ, ಹೆಪೆರಿನ್ (heparin) ಹಾಗು ಹಿಸ್ಟಮಿನ್ (histamine) ಎಂಬ ಇರ‍್ಪುಗಳನ್ನು (chemicals) ಸೂಸುವ ಮೂಲಕ ಒಗ್ಗದಿಕೆಯ ಉರಿಯೂತದ (allergic inflammation) ಹಮ್ಮುಗೆಯನ್ನು ಕೆರಳಿಸುತ್ತವೆ.

ಸಪ್ಪೆಬಣ್ಣೊಲವುಕಣಗಳು (neutrophils): ಸೋಂಕು ತಗುಲಿದ ಕೂಡಲೆ ಎಚ್ಚೆತ್ತುಕೊಳ್ಳುವ ಬೆನೆಕಣಗಳಿವು. ಕೆಡುಕುಕಣಗಳು ಸೂಸುವ ಇರ‍್ಪುಗಳನ್ನು (chemicals) ಗುರುತಿಸುವ ಅಳವನ್ನು ಹೊಂದಿರುವ ಸಪ್ಪೆಬಣ್ಣೊಲವುಕಣಗಳು, ಸೋಂಕು ತಗುಲಿದ ಮಯ್ಬಾಗಕ್ಕೆ ಓಡುತ್ತವೆ. ಸೋಂಕು ತಗುಲಿದ ತಾಣವನ್ನು ತಲುಪಿದ ಸಪ್ಪೆಬಣ್ಣೊಲವುಕಣಗಳು, ಕೆಡುಕುಕಣಗಳನ್ನು ತಿನಿಗೂಡುವಿಕೆಯ (phagocytosis) ಹಮ್ಮುಗೆಯಲ್ಲಿ ನುಂಗುತ್ತವೆ. ನುಂಗಿದ ಕೆಡುಕುಕಣವನ್ನು ಇರ‍್ಪುಗಳ ನೆರವಿನಿಂದ ಸಾಯಿಸುತ್ತವೆ.

kaperpatu_1_2

2) ಹಾಲ್ರಸಕಣಗಳು (lymphocytes): (ಚಿತ್ರ 2)
ಹಾಲ್ರಸಬಗೆ ಬುಡಗೂಡುಗಳಿಂದ T ಹಾಗು B ಎಂಬ ಎರಡು ಬಗೆಯ ಹಾಲ್ರಸಕಣಗಳು ಹುಟ್ಟುತ್ತವೆ.

2.1) T-ಹಾಲ್ರಸಕಣಗಳು (T-lymphocytes): T-ಗೂಡುಗಳು ಎಂದೂ ಕರೆಯಬಹುದಾದ ಈ ಬೆನೆಕಣಗಳು, ಗೊತ್ತು ಮಾಡಿದ ಕೆಡುಕುಕಣಗಳ ಎದುರಾಗಿ ಸೆಣಸಲು ನೆರವಾಗುತ್ತವೆ. T-ಗೂಡುಗಳು ನೇರವಾಗಿ ಕೆಡುಕುಕಣಗಳ ಮೇಲೆ ಎರಗುವುದರ ಜೊತೆಗೆ ಕೆಡುಕುಕಣಗಳ ಎದುರಾಗಿ ಸೆಣಸುವ ಉಳಿದ ಕಾಪೆರ‍್ಪಾಟಿನ ಗೂಡುಗಳಿಗೆ ನೆರವಾಗುತ್ತವೆ.

ಒಮ್ಮೆ ಸೋಂಕು ತಗುಲಿದ ಮೇಲೆ ಒಂದಶ್ಟು T-ಗೂಡುಗಳು ಸೋಂಕಿಗೆ ಕಾರಣವಾದ ಕೆಡುಕುಕಣವನ್ನು ನೆನಪಿಟ್ಟುಕೊಳ್ಳಲು, ‘ನೆನಪಿನ T-ಗೂಡುಗಳಾಗಿ’ (memory T-cells) ಬದಲಾಗುತ್ತವೆ. ಒಮ್ಮೆ ಮಾಡಲ್ಪಟ್ಟ ನೆನಪಿನ T-ಗೂಡುಗಳು, ಯಾವಾಗಲು ನೆತ್ತರೇರ‍್ಪಾಟಿನಲ್ಲಿ ಹರಿದಾಡುತ್ತಿರುತ್ತವೆ. ಮುಂದೆ ಅದೇ ಬಗೆಯ ಕೆಡುಕುಕಣ ಮಯ್ಯನ್ನು ಹೊಕ್ಕರೆ ನೆನಪಿನ T-ಗೂಡುಗಳು, ಕೆಡುಕುಕಣಗಳ ಒಗ್ಗದಿಕಗಳನ್ನು (antigen) ತುಂಬಾ ಕಡಿಮೆ ವೇಳೆಯಲ್ಲಿ ಗುರುತಿಸಿ, ಅವುಗಳನ್ನು ಸದೆಬಡಿಯುತ್ತವೆ.

(ನೋಡಿ ಹೇಗಿದೆ ನಮ್ಮ ಮಯ್ಯಿ ಕಾಪಾಡುವ ಪಡೆಗಳ ಏರ‍್ಪಾಟು. ಹಿಂದೊಮ್ಮೆ ಎರಗಿದ ಕೆಡುಕುಕಣಗಳನ್ನು ನೆನಪಿಟ್ಟುಕೊಂಡು ಮುಂದೆ ಅದೇ ಕೆಡುಕುಕಣಗಳು ಬಂದರೆ ಬೇಗನೇ ಗುರುತು ಹಿಡಿದು ಸದೆಬಡೆಯುತ್ತವೆ!)

2.2) B-ಹಾಲ್ರಸಕಣಗಳು/B-ಗೂಡುಗಳು (B-lymphocytes/B-cells): B-ಗೂಡುಗಳು, ಕೆಡುಕುಕಣಗಳನ್ನು ಎದುರುಗೊಂಡ ಕೂಡಲೆ ತನ್ನ ಕೆಲಸವನ್ನು ಚುರುಕುಗೊಳಿಸಲು ರಸಗೂಡುಗಳಾಗಿ (plasma cells) ಬದಲಾಗುತ್ತವೆ. ರಸಗೂಡುಗಳು, ಕೆಡುಕುಕಣದ ಒಗ್ಗದಿಕಗಳ (antigen) ಎದುರಾಗಿ ಎದುರುಕಗಳನ್ನು (antibody) ಮಾಡುತ್ತವೆ. ಎದುರುಕಗಳು, ಕೆಡುಕುಕಣಗಳ ಒಗ್ಗದಿಕಗಳಿಗೆ ಅಂಟಿಕೊಳ್ಳುವ ಮೂಲಕ, ಉಳಿದ ಕಾಪೇರ‍್ಪಾಟಿನ ಕಣಗಳು ಕೇಡುಕುಕಣಗಳ ಮೇಲೆ ಎರಗುವ ತನಕ ಕೆಡುಕುಕಣಗಳನ್ನು ತಡೆದು ನಿಲ್ಲಿಸುತ್ತವೆ.

2.3) ಹುಟ್ಟುಕೊಲ್ಲುಗಗೂಡುಗಳು (natural killer cells):
ಹಾಲ್ರಸಕಣಗಳ ಬಗೆಗಳಲ್ಲಿ ಒಂದಾದ ಹುಟ್ಟುಕೊಲ್ಲುಗ (ಹುಕೊ) ಗೂಡುಗಳು ಹಲವು ಬಗೆಯ ಕೆಡುಕುಕಣಗಳು ಹಾಗು ಏಡಿ ಹುಣ್ಣಿನ ಗೂಡುಗಳ (cancer cells) ಎದುರಾಗಿ ಸೆಣಸುವ ಕಸುವನ್ನು ಹೊಂದಿವೆ.

ನೆತ್ತರು ಜಾರಿನಲ್ಲಿ (circulatory tract) ಓಡಾಡುವ ಹುಕೊಗೂಡುಗಳು, ಹಾಲ್ರಸಗಡ್ಡೆ (lymph node), ತೊಳ್ಳೆ (spleen) ಹಾಗು ಕೆಂಪು ಮೂಳೆಮಜ್ಜೆಗಳ (red bone marrow) ಮೇಲೆ ಎರಗುವ ಹಲವಾರು ಕೆಡುಕುಕಣಗಳ ಎದುರಾಗಿ ಸೇಣಸುತ್ತವೆ.

(ಬೆನೆಕಣಗಳ ಬಗ್ಗೆ ಮತ್ತಶ್ಟು ತಿಳಿದುಕೊಳ್ಳಲು ‘ನೆತ್ತರು/ರಕ್ತ’ ಬರಹವನ್ನು ಓದುವುದು.)

ಬರಹದ ಮುಂದಿನ ಕಂತಿನಲ್ಲಿ ಹಾಲ್ರಸದೇರ‍್ಪಾಟಿನ ಅಡಿಯಲ್ಲಿ ಬರುವ ಬಾಗಗಳ ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. embryology.med 2. en.wikipedia.org, 3. biology-forums.com , 4. remnanthealth.com, 5. niaid.nih.gov, 6. innerbody.com)