ಗಾಳಿಯಿಂದ ಕುಡಿಯುವ ನೀರನ್ನು ಪಡೆಯಲೊಂದು ಚಳಕ

ಜಯತೀರ್ಥ ನಾಡಗೌಡ.

ಊಟ ಸಿಗದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಉಸಿರ್ಗಾಳಿ(Oxygen) ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಷ್ಟು ನೀರಿನಿಂದಲೇ ತುಂಬಿದೆ, ಆದರೆ ಇದರಲ್ಲಿ ಕುಡಿಯಲು ತಕ್ಕುದಾದ ನೀರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ವಾತಾವರಣದ ಏರುಪೇರುಗಳಿಂದ ಚೊಕ್ಕವಾದ ಕುಡಿಯುವ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಕುಡಿಯುವ ನೀರು ಪಡೆಯಲು ಇಂದಿನ ದಿನಗಳಲ್ಲೂ ಮಂದಿ ಹಲವಾರು ಮೈಲಿ ಸಾಗುವ ಪರಿಸ್ಥಿತಿ ಭಾರತದಲ್ಲಿದೆ.

ಆಫ್ರಿಕಾ ಖಂಡದ ಹಿಂದುಳಿದ ನಾಡುಗಳಲ್ಲೊಂದಾದ ಇಥಿಯೋಪಿಯಾ (Ethiopia) ಕೂಡ ಇದಕ್ಕೆ ಹೊರತಾಗಿಲ್ಲ. ಇಥಿಯೋಪಿಯಾ ನಾಡಿನ ಕೆಲವೆಡೆ ಒಳ್ಳೆಯ ನೀರು ಪಡೆಯಲು ಸುಮಾರು ಆರು ಗಂಟೆ ಅಲೆದಾಡಬೇಕಂತೆ. ಈ ನಾಡಿನಲ್ಲಿ ಕುಡಿಯುವ ನೀರನ್ನು ಹುಡುಕಿ ತರಲು ಮಕ್ಕಳು-ಮಂದಿ ಸೇರಿ ವರುಶಕ್ಕೆ ಸುಮಾರು 4 ಸಾವಿರ ಕೋಟಿಯಷ್ಟು ಗಂಟೆಗಳನ್ನು ಬಳಸುತ್ತಾರಂತೆ. ಇಷ್ಟಾದರೂ ಕುಡಿಯಲು ತಕ್ಕುದಾದ ನೀರು ಸಿಗುವುದು ಕಷ್ಟದ ಕೆಲಸ. ಹತ್ತಿರದಲ್ಲಿರುವ ಕೆರೆ, ಬಾವಿ, ಹೊಂಡದ ನೀರು, ಕೊಳಚೆ ಮತ್ತು ನಂಜಿನ ವೈರಸ್ ಗಳಿಂದ ಕೂಡಿರುತ್ತವೆ. ಪ್ರತಿ ವರುಶ ನೂರಾರು ಕೋಟಿ ಮಂದಿ ಆಫ್ರಿಕಾದಲ್ಲಿ ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದಾರೆ.

ಈ ವಿಷಯದ ಆಳವರಿತ ಹಾಲಿವುಡ್ ನ ಹೆಸರುವಾಸಿ ನಟ ಹಾಗು ವಾಟರ್ ಡಾಟ್ ಆರ‍್ಗ್ (water.org) ಕೂಟ ಹುಟ್ಟು ಹಾಕಿದ ಮ್ಯಾಟ್ ಡಮೋನ್ (Matt Damon), ಇವರೊಂದಿಗೆ ಮೈಕ್ರೊಸಾಫ್ಟ್ ಕೂಟದ ಬಿಲ್ಲ್ ಗೇಟ್ಸ್ (Bill Gates) ಒಂದಾಗಿ ಹೊಸ ಹಮ್ಮುಗೆಯೊಂದಕ್ಕೆ ಕೈ ಹಾಕಿದ್ದುಂಟು. ಕೊಳಚೆ ಹಾಗೂ ಬಳಸಿದ ನೀರನ್ನು ಮರಳಿ ಕುಡಿಯುವ ನೀರಾಗಿ ಮಾರ್ಪಡಿಸುವುದೇ ಈ ಹಮ್ಮುಗೆಯ ಕೆಲಸ. ಯಾವುದೇ ಲಾಭದ ಉದ್ದೇಶವಿರದ ಈ ಕೆಲಸಕ್ಕೆಂದೇ ಇಲ್ಲಿಯವರೆಗೆ ನೂರಾರು ಲಕ್ಷ ರೂಪಾಯಿಗಳ ವೆಚ್ಚ ಮಾಡಲಾಗುತ್ತಿದೆ. ಇಂತ ಬೆನ್ನುತಟ್ಟುವ ಕೆಲಸವೊಂದು ನಡೆಯುತ್ತಿದ್ದರೂ ಇದು ಪರಿಣಾಮಕಾರಿಯಾಗಿರಲಾರದು ಎಂಬುದು ಕೆಲವರ ವಾದ. ಈ ಚಳಕ ತೊಡಕಿನಿಂದ ಕೂಡಿದೆ, ಇಥಿಯೋಪಿಯಾದ ಹಳ್ಳಿಗರು ಇದನ್ನು ಬಳಸಿಕೊಳ್ಳುವುದು ಮತ್ತು ಇದು ಕೆಟ್ಟಾಗ, ಸರಿಪಡಿಸುವುದು ಸುಲಭವಲ್ಲವೆಂಬುದು ವಾದಿಸುವರ ಹೇಳಿಕೆ. ಈ ಹಮ್ಮುಗೆಯಲ್ಲಿ ಹಣದ ವೆಚ್ಚ ಹೆಚ್ಚಿದ್ದು ಮುಂಬೊತ್ತಿನ (future) ದಿನಗಳಲ್ಲಿ ಇದನ್ನು ಸರಿದೂಗಿಸಿಕೊಂಡು ಹೋಗುವದಕ್ಕೂ ಹೆಚ್ಚಿನ ಹಣ ತಗಲುತ್ತದೆಂದು ಇವರು ಹೇಳಿದ್ದಾರೆ.

ಕುಡಿಯುವ ನೀರನ್ನು ಚೊಕ್ಕಗೊಳಿಸಲು ಹಲವರು ಹರಸಾಹಸ ಪಡುತ್ತಿರುವ ಈ ಹೊತ್ತಿನಲ್ಲೇ ಅರ್ಟುರೋ ವಿಟ್ಟೋರಿ (Arturo Vittori) ಎಂಬ ಕೈಗಾರಿಕೆ ಈಡುಗಾರ (Industrial Designer) ಮತ್ತು ಅವರ ಜೊತೆ ಕೆಲಸಗಾರ ಆಂಡ್ರಿಯಾಸ್ ವೊಗ್ಲರ್ (Andreas Vogler) ಇಬ್ಬರೂ ಸೇರಿ ಸುಲಭ, ಸರಳ ಮತ್ತು ಅಗ್ಗದ ಮಾಡುಗೆಯೊಂದನ್ನು (product) ಮುಂದಿಟ್ಟಿದ್ದಾರೆ. ಈ ಉತ್ಪನ್ನದ ಹೆಸರು ವಾರ್ಕಾ ವಾಟರ್. ಬೀಸುವ ಗಾಳಿಯಲ್ಲಿರುವ ನೀರನ್ನು ಹಿಡಿದು ಅದನ್ನೇ ಕುಡಿಯುವ ನೀರಾಗಿ ಮಾರ್ಪಡಿಸುವ ಚಳಕ. ವಾರ್ಕಾ ವಾಟರ್ (Warka Water) ಅನ್ನು ತೊಡಕಿಲ್ಲದೆ ಸುಲಭವಾಗಿ ಜೋಡಿಸಬಹುದಾಗಿದ್ದು ಇದರ ಬೆಲೆಯು ಅಗ್ಗವಾಗಿದೆ.

ವಾರ್ಕಾ ವಾಟರ್ ಮೂವತ್ತು ಅಡಿ ಉದ್ದವಾಗಿದ್ದು ಹೂದಾನಿಯ ಆಕಾರದ ಗೋಪುರವೆನ್ನಬಹುದು. ಇಥಿಯೋಪಿಯಾದ ಪ್ರಮುಖ ಮರವೊಂದರಿಂದ ವಾರ್ಕಾ ಎನ್ನುವ ಹೆಸರು ಮೂಡಿದೆ. ವಾರ್ಕಾ ವಾಟರ್ ಗೋಪುರದ ಹೊರಮೈ ಇಲಾಸ್ಟಿಕ್ ಕೊಳವೆಯಂತ ವಸ್ತುವಿನಿಂದ ತಯಾರಿಸಲಾಗಿದೆ. ಇದರಿಂದ ತೂಕವು ಹಗುರವಾಗಿರುತ್ತದೆ. ಈ ಕೊಳವೆಗಳು ಒಂದಕ್ಕೊಂದು ಬದಿಯಲ್ಲಿ ಗಟ್ಟಿಯಾಗಿ ಹೆಣೆಯಲ್ಪಟ್ಟಿರಿವುದರಿಂದ ಜೋರಾಗಿ ಬೀಸುವ ಗಾಳಿಗೆ ಮಯ್ಯೊಡ್ಡಿದಾಗಲೂ, ಗಟ್ಟಿಯಾಗಿ ನಿಂತು ಗಾಳಿಯು ತಮ್ಮ ಮೂಲಕ ಹಾಯ್ದು ಹೋಗುವಂತೆ ನೋಡಿಕೊಳ್ಳುತ್ತವೆ. ಇದರೊಳಗೆ ನೈಲಾನ್ ಬಲೆಯೊಂದನ್ನು ತೂಗು ಹಾಕಲಾಗಿದ್ದು ಇದು ಚೀನಿಯರ ದೊಡ್ಡ ಕೈಬೆಳಕಿನಂತೆ (Lantern) ಕಾಣಿಸುತ್ತದೆ. ಜೋರು ಗಾಳಿ ಇದರಲ್ಲಿ ಹಾಯ್ದು ಹೋದಾಗ ಗಾಳಿಯಲ್ಲಿನ ನೀರಿನ ಇಬ್ಬನಿಗಳು ಕೂಡಿಡಲ್ಪಡುತ್ತವೆ. ಗಾಳಿಯು ಇಂಗುತ್ತಲೆ ಈ ಇಬ್ಬನಿಯ ಹನಿಗಳು ನೀರಾಗಿ ಕೆಳ ಭಾಗಕ್ಕೆ ಹರಿಯುತ್ತ ಬುಗುಣಿಯಲ್ಲಿ ಬಂದು ಸೇರುತ್ತವೆ. ಈ ಬುಗುಣಿಗೆ ಕೊಳವೆ ಜೋಡಿಸಿ ನಲ್ಲಿಯಂತೆ ನೀರು ಪಡೆಯಬಹುದಾಗಿರುತ್ತದೆ.

ವಿಟ್ಟೋರಿಯವರ ಈ ಅರಕೆ ಹೊಸದೇನು ಅಲ್ಲ, ಈ ಹಿಂದೆ ಪ್ರಖ್ಯಾತ ಎಮ್.ಐ.ಟಿ (MIT) ಕಲಿಕೆವೀಡಿನ ಓದುಗನೊಬ್ಬ ಇದನ್ನೇ ಹೋಲುವ ಎಣಿಕೆಯೊಂದನ್ನು(Concept)  ಬೆಳವಣಿಗೆಗೊಳಿಸಿದ್ದ. ಆದರೆ ಈ ಹಿಂದೆ ಬೆಳವಣಿಗೆ ಹೊಂದಿದ ಎಲ್ಲ ಎಣಿಕೆಗಳಿಂತ ವಿಟ್ಟೋರಿಯವರ ಮಾದರಿಯು ಅಗ್ಗದ ಬೆಲೆಯಲ್ಲಿ ಹೆಚ್ಚು ನೀರನ್ನು ನೀಡುವಂತದ್ದಾಗಿರುವುದರಿಂದ ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ.

ಇಥಿಯೋಪಿಯಾದಂತ ನಾಡುಗಳಲ್ಲಿ ಮಂದಿಗೆ ಬೇಕಾಗುವ ಸೌಕರ್ಯಗಳ ಕೊರತೆಯಿದೆ. ಕೊಳವೆ ಬಾವಿಯನ್ನು ಮಾಡಿಸಲು ಸಾವಿರಾರು ಅಡಿ ಭೂಮಿಯನ್ನು ಕೊರೆಯಬೇಕು. ನಂತರ ಭೂಮಿಯಿಂದ ನೀರನ್ನು ಮೇಲೆತ್ತಲು ಒತ್ತುಕಗಳನ್ನು(Pump) ಬಳಸಬೇಕಾಗುತ್ತದೆ. ನೆನಪಿರಲಿ ಈ ಒತ್ತುಕಗಳಿಗೆ ಮಿಂಚಿನ ಕಸುವಿನ(Electricity) ಅಗತ್ಯವಿರುತ್ತದೆ. ಇಷ್ಟೆಲ್ಲ ಮಾಡಲು ಸಾಕಷ್ಟು ದುಡ್ಡನ್ನು ಹೂಡಿಕೆ ಮಾಡಬೇಕು. ಇದಕ್ಕೆ ವಾರ್ಕಾ ವಾಟರ್ ಪರಿಹಾರವಾಗಲಿದೆ ಎಂಬುದು ವಿಟ್ಟೋರಿಯವರ ಅಂಬೋಣ.

ವಾರ್ಕಾ ಗೋಪುರಗಳ ಒರೆಗೆ ಹಚ್ಚುವ(Testing) ಕೆಲಸ ನಡೆಯುತ್ತಿದ್ದು, ಇದು ದಿನವೊಂದಕ್ಕೆ 25 ಗ್ಯಾಲನ್ ಅಂದರೆ ಸುಮಾರು 95 ಲೀಟರ್ ಗಳಶ್ಟು ನೀರನ್ನು ಒದಗಿಸಬಲ್ಲದು. ಬಿಸುಪಿನ ಏರುಪೇರು ಹೆಚ್ಚಿರುವ ಮರಳುಗಾಡಿನಲ್ಲೂ ಇವುಗಳ ಕೆಲಸ ಪರಿಣಾಮಕಾರಿಯಾಗಿರುವ ಸುದ್ದಿ ವಿಟ್ಟೋರಿಯವರ ಹುರುಪು ಹೆಚ್ಚಾಗಿಸಿದೆ. ಈ ಗೋಪುರಗಳ ಕಟ್ಟಲು ಸುಲಭವಾಗಿ ಅಳಿದುಹೋಗಬಲ್ಲ ಸಾಮಗ್ರಿ ಬಳಸಲಾಗಿದೆ ಇದರಿಂದ ವಾತಾವರಣಕ್ಕೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಸ್ಥಳೀಯರಿಗೆ ಇದರ ಬಳಕೆ, ಜೋಡಿಸುವಿಕೆ ಮತ್ತು ಸರಿದೂಗಿಸುವಿಕೆಯ ಬಗ್ಗೆ ಅರಿವು ಮಾಡಿಕೊಟ್ಟರೆ ಸುಲಭವಾಗಿ ಕಾಯ್ದುಕೊಂಡು ಹೋಗಬಹುದಂತೆ. ಇದಕ್ಕೆಂದೇ ವಿಶೇಷ ಪಳಗಿದ ಕೆಲಸಗಾರರು ಬೇಕಿಲ್ಲ.

ವಾರ್ಕಾ ಗೋಪುರವೊಂದನ್ನು ಆಣಿಗೊಳಿಸಿ ಜೋಡಿಸಲು 500 ಡಾಲರ್ ಹಣ ಸಾಕಂತೆ. ಬಿಲ್ ಗೇಟ್ಸ್, ಮ್ಯಾಟ್ ಡಮೋನ್ ಹಮ್ಮುಗೆ ಬಳಸುತ್ತಿರುವ ಕೊಳಚೆ ನೀರು ಚೊಕ್ಕಗೊಳಿಸುವ ಚಳಕಕ್ಕಿಂತ ಮುಕ್ಕಾಲು ಭಾಗ ಕಡಿಮೆ (ಇದರ ಬೆಲೆ ಸುಮಾರು 2200 ಡಾಲರ್ ). ಹೆಚ್ಚಿನ ಸಂಖ್ಯೆಯಲ್ಲಿ ಅಣಿಗೊಳಿಸಿದರೆ ಬೆಲೆಯು ಇನ್ನೂ ಅಗ್ಗವಾಗಿರಲಿದೆ ಎಂದು ಹೇಳುತ್ತಾರೆ ವಿಟ್ಟೋರಿ. ಮುಂದಿನ ದಿನಗಳಲ್ಲಿ ವಾರ್ಕಾ ವಾಟರ್ ಗೋಪುರಗಳನ್ನು ಇಥಿಯೋಪಿಯಾದಲ್ಲಿ ನೆಡಲು ತಯಾರಿ ನಡೆಸಿರುವ ವಿಟ್ಟೋರಿಯವರು ಇದಕ್ಕೆ ಬಂಡವಾಳ ಹೂಡಿಕೆದಾರರ ಹುಡುಕುವ ಕೆಲಸದಲ್ಲಿದ್ದಾರೆ.

ವಿಟ್ಟೋರಿಯವರು ಹೇಳುವ ಪ್ರಕಾರ “ಚೊಕ್ಕ ಕುಡಿಯುವ ನೀರನ್ನು ಒದಗಿಸುವುದಷ್ಟೇ ಈ ಹಮ್ಮುಗೆಯ ಉದ್ದೇಶವಲ್ಲ, ಕುಡಿಯುವ ನೀರು ಹೊತ್ತು ತರಲು ಇಥಿಯೋಪಿಯಾ ಮಕ್ಕಳು ಪೋಲು ಮಾಡುತ್ತಿರುವ ಹೊತ್ತನ್ನು ಇದು ಅಳಿಸಿಹಾಕಬಲ್ಲದು. ಈ ಹೊತ್ತನ್ನು ಕಲಿಕೆಯಂತ ಇತರೆ ಕೆಲಸಗಳಲ್ಲಿ ತೊಡಗಿಸಿದರೆ ಮಕ್ಕಳ ಮುಂಬೊತ್ತು ಬೆಳಗಲಿದೆ”. ಇಂತ ಸಾಮಾಜಿಕ ಕಳಕಳಿಯ ಅರಕೆಗಳು ಜಗತ್ತಿನಲ್ಲಿ ಇಮ್ಮಡಿಗೊಳ್ಳಲಿ, ವಿಟ್ಟೋರಿಯವರ ಹಮ್ಮುಗೆಗೆ ಒಳ್ಳೆಯದಾಗಲಿ.

 

ಎ.ಸಿ.(ಏರ್ ಕಂಡಿಷನರ್) ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಇಂದು ಎ.ಸಿ. ಸರ್ವೇ ಸಾಮಾನ್ಯವಾಗಿ ಎಲ್ಲಕಡೆ ಕಂಡುಬರುವ ಉಪಕರಣ. ನಾವಿರುವ ಕೋಣೆಯ ಒಳಗಿನ ಬಿಸುಪನ್ನು ಹೊರಗಟ್ಟಿ ತಂಪಾದ ಗಾಳಿ ಒದಗಿಸುವುದು ಇದರ ಕೆಲಸ. ಭಾರತದಂತ ಹೆಚ್ಚು ಬಿಸುಪಿನ ದೇಶಗಳಲ್ಲಂತೂ ಬೇಸಿಗೆಯಲ್ಲಿ ಎ.ಸಿ.ಯಿರದೇ ಎಷ್ಟೋ ಕಚೇರಿ, ಹೋಟೆಲ್, ಸಿನಿಮಾ ಮಂದಿರ, ಬ್ಯಾಂಕ್‌ಗಳು ಕೆಲಸ ಮಾಡಲಾರದಷ್ಟು ಇವುಗಳ ಬೇಡಿಕೆ. ತಂಪುಗಾಳಿ ನೀಡಿ ಸೆಕೆಯ ವಾತಾವರಣಕ್ಕೆ ಕಡಿವಾಣ ಹಾಕುವ ಎ.ಸಿ.ಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ ಬನ್ನಿ.

ಎ.ಸಿ. ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು, ಅದರ ಪ್ರಮುಖ ಬಿಡಿಭಾಗಗಳು ಯಾವುವೆಂದು ಅರಿಯೋಣ. ಯಾವುದೇ ಎ.ಸಿ.ಯಲ್ಲಿ ಕೆಳಕಂಡ ಭಾಗಗಳು ಪ್ರಮುಖವಾಗಿರುತ್ತವೆ:

ಒತ್ತುಕ(Compressor)

ಇಂಗಿಸುಕ(Condenser)

ಸೋಸುಕ(Filter)

ಬೀಸಣಿಗೆ(Fan)

ತಂಪುಕ(Refrigerant Chemical)

ಸಾಮಾನ್ಯವಾಗಿ ತಂಪುಕ ಒಂದು ಬಿಸುಪನ್ನು ಹೀರುವ ರಾಸಾಯನಿಕವಾಗಿದ್ದು, ಗಾಳಿಯ ರೂಪದಲ್ಲಿ ಎ.ಸಿ.ಯಲ್ಲಿ ಕೂಡಿಟ್ಟಿರುತ್ತಾರೆ.

ಎ.ಸಿ. ಶುರುವಾದ ಮೇಲೆ,ಮೊದಲು ಆವಿಯಾಗಿಸುಕದ(Evaporator) ಬಳಿಯಿರುವ ಬೀಸಣಿಗೆ ಕೋಣೆಯ ಬಿಸಿಗಾಳಿಯನ್ನು ಎಳೆದುಕೊಳ್ಳುತ್ತದೆ. ಈ ಬಿಸುಪಿನ ಗಾಳಿಯಲ್ಲಿರುವ ಕಸ, ಧೂಳನ್ನು ಸೋಸುಕ ಬೇರ್ಪಡಿಸಿ, ಆವಿಯಾಗಿಸುಕದ ಸುರುಳಿಗಳ(Evaporator Coils) ಮೇಲೆ ಹರಿಸುತ್ತದೆ. ಆಗ ತಂಪಾದ ಈ ಸುರುಳಿಗಳು, ಬಿಸಿ ಗಾಳಿಯಲ್ಲಿರುವ ಬಿಸುಪನ್ನು ಕಡಿಮೆಯಾಗಿಸಿ ಬೀಸಣಿಗೆ ಮೂಲಕ ಕೋಣೆಗೆ ತಂಪು ಗಾಳಿಯನ್ನು ಹೊರಸೂಸುತ್ತವೆ. ಇದೆಲ್ಲ ಕೋಣೆಯಲ್ಲಿರುವ ಎ.ಸಿ.ಯ ಮುಂಭಾಗದಲ್ಲಿ ನಡೆಯುತ್ತದೆ. ಕೋಣೆಯ ಹಿಂದಿರುವ ಎ.ಸಿ.ಯ ಹಿಂಭಾಗದಲ್ಲಿ,  ತಂಪುಕವು ಒತ್ತುಕದ ಮೂಲಕ ಸಾಗಿ, ಹೆಚ್ಚಿನ ಒತ್ತಡ ಮತ್ತು ಬಿಸುಪಿಗೇರುತ್ತದೆ. ಹೆಚ್ಚು ಬಿಸಿಯಾಗಿರುವ  ತಂಪುಕ ಇಂಗಿಸುಕದ ಮೂಲಕ ಸಾಗಿದಾಗ ಅಲ್ಲಿನ ವಾತಾವರಣದ ಕಡಿಮೆ ಬಿಸುಪಿನ ಗಾಳಿ ಮತ್ತು ತಂಪುಕದ ನಡುವೆ ಬಿಸುಪು ವಿನಿಮಯವಾಗಿ(Heat Exchange), ಬಿಸಿಯಾಗಿರುವ ತಂಪುಕ ತನ್ನ ಬಿಸುಪನ್ನು ಕಳೆದುಕೊಳ್ಳುತ್ತದೆ, ತಂಪುಕದ ಬಿಸುಪು ಪಡೆದ ಅಲ್ಲಿನ ಗಾಳಿಯನ್ನು ಇಂಗಿಸುಕದ ಹಿಂದಿರುವ ಬೀಸಣಿಗೆ ಹೊರಹಾಕುತ್ತದೆ. ಮುಂದೆ, ತಂಪುಕ ಹಿಗ್ಗುವ ತೆರಪಿನ(Expansion Valve) ಮೂಲಕ ಸಾಗಿದಾಗ ದ್ರವರೂಪದಿಂದ ತಂಪಾದ ಗಾಳಿ ರೂಪಕ್ಕೆ ಮಾರ್ಪಾಡುಗೊಳ್ಳುತ್ತೆ. ಇದೇ ತಂಪಾದ ತಂಪುಕ ಗಾಳಿ ಆವಿಯಾಗಿಸುಕದ ಮೇಲೆ ಸಾಗಿದಾಗ, ಅದೇ ಪ್ರಕ್ರಿಯೆ ಮರುಕಳಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎ.ಸಿ.ಯು, ಯಾವುದೇ ಹೊರಗಿನ ತಾಜಾ ಗಾಳಿಯನ್ನು ತನ್ನೊಳಗೆಳೆದುಕೊಂಡು  ಕೋಣೆ/ ಕೊಠಡಿಗಳನ್ನು ತಂಪಾಗಿಸುವುದಿಲ್ಲ. ಬದಲಿಗೆ,ಕೋಣೆಯಲ್ಲಿರುವ ಬಿಸಿಗಾಳಿಯನ್ನೇ ಒಳಗೆಳೆದುಕೊಂಡು ತಂಪಾಗಿಸಿ ಮತ್ತೆ ಕೋಣೆಗೆ ಸೂಸುತ್ತದೆ. ಇದನ್ನು ಬಿಸಿಗಾಳಿಯ ಮರುಬಳಕೆ ಎನ್ನಬಹುದು. ಈ ಬಿಸುಪಿನ ವಿನಿಮಯ ಪ್ರಕ್ರಿಯೆಯಲ್ಲಿ ಕೋಣೆಯ ಗಾಳಿಯಲ್ಲಿನ ತೇವಾಂಶವನ್ನು ಹೀರುವ ಕೆಲಸವೂ ನಡೆದಿರುತ್ತದೆ.

ಮನೆಗಳಲ್ಲಿ ಕಂಡುಬರುವ ಎ.ಸಿ.ಯ ಬಿಡಿಭಾಗಗಳು

ಎ.ಸಿ.ಗಳಲ್ಲಿ ಪ್ರಮುಖವಾಗಿ ಎರಡು ಬಗೆ. ನಡುನಟ್ಟ ಎ.ಸಿ.(Centralized AC) ಒಂದು ಬಗೆಯಾದರೆ, ಭಾಗವಾದ ಅಂದರೆ ಸ್ಪ್ಲಿಟ್ ಎ.ಸಿ.(Split AC) ಇನ್ನೊಂದು ಪ್ರಮುಖ ಬಗೆಯಾಗಿದೆ. ಒಂದೆಡೆ ಕೇಂದ್ರಿತ ಎ.ಸಿ.ಗಳು ದೊಡ್ಡ ಕಚೇರಿ, ಬ್ಯಾಂಕ್, ಮುಂತಾದೆಡೆ ಜೋಡಿಸಲು ಮತ್ತು ಬಳಸಲು ಸೂಕ್ತ. ದೊಡ್ಡ ಕಚೇರಿ, ಬ್ಯಾಂಕ್, ಆಸ್ಪತ್ರೆಯ ಗ್ಯಾರೇಜ್, ತಳಮಹಡಿಯಲ್ಲೋ ಎ.ಸಿ.ಯ ಮುಂಭಾಗವನ್ನು ಅಳವಡಿಸಿ, ಕೊಳವೆಗಳ(Ducts) ಮೂಲಕ ತಂಪಾದ ಗಾಳಿಯನ್ನು ಬೇಕಾದ ಹಲವಾರು ಕೋಣೆಗಳಿಗೆ ಸಾಗುವಂತೆ ಏರ್ಪಾಟು ಮಾಡಿರುತ್ತಾರೆ. ಇಂತಹ ಎ.ಸಿ.ಗಳು ಕಡಿಮೆ ಅಳವಡಿಕೆಯ ವೆಚ್ಚ, ಒಂದೆಡೆಯಿಂದ ಎಲ್ಲ ಕೋಣೆಗಳ ಗಾಳಿಯ ನಿಯಂತ್ರಣ ಮತ್ತು ಎಲ್ಲ ಕೋಣೆಗಳು ಒಂದೇ ಗುಣಮಟ್ಟದ ಗಾಳಿ ಒದಗಿಸುವ ಅನುಕೂಲಗಳನ್ನು ಹೊಂದಿವೆ. ಕಚೇರಿ, ಆಸ್ಪತ್ರೆ ಮುಂತಾದೆಡೆ ನಡುನಟ್ಟ ಎ.ಸಿ. ಒದಗಿಸಲು ಕೊಳವೆಗಳನ್ನು ಜೋಡಿಸಿಕೊಳ್ಳಬೇಕು, ಇದಕ್ಕೆ ಹೆಚ್ಚಿನ ವೆಚ್ಚ ಮತ್ತು ಜಾಗ ತಗುಲುತ್ತದೆ. ಇಂತಹ ಎ.ಸಿ.ಗಳ ಅಳವುತನವೂ ಕಡಿಮೆಯಿರುವುದರಿಂದ ಹೆಚ್ಚಿನ ವಿದ್ಯುತ್ ಬಿಲ್‌ಗೆ ಹಣ ನೀಡಬೇಕಾಗುತ್ತದೆ.

ಚಿಕ್ಕದಾದ ಸ್ಪ್ಲಿಟ್ ಎ.ಸಿ.ಗಳನ್ನು ಮನೆಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಮನೆಯ ಮಲಗುವ ಕೋಣೆಗೆ ಮಾತ್ರವೇ ಎ.ಸಿ. ಬೇಕಿದ್ದರೆ, ಈ ಚಿಕ್ಕದಾದ ಎ.ಸಿ.ಗಳು ಹೆಚ್ಚು ತಕ್ಕುದಾಗಿವೆ. ಹೆಚ್ಚು ಕಸುವಿನ ಅಳವುತನ(Energy Efficiency), ಅಳವಡಿಸಲು ಕಡಿಮೆ ಜಾಗ, ನಡುನಟ್ಟ ಎ.ಸಿ.ಗಳಿಗಿಂತ ಕಡಿಮೆ ವಿದ್ಯುತ ಬಿಲ್ ಇವೆಲ್ಲ ಅನುಕೂಲಗಳನ್ನು ಹೊಂದಿದೆ. ಮನೆಯೊಂದರಲ್ಲಿ ಕೋಣೆಗೊಂದರಂತೆ ಈ ಸ್ಪ್ಲಿಟ್ ಎ.ಸಿ. ಅಳವಡಿಸಿದರೆ, ಅಳವಡಿಕೆ ವೆಚ್ಚ ಹೆಚ್ಚಾಗುತ್ತದೆ. ಪ್ರತಿಕೋಣೆಯಲೂ ಎ.ಸಿ.ಯ ಮುಂಭಾಗ ಇರಲೇಬೇಕು, ಇದರಿಂದ ಗೋಡೆಗಳ/ ಮನೆಯ ಒಳಾಂಗಣದ ಅಂದ ಹಾಳಗೆಡುವುತ್ತವೆ. ನಡುನಟ್ಟ ಅಳವಡಿಕೆಯ ಎ.ಸಿ.ಗಳಲ್ಲಿ ಕಂಡುಬರುವ ಸೋಸುಕಗಳು ಹೆಚ್ಚಿನ ಕಸ ಕಡ್ಡಿ ಧೂಳು ಬೇರ್ಪಡಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವು ಸ್ಪ್ಲಿಟ್ ಎ.ಸಿ.ಗಿಂತ ಒಳ್ಳೆಯ ಗುಣಮಟ್ಟದ ಗಾಳಿಯನ್ನು ಹೊರಸೂಸುತ್ತವೆ.

 

ಮಾಹಿತಿ ಮತ್ತು ತಿಟ್ಟ ಸೆಲೆ:

A Guide to How a Split Air Conditioner Works


https://point-s.ca/en/blog-and-advices/how-does-your-cars-air-conditioning-work
https://www.carrier.com/residential/en/us/products/air-conditioners/how-do-air-conditioners-work/

How Does an Air Conditioner Work?

ಬೆಂಕಿ ಆರಿಸುಕ ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಬೆಂಕಿ ಆರಿಸುಕ ಇಂದು ಬಹುತೇಕ ಎಲ್ಲ ಕಡೆ ಕಾಣಸಿಗುತ್ತದೆ. ಮಾಲ್, ಕಚೇರಿ, ಬ್ಯಾಂಕ್, ಬಾನೋಡತಾಣ, ಸಿನೆಮಾ ಮಂದಿರ, ಶಾಲೆ, ಕಾರ್ಖಾನೆ, ಹೀಗೆ ಎಲ್ಲೆಡೆ ಕೆಂಪು ಬಣ್ಣದ ಸಿಲಿಂಡರ್ ಆಕಾರದ ಚಿಕ್ಕ,ದೊಡ್ಡ ಅಳತೆಯ ಬೆಂಕಿ ಆರಿಸುಕವನ್ನು ನಾವುಗಳು ನೋಡಿರುತ್ತೇವೆ. ಬೆಂಕಿ ಹತ್ತಿ ಅವಗಡ ಸಮಯದಲ್ಲಿ ಇವುಗಳು ಬಹಳ ನೆರವಿಗೆ ಬರುತ್ತವೆ. ಆದರೆ ಇವುಗಳು ಹೇಗೆ ಕೆಲಸ ಮಾಡುತ್ತವೆ? ಕಷ್ಟದ ಸಂದರ್ಭಗಳಲ್ಲಿ ಇವುಗಳನ್ನು ಹೇಗೆ ಬಳಸಬೇಕು ಎಂಬುದು ತಿಳಿಯೋಣ ಬನ್ನಿ. 

ಸಾಮಾನ್ಯವಾಗಿ ತಿಳಿದಿರುವಂತೆ, ಬೆಂಕಿ ಹೊತ್ತಿಕೊಳ್ಳಲು ಆಕ್ಸಿಜನ್ ಗಾಳಿ ಮತ್ತು ಉರುವಲು ಬೇಕಾಗುತ್ತದೆ. ಆದರೆ ಕೇವಲ ಆಕ್ಸಿಜನ್ ಗಾಳಿ, ಉರುವಲು ಇದ್ದರೆ ಬೆಂಕಿ ಉರಿಯಲ್ಲ. ಉರುವಲು ತನ್ನ ಉರಿತದ ಕಾವಳತೆ ಮಟ್ಟ(Ignition Temperature) ತಲುಪಿರಬೇಕು. ಒಟ್ಟಾಗಿ ಹೇಳುವುದಾದರೆ ಬೆಂಕಿ ಕಿಡಿಹೊತ್ತಿಕೊಳ್ಳಲು, ಆಕ್ಸಿಜನ್, ಉರುವಲು ಮತ್ತು ಬಿಸುಪು ಈ ಮೂರು ಇರಲೇಬೇಕು. ಬೆಂಕಿ ಆರಿಸಲು ಈ ಮೂರರಲ್ಲಿ ಒಂದನ್ನು ಕಡಿತಗೊಳಿಸಿಯೋ, ಇಲ್ಲವಾಗಿಸಿಯೋ ಬೆಂಕಿ ಆರಿಸಬಹುದು. ಸಣ್ಣದಾಗಿ ಬೆಂಕಿ ಹತ್ತಿದ್ದರೆ ದಪ್ಪ ಕಂಬಳಿ ಬಿಸಾಕಿ ಅದನ್ನು ನಿಲ್ಲಿಸುವುದನ್ನು ನೋಡಿರುತ್ತೇವೆ. ಕಂಬಳಿ ಬೆಂಕಿ ಮೇಲೆ ಬಿದ್ದಾಗ ವಾತಾವರಣದ ಆಕ್ಸಿಜನ್ ಪೂರೈಕೆ ನಿಂತು, ಬೆಂಕಿ ಆರುತ್ತದೆ. ಬೆಂಕಿ ಆರಿಸುಕ ಗಾಡಿಗಳು(Fire fighting Vehicles) ನೀರು ಸಿಡಿಸಿ ಬೆಂಕಿ ನಿಲ್ಲಿಸುತ್ತವೆ, ನೀರು ಸಿಂಪಡಿಸಿದಾಗ ಬಿಸುಪು ತಣ್ಣಗಾಗಿ ಬೆಂಕಿ ಆರುತ್ತದೆ. ಇದೇ ವಿಜ್ಞಾನ ಆಧಾರವಾಗಿಟ್ಟುಕೊಂಡು ಬೆಂಕಿ ಆರಿಸುಕಗಳನ್ನು ತಯಾರಿಸಲಾಗುತ್ತದೆ.

ಸಾಮಾನ್ಯವಾಗಿ ಬೆಂಕಿ ಆರಿಸುಕಗಳಲ್ಲಿ 4 ಬಗೆ.  ಅವು ಕೆಳಗಿನಂತಿವೆ:

  1. ನೀರಿನ ಬೆಂಕಿ ಆರಿಸುಕಗಳು
  2. ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳು
  3. ನೊರೆಯ ಬೆಂಕಿ ಆರಿಸುಕಗಳು
  4. ಪುಡಿ ತುಂಬಿದ ಬೆಂಕಿ ಆರಿಸುಕಗಳು

ನೀರಿನ ಬೆಂಕಿ ಆರಿಸುಕಗಳು ನೀರನ್ನು ಬೆಂಕಿ ಆರಿಸುವ ಮಾಧ್ಯಮವಾಗಿ ಬಳಕೆ ಮಾಡುತ್ತವೆ. ಒಂದು ಚಿಕ್ಕ ಸಿಲಿಂಡರ್ ಗಾತ್ರದ ಕೊಳಾಯಿಯಲ್ಲಿ ಬಹುಪಾಲು ನೀರು ತುಂಬಿರುತ್ತದೆ. ಅದರೊಳಗೆ ಒಂದು ಪುಟ್ಟ ಗಾಳಿ ತುಂಬಿದ ಡಬ್ಬಿ(canister) ಇರುತ್ತದೆ ಮತ್ತು ನೀರು ಚಿಮ್ಮಲು ಒಂದು ಕೊಳವೆ. ಈ ಕೊಳವೆಯು ಸಿಲಿಂಡರ್‌ನ ಒಂದು ಮೇಲ್ಭಾಗದ ಬಲಬದಿಗೆ ನೀರು ಚಿಮ್ಮಲು ಬಾಯಿ ತೆರೆದಿರುತ್ತದೆ. ಸಿಲಿಂಡರ್ ಮೇಲೆ ಉಂಗುರದ ಮೂಲಕ ಆಪರೇಟ್ ಮಾಡಬಹುದಾದ ಒಂದು ಹಿಡಿಕೆ. ಉಂಗುರ ಎಳೆದಾಗ ಹಿಡಿಕೆಯು ರಿಲೀಸ್ ಆಗಿ ಕೆಳಗಿನ ಗಾಳಿ ತುಂಬಿದ ಡಬ್ಬಿಯ ತೆರಪು(Valve) ತೆರೆಯುವಂತೆ ಮಾಡುತ್ತದೆ. ಇದರಿಂದ ಗಾಳಿಯು ಸಿಲಿಂಡರ್ ತುಂಬಾ ಸೇರಿ ನೀರನ್ನು ಕೆಳಕ್ಕೆ ದಬ್ಬುತ್ತದೆ. ಇದರಿಂದ ನೀರಿನ ಮೇಲೆ ಒತ್ತಡ ಉಂಟಾಗಿ, ಕೊಳವೆ ಮೂಲಕ ಹೊರಕ್ಕೆ ಚಿಮ್ಮಲ್ಪಡುತ್ತದೆ. ಹೀಗೆ ನೀರು, ಬೆಂಕಿಯ ಬಿಸುಪನ್ನು ಹೀರಿ ಬೆಂಕಿ ಆರುವ ಕೆಲಸ ನಡೆಯುತ್ತದೆ.

ನೊರೆಯ ಬೆಂಕಿ ಆರಿಸುಕಗಳು: ಇವುಗಳು ನೀರಿನ ಬೆಂಕಿ ಆರಿಸುಕಗಳಂತೆ ಕೆಲಸ ಮಾಡುತ್ತವೆ. ಆದರೆ ಕೊಳಾಯಿಯ ಒಳಗೆ ನೀರಿನ ಜೊತೆ ನೊರೆಯು ಸೇರಿರುತ್ತದೆ. ಈ ನೊರೆಯು ಸೋಡಿಯಮ್ ಬೈಕಾರ್ಬೋನೆಟ್‍ನಿಂದ ತಯಾರಿಸಿದ್ದಾಗಿರುತ್ತದೆ. ಕೊಳಾಯಿ ಮೇಲ್ಭಾಗದ ಹಿಡಿಕೆಯ ಉಂಗುರ ಎಳೆದಾಗ ನೊರೆಯ ಜೊತೆ ನೀರು ಸೇರಿ ದೊಡ್ಡ ಗಾತ್ರದ ನೊರೆಯು ಉರಿಯುತ್ತಿರುವ ಬೆಂಕಿಯ ಮೇಲೆ ಸಿಂಪಡನೆಗೊಂಡು ಬೆಂಕಿಗೆ ಆಕ್ಸಿಜನ್ ಹರಿವನ್ನು ತಡೆಯುತ್ತದೆ ಮತ್ತು ಬಿಸುಪನ್ನು ಹೀರಿಕೊಳ್ಳುತ್ತ ಬೆಂಕಿ ನಿಲ್ಲಿಸುತ್ತವೆ.

ಪುಡಿಯ ಬೆಂಕಿ ಆರಿಸುಕಗಳು: ಪುಡಿ ಬೆಂಕಿ ಆರಿಸುಕಗಳು ಹೆಚ್ಚು ಕಡಿಮೆ ನೀರು ಇಲ್ಲವೇ ನೊರೆಯ ಆರಿಸುಕಗಳಂತೆ ಈಡುಗಾರಿಕೆ(Design) ಹೊಂದಿರುತ್ತವೆ. ಆದರೆ ಇಲ್ಲಿ ನೊರೆ ಇಲ್ಲವೇ ನೀರಿನ ಬದಲು ಬೆಂಕಿ ಆರಿಸಲು ನೆರವಾಗುವ ಮೊನೊಅಮೋನಿಯಂ ಫಾಸ್ಫೇಟ್(Monoammonium Phosphate) ಪುಡಿಯನ್ನು ಬಳಸುತ್ತಾರೆ. ಇದರೊಟ್ಟಿಗೆ ಪೊಟ್ಯಾಸಿಯಂ ಬೈಕಾರ್ಬೋನೆಟ್ ಇಲ್ಲವೇ ಸೋಡಿಯಂ ಬೈಕಾರ್ಬೋನೆಟ್ ಪುಡಿಗಳನ್ನು ಬಳಕೆ ಮಾಡುತ್ತಾರೆ. ಈ ಪುಡಿ ಬೆಂಕಿಯ ಮೇಲೆ ಬಿದ್ದಾಗ ರಾಸಾಯನಿಕ ಕ್ರಿಯೆಯಿಂದ ಬೆಂಕಿಯ ಬಿಸುಪನ್ನು ಹೀರಿ, ಕರಗುತ್ತ ಉರುವಲಿನ ಆವಿಯಾಗಿಸಿ ಬೆಂಕಿಗೆ ಅವಶ್ಯವಿರುವ ಆಕ್ಸಿಜನ್ ಹರಿವನ್ನು ಕಡಿತ ಮಾಡುತ್ತದೆ. 

(ಈ ಮೇಲಿರುವ ತಿಟ್ಟದಲ್ಲಿ ಸಾಮಾನ್ಯವಾಗಿ ಬೆಂಕಿ ಆರಿಸುಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸಲಾಗಿದೆ).

 ಪುಡಿ, ನೀರು ಮತ್ತು ನೊರೆಯ ಈ ಮೂರು ತರಹದ ಬೆಂಕಿ ಆರಿಸುಕಗಳಲ್ಲಿ ಮುನ್ನುಗ್ಗುಕವೊಂದನ್ನು(Propellent) ಬಳಸುತ್ತಾರೆ. ಕ್ಯಾನಿಸ್ಟರ್(ಡಬ್ಬಿ)ಗಳಲ್ಲಿ ಇದೇ ಮುನ್ನುಗ್ಗುಕ ಗಾಳಿಯನ್ನು ಕೂಡಿಡುತ್ತಾರೆ. ಹೆಚ್ಚಾಗಿ ಸಾರಜನಕ(ನೈಟ್ರೋಜನ್) ಇಲ್ಲವೇ ಕಾರ್ಬನ್ ಡೈಆಕ್ಸೈಡ್‍ಗಳನ್ನೇ ಮುನ್ನುಗ್ಗುಕವಾಗಿ ಬಳಸುತ್ತಾರೆ. ಬೆಂಕಿ ಆರಿಸುಕಗಳಲ್ಲಿ, ಹೆಚ್ಚಿನ ಒತ್ತಡದಲ್ಲಿ ಕೂಡಿಟ್ಟಿರುವ ಮುನ್ನುಗ್ಗುಕ ಸ್ಪೋಟಗೊಳ್ಳಬಾರದೆಂದು ಗಟ್ಟಿಮುಟ್ಟಾದ ಉಕ್ಕಿನಿಂದ ತಯಾರಿಸಿಲಾಗಿರುತ್ತದೆ.

ಕಾರ್ಬನ್ ಡೈಆಕ್ಸೈಡ್ ಬೆಂಕಿ ಆರಿಸುಕಗಳು ಕೂಡ ಕೆಂಪು ಬಣ್ಣದ ಸಿಲಿಂಡರ್‌ಗಳಿಂದಾಗಿರುತ್ತವೆ. ಇಲ್ಲಿ ನೀರಿನ ಬದಲು ಕಾರ್ಬನ್ ಡೈಆಕ್ಸೈಡ್ ಗಾಳಿಯನ್ನು ಬಳಸುತ್ತಾರೆ. ಈ ತರದ ಆರಿಸುಕಗಳು ದೊಡ್ಡದಾದ ಕೋನ್  ಆಕಾರದ ಬಾಯಿ ಹೊಂದಿರುತ್ತವೆ. ಇದಕ್ಕೆ ಹಾರ್ನ್ ಎಂದು ಹೇಳಲಾಗುತ್ತದೆ, ಈ ದೊಡ್ಡ ಹಾರ್ನ್ ಮೂಲಕವೇ ಇವುಗಳು ಇಂಗಾಲದ ಬೆಂಕಿ ಆರಿಸುಕಗಳು ಎಂದು ಗುರುತಿಸಬಹುದು. ಇಲ್ಲಿ ಕೂಡ ಮೇಲ್ಭಾಗದಲ್ಲಿ ಹಿಡಿಕೆ-ಅದಕ್ಕೆ ಜೋಡಿಸಲ್ಪಟ್ಟ ತೆರಪಿನ ಏರ್ಪಾಟು ಇರುತ್ತದೆ. ಕೆಂಪು ಕೊಳಾಯಿಯ ಒಳಗೆ ದ್ರವರೂಪದಲ್ಲಿ ಇಂಗಾಲದ ಡೈಆಕ್ಸೈಡ್ ತುಂಬಿರುತ್ತಾರೆ. ಹಿಡಿಕೆಯನ್ನು ಜೋರಾಗಿ ಅದುಮಿದಾಗ ತೆರಪು ತೆರೆದುಕೊಂಡು, ವೇಗದಿಂದ CO2 ಮಂಜಿನಂತೆ ಉರಿಯುವ ಬೆಂಕಿಗೆ  ಬಿಳಿಯ ದಟ್ಟ ಹೊಗೆ ರೂಪದಲ್ಲಿ ಸಿಂಪಡನೆಗೊಂಡು, ಅದನ್ನು ನಿಲ್ಲಿಸುತ್ತದೆ. ಇಲ್ಲಿ ಕೋನ್  ಆಕಾರದ ಹಾರ್ನ್ ರಚನೆ ಬಲುಮುಖ್ಯ.. ವೇಗದಿಂದ ಬರುವ ಕಾರ್ಬನ್ ಡೈಆಕ್ಸೈಡ್ ಬಿರುಸಾದ ಹರಿವಿನಿಂದ ಹಿಗ್ಗುತ್ತಾ ತಂಪಾದ ಮಂಜಿನ ಗಾಳಿ ಹೊರಸೂಸಲು ಅನುಕೂಲವಾಗುವಂತೆ ಹಾರ್ನ್ ಈಡುಗಾರಿಕೆ ಮಾಡಲಾಗಿರುತ್ತದೆ. 

ಈ ಎಲ್ಲ ಬಗೆಯ ಬೆಂಕಿ ಆರಿಸುಕಗಳನ್ನು ಎಲ್ಲ ರೀತಿಯ ಬೆಂಕಿ ಅವಘಡಗಳಲ್ಲಿ ಬಳಸಲಾಗದು. ತಪ್ಪು ಬಳಕೆಯಿಂದ ಅಪಾಯವಾಗುವ ಸಾಧ್ಯತೆಯುಂಟು. ಅದಕ್ಕೆಂದೇ ಬೆಂಕಿಯನ್ನು ಅವುಗಳು ಉಂಟಾದ ಮೂಲದಿಂದ ಬಗೆಗಳಾಗಿ ಗುರುತಿಸಿ, ಅದಕ್ಕೆ ತಕ್ಕುದಾದ ಬೆಂಕಿ ಆರಿಸುಕಗಳನ್ನು ಬಳಸಬೇಕು. ಕ್ಲಾಸ್ ಎ,ಬಿ,ಸಿ,ಡಿ,ಈ ಮತ್ತು ಎಫ್ ಎಂಬ 6 ಬಗೆಯ ಬೆಂಕಿಗಳನ್ನು ಗುರುತಿಸಲಾಗಿದೆ.

ಕ್ಲಾಸ್ ಎ – ಸೌದೆ/ಕಟ್ಟಿಗೆ, ಕಾಗದ, ಪ್ಲ್ಯಾಸ್ಟಿಕ್, ರಬ್ಬರ್ ಮುಂತಾದ ಗಟ್ಟಿವಸ್ತುಗಳಿಂದ ಹೊತ್ತಿಕೊಂಡಿರುವ ಬೆಂಕಿಯು ಈ ಸಾಲಿಗೆ ಸೇರುತ್ತದೆ. ಇದನ್ನು ನೀರಿನ ಬೆಂಕಿ ಆರಿಸುಕ ಬಳಸಿ ತಡೆಹಿಡಿಯಬಹುದು.

ಕ್ಲಾಸ್ ಬಿ – ದ್ರವರೂಪದ ಗಾಳಿ, ದ್ರವ ವಸ್ತುಗಳಿಂದ ಹೊತ್ತಿರುವ ಬೆಂಕಿಯನ್ನು ಕ್ಲಾಸ್ ಬಿ ತರಹದ ಬೆಂಕಿ. ಇಂತ ಬೆಂಕಿ ಆರಿಸಲು ನೊರೆಯ ಬೆಂಕಿ ಆರಿಸುಕ ಬಳಸಬಹುದು.

ಕ್ಲಾಸ್ ಸಿ – ಒತ್ತಡದಲ್ಲಿ ಕೂಡಿಟ್ಟ ದ್ರವ ಇಲ್ಲವೇ ದ್ರವರೂಪದ ಗಾಳಿಯಿಂದ ಹೊತ್ತಿಕೊಂಡ ಬೆಂಕಿ ಕ್ಲಾಸ್ ಸಿ ಬಗೆಯ ಬೆಂಕಿ. ಉದಾಹರಣೆಗೆ:ಎಲ್ಪಿಜಿ ಸಿಲಿಂಡರ್ ಮುಂತಾದವುಗಳಿಂದ ಹೊತ್ತಿದ ಬೆಂಕಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಡಿ – ಸರಳವಾಗಿ ಹೊತ್ತಿಯುರಿಯುವ ಮಾಗ್ನೇಸಿಯಂ, ಅಲ್ಯುಮಿನಿಯಂ, ಸತು, ಪೊಟ್ಯಾಸಿಯಂ, ಸೋಡಿಯಮ್ ಮುಂತಾದ ಜಲ್ಲಿಗಳಿಂದ ಹತ್ತುವ ಬೆಂಕಿ ಕ್ಲಾಸ್ ಡಿ. ಇಂತಹ ಬೆಂಕಿ ಆರಿಸಲು ಪುಡಿಯ ಬೆಂಕಿ ಆರಿಸುಕಗಳು ನೆರವಾಗಬಹುದು.

ಕ್ಲಾಸ್ ಈ – ಎಲೆಕ್ಟ್ರಿಕಲ್ ವಾಹಕ ವಸ್ತುಗಳಿಂದ ಉಂಟಾದ ಬೆಂಕಿ. ಕಾರ್ಬನ್ ಡೈ ಆಕ್ಸೈಡ್ ಮತ್ತು ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಕ್ಲಾಸ್ ಎಫ್ – ಅಡುಗೆ ಎಣ್ಣೆ, ಕೊಬ್ಬು ಮುಂತಾದ ವಸ್ತುಗಳಿಂದ ಉಂಟಾದ ಬೆಂಕಿ. ಪುಡಿಯ ಬೆಂಕಿ ಆರಿಸುಕಗಳು ಇದಕ್ಕೆ ತಕ್ಕುದಾಗಿವೆ.

ಹೀಗೆ ಬೆಂಕಿಗಳ ಬಗೆಗಳಿಗೆ ತಕ್ಕ ಬೆಂಕಿ ಆರಿಸುಕ ಬಳಸಬೇಕು. ಒಂದು ಬಗೆಯ ಬೆಂಕಿಗೆ ಬೇರೆ ಬೇರೆ ಬಗೆಯ 2-3 ಬಗೆಯ ಬೆಂಕಿ ಆರಿಸುಕಗಳನ್ನು ಬಳಸಬಹುದಾಗಿರುತ್ತದೆ.  ಯಾವ ಬೆಂಕಿ ಆರಿಸುಕ ಯಾವ ಬಗೆಯ ಬೆಂಕಿಗೆ ಸೂಕ್ತ ಎಂಬುದನ್ನು ನುರಿತ ತರಬೇತುದಾರರಿಂದ ತರಬೇತಿ ಪಡೆದವರು ಬಳಸಬೇಕು. ನೀರಿನ ಬೆಂಕಿ ಆರಿಸುಕಗಳಿಗೆ ಕೆಂಪು, ನೊರೆಯ ಬೆಂಕಿ ಆರಿಸುಕ ಹಳದಿ, ಪುಡಿಯ ಬೆಂಕಿ ಆರಿಸುಕಕ್ಕೆ ನೀಲಿ ಮತ್ತು ಕಾರ್ಬನ್ ಡೈ ಆಕ್ಸೈಡ್ ಬೆಂಕಿ ಆರಿಸುಕಗಳಿಗೆ ಕಪ್ಪು ಬಣ್ಣದ ಗುರುತು ಹಾಕಿರಲಾಗಿರುತ್ತದೆ.

ಬಳಸುವ ಬಗೆ:  ಬೆಂಕಿ ಆರಿಸುಕದ ಮೂತಿ ಇಲ್ಲವೇ ಚಿಮ್ಮುಕವನ್ನು ಬೆಂಕಿ ಇರುವ ಕಡೆ ತಿರುಗಿಸಿ ಬೆಂಕಿಗೆ ಗುರಿಯಾಗಿಸಿ, ಹಿಡಿಕೆಯ ಮೇಲಿರುವ ಉಂಗುರ ಎಳೆಯಬೇಕು ಆಗ ಬೆಂಕಿ ಮೆಲ್ಲಗೆ ಆರ ತೊಡಗುತ್ತದೆ. ಇದು ಒಂದು ರೀತಿಯಲ್ಲಿ ಬಂದೂಕನ್ನು ಸರಿಯಾದ ಗುರಿಯತ್ತ ತಿರುಗಿಸಿ ಟ್ರಿಗ್ಗರ್ ಅದುಮಿದಂತೆ ಎನ್ನಬಹುದು. ಬೆಂಕಿ ಆರಿಸುಕ ಬಳಸಲು ಕಚೇರಿ, ಮಾಲ್, ಬ್ಯಾಂಕ್, ಬಾನೋಡತಾಣ ಮುಂತಾದ ಕಡೆ ಭದ್ರತಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈ ತರಬೇತಿ ನೀಡಿದ ವ್ಯಕ್ತಿಗಳಿಗೆ ಮಾತ್ರ ಬೆಂಕಿ ಆರಿಸುಕವನ್ನು ಸರಿಯಾಗಿ ಬಳಸಬಹುದು. ಬೆಂಕಿ ಆರಿಸುಕ ಬಳಸುವ ಮುನ್ನ ಯಾರೇ ಆಗಲಿ ಈ ತರಬೇತಿ ಪಡೆಯಲೇಬೇಕು. ಸರಿಯಾದ ತರಬೇತಿ ಇರದೇ ಬಳಸಲು ಹೋಗಿ ಹಲವರು ತಮಗೆ ಅಪಾಯ ಮಾಡಿಕೊಂಡ ಹಲವು ಘಟನೆಗಳು ನಡೆದಿವೆ.

ಮಾಹಿತಿ ಮತ್ತು ತಿಟ್ಟ ಸೆಲೆ:explainthatstuff.com

ಕನೆಕ್ಟೆಡ್ ಕಾರುಗಳು(Connected Cars)

ಜಯತೀರ್ಥ ನಾಡಗೌಡ.

ಮಿಂಬಲೆ(ಇಂಟರ್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ ಒಳಗೂ ಇರುವಂತ ಇಲ್ಲವೇ ಹೊರಗಿರುವಂತವವೂ ಆಗಿರಬಹುದು. ಉದಾಹರಣೆಗೆ ಕಾರೊಂದು ಮಿಂಬಲೆ ಮೂಲಕ ಇನ್ನೊಂದು ಕಾರಿನೊಂದಿಗೆ ಇಲ್ಲವೇ ಸ್ಮಾರ್ಟ್‌ಫೋನ್ /ಸ್ಮಾರ್ಟ್‌ವಾಚ್‌ಗಳಂತ ಬೇರೆ ಉಪಕರಣೊಂದಿಗೆ ಮಾಹಿತಿ ಹಂಚಿಕೆ ಅಥವಾ ಮಾಹಿತಿ ಪಡೆದುಕೊಳ್ಳಬಹುದು. ಈ ರೀತಿ ಕಾರೊಂದು ಇನ್ನೊಂದು  ವಸ್ತುವಿನೊಂದಿಗೆ ಬೆಸೆದುಕೊಂಡರೆ ಅದು ಬೆಸುಗೆಯ ಕಾರು ಎನ್ನಿಸಿಕೊಳ್ಳುತ್ತದೆ.

ಕಾರುಗಳು ಹೇಗೆ ಬೆಸೆದುಕೊಳ್ಳುತ್ತವೆ? ಇದರ ಕೆಲಸ ಮಾಡುವ ವಿಧಾನ ಹೇಗೆ?

ಈ ಬೆಸುಗೆಯ ಕಾರುಗಳು ಕೆಳಗೆ ನೀಡಿರುವ ಎರಡರಲ್ಲಿ ಒಂದು ಏರ್ಪಾಟಿನ ಮೂಲಕ ಕೆಲಸ ಮಾಡುತ್ತವೆ.

  1. ಮೊದಲನೇ ಏರ್ಪಾಟು, ಟೆಥೆರ್ಡ್(Tethered) – ಟೆಥೆರ್ ಅಂದರೆ ವ್ಯಾಪ್ತಿ/ಮಿತಿಯೊಳಗೆ ಎಂಬ ಅರ್ಥ ಬರುತ್ತದೆ. ಈ ಏರ್ಪಾಟಿನಲ್ಲಿ ಕಾರು ಪಯಣಿಗರ ಮೊಬೈಲ್ ನೊಂದಿಗೆ ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
  2. ಎರಡನೇ ಏರ್ಪಾಟು, ಎಂಬೆಡೆಡ್(Embedded) – ಈ ಏರ್ಪಾಟನ್ನು ಕನ್ನಡದಲ್ಲಿ ನಾಟಿದ/ಹುದುಗಿಸಿದ ಏರ್ಪಾಟು ಎನ್ನಬಹುದು. ಇದರಲ್ಲಿ ಗಾಡಿಯ ಒಳಗಿನ ಟೆಲೆಮಾಟಿಕ್ಸ್ ಕಂಟ್ರೋಲರ್ ದಲ್ಲಿ(Telematics ECU) ಎಂಟೆನ್ನಾ(Antenna) ಮತ್ತು ಸೆಮಿಕಂಡಕ್ಟರ್ ಚಿಪ್ ಸೇರಿರುತ್ತದೆ. ಇವುಗಳ ಮೂಲಕ ಗಾಡಿಯು ಬೇರೆ ದೂರದ ಉಪಕರಣಗಳೊಂದಿಗೆ ಸುಲಭವಾಗಿ ಸಂಪರ್ಕ ಮಾಡಬಹುದು.

ಇದನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಮೊಬೈಲ್ ಫೋನ್‌ಗೆ ಬರುವ ತಂತ್ರಾಂಶದ ಅಪ್ಡೇಟ್‌ಗಳಂತೆ, ಬೆಸುಗೆಯ ಕಾರುಗಳು ಈ ರೀತಿ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಪಡೆದು ಕೆಳಗಿಸಿಕೊಳ್ಳಬಲ್ಲವು, ಹೊರ ಜಗತ್ತಿನ ವಸ್ತುಗಳೊಂದಿಗೆ ಸಂಪರ್ಕ ಪಡೆಯಬಲ್ಲವು ಮತ್ತು ತನ್ನ ಸುತ್ತಲಿನ ಮಿತಿಯಲ್ಲಿನ ಇತರೆ ವಸ್ತುಗಳೊಂದಿಗೆ ಮಿಂಬಲೆ ಇಲ್ಲವೇ ಕಾರಿನ ವೈಫೈ (Wifi) ಮೂಲಕ ಸಂಪರ್ಕ ಹೊಂದಬಲ್ಲವು.

ಬೆಸುಗೆಯ ಕಾರುಗಳು ಹೇಗೆ ಮಾತುಕತೆ ನಡೆಸಬಲ್ಲವು?

ಬೆಸುಗೆಯ ಕಾರುಗಳು ಹೊರಜಗತ್ತಿನ ವಸ್ತುಗಳೊಂದಿಗೆ ವ್ಯವಹಾರ/ಸಂಪರ್ಕ ಮಾಡುವುದನ್ನು 5 ಬಗೆಗಳಾಗಿ ವಿಂಗಡಿಸಬಹುದು.

  1. ಒಂದು ಬಂಡಿ(ಕಾರು/ಗಾಡಿ) ಮತ್ತೊಂದು ಬಂಡಿ ಇಲ್ಲವೇ ಬಂಡಿಗಳೊಂದಿಗೆ ಮಾಹಿತಿ ಸಂಪರ್ಕ ಮಾಡಬಹುದು. ಇದನ್ನು ವೆಹಿಕಲ್ ಟು ವೆಹಿಕಲ್ ಮಾಹಿತಿ ಒಡನಾಟ ಎನ್ನುತ್ತಾರೆ(V2V). ಒಂದು ಕಾರು ನಿರ್ದಿಷ್ಟ ಜಾಗದಲ್ಲಿ ಸಾಗುತ್ತಿರುತ್ತದೆ, ಅದು ಸಾಗುವ ವೇಗ, ದಾರಿ, ತಡೆತದ ಸ್ಥಿತಿ(braking situation) ಮುಂತಾದ ಮಾಹಿತಿಯನ್ನು ಈ ಕಾರು ಕಲೆ ಹಾಕಿ ಇನ್ನೊಂದು ಕಾರಿಗೆ ಕಳಿಸಬಹುದು. ಈ ವಿಧದ ಮೂಲಕ ಬೇಜವ್ದಾರಿ ಬಂಡಿ ಓಡಿಸುಗರನ್ನು, ಇಲ್ಲವೇ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಹೋಗುವ ಬಂಡಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು. ಬಹುತೇಕ ಕ್ಯಾಬ್/ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕಂಪನಿಯವರು ತಮ್ಮ ಕಾರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ  ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಗಾಡಿಗಳಲ್ಲಿ ಪರಾರಿಯಾಗುವ ಕಳ್ಳಕಾಕರನ್ನು/ಅಪಹರಣಕಾರರನ್ನು, ಅವರು ಸಾಗುವ ದಾರಿಯ ಬಗ್ಗೆ ನಿಖರ ಮಾಹಿತಿ ನೀಡುವ ಮೂಲಕ ಈ ಬಗೆಯು ಪೋಲೀಸ್‍ರಿಗೆ ನೆರವಾಗುತ್ತದೆ. 
  2. ಎರಡನೇ ಬಗೆ, ಗಾಡಿ ಮತ್ತು ದಾರಿಹೋಕರ ನಡುವೆ ಸಂಪರ್ಕ(V2P-ವೆಹಿಕಲ್ ಟು ಪೆಡೆಸ್ಟ್ರಿಯನ್):

ಇಲ್ಲಿ ಕಾರು ದಾರಿಯಲ್ಲಿ ಓಡಾಡುವ ಇತರೆ ದಾರಿಹೋಕರನ್ನು ಅರಿವುಕಗಳ ಮೂಲಕ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಪಘಾತ ತಡೆಯುತ್ತದೆ.

  1. ಗಾಡಿ ಮತ್ತು ಇತರೆ ಮೂಲಭೂತ ಸೌಕರ್ಯಗಳ ನಡುವಿನ ಸಂಪರ್ಕ(V2I-ವೆಹಿಕಲ್ ಟು ಇನ್ಫ್ರಾಸ್ಟ್ರಕ್ಚರ್): 

ಈ ಬಗೆಯಲ್ಲಿ ಕಾರು ತನ್ನ ಸುತ್ತಲಿನ ಪರಿಸರ, ಸೇತುವೆ, ಕಟ್ಟಡ, ಬೀದಿ ದೀಪ, ಸಂಚಾರದ ದಟ್ಟಣೆ, ಎದುರಾಗುವ ಸಂಚಾರಿ ಸಿಗ್ನಲ್ ಹೀಗೆ ಹಲವಾರು ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳಬಲ್ಲದು. ಈ ಮಾಹಿತಿ ಸಂಚಾರ ದಟ್ಟಣೆ ನಿರ್ವಹಿಸುವ ಪೋಲೀಸ್‍ರಿಗೆ, ತುರ್ತು ಸಮಯದಲ್ಲಿ ಅಂಬ್ಯುಲೆನ್ಸ್‌ಗಳಿಗೆ ನೆರವಾಗುತ್ತವೆ. ನಮ್ಮ ಮೊಬೈಲ್‌ಗಳಲ್ಲಿ ಕಂಡುಬರುವ ದಾರಿತಲುಪು ಏರ್ಪಾಟು(Navigation System) ಮಾಹಿತಿಗಿಂತಲೂ ಇಲ್ಲಿ ಹೆಚ್ಚು ನಿಖರ ಮತ್ತು ನೇರವಾದ ಮಾಹಿತಿ(Real time Data) ಒದಗಿಸುವ ವ್ಯವಸ್ತೆ ಇರುತ್ತದೆ.

  1. ಗಾಡಿ ಮತ್ತು ಕ್ಲೌಡ್ ಮಾಹಿತಿ ಸಂಪರ್ಕ(V2C-ವೆಹಿಕಲ್ ಟು ಕ್ಲೌಡ್): ಕಾರುಗಳು ಮೂಲಕ ಕ್ಲೌಡ್‍ನಲ್ಲಿ ಮಾಹಿತಿ ಕೂಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಗಾಡಿಯೊಂದು ಎಷ್ಟು ಬಾರಿ ರಿಪೇರಿಯಾಗಿದೆ, ಎಷ್ಟು ಸಲ ಸರ್ವೀಸ್ ಮಾಡಿಸಲ್ಪಟ್ಟಿದೆ, ದಾರಿ ಮಧ್ಯೆದಲ್ಲಿ ಕಾರು ಕೆಟ್ಟು ನಿಂತ ಪರಿಸ್ಥಿತಿ, ಹೀಗೆ ಎಲ್ಲ ದಾಖಲೆಗಳನ್ನು ಕ್ಲೌಡ್ ಮೂಲಕ ಕೂಡಿಟ್ಟು, ಬೇಕೆಂದಾಗ ಅದನ್ನು ಬಳಸಿಕೊಳ್ಳಬಹುದು.
  2. ಗಾಡಿ ಮತ್ತು ಮೇಲಿನ ಎಲ್ಲವೂಗಳೊಂದಿಗೆ ಸಂಪರ್ಕ(V2X-ವೆಹಿಕಲ್ ಟು ಎವೆರಿಥಿಂಗ್):

ಈ ವಿಧದಲ್ಲಿ ಗಾಡಿಯೊಂದು ಮೇಲೆ ತಿಳಿಸಿದ ಎಲ್ಲವೂಗಳೊಂದಿಗೆ ಮಾಹಿತಿ ಪಡೆಯುವುದು-ಹಂಚುವುದನ್ನು ಮಾಡಬಹುದು. ಇದರಿಂದ ಗಾಡಿಯೊಂದು ಒಂದೇ ಸಮಯದಲ್ಲಿ ಬೇರೆ ಗಾಡಿಯೊಂದಕ್ಕೆ ಬೆಸೆದುಕೊಂಡು ಸುತ್ತಲಿನ ವಾತಾವರಣದ ಮಾಹಿತಿ ಹಂಚಿ, ಸಂಚಾರ ದಟ್ಟಣೆಯ ಮಾಹಿತಿ ಪಡೆದು, ದಾರಿಹೋಕರು ಎದುರಾದರೆ ಗಾಡಿ ನಿಲ್ಲಿಸುವಂತೆ ಓಡಿಸುಗನನ್ನು ಎಚ್ಚರಿಸಬಹುದು. ಮತ್ತೆ ಎಲ್ಲ ಮಾಹಿತಿಯನ್ನು ಮುಂದೆ ಬಳಸಲು ಕ್ಲೌಡ್‌ನಲ್ಲಿ ಕೂಡಿಡಬಹುದು. ಈ ಎಲ್ಲವೂ ಒಟ್ಟಿಗೆ ನಡೆದು,  ಸಾಕಷ್ಟು ಮಾಹಿತಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ರವಾನೆಯಾಗುತ್ತಿರುತ್ತದೆ.

ಬೆಸುಗೆಯ ಕಾರುಗಳ ಅನುಕೂಲಗಳೇನು?

ಗಾಡಿಯೊಳಗಡೆ ಮನೋರಂಜನೆ, ಭದ್ರತೆ ಮತ್ತು ಅಪಘಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಭವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಷಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೆಚ್ಚಿನ ಬಂಡಿಗಳ ಓಡಾಟವನ್ನು ಸುಲಭ ಸರಳಗೊಳಿಸಿ, ಸಾರಿಗೆ ಏರ್ಪಾಟಿನಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಬೆಸುಗೆಯ ಕಾರುಗಳು ನೆರವಾಗುವುದು ಖಚಿತ.

ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ಒಳ್ಳೆಯ ಗುಣಮಟ್ಟದ ತಿಳಿನಲಿ ಏರ್ಪಾಟು(Infotainment System), ಅಂಡ್ರ್ಯಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಏರ್ಪಾಟಿನಿಂದ ಸರಳವಾಗಿ ಜೋಡಣೆಗೊಳ್ಳುತ್ತವೆ. ಈ ಏರ್ಪಾಟುಗಳಿಗೆ ಹೆಚ್ಚಿನ ನಿಖರ ಮಾಹಿತಿ ಒದಗಿಸಿ ಕಾರು ಓಡಿಸುಗರಿಗೆ ದಾರಿತೋರಲಿದೆ ಬೆಸುಗೆಯ ಕಾರುಗಳು. ಒಬ್ಬ ವ್ಯಕ್ತಿ ಕಾರಿನಲ್ಲಿ ಮಾರುಕಟ್ಟೆಗೆ ಹೋಗಿದ್ದಾಗ,, ಅವಸರದಲ್ಲಿ ಕಾರು ಪಾರ್ಕ್ ಮಾಡಿ, ಕಾರಿಗೆ ಬೀಗ ಹಾಕದೇ ದೂರ ಬಂದಾಗ, ಕಾರಿಗೆ ಬೀಗ ಹಾಕದೇ ಇರುವುದು ನೆನಪಾಗುತ್ತದೆ. ಆದರೆ,ಆ ವ್ಯಕ್ತಿಗೆ ನೆನಪಾಗುವ ಮೊದಲೇ ಆತನ ಮೊಬೈಲ್ ತಕ್ಷಣ ಎಚ್ಚರಿಕೆ ಸಂದೇಶ ನೀಡುತ್ತದೆ. ಕನೆಕ್ಟೆಡ್ ಕಾರ್ ತಂತ್ರಜ್ಞಾನದ ಮೂಲಕ ಬೆಸೆದುಕೊಂಡ ಕಾರು ಮತ್ತು ಮೊಬೈಲ್, ಇಂತ ಹೊತ್ತಲ್ಲಿ ಸಹಾಯಕ್ಕೆ ಬರುತ್ತದೆ. ಟ್ಯಾಕ್ಸಿ ಕಂಪನಿಯ ಮಾಲೀಕನೊಬ್ಬ ತನ್ನ ಮೊಬೈಲ್ ಮೂಲಕವೇ ತನ್ನ ಹತ್ತಾರು ಟ್ಯಾಕ್ಸಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಕ್ಷಣಾರ್ಧದಲ್ಲಿ ಕಂಡುಕೊಳ್ಳಬಹುದು. ತನ್ನ ಟ್ಯಾಕ್ಸಿ ಓಡಿಸುಗರಿಗೆ ಸಾಗುವ ದಾರಿಯ ಸಂಚಾರ ದಟ್ಟಣೆಯ ಮಾಹಿತಿ ಒದಗಿಸಿ, ಅದಕ್ಕೆ ತಕ್ಕಂತೆ ಮಾರ್ಗ ಬದಲಿಸಿ ಸುಲಭವಾಗಿ ಊರು ಮುಟ್ಟುವ ಸಲಹೆ ನೀಡಬಹುದು. ಕಾರಿನಲ್ಲಿ ದೂರದ ಊರಿಗೆ ಸಾಗುತ್ತಿದ್ದೀರಿ, ಮನೆಯಲ್ಲಿ ಗೀಸರ್ ಆಫ್ ಮಾಡುವುದು ಆಗ ನೆನಪಾಗುತ್ತದೆ, ಚಿಂತೆ ಬೇಡ ನಿಮ್ಮ ಕಾರು ಮನೆಯಲ್ಲಿನ ಗೀಸರ್ ಆಫ್ ಮಾಡುತ್ತದೆ. ನೀವು ಮತ್ತು ಕುಟುಂಬ, ವಾರದ ಕೊನೆಯಲ್ಲಿ ಮಾಲ್‍ವೊಂದಕ್ಕೆ ಹೋಗಬೇಕೆಂದುಕೊಂಡಿರುತ್ತೀರಿ, ಆ ಮಾಲ್‍ನಲ್ಲಿ ಪಾರ್ಕಿಂಗ್‌ಗೆ ಎಷ್ಟು ಜಾಗಗಳು ಖಾಲಿ ಇವೆ ಎಂಬುದನ್ನು ನಿಮ್ಮ ಕಾರು ನಿಮಗೆ ತಿಳಿಸುತ್ತದೆ. ಮಾಲ್‌ನ ಸುತ್ತಮುತ್ತಲಿನ ಪರಿಸರದ ನೇರ ಮಾಹಿತಿ ಕನೆಕ್ಟೆಡ್ ಕಾರ್ ಮೂಲಕ ನಿಮ್ಮ ಕಾರು ಪಡೆದುಕೊಂಡು ನಿಮಗೆ ಮಾಹಿತಿ ನೀಡುತ್ತದೆ. ಆಗ ನೀವು ಪಾರ್ಕಿಂಗ್‍ಗಾಗಿ ಅಲೆದಾಡುವ-ಸಮಯ ಕಳೆಯುವ ಅಗತ್ಯ ಇರುವುದಿಲ್ಲ. ಇನ್ನೊಂದು ಪ್ರಮುಖ ಅನುಕೂಲವೆಂದರೆ ಜಿಯೋ ಫೆನ್ಸಿಂಗ್(Geo-Fencing). ಅಂದರೆ ನಿರ್ದಿಷ್ಟ ದಾರಿಯಲ್ಲಿ, ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಗಾಡಿ ಓಡಿಸುವಂತೆ ಮಾಡುವುದು. ಉದಾಹರಣೆಗೆ ನೀವು ನಿಮ್ಮ ಮನೆಯಲ್ಲಿ  ಮಗ/ಮಗಳಿಗೆ ಕಾಲೇಜಿಗೆ ಹೋಗಿಬರಲು ಕಾರನ್ನು ಕೊಡಿಸುತ್ತೀರಿ ಎಂದುಕೊಳ್ಳಿ. ದಿನವೂ ಮಕ್ಕಳು ಕಾಲೇಜಿಗೆ ಅದೇ ದಾರಿಯಲ್ಲಿ ಸಾಗಿ ಮರಳಿ ಬರುವಂತೆ ಮಾಡಬಹುದು, ಬಂಡಿ ಅದೇ ವಾತಾವರಣದಲ್ಲಿ ಸಾಗಿ ಬರುವ ಮಾಹಿತಿಯನ್ನು ಒಮ್ಮೆ ಜಿಯೋ ಫೆನ್ಸಿಂಗ್ ಮೂಲಕ ಫೀಡ್ ಮಾಡಿ, ಕನೆಕ್ಟೆಡ್ ಕಾರು ಮೂಲಕ ನಿಮ್ಮ ಮೊಬೈಲ್ ಮತ್ತು ಕಾರು ಬೆಸೆದುಕೊಂಡಿದ್ದರೆ, ಈ ದೈನಂದಿನ ಕಾಲೇಜಿಗೆ ಹೋಗಿ ಬರುವ ದಾರಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಹೀಗೆ ಕಾರು ಓಡಾಡುವ ಚಟುವಟಿಕೆಯ ಮೇಲೆ ಸುಲಭವಾಗಿ ಕಣ್ಣಿಡಬಹುದು. ಕಾರೊಂದು ದಾರಿಯಲ್ಲಿ ಸಾಗುವಾಗ ಅಪಘಾತಕ್ಕೀಡಾದರೆ, ಕೂಡಲೇ ಹತ್ತಿರದ ಸಂಚಾರಿ ಪೋಲೀಸ್‍ರಿಗೂ ಇಲ್ಲ ಅಪಘಾತವಾದ ವ್ಯಕ್ತಿಗಳ ಕುಟುಂಬಕ್ಕೆ ಕೂಡಲೇ ಕಾರು ಮಾಹಿತಿ ಒದಗಿಸಿ ಜೀವ ಉಳಿಸುವ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಗಾಡಿಯೊಂದು ಘಾಟಿ ಪ್ರದೇಶದಲ್ಲಿ ಸಾಗುತ್ತಿದೆ, ಮುಂದೆ ಹತ್ತಾರು ಮೈಲಿ ದೂರದಲ್ಲಿ ಗುಡ್ಡ ಕುಸಿತ, ಭೂಕುಸಿತವಾದರೆ, ಕೂಡಲೇ ಅದರ ಮಾಹಿತಿ ಗಾಡಿಗೆ ತಲುಪುತ್ತದೆ. ಆಗ ಓಡಿಸುಗ ಮುಂದೆ ಸಾಗುವ ಅಪಾಯವನ್ನು ಅರಿತು ಗಾಡಿಯ ಸಾಗುವ ದಾರಿಯನ್ನು ಬದಲಿಸಿಯೋ ಇಲ್ಲವೇ ಭದ್ರವಾದ ಜಾಗವನ್ನು ಸೇರಿಕೊಳ್ಳಬಹುದು. ದೈನಂದಿನ ವ್ಯವಹಾರದ ಮೇಲೆ ಕಣ್ಣಿಡಲು, ಕಳ್ಳ-ಕಾಕರ ಚಟುವಟಿಕೆಗಳ ಮಾಹಿತಿ ಪಡೆದು ಪೋಲೀಸ್ ವ್ಯವಸ್ಥೆಗೆ ನೆರವಾಗಲು ಬೆಸುಗೆಯ ಗಾಡಿಗಳ ಅಗತ್ಯವಿರಲಿದೆ.

ಅನಾನುಕೂಲಗಳ ವಿಷಯ ಬಂದಾಗ, ಕಾರುಗಳ ಹ್ಯಾಕಿಂಗ್ ಮುಖ್ಯವಾದ ತೊಡಕಾಗುವ ಸಾಧ್ಯತೆ ಇದೆ. ಮಿಂಬಲೆ ಮೂಲಕ ಬೆಸೆದುಕೊಂಡಿರುವ ಗಾಡಿಗಳನ್ನು ವೆಬ್ಸೈಟ್ ಹ್ಯಾಕ್ ಮಾಡುವಂತೆ ದೂರದಲೆಲ್ಲೋ ಇರುವ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡರೆ ಆಗುವ ಅನಾಹುತಗಳನ್ನು ಯೋಚಿಸಿ. ಇನ್ನೂ ದಿಗಿಲುಕೋರರು ಕಾರುಗಳನ್ನು ತಮ್ಮ ವಶಕ್ಕೆ ಪಡೆದು, ಯಾವುದೋ ದೇಶದ ಮೂಲೆಯಿಂದ ಕಾರನ್ನು ಅದರ ಮಾಲೀಕನ ಮೊಬೈಲ್ ಹೀಗೆ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದು ಕೊಲೆ ಸುಲಿಗೆ ಮಾಡುವ ಅಪಾಯ ತಪ್ಪಿದ್ದಲ್ಲ. ಮಾದಕ ವಸ್ತು ಸಾಗಾಟಗಾರರು ಈ ತಂತ್ರಜ್ಞಾನದ ಮೂಲಕ ಕಳ್ಳದಾರಿಗಳ ಮೂಲಕ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಸಮಾಜವನ್ನು ಹಾಳುಗೆಡುವಬಹುದು. 

ಮಾಹಿತಿ ಗುಟ್ಟನ್ನು ಕಾಪಾಡಿಕೊಳ್ಳುವುದು ಕಷ್ಟ. ಬೆಸುಗೆಯ ಗಾಡಿಗಳನ್ನು ಕ್ಲೌಡ್, ಆಪ್ ಮೂಲಕ ಸಾಕಷ್ಟು ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರಿಂದ ಕಾರಿನೊಡೆಯರ ವೈಯುಕ್ತಿಕ ಮಾಹಿತಿ ಕಾರು ತಯಾರಕರಿಗೆ ಸುಲಭವಾಗಿ ತಲುಪುತ್ತದೆ. ಇಂತ ಮಾಹಿತಿಗೆ ಪ್ರವೇಶವಕಾಶ(Access) ಹೊಂದಿರುವವರು ತಮಗಿಷ್ಟದಂತೆ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಬೆಸುಗೆಯ ಗಾಡಿಗಳ ಸಾಧಕ ಬಾಧಕಗಳ ಚರ್ಚೆಗಳು ದಿನೇದಿನೇ ಜೋರಾಗಿ ನಡೆಯುತ್ತಲೇ ಇವೆ. ಬೆಸುಗೆಯ ಗಾಡಿಗಳ ಅನಾನುಕೂಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಭರದಲ್ಲಿ ಸಾಗಿವೆ. ಇದರ ಮಧ್ಯೆಯೇ ಸಾಕಷ್ಟು ಬೆಸುಗೆಯ ಗಾಡಿಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನವೂ ಓಡಾಡುತ್ತಿವೆ.

ಮಾಹಿತಿ ಸೆಲೆ: connected cars
ತಿಟ್ಟ ಸೆಲೆ: connected cars pic

ದುಂಡಾಕಾರದ ರನ್‌ವೇ

ಜಯತೀರ್ಥ ನಾಡಗೌಡ.

ಜಗತ್ತಿನೆಲ್ಲೆಡೆ ಹೆಚ್ಚು ಮಂದಿಯ ಓಡಾಟ, ವಿಮಾನ ಸಾರಿಗೆಯ ಮೇಲೂ ದಟ್ಟಣೆ ಹೆಚ್ಚಿಸಿದೆ. ನಮ್ಮ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಭಾರತದ ಪ್ರಮುಖ ಬಾನೋಡತಾಣಗಳು ಇಂದು ಕಿಕ್ಕಿರಿದಿರುತ್ತವೆ. ದುಬೈ, ಫ್ರಾಂಕ್‌ಪರ್ಟ್, ಪ್ಯಾರಿಸ್, ಲಂಡನ್, ಸಿಂಗಪುರ್, ನ್ಯೂಯಾರ್ಕ್ ಮುಂತಾದ ಬಾನೋಡ ತಾಣಗಳ ಮೂಲಕ ಪ್ರತಿ ವರುಶ ಕೋಟಿಗಟ್ಟಲೆ ಪ್ರವಾಸಿಗರು ಓಡಾಡುತ್ತಾರೆ. ದಿನವೊಂದಕ್ಕೆ ನೂರಾರು ಬಾನೋಡಗಳು ಇಲ್ಲಿಗೆ ಬಂದಿಳಿಯುತ್ತವೆ ಮತ್ತು ಇಲ್ಲಿಂದ ಬೇರೆಡೆಗೆ ಹಾರುತ್ತವೆ. ಹೀಗಾಗಿ ಈ ಬಾನೋಡ ತಾಣಗಳ ಓಡುದಾರಿ(Runway) ಯಾವಾಗಲೂ ಬ್ಯುಸಿ. ಲಂಡನ್ ಬಾನೋಡತಾಣದಲ್ಲಿ ಪ್ರತಿ 45 ಸೆಕೆಂಡ್‌ಗಳಿಗೊಮ್ಮೆ ಬಾನೋಡವೊಂದು ಮುಗಿಲಿನತ್ತ ಹಾರುತ್ತದೆ. ದಿನವೊಂದಕ್ಕೆ ಹಾರುವ ಮತ್ತು ಬಂದಿಳಿಯುವ ಒಟ್ಟು ಬಾನೋಡಗಳು 1400, ಅಂದರೆ ಪ್ರತಿ ವರುಷಕ್ಕೆ 5 ಲಕ್ಷಕ್ಕೂ ಹೆಚ್ಚು ಬಾನೋಡಗಳು. ನಮ್ಮ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಾನೋಡತಾಣದ ಅಂಕಿ ಸಂಖ್ಯೆಗಳತ್ತ ಗಮನ ಹಾಯಿಸಿದರೆ, ಪ್ರತಿ ವರುಶ 2 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಇಲ್ಲಿ ಓಡಾಟ ನಡೆಸುತ್ತಾರಂತೆ. ಅಂದರೆ ದಿನವೊಂದಕ್ಕೆ ಸುಮಾರು 55 ಸಾವಿರ ಪ್ರಯಾಣಿಕರು. ಒಂದೇ ದಿನದಲ್ಲಿ ಸುಮಾರು 500 ಬಾನೋಡಗಳು ಕೆಂಪೇಗೌಡ ಬಾನೋಡತಾಣದಲ್ಲಿ ಓಡಾಟ ನಡೆಸುತ್ತವೆ.

 ಈ ಓಡುದಾರಿಗಳು ಬ್ಯುಸಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಾನೋಡ ತಾಣಗಳನ್ನು ಕಟ್ಟುವ ಅಗತ್ಯವಿದೆ. ಹೊಸ ಬಾನೋಡ ತಾಣಗಳನ್ನು ಕಟ್ಟಲು ಸಾವಿರಾರು ಎಕರೆಗಳಷ್ಟು ಜಾಗಬೇಕು. ಬಾನೋಡತಾಣಗಳ ಈ ಸಮಸ್ಯೆಯ ಬಗ್ಗೆ ಆಳವಾದ ಅರಕೆ ನಡೆಸಿರುವ ನೆದರ್‌ಲ್ಯಾಂಡ್ಸ್ ಏರ್‌ಪೋರ್ಟ್ಸ್ ಸೆಂಟರ್‌ನ(NLR) ಮುಖ್ಯ ಸಂಶೋಧನಾ ವಿಜ್ಞಾನಿ ಹೆಂಕ್ ಹೆಸ್ಸಿಲಿಂಕ್(Henk Hesselink), ಒಂದು ಹೊಸದಾದ ಯೋಜನೆಯನ್ನು(Concept) ಮುಂದಿಟ್ಟಿದ್ದಿದ್ದಾರೆ. ಅದೇ “ದುಂಡಾಕಾರದ ಓಡುದಾರಿ”  ಇಂಗ್ಲಿಷ್‌ನಲ್ಲಿ ಎಂಡ್‌ಲೆಸ್ ರನ್‍ವೇ ಇಲ್ಲವೇ ಸರ್ಕ್ಯೂಲರ್ ರನ್‍ವೇ (Endless Runway/Circular Runway) ಎಂಬುದು.

ಒಂದು ಬಾನೋಡ ಹಾರುವುದು ಇಲ್ಲವೇ ನೆಲಕ್ಕೆ ಬಂದಿಳಿಯುವುದು ಸುಲಭದ ಕೆಲಸ ಅಲ್ಲ. ಒಂದು ಬಾನೋಡ ನೆಲಕ್ಕಿಳಿಯುತ್ತಿರುವಾಗ ಅದು ಸಾಕಷ್ಟು ಗಾಳಿಯೊತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಬಾನೋಡವೊಂದು ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ಕೆಳಗಿಳಿಸುವುದು ಕಷ್ಟ. ಇದನ್ನು ಕ್ರಾಸ್‌ವಿಂಡ್ ಲ್ಯಾಂಡಿಂಗ್ ಎನ್ನುತ್ತಾರೆ. ಹೆಚ್ಚಿನ ಬಾನೋಡಗಳು ಗಾಳಿ ಬೀಸುವ ದಿಕ್ಕಿನಲ್ಲೇ ಇಳಿಯುತ್ತವೆ. ಅದಕ್ಕೆಂದೇ ಬಾನೋಡವೊಂದನ್ನು ಕೆಳಗಿಳಿಸುವಾಗ ನಿಧಾನಕ್ಕೆ ಅದನ್ನು ಗಾಳಿ ಬೀಸುವ ದಿಕ್ಕಿಗೆ ತರುತ್ತ ಇಳಿಸುತ್ತಾರೆ. ಇಂತಹದ್ದಕ್ಕೆಲ್ಲ ಹತ್ತಾರು ಕಿಲೋಮೀಟರ್ ಗಟ್ಟಲೆ ದೊಡ್ಡ ಓಡುದಾರಿ ಕಟ್ಟಿಸಬೇಕು. ಇವುಗಳಿಗೆ ಸಾಕಷ್ಟು ಜಾಗ ಬೇಕಾಗುತದೆ. ಹೆಸ್ಸಿಲಿಂಕ್ ಅವರ ದುಂಡಾಕಾರದ ಓಡುದಾರಿಗೆ ಕೇವಲ 3.5 ಕಿಲೋಮೀಟರ್ ವ್ಯಾಸದ(Diameter) ದುಂಡಷ್ಟೇ(Circle) ಸಾಕಂತೆ. ಈ ದುಂಡಿನ ಸುತ್ತಲೂ ಒಂದೇ ಕಾಲಕ್ಕೆ 3 ಬಾನೋಡಗಳು ಹಾರಬಹುದು ಮತ್ತು 3 ಬಾನೋಡಗಳು ಕೆಳಗಿಳಿಯಬಹುದು. ಹೆಸ್ಸೆಲಿಂಕ್ ಅವರ ದುಂಡಾಕಾರದ ಓಡುದಾರಿಯ ಪ್ರಮುಖ ಅನುಕೂಲಗಳು(Advantages) ಹೀಗಿವೆ: 

ಈಗಿರುವ ಬಾನೋಡತಾಣಗಳಿಗಿಂತ, ದುಂಡನೆಯ ಓಡುದಾರಿಯ ಬಾನೋಡ ತಾಣಗಳು 2/3ರಷ್ಟು ಜಾಗವನ್ನು ಉಳಿತಾಯ ಮಾಡುತ್ತವೆ.ಸಾಮಾನ್ಯವಾಗಿ ಬಾನೋಡ ತಾಣಗಳಲ್ಲಿ ಬಾನೋಡಗಳು ಒಂದೇ ಕಡೆಯಿಂದ ಮೇಲೇರುವುದು ಮತ್ತು ಬಂದಿಳಿಯುವುದರಿಂದ ಒಂದೆಡೆ ದಿಕ್ಕಿನಲ್ಲಿ ಹೆಚ್ಚು ಸದ್ದು ಗದ್ದಲ ಇರುತ್ತದೆ. ಓಡುದಾರಿ ದುಂಡಿನ ಸುತ್ತಲೂ ಬಾನೋಡಗಳು ಏರುವುದು-ಇಳಿಯುವುದು ಮಾಡುವುದರಿಂದ, ಸದ್ದಿನ ಪರಿಣಾಮ ಎಲ್ಲೆಡೆ ಒಂದೇ ಸಮನಾಗಿರುತ್ತದೆ. ಹೀಗಾಗಿ ಬಾನೋಡ ತಾಣಗಳ ಅಕ್ಕ ಪಕ್ಕದ ಮನೆ ಮಾಡಿಕೊಂಡಿರುವವರಿಗೆ ಸದ್ದು ಗದ್ದಲ ಕಡಿಮೆಯಾಗಲಿದೆ.

ಒಂದೇ ಹೊತ್ತಿಗೆ ಹಲವಾರು ಬಾನೋಡಗಳು ಹಾರಲು-ಇಳಿಯಲು ಸಾಧ್ಯವಾಗುವುದರಿಂದ, ಒಂದೇ ಬಾನೋಡತಾಣ ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಬಾನೋಡಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟು, ಬಾನೋಡತಾಣಗಳ ಸಿಬ್ಬಂದಿ ಮತ್ತು ಪ್ರಯಾಣಿಕರ ಹೊತ್ತು ಉಳಿತಾಯವಾಗಲಿದೆ.ಈ ದುಂಡಾಕಾರದ ಓಡುದಾರಿಗಳ ಬಳಕೆಯಿಂದ, ಈಗಿನ ನೇರವಾಗಿರುವ ಓಡುದಾರಿಗಳಿಗೆ ತಗಲುವ ಸಿಬ್ಬಂದಿಯಲ್ಲಿ ಮುಕ್ಕಾಲು ಭಾಗ ಕಡಿತಗೊಳ್ಳಬಹುದೆಂದು ಹೆಸ್ಸಿಲಿಂಕ್ ಹೇಳಿದ್ದಾರೆ. ಬಾನೋಡತಾಣಗಳ ಅಳವು(Capacity) ಹೆಚ್ಚಲಿದೆ. ಬಾನೋಡಗಳು ಗಾಳಿಯ ಒತ್ತಡಕ್ಕೆ ತಕ್ಕಂತೆ ಇಳಿಯಬೇಕೆಂಬ ತೊಂದರೆಯೂ ಇರುವುದಿಲ್ಲ.

ಹೆಸ್ಸಿಲಿಂಕ್ ಮತ್ತವರ ತಂಡ, ಈ ಯೋಜನೆಗಾಗಿ ಗಣಕಯಂತ್ರಗಳ ಮೂಲಕ ಅಣುಕು(Simulations) ಮಾಡಿನೋಡಿದ್ದಾರೆ. “ಈ ಯೋಜನೆ ಸಾಕಾರಗೊಳ್ಳಲು ಹೆಚ್ಚಿನ ಹೊತ್ತು ತಗುಲುತ್ತದೆ. ದುಂಡಗಿನ ಓಡುದಾರಿ ಇನ್ನೂ ಈಗ ತಾನೆ ಹುಟ್ಟಿದ ಮಗುವಿನ ಹಂತದಲ್ಲಿದೆ. ಅಣುಕುಗಳ ಮೂಲಕ ಕೆಲವು ಮಾದರಿಗಳನ್ನು ತಯಾರಿಸಿ, ಡ್ರ‍ೋನ್‌ಗಳನ್ನು ಬಳಸಿ ಪರೀಕ್ಷೆಗಳು ನಡೆಸಬೇಕಾಗಿದೆ. ನಂತರ ಮಾದರಿ ಬಾನೋಡ ತಾಣ ಕಟ್ಟಿಸಿ ಅಲ್ಲಿ ಎಲ್ಲವನ್ನು ನೈಜ ಪರೀಕ್ಷೆ ನಡೆಸುವ ಕೆಲಸವಾಗಬೇಕು. ಇದೆಲ್ಲ ಕೂಡಲೇ ಆಗುವಂತ ಕೆಲಸವಲ್ಲ, ಏನಿಲ್ಲವೆಂದರೂ ಹತ್ತಾರು ವರುಶಗಳ ಬಳಿಕವೇ ಇಂತ ಒಂದು ಬಾನೋಡ ತಾಣವನ್ನು ನಾವು ನೋಡಬಹುದು” ಎನ್ನುತ್ತಾರೆ ಹೆಸ್ಸಿಲಿಂಕ್. ಪ್ಯಾರಿಸ್‌ನ ಸಿ.ಡಿ.ಜಿ.(Charles de Gaulle) ಬಾನೋಡ ತಾಣದಲ್ಲಿ ಹೆಚ್ಚಿನ ಪ್ರಯಾಣಿಕರು, ಬಾನೋಡಗಳು ತುಂಬಿ ಗಿಜಿಗಿಡುವ ದಿನವನ್ನೇ ನಮ್ಮ ಅಣುಕುಗಳಿಗೆ ಬಳಸಿಕೊಂಡಿದ್ದೇವೆ. ಒಳ್ಳೆಯ ಫಲಿತಾಂಶಗಳು(Results) ಕಂಡುಬಂದಿವೆ ಎಂದು ಹಿಗ್ಗಿನಿಂದ ಹೇಳಿಕೊಂಡಿದ್ದಾರೆ ಹೆಸ್ಸಿಲಿಂಕ್.

ಈ ದುಂಡಾಕಾರದ ಓಡುದಾರಿಯ ಬಗ್ಗೆ ಸಾಕಶ್ಟು ಪ್ರಶ್ನೆಗಳು ಎದ್ದಿವೆ. ಇದೆಲ್ಲದಕ್ಕೂ ತಕ್ಕ ಉತ್ತರಗಳನ್ನು ಹೆಸ್ಸಿಲಿಂಕ್ ಮತ್ತವರ ತಂಡದವರು ಕಂಡುಕೊಂಡಿದ್ದಾರೆ. ಕ್ರಾಸ್‌ವಿಂಡ್ ಲ್ಯಾಂಡಿಗ್ ಮಾಡುವಾಗ ಉಂಟಾಗುವ ತೊಂದರೆಗಳ ಬಗ್ಗೆಯೂ ಈ ತಂಡ ಪರಿಹಾರ ಕಂಡುಕೊಂಡಿದೆ. [ಕ್ರಾಸ್‌ವಿಂಡ್ ಲ್ಯಾಂಡಿಗ್ ಅಂದರೆ ಓಡುದಾರಿಗೆ ಅಡ್ಡವಾಗಿ (Perpendicular) ಗಾಳಿ ಬೀಸುತ್ತಿರುತ್ತದೆ, ಆಗ ಬಾನೋಡ ಓಲಾಟಕ್ಕೆ(Yaw), ಉರುಳಾಟಕ್ಕೆ (Rolling) ಒಳಪಡುವ ಸಾಧ್ಯತೆ ಹೆಚ್ಚು. ಇದು ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ]. ನೆದರ್‌ಲ್ಯಾಂಡ್ಸ್ ಬಾನೋಡ ಸಂಶೋಧನಾಲಯದ ಈ ಕೆಲಸಕ್ಕೆ ಜರ್ಮನಿ, ಫ್ರಾನ್ಸ್, ಪೋಲ್ಯಾಂಡ್ ಮತ್ತು ಸ್ಪೇನ್ ದೇಶಗಳ ವಿವಿಧ ಬಾನೋಡ ಸಂಶೋಧನಾಲಯಗಳು ಕೈಜೋಡಿಸಿವೆ. ಇಂತ ಓಡುದಾರಿಯುಳ್ಳ ಬಾನೋಡ ತಾಣ ಕಟ್ಟಿಸಲು , ಈಗಿರುವ ಬಾನೋಡ ತಾಣಗಳಿಗಿಂತ ಅರ್ಧಪಟ್ಟು ಹೆಚ್ಚು ಹಣ ಹೂಡಬೇಕಾಗಬಹುದಂತೆ. ಆದರೆ ಇದರಿಂದ ಸಾಕಷ್ಟು ಜಾಗ/ಭೂಮಿ ಉಳಿತಾಯವಾಗಲಿದೆ ಮತ್ತು ಮೇಲೆ ತಿಳಿಸಿದ ಅನುಕೂಲಗಳನ್ನು ಪಡೆಯಬಹುದಾಗಿದೆ. ಈ ದುಂಡಾಕಾರದ ಓಡುದಾರಿ ಸಾಕಾರಗೊಳ್ಳುವುದನ್ನು ನಾವಿನ್ನೂ ಕಾಯಲೇಬೇಕು.

(ಬಾನೋಡಗಳ ಹಾರಾಟದ ಕುರಿತಾಗಿ ಮೇಲ್ಕಂಡ ಅಂಕಿ-ಅಂಶಗಳು ಕೋವಿಡ್ ಮುಂಚಿನ ಅಂಕಿ-ಅಂಶಗಳಾಗಿವೆ. ಜಗತ್ತು ಕೋವಿಡ್ ಮುಂಚಿನ ರೀತಿಗೆ ಮರಳುತ್ತಿದೆ. ಆದ್ದರಿಂದ ಅಂಕಿ-ಅಂಶಗಳಲ್ಲಿ ಚಿಕ್ಕಪುಟ್ಟ ಬದಲಾವಣೆ ಕಾಣಬಹುದು).

 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System)

ಜಯತೀರ್ಥ ನಾಡಗೌಡ.

ಅಡಾಸ್ – ಕಳೆದ 10-12 ವರುಶಗಳಿಂದ ಆಟೋಮೊಬೈಲ್ ಕೈಗಾರಿಕೆಯಲ್ಲಿ ಈ ಹೆಸರು ಕೇಳದವರು ಅತಿ ವಿರಳ. ಚಕ್ರದಿಂದ ಎತ್ತಿನಗಾಡಿಯಾಗಿ, ಮುಂದೆ ಜುಮ್ಮನೆ ಸಾಗುವ ಕಾರು-ಬಸ್ಸು ಮುಂತಾದವುಗಳನ್ನು ನಿರ್ಮಿಸುತ್ತಲೇ ಹೋದ ಮನುಕುಲ, ಸಾರಿಗೆ ಏರ್ಪಾಟಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಲೇ ಸಾಗಿದೆ. ತನ್ನಿಂದ ತಾನೇ ಓಡುವ ಕಾರು ಬಳಸುವ ಯುಗದ ಹೊಸ್ತಿಲು ತಲುಪಿದ್ದೇವೆ. ಇದೆಲ್ಲವೂ ಅಡಾಸ್ ತಂತ್ರಜ್ಞಾನದ ಫಲ.

ನಮ್ಮಲ್ಲಿ ಹಲವು ಇಂಜಿನೀಯರ್, ತಂತ್ರಜ್ಞಾನಿಗಳಿಗೆ ಈ ಅಡಾಸ್ ಪದ ಹೊಸದೇನಲ್ಲ. ಇನ್ನೂ ಕೆಲವು ಕಾರು ಬಳಕೆದಾರರು ಈ ತಂತ್ರಜ್ಞಾನ ಬಳಸಿದ್ದರೂ ಅವರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆಟೋಮೊಬೈಲ್ ಉದ್ಯಮದ ಚಿತ್ರಣವನ್ನೇ ಬದಲು ಮಾಡಲಿರುವ ಈ ಹೊಸ ಚಳಕದ ಬಗ್ಗೆ ಅರಿಯೋಣ ಬನ್ನಿ. 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System) ಇದರ ಕಿರುರೂಪವೇ ಅಡಾಸ್(ADAS). ಸರಳವಾಗಿ ಕನ್ನಡದಲ್ಲಿ ಹೇಳಬೇಕೆಂದರೆ, ಗಾಡಿ ಓಡಿಸುಗನಿಗೆ ನೆರವಾಗಬಲ್ಲ ಒಂದು ಚೂಟಿ ಏರ್ಪಾಟು ಇದು.  ಇಂದು ಜಗತ್ತಿನಾದ್ಯಂತ ಓಡಾಡುವ ಬಹುತೇಕ ಎಲ್ಲ ಕಾರು,ಬಸ್ಸು,ಲಾರಿಗಳಲ್ಲಿ ಅಳವಡಿಸಲ್ಪಟ್ಟ ಹಲವಾರು ಏರ್ಪಾಟುಗಳಲ್ಲಿ ಗಣಕಗಳ ಬಳಕೆ ಮಾಡಲಾಗುತ್ತದೆ. ಈ ಎಲ್ಲ ಗಣಕಗಳಿಗೆ ಮಾಹಿತಿ ನೀಡಿ ಕಾರನ್ನು ಸರಾಗವಾಗಿ ಕೊಂಡೊಯ್ಯಲು ಹಲವು ಅರಿವುಕಗಳನ್ನು ಕಾರುಗಳಲ್ಲಿ ಜೋಡಿಸಲಾಗಿರುತ್ತದೆ. ಇದು ಕೂಡ ಅಡಾಸ್ ವ್ಯವಸ್ಥೆಯ ಒಂದು ಭಾಗವೇ.

ಎಷ್ಟೇ ಜಾಗರೂಕರಾಗಿದ್ದರೂ ಮನುಷ್ಯನು ಮಾಡುವ ತಪ್ಪುಗಳಿಂದ ಸಾರಿಗೆಯ ಅಪಘಾತ, ಅವಘಡಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸಕ್ಕಿಳಿದ ಆಟೋಮೊಬೈಲ್ ಉದ್ಯಮದವರು, ಅಡಾಸ್ ವಿಶೇಷತೆಗಳನ್ನು ಗಾಡಿಗಳಲ್ಲಿ ಬಳಸಿ ಸಾರಿಗೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಸಾಗಿದ್ದಾರೆ. ಇದೇ ಅಡಾಸ್ ತಂತ್ರಜ್ಞಾನ ಮುನ್ನೆಲೆಗೆ ಬರಲು ಕಾರಣ. ಅಪಘಾತ, ಗಾಡಿಗಳ ಡಿಕ್ಕಿಯಾಗುವಂತ ತುರ್ತು ಸಂದರ್ಭಗಳನ್ನು ಕೂಡಲೇ ಅರಿತು ಓಡಿಸುಗನನ್ನು ಎಚ್ಚರಿಸಿ ಅಪಘಾತಗಳನ್ನು ತಡೆಯುವುದೇ ಅಡಾಸ್ ಚಳಕದ(Technology) ಮುಖ್ಯ ಕೆಲಸ. ಈ ಚಳಕವೇ ನಮ್ಮ ಕಾರುಗಳಲ್ಲಿ ಸುರಕ್ಷತೆಯ ಏರ್ಪಾಟುಗಳನ್ನು ಹೆಚ್ಚಿಸುತ್ತಿದೆ. ಇಂದು ಹಲವಾರು ಗಾಡಿಗಳಲ್ಲಿ ಓಡಿಸುಗ ಕೂರುಮಣೆಯ ಪಟ್ಟಿ (ಸೀಟ್ ಬೆಲ್ಟ್) ಬಳಸದೇ ಹೋದರೆ ಇಂಜೀನ್ ಶುರುವಾಗಲ್ಲ, ಗಾಡಿಯ ಗಾಲಿಗಳಲ್ಲಿ ಗಾಳಿಯು ಕಡಿಮೆಯಾದರೆ ತಕ್ಷಣ ಓಡಿಸುಗನ ಮುಂದಿರುವ ತೋರುಮಣೆಯಲ್ಲಿ ಅಲಾರ್ಮ್ ಬರುತ್ತದೆ, ಗಾಡಿಯ ವೇಗ 80-100 ಕಿ.ಮೀ.ಪ್ರತಿಗಂಟೆ ದಾಟುತ್ತಿದ್ದಂತೆ ಗಾಡಿಯ ಅಲಾರ್ಮ್ ಎಚ್ಚರಿಕೆಯ ಗಂಟೆ ಬಾರಿಸತೊಡಗುತ್ತದೆ. ಇವೆಲ್ಲವೂ ಅಪಘಾತ, ಗುದ್ದಾಟ ತಡೆಗಟ್ಟಬಲ್ಲ ಅಡಾಸ್‌ನ ಒಂದು ಭಾಗ.ಈ ಹೊಸ ಅಡಾಸ್ ಅನ್ನು ಬಲು ಮುಖ್ಯವಾಗಿ ಈ ಕೆಳಕಂಡ ಭದ್ರತೆಯ ಏರ್ಪಾಟುಗಳಲ್ಲಿ ಬಳಸಲಾಗುತ್ತಿದೆ.

1. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ

2. ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ

3. ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ

4. ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ

5. ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ

 ಈ ಎಲ್ಲ ಭದ್ರತೆಯ ವಿಷಯಗಳಲ್ಲಿ ಅಡಾಸ್ ಅಳವಡಿಸಿಕೊಳ್ಳಲು ಸಾಕಷ್ಟು ಅರಿವುಕ(Sensor), ರಡಾರ್ ಮತ್ತು ಕ್ಯಾಮೆರಾಗಳ ಬಳಕೆ ಮಾಡಲಾಗುತ್ತದೆ. ಗಾಡಿಯ ಸುತ್ತಮುತ್ತಲಿನ ಆಗುಹೋಗುಗಳು, ಬಗೆ ಬಗೆಯ ಸದ್ದು ಸಪ್ಪಳಗಳನ್ನು ಈ ಅರಿವುಕಗಳು, ರಡಾರ್ ಗಳು ಯಾವ ತಪ್ಪಿಲ್ಲದಂತೆ ಅರಿತು ಗಾಡಿಯ ಗಣಕದ ಮೂಲಕ ಓಡಿಸುಗನಿಗೆ ಸಂದೇಶ ಕಳಿಸುವಲ್ಲಿ ತೊಡಗಿರುತ್ತವೆ. ಗಾಡಿಯ ಸುತ್ತಲೂ 360 ಡಿಗ್ರಿ ಕ್ಯಾಮೆರಾಗಳು ಚಕಚಕನೆ ಪಟಗಳನ್ನು ಸೆರೆಹಿಡಿದು ಗಾಡಿಯ ಗಣಕಕ್ಕೆ ಮಾಹಿತಿ ನೀಡುತ್ತವೆ, ಇದರಿಂದ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಮುಂಚೆಯೇ ಎಚ್ಚರಿಸಿ ಅವುಗಳನ್ನು ತಪ್ಪಿಸುವಲ್ಲಿ ನೆರವಾಗುತ್ತವೆ.

ಅಡಾಸ್‌ನ ವಿವಿಧ ವಿಶೇಷತೆಗಳ ತೋರುವ ಚಿತ್ರ

ಹೀಗೆ ಅಡಾಸ್ ನ ಆಳ ಅರಿತ ಆಟೋಮೊಬೈಲ್ ಕೈಗಾರಿಕೆ, ಅಡಾಸ್ ನ ವಿವಿಧ ಹಂತಗಳಾಗಿ ವಿಂಗಡಿಸಿದೆ. ಒಟ್ಟು 6 ಹಂತಗಳ ಅಡಾಸ್ ನೋಡಬಹುದು. ಇವುಗಳು ಹೀಗಿವೆ.

ಸೊನ್ನೆ ಹಂತ: ಇದರಲ್ಲಿ ಎಲ್ಲವೂ ಮನುಷ್ಯನ ಹಿಡಿತ ಅಂದರೆ ಗಾಡಿಯ ಬಹುಪಾಲು ಏರ್ಪಾಟುಗಳು ಓಡಿಸುಗರ ಹಿಡಿತದಲ್ಲಿರುತ್ತವೆ. ತಂತಾನೇ ಕೆಲಸ ಮಾಡುವ ಗಣಕ, ರಡಾರ್, ಅರಿವುಕಗಳು ಕಡಿಮೆಯೇ. ತಿಗುರಿ(Steering), ತಡೆತ(Brake), ವೇಗ ಏರಿಸುಕ(Accelerator) ಎಲ್ಲವನ್ನೂ ಓಡಿಸುಗನೇ ಮಾಡಬೇಕು. ಆದರೆ ಭದ್ರತೆಯ ಕೆಲವು ವಿಶೇಷತೆಗಳಾದ ಕ್ಯಾಮೆರಾ, ದಿಡೀರ್ ಎದುರಾಗುವ ತಿರುವುಗಳ ಬಗ್ಗೆ ಮುನ್ಸೂಚನೆ ನೀಡುವ ಏರ್ಪಾಟು, ಗಾಡಿಗಳಲ್ಲಿ ಅಳವಡಿಸಬಹುದು.

ಮೊದಲ ಹಂತ: ಚಿಕ್ಕ ಪ್ರಮಾಣದಲ್ಲಿ ಗಾಡಿ ಹಿಡಿತದ ವಿಶೇಷತೆಗಳನ್ನು ನೀಡಲಾಗಿರುತ್ತದೆ. ಮಾರ್ಪಾಟುಗೊಳ್ಳುವ ಸುಯ್ ಅಂಕೆ ಏರ್ಪಾಟು(Adaptive Cruise Control) ಇದಕ್ಕೆ ಒಳ್ಳೆಯ ಉದಾಹರಣೆ. ಹೆದ್ದಾರಿಯಲ್ಲಿ ಚಲಿಸುವಾಗ, ಗಾಡಿಯು ದಾರಿಯ ಸ್ಥಿತಿಗತಿಗೆ ತಕ್ಕಂತೆ  ವೇಗ ಮಾರ್ಪಾಟು ಮಾಡಿಕೊಂಡು ಸಾಗುತ್ತಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ವೇಗ ಏರಿಸುಕ(Accelerator) ಮತ್ತು ಬೇರ್ಪಡಕಗಳ(Clutch) ಮೇಲಿನ ಕಾಲ್ತೆಗೆದು, ಓಡಿಸುಗ ನೆಮ್ಮದಿಯಿಂದ ಸಾಗಬಹುದು.

ಎರಡನೇ ಹಂತ: ಇದನ್ನು ಅರೆ-ಸ್ವತಂತ್ರದ ಗಾಡಿಯೆನ್ನಬಹುದು. ಇದರಲ್ಲಿ ತಿಗುರಿ ಮತ್ತು ಗಾಡಿಯ ವೇಗ ಏರಿಸುವ ಕೆಲಸಗಳನ್ನು ಗಾಡಿಯೇ ನೋಡಿಕೊಳ್ಳುತ್ತದೆ. ಓಡಿಸುಗ ಕೂಡ ಇದನ್ನು ನಿರ್ವಹಿಸಬಹುದು. ಇನ್ನೂ ಗಾಡಿಯ ತಡೆಯೊಡ್ಡುವಿಕೆ(braking), ಲೇನ್ ಬದಲಾವಣೆ(Lane Change), ನಿಲುಗಡೆ ವ್ಯವಸ್ಥೆಯನ್ನು(Parking) ಓಡಿಸುಗನೇ ನೋಡಿಕೊಳ್ಳಬೇಕು.

ಮೂರನೇ ಹಂತ: ಈ ಹಂತದಲ್ಲಿ ಗಾಡಿಯು ಬಹುತೇಕ ಎಲ್ಲ ಏರ್ಪಾಟುಗಳನ್ನು ಸ್ವತಹ ತಾನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲದಾದರೂ ಕೆಲವು ಸಂದರ್ಭಗಳಲ್ಲಿ ಓಡಿಸುಗನ ನಿಯಂತ್ರಣ ಬೇಕೇಬೇಕು. ಉದಾಹರಣೆಗೆ, ಸಂಚಾರ ದಟ್ಟಣೆಯ ಸಂದರ್ಭಗಳಲ್ಲಿ ಗಾಡಿಯ ಗಣಕ ಏರ್ಪಾಟು ಗಾಡಿಯ ಸಂಪೂರ್ಣ ಹಿಡಿತ ಪಡೆಯಬಲ್ಲುದು. ಓಡಿಸುಗ ಹಾಯಾಗಿ ಪತ್ರಿಕೆ ಓದುತ್ತಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯಬಹುದು. ಕೆಲವೊಮ್ಮೆ ಅವಶ್ಯವೆನಿಸಿದಾಗ ಗಾಡಿಯು ತೋರುಮಣೆಯ(Dashboard) ಮೂಲಕ ಓಡಿಸುಗನಿಗೆ ಸಂದೇಶ ನೀಡಿ, ಹಿಡಿತವನ್ನು ಓಡಿಸುಗ ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ.

ನಾಲ್ಕನೇ ಹಂತದ ಅಡಾಸ್ – ಗಾಡಿಯು ನಿರ್ದಿಷ್ಟ ಸನ್ನಿವೇಶಗಳಲ್ಲಿ ಸಂಪೂರ್ಣ ತನ್ನ ಹಿಡಿತದಲ್ಲೇ ಓಡುವ ಸಾಮರ್ಥ್ಯ ಹೊಂದಿರುತ್ತದೆ. ಗಾಡಿಯು ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ಎಲ್ಲವನ್ನೂ ಸ್ವತಹ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಆ ಪರಿಮಿತಿಯನ್ನು ಮೀರಿದ ಸಂದರ್ಭಗಳಲ್ಲಿ ಅದು ಓಡಿಸುಗನೇ ಗಾಡಿ ನಿರ್ವಹಿಸುವಂತೆ ಸಂದೇಶ ನೀಡುತ್ತದೆ. ಉದಾಹರಣೆಗೆ, ಅತಿಯಾದ ಮಂಜುಗಡ್ಡೆಯಿಂದ ಕೂಡಿದ ದಾರಿಗಳಲ್ಲಿ ಗಾಡಿ ಓಡಿಸುಗನ ಹಿಡಿತಕ್ಕೆ ಮರಳಬಹುದು. 

ಐದನೇಯ ಹಂತ: ಕೊನೆಯ ಹಂತದಲ್ಲಿ ಗಾಡಿಯು ಸಂಪೂರ್ಣವಾಗಿ ತನ್ನಿಂದ ತಾನೇ ಓಡಬಲ್ಲದು. ಇದಕ್ಕೆ ಬೇಕಾದ ಎಲ್ಲ ಏರ್ಪಾಟುಗಳನ್ನು ಗಾಡಿಯು ತಾನೇ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಯಾವುದೇ ತೆರನಾಗಿ ಓಡಿಸುಗ ಬೇಕಾಗಿರುವುದಿಲ್ಲ. ಕಾರಿನಲ್ಲಿ ಬರೀ ಸವಾರರು ಕುಳಿತು ಆದೇಶ ನೀಡಿದರೆ ಕಾರು ಸಾಗಿಕೊಂಡು ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, ಗಾಡಿ ತಯಾರಕರು ತಮಗೆ ಬೇಕಾದ ಹಂತವನ್ನು ಆಯ್ದುಕೊಂಡು ಅದಕ್ಕೆ ತಕ್ಕ ಏರ್ಪಾಟುಗಳನ್ನು ಅರಿವುಕ, ಕ್ಯಾಮೆರಾ, ರಡಾರ್ ಬಳಸಿ ನೀಡಿರುತ್ತಾರೆ. ನೀವು ಒಂದಕ್ಕಿಂತ ಒಂದು ಮೇಲ್ ಹಂತಕ್ಕೆ ಹೋದಂತೆ ಹೆಚ್ಚಿನ ಅರಿವುಕ, ರಡಾರ್ ಮತ್ತು ಅದಕ್ಕೆ ತಕ್ಕುದಾದ ಗಣಕ ತಂತ್ರಾಂಶಗಳನ್ನು ಬಳಸಬೇಕು, ಅದಕ್ಕೆ ಹೆಚ್ಚಿನ ಹಣವೂ ಬೇಕಾಗುತ್ತದೆ. ಅದಕ್ಕಾಗಿ, ಗಾಡಿ ತಯಾರಕರು ನಮ್ಮದು 2ನೇ ಹಂತದ ಅಡಾಸ್ ವಿಶೇಶತೆಗಳುಳ್ಳ ಗಾಡಿಯೆಂದೋ, 3ನೇ ಹಂತದ ಅಡಾಸ್ ಗಾಡಿಯೆಂದೋ ತಯಾರಿಸಿ ಮಾರುಕಟ್ಟೆ ತರುತ್ತಿದ್ದಾರೆ.

ಹಂತ ಹೆಚ್ಚಿದಂತೆ ಗಾಡಿಯ ಹಿಡಿತ ಹೆಚ್ಚಾಗುತ್ತ ಸಾಗುವುದು

ಜಗತ್ತಿನಾದ್ಯಂತ ಇಂದು ಎರಡನೇ ಹಂತದ ಅಡಾಸ್ ವಿಶೇಷತೆಗಳುಳ್ಳ ಹಲವು ಕಾರುಗಳು ಬಿಡುಗಡೆಯಾಗಿವೆ. ಮುಂದಿನ ಹಂತದ ಅಡಾಸ್ ವಿಶೇಷತೆಗಳ ಗಾಡಿಗಳನ್ನು ಟೆಸ್ಲಾ, ಗೂಗಲ್, ಜಿಎಮ್ ಸೇರಿದಂತೆ ದೊಡ್ಡ ಕಂಪನಿಗಳು ಸಿದ್ಧಪಡಿಸಿದ್ದರೂ ಇನ್ನೂ ಮಾರಾಟಕ್ಕೆ ಲಭ್ಯವಾಗಿಲ್ಲ. ಅದರಲ್ಲೂ 4 ಮತ್ತು 5ನೇ ಹಂತದ ಅಡಾಸ್ ವಿಶೇಷತೆಯೆಂದರೆ ಹೆಚ್ಚು ಕಡಿಮೆ ತನ್ನಿಂದ ತಾನೇ ಓಡುವ ಕಾರುಗಳು. ತಂತ್ರಜ್ಞಾನ ಬೆಳೆದರೂ ಅದಕ್ಕೆ ತಕ್ಕ ಕಾನೂನು-ಕಟ್ಟುಪಾಡುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ.

ಅಡಾಸ್ ನಮಗೆ ಹೇಗೆ ಉಪಯೋಗವಾಗಲಿದೆ?

ಅಡಾಸ್ ಅಭಿವ್ರದ್ಧಿ ಪಡಿಸಿದ್ದೇ, ಅಪಘಾತ, ಗುದ್ದುವಿಕೆಯಂತ ಅಪಾಯಗಳನ್ನು ತಡೆದು ಗಾಡಿಯಲ್ಲಿ ಸಾಗುವವರು ಸುರಕ್ಷಿತವಾಗಿ ಪ್ರಯಾಣ ಮಾಡಲೆಂದು. ಇಂದು ಸಾಕಷ್ಟು ಗಾಡಿಗಳಲ್ಲಿ ಹೆಚ್ಚಿನ ಭದ್ರತೆಯ ವಿಶೇಷತೆಗಳು ಕಾಣುತ್ತಿರುವುದು ಅಡಾಸ್ ಬಳಕೆಯಿಂದ. ಅಡಾಸ್ ಬಳಕೆಯಿಂದ ನಮ್ಮ ಕಾರುಗಳು ಹೆಚ್ಚು ಭದ್ರವಾಗಲಿವೆ. ನಮ್ಮ ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಕಾರುಗಳಲ್ಲೂ ಇಂದು ಅಡಾಸ್ ವಿಶೇಷತೆಗಳಿಂದ ಕೂಡಿವೆ. ಕಾರು ಓಡಿಸುವಾತ ಅಕಸ್ಮಾತ್ ನಿದ್ದೆಗೆ ಜಾರಿದರೆ ಎಚ್ಚರಿಕೆ, ಗಾಡಿಯ ವೇಗ > 80-100 ಕಿಮೀ/ಗಂಟೆ ಮೀರಿದರೆ ಎಚ್ಚರಿಕೆ, ಗಾಲಿಯ ಒತ್ತಡ ಕಡಿಮೆಯಾದರೆ ಎಚ್ಚರಿಕೆ, ಗಾಡಿ ನಿಲುಗಡೆಗೆ ನೆರವಾಗಲು ಹಿಂಬದಿಯ ಕ್ಯಾಮೆರಾ, ಹೀಗೆ ಕಾಪಿನ ವಿಶೇಷತೆಗಳು ಇಂದಿನ ಹಲವು ಕಾರುಗಳಲ್ಲಿ ಕಂಡು ಬರುತ್ತವೆ. ಕಾರುಗಳು ಆಟೋನೊಮಸ್ ಆದಂತೆ ನಾವು ಟ್ರಾಫಿಕ್ ಅಪಘಾತ ಕಡಿತಗೊಳಿಸಿ, ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಬಹುದು.

ಇಂದು ಜಗತ್ತಿನ ಹಲವೆಡೆ ಮಾರಾಟಗೊಳ್ಳುವ ಬಹುತೇಕ ಕಾರುಗಳು 2ನೇ ಹಂತದ ವರೆಗಿನ ಅಡಾಸ್ ವಿಶೇಷತೆಗಳನ್ನು ಪಡೆದು ಬರುತ್ತಿವೆ.ಜಪಾನ್, ಅಮೇರಿಕಾ, ಯುರೋಪ್ ಒಕ್ಕೂಟದ ದೇಶಗಳು, ಕೊರಿಯಾ ಮುಂತಾದ ದೇಶಗಳಲ್ಲಿ 1-2 ನೇ ಹಂತದವರೆಗಿನ ಅಡಾಸ್ ಕಾರುಗಳು ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಅಡಾಸ್ 2ನೇ ಹಂತದ ಹಲವು ಕಾರುಗಳು ಮಾರಾಟಗೊಳ್ಳುತ್ತಿವೆ. ಮಹೀಂದ್ರಾ ಎ‍‍ಕ್ಸ್‌ಯುವಿ 7ಒ‍ಒ, ಹೋಂಡಾ ಸಿಟಿ ಈಹೆಚ್‍ವಿ, ಎಮ್‍ಜಿ ಹೆಕ್ಟರ್, ಗ್ಲಾಸ್ಟರ್,ಝೆಡ್‍ಎಸ್ ಇವಿ, ಹ್ಯುಂಡಾಯ್ ಟುಕ್ಸಾನ್, ಟಾಟಾ ಸಫಾರಿ ಮುಂತಾದವು ಅಡಾಸ್‌ನ ವಿವಿಧ ವಿಶೇಷತೆಗಳನ್ನು ಹೊಂದಿವೆ.

ಅಡಾಸ್ ತಂತ್ರಜ್ಞಾನದ ಸವಾಲುಗಳು:

ತಂತ್ರಜ್ಞಾನ ಇದ್ದಲ್ಲಿ ಸವಾಲುಗಳಿಗೂ ಕೊರತೆ ಇರಲ್ಲ. ಹೊಸ ತಂತ್ರಜ್ಞಾನ ಬಂದಂತೆ ಅದಕ್ಕೆ ಸಂಬಂಧಿಸಿದ ತೊಡಕು ತೊಂದರೆಗಳು ಅದರ ಜೊತೆಯಲ್ಲೇ ಸಾಗಿಬರುತ್ತವೆ. ಅಡಾಸ್ ತಂತ್ರಜ್ಣ್ಯಾನವನ್ನು ಅಪಘಾತ ಅವಘಡ ತಡೆಯಲೆಂದೇ ಅಭಿವೃದ್ಧಿ ಪಡಿಸಿದ್ದರೂ, ಅದೇ ವಿಶೇಷತೆ ನಮಗೆ ತೊಂದರೆ ಉಂಟು ಮಾಡಿದರೆ? ಉದಾಹರಣೆಗೆ 5ನೇ ಹಂತದ ತನ್ನಿಂದ ತಾನೇ ಸಾಗಬಲ್ಲ ಕಾರುಗಳಿಂದ ಅಪಘಾತವಾದರೆ ಯಾರು ಹೊಣೆ? ಯಾಕೆಂದರೆ ಈ ಕಾರುಗಳಲ್ಲಿ ಓಡಿಸುಗನಿರುವುದಿಲ್ಲ, ಬರೀ ಸವಾರರು ಮಾತ್ರ. ಈ ಅಪಘಾತಗಳು ವಿಮೆಯ ವ್ಯಾಪ್ತಿಯ ಒಳಗಡೆ ಬರುತ್ತವೆಯೇ ಇಲ್ಲವೇ ಎಂಬುದು ಮುಂದಿನ ಪ್ರಶ್ನೆ? ಈ ಅಪಘಾತ,ವಿಮೆಯ ವಿಷಯಗಳಿಗೆ ತಕ್ಕ ಕಟ್ಟಳೆ-ಕಟ್ಟಪಾಡುಗಳು ಇನ್ನೂ ಎಳವೆಯಲ್ಲಿವೆ. ಹಲವು ದೇಶಗಳ ಸರ್ಕಾರಗಳು ಕಟ್ಟಳೆ-ಕಟ್ಟಪಾಡುಗಳ ಕುರಿತಾಗಿ ಸಾಕಷ್ಟು ಗೊಂದಲದಲ್ಲಿವೆ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವವರೆಗೂ ಇಂತ ಗಾಡಿಗಳನ್ನು ಮಾರಾಟಕ್ಕೆ ಬಿಡಬಾರದೆಂಬ ಕೂಗು ಎದ್ದಿದೆ.

ಎರಡನೇ ಸವಾಲು, ಅಡಾಸ್‌ನ ವಿವಿಧ ವಿಶೇಷತೆಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದರಿಂದ ವಿಶೇಷತೆಗಳ ಬಗ್ಗೆ ಹಲವು ಗಾಡಿ ತಯಾರಕರ ನಡುವೆ, ಕೊಳ್ಳುವರ ಮಧ್ಯೆ ಗೊಂದಲಗಳಿವೆ. ಕೆಲವು ವಿಶೇಷತೆಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ನೆಟ್ಟಗೆ ಕೆಲಸ ಮಾಡಬಲ್ಲವು.ಬೆಟ್ಟ-ಗುಡ್ಡ-ಘಾಟಿ ರಸ್ತೆಗಳಲ್ಲಿ ಗಾಡಿಯಲ್ಲಿರುವ ಅರಿವುಕ, ಕ್ಯಾಮೆರಾ, ರಡಾರ್‌ಗಳಿಗೆ ಸಮಸ್ಯೆ ಎದುರಾಗಲಿದೆ. ಹೆದ್ದಾರಿಗಳಲ್ಲಿ ಲೇನ್ ಅಂದರೆ ಓಣಿಗಳನ್ನು ಸರಿಯಾಗಿ ಬಣ್ಣದಿಂದ ಗುರುತಿಸಿರುತ್ತಾರೆ ಹೀಗಾಗಿ ಗಾಡಿಯ ಕ್ಯಾಮೆರಾಗಳು ಅವುಗಳನ್ನು ಗುರುತಿಸಿ, ಓಣಿ ದಾಟುವಿಕೆಯನ್ನು ಚೆನ್ನಾಗಿ ನಿರ್ವಹಿಸಬಲ್ಲವು. ಅದೇ ಚಿಕ್ಕ ಪುಟ್ಟ ದಾರಿಗಳಲ್ಲಿ ಬಣ್ಣದಿಂದ ಗುರುತಿಸದ ಲೇನ್‍ಗಳಲ್ಲಿ ಓಣಿ ಗುರುತಿಸುವಿಕೆಯಂತ ವಿಶೇಷತೆ ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಪ್ರಶ್ನೆಗಳಿವೆ.

ಹಲವು ಗಣಕಗಳಿಂದ ಕೂಡಿರುವ ಈ ಅಡಾಸ್ ಗಾಡಿಗಳಿಗೆ ಸುಭದ್ರವಾದ ಸೈಬರ್ ಭದ್ರತೆಯ ತಂತ್ರಾಂಶ ಒದಗಿಸುವ ಅವಶ್ಯಕತೆಯಿದೆ. ದಿಗಿಲುಕೋರರು, ಕಳ್ಳ-ಕಾಕರು ಗಾಡಿಯ ಗಣಕಗಳನ್ನು ತಮ್ಮ ಹಿಡಿತಕ್ಕೆ ಪಡೆದು ಬೇಕಾಬಿಟ್ಟಿ ಬಳಕೆ ಮಾಡಿ ಸಮಾಜಕ್ಕೆ ಕೆಡುಕುಂಟು ಮಾಡುವ ಸಾಧ್ಯತೆಗಳಿವೆ. ಇದನ್ನು ಮೆಟ್ಟಿ ನಿಂತು ಅಡಾಸ್ ತಂತ್ರಜ್ಞಾನ ಬೆಳೆಯಲಿ, ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ.

ಅಗ್ಗದ ಬೆಳ್ಮಿಂಚು

ಜಯತೀರ್ಥ ನಾಡಗೌಡ.

ನೇಸರನ ಕಸುವು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೆಲಸಕ್ಕೆ ಬರುತ್ತಿದೆ. ಅಳಿದು ಹೋಗುವ ಮತ್ತು ಪರಿಸರಕ್ಕೆ ಹಾನಿಯುಂಟುಮಾಡುವ ಕಸುವಿನ ಸೆಲೆಗಳಿಗಿಂತ ನೇಸರನ ಕಸುವು ಹೆಚ್ಚು ಒಳಿತಿನದು ಅಲ್ಲದೇ ಪುಕ್ಕಟೆ ಸಿಗುವಂತದ್ದು ಕೂಡ.ಈ ಮೊದಲು ಹೆಚ್ಚಾಗಿ ಉಪಗ್ರಹಗಳ (satellite) ಮತ್ತು ಮಿಲಿಟರಿ ಕೆಲಸಗಳಿಗೆ ಬಳಕೆಯಾಗುತ್ತಿದ್ದ ನೇಸರನ ಬಲ ಈಗ ಹಲವೆಡೆ ನೆರವಿಗೆ ಬರುತ್ತಿರುವುದು ಇಂದಿನ ದಿನಗಳಿಗೆ ಒಳ್ಳೆಯದೇ ಆಗಿದೆ. ಮುಂಚೆ ಅಂದರೆ 1977 ರಲ್ಲಿ ಒಂದು ವ್ಯಾಟ್ ನೇಸರನ ಬಲ ಉಂಟುಮಾಡಲು ಅಮೇರಿಕದ 77 ಡಾಲರ್ ಖರ್ಚಾಗುತ್ತಿದ್ದರೆ,ಇದೀಗ ಕೇವಲ 80 ಸೆಂಟ್ ಗಳು ಸಾಕು (100 ಸೆಂಟ್ ಗಳು ಸೇರಿದರೆ 1 ಡಾಲರ್).

ಹೆಸರುವಾಸಿ ಆಕ್ಸ‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಇದರ ಬಗ್ಗೆಯೇ ಅರಕೆ ನಡೆಸುತ್ತಿರುವ ಡಾ.ಸ್ನೈಥ್‍ ಮತ್ತು ತಂಡ ಮುಂಬರುವ ದಿನಗಳಲ್ಲಿ ನೇಸರನ ಬಲ ಉಂಟು ಮಾಡಲು ಇನ್ನೂ ಕಡಿಮೆ ಹಣ ತೆರಬೇಕಾಗುತ್ತದೆಂದು ತಿಳಿಸಿದ್ದಾರೆ. ನೇಸರನ ಬಲ ಉಂಟುಮಾಡಲು ಬಳಸುವ ಸಿಲಿಕಾನ್ ಗೂಡುಗಳ(solar cells made of silicon) ಬದಲಾಗಿ ಹೊಸದೊಂದು ವಸ್ತುವಿನ ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದೆಂದು ಡಾ.ಸ್ನೈಥ್‍ರವರ ತಂಡ, ವಾದ ಮುಂದಿಟ್ಟಿದೆ. ಹೊಸ ವಸ್ತುವನ್ನು “ಪೆರೋವ್‍ಸ್ಕೈಟ್” (perovskite)ಎಂದು ಕರೆಯಲಾಗಿದ್ದು ,ಇದರಿಂದ ಒಂದು ವ್ಯಾಟ್ ವಿದ್ಯುತ್ ತಯಾರಿಸಲು ತಗಲುವ ವೆಚ್ಚವು ಮುಕ್ಕಾಲು ಭಾಗ ಕಡಿತಗೊಳ್ಳಲಿದೆ ಎಂಬುದು ಇವರ ಅಂಬೋಣ.

ನಮಗೆ ತಿಳಿದಿರುವಂತೆ ವಿದ್ಯುತ್ ಹುಟ್ಟಲು ಎಲೆಕ್ಟ್ರಾನ್ ಗಳು ಹರಿಯುವಂತೆ ಮಾಡಬೇಕು. ನೇಸರನ ಕಸುವು ಪಡೆಯಲು ಅಣಿಗೊಳಿಸಿದ ಸಿಲಿಕಾನ್ ಗೂಡಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ , ಬೆಳಕಿನ ಕಿರಣಗಳಲ್ಲಿರುವ ಫೋಟಾನ್‍ಗಳು ಸಿಲಿಕಾನ್ ಎಲೆಕ್ಟ್ರಾನ್‍ಗಳನ್ನು ದೂಡಿ ಹರಿಯುವಂತೆ ಮಾಡಿ ಅಲ್ಲಿ ತೂತುಗಳನ್ನುಂಟು ಮಾಡುತ್ತದೆ. ತೂತುಗಳು(holes) ಮತ್ತು ಎಲೆಕ್ಟ್ರಾನ್‍ಗಳು ಒಂದಕ್ಕೊಂದು ಎದುರು ದಿಕ್ಕಿನಲ್ಲಿ ಚಲಿಸಿ ವಿದ್ಯುತ್ ಹರಿವಿಗೆ ಕಾರಣವಾಗುತ್ತವೆ. ಹೀಗೆ ಉಂಟಾಗುವುದೇ ‘ಬೆಳ್ಮಿಂಚು’ (photo-voltaic electricity)

ಸಿಲಿಕಾನ ವಸ್ತುಗಳು ಅರೆಬಿಡುವೆ (semiconductor) ವಸ್ತುಗಳಾಗಿದ್ದು, ಅವುಗಳಲ್ಲಿ ಎಲೆಕ್ಟ್ರಾನ್‍ಗಳು (electrons) ಹರಿಯಲು ಅನುವಾಗುವಂತೆ ಕಣಗಳಲ್ಲಿ ತೆರವಾದ ತೂತುಗಳು (holes) ದಾರಿ ಮಾಡಿಕೊಡುತ್ತವೆ. ಎಲೆಕ್ಟ್ರಾನ್‍ಗಳು ಹರಿದಷ್ಟು ಹೆಚ್ಚು ಮಿಂಚು ಅಂದರೆ ವಿದ್ಯುತ್ ಹುಟ್ಟಿಕೊಳ್ಳುತ್ತದೆ. ಆದರೆ ಎಲೆಕ್ಟ್ರಾನ್‍ಗಳು ಹರಿದಷ್ಟು ತೂತುಗಳನ್ನ ತುಂಬಿಕೊಂಡು ಅಲ್ಲಿಯೇ ನೆಲೆಗೊಳ್ಳುವುದರ ಮೂಲಕ ಹರಿಯುವಿಕೆ (diffusion) ನಿಲ್ಲುತ್ತದೆ.ಇದನ್ನು ಹರಿಯುವಿಕೆಯ ಉದ್ದ (diffusion length) ಎನ್ನುತ್ತಾರೆ. ಬಹಳ ಹೆಚ್ಚಿನ ಅಳವುತನ (efficiency) ನೀಡುವ ವಸ್ತುಗಳಲ್ಲಿ ಹರಿಯುವಿಕೆಯ ಉದ್ದ ಬಹಳವಾಗಿರುತ್ತದೆ.

ನೀರು ಕಾಯಿಸಲು ಬಳಸುವ ನೇಸರ-ಕಸುವಿನ ಹೀಟರ್(Solar Geyser) ಮುಂತಾದವುಗಳಲ್ಲಿ ಸಿಲಿಕಾನ್ ಬಳಕೆಯಲ್ಲಿದ್ದು ಇವುಗಳ ಹರಿಯುವಿಕೆ ಉದ್ದ ಕಡಿಮೆಯಾಗಿರುತ್ತದೆ. ಇದು 10 ನ್ಯಾನೋ ಮೀಟರ್ ಮಾತ್ರ ಅಂದರೆ ಒಂದು ಮೀಟರ್‌ನ ಬಿಲಿಯನ್‌ನ ಒಂದು ಭಾಗವಷ್ಟೇ! ಇದರಿಂದ ಸಿಲಿಕಾನ್ ಗೂಡುಗಳ ಅಳವುತನ ಶೇಕಡಾ 10. ಅದೇ ಪೆರೋವ್‍ಸ್ಕೈಟ್ ವಸ್ತುವಿನ ಗೂಡುಗಳ ಹರಿಯುವಿಕೆಯ ಉದ್ದ ಸಾವಿರ ನ್ಯಾನೋಮೀಟರ್ ಆಗಿದ್ದು, ಅಳವುತನ ಶೇಕಡಾ 15 ಇಲ್ಲವೇ ಅದಕ್ಕಿಂತ ಹೆಚ್ಚೆಂದು ಡಾ. ಸ್ನೈಥ್‍ ಹೇಳುತ್ತಾರೆ.

ಪೆರೋವ್‍ಸ್ಕೈಟ್ ಎಂಬುದು ಎಂಟುಬದಿಯ ಘನಾಕಾರ ಹರಳುಗಳನ್ನು (cubo-octahedral crysta – ಘನಾಕಾರದ ತುದಿಗಳ ಕತ್ತರಿಸಿದಂತೆ-cube with corners cut-off) ಹೊಂದಿದ ವಸ್ತು. ಆರು ಎಂಟುಬದಿಯ ಮುಖಗಳನ್ನ ಮತ್ತು ಎಂಟು ಮೂಕ್ಕೋನದ ಮುಖ ಹೊಂದಿದೆ. ಪೆರೋವ್‍ಸ್ಕೈಟ್ ಸಹಜವಾದ ಅದಿರು,ಇದು ಹೆಚ್ಚು ಬೆಳಕಿನ ಕಿರಣಗಳನ್ನ ಹೀರಿಕೊಂಡು ಅವುಗಳನ್ನ ಮಿಂಚಾಗಿ ಬದಲಾಯಿಸುವ ಗುಣ ಹೊಂದಿದೆ.

ಡಾ.ಸ್ನೈಥ್‍ ಹೇಳುವಂತೆ ಪೆರೋವ್‍ಸ್ಕೈಟ್ ನುರಿತಾದ ವಸ್ತು. ಇದರ ಜೈವಿಕ(organic) ಭಾಗ ಕಾರ್ಬನ್, ಹೈಡ್ರೋಜನ್ ಮತ್ತು ನೈಟ್ರೋಜನ್‌ಗಳಿಂದ ಕೂಡಿದ್ದರೆ, ಅಜೈವಿಕ (inorganic) ಭಾಗ ಸೀಸ,ಅಯೋಡಿನ್ ಹಾಗೂ ಕ್ಲೋರಿನ್ ನಿಂದ ಕೂಡಿದೆ. ಪೆರೋವ್‍ಸ್ಕೈಟ್ ತಯಾರಿಸಲು ಕಡಿಮೆ ವೆಚ್ಚ ಸಾಕು. ಸಿಲಿಕಾನ್ ಹಸನುಗೊಳಿಸಲು ಹೆಚ್ಚಿನ ಬಿಸುಪಿನ ಅಗತ್ಯ ಇರುವುದರಿಂದ ಸಿಲಿಕಾನ್ ಬಳಸಿ ನೇಸರ ಗೂಡುಗಳನ್ನು ತಯಾರಿಸುವುದು ದುಬಾರಿಯಾಗಿರುತ್ತದೆ. ಪೆರೋವ್‍ಸ್ಕೈಟ್ ಅರಕೆಮನೆಯ ಬಿಸುಪಿವಿನಲ್ಲೇ ತಯಾರಿಸಲು ಅನುಕೂಲವಾಗಿದೆ. ಸ್ನೈಥ್‍ ರವರ ತಂಡ ಅರಕೆಮನೆಯಲ್ಲಿ ಪೆರೋವ್‍ಸ್ಕೈಟ್ ಬಳಸಿಕೊಂಡು ಕೇವಲ 40 ಸೆಂಟ್ಗಳಲ್ಲಿ ಸೂರ‍್ಯನ ಬೆಳಕಿನಿಂದ ಮಿಂಚನ್ನು ತಯಾರಿಸಿ ತೋರಿಸಿದೆ. ಕೈಗಾರಿಕೆ ಮತ್ತು ದಿನದ ಮಂದಿ ಬಳಕೆಯ ಲೆಕ್ಕದಳತೆಯಲ್ಲಿ ಇದನ್ನು ತಯಾರಿಸಿದರೆ ವೆಚ್ಚ ಇದರ ಅರ್ಧ ಅಂದರೆ ಕೇವಲ 20 ಸೆಂಟ್ ಮಾತ್ರವಂತೆ.

ಇಷ್ಟೊಂದು ಕಡಿಮೆ ವೆಚ್ಚದಲ್ಲಿ ವಿದ್ಯುತ್ ತಯಾರಿಸಲು ನೆರವಾಗುವ ಪೆರೋವ್‍ಸ್ಕೈಟ್ ಕೆಲವು ಅಡೆತಡೆಗಳನ್ನು ಹೊಂದಿದೆ. ಈ ವಸ್ತುವಿನ ಬಹುಕಾಲದ ಬಾಳಿಕೆ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆದಿಲ್ಲ. ನೇಸರನ ಬಲಶಾಲಿ ಕಿರಣಗಳಿಗೆ ಮೈಯೊಡ್ಡಿ ಬಹುಕಾಲ ಬಾಳಿಕೆ ಬರುವುದು ಹಲವು ವಸ್ತುಗಳಿಗೆ ಕಷ್ಟದ ಕೆಲಸವೇ ಆಗಿರುವಾಗ, ಪೆರೋವ್‍ಸ್ಕೈಟ್ ಎಷ್ಟು ಕಾಲ ಬಾಳಿಕೆ ಬಂದೀತು ಎಂಬುದು ಹಲವರಿಗೆ ಪ್ರಶ್ನೆಯಾಗಿದೆ. ಇನ್ನೂ ಪ್ರಯೋಗಶಾಲೆಯಲ್ಲಿ ತಯಾರಿಸಿದ್ದಕ್ಕೂ, ದಿನ ಬಳಕೆಯಲ್ಲಿ ಹಲವಾರು ಮೆಗಾ ವ್ಯಾಟ್ ಅಳತೆಯಲ್ಲಿ ತಯಾರಿಸುವುದಕ್ಕೂ ವ್ಯತ್ಯಾಸವಿದ್ದೂ ಇದು ಕಬ್ಬಿಣದ ಕಡಲೆಯೇ ಸರಿ.

ಈ ಪ್ರಮುಖ ಅಡೆತಡೆ ದಾಟಿ ಬಂದರೆ ಪೆರೋವ್‍ಸ್ಕೈಟ್‍ನ ನೇಸರ ಗೂಡಗಳ ವಿದ್ಯುತ್ ಹೆಚ್ಚಿನ ಮನೆಗಳ ದೀಪ ಉರಿಸುವುದು ಖಂಡಿತ.

 

 

ಫ್ಯೂಲ್ ಸೆಲ್ (ಉರುವಲು ಗೂಡು) ಕಾರು

ಜಯತೀರ್ಥ ನಾಡಗೌಡ.

ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಷ್ಟು ಪಯತ್ನಗಳು ನಡೆಯುತ್ತಿವೆ. ಗಾಡಿಗಳು ಹೊಗೆಕೊಳವೆಯ ಮೂಲಕ ಉಗುಳುವ ಕೆಡುಗಾಳಿಯಿಂದ ಉಂಟಾಗುವ ಹಾನಿ ತಡೆಯಲು ವಾಹನ ತಯಾರಕರು ಹಲವಾರು ತಂತ್ರಜ್ಞಾನ ಅಣಿಗೊಳಿಸಿ ಗಾಳಿ ಶುದ್ದವಾಗಿರಿಸಲು ಹೆಜ್ಜೆ ಹಾಕಿದ್ದಾರೆ. ಈ ಕೆಡುಗಾಳಿ ಕಡಿಮೆ ಮಾಡಲು ಟೊಯೊಟಾ , ಮರ್ಸಿಡೀಸ್, ಫೋರ್ಡ್, ಔಡಿ, ಬಿ.ಎಮ್.ಡಬ್ಲ್ಯೂ, ಹೋಂಡಾ, ಫೋಕ್ಸ್ ವ್ಯಾಗನ್, ನಿಸ್ಸಾನ್,ಹ್ಯೂಂಡಾಯ್ ಹೀಗೆ ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಕೂಟಗಳ ಅರಕೆಮನೆಯಲ್ಲಿ ಉರುವಲು ಗೂಡಿನ ಕಾರು ಮಾದರಿ ಸಿದ್ದಪಡಿಸಿವೆ. ಈ ಕಾರುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಉರುವಲು ಗೂಡು (fuel cell) ಎಂದರೆ ಉರುವಲಿನಲ್ಲಿರುವ ರಾಸಾಯನಿಕ ಶಕ್ತಿ(chemical energy) ಆಕ್ಸಿಜನ್ ಬಳಸಿ ವಿದ್ಯುತ್-ಒಡೆಯುವಿಕೆ (electrolysis) ಮೂಲಕ ವಿದ್ಯುತ್ತಿನ ಕಸುವಾಗಿ ಬದಲಾಯಿಸುವ ಸಲಕರಣೆ. ಇಂದಿನ ಹೆಚ್ಚಿನ ಫ್ಯೂಲ್ ಸೆಲ್ ಕಾರುಗಳಲ್ಲಿ ಇದನ್ನೇ ಬಳಸಿಕೊಳ್ಳಲಾಗುತ್ತಿದೆ. ಹೈಡ್ರೋಜನ್ ಹೇರಳವಾಗಿ ಸಿಗುವ ಗಾಳಿ, ಆದರೆ ಇದು ನೀರಿನಲ್ಲಿ H2O ರೂಪದಲ್ಲಿ ಸಿಗುತ್ತದೆ.  ನೀರಿನಲ್ಲಿರುವ ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳನ್ನು ಬೇರ್ಪಡಿಸುವದನ್ನೇ ವಿದ್ಯುದೊಡೆಯುವಿಕೆ ಎನ್ನಲಾಗುತ್ತದೆ. ಇದರಲ್ಲಿ ಏರುಗಣೆ (Anode), ಇಳಿಗಣೆ(cathode) ಮತ್ತು ವಿದ್ಯುದೊಡೆಯುಕದ (Electrolyte) ಮೂಲಕ ಹೈಡ್ರೋಜನ್, ಆಕ್ಸಿಜನ್ ಕಣಗಳು ಬೇರ್ಪಡುತ್ತವೆ ಅಲ್ಲದೇ ವಿದ್ಯುತ ಕೂಡ ಹರಿಯುತ್ತದೆ. . ಈ ವಿದ್ಯುತ್ತಿನ ಕಸುವನ್ನೇ ಬಳಸಿಕೊಂಡು ಹೈಡ್ರೋಜನ್ ಗಾಡಿಗಳು ಸಾಗುತ್ತ ಹೊಗೆ ಕೊಳವೆಯಿಂದ ಕೆಟ್ಟ ಹೊಗೆ ಬರದೆ ಬರಿ ನೀರಾವಿ (steam) ಸೂಸುತ್ತವೆ. ಈ ಮೂಲಕ,ಇವು ಪರಿಸರ ಸ್ನೇಹಿ ಗಾಡಿಗಳಾಗಿವೆ.

ಫ್ಯೂಲ್ ಸೆಲ್ ಗಾಡಿಗಳು ಕೆಲಸ ಮಾಡುವ ರೀತಿ: ಫ್ಯೂಲ್ ಸೆಲ್ ಗಳನ್ನು 1801ರಲ್ಲಿ ಮೊದಲು ಕಂಡುಹಿಡಿದದ್ದು ಹೆಸರುವಾಸಿ ವಿಜ್ಞಾನಿ ಹಂಫ್ರಿ ಡೇವಿ. ಫ್ಯೂಲ್ ಸೆಲ್ಗಳನ್ನು ವಿವಿಧ ಬೇರೆ ಅಪ್ಲಿಕೇಶನ್ ಗಳಲ್ಲೂ ಬಳಸಬಹುದು. 1991ರಲ್ಲಿ ಮೊದಲ ಬಾರಿ ರೋಜರ್ ಬಿಲ್ಲಿಂಗ್ಸ್ ಕಾರುಗಳಲ್ಲಿ ಬಳಕೆ ಮಾಡಿದ್ದರು. ಇಲ್ಲಿ ಫ್ಯೂಲ್ ಸೆಲ್ಗಳನ್ನು ಗಾಡಿಗಳಲ್ಲಿ ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ವಿವರಿಸಲಾಗಿದೆ.

ಫ್ಯೂಲ್ ಸೆಲ್ ಕಾರುಗಳು ಎಂದರೂ ವಿದ್ಯುತ್ ಕಾರಿನ(Electric Car) ಒಂದು ಬಗೆ. ಸಾಮಾನ್ಯ ವಿದ್ಯುತ್ ಕಾರುಗಳಲ್ಲಿ ಮೋಟಾರ್ ಮೂಲಕ ವಿದ್ಯುತ್ತಿನ ಕಸುವು ಪಡೆದರೆ, ಇಲ್ಲಿ ಫ್ಯೂಲ್ ಸೆಲ್ ಮೂಲಕ ವಿದ್ಯುತ್ತಿನ ಕಸುವನ್ನು ಪಡೆದು ಗಾಡಿ ಸಾಗುತ್ತದೆ. ಬಹಳಷ್ಟು ಉರುವಲು ಗೂಡಿನ ಕಾರುಗಳು ಪಿಇಎಂ(PEM) ಪದರದ ಗೂಡುಗಳನ್ನು ಬಳಸುತ್ತವೆ. ಪಿಇಎಂ ಅಂದರೆ ಪ್ರೋಟಾನ್ ಎಕ್ಸ್ಚೇಂಜ್ ಮೆಂಬ್ರೇನ್ (Proton Exchange Membrane) ಅಂತ. ಹೈಡ್ರೋಜನ್ ಗಾಳಿ ಈ ಪದರದ ಮೂಲಕ ಹರಿದಾಗ, ಆನೋಡ್ ಬದಿ ಅಂದರೆ ಏರುಗಣೆಯ ಬದಿಯಲ್ಲಿ ವೇಗಹೆಚ್ಚುಕದ (catalyst) ನೆರವಿನಿಂದ ಹೈಡ್ರೋಜನ್ ಕಣಗಳು ಕೂಡುವಣಿ (proton) ಮತ್ತು ಕಳೆವಣಿಗಳಾಗಿ (electrons) ಮಾರ್ಪಡುತ್ತವೆ. ಇಲ್ಲಿ ಹೈಡ್ರೋಜನ್ ಒಂದು ಮಾಧ್ಯಮದಂತೆ ಬಳಕೆ ಮಾಡಲ್ಪಡುವುದರಿಂದ ಫ್ಯೂಲ್ ಸೆಲ್ ಕಾರುಗಳನ್ನು ಹೈಡ್ರೋಜನ್ ಕಾರುಗಳೆಂದು ಕರೆಯುತ್ತಾರೆ.

ಕೂಡುವಣಿಗಳು ಆಕ್ಸಿಡೆಂಟ್ಗಳೊಂದಿಗೆ ಬೆರೆತು ಕೂಡುವಣಿಯ ಪದರ ಕಟ್ಟಿಕೊಳ್ಳುತ್ತವೆ. ಕಳೆವಣಿಗಳು ಇದರ ವಿರುದ್ದ ಹೊರಸುತ್ತಿನತ್ತ (external circuit) ಹರಿದು ವಿದ್ಯುತ್ತಿನ ಕಸುವು ಹುಟ್ಟುಹಾಕುತ್ತವೆ. ಅತ್ತ ಕ್ಯಾಥೋಡ್ ಬದಿ ಅಂದರೆ ಇಳಿಗಣೆ ಬದಿಯಲ್ಲಿ ಆಕ್ಸಿಜನ್ ಕಣಗಳು ಕೂಡುವಣಿ ಜೊತೆ ಬೆರೆತುಕೊಂಡು ನೀರನ್ನು ತಯಾರಿಸುತ್ತವೆ ಮತ್ತು ಕಳೆವಣಿಗಳು ವಿದ್ಯುತ್ ಸರ್ಕ್ಯೂಟ್ ನತ್ತ(electrical circuit) ಹರಿದು ಹೋಗುತ್ತವೆ. ಕೆಳಗಿರುವ ಚಿತ್ರದಲ್ಲಿ ಈ ರಾಸಾಯನಿಕ ಕ್ರಿಯೆಯನ್ನು ವಿವರಿಸಲಾಗಿದೆ.

ಆನೋಡ್ ಬದಿಯ ಪ್ರಕ್ರಿಯೆಗೆ ಪ್ಲ್ಯಾಟಿನಂ ವೇಗಹೆಚ್ಚುಕ ನೆರವಾದರೆ, ಇಳಿಗಣೆಯ ಬದಿಗೆ ನಿಕ್ಕೆಲ್ ನಂತ ಜಲ್ಲಿಯು ವೇಗಹೆಚ್ಚುಕನಾಗಿ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲಸಮಾಡುತ್ತದೆ. ಇಂತ ವಿದ್ಯುದೊಡೆಯುವಿಕೆಯಿಂದ ಉಂಟಾದ ವಿದ್ಯುತ್ತಿನ ಒತ್ತಾಟ (Voltage) 0.6 ರಿಂದ 0.7 ವೋಲ್ಟ್ ರಶ್ಟು ಮಾತ್ರವೇ ಆಗಿರುತ್ತದೆ, ಇದನ್ನು ಹೆಚ್ಚುಗೊಳಿಸಿ ಗಾಡಿಯನ್ನು ನಡೆಸಲು ಇಂತ ಪದರುಗಳ ಗೂಡನ್ನು ಜೋಡಿಯಾಗಿಯೋ ಇಲ್ಲವೇ ಸರಣಿಯಲ್ಲಿಯೋ ಒಂದಕ್ಕೊಂದು ಹುಲ್ಲಿನ ಬಣವಿಯಂತೆ ಜೋಡಣೆಗೊಳಿಸಿ ಹೆಚ್ಚು ವಿದ್ಯುತ್ತಿನ ಒತ್ತಾಟ ಪಡೆದುಕೊಳ್ಳಲಾಗುತ್ತದೆ. ಇವನ್ನು ಜೋಡಿಸಲು ಇಬ್ಬದಿಯ ತಟ್ಟೆಗಳನ್ನು(Bi-Polar plate) ಬಳಕೆ ಮಾಡಲಾಗುತ್ತದೆ. ಹೆಚ್ಚು ವಿದ್ಯುತ್ತಿನ ಒತ್ತಾಟ ಪಡೆದಷ್ಟು ಹೆಚ್ಚು ವಿದ್ಯುತ್ ಹರಿದು ಗಾಡಿಯಲ್ಲಿರುವ ವಿದ್ಯುತ್ತಿನ ಓಡುಗೆಗೆ(Motor) ಕಸು ನೀಡಿ ಗಾಡಿಯನ್ನು ಮುಂದಕ್ಕೆ ಓಡಿಸುತ್ತದೆ. ಇಂತ ಉರುವಲು ಗೂಡಿನ ಪದರು ಮಾಡಲು ವಿವಿಧ ಎಲೆಕ್ಟ್ರೋಲೈಟ್ ವಸ್ತುಗಳ ಬಳಕೆಯ ಬಗ್ಗೆ ಅರಕೆಗಾರರು ಸಾಕಷ್ಟು ಕೆಲಸದಲ್ಲಿ ತೊಡಗಿದ್ದಾರೆ. ಇಂದಿನ ಹೆಚ್ಚಿನ ಹೈಡ್ರೋಜನ್ ಕಾರುಗಳಲ್ಲಿ, ಪಿ.ಇ.ಎಮ್ ಮೆಂಬ್ರೇನ್ ಬಳಸಲಾಗುತ್ತದೆ. ಇದಲ್ಲದೆ, ಬೇರೆ ಬಗೆಯ ಫ್ಯೂಲ್ ಸೆಲ್ ಮೆಂಬ್ರೇನ್ ಗಳನ್ನೂ ಬಳಸಿ, ಗಾಡಿಗಳ ಅಳವುತನ ಹೆಚ್ಚಿಸುವ ಕೆಲಸಗಳು ನಡೆದಿವೆ. ಇತರೆ ಬಗೆಯ ಮೆಂಬ್ರೇನ್ ಗಳ ಹೀಗಿವೆ,

  • ಫೊಸ್ಪರಿಕ್ ಆಸಿಡ್ (PAFC)
  • ಅಲ್ಕಲೈನ್ (AFC)
  • ಸಾಲಿಡ್ ಆಕ್ಸೈಡ್ (SOFC)
  • ಮೋಲ್ಟೆನ್ ಕಾರ್ಬೋನೆಟ್ (MCFC)

ಪ್ರಮುಖ ಫ್ಯೂಲ್ ಸೆಲ್ ಗಾಡಿಗಳು:ಜಗತ್ತಿನಲ್ಲಿ ಮಾರಾಟಕ್ಕಿರುವ ಪ್ರಮುಖ ಫ್ಯೂಲ್ ಸೆಲ್ ಗಾಡಿಗಳು ಇಂತಿವೆ. ಅದರಲ್ಲೂ ಟೊಯೊಟಾ ಮಿರೈ ಎಲ್ಲೆಡೆ ತುಂಬಾ ಹೆಸರುವಾಸಿಯಾಗಿದೆ. ಹ್ಯುಂಡಾಯ್ ಕಂಪನಿಯವರಂತೂ ಫ್ಯೂಲ್ ಸೆಲ್ ಟ್ರಕ್ ಕೂಡ ಅಣಿಗೊಳಿಸಿದ್ದಾರೆ.

  • ಟೊಯೋಟಾ ಮಿರೈ
  • ಹೋಂಡಾ ಕ್ಲಾರಿಟಿ
  • ಹ್ಯುಂಡಾಯ್ ನೆಕ್ಸೋ
  • ಹ್ಯುಂಡಾಯ್ ಟಕ್ಸನ್ iX35
  • ರೋವೆ 950
  • ಹ್ಯುಂಡಾಯ್ ಸೆಂಟಾ ಫೇ
  • ಹ್ಯುಂಡಾಯ್ ಎಕ್ಸಿಯಂಟ್ ಟ್ರಕ್

ಹೈಡ್ರೋಜನ್ ಕಾರುಗಳ ಬಳಕೆಯಿಂದಾಗುವ ಪ್ರಮುಖ ಅನುಕೂಲ ಮತ್ತು ಅನಾನುಕೂಲಗಳ ಪಟ್ಟಿ ಮಾಡಿದರೆ, ಅದು ಹೀಗಿರುತ್ತದೆ.

ಅನುಕೂಲಗಳು:

  • ಇವು ಇಲೆಕ್ಟ್ರಿಕ್ ಕಾರುಗಳಂತೆ ಕೆಲಸ ಮಾಡುತ್ತವೆ. ಸದ್ದು ಕಡಿಮೆ ಮತ್ತು ನೀರಷ್ಟೇ ಹೊರಹಾಕುತ್ತವೆ. ಪರಿಸರ ಸ್ನೇಹಿ.
  • ಹೈಡ್ರೋಜನ್ ಕೊಳಾಯಿ ತುಂಬಿಸಲು ಸುಮಾರು 5 ನಿಮಿಷಗಳಷ್ಟು ಸಾಕು
  • ಹೆಚ್ಚಿನ ಹರವು – ಸದ್ಯ ಬಳಕೆಯಲ್ಲಿರುವ ಕಾರುಗಳು ಒಂದು ಸಲ ಹೈಡ್ರೋಜನ್ ತುಂಬಿಸಿಕೊಂಡು ಸುಮಾರು 500 ಕಿಲೋಮೀಟರ್ ಸಾಗುವ ಸಾಮರ್ಥ್ಯ ಹೊಂದಿವೆ. ಹೈಡ್ರೋಜನ್ ಕೊಳ ದೊಡ್ಡದಾದಷ್ಟು ಇವುಗಳು ಹೆಚ್ಚಿನ ದೂರ ಸಾಗಬಲ್ಲವು
  • ಹವಾಮಾನದ ಬದಲಾವಣೆಗೆ ಏರುಪೇರಾಗದೇ ಸರಳವಾಗಿ ಓಡಾಡಿಸಿಕೊಂಡು ಹೋಗಬಹುದು.

ಅನಾನುಕೂಲಗಳು

  • ಹೈಡ್ರೋಜನ್ ತುಂಬಿಸುವ ಕೇಂದ್ರಗಳ ಕೊರತೆ : ಹೆಚ್ಚಿನ ದೇಶಗಳಲ್ಲಿ, ಹೈಡ್ರೋಜನ್ ತುಂಬಿಸುವ ಏರ್ಪಾಟು ಅಷ್ಟಾಗಿ ಬೆಳೆದಿಲ್ಲ. ಇದರ ಸೌಕರ್ಯ ಬೆಳೆಯಲು ವಿಸ್ತರಿಸಲು ಹಲವಾರು ವರ್ಷಗಳು ಬೇಕು.
  • ದುಬಾರಿ ಕ್ಯಾಟಲಿಸ್ಟಗಳು : ನಿಕ್ಕೆಲ್, ಪ್ಲ್ಯಾಟಿನಮ್ ನಂತ ವೇಗಹೆಚ್ಚುಕ ಜಲ್ಲಿಗಳು ತುಂಬಾ ದುಬಾರಿ ಬೆಲೆಯ ಜಲ್ಲಿಗಳು. ಇಂಥ ದುಬಾರಿ ಜಲ್ಲಿಗಳ ಬದಲಾಗಿ ಅಗ್ಗದ ಜಲ್ಲಿಗಳ ಬಳಕೆಯತ್ತ ಇನ್ನೂ ಅರಕೆ ನಡೆಯುತ್ತಿವೆ.
  • ದೊಡ್ಡ ಹೈಡ್ರೋಜನ್ ಕೊಳ : ಫ್ಯೂಲ್ ಸೆಲ್ ಗಾಡಿಗಳಲ್ಲಿ ಉರುವಲಾಗಿ ಬಳಕೆಯಾಗುವ ಹೈಡ್ರೋಜನ್, ಗಾಡಿಗಳಲ್ಲಿ ಕೂಡಿಡಲು ದೊಡ್ಡ ಕೊಳ ಬೇಕು. ಕೊಳದ ಗಾತ್ರ ದೊಡ್ಡದಾದಷ್ಟು ಹೆಚ್ಚಿನ ಹೈಡ್ರೋಜನ್ ಕೂಡಿಡಬಹುದು. ಇದು ಗಾಡಿಗಳ ಗಾತ್ರ ಮತ್ತು ಬೆಲೆಯನ್ನು ದುಬಾರಿಗೊಳಿಸುತ್ತವೆ.

ಮೈಲಿಯೋಟ ಮತ್ತು ವೆಚ್ಚಗಳು:

ಸಾಮಾನ್ಯವಾಗಿ 1 ಪೌಂಡ್ ಹೈಡ್ರೋಜನ್ ಅಂದರೆ 0.45 ಕೆಜಿ ತುಂಬಿಸಿದರೆ ಈ ಗಾಡಿಗಳು ಸುಮಾರು 45 ಕಿಲೋಮೀಟರ್ ಓಡಬಲ್ಲವು. ಅಮೇರಿಕೆಯಲ್ಲಿ 1 ಪೌಂಡ್ ಹೈಡ್ರೋಜನ್ ಬೆಲೆ 14 ಡಾಲರ್ ಆದರೆ, ಜರ್ಮನಿಯಲ್ಲಿ 4.8 ಅಮೇರಿಕನ್ ಡಾಲರ್. ಸಾಮಾನ್ಯ ಇಲೆಕ್ಟ್ರಿಕ್ ಕಾರುಗಳ ಬೆಲೆಗಿಂತ ಫ್ಯೂಲ್ ಸೆಲ್ ಕಾರುಗಳು ಈಗಲೂ ದುಬಾರಿಯೇ ಸರಿ. ಸಾಮಾನ್ಯ ಉರುವಲು ಇಂಜೀನ್ ಕಾರಿಗಿಂತ ಸುಮಾರು ಎರಡು ಪಟ್ಟು ಬೆಲೆ. ಉದಾಹರಣೆಗೆ ಫ್ಯೂಲ್ ಸೆಲ್ ಕಾರೊಂದನ್ನು ಕೊಳ್ಳಲು ಜರ್ಮನಿಯಲ್ಲಿ 70,000 ಯುರೋ ಕೊಟ್ಟರೆ, ಅಮೇರಿಕೆಯಲ್ಲಿ 80,000 ಡಾಲರ್ ತೆರಬೇಕಾಗುತ್ತದೆ.

ಇಂಟರ್‌ನೆಟ್ ಆಫ್ ಥಿಂಗ್ಸ್: ಬದುಕು ಹೆಣೆಯಲಿರುವ ಮಿಂಬಲೆ!?

ಜಯತೀರ್ಥ ನಾಡಗೌಡ.

ಬೆಳಿಗ್ಗೆ ಅಲಾರ್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಫಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಫಿ ಕುಡಿದು ಜಳಕಕ್ಕೆಂದು ಬಚ್ಚಲಮನೆಯ ನಲ್ಲಿ(tap) ಶುರುಮಾಡುತ್ತಲೇ ಗೀಸರ್‌ನಿಂದ ಬಿಸಿ ನೀರು. ಇಲ್ಲಿ ನೀವಾಗಲಿ ನಿಮ್ಮ ಮನೆಯವರಾಗಲಿ ಕಾಫಿ ಮೆಶೀನು(Coffee maker) ಶುರು ಮಾಡಿಲ್ಲ, ಬಿಸಿನೀರೂಟೆಯ(Geyser) ಗುಂಡಿ ಒತ್ತಿ ನೀರು ಕಾಯುವಂತೆ ಮಾಡಿಲ್ಲ. ಆದರೂ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಇವೆಲ್ಲ ನಡೆದು ಹೋಗಿರುತ್ತವೆ. ಅಯ್ಯೋ ಏನಿದು ಅಚ್ಚರಿ, ಇದೆಲ್ಲ ಹೇಗೆ ಅಂದೀರಾ? ಹೌದು ಎಲ್ಲವೂ ಸಾಧ್ಯವಾಗಲಿದೆ. ಇದನ್ನು ಸಾಧ್ಯವಾಗಿಸಲಿದೆ ಇಂಟರ್‌ನೆಟ್ ಆಫ್ ಥಿಂಗ್ಸ್ (Internet of Things) ಅಂದರೆ ವಸ್ತುಗಳ/ಇರುಕಗಳ ಮಿಂಬಲೆ.

ಇಂಟರ್‌ನೆಟ್ ಆಫ್ ಥಿಂಗ್ಸ್” ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ಯಾವುದೇ ಕೈಗಾರಿಕೆ ಆಗಿರಲಿ, ಅಲ್ಲಿ ಈ ಪದಗಳ ಬಳಕೆ ಕಂಡು ಬರುತ್ತಿದೆ. ಆದರೆ ಇದು ಏನು ಎತ್ತ? ಹೇಗೆ ಕೆಲಸ ಮಾಡುತ್ತದೆ? ಇವೆಲ್ಲವೂಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ನಮ್ಮಲ್ಲಿ ಮನೆ ಮಾಡಿವೆ. ಇಂಟರ್‌ನೆಟ್ ಆಫ್ ಥಿಂಗ್ಸ್ ಬಗ್ಗೆ ನಾವುಗಳು ತಿಳಿಯುವುದು ಅಗತ್ಯವಾಗಿದೆ ಯಾಕೆಂದರೆ ಬರುವ ದಿನಗಳಲ್ಲಿ ಇದು ನಮ್ಮ ಬದುಕಿನ ಭಾಗವಾಗಿರಲಿದೆ ಎನ್ನುತ್ತಾರೆ ಅರಿಮೆಗಾರರು.

ಕಳೆದ ಹತ್ತಾರು ವರುಶಗಳಿಂದ ಮಿಂಬಲೆ ನಮ್ಮ ಬದುಕಿನ ಒಂದು ಭಾಗವೇ ಆಗಿಹೋಗಿದೆ ಎನ್ನಬಹುದು. 1990ರ ಈಚೆಗೆ ಜಗತ್ತಿನಲ್ಲಾದ ಹಲವು ಬದಲಾವಣೆಗಳನ್ನು ನೋಡಿದರೆ ಯಾರು ಇದನ್ನು ತಳ್ಳಿಹಾಕುವಂತಿಲ್ಲ. ಮೊದಲೆಲ್ಲ ಬ್ಯಾಂಕುಗಳಿಗೆ ತೆರಳಿ ಹಣ ಪಡೆಯಲು ರಸೀತಿ ತುಂಬಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆದು ಮನೆಗೆ ಬರುವುದು ಸಾಹಸವಾಗಿತ್ತು. ಆದರೆ ಈಗ ದುಡ್ಡು ಬೇಕೆಂದಾಗ ಚಕ್ಕನೆ ನಾವಿರುವ ಮನೆ, ಕೆಲಸದೆಡೆ, ಬಸ್ ನಿಲ್ದಾಣ ಹೀಗೆ ಎಲ್ಲೆ ಇರಲಿ ಬಳಿಯಿರುವ ಹಣದ ಮನೆಯಿಂದ (ATM) ದುಡ್ಡು ಸಲೀಸಾಗಿ ಪಡೆಯಬಹುದು. ಅಷ್ಟೇ ಚಕ್ಕನೆ ಕಣ್ಣ ರೆಪ್ಪೆ ಬಡಿಯುವುದರಲ್ಲಿ ನಿಮ್ಮ ಅಲೆಯುಲಿಗೆ(Mobile) ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆದ ವಿವರಗಳು ಬಂದಿರುತ್ತವೆ. ಈಗಲಂತೂ ಮಿಂಬಲೆಯ ಹರವೂ ಹೆಚ್ಚಿದೆ ಮತ್ತು ಅಗ್ಗದ ಬೆಲೆಯಲ್ಲಿ ಕೈಗೆಟಕುತ್ತಿರುವ ಕಾರಣ ಫೇಸ್ಬುಕ್, ಟ್ವಿಟರ್ ನಂತಹ ಕೂಡುತಾಣಗಳಿಂದ ಮಂದಿಯ ಸೇರುವಿಕೆ ಚಿಟಿಕೆ ಹೊಡೆದಷ್ಟು ಸುಳುವಾಗಿದೆ. ಹೆಚ್ಚುತ್ತಿರುವ ವೈಫೈ ಅಳವುತನ(Efficiency) ಹಾಗೂ ಅರಿವುಕಗಳು(sensor), ಹೊಸ ಚಳಕಗಳ ಬೆಲೆಯನ್ನು ಇಳಿಮುಖ ಮಾಡಿವೆ. ಇನ್ನೂ ಚೂಟಿಯುಲಿಗಳಂತು (Smartphones) ಹೆಚ್ಚು ಕಡಿಮೆ ಎಲ್ಲರ ಕೈಯಲ್ಲೂ ಬಂದು ಸೇರಿವೆ. ಇವೆಲ್ಲವೂ ಇರುಕಗಳ ಮಿಂಬಲೆಗೆ ತಕ್ಕ ಅಡಿಪಾಯ ಹಾಕಿವೆ.

ಚುಟುಕಾಗಿ ಹೇಳಬೇಕೆಂದರೆ ಮನುಷ್ಯರಿಂದ ವಸ್ತುಗಳಿಗೆ, ವಸ್ತುಗಳಿಂದ (Things) ವಸ್ತುಗಳಿಗೆ ಇಲ್ಲವೇ ಮನುಷ್ಯರಿಂದ ಮನುಷ್ಯರಿಗೆ ಮಿಂಬಲೆಯ ಮೂಲಕ ಕೊಂಡಿ ಬೆಸೆದು ಮಾಹಿತಿಯನ್ನು ಕಳಿಸುವುದು ಇಲ್ಲವೇ ಹಂಚಿಕೊಳ್ಳುವುದೇ ವಸ್ತುಗಳ/ಇರುಕಗಳ ಮಿಂಬಲೆ (Internet of Things). ನಡುಬಲೆ ಇಲ್ಲವೇ ಮಿಂಬಲೆಯೊಂದಿಗೆ ಕೂಡಿಕೊಳ್ಳಬಲ್ಲ ಎಲ್ಲ ವಸ್ತುಗಳು, ಇದರ ಭಾಗವೆನ್ನಬಹುದು. ಅವು ನಮ್ಮ ಚೂಟಿಯುಲಿ, ಕಾಫಿ ಮಾಡುವ ಮೆಶೀನು, ಇಸ್ತ್ರೀ ಪೆಟ್ಟಿಗೆ, ಗೋಡೆ ಗಡಿಯಾರ, ಕೈ ಗಡಿಯಾರ, ಬಟ್ಟೆ ಒಗೆಯುವ ಮೆಶೀನು (Washing machine), ಟಿವಿ, ನಾವು ಓಡಿಸುವ ಗಾಡಿಗಳು, ಬಾನೋಡ(Flight) ಯಾವುದೇ ಆಗಿರಬಹುದು. ಇವೆಲ್ಲ ವಸ್ತುಗಳು ಮಿಂಬಲೆಯೊಂದಿಗೆ ಕೂಡಬಲ್ಲವಂತವಾಗಿದ್ದರೆ, ಅವುಗಳ ನಡುವೆ ಮಾತುಕತೆಯಾಡಿಸಬಹುದು. ಗಾರ್ಟ್ನರ್ (Gartner) ಎಂಬ ಕೂಟವೊಂದು ಹೇಳುವಂತೆ ಮುಂದಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಬಹಳಶ್ಟು ವಸ್ತುಗಳು-ಮನುಷ್ಯರು ಕೂಡಿ, ಅವರ ನಡುವೆ ಸಾಕಷ್ಟು ಮಾಹಿತಿ ಹಂಚಿಕೆಯಾಗಲಿದೆಯಂತೆ!

ಇಂಟರ್‌ನೆಟ್ ಆಫ್ ಥಿಂಗ್ಸ್ ಗೆ ಸಂಬಂಧಪಟ್ಟ ಮತ್ತಶ್ಟು ಮಾಹಿತಿ ನೋಡಿದಾಗ, 1974ರಲ್ಲಿ ಕಾಲಿಟ್ಟ ಹಣಮನೆಯ ಮೆಶೀನುಗಳು (ATM) ಇರುಕಗಳ ಮಿಂಬಲೆಯ ಮೊಟ್ಟ ಮೊದಲ ಹೆಜ್ಜೆ ಎನ್ನಬಹುದು. ಒಂದು ಅಂದಾಜಿನ ಪ್ರಕಾರ 2020 ಮುಗಿಯುವ ಹೊತ್ತಿಗೆ ಸುಮಾರು 2.5 ಲಕ್ಷಕ್ಕೂ ಹೆಚ್ಚಿನ ಗಾಡಿಗಳು ಮಿಂಬಲೆಗೆ ಸೇರಿಕೊಳ್ಳಬಹುದು ಎಂಬ ಎಣಿಕಯಿದೆ. ಮುಂಬರುವ ದಿನಗಳಲ್ಲಿ ಗೂಗಲ್‌ನ ತನ್ನಿಂದ ತಾನೇ ಓಡುವ ಕಾರು ಒಂದು ವಾರದಲ್ಲಿ ಹತ್ತು ಸಾವಿರ ಮೈಲಿ ಸಾಗಲಿವೆ. ಕೈಗೆ ತೊಡಬಲ್ಲ ಚೂಟಿಗಡಿಯಾರದಂತ ವಸ್ತುಗಳ ಬೇಡಿಕೆ ಬಹಳಶ್ಟು ಏರಲಿದೆ. ಆಪಲ್ (Apple) ಕೂಟ ಮತ್ತು ಫಿಟ್‌ಬಿಟ್ (Fitbit) ಎಂಬ ಇನ್ನೊಂದು ಕೂಟ ಇಂತ ಕೈಯಲ್ಲಿ ತೊಡಬಲ್ಲ ಕೋಟ್ಯಂತರ ಚೂಟಿ ಎಣಿಗಳನ್ನು (Smart wearing devices) ಕೊಳ್ಳುಗರಿಗೆ ಸಾಗಿಸಿದೆ. ಗೂಗಲ್ ಕೂಟ ನೇಸ್ಟ್‌ಲ್ಯಾಬ್ಸ್ (Nest Labs) ಎನ್ನುವ ಕಾವುಹತೋಟಿಗ (Thermostat) ಸಂಸ್ಥೆಯನ್ನು 3.2 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದೆ. ತೆಂಕಣ ಕೊರಿಯಾ ಮೂಲದ ಸ್ಯಾಮಸಂಗ್ ಕೂಡ “ಕನೆಕ್ಟೆಡ್ ಹೋಮ್ಸ್” (Connected homes) ಎಂಬ ಹೆಸರುವಾಸಿ ಕೂಟವನ್ನು 200 ಮಿಲಿಯನ್ ಡಾಲರ್‌ಗೆ ಕೊಂಡು ಕೊಂಡಿದೆ. ಈ ಮೇಲಿನ ಎಲ್ಲ ಮಾಹಿತಿ,  ಮುಂಬರುವ ದಿನಗಳಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ ಹೆಚ್ಚಾಗುವಿಕೆಯ ಕುರುಹುಗಳಾಗಿವೆ. ಮಿಂಬಲೆ ವ್ಯವಹಾರದಲ್ಲಿರುವ ಗೂಗಲ್ ಕೂಟಕ್ಕೂ ಕಾವುಹತೋಟಿಗ ಕೂಟ ನೇಸ್ಟ್‌ಲ್ಯಾಬ್‌ಗೂ ಯಾವುದೇ ನೇರ ಸಂಬಂಧವೇ ಇಲ್ಲ. ಆದರೆ ಇವರಿಬ್ಬರ ನಡುವಿನ ಈ ವ್ಯವಹಾರ ನೋಡಿದರೆ ಗೂಗಲ್ ಕೂಟ ಇಂಟರ್‌ನೆಟ್ ಆಫ್ ಥಿಂಗ್ಸ್ ನತ್ತ ಚಿತ್ತವಿರಿಸಿದೆ ಎಂಬುದನ್ನು ಹೇಳುತ್ತದೆ. ಅದೇ ರೀತಿ ಸ್ಯಾಮ್‌ಸಂಗ್‌ನ ಕತೆ.

ಎಲ್ಲವೂ ಒಪ್ಪುವಂತದ್ದೇ ಆದರೆ ಇಷ್ಟೆಲ್ಲ ವಸ್ತುಗಳು ತಮ್ಮ ನಡುವೆಯೇಕೆ ಮಾತನಾಡಿಕೊಳ್ಳಬೇಕು? ಇವುಗಳ ಲಾಭವೇನು? ಇದನ್ನರಿಯಲು ಮೊದಲಿನ ಎತ್ತುಗೆಯನ್ನೇ ವಿವರವಾಗಿ ನೋಡೋಣ. ನಿಮ್ಮ ಅಲಾರ್ಮ್ ಗಡಿಯಾರ ಬೆಳಿಗ್ಗೆ 6 ಗಂಟೆಗೆ ನಿಮ್ಮನ್ನು ಎಬ್ಬಿಸುತ್ತದೆ ಎನ್ನಿ. ನಿಮ್ಮನ್ನು ಎಬ್ಬಿಸುತ್ತ ಅದು ನಿಮ್ಮ ಕಾಫಿ ಮಾಡುವ ಮೆಶೀನಿಗೆ ಕಾಫಿ ತಯಾರಿಸುವಂತೆ ಮಾಹಿತಿ ನೀಡುತ್ತದೆ. ಕಣ್ಣು ತೆರೆದು ಅಡುಗೆಮನೆಗೆ ಹೆಜ್ಜೆ ಇಡುತ್ತಲೇ ಬಿಸಿ ಬಿಸಿ ಕಾಫಿ ನಿಮ್ಮ ಮುಂದೆ. ಹಾಗೆಯೇ ಕಾಫಿ ಕುಡಿಯುತ್ತಿದ್ದಂತೆ ಕಾಫಿ ಮಾಡುವ ಮೆಶೀನು ನಿಮ್ಮ ಬಿಸಿಕಕ್ಕೊಂದು (Geyser/Heater) ಸಂದೇಶ ಕಳುಹಿಸಿ ಜಳಕ ಮಾಡಲು ಬಿಸಿ ನೀರು ಕಾಯುವಂತೆ ಮಾಡುತ್ತದೆ. ಇನ್ನೇನು ಕೆಲಸದೆಡೆಗೆ ತೆರಳಲು ಸಿದ್ದರಾಗಿ ಕಾರನ್ನು ಏರಿದ್ದೀರಿ, ಟ್ರಾಫಿಕ್ ದಟ್ಟಣೆಯಿಂದ ನೀವು ಕೆಲಸದೆಡೆಯ ಮಾತುಕತೆಯೊಂದರಲ್ಲಿ ಭಾಗವಹಿಸಲಾಗುತ್ತಿಲ್ಲ, ಕೂಡಲೇ ನಿಮ್ಮ ಬಂಡಿ ನೀವು ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಚೂಟಿಯುಲಿಗೆ ಮಾಹಿತಿ ಕಳುಹಿಸಿ ಕೊಡುತ್ತದೆ. ನಿಮ್ಮ ದಿನದ ಕ್ಯಾಲೆಂಡರ್‌ ಬಗ್ಗೆ ಅರಿತಿರುವ ನಿಮ್ಮ ಚೂಟಿಯುಲಿ ನೀವು ತಡವಾಗಿರುವುದನ್ನು ಕೆಲಸದೆಡೆಯ ಗೆಳೆಯರಿಗೆ ಮಾಹಿತಿಯೊಂದರ ಮೂಲಕ ತಿಳಿಸಿದರೆ ಹೇಗಿರುತ್ತದೆ? ಹೆಚ್ಚಿನ ನಮ್ಮ ಕೆಲಸಗಳು ಸುಳುವಾಗುತ್ತ ಹೋಗುತ್ತವೆ. ಹಲವಾರು ಮಂದಿ ತಮ್ಮ ಕಚೇರಿಗೆ ತೆರಳದೇ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಸಾರಿಗೆ, ಒದಗಿಕೆ (Infrastructure) ಹೀಗೆ ಮುಂತಾದೆಡೆ ಇದನ್ನು ಬಳಸಿಕೊಂಡು ಹೆಚ್ಚಿನ ಬೆಳವಣಿಗೆ ಸಾಧಿಸಬಹುದಾಗಿದೆ. ಇವಷ್ಟೇ ಅಲ್ಲದೇ ಹಲವು ವಲಯಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಮಂದಿ ಮತ್ತು ವಸ್ತುಗಳ ನಡುವೆ ಕೊಂಡಿ ಬೆಸೆಯಲಿದೆ. ಈ ಕೆಳಗಿನ ಚಿತ್ರವನ್ನು ನೋಡಿ. ಹೆಚ್ಚು ಕಡಿಮೆ ಇದರಲ್ಲಿನ ಎಲ್ಲವೂ ಒಂದಕ್ಕೊಂದು ಮಿಂಬಲೆಯ ಮೂಲಕ ಕೊಂಡಿ ಬೆಸೆದುಕೊಳ್ಳಬಹುದಾಗಿದೆ.

ಈ ರೀತಿ ಹೆಚ್ಚುತ್ತಿರುವ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಂದ ನಮ್ಮ ಕೆಲಸಗಳು ಸುಳುವಾಗುವುದೇನೋ ಸರಿ, ಆದರೆ ಇದರ ಇನ್ನೊಂದು ಮುಖ ನಮಗೆ ಕೆಡುಕುಂಟು ಮಾಡುವುದು ಅಷ್ಟೇ ದಿಟ.  ಕೋಟಿಗಟ್ಟಲೆ ವಸ್ತುಗಳು ತಮ್ಮ ತಮ್ಮ ನಡುವೆ ಮಿಂಬಲೆ ಮೂಲಕ ಮಾಹಿತಿ ಹಂಚಿಕೊಳ್ಳತೊಡಗಿದರೆ ಕೆಲವು ಗುಟ್ಟಾದ ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮಿಂಬಲೆ ಸುಲಿಗೆಕೋರರು (Internet Hawkers) ನಿಮ್ಮ ಕಾಫಿ ಮೆಶೀನು ಮೂಲಕ ನಿಮ್ಮ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ? ಇದರಿಂದ ಗುಟ್ಟಿನ ಮಾಹಿತಿಗಳನ್ನು ಮಂದಿ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಬಹುದು ಎನ್ನುತ್ತಾರೆ ಮಿಂಬಲೆ ಪಂಡಿತರು. ಜಗತ್ತಿನೆಲ್ಲೆಡೆ ಈಗಾಗಲೇ ಮಿಂಬಲೆ ಸುಲಿಗೆಕೋರರ ಹಾವಳಿ ತಡೆಯಲಾಗುತ್ತಿಲ್ಲ, ಇದು ಹೆಚ್ಚಾಗುವಿಕೆಯಿಂದ ಇಂತವರ ಎಣಿಕೆ ಹೆಚ್ಚಾಗಿ ಇವರನ್ನು ಮಟ್ಟ ಹಾಕುವುದು ಕಷ್ಟದ ಕೆಲಸವೇ ಸರಿ. ಇದಕ್ಕಾಗಿ ಜಗತ್ತಿನೆಲ್ಲೆಡೆ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಕರ್ಚು ಮಾಡಬೇಕಾಗಿ ಬರುತ್ತದೆ. ಇವುಗಳ ಪರಿಣಾಮ ಇದೀಗ ಅಗ್ಗವೆನಿಸಿರುವ ಮಿಂಬಲೆ ಮುಂದೊಮ್ಮೆ ದುಬಾರಿಯಾಗಲೂಬಹುದು. ಇಂತ ಸುಲಿಗೆಕೋರರು ಗಾಡಿಯ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಗಾಡಿಯು ಅಡ್ಡಾದಿಡ್ಡಿಯಾಗಿ ಓಡಾಡುವಂತೆ ಮಾಡಿದ್ದು ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇಂತಹ ಕೆಟ್ಟ ಕೆಲಸಗಳಿಗೂ ಇದು ದಾರಿಯಾಗಲಿದೆ. ಇನ್ನೂ ದಿಗಿಲುಕೋರರು ಈ ಚಳಕದ ಬಳಕೆ ಮಾಡಿ ಹೆಚ್ಚು ಕಡಿಮೆ ಇಡೀ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ತಳ್ಳಿ ಹಾಕಲಾಗದು. ಈ ಮಾಹಿತಿ ಸೋರಿಕೆಯ ಸಮಸ್ಯೆ ಒಂದೆಡೆಯಾದರೆ ಇಷ್ಟೆಲ್ಲ ವಸ್ತುಗಳು ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡಿಡುವುದು, ಬೇಕೆಂದಾಗ ಬಳಸಿಕೊಳ್ಳುವುದು, ಬೇಕಿಲ್ಲದ ಮಾಹಿತಿಗಳನ್ನು ಬೇರ್ಪಡಿಸಿ ಜಾಲಾಡುವುದು ಕೂಡ ಅಂದುಕೊಂಡಶ್ಟು ಸುಲಭವಲ್ಲ.

ಈ ಎಲ್ಲ ಪ್ರಶ್ನೆಗಳು ಸಾಕಷ್ಟು ತಲೆನೋವನ್ನು ಹುಟ್ಟುಹಾಕಿವೆ. ನಾಡು, ಹೊರನಾಡು ಮುಂತಾದೆಡೆ ಸಭೆ, ಸಮಾರಂಭ ಮತ್ತು ಮಾತುಕತೆ ಕೂಟಗಳಲ್ಲಿ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಇನ್ನೂ ತಕ್ಕ ಉತ್ತರಗಳನ್ನು ಕಂಡುಕೊಳ್ಳುವ ಯತ್ನಗಳು ನಡೆಯುತ್ತಿವೆ. ಇವರು ಆದಷ್ಟು ಬೇಗ ಸರಿಯಾದ ಉತ್ತರಗಳನ್ನು ಕಂಡುಕೊಂಡರೆ ಇಂಟರ್‌ನೆಟ್ ಆಫ್ ಥಿಂಗ್ಸ್ ನಿಜಕ್ಕೂ ನಮ್ಮ ಬದುಕನ್ನು ಸುಳುವಾಗಿಸುವಲ್ಲಿ ಎರಡು ಮಾತಿಲ್ಲ.

ಎಂಜಿನ್ ಬಗ್ಗೆ ತಿಳಿಯೋಣ ಬನ್ನಿ

ಜಯತೀರ್ಥ ನಾಡಗೌಡ.

ದಿನ ನಿತ್ಯ ನಾವು ಸಾರಿಗೆಗಾಗಿ ಅವಲಂಬಿಸಿರುವ ಗಾಡಿ/ಬಂಡಿಗಳು(Vehicles) ಹೆಚ್ಚಾಗಿ ಬಿಣಿಗೆಯನ್ನು(Engine) ಹೊಂದಿರುತ್ತವೆ. ಬಿಣಿಗೆಯಲ್ಲಿ ಹಲವು ಬಗೆಗಳು ಇದ್ದರೂ ಬಹುಪಾಲು ಕಾರು,ಬಸ್ಸುಗಳು,ಇಗ್ಗಾಲಿ ಬಂಡಿಗಳು ಒಳ ಉರಿಯುವಿಕೆಯ ಬಿಣಿಗೆಯನ್ನು (Internal Combustion Engine) ಬಳಸುತ್ತವೆ. ಅದರಲ್ಲೂ ಈ ಒಳ ಉರಿಯುವಿಕೆಯ ಬಿಣಿಗೆಗಳು ಹೆಚ್ಚಾಗಿ ಆಡುಬಿಣಿಗೆಯ (Reciprocating Engine) ಸಾಲಿಗೆ ಸೇರುತ್ತವೆ. ನಮ್ಮ ಬಂಡಿಗಳ ಬಿಣಿಗೆ ಹೇಗೆ ಕೆಲಸ ಮಾಡುತ್ತವೆ,ಇದರ ಬಗೆಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಬಿಣಿಗೆಗಳ ಹಳಮೆ:

ಮೊದಲ ಒಳ ಉರಿಯುವಿಕೆಯ ಬಿಣಿಗೆಯೊಂದನ್ನು ಕಂಡುಹಿಡಿದು ಮಾರಾಟಕ್ಕೆ ಅಣಿಗೊಳಿಸಿದ್ದು ಬೆಲ್ಜಿಯಮ್ ದೇಶದ ಜೀನ್ ಜೊಸೇಪ್ ಲೆನೊಯ್ರ್(Jean Joseph Lennoir) 1858 ರಲ್ಲಿ. ಆದರೂ 1876ರಲ್ಲಿ ಜರ್ಮನಿಯ ಖ್ಯಾತ ಅರಕೆಗಾರ ನಿಕೋಲವ್ಸ್ ಅಗಸ್ಟ್ ಒಟ್ಟೋ (Nicolaus August Otto) ಕಟ್ಟಿದ, ಒಟ್ಟೋ ಸುತ್ತು (Otto Cycle) ಆಧರಿಸಿದ ಬಿಣಿಗೆಯನ್ನೇ ಹಲವೆಡೆ ಮೊದಲ ಮಾರಾಟಕ್ಕೆ ಅಣಿಗೊಂಡ ಬಿಣಿಗೆಯೆಂದು ನಂಬಲಾಗಿದೆ. ಒಟ್ಟೋರವರು ಕಟ್ಟಿದ ಈ ಬಿಣಿಗೆಯ ಕೆಲವು ವರುಶಗಳ ಬಳಿಕ 1892ರಲ್ಲಿ ಮತ್ತೊಬ್ಬ ಜರ್ಮನಿಯ ಅರಕೆಗಾರ ರುಡಾಲ್ಫ್ ಡಿಸೇಲ್ (Rudolf Diesel) ಎಂಬುವರು ಹೊಸ ಸುತ್ತು ಆಧರಿಸಿದ ಬಿಣಿಗೆಯೊಂದನ್ನು ಕಂಡುಹಿಡಿದು ಇದನ್ನು ಡಿಸೇಲ್ ಸುತ್ತಿನ ಬಿಣಿಗೆ (Diesel Cycle) ಎಂದು ಕರೆದರು. ದಿನಗಳೆದಂತೆ ಒಟ್ಟೋ ಸುತ್ತಿನ ಬಿಣಿಗೆಯು ಪೆಟ್ರ‍ೋಲ್ ಬಿಣಿಗೆಯೆಂದು,ರುಡಾಲ್ಪ್ ಡಿಸೇಲ್ ಸುತ್ತಿನ ಬಿಣಿಗೆಯು ಡಿಸೇಲ್ ಬಿಣಿಗೆಯೆಂದು ಹೆಸರು ಪಡೆದವು.

ಒಳ ಉರಿಯುವಿಕೆಯ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ?

ಒಳ ಉರಿಯುವಿಕೆಯ ಬಿಣಿಗೆಗಳು ಉರುವಲಿನ ರಾಸಾಯನಿಕ ಬಲವನ್ನು(Chemical Energy) ತಿರುಗುಣಿಯ (Crankshaft) ಬಲವಾಗಿ ಮಾರ್ಪಡಿಸಿ ಗಾಲಿತೂಕದಲ್ಲಿ(Flywheel) ಕೂಡಿಡುತ್ತವೆ. ಬಿಣಿಗೆಯ ಉರುಳೆಗಳಲ್ಲಿ(Cylinder) ಉರುವಲು ಹೊತ್ತಿಕೊಂಡು ಉರಿದಾಗ ಇದು ಆಡುಬೆಣೆಯನ್ನು(Piston) ಹಿಂದುಮುಂದಾಗಿಸುತ್ತದೆ. ಆಡುಬೆಣೆಯ ಈ ಕದಲಿಕೆಯ ಬಲವು ಕೂಡುಸಳಿಗಳನ್ನು(Connecting rod) ತಿರುಗುವಂತೆ ಮಾಡಿ ತಿರುಗುಣಿಗೆ(Crankshaft) ಬಲ ಸಾಗಿಸುತ್ತದೆ. ತಿರುಗುಣಿಯಲ್ಲಿ ಸೇರಿಸಿದ ಬಲವು ಕೊನೆಯಲ್ಲಿ ಗಾಲಿತೂಕದ ಮೂಲಕ ಬಂಡಿಯ ಗಾಲಿಗಳನ್ನು ಮುಂದೂಡಲು ನೆರವಾಗುತ್ತದೆ.

ಬಿಣಿಗೆಗಳು ಕೆಲಸ ಮಾಡುವ ರೀತಿಯನ್ನು ಡಿಸೇಲ್ ರವರು ಮುಂದಿಟ್ಟ ಡಿಸೇಲ್ ಸುತ್ತು ಮತ್ತು ಒಟ್ಟೋರವರು ಮುಂದಿಟ್ಟ ಒಟ್ಟೋ ಸುತ್ತಿನಂತೆ ವಿವರಿಸಬಹುದು. ಡಿಸೇಲ್ ಬಿಣಿಗೆಗಳು ಡಿಸೇಲ್ ಸುತ್ತನ್ನು ಅನುಸರಿಸಿ ಕೆಲಸ ಮಾಡುತ್ತವೆ. ಪೆಟ್ರೋಲ್ ಬಿಣಿಗೆಗಳು ಒಟ್ಟೋ ಸುತ್ತನ್ನು ಅನುಸರಿಸುತ್ತವೆ. ಎರಡು ಉರುವಲುಗಳಿಗೆ ಪೆಟ್ರೋಲಿಯಮ್ ಸೆಲೆಯಿಂದ ಪಡೆಯಲಾಗಿದ್ದರೂ, ಡಿಸೇಲ್ ಮತ್ತು ಪೆಟ್ರೋಲ್ ಉರುವಲುಗಳಲ್ಲಿ ಸಾಕಶ್ಟು ಬೇರ್ಮೆಗಳಿವೆ. ಇದೇ ಕಾರಣಕ್ಕೆ ಡಿಸೇಲ್ ಸುತ್ತು ಹಾಗೂ ಒಟ್ಟೋ ಸುತ್ತುಗಳಲ್ಲಿಯೂ ಬೇರ್ಮೆ ಇದೆ.

ಗಾಳಿಯೊಂದಿಗೆ ಡಿಸೇಲ್ ಉರುವಲನ್ನು ಹೆಚ್ಚಿನ ಒತ್ತಡದಲ್ಲಿ ಕುಗ್ಗಿಸಿದರೆ ತನ್ನಿಂದ ತಾನೇ ಹೊತ್ತುರಿಯುತ್ತದೆ. ಇದಕ್ಕೆಂದೇ ಡಿಸೇಲ್ ಬಿಣಿಗೆಗಳನ್ನು ಕಾಂಪ್ರೆಸ್ಡ್ ಇಗ್ನಿಶನ್ ಎಂಜೀನ್ (Compressed Ignition Engine-CI Engine) ಎನ್ನಲಾಗುತ್ತದೆ. ಡಿಸೇಲ್ ಉರುವಲಿನಲ್ಲಿ ಹೆಚ್ಚಿನ ಕುಗ್ಗುವಿಕೆಯ(Compression) ಗುಣವಿರುತ್ತದೆ. ಆದರೆ ಗ್ಯಾಸೋಲಿನ್ ಅಂದರೆ ಪೆಟ್ರೋಲ್ ಬಿಣಿಗೆಗಳಲ್ಲಿ ಹೀಗಿರುವುದಿಲ್ಲ. ಪೆಟ್ರೋಲ್ ಬಿಣಿಗೆಗಳು ಡಿಸೇಲ್ -ಗಾಳಿಯಂತೆ ಕುಗ್ಗಿದರೂ ತನ್ನಿಂದ ತಾನೇ ಹೊತ್ತುರಿಯಲಾರವು. ಪೆಟ್ರ‍ೋಲ್ ಬಿಣಿಗೆಗಳು ಇದಕ್ಕೋಸ್ಕರ ಕಿಡಿಬೆಣೆ (Spark Plug) ಅನ್ನು ಬಳಸುತ್ತವೆ. ಆದ್ದರಿಂದ ಪೆಟ್ರ‍ೋಲ್ ಬಿಣಿಗೆಗಳು ಸ್ಪಾರ್ಕ್ ಇಗ್ನಿಶನ್ ಎಂಜೀನ್ ಗಳೆಂದು (Spark Ignition Engine-SI Engine) ಹೆಸರುಪಡೆದಿವೆ. ಪೆಟ್ರ‍ೋಲ್ ಉರುವಲಿಗೆ ಯೂರೋಪ್,ಅಮೇರಿಕಾ,ಕೆನಡಾ ಮುಂತಾದೆಡೆ ಗ್ಯಾಸೋಲಿನ್ ಎಂದು ಕರೆಯಲಾಗುತ್ತದೆ.

ಬಿಣಿಗೆಯ ಮುಖ್ಯ ಬಾಗಗಳು:

ಡಿಸೇಲ್ ಇಲ್ಲವೇ ಪೆಟ್ರ‍ೋಲ್ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರವಾಗಿ ಅರಿಯಲು ಇದರ ಪ್ರಮುಖ ಬಿಡಿಭಾಗಗಳು ಯಾವುವು ಎಂದು ತಿಳಿದುಕೊಳ್ಳುವುದು ಅಷ್ಟೇ ಅಗತ್ಯವಾಗಿದೆ. ಕೆಲವು ಪ್ರಮುಖ ಬಿಡಿಭಾಗಗಳು ಇಂತಿವೆ:

1.ಉರುಳೆ (Cylinder)

2.ಆಡುಬೆಣೆ (Piston)

3.ಕೂಡುಸಳಿ (Connecting Rod)

4.ತಿರುಗುಣಿ (Crankshaft)

5.ಹೊರ ತೆರಪು (Exhaust Valve)

6.ಒಳ ತೆರಪು (Intake Valve)

7.ಕಿಡಿ ಬೆಣೆ (Spark Plug) ***

8.ಚಿಮ್ಮುಕ (Injector)

9.ಉಬ್ಬುಕ (Camshaft)

***ಮುಂಚೆ ತಿಳಿಸಿದಂತೆ ಡಿಸೇಲ್ ಬಿಣಿಗೆಗಳು ಕಿಡಿಬೆಣೆ ಹೊಂದಿರುವುದಿಲ್ಲ.

ಬಿಣಿಗೆಯಲ್ಲಿ ಬಗೆಗಳು:

ನಾವು ಬಳಸುವ ಕಾರು,ಬಸ್ಸು ಮುಂತಾದ ಬಂಡಿಯ ಬಿಣಿಗೆಗಳು ಹಲವು ಬೇರ್ಮೆ ಹೊಂದಿವೆ. ಹೀಗಾಗಿ ಇವುಗಳಲ್ಲಿ ಹಲವಾರು ಬಗೆಗಳು ಇವೆ.

1.ಬಿಣಿಗೆಯ ಉರುಳೆಗಳ ಜೋಡಣೆಯಂತೆ

1.1 ನೇರ ಸಾಲಿನ ಉರುಳೆಗಳ ಬಿಣಿಗೆ (Inline Engine)

1.2 ಇಂಗ್ಲಿಶ್ “ವಿ” ಆಕಾರದಂತೆ ಜೋಡಿಸಿದ ಉರುಳೆಗಳ ಬಿಣಿಗೆ (V-Engine)

1.3 ಬಿರುಗೆರೆಯ ಬದಿಗೆ ಜೋಡಿಸಿದ ಉರುಳೆಗಳುಳ್ಳ ಬಿಣಿಗೆ  (Radial Engine)

1.4 ಒಂದಕ್ಕೊಂದು ಎದುರು ಜೋಡಿಸಿದ ಉರುಳೆಗಳ ಬಿಣಿಗೆ (Opposed Engine)

2. ಬಳಸಲ್ಪಡುವ ಉರುವಲಿನ ಪ್ರಕಾರ

2.1 ಡಿಸೇಲ್ ಬಿಣಿಗೆ (Diesel Engine)

2.2 ಪೆಟ್ರ‍ೋಲ್/ಗ್ಯಾಸೋಲಿನ್ ಬಿಣಿಗೆ (Petrol/Gasoline Engine)

2.3 ಸಿ ಎನ್ ಜಿ ಬಿಣಿಗೆ (CNG Engine)

2.4 ಎಲ್ ಪಿ ಜಿ ಬಿಣಿಗೆ (LPG Engine)

 

3.ಬಿಣಿಗೆಯ ಬಡೆತಗಳಿಗೆ ತಕ್ಕಂತೆ

3.1 ನಾಲ್ಬಡೆತಗಳ ಬಿಣಿಗೆ (4 Stroke engine)

3.2 ಇಬ್ಬಡೆತಗಳ ಬಿಣಿಗೆ (2 Stroke Engine)

 

4.ಬಿಣಿಗೆಯ ತಂಪಾಗಿಸುವಿಕೆಗೆ ತಕ್ಕಂತೆ

4.1 ನೀರಿನ ತಂಪಾಗಿಸುವಿಕೆ (Water cooled Engine)

4.2 ಕಿಲೇಣ್ಣೆಯಿಂದ ತಂಪಾಗಿಸುವಿಕೆ (Oil cooled Engine)

 

5.ಬಿಣಿಗೆಯ ಉಸಿರಾಟಕ್ಕೆ ತಕ್ಕಂತೆ

5.1 ಗಾಳಿದೂಡುಕ ಹೊಂದಿದ (Turbocharged/Supercharged Engines)

5.2 ಗಾಳಿದೂಡುಕವಿರದ (Naturally Aspirated Engines)

 

6.ಬಿಣಿಗೆಗಳು ಹೊಂದಿರುವ ತೆರಪಿಗೆ ತಕ್ಕಂತೆ

6.1 ಎರಡು ತೆರಪು (2 Valves Engine)

6.2 ಮೂರ ತೆರಪಿನ ಬಿಣಿಗೆ (3 Valves Engine)

6.3 ನಾಲ್ತೆರಪು (4 Valves Engine)

 

ಒಂದು ಬಿಣಿಗೆಯ ನೆರವೇರಿಕೆಯನ್ನು(Efficiency) ಈ ಕೆಳಕಂಡ ನಾಲ್ಕರ ಮೂಲಕ ಅರಿಯಬಹುದಾಗಿದೆ.

1. ಬಿಣಿಗೆಯ ಕಸುವು (Engine Power)

2.ಬಿಣಿಗೆ ಉಂಟು ಮಾಡುವ ತಿರುಗುಬಲ (Torque)

3.ಬಿಣಿಗೆಯ ಉರುವಲು ಬಳಕೆ (Fuel Consumption)

4.ಉಗುಳುವ ಕೆಡುಗಾಳಿ (Exhaust Emissions)

 

ಬಿಣಿಗೆಯ ಹಲಬಗೆಯ ಏರ್ಪಾಟುಗಳು:

ಬಿಣಿಗೆಯು ಮನುಶ್ಯನ ದೇಹದಂತೆ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿರುವ ಉಸಿರಾಟದ ಏರ್ಪಾಟು, ನೆತ್ತರಿನ ಹರಿಯುವಿಕೆಯ ಏರ್ಪಾಟುಗಳಿರುವಂತೆ ಬಿಣಿಗೆಯು ಹಲವು ಏರ್ಪಾಟುಗಳನ್ನು ಹೊಂದಿದೆ. ಬಿಣಿಗೆಯ ವಿವಿಧ ಏರ್ಪಾಟುಗಳು

1.ಉರುವಲಿನ ಏರ್ಪಾಟು (Fuel System)

2.ಉಸಿರಾಟದ ಏರ್ಪಾಟು (Air Intake System)

3.ಕೆಡುಗಾಳಿ ಹೊರಹಾಕುವಿಕೆಯ ಏರ್ಪಾಟು (Exhaust System)

4.ಬಿಣಿಗೆ ತಂಪಾಗಿಸುವಿಕೆಯ ಏರ್ಪಾಟು (Engine Cooling System)

5.ಬಿಣಿಗೆಯ ಮಿಂಚಿನ ಏರ್ಪಾಟು (Engine Electrical System)