3-Phase ಕರೆಂಟ್ ಅಂದರೇನು?

ಪ್ರಶಾಂತ ಸೊರಟೂರ.

3 Phase

3 ಫೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಪಠ್ಯಪುಸ್ತಕದ ಹೊರತಾಗಿ ಸರಳವಾಗಿ ತಿಳಿಸುವ ಪ್ರಯತ್ನ).

1) 3 ಬೇರೆ ಬೇರೆಯಾದ ತಂತಿಗಳನ್ನು ಬಳಸಿ ಕರೆಂಟ್ ಸಾಗಿಸುವುದಕ್ಕೆ 3 ಫೇಸ್ (ಹಂತ) ಅನ್ನುತ್ತಾರೆ. ಅಂದರೆ 1 ಫೇಸ್ನಲ್ಲಿ ಕರೆಂಟ್ ಸಾಗಿಸಲು 1 ತಂತಿ  ಬೇಕಾದರೆ 10 ಫೇಸ್ಗೆ 10 ತಂತಿಗಳು ಬೇಕು. ಹಾಗಾದರೆ ಫೇಸ್ ಅಂದರೇನು? ಮುಂದೆ ತಿಳಿದುಕೊಳ್ಳೋಣ.

2) ಕರೆಂಟ್ ಅಲೆಯ ರೂಪದಲ್ಲಿ ಹೊಮ್ಮುತ್ತದೆ. ಕೆರೆಯಲ್ಲಿ ಕಲ್ಲು ಎಸೆದಾಗ ಚಿಕ್ಕ ತೆರೆಯ ಅಲೆಗಳು ಹೇಗೆ ಹೊಮ್ಮುವವೋ ಹಾಗೆ ಕರೆಂಟ್ ಕೂಡಾ ಅಲೆಗಳಂತೆ ಸಾಗುತ್ತದೆ. ಕಲ್ಲು ತಾಕಿದ ಸ್ಥಳದಿಂದ ಅಲೆಗಳು ಎಲ್ಲ ಕಡೆ  ಹರಡುವುದನ್ನೂ ನೀವು ಗಮನಿಸಿರಬಹುದು. ಈಗ ಅದೇ ಅಲೆಗಳು ಒಂದು ಕೊಳವೆಯಲ್ಲಿ ಸಾಗಿದರೆ ಹೇಗಿರುತ್ತೆ ಅನ್ನುವುದನ್ನು ಊಹಿಸಿಕೊಳ್ಳಿ ಹೀಗೆನೇ ಕರೆಂಟ್ ಕೂಡಾ ಅಲೆಗಳಂತೆ ಒಂದು ತಂತಿಯಲ್ಲಿ ಏರಿಳಿತದೊಂದಿಗೆ ಸಾಗುತ್ತದೆ. ಆದರೆ ನೀರಿನ ಅಲೆಗಳಿಗೆ ಹೋಲಿಸಿದಾಗ ಕರೆಂಟ್ ಅಲೆಗಳ ಏರಿಳಿತ ತುಂಬಾನೇ ಹೆಚ್ಚಾಗಿರುತ್ತದೆ. ನಮ್ಮ ಮನೆಗೆ ತಲುಪುವ ಕರೆಂಟ್ ಈ ತರಹದಲ್ಲಿ ಪ್ರತಿ ಸೆಕೆಂಡಿಗೆ 50 ಸಲದ ಏರಿಳಿತ ಹೊಂದಿರುತ್ತದೆ! ಇದಕ್ಕೆ ಸಲದೆಣಿಕೆ (frequency) ಅನ್ನುತ್ತಾರೆ. ಮೀಟರಗಳ ಮೇಲೆ 50 Hz ಅಂತಾ ಬರೆದಿರುವುದನ್ನು ನೀವು ಗಮನಿಸಿರಬಹುದು ಅದೇ ಈ  ಸಲದೆಣಿಕೆ (frequency). ಮೇಲೆ ತಿಳಿಸಿದಂತೆ ಕರೆಂಟ್ ಏರು-ಇಳಿತದೊಂದಿಗೆ ಸಾಗುತ್ತದೆ. ಏರಿಕೆಯ ಕೊನೆಯಲ್ಲಿ, ಎಲ್ಲಕ್ಕಿಂತ ಹೆಚ್ಚಿನ ಕರೆಂಟ್ ಇದ್ದರೆ ಇಳಿತದ ಕೊನೆಯಲ್ಲಿ ಕರೆಂಟ್ ಎಲ್ಲಕ್ಕಿಂತ ಕಡಿಮೆಯಿರುತ್ತದೆ. ಈ ಏರು-ಇಳಿತದಲ್ಲಿ ಕರೆಂಟಿನ ಯಾವುದೇ ಹಂತವನ್ನು ‘ಫೇಸ್’ ಅಂತಾ ಕರೆಯಲಾಗುತ್ತದೆ.

3) ಇದಕ್ಕೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಚಂದ್ರ ಅಮವಾಸ್ಯೆಯಿಂದ ಹುಣ್ಣಿಮೆವರೆಗೆ ದೊಡ್ಡದಾಗುವಂತೆ ಕಾಣಿಸಿದರೆ ಹುಣ್ಣಿಮೆಯಿಂದ ಅಮವಾಸ್ಯೆಯೆಡೆಗೆ ಸಾಗಿದಾಗ ಚಿಕ್ಕದಾಗುವಂತೆ ಕಾಣಿಸುತ್ತಾನೆ. ಹುಣ್ಣಿಮೆಯ ತುಂಬು ಚಂದಿರ ಮತ್ತು ಅಮವಾಸ್ಯೆಯ ಮರೆಯಾದ ಚಂದ್ರನ ನಡುವಿನ ದಿನಗಳಲ್ಲಿ ನಮಗೆ ಚಂದ್ರನ ಹಲವು ಹಂತಗಳು ಕಾಣಿಸುತ್ತವೆ. ಒಮ್ಮೆ ಚಂದ್ರ ಅರೆ (1/2) ಚಂದ್ರನಾದರೆ ಇನ್ನೊಮ್ಮೆ ಮುಕ್ಕಾಲು (3/4) ಚಂದ್ರನಂತೆ ಕಾಣುತ್ತಾನೆ. ಇದನ್ನೇ ‘ಹಂತ’ ಇಲ್ಲವೇ ಫೇಸ್ ಅಂತಾ ಕರೆಯೋದು! ಕರೆಂಟಿನ್ ಏರು-ಇಳಿತದಲ್ಲಿರುವ ಹಂತ/ಫೇಸ್.

4) ಈಗ, ಒಂದಕ್ಕೊಂದು ಜೋಡಿಸಿರದ 2 ತಂತಿಗಳಿವೆ ಅಂದುಕೊಳ್ಳಿ. ಅವುಗಳಲ್ಲಿ ಹರಿಯುವ ಕರೆಂಟ್ ಎರಡರಲ್ಲೂ ಒಂದೇ ಹಂತದಲ್ಲಿ (ಫೇಸ್) ಇರಲು ಸಾಧ್ಯವೇ ? ಅಂದರೆ ಒಂದು ತಂತಿಯಲ್ಲಿ ಕರೆಂಟ್ ಏರಿಕೆಯ ತುದಿಯಲ್ಲಿದ್ದರೇ ಎರಡನೇಯ ತಂತಿಯಲ್ಲೂ ಕರೆಂಟ್ ಅದೇ ಹಂತದಲ್ಲಿ ಇರಲು ಸಾಧ್ಯವೇ ? ಹಾಗೊಮ್ಮೆ ಇದ್ದರೆ ಅದು ಕಾಕತಾಳಿಯವಷ್ಟೇ. ಅಂದರೆ 10 ಬೇರ್ಪಟ್ಟ ತಂತಿಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಹರಿಯುವ ಕರೆಂಟಿನ ಹಂತ (ಫೇಸ್) ಬೇರೆ ಬೇರೆಯಾಗಿರುತ್ತದೆ. ಒಂದರಲ್ಲಿ ಕರೆಂಟ್ ಏರಿಕೆಯಾಗುತ್ತಿದ್ದರೆ ಇನ್ನೊಂದರಲ್ಲಿ ಇಳಿಕೆಯಾಗುತ್ತಿರಬಹುದು, ಮತ್ತೊಂದರಲ್ಲಿ ಇವೆರಡರ ನಡುವಿನ ಯಾವುದೇ ಹಂತದಲ್ಲಿರಬಹುದು.

5) ಆಯಿತು! ಈಗ ಈ ಹಂತ/ಫೇಸ್ ನಮಗೆ ಹೇಗೆ ನೆರವಾಗುತ್ತದೆ ಎಂದು ತಿಳಿಯಬೇಕಲ್ಲ! ಕರೆಂಟ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತಾ ಒಮ್ಮೆ ನೆನಪಿಸಿಕೊಳ್ಳೋಣ. ಅದೊಂದು ಶಕ್ತಿಯ ಪೆಟ್ಟು/ಹೊಡೆತ ಇದ್ದಂಗೆ. ಗಾಡಿಯನ್ನು ಶುರುಮಾಡಲು ‘ಕಿಕ್’ ಹೊಡೆಯುತ್ತಿವಲ್ಲ ಹಾಗಿರುವ ಪೆಟ್ಟು/ಹೊಡೆತ ಅದು. ಮೇಲೆ ನೋಡಿದಂತೆ ಕರೆಂಟಿನದು ಪ್ರತಿ ಸೆಕೆಂಡಿಗೆ 50 ಹೊಡೆತ/ಪೆಟ್ಟುಗಳು. 1 ಫೇಸ್ ಬಳಸಿ ಈ ಬಗೆಯ ಕರೆಂಟ್ ಪೆಟ್ಟುಗಳಿಂದ ಚಿಕ್ಕದಾದ ಮೋಟಾರ್‍ ನಡೆಸಬಹುದು ಆದರೆ ಅದೇ ಗದ್ದೆಯಲ್ಲಿ ಬೇಕಾದ 10 HP ಯಷ್ಟು ದೊಡ್ಡದಾದ ಪಂಪ್ ನಡೆಸಲು ಹೆಚ್ಚಿನ ಕಸುವು ಬೇಕು. ಇಂತಲ್ಲಿ 1 ತಂತಿಯಿಂದ ಹೊರಡುವ ಕರೆಂಟಿನ ಪೆಟ್ಟುಗಳನ್ನು ಕೊಡುವುದಕ್ಕಿಂತ 2-3 ತಂತಿಗಳಲ್ಲಿ ಕರೆಂಟ್ ಹರಿಸಿ ಪೆಟ್ಟುಗಳನ್ನು ಕೊಟ್ಟರೆ ಪಂಪನ್ನು ಸುಲಬವಾಗಿ ಓಡಿಸಬಹುದು. ಒಂದು ಗಾಲಿಯನ್ನು ಒಬ್ಬರೇ ತಿರುಗಿಸುವುದಕ್ಕಿಂತ ಹಲವು ಜನರು ಒಂದಾಗಿ ಸುಲಭವಾಗಿ ತಿರುಗಿಸಿದಂತೆಯೇ ಇದು.

6) ಹಾಗಾಗಿ, ದೊಡ್ಡ ಸಲಕರಣೆಗಳನ್ನು ನಡೆಸಲು 1 ಫೇಸ್ ಕರೆಂಟಗಿಂತ 3 ಫೇಸ್ ಕರೆಂಟ್ ಒಳ್ಳೆಯದು. ಹಾಗಿದ್ದರೆ 4 ಇಲ್ಲವೇ 5 ಫೇಸಗಳನ್ನು ಏಕೆ ಬಳಸಬಾರದು ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆ ಉತ್ತರ ಸರಳವಾಗಿದೆ 3 ಫೇಸಗಳಲ್ಲಿ ಕಡಿಮೆ ದುಡ್ಡಿನಿಂದ ಮಾಡಬಹುದಾದುಕ್ಕೆ 4-5 ಫೇಸ್ಗಳನ್ನು ಯಾಕೇ ಬಳಸಬೇಕು, ಅಲ್ಲವೇ ?! ಆದ್ದರಿಂದ ಅಗತ್ಯವಿರುವ ಎಲ್ಲೆಡೆ  ಕಡಿಮೆ ವೆಚ್ಚದ 3 ಫೇಸ ಕರೆಂಟನ್ನೇ ಬಳಸಲಾಗುತ್ತದೆ.

7) ಗಮನಿಸಿ ನೋಡಿ ನಿಮ್ಮ ಅಕ್ಕಪಕ್ಕದಲ್ಲಿರುವ ಟ್ರಾನ್ಸ್ಪಾರ್ಮರ್ ಇಂದ ಕರೆಂಟ್ 3 ತಂತಿಯಲ್ಲಿ ಹೊರಬರುತ್ತದೆ. ಅಂದರೆ ಅದು 3 ಫೇಸ್ ಆಗಿರುತ್ತದೆ. ಅಲ್ಲಿಂದ ಕರೆಂಟನ್ನು ಕಂಬವೊಂದಕ್ಕೆ ಸಾಗಿಸಿ, ಮುಂದೆ ಎಲ್ಲರ ಮನೆಗೆ ನೀಡಲಾಗುತ್ತದೆ. ಕರೆಂಟ್ ಕಂಬದಿಂದ ಹೊರಡುವ ತಂತಿಗಳ ಮೇಲೆ ಇಲ್ಲವೇ ಬದಿಯಲ್ಲಿ ಇನ್ನೊಂದು ಹೆಚ್ಚಿನ ತಂತಿ ಇರಬಹುದು ಇದಕ್ಕೆ ನ್ಯೂಟ್ರಲ್ ಇಲ್ಲವೇ ಗ್ರೌಂಡ್ (ನೆಲ) ತಂತಿ ಅನ್ನುತ್ತಾರೆ. ಇದು ಕರೆಂಟಿನಲ್ಲಿ ಏರಿಳಿತವಾದಾಗ ಹೆಚ್ಚಿನ ಕರೆಂಟನ್ನು ನೆಲಕ್ಕೆ ಸಾಗಿಸಿ ತೊಂದರೆಯಿಂದ ಕಾಪಾಡುತ್ತದೆ.

8) ಹೀಗೆ, ದೊಡ್ಡ ಸಲಕರಣೆಗಳಿಗೆ ಹೆಚ್ಚಿನ ಕರೆಂಟ್ ಬೇಕಾದಾಗ ಎಲ್ಲ 3 ತಂತಿಗಳಿಂದ ಕರೆಂಟನ್ನು ಪಡೆಯಲಾಗುತ್ತದೆ. ಅದೇ ನಿಮ್ಮ ಮನೆಯಲ್ಲಿ ಚಿಕ್ಕ ಸಲಕರಣೆಗಳಿದ್ದು ಅವುಗಳಿಗೆ ಕರೆಂಟ್ ಕಡಿಮೆ ಬೇಕಾಗಿದ್ದರೆ 3 ತಂತಿಗಳಲ್ಲಿ ಬರೀ 1 ತಂತಿಯಿಂದ ಕರೆಂಟ್ ಪಡೆದರೂ ಸಾಕು. ಅದರಿಂದಲೇ ಟ್ಯೂಬಲಯ್ಟ್, ಫ್ಯಾನ್, ಮಿಕ್ಸರ್‍ ಮುಂತಾದ ಸಲಕರಣೆಗಳನ್ನು ನಡೆಸಬಹುದು.

ನಿಮ್ಮಲ್ಲಿ ಒಂಚೂರು ಹೆಚ್ಚಿಗೆನೇ ಕರೆಂಟಿನಿಂದ ನಡೆಯುವ ಉಪಕರಣಗಳಿದ್ದರೆ ಆಗ 2 ತಂತಿಗಳಿಂದ ನಿಮ್ಮ ಮನೆಗೆ ಕರೆಂಟನ್ನು ಒದಗಿಸಲಾಗುತ್ತದೆ. ಟ್ಯೂಬಲಯ್ಟನಂತಹ ಬೆಳಕಿನ ಸಲಕರಣೆಗಳಿಗೆ ಒಂದು ತಂತಿಯಾದರೆ, ಕರೆಂಟ್ ಒಲೆಯಂತಹ ಬಿಸಿ ಮಾಡುವ ಸಲಕರಣೆಗಳನ್ನು ನಡೆಸಲು ಎರಡನೆಯದು.

ಸರಿ ಹಾಗಾದ್ರೆ, ಮುಂದಿನ ಸರತಿ ಕರೆಂಟ್ ಕಂಬದಲ್ಲಿ 3 ತಂತಿಗಳು ಏಕಿವೆ ಅನ್ನುವ ಪ್ರಶ್ನೆಯನ್ನು ಯಾರಾದರೂ ನಿಮಗೆ ಕೇಳಿದರೆ ನೀವೇ ಅದಕ್ಕೆ ಉತ್ತರಿಸಬಲ್ಲಿರಿ, ಅಲ್ಲವೇ !

ಇಂಗ್ಲಿಷ್ ಮೂಲ: ‘ಬೆಸ್ಕಾಂ ಮಣಿವಣ್ಣನ್’.

ಕನ್ನಡಕ್ಕೆ: ಪ್ರಶಾಂತ ಸೊರಟೂರ

ಅಣು ಕೂಡಿಕೆಯಿಂದ ಮಿಂಚು – ಸವಾಲುಗಳೇನು?

ರಘುನಂದನ್.

ಹಿಂದಿನ ಬರಹದಲ್ಲಿ ಅಣುಕೂಡಿಕೆಯಿಂದ ಮಿಂಚನ್ನು ಪಡೆಯುವ ಬಗೆಯನ್ನು ತಿಳಿದೆವು. ಅಣು ಕೂಡಿಕೆಯ ಹೊಲಬಿನಿಂದ ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ(environmental friendly). ಬೂದಿ(ash), ಇಂಗಾಲ (carbon), ಹೊಗೆ(smoke), ಕೊಳಕು ನೀರು(polluted water) ಮತ್ತು ಕೆಟ್ಟಗಾಳಿ ಇಂತಹ ಯಾವುದೇ ಹಾನಿಯಿಲ್ಲ, ಆದರೂ ಅಣು ಕೂಡಿಕೆಯಿಂದ ನಾವು ಮಿಂಚನ್ನು ಯಾಕೆ ಬಳಸುತ್ತಿಲ್ಲ ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅಣು ಕೂಡಿಕೆಯನ್ನು ಯಾಕೆ ನಾವು ಯಾಕೆ ಬಳಸುತ್ತಿಲ್ಲ?

1. ಅಣು ಕೂಡಿಕೆಯಲ್ಲಿ ಡ್ಯೂಟಿರಿಯಮ್-ಟ್ರೈಶಿಯಮ್ ಅಣುಗಳು ಒಂದಕ್ಕೊಂದು ಕೂಡಬೇಕಾದರೆ ತುಂಬಾ ಹೆಚ್ಚು ಕಾವಳತೆ (Temperature) ಬೇಕಾಗುತ್ತದೆ, ಅಂದರೆ 100 ಮಿಲಿಯ ಡಿಗ್ರಿಗಳಷ್ಟು (100 million degree centigrade). ಹೆಚ್ಚು ಹರವು ಮತ್ತು ಕಾಲದಲ್ಲಿ ಅಷ್ಟು ಕಾವಳತೆ ಹೇಗೆ ಉಂಟು ಮಾಡಬಹುದೆಂಬುದು ಇನ್ನೂ ಗೊತ್ತಿಲ್ಲ, ನೇಸರನಲ್ಲಿ ಈ ಮಟ್ಟದ ಕಾವಳತೆ ಕಾಣಬಹುದು. ಅಲ್ಲಿ ಕೂಡ ಇದೇ ಅಣು ಕೂಡಿಕೆ ನಡೆಯುತ್ತಿದ್ದು ನಮಗೆ ದಿನಾಲು ಬೆಳಕು ಮತ್ತು ಹುರುಪು ನೇಸರನಿಂದ ದೊರಕುತ್ತಿರುವುದು ಇದೇ ಮಾದರಿಯಲ್ಲಿ. ಅದರಿಂದ ಗಿಡ ಮರಗಳು ಬದುಕುತ್ತಿವೆ. ನಾವು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅದೇ ಮನುಷ್ಯರಿಗೆ ಊಟ ದೊರಕಿಸುತ್ತಿದೆ. ಈ ಭೂಮಿಯ ಮೇಲೆ ಜೀವಿಗಳು ಇರುವುದೇ ಅಣು ಕೂಡಿಕೆಯಿಂದ ಬರುವ ಬೆಳಕು ಮತ್ತು ಹುರುಪಿನಿಂದ ಎಂದು ಹೇಳಬಹುದು.

2. ಅಷ್ಟು ಕಾವಳತೆಯನ್ನು(Temperature) ಉಂಟುಮಾಡಿದೆವು ಎಂದು ಇಟ್ಟುಕೊಳ್ಳೋಣ. ಆಗ ಅದನ್ನು ಹಿಡಿದಿಟ್ಟುಕೊಳ್ಳಬಹುದಾದ ವಸ್ತು ಯಾವುದಾದರು ಇದೆಯೇ? ಏಕೆಂದರೆ ಬರಿಯ ಮೂರು ಸಾವಿರ ಡಿಗ್ರಿಗಳಿಗಷ್ಟೇ ಎಲ್ಲಾ ಗೊತ್ತಿರುವ ವಸ್ತುಗಳು ಕರಗಿ ಹೋಗುತ್ತವೆ. ಇದಕ್ಕೆ ಬಗೆಹರಿಕೆ ಎಂದರೆ ಡ್ಯೂಟಿರಿಯಮ್-ಟ್ರೈಶಿಯಮ್ ಬೆರಕೆಯನ್ನು ಸೆಳೆ-ಸುರುಳಿಗಳ(magnetic coils) ಮೂಲಕ ಎರಕದ ಇರವಿನಲ್ಲಿ ಇರಿಸಬಹುದೇ ಎಂದು ವಿಜ್ಞಾನಿಗಳು ಯೋಚಿಸುತ್ತಿದ್ದಾರೆ. ಹಾಗಾದಾಗ ಹೆಚ್ಚು ಕಾದ ಭಾಗಗಳು ಸುತ್ತಲಿನ ವಸ್ತುವಿಗೆ ತಾಕದಂತೆ ನೋಡಿಕೊಳ್ಳಬಹುದು. ಈ ಬಗೆಯ ಏರ್ಪಾಟಿಗೆ ಟೋಕಾಮಾಕ್ (Tokamak) ಎನ್ನುತ್ತಾರೆ. ಟೋಕಾಮಾಕಿನಲ್ಲಿ ಬಿಡಿ ಎಲೆಕ್ಟ್ರಾನ್ಗಳು ಮತ್ತು ಅಣುಗಳು ಪ್ಲಾಸ್ಮಾ/ಎರಕದ ಇರವಿನಲ್ಲಿ(molten state/plasma) ಇರುವುದರಿಂದ ಒಂದಕ್ಕೊಂದು ಡಿಕ್ಕಿ ಹೊಡೆದಾಗ ಹೀಲಿಯಮ್ ರೂಪುಗೊಳ್ಳುತ್ತದೆ. ಅದರಿಂದ ಉಂಟಾಗುವ ಬಿಸಿ ಕಾವಿನಿಂದ ಮಿಂಚು / ವಿದ್ಯುತ್ ಅನ್ನು ಹುಟ್ಟುಹಾಕಬಹುದು.

ಅಮೇರಿಕಾದ ದೊಡ್ಡ ಕಂಪೆನಿಗಳಲ್ಲಿ ಒಂದಾದ ಲಾಕ್‌ಹೀಡ್ ಮಾರ್ಟಿನ್ (Lockheed Martin) ಅಣು ಕೂಡಿಕೆಯ ಕುರಿತಾಗಿ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ. ಲಾಕ್‌ಹೀಡ್ ಮಾರ್ಟಿನ್ ನ ತಾಮಸ್ ಮೆಗ್ವೈರ್ ಕಳೆದ ತಿಂಗಳಿನ ಸುದ್ದಿಕೂಟದಲ್ಲಿ ಹೀಗೆ ಹೇಳಿದ್ದಾರೆ –

“ಹೊಸ ಅಣುವಿನ ಶಕೆಯೊಂದನ್ನು ಮೊದಲು ಮಾಡೋಣ. ಪ್ರಪಂಚಕ್ಕೆ ಹಸನಾದ ಹುರುಪನ್ನು ಕೊಡುವುದು ನಮ್ಮ ಮುಂದಿನ ಗುರಿಯಾಗಿದೆ”.

ಈ ಚಳಕದರಿಮೆಯ ಮೂಲಕ ಮಿಂಚನ್ನು ತಯಾರಿಸಲಾಗುತ್ತದೆ ಎಂದು ಲಾಕ್‌ಹೀಡ್ ಮಾರ್ಟಿನ್ ಹೇಳಿಕೊಂಡಿದೆ. ಇದರಿಂದಾಗಿ ಅರಿಮೆಯ ಕೂಟಗಳಲ್ಲಿ (scientific circles) ಈ ಸುದ್ದಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ತಾಮಸ್ ಮೆಗ್ವೈರ್ ಪ್ರಕಾರ ಟೋಕಾಮಾಕ್‌ಗಳ ಒಳಗೆ ಇರುವ ಪ್ಲಾಸ್ಮಾ/ಎರಕದ ಒತ್ತಡ ಹೆಚ್ಚಾದರೆ ಅದರ ಸುತ್ತಲಿನ ವಸ್ತುವಿಗೆ ತೊಂದರೆಯಾಗುತ್ತದೆ. ಅದರ ಬದಲು ಒತ್ತಡವನ್ನು ಕಡಿಮೆ ಮಾಡಿದಲ್ಲಿ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಸಲದೆಣಿಕೆ(Frequency) ಕಡಿಮೆಯಾಗುತ್ತದೆ ಮತ್ತು ಟೋಕಾಮಾಕ್ ಗಳನ್ನು ತಯಾರಿಸಿದ ವಸ್ತುವಿನ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಈ ಬಗೆಯಲ್ಲಿ ಮಾಡಿದರೆ, ಹಣಕಾಸಿನ ಲೆಕ್ಕಾಚಾರದಲ್ಲಿ ನೋಡಿದರೆ ಅಷ್ಟು ಗಿಟ್ಟುವ ಏರ್ಪಾಟು (profitable venture) ಎನಿಸುವುದಿಲ್ಲ. ಅದಕ್ಕಾಗಿ ಲಾಕ್‌ಹೀಡ್ ಅವರು ಮೊಗೆಸಿರುವ ಟೋಕಾಮಾಕಿನಲ್ಲಿ ಪ್ಲಾಸ್ಮಾವು ಗೋಡೆಯ ಹತ್ತಿರ ಬರುತ್ತಿದ್ದಂತೆ ಸೆಳೆ-ಸುರುಳಿಗಳ ಹರಹು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಆ ಎಡೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಮತ್ತು ಆ ಭಾಗದಲ್ಲಿ ಹೆಚ್ಚು ಮರುಎಸಕಗಳು ಆಗುತ್ತವೆ,ಹೆಚ್ಚು ಹುರುಪು ದೊರೆಯುತ್ತದೆ.

ತಾಮಸ್ ಮೆಗ್ವೈರ್ ತಂಡವು ತಯಾರಿಸುತ್ತಿರುವ ಟೋಕಾಮಾಕ್‍ಗಳು ಎಷ್ಟು ಚಿಕ್ಕದಾಗಿ ಇರುತ್ತವೆಯೆಂದರೆ ಅದನ್ನು ಒಂದು ಟ್ರಕ್ ಇಲ್ಲವೇ ಲಾರಿಯ ಹಿಂದೆ ಅಳವಡಿಸಬಹುದು, ಹೀಗೆ ಮಾಡುವುದು ಸುಲಭದ ಮಾತಲ್ಲ ಎಂದು ಜಗತ್ತಿನ ವಿಜ್ಞಾನಿಗಳ ಅನಿಸಿಕೆ. ಈ ಹಮ್ಮುಗೆಯ ವಿಷಯವಾಗಿ ಲಾಕ್‌ಹೀಡ್ ಯಾವುದೇ ಗುಟ್ಟುಗಳನ್ನು ಹೊರಹಾಕಿಲ್ಲ. ಈ ಹಮ್ಮುಗೆ ಗೆಲುವು ಕಂಡಲ್ಲಿ ಜಗತ್ತು ಎದುರಿಸುತ್ತಿರುವ ಎಲೆಕ್ಟ್ರಿಸಿಟಿ ತೊಂದರೆ ಕೊನೆಗೊಳ್ಳಬಹುದು. ಇನ್ನೂ ಹಲವು ವರ್ಷ ಕಾದುನೋಡಬೇಕಿದೆ. ಇದರ ಕುರಿತಾಗಿ ಲಾಕ್‌ಹೀಡ್ ಮಾರ್ಟಿನ್ ಬಿಡುಗಡೆ ಮಾಡಿರುವ ಒಂದು ವಿಡಿಯೋ ಇಲ್ಲಿದೆ.

(ಚಿತ್ರ ಸೆಲೆ: chenected.ichewikipediawired.com)

ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು?

ರಘುನಂದನ್.

ನಮ್ಮ ಮೇಲಿರುವ ತಿಳಿಯಾಗಸದ ಬಣ್ಣ ನೀಲಿಯಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯ . ಅದು ಬೆಳಿಗ್ಗೆ ಮತ್ತು ನಡು ಹಗಲಿನಲ್ಲಿ ನೀಲಿಯಾಗಿರುತ್ತದೆ ಮತ್ತು ಹೊತ್ತು ಮುಳುಗುತ್ತಿದ್ದಂತೆ ಕೆಂಪು, ಕಿತ್ತಳೆ ಬಣ್ಣವಾಗಿ ಮಾರ್ಪಾಡಾಗುವುದನ್ನು ನಾವು ದಿನಾಲು ಕಂಡಿರುತ್ತೇವೆ. ಬೆಳಿಗ್ಗೆ ಬಾನು ಯಾಕೆ ನೀಲಿಯಾಗಿರುತ್ತದೆ ಮತ್ತು ಬಯ್ಗಿನ (ಸಂಜೆಯ) ಹೊತ್ತಿಗೆ ಏಕೆ ಕೆಂಪಾಗುತ್ತದೆ ಎಂದು ಯಾವಾತ್ತಾದರೂ ಯೋಚಿಸಿದ್ದೀರ?

ಇದಕ್ಕೆ ಉತ್ತರ ಸುಳುವಾಗಿಲ್ಲ. ಈ ಪ್ರಶ್ನೆಯ ಬಗ್ಗೆ ಹಲವಾರು ಅರಿಮೆಗಾರರು ತಲೆ ಕೆಡಿಸಿಕೊಂಡಿದ್ದಾರೆ. ಬಾನಿನ ನೀಲಿ ಬಣ್ಣದ ಹಿಂದಿನ ಅರಿಮೆ ಏನು ಎಂಬುದನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ನೇಸರನು ಹೊರಸೂಸುವ ಬೇರೆ ಬೇರೆ ತೆರನಾದ ಕದಿರುಗಳು (rays) ಭೂಮಿಯ ಗಾಳಿಪದರವನ್ನು (atmosphere) ದಾಟಿ ನೆಲದ ಮೇಲೆ ಬೀಳುತ್ತವೆ. ಬರಿ ಬೆಳಕೊಂದೇ ಅಲ್ಲದೆ ಮಿನ್ಸೆಳೆತದ ಅಲೆಸಾಲಿನ(electromagnetic spectrum) ಬೇರೆ ಬೇರೆ ಕದಿರುಗಳನ್ನೂ ಕೂಡ ನೇಸರನೆಂಬ ಬೆಂಕಿಯುಂಡೆ ಹೊರಹಾಕುತ್ತದೆ. ಆದರೆ ಭೂಮಿಯ ಮೇಲಿನ ಉಸಿರಿಗಳಿಗೆ ಕುತ್ತು ಎನಿಸುವ ಕದಿರುಗಳನ್ನು ಒಜೋನ್ (ozone) ಪದರ ಹೀರಿಕೊಳ್ಳುತ್ತದೆ. ಉದಾಹರಣೆಗೆ – ಕಡುನೀಲಿ ಕದಿರುಗಳು (ultra violet rays). ಹಾಗಾಗಿ ನಮ್ಮ ಕಣ್ಣಿಗೆ ಕಾಣುವ ಬೆಳಕಿನ ಕದಿರುಗಳ ಮೂಲಕ ನಾವು ನಮ್ಮ ಸುತ್ತಮುತ್ತವನ್ನು ನೋಡಬಹುದಾಗಿದೆ. ನಮಗೆ ತಿಳಿದಿರುವಂತೆ ಬೆಳಕು ಕೂಡ ಬೇರೆ ಬೇರೆ ಬಣ್ಣಗಳಿಂದ ಕೂಡಿದೆ ಮತ್ತು ಎಲ್ಲಾ ಬಣ್ಣಗಳಿಗೆ ಅದರದೇ ಆದ ಅಲೆಯಗಲ (wavelength) ಕೂಡ ಇರುತ್ತದೆ.

 

ಭೂಮಿಯ ಸುತ್ತಾವಿ

ಭೂಮಿಯ ಸುತ್ತ ಇರುವ, ಇಂಗ್ಲಿಶಿನಲ್ಲಿ ಅಟ್ಮೊಸ್ಪಿಯರ್ ಎನ್ನುವ ಗಾಳಿಪದರದಲ್ಲಿ ಸಾಮಾನ್ಯವಾಗಿ ಆವಿ – ಅನಿಲಗಳು, ನೀರಿನ ಹನಿಗಳು ಮುಂತಾದವುಗಳು ಇರುತ್ತವೆ. ಆವಿಗಳಲ್ಲಿ ಹೆಚ್ಚಾಗಿ ನೈಟ್ರೋಜನ್ (78%) ಮತ್ತು ಆಕ್ಸಿಜನ್ (21%) ಇರುತ್ತದೆ. ಇದರ ಜೊತೆ ಕಸದ ತುಣುಕುಗಳು, ಕಡಲಿನ ಉಪ್ಪು, ದೂಳು ಕೂಡ ಈ ಪದರದಲ್ಲಿ ಇರುತ್ತದೆ. ಇವುಗಳು ಕಡುಚಿಕ್ಕದಾದ ಕಾರಣ ನಮ್ಮ ಕಣ್ಣಿಗೆ ಕಾಣಸಿಗುವುದಿಲ್ಲ. ಭೂಮಿಯ ಗಾಳಿಪದರದ ಆಚೆ ಇರುವುದು ಬಾನಂಗಳ (space). ಭೂಮಿಯ ಸುತ್ತಾವಿ ನೆಲದ ಹತ್ತಿರ ದಟ್ಟವಾಗಿರುತ್ತದೆ(dense) ಮತ್ತು ಬಾನಂಗಳದೆಡೆಗೆ ಚಾಚುತ್ತಿದ್ದಂತೆ ಗಾಳಿಯ ದಟ್ಟಣೆ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೇ ಗಾಳಿಪದರದ ಒತ್ತಡ(atmospheric pressure) ಎನ್ನುತ್ತೇವೆ.

ಬೆಳಕಿನ ಅಲೆಗಳು

ಬೆಳಕು ಒಂದು ಬಗೆಯ ಹುರುಪು/ಶಕ್ತಿ. ಬೆಳಕು ಅಲೆಗಳಾಗಿ ಕೂಡ ಹರಿಯಬಹುದು ಇಲ್ಲವೇ ತುಣುಕುಗಳಾಗಿ ಕೂಡ ಹರಿಯಬಹುದು. ಅಲೆಗಳಾಗಿ ತೆಗೆದುಕೊಂಡರೆ ಬೆಳಕು ಮಿಂಚಿನ(electric) ಮತ್ತು ಸೆಳೆತದ(magnetic) ಅಲೆಗಳಾಗಿ ಹರಿಯುತ್ತದೆ. ಹೀಗೆ ಅಲೆಗಳಾಗಿ ಹರಿಯುವ ಕಾರಣದಿಂದ ಬೆಳಕಿಗೆ ಒಂದು ಅಲೆಯಗಲ ಎಂದು ಇರುತ್ತದೆ. ಬೆಳಕಿನ ಅಲೆಯಗಲ 400nm ಇಂದ 750nm ವರೆಗೂ ಇರುತ್ತದೆ. ಮಿನ್ಸೆಳೆತ ಅಲೆಸಾಲಿನ ಬೇರೆ ಬೇರೆ ಕದಿರುಗಳಿಗೆ ಒಂದೊಂದು ಅಲೆಯಗಲದ ಬೆಲೆ ಇರುತ್ತದೆ. ಕದಿರುಗಳ ಹರಿಯುವಿಕೆಯ ದೆಸೆಯಿಂದ ಎಲ್ಲಾ ಅಲೆಗಳಿಗೆ ಹುರುಪು ಕೂಡ ಇರುತ್ತದೆ.

ಅಲೆಯಗಲ ಹೆಚ್ಚಿದ್ದು ಸಲದೆಣಿಕೆ (frequency) ಕಡಿಮೆ ಇದ್ದರೆ ಆ ಕದಿರಿಗೆ ಕಡಿಮೆ ಹುರುಪಿರುತ್ತದೆ. ಅಲೆಯಗಲ ಕಡಿಮೆಯಿದ್ದು ಸಲದೆಣಿಕೆ ಹೆಚ್ಚಿದ್ದರೆ ಆ ಕದಿರಿಗೆ ಹೆಚ್ಚು ಹುರುಪಿರುತ್ತದೆ. ಮಳೆಬಿಲ್ಲಿನಲ್ಲಿ ಕಾಣುವಂತೆ ನೀಲಿ ನೇರಳೆ ಬಣ್ಣಗಳು ಒಂದೆಡೆ ಇದ್ದರೆ ಕೆಂಪು ಕಿತ್ತಳೆಗಳು ಇನ್ನೊಂದೆಡೆ ಇರುತ್ತದೆ. ನೀಲಿ ಬಣ್ಣಕ್ಕೆ ಹೆಚ್ಚು ಸಲದೆಣಿಕೆ/ಕಡಿಮೆ ಅಲೆಯಗಲ ಇರುತ್ತದೆ ಮತ್ತು ಕೆಂಪಿಗೆ ಕಡಿಮೆ ಸಲದೆಣಿಕೆ/ಹೆಚ್ಚು ಅಲೆಯಗಲ ಇರುತ್ತದೆ. ಈ ಎಲ್ಲಾ ಅಲೆಗಳು 3 X 108 m/s ಬಿರುಸಿನಲ್ಲಿ (speed) ಹರಿಯುತ್ತವೆ.

ನೇಸರನ ಬೆಳಕು ಗಾಳಿಪದರದ ಮೂಲಕ ಬರುತ್ತಿದ್ದಂತೆ ಗಾಳಿಪದರದ ಬೇರೆ ಬೇರೆ ವಸ್ತುಗಳೊಡನೆ ಬೆಳಕಿನ ತಿಕ್ಕಾಟ ಏರ್ಪಡುತ್ತದೆ . ಕಸದ ತುಣುಕುಗಳು ಮತ್ತು ನೀರಿನ ಹನಿಗಳು ಬೆಳಕಿನ ಅಲೆಯಗಲಕ್ಕಿಂತ ದೊಡ್ಡದಾಗಿರುವ ಕಾರಣ ಅದಕ್ಕೆ ಡಿಕ್ಕಿ ಹೊಡೆದು ಬೇರೆ ದಿಕ್ಕಿನೆಡೆಗೆ ಸಾಗುತ್ತದೆ. ಬೆಳಕಿನ ಎಲ್ಲಾ ಬಣ್ಣಗಳು ಒಂದೇ ಬಗೆಯಲ್ಲಿ ಸಾಗಿಹೋಗುವುದರಿಂದ ಡಿಕ್ಕಿಯ ಬಳಿಕವೂ ಬೆಳಕಿನ ಬಣ್ಣ ಹಾಗೆಯೇ ಉಳಿಯುತ್ತದೆ. ಹಾಗಾಗಿ ಬಿಳಿ ಬಣ್ಣ ಬಿಳಿಯಾಗಿಯೇ ಇರುತ್ತದೆ.

ಆದರೆ, ಬೆಳಕು ತನ್ನ ಅಲೆಯಗಲಕ್ಕಿಂತ ಚಿಕ್ಕದಾದ ಅಂದರೆ ಆವಿಯ ಅಣುಕೂಟಗಳಿಗೆ (gas molecules) ಡಿಕ್ಕಿ ಹೊಡೆದಾಗ ಬೆಳಕಿನ ಚದುರುವಿಕೆಯಾಗುತ್ತದೆ(scattering). ಬೆಳಕು ಚದುರಿದಾಗ ಅದರೊಳಗೆ ಇರುವ ಬಣ್ಣಗಳೂ ಕೂಡ ಚದುರುತ್ತವೆ. ಆದರೆ ಬೆರಗಿನ ವಿಷಯವೆಂದರೆ ಎಲ್ಲಾ ಬಣ್ಣಗಳು ಒಂದೇ ತೆರನಾಗಿ ಚದುರುವುದಿಲ್ಲ.

ಕಡಿಮೆ ಅಲೆಯಗಲಗಳುಳ್ಳ ಬಣ್ಣಗಳು (ನೀಲಿ,ನೇರಳೆ) ಹೆಚ್ಚು ಚದುರುತ್ತವೆ ಮತ್ತು ಹೆಚ್ಚು ಅಲೆಯಗಲಗಳುಳ್ಳ ಬಣ್ಣಗಳು(ಕೆಂಪು,ಕಿತ್ತಳೆ) ಕಡಿಮೆ ಚದುರುತ್ತವೆ. ಇದನ್ನು ರೇಯ್ಲೀ ಎಂಬಾತ ಮೊದಲು ತೋರಿಸಿಕೊಟ್ಟಿದ್ದರಿಂದ ಇದಕ್ಕೆ ರೇಯ್ಲೀ ಚದುರುವಿಕೆ (Rayleigh Scattering) ಎನ್ನುತ್ತಾರೆ. ಆವಿಯ ಅಣುಕೂಟಗಳು (Molecules) ನೀಲಿ ಮತ್ತು ನೇರಳೆ ಬಣ್ಣಗಳನ್ನು ಸುಳುವಾಗಿ ಹೀರಿಕೊಳ್ಳುತ್ತವೆ. ಆದರೆ ಕೆಂಪು ಮತ್ತು ಕಿತ್ತಳೆಯನ್ನು ಅಷ್ಟು ಸುಳುವಾಗಿ ಹೀರಿಕೊಳ್ಳುವುದಿಲ್ಲ ಮತ್ತು ಅದು ಪದರದ ಮೂಲಕ ಹಾದುಹೋಗಿಬಿಡುತ್ತವೆ.

ಆವಿಯ ಅಣುಕೂಟಗಳು ಹೀಗೆ ಕಡಿಮೆ ಅಲೆಯಗಲದ ಬಣ್ಣಗಳನ್ನು(ನೀಲಿ,ನೇರಳೆ) ಹೀರಿಕೊಂಡ ಬಳಿಕ ಅವು ಎಲ್ಲಾ ದಿಕ್ಕುಗಳಲ್ಲಿ ಚದುರಲು ಮೊದಲಾಗುತ್ತವೆ. ಹೀಗೆ ಎಲ್ಲಾ ದಿಕ್ಕಿನಲ್ಲಿ ಚದರುವ ಕಾರಣ ಬಾನಿನ ಬಣ್ಣ ನೀಲಿಯಾಗಿ ಕಾಣುತ್ತದೆ. ಆದರೆ ನೀಲಿಯೇ ಏಕೆ ನೇರಳೆ ಬಣ್ಣ ಯಾಕಲ್ಲ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು.

ಮನುಷ್ಯನ ಕಣ್ಣುಗಳು ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳಿಗೆ ಹೆಚ್ಚು ನಾಟುವ ಹಾಗೆ ಏರ್ಪಾಟಾಗಿವೆ , ಹಾಗಾಗಿ ನೀಲಿ-ನೇರಳೆ ಬಣ್ಣದ ಬೆರೆತ ಇದ್ದರೂ ಕೂಡ ಕಣ್ಣು ಅದನ್ನು ನೀಲಿಯೆಂದೆ ಅರಿಯುತ್ತದೆ . ಹಾಗಾಗಿ ಬಾನು ನಮಗೆ ನೀಲಿಯಾಗಿ ಕಾಣುತ್ತದೆ.

ಇಳಿಸಂಜೆಯ ಹೊತ್ತಿಗೆ ಬಾನು ಕೆಂಪಾಗುವುದನ್ನು ನಾವು ಕಂಡಿರುತ್ತೇವೆ. ಭೂಮಿಯು ತನ್ನ ಸುತ್ತ ತಿರುಗುತ್ತಿದ್ದಂತೆ ಬೆಳಿಗ್ಗೆ ನೇಸರನ ಎದುರಿಗಿದ್ದ ಭೂಮಿಯ ಬದಿಯು ಸಂಜೆಗೆ ನೇಸರನಿಂದ ದೂರ ಸರಿಯುತ್ತದೆ. ಮೇಲಿನ ತಿಟ್ಟದಲ್ಲಿ ಕಾಣುವಂತೆ ಸಂಜೆಯ ಹೊತ್ತಿಗೆ ನೇಸರನ ಕದಿರುಗಳು ಬೆಳಗಿನ ಹೊತ್ತಿನಂತೆ ನೇರವಾಗಿ ಭೂಮಿಯ ಮೇಲೆ ಬೀಳುವುದಿಲ್ಲ. ಅದು ನಾವು ಇರುವ ನೆಲವನ್ನು ತಲುಪಬೇಕಾದರೆ ಬೆಳಗಿನ ಹೊತ್ತಿಗಿಂತ ಹೆಚ್ಚು ದೂರ ಸಾಗಬೇಕಾಗುತ್ತದೆ. ಹೀಗೆ ಸಾಗುವಾಗ ಮೊದಲು ಚದರುವ ಕಡಿಮೆ ಅಲೆಯಗಲದ ನೀಲಿ ಬಣ್ಣವನ್ನು ಸುತ್ತಾವಿ ಆಗಲೇ ಹೀರಿಕೊಂಡಿರುತ್ತದೆ. ಮಿಕ್ಕ ಬಣ್ಣಗಳು ಸುತ್ತಾವಿಯನ್ನು ದಾಟಿ ನಮ್ಮನ್ನು ತಲುಪುತ್ತವೆ. ಈ ಬಣ್ಣಗಳು ಹೆಚ್ಚು ಅಲೆಯಗಲವುಳ್ಳವಾದ್ದರಿಂದ ನಮಗೆ ಸಂಜೆಯ ಬಾನು ಕೆಂಪು ಕಿತ್ತಳೆ ಬಣ್ಣವಾಗಿ ಕಾಣುತ್ತದೆ.