ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

ರತೀಶ ರತ್ನಾಕರ.

 

Honeybee_landing_on_milkthistle02

ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಷ್ಟು ಸುಲಭವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ ಎಂದಿನ ಕೆಲಸಗಳಿಗೆ ಹುರುಪನ್ನು ಪಡೆದುಕೊಳ್ಳಲು ಹೂವಿನ ಜೇನನ್ನು ಸವಿಯುತ್ತವೆ. ಚಳಿಗಾಲ ಇಲ್ಲವೇ ಮೇವು ಸಿಗದ ಹೊತ್ತಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇರಲೆಂದು ಜೇನನ್ನು ಗೂಡಿನಲ್ಲಿ ಕೂಡಿಟ್ಟು ಕಾಪಾಡುತ್ತವೆ.

ಮೊದಲಿಗೆ ಬೇಹುಗಾರ ಹುಳಗಳು ಮೇವು ಸಿಗುವ ಜಾಗವನ್ನು ಹುಡುಕಿ ಹೂವಿನ ಬಂಡು(pollen) ಮತ್ತು ಸಿಹಿಯನ್ನು ಹೊತ್ತು ಗೂಡಿಗೆ ಹಿಂದಿರುಗುತ್ತವೆ. ಗೂಡಿನಲ್ಲಿ ಉಳಿದ ಜೇನುಹುಳಗಳಿಗೆ ‘ಜೇನುಹುಳದ ಕುಣಿತ‘ದ ಮೂಲಕ ಮೇವು ಸಿಗುವ ಜಾಗವನ್ನು ತಿಳಿಸುತ್ತವೆ. ಬಳಿಕ ಉಳಿದ ದುಡಿಮೆಗಾರ ಜೇನುಹುಳಗಳು ಮೇವನ್ನು ಹೊತ್ತು ತರಲು ಹೊರಡುತ್ತವೆ. ಒಂದು ಜೇನುಹುಳವು ಗೂಡಿನಿಂದ ಸುಮಾರು 4 ಕಿಲೋಮೀಟರ್ ದೂರದವರೆಗೂ ಮೇವನ್ನು ಅರಸುತ್ತಾ ಸಾಗುತ್ತದೆ. ಹುಳುವೊಂದು ಒಂದು ಬಾರಿಗೆ ಸುಮಾರು 35-40 ನಿಮಿಷಗಳವರೆಗೆ ಹಾರಾಟವನ್ನು ನಡೆಸಬಲ್ಲದು. ಒಂದೇ ಬಗೆಯ ಸುಮಾರು 200-300 ಹೂವುಗಳಿಂದ 0.05 ಗ್ರಾಂ ನಷ್ಟು ಸಿಹಿಯನ್ನು ಜೇನುಹುಳುವೊಂದು ತನ್ನ ಒಂದು ಹಾರಾಟದಲ್ಲಿ ಹೊತ್ತುತರಬಲ್ಲದು. 0.05 ಗ್ರಾಂ ಸಿಹಿಯು ಜೇನುಹುಳದ ತೂಕದ ಅರ್ಧದಷ್ಟಾಗಿದೆ. ಒಂದು ದಿನದಲ್ಲಿ ಒಂದು ಹುಳವು ಇಂತಹ 10 ಹಾರಾಟಗಳನ್ನು ನಡೆಸಿ 0.5 ಗ್ರಾಂ ನಷ್ಟು ಸಿಹಿಯನ್ನು ಗೂಡಿಗೆ ಸಾಗಿಸಬಲ್ಲದು. ಒಟ್ಟಾರೆಯಾಗಿ ಸುಮಾರು 10,000 ಹುಳಗಳಿರುವ ಒಂದು ಗೂಡಿನಲ್ಲಿ ಒಂದು ದಿನಕ್ಕೆ ಸುಮಾರು 5 ಕಿಲೋ.ಗ್ರಾಂ ಬಂಡನ್ನು ಕೂಡಿಡಲಾಗುತ್ತದೆ. ಈ 5 ಕಿಲೋ.ಗ್ರಾಂ ಬಂಡು ಬಳಿಕ 1.50 ಕಿ.ಗ್ರಾಂ ಜೇನಾಗಿ ಗೂಡಿನಲ್ಲಿ ಮಾರ್ಪಾಡಗುತ್ತದೆ.

ಮೇವಿಗಾಗಿ ಹಾರಾಟ ನಡೆಸುವ ಮುನ್ನ ಹೊರಗಿನ ಗಾಳಿಪಾಡು, ಮೇವಿನ ಗುಣಮಟ್ಟ, ಸಿಗುವ ದೂರ ಮತ್ತು ಮೇವಿನ ಅಳವಿ(quantity)ಯ ಲೆಕ್ಕಾಚಾರವನ್ನು ಹಾಕುತ್ತವೆ. ಮೇವಿನ ವಿವರವನ್ನು ಹುಳಗಳು ಬೇಹುಗಾರ ಹುಳಗಳಿಂದ ಪಡೆಯುತ್ತವೆ. ಬಿಸುಪು (temperature) ನೋಡಿಕೊಂಡು ಜೇನುಹುಳಗಳು ನಡೆಸುವ ಕೆಲಸಗಳು ಹೀಗಿವೆ;

  • < 8 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುವುದಿಲ್ಲ. ಗೂಡನ್ನು ಸುತ್ತುವರಿದು ಗೂಡಿನ ಬಿಸುಪನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗುತ್ತವೆ
  • 8 – 16 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುತ್ತವೆ ಆದರೆ ತುಂಬಾ ಹೆಚ್ಚಿನ ಹಾರಾಟ ನಡೆಸುವುದಿಲ್ಲ
  • 16 – 32 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸಲು ಸರಿಯಾದ ಬಿಸುಪು. ಹೆಚ್ಚಿನ ಹಾರಾಟ ನಡೆಯುತ್ತದೆ
  • 32 ಡಿಗ್ರಿ ಸೆ. ಗಿಂತ ಹೆಚ್ಚು – ಮೇವಿಗಾಗಿ ಹಾರಾಟ ನಡೆಸುವುದಿಲ್ಲ ಬದಲಾಗಿ ನೀರಿಗಾಗಿ ಹೆಚ್ಚಿನ ಹಾರಾಟ ನಡೆಸುತ್ತವೆ

ಮೇವಿಗಾಗಿ ಹಾರುವ ಮುನ್ನ ಗೂಡಿನಲ್ಲಿರುವ ಜೇನನ್ನು ಸವಿದು ಹಾರುತ್ತವೆ. ಇದರಿಂದ ಅವು ಕೆಲವು ಹೊತ್ತುಗಳ ಕಾಲ ಹಾರಟವನ್ನು ನಡೆಸಬಹುದು. ಜೇನುಹುಳದ ಜಾಡುಹಿಡಿದು ಬರಹದಲ್ಲಿ ನೋಡಿದಂತೆ, ಜೇನುಹುಳದ ಕಣ್ಣು, ಕಾಲು, ರೆಕ್ಕೆ ಒಟ್ಟಾರೆಯಾಗಿ ಜೇನು ಹುಳದ ಮೈ ಅದಕ್ಕೆ ಮೇವು ಹುಡುಕಲು ನೆರವಾಗುವಂತಿದೆ. ಅದರ ಮೈ ಅಂಗಗಳು ಮೇವನ್ನು ಹುಡುಕಲು ಹೇಗೆ ನೆರವಾಗುತ್ತವೆ ಎಂಬುದನ್ನು ನೋಡೋಣ.

ರೆಕ್ಕೆಗಳು:
ಜೇನುಹುಳಕ್ಕೆ ಮುಂಬಾಗದ ರೆಕ್ಕೆ ಮತ್ತು ಹಿಂಬಾಗದ ರೆಕ್ಕೆ ಎಂಬ ಎರಡು ಜೋಡಿ ರೆಕ್ಕೆಗಳಿವೆ. ಸಾಮಾನ್ಯವಾಗಿ ಇತರೆ ಹುಳಗಳು ತಮ್ಮ ರೆಕ್ಕೆಗಳನ್ನು ಹೆಚ್ಚು ಬೀಸಿ ಬಡಿಯುತ್ತವೆ, ಆದರೆ ಜೇನುಹುಳಗಳು ರೆಕ್ಕೆಗಳನ್ನು ಹೆಚ್ಚು ಬೀಸುವ ಬದಲಾಗಿ ಹೆಚ್ಚು ಬಾರಿ ಪಟಪಟನೆ ಬಡಿಯುತ್ತವೆ. ಇತರೆ ಹುಳಗಳು ಸೆಕೆಂಡಿಗೆ 200 ಬಾರಿ ರೆಕ್ಕೆಯನ್ನು ಬಡಿದರೆ ಜೇನುಹುಳಗಳು 240 ಬಾರಿ ರೆಕ್ಕೆಯನ್ನು ಬಡಿಯುತ್ತವೆ. ಈ ರೆಕ್ಕೆ ಬಡಿತದಿಂದಲೇ ಜೇನುಹುಳಗಳು ‘ಜುಂಯ್’ ಎಂಬ ಸದ್ದನ್ನು ಮಾಡುವುದು. ಸಾಮಾನ್ಯ ಹುಳದ ರೆಕ್ಕೆ ಬಡಿತದ ಕೋನವು 145-165 ಡಿಗ್ರಿ ಇದ್ದರೆ ಜೇನುಹುಳದ ರೆಕ್ಕೆ ಬಡಿತದ ಕೋನ ಕೇವಲ 90 ಡಿಗ್ರಿ ಇರುತ್ತದೆ (ಕೆಳಗಿನ ಚಿತ್ರವನ್ನು ಗಮನಿಸಿ).Jenu haarata

ಜೇನುಹುಳದ ಮೈಗೆ ಹೋಲಿಸಿದರೆ ಅದರ ರೆಕ್ಕೆ ಚಿಕ್ಕದಾಗಿದೆ ಹಾಗಾಗಿ ಅದು ಬಡಿತವನ್ನು ಹೆಚ್ಚು ಮಾಡಿ ಹಾರಾಟ ನಡೆಸಬೇಕಾಗುತ್ತದೆ. ಹಾಗಿದ್ದರೂ ಜೇನುಹುಳವು ದೂರಕ್ಕೆ ಹಾರಬಲ್ಲದು, ತನ್ನ ತೂಕದ ಅರ್ಧದಷ್ಟು ತೂಕವಿರುವ ಹೂವಿನ ಬಂಡನ್ನು ಹೊತ್ತು ತರಬಲ್ಲದು!.

ಕಣ್ಣುಗಳು:
ಜೇನುಹುಳಕ್ಕಿರುವ ಸುಳುಗಣ್ಣು(Simple eyes) ಮತ್ತು ಕೂಡುಗಣ್ಣು(compound eyes)ಗಳು ಮರ-ಗಿಡ-ಬಳ್ಳಿಗಳ ನಡುವೆ ಇರುವ ಹೂವುಗಳನ್ನು ಗುರುತಿಸಲು ನೆರವಾಗುವಂತಿವೆ. ಕಣ್ಣುಗಳು ಗುಂಡಾಗಿರುವುದರಿಂದ ತಾನು ಸಾಗುತ್ತಿರುವ ದಾರಿ ಮತ್ತು ನೇಸರನ ನಡುವಿರುವ ಕೋನವನ್ನು ತಿಳಿದುಕೊಳ್ಳಲು ಇವುಗಳಿಗೆ ನೆರವಾಗಿವೆ. ಈ ಹುಳಗಳ ಕಣ್ಣುಗಳು ಕಡುನೇರಳೆ ಬಣ್ಣಗಳನ್ನು ನೋಡುವ ಕಸುವನ್ನು ಹೊಂದಿವೆ. ಜೇನುಹುಳಗಳು ಯಾವ ಯಾವ ಬಣ್ಣಗಳನ್ನು ಗುರುತಿಸುತ್ತವೆ ಎಂದು ತಿಳಿಯುವ ಮೊದಲು ಬಣ್ಣಗಳ ಬಗ್ಗೆ ಕೆಲವು ವಿವರಗಳನ್ನು ನಾವು ಅರಿಯಬೇಕಿದೆ. ಅವುಗಳನ್ನು ಈ ಕೆಳಗೆ ನೀಡಲಾಗಿದೆ.
ಕೆಳಗಿನ ಚಿತ್ರದಲ್ಲಿ ಮನುಷ್ಯರ ಕಣ್ಣಿಗೆ ಕಾಣುವ ಮತ್ತು ಕಣ್ಣಿಗೆ ಕಾಣದ ಬಣ್ಣಗಳ ಪಟ್ಟಿಯನ್ನು ನೀಡಲಾಗಿದೆ. ನೇಸರನಿಂದ ಬರುವ ಬೆಳಕಿನಲ್ಲಿ ಸುಮಾರು 700 ನ್ಯಾನೋ ಮೀಟರ್ ನಿಂದ 400 ನ್ಯಾನೋ ಮೀಟರ್ ಅಲೆಯಗಲ (Wave length) ಇರುವ ಬೆಳಕು ಬೇರೆ ಬೇರೆ ಬಣ್ಣಗಳಾಗಿ (ಕೆಂಕಿಹಹನೀನೇ) ನಮ್ಮ ಕಣ್ಣಿಗೆ ಕಾಣುವಂತಹವು. 400 ನ್ಯಾನೋ ಮೀ. ಗಿಂತ ಕಡಿಮೆ ಇರುವ ಇಲ್ಲವೇ 700 ನ್ಯಾನೋ ಮೀ. ಗಿಂತ ಹೆಚ್ಚು ಅಲೆಯಗಲ ಹೊಂದಿರುವ ಬಣ್ಣಗಳನ್ನು ನಮ್ಮ ಕಣ್ಣು ನೋಡಲಾರದು.Light Spectrum

ಇನ್ನು ಜೇನುಹುಳಗಳ ವಿಷಯಕ್ಕೆ ಬಂದರೆ ಅವು ಸುಮಾರು 600 ರಿಂದ 300 ನ್ಯಾನೋ ಮೀ. ಅಲೆಯಗಲ ಹೊಂದಿರುವ ಬಣ್ಣಗಳನ್ನು ಕಾಣಬಲ್ಲವು. ಅಂದರೆ ಮನುಷ್ಯನಿಗೆ ಹೋಲಿಸಿದರೆ ಜೇನುಹುಳಗಳು ಕಡುನೇರಳೆ ಬಣ್ಣವನ್ನು ಕಾಣಬಲ್ಲವು ಆದರೆ ಕೆಂಪು ಬಣ್ಣವನ್ನು ಕಾಣಲಾರವು! ಉಳಿದಂತೆ ಕಿತ್ತಳೆ, ಹಳದಿ, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳನ್ನು ಜೇನುಹುಳದ ಕಣ್ಣು ಗುರುತಿಸಬಲ್ಲದು. ಹಸಿರು ಹಾಸಿನ ಮೇಲೆ ಕೆಂಪು ಹೂವುಗಳಿದ್ದರೆ ಜೇನುಹುಳಗಳು ಅದನ್ನು ಗುರುತಿಸದೇ ಹೋಗಬಹುದು ಆದರೆ ಆ ಕೆಂಪು ಬಣ್ಣದ ಹೂವುಗಳು ಅವುಗಳಿಗೆ ಕಿತ್ತಳೆ ಇಲ್ಲವೇ ಕಂದು ಬಣ್ಣದಲ್ಲಿ ಕಾಣವುದು.Jenu kannu

ಜೇನುಹುಳಗಳು ಕಡುನೇರಳೆ ಬಣ್ಣಗಳನ್ನು ನೋಡಬಹುದಾಗಿರುವುದರಿಂದ ಹೂವಿನ ಆಳದಲ್ಲಿ ಹುದುಗಿರುವ ಬಂಡನ್ನು ಸುಲಭವಾಗಿ ಗುರುತಿಸಬಲ್ಲವು. ಸಾಮಾನ್ಯ ಕಣ್ಣಿಗೆ ಹಾಗು ಕಡುನೇರಳೆ ಬೆಳಕಿನಲ್ಲಿ ಕಾಣಬಹುದಾದ ಹೂವುಗಳ ಚಿತ್ರವನ್ನು ಈ ಕೆಳಗೆ ನೀಡಲಾಗಿದೆ. ಕಡುನೇರಳೆ ಬೆಳಕಿನಲ್ಲಿ ಕಾಣುವ ಹೂವಿನ ಎಸಳುಗಳು ಜೇನುಹುಳಗಳಿಗೆ ತುಂಬಾ ಸುಲಭವಾಗಿ ಕಾಣುವುದನ್ನು ನಾವು ಗಮನಿಸಬಹುದು.ultra - hoovuಹೂವಿನ ದಳಗಳ ಮೇಲೆ ಹೋಗಿ ಕೂರುವ ಹುಳವು ಮೊದಲು ತನ್ನ ಉದ್ದವಾದ ನಾಲಗೆಯನ್ನು ಬಳಸಿ ಹೂವಿನ ಬುಡದಲ್ಲಿರುವ ಸಿಹಿಯನ್ನು ಹೀರುತ್ತವೆ. ಹೂವಿನ ಜೇನು ಇಲ್ಲವೇ ಸಿಹಿಯು ನೀರಿನ ರೂಪದಲ್ಲಿದ್ದು ಸುಕ್ರೋಸ್, ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಸಕ್ಕರೆಯ ಅಂಶಗಳನ್ನು ಹೊಂದಿರುತ್ತದೆ. ಇದಲ್ಲದೇ ಈ ಸಿಹಿಯಲ್ಲಿ, ಮುನ್ನು (protein), ಉಪ್ಪು, ಹುಳಿ ಮತ್ತು ಕೆಲವು ಎಣ್ಣೆಯ ಅಂಶಗಳನ್ನು ಒಳಗೊಂಡಿರುತ್ತದೆ. ಹೂವಿನ ತಳಿ ಹಾಗು ಪಂಗಡದ ಆಧಾರದ ಮೇಲೆ ಅವುಗಳ ಸಿಹಿಯಲ್ಲಿನ ಸಕ್ಕರೆಯ ಅಂಶವು ಸುಮಾರು 3 ರಿಂದ 80 % ವರೆಗೂ ಬೇರೆ ಬೇರೆಯಾಗಿರುತ್ತದೆ. ಹೂವಿನ ಸಿಹಿಯಲ್ಲಿನ ಸಕ್ಕರೆಯು 30% ಗಿಂತ ಕಡಿಮೆಯಿದ್ದರೆ ಅದನ್ನು ಜೇನುಹುಳಗಳು ಹೀರಿಕೊಳ್ಳುವುದಿಲ್ಲ. ಜೇನುಹುಳದ ನಾಲಗೆಯು ಮಾನವನ ನಾಲಗೆಯಷ್ಟು ಬಗೆ ಬಗೆಯ ರುಚಿಗಳನ್ನು ಗುರುತಿಸುವ ಕಸುವನ್ನು ಹೊಂದಿಲ್ಲ ಆದರೆ ಸಿಹಿಯನ್ನು ಗುರುತಿಸುವ ಕಸುವು ತುಂಬಾ ಚೆನ್ನಾಗಿ ರೂಪುಗೊಂಡಿದೆ. ಚಿಕ್ಕ ಚಿಕ್ಕ ಕೂದಲುಗಳಿರುವ ಉದ್ದವಾದ ನಾಲಗೆಯು ಹೂವಿನಲ್ಲಿರುವ ಸಿಹಿಯು ಎಷ್ಟರ ಮಟ್ಟಿಗೆ ಸಕ್ಕರೆಯನ್ನು ಹೊಂದಿದೆ ಎಂದು ಚೆನ್ನಾಗಿ ಗುರುತಿಸಬಲ್ಲದು.

ಹೂವಿನಿಂದ ಹೀರಿಕೊಂಡ ಸಿಹಿಯನ್ನು ಜೇನುಹುಳವು ತನ್ನ ಹೊಟ್ಟೆಯಲ್ಲಿ ತುಂಬಿಕೊಳ್ಳುತ್ತದೆ. ಜೇನುಹುಳದ ಹೊಟ್ಟೆಯ ಸುಮಾರು 90% ಭಾಗದಷ್ಟು ಜಾಗವನ್ನು ಇವು ಸಿಹಿಯನ್ನು ತುಂಬಿಕೊಳ್ಳಲು ಬಳಸುತ್ತವೆ. ಮೊದಲೇ ತಿಳಿಸಿದಂತೆ ಹೊಟ್ಟೆಯಲ್ಲಿ ಸುಮಾರು 0.05 ಗ್ರಾಂ ನಷ್ಟು ಸಿಹಿಯನ್ನು ತುಂಬಿಕೊಳ್ಳಬಹುದು. ಹೊಟ್ಟೆಯಲ್ಲಿರುವ ಸಿಹಿಚೀಲ(nectar sac) ಸಿಹಿಯನ್ನು ತುಂಬಿಕೊಳ್ಳಲು ನೆರವಾಗುತ್ತದೆ. ನಾಲಗೆಯಿಂದ ಹೀರಿಕೊಳ್ಳುವ ಸಿಹಿಯು ತಿನಿಸುಗೊಳವೆಯ (esophagus) ಮೂಲಕ ನೇರವಾಗಿ ಸಿಹಿಚೀಲಕ್ಕೆ ಬರುತ್ತದೆ. ಈ ಸಿಹಿ ಚೀಲಕ್ಕೆ ಒಂದು ತೆರ್ಪು (valve) ಇರುತ್ತದೆ ಇದು ಬಂಡು ಚೀಲವನ್ನು ಹೊಟ್ಟೆಯ ಅರಗಿಸುವ ಭಾಗಗಳಿಂದ (ventriculus) ಬೇರ್ಪಡಿಸುತ್ತವೆ. ಹುಳಗಳು ಗೂಡಿಗೆ ಹಿಂದಿರುಗಿ ಹಾರುವಾಗ ಹೊಟ್ಟೆಯಲ್ಲಿರುವ ಸ್ವಲ್ಪ ಸಿಹಿಯನ್ನು ಅರಗಿಸಿಕೊಂಡು ಹಾರಲು ಹುರುಪನ್ನು ಪಡೆದುಕೊಳ್ಳುತ್ತವೆ. ಆಗ ಸಿಹಿಚೀಲದ ತೆರ್ಪು ತೆರೆದುಕೊಂಡು ಬೇಕಾದಷ್ಟು ಸಿಹಿಯು ಅರಗಿಸುವ ಭಾಗಗಳಿಗೆ ಹರಿಯುತ್ತದೆ. ಹಾಗಾಗಿ ಹೂವಿನಿಂದ ಹೊಟ್ಟೆ ಬಿರಿಯುವಷ್ಟು ಸಿಹಿಯನ್ನು ಹೀರಿಕೊಳ್ಳುವ ಹುಳಗಳು ಗೂಡನ್ನು ತಲುಪುವಾಗ ಅರೆಹೊಟ್ಟೆಯಾಗಿರುವ ಸಾಧ್ಯತೆಗಳು ಇರುತ್ತವೆ. ಹೂವಿನಿಂದ ಸಿಹಿಯನ್ನು ಹೀರಲು ನೆರವಾಗುವ ನಾಲಗೆ ಹಾಗು ಸಿಹಿಯನ್ನು ತುಂಬಿಕೊಳ್ಳುವ ಹೊಟ್ಟೆಯ ಚಿತ್ರಗಳನ್ನು ಈ ಕೆಳಗೆ ನೋಡಬಹುದು.anatomyಹೂವಿನಿಂದ ಸಿಹಿಯನ್ನಷ್ಟೆ ಅಲ್ಲದೇ ಹೂವಿನ ಬಂಡನ್ನು(pollen) ಕೂಡ ಹುಳಗಳು ತುಂಬಿಸಿಕೊಳ್ಳುತ್ತವೆ. ಜೇನುಹುಳದ ಹಿಂಗಾಲುಗಳಲ್ಲಿರುವ ಬಂಡಿನ ಬುಟ್ಟಿ (Pollen Basket)ವನ್ನು ಬಳಸುತ್ತವೆ. ಬಂಡು ಚೀಲವು ಚಿಕ್ಕ ಚಿಕ್ಕ ಕೂದಲುಗಳಿಂದ ಕೂಡಿ ಆಗಿರುತ್ತದೆ. ಹೂವಿನ ಬಂಡನ್ನು ಗೂಡಿನಲ್ಲಿರುವ ಮರಿಹುಳ(larvae)ಗಳಿಗೆ ತಿನಿಸಲು ಬಳಸುತ್ತವೆ. ಗೂಡಿನ ಮರಿಹುಳಗಳಿಗೆ ಇದೇ ಊಟವಾಗಿರುತ್ತದೆ. ಆದರೆ ದುಡಿಮೆಗಾರ ಜೇನುಹುಳಗಳು ಬಂಡನ್ನು ತಿನ್ನುವುದಿಲ್ಲ. ಹೂವಿನಿಂದ ಹೂವಿಗೆ ಹಾರಿ ಬಂಡನ್ನು ಹಾಗು ಸಿಹಿಯನ್ನು ಪಡೆಯುವುದರಿಂದ ಒಂದು ಹೂವಿನ ಬಂಡು ಇನ್ನೊಂದು ಹೂವಿಗೆ ಸೇರಿ ಹೂದುಂಬುಗೆ(fertilization) ನಡೆಯುತ್ತದೆ. ಹೆಚ್ಚಾಗಿ ಜೇನುಹುಳಗಳು ಒಂದು ಬಾರಿಗೆ ಒಂದೇ ಬಗೆಯ ಹೂವುಗಳಿಂದ ಮೇವನ್ನು ಪಡೆಯುತ್ತಿರುತ್ತವೆ ಇದರಿಂದ ಹೂದುಂಬುಗೆ ಚೆನ್ನಾಗಿ ನಡೆಯುತ್ತದೆ. ಹೂವು ಹಾಗು ಜೇನುಹುಳಗಳು ಒಂದಕ್ಕೊಂದು ಹೀಗೆ ನೆರವಾಗುತ್ತವೆ.

Apis.mellifera.-.lindsey

ಜೇನುಹುಳದ ಅರಿಗೊಂಬುಗಳು (Antennea) ಮನುಷ್ಯನಿಗಿಂತ 40 ಪಟ್ಟು ಹೆಚ್ಚು ಕಂಪನ್ನು ಗುರುತಿಸುವ ಕಸುವನ್ನು ಹೊಂದಿವೆ. ಬಗೆ ಬಗೆಯ ಹೂವುಗಳನ್ನು ಅವುಗಳ ಕಂಪಿನ ಮೂಲಕ ಗುರುತಿಸಲು ಇದು ನೆರವಾಗುತ್ತದೆ. ಇದಲ್ಲದೇ ಜೇನುಹುಳಗಳಿಗೆ ಹೊತ್ತಿನ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಗೂಡಿನಿಂದ ಮೇವಿಗಾಗಿ ಹಾರುವಾಗ ನೇಸರನ ದಿಕ್ಕು ಮತ್ತು ಹೂವಿನ ದಿಕ್ಕನ್ನು ಕಂಡು ಹಿಡಿದಿರುತ್ತವೆ (ಜೇನುಹುಳದ ಕುಣಿತ ಬರಹದಲ್ಲಿ ಹೆಚ್ಚಿನ ವಿವರವಿದೆ). ಸುಮಾರು ಒಂದು ಗಂಟೆಯ ಹಾರಾಟ ನಡೆಸಿ ಗೂಡಿಗೆ ಹಿಂದಿರುಗುವಾಗ ಗೂಡಿನ ದಾರಿಯನ್ನು ನೇಸರ ಇರುವ ದಿಕ್ಕಿನ ನೆರವಿನಿಂದ ಪಡೆಯ ಬೇಕಾಗುತ್ತದೆ. ಆದರೆ ನೇಸರನ ಜಾಗ ಬದಲಾಗಿರುತ್ತದೆ ಮತ್ತು ಹುಳಗಳು ತಮ್ಮ ಗೂಡಿನ ದಾರಿ ಕಂಡುಕೊಳ್ಳುವಾಗ ನೇಸರನ ಜಾಗವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗಾಗಿ ಇವುಗಳಿಗೆ ಹೊತ್ತಿನ ಅರಿವು ಚೆನ್ನಾಗಿರಬೇಕಾಗುತ್ತದೆ.

ಮೇವಿಗಾಗಿ ಹಾರಾಟ ನಡೆಸಿ ಹೂವಿನಿಂದ ಸಿಹಿ ಹಾಗು ಬಂಡನ್ನು ಹೊತ್ತು ತರುವ ಜೇನುಹುಳಗಳು ಸಿಹಿಯನ್ನು ಜೇನಾಗಿ ಹೇಗೆ ಮಾರ‍್ಪಾಡುಗೊಳಿಸುತ್ತವೆ? ಜೇನಿನ ಹಿಂದಿರುವ ತಿರುಳೇನು? ಜೇನನ್ನು ಹೇಗೆ ಕಾಪಾಡುತ್ತವೆ? ಈ ಎಲ್ಲಾ ವಿವರಗಳನ್ನು ಮುಂದಿನ ಬರಹಗಳಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, , insect.tamu.eduiflscience.com)

ಜೇನುಹುಳ ಕಚ್ಚುವುದಿಲ್ಲ ಚುಚ್ಚುವುದು!

ರತೀಶ ರತ್ನಾಕರ.

three.bees.finger

ಸುದ್ಧಿ ಹಾಳೆಯಲ್ಲೋ, ನಿಮಗೆ ಗೊತ್ತಿರುವ ಕಡೆಯಿಂದಲೋ ಜೇನುಹುಳದಿಂದ ಕಚ್ಚಿಸಿಕೊಂಡವರ ಬಗ್ಗೆ ಕೇಳಿರುತ್ತೀರಿ ಇಲ್ಲವೇ ನೀವೇ ನೋಡಿರುತ್ತೀರಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೀವೇ ಕಚ್ಚಿಸಿಕೊಂಡಿರಲೂಬಹುದು! ಜೇನುಹುಳಗಳು ಕಚ್ಚುವುದು ಎಂದರೆ ಅವು ತಮ್ಮ ಬಾಯಿಯಿಂದ ಕಚ್ಚುತ್ತವೆ ಎಂದು ಅಂದುಕೊಂಡಿರಬಹುದು. ದಿಟವಾಗಿ ಹೇಳುವುದಾದರೆ ಜೇನುಹುಳಗಳು ಬಾಯಿಂದ ಕಚ್ಚುವುದಿಲ್ಲ ಬದಲಾಗಿ ಕೊಂಡಿಯಿಂದ ಚುಚ್ಚುತ್ತವೆ! ಚೇಳು ತನ್ನ ಬಾಲದ ಕೊಂಡಿಯಲ್ಲಿರುವ ನಂಜಿನಿಂದ ಹೇಗೆ ಕುಟುಕುವುದೋ ಹಾಗೆಯೇ ಜೇನುಹುಳವು ತನ್ನ ಕೆಳಹೊಟ್ಟೆಯ ತುದಿಯಲ್ಲಿರುವ ಕೊಂಡಿ(Sting)ಯಿಂದ ಕುಟುಕುವುದು! ಬನ್ನಿ, ಈ ಕುರಿತು ಮತ್ತಷ್ಟು ತಿಳಿಯೋಣ.

ಗೂಡಿನಲ್ಲಿ ತನ್ನ ಬದುಕನ್ನು ನಡೆಸುವ ಜೇನುಹುಳಗಳಿಗೆ ಹೊರಗಿನ ಪ್ರಾಣಿಗಳಿಂದ ತೊಂದರೆ ಎದುರಾದರೆ, ತಮ್ಮನ್ನು ಮತ್ತು ಗೂಡನ್ನು ಕಾಪಾಡಿಕೊಳ್ಳಲು ತಮ್ಮ ಕೊಂಡಿಯಿಂದ ಪ್ರಾಣಿಯನ್ನು ಚುಚ್ಚುತ್ತವೆ. ಜೇನುಹುಳದ ಕೊಂಡಿಯು ಮುಳ್ಳಿನಂತೆ ಇದ್ದು, ಅದು ಎರಡು ಮೊನಚಾದ ಈಟಿಯಿಂದ ಮಾಡಲ್ಪಟ್ಟಿದೆ. ಈ ಕೊಂಡಿಯು ನಂಜುಗಡ್ಡೆ(venom bulb)ಗೆ ಸೇರಿಕೊಂಡಿರುತ್ತದೆ. ಈ ನಂಜುಗಡ್ಡೆಯು ನಂಜು ಚೀಲದಿಂದ (venom sac) ಬರುವ ನಂಜನ್ನು ಕೂಡಿಟ್ಟುಕೊಂಡಿರುತ್ತದೆ. ನಂಜು ಸುರಿಗೆ(venom gland)ಗಳು ಜೇನುಹುಳಕ್ಕೆ ಬೇಕಾದ ನಂಜನ್ನು ಒಸರುತ್ತವೆ (secrete).

Kondiಇದಲ್ಲದೇ, ಮೊನಚಾದ ಈಟಿಯ ತುದಿಯ ಎರಡೂ ಬದಿಗಳಲ್ಲಿ ಪುಟ್ಟ ರಕ್ಕೆಗಳಂತೆ ಇರುತ್ತದೆ, ಇದು ಕೊಂಡಿಯನ್ನು ಆಳಕ್ಕೆ ಚುಚ್ಚಲು ನೆರವಾಗುತ್ತದೆ. ಈ ಕೊಂಡಿಯ ಸುತ್ತಲಿರುವ ಕೆಳಹೊಟ್ಟೆಯ ಕಂಡಗಳು, ಕೊಂಡಿಯನ್ನು ಚುಚ್ಚಲು ಬೇಕಾದ ಬಲವನ್ನು ನೀಡುತ್ತವೆ. ಜೇನುಹುಳವು ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯಿಂದ ಚುಚ್ಚಿದಾಗ ಈ ಕೆಳಗಿನ ಹಂತಗಳಲ್ಲಿ ಕೊಂಡಿಯು ಚುಚ್ಚಲ್ಪಡುತ್ತದೆ;

  1. ಮೊದಲು ಮೊನಚಾದ ಕೊಂಡಿಯು ಪ್ರಾಣಿಯ ತೊಗಲಿನ ಮೇಲ್ಬಾಗವನ್ನು ಸೀಳುತ್ತದೆ.
  2. ಕೆಳಹೊಟ್ಟೆಯ ಕಂಡಗಳು ಹುರುಪನ್ನು ಪಡೆದು, ಮೊನಚಾದ ಕೊಂಡಿಯ ಎರಡು ಈಟಿಗಳನ್ನು ಒಂದಾದ ಮೇಲೊಂದರಂತೆ ಮೇಲೆ-ಕೆಳಗೆ ಮಾಡುತ್ತವೆ. ಇದರಿಂದ ಕೊಂಡಿಯು ತೊಗಲಿನ ಆಳಕ್ಕೆ ಹೋಗಲು ನೆರವಾಗುತ್ತದೆ.
  3. ಈಟಿಯ ತುದಿಯಲ್ಲಿರುವ ರಕ್ಕೆಯಂತಹ ಇಟ್ಟಳವು ಚುಚ್ಚುತ್ತಿರುವ ಜಾಗವನ್ನು ಮತ್ತಷ್ಟು ಅಗಲಗೊಳಿಸಿ ಕೊಂಡಿಯನ್ನು ಆಳಕ್ಕೆ ಹೋಗುವಂತೆ ಮಾಡುತ್ತದೆ.
  4. ಈ ಹೊತ್ತಿನಲ್ಲಿ ನಂಜುಗಡ್ಡೆಯಲ್ಲಿರುವ ನಂಜು ಕೊಂಡಿಯ ಮೂಲಕ ತೊಗಲಿನ ಒಳಕ್ಕೆ ಹೋಗುತ್ತದೆ.

ಕೊಂಡಿಯನ್ನು ಚುಚ್ಚಿದೊಡನೆ ನಂಜಿನ ಜೊತೆ ದಿಗಿಲು ಸೋರುಗೆ(pheromone)ಗಳನ್ನು ಕೂಡ ಹೊರಹಾಕುತ್ತದೆ. ಈ ದಿಗಿಲು ಸೋರುಗೆಗಳು ಬಾಳೆಹಣ್ಣಿನ ಪರಿಮಳವನ್ನು ಹೊಂದಿದ್ದು, ಉಳಿದ ಜೇನುಹುಳಗಳಿಗೆ ಎಚ್ಚರಿಕೆಯ ಮಾಹಿತಿಯನ್ನು ಸಾಗಿಸುತ್ತವೆ. ದಿಗಿಲು ಸೋರುಗೆಗಳ ಪರಿಮಳ ಬಂದೊಡನೆ ಉಳಿದ ಜೇನುಹುಳಗಳು ‘ತೊಂದರೆ’ ಇರುವುದನ್ನು ಅರಿತು, ಸೋರುಗೆಯು ಹರಿದು ಬಂದ ಕಡೆಗೆ ಹಾರಿ ತೊಂದರೆ ಕೊಡಲು ಬಂದಿರುವ ಪ್ರಾಣಿಗೆ ಒಟ್ಟಿಗೆ ಚುಚ್ಚಲಾರಂಬಿಸುತ್ತವೆ. ಹಲವಾರು ಜೇನುಹುಳಗಳು ಯಾರಿಗಾದರು ಒಮ್ಮೆಲೆ ಕಚ್ಚಿರುವುದನ್ನೋ ಇಲ್ಲವೇ ಒಟ್ಟೊಟ್ಟಿಗೆ ಜೇನುಹುಳಗಳು ಬೆರೆಸಿಕೊಂಡು ಬಂದಿರುವುದನ್ನು ನಾವು ಕೇಳಿರುತ್ತೇವೆ, ಜೇನುಹುಳಗಳ ಈ ಒಗ್ಗಟ್ಟಿನ ಕೆಲಸಕ್ಕೆ ದಿಗಿಲು ಸೋರುಗೆಗಳು ನೆರವಾಗುತ್ತವೆ.

ಜೇನುಹುಳಗಳು ಸಾಕಷ್ಟು ಬಗೆಯ ದಿಗಿಲು ಸೋರುಗೆಗಳನ್ನು ಹೊರಹಾಕುವ ಕಸುವನ್ನು ಹೊಂದಿವೆ. ತೊಂದರೆ ಎದುರಾದಾಗ ಎಚ್ಚರಿಸಲು, ಗೂಡಿನಲ್ಲಿರುವ ಮರಿಹುಳ ಮತ್ತು ಗೂಡುಹುಳಗಳು ತಾವು ಬೆಳೆಯುತ್ತಿರುವುದನ್ನು ತಿಳಿಸಲು, ಗಂಡು ಜೇನುಹುಳವು ಒಡತಿ ಜೇನುಹುಳದ ಬಗ್ಗೆ ಇನ್ನೊಂದು ಗಂಡು ಜೇನಿಗೆ ತಿಳಿಸಲು, ಒಡತಿ ಜೇನುಹುಳವು ಇಟ್ಟ ಮೊಟ್ಟೆಗಳನ್ನು ಕಂಡುಹಿಡಿಯಲು, ಹೀಗೆ ಬಗೆ ಬಗೆಯ ಕೆಲಸಗಳ ಬಗ್ಗೆ ಮತ್ತೊಂದು ಜೇನುಹುಳಕ್ಕೆ ಅರುಹಲು (communicate) ಹುಳಗಳು ದಿಗಿಲು ಸೋರುಗೆಯನ್ನು ಬಳಸುತ್ತವೆ. ಹಲವು ಬಗೆಯ ದಿಗಿಲು ಸೋರುಗೆಗಳನ್ನು ಒಸರಲು ಹುಳದಲ್ಲಿರುವ ಸುಮಾರು 15 ಸುರಿಗೆಗಳು ಬಳಕೆಯಾಗುತ್ತವೆ. ಹೀಗೆ ಹೊರಬರುವ ಸುರಿಗೆಗಳನ್ನು ಅರಿಯಲು ಉಳಿದ ಜೇನುಹುಳಗಳು ತಮ್ಮ ಅರಿಗೊಂಬು(Antennea) ಮತ್ತು ಇತರೆ ಅಂಗಗಳನ್ನು ಬಳಸುತ್ತವೆ. ಜೇನುಹುಳದ ಕುಣಿತವು ಹುಳಗಳ ಒಂದು ಬಗೆಯ ಮಾತುಕತೆಯಾದರೆ ಈ ದಿಗಿಲು ಸೋರುಗೆಗಳನ್ನು ಒಸರುವುದು ಇನ್ನೊಂದು ಬಗೆಯ ಮಾತುಕತೆ.

ಜೇನುಹುಳವು ಚುಚ್ಚುವ ಬಗೆಯನ್ನು ತೋರಿಸುವ ಓಡುತಿಟ್ಟವನ್ನು ಕೆಳಗೆ ನೀಡಲಾಗಿದೆ.

ಹುಳಗಳು ಒಸರುವ ದಿಗಿಲು ಸೋರುಗೆಗಳಲ್ಲಿ ಎರಡು ಬಗೆಗಳಿವೆ;
1. ಒಂದು ಪೆರೊಮೋನ್ ಕೊಶೆವ್ನಿಕೊವ್ ಸುರಿಗೆ(Koschevnikov gland)ಯಿಂದ ಒಸರುವುದು. ಈ ಸುರಿಗೆಯು ಕೊಂಡಿಯ ಬುಡದಲ್ಲೇ ಇದ್ದು, ಇದರಿಂದ ಹೊರಬರುವ ದಿಗಿಲು ಸೋರುಗೆಯು ಸುಮಾರು 40 ಬಗೆಯ ತಿರುಳುಗಳಿಂದ(chemical compounts) ಮಾಡಲ್ಪಟ್ಟಿರುತ್ತದೆ. ಅವುಗಳಲ್ಲಿ ಕೆಲವೆಂದರೆ, ಐಸೊಪೆಂಟೈಲ್ ಅಸಿಟೇಟ್ (isopentyl acetate), ಬ್ಯುಟೈಲ್ ಅಸಿಟೇಟ್ (butyl acetate), 1-ಹೆಕ್ಸನಾಲ್ (1-hexanol), n-ಬ್ಯುಟನಾಲ್(n-butanol), 1-ಆಕ್ಟನಾಲ್(1-octanol), ಹೆಕ್ಸೈಲ್ ಅಸಿಟೇಟ್(hexyl acetate), ಆಕ್ಟೈಲ್ ಅಸಿಟೇಟ್(octyl acetate), n-pentyl acetate(n-ಪೆಂಟೈಲ್ ಅಸಿಟೇಟ್) ಮತ್ತು 2-ನೊನನಾಲ್(2-nonanol).

2. ಮತ್ತೊಂದು ಸೋರುಗೆಯು ಕೆಳದವಡೆಯ ಸುರಿಗೆಗಳಿಂದ (mandibular glands) ಒಸರುತ್ತದೆ. ಇದರಲ್ಲಿರುವ ಅರಿದಾದ ತಿರುಳೆಂದರೆ 2-ಹೆಪ್ಟಾನನ್ (2-heptanone).

ಕೊಂಡಿಯ ನಂಜು:
ಜೇನುಹುಳದ ನಂಜು ಬಣ್ಣವಿಲ್ಲದ ನೀರಿನಂತಹ ವಸ್ತು. ಒಂದು ಜೇನುಹುಳವು ಚುಚ್ಚಿದರೆ 0.1 ಮಿ.ಗ್ರಾಂ ನಷ್ಟು ನಂಜನ್ನು ಅದು ಚುಚ್ಚಿದ ಪ್ರಾಣಿಗೆ ಹರಿಸಬಹುದು. ನಂಜಿನಲ್ಲಿ ಈ ಕೆಳಗಿನ ಒಂದುಗೆಗಳು(compounds) ಇರುತ್ತವೆ;
– ಮೆಲಿಟ್ಟಿನ್(melittin): ನಂಜಿನ 52% ನಷ್ಟಿರುತ್ತದೆ.
– ದಿಗಿಲು ಸೋರುಗೆಗಳು (pheromones) ಇರುತ್ತವೆ.
– ಅಪಮಿನ್(Apamin), ಅಡೊಲಪಿನ್(Adolapin), ಪಾಸ್ಪಾಲಿಪೇಸ್(Phospholipase)- ಎ2, ಹೈಯಲ್ಯುರೊನಿಡೇಸ್(Hyaluronidase), ಹಿಸ್ಟಮಿನ್(histamine), ಡೊಪಮೈನ್(Dopamine) ದೊಳೆ(enzyme), ಇತರೆ ಪೆಪ್ಟೈಡ್ಸ್(peptides), ಅಮೈನೊ ಹುಳಿಗಳು(amino acids) ಮತ್ತು ಇತರೆ ಹುಳಿಗಳು ಸೇರಿ ಒಟ್ಟಾರೆಯಾಗಿ 63 ಬಗೆಬಗೆಯ ಒಂದುಗೆಗಳು(compounds) ಇರುತ್ತವೆ.

ಜೇನುಹುಳವು ಚುಚ್ಚಿದಾಗ ಅದರ ಕೊಂಡಿಯು ಪ್ರಾಣಿಯ ತೊಗಲಿನ ಒಳಗೆ ಹೋಗುತ್ತದೆ. ಒಂದು ವೇಳೆ ಚುಚ್ಚಿದ ಜಾಗವು ಗಟ್ಟಿಯಾದ ತೊಗಲಾಗಿದ್ದರೆ ಜೇನುಹುಳವು ಹಾರಿಹೋಗುವಾಗ ಕೊಂಡಿ ಮತ್ತು ಅದರ ಬುಡದ ಕೆಲವು ಕಂಡಗಳು ಚುಚ್ಚಿದ ಜಾಗದಲ್ಲೇ ಉಳಿದುಕೊಳ್ಳುತ್ತವೆ. ಕೊಂಡಿಯನ್ನು ಕಳೆದುಕೊಳ್ಳುವ ಜೇನುಹುಳವು ಗಾಯಗೊಳ್ಳುವುದರಿಂದ ಅದು ಸಾಯುತ್ತದೆ. ತನ್ನ ಗೂಡನ್ನು ಕಾಪಾಡಿಕೊಳ್ಳಲು, ತೊಂದರೆ ಮಾಡಲು ಬಂದ ಪ್ರಾಣಿಗೆ ಚುಚ್ಚಿ ತಾನು ಉಸಿರನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ಚುಚ್ಚಿದ ಜಾಗವು ಮೆತ್ತಗಿದ್ದರೆ ತನ್ನ ಕೊಂಡಿಯಿಂದ ನಂಜನ್ನು ಚುಚ್ಚಿ ಕೊಂಡಿಯ ಸಮೇತ ಹಾರಿಹೋಗುತ್ತದೆ. ಆಗ ಅದು ಸಾಯುವುದಿಲ್ಲ. ಆದರೆ ಜೇನುಹುಳವು ಚುಚ್ಚಿತೆಂದರೆ ಅದರ ಕೊಂಡಿ ಹೆಚ್ಚಿನ ಬಾರಿ ಚುಚ್ಚಿದಲ್ಲೇ ಉಳಿದುಕೊಳ್ಳುತ್ತದೆ. ಹಾಗಾಗಿ ಎರಡನೇ ಬಾರಿ ಚುಚ್ಚಲು ಬದುಕುವ ಜೇನುಹುಳಗಳು ತುಂಬಾ ಕಡಿಮೆ.

ಮತ್ತೊಂದು ಬೆರಗಿನ ಸುದ್ದಿಯೆಂದರೆ ಗಂಡುಹುಳಗಳಿಗೆ ಈ ಕೊಂಡಿಯಿರುವುದಿಲ್ಲ. ಕೇವಲ ದುಡಿಮೆಗಾರ ಹುಳಗಳು ಮಾತ್ರ ಚುಚ್ಚುತ್ತವೆ. ಒಡತಿ ಜೇನಿಗೆ ಕೊಂಡಿಯಿರುತ್ತದೆ ಆದರೆ ಅದು ದುಡಿಮೆಗಾರ ಹುಳಕ್ಕಿರುವಷ್ಟು ಗಟ್ಟಿಯಾಗಿರುವುದಿಲ್ಲ. ಅಲ್ಲದೇ ಒಡತಿ ಹುಳವು ಗೂಡನ್ನು ಬಿಟ್ಟು ಹೋಗುವ ಸಾದ್ಯತೆಗಳು ತುಂಬಾ ಕಡಿಮೆ ಇರುವುದರಿಂದ ಇದು ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯನ್ನು ಬಳಸುವುದು ತುಂಬಾ ಕಡಿಮೆ.

ಮುಂದಿನ ಬಾರಿ ನೀವೆಲ್ಲಾದರೂ ಜೇನುಹುಳಗಳನ್ನು ಕಂಡರೆ ಎಚ್ಚರವಿರಲಿ, ಒಂದು ಜೇನುಹುಳ ಚುಚ್ಚಿದರೆ ಅದರಲ್ಲಿರುವ ದಿಗಿಲು ಸೋರುಗೆಗಳು ಹೊರಬಂದು, ತೊಂದರೆ ಇದೆ ಎಂದು ಉಳಿದ ಜೇನುಹುಳಗಳು ತಿಳಿದು, ಹಾರಿಬಂದು ಚುಚ್ಚುವ ಸಾದ್ಯತೆಗಳು ತುಂಬಾ ಹೆಚ್ಚು. ಅದಲ್ಲದೇ ಜೇನುಹುಳವೇನಾದರು ಚುಚ್ಚಿದರೆ ಅದರ ಕೊಂಡಿಯನ್ನು ಆದಷ್ಟು ಬೇಗ ಚುಚ್ಚಿದ ಜಾಗದಿಂದ ಕಿತ್ತು ಹಾಕಿ, ಏಕೆಂದರೆ, ಆ ಕೊಂಡಿಯ ಚೂರು ಕೂಡ ಅಳಿದುಳಿದ ನಂಜನ್ನು ನಮ್ಮ ನೆತ್ತರಿಗೆ ಸೇರಿಸುತ್ತಿರುತ್ತದೆ. ಆದರೆ ನೆನಪಿರಲಿ ಜೇನುಹುಳುಗಳಿಗೆ ನಾವು ತೊಂದರೆ ಕೊಡದಿದ್ದರೆ ಅವು ಕೂಡ ನಮಗೆ ಯಾವುದೇ ತೊಂದರೆ ಕೊಡುವುದಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: chm.brisearthsky.orgbeespotter.orghoneybeeremoval.com)