ಚಳಿಗಾಲಕ್ಕೆ ಕಾರಿನ ಆರೈಕೆ

ಜಯತೀರ್ಥ ನಾಡಗೌಡ

ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು ಚಳಿಗಾಲದಲ್ಲಿ ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುವೆ.

  1. ಗಾಡಿಯ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗಲು ಕಿರಿದಾಗಿದ್ದು, ಸೂರ್ಯ ತಡವಾಗಿ ಹುಟ್ಟಿ ಬೇಗನೆ ಮುಳುಗುವವನು. ಇದರಿಂದ ಗಾಡಿ ಓಡಿಸುಗರಿಗೆ ಗಾಡಿಯ ದೀಪದ ಅಗತ್ಯ ಹೆಚ್ಚು. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಇಬ್ಬನಿ ಕವಿದು ದಾರಿ ಮಂಜು ಮಂಜಾಗುವುದು ಹೆಚ್ಚು, ಆಗ ಕೂಡ ಗಾಡಿಗಳ ದೀಪ ಆನ್ ಮಾಡಿ ಗಾಡಿಗಳನ್ನು ಓಡಿಸಿಕೊಂಡು ಹೋಗಬೇಕು. ಆದ್ದರಿಂದ ಬಂಡಿಯ ಮುಂದೀಪ, ಹಿಂದೀಪ, ಇಬ್ಬನಿಗೆಂದೇ ನೀಡಿರುವ(Fog Lamp) ದೀಪಗಳು ಹಾಗೂ ತೋರುಕ(Indicator) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ, ನುರಿತ ಮೆಕ್ಯಾನಿಕ್‌ಗಳ ಬಳಿ ತೋರಿಸಿ ಸರಿಪಡಿಸಿಕೊಳ್ಳಬೇಕು.

  1. ಗಾಡಿಯ ಮಿಂಕಟ್ಟು:

ಗಾಡಿಯ ಮಿಂಕಟ್ಟು ಸರಿಯಾಗಿ ಕೆಲಸ ಮಾಡಬೇಕು. ಚಳಿಗಾಲದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಕಡಿಮೆ ತಾಪಮಾನ ಇರುವುದರಿಂದ, ಗಾಡಿಗಳ ಬ್ಯಾಟರಿ ತಣ್ಣಗಾಗಿರುತ್ತದೆ. ಕೆಲವೊಮ್ಮೆ, ರಾತ್ರಿಯಿಡೀ ನಿಂತಿರುವ ಗಾಡಿಗಳು ಬೆಳಗಿನ ಜಾವ ಬೇಗನೇ ಶುರುವಾಗಲ್ಲ, ಕಾರಣ ಬ್ಯಾಟರಿ ವಾರ್ಮ್-ಅಪ್ ಆಗಿರುವುದಿಲ್ಲ. ಗಾಡಿಯ ಬ್ಯಾಟರಿ ಹಳೆಯದಾಗಿದ್ದಾಗ ಈ ತೊಂದರೆ ಕಂಡುಬರುವುದುಂಟು. ಈ ಸಮಯದಲ್ಲಿ ಜಂಪರ್ ತಂತಿಗಳು ಇದ್ದರೆ, ಅವುಗಳನ್ನು ನೆರೆಹೊರೆಯವರ ಕಾರಿನ ಬ್ಯಾಟರಿಗೆ ಜೋಡಿಸಿ ಜಂಪ್ ಸ್ಟಾರ್ಟ್ ಮಾಡಬಹುದು. ಅಕ್ಕಪಕ್ಕದಲ್ಲಿ ಬೇರೆ ಕಾರು ಸಿಗದೇ ಇದ್ದಲ್ಲಿ, ಹೀಗೆ ಮಾಡಬಹುದು. ಬಹಳಷ್ಟು ಕಾರಿನ ವಿಮೆಗಳು ಇಲ್ಲವೇ ಶೋರೂಮ್‌ಗಳು ದಾರಿಬದಿ ನೆರವು(roadside assist) ಎಂಬ ಸೇವೆಗಳನ್ನು ನೀಡಿರುತ್ತಾರೆ. ದಾರಿಬದಿ ನೆರವು ನವರಿಗೆ ಕರೆಮಾಡಿದರೆ, ಉಚಿತವಾಗಿ ಬಂದು ನಿಮಗೆ ಜಂಪ್ ಸ್ಟಾರ್ಟ್ ಮಾಡಿಕೊಡುತ್ತಾರೆ. ದಾರಿಬದಿ ನೆರವು ಎಂಬುದು ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಪದೇ ಪದೇ ಈ ರೀತಿ ಗಾಡಿಯ ಬ್ಯಾಟರಿ ಕೆಟ್ಟು ನಿಲ್ಲುತ್ತಿದ್ದರೆ, ಬ್ಯಾಟರಿಯನ್ನು ಒಂದೊಮ್ಮೆ ನುರಿತ ಮೆಕ್ಯಾನಿಕ್ ಬಳಿ ತೋರಿಸಿ ಹೊಸ ಬ್ಯಾಟರಿಗೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.

3.ಕೀಲೆಣ್ಣೆ ಮತ್ತು ತಂಪುಕಗಳ ಮಾಹಿತಿ:

ಗಾಡಿಯ ಕೀಲೆಣ್ಣೆ (Engine Oil) ಮತ್ತು ತಂಪುಕಗಳ(Coolant) ಮಟ್ಟವನ್ನು ಆಗಾಗ ಪರೀಕ್ಷಿಸಿ. ಇವುಗಳ ಮಟ್ಟ ಕಡಿಮೆ ಎನ್ನಿಸಿದರೆ, ಗಾಡಿಯ ಬಳಕೆ ಕೈಪಿಡಿಯಲ್ಲಿ ಹೆಸರಿಸಿದ ಗುಣಮಟ್ಟದ ಕೀಲೆಣ್ಣೆ ಮತ್ತು ತಂಪುಕವನ್ನು ತುಂಬಿಸಬೇಕು.ಅತಿಯಾದ ಚಳಿಯ ವಾತಾವರಣದಲ್ಲಿ ಗಾಡಿಯು ಸುಮಾರು ಹೊತ್ತು ಶುರು ಮಾಡದೇ ಬಿಟ್ಟರೆ, ಕೀಲೆಣ್ಣೆ ಮುಂತಾದವು ಕೆಲವೊಮ್ಮೆ ಹೆಪ್ಪುಗಟ್ಟುವುದುಂಟು, ಇದರಿಂದ ಗಾಡಿಯು ಬೇಗನೇ ಶುರುವಾಗದೇ ಇರಬಹುದು. ಒಂದೊಮ್ಮೆ, ಗಾಡಿಯನ್ನು ಒಂದೇ ಕಡೆ ಹಲವಾರು ದಿನ ನಿಲ್ಲಿಸುವ ಸಂದರ್ಭ ಬಂದರೆ, ದಿನವೂ ಒಂದು ಸಲ ಕಾರನ್ನು ಶುರು ಮಾಡಿ ಇಲ್ಲವೇ ಮನೆಯ ಅಕ್ಕಪಕ್ಕದಲ್ಲಿ 2-3 ಸುತ್ತು ಹಾಕಿ ಬಂದರೆ ಒಳ್ಳೆಯದು.

  1. ಒರೆಸುಕ ಮತ್ತು ಗಾಳಿತಡೆ ಗಾಜುಗಳು:

ಚಳಿಗಾಲದಲ್ಲಿ ಒರೆಸುಕ(Wiper) ಮತ್ತು ಗಾಳಿತಡೆ ಗಾಜುಗಳು(Wind Shield Glass) ಸರಿಯಾಗಿ ಕೆಲಸ ಮಾಡುತ್ತಿರಬೇಕು. ಗಾಳಿತಡೆ ಗಾಜುಗಳಲ್ಲಿ ಯಾವ ಚಿಕ್ಕ ಪುಟ್ಟ ತೂತುಗಳು ಇರದೇ ಭದ್ರವಾಗಿರಬೇಕು. ಒರೆಸುಕಗಳು ಹಳತಾಗಿದ್ದರೆ, ಬದಲಾಯಿಸಿ ಬಿಡಿ. ಗಾಡಿಯನ್ನು ಆಚೆ ಕಡೆ, ಯಾವುದೇ ಹೊದಿಕೆಯಿರದೇ ರಾತ್ರಿಹೊತ್ತು ನಿಲ್ಲಿಸಬೇಕಾಗಿ ಬಂದರೆ, ಬೆಳಿಗ್ಗೆ ಗಾಡಿಯ ಗಾಳಿತಡೆ ಗಾಜಿನ ಮೇಲೆ ಸಾಕಷ್ಟು ಮಂಜು ಸೇರಿಕೊಂಡು, ಗಾಡಿ ಮುಂದೆ ಏನೂ ಕಾಣದಂತೆ ಅಡ್ಡಿಯಾಗುತ್ತದೆ. ಆಗ, ಗಾಡಿಯಲ್ಲಿರುವ ಮಂಜು ಕರಗಿಸುಕ(Defroster) ಶುರು ಮಾಡಿ ಸ್ವಲ್ಪ ಹೊತ್ತು ಬಿಟ್ಟರೆ ಮಂಜು ಕರಗಿ, ಮುಂದಿನ ದಾರಿ ಸ್ಪಷ್ಟವಾಗಿ ಕಾಣುತ್ತದೆ. ಗಾಡಿಯಲ್ಲಿರುವ ಮಂಜು ಕರಗಿಸುಕ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ.

  1. ಗಾಲಿಯ ಸ್ಥಿತಿ:

ಗಾಡಿಯ ಗಾಲಿಗಳ ಒತ್ತಡದ ಮಟ್ಟ ಕುಸಿದಿದ್ದರೆ, ಗಾಳಿ ತುಂಬಿಸಿ ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಇಂದಿನ ಹೆಚ್ಚಿನ ಕಾರುಗಳಲ್ಲಿ ಗಾಲಿಗಳ ಒತ್ತಡದ ಮಟ್ಟ ತಿಳಿಸುವ ಅರಿವಿಕ(Tyre pressure monitroing sensor) ಇರುತ್ತವೆ. ಇವುಗಳು ಕಾರಿನ ತೋರುಮಣೆ(Dashboard) ನಲ್ಲೇ ಗಾಲಿಗಳ ಒತ್ತಡದ ಮಟ್ಟ ತೋರಿಸುತ್ತವೆ. ಗಾಲಿಗಳಲ್ಲಿ ಗಾಳಿ ಕಡಿಮೆಯಾದಾಗ ಅರಿವಿಕಗಳು ಸರಿಪಡಿಸುವಂತೆ ಮಾಹಿತಿ ಕೊಡುತ್ತವೆ. ಅದನ್ನು ಬಳಸಿಕೊಂಡು, ಗಾಳಿ ಒತ್ತಡ ಸರಿಯಾದ ಮಟ್ಟದಲ್ಲಿ ಇರುವಂತೆ ಗಾಳಿ ತುಂಬಿಸಬೇಕು. ಹಾಗೆಯೇ ಗಾಲಿಗಳು ಅತಿಯಾಗಿ ಸವೆದಿದ್ದರೆ, ಒಮ್ಮೆ ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಗಾಲಿಗಳ ಸವೆತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರಿನ ಬಳಕೆದಾರರ ಕೈಪಿಡಿಯಲ್ಲಿ ನೋಡಿ ತಿಳಿಯಬಹುದು. ಕಾರಿನಲ್ಲಿರುವ ಬಿಡಿ-ಗಾಲಿ(spare wheel)ಯನ್ನು ತುರ್ತು ಅಗತ್ಯಕ್ಕೆ ಬಳಸಿಕೊಳ್ಳಿ.

 

ದೂರದೂರಿಗೆ, ಮಂಜುಬೀಳುವ ಅತಿಚಳಿಯ ಪ್ರದೇಶಗಳ ತೆರಳುವ ಮುನ್ನ ಅಲ್ಲಿನ ವಾತಾವರಣ ಬಗ್ಗೆ ತಿಳಿದುಕೊಂಡು, ಕಾರಿನ ಎಲ್ಲ ಏರ್ಪಾಟು ಸರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡಿರಿ.

 

ತಿಟ್ಟ ಸೆಲೆ: acko.com

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-2)

ಜಯತೀರ್ಥ ನಾಡಗೌಡ

  1. ಕಚ್ಚು, ಗೀರುಗಳಾದಾಗ:

ಬಂಡಿಗಳಿಗೆ ಕಚ್ಚು ಗೀರುಗಳಾಗುವುದು ಸಾಮಾನ್ಯ. ನಾವು ಕೊಂಡುಕೊಂಡ ಕಾರುಗಳು ನಮ್ಮ ಬದುಕಿನ ಭಾಗವಾಗಿರುವುದರಿಂದ ಅವುಗಳ ಮೇಲೆ ಒಂದು ಗೀರು ಮೂಡಿದರೂ ನಮಗೆ ಬೇಜಾರು. ಸಣ್ಣ ಪುಟ್ಟ ಗೀರು, ಪರಚಿದ ಕಚ್ಚುಗಳು ಉಂಟಾದಾಗ ಅವುಗಳನ್ನು ಮನೆಯಲ್ಲೇ ನಾವೇ ಸ್ವತಹ ಸರಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಮರಳುಹಾಳೆ(Sand Paper), ತೊಳೆಯಲೊಂದು ಡಿಟರ್ಜಂಟ್ ಸಾಬೂನು ಮತ್ತು ಮೆರುಗಿನ ಬಟ್ಟೆ. ಸಣ್ಣ ಪುಟ್ಟ ಗೀರುಗಳಿದ್ದರೆ ,ಗೀರು ಮೂಡಿರುವ ಜಾಗವನ್ನು ಡಿಟರ್ಜಂಟ್ ಸಾಬೂನಿನಿಂದ ತೊಳೆಯಿರಿ. ದೊಡ್ಡ ಗೀರುಗಳಿದ್ದರೆ ಸುಮಾರು 3000 ಚೂರುಗಳಶ್ಟು(3000 grit) ತೆಳುವಾದ ಮರಳುಹಾಳೆಯನ್ನು ತೆಗೆದುಕೊಂಡು ಗೀರುಗಳಿರುವ ಜಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಉಂಟಾಗುವ ತಿಕ್ಕಾಟದಿಂದ ಬಂಡಿಯ ಬಣ್ಣ ಕಳಚಿ ಬರದಿರಲೆಂದು ಇದರ ಮೇಲೆ ನೀರು ಸುರಿಯುತ್ತಿರಬೇಕು. ಇನ್ನೇನು ಗೀರು ಕಾಣದಂತಾಯಿತು ಎನ್ನುವಾಗ 5000 ಚೂರುಗಳಶ್ಟು(5000 grit) ತೆಳುವಾದ ಮರಳುಹಾಳೆಯನ್ನು ಬಳಸಿ ಉಜ್ಜಬೇಕು. ಮೆರಗಿನ ಬಟ್ಟೆಯಿಂದ ಈ ಜಾಗವನ್ನು ಒರೆಸಿ ಬಿಟ್ಟರೆ, ಗೀರು ಹೊರಟುಹೋಗಿ ಬಂಡಿ ಮೊದಲಿನ ಹೊಳಪು ಪಡೆದಿರುತ್ತದೆ.

  1. ಫ್ಯೂಸ್ (Fuse) ನೀವೇ ಬದಲಿಸಿ:

ಇಂದಿನ ಗಾಡಿಗಳಲ್ಲಿ ಹಲವಾರು ಇಲೆಕ್ಟ್ರಿಕ್ ಉಪಕರಣಗಳನ್ನು ಒದಗಿಸಲಾಗಿರುತ್ತದೆ. ವೋಲ್ಟೇಜ್ ಏರಿಳಿತದಿಂದ ಈ ಚೂಟಿಗಳನ್ನು ಕಾಪಾಡಲು ಕರಗುತಂತಿಗಳನ್ನು(Fuse) ಬಳಸಿರುತ್ತಾರೆ. ಈ ಕರಗುತಂತಿಗಳು ಕೆಲವೊಮ್ಮೆ ಸುಟ್ಟುಹೋಗುವುದುಂಟು. ಆಗ ಬಂಡಿಯೂ ಶುರುವಾಗದು. ಸುಟ್ಟುಹೋದ ಕರಗುತಂತಿಗಳನ್ನು ನಾವೇ ಬದಲಾಯಿಸಬಹುದಾಗಿರುತ್ತದೆ. ಎಲ್ಲ ಬಂಡಿಗಳಿಗೆ ಕರಗುತಂತಿ ಪೆಟ್ಟಿಗೆಯನ್ನು(Fuse Box) ನೀಡಿರುತ್ತಾರೆ. ಇದು ಬಂಡಿಯ ತೋರುಮಣೆಯ (Dashboard) ಕೆಳಗೆ ಇಲ್ಲವೇ ಅಕ್ಕಪಕ್ಕದಲ್ಲಿ ಕಾಣಸಿಗುತ್ತದೆ. ಪೆಟ್ಟಿಗೆಯನ್ನು ತೆರೆದಾಗ ಅದರ ಮುಚ್ಚಳದಲ್ಲಿ ಯಾವ ಕರಗುತಂತಿ ಹೇಗೆ ಜೋಡಿಸಬೇಕು ಮತ್ತು ಅವುಗಳ ಬಣ್ಣ ಹೀಗೆ ಎಲ್ಲ ವಿವರ ಮೂಡಿಸಿರುತ್ತಾರೆ. ಪೆಟ್ಟಿಗೆಯ ಒಂದು ಬದಿ, ಸಾಲಾಗಿ ಒಂದು ಜೊತೆ ಹೆಚ್ಚುವರಿ ಕರಗುತಂತಿಗಳನ್ನು ನೀಡಲಾಗಿರುತ್ತದೆ. ಸುಟ್ಟು ಹೋಗಿರುವ ಕರಗುತಂತಿಗಳನ್ನು ಒಂದೊಂದಾಗಿ ಹೊರತೆಗೆದು, ಅದರ ಜಾಗದಲ್ಲಿ ಹೊಸ ಕರಗುತಂತಿಗಳನ್ನು ಅವುಗಳ ಬಣ್ಣಕ್ಕೆ ಸರಿಯಾಗಿ ಪೆಟ್ಟಿಗೆಯ ಮುಚ್ಚಳದ ಮೇಲಿರುವ ವಿವರದಂತೆ ಜೋಡಿಸಬೇಕು. ಪೆಟ್ಟಿಗೆ ಹೊರ ತೆಗೆದಾಗ ಮೊಬೈಲ್ ಬಳಸಿ ಒಂದು ತಿಟ್ಟ ತೆಗೆದಿಟ್ಟುಕೊಂಡರೂ ಸಾಕು, ಹೊಸ ಕರಗುತಂತಿಗಳನ್ನು ಜೋಡಿಸಲು ಇದು ನೆರವಿಗೆ ಬರುವುದು.

  1. ಹೊರಸೂಸುಕ(Radiator) ಕೈ ಕೊಟ್ಟಾಗ:

ಗಾಡಿಯಲ್ಲಿ ಹೊರಸೂಸುಕ, ಬಿಣಿಗೆಯ ಬಿಸುಪನ್ನು ಹಿಡಿತದಲ್ಲಿಡುತ್ತದೆ. ಬಿಣಿಗೆ ಹೆಚ್ಚು ಕಾದು ಬಿಸಿಯಾಗದಂತೆ ನೋಡಿಕೊಳ್ಳುವುದೇ ಇದರ ಕೆಲಸ. ಕೆಲವೊಮ್ಮೆ ಹೊರಸೂಸುಕ ಕೆಟ್ಟು ನಿಂತಾಗ, ಬಿಣಿಗೆ ಹೆಚ್ಚಿಗೆ ಕಾದು ತೊಂದರೆಯಾಗಬಹುದು. ಹೀಗಾಗಿ ಬಿಣಿಗೆಯ ಬಿಸುಪು ತೋರುವ ಅಳಕದ (Engine Temperature Gauge) ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು. ಒಂದೊಮ್ಮೆ ದಿಢೀರನೆ ಬಿಸುಪು ಹೆಚ್ಚಾದದ್ದು ಕಂಡುಬಂದರೆ ಒಬ್ಬ ಮೆಕ್ಯಾನಿಕ್ ಬಳಿ ಬಂಡಿಯನ್ನೊಯ್ದು ಹೊರಸೂಸುಕವನ್ನು ಸರಿಪಡಿಸಿಕೊಳ್ಳಬೇಕು. ಹೆದ್ದಾರಿಯಲ್ಲಿ ಹೋಗುವಾಗ ಹೊರಸೂಸುಕ ಕೈ ಕೊಟ್ಟರೆ ಹೇಗೆ? ಹೆದರದೇ, ಮೊದಲು ಹೆದ್ದಾರಿಯ ದಡದಲ್ಲಿ ಬಂಡಿಯನ್ನು ತಂದು ನಿಲ್ಲಿಸಬೇಕು. ಆಗ ಬಂಡಿಯ ಎಲ್ಲ ಕಿಟಕಿಗಳನ್ನು ತೆರೆದಿಟ್ಟು, ಬಂಡಿಯ ಬಿಸಿಕವನ್ನು (Heater) ಶುರು ಮಾಡಿ Fresh Air Mode ನಲ್ಲಿಡಿ. ಬಿಣಿಗೆಯ ಹೆಚ್ಚಿನ ಬಿಸುಪನ್ನು ಬಿಸಿಕ ಹೀರಿಕೊಳ್ಳುತ್ತ, ಬಿಸಿಗಾಳಿಯನ್ನು ಪಯಣಿಗರು ಕೂಡುವೆಡೆಯಲ್ಲಿ ಬಿಡುತ್ತ ಹೋಗುತ್ತದೆ. ಇದರಿಂದ ಬಿಣಿಗೆಯ ಬಿಸುಪು ಕಡಿಮೆಯಾಗಿ, ಕೆಲವು ಕಿಲೋಮೀಟರ್ ಬಂಡಿಯನ್ನು ಸಾಗಿಸಿ ಮೆಕ್ಯಾನಿಕ್ ಬಳಿ ಕೊಂಡೊಯ್ದು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಿ..

  1. ಇದ್ದಕ್ಕಿದಂತೆ ಟೈರ್ ನಲ್ಲಿ ಗಾಳಿ ಒತ್ತಡ ಕಡಿಮೆಯಾಗುತ್ತಿದೆಯೇ?

ಕೆಲವೊಮ್ಮೆ ಪಂಕ್ಚರ್ ಆಗದೇ ಇದ್ದರೂ ಟೈರಿನ ಗಾಳಿ ಒತ್ತಡ ಕಡಿಮೆಯಾಗುತ್ತಿರುತ್ತದೆ. ಟೈರುಗಳು ಸವೆದು ಹಳೆಯದಾಗಿದ್ದರೆ ಅದರಲ್ಲಿ ತೂತುಗಳಾಗಿ ಗಾಳಿ ಮೆಲ್ಲಗೆ ಸೋರಿಕೆಯಾಗುವುದು. ಇಂತ ಟೈರುಗಳನ್ನು ಬದಲಾಯಿಸುವುದು ಒಳ್ಳೆಯದು. ಕೂಡಲೇ ಟೈರುಗಳನ್ನು ಬದಲಾಯಿಸಲು ಆಗದಿದ್ದರೆ, ಟೈರುಗಳ ಟ್ಯೂಬ್ ಬದಲಾಯಿಸಿ ಕೆಲವು ದಿನಗಳವರೆಗೆ ನೆಮ್ಮದಿಯಿಂದ ಇರಬಹುದು.

  1. ಮಳೆಯಲ್ಲಿ ಬಂಡಿಯ ಒಳಮೈ ನೆನೆದಾಗ:

ಮಳೆಗಾಲದಲ್ಲಿ ಕೆಲವು ಸಾರಿ ಮೈ ಮರೆತು ಬಂಡಿಯ ಕಿಟಕಿ ಗಾಜು ತೆರೆದಿಟ್ಟು ಹೋಗಿರುತ್ತೇವೆ. ಆಗ ಜೋರು ಮಳೆಬಂದರೆ, ಬಂಡಿಯ ಒಳಮೈಯಲ್ಲಿ ನೀರು ತುಂಬಿ ತೊಯ್ದು ತೊಪ್ಪೆಯಾಗಿರುತ್ತದೆ. ಬಂಡಿಯನ್ನು ಪೂರ್ತಿಯಾಗಿ ಒಣಗಿಸಲು 2-3 ದಿನಗಳೇ ಬೇಕಾಗುತ್ತದೆ. ಬೇಗನೆ ಒಣಗಿಸಲು ಹೀಗೆ ಮಾಡಬೇಕು. ಬಂಡಿಯನ್ನು ಮೊದಲು ಬಟ್ಟೆ/ಹಾಳೆಯಿಂದ ಚೆನ್ನಾಗಿ ಒರೆಸಬೇಕು. ಸಾಧ್ಯವಾದಶ್ಟು ತೇವವನ್ನು ಇದರಿಂದ ಹೊರತೆಗೆಯಬಹುದು. ಈಗ,ಬಂಡಿಯ ಬಿಸಿಕವನ್ನು (Heater) ಕೂಡ ಶುರು ಮಾಡಿ, ಬಂಡಿ ಒಣಗಿಸಬಹುದು. ಆದರೆ ಬಿಸಿಕದ ಬಳಕೆಯಿಂದ ಹೆಚ್ಚಿನ ಉರುವಲು ಪೋಲಾಗುತ್ತದೆ. ಇದರ ಬದಲಾಗಿ, ತೇವಕಳೆಕದ (Dehumidifier) ನೆರವಿನಿಂದ ಬಂಡಿಯನ್ನು ಸುಲಭ ಹಾಗೂ ಬಲು ಬೇಗನೆ ಒಣಗಿಸಿಬಹುದು. ಬಂಡಿಯ ಒಳಮೈ ನೀರಿನಲ್ಲಿ ನೆನೆದು ಕೆಟ್ಟ ವಾಸನೆ ಬರುವುದು ಖಚಿತ, ಇದನ್ನು ದೂರವಾಗಿಸಲು ಮೇಲಿನ ಸಾಲುಗಳಲ್ಲಿ ತಿಳಿಸಿದಂತೆ ಅಡುಗೆ ಸೋಡಾ ಮತ್ತು ಕಲಿದ್ದಲು ಪುಡಿಯನ್ನು ಚಿಮುಕಿಸಿದರಾಯಿತು.

ತಿಟ್ಟ ಸೆಲೆ: wikihow