ಅಡಾಸ್ ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ

ಅಡಾಸ್ ಏರ್ಪಾಟಿನ ಬಗ್ಗೆ,  ಈ ಹಿಂದೆ, ಬರಹವೊಂದರಲ್ಲಿ ತಿಳಿಸಿದ್ದೆ. ಅಡಾಸ್ ಎಂದರೇನು, ಅದರಲ್ಲಿ ಎಷ್ಟು ಹಂತಗಳು, ಅದರ ಲಾಭ/ನಷ್ಟಗಳ ಬಗ್ಗೆ ಚರ್ಚೆ ಮಾಡಿದ್ದೆ. ಈ ಬರಹದಲ್ಲಿ ಅಡಾಸ್‌ನ ವಿಶೇಷತೆಯೊಂದನ್ನು ಬಳಸಿಕೊಂಡು ಅದು ಹೇಗೆ ಕೆಲಸ ಮಾಡಲಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ಅಡಾಸ್ ಏರ್ಪಾಟಿನಲ್ಲಿ ಸುಮಾರು 20+ ಹೆಚ್ಚು ವಿಶೇಷತೆಗಳಿದ್ದು, ಅವುಗಳನ್ನು ವಿವಿಧ ಹಂತದ ಅಡಾಸ್‌ಗೆ ತಕ್ಕಂತೆ ಬಂಡಿ ತಯಾರಕರು ತಮ್ಮ ಮಾರುಕಟ್ಟೆಗೆ ತಕ್ಕಂತೆ ಅಳವಡಿಸಿರುತ್ತಾರೆ. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ, ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ, ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ, ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ, ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ ಹೀಗೆ ಹಲವು ವಿಶೇಷತೆಗಳಿವೆ.

ಇಲ್ಲಿ ಉದಾಹರಣೆಗೆ ಆಟೋಮ್ಯಾಟಿಕ್ ಎಮೆರ್ಜನ್ಸಿ ಬ್ರೇಕಿಂಗ್(Automatic Emergency Braking) ಅಂದರೆ ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆಯ ವಿಶೇಷತೆ ಹೇಗೆ ಕೆಲಸ ಮಾಡಲಿದೆ ನೋಡೋಣ.

  •  ಮೊದಲು ಈ ವಿಶೇಷತೆ ಹೊಂದಿರುವ ಕಾರು, ತನ್ನ ಮುಂದಿರುವ ಕಾರು/ಗಾಡಿಗಳನ್ನು ಗುರುತಿಸುತ್ತದೆ. ಮುಂದಿರುವ ಗಾಡಿ ಕೆಲವೇ ಅಡಿಗಳಷ್ಟು ದೂರವಿದ್ದು, ಗಾಡಿಯ ವೇಗ ಸುಮಾರು 30 ಕಿಮೀ/ಘಂಟೆಗೆ** ಹಾಗೂ ಅದಕ್ಕಿಂತ ಕಡಿಮೆ ಇದೆಯೇ ಎಂಬುದನ್ನು ಅರಿಯುತ್ತದೆ. ಆಗ ಅಡಾಸ್‌ನ ಈ ವಿಶೇಷತೆ, ತುರ್ತು ಬ್ರೇಕಿಂಗ್‌ಗೆ ಸಿದ್ಧಗೊಳ್ಳುತ್ತದೆ.

(**ಇಲ್ಲಿ ತಿಳಿಸಿರುವ ವೇಗದ ಮಿತಿಯು ಕೇವಲ ಉದಾಹರಣೆಗೆ. ವಿವಿಧ ಬಂಡಿ ತಯಾರಕರ ಗಾಡಿಯಲ್ಲಿ ಈ ಮಿತಿಯಲ್ಲಿ ವ್ಯತ್ಯಾಸ ಕಂಡುಬರಬಹುದು.  ಇದು ಗಾಡಿ ತಯಾರಕರ ನಿರ್ಧಾರ)

  •  ಈ ಸಮಯದಲ್ಲಿ ಗಾಡಿ ಓಡಿಸುಗ ಬ್ರೇಕ್ ತುಳಿಗೆಯನ್ನು(Pedal) ತುಳಿಯದೇ ಇದ್ದರೆ, ಓಡಿಸುಗನಿಗೆ ಎಚ್ಚರಿಸಲು ಒಂದೇ ಸಮನೆ ಎಚ್ಚರಿಕೆ ಗಂಟೆ ಕೇಳಿಬರಲಾರಂಭಿಸುತ್ತದೆ ಇಲ್ಲವೇ ಬಂಡಿಯ ತೋರುಮಣೆಯಲ್ಲಿ ಓಡಿಸುಗನಿಗೆ ಕಾಣುವಂತೆ ತುರ್ತು ಸಮಯದ ಸೂಚನೆ ನೀಡುತ್ತದೆ ಇಲ್ಲವೇ ಸಣ್ಣಗೆ ಬ್ರೇಕ್ ಹಾಕಿ ಸುಳಿವು ನೀಡುತ್ತದೆ.
  • ನಂತರ ಗಾಡಿಯ ವೇಗ ಕಡಿತಗೊಳಿಸಿ, ಓಡಿಸುಗ ತುರ್ತು ಪರಿಸ್ತಿತಿಗೆ ಸ್ಪಂದಿಸಲು ತುಸು ಸಮಯ ನೀಡುತ್ತದೆ. ಓಡಿಸುಗ ಕೂಡಲೇ ಬ್ರೇಕ್ ಒತ್ತಿದರೆ, ಬ್ರೇಕ್ ಏರ್ಪಾಟು ಸ್ಪಂದಿಸಲು ಸಹಕಾರ ನೀಡುತ್ತದೆ.
  • ಈ ಪರಿಸ್ತಿತಿಯಲ್ಲಿ ಪ್ರತಿ ಕ್ಷಣದಲ್ಲೂ ಮುಂದಿರುವ ಗಾಡಿಯೊಂದಿಗೆ ಗುದ್ದುವಿಕೆ ತಡೆಯಲು, ಮುಂದಿರುವ ಗಾಡಿಯಿಂದ ಈ ಗಾಡಿ ಎಷ್ಟು ದೂರವಿದೆ ಎಂಬುದರ ಲೆಕ್ಕಾಚಾರ ನಡೆಯುತ್ತಿರುತ್ತದೆ. 
  •  ಆಗಲೂ ಓಡಿಸುಗ ಬ್ರೇಕ್‌ನ ಸಂಪೂರ್ಣವಾಗ ಹಾಕಿ ಗಾಡಿ ತಡೆದು ನಿಲ್ಲಿಸದೇ ಇದ್ದರೆ, ಈ ವಿಶೇಷತೆ ತಾನಾಗಿಯೇ ಬಂಡಿ ತಡೆದು ನಿಲ್ಲಿಸಿ ಆಗಬಲ್ಲ ಅನಾಹುತವನ್ನು ತಡೆಗಟ್ಟುತ್ತದೆ.

ಇದೆಲ್ಲವೂ ಕೆಲವೇ ಕ್ಷಣಗಳಲ್ಲಿ ನಡೆಯುತ್ತದೆ. ಪ್ರತಿ ಮಿಲಿಸೆಕೆಂಡ್‌ಗಳ ಮಾಹಿತಿ ರವಾನೆ ಮತ್ತು ಅದಕ್ಕೆ ಸ್ಪಂದನೆಗಳನ್ನು ಮಾಡಲು ಅಡಾಸ್‌ನ ವಿಶೇಷತೆಯ ಗಣಕಗಳು ಮಾಡುತವೆ. ಇದಕ್ಕೆ ಎಲ್‌ಆರ್‌ಆರ್(LRR) ಅಂದರೆ ಲಾಂಗ್‌ ರೇಂಜ್ ರೇಡಾರ್ ಮತ್ತು ಮುಂಬದಿಯ ಕ್ಯಾಮೆರಾಗಳು ಬಳಸಲ್ಪಡುತ್ತವೆ. ಅಡಾಸ್ ಏರ್ಪಾಟಿನಲ್ಲಿರುವ ರೇಡಾರ್ ಮುಂದಿರುವ ಗಾಡಿ/ಜನರು/ಜಾನುವಾರುಗಳ ದೂರ ಅಳೆಯಲು ನೆರವಾದರೆ, ಕ್ಯಾಮೆರಾಗಳು ಮುಂದಿರುವ ಪರಿಸ್ತಿತಿಯ ನೇರ ನೋಟವನ್ನು ಗಣಕಗಳಿಗೆ ಕಳುಹಿಸುತ್ತ ರೇಡಾರ್ ಜೊತೆ ಒಟ್ಟಾಗಿ ಕೆಲಸ ಮಾಡುತ್ತವೆ.  ಈ ತುರ್ತು ಸಮಯದ ಬ್ರೇಕಿಂಗ್ ವಿಶೇಷತೆಯನ್ನು ಒಂದು ಬ್ಲಾಕ್ ಡೈಗ್ರಾಮ್(Block Diagram) ಮೂಲಕ ತಿಳಿಸಬೇಕೆಂದರೆ ಕೆಳಗಿನಂತಿರುತ್ತದೆ.

ಬಹುತೇಕ ಅಡಾಸ್ ಏರ್ಪಾಟಿನ ವಿಶೇಷತೆಗಳು ಇದೇ ತೆರನಾಗಿ ಕೆಲಸಮಾಡುತ್ತವೆ. ಮೊದಲು ಸುತ್ತಲಿನ ವಾತಾವರಣವನ್ನು ರೇಡಾರ್ ಮುಂತಾದ ಅರಿವಿಕಗಳ ಮೂಲಕ ಅರಿತು, ಅದನ್ನು ಪ್ರಕ್ರಿಯೆಗೊಳಿಸಿ ಓಡಿಸುಗನಿಗೆ ಎಚ್ಚರಿಸಿ, ಕೊನೆಯಲ್ಲಿ ತಕ್ಕ ಕೆಲಸ ಮಾಡುತ್ತವೆ.