ಹುರಿಕಟ್ಟಿನ ಏರ‍್ಪಾಟು – ಮೂಳೆಗಳು 2

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ 2: 

ಮೂಳೆಗಳು – ಬಾಗ 2 :                                                                                                                                                                     (ಮೂಳೆಗಳು – ಬಾಗ 1 >>)

ಹುಟ್ಟುವಾಗ ಮನುಶ್ಯರಲ್ಲಿ 300ಕ್ಕೂ ಹೆಚ್ಚು ಎಲುಬುಗಳು ಇರುತ್ತವೆ. ಹರೆಯ ಹೆಚ್ಚಿದಂತೆ ಒಂದಶ್ಟು ಎಲುಬುಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ ಸರಾಸರಿ 206 ಎಲುಬುಗಳಿರುತ್ತವೆ. ನಮ್ಮ ಮಯ್ಯಲ್ಲಿ ಜೋಡಿಸಲ್ಪಟ್ಟಿರುವ ವಿದಾನಕ್ಕೆ ಅನುಗುಣವಾಗಿ ಎಲುಬುಗಳನ್ನು ಎರಡು ಗುಂಪುಗಳಾಗಿ ತೋರಿಸಬಹುದಾಗಿದೆ. ಅವುಗಳೆಂದರೆ,

1) ನಟ್ಟೊಡಲ ಎಲುಬುಗಳು (axial skeleton)

2) ಕಯ್ಕಾಲುಗಳ ಎಲುಬುಗಳು (appendicular skeleton)

1ನಟ್ಟೊಡಲ ಎಲುಬುಗಳು ನಮ್ಮ ಮಯ್ ನಡು ಬಾಗದಲ್ಲಿದ್ದು, 80 ಎಲುಬುಗಳಿಂದ ಮಾಡಲ್ಪಟ್ಟಿರುತ್ತವೆ

  • ತಲೆಬುರುಡೆ (skull)
  • ನಾಲಗೆಲ್ಲು (hyoid)
  • ಆಲಿಕೆಯ ಕಿರ್‍ಮೂಳೆಗಳು (auditory ossicles)
  • ಪಕ್ಕೆಲುಬುಗಳು (ribs)
  • ಎದೆಚಕ್ಕೆ (sternum)
  • ಬೆನ್ನೆಲುಬಿನ ಕಂಬ (vertebral column)

ಕಯ್ಕಾಲುಗಳ ಎಲುಬುಗಳು (appendicular skeleton) ನಟ್ಟೊಡಲಿನ ಇಕ್ಕೆಲಗಳಲ್ಲಿ ಇರುತ್ತವೆ. ಇವುಗಳಲ್ಲಿ ಕಂಡು ಬರುವ ಒಟ್ಟು ಎಲುಬುಗಳ ಸಂಕೆ 126.

  • ಕಯ್ಗಳು (upper limbs)
  • ಕಾಲುಗಳು (lower limbs)
  • ಕೀಳ್ಗುಳಿಯ ಸುತ್ತುಕಟ್ಟು (pelvic girdle)
  • ಎದೆಯ ಕಟ್ಟು (pectoral girdle)

ತಲೆಬುರುಡೆ (skull):

bones_2_2ತಲೆಬುರುಡೆಯು 22 ಎಲುಬುಗಳನ್ನು ಹೊಂದಿರುತ್ತದೆ. ಕೆಳದವಡೆಯನ್ನು (mandible) ಹೊರತುಪಡಿಸಿ, ಉಳಿದೆಲ್ಲ ತಲೆಬುರುಡೆಯ ಮೂಳೆಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ (fused). ಮಕ್ಕಳಲ್ಲಿ ತಲೆಬುರುಡೆಯ ಎಲುಬುಗಳು ಒಂದಕ್ಕೊಂದು ಬೆಸೆದುಕೊಂಡಿರದೇ (not fused), ಬೇರೆ-ಬೇರೆಯಾಗಿರುತ್ತವೆ; ಇದು ಮಕ್ಕಳಲ್ಲಿ ತಲೆಬುರುಡೆ ಹಾಗು ಮಿದುಳು ಬೆಳೆಯಲು ನೆರವಾಗುತ್ತದೆ. ತಲೆಬುರುಡೆಗೆ ಹೆಚ್ಚಿನ ಬಲ ಹಾಗು ಮಿದುಳಿಗೆ ಕಾಪುಗಳನ್ನು (protection) ಒದಗಿಸಲು, ಈ ಎಲುಬುಗಳು ದೊಡ್ಡವರಲ್ಲಿ ಬೆಸೆದುಕೊಂಡಿರುತವೆ.

ಕೆಳದವಡೆಯು (mandible), ಬೆಸೆದುಕೊಂಡಿರುವ ತಲೆಬುರುಡೆಯ ಎಲುಬುಗಳಲ್ಲಿ ಒಂದಾದ ಕಣತಲೆಯ ಎಲುಬಿಗೆ (temporal bone), ಜಂಟಿಯ ಮೂಲಕ ಜೋತುಬಿದ್ದಿರುತ್ತದೆ. ತಲೆಬುರುಡೆಯ ಮೇಲಿನ ಬಾಗವನ್ನು ಬುರುಡೆಚಿಪ್ಪು (cranium) ಎಂದು ಕರೆಯುತ್ತಾರೆ; ಇದು ಹೊರಗಿನ ಪೆಟ್ಟು ಹಾಗು ಒತ್ತಡಗಳಿಂದ ಮಿದುಳನ್ನು ಕಾಪಾಡುತ್ತದೆ. ತಲೆಬುರುಡೆಯ ಮುಂಬಾಗದ ಹಾಗು ಕೆಳಬಾಗದ ಎಲುಬುಗಳನ್ನು ಮುಂದಲೆ ಇಲ್ಲವೇ ಮೊಗದ ಮೂಳೆಗಳೆಂದು (facial bones) ಗುರುತಿಸಲಾಗಿದ್ದು, ಇವು ಕಣ್ಣು, ಮೂಗು, ಹಾಗು ಬಾಯಿಗಳ ಆಕಾರ ಹಾಗು ಇರುವಿಕೆಗೆ (support/stability) ನೆರವಾಗುತ್ತವೆ.

ನಾಲಗೆಲ್ಲು (hyoid):

bones_2_3ನಾಲಗೆಲ್ಲು (hyoid), ”U” ಆಕಾರದಲ್ಲಿರುತ್ತದೆ. ಇದನ್ನು ಕೆಳದವಡೆಯ ಕೆಳಗೆ ಕಾಣಬಹುದು. ಇತರ ಎಲುಬುಗಳಿಗೆ ಹೋಲಿಸಿದರೆ, ನಾಲಗೆಲ್ಲು (hyoid), ಯಾವುದೇ ಎಲುಬು/ಮೆಲ್ಲೆಲುಬುಗಳ ಜೊತೆ ಕೊಂಡಿಯಾಗಿರುವುದಿಲ್ಲ. ಆದ್ದರಿಂದ ಇದನ್ನು ತೇಲೆಲುಬು (floating bone) ಎಂದು ಕರೆಯುತ್ತಾರೆ. ಈ ಎಲುಬು ಉಸಿರ್‍ಗೊಳವೆಯನ್ನು (trachea) ತೆರೆದ ಸ್ತಿತಿಯಲ್ಲಿ ಇಡಲು ಹಾಗು ನಾಲಗೆಯ ಮಾಂಸಗಳಿಗೆ ಆಸರೆಯನ್ನು ಕೊಡಲು ನೆರವಾಗಿದೆ.

ಆಲಿಕೆಯ  ಕಿರ‍್ಮೂಳೆಗಳು (auditory ossicles):

bones_2_4ಬಡಿಕಿರ‍್ಮೂಳೆ/ಬಡಿಕೆ (malleus), ಅಡಿಕಿರ‍್ಮೂಳೆ/ಅಡಿಕೆ (incus) ಹಾಗು ಅಂಕಣಿ (stapes) – ಇವುಗಳನ್ನು ಒಟ್ಟಾಗಿ ಆಲಿಕೆಯ ಕಿರ‍್ಮೂಳೆಗಳು (auditory ossicles) ಎಂದು ಕರೆಯಲಾಗುತ್ತದೆ. ಇವು ಮನುಶ್ಯರ ಮಯ್ಯಲ್ಲಿರುವ ತುಂಬಾ ಸಣ್ಣ ಮೂಳೆಗಳಾಗಿವೆ. ಇವುಗಳು ಕಣತಲೆಯ ಎಲುಬಿಗೆನೊಳಗೆ (temporal bone) ಇರುವ ಸಣ್ಣ ಗೂಡಿನಲ್ಲಿ ಕಾಣಸಿಗುತ್ತವೆ. ಈ ಎಲುಬುಗಳು ಸಪ್ಪಳವನ್ನು ಕಿವಿದಮಟೆಯಿಂದ (ear drum) ಕಿವಿಯ ಒಳಬಾಗಕ್ಕೆ ರವಾನಿಸಲು ಹಾಗು ಸದ್ದನ್ನು ಹಿಗ್ಗಿಸಲು (amplify) ನೆರವಾಗುತ್ತವೆ.

ಬೆನ್ನೆಲುಬುಗಳು:  (ಚಿತ್ರ 1 ಮತ್ತು 5 )

bones_2_526 ಬೆನ್ನೆಲುಬುಗಳು ಒಟ್ಟುಗೂಡಿ ಮನುಶ್ಯನ ಬೆನ್ನೆಲುಕಂಬವನ್ನು (vertebral column) ಮಾಡುತ್ತವೆ. ಬೆನ್ನೆಲುಕಂಬದ ನಡುಬಾಗದಲ್ಲಿರುವ ಬೆನ್ನೆಲುಕಾಲುವೆಯಲ್ಲಿ (spinal canal), ಮಿದುಳುಬಳ್ಳಿಯನ್ನು (spinal cord) ಕಾಣಬಹುದು. ಬೆನ್ನೆಲುಕಂಬವು ಮಿದುಳುಬಳ್ಳಿಗೆ ಆಸರೆ ಹಾಗು ಕಾಪುವಿಕೆಯನ್ನು ಒದಗಿಸುತ್ತದೆ. ಬೆನ್ನೆಲುಬುಗಳು ನೆಲೆಸಿರುವ  ಬೆನ್ನಿನ ಬಾಗ ಹಾಗು ಆಕಾರದ ಮೇಲೆ, ಅವುಗಳನ್ನು ಕೆಳಕಂಡಂತೆ ಗುಂಪಿಸಬಹುದಾಗಿದೆ.

  • ಕೊರಳಿನ ಬೆನ್ನೆಲುಬುಗಳು (cervical/neck) – 7
  • ಎದೆಗೂಡಿನ ಬೆನ್ನೆಲುಬುಗಳು (thoracic/chest) – 12
  • ಸೊಂಟದ ಬೆನ್ನೆಲುಬುಗಳು (lumbar/lower back) – 5
  • ಮಡಿ (sacrum) – 1
  • ಬಾಲದ ಎಲುಬು (coccyx/tailbone) – 1

ಪಕ್ಕೆಲುಬುಗಳು (ribs) ಮತ್ತು ಎದೆಚಕ್ಕೆ (sternum): (ಚಿತ್ರ 1, 5, 6)

bones_2_6ಚೂರಿಯ ಆಕಾರದಲ್ಲಿರುವ ಎದೆಚಕ್ಕೆಯು (sternum), ಎದೆಗೂಡಿನ ಮುಂಬಾಗದ ನಡುಗೆರೆಯಲ್ಲಿ (midline) ಇರುತ್ತದೆ. ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ಪಕ್ಕೆಲುಬಿನ (ribs) ಒಂದು ತುದಿಯು, ಎದೆಯ ಮುಂಬಾಗದಲ್ಲಿ ಎದೆಚಕ್ಕೆಗೆ (sternum) ಅಂಟಿಕೊಂಡಿರುತ್ತದೆ.

ಮನುಶ್ಯರಲ್ಲಿ 12 ಜೊತೆ ಪಕ್ಕೆಲುಬುಗಳಿರುತ್ತವೆ. ಇವು ಎದೆಚಕ್ಕೆಯ ಜೊತೆಗೂಡಿ, ಎದೆಬಾಗದಲ್ಲಿ ಎದೆಗೂಡನ್ನು (rib cage) ಮಾಡುತ್ತವೆ. ಮೊದಲ 7 ಜೊತೆ ಪಕ್ಕೆಲುಬುಗಳನ್ನು ’ದಿಟ-ಪಕ್ಕೆಲುಬುಗಳು’ ಎಂದು ಕರೆಯಲಾಗುತ್ತದೆ. ಏಕೆಂದರೆ, ಇವು ಎದೆಗೂಡಿನ ಬೆನ್ನೆಲುಬುಗಳನ್ನು (thoracic vertebrae) ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ನೇರವಾಗಿ ಎದೆಚಕ್ಕೆಗೆ (sternum) ಹೊಂದಿಸುತ್ತವೆ.

8, 9, ಮತ್ತು 10ನೇ  ಪಕ್ಕೆಲುಬುಗಳು, ಏಳನೆಯ ಪಕ್ಕೆಲುಬಿನ ಮೆಲ್ಲೆಲುಬಿನ (costal cartilage) ಮೂಲಕ ಎದೆಚಕ್ಕೆಗೆ ಅಂಟಿಕೊಳ್ಳುವುದರಿಂದ, ಅವುಗಳನ್ನು ’ಹುಸಿ-ಪಕ್ಕೆಲುಬುಗಳು’ (false ribs) ಎಂದು ಕರೆಯುತ್ತಾರೆ.  11 ಮತ್ತು 12ನೇ ಪಕ್ಕೆಲುಬುಗಳೂ ಹುಸಿ-ಪಕ್ಕೆಲುಬುಗಳ ಗುಂಪಿಗೆ ಸೇರಿದ್ದರೂ, ಅವುಗಳನ್ನು ’ತೇಲು-ಪಕ್ಕೆಲುಬು’ಗಳೆಂದು (floating ribs) ವಿಂಗಡಿಸಲಾಗುತ್ತದೆ. ಏಕೆಂದರೆ, ಇವು ಎದೆಚಕ್ಕೆಗೆ ಅಂಟಿಕೊಂಡಿರುವುದಿಲ್ಲ.

ಎದೆಯ ಕಟ್ಟು (pectoral girdle) ಮತ್ತು  ಕಯ್ಗಳು (upper limbs): (ಚಿತ್ರ 1, 6, 7)

ಎದೆಯ ಕಟ್ಟು (pectoral girdle) ಕಯ್ಗಳನ್ನು ನಟ್ಟೊಡಲ ಎಲುಬುಗಳಿಗೆ (axial skeleton) ಜೋಡಿಸಲು  ನೆರವಾಗುತ್ತದೆ. ಎದೆಕಟ್ಟು (pectoral girdle),  ಕೀಲಿಕ/ಹೆಡುಕ (left and right clavicles) ಮತ್ತು ಹೆಗಲೆಲುಬುಗಳಿಂದ (scapula) ಮಾಡಲ್ಪಟ್ಟಿರುತ್ತದೆ.

ಕಯ್ಯಲ್ಲಿನ ಮೇಲ್ಬಾಗದ ಎಲುಬನ್ನು ತೋಳ್ಮೂಳೆ (humerus) ಎಂದು ಕರೆಯಲಾಗುತ್ತದೆ. ಮೇಲ್ತುದಿಯ ತೋಳ್ಮೂಳೆಯು (humerus), ಹೆಗಲೆಲುಬಿನ (scapula) ಜೊತೆಗೂಡಿ ತೋಳಿನಲ್ಲಿ ಒರಳು-ಗುಂಡಿಯ ಜಂಟಿಯನ್ನು (ball & socket joint)  ಮಾಡುತ್ತದೆ.

bones_2_7ಕೆಳತುದಿಯು, ಅರೆಲು (radius) ಹಾಗು ಮೊಣೆಲು (ulna) ಎಂಬ ಮುಂಗಯ್ ಎಲುಬುಗಳ ಜೊತೆಗೂಡಿ, ಮೊಣಕಯ್ ಜಂಟಿಯನ್ನು (elbow joint) ಮಾಡುತ್ತದೆ. ಅರೆಲು (radius) ಮತ್ತು ಮೊಣೆಲು (ulna) ಒಟ್ಟುಗೂಡಿಸಿ ಮುಂದೋಳು (forearm) ಎನ್ನಬಹುದು.

ಮೊಣೆಲು (ulna), ಮುಂದೋಳಿನ ನಡು/ಒಳಬಾಗದಲ್ಲಿದ್ದು (medial), ತೋಳ್ಮೂಳೆಯ (humerus) ಜೊತೆ ಸೇರಿ ತಿರುಗಣೆ ಜಂಟಿಯನ್ನು (hinge joint) ಮಾಡುತ್ತದೆ. ಅರೆಲು (radius), ಮುಂದೋಳನ್ನು (forearm) ಮಣಿಕಟ್ಟಿನ ಜಂಟಿಯ (wrist) ಮಟ್ಟದಲ್ಲಿ ತಿರುಗಿಸಲು ನೆರವಾಗುತ್ತದೆ.

ಮುಂಗಯ್ ಎಲುಬುಗಳು (lower arm bones), ಮಣಿಕಟ್ಟಿನ ಮೂಳೆಗಳ ನೆರವಿನಿಂದ ಮಣಿಕಟ್ಟಿನ ಜಂಟಿಯನ್ನು (wrist) ಮಾಡುತ್ತದೆ. ಈ ಮಣಿಕಟ್ಟಿನ ಎಲುಬುಗಳ ಸಂಕೆ 8. ಇವುಗಳು ಮಣಿಕಟ್ಟಿಗೆ ಬಾಗುವ ಅಳವನ್ನು (flexibility) ಕೊಡುತ್ತವೆ. ಮಣಿಕಟ್ಟಿನ ಎಲುಬುಗಳಿಗೆ  5 ಅಂಗಯ್ ಎಲುಬುಗಳು (metacarpal bones/bones of the hand) ಜೋಡಿಸಲ್ಪಟ್ಟಿರುತ್ತವೆ.

ಒಂದೊಂದು ಅಂಗಯ್ ಎಲುಬುಗಳಿಗೆ (metacarpal bones ), ಒಂದೊಂದು ಬೆರಳುಗಳು ಜೋತುಬಿದ್ದಿರುತ್ತವೆ. ಪ್ರತಿ ಬೆರಳು 3 ಎಲುವೆರಳುಗಳನ್ನು (phalanges) ಹೊಂದಿರುತ್ತವೆ. ಹೆಬ್ಬೆರಳು (thumb) ಮಾತ್ರ 2 ಎಲುವೆರಳುಗಳನ್ನು (phalanges)  ಹೊಂದಿರುತ್ತದೆ.

ಕೀಳ್ಗುಳಿಯ ಸುತ್ತುಕಟ್ಟು (pelvic girdle) ಮತ್ತು ಕಾಲುಗಳು (lower limbs): (ಚಿತ್ರ 1, 8, 9)

bones_2_8ಎಡ ಹಾಗು ಬಲ ಚಪ್ಪೆಲುಗಳು (hip bones) ಕೂಡಿ ಮಾಡಲ್ಪಡುವ ಕೀಳ್ಗುಳಿಯ ಸುತ್ತುಕಟ್ಟು (pelvic girdle), ಕಾಲುಗಳನ್ನು ನಟ್ಟೊಡಲಿಗೆ (axial skeleton) ಕೂಡಿಸಲು ನೆರವಾಗುತ್ತದೆ. ತೊಡೆಮೂಳೆ (femur) ಮನುಶ್ಯರಲ್ಲಿ ಕಂಡು ಬರುವ ಅತಿ ದೊಡ್ಡ ಎಲುಬು. ಇದು ತೊಡೆ ಬಾಗದಲ್ಲಿ ಕಂಡುಬರುವ ಒಂದೇ ಒಂದು ಎಲುಬು ಕೂಡ ಹವ್ದು.  ತೊಡೆಮೂಳೆಯು, ಚಪ್ಪೆಲುಬಿನ  ಜೊತೆಗೂಡಿ ಒರಳು-ಗುಂಡಿನ ಜಂಟಿಯನ್ನು (ball and socket joint) ಮಾಡುತ್ತದೆ. ಈ ಜಂಟಿಯನ್ನು ಸೊಂಟಕೀಲು (hip joint) ಎಂದು ಕರೆಯುತ್ತಾರೆ.

ತೊಡೆಮೂಳೆಯ ಮತ್ತೊಂದು ತುದಿಯು, ಕಣಕಾಲೆ (tibia) ಹಾಗು ಮಂಡಿಚಿಪ್ಪುಗಳ (patella) ಜೊತೆಗೂಡಿ ಮಂಡಿ ಜಂಟಿಯನ್ನು (knee joint) ಮಾಡುತ್ತದೆ. ಈ ಮಂಡಿ ಜಂಟಿಯಲ್ಲಿ ಕಂಡು ಬರುವ ಮಂಡಿಚಿಪ್ಪಿನ (patella) ವಿಶೇಶತೆ ಎಂದರೆ, ಈ ಎಲುಬು, ಹುಟ್ಟುವಾಗ ಮನುಶ್ಯರಲ್ಲಿ ಕಂಡುಬರುವುದಿಲ್ಲ. ಆದರೆ, ನಂತರದ ದಿನಗಳಲ್ಲಿ ಮಗು ತೆವಳಲು ಆರಂಬಿಸಿದಾಗ, ಈ ಚಿಪ್ಪು ಮಾಡಲ್ಪಡುತ್ತದೆ.

bones_2_9ಕಣಕಾಲೆ (tibia) ಮತ್ತು ಸೂಚಿಲುಕ (fibula), ಎಂಬ ಎರಡು ಎಲುಬುಗಳು, ಕಾಲಿನ ಕೆಳಬಾಗದಲ್ಲಿ ಇರುತ್ತವೆ. ಇವೆರಡರಲ್ಲಿ ಕಣಕಾಲೆ, ಸೂಚಿಲುಕ್ಕಿಂತ ದೊಡ್ದದಿದ್ದು, ಹೆಚ್ಚು-ಕಡಿಮೆ ಇಡೀ ಮಯ್ ತೂಕವನ್ನು ಹೊರುತ್ತದೆ. ಕಣಕಾಲೆ (tibia) ಮತ್ತು  ಸೂಚಿಲುಕಗಳು (fibula), ಎಳುದಾಲಿನ (talus) ಜೊತಗೂಡಿ, ಹಿಮ್ಮಡಿ ಜಂಟಿಯನ್ನು (ankle joint) ಮಾಡುತ್ತವೆ.

ಮುಂಗಾಲೆಲುತಂಡ/ರೆಪ್ಪದರ (tarsals) ಏಳು ಸಣ್ಣ ಎಲುಬುಗಳ ಗುಂಪು. ಇದು ಕಾಲಿನ ಹಿಂಬಾಗ ಹಾಗು ಹಿಮ್ಮಡಿಯನ್ನು ಮಾಡುತ್ತದೆ. ಮುಂಗಾಲೆಲುತಂಡವು, ಅಯ್ದು ಅಂಗಾಲೆಲುಬುಗಳ (metatarsals)  ಜೊತೆಗೂಡಿ, ಜಂಟಿಗಳನ್ನು ಮಾಡುತ್ತದೆ.

ಒಂದೊಂದು ಅಂಗಾಲೆಲುಬು (metatarsals), ಕಾಲ್ಬೆರಳುಗಳ ಎಲುವೆರಳುಗಳ (phalanges) ಜೊತೆ ಸೇರಿ, ಜಂಟಿಯನ್ನು ಮಾಡುತ್ತದೆ. ಕಾಲಿನ ಹೆಬ್ಬೆರಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕಾಲ್ಬೆರಳುಗಳಲ್ಲಿ 3 ಎಲುವೆರಳುಗಳು (phalanges) ಇರುತ್ತವೆ. ಹೆಬ್ಬರಳಿನಲ್ಲಿ, ಕೇವಲ ಎರಡು ಎಲುವೆರಳುಗಳು (phalanges) ಇರುತ್ತವೆ.

ಇಲ್ಲಿಯವರೆಗೆ ಮನುಶ್ಯರ ’ಎಲುಬುಗಳ’ ಏರ‍್ಪಾಟಿನ ಬಗ್ಗೆ ಎರಡು ಕಂತುಗಳಲ್ಲಿ ತಿಳಿಸಲಾಯಿತು. ಮುಂದಿನ ಬರಹದಲ್ಲಿ ಹುರಿಕಟ್ಟಿನ ಏರ‍್ಪಾಟಿನಲ್ಲಿ ಕಂಡುಬರುವ ಇತರ ಅಂಗಗಳ ಬಗ್ಗೆ ತಿಳಿಸಲಾಗುವುದು.

(ಮಾಹಿತಿ ಮತ್ತು ಚಿತ್ರ ಸೆಲೆಗಳು: 1. wikispaces.com, 2. wikimedia.org, 3. medical-dictionary, 4. daviddarling, 5. wikipedia, 6. dmacc.edu, 7. people.emich.edu, 8. physio-pedia.com, 9. drugs.com, 10. answers.com

(ಈ ಬರಹವು ಹೊಸಬರಹದಲ್ಲಿದೆ)

ಹುರಿಕಟ್ಟಿನ ಏರ‍್ಪಾಟು – ಮೂಳೆಗಳು 1

ಹುರಿಕಟ್ಟಿನ ಏರ‍್ಪಾಟು (musculo-skeletal system) ಬಾಗ-1:

ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಮೊದಲ ಬಾಗವಾಗಿ ಹುರಿಕಟ್ಟಿನ ಏರ‍್ಪಾಟಿನಲ್ಲಿ ಒಂದಾದ ಮೂಳೆಗಳ ಬಗ್ಗೆ ಈ ಬರಹದಲ್ಲಿ ತಿಳಿಸಲಾಗುವುದು.

0_hurikattina_erpatu2ಮೂಳೆಗಳನ್ನು ಎಲುಬುಗಳು ಎಂತಲೂ ಕರೆಯುತ್ತಾರೆ. ’ಓಡಾಡುವ ಏರ‍್ಪಾಟು’ ಎಂದೂ ಕರೆಯಬಹುದಾದ ಈ ಏರ‍್ಪಾಟು ಮನುಶ್ಯನ ಎಲುಬುಗಳು ಹಾಗು ಮಾಂಸಗಳ ಮೂಲಕ ಆಕಾರ, ಆಸರೆ (support), ನೆಲೆತ (stability), ಮತ್ತು ಓಡಾಡುವ ಅಳವನ್ನು (ability) ಕೊಡುತ್ತದೆ.

ಈ ಏರ‍್ಪಾಟು ಮುಕ್ಯವಾಗಿ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ,

1) ಮೂಳೆಗಳು/ಎಲುಬುಗಳು  (bones)

2) ಮೂಳೆ ಕೀಲುಗಳು/ಜಂಟಿಗಳು (joints)

3) ಮಾಂಸ (muscle)

4) ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons)

5) ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments)

6) ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳು (cartilage).

ಹುರಿಕಟ್ಟಿನ ಏರ‍್ಪಾಟನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮೊದಲಿಗೆ ಎಲುಬುಗಳ ಬಗ್ಗೆ ಆಮೇಲೆ ಹುರಿಕಟ್ಟಿನ ಇತರ ಬಾಗಗಳು, ಅವುಗಳಿಗೆ ಎರಗುವ ಕುತ್ತುಗಳು ಮತ್ತು ಮದ್ದುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

1. ಎಲುಬಿನ ಏರ‍್ಪಾಟು: 

1.1 ಎಲುಬುಗಳ ಮುಕ್ಯ ಕೆಲಸಗಳು

  • ಆಕಾರ: ಎಲುಬುಗಳು ಒಡಲಿಗೆ ಚವ್ಕಟ್ಟನ್ನು (framework/shape) ಒದಗಿಸುತ್ತವೆ.
  • ಆಸರೆ: ಮಯ್ಯೊಳಗಿನ ಮೆದುವಾದ ಅಂಗಗಳಿಗೆ ಆಸರೆಯನ್ನು ಒದಗಿಸುತ್ತವೆ. ಉದಾ: ಪಕ್ಕೆಗೂಡು (rib cage) ಉಸಿರುಚೀಲ, ಎದೆಗುಂಡಿಗೆಯಂತಹ ನಾಜೂಕಾದ ಅಂಗಗಳನ್ನು ಹೊಂದಿರುವ ಬಗ್ಗರಿ ಗೋಡೆಗೆ (thoracic wall) ಎಲುಬುಗಳು ಆಸರೆಯಾಗುತ್ತವೆ.
  • ಕಾಪು (protection): ತಲೆ ಬುರುಡೆ (skull) ಹಾಗು ಬೆನ್ನೆಲುಬುಗಳು (vertebrae) ನರದ ಏರ‍್ಪಾಟನ್ನು ಕಾಪಾಡಿದರೆ, ಪಕ್ಕೆಲುಬು ಬಗ್ಗರಿಯ (thoracic) ಉಸಿರುಚೀಲ, ಎದೆಗುಂಡಿಗೆಯಂತಹ ಅಂಗಗಳನ್ನು ಕಾಯುತ್ತದೆ.
  • ಓಡಾಟ/ಅಲುಗಾಟ: ಎಲುಬಿಗೆ ಹೊಂದಿಕೊಂಡಿರುವ ಮಾಂಸವು ಎಲುಬನ್ನು ಸನ್ನೆಗೋಲಿನಂತೆ (lever) ಬಳಸಿಕೊಂಡು ನಾವು ಓಡಾಡಲು ಹಾಗು ನಮ್ಮ ಮಯ್ ಬಾಗಗಳನ್ನು ಅಲುಗಾಡಿಸಲು ನೆರವಾಗುತ್ತದೆ.
  • ಕೂಡಿಡುವಿಕೆ (storage): ನಮ್ಮ ಮಯ್ಯಿಗೆ ಬೇಕಾಗಿರುವ ಕೊಬ್ಬು ಹಾಗು ಕನಿಜಗಳನ್ನು (ಕ್ಯಾಲ್ಶಿಯಮ್ & ಪಾಸ್ಪರಸ್) ಕೂಡಿಡಲ ನೆರವಾಗುತ್ತವೆ.
  • ನೆತ್ತರು ಕಣಗಳನ್ನು ಹುಟ್ಟಿಸುವಿಕೆ: ನೆತ್ತರಿನಲ್ಲಿರುವ ಕಣಗಳನ್ನು ಹುಟ್ಟಿಸುವಲ್ಲಿ ಎಲುಬಿನ ನಡುವಿರುವ ಕೊಳವೆಯಲ್ಲಿರುವ ಮೂಳೆಮಜ್ಜೆ (bone marrow) ಸಹಕಾರಿಯಾಗಿದೆ.

1.2 ಎಲುಬಿನ ಬಗೆಗಳು:

titta-1_elubina-aakaaragalu1ಗೂಡುಕಟ್ಟುಗಳ (tissue) ಅನುಗುಣವಾಗಿ ಎಲುಬುಗಳನ್ನು ದಟ್ಟೆಲುಬು (compact bone) ಹಾಗು ಹೀರುಗದೆಲುಬುಗಳೆಂದು (spongy bone) ಗುಂಪಿಸಬಹುದಾಗಿದೆ. ದಟ್ಟೆಲುಬುಗಳು ಒತ್ತಾಗಿಯೂ, ನುಣುಪಾಗಿಯೂ ಕಾಣುತ್ತವೆ ಹಾಗು ಎಲುಬಿನ ಎಲ್ಲೆಡೆಯೂ ಒಂದೆತೆರನಾಗಿರುತ್ತವೆ (homogeneous). ಹೀರುಗದೆಲುಬು ಸಣ್ಣ ಸೂಜಿಯಂತಹ ಇಟ್ಟಳ (structure) ಇಲ್ಲವೆ ಚಪ್ಪಟೆಯಾದ ಚೂರುಗಳಂತೆ ಇರುತ್ತದೆ.

ಎಲುಬನ್ನು ಅವುಗಳ ಆಕಾರದ ಅನುಗುಣವಾಗಿ 4 ಗುಂಪುಗಳಾಗಿಸಬಹುದು: (ಚಿತ್ರ 1 ನೋಡಿ)

1) ಉದ್ದನೆಯ ಎಲುಬುಗಳು (long bones): ಇವು ನಡುಗಡ್ಡಿ (shaft) ಹಾಗು ಎರಡು ತುದಿಗಳನ್ನು ಹೊಂದಿರುತ್ತವೆ. ಈ ಬಗೆಯ ಎಲುಬುಗಳು ಹೆಚ್ಚಿನ ಮಟ್ಟದಲ್ಲಿ ದಟ್ಟೆಲುಬುಗಳಿಂದ ಮಾಡಲ್ಪಟ್ಟಿರುತ್ತವೆ. ಮಂಡಿಚಿಪ್ಪು (patella), ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟುಗಳನ್ನು (wrist/carpus) ಹೊರತುಪಡಿಸಿ, ಕಯ್ಕಾಲುಗಳಲ್ಲಿ ಕಂಡು ಬರುವ ಉಳಿದೆಲ್ಲ ಎಲುಬುಗಳು ಈ ಗುಂಪಿಗೆ ಸೇರುತ್ತವೆ.

2) ತುಂಡೆಲುಬುಗಳು (short bones): ಈ ಬಗೆಯ ಎಲುಬುಗಳು ಹೀರುಗದ ಎಲುಬುಗಳಿಂದ (spongy bone) ಮಾಡಲ್ಪಟ್ಟಿರುತ್ತವೆ. ಹಿಮ್ಮಡಿಯ ಗಂಟು (ankle) ಹಾಗು ಮಣಿಕಟ್ಟಿನ (wrist/carpus) ಎಲುಬುಗಳು ತುಂಡೆಲುಬುಗಳ ಅಡಿಯಲ್ಲಿ ಬರುತ್ತವೆ.

3) ಚಪ್ಪಟ್ಟೆ ಎಲುಬುಗಳು (flat bones): ಈ ಬಗೆಯ ಎಲುಬುಗಳು ಹೆಚ್ಚು-ಕಡಿಮೆ ಚಪ್ಪಟ್ಟೆಯಾಗಿಕಾರವಿದ್ದು, ತುದಿಗಳಲ್ಲಿ ಸ್ವಲ್ಪಮಟ್ಟಿಗೆ ಬಾಗಿರುತ್ತವೆ. ಇವು ತೆಳುವಾದ ಎರಡು ದಟ್ಟೆಲುಬಿನ ಹಲಗೆಗಳ (sheet) ನಡುವೆ ಹೀರೆಲುಬಿನ ಪದರವನ್ನು ಹೊಂದಿರುತ್ತದೆ. ಉದಾ: ಎದೆಚಕ್ಕೆ (sternum).

4) ಅಂಕುಡೊಂಕಾದ ಎಲುಬುಗಳು (irregular bones): ಮೇಲೆ ತಿಳಿಸಿರುವ ಯಾವುದೇ ಗುಂಪುಗಳಿಗೆ ಸೇರಿಸಲಾಗದ ಎಲುಬುಗಳಿವು. ಇವುಗಳ ಆಕಾರ ಹಾಗು ಇಟ್ಟಳ ಇತರ ಎಲುಬುಗಳಿಗೆ ಹೋಲಿಸಿದರೆ ಸ್ವಲ್ಪ ಸಿಕ್ಕಲಾಗಿರುತ್ತವೆ. ಬೆನ್ನೆಲುಬು (vertebrae), ಚಪ್ಪೆ/ಚಪ್ಪೆಲುಬು (hipbone) ಮತ್ತು ಕೆಲವು ತಲೆಬುರುಡೆ ಮೂಳೆಗಳು ಈ ಗುಂಪಿನಡಿ ಬರುತ್ತವೆ.

1.3 ಎಲುಬಿನ ಇಟ್ಟಳ (bone structure):

titta2_elubina-ittala1ಒಂದೆರಡು ಎಲುಬುಗಳನ್ನು ಹೊರತುಪಡಿಸಿ, ಎಲ್ಲಾ ಎಲುಬುಗಳ ಸಾಮಾನ್ಯ ಇಟ್ಟಳ (structure) ಹೆಚ್ಚು-ಕಡಿಮೆ ಒಂದೇ ತೆರನಾಗಿರುತ್ತದೆ.

ಒಳೆಲುಮೊಳೆ (diaphysis): ಎಲುಬಿನ ನಡುಗಡ್ಡಿಯನ್ನು (shaft) ಒಳೆಲುಮೊಳೆ ಎಂದು ಕರೆಯಬಹುದು. ಇದು ಕೊಳವೆಯನ್ನು ಹೊಂದಿರುವ ಮಂದವಾದ ಕಂಬದಂತಿದ್ದು, ದಟ್ಟೆಲುಬಿನಿಂದ ಮಾಡಲ್ಪಟ್ಟಿದೆ. ಒಳಗಿನ ಕೊಳವೆಬಾಗವು ಅರಿಶಿನ ಬಣ್ಣದ ಕೊಬ್ಬನ್ನು ಹೊಂದಿದ್ದು, ಇದನ್ನು ಹಳದಿ ಮೂಳೆಮಜ್ಜೆ (yellow bone marrow) ಎಂದು ಕರೆಯಲಾಗುತ್ತದೆ.

ಮೇಲೆಲುಮೊಳೆ (epiphysis): ಎಲುಬಿನ ತುದಿಗಳೆ ಮೇಲೆಲುಮೊಳೆ. ಒಳೆಲುಮೊಳೆಗೆ (diaphysis)  ಹೋಲಿಸಿದರೆ, ಇದು ಸ್ವಲ್ಪ ಅಗಲವಾಗಿಯೂ, ದುಂಡಾಗಿಯೂ ಇರುತ್ತದೆ. ಹೀರೆಲುಬುಗಳಿಂದ ಮಾಡಲ್ಪಟ್ಟಿರುವುದರಿಂದ, ಎಲುಬಿನ ಈ ಬಾಗದಲ್ಲಿ ಸಂದುಗಳಲ್ಲಿದು, ರಕ್ತಕಣಗಳನ್ನು ಮಾಡಲು ಸಹಕಾರಿಯಾಗಿರುವ  ಕೆಂಪು ಮೂಳೆಮಜ್ಜೆಯನ್ನು (red bone marrow) ಹೊಂದಿರುತ್ತದೆ.

ಮೇಲೆಲುಬಿನ ತಟ್ಟೆ (epiphyseal plate): ಒಳೆಲುಮೊಳೆ (diaphysis) ಹಾಗು ಮೇಲೆಲುಮೊಳೆಗಳ (epiphysis) ನಡುವೆ ಕಂಡುಬರುವ ಮೇಲೆಲುಬಿನ ತಟ್ಟೆ (epiphyseal plate), ಮಕ್ಕಳಲ್ಲಿ ಮೆಲ್ಲೆಲುಬಿನಿಂದ (cartilage) ಮಾಡಲ್ಪಟ್ಟಿದ್ದು, ಈ ಬಾಗದಲ್ಲಿ ನಡೆಯುವ ಬೆಳವಣಿಗೆಯು, ಎಲುಬುಗಳ ಉದ್ದವನ್ನು ಹೆಚ್ಚಿಸಲು ನೆರವಾಗುತ್ತದೆ. ಮನುಶ್ಯರು ದೊಡ್ಡವರಾದ ಮೇಲೆ, ಮೇಲೆಲುಬಿನ ತಟ್ಟೆಯ ಮೆಲ್ಲೆಲುಬು, ಎಲುಬಾಗಿ ರೂಪುಗೊಂಡು ಮೇಲೆಲುಬಿನ ಗೆರೆಯಾಗಿ (epiphyseal line) ಮಾರ‍್ಪಟ್ಟು, ಎಲುಬುಗಳ ಬೆಳೆಯುವಿಕೆ ನಿಲ್ಲುತ್ತದೆ.

ಎಲುಸುತ್ಪರೆ (periosteum): ಒಳೆಲುಮೊಳೆಯ (diaphysis) ಹೊರ ಬಾಗಕ್ಕೆ ಹೊದಿಕೆಯನ್ನು ಕೊಡುವ ಪದರವೇ ಎಲುಸುತ್ಪರೆ (periosteum). ಈ ಪದರವು ಎಲುಬನ್ನು ಮಾಡುವ ಎಲುನನೆಕಣಗಳನ್ನು (osteoblasts) ಹೊಂದಿರುತ್ತವೆ. ಜೊತೆಗೆ, ಕಂಡರಗಳು (tendons) ಹಾಗು ತಂತುಗಟ್ಟುಗಳು (ligaments) ಎಲುಬಿನ ಮೇಲೆ  ಅಂಟಲು ನೆಲೆಯನ್ನು ಮಾಡಿಕೊಡುತ್ತದೆ.

ಎಲುಬೊಳ್ಪರೆ (endosteum): ಇದು ಎಲುಬಿನ ಒಳಬಾಗಕ್ಕೆ ಹಾಗು ಹೀರೆಲುಬುಗಳಲ್ಲಿ ಕಂಡುಬರುವ ಸಣ್ಣ-ಸಣ್ಣ ಕೋಣೆಗಳ ಗೋಡೆಗಳಿಗೆ ಹೊದಿಕೆಯನ್ನು ಕೊಡುತ್ತದೆ.

ಜಂಟಿಯ ಮೆಲ್ಲೆಲುಬು (articular cartilage): ಉದ್ದನೆಯ ಮೂಳೆಗಳು ಒಂದಕ್ಕೊಂದು ಜೋಡಣೆಯಾಗುವಾಗ, ಎಲುಗಳ ತುದಿಗಳ ಹೊರಮಯ್ ಮೇಲೆ ಮೆಲ್ಲೆಲುಬುಗಳ (articular cartilage) ಪದರವಿರುತ್ತದೆ. ಈ ಪದರವು ಎರಡು ಎಲುಬುಗಳ ನಡುವೆ ಉಂಟಾಗುವ ಒತ್ತಡವನ್ನೂ ಹೀರಿಕೊಳ್ಳಲು ನೆರವಾಗುತ್ತದೆ.

1.4 ಎಲುಬಿನ ಕಿರುದೋರುಕದ ಇಟ್ಟಳ (microscopic structure):

titta3_seerutorpu1

titta4_elurule-erpaatu1ಕಿರುದೋರುಕದಲ್ಲಿ (microscope) ನೋಡಿದಾಗ ಎಲುಬಿನಲ್ಲಿ ಬಹಳಶ್ಟು ಕಾಲುವೆಗಳಂತಹ (canal) ರಚನೆಗಳಿದ್ದು, ಇವು ನರಗಳು, ರಕ್ತಗೊಳವೆಗಳು ಹಾಗು ಹಾಲ್ರಸದ ಕೊಳವೆಗಳು (lymphatic vessels) ಗಟ್ಟಿಯಾದ ಎಲುಬುಗಳಲ್ಲಿ ಸರಾಗವಾಗಿ ಹಾದುಹೋಗಲು ನೆರವಾಗುತ್ತವೆ.

ಎಲುಬಿನ ಕೆಲಸದ ಗಟಕವನ್ನು (functional unit) ಎಲುರುಳೆ ಏರ‍್ಪಾಡು (osteon/ haversian system) ಎಂದು ಕರೆಯಬಹುದು. ಒಂದೊಂದು ಎಲುರುಳೆಯು (osteon), ಉದ್ದನೆಯ ಉರುಳೆಯಂತಿದ್ದು (cylinder), ಹಲವು ಪದರಗಳನ್ನು ಹೊಂದಿರುವ ಬಾರ-ಹೊರುವ ಸಣ್ಣ-ಸಣ್ಣ ಕಂಬಗಳಂತೆ ಕಾಣುತ್ತವೆ. ಈ ಪದರಗಳನ್ನು ತೆಳ್ಪರೆ (lamella) ಎಂದು ಕರೆಯಲಾಗುತ್ತದೆ. ಈ ಪದರಗಳಲ್ಲಿ ಅಂಟುಬೆಳೆ (collagen) ಎಂಬ ನಾರುಗಳಿರುತ್ತವೆ (fiber).

ಒಂದು ಪದರದ ನಾರುಗಳು ಒಂದೇ ದಿಕ್ಕಿನಲ್ಲಿ ಜೋಡಿಸಲ್ಪಟ್ಟಿದ್ದರೆ, ಈ ಪದರದ ಅಕ್ಕ-ಪಕ್ಕದಲ್ಲಿರುವ ಪದರಗಳಲ್ಲಿ ನಾರುಗಳು ಮತ್ತೊಂದು ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ರಚನೆ, ಎಲುಬಿಗೆ ಗಟ್ಟಿತನವನ್ನೂ ಹಾಗು ಎಲುಬುಗಳ ಮೇಲೆ ಬೀಳುವ ಹೊರೆ/ಒತ್ತಡವನ್ನು ತಾಳಿಕೊಳ್ಳುವ ಕಸುವು ಕೊಡುತ್ತದೆ. ಎಲುರುಳೆಯ (osteon), ನಡುಬಾಗದಲ್ಲಿ ಸಣ್ಣ ರಕ್ತಗೊಳವೆ ಹಾಗು ನರದನಾರುಗಳನ್ನು (nerve fibers) ಹೊಂದಿರುವ ನಡುಗಾಲುವೆ/ಹವರ‍್ಸಿಯನ್ ಕಾಲುವೆ (haversian canal) ಇರುತ್ತದೆ.

ಈ ಕಾಲುವೆಗಳಿಗೆ ನೇರಡ್ಡವಾಗಿ (perpendicular) ವೋಲ್ಕ್ಮನ್ ಕಾಲುವೆ (volkmann’s  canal) ಸಾಗುತ್ತದೆ. ವೋಲ್ಕ್ಮನ್ ಕಾಲುವೆ (volkmann’s canal), ಎಲುರುಳೆಗಳ (osteon) ನಡುಬಾಗ ಹಾಗು ಎಲುಬಿನ ಮಜ್ಜೆಯ ಗೂಡನ್ನು (medullary cavity), ಎಲುಸುತ್ಪರೆಯ (pperiosteum) ರಕ್ತಗೊಳವೆ ಹಾಗು ನರಗಳೊಂದಿಗೆ ಸಂಪರ‍್ಕ ಹೊಂದಲು ನೆರವಾಗುತ್ತವೆ.

ಇಲ್ಲಿಯವರೆಗೆ ಎಲುಬಿನ ಕೆಲಸ, ಬಗೆಗಳು ಹಾಗು ಇಟ್ಟಳಗಳ ಕುರಿತು ತಿಳಿಸಿಕೊಡಲಾಗಿದೆ. ಎಲುಬು ಏರ‍್ಪಾಟಿನ ಉಳಿದ ವಿಶಯಗಳನ್ನು ಮುಂದಿನ ಬಾಗದಲ್ಲಿ ವಿವರಿಸಲಾಗುವುದು.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: 1. visual.merriam, 2. classes.midlandstech.edu, 3. wikipedia, 4. augustatech.edu, 5. danceguadagno, 6. innerbody.com )

(ಈ ಬರಹವು ಹೊಸಬರಹದಲ್ಲಿದೆ)

ಮನುಶ್ಯರ ಮಯ್ಯಿ

ಮನುಶ್ಯನ ಮಯ್ಯನ್ನು ಹೊರಗಿನಿಂದ ತಲೆ, ಕುತ್ತಿಗೆ, ಸೊಂಟ, ಎರಡು ಕಾಲು ಹಾಗು ಎರಡು ಕಯ್ಯಿಗಳಾಗಿ ಗುಂಪಿಸಬಹುದು. ಮೇಲಿನಿಂದ ಕಾಣುವ ಇವೆಲ್ಲವುಗಳನ್ನು ಹಿಡಿತದಲ್ಲಿಡಲು ಮಯ್ಯಿಯ ಒಳಗೆ ಹಲವು ಬಗೆಯ, ತುಂಬಾ ಅಚ್ಚುಕಟ್ಟಾದ ಏರ‍್ಪಾಟುಗಳಿವೆ.

ನಮ್ಮ ಮಯ್ಯಿಯೊಳಗಿನ ಮುಕ್ಯವಾದ ಏರ‍್ಪಾಟುಗಳು ಮತ್ತು ಅವುಗಳ ಕೆಲಸಗಳು ಈ ಕೆಳಗಿನಂತಿವೆ,

1) ಹುರಿಕಟ್ಟಿನ ಏರ‍್ಪಾಟು (musculo-skeletal system): 

ಈ ಏರ‍್ಪಾಟು ಮುಕ್ಯವಾಗಿ ಮೂಳೆಗಳು, ಮೂಳೆ ಕೀಲುಗಳು, ಮೂಳೆಗಳಿಂದ ಮಾಡಲ್ಪಟ್ಟ ಎಲುಬಿನ ಗೂಡುಗಳನ್ನು ಹೊಂದಿರುತ್ತದೆ. ಮಾಂಸ, ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons), ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments) ಹಾಗು ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳೂ (cartilage) ಹುರಿಕಟ್ಟಿನ ಇತರ ಬಾಗಗಳಾಗಿವೆ.

ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ 206 ಮೂಳೆಗಳು ಮತ್ತು 230 ಮೂಳೆ ಕೀಲುಗಳಿದ್ದು, ಅವುಗಳ ಮೇಳಯ್ಸಿದ ಕೆಲಸದಿಂದಾಗಿ ಮನುಶ್ಯನು ತನ್ನ ಇತರ ಮಯ್ ಬಾಗಗಳನ್ನು ಅಲುಗಾಡಿಸಲು ಇಲ್ಲವೇ ಬಳಸುವಂತಾಗುವುದು.

2) ನರಗಳ ಏರ‍್ಪಾಟು (nervous system):

ಇದು ಸುತ್ತ-ಮುತ್ತಲಿನ ಅರಿವನ್ನು ತಿಳಿಸುವ ಸೂಚನೆಗಳನ್ನು ಸಾಗಿಸುವ ಗೂಡುಗಳನ್ನು ಹೊಂದಿರುತ್ತದೆ. ಮಿದುಳು, ಮಿದುಳು ಬಳ್ಳಿ (spinal cord) ಹಾಗು ಇವುಗಳಿಗೆ ಹೊಂದಿಕೊಂಡ ನರಗಳು ಇದರ ಮುಕ್ಯ ಬಾಗಗಳು.

anatomy_overview_1.docx

3) ಉಸಿರಾಟದ ಏರ‍್ಪಾಟು (respiratory system):

ಉಸಿರಾಟದ ಏರ‍್ಪಾಟು ಮೂಗು, ಮುನ್ಗಂಟಲು (pharynx), ಉಲಿಪೆಟ್ಟಿಗೆ/ಗಂಟಲಗೂಡು (larynx), ಉಸಿರುಗೊಳವೆ (trachea), ಕವಲುಗೊಳವೆ (bronchial tube), ನವಿರ‍್ಗೊಳವೆಗಳು (bronchioles) ಹಾಗು ಗಾಳಿಗೂಡುಗಳನ್ನು (alveoli) ಹೊಂದಿರುತ್ತದೆ. ಮನುಶ್ಯನೊಬ್ಬ 70 ವರುಶದ ಹರೆಯ ಮುಟ್ಟುವಶ್ಟರಲ್ಲಿ ಒಟ್ಟು 600 ಮಿಲಿಯನ್ ಸಲ ಉಸಿರಾಡುತ್ತಾನೆಂದರೆ ಈ ಏರ‍್ಪಾಟು ಎಶ್ಟು ಮುಕ್ಯ ಅನ್ನುವುದು ಗೊತ್ತಾಗುತ್ತದೆ.

4) ನೆತ್ತರು ಹರಿಸುವಿಕೆಯ ಏರ‍್ಪಾಟು (circulatory system) ಇಲ್ಲವೇ ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system):

ಇದು ಎದೆ-ಗುಂಡಿಗೆ (heart), ತೊರೆಗೊಳವೆ (arteries), ಸೇರುಗೊಳವೆ (veins), ನವಿರು-ನೆತ್ತರಗೊಳವೆಗಳು (capillaries), ಹಾಗು ನೆತ್ತರನ್ನು (blood) ಒಳಗೊಂಡಿರುತ್ತದೆ. ಎದೆಗುಂಡಿಗೆಯ ಮುಕ್ಯ ಕೆಲಸವೆಂದರೆ ನೆತ್ತರನ್ನು ನಮ್ಮ ಮಯ್ ಬಾಗಗಳಿಗೆ ಹರಿಸುವುದು. ನೆತ್ತರನ್ನು ಸುತ್ತಾಡಿಸುತ್ತಾ ಗೂಡು, ಗೂಡುಕಟ್ಟು ಮತ್ತು ಇತರ ಏರ‍್ಪಾಟುಗಳಿಗೆ ಬೇಕಾದ ಉಸಿರುಗಾಳಿ (oxygen) ಹಾಗು ಆರಯ್ವಗಳನ್ನು (nutrients) ತಲುಪಿಸುವುದೇ ಈ ಏರ್‍ಪಾಟಿನ ಗುರಿ.

5) ತೊಗಲಿನ ಏರ‍್ಪಾಟು (integumentary system):

ಇದು ನಮ್ಮ ಮಯ್ಯಿಯ ದೊಡ್ಡ ಏರ್‍ಪಾಟು. ಇದು ನಮ್ಮ ಮಯ್ಯನ್ನು ಹೊರಗಿನ ಅಂಶಗಳಿಂದ ಕಾಪಾಡುತ್ತದೆ ಹಾಗು ಮಯ್ ಕಾವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ. ಈ ಏರ್‍ಪಾಟು ತೊಗಲಿನ ಜೊತೆಗೆ, ಬೆವರು ಸುರಿಕೆಗಳು (sweat glands), ಮಯ್ ಜಿಡ್ಡಿನ ಸುರಿಕೆಗಳು ( sebaceous glands) , ಕೂದಲು, ಉಗುರುಗಳು, ಕೂದಲಿನ ಬುಡದಲ್ಲಿರುವ ಅರ್‍ರೆಕ್ಟೊರೆಸ್ ಪಯ್ಲೋರಂ (arrectores pillorum) ಎಂಬ ನವಿರಾದ ಮಾಂಸಗಳನ್ನು ಒಳಗೊಂಡಿದೆ.

anatomy_overview_2.docx

6) ಹಾಲಿರ‍್ಪಿನ ಏರ‍್ಪಾಟು (lymphatic system):

ಗೂಡುಗಳ ನಡುವೆ ಇರುವ ಹರಿಕಗಳನ್ನು (fluids) ತೆಗೆಯುವುದು, ಸಾಗಿಸುವುದು, ತರುಮಾರ‍್ಪಿಸುವುದು (metabolization) ಈ ಏರ‍್ಪಾಟಿನ ಗುರಿ. ಇದರ ಮುಕ್ಯ ಬಾಗಗಳೆಂದರೆ ಹಾಲ್ರಸಗಡ್ಡೆ (lymph nodes), ಹಾಲ್ರಸದ ಕೊಳವೆಗಳು (lymphatic vessels), ಮತ್ತು ಹಾಲ್ರಸ (lymph).

7) ಸುರಿಕೆ ಏರ‍್ಪಾಟು (endocrine system):

ಈ ಏರ್‍ಪಾಟು ಬಗೆಬಗೆಯ ಸುರಿಗೆಗಳನ್ನು (glands) ಒಳಗೊಂಡಿದೆ. ಇವು ಜೀವಿಯ ಕೆಲಸಗಳು ಮಾರ್‍ಪಡದಂತೆ (homeostasis) ಕಾಯ್ದುಕೊಳ್ಳಲು ಬೇಕಾಗುವ ಸುರಿಕೆಗಳನ್ನು (hormones) ಸುರಿಸುತ್ತವೆ. ಈ ಏರ್‍ಪಾಟಿನ ಮುಕ್ಯ ಅಂಗಗಳೆಂದರೆ ಕೆಳಶಿರಗುಳಿ/ಕಿರುಮಿದುಳು (hypothalamus), ತೆಮಡಿಕ ಸುರಿಕೆ (pituitary gland), ಗುರಾಣಿಕ ಸುರಿಕೆ (thyroid gland) ಮತ್ತು ಬಿಕ್ಕು (kidneys).

8) ಅರಗಿಸುವ ಏರ‍್ಪಾಟು (digestive system):

ನಾವು ತಿನ್ನುವ ಕೂಳನ್ನು ಅರಗಿಸುವುದು, ಅರಗಿದ ಕೂಳನ್ನು ಆರಯ್ವಗಳನ್ನಾಗಿ ಮಾರ‍್ಪಡಿಸುವುದು ಹಾಗು ತಿಂದ ಕೂಳಿನ ಕಸವನ್ನು ಹೊರಗೆಡುವುದು ಅರಗೇರ್‍ಪಾಟಿನ ಮುಕ್ಯ ಗೆಯ್ಮೆ. ಈ ಏರ‍್ಪಾಟು ಬಾಯಿ ( buccal cavity), ಅನ್ನನಾಳ (esophagus), ಹೊಟ್ಟೆ ( stomach), ಸಣ್ಣ ಕರುಳು (small intestine), ದೊಡ್ಡ ಕರುಳು ( large intestine), ನೆಟ್ಟಗರುಳು (rectum) ಮತ್ತು ಗೊಳ್ಳೆ (anus) ಎಂಬ ಬಾಗಗಳನ್ನು ಒಳಗೊಂಡಿದೆ.

anatomy_overview_3.docx

9) ಉಚ್ಚೆಕಟ್ಟಿನ ಏರ‍್ಪಾಟು (urinary system):

ನಾವು ತಿನ್ನುವ ಕೂಳನ್ನು ಕಸುವನ್ನಾಗಿ ಮಾರ‍್ಪಡಿಸಿದ ಮೇಲೆ ಕೆಲವು ನಂಜಿನ ಅಂಶಗಳು ಉಳಿಯುತ್ತವೆ. ಇದನ್ನು ನಮ್ಮ ಮಯ್ಯಿಯಿಂದ ಹೊರಹಾಕಲು ಅಣಿಗೊಂಡಿರುವುದೇ ಉಚ್ಚೆಕಟ್ಟಿನ ಏರ‍್ಪಾಟು. ಉಚ್ಚೆಕಟ್ಟಿನ ಏರ‍್ಪಾಟಿನ ಮುಕ್ಯ ಬಾಗಗಳೆಂದರೆ ಬಿಕ್ಕು (kidney), ಮೇಲಿನ ಉಚ್ಚೆಗೊಳವೆ (ureters), ಉಚ್ಚೆಚೀಲ (urinary bladder), ಮತ್ತು ಕೆಳಗಿನ ಉಚ್ಚೆಗೊಳವೆ (urethera).

10) ಹುಟ್ಟಿಸುವಿಕೆಯ ಏರ‍್ಪಾಟು (reproductive system):

ಈ ಏರ‍್ಪಾಟು ಗಂಡು ಮತ್ತು ಹೆಣ್ಣುಗಳಲ್ಲಿ ಬೇರೆಯಾಗಿದ್ದು ಅವರಿಬ್ಬರ ಕೂಡುವಿಕೆಯಿಂದ ಹೊಸ ಹುಟ್ಟು ಮಯ್ದಾಳುತ್ತದೆ. ತುಣ್ಣೆ (penis), ತರಡುಗಳು (testicles) ಗಂಡಿನಲ್ಲಿರುವ ಹುಟ್ಟಿಸುವ ಏರ‍್ಪಾಟಿನ ಮುಕ್ಯ ಬಾಗಗಳಾದರೆ ಒರೆತೆರ (vagina), ಬಸಿರುಚೀಲ (uterus) ಮತ್ತು ಮೊಟ್ಟೆದಾಣಗಳು ಹೆಣ್ಣಿನಲ್ಲಿರುವ ಮುಕ್ಯ ಬಾಗಗಳಾಗಿವೆ.

anatomy_overview_4.docx

11) ಕಾಪುವಿಕೆಯ ಏರ‍್ಪಾಟು (immune system):

ತನಿಬಗೆಯ (special) ಗೂಡುಗಳು, ಮುನ್ನುಗಳು (proteins), ಗೂಡಿನಕಟ್ಟು (tissues) ಹಾಗು ಅಂಗಗಳನ್ನು ಹೊಂದಿರುವ ಈ ಏರ‍್ಪಾಟು ದಂಡಾಣು (bacteria), ನಂಜುಳ (virus) ಹಾಗು ಇನ್ನಿತರ ಅಂಶಗಳಿಂದ ನಮ್ಮ ಮಯ್ಯಯಿಗೆ ಕೆಡುಕುಂಟಾಗದಂತೆ ಕಾವಲು ಕಾಯುತ್ತದೆ.

ಮುಂದಿನ ಬರಹಗಳಲ್ಲಿ ಈ ಎಲ್ಲ ಏರ‍್ಪಾಟುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

(ಚಿತ್ರ ಸೆಲೆಗಳು: cnx.org )

(ಈ ಬರಹವು ಹೊಸಬರಹದಲ್ಲಿದೆ)