ನೆತ್ತರು ಗುಂಪುಗಳು (blood groups):
ಅರಿಕೆ:
ನೆತ್ತರು ಗುಂಪುಗಳ ಬಗ್ಗೆ ಅರಿಯಲು, ಕಾಪೇರ್ಪಾಟಿನರಿಮೆ (immunology) ಹಾಗು ಪೀಳಿಯರಿಮೆಯ (genetics) ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನೆತ್ತರು ಗುಂಪಿನ ಬರಹವನ್ನು ಆರಂಬಿಸುವ ಮುನ್ನ, ಬರಹದಲ್ಲಿ ಬಳಸಿರುವ ಪೀಳಿಯರಿಮೆ ಹಾಗು ಕಾಪೇರ್ಪಾಟಿನರಿಮೆಯ ಒಂದಶ್ಟು ಪದಗಳ ಹುರುಳನ್ನು ತಿಳಿಸುವ ಪ್ರಯತ್ನವನ್ನು ಕೆಳಗೆ ಮಾಡಲಾಗಿದೆ. ಉಳಿದಂತೆ, ಕಾಪೇರ್ಪಾಟು (immune system) ಹಾಗು ಪೀಳಿಯರಿಮೆಯ (genetics) ಬರಹಗಳನ್ನು ಬರೆಯುವಾಗ, ಇವುಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುವುದು.
ಪದಗಳ ಹುರುಳು:
ಒಗ್ಗದಿಕ (antigen) ಮತ್ತು ಎದುರುಕ (antibody):
ಕಾಪೇರ್ಪಾಟಿನ ಹಿನ್ನೆಲೆಯಲ್ಲಿ ಹೇಳುವುದಾದರೆ, ಮನುಶ್ಯರ ಮಯ್ಯಲ್ಲಿ ಕಾಪೇರ್ಪಾಟನ್ನು (immune system) ಕೆರಳಿಸುವ ಅಂಶವನ್ನು ಒಗ್ಗದಿಕ (ಮಯ್ಯಿಗೆ ಒಗ್ಗದ) (antigen) ಎಂದು ಹೇಳಬಹುದು. ಒಗ್ಗದಿಕಗಳಿಗೆ ಇದಿರಾಗಿ ಸೆಣಸಲು ಮಯ್ಯಲ್ಲಿ ಮಾಡಲ್ಪಡುವ ಅಂಶವನ್ನು ಎದುರುಕ (antibody) ಎಂದು ಹೇಳಬಹುದು. ಹೀಗೆ ಮಾಡಲ್ಪಟ್ಟ ಎದುರುಕವು, ಒಗ್ಗದಿಕಗಳನ್ನು ಸದೆಬಡೆಯುವ ಕೆಲಸವನ್ನು ಮಾಡುತ್ತವೆ.
ಪೀಳಿ (gene): ಜೀವಿಯ ಹುಟ್ಟುಪರಿಚೆಯ (heredity) ಕಿರುತುಣಕನ್ನು (molecular unit) ಪೀಳಿ ಎಂದು ಹೇಳಬಹುದು.
ಇಕ್ಕಳಿ (allele): ಒಂದು ಪೀಳಿಯು ಹಲವು ಬಗೆಗಳಲ್ಲಿ ಇರಬಹುದು. ಪೀಳಿಯ ಒಂದೊಂದು ಬಗೆಯನ್ನು ಒಂದೊಂದು ಇಕ್ಕಳಿ ಎಂದು ಹೇಳಲಾಗುತ್ತದೆ.
ಪೀಳಿಮಾದರಿ (genotype): ಒಂದು ಜೀವಿಯ ಗೊತ್ತುಮಾಡಿದ ಗುಣವನ್ನು ತೀರ್ಮಾನಿಸುವ ಪೀಳಿಯ ಒಳಪಿಡಿಯನ್ನು (content) ಪೀಳಿಮಾದರಿ ಎನ್ನಲಾಗುತ್ತದೆ.
ತೋರುಮಾದರಿ (phenotype): ಜೀವಿಯ ಪೀಳಿಮಾದರಿ ಹಾಗು ಜೀವಿಯು ಬದುಕುತ್ತಿರುವ ಸುತ್ತಮುತ್ತಲಿನ ಅಂಶಗಳು ಸೇರಿಕೊಂಡು ಜೀವಿಯ ನಿರ್ದಿಶ್ಟವಾದ ಗುಣವು ಹೊರಗಿನ ಜಗತ್ತಿಗೆ ಕಾಣಿಸುವ ಬಗೆಯೇ ತೋರುಮಾದರಿ.
ಮೇಲುಗಯ್ (dominant) ಮತ್ತು ಇಳಿಗಯ್ (recessive): ಪೀಳಿಯರಿಮೆಯಲ್ಲಿ, ಪೀಳಿಯೊಂದರ ಒಂದು ಇಕ್ಕಳಿಯ (allele) ಹೊಮ್ಮುವಿಕೆ, ತನ್ನ ವಾರಗೆಯ ಇಕ್ಕಳಿಯ ಹೊಮ್ಮುವಿಕೆಗಿಂತ ಹೆಚ್ಚಿನ ಅವಕಾಶ ಪಡೆದರೆ, ಹೊಮ್ಮುವ ಅಳವನ್ನು ಹೊಂದಿರುವ ಇಕ್ಕಳಿಯನ್ನು ‘ಮೇಲುಗಯ್ ಇಕ್ಕಳಿ’ (dominant allele) ಹಾಗು ಮೇಲುಗಯ್ ಇಕ್ಕಳಿ ಇಲ್ಲದಿದ್ದರಶ್ಟೆ ಹೊಮ್ಮುವ ವಾರಗೆಯ ಇಕ್ಕಳಿಯನ್ನು ‘ಇಳಿಗಯ್ ಇಕ್ಕಳಿ’(recessive allele) ಎಂದು ಹೇಳಲಾಗುತ್ತದೆ.
ಕೂಡಿಕ್ಕಳಿ (codominant alleles): ಒಂದು ಪೀಳಿಯ ಇಕ್ಕಳಿಗಳೆರಡಕ್ಕೂ ಹೊಮ್ಮುವ ಸಮಾನ ಅವಕಾಶವಿದ್ದರೆ, ಅವು ಕೂಡಿಕ್ಕಳಿಗಳಾಗುತ್ತವೆ.
ನೆತ್ತರಿನ ಬಗ್ಗೆ ನಮ್ಮ ದಿನದ ಬದುಕಿನಲ್ಲಿ ಕೇಳಿಬರುವ ಒಂದಶ್ಟು ಮಾತುಗಳು ಹೀಗಿರುತ್ತವೆ,
- ಗೆಳೆಯರೊಬ್ಬರಿಗೆ ಗಾಡಿಯೊಂದು ಗುದ್ದಿ, ಕಯ್ಕಾಲು ಮುರಿದುಕೊಂಡಿದ್ದಾರೆ; ಅವರ ಮಯ್ಯಿಂದ ತುಂಬಾ ನೆತ್ತರು ಸುರಿದಿದ್ದು ಅವರಿಗೆ A+ ನೆತ್ತರು ಕೊಡುವವರು ಬೇಕಾಗಿದ್ದರೆ.
- ನೆಂಟರೊಬ್ಬರು ಕೊಯ್ಯಾರಯ್ಕೆಗೆ (surgery) ಒಳಪಡುತ್ತಿದ್ದು ಅವರಿಗೆ O+ ನೆತ್ತರು ಬೇಕಾಗಿದೆ. ಈ ಗುಂಪಿನ ನೆತ್ತರಿನವರನ್ನು ಹುಡುಕುತ್ತಿದ್ದೇವೆ.
A+, A-, AB+ ಇಲ್ಲವೆ O+ ನೆತ್ತರುಗಳೆಂದರೇನು? ನೆತ್ತರನ್ನು ಈ ಬಗೆಯಾಗಿ ಗುಂಪಿಸುವುದಾದರೂ ಹೇಗೆ? ತಿಳಿಯೋಣ ಬನ್ನಿ.
ಕೆಂಪು ನೆತ್ತರು ಕಣಗಳ (ಕೆನೆಕ/RBC) ಹೊರ ಮಯ್ ಮೇಲೆ ಗೊತ್ತುಪಡಿಸಿದ ಒಗ್ಗದಿಕಗಳ (antigens) ಇರುವಿಕೆಯ ಆದಾರದ ಮೇಲೆ, ನೆತ್ತರನ್ನು ಹಲವು ಬಗೆಗಳಾಗಿ ಗುಂಪಿಸಬಹುದಾಗಿದೆ. ನೆತ್ತರು ಗುಂಪಿಗೆ ತಕ್ಕಂತೆ ಈ ಒಗ್ಗದಿಕಗಳು ಮುನ್ನು (protein), ಹಿಟ್ಟುಸಕ್ಕರೆ (carbohydrate) ಇಲ್ಲವೇ ಸಕ್ಕರೆಮುನ್ನುಗಳಿಂದ (glycoprotein) ಮಾಡಲ್ಪಟ್ಟಿರುತ್ತವೆ.
ಇಂಟರ್ನ್ಯಾಶ್ನಲ್ ಸೊಸಯ್ಟಿ ಆಪ್ ಬ್ಲಡ್ ಟ್ರಾನ್ಸ್ಪ್ಯೂಜನ್ (ISBT) ಪ್ರಕಾರ ಇದುವರೆಗೂ ಮನುಶ್ಯರಲ್ಲಿ 33 ಬಗೆಯ ನೆತ್ತರು ಗುಂಪುಗಳನ್ನು ಗುರುತಿಸಲಾಗಿದೆ. ಈ 33 ನೆತ್ತರು ಗುಂಪುಗಳಲ್ಲಿ, 600 ರಕ್ಕೂ ಹೆಚ್ಚಿನ ಬಗೆಯ ಒಗ್ಗದಿಕಗಳನ್ನು (antigens) ಕಂಡುಕೊಳ್ಳಲಾಗಿದೆ. ಇವು ಮನುಶ್ಯನ ನೆತ್ತರು ಬಗೆಯನ್ನು ತೀರ್ಮಾನಿಸುತ್ತವೆ.
ಮನುಶ್ಯನಲ್ಲಿ ಇರಬೇಕಾದ ನೆತ್ತರಿನ ಬಗೆಯನ್ನು, ಅವಳು(ನು) ತನ್ನ ತಂದೆ- ತಾಯಿಗಳಿಂದ ಪಡೆಯುವ ನೆತ್ತರು ಗುಂಪಿನ ಒಗ್ಗದಿಕಗಳ ಪೀಳಿಗಳು ತೀರ್ಮಾನಿಸುತ್ತದೆ. ಹೀಗೆ ತೀರ್ಮಾನಿಸಲ್ಪಟ್ಟ ನೆತ್ತರು ಗುಂಪು ಆ ಮನುಶ್ಯನ ಬಾಳ್ವಿಕೆಯ ಕಾಲದಲ್ಲಿ (life span) ಬದಲಾಗುವುದಿಲ್ಲ. ಆದರೆ ಕೆಲವು ಬಗೆಯ ಸೋಂಕು (infection), ಏಡಿಹುಣ್ಣು (cancer) ಇಲ್ಲವೆ ತನ್ಮರೆಗಾಪಿನ (autoimmunity) ಬೇನೆಗಳು ನೆತ್ತರು ಬಗೆಯನ್ನು ತೀರ್ಮಾನಿಸುವ ಕೆನೆ ಕಣಗಳ ಮೇಲಿನ ಒಗ್ಗದಿಕಗಳನ್ನು ಮರೆಮಾಚಿದಾಗ, ನೆತ್ತರಿನ ಗುಂಪು ಬದಲಾಗಬಹುದು.
ಹಾಗೆಯೇ, ಬೆಳ್-ನೆತ್ತರಿನ ಏಡಿಹುಣ್ಣಿನಂತಹ (leukemia) ಬೇನೆಗಳ ಆರಯ್ಕೆಯಲ್ಲಿ ಮೂಳೆ ಮಜ್ಜೆಯನ್ನು (bone marrow) ಮರುನಾಟಿ (transplant) ಮಾಡಲಾಗುತ್ತದೆ; ಕೊಳ್ಳುಗನ (recipient) ನೆತ್ತರಿನ ಗುಂಪಲ್ಲದ ಮನುಶ್ಯನಿಂದ ಮೂಳೆ ಮಜ್ಜೆಯನ್ನು ಪಡೆದುಕೊಂಡರೆ, ಕೊಳ್ಳುಗನ (recipient) ನೆತ್ತರು ಗುಂಪು, ಕೊಡುಗನ (donor) ನೆತ್ತರು ಗುಂಪಾಗಿ ಬದಲಾಗುತ್ತದೆ.
ಯಾವುದೇ ಒಬ್ಬ ಮನುಶ್ಯನ ನೆತ್ತರು ಬಗೆಯನ್ನು ತೀರ್ಮಾನಿಸುವಾಗ, ಹೆಚ್ಚಾಗಿ ABO ಹಾಗು Rh ನೆತ್ತರು ಗುಂಪುಗಳಲ್ಲಿ ಕಂಡು ಬರುವ ಒಗ್ಗದಿಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಉಳಿದ ನೆತ್ತರು ಗುಂಪುಗಳು ಹಾಗು ಸಂಬಂದಿಸಿದ ಒಗ್ಗದಿಕಗಳು ಮನುಶ್ಯರಲ್ಲಿ ಅಶ್ಟಾಗಿ ಕಂಡುಬರುವುದಿಲ್ಲ; ಅವು ಇದ್ದರೂ ಸಣ್ಣ-ಪುಟ್ಟ ಬುಡಕಟ್ಟುಗಳಲ್ಲಿ (ethnicity) ಕಾಣಸಿಗುತ್ತವೆ.
ಬರಹದ ಉಳಿದ ಬಾಗದಲ್ಲಿ ಮುಕ್ಯ ನೆತ್ತರು ಗುಂಪುಗಳಾದ ABO ಮತ್ತು Rh ಗಳ ಬಗ್ಗೆ ತಿಳಿದುಕೊಳ್ಳೋಣ.
ABO ನೆತ್ತರು ಗುಂಪು:
ABO ನೆತ್ತರು ಗುಂಪನ್ನು ಗುರುತಿಸಿದವರಲ್ಲಿ ಆಸ್ಟ್ರಿಯಾ ನಾಡಿನ ಅರಿಗರಾದ (scientist) ಕಾರ್ಲ್ ಲ್ಯಾಂಡ್ ಸ್ಟಿನರ್ (Karl Landsteiner) ಮೊದಲಿಗರು (ಚಿತ್ರ 1). ಅವರು 1900 ರಲ್ಲಿ ABO ನೆತ್ತರು ಗುಂಪಿನ A, B, ಮತ್ತು O ನೆತ್ತರು ಬಗೆಗಳನ್ನು ಗುರುತಿಸಿದರು. ಅವರ ಈ ಸಾದನೆಯನ್ನು ಮೆಚ್ಚಿ 1930 ರಲ್ಲಿ, ನೊಬೆಲ್ ಬಿರುದನ್ನು ನೀಡಲಾಯಿತು. ಆಲ್ಪ್ರೆಡ್ ವಾನ್ ಡಿಕಾಸ್ಟೆಲ್ಲೊ (Alfred von Decastello) ಹಾಗು ಎಡ್ರಿಯಾನೊ ಸ್ಟುರ್ಲಿ (Adriano Sturli) ಅರಿಗರ ಜೋಡಿಯು 1902 ರಲ್ಲಿ ‘AB’ ನೆತ್ತರು ಬಗೆಯನ್ನು ಗುರುತಿಸಿತು.
ABO ನೆತ್ತರು ಗುಂಪಿನಲ್ಲಿ (blood group) ನಾಲ್ಕು ಬಗೆಯ ನೆತ್ತರು ಬಗೆಗಳು (blood type) ಇರುತ್ತವೆ. ಅವುಗಳೆಂದರೆ A, B, AB, ಹಾಗು O. ಎರಡು ಬಗೆಯ ಒಗ್ಗದಿಕಗಳು (antigens) ಹಾಗು ಎರಡು ಬಗೆಯ ಎದುರುಕಗಳು (antibodies) ABO ನೆತ್ತರು ಗುಂಪಿನ ನೆತ್ತರು ಬಗೆಗಳನ್ನು ತೀರ್ಮಾನಿಸುತ್ತವೆ. ABO ನೆತ್ತರು ಗುಂಪಿನಲ್ಲಿ ಒಗ್ಗದಿಕಗಳು ಹಾಗು ಎದುರುಕಗಳ ಪಣುಗೆ-ಸೇರುಗೆಗಳಿಂದ (permutation & combination) ಉಂಟಾಗಬಹುದಾದ ನೆತ್ತರು ಬಗೆಗಳನ್ನು ಪಟ್ಟಿ1 ರಲ್ಲಿ (ಪಟ್ಟಿ 1) ತೋರಿಸಿಕೊಡಲಾಗಿದೆ. (ಉಂಟು=ಒಗ್ಗದಿಕ/ಎದುರುಕ ಇದೆ, ಇಲ್ಲ= ಒಗ್ಗದಿಕ/ಎದುರುಕ ಇಲ್ಲ).
ಉದಾಹರಣೆಗೆ: A ನೆತ್ತರು ಬಗೆಯ ಮನುಶ್ಯರ ಕೆನೆ ಕಣದ (RBC) ಮೇಲೆ A ಒಗ್ಗದಿಕ ಇರುತ್ತದೆ ( ಪಟ್ಟಿ 2). ಆದುದ್ದರಿಂದ, ಇವರಲ್ಲಿ A ಒಗ್ಗದಿಕದ ಇದಿರಾಗಿ, A ಎದುರುಕ ಇರುವುದಿಲ್ಲ. ಏಕೆಂದರೆ, ಈ ಮನುಶ್ಯರಲ್ಲಿ A ಎದುರುಕ ಉಂಟಾದಲ್ಲಿ, ಅದು, ಈ ಮನುಶ್ಯರ ಕೆನೆ ಕಣಗಳನ್ನು ಮುದಿಪುಗೆಡಿಸುತ್ತವೆ. B ಬಗೆಯ ನೆತ್ತರನ್ನು A ನೆತ್ತರು ಬಗೆಯ ಮನುಶ್ಯರ ಹರಿಯುವಿಕೆಯ ಏರ್ಪಾಟಿಗೆ ತುಂಬಿದರೆ, ಈ ಮನುಶ್ಯರಲ್ಲಿರುವ B ಎದುರುಕವು, B ಒಗ್ಗದಿಕವನ್ನು ಹೊಂದಿರುವ ಕೆನೆ ಕಣಗಳನ್ನು ಮಯ್ ಹೊರಗಿನ ಅಂಶವೆಂದು (foreign body) ಗುರುತಿಸಿ, ಅವುಗಳನ್ನು ಮುದಿಪುಗೊಳಿಸುತ್ತವೆ.
O ನೆತ್ತರು ಬಗೆಯನ್ನು ಹೊಂದಿರುವ ಮಂದಿಗಳಲ್ಲಿ, ABO ಒಗ್ಗದಿಕಗಳು (antigens) ಇರುವುದಿಲ್ಲ. ಹಾಗಾಗಿ, ಈ ಬಗೆಯ ನೆತ್ತರನ್ನು ABO ನೆತ್ತರು ಗುಂಪಿನ ಯಾವುದೇ ಬಗೆಯ ನೆತ್ತರನ್ನು ಹೊಂದಿರುವ ಮಂದಿಗೆ ಕೊಡಲು ತೊಡಕಾಗುವುದಿಲ್ಲ. ಈ ಕಾರಣದಿಂದ, ನೆತ್ತರು ಮಾರೆಡೆಗೊಳಿಕೆಯಲ್ಲಿ (blood transfusion) O ನೆತ್ತರು ಬಗೆಯವರನ್ನು ‘ಎಲ್ಲೆಯಿಲ್ಲದ ಕೊಡುಗರು’ (universal donors) ಎಂದು ಹೇಳಲಾಗುತ್ತದೆ. ಆದರೆ O ಗುಂಪಿನವರು, ಬರಿ O ಗುಂಪಿನವರಿಂದ ನೆತ್ತರನ್ನು ಪಡೆಯಲು ಸಾದ್ಯ (ಪಟ್ಟಿ 3).
AB ನೆತ್ತರು ಬಗೆಯನ್ನು ಹೊಂದಿರುವವರನ್ನು ‘ಎಲ್ಲೆಯಿಲ್ಲದ ಕೊಳ್ಳುಗರು’ (universal recipients) ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ, AB ಬಗೆಯ ನೆತ್ತರಿನವರಲ್ಲಿ ಯಾವುದೇ ಬಗೆಯ ABO ಎದುರುಕಗಳು (antibodies) ಇರುವುದಿಲ್ಲ; ಈ ಗುಂಪಿನವರು AB ಬಗೆಯ ನೆತ್ತರಲ್ಲದೆ, ABO ಗುಂಪಿನ ಯಾವುದೇ ನೆತ್ತರು ಬಗೆಯನ್ನು ಪಡೆಯಬಹುದು. ಆದರೆ, AB ನೆತ್ತರು ಬಗೆಯವರು A ಮತ್ತು B ಎರಡೂ ಬಗೆಯ ಒಗ್ಗದಿಕಗಳನ್ನು ಹೊಂದಿರುವುದರಿಂದ, ನೆತ್ತರನ್ನು ಉಳಿದ ABO ಗುಂಪಿನವರಿಗೆ ಕೊಡಲು ಬರುವುದಿಲ್ಲ (ಪಟ್ಟಿ 3).
ನೆತ್ತರು ಅಂಟಿಕ್ಕುವಿಕೆಯ ಒರೆತ (blood agglutination test) (ಚಿತ್ರ 2): ನೆತ್ತರು ಬಗೆಯನ್ನು ತಿಳಿಯಲು ಇರುವ ಸುಲಬವಾದ ದಾರಿಯಿಂದರೆ, ನೆತ್ತರನ್ನು ಅಂಟಿಕ್ಕುವಿಕೆಯ ಒರೆತಕ್ಕೆ ಒಳಪಡಿಸುವುದು. ನೆತ್ತರಿನಿಂದ ನೆತ್ತರು ಕಣಗಳು ಹಾಗು ಹೆಪ್ಪುಗಟ್ಟಿಸುವ ಅಂಶಗಳನ್ನು ಬೇರ್ಪಡಿಸಿದಾಗ ರಸಿಕೆ (serum) ಎಂಬ ಅಡಕವು ಸಿಗುತ್ತದೆ. ಈ ಅಡಕಗಳ ನೆರವಿನಿಂದ ನೆತ್ತರು ಬಗೆಯನ್ನು ಒರೆ ಹಚ್ಚಬಹುದು.
ಒರೆ ಹಚ್ಚಬೇಕಾದ ನೆತ್ತರಿನ ಒಂದು ಬಾಗವನ್ನು A ಎದುರುಕವನ್ನು ಹೊಂದಿರುವ ರಸಿಕೆಯೊಡನೆಯು (serum), ಮತ್ತೊಂದು ನೆತ್ತರಿನ ಬಾಗವನ್ನು B ಎದುರುಕವನ್ನು ಹೊಂದಿರುವ ರಸಿಕೆಯೊಡನೆಯೂ ಬೆರೆಸಲಾಗುತ್ತದೆ. ಈ ಎರಡು ಬಗೆಯ ಬೆರೆಸುವಿಕೆಗಳಲ್ಲಿ, ಯಾವುದರಲ್ಲಿ ಅಂಟಣೆ (agglutination) ಉಂಟಾಗುತ್ತದೆ ಎನ್ನುವುದರ ಮೇಲೆ, ನೆತ್ತರು ಗುಂಪನ್ನು ಕಂಡು ಹಿಡಿಯಬಹುದು. ಉದಾಹರಣೆಗೆ: ಒರೆನೋಡಿದ ನೆತ್ತರು, A ಎದುರುಕದೊಡನೆ ಅಂಟಿ, B ಎದುರುಕದೊಡನೆ ಅಂಟದಿದ್ದರೆ, ನೆತ್ತರಿನಲ್ಲಿ A ಒಗ್ಗದಿಕ ಇದೆ ಎಂದು ಸೂಚಿಸುತ್ತದೆ. ಹಾಗಾಗಿ, ಒರೆ ಹಚ್ಚಿದ ನೆತ್ತರು A ಬಗೆಯದ್ದಾಗಿದೆ ಎಂದು ತಿಳಿದುಕೊಳ್ಳಬಹುದು.
ABO ನೆತ್ತರು ಗುಂಪಿನ ಪೀಳಿಯರಿಮೆ (genetics of ABO blood group): ಬರಹದ ಆರಂಬದಲ್ಲಿ ತಿಳಿಸಿರುವಂತೆ, ಮನುಶ್ಯರ ನೆತ್ತರು ಬಗೆಯನ್ನು, ಅವರು ಹೆತ್ತವರಿಂದ ಪಡೆದುಕೊಂಡ ಪೀಳಿಗಳು (genes) ತೀರ್ಮಾನಿಸುತ್ತವೆ. ABO ನೆತ್ತರು ಗುಂಪಿನ ಪೀಳಿಯರಿಮೆಯ ಬಗ್ಗೆ ಅರಕೆಗಳನ್ನು (research) ನಡೆಸಿದವರಲ್ಲಿ ಜರ್ಮನಿಯ ಲುಡ್ವಿಕ್ (Ludwik Hirszfeld) ಹಾಗು ಎಮಿಲ್ ವಾನ್ ಡನ್ಜರ್ನ್ (Emil von Dungern) ಮೊದಲಿಗರು. 1910-1911 ರಲ್ಲಿ ಅರಿಗರ ಈ ಜೋಡಿಯು ABO ನೆತ್ತರು ಗುಂಪಿನ ಪೀಳಿಗಳ ಮರುಪಡೆಯುವಿಕೆಯ (genetic inheritance) ಬಗ್ಗೆ ತಿಳಿಸಿಕೊಟ್ಟರು.
ಈ ದಿಕ್ಕಿನಲ್ಲಿ ಸದ್ಯದ ಮಟ್ಟಿಗೆ ನಮಗೆ ತಿಳಿದಿರುವ ತಿಳಿವುಗಳೆಂದರೆ, ABO ನೆತ್ತರು ಬಗೆಯನ್ನು ತೀರ್ಮಾನಿಸುವ ಪೀಳಿಗಳು ಮನುಶ್ಯನ ಒಂಬತ್ತನೆಯ ಅಂಬಿಸಿಂಬಿಯ/ಬಣ್ಣದಸಿಂಬಿಯ (chromosome) ಮೇಲೆ ಇರುತ್ತವೆ ಹಾಗು ಒಬ್ಬ ಮನುಶ್ಯನ ABO ನೆತ್ತರು ಬಗೆ, ಅವನ ಬಾಳ್ವೆಯ ಕಾಲದಲ್ಲಿ ಬದಲಾಗುವುದಿಲ್ಲ. ಒಬ್ಬ ಮನುಶ್ಯನ ABO ನೆತ್ತರು ಬಗೆ, ಅವಳು(ನು) ABO ನೆತ್ತರು ಪೀಳಿಯ ಮೂರು (A, B, ಅತವ O) ಇಕ್ಕಳಿಗಳಲ್ಲಿ (alleles) ಯಾವುದನ್ನು ಹೆತ್ತವರಿಂದ ಮರುಪಡೆಯುತ್ತಾಳೆ(ನೆ) (inherit) ಎನ್ನುವ ಅಂಶ ತೀರ್ಮಾನಿಸುತ್ತದೆ. ಮನುಶ್ಯನು ಮರುಪಡೆಯಬಹುದಾದ ಇಕ್ಕಳಿ (allele) ಹಾಗು ನೆತ್ತರು ಬಗೆಯ ತಿರುಳನ್ನು ಪಟ್ಟಿಯಲ್ಲಿ (ಪಟ್ಟಿ 4) ಕೊಡಲಾಗಿದೆ.
[ಪಟ್ಟಿ 4 ರ ವಿವರ: ಸಾದ್ಯವಾಗಬಹುದಾದಂತ ಹೆತ್ತವರ ಜೋಡಿಯಲ್ಲಿ ಒಬ್ಬರ ABO ಇಕ್ಕಳಿಗಳನ್ನು ಮೇಲಿನ ಸಾಲಿನಲ್ಲೂ, ಮತ್ತೊಬ್ಬರ ಇಕ್ಕಳಿಗಳನ್ನು ಎಡ ಸಾಲಿನಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಮಗುವಿನ ಪೀಳಿಮಾದರಿಯನ್ನು (genotype) ಹಸಿರು ಬಣ್ಣದಲ್ಲಿ ಹಾಗು ತೋರುಮಾದರಿಯನ್ನು (phenotype) ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ.]
A ಮತ್ತು B ಗಳೆರಡೂ ಮೇಲುಗಯ್ ಇಕ್ಕಳಿಗಳಾಗಿದ್ದು (dominant allele), ಇಳಿಗಯ್ ಇಕ್ಕಳಿಯಾದ (recessive allele) O ಇಕ್ಕಳಿಯ ತೋರುಮಾದರಿಯ (phenotype) ಮೇಲೆ ಮೇಲುಗಯ್ ಸಾದಿಸುತ್ತವೆ. ಹಾಗಾಗಿ, AO ಪೀಳಿಮಾದರಿಯನ್ನು (genotype) ಹೊಂದಿರುವ ಮನುಶ್ಯನಲ್ಲಿ, A ತೋರುಮಾದರಿ ಇರುತ್ತದೆ. OO ಪೀಳಿಮಾದರಿ ಇರುವವರಲ್ಲಿ, O ತೋರುಮಾದರಿ ಇರುತ್ತದೆ. A ಹಾಗು B ಇಕ್ಕಳಿಗಳು ಒಂದಕ್ಕೊಂದು ಕೂಡು-ಮೇಲುಗಯ್ (co-dominant) ಇಕ್ಕಳಿಗಳಾಗಿವೆ. ಹೆತ್ತವರ ಪಯ್ಕಿ, ಒಬ್ಬರಿಂದ A ಹಾಗು ಮತ್ತೊಬ್ಬರಿಂದ B ಇಕ್ಕಳಿಗಳನ್ನು ಮಗು ಪಡೆದರೆ, ಮಗುವಿನ ತೋರುಮಾದರಿ AB ಯಾಗಿರುತ್ತದೆ.
ABO ನೆತ್ತರು ಗುಂಪಿನ ಪೀಳಿಯರಿಮೆಯ ಬಗ್ಗೆ ತಿಳಿದುಕೊಳ್ಳಬೇಕಾದ ಮತ್ತೊಂದು ಮುಕ್ಯವಾದ ವಿಶಯ ಎಂದರೆ ‘‘ಬಾಂಬೆ ತೋರುಮಾದರಿ’ (Bombay phenotype). ಪೀಳಿಯರಿಮೆಯ ಹಿನ್ನೆಲೆಯಲ್ಲಿ, ಹೆತ್ತವರ ತೋರುಮಾದರಿಯನ್ನು (phenotype) ಆದರಿಸಿ ಮಗುವಿನ ABO ನೆತ್ತರು ಗುಂಪನ್ನು ಗುರುತಿಸುವಾಗ ಎಚ್ಚರ ವಹಿಸಬೇಕಾಗುತ್ತದೆ. ಏಕೆಂದರೆ ABO ಒಗ್ಗದಿಕಗಳಲ್ಲದೆ, H ಎಂಬ ಮತ್ತೊಂದು ಬಗೆಯ ಒಗ್ಗದಿಕವೂ ABO ನೆತ್ತರು ಗುಂಪನ್ನು ತೀರ್ಮಾನಿಸುವಲ್ಲಿ ಪಾಲ್ಗೊಳ್ಳುತ್ತದೆ.
ಸಾಮಾನ್ಯವಾಗಿ, A ನೆತ್ತರು ಬಗೆಯ ತಾಯಿಗೆ O ನೆತ್ತರು ಬಗೆಯ ಮಗುವಿದ್ದರೆ, ತಂದೆಯು O ನೆತ್ತರು ಗುಂಪನ್ನು ಹೊಂದಿರುತ್ತಾನೆ ಇಲ್ಲವೇ O ಇಕ್ಕಳಿಗಳ ಪೀಳಿಮಾದರಿಯನ್ನು (OO, AO, ಇಲ್ಲವೆ BO ಪೀಳಿಮಾದರಿ) ಹೊಂದಿರುತ್ತಾನೆ (ಚಿತ್ರ 3). ಈ ಬಗೆಯ ಮರುಪಡೆಯುವಿಕೆಯಲ್ಲಿ (inheritance), ಮಗು ತಂದೆಯ ಹಾಗು ತಾಯಿಗಳಿಬ್ಬರಿಂದ ಒಂದೊಂದು O ಪೀಳಿಯ ಇಕ್ಕಳಿಯನ್ನು ಪಡೆದುಕೊಂಡಿರುತ್ತದೆ. ಕೆಲವೊಮ್ಮೆ, O ಇಕ್ಕಳಿಗಳನ್ನು ಹೊಂದಿರದ ಹೆತ್ತವರಿಂದ O ನೆತ್ತರು ಬಗೆಯನ್ನು ಹೊಂದಿರುವ ಮಗು ಹುಟ್ಟಬಹುದು. ಇದಕ್ಕೆ ಕಾರಣ, ತಂದೆ-ತಾಯಿಗಳಿಂದ ಮಗು H ಒಗ್ಗದಿಕದ ಇಳಿಗಯ್ (recessive) ಇಕ್ಕಳಿಗಳನ್ನು ಮರುಪಡೆಯುವುದು.
ಹಾಗಾದರೆ H ಒಗ್ಗದಿಕದ ತನಿಬಗೆ (specialty) ಏನು? ಯಾವುದೇ ಒಂದು ಅಡಕವನ್ನು (material) ಮಾಡಲು ಗೊತ್ತುಮಾಡಿದ ಮುನ್ನಡಕ (raw material/precursor) ಬೇಕು. ABO ನೆತ್ತರು ಗುಂಪಿಗೆ ಸಂಬಂದಿಸಿದಂತೆ A ಹಾಗು B ಅಡಕಗಳನ್ನು (ಒಗ್ಗದಿಕ ಕೂಡ ಒಂದು ಬಗೆಯ ಅಡಕ ಎಂದು ತಿಳಿದುಕೊಳ್ಳುವುದು) ಮಾಡಲು H ಒಗ್ಗದಿಕ ಎನ್ನುವ ಮುನ್ನಡಕ (precursor) ಬೇಕೇಬೇಕು.
ಜೊತೆಗೆ H ಮುನ್ನಡವನ್ನು B ಒಗ್ಗದಿಕವನ್ನಾಗಿಸಲು B ಎನ್ನುವ ದೊಳೆ (enzyme) ಕೂಡ ಇರಬೇಕು. B ದೊಳೆಯನ್ನು ಮಾಡಲು, ಆ ಮನುಶ್ಯನಲ್ಲಿ B ಇಕ್ಕಳಿಯು ಇರಬೇಕು. ಹಾಗೆಯೇ H ಮುನ್ನಡಕವನ್ನು A ಒಗ್ಗದಿಕವನ್ನಾಗಿಸಲು, A ದೊಳೆಯನ್ನು ಮಾಡುವ A ಇಕ್ಕಳಿಯು ಇರಬೇಕು. ಉದಾಹರಣೆಗೆ: B ಒಗ್ಗದಿಕವನ್ನು ಮಾಡಲು H ಮುನ್ನಡಕ ಹಾಗು B ದೊಳೆ ಇರಬೇಕು.
H ಮುನ್ನಡಕವನ್ನು ಮಾಡಲು, ಆ ಮನುಶ್ಯನಲ್ಲಿ H ಒಗ್ಗದಿಕದ ಮೇಲುಗಯ್ ಪೀಳಿಮಾದರಿ (HH/Hh) ಇರಬೇಕು. ಆದರೆ, ಚಿತ್ರ 4 ರಲ್ಲಿ ತೋರಿಸಿರುವಂತೆ (ಚಿತ್ರ 4) ತಂದೆ-ತಾಯಿಗಳಿಬ್ಬರಿಂದಲೂ H ಒಗ್ಗದಿಕದ ಇಳಿಗಯ್ ಇಕ್ಕಳಿಗಳನ್ನು (h) ಮಗು ಪಡೆದರೆ, ಮಗುವಿನಲ್ಲಿ ಇಳಿಗಯ್ ಪೀಳಿಮಾದರಿ (recessive phenotype) (hh) ಇರುತ್ತದೆ. ಈ ಮಗುವಿನಲ್ಲಿ H ಮುನ್ನಡಕವು ಇರುವುದಿಲ್ಲ. H ಮುನ್ನಡಕ ಇರದ ಕಾರಣ, A ಮತ್ತು/ಅತವ B ಒಗ್ಗದಿಕಗಳು ಇಲ್ಲವಾಗುತ್ತವೆ.
ಪೀಳಿಯರಿಮೆಯ ಮೂಲಕ ತಿಳಿದಿರುವುದೇನೆಂದರೆ, ಮೇಲುಗಯ್ ಪೀಳಿಮಾದರಿ (dominant genotype) ಇಲ್ಲದ ಹೊತ್ತಿನಲ್ಲಿ, ಇಳಿಗಯ್ ಪೀಳಿಮಾದರಿಯು (recessive genotype) ಹೊಮ್ಮಲು (expression) ಅವಕಾಶವಿಕೆ. A ಮತ್ತು B ಒಗ್ಗದಿಕಗಳನ್ನು ಮಾಡುವ ಮೇಲುಗಯ್ ಪೀಳಿ ಇಕ್ಕಳಿಗಳು ಇಲ್ಲದ ಕಾರಣ, ಈ ಮಗುವಿನಲ್ಲಿ O ಒಗ್ಗದಿಕದ ತೋರುಮಾದರಿಯು ಹೊಮ್ಮುತ್ತದೆ. ತೀರ ಕಡಿಮೆ ಜನಗಳಲ್ಲಿ ಕಾಣಸಿಗುವ ಈ ಬಗೆಯ ನೆತ್ತರುಗುಂಪಿನ ಮರುಪಡೆಯುವಿಕೆಯನ್ನು ಮೊದಲು ಗಮನಿಸಿದ್ದು ಬಾರತದ ಬಾಂಬೆ (ಇಂದಿನ ಮುಂಬಯ್) ಊರಿನಲ್ಲಿ. ಹಾಗಾಗಿ, ಇದಕ್ಕೆ ‘ಬಾಂಬೆ ತೋರುಮಾದರಿ’ (Bombay phenotype) ಎಂಬ ಹೆಸರು ಬಂತು.
ಬರಹದ ಮುಂದಿನ ಕಂತಿನಲ್ಲಿ Rh ನೆತ್ತರು ಗುಂಪು ಹಾಗು ನೆತ್ತರು ಮಾರೆಡೆಗೊಳಿಸುವಿಕೆಯ (blood transfusion) ಬಗ್ಗೆ ತಿಳಿಸಿಕೊಡಲಾಗುವುದು
(ಮಾಹಿತಿ ಮತ್ತು ಚಿತ್ರ ಸೆಲೆಗಳು:1. anthro.palomar.edu,2. nobelprize.org, 3. medicine.mcgill.ca )