E20 ವರವೋ ಇಲ್ಲ ಶಾಪವೋ?

ಜಯತೀರ್ಥ ನಾಡಗೌಡ

E20 ವಿಚಾರಗಳು ಎಲ್ಲೆಡೆ ಮಾತುಕತೆಯ ವಿಷಯವಾಗಿದೆ. ಫೇಸ್‍ಬುಕ್, ಎಕ್ಸ್, ಲಿಂಕ್ಡ್‌ಇನ್ ನಂತಹ ಸಾಮಾಜಿಕ ಜಾಲತಾಣಗಳಿಂದ ಹಿಡಿದು ರಾಜಕೀಯವಲಯಗಳಲ್ಲೂ ಇದೇ ಪ್ರಮುಖ ವಿಷಯ. ಈ ಹೊತ್ತಿನ ವಿಷಯ ವಸ್ತುವಾಗಿರುವ E20 ಬಗ್ಗೆ ತಿಳಿಯೋಣ ಬನ್ನಿ.

ಏನಿದು E20?

ಇಥೆನಾಲ್‌ನ 20% ಪ್ರಮಾಣದಲ್ಲಿ ಪೆಟ್ರೋಲ್ ಉರುವಲಿನೊಂದಿಗೆ ಬೆರೆಸಿದರೆ ಅದೇ E20. ವಾಹನಗಳಲ್ಲಿ E20 ಬಳಸಿದರೆ ಕಾರ್ಬನ್ ನಂತ ನಂಜಿನ ಹೊಗೆಯ ಪ್ರಮಾಣ ಕಡಿಮೆ ಮಾಡಿ, ಮುಗಿದುಹೋಗಬಲ್ಲ ಉರುವಲಾದ ಪೆಟ್ರೋಲ್ ಮೇಲಿನ ಅವಲಂಬನೆ ಕಡಿತಗೊಳಿಸಬಹುದು.

ಇಥೈಲ್ ಆಲ್ಕೋಹಾಲ್‍ನ ಕಿರಿದಾಗಿಸಿ ಇಥೆನಾಲ್ ಎಂದು ಕರೆಯುತ್ತಾರೆ. ಇಥೆನಾಲ್ ಒಂದು ನೀರಿನಂತೆ ತಿಳಿಯಾಗಿರುವ (ಯಾವುದೇ ಬಣ್ಣವಿರುವುದಿಲ್ಲ), ತನ್ನದೇ ವಿಶೇಷ ವಾಸನೆ ಮತ್ತು ರುಚಿ ಹೊಂದಿರುತ್ತದೆ. ಚೊಕ್ಕವಾಗಿರುವ ಇಥೆನಾಲ್ ವಿಷಕಾರಿಯಲ್ಲ ಹಾಗೂ ಜೈವಿಕ ಸರಪಣಿಯಲ್ಲಿ ಸುಲಭವಾಗಿ ಒಡೆದು ಸೇರಿಹೋಗಬಲ್ಲ (Biodegradable) ರಾಸಾಯನಿಕ. ರಾಸಾಯನಿಕವಾಗಿ ಇದನ್ನು C2H5OH ಎಂದು ಬರೆಯಬಹುದು. ಇದರಲ್ಲಿ ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳು ಸೇರಿರುತ್ತವೆ. ಇಥೆನಾಲ್ ವಾತಾವರಣದಲ್ಲಿ ಸೋರಿಕೆಯಾದರೆ ಯಾವುದೇ ಅಪಾಯವೂ ಇರುವುದಿಲ್ಲ. ಆದರೆ ಉರುವಲಿನ ರೂಪದಲ್ಲಿರುವ ಇಥೆನಾಲ್‍ಗೆ ಡಿನಾಚ್ಯುರಂಟ್‌(Denaturant) ರಾಸಾಯನಿಕ ಸೇರಿಸುತ್ತಾರೆ, ಆದುದ್ದರಿಂದ ಇದು ಕುಡಿಯಲು ತಕ್ಕುದಲ್ಲ.

E20 ತಯಾರಿಸುವ ಬಗೆ:

ಸ್ಟಾರ್ಚ್ ಮತ್ತು ಸಕ್ಕರೆ ಪ್ರಮಾಣ ಹೊಂದಿರುವ ಕಬ್ಬು, ಮೆಕ್ಕೆಜೋಳ, ಗೋಧಿ, ಬಾರ್ಲಿ ಮುಂತಾದ ಬೆಳೆಗಳಿಂದ ಇಥೆನಾಲ್ ಪಡೆಯಬಹುದು. ಬೆಳೆಗಳನ್ನು ಹುದುಗೆಬ್ಬಿಸುವ(Fermentation) ಮೂಲಕ ಇಥೆನಾಲ್ ಪಡೆಯಬಹುದು. ದನಕರು, ಆಡು ಮೇಕೆ ಮುಂತಾದ ಸಾಕುಪ್ರಾಣಿಗಳಿಗೆ ನೀಡಲಾಗುವ ಬಾರ್ಲಿಯಂತ ಬೇಳೆಕಾಳುಗಳಿಗೆ ಯೀಸ್ಟ್, ಬ್ಯಾಕ್ಟೇರಿಯಾಗಳನ್ನು ಸೇರಿಸಿದಾಗ ಅವುಗಳಿಂದ ಹೆಚ್ಚಿನ ಪ್ರಮಾಣದ ಸಕ್ಕರೆ, ಸ್ಟಾರ್ಚ್ ಕೊಬ್ಬನ್ನು ಪಡೆಯಬಹುದು ಇದರಿಂದಲೇ ಇಥೆನಾಲ್ ಪ್ರಮಾಣ ಹೆಚ್ಚಿಸಬಹುದು. ಹೀಗೆ ಹುದುಗೆಬ್ಬಿಸುವಿಕೆಯಿಂದ ಪಡೆದಂತಹ ಇಥೆನಾಲ್ ಜೊತೆಗೆ ನೀರು, ಇತರೆ ವಸ್ತುಗಳು ಸೇರಿರುತ್ತವೆ. ಇವುಗಳಿಂದ ಇಥೆನಾಲ್‌ಅನ್ನು ವಿಂಗಡಿಸಲು ಬಟ್ಟಿ ಇಳಿಸುವಿಕೆ(Distillation) ಮಾಡಲಾಗುತ್ತದೆ. ಇದರಿಂದಲೂ ಚೊಕ್ಕ ಇಥೆನಾಲ್ ಸಿಗದೇ ಇದ್ದಾಗ ನೀರಿಳಿತ(Dehydration) ಮಾಡಿ ಇಥೆನಾಲ್ ಅನ್ನು ಹೊರತೆಗೆಯಲಾಗುತ್ತದೆ. ಈ ರೀತಿ ಸಿಗುವ ಇಥೆನಾಲ್‌ಗೆ ಪೆಟ್ರೋಲ್ ಉರುವಲನ್ನು ಅಳತೆಗೆ ತಕ್ಕಂತೆ ಅಂದರೆ E10,E15 ಮತ್ತು E20 ಮಿಶ್ರಣ ಬೆರೆಸಿ ಉರುವಲನ್ನು ಬಳಕೆಗೆ ತಕ್ಕುದಾಗಿರುವಂತೆ ಮಾಡುತ್ತಾರೆ. 

E20 ವರವೋ ಇಲ್ಲ ಶಾಪವೋ?

ಈ20 ಪೆಟ್ರೋಲ್‌ದಿಂದ ಅನುಕೂಲವೋ ಇಲ್ಲವೇ ಅನಾನುಕೂಲವೋ ಎಂಬುದು ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಹಲವಾರು ಗಾಡಿ ಓಡಿಸುಗರು, ಮಾಲೀಕರು ಈ20 ಪೆಟ್ರೋಲ್ ಬಳಸಬೇಕೆ ಇಲ್ಲವೇ ಎಂಬ ಗೊಂದಲದಲ್ಲಿದ್ದಾರೆ. ಈ20 ಉರುವಲು ಬಳಸಿ ಓಡಾಡುತ್ತಿರುವ ಹಲವು ಕಾರುಗಳ ಮಾಲೀಕರು ಕಡಿಮೆ ಮೈಲಿಯೋಟ, ಬಿಣಿಗೆಯ(Engine) ಬಾಳಿಕೆ-ತಾಳಿಕೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಕೊಂಚ ಆಳಕ್ಕಿಳಿದು ನೋಡೋಣ.

ಏಪ್ರಿಲ್ 2023ರಲ್ಲಿ ಭಾರತದ ಆಯ್ದ ನಗರಗಳಲ್ಲಿ ಈ20 ಉರುವಲಿನ ಬಳಕೆಗೆ, ಭಾರತ ಸರಕಾರ ಶುರುಮಾಡಿತ್ತು. ಭಾರತದೆಲ್ಲೆಡೆ ಇದೇ ವರ್ಷದ ಏಪ್ರಿಲ್ ನಿಂದ ಈ20 ಉರುವಲಿನ ಬಳಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಬೇಗನೇ ಈ20 ಬಳಕೆಯನ್ನು ಅಳವಡಿಸಿಕೊಳ್ಳಲು ಮೊದ-ಮೊದಲು ವಾಹನ ಮತ್ತು ಬಿಡಿಭಾಗಗಳ ತಯಾರಕರು ಹಿಂದೇಟುಹಾಕಿದ್ದರು. ಕಾರಣ, ಕಡಿಮೆ ಹೊತ್ತಿನಲ್ಲಿ ಬಿಣಿಗೆ ಮತ್ತು ವಾಹನಗಳನ್ನು ಓರೆಗೆ ಹಚ್ಚಿ, ಬಿಡಿಭಾಗಗಳನ್ನು ಪರೀಕ್ಷಿಸಿ ಅವುಗಳ ತಾಳಿಕೆ ಬಾಳಿಕೆಯ ಬಗ್ಗೆ ಮಾಹಿತಿ ಕಲೆಹಾಕಲಾಗದೆಂದು ಒತ್ತಾಯಿಸಿದ್ದರು.

ಪೆಟ್ರೋಲ್‍ನೊಂದಿಗೆ ಇಥೆನಾಲ್ ಬೆರಸಿದಾಗ ಅಂದರೆ ಈ20 ಯಿಂದಾಗುವ ಅನುಕೂಲಗಳು:

  1. ಹೇರಳವಾದ ಆಕ್ಸಿಜನ್ ಹೊಂದಿರುವ ಇಥೆನಾಲ್ ಮಿಶ್ರಣ ಹೆಚ್ಚಿನ ಆಕ್ಟೇನ್ ನಂಬರ್ (Octane Number-RON) ಪಡೆದಿದೆ. ಇದರಿಂದ ಬಿಣಿಗೆಯೊಳಗೆ ಉರುವಲು ಚೆನ್ನಾಗಿ ಉರಿದು ಕಡಿಮೆ ಕಾರ್ಬನ್, ಇತರೆ ಹೊಗೆ ಹೊರಸೂಸುತ್ತದೆ. ಇದು ಪರಿಸರ ಹೆಚ್ಚು ಹಸನಾಗಿಡುತ್ತದೆ.
  2. ಹೆಚ್ಚಿನ ಆಕ್ಟೇನ್ ನಂಬರ್ ಹೊಂದಿರುವ ಈ20ಯಿಂದ, ಪೆಟ್ರೋಲ್ ಬಿಣಿಗೆಗಳಲ್ಲಿ ಕಂಡುಬರುವ ನಾಕಿಂಗ್(Knocking) ಸಮಸ್ಯೆಯನ್ನು ಕಡಿತಗೊಳಿಸುತ್ತದೆ. ಇದರಿಂದ ಬಿಣಿಗೆಯ ಬಾಳಿಕೆಯು ಹೆಚ್ಚಲಿದೆ.
  3. ಸಾಮಾನ್ಯ ಪೆಟ್ರೋಲ್ ಬದಲು 80% ಪೆಟ್ರೋಲ್ ಮತ್ತು 20% ಇಥೆನಾಲ್ ಬಳಕೆಯಿಂದ, ಹೆಚ್ಚಿನ ಪೆಟ್ರೋಲ್ ಮೇಲಿನ ಅವಲಂಬನೆ ಮತ್ತು ಪೆಟ್ರೋಲ್ ಆಮದಿನ ಮೇಲೆ ಭಾರತದ ಹೊರೆ ತಪ್ಪುತ್ತದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ಹಣದ ಉಳಿತಾಯವಾಗಲಿದೆ.
  4. ಇಥೆನಾಲ್ ದೇಶದಲ್ಲೇ ತಯಾರಿಸಬಹುದು, ಇದರಿಂದ ದೇಶದೊಳಗಿನ ಇಥೆನಾಲ್ ಕೈಗಾರಿಕೆಗೆ ಹುರುಪು ತುಂಬುವುದಲ್ಲದೇ ದೇಶದ ಹಣಕಾಸಿಗೆ ಲಾಭ ತರಲಿದೆ.
  5. ದೇಶೀಯ ಕೃಷಿ ಆಧಾರಿತ ಕೈಗಾರಿಕೆಗೆ ಬೆಂಬಲ ನೀಡುವುದರಿಂದ ಹೆಚ್ಚಿನ ಕೆಲಸಗಳು ಹುಟ್ಟುಕೊಳ್ಳುವುದಲ್ಲದೇ ಹಳ್ಳಿ-ಹೋಬಳಿ ಮಟ್ಟದ ಆರ್ಥಿಕತೆಯನ್ನು ಬಲಪಡಿಸಲಿದೆ.

ಅನಾನುಕೂಲಗಳು:

  1. ಈಗ ರಸ್ತೆಯಲ್ಲಿ ಓಡಾಡುವ ಎಲ್ಲ ಪೆಟ್ರೋಲ್ ಬಂಡಿಗಳು ಈ20 ಬಳಕೆಗೆ ತಕ್ಕುದಾಗಿಲ್ಲ. 2023ಕ್ಕಿಂತಲೂ ಹಳೆಯದಾದ ಗಾಡಿಗಳು ಸಾಕಷ್ಟಿವೆ. ಆದ್ದರಿಂದ ಎಲ್ಲ ಗಾಡಿಗಳಿಗೆ ಈ20 ಉರುವಲನ್ನು ಬಳಕೆ ಮಾಡಲಾಗದು. ಹಳೆಯ ಗಾಡಿಗಳು ಈ20 ಉರುವಲಿಗೆ ತಕ್ಕ ಬಿಡಿಭಾಗಗಳನ್ನು ಪಡೆದಿಲ್ಲ. ಹಳತಾದ ಗಾಡಿಗಳಿಗೆ ಈ20 ಉರುವಲು ಬಳಸುವುದು ಸರಿಯಲ್ಲ.
  2. ತುಕ್ಕು ಹಿಡಿಯುವಿಕೆಯ ಸಮಸ್ಯೆ: ಇಥೆನಾಲ್ ತನ್ನದೇಯಾದ ರಾಸಾಯನಿಕ ಗುಣಗಳನ್ನು ಹೊಂದಿದೆ, ಇದಕ್ಕೆ ತಕ್ಕಂತ ಉರುವಿಲಿನ ಕೊಳವೆ/ಕೊಳಾಯಿ (fuel tank/pipes) ಮುಂತಾದ ಬಿಡಿಭಾಗಗಳನ್ನು ಮಾರ್ಪಡಿಸಬೇಕು. ಇಲ್ಲದೇ ಹೋದಲ್ಲಿ ಬಿಡಿಭಾಗಗಳು ಬೇಗನೇ ಹಾಳಗುವ ಸಾಧ್ಯತೆಯಿರುತ್ತದೆ.
  3. ಇಥೆನಾಲ್ ಹೆಚ್ಚು ತೇವಾಂಶ ಹೀರಿಕೊಳ್ಳುವ ಗುಣಹೊಂದಿದೆ. ಇದೇ ಕಾರಣಕೆ, ಮೇಲೆ ಹೇಳಿದಂತೆ ಇದು ತುಕ್ಕು ಹಿಡಿಯಲು ನೆರವಾಗುತ್ತದೆ. ಇದರಿಂದ ಕೇವಲ ಲೋಹದ ಬಿಡಿಭಾಗಗಳಷ್ಟೇ ಅಲ್ಲದೇ, ಪ್ಲ್ಯಾಸ್ಟಿಕ್, ರಬ್ಬರ್ ಭಾಗಗಳು ಸವೆದು, ಬಿರುಕು ಮೂಡಲಾರಂಭಿಸಿ ಹಾಳಾಗುತ್ತವೆ.
  4. ಇಥೆನಾಲ್ ತಯಾರಿಸಲು ಕಬ್ಬು, ಮೆಕ್ಕೆಜೋಳದಂತ ಬೆಳೆಗಳು ಬೇಕು. ಹೆಚ್ಚಿನ ಇಳುವರಿ ಪಡೆಯಲು ರೈತರು  ಹೆಚ್ಚಿನ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿ ಹೊಲಗದ್ದೆಗಳಿಗೆ ಹೆಚ್ಚಿನ ಹಾನಿ ಮಾಡುವುದಲ್ಲದೇ, ವಾತಾವರಣದ ಮಾಲಿನ್ಯಕ್ಕೆ ಕಾರಣವಾಗಬಹುದು. ಇದು ಮಣ್ಣಿನ ಸವಕಳಿಯನ್ನು ಇಮ್ಮಡಿಗೊಳಿಸುವ ಅಪಾಯ ತಂದೊಡ್ಡಲಿದೆ.
  5. ಇಥೆನಾಲ್ ಬಳಕೆಗೆ ತಕ್ಕಂತ ಸೌಲಭ್ಯಗಳನ್ನು ಬೆಳವಣಿಗೆಗೊಳಿಸುವುದು ಸುಲಭವಲ್ಲ. ಇಥೆನಾಲ್ ತಯಾರಿಸಿ, ಕೂಡಿಡಲು ಕೊಳಾಯಿಗಳು, ಅದನ್ನು ಸಾಗಿಸಲು ಹಳ್ಳಿಯಿಂದ ದಿಲ್ಲಿಯವರೆಗೆ ನಳಿಕೆ/ಕೊಳವೆಗಳ ಸಂಪರ್ಕ ಜಾಲವನ್ನು ಬೆಳವಣಿಗೆ ಮಾಡಲು ಸಾವಿರಾರು ಕೋಟಿ ಹಣಬೇಕು. ಇದು ದೇಶದ ಬೊಕ್ಕಸಕ್ಕೆ ಹೊರೆಯಾಗುವುದು.
  6. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಇಥೆನಾಲ್ ಒಳ್ಳೆಯ ಕರುಗುಕ(solvent). ಇದು ಉರುವಲು ಚೀಲದಲ್ಲಿರುವ ಕಸಕಡ್ಡಿಗಳನ್ನು ಕರಗಿಸಿಕೊಂಡಿರುತ್ತದೆ. ಇದು ಮುಂದೆ ಚಿಮ್ಮುಕ(Nozzle), ಸೋಸುಕಗಳನ್ನು(Filter) ಸೇರಿ, ಅವುಗಳಿಗೆ ಅಡ್ದಿಯಾಗುತ್ತದೆ. ಇದು ಗಾಡಿಯ ಮೈಲಿಯೋಟ ಮೇಲೆ ಪರಿಣಾಮ ಬೀರುವುದಲ್ಲದೇ, ಗಾಡಿಯನ್ನು ಪದೇ ಪದೇ ನೆರವುತಾಣಗಳಿಗೆ ಕೊಂಡೊಯ್ದು ಸೋಸುಕ ಮುಂತಾದವುಗಳನ್ನು ಸ್ವಚ್ಚಗೊಳಿಸಬೇಕಾಗುತ್ತದೆ.

ನಮ್ಮದು ಈಗಾಗಲೇ ಒಂದು ಬಂಡಿಯಿದ್ದರೆ ಏನು ಮಾಡಬೇಕು? ಈ20 ಉರುವಲು ಬಳಸಬೇಕೆ ಬೇಡವೇ?

  1. ನಮ್ಮ ಗಾಡಿಯ ಜೊತೆಗೆ ನೀಡಲಾಗಿರುವ ಕೈಪಿಡಿಯನ್ನು ಓದಿ, ಯಾವ ಉರುವಲು ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಅನುಮಾನಗಳಿದ್ದಲ್ಲಿ, ಹತ್ತಿರದ ಮಾರಾಟ ಮಳಿಗೆಗೆ ಭೇಟಿ ನೀಡಿ ಪೂರ್ತಿ ವಿವರ ಪಡೆದು ಕೊಳ್ಳಬೇಕು.
  2. ಗಾಡಿಯು ಈ20 ಉರುವಲಿಗೆ ತಕ್ಕದಾಗಿಲ್ಲವಾದರೆ, ಈ ಉರುವಲನ್ನು ಬಳಸುವುದು ಬೇಡ. ಹಲವು ಗಾಡಿ ತಯಾರಕರು ಹಳೆಯ ಗಾಡಿಗಳನ್ನು ಈ20ಗೆ ತಕ್ಕಂತೆ ಮಾರ್ಪಾಡಿಸುವ ಕೆಲಸದಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ಮಾರ್ಪಡಿಸಿದ ನಂತರ, ತಯಾರಕರ ಸಲಹೆಯಂತೆ ಈ20 ಉರುವಲಿನ ಬಳಕೆ ಮಾಡಬಹುದು.

ಈ20ಗೆ ಮಾರ್ಪಾಡಿಸಲು ಬಂಡಿ ತಯಾರಕರು ಬಂಡಿಯಲ್ಲಿ ಯಾವ ರೀತಿಯ ಬದಲಾವಣೆಗಳು ಇರಲಿವೆ.

  1. ಮೊದಲನೇಯದಾಗಿ ಉರುವಲನ್ನು ಹೊತ್ತೊಯ್ಯುವ ಕೊಳವೆ, ಉರುವಲು ಚೀಲ(Fuel Tank), ಚಿಮ್ಮುಕ, ಬಿಣಿಗೆಯಲ್ಲಿ ಉರುವಲು ಏರ್ಪಾಟಿನ ವಿವಿಧ ಭಾಗಗಳು ಮಾರ್ಪಡಿಸಲಾಗುತ್ತದೆ.
  2. ಉರುವಲು ಏರ್ಪಾಟಿನಲ್ಲಿ ಬಳಸಲಾಗುವ ರಬ್ಬರ್, ಪ್ಲ್ಯಾಸ್ಟಿಕ್ ಮುಂತಾದ ಸವೆದು ಹೋಗುವ ಭಾಗಗಳು ಬದಲಾಯಿಸಿ ಈ20ಗೆ ತಕ್ಕಂತೆ ಮರು ಈಡುಗಾರಿಕೆ ಮಾಡುತ್ತಾರೆ.
  3. ಬಂಡಿಯಲ್ಲಿ ಬಳಸಲಾಗುವ ಆಕ್ಸಿಜನ್ ಅರಿವಿಕ(O2 Sensor), ಉರುವಲಿನ ಅರಿವಿಕಗಳನ್ನು(Fuel Sensor) ಮರು ಈಡುಗಾರಿಕೆ ಮಾಡಿಯೋ ಇಲ್ಲವೋ ಉರುವಲಿಗೆ ತಕ್ಕಂತೆ ಮರು ತಿಡಿ/ತಿದ್ದುಪಡಿ ಮಾಡಿ, ಬಿಣಿಗೆಯ ಗಣಕದೊಂದಿಗೆ ಸರಿಹೊಂದಿಸುತ್ತಾರೆ (Calibration).
  4. ಇವೆಲ್ಲ ಮುಗಿದ ಮೇಲೆ, ಮಾರ್ಪಾಡುಗೊಂಡ ಬಿಣಿಗೆ ಮತ್ತು ಬಂಡಿಗಳನ್ನು ವಿವಿಧ ರೀತಿಯಾಗಿ ನೂರಾರು ಗಂಟೆಗಳ ಕಾಲ ಓರೆಗೆ ಹಚ್ಚಿ ಎಲ್ಲವೂ ನೆಟ್ಟಗೆ ಕೆಲಸ ಮಾಡಲಾಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

 

ಈ20 ಉರುವಲನ್ನು ಬಳಸುವ ಮುನ್ನ, ನಿಮ್ಮ ಬಂಡಿ ತಯಾರಕರು ನೀಡಿರುವ ಬಳಕೆಯ ಸಲಹೆ-ಸೂಚನೆ ಗಳನ್ನು ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು.

ಎಂಜಿನ್ ಬಗ್ಗೆ ತಿಳಿಯೋಣ ಬನ್ನಿ

ಜಯತೀರ್ಥ ನಾಡಗೌಡ.

ದಿನ ನಿತ್ಯ ನಾವು ಸಾರಿಗೆಗಾಗಿ ಅವಲಂಬಿಸಿರುವ ಗಾಡಿ/ಬಂಡಿಗಳು(Vehicles) ಹೆಚ್ಚಾಗಿ ಬಿಣಿಗೆಯನ್ನು(Engine) ಹೊಂದಿರುತ್ತವೆ. ಬಿಣಿಗೆಯಲ್ಲಿ ಹಲವು ಬಗೆಗಳು ಇದ್ದರೂ ಬಹುಪಾಲು ಕಾರು,ಬಸ್ಸುಗಳು,ಇಗ್ಗಾಲಿ ಬಂಡಿಗಳು ಒಳ ಉರಿಯುವಿಕೆಯ ಬಿಣಿಗೆಯನ್ನು (Internal Combustion Engine) ಬಳಸುತ್ತವೆ. ಅದರಲ್ಲೂ ಈ ಒಳ ಉರಿಯುವಿಕೆಯ ಬಿಣಿಗೆಗಳು ಹೆಚ್ಚಾಗಿ ಆಡುಬಿಣಿಗೆಯ (Reciprocating Engine) ಸಾಲಿಗೆ ಸೇರುತ್ತವೆ. ನಮ್ಮ ಬಂಡಿಗಳ ಬಿಣಿಗೆ ಹೇಗೆ ಕೆಲಸ ಮಾಡುತ್ತವೆ,ಇದರ ಬಗೆಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಬಿಣಿಗೆಗಳ ಹಳಮೆ:

ಮೊದಲ ಒಳ ಉರಿಯುವಿಕೆಯ ಬಿಣಿಗೆಯೊಂದನ್ನು ಕಂಡುಹಿಡಿದು ಮಾರಾಟಕ್ಕೆ ಅಣಿಗೊಳಿಸಿದ್ದು ಬೆಲ್ಜಿಯಮ್ ದೇಶದ ಜೀನ್ ಜೊಸೇಪ್ ಲೆನೊಯ್ರ್(Jean Joseph Lennoir) 1858 ರಲ್ಲಿ. ಆದರೂ 1876ರಲ್ಲಿ ಜರ್ಮನಿಯ ಖ್ಯಾತ ಅರಕೆಗಾರ ನಿಕೋಲವ್ಸ್ ಅಗಸ್ಟ್ ಒಟ್ಟೋ (Nicolaus August Otto) ಕಟ್ಟಿದ, ಒಟ್ಟೋ ಸುತ್ತು (Otto Cycle) ಆಧರಿಸಿದ ಬಿಣಿಗೆಯನ್ನೇ ಹಲವೆಡೆ ಮೊದಲ ಮಾರಾಟಕ್ಕೆ ಅಣಿಗೊಂಡ ಬಿಣಿಗೆಯೆಂದು ನಂಬಲಾಗಿದೆ. ಒಟ್ಟೋರವರು ಕಟ್ಟಿದ ಈ ಬಿಣಿಗೆಯ ಕೆಲವು ವರುಶಗಳ ಬಳಿಕ 1892ರಲ್ಲಿ ಮತ್ತೊಬ್ಬ ಜರ್ಮನಿಯ ಅರಕೆಗಾರ ರುಡಾಲ್ಫ್ ಡಿಸೇಲ್ (Rudolf Diesel) ಎಂಬುವರು ಹೊಸ ಸುತ್ತು ಆಧರಿಸಿದ ಬಿಣಿಗೆಯೊಂದನ್ನು ಕಂಡುಹಿಡಿದು ಇದನ್ನು ಡಿಸೇಲ್ ಸುತ್ತಿನ ಬಿಣಿಗೆ (Diesel Cycle) ಎಂದು ಕರೆದರು. ದಿನಗಳೆದಂತೆ ಒಟ್ಟೋ ಸುತ್ತಿನ ಬಿಣಿಗೆಯು ಪೆಟ್ರ‍ೋಲ್ ಬಿಣಿಗೆಯೆಂದು,ರುಡಾಲ್ಪ್ ಡಿಸೇಲ್ ಸುತ್ತಿನ ಬಿಣಿಗೆಯು ಡಿಸೇಲ್ ಬಿಣಿಗೆಯೆಂದು ಹೆಸರು ಪಡೆದವು.

ಒಳ ಉರಿಯುವಿಕೆಯ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ?

ಒಳ ಉರಿಯುವಿಕೆಯ ಬಿಣಿಗೆಗಳು ಉರುವಲಿನ ರಾಸಾಯನಿಕ ಬಲವನ್ನು(Chemical Energy) ತಿರುಗುಣಿಯ (Crankshaft) ಬಲವಾಗಿ ಮಾರ್ಪಡಿಸಿ ಗಾಲಿತೂಕದಲ್ಲಿ(Flywheel) ಕೂಡಿಡುತ್ತವೆ. ಬಿಣಿಗೆಯ ಉರುಳೆಗಳಲ್ಲಿ(Cylinder) ಉರುವಲು ಹೊತ್ತಿಕೊಂಡು ಉರಿದಾಗ ಇದು ಆಡುಬೆಣೆಯನ್ನು(Piston) ಹಿಂದುಮುಂದಾಗಿಸುತ್ತದೆ. ಆಡುಬೆಣೆಯ ಈ ಕದಲಿಕೆಯ ಬಲವು ಕೂಡುಸಳಿಗಳನ್ನು(Connecting rod) ತಿರುಗುವಂತೆ ಮಾಡಿ ತಿರುಗುಣಿಗೆ(Crankshaft) ಬಲ ಸಾಗಿಸುತ್ತದೆ. ತಿರುಗುಣಿಯಲ್ಲಿ ಸೇರಿಸಿದ ಬಲವು ಕೊನೆಯಲ್ಲಿ ಗಾಲಿತೂಕದ ಮೂಲಕ ಬಂಡಿಯ ಗಾಲಿಗಳನ್ನು ಮುಂದೂಡಲು ನೆರವಾಗುತ್ತದೆ.

ಬಿಣಿಗೆಗಳು ಕೆಲಸ ಮಾಡುವ ರೀತಿಯನ್ನು ಡಿಸೇಲ್ ರವರು ಮುಂದಿಟ್ಟ ಡಿಸೇಲ್ ಸುತ್ತು ಮತ್ತು ಒಟ್ಟೋರವರು ಮುಂದಿಟ್ಟ ಒಟ್ಟೋ ಸುತ್ತಿನಂತೆ ವಿವರಿಸಬಹುದು. ಡಿಸೇಲ್ ಬಿಣಿಗೆಗಳು ಡಿಸೇಲ್ ಸುತ್ತನ್ನು ಅನುಸರಿಸಿ ಕೆಲಸ ಮಾಡುತ್ತವೆ. ಪೆಟ್ರೋಲ್ ಬಿಣಿಗೆಗಳು ಒಟ್ಟೋ ಸುತ್ತನ್ನು ಅನುಸರಿಸುತ್ತವೆ. ಎರಡು ಉರುವಲುಗಳಿಗೆ ಪೆಟ್ರೋಲಿಯಮ್ ಸೆಲೆಯಿಂದ ಪಡೆಯಲಾಗಿದ್ದರೂ, ಡಿಸೇಲ್ ಮತ್ತು ಪೆಟ್ರೋಲ್ ಉರುವಲುಗಳಲ್ಲಿ ಸಾಕಶ್ಟು ಬೇರ್ಮೆಗಳಿವೆ. ಇದೇ ಕಾರಣಕ್ಕೆ ಡಿಸೇಲ್ ಸುತ್ತು ಹಾಗೂ ಒಟ್ಟೋ ಸುತ್ತುಗಳಲ್ಲಿಯೂ ಬೇರ್ಮೆ ಇದೆ.

ಗಾಳಿಯೊಂದಿಗೆ ಡಿಸೇಲ್ ಉರುವಲನ್ನು ಹೆಚ್ಚಿನ ಒತ್ತಡದಲ್ಲಿ ಕುಗ್ಗಿಸಿದರೆ ತನ್ನಿಂದ ತಾನೇ ಹೊತ್ತುರಿಯುತ್ತದೆ. ಇದಕ್ಕೆಂದೇ ಡಿಸೇಲ್ ಬಿಣಿಗೆಗಳನ್ನು ಕಾಂಪ್ರೆಸ್ಡ್ ಇಗ್ನಿಶನ್ ಎಂಜೀನ್ (Compressed Ignition Engine-CI Engine) ಎನ್ನಲಾಗುತ್ತದೆ. ಡಿಸೇಲ್ ಉರುವಲಿನಲ್ಲಿ ಹೆಚ್ಚಿನ ಕುಗ್ಗುವಿಕೆಯ(Compression) ಗುಣವಿರುತ್ತದೆ. ಆದರೆ ಗ್ಯಾಸೋಲಿನ್ ಅಂದರೆ ಪೆಟ್ರೋಲ್ ಬಿಣಿಗೆಗಳಲ್ಲಿ ಹೀಗಿರುವುದಿಲ್ಲ. ಪೆಟ್ರೋಲ್ ಬಿಣಿಗೆಗಳು ಡಿಸೇಲ್ -ಗಾಳಿಯಂತೆ ಕುಗ್ಗಿದರೂ ತನ್ನಿಂದ ತಾನೇ ಹೊತ್ತುರಿಯಲಾರವು. ಪೆಟ್ರ‍ೋಲ್ ಬಿಣಿಗೆಗಳು ಇದಕ್ಕೋಸ್ಕರ ಕಿಡಿಬೆಣೆ (Spark Plug) ಅನ್ನು ಬಳಸುತ್ತವೆ. ಆದ್ದರಿಂದ ಪೆಟ್ರ‍ೋಲ್ ಬಿಣಿಗೆಗಳು ಸ್ಪಾರ್ಕ್ ಇಗ್ನಿಶನ್ ಎಂಜೀನ್ ಗಳೆಂದು (Spark Ignition Engine-SI Engine) ಹೆಸರುಪಡೆದಿವೆ. ಪೆಟ್ರ‍ೋಲ್ ಉರುವಲಿಗೆ ಯೂರೋಪ್,ಅಮೇರಿಕಾ,ಕೆನಡಾ ಮುಂತಾದೆಡೆ ಗ್ಯಾಸೋಲಿನ್ ಎಂದು ಕರೆಯಲಾಗುತ್ತದೆ.

ಬಿಣಿಗೆಯ ಮುಖ್ಯ ಬಾಗಗಳು:

ಡಿಸೇಲ್ ಇಲ್ಲವೇ ಪೆಟ್ರ‍ೋಲ್ ಬಿಣಿಗೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರವಾಗಿ ಅರಿಯಲು ಇದರ ಪ್ರಮುಖ ಬಿಡಿಭಾಗಗಳು ಯಾವುವು ಎಂದು ತಿಳಿದುಕೊಳ್ಳುವುದು ಅಷ್ಟೇ ಅಗತ್ಯವಾಗಿದೆ. ಕೆಲವು ಪ್ರಮುಖ ಬಿಡಿಭಾಗಗಳು ಇಂತಿವೆ:

1.ಉರುಳೆ (Cylinder)

2.ಆಡುಬೆಣೆ (Piston)

3.ಕೂಡುಸಳಿ (Connecting Rod)

4.ತಿರುಗುಣಿ (Crankshaft)

5.ಹೊರ ತೆರಪು (Exhaust Valve)

6.ಒಳ ತೆರಪು (Intake Valve)

7.ಕಿಡಿ ಬೆಣೆ (Spark Plug) ***

8.ಚಿಮ್ಮುಕ (Injector)

9.ಉಬ್ಬುಕ (Camshaft)

***ಮುಂಚೆ ತಿಳಿಸಿದಂತೆ ಡಿಸೇಲ್ ಬಿಣಿಗೆಗಳು ಕಿಡಿಬೆಣೆ ಹೊಂದಿರುವುದಿಲ್ಲ.

ಬಿಣಿಗೆಯಲ್ಲಿ ಬಗೆಗಳು:

ನಾವು ಬಳಸುವ ಕಾರು,ಬಸ್ಸು ಮುಂತಾದ ಬಂಡಿಯ ಬಿಣಿಗೆಗಳು ಹಲವು ಬೇರ್ಮೆ ಹೊಂದಿವೆ. ಹೀಗಾಗಿ ಇವುಗಳಲ್ಲಿ ಹಲವಾರು ಬಗೆಗಳು ಇವೆ.

1.ಬಿಣಿಗೆಯ ಉರುಳೆಗಳ ಜೋಡಣೆಯಂತೆ

1.1 ನೇರ ಸಾಲಿನ ಉರುಳೆಗಳ ಬಿಣಿಗೆ (Inline Engine)

1.2 ಇಂಗ್ಲಿಶ್ “ವಿ” ಆಕಾರದಂತೆ ಜೋಡಿಸಿದ ಉರುಳೆಗಳ ಬಿಣಿಗೆ (V-Engine)

1.3 ಬಿರುಗೆರೆಯ ಬದಿಗೆ ಜೋಡಿಸಿದ ಉರುಳೆಗಳುಳ್ಳ ಬಿಣಿಗೆ  (Radial Engine)

1.4 ಒಂದಕ್ಕೊಂದು ಎದುರು ಜೋಡಿಸಿದ ಉರುಳೆಗಳ ಬಿಣಿಗೆ (Opposed Engine)

2. ಬಳಸಲ್ಪಡುವ ಉರುವಲಿನ ಪ್ರಕಾರ

2.1 ಡಿಸೇಲ್ ಬಿಣಿಗೆ (Diesel Engine)

2.2 ಪೆಟ್ರ‍ೋಲ್/ಗ್ಯಾಸೋಲಿನ್ ಬಿಣಿಗೆ (Petrol/Gasoline Engine)

2.3 ಸಿ ಎನ್ ಜಿ ಬಿಣಿಗೆ (CNG Engine)

2.4 ಎಲ್ ಪಿ ಜಿ ಬಿಣಿಗೆ (LPG Engine)

 

3.ಬಿಣಿಗೆಯ ಬಡೆತಗಳಿಗೆ ತಕ್ಕಂತೆ

3.1 ನಾಲ್ಬಡೆತಗಳ ಬಿಣಿಗೆ (4 Stroke engine)

3.2 ಇಬ್ಬಡೆತಗಳ ಬಿಣಿಗೆ (2 Stroke Engine)

 

4.ಬಿಣಿಗೆಯ ತಂಪಾಗಿಸುವಿಕೆಗೆ ತಕ್ಕಂತೆ

4.1 ನೀರಿನ ತಂಪಾಗಿಸುವಿಕೆ (Water cooled Engine)

4.2 ಕಿಲೇಣ್ಣೆಯಿಂದ ತಂಪಾಗಿಸುವಿಕೆ (Oil cooled Engine)

 

5.ಬಿಣಿಗೆಯ ಉಸಿರಾಟಕ್ಕೆ ತಕ್ಕಂತೆ

5.1 ಗಾಳಿದೂಡುಕ ಹೊಂದಿದ (Turbocharged/Supercharged Engines)

5.2 ಗಾಳಿದೂಡುಕವಿರದ (Naturally Aspirated Engines)

 

6.ಬಿಣಿಗೆಗಳು ಹೊಂದಿರುವ ತೆರಪಿಗೆ ತಕ್ಕಂತೆ

6.1 ಎರಡು ತೆರಪು (2 Valves Engine)

6.2 ಮೂರ ತೆರಪಿನ ಬಿಣಿಗೆ (3 Valves Engine)

6.3 ನಾಲ್ತೆರಪು (4 Valves Engine)

 

ಒಂದು ಬಿಣಿಗೆಯ ನೆರವೇರಿಕೆಯನ್ನು(Efficiency) ಈ ಕೆಳಕಂಡ ನಾಲ್ಕರ ಮೂಲಕ ಅರಿಯಬಹುದಾಗಿದೆ.

1. ಬಿಣಿಗೆಯ ಕಸುವು (Engine Power)

2.ಬಿಣಿಗೆ ಉಂಟು ಮಾಡುವ ತಿರುಗುಬಲ (Torque)

3.ಬಿಣಿಗೆಯ ಉರುವಲು ಬಳಕೆ (Fuel Consumption)

4.ಉಗುಳುವ ಕೆಡುಗಾಳಿ (Exhaust Emissions)

 

ಬಿಣಿಗೆಯ ಹಲಬಗೆಯ ಏರ್ಪಾಟುಗಳು:

ಬಿಣಿಗೆಯು ಮನುಶ್ಯನ ದೇಹದಂತೆ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿರುವ ಉಸಿರಾಟದ ಏರ್ಪಾಟು, ನೆತ್ತರಿನ ಹರಿಯುವಿಕೆಯ ಏರ್ಪಾಟುಗಳಿರುವಂತೆ ಬಿಣಿಗೆಯು ಹಲವು ಏರ್ಪಾಟುಗಳನ್ನು ಹೊಂದಿದೆ. ಬಿಣಿಗೆಯ ವಿವಿಧ ಏರ್ಪಾಟುಗಳು

1.ಉರುವಲಿನ ಏರ್ಪಾಟು (Fuel System)

2.ಉಸಿರಾಟದ ಏರ್ಪಾಟು (Air Intake System)

3.ಕೆಡುಗಾಳಿ ಹೊರಹಾಕುವಿಕೆಯ ಏರ್ಪಾಟು (Exhaust System)

4.ಬಿಣಿಗೆ ತಂಪಾಗಿಸುವಿಕೆಯ ಏರ್ಪಾಟು (Engine Cooling System)

5.ಬಿಣಿಗೆಯ ಮಿಂಚಿನ ಏರ್ಪಾಟು (Engine Electrical System)