ಕಾಫಿ ಬೆಳೆ: ಹುಟ್ಟು ಮತ್ತು ಹರವು

ರತೀಶ ರತ್ನಾಕರ.

 

ಹೀಗೊಂದು ಹಳೆಯ ಕತೆ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ ಕುರಿಗಳು ಕಾಡಿನ ನಡುವೆ ಸಿಕ್ಕ ಒಂದು ಬಗೆಯ ಹಣ್ಣನ್ನು ತಿಂದೊಡನೆ ಕುಣಿದು ಕುಪ್ಪಳಿಸ ತೊಡಗಿದವು. ಹಣ್ಣಿನಲ್ಲಿರುವ ಯಾವುದೋ ಒಂದು ಅಂಶ ಕುರಿಗಳಿಗೆ ನಲಿವನ್ನು ತರುತ್ತಿದೆ ಎಂದು ಅರಿತು ಕಾಲ್ಡಿಯೂ ಆ ಹಣ್ಣನ್ನು ತಿಂದು ನೋಡಿದ. ಒಂದು ಬಗೆಯ ರುಚಿಯ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡಿದ ಆ ಹಣ್ಣನ್ನು ತನ್ನವರಿಗೂ ಪರಿಚಯಿಸಿದ.

ಉಲ್ಲಾಸ ನೀಡುವಂತಹ ಆ ಹಣ್ಣನ್ನು ಆಫ್ರಿಕಾದ ಬುಡಕಟ್ಟಿನವರು ಮೊದಲು ಹಾಗೆಯೇ ತಿನ್ನುತ್ತ ಬಳಿಕ ತಮ್ಮ ಊಟದ ಜೊತೆ ತಿನ್ನತೊಡಗಿದರು. ಹೀಗೆ ಮನುಷ್ಯನ ಊಟದ ಪಾಲಿನಲ್ಲಿ ಸೇರಿಕೊಂಡ ಆ ಹಣ್ಣು ಮುಂದೆ ಹಲವಾರು ಬಗೆಯಲ್ಲಿ ಮಾರ್ಪಾಟುಗೊಂಡು ಬೆಳಗ್ಗೆ ಎದ್ದಾಗ ಇಲ್ಲವೇ ಸಂಜೆಯ ಹೊತ್ತಿಗೆ ಕುಡಿಯುವ ಕಾಫಿಯಾಗಿ ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಕಾಲ್ಡಿಯು ಮೊತ್ತ ಮೊದಲ ಬಾರಿಗೆ ತನ್ನ ಕುರಿಗಳ ನೆರವಿನಿಂದ ಆ ಹಣ್ಣನ್ನು ತಿಂದ ಜಾಗದ ಹೆಸರು ‘ಕಪ’ ಎಂದು. ‘ಕಪ’ ಎಂಬ ಜಾಗದಲ್ಲಿ ದೊರೆತ ಹಣ್ಣು ಕಾಫಿಯಾಗಿ ಈಗ ನಮ್ಮ ನಡುವೆ ಹೆಸರುವಾಸಿಯಾಗಿದೆ.

ಹೌದು, ನಾವು ತಿನ್ನುವ ಹಾಗು ಕುಡಿಯುವ ವಸ್ತುಗಳ ಹಿಂದೆ ಸಾಕಷ್ಟು ಹಳಮೆ ಹಾಗು ಅರಿಮೆಯಿದೆ. ಕಾಫಿಯ ಹಳಮೆ ಮೇಲೆ ಹೇಳಿದ ಕತೆಯಿಂದ ಮೊದಲಾಗುತ್ತದೆ, ಈ ಹಳಮೆಯ ಜೊತೆ ನಾವು ಅರಿಯಬೇಕಾದ ಕಾಫಿಯ ಅರಿಮೆ ಕೂಡ ಸಾಕಷ್ಟಿದೆ. ಕಾಫಿಯ ಅರಿಮೆಯ ಮೇಲೆ ಕೊಂಚವಾದರು ಬೆಳಕು ಚೆಲ್ಲಬೇಕೆಂದು ಈ ಸರಣಿ ಬರಹ.

ಜಗತ್ತಿನ ಕಾಫಿ ಬೆಳೆಯುವ ನಾಡುಗಳಲ್ಲಿ ಇಂಡಿಯಾವು ಆರನೇ ಜಾಗದಲ್ಲಿದೆ. ಇಂಡಿಯಾದ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೇ ಮೊದಲ ಜಾಗ. ಇಂಡಿಯಾದಲ್ಲಿ ಬೆಳೆಯುವ ಕಾಫಿಯಲ್ಲಿ 71% ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಕಾಫಿ ಬೆಳೆಯುವ ಮುಖ್ಯ ಜಿಲ್ಲೆಗಳು. ಬೇರೆ ಬೇರೆ ರಾಜ್ಯಗಳಲ್ಲಿಕಾಫಿಯನ್ನು ಬೆಳೆಯುವ ಜಾಗದ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಕರ್ನಾಟಕದಲ್ಲಿ ಬೆಳೆಯುವ ಕಾಫಿಯನ್ನು ನೆರಳಿನ ಜಾಗದಲ್ಲಿ ಬೆಳೆಯುವ ಜಗತ್ತಿನ ರುಚಿಕರವಾದ ಕಾಫಿ ಎಂದು ಗುರುತಿಸಲಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ನೇಸರನ ಬಿಸಿಲಿಗೆ ನೇರವಾಗಿ ಗಿಡವನ್ನು ಬೆಳೆಸಿ ಕಾಫಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಬೆಟ್ಟದ ಸಾಲುಗಳಲ್ಲಿ ಹಲವು ಬಗೆಯ ಮರದ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗ್ಗೆ:
ಕಾಫಿಯು ಗಿಡ ಇಲ್ಲವೇ ಚಿಕ್ಕ ಮರದ ರೂಪದಲ್ಲಿ ಬೆಳೆಯುತ್ತದೆ. ಕಾಫಿಯೇಯ್ (coffeeae) ಎಂಬ ಗಿಡಗಳ ಬುಡಕಟ್ಟು ಮತ್ತು ರುಬಿಯೇಸಿಯಯ್ (Rubiaceae) ಎಂಬ ಕುಟುಂಬಕ್ಕೆ ಈ ತಳಿಯು ಸೇರುತ್ತದೆ. ಕಾಫಿ ಗಿಡವು ಸುಮಾರು 14 ರಿಂದ 15 ಅಡಿಗಳ ವರೆಗೆ ಬೆಳೆಯುತ್ತದೆ. ದಪ್ಪನಾದ ಹಾಗು ಉದ್ದನೆಯ ಒಂದು ಕಾಂಡ ನೆಲದಿಂದ ಹೊರಬಂದು, ಬಳಿಕ ಮೂರು ಹಂತದಲ್ಲಿ ರಕ್ಕೆಗಳು ಕವಲೊಡೆದು, ಒಂದು ದೊಡ್ಡದಾದ ಪೊದೆಯ ಗಿಡದಂತೆ ಕಾಫಿ ಗಿಡವು ಕಾಣುತ್ತದೆ. ಕೊಂಚ ಹೊಳೆಯುವ, ಕೊಂಚ ಮೇಣದ ಪದರ ಮತ್ತು ಕಂದು ಹಸಿರುಬಣ್ಣವನ್ನು ಕಾಫಿಗಿಡದ ಎಲೆಯು ಹೊಂದಿರುತ್ತದೆ. ಕಾಫಿಗಿಡದ ಎಲೆಗಳು ಸುಮಾರು 7 ರಿಂದ 8 ಇಂಚಿನವರೆಗೂ ಉದ್ದವಾಗಿರುತ್ತವೆ.

ಕಾಫಿ ಗಿಡದ ಬೇರುಗಳು ಮುಖ್ಯವಾಗಿ ಮೂರು ಬಗೆಯವು. ಬದಿಯ ಬೇರು (Lateral Roots), ನಲ್ಲಿ ಬೇರು (Tap Roots) ಮತ್ತು ಮೇವಿನ ಬೇರು (Feeder roots). ಬದಿಯ ಬೇರುಗಳು ಗಿಡದಿಂದ ಸುಮಾರು 2 ಮೀಟರ್ಗಳವರೆಗೂ ಹರಡಿಕೊಳ್ಳಬಲ್ಲವು. ನಲ್ಲಿ ಬೇರುಗಳು ನೆಲದ ಅಡಿಗೆ ಸುಮಾರು 1 ರಿಂದ 1.5 ಅಡಿಗಳಷ್ಟು ಬೆಳೆಯಬಲ್ಲವು. ಮೇವಿನ ಬೇರುಗಳು ನೆಲದಿಂದ ಕೇವಲ 20 ಸೆ.ಮೀ. ನಷ್ಟು ಕೆಳಗೆ ಇರುತ್ತವೆ ಆದರೆ ಇವು ಗಿಡದ ಬುಡದಿಂದ ಸುಮಾರು 60-90 ಸೆ.ಮೀ. ದೂರದಿಂದ ಹರಡಿಕೊಂಡಿರುತ್ತವೆ. ಒಟ್ಟಿನಲ್ಲಿ ಗಿಡದ ಬುಡದಿಂದ 30 ರಿಂದ 60 ಸೆ. ಮೀ. ನಷ್ಟು ಆಳಕ್ಕೆ ಸಾಕಷ್ಟು ಕಾಫಿಗಿಡದ ಬೇರುಗಳನ್ನು ಕಾಣಬಹುದು. ಒಂದು ಕಾಫಿ ಗಿಡದ ಬೇರು ಸುಮಾರು 500 ಚದರ ಮೀಟರಿನಷ್ಟು ನೆಲದ ಜಾಗದಿಂದ ನೀರು ಮತ್ತು ಆರಯ್ಕೆಯನ್ನು ಹೀರಿಕೊಳ್ಳಬಲ್ಲವು. ಗಟ್ಟಿಯಾದ ಮತ್ತು ದಪ್ಪನಾಗಿರುವ ಕಾಫಿ ಗಿಡದ ಬೇರು ಬೆಳೆಯಲು ನೈಟ್ರೋಜನ್, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ನ ಅವಶ್ಯಕತೆ ತೀರಾ ಇದೆ, ಅವನ್ನು ಹೀರಿಕೊಳ್ಳಲು ನೆರವಾಗುವಂತಹ ಬೇರಿನ ರೂಪು ರೇಶೆಯನ್ನು ಕಾಫಿ ಗಿಡವು ಹೊಂದಿದೆ.

ಕಾಫಿ ಬೆಳೆಯಲು ಬೇಕಾದ ಗಾಳಿಪಾಡು:
ಕಾಫಿಯ ಬೆಳವಣಿಗೆಗೆ ಸುಮಾರು 15 -28 ಡಿಗ್ರಿ ಸೆಲ್ಶಿಯಸ್ ಬಿಸುಪು ವರುಶವಿಡಿ ಇದ್ದರೆ ಒಳಿತು. ಕೊರೆಯುವ ಚಳಿಯಿದ್ದು, ಹಿಮ ಬೀಳುವಂತಹ ಜಾಗಗಳಲ್ಲಿ ಕಾಫಿಯ ಬೆಳವಣಿಗೆ ಸಾಧ್ಯವಿಲ್ಲ . ಹಾಗೆಯೇ ವರುಶಕ್ಕೆ 60-80 ಇಂಚು ಮಳೆ ಬೀಳಬೇಕು, ಜೊತೆಗೆ ಎರೆಡರಿಂದ ಮೂರು ತಿಂಗಳುಗಳ ಕಾಲ ಅತಿ ಕಡಿಮೆ ಮಳೆಯಿದ್ದು ಬಿಸಿಲು ಸಿಗುವಂತಿರಬೇಕು. ಮಳೆ ಇಲ್ಲವೇ ಚಳಿಯಿಂದ ಕಾಫಿಯ ಗಿಡಕ್ಕೆ ತಂಪು ಹೆಚ್ಚಾದರೆ ಅದರ ಬೆಳವಣಿಗೆಗೆ ಪೆಟ್ಟು ನೀಡಿದಂತೆ, ಹಾಗಾಗಿ ಮಳೆ ಬಿದ್ದೊಡನೆ ಅದರ ನೀರು ಹರಿದು ಹೋಗುವಂತೆ ಮತ್ತು ಗಾಳಿಯು ಚೆನ್ನಾಗಿ ಹರಿದಾಡುವಂತೆ ಇರುವ ಇಳಿಜಾರಿನ ಜಾಗಗಳಲ್ಲಿ ಕಾಫಿಯನ್ನು ಬೆಳಯಲಾಗುತ್ತದೆ. ನೀರು ಹರಿದುಕೊಂಡು ಹೋಗುವಂತಹ ಮತ್ತು ಗಾಳಿಗೆ ಸುಳಿದಾಡಲು ಜಾಗ ಕೊಡುವಂತಹ ಬೆಟ್ಟ-ಗುಡ್ಡದ ಜಾಗವು ಒಳ್ಳೆಯದಾಗಿರುತ್ತದೆ.

ಕಾಫಿ ಬೆಳೆಯಲು ಬೇಕಾಗಿರುವ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿರಬೇಕು ಮತ್ತು ಕೊಂಚ ಹುಳಿಯಾಗಿರಬೇಕು, ಅಂದರೆ ಮಣ್ಣಿನ ಹುಳಿಯಳತೆ (pH) 6.0 – 6.5 ಇರಬೇಕು. ಈ ಎಲ್ಲಾ ಗಾಳಿಪಾಡುಗಳು ಸಿಗಬೇಕೆಂದರೆ ಕಡಲಿನಿಂದ 1000 – 1500 ಮೀಟರ್ ನಷ್ಟು ಎತ್ತರದಲ್ಲಿರುವ ಬೆಟ್ಟ-ಗುಡ್ಡದ ಜಾಗಗಳನ್ನು ಕಾಫಿ ಬೆಳೆಯಲು ಆಯ್ಕೆ ಮಾಡಬೇಕಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿರುವ ಬೆಟ್ಟಗುಡ್ಡದ ಜಾಗಗಳು ಈ ಗಾಳಿಪಾಡನ್ನು ಹೊಂದಿದ್ದು ಕಾಫಿ ಬೆಳೆಯಲು ಸೂಕ್ತವಾಗಿವೆ.

ಕರ್ನಾಟಕದಲ್ಲಿ ಕಾಫಿಯ ಜೊತೆ ಕಾಳುಮೆಣಸು, ಶುಂಟಿ, ಅಡಿಕೆ, ಚಕ್ಕೆ ಹೀಗೆ ಕೆಲವು ಬೆಳೆಗಳನ್ನು ಒಟ್ಟೊಟ್ಟಿಗೆ ಬೆಳೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಕಾಡುಮರಗಳ ಜೊತೆಗೆ ಸಿಲ್ವರ್ ಇಲ್ಲವೇ ಇತರೆ ಮರಮಟ್ಟುಗಳಿಗೆ ನೆರವಾಗುವ ಮರಗಳ ಜೊತೆ ನೆರಳಿನಲ್ಲಿ ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗೆಗಳು:
ಕುಡಿಯುವ ಕಾಫಿಯಲ್ಲಿ ನಾವು ಹಲವಾರು ಬಗೆಗಳನ್ನು ಕಾಣುತ್ತೇವೆ ಹಾಗೆಯೇ ಕಾಫಿಯ ಗಿಡಗಳಲ್ಲಿಯೂ ಹಲವಾರು ಬಗೆಗಳಿವೆ, ಅವುಗಳಲ್ಲಿ ಕೆಲವೆಂದರೆ ಲಿಬೆರಿಕಾ (Liberica), ಗ್ರಾಸ್ ಇಂಡೆಂಟೆ (Gros Indente), ಎಕ್ಸೆಲ್ಸ (Excelsa), ಕುಯ್ಲೂ (Kouilou), ಪೆಟಿಟ್ ಇಂಡೇನಿಜೆ (Petit Indénizé), ಅರಾಬಿಕಾ ಮತ್ತು ರೊಬಸ್ಟಾ. ಇವುಗಳಲ್ಲಿ ಅರಾಬಿಕಾವನ್ನು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ನೂರಕ್ಕೆ 75% ನಷ್ಟು ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ರೊಬಸ್ಟಾ ಎರಡನೆಯ ಜಾಗವನ್ನು ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ರೊಬಸ್ಟಾವನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ 67.3% ರೊಬಸ್ಟಾ ಮತ್ತು ಉಳಿದ 32.7% ಅರಾಬಿಕ ಬೆಳೆಯಲಾಗುತ್ತದೆ.

ಹಾಗದರೆ ಅರಾಬಿಕಾ ಮತ್ತು ರೊಬಸ್ಟಾ ನಡುವಿನ ವ್ಯತ್ಯಾಸವೇನು?ಕಾಫಿಯನ್ನು ಮೊಳಕೆ ಬರಿಸುವುದರಿಂದ ಹಿಡಿದು ಹಣ್ಣು ಕುಯ್ಯುವುದರವರೆಗೂ ಇರುವ ಹಂತಗಳಾವವು? ಕುಡಿಯುವ ಕಾಫಿಯಲ್ಲಿ ಹಲವು ಬಗೆಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು? ಕಾಫಿಯ ಕುರಿತು ಮತ್ತೇನಾದರು ಸೋಜಿಗದ ಸುದ್ದಿಗಳು ಇದೆಯೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ಮೇಲಿನ ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

(ಚಿತ್ರ ಸೆಲೆ: Wikimediagktodaycoffeeplanet.nl)