ಬೆಳ್ಳಿ ಕಿರಣ ಮೂಡಿಸಿದ ಸಾಲಿಡ್ ಸ್ಟೇಟ್ ಬ್ಯಾಟರಿ

ಜಯತೀರ್ಥ ನಾಡಗೌಡ

ಬಹುತೇಕ ವಿದ್ಯುತ್ತಿನ ಕಾರುಗಳಲ್ಲಿ ಬಳಸಲ್ಪಡುವ ಲಿಥಿಯಮ್ ಅಯಾನ್ ಬ್ಯಾಟರಿ ಬದಲಿಗೆ ಸೋಡಿಯಮ್ ಅಯಾನ್ ಬ್ಯಾಟರಿಗಳ ಬಗ್ಗೆ ಸಂಶೋಧನೆಗಳು ಒಂದೆಡೆ ನಡೆಯುತ್ತಿದ್ದರೆ, ಸ್ಯಾಮ್‌ಸಂಗ್ ರವರ ಹೊಸದಾದ ಸಂಶೋಧನೆ ಬ್ಯಾಟರಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಹೆಸರುವಾಸಿ ಸ್ಯಾಮ್‌ಸಂಗ್ ಕಂಪನಿಯವರು ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ಕಂಡುಹಿಡಿದಿದ್ದು. ಬ್ಯಾಟರಿ ಉದ್ದಿಮೆಯಲ್ಲಿ ಇದು ಹೊಸತಾಗಿದೆ. ಇಂದು ಹೆಚ್ಚಾಗಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲ್ಪಡುವ ಎಲೆಕ್ಟ್ರೋಲೈಟ್‌ಗಳು ದ್ರವ ರೂಪದಲ್ಲಿರುತ್ತವೆ(Liquid State). ಆದರೆ, ಸ್ಯಾಮ್‌ಸಂಗ್ ಮುಂದಿಟ್ಟಿರುವ ಸಿಲ್ವರ್ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲಿ ಗಟ್ಟಿಯಾದ ಬೆಳ್ಳಿಯ ಎಲೆಕ್ಟ್ರೋಲೈಟ್‌ಗಳು ಇರಲಿವೆ.

ಸಾಮಾನ್ಯ ಮಿಂಕಟ್ಟುಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳೇ ಅಯಾನ್‌ಗಳು ಕ್ಯಾಥೋಡ್ ಮತ್ತು ಅನೋಡ್ ಬದಿ ಬೇರ್ಪಡುವಂತೆ ಮಾಡುತ್ತವೆ. ಈ ದ್ರವರೂಪದ ಎಲೆಕ್ಟ್ರೋಲೈಟ್ ಬದಲು ಇದೇ ಮೊದಲ ಬಾರಿಗೆ ಘನರೂಪದ ಗಟ್ಟಿಯಾದ ಬೆಳ್ಳಿ-ಇಂಗಾಲದ(Silver-Carbon, Ag-C) ಎಲೆಕ್ಟ್ರೋಲೈಟ್ ಅಭಿವೃದ್ಧಿ ಪಡಿಸಲಾಗಿದೆ. ಗಟ್ಟಿಯಾದ ಎಲೆಕ್ಟ್ರೋಲೈಟ್ ಹೆಚ್ಚಿನ ಅಳುವು ಹೊಂದಿವೆ. ಸಾಮಾನ್ಯ ದ್ರವ ರೂಪದ ಎಲೆಕ್ಟ್ರೋಲೈಟ್ ಸುಮಾರು 270 Wh/kg ಅಳುವು ಹೊಂದಿದ್ದರೆ, ಗಟ್ಟಿಯಾದ ಎಲೆಕ್ಟ್ರೋಲೈಟ್ 500 Wh/kg ನಷ್ಟು ಹೆಚ್ಚಿನ ಅಳುವು ಹೊಂದಿದೆ. ಇದು ಅಲ್ಲದೇ, ದ್ರವರೂಪದ ಎಲೆಕ್ಟ್ರೋಲೈಟ್‌ಗಳು ಉರಿ ಹೊತ್ತಿಕೊಳ್ಳಬಲ್ಲವಂತವು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಸ್ಯಾಮ್‌ಸಂಗ್ ರವರ ಗಟ್ಟಿಯಾದ ಬೆಳ್ಳಿಯ ಮಿನ್ನೊಡೆಕಗಳಲ್ಲಿ(Electrolyte) ಈ ಅಪಾಯ ಇರುವುದಿಲ್ಲ.  ಹೆಚ್ಚಿನ ಅಳುವು ಹೊಂದಿರುವ ಸಾಲಿಡ್ ಸ್ಟೇಟ್ ಎಲೆಕ್ಟ್ರೋಲೈಟ್ ಮಿಂಕಟ್ಟುಗಳು ಒಮ್ಮೆ ಹುರುಪು(Charge) ತುಂಬಿದರೆ ಹೆಚ್ಚಿನ ದೂರದವರೆಗೆ ಸಾಗಬಲ್ಲವು ಅಂದರೆ ಸುಮಾರು 960 ಕಿಮೀಗಳಷ್ಟು.

ಈ ಬ್ಯಾಟರಿಗಳಿಗೆ ಕೇವಲ 9-10 ನಿಮಿಷಗಳಲ್ಲಿ ಪೂರ್ತಿಯಾಗಿ ಹುರುಪು ತುಂಬಬಹುದಾಗಿದೆ. ಹೆಚ್ಚಿನ ಅಳುವು(Efficiency), ಒಮ್ಮೆ ಹುರುಪು ತುಂಬಿಸಿದರೆ ಹೆಚ್ಚು ದೂರದವರೆಗೆ ಸಾಗಣೆ ಹಾಗೂ ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುವ ಈ ಬ್ಯಾಟರಿಗಳು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಾಕಷ್ಟು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಹೇಳಿಕೊಂಡಿದೆ.  ಈಗಾಗಲೇ ಇಂತಹ ಬೆಳ್ಳಿಯ ಮಿಂಕಟ್ಟುಗಳ ಮಾದರಿಗಳನ್ನು ತಯಾರಿಸಿ ಕೆಲವು ಕಾರುತಯಾರಕರಿಗೆ ಸ್ಯಾಮ್‌ಸಂಗ್ ಸಂಸ್ಥೆ ನೀಡಿದ್ದು, ಅವರ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿವೆಯಂತೆ.

ಬೆಳ್ಳಿ ಲೋಹ ದುಬಾರಿಯಾಗಿರುವುದು ಇಂತಹ ಬ್ಯಾಟರಿಗಳ ಬೆಳವಣಿಗೆಗೆ ಇರುವ ಮೊದಲ ತೊಡಕು. ಈ ಬೆಳವಣಿಗೆಯಿಂದ ಬೆಳ್ಳಿಗೆ ಬೇಡಿಕೆ ಏರಿಕೆಯಾಗಿ ಅದರ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಘನರೂಪದ ಮಿಂಕಟ್ಟುಗಳು ಹೆಚ್ಚಿನ ಮಿಂಚಿನ ಕಾರುಗಳಲ್ಲಿ ಬಳಕೆಯಾಗಲಿದ್ದು, ಚೀನಾ ಮೂಲದ ಲಿಥಿಯಮ್-ಅಯಾನ್ ಬ್ಯಾಟರಿ ಕಂಪನಿಗಳಿಗೆ ಇದು ಪಣವೊಡ್ಡಲಿದೆ ಎಂಬುದು ಆಟೋಮೊಬೈಲ್ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿ.

ತಿಟ್ಟ ಮತ್ತು ಮಾಹಿತಿ ಸೆಲೆ:

chargedevs.com

samsung.com

ಬಳಸಿದ ಬಂಡಿಕೊಳ್ಳುಗರಿಗೊಂದು ಕಿರುಕೈಪಿಡಿ

ಜಯತೀರ್ಥ ನಾಡಗೌಡ

ಬಳಸಿದ ಬಂಡಿ(Used or Pre-owned car) ಕೊಳ್ಳುವುದು ಇದೀಗ ಎಲ್ಲೆಡೆ ಹೆಚ್ಚಿದೆ. ಏರುತ್ತಿರುವ ಜನಸಂಖ್ಯೆಯೊಂದಿಗೆ ಕಾರುಗಳ ಬಳಕೆಯೂ ಏರುಮುಖ ಕಂಡಿದೆ. ಇದರಿಂದಾಗಿ ಬಳಸಿದ ಬಂಡಿಗಳ ಮಾರುಕಟ್ಟೆ ಹೆಮ್ಮರವಾಗಿ ಬೆಳೆದಿದೆ. ಬಹಳಶ್ಟು ದುಡ್ಡು ಕೊಟ್ಟು ಹೊಸ ಬಂಡಿ ಕೊಳ್ಳಲಾಗದವರು, ಬಂಡಿ ಓಡಿಸುವುದನ್ನು ರೂಢಿಸಿಕೊಂಡು ನುರಿತರಾಗಬೇಕೆನ್ನುವವರಿಗೆ ಬಳಸಿದ ಕಾರುಗಳು ಒಳ್ಳೆಯ ಆಯ್ಕೆಯಾಗಿ ಮಾರ್ಪಟ್ಟಿವೆ. ಅದಕ್ಕೆಂದೇ ಹಲವಾರು ಪ್ರಮುಖ ಕಾರು ತಯಾರಕ ಕೂಟದವರು ತಮ್ಮದೇ ಆದ ಬಳಸಿದ ಕಾರು ಮಳಿಗೆಗಳನ್ನು ಹೊರತಂದು ತಮ್ಮ ವ್ಯಾಪಾರವನ್ನು ಹಿಗ್ಗಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮಳಿಗೆಗಳಲ್ಲಿ ನಿಮಗೆ ವಿವಿಧ ಬಗೆಯ, ಬೇರೆ ಕೂಟದವರು ತಯಾರಿಸಿದ ಬಳಸಿದ ಕಾರುಗಳು ಸಿಗುತ್ತವೆ. ಇಂತ ಮಳಿಗೆಗಳು ಹಳೆಯ ಬಂಡಿ ಮಾರುವವರಿಗೆ ಮತ್ತು ಬಳಸಿದ ಕಾರು ಕೊಳ್ಳುವವರಿಗೆ ಒಳ್ಳೆಯ ವೇದಿಕೆ ಒದಗಿಸಿವೆ.

ಇದರಲ್ಲಿ ಈ-ಕಾಮರ್ಸ್ (E-commerce) ತಾಣಗಳು ಹಿಂದೆ ಬಿದ್ದಿಲ್ಲ. ಮಳಿಗೆಗಳಲ್ಲಿ ಮಾರಲು, ಕೊಳ್ಳಲು ಸಮಯವಿಲ್ಲ ಎನ್ನುವವರು ಈ ತಾಣಗಳನ್ನು ಬಳಸಬಹುದು. ಈ ತಾಣಗಳಲ್ಲಿ ಮಂದಿಗೆ, ತಮ್ಮ ಗಾಡಿಯ ತಿಟ್ಟಗಳನ್ನು ಮೇಲೇರಿಸಿ, ತಮ್ಮ ವಿವರಗಳನ್ನು ಸೇರಿಸಿ ಪುಕ್ಕಟೆಯಾಗಿ ಬಯಲರಿಕೆ(Advertisement) ನೀಡುವ ಸವಲತ್ತು ಇರುತ್ತದೆ. ಆಸಕ್ತರು ನೇರವಾಗಿ ಕೊಳ್ಳುಗ ಇಲ್ಲವೇ ಮಾರುಗರೊಂದಿಗೆ ಮಾತುಕತೆ ನಡೆಸಿ ವ್ಯವಹರಿಸಿಕೊಂಡು ದಲ್ಲಾಳಿತನ, ಮದ್ಯವರ್ತಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ನೀವು ಬಳಸಿದ ಗಾಡಿಗಳನ್ನು ಮಳಿಗೆ ಇಲ್ಲವೇ ಈ-ಕಾಮರ್ಸ್ ತಾಣ ಎಲ್ಲಿಯಾದರೂ ಕೊಂಡು ಕೊಳ್ಳಿ ಆದರೆ ಕೊಳ್ಳುವಾಗ ಕೆಲವು ಎಚ್ಚರಿಕೆ ವಹಿಸಲೇಬೇಕು. ಬಳಸಿದ ಕಾರು ಕೊಳ್ಳುವ ಆಸಕ್ತರು ಈ ಕೆಳಗೆ ಪಟ್ಟಿ ಮಾಡಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿದರೆ ನಿರಾಳವಾಗಿರಬಹುದು.

  1. ಹಗಲಿನ ಹೊತ್ತಲ್ಲೇ ಗಾಡಿ ನೋಡಿಕೊಳ್ಳಿ:
    ಹಗಲು ಹೊತ್ತಿನಲ್ಲಿ ಬಂಡಿಯನ್ನು ಚೆನ್ನಾಗಿ ನೋಡುವುದು ಯಾವಾಗಲೂ ಒಳಿತು. ಕಾರಿನ ಒಳಮಯ್-ಹೊರಮಯ್‌ಗಳಲ್ಲಿ ಯಾವುದಾದರೂ ಕುಂದು ಕೊರತೆಗಳು ಇಲ್ಲವೇ ಬಣ್ಣ ಮಾಸಿರುವಿಕೆ, ಗೀರುಗಳು ಹಗಲಿನಲ್ಲಿ ಎದ್ದು ಕಾಣುತ್ತವೆ. ಅದಕ್ಕಾಗಿ, ಸಂಜೆ-ಇರುಳು ಹೊತ್ತಿಗಿಂತ ಹಗಲು ಹೊತ್ತಿನಲ್ಲಿ ಬಂಡಿಯ ಮೇಲೆ ಕಣ್ಣಾಡಿಸಿ.
  2. ನುರಿತ ಮೆಕ್ಯಾನಿಕ್ (Mechanic) ಜೊತೆಗಿರಲಿ:
    ಬಳಸಿದ ಗಾಡಿ ಕೊಳ್ಳುವ ಮುನ್ನ ಅದನ್ನು ಒರೆ ಹಚ್ಚಿ ನೋಡಲು ಹೋಗುತ್ತೇವೆ. ಬಂಡಿಗಳ ಬಗ್ಗೆ ನಾವು ಎಷ್ಟೇ ಅನುಭವಸ್ಥರಾಗಿದ್ದರೂ ಒಬ್ಬ ಒಳ್ಳೆಯ ಮೆಕ್ಯಾನಿಕ್‌ನನ್ನು ಸಂಗಡ ಕರೆದುಕೊಂಡು ಹೋಗುವುದು ಜಾಣತನವೆನಿಸುತ್ತದೆ. ಬಂಡಿಗಳಲ್ಲಿ ಉಂಟಾಗುವ ಸಮಸ್ಯೆಗಳು, ಕುಂದು ಕೊರತೆಗಳ ಬಗ್ಗೆ ಇವರಿಗೆ ಸಾಕಶ್ಟು ಅನು ಭವವಿರುತ್ತದೆ. ಅಲ್ಲದೇ ಇವರು ಚಿಕ್ಕ, ದೊಡ್ಡ ಬಗೆಬಗೆಯ ಕಾರುಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುತ್ತಾರೆ. ನಾವು ಕೊಳ್ಳ ಬಯಸುವ ಬಂಡಿಯ ಆಯಸ್ಸು ಇನ್ನೆಷ್ಟು ದಿನ ಬಂಡಿಯ ತಾಳಿಕೆ-ಬಾಳಿಕೆ ಹೇಗೆ ಎಂಬೆಲ್ಲ ವಿವರಗಳನ್ನು ಸುಳುವಾಗಿ ಪತ್ತೆ ಹಚ್ಚಿ ನಮಗೆ ಆಯ್ಕೆ ಮಾಡಲು ನೆರವಾಗುತ್ತಾರೆ. ಒಂದೊಳ್ಳೆಯ ಬಳಸಿದ ಗಾಡಿಯ ಒಡೆಯರಾಗಲು ನಂಬಿಗಸ್ತ ಮೆಕ್ಯಾನಿಕ್ ‌ ಒಬ್ಬರನ್ನು ಜೊತೆಗೆ ಕೊಂಡೊಯ್ಯಿರಿ.
  3. ಹೆಚ್ಚಿನ ನಂಬುತನ (Extended Warranty) ಸಿಗುತ್ತಿದ್ದರೆ ಬಳಸಿಕೊಳ್ಳಿ:
    ಹೆಚ್ಚಿನ ನಂಬುತನವುಳ್ಳ (Extended Warranty) ಗಾಡಿಗಳು ಸಿಕ್ಕರೆ ಒಳ್ಳೆಯದು. ಕೆಲವೊಮ್ಮೆ ಅಗ್ಗದ ಬೆಲೆಗೆ ಬಂಡಿಗೆ ಹೆಚ್ಚಿನ ನಂಬುತನ(Warranty) ನೀಡುವ ಸೌಲಭ್ಯ ಸಿಗುತ್ತವೆ. ಹೊಸ ಗಾಡಿಕೊಂಡಾಗ ಕೆಲವರು ಕೊಂಚ ಬೆಲೆತೆತ್ತು ಹೆಚ್ಚಿನ ನಂಬುತನ ಪಡೆಯುತ್ತಾರೆ. ಅದೇ ಬಂಡಿಯನ್ನು ಮರು-ಮಾರಬೇಕಾದಾಗ ಈ ನಂಬುತನ ಕೊಳ್ಳುಗರಿಗೆ ಸುಲಭವಾಗಿ ಸಿಗುತ್ತದೆ.
  4. ಓಡಿಸಿ ಒರೆಗೆ ಹಚ್ಚಲು (Test Drive) ಮರೆಯದಿರಿ:
    ಗಾಡಿಯ ಒಡೆಯ ನಿಮಗೆ ಎಷ್ಟೇ ಪರಿಚಿತನಾಗಿರಲಿ ಇಲ್ಲವೇ ಪ್ರಾಮಾಣಿಕನೆನಿಸಲಿ, ಕೊಳ್ಳುವ ಗಾಡಿಯನ್ನು ಓಡಿಸಿ ಒರೆಗೆ ಹಚ್ಚಿದ ನಂತರವೇ ಅದರ ಮಯ್ಯೊಳಿತಿನ ಬಗ್ಗೆ ನೀವು ಖಾತರಿ ಪಡಿಸಿಕೊಳ್ಳಿ. ಓಡಿಸಿ ಒರೆಗೆ ಹಚ್ಚುವಾಗ ಯಾರೊಂದಿಗೂ ಮಾತನಾಡದೇ, ಗಾಡಿಯಲ್ಲಿ ಹಾಡು ಕೇಳದೇ ಓಡಿಸಿಕೊಂಡು ಸುತ್ತಾಡಿ. ಯಾವುದೇ ಬೇಡದ ಸದ್ದು ಬಂಡಿಯಿಂದ ಹೊರಬರುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕಾರಿನಿಂದ ಹೊರಬರುವ ಬೇಡದ ಕರ್ಕಶ ಸದ್ದು ನಿಮಗೆ ಕೇಳದಿರಲೆಂದೇ ಕೆಲವರು ನಿಮಗೆ ಮಾತನಾಡಿಸುತ್ತ, ಹಾಡು ಕೇಳಿಸುತ್ತ ಮೋಸ ಮಾಡಬಹುದು. ಹೀಗಾಗದಂತೆ ಎಚ್ಚರವಹಿಸಿ. ಒರೆಗೆ ಹಚ್ಚಿ ಓಡಿಸುವಾಗ ಕಾರಿನಲ್ಲಿ ನಿಮ್ಮ ಕಯ್, ಕಾಲು ಚಾಚಲು ಸಾಕಶ್ಟು ಜಾಗವಿದೆಯೋ ಇಲ್ಲವೋ ಎಂಬುದನ್ನೂ ತಿಳಿದುಕೊಳ್ಳಿ.

5.ಓಟಳಕವನ್ನು (Odometer) ನಂಬಬೇಡಿ:
ಕಾರು ಎಷ್ಟು ಕಿಲೋಮೀಟರ್ ಓಡಿದೆ ಅಂದರೆ ಎಶ್ಟು ಹಳೆಯದಾಗಿದೆ, ಎಂಬುದನ್ನು ಅರಿಯಲು ಓಟಳಕ(Odometer) ದಾಖಲಿಸಿಕೊಂಡಿರುವ ಕಿಲೋಮೀಟರ್‌ಗಳನ್ನು ನೋಡುವುದು ವಾಡಿಕೆ. ಕಾರು ಎಷ್ಟು ಕಿಲೋಮೀಟರ್ ಸಾಗಿದೆ ಎನ್ನುವ ಮಾಹಿತಿಯನ್ನು ಇದು ನೀಡಿದರೂ ಈ ಓಟಳಕವನ್ನು ಸುಳುವಾಗಿ ತಿದ್ದಬಹುದಾಗಿದೆ. ಹೀಗಾಗಿ ಓಟಳಕ ತಿದ್ದಿ ಕಡಿಮೆ ಕಿಲೋಮೀಟರ್ ಓಡಿದೆ ಎಂದು ಮಾಹಿತಿ ತಿರುಚಿ ತೋರಿಸಿ ಮೋಸ ಮಾಡುವವರು ಉಂಟು. ಗಾಡಿಯ ಆರೋಗ್ಯದ ಬಗ್ಗೆ ತಿಳಿಯಲು ಓಟಳಕವೊಂದನ್ನೇ ನಂಬಬೇಡಿ. ಬಂಡಿಗೆ ಸಂಬಂಧಿಸಿದ ಕಡತ, ಹಾಳೆಗಳನ್ನು ಸರಿಯಾಗಿ ನೋಡಿ, ನೆರವುದಾಣಗಳಿಗೆ (Service Centre) ಬಂಡಿಯನ್ನು ಕೊಂಡೊಯ್ದ ವಿವರಗಳನ್ನು ತಿಳಿದು ಬಂಡಿಯ ಮಯ್ಯೊಳಿತನ ಲೆಕ್ಕ ಹಾಕಬಹುದು. ಅನುಮಾನಗಳು ಕಂಡುಬಂದರೆ ಮೆಕ್ಯಾನಿಕ್‌ನ ನೆರವು ಪಡೆಯಬೇಕು.

  1. ತುಕ್ಕು ತೇಪೆಗಳ ಬಗ್ಗೆ ಎಚ್ಚರ:
    ಬಳಸಿದ ಬಂಡಿ ಮಾರುಗರ‍್ಯಾರು ತಮ್ಮ ಬಂಡಿಗೆ ಬಡಿದಿರುವ ತುಕ್ಕು, ತೇಪೆಗಳ ಬಗ್ಗೆ ಹೇಳಿಕೊಳ್ಳಲು ಬಯಸುವುದಿಲ್ಲ. ಗಾಡಿಗೆ ಹಿಡಿದಿರುವ ತುಕ್ಕನ್ನು, ಬಣ್ಣ ಮಾಸಿರುವೆಡೆ ಕಳಪೆ ಮಟ್ಟದ ಬಣ್ಣ ಬಳಿದು ತೇಪೆ ಹಾಕಿದ ಜಾಗಗಳನ್ನು ಮರೆ ಮಾಚುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಂಡಿಯ ಮೇಲೆ ವಿವರವಾಗಿ ಕಣ್ಣಾಡಿಸುವುದರಲ್ಲೇ ಕೊಳ್ಳುಗನ ಜಾಣತನ ಅಡಗಿದೆ.
  2. ಹೊಸ ಬಿಡಿಭಾಗಗಳು:
    ಕಾರೇನೋ ಹಳತಾಗಿದೆ. ಆದರೆ ಅದರಲ್ಲಿ ಕೆಲವು ಹೊಸ ಭಾಗಗಳನ್ನು ಜೋಡಿಸಿರುತ್ತಾರೆ. ಗಾಡಿಯ ಒಡೆಯ/ಮಾರುಗನನ್ನು ಹೊಸ ಭಾಗಗಳೇನಾದರೂ ಜೋಡಿಸಲಾಗಿದೆಯೇ ಎಂದು ಕೇಳಿ, ಜೋಡಿಸಿದ್ದರೆ ಯಾಕೆ ಜೋಡಿಸಲಾಗಿದೆ? ಗಾಡಿಯ ಒಡೆಯ/ಮಾರುಗ ಗುದ್ದಾಟದಂತ ಅವಘಡಗಳನ್ನು ಮಾಡಿಕೊಂಡಿದ್ದರೆ? ಹೊಸ ಬಿಡಿಭಾಗಗಳು ಹಳೆಯದಾದ ಬಂಡಿಯೊಂದಿಗೆ ಸರಿಯಾಗಿ ಬೆರೆತು ತಕ್ಕ ಕೆಲಸ ಮಾಡುತ್ತಿವೆಯೇ ಎಂಬುದರ ಬಗ್ಗೆಯೂ ವಿಚಾರಿಸಿ. ಇವುಗಳೂ ಸರಿಯಾಗಿ ಬೆರೆತು ಕೊಂಡಿಲ್ಲದಿದ್ದರೆ ಮುಂದೆ ಕೆಟ್ಟು ನಿಲ್ಲಬಹುದು ಮತ್ತು ಇದನ್ನು ಸರಿಪಡಿಸುವ ಖರ್ಚು-ವೆಚ್ಚ ಕೊಳ್ಳುಗನ ಜೇಬಿಗೆ ಕತ್ತರಿ.
  3. ಮಿಂಚಿನ ಬಿಡಿಭಾಗಗಳು ಕೆಲಸ ಮಾಡುತ್ತಿವೆಯೇ?
    ಕಿಡಿಬೆಣೆ (Spark plug), ಮಿಂಚಿನ ಸರಿಗೆಗಳು (Electrical wiring) ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲದೇ ಬಂಡಿಯ ಅರಿವುಕಗಳು(Sensors), ಒರೆಸುಕಗಳ(Wipers) ಕೆಲಸದ ಬಗ್ಗೆ ಒಂದು ಒರೆ ನೋಟ ಬೀರಿ.
  4. ಗಾಡಿ ಸಾಲ:
    ಹೊಸ ಗಾಡಿಕೊಳ್ಳಲು ಕಾರು ಸಾಲ ಸಿಗುವುದು ನಮಲ್ಲಿ ಹಲವರಿಗೆ ಗೊತ್ತು. ಆದರೆ ಬಳಸಿದ ಗಾಡಿಗಳಿಗೂ ಸಾಲ ಸಿಗುತ್ತದೆ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಹೌದು, ಬಳಸಿದ ಬಂಡಿಗಳಿಗೂ ಸಾಲದ ನೆರವು ಸಿಗುತ್ತದೆ. ಇದರ ಬಗ್ಗೆ ಬ್ಯಾಂಕು, ಹಣಕಾಸು ಸಂಘ ಸಂಸ್ಠೆಗಳಲ್ಲಿ ವಿಚಾರಿಸಬಹುದು. ಅಗತ್ಯವಿದ್ದರೆ ಇದರ ನೆರವು ಪಡೆದುಕೊಳ್ಳಬಹುದು.
  5. ಹೆಸರು ಬದಲಾವಣೆ (Transferable):
    ಗಾಡಿಗೆ ಸಂಬಂದಪಟ್ಟ ಮುಂಗಾಪು(Insurance), ಇತರೆ ಕಡತಗಳು(Files) ಸುಲಭವಾಗಿ ಕೊಳ್ಳುಗರ ಹೆಸರಿಗೆ ಬದಲಾವಣೆಯಾಗುವಂತಿರಲಿ(Transferable). ಗಾಡಿಗೆ ಈ ಹಿಂದೆ ಒಂದಕ್ಕಿಂತ ಹೆಚ್ಚಿನ ಯಜಮಾನರಿದ್ದಲ್ಲಿ ಎಲ್ಲವೂ ಸರಿಯಾಗಿ ಒಬ್ಬರಿಂದರೊಬ್ಬರಿಗೆ ಬದಲಾವಣೆಯಾಗಿದ್ದರೆ ಅದಕ್ಕೆ ಸಂಬಂದಿಸಿದ ಕಡತಗಳನ್ನು ಸರಿಯಾಗಿ ಓದಿಕೊಳ್ಳುವುದು ಒಳಿತು. ಬಂಡಿ ನೀವು ಕೊಳ್ಳುತ್ತಿದ್ದಂತೆ ಆದಷ್ಟು ಬೇಗ ನಿಮ್ಮ ಹೆಸರಿಗೆ ಅದನ್ನು ನೊಂದಾಯಿಸುವುದು ಅಗತ್ಯ.
  6. ರಿಯಾಯಿತಿ, ಅಗ್ಗದ ಬೆಲೆಯ ಆಮಿಷಗಳು:
    ಕೆಲವು ಗಾಡಿ ಮಾರುಗರು ತಮ್ಮ ಬಂಡಿಗೆ ಹೆಚ್ಚಿನ ರಿಯಾಯಿತಿ, ಅಗ್ಗದ ಬೆಲೆಯಲ್ಲಿ ಮಾರಲು ಕೆಲವು ಆಮಿಷಗಳನ್ನು ತೋರುವುದುಂಟು ಇವುಗಳಿಗೆ ಮಾರುಹೋಗಬೇಡಿ. ಹೆಚ್ಚು ಮಾರಾಟಗೊಳ್ಳದೇ ಸೋಲು ಕಂಡ ಕೆಲವು ಕಾರು ಮಾದರಿಗಳನ್ನು ಕೆಲವರು ಕೊಂಡಿರುತ್ತಾರೆ. ನಂತರ ಇವುಗಳನ್ನು ಮಾರಲು ಪರದಾಡುತ್ತ, ಇಂತ ಆಮಿಷಗಳನ್ನು ಒಡ್ಡುತ್ತಾರೆ. ಇಂತ ಮಾದರಿ ಕಾರುಗಳ ಬಿಡಿಭಾಗಗಳು ಮತ್ತು ಬಿಡಿಭಾಗ ಸರಿಪಡಿಸುವ ನುರಿತ ಮೆಕ್ಯಾನಿಕ್ ಸಿಗುವುದು ಬಲು ಕಷ್ಟ. ಇಂತ ಬಂಡಿಗಳಿಂದ, ಆಮಿಶಗಳಿಂದ ಆದಶ್ಟು ದೂರವಿರಿ.

ಕೊನೆಯದಾಗಿ ಹೇಳಬೇಕೆಂದರೆ, ಇತ್ತಿಚೀಗೆ ಸಾಕಷ್ಟು ಮಿಂದಾಣಗಳು ಬಳಸಿದ ಬಂಡಿಯನ್ನು ಆನ್ಲೈನ್(online) ಮೂಲಕವೇ ಮಾರತೊಡಗಿವೆ. ಈ ಮಿಂದಾಣಗಳು ಹಲವಾರು ಮಾಹಿತಿಗಳನ್ನು ಪುಕ್ಕಟೆಯಾಗಿ ಒದಗಿಸುತ್ತವೆ. ಈ ಮಾಹಿತಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಕಲೆಹಾಕಿ “ಬಳಸಿದ ಕಾರ”ನ್ನು ಕೊಳ್ಳಲು ಸಿದ್ಧವಾಗಿಟ್ಟುಕೊಳ್ಳಬಹುದು.

ಮಾಹಿತಿ ಮತ್ತು ತಿಟ್ಟ ಸೆಲೆ: Cartoq.com   , istockphoto.com

 

ಕಾರುಗಳ ಬಳಕೆ ಕೈಪಿಡಿ

ಜಯತೀರ್ಥ ನಾಡಗೌಡ

ಪ್ರವಾಸಕ್ಕೆ ಅಥವಾ ಕೆಲಸದ ಮೇಲೆ ದೂರದೂರಿಗೆ ಹೋದಾಗ ಎಷ್ಟೋ ಸಲ ನಮ್ಮ ಗಾಡಿಗಳನ್ನು ಸುಮಾರು ದಿವಸ ಒಂದೇ ಕಡೆ ನಿಲ್ಲಿಸುವ ಸಂದರ್ಭ ಬರುತ್ತದೆ. ತುಂಬಾ ಹೊತ್ತು ಗಾಡಿಗಳನ್ನು ಮನೆಯ ಮುಂದೆ ಅಥವಾ ಒಂದೇ ಜಾಗದಲ್ಲಿ ಸುಮಾರು ದಿವಸ ನಿಲ್ಲಿಸಬೇಕಾಗಿ ಬಂದಾಗ ಗಾಡಿಗಳ ಆರೋಗ್ಯದ (health) ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ನಮ್ಮ ಗಾಡಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಈ ಬರಹದ ಉದ್ದೇಶ.

ಬ್ಯಾಟರಿ ಉಳಿಸಿಕೊಳ್ಳಿ

ಸಾಮಾನ್ಯವಾಗಿ ಬಂಡಿಗಳನ್ನು ಹೆಚ್ಚು ದಿನ ಒಂದೇ ಜಾಗದಲ್ಲಿ ನಿಲ್ಲಿಸಿದರೆ, ಅವುಗಳ ಮಿಂಕಟ್ಟುಗಳು(Battery) ಮೊದಲು ಕೆಡುತ್ತವೆ. ದಿನದಿಂದ ದಿನಕ್ಕೆ ಬ್ಯಾಟರಿಗಳು ತಮ್ಮಲ್ಲಿನ ಮಿಂಚನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ ಮತ್ತು ಬಂಡಿಯು ಶುರುವಾಗದೇ ಕೆಟ್ಟು ನಿಲ್ಲಬಹುದು.ಇದನ್ನು ತಡೆಯಲು, ದಿನಾಲೂ 10-15 ನಿಮಿ ನಿಮ್ಮ ಬಂಡಿಯನ್ನು ಶುರು(On) ಮಾಡಿ , ಸಾಧ್ಯವಾದರೆ ತುಸು ಹೊತ್ತು ಮನೆಯ ಸುತ್ತಮುತ್ತ ಓಡಿಸಿದರೆ ಒಳಿತು. ಇದರಿಂದ ಮಿಂಕಟ್ಟುಗಳು ಮತ್ತೆ ಕಸುವು ಪಡೆದು ಮುಂಚಿನಂತಿರುತ್ತವೆ. ಇದು ಸಾಧ್ಯವಾಗದೇ ಇದ್ದಲ್ಲಿ ಮಿಂಕಟ್ಟಿನ ಕಳೆತುದಿಯನ್ನು(Negative Terminal) ಬೇರ್ಪಡಿಸಿ (Disconnect) ಇಡುವುದು ಒಳ್ಳೆಯದು.

ಕೈ ತಡೆತವನ್ನು ಹಾಕಬೇಡಿ

ಹಲವಾರು ಬಂಡಿ ತಯಾರಕರು, ಬಂಡಿ ನಿಲ್ಲಿಸಿದಾಗ ಅದಕ್ಕೆ ಕೈ ತಡೆತವನ್ನು(Hand Brake) ಹಾಕಿ ನಿಲ್ಲಿಸಿ ಎನ್ನುತ್ತಾರೆ. ಇದು ಸರಿಯೇ, ಆದರೆ ಹೀಗೆ ಬಂಡಿಗಳನ್ನು ದಿನಗಟ್ಟಲೇ ಕೈ ತಡೆತ ಹಾಕಿ ನಿಲ್ಲಿಸಿದರೆ ಅದು ಸಿಲುಕಿ ಹಾಕಿಕೊಳ್ಳುವ(Jamming) ಸಾಧ್ಯತೆ ಉಂಟು. ಇದರಿಂದ ಹೊರಬರಲು ಹೀಗೆ ಮಾಡಿ. ಇಳಿಜಾರು ಜಾಗದಲ್ಲಿ ಬಂಡಿ ನಿಲ್ಲಿಸಬೇಕಾಗಿ ಬಂದರೆ ಹಿಂಬದಿ ಗೇರ್‌ನಲ್ಲಿ (Reverse Gear) ಬಂಡಿ ನಿಲ್ಲಿಸಿ, ಎತ್ತರದ ಜಾಗದಲ್ಲಿ ನಿಲ್ಲಿಸಬೇಕಾಗಿ ಬಂದರೆ ಮೊದಲನೇ ಗೇರ್‌ನಲ್ಲಿ(gear) ಏರಿಸಿ ನಿಲ್ಲಿಸಿ, ಇನ್ನೂ ಸಮತಟ್ಟಾದ ಜಾಗವಿದ್ದರೆ ಅಲ್ಲೂ ಕೂಡ ಮೊದಲನೇ ಗೇರ್‌ನಲ್ಲಿ ಏರಿಸಿ ನಿಲ್ಲಿಸಿ. ಬಂಡಿಗೆ ತಡೆತ(Brake) ಇಲ್ಲದೇ ಇರುವುದರಿಂದ ಅದು ಅತ್ತಿತ್ತ ಕದಲದಂತೆ ಗಾಲಿಗಳಿಗೆ ಅಡ್ಡಲಾಗಿ ಕಲ್ಲು/ಇಟ್ಟಿಗೆಗಳನ್ನು ನಿಲ್ಲಿಸಿದರೆ ಆಯಿತು.

ಬಂಡಿಯ ಕ್ಯಾಬಿನ್ ಹಸನು ಮಾಡಿ

ಹಲವಾರು ದಿನಗಳ ಕಾಲ ಬಂಡಿ ನಿಂತಲ್ಲಿಯೇ ನಿಂತಿದ್ದರೆ ಕಸ ಧೂಳು ಬಂಡಿಯ ಒಳಬಾಗದಲ್ಲಿ ಸೇರಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಬಂಡಿಯ ಕ್ಯಾಬಿನ್ ಅನ್ನು ಕಸಕಡ್ದಿ, ಧೂಳುಗಳಿಂದ ದೂರವಾಗಿಸಿ ಚೆನ್ನಾಗಿ ಹಸನುಗೊಳಿಸಿ. ಒಳಗಡೆ ಮಣ್ಣು, ರಾಡಿ ತುಂಬಿದ್ದರೆ ಅದನ್ನು ಹಾಗೇ ಉಳಿಸದೇ ಹಸನು ಮಾಡಿ. ಒಳಗಡೆ ಕೆಟ್ಟ ವಾಸನೆ ಬರುತ್ತಿದ್ದರೆ, ಕಳೆಯೇರಿಸುಕ(Freshner) ಸಿಂಪಡಿಸಬಹುದು. ಹೀಗೆ ಹಸನು ಮಾಡುವಾಗ ಕೈಗವಸು(Gloves) ಬಳಸಿದರೆ ಒಳ್ಳೆಯದು. ಹಸನು ಮಾಡುವುದು ಮುಗಿದ ನಂತರ ಈ ಕೈಗವಸುಗಳನ್ನು ಬಿಸಾಡಿ ಚೆನ್ನಾಗಿ ಕೈ ತೊಳೆದುಕೊಳ್ಳಿ. ನಿಮ್ಮ ಬಳಿ ಸೋಂಕು ನಿವಾರಕಗಳಿದ್ದರೆ(Disinfectant) ಅದನ್ನು ಬಂಡಿಯ ಒಳಗೆ-ಸುತ್ತಲೂ ಸಿಂಪಡಿಸಬಹುದು.

ಕಾರಿನ ಹೊರಭಾಗವನ್ನೂ ಕಾಪಾಡಿಕೊಳ್ಳಿ

ದಿನಗಟ್ಟಲೇ ಕಾರನ್ನು ಹೊರಗೆ ನಿಲ್ಲಿಸಿದರೆ ಅದರ ಮೇಲೆ ಒಣಗಿದ ಎಲೆ, ಇತರೆ ಕಸ ಬಿದ್ದಿರುತ್ತದೆ. ಅದನ್ನು ತೆಗೆದುಹಾಕಿ ಸರಿಯಾಗಿ ನೀರು ಹಾಕಿ ಸೋಪಿನಿಂದ ಒರೆಸಿರಿ. ನಿಮ್ಮದೇ ಸ್ವಂತ ಗ್ಯಾರೇಜ್ ಇದ್ದರೆ ಕಾರನ್ನು ಅಲ್ಲಿ ನಿಲ್ಲಿಸಿ, ಇಲ್ಲವೇ ನೆರಳಿರುವ ಜಾಗದಲ್ಲಿ ನಿಲ್ಲಿಸಿ. ಒಂದು ವೇಳೆ ನೆರಳಿಲ್ಲದೇ ತೆರೆದ ವಾತಾವರಣದಲ್ಲಿ ನಿಲ್ಲಿಸಬೇಕಾಗಿ ಬಂದರೆ, ಬಂಡಿಯನ್ನು ಹೊದಿಕೆಯಿಂದ ಮುಚ್ಚಬೇಕು. ದಿನವಿಡೀ ಬಂಡಿ ಬಿಸಿಲಲ್ಲಿ ನಿಂತುಕೊಂಡರೆ ದಿನೇದಿನೇ ಅದರ ಬಣ್ಣ ಮಾಸಿಹೋಗುತ್ತದೆ.

ಕಾರು ಸಾಗಲಿ ಮುಂದೆ ಹೋಗಲಿ

ಕಡಲತೀರದಲ್ಲಿ ಕಾಣುವ ಹಡಗಿಗಿಂತ ಓಡಾಡುವ ಹಡಗೇ ಚೆಂದವಂತೆ, ಯಾಕೆಂದರೆ ಅದೇ ಹಡಗಿನ ಕೆಲಸ, ಮಂದಿ, ಸರಕು ಹೊತ್ತು ಸಾಗುವುದು. ನಮ್ಮ ಕಾರು ಬಂಡಿಗಳು ಇದಕ್ಕೆ ಹೊರತಾಗಿಲ್ಲ. ಕಾರನ್ನು ಒಂದೆಡೆ ಸುಮಾರು ದಿವಸ ನಿಲ್ಲಿಸಬೇಕಾಗಿ ಬಂದಾಗಲೂ, ಅದರ ಎಲ್ಲ ಏರ್ಪಾಟುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಲೇಬೇಕು. ದಿನವೊಮ್ಮೆ ಗಾಡಿಯನ್ನು ಶುರು ಮಾಡಿ, ಅದರ ಗಾಳಿಪಾಡುಕ(Air Conditioner) ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಚಿತಪಡಿಸಿಕೊಳ್ಳಿ. ಯಾವುದೇ ಏರ್ಪಾಟು, ಅನಗತ್ಯ ಸದ್ದುಗಳು ಬರುತ್ತಿದ್ದರೆ, ಯಾಕೆ-ಏನು ಎಂದು ಸ್ವಲ್ಪ ತಿಳಿದುಕೊಳ್ಳಿ. ನಿಂತ ಜಾಗದಲ್ಲೇ ಗಾಡಿಯನ್ನು ತುಸು ಹಿಂದೆ ಮುಂದೆ ಕದಲಿಸಿ, ಇದು ಟಯರ್ ಗಳು ಹಾಳಾಗದಂತೆ ತಡೆಯಬಲ್ಲುದು.

ಕೊನೆಯದಾಗಿ ಹೇಳಬೇಕೆಂದರೆ, ಸಾಧ್ಯವಾದರೆ ಗಾಡಿಯ ಉರುವಲು ಚೀಲವನ್ನು(Fuel Tank) ಪೂರ್ತಿಯಾಗಿ ತುಂಬಿಸಿಡಿ. ಅರೆತುಂಬಿದ ಉರುವಲು ಚೀಲದ ಒಳಗಿರುವ ಉರುವಲಿನ ಮೇಲೆ, ಗಾಳಿ ತುಂಬಿ, ಉರುವಲು ಇಂಗಿ ಹೋಗುವುದಲ್ಲದೇ ಒಳ ಭಾಗಗಳು ತುಕ್ಕು ಹಿಡಿಯಬಹುದು.

ತಿಟ್ಟ ಸೆಲೆ: dubizzle

 

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-2)

ಜಯತೀರ್ಥ ನಾಡಗೌಡ

  1. ಕಚ್ಚು, ಗೀರುಗಳಾದಾಗ:

ಬಂಡಿಗಳಿಗೆ ಕಚ್ಚು ಗೀರುಗಳಾಗುವುದು ಸಾಮಾನ್ಯ. ನಾವು ಕೊಂಡುಕೊಂಡ ಕಾರುಗಳು ನಮ್ಮ ಬದುಕಿನ ಭಾಗವಾಗಿರುವುದರಿಂದ ಅವುಗಳ ಮೇಲೆ ಒಂದು ಗೀರು ಮೂಡಿದರೂ ನಮಗೆ ಬೇಜಾರು. ಸಣ್ಣ ಪುಟ್ಟ ಗೀರು, ಪರಚಿದ ಕಚ್ಚುಗಳು ಉಂಟಾದಾಗ ಅವುಗಳನ್ನು ಮನೆಯಲ್ಲೇ ನಾವೇ ಸ್ವತಹ ಸರಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಮರಳುಹಾಳೆ(Sand Paper), ತೊಳೆಯಲೊಂದು ಡಿಟರ್ಜಂಟ್ ಸಾಬೂನು ಮತ್ತು ಮೆರುಗಿನ ಬಟ್ಟೆ. ಸಣ್ಣ ಪುಟ್ಟ ಗೀರುಗಳಿದ್ದರೆ ,ಗೀರು ಮೂಡಿರುವ ಜಾಗವನ್ನು ಡಿಟರ್ಜಂಟ್ ಸಾಬೂನಿನಿಂದ ತೊಳೆಯಿರಿ. ದೊಡ್ಡ ಗೀರುಗಳಿದ್ದರೆ ಸುಮಾರು 3000 ಚೂರುಗಳಶ್ಟು(3000 grit) ತೆಳುವಾದ ಮರಳುಹಾಳೆಯನ್ನು ತೆಗೆದುಕೊಂಡು ಗೀರುಗಳಿರುವ ಜಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಉಂಟಾಗುವ ತಿಕ್ಕಾಟದಿಂದ ಬಂಡಿಯ ಬಣ್ಣ ಕಳಚಿ ಬರದಿರಲೆಂದು ಇದರ ಮೇಲೆ ನೀರು ಸುರಿಯುತ್ತಿರಬೇಕು. ಇನ್ನೇನು ಗೀರು ಕಾಣದಂತಾಯಿತು ಎನ್ನುವಾಗ 5000 ಚೂರುಗಳಶ್ಟು(5000 grit) ತೆಳುವಾದ ಮರಳುಹಾಳೆಯನ್ನು ಬಳಸಿ ಉಜ್ಜಬೇಕು. ಮೆರಗಿನ ಬಟ್ಟೆಯಿಂದ ಈ ಜಾಗವನ್ನು ಒರೆಸಿ ಬಿಟ್ಟರೆ, ಗೀರು ಹೊರಟುಹೋಗಿ ಬಂಡಿ ಮೊದಲಿನ ಹೊಳಪು ಪಡೆದಿರುತ್ತದೆ.

  1. ಫ್ಯೂಸ್ (Fuse) ನೀವೇ ಬದಲಿಸಿ:

ಇಂದಿನ ಗಾಡಿಗಳಲ್ಲಿ ಹಲವಾರು ಇಲೆಕ್ಟ್ರಿಕ್ ಉಪಕರಣಗಳನ್ನು ಒದಗಿಸಲಾಗಿರುತ್ತದೆ. ವೋಲ್ಟೇಜ್ ಏರಿಳಿತದಿಂದ ಈ ಚೂಟಿಗಳನ್ನು ಕಾಪಾಡಲು ಕರಗುತಂತಿಗಳನ್ನು(Fuse) ಬಳಸಿರುತ್ತಾರೆ. ಈ ಕರಗುತಂತಿಗಳು ಕೆಲವೊಮ್ಮೆ ಸುಟ್ಟುಹೋಗುವುದುಂಟು. ಆಗ ಬಂಡಿಯೂ ಶುರುವಾಗದು. ಸುಟ್ಟುಹೋದ ಕರಗುತಂತಿಗಳನ್ನು ನಾವೇ ಬದಲಾಯಿಸಬಹುದಾಗಿರುತ್ತದೆ. ಎಲ್ಲ ಬಂಡಿಗಳಿಗೆ ಕರಗುತಂತಿ ಪೆಟ್ಟಿಗೆಯನ್ನು(Fuse Box) ನೀಡಿರುತ್ತಾರೆ. ಇದು ಬಂಡಿಯ ತೋರುಮಣೆಯ (Dashboard) ಕೆಳಗೆ ಇಲ್ಲವೇ ಅಕ್ಕಪಕ್ಕದಲ್ಲಿ ಕಾಣಸಿಗುತ್ತದೆ. ಪೆಟ್ಟಿಗೆಯನ್ನು ತೆರೆದಾಗ ಅದರ ಮುಚ್ಚಳದಲ್ಲಿ ಯಾವ ಕರಗುತಂತಿ ಹೇಗೆ ಜೋಡಿಸಬೇಕು ಮತ್ತು ಅವುಗಳ ಬಣ್ಣ ಹೀಗೆ ಎಲ್ಲ ವಿವರ ಮೂಡಿಸಿರುತ್ತಾರೆ. ಪೆಟ್ಟಿಗೆಯ ಒಂದು ಬದಿ, ಸಾಲಾಗಿ ಒಂದು ಜೊತೆ ಹೆಚ್ಚುವರಿ ಕರಗುತಂತಿಗಳನ್ನು ನೀಡಲಾಗಿರುತ್ತದೆ. ಸುಟ್ಟು ಹೋಗಿರುವ ಕರಗುತಂತಿಗಳನ್ನು ಒಂದೊಂದಾಗಿ ಹೊರತೆಗೆದು, ಅದರ ಜಾಗದಲ್ಲಿ ಹೊಸ ಕರಗುತಂತಿಗಳನ್ನು ಅವುಗಳ ಬಣ್ಣಕ್ಕೆ ಸರಿಯಾಗಿ ಪೆಟ್ಟಿಗೆಯ ಮುಚ್ಚಳದ ಮೇಲಿರುವ ವಿವರದಂತೆ ಜೋಡಿಸಬೇಕು. ಪೆಟ್ಟಿಗೆ ಹೊರ ತೆಗೆದಾಗ ಮೊಬೈಲ್ ಬಳಸಿ ಒಂದು ತಿಟ್ಟ ತೆಗೆದಿಟ್ಟುಕೊಂಡರೂ ಸಾಕು, ಹೊಸ ಕರಗುತಂತಿಗಳನ್ನು ಜೋಡಿಸಲು ಇದು ನೆರವಿಗೆ ಬರುವುದು.

  1. ಹೊರಸೂಸುಕ(Radiator) ಕೈ ಕೊಟ್ಟಾಗ:

ಗಾಡಿಯಲ್ಲಿ ಹೊರಸೂಸುಕ, ಬಿಣಿಗೆಯ ಬಿಸುಪನ್ನು ಹಿಡಿತದಲ್ಲಿಡುತ್ತದೆ. ಬಿಣಿಗೆ ಹೆಚ್ಚು ಕಾದು ಬಿಸಿಯಾಗದಂತೆ ನೋಡಿಕೊಳ್ಳುವುದೇ ಇದರ ಕೆಲಸ. ಕೆಲವೊಮ್ಮೆ ಹೊರಸೂಸುಕ ಕೆಟ್ಟು ನಿಂತಾಗ, ಬಿಣಿಗೆ ಹೆಚ್ಚಿಗೆ ಕಾದು ತೊಂದರೆಯಾಗಬಹುದು. ಹೀಗಾಗಿ ಬಿಣಿಗೆಯ ಬಿಸುಪು ತೋರುವ ಅಳಕದ (Engine Temperature Gauge) ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು. ಒಂದೊಮ್ಮೆ ದಿಢೀರನೆ ಬಿಸುಪು ಹೆಚ್ಚಾದದ್ದು ಕಂಡುಬಂದರೆ ಒಬ್ಬ ಮೆಕ್ಯಾನಿಕ್ ಬಳಿ ಬಂಡಿಯನ್ನೊಯ್ದು ಹೊರಸೂಸುಕವನ್ನು ಸರಿಪಡಿಸಿಕೊಳ್ಳಬೇಕು. ಹೆದ್ದಾರಿಯಲ್ಲಿ ಹೋಗುವಾಗ ಹೊರಸೂಸುಕ ಕೈ ಕೊಟ್ಟರೆ ಹೇಗೆ? ಹೆದರದೇ, ಮೊದಲು ಹೆದ್ದಾರಿಯ ದಡದಲ್ಲಿ ಬಂಡಿಯನ್ನು ತಂದು ನಿಲ್ಲಿಸಬೇಕು. ಆಗ ಬಂಡಿಯ ಎಲ್ಲ ಕಿಟಕಿಗಳನ್ನು ತೆರೆದಿಟ್ಟು, ಬಂಡಿಯ ಬಿಸಿಕವನ್ನು (Heater) ಶುರು ಮಾಡಿ Fresh Air Mode ನಲ್ಲಿಡಿ. ಬಿಣಿಗೆಯ ಹೆಚ್ಚಿನ ಬಿಸುಪನ್ನು ಬಿಸಿಕ ಹೀರಿಕೊಳ್ಳುತ್ತ, ಬಿಸಿಗಾಳಿಯನ್ನು ಪಯಣಿಗರು ಕೂಡುವೆಡೆಯಲ್ಲಿ ಬಿಡುತ್ತ ಹೋಗುತ್ತದೆ. ಇದರಿಂದ ಬಿಣಿಗೆಯ ಬಿಸುಪು ಕಡಿಮೆಯಾಗಿ, ಕೆಲವು ಕಿಲೋಮೀಟರ್ ಬಂಡಿಯನ್ನು ಸಾಗಿಸಿ ಮೆಕ್ಯಾನಿಕ್ ಬಳಿ ಕೊಂಡೊಯ್ದು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಿ..

  1. ಇದ್ದಕ್ಕಿದಂತೆ ಟೈರ್ ನಲ್ಲಿ ಗಾಳಿ ಒತ್ತಡ ಕಡಿಮೆಯಾಗುತ್ತಿದೆಯೇ?

ಕೆಲವೊಮ್ಮೆ ಪಂಕ್ಚರ್ ಆಗದೇ ಇದ್ದರೂ ಟೈರಿನ ಗಾಳಿ ಒತ್ತಡ ಕಡಿಮೆಯಾಗುತ್ತಿರುತ್ತದೆ. ಟೈರುಗಳು ಸವೆದು ಹಳೆಯದಾಗಿದ್ದರೆ ಅದರಲ್ಲಿ ತೂತುಗಳಾಗಿ ಗಾಳಿ ಮೆಲ್ಲಗೆ ಸೋರಿಕೆಯಾಗುವುದು. ಇಂತ ಟೈರುಗಳನ್ನು ಬದಲಾಯಿಸುವುದು ಒಳ್ಳೆಯದು. ಕೂಡಲೇ ಟೈರುಗಳನ್ನು ಬದಲಾಯಿಸಲು ಆಗದಿದ್ದರೆ, ಟೈರುಗಳ ಟ್ಯೂಬ್ ಬದಲಾಯಿಸಿ ಕೆಲವು ದಿನಗಳವರೆಗೆ ನೆಮ್ಮದಿಯಿಂದ ಇರಬಹುದು.

  1. ಮಳೆಯಲ್ಲಿ ಬಂಡಿಯ ಒಳಮೈ ನೆನೆದಾಗ:

ಮಳೆಗಾಲದಲ್ಲಿ ಕೆಲವು ಸಾರಿ ಮೈ ಮರೆತು ಬಂಡಿಯ ಕಿಟಕಿ ಗಾಜು ತೆರೆದಿಟ್ಟು ಹೋಗಿರುತ್ತೇವೆ. ಆಗ ಜೋರು ಮಳೆಬಂದರೆ, ಬಂಡಿಯ ಒಳಮೈಯಲ್ಲಿ ನೀರು ತುಂಬಿ ತೊಯ್ದು ತೊಪ್ಪೆಯಾಗಿರುತ್ತದೆ. ಬಂಡಿಯನ್ನು ಪೂರ್ತಿಯಾಗಿ ಒಣಗಿಸಲು 2-3 ದಿನಗಳೇ ಬೇಕಾಗುತ್ತದೆ. ಬೇಗನೆ ಒಣಗಿಸಲು ಹೀಗೆ ಮಾಡಬೇಕು. ಬಂಡಿಯನ್ನು ಮೊದಲು ಬಟ್ಟೆ/ಹಾಳೆಯಿಂದ ಚೆನ್ನಾಗಿ ಒರೆಸಬೇಕು. ಸಾಧ್ಯವಾದಶ್ಟು ತೇವವನ್ನು ಇದರಿಂದ ಹೊರತೆಗೆಯಬಹುದು. ಈಗ,ಬಂಡಿಯ ಬಿಸಿಕವನ್ನು (Heater) ಕೂಡ ಶುರು ಮಾಡಿ, ಬಂಡಿ ಒಣಗಿಸಬಹುದು. ಆದರೆ ಬಿಸಿಕದ ಬಳಕೆಯಿಂದ ಹೆಚ್ಚಿನ ಉರುವಲು ಪೋಲಾಗುತ್ತದೆ. ಇದರ ಬದಲಾಗಿ, ತೇವಕಳೆಕದ (Dehumidifier) ನೆರವಿನಿಂದ ಬಂಡಿಯನ್ನು ಸುಲಭ ಹಾಗೂ ಬಲು ಬೇಗನೆ ಒಣಗಿಸಿಬಹುದು. ಬಂಡಿಯ ಒಳಮೈ ನೀರಿನಲ್ಲಿ ನೆನೆದು ಕೆಟ್ಟ ವಾಸನೆ ಬರುವುದು ಖಚಿತ, ಇದನ್ನು ದೂರವಾಗಿಸಲು ಮೇಲಿನ ಸಾಲುಗಳಲ್ಲಿ ತಿಳಿಸಿದಂತೆ ಅಡುಗೆ ಸೋಡಾ ಮತ್ತು ಕಲಿದ್ದಲು ಪುಡಿಯನ್ನು ಚಿಮುಕಿಸಿದರಾಯಿತು.

ತಿಟ್ಟ ಸೆಲೆ: wikihow

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-1)

ಜಯತೀರ್ಥ ನಾಡಗೌಡ

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಷ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಬೇಕೆಬೇಕು. ಹಗಲಿರುಳು ಓಡಾಟಕ್ಕೆ ಬಳಸಲ್ಪಡುವ ಕಾರುಗಾಡಿಗಳು ಕೆಲವೊಮ್ಮೆ ದಿಢೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ (Service Centre) ಅಂದರೆ ಸರ್ವೀಸ್ ಸೆಂಟರ್‌ಗಳಿಗೆ ಕರೆದೊಯ್ದು ರಿಪೇರಿ ಮಾಡಿಸಬಹುದು, ಆದರೆ ಪ್ರತಿಸಲವೂ ಚಿಕ್ಕ ಪುಟ್ಟ ರಿಪೇರಿಗಳಿಗೆ ನೆರವುದಾಣಕ್ಕೆ ಬಂಡಿಯನ್ನು ಕರೆದೊಯ್ಯಲು ಸಾಕಷ್ಟು ಹೊತ್ತು ಮತ್ತು ದುಡ್ಡು ನೀಡಬೇಕಾಗಿ ಬರಬಹುದು. ಪ್ರತಿ ಬಾರಿ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸುವ ಬದಲು ಮನೆಯಲ್ಲೇ ಸರಿಪಡಿಸಿದರೆ ಸಮಯ ಮತ್ತು ಹಣ, ಎರಡನ್ನು ಉಳಿಸಬಹುದು. ಕಾರುಗಾಡಿಗಳ ಹತ್ತಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲೇ ಸರಿಪಡಿಸಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

  1.   ಮಂಜುಗಟ್ಟಿದ ಗಾಳಿತಡೆ (Wind shield):

ಚಳಿಗಾಲ ಹೆಚ್ಚುತ್ತಿದ್ದಂತೆ ಎಲ್ಲೆಡೆ ಇಬ್ಬನಿ, ಮಂಜುಗಟ್ಟುವುದು ಸಾಮಾನ್ಯ. ರಾತ್ರಿ ಹೊತ್ತಿನಲಿ, ಬಂಡಿಗಳನ್ನು ಚಳಿ, ಗಾಳಿಗೆ ಮಯ್ಯೊಡ್ಡಿ ನಿಲ್ಲಿಸಿರುತ್ತೇವೆ. ಬೆಳಿಗ್ಗೆ ಎದ್ದು ನೋಡಿದರೆ ವಿಂಡ್‌ಶೀಲ್ಡ್ ಗಾಜು ಮಂಜಿನಿಂದ ಹೆಪ್ಪುಗಟ್ಟಿರುತ್ತದೆ. ಕೆಲವೊಂದು ಬಂಡಿಗಳಲ್ಲಿ ಮಂಜಿಳಕ (Defogger) ಎಂಬ ಮಂಜನ್ನು ಕರಗಿಸುವ ಏರ್ಪಾಟು ಅಳವಡಿಸಿರುತ್ತಾರೆ. ಅದು ಕಾರು ಮಾಲೀಕರ ಕೆಲಸವನ್ನು ಹಗುರ ಮಾಡುತ್ತದೆ. ಆದರೆ ಆದರೆ ಕೆಲವು ಹಳೆಯ ಮಾದರಿ ಗಾಡಿಗಳಲ್ಲಿ ಈ ಏರ್ಪಾಟು ಕಂಡುಬರುವುದಿಲ್ಲ. ಆದ್ದರಿಂದ ಡಿಫಾಗರ್ ಹೊಂದಿಲ್ಲದ ಕಾರು ಹೊಂದಿರುವವರು ಅಥವಾ ಡಿಫಾಗರ್ ಕೆಲಸ ಮಾಡದ ಸಂದರ್ಭಗಳಲ್ಲಿ ಈ ರೀತಿ ಮಾಡಬಹುದು: ಗಾಳಿತಡೆಯ ಮೇಲಿನ ಧೂಳು, ಕಸ ಕಡ್ಡಿಗಳಿದ್ದರೆ ಒರೆಸಿ ತೆಗೆಯಿರಿ. ಟೂತ್ ಪೇಸ್ಟ್ ತೆಗೆದುಕೊಂಡು ಒಂಚೂರು ಗಾಳಿತಡೆಯ (Windshield) ಗಾಜಿಗೆ ಹಚ್ಚಿ. ಮೆತ್ತನೆಯ ಬಟ್ಟೆಯೊಂದನ್ನು ತೆಗೆದುಕೊಂಡು, ಗಾಜನ್ನು ಪೂರ್ತಿಯಾಗಿ ಒರೆಸಿಬಿಡಿ. ನೀರಾವಿ, ನೀರಿನ ಹನಿಗಳು ಇಂಗಿ ಮಂಜುಗಟ್ಟುವುದನ್ನು ಟೂತ್ ಪೇಸ್ಟ್ ತಡೆಯುತ್ತದೆ.

  1. ಬಂಡಿ ಘಮಘಮಿಸುವಂತೆ ಹೀಗೆ ಮಾಡಿ:

ದೂರದ ಊರುಗಳಿಗೆ ಪಯಣಿಸುವಾಗ ಬಂಡಿಯಲ್ಲೇ ಕುಳಿತು ತಿಂಡಿ ತಿನಿಸುಗಳನ್ನು ತಿನ್ನಬೇಕಾಗಿ ಬರುತ್ತದೆ. ಕೆಲವೊಮ್ಮೆ ತಿನಿಸಿನ ಸಾಮಾನುಗಳನ್ನು ಬಂಡಿಯಲ್ಲಿಟ್ಟು ಹಬ್ಬ ಹರಿದಿನಗಳಂದು ಸಾಗಿಸುವುದು ಉಂಟು. ಇಂತ ಸಂದರ್ಭಗಳಲ್ಲಿ ತಿಂಡಿ ತಿನಿಸಿನ ವಾಸನೆ ಒಂದೆರಡು ದಿನಗಳವರೆಗೆ ಬಂಡಿಗಳಲ್ಲಿಯೇ ಉಳಿದು . ಕೆಟ್ಟ ವಾಸನೆ ಬರುವುದುಂಟು. ಕಳೆಯೇರಿಸುಕಗಳಿದ್ದರೆ (Air Freshener) ಅವುಗಳನ್ನು ಬಳಸಿ ಈ ಕೆಟ್ಟ ವಾಸನೆಗೆ ತಡೆ ಹಾಕಬಹುದು. ಬಂಡಿಯೊಳಗಿನ ಎರ್ ಫ್ರೆಶ್ನರ್ ಖಾಲಿಯಾಗಿದ್ದರೆ ಅಥವಾ ಎರ್ ಫ್ರೆಶ್ನರ್‌ಗಳಿಂದ ಅಲರ್ಜಿಯಿದ್ದರೆ, ಚಿಂತೆಬೇಡ. ಇದಕ್ಕೊಂದು ಮನೆ ಮದ್ದು ಉಂಟು. ಕಲ್ಲಿದ್ದಿಲು ತೆಗೆದುಕೊಂಡು ಕಲ್ಲಿದ್ದಲನ್ನು ಪುಡಿಯಾಗಿಸಿ, ಅದರೊಂದಿಗೆ ಅಡುಗೆ ಸೋಡಾ ಬೆರೆಸಬೇಕು. ಈ ಬೆರಕೆಯನ್ನು ಕಾರಿನ ಒಳಭಾಗದಲ್ಲೆಲ್ಲ ಚಿಮುಕಿಸಿ ಸ್ವಲ್ಪ ಹೊತ್ತು ಬಿಡಬೇಕು. ಸುಮಾರು ಒಂದು ಗಂಟೆಯ ನಂತರ ಈ ಪುಡಿಯನ್ನು ಗುಡಿಸಿ , ಬಂಡಿಯನ್ನು ಹಸನಾಗಿಸಿ. ಗಾಡಿಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಮಂಗ ಮಾಯವಾಗಿರುತ್ತದೆ.

  1. ಕೊಳೆಯಾದ ಕೂರುಮಣೆ ಸುಚಿಯಾಗಿಸಿ:

ಗಾಡಿಯಲ್ಲಿ ಕುಳಿತು ತಿಂಡಿ ತಿಂದಾಗ ಕೆಲವೊಮ್ಮೆ ಚಹಾ, ಕಾಪಿ ಬಿದ್ದು ಕೂರುಮಣೆಯ (Seat) ಮೇಲೆ ಜಿಡ್ಡಿನ ಕಲೆಗಳಾಗಿ ಬಿಡಬಹುದು. ಈ ಕಲೆಗಳನ್ನು ತೆಗೆಯಲು ಸರ್ವೀಸ್ ಸೆಂಟ ರ್‌ಗಳಿಗೆ ಹೋದರೆ ಅಲ್ಲಿ ದುಬಾರಿ ಹಣನೀಡಬೇಕಾಗುವುದು. ಇದರ ಬದಲಾಗಿ ಮನೆಯಲ್ಲಿ ಇದನ್ನು ಸುಳುವಾಗಿ ಹಸನಾಗಿಸಬಹುದು. ಮನೆಯಲ್ಲಿ ಗಾಜು ಒರೆಸಲು ಬಳಸುವ ಎಣ್ಣೆಯನ್ನು ತೆಗೆದುಕೊಂಡು, ಮೆತ್ತನೆಯ ಹಾಳೆ ಇಲ್ಲವೇ ಬಟ್ಟೆಗೆ ಸಿಂಪಡಿಸಬೇಕು. ಹೀಗೆ ಒದ್ದೆಯಾದ ಬಟ್ಟೆ/ಹಾಳೆಯನ್ನು ಕಲೆಯಾದ ಜಾಗದಲ್ಲಿ 5 ನಿಮಿಷಗಳವರೆಗೆ ಇಡಬೇಕು. ನೋಡು ನೋಡುತ್ತಿದ್ದಂತೆ ಕಲೆ ಹೊರಟು ಹೋಗಿರುತ್ತದೆ. ಬಟ್ಟೆ/ಹಾಳೆಯನ್ನು ಕಲೆಯಿರುವ ಜಾಗದಲ್ಲಿ ತಿಕ್ಕಿದರೆ, ಕಲೆ ಎಲ್ಲೆಡೆ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಬೇಕು. ಕೀಲೆಣ್ಣೆ (Grease) ಜಿಡ್ಡಿನ ಕಲೆಗಳಿದ್ದರೆ ಹೀಗೆ ಮಾಡಿ. ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಡಿಟರ್ಜಂಟ್ ಅನ್ನು ನೀರಿನೊಂದಿಗೆ ಬೆರೆಸಿ, ಜಿಡ್ಡು ಇರುವ ಜಾಗದ ಮೇಲೆ ಚೆನ್ನಾಗಿ ತಿಕ್ಕಬೇಕು. ಬಂಡಿಯಲ್ಲಿ ಹೆಚ್ಚು ಹೊತ್ತು ಪಯಣಿಸುವಾಗ ಕೆಲವರಿಗೆ ವಾಂತಿಯಾಗುವುದು ಸಹಜ. ಇಂತಹ ವಾಂತಿ ಕಲೆಗಳೇನಾದರೂ ಇದ್ದರೆ, ಆ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ನಂತರ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಕಲೆಯಿರುವ ಜಾಗಕ್ಕೆ ಒರೆಸಿದರೆ, ಅಡುಗೆ ಸೋಡಾ ಕೆಟ್ಟ ವಾಸನೆ ಬರುವುದನ್ನು ತಡೆಯುತ್ತದೆ. ನೀರು ಬಳಸಿ ತೊಳೆಯುವುದರಿಂದ, ಜಾಗ ಹಸಿಯಾಗಿರುತ್ತದೆ. ಇದನ್ನು ಬೇಗನೆ ಒಣಗಿಸಲು, ಕೂದಲು ಒಣಗಿಸಲು ಬಳಸುವ ಹೇರ್ ಡ್ರೈಯರ್ (Hair Dryer) ಉಪಯೋಗಿಸಬಹುದು.

  1. ಡಿಕ್ಕಿಕಾಪನ್ನು(Bumper) ಹೀಗೆ ಸರಿಪಡಿಸಿ:

ಇಂದಿನ ದಿನಗಳಲ್ಲಿ ಸಂಚಾರಿ ದಟ್ಟಣೆಗೆ (Traffic Jam) ಹಲವು ಊರುಗಳು ನಲಗುತ್ತಿವೆ. ಎಶ್ಟೋ ಸಾರಿ, ಎರಡು ಗಾಡಿಗಳ ಮಧ್ಯೆ ಎಳ್ಳಷ್ಟೂ ಜಾಗವಿರದಷ್ಟು ದಟ್ಟಣೆ. ಈ ವಾಹನಗಳ ದಟ್ಟಣೆಯಲ್ಲಿ ಆಮೆ ವೇಗದಲ್ಲಿ ಸಾಗುವ ಕಾರುಗಳು ಒಮ್ಮೊಮ್ಮೆ ಗುದ್ದಿಕೊಳ್ಳುವುದುಂಟು. ಮೆಲ್ಲಗೆ ಸಾಗುತ್ತಿರುವ ಗಾಡಿಗಳ ಗುದ್ದುವಿಕೆಯಿಂದ ದೊಡ್ಡ ಅನಾಹುತ ಆಗದೇ ಹೋದರು, ಬಂಡಿಗಳ ಡಿಕ್ಕಿಕಾಪು (Bumper) ಸುಲಭವಾಗಿ ನೆಗ್ಗಿ ಬಿಡುತ್ತವೆ. ನೆಗ್ಗಿದ ಬಂಡಿಯ ಡಿಕ್ಕಿಕಾಪಿನ ಭಾಗವನ್ನು ಸುಳುವಾಗಿ ಮನೆಯಲ್ಲೇ ಸರಿಪಡಿಸಬಹುದು. ಅದಕ್ಕಾಗಿ ಒಂದರ್ಧ ಬಕೆಟ್‌ನಶ್ಟು ಬಿಸಿ ನೀರು ತೆಗೆದುಕೊಳ್ಳಬೇಕು. ಈ ಬಿಸಿ ನೀರನ್ನು ನೆಗ್ಗಿದ ಭಾಗದಲ್ಲಿ ಸುರಿಯಬೇಕು. ಬಿಸಿ ನೀರು ಬೀಳುವುದರಿಂದ ಡಿಕ್ಕಿ ಕಾಪು ಹಿಗ್ಗಿ ತನ್ನ ಮೊದಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಮೊದಲಿನ ಆಕಾರಕ್ಕೆ ಹೊಂದಿಕೊಳ್ಳದೇ ಹೋದರೆ, ಒಳಗಡೆಯಿಂದ ಮೆಲ್ಲನೆ ದೂಡಿದರೆ ಸಾಕು, ಅದು ಮೊದಲಿನಂತಾಗಿರುತ್ತದೆ. ಇದನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆವಹಿಸಿ ಮಾಡಬೇಕು.

  1. ಮಿಂಕಟ್ಟು(Battery) ಕೆಲಸ ಮಾಡದೇ ಹೋದಾಗ?:

ಎಷ್ಟೋ ಸಾರಿ ಗಾಡಿ ಶುರು ಮಾಡಲು ಹೋದಾಗ, ಬಿಣಿಗೆ(Engine) ಶುರು ಆಗುವುದೇ ಇಲ್ಲ. ಕಾರಿನ ಮಿಂಕಟ್ಟು ಸರಿಯಾಗಿ ಮಿಂಚಿನ ಪೂರೈಕೆ ಮಾಡದೇ ಇರುವುದರಿಂದ ಹೀಗಾಗುತ್ತದೆ. ಬ್ಯಾಟರಿ ಚಾರ್ಜ್ ಕಳೆದುಕೊಂಡು ಬಾಳಿಕೆ ಕಡಿಮೆಯಾಗುತ್ತಿದೆ ಎಂದೇ ಇದರರ್ಥ. ಆದರೂ ಚಿಂತಿಸಬೇಕಿಲ್ಲ, ಈ ಗಾಡಿಯನ್ನು ಇನ್ನೊಂದು ಬಂಡಿಯ ಬ್ಯಾಟರಿ ಮೂಲಕ ಶುರು ಮಾಡಬಹುದು. ಇದಕ್ಕೆ ಜಂಪರ್ ತಂತಿಗಳ(Jumper Cable) ಅಗತ್ಯವಿದೆ. ಹೀಗೆ ಜಂಪರ್ ತಂತಿ ಬಳಸಿ ಗಾಡಿಯನ್ನು ಶುರು ಮಾಡುವುದನ್ನು ಜಂಪ್ ಸ್ಟಾರ‍್ಟ್(Jump Start) ಎಂದೇ ಕರೆಯುತ್ತಾರೆ. ಇದನ್ನು ಸುಳುವಾಗಿ ಅರಿಯಲು, ಶುರುವಾಗದೇ ಇರುವ ಗಾಡಿಯನ್ನು ಗಾಡಿ-1 ಮತ್ತು ಅದಕ್ಕೆ ಚಾರ್ಜ್ ಒದಗಿಸಲಿರುವ ಗಾಡಿಯನ್ನು ಗಾಡಿ-2 ಎಂದುಕೊಳ್ಳಿ. ಎರಡು ಗಾಡಿಗಳ ಬಿಣಿಗವಸು(Bonnet/Hood) ಮೇಲೆತ್ತಿ ಮಿಂಕಟ್ಟಿನ ಕೂಡು ತುದಿ(Positive Terminal) ಪತ್ತೆ ಹಚ್ಚಿಕೊಳ್ಳಿ. ಹೆಚ್ಚಿನ ಬ್ಯಾಟರಿಗಳಲ್ಲಿ ಕೂಡು ತುದಿಯನ್ನು ಕೆಂಪನೆ ಬಣ್ಣದ ಮುಚ್ಚಳದಿಂದ ಮುಚ್ಚಿರುತ್ತಾರೆ ಮತ್ತು ಅದು ಕಳೆ ತುದಿಗಿಂತ(Negative Terminal) ಕೊಂಚ ದೊಡ್ಡದಾಗಿರುತ್ತದೆ. ಕೆಂಪು ಬಣ್ಣದ ಜಂಪರ್ ತಂತಿ ಮೂಲಕ ಎರಡು ಕಾರುಗಳ ಮಿಂಕಟ್ಟಿನ ಕೂಡು ತುದಿಗಳನ್ನು ಸೇರಿಸಿ. ಗಾಡಿ-2 ರ ಕಳೆ ತುದಿಗೆ ಕಪ್ಪು ಬಣ್ಣದ ಜಂಪರ್ ಸಿಕ್ಕಿಸಿ ಅದನ್ನು ಗಾಡಿ-1ರ ಲೋಹದ ಭಾಗಕ್ಕೆ(Metal Surface) ಮುಟ್ಟಿಸಿ. ಗಾಡಿಗಳ ಮಿಂಕಟ್ಟಿನ ಎರಡು ತುದಿಗಳು ಒಂದಕ್ಕೊಂದು ತಾಗದಂತೆ ಎಚ್ಚರವಹಿಸಿ. ಈಗ ಗಾಡಿ-2 ನ್ನು ಶುರು ಮಾಡಿ 10ನಿಮಿಷಗಳವರೆಗೆ ಹಾಗೇ ಬಿಡಿ. 10 ನಿಮಿಷಗಳಲ್ಲಿ ಗಾಡಿ-2ರ ಮಿಂಕಟ್ಟಿನಿಂದ ಸಾಕಶ್ಟು ಮಿಂಚು ಗಾಡಿ-1ರ ಮಿಂಕಟ್ಟಿಗೆ ಪೂರೈಕೆಯಾಗಿ, ಅದರಲ್ಲಿ ಮಿಂಚಿನ ಹುರುಪು (Electric Charge) ತುಂಬಿಕೊಂಡಿರುತ್ತದೆ. ಈಗ ಗಾಡಿ-1 ನ್ನು ಶುರು ಮಾಡಿ, ಯಾವುದೇ ತೊಂದರೆಯಿಲ್ಲದೇ ಬಂಡಿ ಶುರುವಾಗುತ್ತದೆ.

 

ಕಾರಿನ ಮೈಲಿಯೋಟ ಹೆಚ್ಚಿಸುವುದು ಹೇಗೆ

ಜಯತೀರ್ಥ ನಾಡಗೌಡ.

ಜನರು ಲಕ್ಷಾಂತರ ಹಣ ಕೊಟ್ಟು ಹೊಸ ಗಾಡಿಗಳನ್ನು ಖರೀದಿಸುತ್ತಾರೆ. ಅಷ್ಟು ಹಣ ಕೊಟ್ಟು ಕೊಂಡ ಕಾರನ್ನು ಜೋಪಾನವಾಗಿ ಕಾಪಾಡಿಕೊಂಡು ಬಾಳಿಕೆ ಹೆಚ್ಚಿಸುವುದು ಕೊಳ್ಳುಗರ ಜವಾಬ್ದಾರಿ. ಹೊಸದಾಗಿ ಖರೀದಿಸಿದ ಗಾಡಿಗಳನ್ನು ಹೇಗೆ ಬಳಕೆ ಮಾಡಬೇಕು. ಬಂಡಿಯ ಮೈಲೇಜ್(ಮೈಲಿಯೋಟ) ಹೆಚ್ಚಿಸಿ ಅದು ಹೆಚ್ಚು ದಿನ ಬಾಳಿಕೆಯಾಗುವಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಅರಿಯೋಣ. ಓಡಿಸುಗರ ಹಾಗೂ ಅನುಭವಗಳಿಗೆ ತಕ್ಕಂತೆ ಇವು ಬದಲಾದರೂ ಕೆಳಗೆ ಪಟ್ಟಿ ಮಾಡಿದ ಕೆಲವು ವಿಷಯಗಳನ್ನು ಓಡಿಸುಗರು ಅಳವಡಿಸಿಕೊಂಡರೆ ಕಾರಿನ ಮೈಲಿಯೋಟ(Mileage) ಹೆಚ್ಚಿಸಿಕೊಂಡು ಹೆಚ್ಚು ದಿನ ಬಾಳಿಕೆ ಬರುವುದರಲ್ಲಿ ಎರಡು ಮಾತಿಲ್ಲ.

1.ಕಾರಿನ ಗಾಲಿ

ಬಂಡಿಯ ಗಾಲಿಗಳು ಬಲು ಮುಖ್ಯವಾದ ಭಾಗ. ಇವುಗಳಲ್ಲಿ ಕಡಿಮೆ ಗಾಳಿಯಿದ್ದರೆ ಹೆಚ್ಚಿನ ಪೆಟ್ರೋಲ್ ಇಲ್ಲವೇ ಡೀಸೇಲ್ ಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬಂಡಿಯ ಗಾಲಿಗಳು ಪೂರ್ತಿ ಗಾಳಿಯಿಂದ ತುಂಬಿದಾಗ ಒಂದು ಲೀಟರ್‌ಗೆ 20ಕಿಮೀ ಓಡುತ್ತದೆ ಎಂದಾದರೆ, ಇದರಲ್ಲಿ ಅರ್ಧದಶ್ಟು ಗಾಳಿ ಕಡಿಮೆಯಾದಾಗ ಒಂದು ಲೀಟರ್ 15 ಇಲ್ಲವೇ 18 ಕಿಮೀಗೆ ಇಳಿಯಬಹುದು. ಇದರಿಂದ ಬಂಡಿಗೆ ಹೆಚ್ಚು ಉರುವಲು(Fuel) ಬೇಕಾಗುತ್ತದೆ.

ಇದನ್ನು ತಡೆಯಲು ಮೇಲಿಂದ ಮೇಲೆ ನಿಮ್ಮ ಗಾಲಿಗಳಲ್ಲಿರುವ ಗಾಳಿಯ ಮಟ್ಟವನ್ನು ತಿಳಿದುಕೊಂಡು ಗಾಳಿಯು ಕಡಿಮೆಯಿದ್ದಾಗ ನಿಮ್ಮ ಹತ್ತಿರದ ನೆರವುತಾಣಗಳಿಗೆ ಭೇಟಿಕೊಟ್ಟು ಗಾಲಿಗಳನ್ನು ಗಾಡಿ ತಯಾರಕರು ತಿಳಿಸಿದ ಒತ್ತಡದ ಮಟ್ಟಕ್ಕೆ ಪೂರ್ತಿಯಾಗಿ ತುಂಬಿಸಿಕೊಳ್ಳಿ. ಹೆಚ್ಚಿನ ಕಾರುಬಂಡಿಗಳ ಗಾಲಿಗಳು ರಬ್ಬರ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ ಇವುಗಳು ವಾತಾವರಣದ ಬಿಸುಪುನಲ್ಲಿ ಹೆಚ್ಚು ಕಡಿಮೆಯಾದಾಗ ಬದಲಾವಣೆ ಹೊಂದುತ್ತವೆ. ನಮ್ಮ ಇಂಡಿಯಾದಂತ ದೇಶದಲ್ಲಿ ಬೇಸಿಗೆಯಲ್ಲಿ ಕೆಲವು ಗಾಲಿಗಳು ಬಿಸುಪು ತಾಳದೇ ಒಡೆಯುವುದನ್ನು ನೀವು ನೋಡಿರಬಹುದು. ಇನ್ನೂ ಚಳಿಗಾಲದಲ್ಲಿ ಗಾಲಿಗಳು ಕುಗ್ಗುವುದನ್ನು ನಾವುಗಳು ನೋಡಿರುತ್ತೇವೆ. ಹೀಗಾಗಿ ತಕ್ಕ ಗುಣಮಟ್ಟದ ಒಳ್ಳೆಯ ಗಾಲಿಗಳನ್ನು ಬಳಸಿ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸಿದರೆ ಹೆಚ್ಚು ಉರುವಲು ಬೇಕಾಗದು ಮತ್ತು ಓಡಿಸುಗರ ಜೇಬಿಗೂ ಕತ್ತರಿ ಬೀಳದು. ಹೆಚ್ಚಿನ ಚಳಿ ಅನುಭವಿಸುವ ಅಮೇರಿಕಾ,ಕೆನಡಾ ಮತ್ತು ಯೂರೋಪ್ ಒಕ್ಕೂಟದ ನಾಡುಗಳಲ್ಲಿ ಚಳಿಗಾಲ ಮತ್ತು ಬೇಸಿಗೆಗೆ ತಕ್ಕಂತೆ ಬೇರೆ ಬೇರೆ ಗಾಲಿಗಳನ್ನು ಬಳಸುತ್ತಾರೆ. ಇದರಿಂದ ಗಾಲಿಗಳು ಹೆಚ್ಚು ಬಾಳಿಕೆ ಬರುವುದಲ್ಲದೇ ಉರುವಲಿನ ಅಳವುತನವೂ(Fuel Efficiency) ಹೆಚ್ಚುವಂತೆ ಮಾಡುತ್ತವೆ.

2.ಓಡಿಸುವ ವೇಗ:

ಬಂಡಿ ಓಡಿಸುವ ವೇಗ ಓಡಿಸುಗರು ಮುಖ್ಯವಾಗಿ ತಿಳಿದಿರಬೇಕಾದ ಸಂಗತಿ. ಕಡಿಮೆ ವೇಗದಲಿ ಹೆಚ್ಚಾಗಿ ಓಡಿಸುವದರಿಂದ ಅಳವುತನವೂ ಕಡಿತಗೊಳ್ಳುತ್ತದೆ. ಪದೇ ಪದೇ ಗೇರ್ ಬದಲಾಯಿಸಿ ಕಡಿಮೆ ವೇಗದ ಸಾಗಣಿಯಲ್ಲಿ(transmission) ಹೊರಟರೇ ಬಂಡಿ ಸಾಗಲು ಹೆಚ್ಚು ಸೆಳೆಬಲ(Torque) ತಗಲುತ್ತದೆ. ಇದರಿಂದ ಬಂಡಿಗೆ ಹೆಚ್ಚು ಉರುವಲು ಬೇಕಾಗುತ್ತದೆ ಮತ್ತು ಮೈಲಿಯೋಟ ಕಡಿತಗೊಳ್ಳುತ್ತದೆ.

ಬಹುತೇಕ ಕಾರುಗಳಲ್ಲಿ ಈಗ ಸುಯ್‌ಅಂಕೆ ಏರ್ಪಾಟು ಒದಗಿಸಿರುತ್ತಾರೆ, ಹೆದ್ದಾರಿಗಳಲ್ಲಿ ಸಾಗುವಾಗ ಸುಯ್ಅಂಕೆ(Cruise Control) ಬಳಕೆ ಮಾಡಿಕೊಳ್ಳಬಹುದು. ಹೆದ್ದಾರಿಗಳಲ್ಲಿ ಹೆಚ್ಚಿನ ವೇಗದಲ್ಲಿ ಸಾಗುವ ಅವಕಾಶವಿರುತ್ತದೆ. ಹಾಗಾಗಿ ಬಂಡಿಯನ್ನು ಒಂದು ವೇಗಕ್ಕೆ ಹೊಂದಿಸಿಕೊಂಡು ಸುಯ್ಅಂಕೆ ಏರ‍್ಪಾಟು ಬಳಸಿದರೆ ಉರುವಲಿನ ಬಳಕೆಯನ್ನು ತಕ್ಕಮಟ್ಟದಲ್ಲಿ ಹಿಡಿತದಲ್ಲಿಡಬಹುದು.

3.ಸೋಸುಕಗಳು:

ಸಾಮಾನ್ಯವಾಗಿ ಪ್ರತಿ ಗಾಡಿಯ ಬಿಣಿಗೆಯಲ್ಲಿ ಒಂದು ಗಾಳಿಯ ಸೋಸುಕ(Air Filter) ಮತ್ತು ಒಂದು ಉರುವಲು ಸೋಸುಕಗಳನ್ನು(Fuel Filter) ಜೋಡಿಸಲಾಗಿರುತ್ತದೆ. (ದೊಡ್ದ ಗಾಡಿಗಳಲ್ಲಿ 4-6 ಸೋಸುಕಗಳು ಇರುತ್ತವೆ). ಹೆಚ್ಚು ಓಡಾಟದಿಂದ ಬಂಡಿಯ ಸೋಸುಕಗಳಲ್ಲಿ ಹೆಚ್ಚು ಕಸ ಇತರೆ ಬೇಡದ ವಸ್ತುಗಳು ಸೋಸುಕದ ಹೊರಭಾಗಕ್ಕೆ ಮೆತ್ತಿಕೊಂಡಿರುತ್ತವೆ. ಇವುಗಳು ಹೆಚ್ಚಾದಂತೆ ಸೋಸುಕದ ಕೆಲಸಕ್ಕೆ ಅಡ್ಡಿಪಡಿಸಿ ಅವುಗಳು ಕೆಲಸ ಮಾಡದಂತೆ ನಿಲ್ಲಿಸುತ್ತವೆ. ಇದರಿಂದ ಬಿಣಿಗೆಯು ಬೇಗನೆ ಆರಂಭಗೊಳ್ಳುವುದಿಲ್ಲ. ಕೆಲವೊಮ್ಮೆ ಬಿಣಿಗೆಯಲ್ಲಿ ಕಸದಿಂದ ಕೂಡಿದ ಗಾಳಿ ಮತ್ತು ಉರುವಲು ಸೇರಿಕೊಂಡು ಬಿಣಿಗೆಯ ಆಡುಬೆಣೆ (Piston), ಕೂಡುಸಳಿಗಳಿಗೆ (Connecting Rod) ಕೆಡುಕುಂಟು ಮಾಡುತ್ತವೆ. ಇವೆಲ್ಲದರ ಪರಿಣಾಮವಾಗಿ ಬಂಡಿಯ ಅಳವುತನ ಕಡಿಮೆಯಾಗುವುದಲ್ಲದೇ ಮೈಲಿಯೋಟವು ಇಳಿಮುಖವಾಗುತ್ತದೆ. ಇದನ್ನು ತಡೆಯಲು ಆಗಾಗ ನಿಮ್ಮ ಬಂಡಿಯ ಸೋಸುಕಗಳನ್ನು ನೆರವು ತಾಣಗಳಿಗೆ ಭೇಟಿ ಇತ್ತು ಪರೀಕ್ಷೆ ಮಾಡಬೇಕು. ಹೆಚ್ಚು ಕಸದಿಂದ ಕೂಡಿರುವುದು ಕಂಡುಬಂದಲ್ಲಿ ಬದಲಾಯಿಸಿಕೊಳ್ಳಬೇಕು. ಇದು ಬಿಣಿಗೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ.

4.ಗಾಡಿಯ ತೂಕ:

ನೀವು ಓಡಾಡುವಾಗ ಬಂಡಿಯ ತೂಕ ತಕ್ಕಮಟ್ಟಿಗೆ ಹಗುರ ಇದ್ದಷ್ಟು ಒಳ್ಳೆಯದು. ಮೇಲಿಂದ ಮೇಲೆ ಬಹಳ ಭಾರ ಹೇರುವುದರಿಂದ ಗಾಡಿಗೆ ಹೆಚ್ಚು ಉರುವಲು ತಗಲುತ್ತದೆ. ಗಾಡಿಯಲ್ಲಿ ಬೇಕಿಲ್ಲದ ವಸ್ತುಗಳನ್ನು ನಿಮ್ಮ ಮನೆಯಲ್ಲೋ ಇಲ್ಲವೇ ಗ್ಯಾರೇಜ್‌ನಲ್ಲಿ ಇಡಬೇಕು. ಬೇಕೆನ್ನಿಸಿದಾಗ ಮಾತ್ರ ಈ ವಸ್ತುಗಳನ್ನು ಕಾರಿನಲ್ಲಿ ಕೊಂಡೊಯ್ಯುವುದು ಬಂಡಿಯ ಬಾಳಿಕೆಗೂ ಒಳ್ಳೆಯದು.

5. ಗಾಡಿಯ ಅರಿವಿಕಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ತಿಳಿಯಿರಿ:

ಇತ್ತಿಚೀನ ಬಹುಪಾಲು ಬಂಡಿಗಳಲ್ಲಿ ಹೆಚ್ಚಿನ ಅರಿವಿಕಗಳಿರುತ್ತವೆ. ಗಾಳಿ ಹರಿವಿನ ಅರಿವಿಕ (Air flow Sensor), ಕೆಡುಗಾಳಿ ಅರಿವಿಕ(Oxygen Sensor), ಬಿಣಿಗೆ ವೇಗದ ಅರಿವಿಕ(Engine Speed Sensor) ಹೀಗೆ ಹಲವು ಅರಿವಿಕಗಳಿರುತ್ತವೆ. ಇವುಗಳನ್ನು ಆಗಾಗ ಪರೀಕ್ಷಿಸುತ್ತಿರಬೇಕು ಇಲ್ಲವಾದಲ್ಲಿ ಬಿಣಿಗೆಯು ಹೆಚ್ಚು ಕೆಡುಗಾಳಿ ಉಗುಳಬಹುದು ಮತ್ತು ಅದನ್ನು ಹಿಡಿತದಲ್ಲಿಡಲು ಸಾಧ್ಯವಾಗದೇ ಇರಬಹುದು. ಹೆಚ್ಚು ಕೆಡುಗಾಳಿ ಉಗುಳುತ್ತ ಬಂಡಿಯು Emission Test ಪಾಸಾಗದೇ ಹೋದಲ್ಲಿ ಪೋಲೀಸರಿಗೆ ದಂಡ ತೆರುವ ಪರಿಸ್ಥಿತಿಯೂ ತಪ್ಪಿದ್ದಲ್ಲ. ಕೆಲವು ಅರಿವಿಕಗಳು ಕೆಲಸಮಾಡುವುದು ನಿಲ್ಲಿಸಿದಾಗ ಬಂಡಿ ಓಡಿಸುಗನಿಗೆ ತಿಳಿದಿರುವುದೇ ಇಲ್ಲ. ಹಾಗಾಗಿ ನೆರವು ತಾಣಗಳಲ್ಲಿ ಇವುಗಳನ್ನೊಮ್ಮೆ ಒರೆಗೆಹಚ್ಚುತ್ತಿರಬೇಕು.

6. ಏಸಿ ಬಳಕೆ ಎಚ್ಚರ:

ನಮ್ಮಲ್ಲಿ ಹಲವರು ಬಂಡಿ ಶುರು ಮಾಡಿ ಏರಿ ಕುಳಿತ ತಕ್ಷಣ ಏಸಿ (Air Conditioning System) ಗುಂಡಿ ಅದುಮುತ್ತಾರೆ. ಇದು ಬಿಣಿಗೆಗೆ ಹಾಗೂ ಗಾಳಿದೂಡುಕಗಳಿಗೆ(Turbocharger) ಕೆಡುಕುಂಟು ಮಾಡುತ್ತದೆ. ಬಂಡಿಯನ್ನು ಶುರು ಮಾಡಿದ ತಕ್ಷಣ ಗಾಳಿದೂಡುಕಗಳಿಗೆ ತಕ್ಕ ಮಟ್ಟಿನ ಗಾಳಿಯ ಹರಿವುಗೊಳ್ಳುವುದಿಲ್ಲ. ಈ ಹೊತ್ತಿನಲ್ಲಿ ಗಾಳಿದೂಡುಕ ನಿಧಾನವಾಗಿ ಗಾಳಿಯೆಳೆದುಕೊಳ್ಳುತ್ತಿರುತ್ತದೆ.  ಇಂತಹ ಹೊತ್ತಲ್ಲಿ ಏಸಿ ಗುಂಡಿ ಅದುಮಿದಾಗ ಬಿಣಿಗೆಗೆ ಮತ್ತು ಗಾಳಿದೂಡುಕದ (Turbocharger) ಕೆಲಸಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ, ಪರಿಣಾಮ ಹೆಚ್ಚಿನ ಡಿಸೇಲ್/ಪೆಟ್ರೋಲ್ ಉರಿಯುವಂತೆ ಮಾಡುತ್ತದೆ. ಗಾಳಿದೂಡುಕ ಮತ್ತು ಬಿಣಿಗೆಯ ಬಾಳಿಕೆಯನ್ನು ಹೆಚ್ಚಾಗಿಸಲು ಬಂಡಿ ಶುರು ಮಾಡಿದ ಕೆಲವು ನಿಮಿಷಗಳ ಬಳಿಕ ಏಸಿ ಏರ‍್ಪಾಟಿನ ಗುಂಡಿ ಅದುಮಬೇಕು.

 ಗಾಡಿಯೂ ನಮ್ಮ ದೇಹವಿದ್ದಂತೆ, ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಿದರೆ ನಾವು ಆರೋಗ್ಯವಿರುತ್ತೇವೆ ಹಾಗೆಯೇ ಗಾಡಿಯ ಎಲ್ಲ ಏರ್ಪಾಟು ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡಿದರೆ ಗಾಡಿಗಳು ಹೆಚ್ಚಿನ ಬಾಳಿಕೆ ಬರುತ್ತವೆ.

ತಿಟ್ಟಸೆಲೆ: (www.carid.com)

ಬೇಸಿಗೆಗಾಲದಲ್ಲಿ ಗಾಡಿಗಳ ಆರೈಕೆ

ಜಯತೀರ್ಥ ನಾಡಗೌಡ.

ಬೇಸಿಗೆ ಬಂತೆಂದರೆ ಸಾಕು ಮಂದಿಗಷ್ಟೇ ಅಲ್ಲ ನಮ್ಮ ವಸ್ತುಗಳಿಗೆ ಕೆಡುಕಾಗುವುದು ನೋಡಿದ್ದೇವೆ. ಬಿಸಿಲಲ್ಲಿ ಹಾಲನ್ನು ಕಾಯಿಸಿದೇ ಹೆಚ್ಚು ಹೊತ್ತು ಇಡುವಂತಿಲ್ಲ ಏಕೆಂದರೆ ಹಾಲು ಒಡೆದು ಹೋಗುತ್ತದೆ. ಅದರಂತೆ ನಾವು ಸಾಕಷ್ಟು ವಸ್ತುಗಳನ್ನು ಬಿಸಿಲ ಬೇಗೆಯಿಂದ ಕಾಪಾಡಬೇಕಾಗಿದೆ. ನಮ್ಮ ಗಾಡಿಯೂ ಬಿಸಿಲಿನ ಧಗೆಯಿಂದ ಕಾಪಾಡಬೇಕಾಗಿರುವ ವಸ್ತುಗಳಲ್ಲೊಂದು. ಬಿರುಬಿಸಿಲಿನಿಂದ ಬಂಡಿಯನ್ನು ಹೇಗೆ ಕಾಪಾಡಿಕೊಂಡು ಚೆನ್ನಾಗಿರುವಂತೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕೆಲವು ತಿಳಿಹೇಳುಗಳು ನಿಮ್ಮ ಮುಂದಿಡುತ್ತಿದ್ದೇನೆ.

 

 

  1. ಬಂಡಿಯ ಗಾಲಿ (Tyre):

ಗಾಡಿಯ ಗಾಲಿ ಅಂದರೆ ರಬ್ಬರ್‌ನ ಟಾಯರುಗಳು ಬಿಸಿಲಿಗೆ ಬೇಗನೆ ತಮ್ಮ ಗುಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಬಿಸಿಲಿಗೆ ಹಿಗ್ಗುವುದು ಮತ್ತು ತಂಪಿನಲ್ಲಿ ಕುಗ್ಗಿಕೊಳ್ಳುವುದು ರಬ್ಬರ್‌ನ ಸಹಜ ಗುಣ. ಹೀಗಾಗಿ ಟಾಯರ್‌ಗಳನ್ನು ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. ಬಂಡಿಯನ್ನು ಸರಿಯಾಗಿ ಹೊತ್ತೊಯ್ಯಲು ಟಾಯರುಗಳಲ್ಲಿ ತಕ್ಕಮಟ್ಟದ ಗಾಳಿ ತುಂಬಿಸಿ ಒತ್ತಡ ಕಾದುಕೊಳ್ಳಬೇಕು. ಕಡಿಮೆ ಒತ್ತಡವಿದ್ದರೆ ಗಾಲಿಗಳ ಬದಿಯ ರಬ್ಬರ್ ಹೆಚ್ಚು ಬಿಸಿಯಾಗುತ್ತ ಹಿಗ್ಗ ತೊಡಗುತ್ತವೆ ಹಿಗ್ಗುತ್ತಾ ಒಡೆದು ಹೋಗಬಹುದು. ತಗ್ಗು ದಿನ್ನೆಯ ದಾರಿಯಲ್ಲಿ ಸಾಗುವಾಗ ರಬ್ಬರ್ ಬಿಸುಪಿಗೆ ಒಳಗಾಗುವುದು ಇನ್ನೂ ಹೆಚ್ಚುತ್ತದೆ. ಬಂಡಿ ಅಂದವಾಗಿರಿಸಲು ನಮ್ಮಲ್ಲಿ ಹಲವರು ಸಾಕಷ್ಟು ಹಣ ಸುರಿಯುತ್ತಾರೆ ಆದರೆ ಮುಂಬದಿಯ ಮತ್ತು ಹಿಂಬದಿಯ ಗಾಲಿಗಳಲ್ಲಿ ಎಷ್ಟು ಗಾಳಿ ತುಂಬಿಸಬೇಕು ಎಂಬುದರ ಅರಿವು ಕಡಿಮೆ. ಇದನ್ನು ತಿಳಿದುಕೊಂಡಿರುವುದು ಒಳ್ಳೆಯದು. ಇಂದಿನ ಹಲವಾರು ಗಾಡಿಗಳಲ್ಲಿ ಗಾಳಿಯ ಒತ್ತಡ ತಿಳಿಸುವ ಅರಿವುಕಗಳಿದ್ದು ಗಾಡಿಯ ತೋರುಮಣೆಯಲ್ಲಿ ಗಾಲಿಗಳ ಒತ್ತಡದ ಪ್ರಮಾಣ ತಿಳಿದುಕೊಳ್ಳಬಹುದು. ಆಗಾಗ ಗಾಲಿಗಳಲ್ಲಿ ಗಾಳಿಯ ಒತ್ತಡದ ಮಟ್ಟ ಒರೆದು ನೋಡಿ (check) ಸರಿಯಾಗಿ ತುಂಬಿಸಿಕೊಳ್ಳಬೇಕು. ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ ಹೊರಗಿನ ಬಿಸುಪಿಗೆ ತಕ್ಕಂತೆ ಗಾಲಿಗಳ ಒಳಗೆ ತುಂಬಿರುವ ಗಾಳಿಯ ಒತ್ತಡದ ಮಟ್ಟ ಕುಸಿಯುತ್ತದೆ. ಪ್ರತಿ 10 ಡಿಗ್ರಿ ಬಿಸುಪು ಹೆಚ್ಚಿದಂತೆ ಗಾಳಿಯ ಒತ್ತಡ 1 ಪಿಎಸ್ಆಯ್(1psi) ಕಡಿಮೆಯಾಗುತ್ತದಂತೆ. ಹಾಗಾಗಿ ಬೆಳಗಿನ ಹೊತ್ತಿನಲ್ಲಿ ಗಾಲಿಗಳ ಗಾಳಿಯೊತ್ತಡ ಮಟ್ಟ ಒರೆದು ನೋಡುವುದು ಒಳ್ಳೆಯದು.

ಬಂಡಿ ಸಾಗುವಾಗ ಅದರ ತುಂಬ ಮಂದಿಯಿದ್ದು ಹಾಗು ಸರಕುಚಾಚು (Boot space) ಕೂಡ ಸರಕು ಚೀಲಗಳಿಂದ ತುಂಬಿದ್ದರೆ ಹೆಚ್ಚು ಗಾಳಿಯ ಒತ್ತಡ ಬೇಕಾಗಬಹುದು. ಬೀದಿಗಳ ಅವಸ್ಥೆ ಮತ್ತು ಬಂಡಿಯ ಮೇಲೆ ಬೀಳುವ ಹೊರೆಗೆ ತಕ್ಕಂತೆ ಗಾಳಿಯ ಒತ್ತಡದ ಮಟ್ಟವನ್ನು ಕಾದುಕೊಂಡು ಸಾಗುವುದರಿಂದ ನಿಮ್ಮ ಬಂಡಿಯ ಗಾಲಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ.

  1. ಗಾಳಿ ಪಾಡುಕದ ಏರ್ಪಾಟು (Air Conditioning System):

ಬಿಸಿಲಿನಲ್ಲಿ ಸಾಗುವಾಗ ಗಾಳಿ ಪಾಡುಕದ ಏರ್ಪಾಟನ್ನು ಹೆಚ್ಚಾಗಿ ಬಳಸುತ್ತೇವೆ. ಇದರಿಂದ ಕುಳಿರುಪೆಟ್ಟಿಗೆ ಏರ್ಪಾಟಿನ (air conditioning system) ಮೇಲೆ ಹೆಚ್ಚಿನ ಹೊರೆಯಾಗುತ್ತದೆ. ಇದನ್ನು ಸರಿಯಾಗಿರುವಂತೆ ನೋಡಿಕೊಳ್ಳಲೇಬೇಕು. ಗಾಳಿ ಪಾಡುಕದ ಏರ್ಪಾಟಿನಲ್ಲಿ ಒಂದು ಒತ್ತುಕವಿರುತ್ತದೆ (compressor), ಒತ್ತುಕದ ಕೀಲೆಣ್ಣೆ ಮತ್ತು ಇದರಲ್ಲಿ ಹರಿದಾಡುವ ತಂಪಿ (Coolant) ಇವುಗಳು ಸರಿಯಾದ ಮಟ್ಟದಲ್ಲಿವೆಯೇ? ಇದರಲ್ಲಿ ಕಸ ಕಡ್ದಿ ತುಂಬಿಕೊಂಡಿದೆಯೇ? ಎಂಬುದನ್ನು ಹತ್ತಿರದ ನೆರವುದಾಣಗಳಲ್ಲೋ (Service Centre) ಇಲ್ಲವೇ ಕಾರು ಮಳಿಗೆಗಳಲ್ಲೋ ಹೋಗಿ ಸರಿ ನೋಡಿಸಿಕೊಳ್ಳಿ.

ಬೇಸಿಗೆಯಲ್ಲಿ ಹಲವರು ಏಸಿ ಏರ್ಪಾಟನ್ನು ಬೇಗನೆ ತಮ್ಮ ಬಂಡಿಯನ್ನು ತಂಪುಗೊಳಿಸುವುದಿಲ್ಲ , ಏಸಿ ಸರಿಯಾಗಿ ಕೆಲಸಮಾಡುತಿಲ್ಲ’ ಎಂಬುದಾಗಿ ದೂರುವುದನ್ನು ಕೇಳಿರಬಹುದು. ನಿಮ್ಮ ಬಂಡಿಯಲ್ಲಿ ಎಷ್ಟೇ ಕಸುವಿನ ಗಾಳಿ ಪಾಡುಕದೇರ‍್ಪಾಟು ನೀಡಿದ್ದರೂ ಅದು ಬೇಗನೆ ತಂಪುಗೊಳಿಸದು. ಇದಕ್ಕೆ ಕಾರಣವೆಂದರೆ ಬಿಸಿಲಿಗೆ ನಮ್ಮ ಬಂಡಿಗಳು ಬಲು ಬೇಗನೆ ಬಿಸಿಯಾಗಿ ಕಾರೊಳಗಿನ ಭಾಗವನ್ನೂ ಬಿಸಿ ಮಾಡುತ್ತವೆ. ಇನ್ನೂ ಬಿಸಿಲಿನಲ್ಲಿ  ನೇಸರನ ಕಿರಣಗಳಿಗೆ ಮಯ್ಯೊಡ್ಡಿ ಬಂಡಿಯನ್ನು ನಿಲ್ಲಿಸಿದ್ದರಂತೂ ಇದರ ಪರಿಣಾಮ ಏರಿಕೆಗೊಳ್ಳುತ್ತದೆ.  ಇದರಿಂದ ಹೊರಬರಲು ಸುಲಭದ ದಾರಿಯೆಂದರೆ ಬಂಡಿಯೇರಿದ ತಕ್ಷಣ ಕಿಟಕಿಯ ಗಾಜುಗಳನ್ನು ಕೆಳಗಿಳಿಸಿ. ಆಗ ಬಂಡಿಯಲ್ಲಿ ತುಂಬಿರುವ ಬಿಸಿಲಿನ ಜಳ ಹೊರಗೆ ಹೋಗಿ ಗಾಳಿಯಾಡುತ್ತದೆ. ಬಿಸಿಲ ಜಳ ತಕ್ಕ ಮಟ್ಟಿಗೆ ಕಡಿಮೆಯಾಗಿ ಹೊರಗಿನ ಬಿಸುಪು ಮತ್ತು ಬಂಡಿಯೊಳಗಿನ ಬಿಸುಪು ಸರಿಸಮವೆನ್ನಿಸತೊಡಗಿದಾಗ ಗಾಜುಗಳನ್ನು ಮೇಲೆರಿಸಿ ಗಾಳಿ ಪಾಡುಕದ ಏರ್ಪಾಟಿನ ಗುಂಡಿ(Button) ತಿರುಗಿಸಿಕೊಂಡರೆ ಬಂಡಿಯ ಒಳಭಾಗ ಅಂದರೆ ಕೆಬಿನ್ ಕಡಿಮೆ ಹೊತ್ತಿನಲ್ಲಿ ತಂಪಾಗಿ ನಿಮ್ಮ ಪಯಣವನ್ನು ಹಿತಗೊಳಿಸುತ್ತದೆ. ಬಂಡಿಯನ್ನು ಬಹಳ ಹೊತ್ತು ಬಿಸಿಲಿನಲ್ಲೇ ನಿಲ್ಲಿಸಬೇಕಾಗಿ ಬಂದಾಗ ಕಿಟಕಿಯ ಗಾಜನ್ನು ಅರ್ಧ ಇಂಚಿನಶ್ಟು ಕೆಳಗಿಳಿಸಿ ನಿಲ್ಲಿಸಿದರೆ ಒಳಬಾಗ ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು.

  1. ಹೊರಸೂಸುಕ ಮತ್ತು ಅದರ ಹರಿಕ (Radiator and its fluid):

ಬೇಸಿಗೆಯಲ್ಲಿ ಹೆಚ್ಚಿನ ಕಾರುಗಳಲ್ಲಿ ಬಿಣಿಗೆ(Engine) ಬಹಳ ಬಿಸಿಯಾಗಿ ಮುರಿಬೀಳುತ್ತವೆ (Break down). ಬಿಣಿಗೆಯಲ್ಲಿ ಬಳಸಲ್ಪಡುವ ತಂಪಿಯು ಸರಿಯಾದ ಅಳತೆಯಲ್ಲಿ ಇದಲ್ಲೇ ಹೋದಾಗ ಈ ರೀತಿಯಾಗುವುದು ಸಹಜ. ಆಗಾಗ ಬಿಣಿಗೆಯ ತಂಪಿಯು ಸರಿಯಾಗಿ ಸರಿಯಾದ ಅಳತೆಯಲ್ಲಿದೆಯೇ ಎಂದು ಸರಿನೋಡಿಸುವ ಅಗತ್ಯವೂ ಇರುತ್ತದೆ. ನಿಮ್ಮ ಬಂಡಿ 3-4 ವರುಶ ಹಳೆಯದಾಗಿದ್ದರಂತೂ ಹೊರಸೂಸುಕದ ಅಳವುತನ ಕಡಿಮೆಯಾಗಿ ತಂಪಿಯು ಸರಿಯಾಗಿ ಬಿಣಿಗೆಯ ಎಲ್ಲ ಭಾಗಗಳಿಗೆ ತಲುಪದೇ ಇಂತ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಹೊರಸೂಸುಕ ಚೆನ್ನಾಗಿ ಕೆಲಸ ಮಾಡುತ್ತಿದೆಯೇ? ಎಂಬುದನ್ನು ನೆರವುತಾಣದಲ್ಲಿ ಒರೆದು ನೋಡಿಸಿಕೊಳ್ಳಿ. ಕೆಲವೊಮ್ಮೆ ಅಗ್ಗದ ಬೆಲೆಯ ತಂಪಿಗಳನ್ನು ಬಳಸುವುದರಿಂದಲೂ ಹೀಗಾಗುತ್ತದೆ. ನೆರವು ತಾಣಗಳಿಗೆ ಬಂಡಿಗಳನ್ನು ತೆಗೆದುಕೊಂಡು ಹೋದಾಗ ಸರಿಯಾದ ತಂಪಿಗಳನ್ನು ಬಳಸುವಂತೆ ನೆರವುಗಾರರಿಗೆ ಎಚ್ಚರಿಕೆ ನೀಡಬೇಕು.

4.ಕೀಲೆಣ್ಣೆ:

ಬಿಸಿಲಿನಲ್ಲಿ ಬಂಡಿ ಓಡಿಸುವಾಗ ಕೀಲೆಣ್ಣೆಯು ಬಲು ಬೇಗನೆ ಬಿಸಿಯಾಗಿ ಬಿಣಿಗೆ ಮುರಿಬೀಳುವುದು (Break Down) ಖಂಡಿತ. ಆದ್ದರಿಂದ ಬೇಸಿಗೆಕಾಲ ಶುರುವಾಗುತ್ತಿದ್ದಂತೆ ಒಂದೊಮ್ಮೆ ಬಂಡಿಯ ಬಿಣಿಗೆ (Engine), ಸಾಗಣಿ (Transmission) ಮತ್ತು ತಡೆತದ ಏರ್ಪಾಟಿನ (Brake System) ಎಲ್ಲ ಕೀಲೆಣ್ಣೆಗಳನ್ನು ಬದಲಾಯಿಸಿಕೊಂಡರೆ ಒಳ್ಳೆಯದು. ಇದು ಬಂಡಿಯ ಎಲ್ಲ ಬಿಡಿಭಾಗಗಳ ಸವೆತ ತಪ್ಪಿಸಿ ಬಿರು ಬಿಸಿಲಿನಲ್ಲೂ ಬಿಡಿಭಾಗಗಳ ತಾಳಿಕೆ-ಬಾಳಿಕೆಯನ್ನು ಹೆಚ್ಚಿಸುವುದು.

5.ಕೊಳವೆಗಳು ಮತ್ತು ಬಿಣಿಗೆಯ ಪಟ್ಟಿಗಳು (Hoses and Engine belts):

ಬಿಣಿಗೆಯ ಬಿಸುಪಿನಿಂದ ಬಂಡಿಯಲ್ಲಿ ತಂಪಿ (Coolant) ಮತ್ತು ಕೀಲೆಣ್ಣೆ (engine oil) ಸಾಗಿಸಲು ಬಳಸುವ ಕೊಳವೆಗಳು ಕೂಡ ಹಿಗ್ಗಿಕೊಳ್ಳುವುದುಂಟು. ಇದು ಮುಂದೆ ಸೋರಿಕೆಗೆ ಕಾರಣವಾಗಬಹುದು. ಬಂಡಿಯಲ್ಲಿ ಬಳಸುವ ಹೆಚ್ಚಿನ ಕೊಳವೆಗಳು ರಬ್ಬರ್‌ನಿಂದ ಮಾಡಲ್ಪಟ್ಟಿರುತ್ತವೆ ಹೀಗಾಗಿ ಇವುಗಳು ಸುಲಭವಾಗಿ ಹಿಗ್ಗಿ ಸೋರಿಕೆಯಾಗುವಂತಿರುತ್ತವೆ.

ಇದೇ ತೆರನಾಗಿ ರಬ್ಬರ್‌ನಿಂದಾದ ಬಿಣಿಗೆಯ ನೆರವಿ ಪಟ್ಟಿ ಮತ್ತು ಹೊತ್ತು/ತೆರೆ ಪಟ್ಟಿ ಕೂಡ ಬಿಸುಪಿನಿಂದ ಕೆಡುಕುಂಟು ಮಾಡುತ್ತವೆ. ಈ ಎರಡು ಪಟ್ಟಿಗಳಿಗೆ ಪಟ್ಟಿ ಬಿಗಿಯುಕಗಳನ್ನು (Tensioner) ನೀಡಲಾಗಿರುತ್ತದೆ. ಬಿಗಿಯುಕ ಮತ್ತು ಪಟ್ಟಿಗಳು ಯಾವಾಗಲೂ ಒಂದಕ್ಕೊಂದು ತಿಕ್ಕಾಟದಿಂದ(Friction) ಕೂಡಿರುತ್ತವೆ. ಈ ತಿಕ್ಕಾಟದಿಂದ ಬಿಸುಪು ಹೆಚ್ಚುವುದು ಸಾಮಾನ್ಯ. ಇನ್ನೂ ಬೇಸಿಗೆಕಾಲದಲ್ಲಿ ಬಿಣಿಗೆಯ ಪಟ್ಟಿ ಮತ್ತು ಬಿಗಿಯುಕಗಳು ಕಾಯುವುದಲ್ಲದೇ ತಿಕ್ಕಾಟದ ಬಿಸುಪು ಇದನ್ನು ಇಮ್ಮಡಿಗೊಳಿಸಿ ಈ ಎರಡು ಭಾಗಗಳ ಸವೆತಕ್ಕೆ ಕಾರಣವಾಗುವ ಸಾದ್ಯತೆ ಇರುತ್ತದೆ. ಇವುಗಳನ್ನು ಒಂದೊಮ್ಮೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.

6.ಮಿಂಗೂಡು (Battery):

ಅತಿಯಾದ ಬಿಸಿಲು ಮಿಂಗೂಡಿಗೂ ತಕ್ಕುದಲ್ಲ. ಮಿಂಗೂಡಿನ ಒಳಗಿರುವ ಹರಿಕ(fluid) ಬಲು ಬೇಗ ಆವಿಗೊಂಡು ಇದರ ಬಾಳಿಕೆಯನ್ನು ತಗ್ಗಿಸುತ್ತವೆ. ಇನ್ನೊಂದೆಡೆ ಹೆಚ್ಚಿನ ಬಿಸುಪಿನಿಂದ ಮಿಂಗೂಡಿನ ಒಳಗಡೆ ಎಸಕಗಳು(chemical) ಚುರುಕುಗೊಂಡು ಮಿಂಗೂಡು ಅತಿಯಾಗಿ ತುಂಬಿಕೆಯಾಗುವಂತೆ (over charging) ಮಾಡುತ್ತವೆ. ಬಂಡಿಯ ಮಿಂಗೂಡು ಸರಿಯಾಗಿ ತುಂಬಿಕೆಯಾಗುತ್ತಿದೆಯೇ, ಬ್ಯಾಟರಿಯ ತುದಿಗಳು ತುಕ್ಕು ಹಿಡಿದಿವೆಯೇ, ಎಲ್ಲಾದರೂ ಕಸ ಕಡ್ಡಿ ಸಿಕ್ಕಿಕೊಂಡಿದೆಯೇ ಎಂಬುದರ ಮೇಲೆ ಕಣ್ಣಿಟ್ಟಿರಬೇಕು. ಕೆಲವು ಮಿಂಗೂಡುಗಳಲ್ಲಿ ಉಳುಪಿಳಿಕೆಯ (Distilled) ನೀರನ್ನು ಬಳಸುತ್ತಾರೆ ಈ ನೀರಿನ ಮಟ್ಟವನ್ನು ಆಗಾಗ ಗಮನಿಸಿ ಹೆಚ್ಚು ಕಡಿಮೆ ಆಗದಂತೆ ಎಚ್ಚರವಹಿಸಬೇಕು.

7.ಬಣ್ಣ ಮತ್ತು ಹಾಸು (Paint and Coat):

ಬಂಡಿಯ ಬಣ್ಣ ಮತ್ತು ಹಾಸುಗಳ ಮೇಲೂ ಕೂಡ ಬಿಸಿಲಿನ ಪ್ರಭಾವ ಬೀರುತ್ತದೆ. ಹೆಚ್ಚಿನ ಬಿಸಿಲಿನಿಂದ ಬಂಡಿಯ ಹಾಸು ಮತ್ತು ಬಣ್ಣಗಳೆರಡೂ ಮಂದವಾಗಿ ಬಿಡುತ್ತವೆ. ನಿಮ್ಮ ಬಂಡಿಯ ಅಂದ ಹಾಗೂ ಹೊಳಪನ್ನು ಎಂದಿನಂತೆ ಕಾಪಾಡಿಕೊಂಡು ಹೋಗಲು ಒಂದು ಹಾಸನ್ನು ಬಳಿದರೆ ಚೆಂದ. ಇದು ನೇಸರನ ಬಿಸಿ ಕಿರಣಗಳಿಗೆ ಮಯ್ಯೊಡ್ಡಿದ ಪದರವಾಗಿ ಬಣ್ಣ ಮತ್ತು ಹೊಳಪನ್ನು ಉಳಿಸುವಲ್ಲಿ ನೆರವಾಗುವುದು.

 

ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com ,

wallup.net

ಬೈಕ್ ರೂಪದ ಕಾರು

ಜಯತೀರ್ಥ ನಾಡಗೌಡ.

ಯಾವುದೇ ಉದ್ಯಮದಲ್ಲಿ ಹೊಸದಾದ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಆಟೋಮೋಬೈಲ್ ಉದ್ಯಮ ಕೂಡ ಹೊರತಾಗಿಲ್ಲ. ಇಲ್ಲಿಯೂ ಹೊಸತು ಬರುತ್ತಲೇ ಇವೆ. ಕಳೆದ ಕೆಲವು ವರುಶಗಳ ಹಿಂದೆ, ಲಿಟ್ ಮೋಟಾರ್ಸ್ (Lit Motors)ಹೆಸರಿನ ಅಮೇರಿಕಾದ ಹೊಸ ಕಂಪನಿಯೊಂದು ಎಇವಿ ಹೆಸರಿನ ವಿಭಿನ್ನ ಗಾಡಿಯೊಂದನ್ನು ಜಗತ್ತಿಗೆ ಪರಿಚಯಿಸಿತ್ತು. ಅದರ ಬಗ್ಗೆ ತಿಳಿಯೋಣ ಬನ್ನಿ.

ಲಿಟ್ ಮೋಟಾರ್ಸ್ ಎಇವಿ ಹೆಸರಿನ ಬಂಡಿ ಬಲು ವಿಶೇಷ ಬಗೆಯ ಹಮ್ಮುಗೆಯಿಂದ ಕೂಡಿತ್ತು. ಆಟೋನೋಮಸ್ ಎಲೆಕ್ಟ್ರಿಕ್ ವೆಹಿಕಲ್ (Autonomus Electric Vehicle) ಇದರ ಚಿಕ್ಕರೂಪವೇ ಎಇವಿ. ಈ ಗಾಡಿ ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಗಾಡಿಯಾಗಿದ್ದು, ಅಪಘಾತ ಮುಂತಾದವನ್ನು ಸುಲಭ ಎದುರಿಸಿ ಸವಾರರ ಜೀವ ಉಳಿಸಬಲ್ಲುದು ಎನ್ನುತ್ತದೆ ಲಿಟ್ ಮೋಟಾರ್ಸ್ ಕಂಪನಿ. ಸೆಲ್ಫ್ ಬ್ಯಾಲನ್ಸಿಂಗ್ ಗೈರೊ ತಂತ್ರಜ್ಞಾನ(Self balancing Gyro Technology) ಬಳಸಿ ಈ ಗಾಡಿಯನ್ನು ತಯಾರಿಸಲಾಗಿದೆ ಎಂದು ಸಂಸ್ಥಾಪಕರು ಹೇಳಿಕೊಂಡಿದ್ದಾರೆ. ಕಾರಿನಲ್ಲಿರುವ ಭದ್ರತೆ ಮತ್ತು ಆರಾಮದಾಯಕ ವಿಶೇಷತೆಗಳ ಜೊತೆಗೆ ಇಗ್ಗಾಲಿ ಬಂಡಿಯಲ್ಲಿ ಓಡಾಡುವ ರೋಮಾಂಚಕ ಸವಾರಿಯ ಅನುಭವ ಈ ಎಇವಿ ನೀಡಲಿದೆಯಂತೆ. ಎಇವಿಯ ಈಡುಗಾರಿಕೆಯೂ(Design) ಕೂಡ ಬೈಕ್ ಮತ್ತು ಕಾರಿನ ಬೆರಕೆ ಮಾಡಿದಂತೆ ಕಾಣುತ್ತದೆ. ಇದೊಂದು ಬೈಕ್ ರೂಪದ ಕಾರು ಎನ್ನಲು ಅಡ್ಡಿಯಿಲ್ಲ. ಗೈರೋಸ್ಕೋಪ್(Gyroscope) ಅಂದರೆ ಸುತ್ತಳಕಗಳನ್ನು ಬಳಸಿ, ಬಂಡಿ ಅಪಘಾತಕ್ಕೆ ಈಡಾದಾಗ ಓಡಿಸುಗ/ಸವಾರರು ಉರುಳದಂತೆ ಸರಿದೂಗಿಸಿಕೊಂಡು ಹೋಗುವುದೇ ಈ ಬಂಡಿಯನ್ನು ಇತರೆ ಬಂಡಿಗಳಿಂದ ಬೇರೆಯಾಗಿಸುತ್ತದೆ. ಈ ಇಗ್ಗಾಲಿಯ ಕಾರಿಗೆ ಇತರೆ ಬಂಡಿ ಗುದ್ದಿದಾಗ ಬಂಡಿಯಲ್ಲಿನ ಗೈರೋಗಳು ತಿರುಗುವ ಮೂಲಕ ಬಂಡಿಯನ್ನು ಬ್ಯಾಲನ್ಸ್ ಮಾಡುತ್ತವೆ.

ಎಇವಿಯ ಈಡುಗಾರಿಕೆ:

ಒಂದು ಸಾಮಾನ್ಯ ಮಿಂಚಿನ ಕಾರಿನಲ್ಲಿ ಕಂಡುಬರುವ ಬಿಡಿಭಾಗಗಳ 1/10ನೇ ಭಾಗ, ತೂಕದ 1/4ಭಾಗ, ಬ್ಯಾಟರಿ ಮಿಂಕಟ್ಟಿನ 1/6 ಭಾಗಗಳಷ್ಟು ಕಡಿಮೆ ಬಳಸಿ, ಸಾಮಾನ್ಯ ಗಾಡಿಗಿಂತಲೂ 80% ಹೆಚ್ಚಿನ ಅಳುವುತನ(Efficiency) ಈ ಬಂಡಿಗಿದೆಯಂತೆ, ಲಿಟ್ ಮೋಟಾರ್ಸ್‌ನವರು ಹೇಳಿಕೊಂಡಿದ್ದಾರೆ. ಇಬ್ಬರು ಸಾಗಬಹುದಾದ ಈ ಬೈಕ್ ರೂಪದ ಕಾರಿಗೆ ಲೋಹದ ಅಡಿಗಟ್ಟು(Chassis) ಇರಲಿದ್ದು, ಸವಾರರ ಭದ್ರತೆಗೆ ಕಾರಿನಲ್ಲಿರುವಂತೆ ಕೂರುಮಣೆ ಪಟ್ಟಿ(Seat belt), ಗಾಳಿಚೀಲಗಳನ್ನು(Air Bag) ನೀಡಲಾಗಿದೆ. ಗಾಡಿ 45 ಡಿಗ್ರಿ ವಾಲಿಸಿಯೂ(Tilt) ದಟ್ಟಣೆಯ ಮಧ್ಯದಲ್ಲಿ ಸುಲಭವಾಗಿ ಸಾಗಬಹುದು. ಒಮ್ಮೆ ಹುರುಪು(Charge) ತುಂಬಿದರೆ 274 ಕಿಲೋಮೀಟರ್‌ಗಳಷ್ಟು ಓಡುವ ಸಾಮರ್ಥ್ಯ ಹೊಂದಿರುವ ಎಇವಿ, ಪ್ರತಿಘಂಟೆಗೆ 161ಕ್ಕೂ ಹೆಚ್ಚು ಕಿಲೋಮೀಟರ್‌ ಸಾಗಲಿದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಲು 4-8ಗಂಟೆ ತಗಲುತ್ತದೆ, 22.5ಕಿಲೋಮೀಟರ್‌ ಪ್ರತಿ ಕಿಲೋವ್ಯಾಟ್‌ಅವರ್(kWh) ಸಿಗುವ ಮೈಲಿಯೋಟ. ಸಾಮಾನ್ಯ ಮಿಂಚಿನ ಕಾರಿಗಿಂತ  6-8ಪಟ್ಟು ಹೆಚ್ಚು ಅಳುವುತನ ನೀಡಲಿದೆಯಂತೆ, ಲಿಟ್ ಮೋಟಾರ್ಸ್‌ನ ಹುಟ್ಟು ಹಾಕಿದ ಡ್ಯಾನಿಯಲ್ ಕಿಮ್ (Daniel Kim) ಹೇಳಿಕೊಂಡಿದ್ದಾರೆ. ನಗರದ ದಟ್ಟಣೆಗೆ ಇದೊಂದು ಪರ್ಯಾಯವಾಗಿ ಸುಲಭದ ಓಡಾಟಕ್ಕೆ ಜನರಿಗೆ ನೇರವಾಗುವುದು ಖಚಿತ ಎಂಬುದು ಕಿಮ್‌ರವರ ವಿಶ್ವಾಸ.

ಸುಮಾರು ಒಂದುವರೆ ದಶಕದ ಹಿಂದೆ ಕೆಲಸ ಶುರುಮಾಡಿದ್ದ ಕಿಮ್‌ರವರ ತಂಡ ಈ ಬಂಡಿಯನ್ನು ಇನ್ನೂ ಬೀದಿಗಿಳಿಸಿಲ್ಲ. ಹಣಕಾಸಿನ ಸಮಸ್ಯೆ, ಹೂಡಿಕೆದಾರರ ಸೆಳೆಯುವಲ್ಲಿ ತಕ್ಕಮಟ್ಟಿಗೆ ಗೆಲುವು ಕಾಣದ ಕಿಮ್, 2015ರ ಹೊತ್ತಿಗೆ ರಸ್ತೆ ಅಪಘಾತಕ್ಕೀಡಾಗಿ ಕೆಲವು ವರುಶ ಈ ಹಮ್ಮುಗೆಯ ವೇಗಕ್ಕೆ ಅಡೆತಡೆಯುಂಟಾಗಿತ್ತು. ಈಗ ಹೊಸದಾಗಿ ಮತ್ತೆ ತಮ್ಮ ಯೋಜನೆಯನ್ನು ನನಸಾಗುವಲ್ಲಿ ಕೆಲಸ ಮಾಡುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಈ ಗಾಡಿಯನ್ನು ನಾವು ಅಮೇರಿಕಾ ಸೇರಿದಂತೆ ಇತರೆ ದೇಶಗಳ ರಸ್ತೆಯಲ್ಲಿ ಕಾಣುವ ದಿನಗಳು ಬರಲಿವೆಯಂತೆ.

ಮಾಹಿತಿ ಮತ್ತು ತಿಟ್ಟ ಸೆಲೆ: litmotors

lit motors2

 

ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

ಜಯತೀರ್ಥ ನಾಡಗೌಡ.

ಬಿಎಮ್‌ಡಬ್ಲ್ಯೂ (BMW) ಕಾರು ತಯಾರಕ ಕೂಟವಾಗಿ ಹೆಸರು ಮಾಡುವ ಮೊದಲೇ ಇಗ್ಗಾಲಿ ಬಂಡಿ (ಬೈಕ್) ತಯಾರಿಕೆಯಲ್ಲಿ ಹೆಸರುವಾಸಿ ಕೂಟವಾಗಿತ್ತು. ಇಂದಿಗೂ ಬಿಎಮ್‌ಡಬ್ಲ್ಯೂ ಬೈಕ್‌ಗಳಿಗೆ ಭಾರೀ ಬೇಡಿಕೆ. ಬೈಕ್ ತಯಾರಿಕೆಯಲ್ಲಿ ಹಲವಾರು ವರುಶಗಳ ಇತಿಹಾಸ ಹೊಂದಿರುವ ಬಿಎಮ್‌ಡಬ್ಲ್ಯೂ, ಬೈಕ್ ಓಡಿಸುವ ಹವ್ಯಾಸಿಗರಿಗೆ ಬಲು ಅಚ್ಚುಮೆಚ್ಚು. 2016ರ ವರುಶ ಬಿಎಮ್‌ಡಬ್ಲ್ಯೂ ಕೂಟಕ್ಕೆ ನೂರನೇ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಇದನ್ನು ಆಚರಿಸಲೆಂದೇ ಬಿಎಮ್‌ಡಬ್ಲ್ಯೂ ಕೂಟ, ಹೊಸದೊಂದು ಇಗ್ಗಾಲಿ ಬಂಡಿಯ ಹೊಳಹನ್ನು (Concept) ಮುಂದಿಟ್ಟಿತ್ತು. ಬಿಎಮ್‌ಡಬ್ಲ್ಯೂರವರ ಈ ಹೊಸ ಹೊಳಹಿನ ಇಗ್ಗಾಲಿ ಬಂಡಿಯ ಬಗ್ಗೆ ತಿಳಿಯೋಣ ಬನ್ನಿ.

 ಈಗ ಎಲ್ಲವೂ ಚೂಟಿ ಎಣಿಗಳ (Smart Devices) ಕಾಲ. ನಮ್ಮ ಮೊಬೈಲ್, ಎಣ್ಣುಕ (Computer), ಅಲ್ಲದೇ ಮುಂದೊಮ್ಮೆ ಇಂಟರ್‌ನೆಟ್ ಆಫ್ ತಿಂಗ್ಸ್ (Internet of Things) ಮೂಲಕ ನಾವು ಬಳಸುವ ಹೆಚ್ಚಿನ ವಸ್ತುಗಳು ಚೂಟಿಯಾಗಿರಲಿವೆ. ಬಿಎಮ್‌ಡಬ್ಲ್ಯೂ ಇದೀಗ ತನ್ನ ಬೈಕ್‌ಗಳನ್ನು ಚೂಟಿಯಾಗಿಸುವತ್ತ ಸಾಗಿದೆ. ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಕೂಟದ ವಿಷನ್ ನೆಕ್ಸ್ಟ್ 100 (Vision Next 100)  ಹೆಸರಿನ ಈ ವಿಶೇಷ ಬೈಕ್ ಓಡಿಸುಗರಿಗೆ ಬೇರೆಯದೇ ಆದ ಅನುಭವ ನೀಡಲಿದೆ. ಈ ಇಗ್ಗಾಲಿ ಬಂಡಿ ಸೆಲ್ಫ್ ಬ್ಯಾಲನ್ಸಿಂಗ್ (Self Balancing bike) ಎಂಬ ಏರ್ಪಾಟನ್ನು ಹೊಂದುವ ಮೂಲಕ ಪೂರ್ತಿಯಾಗಿ ತನ್ನಿಡಿತದಲ್ಲಿರಲಿದೆ. ಹೊಸಬರೂ ಕೂಡ ಈ ಬಂಡಿಯನ್ನು ಸಲೀಸಾಗಿ ಓಡಿಸಿಕೊಂಡು ಹೋಗುವಂತೆ ಅಣಿಗೊಳಿಸುತ್ತಿದ್ದಾರಂತೆ ಬಿಎಮ್‌ಡಬ್ಲ್ಯೂ ಬಿಣಿಯರಿಗರು(Engineers). ಇದರ ಇನ್ನೊಂದು ಪ್ರಮುಖ ವಿಶೇಷತೆಯೆಂದರೆ ಈ ಇಗ್ಗಾಲಿ ಬಂಡಿ ಓಡಿಸುಗನಿಗೆ ಯಾವುದೇ ಅಡೆತಡೆಯಾಗದಂತೆ ಸುಲಭವಾಗಿ ಕಾಪಾಡಬಲ್ಲುದು. ಹಾಗಾಗಿ ಓಡಿಸುಗರು ತಲೆಗಾಪು (Helmet) ತೊಟ್ಟುಕೊಳ್ಳುವುದು ಬೇಕಿಲ್ಲ.

 ಹೊಸ ಓಡಿಸುಗರಿಗೆ ಇದೊಂದು ವರವಾದರೆ, ಅನುಭವಿ ಓಡಿಸುಗರಿಗೆ ಇದು ಹೆಚ್ಚಿನ ನೆರವು ನೀಡಲಿದೆಯಂತೆ. ಈ ಬೈಕ್‌‌ನೊಂದಿಗೆ ವೈಸರ್ (Visor) ಎಂಬ ಕನ್ನಡಕವನ್ನು ಓಡಿಸುಗರು ಧರಿಸಬೇಕಾಗುತ್ತದೆ. ಈ ವೈಸರ್ ಕನ್ನಡಕ ಸುತ್ತಮುತ್ತಲಿನ ಸ್ಥಿತಿಗತಿ ಬಗ್ಗೆ, ದಾರಿಯ ಬಗ್ಗೆ ಓಡಿಸುಗನಿಗೆ ಮಾಹಿತಿ ಕಳಿಸುತ್ತಿರುತ್ತದೆ. ಇದಕ್ಕೆ ತಕ್ಕಂತೆ ಓಡಿಸುಗರು ಬದಲಾವಣೆ ಮಾಡಿಕೊಂಡು ಬಂಡಿ ಓಡಿಸಿಕೊಂಡು ಹೋಗಬಹುದು. ಓಡಿಸುಗನ ಕಣ್ಣಾಡಿಸುವಿಕೆಯ ಮೂಲಕವೇ ಈ ವೈಸರ್ ಕನ್ನಡಕ ಬಂಡಿಗೆ ಮಾಹಿತಿ ಹಂಚಿಕೊಳ್ಳಲಿದೆ. ಇದಲ್ಲದೇ ಓಡಿಸುಗನ ಬಗೆ (Rider’s Style) ಅರಿಯಬಲ್ಲ ಚಳಕ(technology) ಈ ಇಗ್ಗಾಲಿ ಬಂಡಿ ಹೊಂದಿದ್ದು ಅದಕ್ಕೆ ತಕ್ಕಂತೆ ಸಾಗಬಲ್ಲದಾಗಿದೆ. ಗೂಗಲ್, ಟೆಸ್ಲಾ ಕೂಟದವರು ಬೆಳೆಸುತ್ತಿರುವ ತಂತಾನೇ ಸಾಗಬಲ್ಲ ಕಾರುಗಳಲ್ಲಿರುವ ಚಳಕಗಳಿಗೆ ಈ ಇಗ್ಗಾಲಿ ಬಂಡಿಯ ಚಳಕ ಸರಿಸಾಟಿಯಾಗಿ ನಿಲ್ಲಬಲ್ಲದು.

ವೈಸರ್ ಕನ್ನಡಕ ತೊಟ್ಟು ತನ್ನಿಂದ ತಾನೇ ಸರಿದೂಗಿಸಿಕೊಳ್ಳುವ ಬೈಕ್ ಮೇಲೆ ಸಾಗುತ್ತಿರುವ ಓಡಿಸುಗ

 ಬಿಎಮ್‌ಡಬ್ಲ್ಯೂ ಮುಂದಾಳುಗಳಲ್ಲೊಬ್ಬರಾದ ಹೋಲ್ಗರ್ ಹಾಂಪ್ (Holger Hampf) ಹೇಳುವಂತೆ,”ವಿಷನ್ ನೆಕ್ಸ್ಟ್ 100 ಬಂಡಿಯ, ಮಾಡುಗೆಯ ಜಾಣ್ಮೆಯು (Artificial Intelligence) ತನ್ನ ಸುತ್ತಲಿನ ಬಗ್ಗೆ, ಹೆಚ್ಚು ಹರವಿನ ಮಾಹಿತಿ ಪಡೆಯಬಲ್ಲದಾಗಿದ್ದು, ಬಂಡಿಯ ಮುಂದೆ ಕಾಣಲಿರುವ ದಾರಿಯ ಬಗ್ಗೆ ಕರಾರುವಕ್ಕಾದ ವಿವರ ಓಡಿಸುಗನ ಮುಂದಿಡಲಿದೆ.”  ಸಾಮಾನ್ಯವಾಗಿ ಬಂಡಿಗಳನ್ನು ತಿರುಗಿಸುವಾಗ ಬಂಡಿಯ ವೇಗವನ್ನು ಕಡಿಮೆಗೊಳಿಸಿ ಅದರ ಹಿಡಿಕೆಯನ್ನು(Handle bar) ಸಂಪೂರ್ಣವಾಗಿ ವಾಲಿಸಿಕೊಳ್ಳುತ್ತ ಬಂಡಿಯ ಅಡಿಗಟ್ಟು (Chassis frame) ಪೂರ್ತಿಯಾಗಿ ತಿರುಗುವಂತೆ  ಮಾಡಬೇಕಾಗುತ್ತದೆ. ಹೆಚ್ಚಿನ ವೇಗದಿಂದ ಬಂಡಿಯನ್ನು ತಿರುಗಿಸಬೇಕೆಂದಾಗ ಬಂಡಿಯ ಮೇಲಿನ ಹಿಡಿತ ತಪ್ಪಿ ಬಂಡಿ ಬೇರೆಡೆಗೆ ವಾಲುವ ಸಾಧ್ಯತೆ ಹೆಚ್ಚು. ಆದರೆ ಬಿಎಮ್‌ಡಬ್ಲ್ಯೂ ಕೂಟದವರ ಹೊಳಹಿನ ಬೈಕ್,  “ಫ್ಲೆಕ್ಸ್ ಫ್ರೇಮ್” (Flex Frame) ಚಳಕವನ್ನು ಅಳವಡಿಸಿಕೊಂಡಿದ್ದು ವೇಗದಿಂದ ಬೈಕ್ ತಿರುಗಿಸಿದಾಗಲೂ ಸಲೀಸಾಗಿ ಮುನ್ನುಗ್ಗಲಿದೆ. ಈ ಚಳಕದ ನೆರವಿನಿಂದ, ಬಂಡಿ ಓಡಿಸುಗರು 100 ಮೈಲಿ ಪ್ರತಿ ಗಂಟೆ ವೇಗದಲ್ಲೂ ಯಾವುದೇ ಅಳುಕಿಲ್ಲದೆ ಬಂಡಿಯನ್ನು ಸರ್ರನೆ ತಿರುಗಿಸಿ ಕೊಂಡೊಯ್ಯಬಹುದೆಂಬುದು ಕೂಟದವರ ಅಂಬೋಣ.

” ನಮ್ಮ ಬೈಕುಗಳು, ಹತ್ತಾರು ವರುಶಗಳ ಮುಂದಿರುವ ಸಮಸ್ಯೆಗಳನ್ನು ನೀಗಿಸಬಲ್ಲ ಈಡುಗಾರಿಕೆ (Design) ಹೊಂದಿರುತ್ತವೆ. ಈ ಹೊಸ ಹೊಳಹಿನ ಬಂಡಿಯಲ್ಲಿ ಅಡೆತಡೆಯಿಲ್ಲದ ಓಡಾಟದ ಅನುಭವ ನಿಮ್ಮದಾಗಿರಲಿದೆ, ತಲೆಗಾಪಿನಂತ ಯಾವುದೇ ಕಾಪಿನ ಎಣಿಗಳು (Safety Devices) ನಿಮಗೆ ಬೇಕಿಲ್ಲ “, ಎಂಬುದು ಬಿಎಮ್‌ಡಬ್ಲ್ಯೂ ಈಡುಗಾರಿಕೆಯ ಮುಂದಾಳು ಎಡ್ಗಾರ್ ಹೆನ್ರಿಶ್ (Edgar Heinrich) ಅನಿಸಿಕೆ. 2030-40ರ ಹೊತ್ತಿಗೆ ಈ ಹೊಳಹನ್ನು ದಿಟವಾಗಿಸುವತ್ತ ಬಿಎಮ್‌ಡಬ್ಲ್ಯೂ ಕೂಟ ಹೆಜ್ಜೆ ಇಡುತ್ತಿದೆ. ಅಲ್ಲಿಯವರೆಗೆ ಈ ವಿಶೇಷ ಬೈಕ್‌ಗಾಗಿ ಕಾಯಲೇಬೇಕು.

(** ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಎಂಬುದು ಬಿಎಮ್‌ಡಬ್ಲ್ಯೂ ಬೈಕ್ ಕೂಟದ ಹೆಸರು)

ಮಾಹಿತಿ ಮತ್ತು ತಿಟ್ಟ ಸೆಲೆ: bmw-motorrad

ಕಾರುಗಳಿಂದ ಸಿಗಲಿದೆ ಕುಡಿಯುವ ನೀರು

ಜಯತೀರ್ಥ ನಾಡಗೌಡ.

ಕುಡಿಯುವ ನೀರು ಬಲು ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ಬೇರೆನೂ ಸಿಗದೇ ಇದ್ದರೂ ಇರಬಹುದು, ಆದರೆ ನೀರು ಇಲ್ಲದಿದ್ದರೆ ಬಾಳು ಊಹಿಸಿಕೊಳ್ಳಲು ಆಗದು. ಜಗತ್ತು ಎಷ್ಟೇ ಮುಂದುವರೆದರೂ ಹಲವೆಡೆ ನೀರು ಸಿಗದೇ ಮಂದಿಯ ಪರದಾಟ ಇನ್ನೂ ಮುಂದುವರೆಯುತ್ತಲೇ ಇದೆ. ಅದರಲ್ಲೂ ದೂರದ ಪಯಣಕ್ಕೆ ಕಾರು/ಗಾಡಿಗಳಲ್ಲಿ ತಪ್ಪದೇ ನೀರಿನ ಬಾಟಲಿಗಳನ್ನು ಕೊಂಡೊಯ್ಯಲೇಬೇಕು. ಮರಳುಗಾಡಿನಲ್ಲಿ ಕಾರಿನಲ್ಲಿ ಕುಳಿತು ಸಾಗುತ್ತಿದ್ದೀರಿ ಅಂತ ಅಂದುಕೊಳ್ಳಿರಿ, ನಿಮ್ಮ ನೀರಿನ ಬಾಟಲಿಗಳು ಖಾಲಿ, ಹೊರಗೆ ಎಲ್ಲೂ ಕುಡಿಯಲು ನೀರು ಸಿಗದಂತಿದ್ದರೆ ಹೇಗೆ? ಬಾಯಾರಿಕೆಯನ್ನು ಹೇಗೆ ತಣಿಸುವುದು ಎಂದು ಒದ್ದಾಡುವ ಪರಿಸ್ಥಿತಿ ಅದು. ಆದರೆ, ಇಲ್ಲೊಂದು ಹೊಸ ಚಳಕ ನಮ್ಮ ಮುಂದಿದೆ. ಈಗ ಕಾರಿನ ಮೂಲಕವೇ ಕುಡಿಯುವ ನೀರನ್ನು ಪಡೆಯಬಹುದು! ನೀರಿಗಾಗಿ ಅಲ್ಲಿಲ್ಲಿ ತಡಕಾಡುವ, ಅಂಗಡಿ/ಹೋಟೆಲ್‌ಗಳಲ್ಲಿ ದುಡ್ಡು ಕೊಟ್ಟು ನೀರು ಕುಡಿಯಬೇಕಿಲ್ಲ. ಹೌದು ನೂರಾರು ವರುಶಗಳ ಹಳಮೆ ಹೊಂದಿರುವ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿರುವ ಫೋರ‍್ಡ್ ಕಾರು (Ford) ತಯಾರಕ ಕೂಟ ಇಂತದೊಂದು ಹೊಳಹನ್ನು(Concept) ಎಲ್ಲರ ಮುಂದಿಟ್ಟಿದೆ.

ಎಲ್ಲ ಕಾರುಗಳಲ್ಲಿ ಇದೀಗ ಗಾಳಿ ಪಾಡುಕದ ಏರ್ಪಾಟನ್ನು(Air conditioning system) ಅಳವಡಿಸಿರುತ್ತಾರೆ.  ನೀರಾವಿಯು ಗಾಳಿ ಪಾಡುಕದ ಏರ್ಪಾಟಿನ ಇಂಗುಕದ(Condenser) ಮೇಲೆ ಕೂಡಿಕೊಳ್ಳುತ್ತವೆ. ಹೀಗೆ ಕೂಡಿಕೊಂಡ ನೀರಾವಿ ಸುತ್ತ ಮುತ್ತಲಿನ ವಾತಾವರಣದ ಬಿಸುಪಿನಿಂದ ನೀರಾಗಿ ಮಾರ್ಪಟ್ಟು ನೆಲಕ್ಕೆ ಬೀಳುತ್ತದೆ. ಈ ರೀತಿ ನೀರು ನೆಲಕ್ಕೆ ಬಿದ್ದು ಪೋಲಾಗುವ ಬದಲು ಅದನ್ನೇಕೆ ಬಳಸಬಾರದೆಂದು ಫೋರ‍್ಡ್ ಕಂಪನಿಯ ಪ್ರಮುಖ ಇಂಜಿನೀಯರ್ ಡೌಗ್ ಮಾರ್ಟಿನ್(Doug Martin) ಅವರಿಗೆ ಅನಿಸಿತು. ಈ ದಿಕ್ಕಿನಲ್ಲಿ ಕೆಲಸ ಮಾಡಿ, ನೀರಾವಿಯನ್ನು ಬಳಸಿಕೊಂಡು ಕಾರಿನ ಒಳಗಡೆಯೇ ಕುಡಿಯುವ ನೀರು ಸಿಗುವ ಹಾಗೆ ಮಾಡಬಹುದೆಂದು ಮಾರ್ಟಿನ್ ತೋರಿಸಿಕೊಟ್ಟಿದ್ದಾರೆ.

ದಕ್ಷಿಣ ಅಮೇರಿಕಾದ ಪೆರು ದೇಶದ ಬಿಲ್‌ಬೋರ್ಡ್ ಗಳೇ (Billboard) ಈ ಹೊಳಹಿನ ಹಿಂದಿನ ಸ್ಪೂರ್ತಿ ಎಂದು ಮಾರ್ಟಿನ್ ಹೇಳಿಕೊಂಡಿದ್ದಾರೆ. ಬಿಲ್‌ಬೋರ್ಡ್ ಎಂಬ ಬಯಲರಿಕೆ ಹಲಗೆಗಳು(Advertising Boards/Hoardings) ವಾತಾವರಣದ ಆವಿಯನ್ನು ಕೂಡಿಟ್ಟು, ಆ ನೀರನ್ನು ಸೋಸಿ, ಕುಡಿಯುವ ನೀರನ್ನು ಒದಗಿಸಿಕೊಡುತ್ತವೆ. ಇದೇ ಬಗೆಯಲ್ಲಿ, ಬಂಡಿಯ ಗಾಳಿಪಾಡುಕದ ಏರ್ಪಾಟಿನ ನೀರಾವಿಯನ್ನು ಕೂಡಿಟ್ಟು, ಅದೇ ನೀರನ್ನು ಸೋಸಿ, ನೀರಿನ ಚೀಲದಲ್ಲಿ ಕೂಡಿಟ್ಟು ಬೇಕೆಂದಾಗ ಕುಡಿಯಬಹುದು. ಸಂಗಡಿಗ ಜಾನ್ ರೊಲಿಂಗರ್(John Rollinger) ಜೊತೆಗೂಡಿ ಮೊದಲ ಮಾದರಿಯನ್ನು ತಯಾರಿಸಿ ಓಡಿಸುಗನ ಪಕ್ಕದಲ್ಲಿ ಚಿಕ್ಕ ನಲ್ಲಿಯೊಂದರ ಮೂಲಕ ನೀರನ್ನು ಒದಗಿಸುವ ಏರ್ಪಾಟು ಅಣಿ ಮಾಡಿ ತೋರಿಸಿದ್ದಾರೆ ಮಾರ್ಟಿನ್.

ಈ ಏರ್ಪಾಟು ಎಷ್ಟು ನೀರನ್ನು ಕೊಡುತ್ತದೆ ಎಂಬ ಪ್ರಶ್ನೆಗೆ, ಸುಮಾರು 1.9ಲೀಟರ್ ಎಂದು ಮಾರ್ಟಿನ್ ವಿವರಿಸಿದ್ದಾರೆ. ಬಂಡಿಯ ಗಾಳಿ ಪಾಡುಕದ ಏರ್ಪಾಟಿಗೆ ತಕ್ಕಂತೆ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. ದೂರದ ಪಯಣಗಳಿಗೆ ಇದು ನೆರವಾಗಲಿದೆ. ಬಂಡಿಯಲ್ಲೇ ನೀರು ಸಿಗುವುದರಿಂದ ನೀರಿಗಾಗಿ ಹೆಚ್ಚು ಅಲೆದಾಡಬೇಕಿಲ್ಲ. ಕಾರಿನ AC ಏರ್ಪಾಟಿನ ಇಂಗಿಸುಕದ(Condenser) ಮೂಲಕ ಹೊರಬರುವ ನೀರನ್ನು ಒಂದು ಪುಟ್ಟ ಕೊಳಾಯಿ ಇಲ್ಲವೇ ಬುಟ್ಟಿಯಲ್ಲಿ ಕೂಡಿಡಲಾಗುತ್ತದೆ. ಇದೇ ನೀರನ್ನು ಚೊಕ್ಕಟವಾಗಿಸಲು ಸೋಸುಕವೊಂದನ್ನು ಅಳವಡಿಸಿರಲಾಗುತ್ತದೆ, ಸೋಸುಕದ ಮೂಲಕ ನೀರನ್ನು ಎತ್ತುಕದಿಂದ(Pump) ಓಡಿಸುಗನೆಡೆಯಲ್ಲಿ(Driver Cabin) ನಲ್ಲಿ(tap) ಮೂಲಕ ಪಡೆದುಕೊಳ್ಳಬಹುದು. ನೀರು ಪಡೆಯುವ ಈ ಪುಟ್ಟ ಏರ್ಪಾಟಿಗೆ ಹೆಚ್ಚಿನ ದುಡ್ಡು ಮತ್ತು ಜಾಗದ ಅವಶ್ಯಕತೆಯಿಲ್ಲ. ಒಂದು ನೀರಿನ ಕೊಳಾಯಿ, ಸೋಸುಕ, ನೀರಿನ ಕೊಳವೆ ಮತ್ತು ನಲ್ಲಿಯಂತ ಕಡಿಮೆ ವೆಚ್ಚದ ವಸ್ತುಗಳಿದ್ದರೆ ಆಯಿತು.

ಈಗಾಗಲೇ ಮಾದರಿಯೊಂದನ್ನು ಸಿದ್ಧಪಡಿಸಿ ತೋರಿಸಿರುವ ಮಾರ್ಟಿನ್ ಮತ್ತು ಅವರ ತಂಡ, ಮಾದರಿ ತಯಾರಿಸಿ 7-8 ವರುಷ ಕಳೆದರೂ ಈ ಏರ್ಪಾಟಿನ ಕಾರು ಮಾರುಕಟ್ಟೆಗೆ ಯಾವಾಗ ಹೊರಬರುವುದು ಎಂಬುದನ್ನು ಇನ್ನೂ ಹೊರಹಾಕಿಲ್ಲ. 

 

ಮಾಹಿತಿ ಮತ್ತು ತಿಟ್ಟ ಸೆಲೆ:

http://newatlas.com/on-the-go-h2o-air-conditioner-water/45458/

Thirsty? Try On-The-Go H2O (ford.com)