ಮನುಶ್ಯರ ಮಯ್ಯಿ

ಮನುಶ್ಯನ ಮಯ್ಯನ್ನು ಹೊರಗಿನಿಂದ ತಲೆ, ಕುತ್ತಿಗೆ, ಸೊಂಟ, ಎರಡು ಕಾಲು ಹಾಗು ಎರಡು ಕಯ್ಯಿಗಳಾಗಿ ಗುಂಪಿಸಬಹುದು. ಮೇಲಿನಿಂದ ಕಾಣುವ ಇವೆಲ್ಲವುಗಳನ್ನು ಹಿಡಿತದಲ್ಲಿಡಲು ಮಯ್ಯಿಯ ಒಳಗೆ ಹಲವು ಬಗೆಯ, ತುಂಬಾ ಅಚ್ಚುಕಟ್ಟಾದ ಏರ‍್ಪಾಟುಗಳಿವೆ.

ನಮ್ಮ ಮಯ್ಯಿಯೊಳಗಿನ ಮುಕ್ಯವಾದ ಏರ‍್ಪಾಟುಗಳು ಮತ್ತು ಅವುಗಳ ಕೆಲಸಗಳು ಈ ಕೆಳಗಿನಂತಿವೆ,

1) ಹುರಿಕಟ್ಟಿನ ಏರ‍್ಪಾಟು (musculo-skeletal system): 

ಈ ಏರ‍್ಪಾಟು ಮುಕ್ಯವಾಗಿ ಮೂಳೆಗಳು, ಮೂಳೆ ಕೀಲುಗಳು, ಮೂಳೆಗಳಿಂದ ಮಾಡಲ್ಪಟ್ಟ ಎಲುಬಿನ ಗೂಡುಗಳನ್ನು ಹೊಂದಿರುತ್ತದೆ. ಮಾಂಸ, ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons), ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments) ಹಾಗು ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳೂ (cartilage) ಹುರಿಕಟ್ಟಿನ ಇತರ ಬಾಗಗಳಾಗಿವೆ.

ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ 206 ಮೂಳೆಗಳು ಮತ್ತು 230 ಮೂಳೆ ಕೀಲುಗಳಿದ್ದು, ಅವುಗಳ ಮೇಳಯ್ಸಿದ ಕೆಲಸದಿಂದಾಗಿ ಮನುಶ್ಯನು ತನ್ನ ಇತರ ಮಯ್ ಬಾಗಗಳನ್ನು ಅಲುಗಾಡಿಸಲು ಇಲ್ಲವೇ ಬಳಸುವಂತಾಗುವುದು.

2) ನರಗಳ ಏರ‍್ಪಾಟು (nervous system):

ಇದು ಸುತ್ತ-ಮುತ್ತಲಿನ ಅರಿವನ್ನು ತಿಳಿಸುವ ಸೂಚನೆಗಳನ್ನು ಸಾಗಿಸುವ ಗೂಡುಗಳನ್ನು ಹೊಂದಿರುತ್ತದೆ. ಮಿದುಳು, ಮಿದುಳು ಬಳ್ಳಿ (spinal cord) ಹಾಗು ಇವುಗಳಿಗೆ ಹೊಂದಿಕೊಂಡ ನರಗಳು ಇದರ ಮುಕ್ಯ ಬಾಗಗಳು.

anatomy_overview_1.docx

3) ಉಸಿರಾಟದ ಏರ‍್ಪಾಟು (respiratory system):

ಉಸಿರಾಟದ ಏರ‍್ಪಾಟು ಮೂಗು, ಮುನ್ಗಂಟಲು (pharynx), ಉಲಿಪೆಟ್ಟಿಗೆ/ಗಂಟಲಗೂಡು (larynx), ಉಸಿರುಗೊಳವೆ (trachea), ಕವಲುಗೊಳವೆ (bronchial tube), ನವಿರ‍್ಗೊಳವೆಗಳು (bronchioles) ಹಾಗು ಗಾಳಿಗೂಡುಗಳನ್ನು (alveoli) ಹೊಂದಿರುತ್ತದೆ. ಮನುಶ್ಯನೊಬ್ಬ 70 ವರುಶದ ಹರೆಯ ಮುಟ್ಟುವಶ್ಟರಲ್ಲಿ ಒಟ್ಟು 600 ಮಿಲಿಯನ್ ಸಲ ಉಸಿರಾಡುತ್ತಾನೆಂದರೆ ಈ ಏರ‍್ಪಾಟು ಎಶ್ಟು ಮುಕ್ಯ ಅನ್ನುವುದು ಗೊತ್ತಾಗುತ್ತದೆ.

4) ನೆತ್ತರು ಹರಿಸುವಿಕೆಯ ಏರ‍್ಪಾಟು (circulatory system) ಇಲ್ಲವೇ ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system):

ಇದು ಎದೆ-ಗುಂಡಿಗೆ (heart), ತೊರೆಗೊಳವೆ (arteries), ಸೇರುಗೊಳವೆ (veins), ನವಿರು-ನೆತ್ತರಗೊಳವೆಗಳು (capillaries), ಹಾಗು ನೆತ್ತರನ್ನು (blood) ಒಳಗೊಂಡಿರುತ್ತದೆ. ಎದೆಗುಂಡಿಗೆಯ ಮುಕ್ಯ ಕೆಲಸವೆಂದರೆ ನೆತ್ತರನ್ನು ನಮ್ಮ ಮಯ್ ಬಾಗಗಳಿಗೆ ಹರಿಸುವುದು. ನೆತ್ತರನ್ನು ಸುತ್ತಾಡಿಸುತ್ತಾ ಗೂಡು, ಗೂಡುಕಟ್ಟು ಮತ್ತು ಇತರ ಏರ‍್ಪಾಟುಗಳಿಗೆ ಬೇಕಾದ ಉಸಿರುಗಾಳಿ (oxygen) ಹಾಗು ಆರಯ್ವಗಳನ್ನು (nutrients) ತಲುಪಿಸುವುದೇ ಈ ಏರ್‍ಪಾಟಿನ ಗುರಿ.

5) ತೊಗಲಿನ ಏರ‍್ಪಾಟು (integumentary system):

ಇದು ನಮ್ಮ ಮಯ್ಯಿಯ ದೊಡ್ಡ ಏರ್‍ಪಾಟು. ಇದು ನಮ್ಮ ಮಯ್ಯನ್ನು ಹೊರಗಿನ ಅಂಶಗಳಿಂದ ಕಾಪಾಡುತ್ತದೆ ಹಾಗು ಮಯ್ ಕಾವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ. ಈ ಏರ್‍ಪಾಟು ತೊಗಲಿನ ಜೊತೆಗೆ, ಬೆವರು ಸುರಿಕೆಗಳು (sweat glands), ಮಯ್ ಜಿಡ್ಡಿನ ಸುರಿಕೆಗಳು ( sebaceous glands) , ಕೂದಲು, ಉಗುರುಗಳು, ಕೂದಲಿನ ಬುಡದಲ್ಲಿರುವ ಅರ್‍ರೆಕ್ಟೊರೆಸ್ ಪಯ್ಲೋರಂ (arrectores pillorum) ಎಂಬ ನವಿರಾದ ಮಾಂಸಗಳನ್ನು ಒಳಗೊಂಡಿದೆ.

anatomy_overview_2.docx

6) ಹಾಲಿರ‍್ಪಿನ ಏರ‍್ಪಾಟು (lymphatic system):

ಗೂಡುಗಳ ನಡುವೆ ಇರುವ ಹರಿಕಗಳನ್ನು (fluids) ತೆಗೆಯುವುದು, ಸಾಗಿಸುವುದು, ತರುಮಾರ‍್ಪಿಸುವುದು (metabolization) ಈ ಏರ‍್ಪಾಟಿನ ಗುರಿ. ಇದರ ಮುಕ್ಯ ಬಾಗಗಳೆಂದರೆ ಹಾಲ್ರಸಗಡ್ಡೆ (lymph nodes), ಹಾಲ್ರಸದ ಕೊಳವೆಗಳು (lymphatic vessels), ಮತ್ತು ಹಾಲ್ರಸ (lymph).

7) ಸುರಿಕೆ ಏರ‍್ಪಾಟು (endocrine system):

ಈ ಏರ್‍ಪಾಟು ಬಗೆಬಗೆಯ ಸುರಿಗೆಗಳನ್ನು (glands) ಒಳಗೊಂಡಿದೆ. ಇವು ಜೀವಿಯ ಕೆಲಸಗಳು ಮಾರ್‍ಪಡದಂತೆ (homeostasis) ಕಾಯ್ದುಕೊಳ್ಳಲು ಬೇಕಾಗುವ ಸುರಿಕೆಗಳನ್ನು (hormones) ಸುರಿಸುತ್ತವೆ. ಈ ಏರ್‍ಪಾಟಿನ ಮುಕ್ಯ ಅಂಗಗಳೆಂದರೆ ಕೆಳಶಿರಗುಳಿ/ಕಿರುಮಿದುಳು (hypothalamus), ತೆಮಡಿಕ ಸುರಿಕೆ (pituitary gland), ಗುರಾಣಿಕ ಸುರಿಕೆ (thyroid gland) ಮತ್ತು ಬಿಕ್ಕು (kidneys).

8) ಅರಗಿಸುವ ಏರ‍್ಪಾಟು (digestive system):

ನಾವು ತಿನ್ನುವ ಕೂಳನ್ನು ಅರಗಿಸುವುದು, ಅರಗಿದ ಕೂಳನ್ನು ಆರಯ್ವಗಳನ್ನಾಗಿ ಮಾರ‍್ಪಡಿಸುವುದು ಹಾಗು ತಿಂದ ಕೂಳಿನ ಕಸವನ್ನು ಹೊರಗೆಡುವುದು ಅರಗೇರ್‍ಪಾಟಿನ ಮುಕ್ಯ ಗೆಯ್ಮೆ. ಈ ಏರ‍್ಪಾಟು ಬಾಯಿ ( buccal cavity), ಅನ್ನನಾಳ (esophagus), ಹೊಟ್ಟೆ ( stomach), ಸಣ್ಣ ಕರುಳು (small intestine), ದೊಡ್ಡ ಕರುಳು ( large intestine), ನೆಟ್ಟಗರುಳು (rectum) ಮತ್ತು ಗೊಳ್ಳೆ (anus) ಎಂಬ ಬಾಗಗಳನ್ನು ಒಳಗೊಂಡಿದೆ.

anatomy_overview_3.docx

9) ಉಚ್ಚೆಕಟ್ಟಿನ ಏರ‍್ಪಾಟು (urinary system):

ನಾವು ತಿನ್ನುವ ಕೂಳನ್ನು ಕಸುವನ್ನಾಗಿ ಮಾರ‍್ಪಡಿಸಿದ ಮೇಲೆ ಕೆಲವು ನಂಜಿನ ಅಂಶಗಳು ಉಳಿಯುತ್ತವೆ. ಇದನ್ನು ನಮ್ಮ ಮಯ್ಯಿಯಿಂದ ಹೊರಹಾಕಲು ಅಣಿಗೊಂಡಿರುವುದೇ ಉಚ್ಚೆಕಟ್ಟಿನ ಏರ‍್ಪಾಟು. ಉಚ್ಚೆಕಟ್ಟಿನ ಏರ‍್ಪಾಟಿನ ಮುಕ್ಯ ಬಾಗಗಳೆಂದರೆ ಬಿಕ್ಕು (kidney), ಮೇಲಿನ ಉಚ್ಚೆಗೊಳವೆ (ureters), ಉಚ್ಚೆಚೀಲ (urinary bladder), ಮತ್ತು ಕೆಳಗಿನ ಉಚ್ಚೆಗೊಳವೆ (urethera).

10) ಹುಟ್ಟಿಸುವಿಕೆಯ ಏರ‍್ಪಾಟು (reproductive system):

ಈ ಏರ‍್ಪಾಟು ಗಂಡು ಮತ್ತು ಹೆಣ್ಣುಗಳಲ್ಲಿ ಬೇರೆಯಾಗಿದ್ದು ಅವರಿಬ್ಬರ ಕೂಡುವಿಕೆಯಿಂದ ಹೊಸ ಹುಟ್ಟು ಮಯ್ದಾಳುತ್ತದೆ. ತುಣ್ಣೆ (penis), ತರಡುಗಳು (testicles) ಗಂಡಿನಲ್ಲಿರುವ ಹುಟ್ಟಿಸುವ ಏರ‍್ಪಾಟಿನ ಮುಕ್ಯ ಬಾಗಗಳಾದರೆ ಒರೆತೆರ (vagina), ಬಸಿರುಚೀಲ (uterus) ಮತ್ತು ಮೊಟ್ಟೆದಾಣಗಳು ಹೆಣ್ಣಿನಲ್ಲಿರುವ ಮುಕ್ಯ ಬಾಗಗಳಾಗಿವೆ.

anatomy_overview_4.docx

11) ಕಾಪುವಿಕೆಯ ಏರ‍್ಪಾಟು (immune system):

ತನಿಬಗೆಯ (special) ಗೂಡುಗಳು, ಮುನ್ನುಗಳು (proteins), ಗೂಡಿನಕಟ್ಟು (tissues) ಹಾಗು ಅಂಗಗಳನ್ನು ಹೊಂದಿರುವ ಈ ಏರ‍್ಪಾಟು ದಂಡಾಣು (bacteria), ನಂಜುಳ (virus) ಹಾಗು ಇನ್ನಿತರ ಅಂಶಗಳಿಂದ ನಮ್ಮ ಮಯ್ಯಯಿಗೆ ಕೆಡುಕುಂಟಾಗದಂತೆ ಕಾವಲು ಕಾಯುತ್ತದೆ.

ಮುಂದಿನ ಬರಹಗಳಲ್ಲಿ ಈ ಎಲ್ಲ ಏರ‍್ಪಾಟುಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು.

(ಚಿತ್ರ ಸೆಲೆಗಳು: cnx.org )

(ಈ ಬರಹವು ಹೊಸಬರಹದಲ್ಲಿದೆ)