ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

ರತೀಶ ರತ್ನಾಕರ.

 

Honeybee_landing_on_milkthistle02

ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಷ್ಟು ಸುಲಭವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ ಎಂದಿನ ಕೆಲಸಗಳಿಗೆ ಹುರುಪನ್ನು ಪಡೆದುಕೊಳ್ಳಲು ಹೂವಿನ ಜೇನನ್ನು ಸವಿಯುತ್ತವೆ. ಚಳಿಗಾಲ ಇಲ್ಲವೇ ಮೇವು ಸಿಗದ ಹೊತ್ತಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇರಲೆಂದು ಜೇನನ್ನು ಗೂಡಿನಲ್ಲಿ ಕೂಡಿಟ್ಟು ಕಾಪಾಡುತ್ತವೆ.

ಮೊದಲಿಗೆ ಬೇಹುಗಾರ ಹುಳಗಳು ಮೇವು ಸಿಗುವ ಜಾಗವನ್ನು ಹುಡುಕಿ ಹೂವಿನ ಬಂಡು(pollen) ಮತ್ತು ಸಿಹಿಯನ್ನು ಹೊತ್ತು ಗೂಡಿಗೆ ಹಿಂದಿರುಗುತ್ತವೆ. ಗೂಡಿನಲ್ಲಿ ಉಳಿದ ಜೇನುಹುಳಗಳಿಗೆ ‘ಜೇನುಹುಳದ ಕುಣಿತ‘ದ ಮೂಲಕ ಮೇವು ಸಿಗುವ ಜಾಗವನ್ನು ತಿಳಿಸುತ್ತವೆ. ಬಳಿಕ ಉಳಿದ ದುಡಿಮೆಗಾರ ಜೇನುಹುಳಗಳು ಮೇವನ್ನು ಹೊತ್ತು ತರಲು ಹೊರಡುತ್ತವೆ. ಒಂದು ಜೇನುಹುಳವು ಗೂಡಿನಿಂದ ಸುಮಾರು 4 ಕಿಲೋಮೀಟರ್ ದೂರದವರೆಗೂ ಮೇವನ್ನು ಅರಸುತ್ತಾ ಸಾಗುತ್ತದೆ. ಹುಳುವೊಂದು ಒಂದು ಬಾರಿಗೆ ಸುಮಾರು 35-40 ನಿಮಿಷಗಳವರೆಗೆ ಹಾರಾಟವನ್ನು ನಡೆಸಬಲ್ಲದು. ಒಂದೇ ಬಗೆಯ ಸುಮಾರು 200-300 ಹೂವುಗಳಿಂದ 0.05 ಗ್ರಾಂ ನಷ್ಟು ಸಿಹಿಯನ್ನು ಜೇನುಹುಳುವೊಂದು ತನ್ನ ಒಂದು ಹಾರಾಟದಲ್ಲಿ ಹೊತ್ತುತರಬಲ್ಲದು. 0.05 ಗ್ರಾಂ ಸಿಹಿಯು ಜೇನುಹುಳದ ತೂಕದ ಅರ್ಧದಷ್ಟಾಗಿದೆ. ಒಂದು ದಿನದಲ್ಲಿ ಒಂದು ಹುಳವು ಇಂತಹ 10 ಹಾರಾಟಗಳನ್ನು ನಡೆಸಿ 0.5 ಗ್ರಾಂ ನಷ್ಟು ಸಿಹಿಯನ್ನು ಗೂಡಿಗೆ ಸಾಗಿಸಬಲ್ಲದು. ಒಟ್ಟಾರೆಯಾಗಿ ಸುಮಾರು 10,000 ಹುಳಗಳಿರುವ ಒಂದು ಗೂಡಿನಲ್ಲಿ ಒಂದು ದಿನಕ್ಕೆ ಸುಮಾರು 5 ಕಿಲೋ.ಗ್ರಾಂ ಬಂಡನ್ನು ಕೂಡಿಡಲಾಗುತ್ತದೆ. ಈ 5 ಕಿಲೋ.ಗ್ರಾಂ ಬಂಡು ಬಳಿಕ 1.50 ಕಿ.ಗ್ರಾಂ ಜೇನಾಗಿ ಗೂಡಿನಲ್ಲಿ ಮಾರ್ಪಾಡಗುತ್ತದೆ.

ಮೇವಿಗಾಗಿ ಹಾರಾಟ ನಡೆಸುವ ಮುನ್ನ ಹೊರಗಿನ ಗಾಳಿಪಾಡು, ಮೇವಿನ ಗುಣಮಟ್ಟ, ಸಿಗುವ ದೂರ ಮತ್ತು ಮೇವಿನ ಅಳವಿ(quantity)ಯ ಲೆಕ್ಕಾಚಾರವನ್ನು ಹಾಕುತ್ತವೆ. ಮೇವಿನ ವಿವರವನ್ನು ಹುಳಗಳು ಬೇಹುಗಾರ ಹುಳಗಳಿಂದ ಪಡೆಯುತ್ತವೆ. ಬಿಸುಪು (temperature) ನೋಡಿಕೊಂಡು ಜೇನುಹುಳಗಳು ನಡೆಸುವ ಕೆಲಸಗಳು ಹೀಗಿವೆ;

  • < 8 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುವುದಿಲ್ಲ. ಗೂಡನ್ನು ಸುತ್ತುವರಿದು ಗೂಡಿನ ಬಿಸುಪನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗುತ್ತವೆ
  • 8 – 16 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುತ್ತವೆ ಆದರೆ ತುಂಬಾ ಹೆಚ್ಚಿನ ಹಾರಾಟ ನಡೆಸುವುದಿಲ್ಲ
  • 16 – 32 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸಲು ಸರಿಯಾದ ಬಿಸುಪು. ಹೆಚ್ಚಿನ ಹಾರಾಟ ನಡೆಯುತ್ತದೆ
  • 32 ಡಿಗ್ರಿ ಸೆ. ಗಿಂತ ಹೆಚ್ಚು – ಮೇವಿಗಾಗಿ ಹಾರಾಟ ನಡೆಸುವುದಿಲ್ಲ ಬದಲಾಗಿ ನೀರಿಗಾಗಿ ಹೆಚ್ಚಿನ ಹಾರಾಟ ನಡೆಸುತ್ತವೆ

ಮೇವಿಗಾಗಿ ಹಾರುವ ಮುನ್ನ ಗೂಡಿನಲ್ಲಿರುವ ಜೇನನ್ನು ಸವಿದು ಹಾರುತ್ತವೆ. ಇದರಿಂದ ಅವು ಕೆಲವು ಹೊತ್ತುಗಳ ಕಾಲ ಹಾರಟವನ್ನು ನಡೆಸಬಹುದು. ಜೇನುಹುಳದ ಜಾಡುಹಿಡಿದು ಬರಹದಲ್ಲಿ ನೋಡಿದಂತೆ, ಜೇನುಹುಳದ ಕಣ್ಣು, ಕಾಲು, ರೆಕ್ಕೆ ಒಟ್ಟಾರೆಯಾಗಿ ಜೇನು ಹುಳದ ಮೈ ಅದಕ್ಕೆ ಮೇವು ಹುಡುಕಲು ನೆರವಾಗುವಂತಿದೆ. ಅದರ ಮೈ ಅಂಗಗಳು ಮೇವನ್ನು ಹುಡುಕಲು ಹೇಗೆ ನೆರವಾಗುತ್ತವೆ ಎಂಬುದನ್ನು ನೋಡೋಣ.

ರೆಕ್ಕೆಗಳು:
ಜೇನುಹುಳಕ್ಕೆ ಮುಂಬಾಗದ ರೆಕ್ಕೆ ಮತ್ತು ಹಿಂಬಾಗದ ರೆಕ್ಕೆ ಎಂಬ ಎರಡು ಜೋಡಿ ರೆಕ್ಕೆಗಳಿವೆ. ಸಾಮಾನ್ಯವಾಗಿ ಇತರೆ ಹುಳಗಳು ತಮ್ಮ ರೆಕ್ಕೆಗಳನ್ನು ಹೆಚ್ಚು ಬೀಸಿ ಬಡಿಯುತ್ತವೆ, ಆದರೆ ಜೇನುಹುಳಗಳು ರೆಕ್ಕೆಗಳನ್ನು ಹೆಚ್ಚು ಬೀಸುವ ಬದಲಾಗಿ ಹೆಚ್ಚು ಬಾರಿ ಪಟಪಟನೆ ಬಡಿಯುತ್ತವೆ. ಇತರೆ ಹುಳಗಳು ಸೆಕೆಂಡಿಗೆ 200 ಬಾರಿ ರೆಕ್ಕೆಯನ್ನು ಬಡಿದರೆ ಜೇನುಹುಳಗಳು 240 ಬಾರಿ ರೆಕ್ಕೆಯನ್ನು ಬಡಿಯುತ್ತವೆ. ಈ ರೆಕ್ಕೆ ಬಡಿತದಿಂದಲೇ ಜೇನುಹುಳಗಳು ‘ಜುಂಯ್’ ಎಂಬ ಸದ್ದನ್ನು ಮಾಡುವುದು. ಸಾಮಾನ್ಯ ಹುಳದ ರೆಕ್ಕೆ ಬಡಿತದ ಕೋನವು 145-165 ಡಿಗ್ರಿ ಇದ್ದರೆ ಜೇನುಹುಳದ ರೆಕ್ಕೆ ಬಡಿತದ ಕೋನ ಕೇವಲ 90 ಡಿಗ್ರಿ ಇರುತ್ತದೆ (ಕೆಳಗಿನ ಚಿತ್ರವನ್ನು ಗಮನಿಸಿ).Jenu haarata

ಜೇನುಹುಳದ ಮೈಗೆ ಹೋಲಿಸಿದರೆ ಅದರ ರೆಕ್ಕೆ ಚಿಕ್ಕದಾಗಿದೆ ಹಾಗಾಗಿ ಅದು ಬಡಿತವನ್ನು ಹೆಚ್ಚು ಮಾಡಿ ಹಾರಾಟ ನಡೆಸಬೇಕಾಗುತ್ತದೆ. ಹಾಗಿದ್ದರೂ ಜೇನುಹುಳವು ದೂರಕ್ಕೆ ಹಾರಬಲ್ಲದು, ತನ್ನ ತೂಕದ ಅರ್ಧದಷ್ಟು ತೂಕವಿರುವ ಹೂವಿನ ಬಂಡನ್ನು ಹೊತ್ತು ತರಬಲ್ಲದು!.

ಕಣ್ಣುಗಳು:
ಜೇನುಹುಳಕ್ಕಿರುವ ಸುಳುಗಣ್ಣು(Simple eyes) ಮತ್ತು ಕೂಡುಗಣ್ಣು(compound eyes)ಗಳು ಮರ-ಗಿಡ-ಬಳ್ಳಿಗಳ ನಡುವೆ ಇರುವ ಹೂವುಗಳನ್ನು ಗುರುತಿಸಲು ನೆರವಾಗುವಂತಿವೆ. ಕಣ್ಣುಗಳು ಗುಂಡಾಗಿರುವುದರಿಂದ ತಾನು ಸಾಗುತ್ತಿರುವ ದಾರಿ ಮತ್ತು ನೇಸರನ ನಡುವಿರುವ ಕೋನವನ್ನು ತಿಳಿದುಕೊಳ್ಳಲು ಇವುಗಳಿಗೆ ನೆರವಾಗಿವೆ. ಈ ಹುಳಗಳ ಕಣ್ಣುಗಳು ಕಡುನೇರಳೆ ಬಣ್ಣಗಳನ್ನು ನೋಡುವ ಕಸುವನ್ನು ಹೊಂದಿವೆ. ಜೇನುಹುಳಗಳು ಯಾವ ಯಾವ ಬಣ್ಣಗಳನ್ನು ಗುರುತಿಸುತ್ತವೆ ಎಂದು ತಿಳಿಯುವ ಮೊದಲು ಬಣ್ಣಗಳ ಬಗ್ಗೆ ಕೆಲವು ವಿವರಗಳನ್ನು ನಾವು ಅರಿಯಬೇಕಿದೆ. ಅವುಗಳನ್ನು ಈ ಕೆಳಗೆ ನೀಡಲಾಗಿದೆ.
ಕೆಳಗಿನ ಚಿತ್ರದಲ್ಲಿ ಮನುಷ್ಯರ ಕಣ್ಣಿಗೆ ಕಾಣುವ ಮತ್ತು ಕಣ್ಣಿಗೆ ಕಾಣದ ಬಣ್ಣಗಳ ಪಟ್ಟಿಯನ್ನು ನೀಡಲಾಗಿದೆ. ನೇಸರನಿಂದ ಬರುವ ಬೆಳಕಿನಲ್ಲಿ ಸುಮಾರು 700 ನ್ಯಾನೋ ಮೀಟರ್ ನಿಂದ 400 ನ್ಯಾನೋ ಮೀಟರ್ ಅಲೆಯಗಲ (Wave length) ಇರುವ ಬೆಳಕು ಬೇರೆ ಬೇರೆ ಬಣ್ಣಗಳಾಗಿ (ಕೆಂಕಿಹಹನೀನೇ) ನಮ್ಮ ಕಣ್ಣಿಗೆ ಕಾಣುವಂತಹವು. 400 ನ್ಯಾನೋ ಮೀ. ಗಿಂತ ಕಡಿಮೆ ಇರುವ ಇಲ್ಲವೇ 700 ನ್ಯಾನೋ ಮೀ. ಗಿಂತ ಹೆಚ್ಚು ಅಲೆಯಗಲ ಹೊಂದಿರುವ ಬಣ್ಣಗಳನ್ನು ನಮ್ಮ ಕಣ್ಣು ನೋಡಲಾರದು.Light Spectrum

ಇನ್ನು ಜೇನುಹುಳಗಳ ವಿಷಯಕ್ಕೆ ಬಂದರೆ ಅವು ಸುಮಾರು 600 ರಿಂದ 300 ನ್ಯಾನೋ ಮೀ. ಅಲೆಯಗಲ ಹೊಂದಿರುವ ಬಣ್ಣಗಳನ್ನು ಕಾಣಬಲ್ಲವು. ಅಂದರೆ ಮನುಷ್ಯನಿಗೆ ಹೋಲಿಸಿದರೆ ಜೇನುಹುಳಗಳು ಕಡುನೇರಳೆ ಬಣ್ಣವನ್ನು ಕಾಣಬಲ್ಲವು ಆದರೆ ಕೆಂಪು ಬಣ್ಣವನ್ನು ಕಾಣಲಾರವು! ಉಳಿದಂತೆ ಕಿತ್ತಳೆ, ಹಳದಿ, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳನ್ನು ಜೇನುಹುಳದ ಕಣ್ಣು ಗುರುತಿಸಬಲ್ಲದು. ಹಸಿರು ಹಾಸಿನ ಮೇಲೆ ಕೆಂಪು ಹೂವುಗಳಿದ್ದರೆ ಜೇನುಹುಳಗಳು ಅದನ್ನು ಗುರುತಿಸದೇ ಹೋಗಬಹುದು ಆದರೆ ಆ ಕೆಂಪು ಬಣ್ಣದ ಹೂವುಗಳು ಅವುಗಳಿಗೆ ಕಿತ್ತಳೆ ಇಲ್ಲವೇ ಕಂದು ಬಣ್ಣದಲ್ಲಿ ಕಾಣವುದು.Jenu kannu

ಜೇನುಹುಳಗಳು ಕಡುನೇರಳೆ ಬಣ್ಣಗಳನ್ನು ನೋಡಬಹುದಾಗಿರುವುದರಿಂದ ಹೂವಿನ ಆಳದಲ್ಲಿ ಹುದುಗಿರುವ ಬಂಡನ್ನು ಸುಲಭವಾಗಿ ಗುರುತಿಸಬಲ್ಲವು. ಸಾಮಾನ್ಯ ಕಣ್ಣಿಗೆ ಹಾಗು ಕಡುನೇರಳೆ ಬೆಳಕಿನಲ್ಲಿ ಕಾಣಬಹುದಾದ ಹೂವುಗಳ ಚಿತ್ರವನ್ನು ಈ ಕೆಳಗೆ ನೀಡಲಾಗಿದೆ. ಕಡುನೇರಳೆ ಬೆಳಕಿನಲ್ಲಿ ಕಾಣುವ ಹೂವಿನ ಎಸಳುಗಳು ಜೇನುಹುಳಗಳಿಗೆ ತುಂಬಾ ಸುಲಭವಾಗಿ ಕಾಣುವುದನ್ನು ನಾವು ಗಮನಿಸಬಹುದು.ultra - hoovuಹೂವಿನ ದಳಗಳ ಮೇಲೆ ಹೋಗಿ ಕೂರುವ ಹುಳವು ಮೊದಲು ತನ್ನ ಉದ್ದವಾದ ನಾಲಗೆಯನ್ನು ಬಳಸಿ ಹೂವಿನ ಬುಡದಲ್ಲಿರುವ ಸಿಹಿಯನ್ನು ಹೀರುತ್ತವೆ. ಹೂವಿನ ಜೇನು ಇಲ್ಲವೇ ಸಿಹಿಯು ನೀರಿನ ರೂಪದಲ್ಲಿದ್ದು ಸುಕ್ರೋಸ್, ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಸಕ್ಕರೆಯ ಅಂಶಗಳನ್ನು ಹೊಂದಿರುತ್ತದೆ. ಇದಲ್ಲದೇ ಈ ಸಿಹಿಯಲ್ಲಿ, ಮುನ್ನು (protein), ಉಪ್ಪು, ಹುಳಿ ಮತ್ತು ಕೆಲವು ಎಣ್ಣೆಯ ಅಂಶಗಳನ್ನು ಒಳಗೊಂಡಿರುತ್ತದೆ. ಹೂವಿನ ತಳಿ ಹಾಗು ಪಂಗಡದ ಆಧಾರದ ಮೇಲೆ ಅವುಗಳ ಸಿಹಿಯಲ್ಲಿನ ಸಕ್ಕರೆಯ ಅಂಶವು ಸುಮಾರು 3 ರಿಂದ 80 % ವರೆಗೂ ಬೇರೆ ಬೇರೆಯಾಗಿರುತ್ತದೆ. ಹೂವಿನ ಸಿಹಿಯಲ್ಲಿನ ಸಕ್ಕರೆಯು 30% ಗಿಂತ ಕಡಿಮೆಯಿದ್ದರೆ ಅದನ್ನು ಜೇನುಹುಳಗಳು ಹೀರಿಕೊಳ್ಳುವುದಿಲ್ಲ. ಜೇನುಹುಳದ ನಾಲಗೆಯು ಮಾನವನ ನಾಲಗೆಯಷ್ಟು ಬಗೆ ಬಗೆಯ ರುಚಿಗಳನ್ನು ಗುರುತಿಸುವ ಕಸುವನ್ನು ಹೊಂದಿಲ್ಲ ಆದರೆ ಸಿಹಿಯನ್ನು ಗುರುತಿಸುವ ಕಸುವು ತುಂಬಾ ಚೆನ್ನಾಗಿ ರೂಪುಗೊಂಡಿದೆ. ಚಿಕ್ಕ ಚಿಕ್ಕ ಕೂದಲುಗಳಿರುವ ಉದ್ದವಾದ ನಾಲಗೆಯು ಹೂವಿನಲ್ಲಿರುವ ಸಿಹಿಯು ಎಷ್ಟರ ಮಟ್ಟಿಗೆ ಸಕ್ಕರೆಯನ್ನು ಹೊಂದಿದೆ ಎಂದು ಚೆನ್ನಾಗಿ ಗುರುತಿಸಬಲ್ಲದು.

ಹೂವಿನಿಂದ ಹೀರಿಕೊಂಡ ಸಿಹಿಯನ್ನು ಜೇನುಹುಳವು ತನ್ನ ಹೊಟ್ಟೆಯಲ್ಲಿ ತುಂಬಿಕೊಳ್ಳುತ್ತದೆ. ಜೇನುಹುಳದ ಹೊಟ್ಟೆಯ ಸುಮಾರು 90% ಭಾಗದಷ್ಟು ಜಾಗವನ್ನು ಇವು ಸಿಹಿಯನ್ನು ತುಂಬಿಕೊಳ್ಳಲು ಬಳಸುತ್ತವೆ. ಮೊದಲೇ ತಿಳಿಸಿದಂತೆ ಹೊಟ್ಟೆಯಲ್ಲಿ ಸುಮಾರು 0.05 ಗ್ರಾಂ ನಷ್ಟು ಸಿಹಿಯನ್ನು ತುಂಬಿಕೊಳ್ಳಬಹುದು. ಹೊಟ್ಟೆಯಲ್ಲಿರುವ ಸಿಹಿಚೀಲ(nectar sac) ಸಿಹಿಯನ್ನು ತುಂಬಿಕೊಳ್ಳಲು ನೆರವಾಗುತ್ತದೆ. ನಾಲಗೆಯಿಂದ ಹೀರಿಕೊಳ್ಳುವ ಸಿಹಿಯು ತಿನಿಸುಗೊಳವೆಯ (esophagus) ಮೂಲಕ ನೇರವಾಗಿ ಸಿಹಿಚೀಲಕ್ಕೆ ಬರುತ್ತದೆ. ಈ ಸಿಹಿ ಚೀಲಕ್ಕೆ ಒಂದು ತೆರ್ಪು (valve) ಇರುತ್ತದೆ ಇದು ಬಂಡು ಚೀಲವನ್ನು ಹೊಟ್ಟೆಯ ಅರಗಿಸುವ ಭಾಗಗಳಿಂದ (ventriculus) ಬೇರ್ಪಡಿಸುತ್ತವೆ. ಹುಳಗಳು ಗೂಡಿಗೆ ಹಿಂದಿರುಗಿ ಹಾರುವಾಗ ಹೊಟ್ಟೆಯಲ್ಲಿರುವ ಸ್ವಲ್ಪ ಸಿಹಿಯನ್ನು ಅರಗಿಸಿಕೊಂಡು ಹಾರಲು ಹುರುಪನ್ನು ಪಡೆದುಕೊಳ್ಳುತ್ತವೆ. ಆಗ ಸಿಹಿಚೀಲದ ತೆರ್ಪು ತೆರೆದುಕೊಂಡು ಬೇಕಾದಷ್ಟು ಸಿಹಿಯು ಅರಗಿಸುವ ಭಾಗಗಳಿಗೆ ಹರಿಯುತ್ತದೆ. ಹಾಗಾಗಿ ಹೂವಿನಿಂದ ಹೊಟ್ಟೆ ಬಿರಿಯುವಷ್ಟು ಸಿಹಿಯನ್ನು ಹೀರಿಕೊಳ್ಳುವ ಹುಳಗಳು ಗೂಡನ್ನು ತಲುಪುವಾಗ ಅರೆಹೊಟ್ಟೆಯಾಗಿರುವ ಸಾಧ್ಯತೆಗಳು ಇರುತ್ತವೆ. ಹೂವಿನಿಂದ ಸಿಹಿಯನ್ನು ಹೀರಲು ನೆರವಾಗುವ ನಾಲಗೆ ಹಾಗು ಸಿಹಿಯನ್ನು ತುಂಬಿಕೊಳ್ಳುವ ಹೊಟ್ಟೆಯ ಚಿತ್ರಗಳನ್ನು ಈ ಕೆಳಗೆ ನೋಡಬಹುದು.anatomyಹೂವಿನಿಂದ ಸಿಹಿಯನ್ನಷ್ಟೆ ಅಲ್ಲದೇ ಹೂವಿನ ಬಂಡನ್ನು(pollen) ಕೂಡ ಹುಳಗಳು ತುಂಬಿಸಿಕೊಳ್ಳುತ್ತವೆ. ಜೇನುಹುಳದ ಹಿಂಗಾಲುಗಳಲ್ಲಿರುವ ಬಂಡಿನ ಬುಟ್ಟಿ (Pollen Basket)ವನ್ನು ಬಳಸುತ್ತವೆ. ಬಂಡು ಚೀಲವು ಚಿಕ್ಕ ಚಿಕ್ಕ ಕೂದಲುಗಳಿಂದ ಕೂಡಿ ಆಗಿರುತ್ತದೆ. ಹೂವಿನ ಬಂಡನ್ನು ಗೂಡಿನಲ್ಲಿರುವ ಮರಿಹುಳ(larvae)ಗಳಿಗೆ ತಿನಿಸಲು ಬಳಸುತ್ತವೆ. ಗೂಡಿನ ಮರಿಹುಳಗಳಿಗೆ ಇದೇ ಊಟವಾಗಿರುತ್ತದೆ. ಆದರೆ ದುಡಿಮೆಗಾರ ಜೇನುಹುಳಗಳು ಬಂಡನ್ನು ತಿನ್ನುವುದಿಲ್ಲ. ಹೂವಿನಿಂದ ಹೂವಿಗೆ ಹಾರಿ ಬಂಡನ್ನು ಹಾಗು ಸಿಹಿಯನ್ನು ಪಡೆಯುವುದರಿಂದ ಒಂದು ಹೂವಿನ ಬಂಡು ಇನ್ನೊಂದು ಹೂವಿಗೆ ಸೇರಿ ಹೂದುಂಬುಗೆ(fertilization) ನಡೆಯುತ್ತದೆ. ಹೆಚ್ಚಾಗಿ ಜೇನುಹುಳಗಳು ಒಂದು ಬಾರಿಗೆ ಒಂದೇ ಬಗೆಯ ಹೂವುಗಳಿಂದ ಮೇವನ್ನು ಪಡೆಯುತ್ತಿರುತ್ತವೆ ಇದರಿಂದ ಹೂದುಂಬುಗೆ ಚೆನ್ನಾಗಿ ನಡೆಯುತ್ತದೆ. ಹೂವು ಹಾಗು ಜೇನುಹುಳಗಳು ಒಂದಕ್ಕೊಂದು ಹೀಗೆ ನೆರವಾಗುತ್ತವೆ.

Apis.mellifera.-.lindsey

ಜೇನುಹುಳದ ಅರಿಗೊಂಬುಗಳು (Antennea) ಮನುಷ್ಯನಿಗಿಂತ 40 ಪಟ್ಟು ಹೆಚ್ಚು ಕಂಪನ್ನು ಗುರುತಿಸುವ ಕಸುವನ್ನು ಹೊಂದಿವೆ. ಬಗೆ ಬಗೆಯ ಹೂವುಗಳನ್ನು ಅವುಗಳ ಕಂಪಿನ ಮೂಲಕ ಗುರುತಿಸಲು ಇದು ನೆರವಾಗುತ್ತದೆ. ಇದಲ್ಲದೇ ಜೇನುಹುಳಗಳಿಗೆ ಹೊತ್ತಿನ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಗೂಡಿನಿಂದ ಮೇವಿಗಾಗಿ ಹಾರುವಾಗ ನೇಸರನ ದಿಕ್ಕು ಮತ್ತು ಹೂವಿನ ದಿಕ್ಕನ್ನು ಕಂಡು ಹಿಡಿದಿರುತ್ತವೆ (ಜೇನುಹುಳದ ಕುಣಿತ ಬರಹದಲ್ಲಿ ಹೆಚ್ಚಿನ ವಿವರವಿದೆ). ಸುಮಾರು ಒಂದು ಗಂಟೆಯ ಹಾರಾಟ ನಡೆಸಿ ಗೂಡಿಗೆ ಹಿಂದಿರುಗುವಾಗ ಗೂಡಿನ ದಾರಿಯನ್ನು ನೇಸರ ಇರುವ ದಿಕ್ಕಿನ ನೆರವಿನಿಂದ ಪಡೆಯ ಬೇಕಾಗುತ್ತದೆ. ಆದರೆ ನೇಸರನ ಜಾಗ ಬದಲಾಗಿರುತ್ತದೆ ಮತ್ತು ಹುಳಗಳು ತಮ್ಮ ಗೂಡಿನ ದಾರಿ ಕಂಡುಕೊಳ್ಳುವಾಗ ನೇಸರನ ಜಾಗವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗಾಗಿ ಇವುಗಳಿಗೆ ಹೊತ್ತಿನ ಅರಿವು ಚೆನ್ನಾಗಿರಬೇಕಾಗುತ್ತದೆ.

ಮೇವಿಗಾಗಿ ಹಾರಾಟ ನಡೆಸಿ ಹೂವಿನಿಂದ ಸಿಹಿ ಹಾಗು ಬಂಡನ್ನು ಹೊತ್ತು ತರುವ ಜೇನುಹುಳಗಳು ಸಿಹಿಯನ್ನು ಜೇನಾಗಿ ಹೇಗೆ ಮಾರ‍್ಪಾಡುಗೊಳಿಸುತ್ತವೆ? ಜೇನಿನ ಹಿಂದಿರುವ ತಿರುಳೇನು? ಜೇನನ್ನು ಹೇಗೆ ಕಾಪಾಡುತ್ತವೆ? ಈ ಎಲ್ಲಾ ವಿವರಗಳನ್ನು ಮುಂದಿನ ಬರಹಗಳಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, , insect.tamu.eduiflscience.com)

ಹೂವಿನ ಸಿಹಿ ಜೇನಾಗುವುದು ಹೇಗೆ?

ರತೀಶ ರತ್ನಾಕರ.

Jenu

ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ ಬೇರೆಯೇ? ಹೂವಿನ ಸಿಹಿ ಜೇನುತುಪ್ಪವಾಗಿ ಮಾರ್ಪಾಡಾಗುವ ಬಗೆ ಹೇಗೆ? ಈ ವಿಷಯಗಳ ಸುತ್ತ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಜೇನುಹುಳಗಳಿಗೆ ಎರಡು ಹೊಟ್ಟೆಯಿರುತ್ತವೆ. ಒಂದರಲ್ಲಿ ಊಟವನ್ನು ತಿಂದು ಅರಗಿಸಿಕೊಂಡು ಮೈಗೆ ಬೇಕಾದ ಹುರುಪನ್ನು ಪಡೆದರೆ, ಇನ್ನೊಂದು ಹೊಟ್ಟೆಯಲ್ಲಿ ಹೂವಿನಿಂದ ಹೀರಿದ ಸಿಹಿಯನ್ನು ತುಂಬಿಕೊಳ್ಳುತ್ತವೆ. ಸಿಹಿ ತುಂಬಿಕೊಂಡಿರುವ ಹೊಟ್ಟೆಯನ್ನು ಸಿಹಿಚೀಲ (nectar sac) ಎಂದು ಕರೆಯುತ್ತಾರೆ. ಸಿಹಿಚೀಲದಲ್ಲಿ ಒಮ್ಮೆಗೆ ಸುಮಾರು 70 ಮಿ.ಗ್ರಾಂ ನಷ್ಟು ಸಿಹಿಯನ್ನು ಹುಳಗಳು ತುಂಬಿಕೊಳ್ಳಬಲ್ಲವು. ಇದನ್ನು ತುಂಬಿಸಿಕೊಳ್ಳಲು ಜೇನುಹುಳಗಳು ಸುಮಾರು 100 ರಿಂದ 1500 ಹೂವುಗಳನ್ನು ಬೇಟಿ ಮಾಡಬೇಕು! ತುಂಬಿದ ಸಿಹಿಚೀಲ ಮತ್ತು ಜೇನುಹುಳ ಹೆಚ್ಚುಕಡಿಮೆ ಒಂದೇ ತೂಕವಿರುತ್ತವೆ.anatomy

ಹೂವಿನಿಂದ ಸಿಹಿಯನ್ನು ಗೂಡಿಗೆ ತರುವ ಜೇನುಹುಳವು ತಿರುಗಿ ಅದೇ ಜಾಗಕ್ಕೆ ಸಿಹಿಯನ್ನು ತರಲು ಹೋಗುತ್ತದೆ. ಮೊದಲ ಬಾರಿ ಹೂವಿನ ಜಾಗವನ್ನು ತಿಳಿಯಲು ಅದು ಬೇಹುಗಾರ ಹುಳದ ‘ಕುಣಿತ’ದ ಮೂಲಕ ಮೇವಿನ ಜಾಗವನ್ನು ಅರಿಯುತ್ತದೆ. ಬಳಿಕ ಹೂವಿನ ಜಾಗದಿಂದ ಜೇನುಗೂಡಿಗೆ ಹುಳವು ಹಲವಾರು ಬಾರಿ ತಿರುಗುತ್ತದೆ. ಹಾಗಾದರೆ ಹುಳವು ಈ ಹೂವಿನ ಜಾಗವನ್ನು ಹೇಗೆ ನೆನಪಿಟ್ಟುಕೊಳ್ಳುತ್ತದೆ ಎಂಬುದರ ಮೇಲೆ ಸಾಕಷ್ಟು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೂವಿರುವ ಜಾಗದಲ್ಲಿ ಸಿಹಿಚೀಲವನ್ನು ತುಂಬಿಸಿಕೊಳ್ಳುವ ಹುಳವು, ಆ ಜಾಗದ ಎದುರು ಇಲ್ಲವೇ ಹತ್ತಿರದಲ್ಲಿ ಎಲ್ಲಾದರು ಗುರುತಿಟ್ಟುಕೊಳ್ಳಬಹುದಾದ ಒಂದು ನೆಲಗುರುತನ್ನು (landmark), ತನ್ನ ಕೂಡುಗಣ್ಣಿನ (compound eyes) ಮೂಲಕ ಚಿತ್ರ ತೆಗೆದುಕೊಂಡು ನೆನಪಿಟ್ಟುಕೊಳ್ಳುತ್ತದೆ. ಸಿಹಿಯನ್ನು ಗೂಡಿಗೆ ಸಾಗಿಸಿ ಹೂವಿನ ಜಾಗಕ್ಕೆ ಹಿಂದಿರುಗುವಾಗ ಮೊದಲು ತೆಗೆದುಕೊಂಡ ನೆಲಗುರುತಿನ ಚಿತ್ರವನ್ನು ದಾರಿದೀಪವಾಗಿ ಬಳಸುತ್ತದೆ ಎಂದು ಹಲವು ಅರಿಗರು ಅಭಿಪ್ರಾಯಪಟ್ಟಿದ್ದಾರೆ.

ಹೂವಿನ ಸಿಹಿಯು ಸುಮಾರು 80% ನಷ್ಟು ನೀರು ಮತ್ತು ಸಿಕ್ಕಲು ಸಕ್ಕರೆ(Complex Sugars)ಯಾದ ‘ಸುಕ್ರೋಸ್’ ಅನ್ನು ಹೊಂದಿರುತ್ತದೆ ಅಲ್ಲದೇ ರುಚಿಯಲ್ಲಿ ಸಿಹಿಯಾಗಿದ್ದು, ಮಂದ(viscous)ವಾಗಿರುತ್ತದೆ. ಹೂವಿನ ಸಿಹಿಯು ಹುಳದ ಸಿಹಿಚೀಲವನ್ನು ತಲುಪುವಾಗ ಹುಳದ ಜೊಲ್ಲುಸುರಿಗೆಯಿಂದ (salaivary gland) ಹೊರಬರುವ ‘ಇನ್ವರ‍್ಟೇಸ್ ದೊಳೆ‘(invertase enzyme) ಮತ್ತು ಅರಗಿಸುವ ಹುಳಿ(Digestive acid)ಯೊಡೆನೆ ಬೆರೆಯುತ್ತದೆ. ಈ ದೊಳೆ ಮತ್ತು ಹುಳಿಯು ಸಿಹಿಯಲ್ಲಿರುವ ಸುಕ್ರೋಸ್ ಅನ್ನು ಒಡೆದು ಸಡಿಲ ಸಕ್ಕರೆ(Simple Sugars)ಗಳಾದ ಪ್ರುಕ್ಟೋಸ್ (fructose) ಮತ್ತು ಗ್ಲೂಕೋಸ್(glucose)ಗಳಾಗಿ ಮಾರ್ಪಾಡುಗೊಳ್ಳಲು ನೆರವು ನೀಡುತ್ತವೆ. ಇದಲ್ಲದೇ, ಹುಳದ ಜೊಲ್ಲಿನಲ್ಲಿರುವ ಪಾರ‍್ಮಿಕ್ ಆಸಿಡ್ (formic acid) ಸಿಹಿಯ ಜೊತೆ ಬೆರೆಯುತ್ತದೆ, ಇದರಿಂದ ಜೇನುತುಪ್ಪವು ಕೊಳೆಯುವುದಿಲ್ಲ ಮತ್ತು ಜೇನು ಕೊಳೆಯಳಿಕ (antiseptic) ಗುಣವನ್ನು ಪಡೆದುಕೊಳ್ಳುತ್ತದೆ.

Honey

ಸಿಹಿಯನ್ನು ತುಂಬಿಕೊಂಡು ಗೂಡಿನತ್ತ ಬರುವ ಹುಳವು ಗೂಡಿಗೆ ಬಂದೊಡನೆ ಸಿಹಿಯನ್ನು ಗೂಡಿನ ಕೋಣೆಗಳಲ್ಲಿ ನೇರವಾಗಿ ಇರಿಸುವುದಿಲ್ಲ. ತಾನು ಹೊತ್ತು ತಂದ ಸಿಹಿಯನ್ನು ಗೂಡಿನಲ್ಲಿರುವ ಇನ್ನೊಂದು ದುಡಿಮೆಗಾರ ಹುಳಕ್ಕೆ ಸಾಗಿಸುತ್ತದೆ. ಸಿಹಿಯನ್ನು ಹೊತ್ತುತಂದ ಹುಳವು ತನ್ನ ಸಿಹಿಚೀಲದಲ್ಲಿರುವ ಸಿಹಿಯನ್ನು ಎಳೆದು, ತನ್ನ ನಾಲಗೆಯ ಬುಡದಲ್ಲಿ ಹನಿಯ ರೂಪದಲ್ಲಿ ಹೊರತರುತ್ತದೆ. ಮತ್ತೊಂದು ದುಡಿಮೆಗಾರ ಹುಳವು ತನ್ನ ಉದ್ದ ನಾಲಗೆಯನ್ನು ಬಳಸಿ ಸಿಹಿಯ ಹನಿಯನ್ನು ಹೀರಿ, ಕೆಲವು ಹೊತ್ತು ಅದನ್ನು ಬಾಯಿಯಲ್ಲಿಯೇ ಅಗಿಯುತ್ತದೆ. ಇದರಿಂದ ಸಿಹಿಯಲ್ಲಿರುವ ಸುಕ್ರೋಸ್ ಮತ್ತಷ್ಟು ಒಡೆದು ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಗಳಾಗುತ್ತಾ ಹೋಗುತ್ತದೆ. ಹೀಗೆ ಸಿಹಿಯನ್ನು ಸಾಗಿಸುವಾಗ ಗೂಡಿನ ಬಿಸುಪಿಗೆ ಸಿಹಿಯಲ್ಲಿನ ನೀರಿನ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ, ಸಿಹಿಯಲ್ಲಿರುವ ಸಿಕ್ಕಲು ಸಕ್ಕರೆಗಳು ಒಡೆದು ಸಡಿಲ ಸಕ್ಕರೆಗಳಾಗುವುದು ಮತ್ತು ಅದರಲ್ಲಿರುವ ನೀರು ಆರಿದರೆ ಅದು ಜೇನಾದಂತೆ.

ಸಿಹಿಯಲ್ಲಿರುವ ಹೆಚ್ಚಿನ ಸುಕ್ರೋಸ್ ಒಡೆದು ಗ್ಲುಕೋಸ್ ಮತ್ತು ಪ್ರುಕ್ಟೋಸ್‍ಗಳಾಗಿ, ಅದು ಜೇನಾಗಿದೆ ಎಂದು ಹುಳಗಳಿಗೆ ಅನಿಸಿದ ಮೇಲೆ ಸಿಹಿಯನ್ನು ಗೂಡಿನ ಕೋಣೆಯಲ್ಲಿರಿಸುತ್ತವೆ. ಆದರೆ ಇದೇ ಪೂರ್ತಿಯಾದ ಜೇನಲ್ಲ! ಗೂಡಿನಲ್ಲಿರುವ ಜೇನಿನಲ್ಲಿ ಇನ್ನೂ 40-50% ನೀರಿನ ಅಂಶ ಇರುತ್ತದೆ. ಆಗ ಗೂಡಿನ ಹುಳಗಳು ತನ್ನ ರೆಕ್ಕೆಯನ್ನು ಬಡಿದು, ಗಾಳಿಯನ್ನು ಬೀಸಿ ನೀರು ಆರುವಂತೆ ಮಾಡುತ್ತವೆ. ರೆಕ್ಕೆ ಬಡಿತದ ಗಾಳಿ ಮತ್ತು ಗೂಡಿನ ಬಿಸುಪಿಗೆ ಜೇನಿನಲ್ಲಿರುವ ನೀರು ಆರಿಹೋಗಿ ನೀರಿನಂಶವು 20% ಗಿಂತ ಕಡಿಮೆಯಾಗುತ್ತದೆ. ಆಗ ಇದು ಹುಳಗಳ ಊಟಕ್ಕೆ ತಕ್ಕುದಾದ ಜೇನಾದಂತೆ. ಹೂವಿನಿಂದ ಹೊತ್ತು ತರುವ ಸಿಹಿಯನ್ನು ಅಗಿದು, ಹುಳದಿಂದ ಹುಳಕ್ಕೆ ಸಾಗಿಸಿ, ಬಳಿಕ ಕೋಣೆಯಲ್ಲಿರಿಸಿ, ಗಾಳಿ ಬೀಸಿ ಗುಣಮಟ್ಟದ ಜೇನಾಗಿಸಲು ಸುಮಾರು 4 ದಿನಗಳು ಬೇಕಾಗುತ್ತವೆ.

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸಿಹಿಯಲ್ಲಿರುವ ನೀರನ್ನು ಗೂಡಿನ ಕೋಣೆಯಲ್ಲಿಟ್ಟು ಆರಿಸುವಾಗ ಹುಳಗಳು ತಮ್ಮ ಜಾಣತನವನ್ನು ತೋರುತ್ತವೆ. ಮೊದಲು ಬರಿದಾಗಿರುವ ಕೋಣೆಯ ಕಾಲುಬಾಗದಷ್ಟು ಮಾತ್ರ ಸಿಹಿಯನ್ನು ತುಂಬಿಸುತ್ತವೆ. ಆಗ ಆ ಸಿಹಿಯು ಗಾಳಿ ಮತ್ತು ಬಿಸುಪಿಗೆ ಬೇಗ ಆರುತ್ತದೆ. ಸಿಹಿಯಲ್ಲಿರುವ ನೀರು ಆರಿದ ಮೇಲೆ ಆ ಕೋಣೆಯಲ್ಲಿ ಅರ್ಧಬಾಗದಷ್ಟು ಸಿಹಿಯನ್ನು ತುಂಬಿಸುತ್ತವೆ. ಅದೂ ಆರಿದ ಮೇಲೆ ಮತ್ತಷ್ಟು ಸಿಹಿಯನ್ನು ತುಂಬಿಸುತ್ತವೆ. ಹೀಗೆ ಹಂತ ಹಂತವಾಗಿ ಕೋಣೆಯಲ್ಲಿ ಸಿಹಿಯನ್ನಿರಿಸಿ ಅದರ ನೀರನ್ನು ಆರಿಸಿ ಜೇನಾಗಿಸುತ್ತದೆ. ಒಂದು ಕೋಣೆಯಲ್ಲಿರುವ ಸಿಹಿಯು ಪೂರ್ತಿಯಾಗಿ ಜೇನಾದ ಮೇಲೆ ಹುಳವು ಕೊಣೆಯ ಬಾಯನ್ನು ತೆಳುವಾದ ಮೇಣದ ಪದರವನ್ನು ಬಳಸಿ ಮುಚ್ಚುತ್ತವೆ. ಇದು ಜೇನು ಹಾಳಾಗದಂತೆ ಕಾಪಾಡುತ್ತದೆ.

ಜೇನಿನಲ್ಲಿ ನೀರಿನಂಶವಿದ್ದರೆ ಏನಾಗುತ್ತೆ?
ಹೂವಿನ ಸಿಹಿಯಲ್ಲಿ ಸುಮಾರು 80% ನೀರಿನಂಶ ಇರುತ್ತದೆ. ಸಿಹಿಯು ಒಡೆದು ಜೇನಾದ ಮೇಲೆ ಹುಳವು ಅದರಲ್ಲಿರುವ ನೀರನ್ನು ಆರಿಸಲು ದುಡಿಯುತ್ತದೆ. ಒಂದು ವೇಳೆ ಆ ಜೇನಿನಲ್ಲಿ ನೀರಿನಂಶ 20% ಗಿಂತ ಹೆಚ್ಚಿದ್ದರೆ ಮತ್ತು ಸುತ್ತಲಿನ ಬಿಸುಪು 25 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿದ್ದರೆ, ಜೇನಿನಲ್ಲಿರುವ ಹುದುಗೆಬ್ಬಿಸುವ ಅಣಬೆ(Yeast)ಗಳು ತಮ್ಮ ಕೆಲಸ ಮಾಡಲು ಹುರುಪನ್ನು ಪಡೆಯುತ್ತವೆ. ಇವು ಜೇನಿನ ಸಕ್ಕರೆಯನ್ನು ಹುದುಗೆಬ್ಬಿಸಿ ಹೆಂಡವಾಗಿ (alcohol) ಮಾರ್ಪಾಟುಗೊಳಿಸುತ್ತವೆ. ಜೇನನ್ನು ಹೆಚ್ಚು ದಿನಗಳ ಕಾಲ ಕಾಪಿಡಬೇಕಾದರೆ ಅದರ ನೀರಿನಂಶವು 20% ಗಿಂತ ಮೇಲಿರಬಾರದು ಮತ್ತು ಬಿಸುಪು 25 ಡಿಗ್ರಿಗಿಂತ ಹೆಚ್ಚಿರಬಾರದು, ಇವೆರಡೂ ಅಂಶಗಳನ್ನು ಜೇನುಹುಳಗಳು ಗೂಡಿನಲ್ಲಿ ಕಾದುಕೊಳ್ಳುತ್ತವೆ.

ಜೇನಿನಲ್ಲಿ ಏನಿದೆ?
ಜೇನು ನೀರಿನಲ್ಲಿ ಕರಗುವಂತಹ ಮಂದವಾದ ರಸ. 10 ರಿಂದ 18 ಡಿಗ್ರಿ ಸೆಲ್ಸಿಯಸ್ ಬಿಸುಪಿನಲ್ಲಿ ಕಾಳು-ಕಾಳಾಗುವ ಗುಣವನ್ನು ಹೊಂದಿದೆ. ಜೇನುತುಪ್ಪವು ಕೊಂಚ ಹುಳಿಯ ಅಂಶವನ್ನು ಹೊಂದಿದ್ದು ಇದರ ಹುಳಿಯಳತೆ (pH) 3.4-6.1 ಇರುತ್ತದೆ. ಜೇನಿನಲ್ಲಿ ಹೆಚ್ಚಿರುವ ಸಕ್ಕರೆ, ಹುಳಿ, ಹೈಡ್ರೋಜನ್ ಪೆರಾಕ್ಸೈಡ್, ಪ್ಲೆವೊನಾಯ್ಡ್ಸ್(flavonoids), ಪಿನಾಲಿಕ್ಸ್ (phenolics) ಮತ್ತು ಟರ‍್ಪೆನೆಸ್ (terpenes)ಗಳಿರುವುದರಿಂದ ಜೇನು ಒಳ್ಳೆಯ ಕೊಳೆಯಳಿಕ (antiseptic) ಹಾಗು ಸೀರುಸಿರಿಗಳ (micro-organisms) ಬೆಳವಣಿಗೆ ತಡೆಯುವ ಗುಣವನ್ನು ಪಡೆದುಕೊಂಡಿದೆ.

ಜೇನಿನಲ್ಲಿರುವ ಮತ್ತಷ್ಟು ಅಡಕಗಳು:Jenu_aDaka

ಬಾಳುಳುಪು (Vitamins): ಎ, ಬೀಟಾ ಕೆರೋಟೀನ್ (Beta carotene), ಬಿ1 ತಯಾಮೀನ್(B1 Thiamin), ಬಿ2 ರೈಬೋಪ್ಲವಿನ್ (B2 Riboflavin), ಬಿ3 ನಯಾಸಿನ್ (B3 Niacin), ಬಿ5 ಪೆಂಟಾತನಿಕ್ ಹುಳಿ (B5 Pantothenic acid), ಬಿ6 ಪೈರಿಡೊಕ್ಸಿನ್ (B6 Pyridoxine), ಬಿ8 ಬಯೋಟಿನ್ (B8 Biotin), ಬಿ9 ಪೊಲೇಟ್ (B9 Folate), ಸಿ, ಡಿ, ಇ ಮತ್ತು ಕೆ.

ಮಿನರಲ್ಸ್: ಕ್ಯಾಲ್ಸಿಯಂ, ತಾಮ್ರ, ಅಯೋಡಿನ್, ಕಬ್ಬಿಣ, ಮೆಗ್ನೇಶಿಯಂ, ಮ್ಯಾಂಗನೀಸ್, ಪೊಟಾಸಿಯಂ, ಸೋಡಿಯಂ, ಸಲ್ಪರ್, ಪಾಸ್ಪರಸ್ ಮತ್ತು ಜಿಂಕ್.

ಅಮೈನೊ ಹುಳಿಗಳು ಮತ್ತು ಕಳೆವಣಿಕಾಪು (Anti-oxidants) ಗಳು ಜೇನಿನಲ್ಲಿರುವ ಇತರ ಕೆಲವು ಮುಖ್ಯವಾದ ಅಡಕಗಳು. ಜೇನುತುಪ್ಪದ ತಿಣ್ಮೆ(Density) 1.36 ಕಿ.ಗ್ರಾಂ/ಲೀಟರ್ (ನೀರಿಗಿಂತ 36% ಹೆಚ್ಚಿನ ತಿಣ್ಮೆಯನ್ನು ಇದು ಹೊಂದಿದೆ.)

ಜೇನು ಕೆಡದಿರಲು ಕಾರಣವೇನು?
ಜೇನಿನಲ್ಲಿರುವ ನೀರಿನ ಅಂಶವು 20% ಕಡಿಮೆ ಇರುವುದರಿಂದ ಇದರ ನೀರಿನ ಚಟುವಟಿಕೆ (water activity) 0.6 (0 ಯಿಂದ 1 ರ ಅಳತೆಯಲ್ಲಿ) ಇರುತ್ತದೆ. ಬ್ಯಾಕ್ಟೀರಿಯಾ ಹಾಗು ಪಂಗಸ್ ನಂತಹ ಸೀರುಸಿರುಗಳು ತಮ್ಮ ಕೆಲಸವನ್ನು ನಡೆಸಲು ನೀರಿನ ಚಟುವಟಿಕೆಯು 0.75 ಗಿಂತ ಹೆಚ್ಚಿರಬೇಕು. ಹಾಗಾಗಿ ಜೇನಿನಲ್ಲಿ ಯಾವುದೇ ಸೀರಿಸುರಿಗಳು ತಮ್ಮ ಕೆಲಸ ಮಾಡಲಾಗದೇ ಜೇನು ಹಲವು ಕಾಲ ಕೆಡದಂತೆ ಇರುತ್ತದೆ. ಇದಲ್ಲದೇ ಜೇನಿನ ಹುಳಿಯಳತೆ (pH), ಜೇನಿನಲ್ಲಿರುವ ಗ್ಲೂಕೊನಿಕ್ ಆಸಿಡ್ ಹಾಗು ಇತರೆ ಅಡಕಗಳು ಇದನ್ನು ಕೆಡದಂತೆ ಇರಲು ನೆರವಾಗುತ್ತವೆ. ಹೀಗೆ ಹಲವು ಹಂತಗಳ ಮೂಲಕ ಹೂವಿನ ಸಿಹಿಯು ಜೇನಾಗಿ ಹಲವು ವರುಶಗಳ ಕಾಲ ಕೆಡದಂತೆ ಉಳಿಯುವ ತಿನಿಸಾಗಿ ಮಾರ್ಪಾಡಾಗುತ್ತದೆ.

(ಮಾಹಿತಿ ಸೆಲೆ: westmtnapiary.com)
(ಚಿತ್ರ ಸೆಲೆ: ಅಭಿಲಾಷ್, ವಿಕಿಪೀಡಿಯಾ)