ಇನ್ಸುಲಿನ್

ಇನ್ಸುಲಿನ್ ಎಂಬುದು ಅರಗುಸುರಿಗೆಯಲ್ಲಿರುವ (Pancreas) ಲ್ಯಾಂಗರಹೆನ್ಸ ಗೂಡುಕಟ್ಟಿನ (islets of Langerhans) ಕೋಶಗಳು ಸುರಿಸುವ ಒಂದು ಸುರಿವೊಯ್ಯುಕ (hormone). ಇನ್ಸುಲಿನ್, ರಕ್ತದಲ್ಲಿ ಸಕ್ಕರೆ (Glucose) ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ. ಏನಾದರು ತಿಂದ ಮೇಲೆ ಇಲ್ಲವೇ ಊಟವಾದ ಮೇಲೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಇನ್ಸುಲಿನ್ ಬಿಡುಗಡೆಗೊಳ್ಳುತ್ತದೆ. ಸಕ್ಕರೆ‌ ಪ್ರಮಾಣ ತಗ್ಗಿದಾಗ ಇನ್ಸುಲಿನ್ ಸುರಿಗೆ ನಿಲ್ಲುತ್ತದೆ. ಈ ಬಗೆಯಲ್ಲಿ ಇನ್ಸುಲಿನ್ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸರಿದೂಗಿಸಿಕೊಂಡು ಇರುತ್ತದೆ.

ಒಂದು ವೇಳೆ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಸುರಿಯದೇ ಹೋದರೆ ಅದು ಸಕ್ಕರೆ ಕಾಯಿಲೆಗೆ (Diabetes mellitus) ಎಡೆ ಮಾಡಿಕೊಡುತ್ತದೆ. ತೀವ್ರವಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚುಚ್ಚುಮದ್ದು ರೂಪದಲ್ಲಿ ಇನ್ಸುಲಿನ್ ನೀಡಬೇಕಾಗುತ್ತದೆ.

insulin mage2(ನಮ್ಮ ಮಯ್ಯಲ್ಲಿರುವ ಇನ್ಸುಲಿನ್ ರಾಸಾಯನಿಕ ಏರ್ಪಾಟು)

ಇನ್ಸುಲಿನ್ ಮೊದಲ ಬಾರಿ ಬೆಳಕಿಗೆ ಬಂದದ್ದು 1921 ರಲ್ಲಿ ಕೆನಡಾ ವಿಜ್ಞಾನಿಗಳಾದ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್‌ ಅವರುಗಳಿಂದ.

Insulin image3(ಫ್ರೆಡರಿಕ್ ಬ್ಯಾಂಟಿಂಗ್ (ಬಲಗಡೆ ಇರುವವರು) ಮತ್ತು ಚಾರ್ಲ್ಸ್ ಬೆಸ್ಟ್‌)

 ಆದರೆ ಇದಕ್ಕೂ ಮೊದಲೇ 1916 ರಲ್ಲಿ ರೊಮೇನಿಯಾದ ವೈದ್ಯ ನಿಕೊಲೈ ಪೌಲೆಸ್ಕು ಅವರು ಪ್ರತ್ಯೇಕವಾಗಿಯೇ ಒಂದು ಅರಕೆ ನಡೆಸುತ್ತಿದ್ದರು. ಅರಗುಸುರಿಗೆಯ ಪ್ಯಾಂಕ್ರಿನ್ ಎಂಬ ಸಾರ ಸತ್ವದ ಅರಕೆಯನ್ನು ಒಂದು ನಾಯಿಯ ಮೇಲೆ ಮಾಡುತ್ತಿರುವಾಗ ಅದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಲ್ಲದು ಎಂದು ಕಂಡುಕೊಂಡರು. ಇದೇ ಹೊತ್ತಲ್ಲಿ ಮೊದಲ ಮಹಾಯುದ್ದ ಶುರುವಾಗಿ ಅವರು ಅದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ ಯುದ್ದ ಮುಗಿದ ಮೇಲೆ ಅವರು ಮರಳಿಬಂದು ಅರಕೆಯಲ್ಲಿ ತೊಡಗಿಕೊಳ್ಳುವಶ್ಟರಲ್ಲಿ ಬ್ಯಾಂಟಿಂಗ್ ಮತ್ತು ಬೆಸ್ಟ ಅವರು ಇನ್ಸುಲಿನ್ ಅನ್ನು ಬೇರ‌್ಪಡಿಸಿ ಹಸನುಗೊಳಿಸಿದ್ದರು. ಇದಕ್ಕೆಲ್ಲ ಹಣಕಾಸು ಮತ್ತು ಪ್ರಯೋಗಾಲಯದ ನೆರವು ನೀಡಿ ದಾರಿತೋರುಕರಾಗಿ ನಿಂತವರು ಸ್ಕಾಟ್ಲೆಂಡ್ ನ ವೈದ್ಯ ಜೆ.ಜೆ.ಆರ್. ಮೆಕ್ಲೊಯ್ಡ. ಇನ್ಸುಲಿನ್ ಅನ್ನು ಅಣಿಗೊಳಿಸಿ ಬಳಕೆಗೆ ತಂದವರು ಕೆನಡಾದ ಕೆಮಿಸ್ಟ ಜೇಮ್ಸ್ ಕೊಲ್ಲಿಪ್.

ಇನ್ಸುಲಿನ್ ಸಕ್ಕರೆ ಕಾಯಿಲೆಯನ್ನು ವಾಸಿಗೊಳಿಸದೇ ಇದ್ದರೂ ಸಾವಿನಂಚಿನಲ್ಲಿದ್ದ ಎಶ್ಟೋ ಮಂದಿಯನ್ನು ಕಾಪಾಡಿ ಹೊಸ ಬದುಕು ನೀಡಿತು. ಮೊದಲೆಲ್ಲಾ ಹಂದಿ, ಕುರಿ, ದನಗಳ ಸುರಿವೊಯ್ಯುಕಗಳಿಂದ ಇನ್ಸುಲಿನ್ ಹೊರತೆಗೆದು ಚುಚ್ಚುಮದ್ದುಗಳನ್ನು ಮಾಡುತ್ತಿದ್ದರು ಆದರೆ 1980ರ ದಶಕದ ಶುರುವಿನಲ್ಲಿ ಕೆಲವೊಂದು ಬಗೆ ಬ್ಯಾಕ್ಟೀರಿಯಾಗಳು ಪೀಳಿಯಲ್ಲಿ ಮಾರ್ಪಾಟು ಹೊಂದಿ ಮನುಷ್ಯರಂತಹ ಇನ್ಸುಲಿನ್ ಅನ್ನು ಉತ್ಪಾದಿಸ ತೊಡಗಿದವು. ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ ಚುಚ್ಚುಮದ್ದಿನ ಮೂಲಕ ಇನ್ಸುಲಿನ್‌ನ ಬಳಕೆ ತುಂಬಾನೇ ಸಾಮಾನ್ಯವಾಗಿ ನಡೆಯುತ್ತಿದೆ.

1923ರಲ್ಲಿ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಜೆ.ಜೆ.ಆರ್. ಮೆಕ್ಲೊಯ್ಡ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಯಿತು. ಮೆಕ್ಲೊಯ್ಡ ಅವರನ್ನು ಹೆಸರಿಸಿದ್ದಕ್ಕೆ ಮೊದಲು ಬ್ಯಾಂಟಿಂಗ್ ಅವರಿಂದನೇ ವಿರೋಧ ವ್ಯಕ್ತವಾಯಿತು. ತಮ್ಮ ಜೊತೆ ಅರಕೆಯಲ್ಲಿ ತೊಡಗಿಕೊಂಡಿದ್ದ ಚಾರ್ಲ್ಸ್ ಬೆಸ್ಟ್ ಅವರನ್ನು ಸೇರಿಸಬೇಕೆಂದು ಅವರ ವಾದವಾಗಿತ್ತು. ಕಡೆಗೆ ಅವರಿಗೆ ಗೌರವ ಸಲ್ಲಿಸಲು ಪ್ರಶಸ್ತಿಯ ಹಣವನ್ನು ಬ್ಯಾಂಟಿಂಗ್ ಅವರು ಬೆಸ್ಟ್ ಅವರೊಂದಿಗೆ ಹಂಚಿಕೊಂಡರು. ಅದರಂತೆ ಮೆಕ್ಲೊಯ್ಡ ಅವರು ಪ್ರಶಸ್ತಿ ಹಣವನ್ನು ಕೊಲ್ಲಿಪ್ ಅವರೊಂದಿಗೆ ಹಂಚಿಕೊಂಡರು. ಇದೆಲ್ಲದರ ನಡುವೆ ನಿಕೊಲೈ ಪೌಲೆಸ್ಕು ಅವರು ನೊಬೆಲ್ ಕಮಿಟಿಗೆ ಬರೆದು ತಾವು ಮೊದಲೇ ಮಾಡಿದ್ದ ಅರಕೆಯ ಬಗ್ಗೆ ತಿಳಿಸಿ ತಮ್ಮನ್ನು ಪ್ರಶಸ್ತಿಗೆ ಪರಿಗಣಿಸಬೇಕೆಂದು ಕೋರಿಕೊಂಡರೂ ಕಮಿಟಿಯ ಅದನ್ನು ತಿರಸ್ಕರಿಸಿತ್ತು.

(ಮಾಹಿತಿ ಸೆಲೆ: brittannica.com, diabetes.co.uk, nobelprize.org) (ಚಿತ್ರ ಸೆಲೆ: diabetes.co.uk , thoughtco.com, shutterstock.com)

Bookmark the permalink.

Comments are closed.

Comments are closed