ಗಾಳಿಯಿಂದ ನೀರು

ಜಯತೀರ್ಥ ನಾಡಗೌಡ

ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ ಮಟ್ಟಕ್ಕಂತೂ ಸರಿಹೊಂದುತ್ತದೆ. ಅದರಲ್ಲೂ ನೂರಾರು ಕೆರೆಗಳಿಂದ ಕೂಡಿದ್ದ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡುಗಳು ಹೆಚ್ಚುತ್ತ ನೀರಿನ ಸೆಲೆಗಳಿಲ್ಲದಂತೆ ಮಾಡಿಕೊಂಡಿದ್ದೇವೆ. ಹೀಗಾದಾಗ ನೀರಿನ ಅಭಾವ ತಪ್ಪಿದ್ದಲ್ಲ. ಈ ಅಭಾವ ತಪ್ಪಿಸಲು, ಗಾಳಿಯಿಂದ ಕುಡಿಯುವ ನೀರು ತಯಾರಿಸುವ ಯಂತ್ರವೊಂದು ಹೊರಬಂದಿದೆ.

ಈ ಯಂತ್ರ ಕೆಲಸ ಮಾಡುವ ಬಗೆ ತಿಳಿಯೋಣ ಬನ್ನಿ. ಅತಿ ದೊಡ್ಡ ನೀರಿನ ಸೆಲೆ ನಮ್ಮ ವಾತಾವರಣ. ನಮ್ಮ ವಾತಾವರಣದ ಗಾಳಿಯಲ್ಲಿನ ತೇವಾಂಶ ಆವಿಯಾಗಿ ಮಳೆ ಬರುವುದು ಸಾಮಾನ್ಯ. ಇದೇ ಗಾಳಿಯಲ್ಲಿ ತೇವ ಕಡಿಮೆಯಿದ್ದರೂ, ಅದನ್ನು ಆವಿಯಾಗಿಸಿ ನೀರು ಪಡೆಯಬಲ್ಲವು ಈ ಯಂತ್ರಗಳು. ವಾತಾವರಣದಲ್ಲಿ ಹೈಡ್ರೋಜನ್ ಹೆಚ್ಚಾಗಿ ತುಂಬಿರುವುದರಿಂದ, ಗಾಳಿಯಲ್ಲಿ ತೇವದ ಕೊರತೆ ತುಂಬಾ ವಿರಳ. ವಾತಾವರಣದ ಬಿಸುಪಿನಿಂದ ತೇವಾಂಶದ ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಗಾಳಿಯನ್ನು ನೀರಾಗಿಸುವ ಈ ಯಂತ್ರ, ಸುಮಾರು 70-75% ರಷ್ಟು  ತೇವಾಂಶವಿರುವ ಗಾಳಿಯನ್ನು ಬಳಸಿಕೊಂಡು, 25-32 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸುಲಭವಾಗಿ ನೀರಾಗಿ ಪರಿವರ್ತಿಸಬಲ್ಲುದು.

5 ಹಂತದಲ್ಲಿ ಗಾಳಿಯನ್ನು ನೀರಾಗಿಸುವ ಕೆಲಸ ನಡೆಯುತ್ತದೆ. ಮೊದಲು ವಾತಾವರಣದ ಗಾಳಿ ಯಂತ್ರದ ಒಳಗೆ ಸಾಗುತ್ತದೆ. ಅದು 3-ಪದರದ ಸೋಸುಕದ ಮೂಲಕ ಹಾದು, ಶುದ್ಧವಾಗುತ್ತದೆ. ಮುಂದೆ ಶುದ್ಧಗೊಂಡ ಈ ಗಾಳಿ ಇಂಗುಕದಲ್ಲಿ(Condenser) ಇಂಗಿ ನೀರಾಗುತ್ತದೆ. ಒಮ್ಮೆ ನೀರಾಗಿ ಮಾರ್ಪಟ್ಟರೆ ಈ ನೀರು ಕುಡಿಯಲು ಯೋಗ್ಯವಿರುವುದಿಲ್ಲ. ಅದಕ್ಕಾಗಿಯೇ, ಈ ನೀರು ಅಲ್ಟ್ರಾಸೋನಿಕ್ ಸೋಸುಕದ(Filter) ಮೂಲಕ ಸೋಸಲ್ಪಡುತ್ತದೆ. ಹೀಗೆ ಗಾಳಿಯನ್ನು ಬಳಸಿ ನೀರು ಪಡೆಯುವ ಯಂತ್ರ ಕೆಲಸ ಮಾಡುತ್ತದೆ. ಗಾಳಿಯಿಂದ ನೀರು ಪಡೆಯುವ ಯಂತ್ರ ಗಾಳಿಯಲ್ಲಿರುವ ತೇವಾಂಶ ಮತ್ತು ವಾತಾವರಣದ ಬಿಸುಪಿನ ಮೇಲೆ ಅವಲಂಬಿತವಾಗಿರುತ್ತವೆ. ಅಕ್ವೋ ಎಂಬ ಹೆಸರಿನ ಕಂಪನಿಯ ಪ್ರಕಾರ, 35-40% ರಷ್ಟು ಕಡಿಮೆ ತೇವಾಂಶದ ಗಾಳಿಯನ್ನು 18-45 ಡಿಗ್ರಿ ಬಿಸುಪಿನಲ್ಲೂ ಈ ಯಂತ್ರ ಕೆಲಸ ಮಾಡಿ ಚೊಕ್ಕಟವಾದ ಕುಡಿಯುವ ನೀರು ನೀಡುವ ಕ್ಷಮತೆ ಪಡೆದಿವೆಯಂತೆ. ಈ ಯಂತ್ರದಲ್ಲಿ ತಿರುಗುವ ಬಿಡಿಭಾಗಗಳು ಕಡಿಮೆಯಿರುವುದರಿಂದ ಯಂತ್ರವೂ ಹೆಚ್ಚುಕಾಲ ಬಾಳಿಕೆ ಬರಲಿದ್ದು, ಕಡಿಮೆ ನಿರ್ವಹಣಾ ವೆಚ್ಚ ತಗುಲುತ್ತದಂತೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವ ಇಂದಿನ ದಿನದಲ್ಲಿ ಇವುಗಳ ಬೇಡಿಕೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.

 

ಬರಹ ಮತ್ತು ತಿಟ್ಟ ಸೆಲೆ:akvosphere.com