ಆಸ್ಪ್ರಿನ್ ಮಾತ್ರೆಯ ಇತಿಹಾಸ

ನೋವು ಎಂಬುದು ಯಾರಿಗಾದರೂ ಆಗುವಂತದ್ದು. ಆರಂಭದಿಂದಲೂ ಮನುಷ್ಯ ನೋವಿನಿಂದ ತಪ್ಪಿಸಿಕೊಳ್ಳಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಲೇ ಬಂದಿದ್ದಾನೆ. ಮೊದಲಿಗೆಲ್ಲ ಮತ್ತೇರಿಸುವ ವಸ್ತುಗಳೇ ನೋವಳಿಸುವ ಮದ್ದುಗಳಾಗಿ ಬಳಕೆಯಲ್ಲಿದ್ದವು. ರಸಾಯನಶಾಸ್ತ್ರ ಮುಂದುವರೆದಂತೆಲ್ಲ ಹೊಸ ಹೊಸ ಮದ್ದುಗಳು ಬೆಳಕಿಗೆ ಬರಲು ಆರಂಭಿಸಿದವು. ಜಗತ್ತಿನ ಅತಿ ಹೆಚ್ಚು ಬಳಕೆಯಲ್ಲಿರುವ ನೋವಳಿಕಗಳಲ್ಲಿ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ (ಆಸ್ಪ್ರಿನ್ – Aspirin) ಕೂಡ ಒಂದು. ಇದನ್ನು ಕಂಡು ಹಿಡಿದದ್ದು ಜರ್ಮನಿಯ ಫೆಲಿಕ್ಸ್ ಹಾಫಮನ್ ಎಂಬುವವರು.

1024px-Aspirine_macro_shot

ಹಾಫಮನ್ ಹುಟ್ಟಿದ್ದು 1878ರಲ್ಲಿ ಜರ್ಮನಿಯ ಸ್ವಾಬಿಯಾ ಪ್ರಾಂತ್ಯದ ಲುಡ್ವಿಗ್ ಎಂಬಲ್ಲಿ. ಮೊದಲು ಬೇರೆ ಬೇರೆ ಫಾರ್ಮಸಿಗಳಲ್ಲಿ ಕೆಲಸ ಮಾಡಿದ ನಂತರ ಮ್ಯೂನಿಕ್ ಯುನಿವರ್ಸಿಟಿಯಲ್ಲಿ ರಸಾಯನಶಾಸ್ತ್ರದ ಪದವಿಯನ್ನು 1893ರಲ್ಲಿ ಪಡೆದರು. ಆಮೇಲೆ ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಅಡಾಲ್ಫ್ ವಾನ್ ಬೇಯರ್ ಅವರ ಶಿಫಾರಸ್ಸಿನಿಂದ ಬಾಯರ್ (Bayer) ಕಂಪನಿಯಲ್ಲಿ ಹೊಸದಾಗಿ ಹುಟ್ಟುಹಾಕಲಾಗಿದ್ದ ಫಾರ್ಮಸಿ ಅರಕೆ ವಿಭಾಗದಲ್ಲಿ ಕೆಲಸ ದೊರೆಯಿತು.

1280px-Bayer_Aspirin_Pills
1897ರಲ್ಲಿ ಹಾಫಮನ್ ಅವರು ಬೇರೆ ಬೇರೆ ಅಣುಕೂಟಗಳನ್ನು (molecule) ಅಸಿಟೈಲ್(acetyl) ಗುಂಪಿನೊಂದಿಗೆ ಸೇರಿಸಿ ಅವುಗಳ ಬಲಪಡಿಸುವಿಕೆ ಇಲ್ಲವೇ ನಂಜು ಕುಗ್ಗಿಸುವಿಕೆಯನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಬಾಯರ್ ಕಂಪನಿಯು ಈ ಬಗೆಯಲ್ಲಿ ಪ್ರಯತ್ನಿಸಿ ಅದಾಗಲೇ ಜ್ವರಕ್ಕಾಗಿ ಫೆನಾಸಿಟಿನ್ (Phenacetin) (1888) ಮತ್ತು ಭೇದಿ ಚಿಕಿತ್ಸೆಗಾಗಿ ಟ್ಯಾನಿಗ್ (Tannig) (1894) ಎಂಬ ಅಸಿಟೈಲ್ಗೊಳಿಸಲಾದ ದ್ರವ್ಯಗಳನ್ನು ಬಳಕೆಗೆ ತಂದಿತ್ತು. ಇದೇ ಹಾದಿಯಲ್ಲಿ ಹಾಫಮನ್ ಕೂಡ ಪ್ರಯತ್ನಿಸುತ್ತಿದ್ದರು. ಇನ್ನೊಂದು ಮೂಲದ ಪ್ರಕಾರ ಹಾಫಮನ್ ತಮ್ಮ ತಂದೆಯ ಕೀಲು ನೋವು ಬೇನೆಗೆ ಈ ಅರಕೆ ನಡೆಸುತ್ತಿದ್ದರು ಅನ್ನಲಾಗುತ್ತದೆ. ಶತಮಾನಗಳಿಂದ ಬೈಚೆ ಮರದ ತೊಗಟೆಯು (willow bark) ನೋವಳಿಸುವ ಒಂದು ಔಷಧಿಯಾಗಿ ಬಳಕೆಯಲ್ಲಿತ್ತು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಹಲವಾರು ಅರಕೆಗಾರರು ಬೈಚೆಮರದ ತೊಗಟೆಯಿಂದ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಬೇರ್ಪಡಿಸಿ ಬಳಕೆಗೆ ತಂದಿದ್ದರು. 1874ರಲ್ಲಿ ಹೇಡನ್ ಕಂಪನಿಯು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಮಾರುಕಟ್ಟೆಗೆ ತಂದಿತ್ತು ಆದರೆ ಬಳಸಿದ ರೋಗಿಗಳಿಗೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡಿತ್ತು. ಈ ಬೆಳವಣಿಗೆಗಳನ್ನು ಕಂಡು ಹಾಫಮನ್ ಅವರು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಅಸಿಟೈಲ್ಗೊಳಿಸಲು ಆರಂಭಿಸಿ ಗೆಲವು ಕಂಡರು.

ಈ ವಿಷಯ ತಿಳಿಯುತ್ತಿದ್ದಂತೆ ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಮೊದಲು ತಮ್ಮ ಮೇಲೆಯೇ ಪ್ರಯೋಗಿಸಿ ನಂತರ ಹಲವಾರು ಪ್ರಾಣಿ ಪ್ರಯೋಗಗಳನ್ನು ಮಾಡಿ ಆಮೇಲೆ ರೋಗಿಗಳ ಮೇಲೆ ಪ್ರಯೋಗಿಸಿದರು. ಎಲ್ಲವೂ ಯಶಸ್ವಿಯಾದ ಮೇಲೆ 1899ರಲ್ಲಿ ಬಾಯರ್ ಕಂಪನಿಯು ಈ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಆಸ್ಪ್ರಿನ್ (Asprin) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತಂದಿತು. ಮಾರುಕಟ್ಟೆಗೆ ಅಡಿಯಿಟ್ಟ ಕೆಲವೇ ದಿನಗಳಲ್ಲಿ ತುಂಬ ಮಂದಿಮೆಚ್ಚುಗೆ ಪಡೆಯಿತು. ಮೊದಲು ಪುಡಿಯ ರೂಪದಲ್ಲಿ ಇದ್ದದ್ದು ಕೆಲವು ವರುಶಗಳಲ್ಲಿ ಮಾತ್ರೆಯ ರೂಪವನ್ನು ಪಡೆಯಿತು. ಕಂಡುಹಿಡಿದು 100 ವರುಶಕ್ಕಿಂತ ಹೆಚ್ಚಾದರೂ ಇದರ ಮಂದಿಮೆಚ್ಚುಗೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಜಗತ್ತಿನಲ್ಲಿ ಈಗಲೂ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಲ್ಲಿದೆ. ಇಂತ ದ್ರವ್ಯವನ್ನು ಕಂಡುಹಿಡಿದಾಗ ಹಾಫಮನ್ ರಿಗೆ ಬರೀ 29 ವರುಶ.

ಬಾಯರ್ ಕಂಪನಿಯು ಇದರ ಪೇಟೆಂಟ್‍ಗಾಗಿ ಪ್ರಯತ್ನಿಸಿದರೂ ಅದಾಗಲೇ ಬೇರೆಯವರು ಇದನ್ನು ಸಾಧಿಸಿದ್ದಾರೆ ಎಂಬ ಕಾರಣದಿಂದ ಜರ್ಮನಿಯಲ್ಲಿ ನಿರಾಕರಿಸಲಾಯಿತು. ಆದರೆ ಬೇರೆಯವರು ಸಿದ್ಧಪಡಿಸಿದ್ದ ಮಾದರಿಯು ಹಾಫಮನ್ ಸಿದ್ಧಪಡಿಸಿದ್ದ ಹಾಗೆ ಶುದ್ಧ ಮತ್ತು ಪರಿಣಾಮಕಾರಿಯಾಗಿರಲಿಲ್ಲ. ಇಷ್ಟಾದರೂ ಕಂಪನಿಯು ತಲೆಕೆಡಿಸಿಕೊಳ್ಳದೇ ಇದರ ವ್ಯಾವಹಾರಿಕ ಲಾಭವನ್ನು ಅರಿತು ಅಮೆರಿಕ ಮತ್ತು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಲಗ್ಗೆಯಿಟ್ಟಿತು. ಅಂದುಕೊಂಡಂತೆ ಅದಕ್ಕೆ ಲಾಭವಾಗುವುದರ ಜೊತೆಗೆ ಅಮೆರಿಕದಲ್ಲಿ ಪೇಟೆಂಟ್ ಕೂಡ ದೊರೆಯಿತು ಮತ್ತು 1900 ರಿಂದ 1917ವರೆಗೆ ತಯಾರಿಕೆಯ ಏಕಸ್ವಾಮ್ಯವನ್ನೂ ಪಡೆಯಿತು. ಆಸ್ಪ್ರಿನ್ ಮಾತ್ರೆಯು ಬಾಯರ್ ಕಂಪನಿಯನ್ನು ಜಗತ್ತಿನಾದ್ಯಂತ ಮನೆಮಾತಾಯಿಸಿತು.

1948ರಲ್ಲಿ ಕ್ಯಾಲಿಫೋರ್ನಿಯಾದ ವೈದ್ಯ ಡಾ.ಲಾರೆನ್ಸ ಕ್ರಾವನ್ ಅವರು ಆಸ್ಪ್ರಿನ್ ಮಾತ್ರೆಯು ಹೃದಯಾಘಾತವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆಯೆಂದೂ ಜಗತ್ತಿಗೆ  ತೋರಿಸಿಕೊಟ್ಟರು. ಆಗ ಅದರ ಬಳಕೆ ಇನ್ನೂ ಹೆಚ್ಚತೊಡಗಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ನೋವಳಿಕವಾಗಿಯೇ ಹೆಚ್ಚು ಬಳಕೆಯಿದ್ದರೂ ಇಂಡಿಯಾದಲ್ಲಿ ಹೃದಯಾಘಾತ ಮತ್ತು ಪಕ್ಷಾಘಾತ (stroke) ತಡೆಯಲು ಹೆಚ್ಚು ಬಳಸಲಾಗುತ್ತದೆ.

1949ರಲ್ಲಿ ಬಾಯರ್ ಕಂಪನಿಯ ಮಾಜಿ ಕೆಲಸಗಾರನಾದ ಅರ್ಥರ್ ಐಶನ್ಗ್ರನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ನಿಜವಾದ ತಯಾರಕ ತಾನಾಗಿದ್ದು ಹಾಫಮನ್ ಅಲ್ಲ ಎಂಬ ವಾದ ಇಟ್ಟರು. ಎಲ್ಲ ಯೋಜನೆ ಮತ್ತು ನಿರ್ದೆಶನ ಮಾಡಿದ್ದು ತಾವು ಮತ್ತು ಹಾಫಮನ್ ಬರೀ ಪ್ರಾಥಮಿಕ ಹಂತದ ತಯಾರಿಕೆಯಲ್ಲಿ ಮಾತ್ರ ತೊಡಗಿಕೊಂಡಿದ್ದರು ಅಂತ ತಮ್ಮ ವಾದದಲ್ಲಿ ಹೇಳಿದರು. ಆದರೆ ಯಾರೂ ಈ ಬಗ್ಗೆ ಗಮನ ಕೊಡಲಿಲ್ಲ. ಮುಂದೆ 1999 ಮತ್ತೆ ಈ ವಿವಾದ ಬುಗಿಲೆದ್ದಾಗ ಬಾಯರ್ ಕಂಪನಿಯು ಸ್ಪಷ್ಟೀಕರಣ ನೀಡಿ ಫೆಲಿಕ್ಸ ಹಾಫಮನ್ ಅವರೇ ಆಸ್ಪ್ರಿನ್ ಮಾಡುಗರು ಎಂದು ಈ ವಿವಾದಕ್ಕೆ ಕೊನೆ ಹಾಡಿದರು. ಈಗಲೂ ಕೆಲವರು ಅರ್ಥರ್ ಐಶನ್ಗ್ರನ್ ಅವರು ಯಹೂದಿಯಾದ್ದರಿಂದ ಬೇಕಂತಲೇ ಅವರ ಹೆಸರನ್ನು 1930 ರ ಈಚೆಗೆ ಕೈಬಿಡಲಾಗಿದೆ ಎಂದು ಹೇಳುತ್ತಾರೆ.

ಇನ್ನೊಂದು ಮುಖ್ಯವಾದ ದ್ರವ್ಯವೊಂದನ್ನು ಹಾಫಮನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ಜೊತೆ ಜೊತೆಗೆ ಕಂಡುಹಿಡಿದಿದ್ದರು. ಅದುವೇ ಡೈಅಸಿಟೈಲ್ ಮಾರ‌್ಫಿನ್ (Diacetyl morphine). ಮಂದಿಯ ಬಾಯಲ್ಲಿ ಹೆರಾಯಿನ್ (Heroin) ಅಂತಲೇ ಚಿರಪರಿಚಿತ. ಜಗತ್ತು ಕಂಡ ಕಡು ಅಪಾಯಕಾರಿ ಮಾದಕ ದ್ರವ್ಯ. ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಇದೇ ಹೊತ್ತಲ್ಲಿ ಹಾಫಮನ್ ರಿಗೆ ಇನ್ನೊಂದು ಕೆಲಸ ಕೊಟ್ಟಿದ್ದರು. ಡ್ರೆಸರ್ ಅವರು ಗಸಗಸೆ ಬೀಜದಿಂದ ಹೊರತೆಗೆದ ಕೋಡೀನ್ (Codeine) ಎಂಬ ದ್ರವ್ಯದ ಪರಿಣಾಮ ಅರಿತಿದ್ದರು. ಅದು ಗಸಗಸೆ ಬೀಜದಿಂದಲೇ ಹೊರತೆಗೆದ ಮಾರ್ಫಿನ್ (Morphine) ಗಿಂತ ಅಶಕ್ತವಾಗಿತ್ತು. ಆದ್ದರಿಂದ ಒಂದು ಒಳ್ಳೆ ಬಗೆಯ ಔಷಧಿ ದ್ರವ್ಯ ಮಾಡಲು ಈ ಮಾರ್ಫಿನ್ ಅನ್ನು ಅಸಿಟೈಲ್ಗೊಳಿಸಲು ಹೇಳಿದ್ದರು. ಅಂತೆಯೇ ಹಾಫಮನ್ ಈ ಕೆಲಸದಲ್ಲಿ ತೊಡಗಿಕೊಂಡು ಮುಗಿಸಿದಾಗ ಹುಟ್ಟಿದ್ದೇ ಹೆರಾಯಿನ್. ಆವಾಗ ಯಾರಿಗೂ ಕೂಡ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇದರ ಕೆಟ್ಟ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳುವಳಿಕೆ ಮೂಡವಷ್ಟರಲ್ಲಿ ಬಾಯರ್ ಕಂಪನಿಯು ಅದಾಗಲೇ ಸಾಕಷ್ಟು ಪ್ರಮಾಣದ ಹೆರಾಯಿನ್ ಅನ್ನು ಕೆಮ್ಮಿನ ಔಷಧಿ ರೂಪದಲ್ಲಿ ಮಾರಾಟ ಮಾಡಿಯಾಗಿತ್ತು. ನಂತರ ಜಗತ್ತಿನಲ್ಲೆಡೆ ಈ ದ್ರವ್ಯವನ್ನು ನಿರ್ಬಂಧಿಸಲಾಯಿತು.

ಹೀಗೆ ಈ ಎರಡು ಬಗೆಯ ದ್ರವ್ಯಗಳು ಒಂದು ಆಸ್ಪ್ರಿನ್ ಮತ್ತೊಂದು ಹೆರಾಯಿನ್ ಒಬ್ಬ ವ್ಯಕ್ತಿಯಿಂದಲೇ ಹುಟ್ಟಿಕೊಂಡವು. ಒಂದು ಜಗತ್ತನ್ನು ನೋವಿನಿಂದ ದೂರವಿಟ್ಟರೆ ಮತ್ತೊಂದು ಜಗತ್ತನ್ನು ನೋವಿನ ಕೂಪಕ್ಕೆ ತಳ್ಳಿತು.

1928ರಲ್ಲಿ ಹಾಫಮನ್ ನಿವೃತ್ತಿ ಹೊಂದಿದಾಗ ಆಸ್ಪ್ರಿನ್ ಜಗತ್ತಿನೆಲ್ಲೆಡೆ ಪ್ರಸಿದ್ಧಿಯಾಗಿತ್ತು, ಫೆಲಿಕ್ಸ್ ಹಾಫಮನ್ ರನ್ನು ಹೊರತುಪಡಿಸಿ! ಹೌದು! ಆ ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಬೆಳಗಲೇ ಇಲ್ಲವಂತೆ. ಮುಂದೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಹಾಫಮನ್ ಕೊನೆಯವರೆಗೂ ಮದುವೆ ಆಗಲೇ ಇಲ್ಲ.  1946ರ ಪೆಬ್ರವರಿ 8ರಂದು ಸ್ವಿಜರ್ಲೆಂಡ್ ನಲ್ಲಿ ಅವರು ಕೊನೆಯುಸಿರೆಳೆದರು.

(ಸೆಲೆ: www.sciencehistory.org, www.ideafinder.com, www.wikipedia.org)

Bookmark the permalink.

Comments are closed.

Comments are closed