ಕಾರಿನ ಬಗೆಗಳು

ಜಯತೀರ್ಥ ನಾಡಗೌಡ

ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಷ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ ಬಂಡಿಗಳು ಬರುತ್ತಲೇ ಇವೆ. ಈ ಬಗೆ ಬಗೆಯ ಆಕಾರ ಗಾತ್ರದಲ್ಲಿ ಕಂಡುಬರುವ ಕಾರು ಬಂಡಿಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಹ್ಯಾಚ್-ಬ್ಯಾಕ್ (ಕಿರು / ಹಿಂಗದ) ಕಾರುಗಳು:
ಕಾರಿನ ಹಿಂಭಾಗದಲ್ಲಿ ಮೇಲೆಳೆದುಕೊಳ್ಳುವ ಬಾಗಿಲು ಹೊಂದಿರುವರಿಂದ ಇವುಗಳನ್ನು ಹ್ಯಾಚ್-ಬ್ಯಾಕ್ ಕಾರುಗಳೆಂದು ಕರೆಯಲಾರಂಭಿಸಿದರಂತೆ. ನಂತರದ ದಿನಗಳಲ್ಲಿ ಈ ರೀತಿಯ ಬಾಗಿಲಿನ ವಿನ್ಯಾಸ ಬದಲಾವಣೆ ಮಾಡಿಕೊಳ್ಳಲಾಯಿತು. ಇವುಗಳು ನೋಡಲು ಚಿಕ್ಕವು. 3 ಪಯಣಿಗರು ಜೊತೆಗೆ ಒಬ್ಬ ಓಡಿಸುಗ, ಒಟ್ಟು ನಾಲ್ವರು(3+1) ಕೂತು ಸಾಗಲು ಅನುವಾಗುವ ಕಿರಿದಾದ ಕಾರುಗಳು ಇವು. ಸರಕುಚಾಚು ಅಂದರೆ ಡಿಕ್ಕಿಯಲ್ಲಿ ಪುಟ್ಟದಾದ ಕೆಲವೇ ವಸ್ತುಗಳನ್ನು ಇವುಗಳಲ್ಲಿರಿಸಿ ಸಾಗಬಹುದಾಗಿದೆ.

ಹ್ಯಾಚ್-ಬ್ಯಾಕ್ ಕಾರುಗಳನ್ನು ಮುಖ್ಯವಾಗಿ 2 ಪೆಟ್ಟಿಗೆಯಂತೆ ವಿಭಾಗಿಸಿರಲಾಗಿರುತ್ತದೆ (2-box design). ಮುಂಭಾಗದ ಬಿಣಿಗೆ (engine) ಒಂದು ಪೆಟ್ಟಿಗೆಯ ಭಾಗವಾದರೆ, ಪಯಣಿಗರು ಕೂಡುವ ಜಾಗ ಮತ್ತು ಸರಕುಚಾಚು ಸೇರಿ ಇನ್ನೊಂದು ಪೆಟ್ಟಿಗೆಯಾಗುತ್ತದೆ. ಈ ಕಾರುಗಳು ನಾಲ್ಕು ಇಲ್ಲವೇ ಅಯ್ದು ಬಾಗಿಲುಗಳನ್ನು ಹೊಂದಿರುತ್ತವೆ. ಇದೀಗ ಮಾರುಕಟ್ಟೆಯಲ್ಲಿ ತರತರದ ಹ್ಯಾಚ್-ಬ್ಯಾಕ್ ಕಾರುಗಳು ಕಾಣಸಿಗುತ್ತವೆ. ಮಾರುತಿ ಸುಜುಕಿಯಂತೂ ಹಲವು ಮಾದರಿಗಳನ್ನು ಹೊಂದಿದೆ. ಇವುಗಳಲ್ಲಿ ಸ್ವಿಪ್ಟ್, ಅಲ್ಟೋ, ವ್ಯಾಗನ್-ಆರ್, ಸೆಲೆರಿಯೋ ಮುಂತಾದವುಗಳು ಹೆಸರುವಾಸಿಯಾಗಿವೆ. ಹ್ಯುಂಡಾಯ್ ಆಯ್-10,  ಆಯ್ -20, ಹೀಗೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆಗಳು ಸಾಕಶ್ಟಿವೆ.

ಸೆಡಾನ್/ ಸಲೂನ್ ಕಾರುಗಳು:
‘ಸೆಡೆ’ ಎಂಬುದು ಇಟಾಲಿಯನ್ ನುಡಿಯಲ್ಲಿ ಕುರ್ಚಿ ಎಂದು ಅರ್ಥ, ಲ್ಯಾಟಿನ್ ನಲ್ಲಿ ಸೆಡೆರ‍್- ಎಂದರೆ ಕುಳಿತುಕೊಳ್ಳು ಎಂಬರ್ಥವಿದೆ. ಇಟಾಲಿಯನ್, ಲ್ಯಾಟಿನ್ ಮೂಲದಿಂದ ಸೇಡಾನ್ ಪದದ ಬಳಕೆ ಶುರುವಾಯಿತು ಎಂದು ಹೇಳುವುದುಂಟು.

ಉತ್ತರ ಅಮೇರಿಕೆಯ ನಾಡುಗಳು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದೆಡೆಗಳಲ್ಲಿ ಇವುಗಳನ್ನು ಸೆಡಾನ್ ಎಂದರೆ ಬ್ರಿಟನ್, ಐರ್ಲೆಂಡ್ ಕಡೆಗಳಲ್ಲಿ ಸಲೂನ್ ಕಾರುಗಳೆಂದು ಹೇಳುವರು. ಸೆಡಾನ್ ಕಾರುಗಳನ್ನು 3-ಪೆಟ್ಟಿಗೆ ಮಾದರಿಯಲ್ಲಿ (3-box design) ಮಾಡಲಾಗಿರುತ್ತದೆ. ಬಿಣಿಗೆ, ಪಯಣಿಗರು ಮತ್ತು ಸರಕುಚಾಚು ಹೀಗೆ 3-ಪೆಟ್ಟಿಗೆಯಾಕಾರದಲ್ಲಿ ಇವುಗಳನ್ನು ಬೇರ‍್ಪಡಿಸಬಹುದು.

ನಾಲ್ಕು ಇಲ್ಲವೇ ಐದು ಬಾಗಿಲಿರುವ ಸೆಡಾನ್ ಕಾರುಗಳು ಹೆಚ್ಚಿನ ಕಾಲುಚಾಚು (legroom), ಸರಕುಚಾಚು(boot space) ಹೊಂದಿರುತ್ತವೆ. ಇದರಿಂದ ಇವು ಕಿರುಕಾರುಗಳಿಗಿಂತ ದೊಡ್ಡದೆನೆಸಿಕೊಳ್ಳುತ್ತವೆ. ಕಾರುಕೊಳ್ಳುಗರಿಗೆ ಸೆಡಾನ್ ಕಾರುಗಳು ಅಚ್ಚುಮೆಚ್ಚು, ಮನೆಯವರೆಲ್ಲ ಒಟ್ಟಾಗಿ ಸೇರಿ ಪ್ರಯಾಣ ಮಾಡಲು ಇವು ತಕ್ಕುದಾಗಿವೆ.

 ಸ್ಕೋಡಾ ಸ್ಲಾವಿಯಾ, ಫೋಕ್ಸ್‌ವ್ಯಾಗನ್ ವಿರ್ಚುಸ್, ಹ್ಯುಂಡಾಯ್ ವೆರ್ನಾ,  ಹೋಂಡಾ ಸಿಟಿ , ಮುಂತಾದವುಗಳು ಈ ಪಟ್ಟಿಗೆ ಸೇರುವ ಕಾರುಗಳು., ಮುಂತಾದವುಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತವೆ.

ಮರ್ಸಿಡೀಸ್ ಬೆಂಜ್, ಔಡಿ, ಬಿ.ಎಮ್.ಡ್ಬ್ಲ್ಯೂ, ಟೊಯೊಟಾ ಕೊರೊಲ್ಲಾ ಕಾರುಗಳು ಸಿರಿಮೆಯ (ಲಕ್ಸರಿ) ಸೆಡಾನ್ ಸಾಲಿಗೆ ಸೇರುತ್ತವೆ. ಸಾಮಾನ್ಯ ಸೆಡಾನ್ ಕಾರಿನಂತೆ ಅಲ್ಲದೇ ಇವುಗಳಲ್ಲಿ ಸಿರಿಮೆಯ ಹೆಚ್ಚಿನ ವಿಶೇಷತೆಗಳನ್ನು ನೀಡಿರಲಾಗುತ್ತದೆ. ಭಾರತದಲ್ಲಿ ಇಂತ ಕಾರುಗಳ ಸಂಕ್ಯೆಯು ಹೆಚ್ಚಳವಾಗಿದೆ.

ಕಿರುಸೆಡಾನ್ (ಕಾಂಪ್ಯಾಕ್ಟ್ ಸೆಡಾನ್):

ನಮ್ಮ ಮಾರುಕಟ್ಟೆಯೇ ಹೀಗೆ, ಮಂದಿ ಬೇಡಿಕೆಗಳು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತವೆ. ಅದಕ್ಕೆಂದೇ ಭಾರತದಲ್ಲಿ ಕಿರು ಸೆಡಾನ್ ಕಾರುಗಳೆಂಬ ಹೊಸ ಮಾದರಿಗಳು ಕಾಣಸಿಗುತ್ತವೆ. ಇವುಗಳು ಅತ್ತ ಹ್ಯಾಚ್-ಬ್ಯಾಕ್ ಅಲ್ಲದೇ ಇತ್ತ ಸೆಡಾನ್ ಅಲ್ಲದೇ ಕಿರು-ಸೆಡಾನ್ ಎಂಬ ಹಣೆಪಟ್ಟಿ ಹೊತ್ತಿವೆ. ಸಾಮಾನ್ಯ ಸೆಡಾನ್ ಗಿಂತ ಕಡಿಮೆ ಬೆಲೆ, ಹ್ಯಾಚ್-ಬ್ಯಾಕ್ ಕಾರಿಗಿಂತ ಹೆಚ್ಚು ಸರಕುಚಾಚು ಹೊಂದಿರುವ ಕಿರು ಸೆಡಾನ್ ಹೆಚ್ಚಿನ ಮಂದಿಯನ್ನು ಸೆಳೆಯುತ್ತಿವೆ. ಹೋಂಡಾ ಅಮೇಜ್, ಟಾಟಾ ಟಿಗೊರ್, ಸುಜುಕಿ ಸ್ವಿಪ್ಟ್ ಡಿಜೈರ್, ಹ್ಯುಂಡಾಯ್ ಔರಾ ಇವುಗಳಲ್ಲಿ ಪ್ರಮುಖವಾದವು.

ಆಟೋಟದ (sports) ಇಲ್ಲವೇ ಬಿರುಸಿನ ಕಾರು:
ಮೈ ನವಿರೇಳಿಸುವ ವೇಗ, ಅಳವುತನ (efficiency), ಹೆಚ್ಚಿನ ಬಲದಿಂದ ಮಾಡಲ್ಪಟ್ಟಿರುವ ಕಾರುಗಳೇ ಆಟೋಟ ಇಲ್ಲವೇ ಬಿರುಸಿನ ಕಾರುಗಳು ಎಂದು ಕರೆಯಬಹುದಾದ ಪಟ್ಟಿಗೆ ಸೇರಿವೆ. ಆಟೋಟದ ಕಾರುಗಳು ಓಡಿಸುಗರಿಗೆ ಮನತಲ್ಲಣಿಸುವ ಅನುಭವ ನೀಡುವಂತವು. ಹೆಚ್ಚಾಗಿ ಇವುಗಳಲ್ಲಿ ಇಬ್ಬರು ಕುಳಿತುಕೊಳ್ಳುವಷ್ಟೇ ಜಾಗ ಹೊಂದಿರುತ್ತವೆ. ಓಡಿಸುಗನ ಹಿಡಿತಕ್ಕೆ ಅನುವಾಗಲೆಂದು ಆಟೋಟದ ಕಾರುಗಳು ಕಡಿಮೆ ತೂಕ ಹೊಂದುವಂತೆ ಮಾಡಿರುತ್ತಾರೆ. ಇವುಗಳು ಎರಡು ಕದಗಳನ್ನು ಮಾತ್ರ ಹೊಂದಿರುತ್ತವೆ.

ಪೋರ್ಶ್, ಲಾಂಬೋರ್ಗಿನಿ, ಫೆರಾರಿ, ಮರ್ಸಿಡೀಸ್ ಮೆಕ್ಲಾರೆನ್, ಬಿ.ಎಂ.ಡ್ಬ್ಲ್ಯೂ, ಬೆಂಟ್ಲೆ, ಆಸ್ಟನ್ ಮಾರ‍್ಟಿನ್, ಜಾಗ್ವಾರ್ ಮುಂತಾದ ಕೂಟಗಳು ಇಂತ ಆಟೋಟದ ಕಾರುಗಳನ್ನು ಮಾಡುವುದರಲ್ಲಿ ಖ್ಯಾತಿ ಪಡೆದಿವೆ. ಫಾರ‍್ಮುಲಾ-1 ಪಣಗಳಲ್ಲಿ ಈ ಈ ತೆರನಾದ ಕಾರುಗಳದ್ದೇ ಕಾರುಬಾರು.

ಕೂಪೇ-ಕೂಪ್ ಕಾರುಗಳು:
ಫ್ರೆಂಚ್ ಪದ “ಕೂಪೇ”ಯಿಂದ ಈ ಕಾರುಗಳಿಗೆ ಹೆಸರು ಬಂದಿದೆ. ಇಂಗ್ಲಿಶ್ ನುಡಿಯಾಡುವರು ಇವನ್ನು ಕೂಪ್ ಎಂದು ಕರೆದರೆ, ಫ್ರೆಂಚ್‌ರ ಪ್ರಭಾವ ಹೆಚ್ಚಿದ್ದ ಯೂರೋಪ್ ನಲ್ಲಿ ಇವುಗಳು ಕೂಪೇ ಕಾರುಗಳೆಂದೇ ಹೆಸರು ಪಡೆದಿದ್ದವು. ಕೂಪೇ ಕಾರುಗಳು ಆಟೋಟದ ಬಂಡಿಯಂತೆ ಎರಡು ಬಾಗಿಲು ಮತ್ತು ಇಬ್ಬರು ಕೂಡಲಷ್ಟೇ ಜಾಗ ಹೊಂದಿರುತ್ತವೆ. ಕೆಲವು ಕೂಪೇಗಳು ಹಿಂಬದಿಯಲ್ಲಿ ಕಿರಿದಾದ ಕೂರುವ ಜಾಗ ಹೊಂದಿರುತ್ತಿದ್ದವು. ಆದರೆ ಇವುಗಳು ಸೆಡಾನ್ ನಂತೆ ಮೈ ಪಡೆದಿರುವುದರಿಂದ ಇವುಗಳನ್ನು ಎರಡು ಬಾಗಿಲಿನ ಸೆಡಾನ್ ಎನ್ನಬಹುದು. 1930-40 ಹೊತ್ತಿನಲ್ಲಿ ಈ ಕಾರುಗಳು ಬಲು ಮೆಚ್ಚುಗೆಗಳಿಸಿದ್ದವು. ಮಂದಿಯ ಬಳಕೆಗೆ ತಕ್ಕಂತೆ ಕೂಪೇಗಳಲ್ಲೂ ಕ್ಲಬ್ ಕೂಪೇ, ಬಿಜಿನೆಸ್ ಕೂಪೇ, ಒಪೇರಾ ಕೂಪೇಗಳೆಂದು ಹಲವು ಬಗೆಗಳಾಗಿ ಬೇರ್ಪಡಿಸಲಾಗಿತ್ತು. ಇಂದಿನ ದಿನಗಳಲ್ಲಿ ಕೂಪೇ ಕಾರುಗಳು ಕಾಣಸಿಗುವುದು ಕಷ್ಟ.

ಮಾರ್ಪುಗಳು (convertibles):
ಹೆಸರೇ ಸೂಚಿಸುವಂತೆ ಇವುಗಳನ್ನು ಮಾರ್ಪಡಿಸಬಹುದು. ಕಾರಿನ ಮೇಲ್ಚಾವಣಿಯನ್ನು ಮಡಚಿ ಗಾಳಿಗೆ ತೆರೆದುಕೊಳ್ಳುವ ಕಾರುಗಳನ್ನಾಗಿಸಬಹುದು ಮತ್ತು ನಮಗೆ ಬೇಕೆಂದಾಗ ಮೇಲ್ಚಾವಣಿಯನ್ನು ಸೇರಿಸಿ ಸಾಮಾನ್ಯ ಬಂಡಿಗಳಂತೆ ಇವುಗಳನ್ನು ಬಳಸಬಹುದು. ಈ ಕಾರುಗಳು ಹೆಚ್ಚಾಗಿ ಅಮೇರಿಕಾ, ಯೂರೋಪ್, ಜಪಾನ್‌ನಂತ ಬೀದಿಗಳಲ್ಲಿ ಕಾಣಸಿಗುತ್ತವೆ. ಮಾರ್ಪು ಕಾರುಗಳು ಹೆಚ್ಚಾಗಿ ಬಿಡುವಿನ ಹೊತ್ತಿನಲ್ಲಿ ದೂರದ ಊರಿನ ಪಯಣಗಳಿಗೆ ಬಳಸಲ್ಪಡುತ್ತವೆ. ಮರ್ಸಿಡೀಸ್, ಬಿ.ಎಂ.ಡ್ಬ್ಲ್ಯೂ ಮುಂತಾದ ಕೂಟಗಳ ಮಾರ್ಪು ಬಂಡಿಗಳು ಭಾರತದಲ್ಲೂ ಮಾರಾಟಕ್ಕಿವೆ.

ಲಿಮೊಸಿನ್ ಕಾರು:
ಉದ್ದನೆಯ, ಅತಿ ಹೆಚ್ಚಿನ ಗಾಲಿಗಳ ನಡುವಿನ ದೂರ ಹೊಂದಿರುವ ಲಿಮೊಸಿನ್ ಕಾರುಗಳನ್ನು ಸುಲಭವಾಗಿ ಗುರುತಿಸಬಹುದು. ಲಿಮೊಸಿನ್ ಕಾರುಗಳಲ್ಲಿ ಓಡಿಸುಗ ಮತ್ತು ಪಯಣಿಗರು ಕೂರುವ ಜಾಗಗಳು ಇತರೆ ಕಾರುಗಳಂತೆ ಇರದೇ, ಗೋಡೆಯಿಂದ ಬೇರ್ಪಟ್ಟಿರುತ್ತವೆ. ಲಿಮೊಸಿನ್ ಕಾರು, ಫ್ರೆಂಚ್ ನಾಡಿನ ಲಿಮೊಸ್ ಭಾಗದಿಂದ ಈ ಹೆಸರನ್ನು ಪಡೆದುಕೊಂಡಿದೆ. ಲಿಮೊಸ್ ಬಾಗದ ಮಂದಿ ತೊಡುಗೆಯಂತೆ ಈ ಕಾರುಗಳನ್ನು ಮಾಡಲಾಗಿರುತ್ತದಂತೆ.
ಲಿಮೊಸಿನ್ಗಳು ಮದುವೆಯಲ್ಲಿ ಮದುಮಕ್ಕಳ ಹೊತ್ತೊಯ್ಯಲು, ಔತಣ ಕೂಟ ಇಂತ ಮೊದಲಾದ ಸಮಾರಂಭಗಳಲ್ಲಿ ಬಳಕೆ ಮಾಡಲಾಗುತ್ತದೆ.

ಹಲ ಬಳಕೆಯ ಬಂಡಿಗಳು (Multi Utility Vehicles – MUV):
ಹಲ ಬಳಕೆಯ ಬಂಡಿಗಳು ಸಾಮಾನ್ಯದ ಕಾರುಗಳಿಗಿಂತ ದೊಡ್ಡದಾಗಿದ್ದು 5 ಕ್ಕಿಂತ ಹೆಚ್ಚಿನ ಜನರು ಕುಳಿತು ಸಾಗಲು ಮಾಡಲಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಲು ಜಾಗವಿರುತ್ತದೆ. ಇವುಗಳಲ್ಲಿ ಕೂಡ ಹಲ ಬಳಕೆಯ, ಆಟೋಟದ ಬಳಕೆಯ ಬಂಡಿಗಳೆಂದು ಬೇರ್ಮೆ ಇದೆ. ಹಲ ಬಳಕೆಯ ಬಂಡಿಗಳು ಹೆಚ್ಚಾಗಿ ಜನರನ್ನು ಮತ್ತು ಸರಕನ್ನು ಹೊತ್ತೊಯ್ಯಲು ತಕ್ಕ ಆಕಾರ, ಗಾತ್ರದಲ್ಲಿ ಸಿದ್ದಗೊಳಿಸಿರಲಾಗುತ್ತದೆ. ಆದರೆ ಆಟೋಟದ ಬಳಕೆಯ ಬಂಡಿಗಳು ಗುಡ್ಡಗಾಡು, ಕಣಿವೆ, ಬಿರುಸಿನ ತಿರುವುಗಳ ಕಿರಿದಾರಿಗಳಲ್ಲಿ ಸುಲಭವಾಗಿ ಮುನ್ನುಗ್ಗುವ ಬಲ ಪಡೆದುಕೊಂಡಿರುತ್ತವೆ. ಆಟೋಟದ ಬಳಕೆಯ ಬಂಡಿಗಳು ಸರಕು ಸಾಗಣೆಗಿಂತಲೂ ಹೆಚ್ಚಾಗಿ ಮಂದಿಯ ಪಯಣಕ್ಕೆ ಬಳಕೆಯಾಗುತ್ತವೆ.

ಭಾರತದ ಮಹೀಂದ್ರಾ ಮತ್ತು ಮಹೀಂದ್ರಾ ಹಲ ಬಳಕೆಯ ಬಂಡಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಬೊಲೆರೊ, ಸ್ಕಾರ‍್ಪಿಯೊ, ಎಕ್ಸ್.ಯು.ವಿ.7.ಒ.ಒ ಮುಂತಾದ ಮಾದರಿಗಳು ಮಹೀಂದ್ರಾ ಕೂಟ ಮಾರಾಟ ಮಾಡುತ್ತಿರುವ ಹಲಬಳಕೆಯ ಬಂಡಿಗಳು. ಫೋರ್ಡ್ ಎಂಡೆವರ್, ಟೊಯೊಟಾ ಫಾರ್ಚುನರ್,  ಇನ್ನೋವಾ, ಟಾಟಾ ಹ್ಯಾರಿಯರ್, ಸಫಾರಿ,  ಭಾರತದ ಮಾರುಕಟ್ಟೆಯಲ್ಲಿರುವ ಪ್ರಮುಕ ಹಲಬಳಕೆಯ ಬಂಡಿಗಳು.

(ತಿಟ್ಟ ಮತ್ತು ಮಾಹಿತಿ ಸೆಲೆಗಳು: wikipedia.org, www.infovisual.info, www.m3forum.net)

 

ಕಾರಿನ ಮೈಲಿಯೋಟ ಹೆಚ್ಚಿಸುವುದು ಹೇಗೆ

ಜಯತೀರ್ಥ ನಾಡಗೌಡ.

ಜನರು ಲಕ್ಷಾಂತರ ಹಣ ಕೊಟ್ಟು ಹೊಸ ಗಾಡಿಗಳನ್ನು ಖರೀದಿಸುತ್ತಾರೆ. ಅಷ್ಟು ಹಣ ಕೊಟ್ಟು ಕೊಂಡ ಕಾರನ್ನು ಜೋಪಾನವಾಗಿ ಕಾಪಾಡಿಕೊಂಡು ಬಾಳಿಕೆ ಹೆಚ್ಚಿಸುವುದು ಕೊಳ್ಳುಗರ ಜವಾಬ್ದಾರಿ. ಹೊಸದಾಗಿ ಖರೀದಿಸಿದ ಗಾಡಿಗಳನ್ನು ಹೇಗೆ ಬಳಕೆ ಮಾಡಬೇಕು. ಬಂಡಿಯ ಮೈಲೇಜ್(ಮೈಲಿಯೋಟ) ಹೆಚ್ಚಿಸಿ ಅದು ಹೆಚ್ಚು ದಿನ ಬಾಳಿಕೆಯಾಗುವಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಅರಿಯೋಣ. ಓಡಿಸುಗರ ಹಾಗೂ ಅನುಭವಗಳಿಗೆ ತಕ್ಕಂತೆ ಇವು ಬದಲಾದರೂ ಕೆಳಗೆ ಪಟ್ಟಿ ಮಾಡಿದ ಕೆಲವು ವಿಷಯಗಳನ್ನು ಓಡಿಸುಗರು ಅಳವಡಿಸಿಕೊಂಡರೆ ಕಾರಿನ ಮೈಲಿಯೋಟ(Mileage) ಹೆಚ್ಚಿಸಿಕೊಂಡು ಹೆಚ್ಚು ದಿನ ಬಾಳಿಕೆ ಬರುವುದರಲ್ಲಿ ಎರಡು ಮಾತಿಲ್ಲ.

1.ಕಾರಿನ ಗಾಲಿ

ಬಂಡಿಯ ಗಾಲಿಗಳು ಬಲು ಮುಖ್ಯವಾದ ಭಾಗ. ಇವುಗಳಲ್ಲಿ ಕಡಿಮೆ ಗಾಳಿಯಿದ್ದರೆ ಹೆಚ್ಚಿನ ಪೆಟ್ರೋಲ್ ಇಲ್ಲವೇ ಡೀಸೇಲ್ ಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬಂಡಿಯ ಗಾಲಿಗಳು ಪೂರ್ತಿ ಗಾಳಿಯಿಂದ ತುಂಬಿದಾಗ ಒಂದು ಲೀಟರ್‌ಗೆ 20ಕಿಮೀ ಓಡುತ್ತದೆ ಎಂದಾದರೆ, ಇದರಲ್ಲಿ ಅರ್ಧದಶ್ಟು ಗಾಳಿ ಕಡಿಮೆಯಾದಾಗ ಒಂದು ಲೀಟರ್ 15 ಇಲ್ಲವೇ 18 ಕಿಮೀಗೆ ಇಳಿಯಬಹುದು. ಇದರಿಂದ ಬಂಡಿಗೆ ಹೆಚ್ಚು ಉರುವಲು(Fuel) ಬೇಕಾಗುತ್ತದೆ.

ಇದನ್ನು ತಡೆಯಲು ಮೇಲಿಂದ ಮೇಲೆ ನಿಮ್ಮ ಗಾಲಿಗಳಲ್ಲಿರುವ ಗಾಳಿಯ ಮಟ್ಟವನ್ನು ತಿಳಿದುಕೊಂಡು ಗಾಳಿಯು ಕಡಿಮೆಯಿದ್ದಾಗ ನಿಮ್ಮ ಹತ್ತಿರದ ನೆರವುತಾಣಗಳಿಗೆ ಭೇಟಿಕೊಟ್ಟು ಗಾಲಿಗಳನ್ನು ಗಾಡಿ ತಯಾರಕರು ತಿಳಿಸಿದ ಒತ್ತಡದ ಮಟ್ಟಕ್ಕೆ ಪೂರ್ತಿಯಾಗಿ ತುಂಬಿಸಿಕೊಳ್ಳಿ. ಹೆಚ್ಚಿನ ಕಾರುಬಂಡಿಗಳ ಗಾಲಿಗಳು ರಬ್ಬರ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ ಇವುಗಳು ವಾತಾವರಣದ ಬಿಸುಪುನಲ್ಲಿ ಹೆಚ್ಚು ಕಡಿಮೆಯಾದಾಗ ಬದಲಾವಣೆ ಹೊಂದುತ್ತವೆ. ನಮ್ಮ ಇಂಡಿಯಾದಂತ ದೇಶದಲ್ಲಿ ಬೇಸಿಗೆಯಲ್ಲಿ ಕೆಲವು ಗಾಲಿಗಳು ಬಿಸುಪು ತಾಳದೇ ಒಡೆಯುವುದನ್ನು ನೀವು ನೋಡಿರಬಹುದು. ಇನ್ನೂ ಚಳಿಗಾಲದಲ್ಲಿ ಗಾಲಿಗಳು ಕುಗ್ಗುವುದನ್ನು ನಾವುಗಳು ನೋಡಿರುತ್ತೇವೆ. ಹೀಗಾಗಿ ತಕ್ಕ ಗುಣಮಟ್ಟದ ಒಳ್ಳೆಯ ಗಾಲಿಗಳನ್ನು ಬಳಸಿ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸಿದರೆ ಹೆಚ್ಚು ಉರುವಲು ಬೇಕಾಗದು ಮತ್ತು ಓಡಿಸುಗರ ಜೇಬಿಗೂ ಕತ್ತರಿ ಬೀಳದು. ಹೆಚ್ಚಿನ ಚಳಿ ಅನುಭವಿಸುವ ಅಮೇರಿಕಾ,ಕೆನಡಾ ಮತ್ತು ಯೂರೋಪ್ ಒಕ್ಕೂಟದ ನಾಡುಗಳಲ್ಲಿ ಚಳಿಗಾಲ ಮತ್ತು ಬೇಸಿಗೆಗೆ ತಕ್ಕಂತೆ ಬೇರೆ ಬೇರೆ ಗಾಲಿಗಳನ್ನು ಬಳಸುತ್ತಾರೆ. ಇದರಿಂದ ಗಾಲಿಗಳು ಹೆಚ್ಚು ಬಾಳಿಕೆ ಬರುವುದಲ್ಲದೇ ಉರುವಲಿನ ಅಳವುತನವೂ(Fuel Efficiency) ಹೆಚ್ಚುವಂತೆ ಮಾಡುತ್ತವೆ.

2.ಓಡಿಸುವ ವೇಗ:

ಬಂಡಿ ಓಡಿಸುವ ವೇಗ ಓಡಿಸುಗರು ಮುಖ್ಯವಾಗಿ ತಿಳಿದಿರಬೇಕಾದ ಸಂಗತಿ. ಕಡಿಮೆ ವೇಗದಲಿ ಹೆಚ್ಚಾಗಿ ಓಡಿಸುವದರಿಂದ ಅಳವುತನವೂ ಕಡಿತಗೊಳ್ಳುತ್ತದೆ. ಪದೇ ಪದೇ ಗೇರ್ ಬದಲಾಯಿಸಿ ಕಡಿಮೆ ವೇಗದ ಸಾಗಣಿಯಲ್ಲಿ(transmission) ಹೊರಟರೇ ಬಂಡಿ ಸಾಗಲು ಹೆಚ್ಚು ಸೆಳೆಬಲ(Torque) ತಗಲುತ್ತದೆ. ಇದರಿಂದ ಬಂಡಿಗೆ ಹೆಚ್ಚು ಉರುವಲು ಬೇಕಾಗುತ್ತದೆ ಮತ್ತು ಮೈಲಿಯೋಟ ಕಡಿತಗೊಳ್ಳುತ್ತದೆ.

ಬಹುತೇಕ ಕಾರುಗಳಲ್ಲಿ ಈಗ ಸುಯ್‌ಅಂಕೆ ಏರ್ಪಾಟು ಒದಗಿಸಿರುತ್ತಾರೆ, ಹೆದ್ದಾರಿಗಳಲ್ಲಿ ಸಾಗುವಾಗ ಸುಯ್ಅಂಕೆ(Cruise Control) ಬಳಕೆ ಮಾಡಿಕೊಳ್ಳಬಹುದು. ಹೆದ್ದಾರಿಗಳಲ್ಲಿ ಹೆಚ್ಚಿನ ವೇಗದಲ್ಲಿ ಸಾಗುವ ಅವಕಾಶವಿರುತ್ತದೆ. ಹಾಗಾಗಿ ಬಂಡಿಯನ್ನು ಒಂದು ವೇಗಕ್ಕೆ ಹೊಂದಿಸಿಕೊಂಡು ಸುಯ್ಅಂಕೆ ಏರ‍್ಪಾಟು ಬಳಸಿದರೆ ಉರುವಲಿನ ಬಳಕೆಯನ್ನು ತಕ್ಕಮಟ್ಟದಲ್ಲಿ ಹಿಡಿತದಲ್ಲಿಡಬಹುದು.

3.ಸೋಸುಕಗಳು:

ಸಾಮಾನ್ಯವಾಗಿ ಪ್ರತಿ ಗಾಡಿಯ ಬಿಣಿಗೆಯಲ್ಲಿ ಒಂದು ಗಾಳಿಯ ಸೋಸುಕ(Air Filter) ಮತ್ತು ಒಂದು ಉರುವಲು ಸೋಸುಕಗಳನ್ನು(Fuel Filter) ಜೋಡಿಸಲಾಗಿರುತ್ತದೆ. (ದೊಡ್ದ ಗಾಡಿಗಳಲ್ಲಿ 4-6 ಸೋಸುಕಗಳು ಇರುತ್ತವೆ). ಹೆಚ್ಚು ಓಡಾಟದಿಂದ ಬಂಡಿಯ ಸೋಸುಕಗಳಲ್ಲಿ ಹೆಚ್ಚು ಕಸ ಇತರೆ ಬೇಡದ ವಸ್ತುಗಳು ಸೋಸುಕದ ಹೊರಭಾಗಕ್ಕೆ ಮೆತ್ತಿಕೊಂಡಿರುತ್ತವೆ. ಇವುಗಳು ಹೆಚ್ಚಾದಂತೆ ಸೋಸುಕದ ಕೆಲಸಕ್ಕೆ ಅಡ್ಡಿಪಡಿಸಿ ಅವುಗಳು ಕೆಲಸ ಮಾಡದಂತೆ ನಿಲ್ಲಿಸುತ್ತವೆ. ಇದರಿಂದ ಬಿಣಿಗೆಯು ಬೇಗನೆ ಆರಂಭಗೊಳ್ಳುವುದಿಲ್ಲ. ಕೆಲವೊಮ್ಮೆ ಬಿಣಿಗೆಯಲ್ಲಿ ಕಸದಿಂದ ಕೂಡಿದ ಗಾಳಿ ಮತ್ತು ಉರುವಲು ಸೇರಿಕೊಂಡು ಬಿಣಿಗೆಯ ಆಡುಬೆಣೆ (Piston), ಕೂಡುಸಳಿಗಳಿಗೆ (Connecting Rod) ಕೆಡುಕುಂಟು ಮಾಡುತ್ತವೆ. ಇವೆಲ್ಲದರ ಪರಿಣಾಮವಾಗಿ ಬಂಡಿಯ ಅಳವುತನ ಕಡಿಮೆಯಾಗುವುದಲ್ಲದೇ ಮೈಲಿಯೋಟವು ಇಳಿಮುಖವಾಗುತ್ತದೆ. ಇದನ್ನು ತಡೆಯಲು ಆಗಾಗ ನಿಮ್ಮ ಬಂಡಿಯ ಸೋಸುಕಗಳನ್ನು ನೆರವು ತಾಣಗಳಿಗೆ ಭೇಟಿ ಇತ್ತು ಪರೀಕ್ಷೆ ಮಾಡಬೇಕು. ಹೆಚ್ಚು ಕಸದಿಂದ ಕೂಡಿರುವುದು ಕಂಡುಬಂದಲ್ಲಿ ಬದಲಾಯಿಸಿಕೊಳ್ಳಬೇಕು. ಇದು ಬಿಣಿಗೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ.

4.ಗಾಡಿಯ ತೂಕ:

ನೀವು ಓಡಾಡುವಾಗ ಬಂಡಿಯ ತೂಕ ತಕ್ಕಮಟ್ಟಿಗೆ ಹಗುರ ಇದ್ದಷ್ಟು ಒಳ್ಳೆಯದು. ಮೇಲಿಂದ ಮೇಲೆ ಬಹಳ ಭಾರ ಹೇರುವುದರಿಂದ ಗಾಡಿಗೆ ಹೆಚ್ಚು ಉರುವಲು ತಗಲುತ್ತದೆ. ಗಾಡಿಯಲ್ಲಿ ಬೇಕಿಲ್ಲದ ವಸ್ತುಗಳನ್ನು ನಿಮ್ಮ ಮನೆಯಲ್ಲೋ ಇಲ್ಲವೇ ಗ್ಯಾರೇಜ್‌ನಲ್ಲಿ ಇಡಬೇಕು. ಬೇಕೆನ್ನಿಸಿದಾಗ ಮಾತ್ರ ಈ ವಸ್ತುಗಳನ್ನು ಕಾರಿನಲ್ಲಿ ಕೊಂಡೊಯ್ಯುವುದು ಬಂಡಿಯ ಬಾಳಿಕೆಗೂ ಒಳ್ಳೆಯದು.

5. ಗಾಡಿಯ ಅರಿವಿಕಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ತಿಳಿಯಿರಿ:

ಇತ್ತಿಚೀನ ಬಹುಪಾಲು ಬಂಡಿಗಳಲ್ಲಿ ಹೆಚ್ಚಿನ ಅರಿವಿಕಗಳಿರುತ್ತವೆ. ಗಾಳಿ ಹರಿವಿನ ಅರಿವಿಕ (Air flow Sensor), ಕೆಡುಗಾಳಿ ಅರಿವಿಕ(Oxygen Sensor), ಬಿಣಿಗೆ ವೇಗದ ಅರಿವಿಕ(Engine Speed Sensor) ಹೀಗೆ ಹಲವು ಅರಿವಿಕಗಳಿರುತ್ತವೆ. ಇವುಗಳನ್ನು ಆಗಾಗ ಪರೀಕ್ಷಿಸುತ್ತಿರಬೇಕು ಇಲ್ಲವಾದಲ್ಲಿ ಬಿಣಿಗೆಯು ಹೆಚ್ಚು ಕೆಡುಗಾಳಿ ಉಗುಳಬಹುದು ಮತ್ತು ಅದನ್ನು ಹಿಡಿತದಲ್ಲಿಡಲು ಸಾಧ್ಯವಾಗದೇ ಇರಬಹುದು. ಹೆಚ್ಚು ಕೆಡುಗಾಳಿ ಉಗುಳುತ್ತ ಬಂಡಿಯು Emission Test ಪಾಸಾಗದೇ ಹೋದಲ್ಲಿ ಪೋಲೀಸರಿಗೆ ದಂಡ ತೆರುವ ಪರಿಸ್ಥಿತಿಯೂ ತಪ್ಪಿದ್ದಲ್ಲ. ಕೆಲವು ಅರಿವಿಕಗಳು ಕೆಲಸಮಾಡುವುದು ನಿಲ್ಲಿಸಿದಾಗ ಬಂಡಿ ಓಡಿಸುಗನಿಗೆ ತಿಳಿದಿರುವುದೇ ಇಲ್ಲ. ಹಾಗಾಗಿ ನೆರವು ತಾಣಗಳಲ್ಲಿ ಇವುಗಳನ್ನೊಮ್ಮೆ ಒರೆಗೆಹಚ್ಚುತ್ತಿರಬೇಕು.

6. ಏಸಿ ಬಳಕೆ ಎಚ್ಚರ:

ನಮ್ಮಲ್ಲಿ ಹಲವರು ಬಂಡಿ ಶುರು ಮಾಡಿ ಏರಿ ಕುಳಿತ ತಕ್ಷಣ ಏಸಿ (Air Conditioning System) ಗುಂಡಿ ಅದುಮುತ್ತಾರೆ. ಇದು ಬಿಣಿಗೆಗೆ ಹಾಗೂ ಗಾಳಿದೂಡುಕಗಳಿಗೆ(Turbocharger) ಕೆಡುಕುಂಟು ಮಾಡುತ್ತದೆ. ಬಂಡಿಯನ್ನು ಶುರು ಮಾಡಿದ ತಕ್ಷಣ ಗಾಳಿದೂಡುಕಗಳಿಗೆ ತಕ್ಕ ಮಟ್ಟಿನ ಗಾಳಿಯ ಹರಿವುಗೊಳ್ಳುವುದಿಲ್ಲ. ಈ ಹೊತ್ತಿನಲ್ಲಿ ಗಾಳಿದೂಡುಕ ನಿಧಾನವಾಗಿ ಗಾಳಿಯೆಳೆದುಕೊಳ್ಳುತ್ತಿರುತ್ತದೆ.  ಇಂತಹ ಹೊತ್ತಲ್ಲಿ ಏಸಿ ಗುಂಡಿ ಅದುಮಿದಾಗ ಬಿಣಿಗೆಗೆ ಮತ್ತು ಗಾಳಿದೂಡುಕದ (Turbocharger) ಕೆಲಸಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ, ಪರಿಣಾಮ ಹೆಚ್ಚಿನ ಡಿಸೇಲ್/ಪೆಟ್ರೋಲ್ ಉರಿಯುವಂತೆ ಮಾಡುತ್ತದೆ. ಗಾಳಿದೂಡುಕ ಮತ್ತು ಬಿಣಿಗೆಯ ಬಾಳಿಕೆಯನ್ನು ಹೆಚ್ಚಾಗಿಸಲು ಬಂಡಿ ಶುರು ಮಾಡಿದ ಕೆಲವು ನಿಮಿಷಗಳ ಬಳಿಕ ಏಸಿ ಏರ‍್ಪಾಟಿನ ಗುಂಡಿ ಅದುಮಬೇಕು.

 ಗಾಡಿಯೂ ನಮ್ಮ ದೇಹವಿದ್ದಂತೆ, ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಿದರೆ ನಾವು ಆರೋಗ್ಯವಿರುತ್ತೇವೆ ಹಾಗೆಯೇ ಗಾಡಿಯ ಎಲ್ಲ ಏರ್ಪಾಟು ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡಿದರೆ ಗಾಡಿಗಳು ಹೆಚ್ಚಿನ ಬಾಳಿಕೆ ಬರುತ್ತವೆ.

ತಿಟ್ಟಸೆಲೆ: (www.carid.com)

ಮಿದುಳ್ ಬಂಡಿ

ಜಯತೀರ್ಥ ನಾಡಗೌಡ.

ಹೆದ್ದಾರಿಯೊಂದರಲ್ಲಿ ಬಂಡಿಯಲ್ಲಿ ಸಾಗುತ್ತಿದ್ದೀರಿ, ಸಾಲು ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಸಾಲು ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಗಾಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ ಗಾಡಿ ತಿರುವಿಕೊಂಡು ಮುನ್ನುಗ್ಗಿರುತ್ತದೆ. ಇದೇನಿದು ಎಂದುಕೊಳ್ಳುತ್ತಿದ್ದೀರಾ? ಹೌದು, ಇದೇ ಬ್ರೈನ್ ಟು ವೆಹಿಕಲ್(Brain to Vehicle) ಅನ್ನುವ ಹೊಸ ಚಳಕ(Technology).

ಜಗತ್ತಿನ ಮುಂಚೂಣಿಯ ಬಂಡಿ ತಯಾರಕ ಕೂಟ ನಿಸ್ಸಾನ್(Nissan) ಇಂತದೊಂದು ಹೊಸ ಚಳಕ ಎಲ್ಲರ ಮುಂದಿಟ್ಟಿದೆ. ಈ ಮಿದುಳ್ ಬಂಡಿಯನ್ನು (ಮಿದುಳಿನ ಅಲೆ ಗುರುತಿಸಿ ಕೆಲಸ ಮಾಡುವ ಬಂಡಿ), 2018ರ ಅಮೇರಿಕಾದಲ್ಲಿ ನಡೆದ ವರ್ಡ್ ಎಕಾನಾಮಿಕ್ ಫೋರಮ್‌ನಲ್ಲಿ(World Economic Forum) ನಿಸ್ಸಾನ್ ಕೂಟ ಈ ಚಳಕದ ಪರಿಚಯ ಮಾಡಿಸಿತ್ತು. ಫೋರಮ್ ನಲ್ಲಿ ಸೇರಿದ್ದ ಮಂದಿಗೆ, ಹೆದ್ದಾರಿಯಲ್ಲಿ ಇಂತ ಗಾಡಿ ಓಡಿಸುವ ಅವಕಾಶ ನೀಡಲಾಗಿತ್ತು. ಈ ಚಳಕ ಅಳವಡಿಸಿಕೊಂಡ ಗಾಡಿ, ದಿಟಹೊತ್ತಿನಲ್ಲಿ(Real Time) ತಂತಾನೇ ಹೊಂದಾಣಿಕೆ ಮಾಡಿಕೊಂಡು ಸಾಗುವ ಹೊಸ ಅನುಭವವೊಂದನ್ನು ಓಡಿಸುಗರಿಗೆ ನೀಡಿತ್ತು. ಮಿದುಳಿನ ಅಲೆಗಳ ಮೂಲಕ ಓಡಿಸುಗನ ಕೆಲಸ ಮಾಡುವುದು ಮತ್ತು ಓಡಿಸುಗರ ಅನಾನುಕೂಲಗಳನ್ನು ತಿಳಿಯುವುದು – ಈ ಏರ್ಪಾಟಿನ ಪ್ರಮುಖ ಕೆಲಸ.

ಈ ಚಳಕವನ್ನು ಎರಡು ಭಾಗಗಳಲ್ಲಿ ಬೇರ್ಪಡಿಸಬಹುದು, ಮೊದಲನೇಯದಾಗಿ ಮುನ್ಹೊಳಹುವಿಕೆ(Prediction): 

ಗಾಡಿಯನ್ನು ಓಡಿಸುಗನೇ ಓಡಿಸುತ್ತಿರುವಾಗ(Normal mode), ಓಡಿಸುಗನ ಮಿದುಳಿನ ಚಟುವಟಿಕೆಯನ್ನು ಈ ಚಳಕ ಮೊದಲೇ ಅರಿತು, ಆತ ಬಂಡಿಯನ್ನು ತಿರುಗಿಸಿಕೊಳ್ಳುವ ಇಲ್ಲವೇ ಬಂಡಿಯ ವೇಗ(Speed) ಹೆಚ್ಚಿಸಲು ತುಳಿಗೆಯನ್ನು(Accelerator Pedal) ಹೆಚ್ಚಿಗೆ ಒತ್ತುವ ಕ್ಷಣಗಳ ಮೊದಲೇ ಈ ಕೆಲಸ ನಡೆದು ಹೋಗಿರುತ್ತದೆ. ಅಂದರೆ ಇಲ್ಲಿ ಮಾರ್ಪೆಸಕದ ಹೊತ್ತು(Reaction Time) ಕಡಿತಗೊಂಡು, ಗಾಡಿ ಓಡಿಸುವಿಕೆಯ ನಲಿವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಇಕ್ಕಟ್ಟಿನ ಬೆಟ್ಟ-ಗುಡ್ಡದ ದಾರಿಯಲ್ಲಿ ಓಡಿಸುಗರು ಸಲೀಸಾಗಿ ಗಾಡಿ ಓಡಿಸಿಕೊಂಡು ಹೋಗಬಹುದು. ಇಂತಲ್ಲಿ, ನುರಿತ ಓಡಿಸುಗರು, ಈ ಚಳಕದ ಮೂಲಕ ತಮ್ಮ ಅಳವುತನವನ್ನು(Efficiency) ಇನ್ನೂ ಹೆಚ್ಚಿಸಿಕೊಳ್ಳಬಹುದು.

ಚಳಕದ ಎರಡನೇ ಬಾಗಕಂಡುಹಿಡಿಯುವಿಕೆ(Detection): 

ಈ ಹಂತದಲ್ಲಿ ಗಾಡಿ ತಂತಾನೇ ಸಾಗುವ ಬಗೆಯಲ್ಲಿದೆ(Autonomous Mode) ಎಂದುಕೊಳ್ಳಿ, ಈಗಲೂ ಓಡಿಸುಗನ ಮಿದುಳಿನಲ್ಲಿ ಬರುವ ಯೋಚನೆಗಳನ್ನು ಅದು ತಿಳಿದುಕೊಳ್ಳುತ್ತಿರುತ್ತದೆ. ಕಟ್ಟುಜಾಣ್ಮೆಯ(Artificial Intelligence) ಮೂಲಕ ಓಡಿಸುಗನ ಕಿರಿಕಿರಿ, ಅನಾನುಕೂಲಗಳನ್ನು ಅರಿಯುವ ಈ ಚಳಕ, ಬಂಡಿ ಓಡಿಸುವ ಬಗೆಯನ್ನು ಬದಲಿಸುವ ಕೆಲಸ ಮಾಡುತ್ತದೆ. ಉದಾಹರಣೆಗೆ, ಹೆದ್ದಾರಿಯಲ್ಲಿ ಹೋಗುವಾಗ, ಗಾಡಿ ತಂತಾನೇ ಒಂದು ವೇಗದಲ್ಲಿ ಸಾಗುತ್ತಿರುತ್ತದೆ, ಆಗ ಓಡಿಸುಗ ತನ್ನ ಬಂಡಿ ಹೆಚ್ಚಿನ ವೇಗದ ಸಾಲು(Fast Speed Lane) ಯಲ್ಲಿ ಸಾಗಬೇಕೆಂದುಕೊಂಡರೆ, ಕೆಲವು ಸೆಕೆಂಡುಗಳ ನಂತರ ಬಂಡಿ ಅದನ್ನರಿತು, ಓಡಿಸುಗ ಅಂದುಕೊಂಡಂತೆ ಅವನಿಷ್ಟದ ಓಣಿಯಲ್ಲಿ ಸಾಗುತ್ತದೆ.

ನಿಸ್ಸಾನ್‌ರವರ ಮಿದುಳ್ ಬಂಡಿ ಚಳಕ, ಗಾಡಿಗೆ ಸಂಬಂಧಿಸಿದಂತೆ, ದಿಟಹೊತ್ತಿನಲ್ಲಿ ಮಿದುಳಿನ ಅಲೆಗಳನ್ನು, ಚಟುವಟಿಕೆಗಳನ್ನು ಅರಿಯುವ ಮೊಟ್ಟ ಮೊದಲ ಚಳಕವಾಗಿದೆ. ಮಿದುಳಿನ ಅಲೆ ಅರಿಯಲು ಈ ಚಳಕದಲ್ಲಿ ಓಡಿಸುಗ ಒಂದು ಟೋಪಿ ತಲೆಗೆ ಧರಿಸಬೇಕು. ಈ ಟೋಪಿ ಸಾಮಾನ್ಯ ಟೋಪಿಯಾಗಿರದೇ, ಎಲೆಕ್ಟ್ರೊಎನ್ಸಿಫಾಲೋಗ್ರಫಿ(Electroencephalography) ಬಳಸಿ ಓಡಿಸುಗನ ಮಿದುಳಿನ ಅಲೆಗಳ ಅರಿವುಕಗಳ(Brain Wave Sensors) ಮೂಲಕ ಓಡಿಸುಗನ ಯೋಚನೆಗಳನ್ನು ದಿಟಹೊತ್ತಿನಲ್ಲಿ ಅರಿತು ಗಾಡಿಯ ಗಣಕಕ್ಕೆ(Computer) ಸಾಗಿಸುವಂತದ್ದು. ಇನ್ನೇನು ಗಾಡಿ ಓಡಿಸುಗ ತುಳಿಗೆಯನ್ನು ಬಲವಾಗಿ ತುಳಿಯಬೇಕು, ಬಂಡಿಯನ್ನು ತಿರುಗಿಸಬೇಕು ಎಂದುಕೊಳ್ಳುತ್ತಿರುವ 0.2 ರಿಂದ 0.5 ಸೆಕೆಂಡುಗಳ ಮೊದಲೇ ಆ ಕೆಲಸವನ್ನು ಬಂಡಿ ಮಾಡಿರುತ್ತದೆ.

ಮಿದುಳ್ ಬಂಡಿ ಓಡಿಸುಗರು ಧರಿಸಬೇಕಾದ ಟೋಪಿ

ಈ ಚಳಕವನ್ನು ಓಡಿಸುಗರ, ಪಯಣಿಗರ ಮತ್ತು ಬಂಡಿಯ ಕಾಪಿನ(Safety) ಬಗ್ಗೆ ಯಾವುದೇ ರಾಜಿಮಾಡಿಕೊಳ್ಳದಂತೆ ತಯಾರು ಮಾಡಲಾಗುತ್ತಿದೆ. ಈ ಹೊಸ ಚಳಕದ ಮೇಲೆ ಬಲು ನಂಬುಗೆ ಇಟ್ಟುಕೊಂಡಿರುವ ನಿಸ್ಸಾನ್ ಕೂಟದ ಮಾರಾಟ ವಿಭಾಗದ ಹಿರಿಯಾಳು ಡ್ಯಾನಿಯಲ್ ಶಿಲ್ಲಾಚಿ(Daniele Schillaci), ಮುಂಬರುವ ವರುಶಗಳಲ್ಲಿ ತಂತಾನೇ ಓಡುವ ಗಾಡಿಗಳ ಸಂಖ್ಯೆ ಏರಿಕೆಯಾಗಲಿದ್ದು, ಅಲ್ಲಿ ತಮ್ಮ ಮಿದುಳ್ ಬಂಡಿ ಚಳಕ ಸಾಕಷ್ಟು ಕ್ರಾಂತಿ ಉಂಟುಮಾಡಲಿದೆಯೆಂದು ಹೇಳಿಕೊಂಡಿದ್ದಾರೆ. ಈ ಚಳಕ ಬಲು ಭದ್ರವಾಗಿದ್ದು(Safe), ಓಡಿಸುಗರಿಗೆ ಹೊಸ ಹುರುಪು ಮತ್ತು ನಲಿವು ತರಲಿದೆ ಎನ್ನುತ್ತಾರೆ-ಶಿಲ್ಲಾಚಿ.

ಈ ಚಳಕದ ಅನಾನುಕೂಲವೆಂದರೆ ಇಲ್ಲಿ ಓಡಿಸುಗನ ಮಿದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿಯುವುದರ ಮೂಲಕ ಅವರ ಗುಟ್ಟಿನ(Privacy) ವಿಷಯ ಇತರರಿಗೆ ತಿಳಿಯುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸಾಕಶ್ಟು ಚರ್ಚೆಗಳು ನಡೆಯುತ್ತಿವೆ. ಓಡಿಸುಗನ ತಲೆಯಲ್ಲಿ ಬರುವ ವಿಚಾರಗಳು ಗಾಡಿಯ ಗಣಕದ ಮೂಲಕ ತಿಳಿದು ಆಯಾ ವ್ಯಕ್ತಿಗಳ ಪ್ರೈವೆಸಿಗೆ ಅಡ್ಡಿಯುಂಟಾಗುವುದು ಖಚಿತ. ಇನ್ನೂ ಗಾಡಿಯ ಗಣಕದ ಮೂಲಕ ಈ ವಿಚಾರಗಳು ಇತರರಿಗೆ ಸೋರಿಕೆಯಾದರೆ ಹೆಚ್ಚಿನ ತೊಂದರೆ ತಪ್ಪಿದಲ್ಲ. ಈ ಅನಾನುಕೂಲ ಮೆಟ್ಟಿ, ಹೊಸ ಚಳಕದಲ್ಲಿ ಹೇಗೆ ನಿಸ್ಸಾನ್ ಕೂಟದವರು ಗೆಲುವು ಕಾಣಲಿದ್ದಾರೆ ಎಂದು ಜಗತ್ತೇ ಎದುರುನೋಡುತ್ತಿದೆ. ಕಳೆದ 2-3 ವರ್ಷಗಳಲ್ಲಿ ನಿಸ್ಸಾನ್ ತಮ್ಮ ಮಿದುಳ್-ಬಂಡಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರರ್ಥ ತಂತ್ರಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಅರಕೆ ನಡೆಯುತ್ತಿರಬಹುದೆಂದು ಆಟೋಮೊಬೈಲ್ ವಲಯದಲ್ಲಿ ಕೇಳಿಬಂದ ಸುದ್ದಿ. ಬ್ರೈನ್-ಟು-ವೆಹಿಕಲ್ ಬೀದಿಗಿಳಿಯಲು ಇನ್ನೂ ಕಾಯಲೇಬೇಕು.

ಮಾಹಿತಿ ಮತ್ತು ತಿಟ್ಟ ಸೆಲೆ:  nissan