ಬಿಸಿಲ್ನೆಲೆಗಳ ನಡುವಣ ಕೂಡು ಹರವು

ಎರಡೂ ಅರೆಗೋಳದ ಮಾರುಗಾಳಿಗಳು ಬಿಸಿಲನೆಲೆಗಳ ಮೇಲೆ ಸಾಗುತ್ತಾ  ಸರಿಗೆರೆಯ ಇಕ್ಕೆಲಗಳಲ್ಲಿ ಬಂದು ಸೇರುವ ತಾವುಗಳಲ್ಲೆಲ್ಲಾ ಒಂದೇ ಬಗೆಯ ಗಾಳಿಪಾಡಿನ ಪಟ್ಟಿಯು ಏರ್ಪಡುತ್ತದೆ. ಕಡಿಮೆ ಒತ್ತಡದ ನೆಲೆಯಾದ ಈ ಪಟ್ಟಿಯನ್ನು ಬಿಸಿಲ್ನೆಲೆಗಳ ನಡುವಣ ಕೂಡು ಹರವು (Intertropical Convergence Zone) ಎಂದು ಕರೆಯಬಹುದಾಗಿದೆ. ಈ ಹರವು ಸರಿಗೆರೆಯಿಂದ ಮೇಲ್ಗಡೆಗೆ ಮತ್ತು ಕೆಳಗಡೆಗೆ ಕಾವಿನ ಸರಿಗೆರೆಯ ಕದಲಿಕೆಗೆ ತಕ್ಕಂತೆ ಜರುಗುತ್ತದೆ. ಹಾಗಾದರೆ ಕಾವಿನ ಸರಿಗೆರೆ ಅಂದರೇನು? ಕಾವಿನ ಸರಿಗೆರೆ ಕದಲುವುದಾದರೂ ಏತಕ್ಕೆ? ಬಿಸಿಲ್ನೆಲೆಗಳ ನಡುವಣ ಕೂಡು ಹರವು ನೆಲನಡುಗೆರೆಯ ಮೇಲೆ ಕೆಳಗೆ ಜರುಗುವುದರಿಂದ ಇಡಿನೆಲದ ಗಾಳಿಪರಿಚೆಯ ಮೇಲಾಗುವ ಆಗುಹಗಳೇನು? ಈ ಬರಹದಲ್ಲಿ ತಿಳಿಯೋಣ.

ನೆಲದ ಹೊರಮಯ್ ನಡುವಿಗೆ ಸರಿಯಾಗಿ ಒಂದು ಅಡ್ಡಗೆರೆಯನ್ನು ಎಳೆದರೆ ಅದು ಸರಿಗೆರೆ. ನೆಲದ ಬಡಗು ತುದಿಯಿಂದ ತೆಂಕು ತುದಿಯವರೆಗು ಎಷ್ಟೇ ಅಡ್ಡಗೆರೆಗಳನ್ನು ಎಳೆದರೂ ಅವುಗಳಲ್ಲೆಲ್ಲಾ ಸರಿಗೆರೆಯೇ ಹೆಚ್ಚು ಉದ್ದವಾಗಿರುತ್ತದೆ. ಸರಿಗೆರೆಯು ನೆಲವನ್ನು ಬಡಗು ಮತ್ತು ತೆಂಕು ಅರೆಗೋಳಗಳಾಗಿ ಸರಿಪಾಲು ಮಾಡುತ್ತದೆ. ಸರಿಗೆರೆಯ 0 ಡಿಗ್ರಿಯಿಂದ ಮೊದಲ್ಗೊಂಡು ಬಡಗು ತುದಿಯವರೆಗು 90 ಡಿಗ್ರಿ ಮತ್ತು ತೆಂಕುತುದಿಯವರೆಗು 90 ಡಿಗ್ರಿ ಅಡ್ಡಗೆರೆಗಳಲ್ಲಿ ಅಳತೆ ಮಾಡಲಾಗುತ್ತದೆ.

ಸರಿಗೆರೆಯ ಇಕ್ಕೆಲಗಳಲ್ಲಿ 10 ಡಿಗ್ರಿ ಬಡಗು ಮತ್ತು ತೆಂಕಿಗೆ ಹಬ್ಬಿರುವ ನೆಲದ ಸುತ್ತಲಿನ ಪಟ್ಟಿಯು ಸರಿಗೆರೆನೆಲೆಯಾಗಿದ್ದೂ ಇಲ್ಲಿ ಹೆಚ್ಚುಕಡಿಮೆ ಎಲ್ಲ ದಿನಗಳೂ ನೆಲವು ಕಡುಕಾಯುವುದರಿಂದ ಹೆಚ್ಚು ಬಿಸಿಲು, ಹೆಚ್ಚು ಮಳೆ ಮತ್ತು ದಟ್ಟ ಕಗ್ಗತ್ತಲ ಕಾಡುಗಳು ಉಂಟಾಗಿವೆ.  ತುದಿಗಳೆರೆಡನ್ನು ಜೋಡಿಸಿ ನೆಲದ ಒಳಗಿನಿಂದ ನಿಲುವಾಗಿ ಒಂದು ಗೆರೆಯನ್ನು ಎಳೆದರೆ ಅದು ನಡುಗೆರೆ. ಈ ನಡುಗೆರೆಯು ನೆಲವು ತನ್ಸುತ್ತ ತಿರುಗುವ ಹಾದಿಮಟ್ಟಸಕ್ಕೆ ನೇರಡ್ಡವಾಗಿ ಇರುತ್ತದೆ. ಆದರೆ ನೇಸರನ ಹಾದಿಮಟ್ಟಸಕ್ಕೆ ಓರೆಯಾಗಿರುತ್ತದೆ. ನೇಸರನ ಹಾದಿಮಟ್ಟಸಕ್ಕೆ ಎಳೆದ ನೇರಡ್ಡಗೆರೆಗೆ ನೆಲದ ನಡುಗೆರೆಯು 23.30’ ಮೂಲೆಯಷ್ಟು ಬೇರ್ಪಟ್ಟಿರುತ್ತದೆ. ಇದನ್ನೇ ನಡುಗೆರೆ ಓರೆ(Axis tilt) ಎನ್ನಲಾಗುತ್ತದೆ.

ಒಂದುವೇಳೆ ನೆಲದ ನಡುಗೆರೆಯು ನೇಸರನ ಹಾದಿಮಟ್ಟಸಕ್ಕೆ ನೇರಡ್ಡವಾಗಿ ಇದ್ದಿದ್ದರೆ ಈಗಿರುವ ಸೂಳುಗಳು (seasons) ಇರುತ್ತಿರಲಿಲ್ಲ. ನೆಲದ ನಡುಗೆರೆಯ ಓರೆಯಿಂದಾಗಿಯೇ ಇಡಿನೆಲದಮೇಲೆ ಈಗಿರುವ ಸೂಳುಗಳಾದ ಬೇಸಿಗೆಕಾಲ, ಮಳೆಗಾಲ ಮತ್ತು ಚಳಿಗಾಲಗಳು ಉಂಟಾಗಿವೆ. ನೆಲವು ತನ್ನಸುತ್ತ ಸುತ್ತುತ್ತಲೇ ನೇಸರನನ್ನೂ ಸುತ್ತುತ್ತಿರುತ್ತದೆ. ತನ್ನಸುತ್ತ ತಿರುಗಲು ಇರುವ ಸುತ್ತುಹಾದಿಯ(orbit) ಹಾದಿಮಟ್ಟಸವು(orbital plane), ನೇಸರನ ಸುತ್ತ ತಿರುಗಲು ಇರುವ ಸುತ್ತುಹಾದಿಯ ಹಾದಿಮಟ್ಟಸವು ಒಂದೇ ಮಟ್ಟಸದಲ್ಲಿರದೆ 23.30’ ಅಗಲದ ಮೂಲೆಯಷ್ಟು ಬೇರ್ಪಟ್ಟಿರುತ್ತವೆ. ಅಂದರೆ ನೇಸರನ ಹಾದಿಮಟ್ಟಸಕ್ಕೆ ನೆಲದ ಹಾದಿಮಟ್ಟಸವು 23.30’ ಮೂಲೆಯಶ್ಟು ವಾಲಿರುತ್ತದೆ.

unnamed

ಮೇಲೆ ಹೇಳಿದಂತೆ ನೇಸರನ ಕದಿರುಗಳು ಸರಿಗೆರೆನೆಲೆಯ ಪಟ್ಟಿಯಮೇಲೆ ಯಾವಾಗಲೂ ನೇರವಾಗಿ ಮತ್ತು ಸರಿಗೆರೆಯ ಇಕ್ಕೆಲಗಳಲ್ಲಿ ಮೇಲಕ್ಕೆ ಹೋದಂತೆಲ್ಲಾ ಓರೆಯಾಗಿ ಬೀಳುತ್ತವೆ ಎಂದು ತಿಳಿದಿದ್ದೆವು. ಆದರೆ ಇದು ತುಂಬು ತಿಳುವಳಿಕೆಯಲ್ಲ. ಏಕೆಂದರೆ ನೆಲವು ನೇಸರನ ಹಾದಿಮಟ್ಟಸಕ್ಕೆ ಸಮತಟ್ಟಾಗಿ ಕೂಡಿಕೊಳ್ಳದೆ ವಾಲಿದ್ದರಿಂದಾಗಿ ನೇಸರನ ಕದಿರುಗಳು ಯಾವಾಗಲೂ ಸರಿಗೆರೆಯ ಮೇಲೆಯೇ ನೇರವಾಗಿ ಬೀಳುವುದಿಲ್ಲ. ನೆಲವು ಓರೆಯಾದ ನಡುಗೆರೆಗೆ ನಂಟಾಗಿ ತಿರುಗುತ್ತಾ ನೇಸರನನ್ನೂ ಸುತ್ತುತ್ತಿರುತ್ತದೆ.

ಮಾರ್ಚ್ 20 ಇಲ್ಲ 21ಕ್ಕೆ ಸರಿಯಾಗಿ ಸರಿಗೆರೆ ಇರುವೆಡೆಯೆಲ್ಲಾ ನೇರವಾಗಿ ಬಿದ್ದ ಕದಿರುಗಳು ದಿನದಿಂದ ದಿನಕ್ಕೆ ನೇರವಾಗಿ ಬೀಳುವ ಪಟ್ಟಿಯು ಮೇಲೆಕ್ಕೆ ಜರುಗುತ್ತಾ ಹೋಗುತ್ತದೆ. ಜೂನ್ 21  ಇಲ್ಲ 22ಕ್ಕೆ ಈ ಪಟ್ಟಿಯು ಬಡಗು ಅರೆಗೋಳದ 23.5’ ಡಿಗ್ರಿ ಮೇಲ್ಬಿಸಿಲ್ನೆಲೆ ಅಡ್ಡಗೆರೆಯ ಮೇಲೆ ಬೀಳುತ್ತದೆ. ಬಡಗು ಅರೆಗೋಳದಲ್ಲಿ ಅಂದು ಹಗಲು, ವರುಶದ ಎಲ್ಲಾ ಹಗಲುಗಳಿಗಿಂತ ಹೆಚ್ಚು ಹೊತ್ತಿನದಾಗಿರುತ್ತದೆ. ಅಂದರೆ ಅಂದು ಹಗಲು 12 ತಾಸುಗಳಿಗೂ ಹೆಚ್ಚಿನದ್ದಾಗಿರುತ್ತದೆ. ಅಂದು 23.5’ ಡಿಗ್ರಿ ದಾಟಿ ಬಡಗು ತುದಿಯೆಡೆಗೆ ಹೋದಂತೆಲ್ಲ ಹಗಲು ಹಿಗ್ಗುತ್ತಾ ಇರುಳು ಕುಗ್ಗುತ್ತಾ ಹೋಗುತ್ತದೆ. ಬಡಗು ತುದಿಯಲ್ಲಿ ನೆಲೆಸುವವರಿಗೆ ಇರುಳೇ ಇಲ್ಲದ 24ತಾಸೂ ಹಗಲೇ ಇರುತ್ತದೆ. ಆದರೆ ಇದೇ ಹೊತ್ತಲ್ಲಿ ತೆಂಕು ಅರೆಗೋಳದಲ್ಲಿ ಹಗಲು ಕುಗ್ಗುತ್ತಾ ಇರುಳು ಹಿಗ್ಗುತ್ತಾ ಕೊನೆಗೆ ತೆಂಕು ತುದಿಯಲ್ಲಿ 24ತಾಸೂ ಇರುಳೇ ಇರುತ್ತದೆ. ಇದನ್ನು ಜೂನ್ ಇಲ್ಲ ಬಿಸಿಲ್ಗಾಲದ ಎಲ್ಲೆಹಗಲು ಎಂದು ಕರೆಯಬಹುದಾಗಿದೆ.

ಜೂನ್ ಎಲ್ಲೆ ಹಗಲಿನ ತರುವಾಯ ನೇಸರನ ನೇರ ಕದಿರುಗಳು ದಿನ ದಿನಕ್ಕೂ ಹಿಮ್ಮೆಟ್ಟುತ್ತಾ ಸೆಪ್ಟೆಂಬರ್ 21ಕ್ಕೆ 0 ಡಿಗ್ರಿ ಸರಿಗೆರೆಯ ಮೇಲೆ ಮತ್ತೇ ಬೀಳುತ್ತವೆ. 0ಡಿಗ್ರಿ ಸರಿಗೆರೆಯ ಮೇಲೆ ನೇರ ಕದಿರುಗಳು ಬಿದ್ದಾಗ ಇಡೀ ನೆಲದ ಮೇಲೆಲ್ಲಾ ಹಗಲೂ ಇರುಳು ಸರಿಸಮವಾಗಿರುತ್ತವೆ. ಈ ನಾಳನ್ನು ಸರಿನಾಳೆಂದು ಕರೆಯುತ್ತೇವೆ. ಒಂದು ಏಡಿಗೆ ನೇರ ಕದಿರುಗಳು ಎರಡು ಸಾರಿ ಅಂದರೆ ಮಾರ್ಚ್ 21 ಹಾಗು ಸೆಪ್ಟೆಂಬರ್ 21ಕ್ಕೆ ಬೀಳುವುದರಿಂದ ಎರಡು ಸರಿದಿನಗಳು ಉಂಟಾಗುತ್ತವೆ.

ಸೆಪ್ಟೆಂಬರ್ 21ರ ಸರಿದಿನ ಮುಗಿದಮೇಲೆ ನೇರ ಕದಿರುಗಳು ತೆಂಕು ದಿಕ್ಕಿಗೆ ಸಾಗುತ್ತಾ ಡಿಸೆಂಬರ್ 21ಕ್ಕೆ ತೆಂಕು ಅರೆಗೋಳದ  23.5’ ಡಿಗ್ರಿ ಕೆಳಬಿಸಿಲ್ನೆಲೆ ಅಡ್ಡಗೆರೆಯ ಮೇಲೆ ಬೀಳುತ್ತವೆ. ಅಂದು ತೆಂಕು ಅರೆಗೋಳದಲ್ಲಿ 12ತಾಸಿಗೂ ಹೆಚ್ಚು ಹೊತ್ತಿನ ಹಗಲಿರುತ್ತದೆ ಮತ್ತು 23.5’ ಡಿಗ್ರಿ ಅಡ್ಡಗೆರೆಗಿಂತ ಮೇಲಕ್ಕೆ ಹೋದಹಾಗೆಲ್ಲ ಹಗಲು ಹಿಗ್ಗುತ್ತಾ ಇರುಳು ಕುಗ್ಗುತ್ತಾ ಹೋಗುತ್ತದೆ. ತೆಂಕು ತುದಿಯಮೇಲೆ 24ತಾಸೂ ಹಗಲೇ ಇರುತ್ತದೆ. ಇದನ್ನು ಡಿಸೆಂಬರ್ ಇಲ್ಲ ಚಳಿಗಾಲದ ಎಲ್ಲೆಹಗಲೆಂದು ಕರೆಯಬಹುದಾಗಿದೆ.

ದಿಟಕ್ಕೂ ತೆಂಕು ಅರೆಗೋಳದಲ್ಲಿ ಆಗ ಬಿಸಿಲುಗಾಲವಿರುತ್ತದೆ. ಆದರೆ ಬಡಗು ಅರೆಗೋಳದಲ್ಲಿ ಹೆಚ್ಚು ಗಟ್ಟಿನೆಲಗಳಿದ್ದೂ (60ಪಾಲು ನೆಲ, 40ಪಾಲು ನೀರು) ಗಾಳಿಪರಿಚೆಯ ಏರುಪೇರುಗಳು ಹೆಚ್ಚಿನದಾಗಿರುತ್ತವೆ. ತೆಂಕು ಅರೆಗೋಳದಲ್ಲಿ ಹೆಚ್ಚು ನೀರಿದ್ದೂ (20ಪಾಲು ನೆಲ, 80ಪಾಲು ನೀರು) ಅಡೆತಡೆಗಳಿಲ್ಲದೆ ಗಾಳಿಪರಿಚೆಯು ಹೆಚ್ಚುಕಡಿಮೆ ಒಂದೇತೆರನಾಗಿ ಇರುತ್ತದೆ. ಮತ್ತು ಬಡಗು ಅರೆಗೋಳದಲ್ಲಿ ಹೆಚ್ಚು ಗಟ್ಟಿನೆಲಗಳು ಇರುವುದರಿಂದ ಮಂದಿ ನೆಲಸಿಕೆಯು ಹೆಚ್ಚಿರುತ್ತದೆ. ಆದ್ದರಿಂದ ನೆಲದರಿಮೆಯ ಹೆಚ್ಚಿನ ಹುರುಳುಗಳನ್ನು ಬಡಗು ಅರೆಗೋಳವನ್ನು ನಂಟಾಗಿ ಇಟ್ಟುಕೊಂಡು ಗುರುತಿಸಲಾಗುತ್ತದೆ. ಡಿಸೆಂಬರ್ 21ಕ್ಕೆ ಬಡಗು ಅರೆಗೋಳದಲ್ಲಿ ಚಳಿಗಾಲವಿರುವುದರಿಂದಾಗಿ ಚಳಿಗಾಲದ ಎಲ್ಲೆಹಗಲೆಂದು ಕರೆಯಲಾಗಿದೆ.

unnamed (1)

ಅಡಕಮಾಡಿ ಹೇಳುವುದಾದರೆ, ನೆಲವು ಚೆಂಡಿನಂತೆ ಇರುವುದರಿಂದ ಅದರ ಹೊರಮೈ ಮಟ್ಟಸವಾಗಿರುವುದಿಲ್ಲ. ಆದ್ದರಿಂದಾಗಿ ನೇಸರನ ಕದಿರುಗಳು ಕೆಲವೆಡೆ ನೇರವಾಗಿ ಮತ್ತು ಹಲವೆಡೆ ಓರೆಯಾಗಿ ಬೀಳುತ್ತವೆ. ತುದಿಯಲ್ಲಿ ಹೆಚ್ಚು ಓರೆಯಾಗಿ, ತುದಿಯಿಂದ ಸರಿಗೆರೆಯೆಡೆಗೆ ಹೋದಂತೆಲ್ಲ ಕಡಿಮೆ ಓರೆಯಾಗುತ್ತಾ ಸರಿಗೆರೆಯಮೇಲೆ ನೇರವಾದ ಕದಿರುಗಳು ಬೀಳುತ್ತವೆ. ನೇರ ಕದಿರುಗಳು ಬಿದ್ದ ಎಡೆಗಳಲ್ಲೆಲ್ಲ ನೆಲವು ಹೆಚ್ಚು ಕಾಯುತ್ತದೆ. ನೆಲದ ವಾಲಿಕೆಯಿಂದಾಗಿ ನೇರ ಕದಿರುಗಳ ಬೀಳುವಿಕೆಯ   ಪಟ್ಟಿಯು ಎಲ್ಲ ದಿನಗಳು ಸರಿಗೆರೆ ಮೇಲಿರದೆ 23.5 ಡಿಗ್ರಿ ಬಡಗಿನ ಮೇಲ್ಬಿಸಿಲ್ನೆಲೆ ಅಡ್ಡಗೆರೆ ಮತ್ತು ತೆಂಕಿನ ಕೆಳಬಿಸಿಲ್ನೆಲೆ ಅಡ್ಡಗೆರೆವರೆಗೂ ಕದಲುತ್ತದೆ.  23.5ಡಿಗ್ರಿ ಬಡಗಿನಿಂದ 23.5 ಡಿಗ್ರಿ ತೆಂಕಿನವರೆಗೆ ನೆಲವನ್ನು ಕಡುಕಾಯುತ್ತ ಕದಲುವ ನೇರ ಕದಿರುಗಳ ಪಟ್ಟಿಯನ್ನು ಕಾವಿನ ಸರಿಗೆರೆ ಎನ್ನಬಹುದಾಗಿದೆ.

unnamed (2)

ಬೀಸುಗಾಳಿಗಳು ಕುರಿತ ಬರಹದಲ್ಲಿ ಹಾಡ್ಲೆ ಕುಣಿಕೆಯ ಬಗ್ಗೆ ತಿಳಿದುಕೊಂಡಂತೆ, ಸರಿಗೆರೆನೆಲೆಗಳ ಮೇಲೆ ಕಡು ಕಾದ ಗಾಳಿಯು ಮೇಲೇರಿ ಮಳೆ ಸುರಿಸಿ ಹಗುರಗೊಂಡು, 10-15ಕಿಮಿ ಎತ್ತರದಲ್ಲಿ ಬಡಗು ತುದಿಯೆಡೆಗೆ ಸಾಗುತ್ತಾ ತಂಪುಗೊಳ್ಳುತ್ತಾ ಒತ್ತೊಟ್ಟುಗೊಂಡು, 30 ಡಿಗ್ರಿ ಕುದುರೆ ಅಡ್ಡಗೆರೆಗಳ ಮೇಲಿಳಿದು ಮಾರುಗಾಳಿಗಳಾಗಿ ಮತ್ತೇ ಕಡಿಮೆ ಒತ್ತಡದ ಸರಿಗೆರೆನೆಲೆಗಳೆಡೆಗೆ ಬೀಸುತ್ತವೆ. ಈ ಬೀಸುಗಾಳಿಗಳು ಎರಡೂ ಅರೆಗೋಳದ ಬಿಸಿಲ್ನೆಲೆಗಳ ಮೇಲೆ ಬೀಸುತ್ತಾ ಸರಿಗೆರೆಯ ಇಕ್ಕೆಲಗಳಲ್ಲಿ ಎದುರುಬದುರಾಗಿ ಬಂದು ಕೂಡುತ್ತವೆ. ಆದರೆ ಕಡುಕಾಯುವ ತಾವುಗಳು ನೇರಕದಿರುಗಳು ಬೀಳುವ ಎಡೆಗಳಾಗಿರುವುದರಿಂದ ಮಾರುಗಾಳಿಗಳು ಕಟ್ಟುನಿಟ್ಟಾಗಿ ಸರಿಗೆರೆಯ ಇಕ್ಕೆಲಗಳಲ್ಲೇ ಕೂಡುವುದಿಲ್ಲ, ಹೊರತಾಗಿ ಕಾವಿನ ಸರಿಗೆರೆಯ ಇಕ್ಕೆಲಗಳಲ್ಲಿ ಒಟ್ಟುಸೇರುತ್ತವೆ. ಸರಿಗೆರೆಯು ಮಾರ್ಪಡದ ನೆನಸಿನ ಗೆರೆಯಾಗಿದೆ, ಆದರೆ ಕಾವಿನ ಸರಿಗೆರೆಯು ನೇರಕದಿರುಗಳಿಂದ ಕಾದ ನೆಲೆಗಳ ಪಟ್ಟಿಯಾಗಿದೆ. ಕಾವಿನ ಸರಿಗೆರೆಯ ಇಕ್ಕೆಲಗಳಲ್ಲಿ ಬೀಸುಗಾಳಿಗಳು ಒಟ್ಟುಸೇರುವ ನೆಲೆಗಳೇ ಬಿಸಿಲ್ನೆಲೆಗಳ ನಡುವಣ ಕೂಡು ಹರವಾಗಿದೆ. ಚಿಕ್ಕದಾಗಿ ಗುರುತಿಸಲು ಬಿನಕೂ ಹರವು ಎಂದೂ ಹೇಳಬಹುದು. ಕಾವಿನ ಸರಿಗೆರೆಯು ಮೇಲೆ ಕೆಳಗೆ ಕದಲಿದಂತೆಲ್ಲ ಬಿನಕೂ ಹರವು ಕೂಡ ಅದಕ್ಕೆ ಹೊಂದಿಕೊಂಡು ಕದಲುತ್ತದೆ.

unnamed (3)

ಮುಂದಕ್ಕೆ ಹೋಗುವುದಕ್ಕೂ ಮುಂಚೆ ಒಂದು ಸಣ್ಣ ಆರಯ್ಕೆಯನ್ನು ಮಾಡೋಣ. ಒಂದು ಗುಂಡಾಲದಲ್ಲಿ ನೀರು ಕಾಯಿಸಲು ಇಡಿ. ಮುಚ್ಚಳವನ್ನು ಗುಂಡಾಲಕ್ಕೆ ಮುಚ್ಚದೆ, ನೀರಾವಿಗೆ ಅಡ್ಡವಾಗಿ ಮೇಲೆ ಹಿಡಿದಿಟ್ಟುಕೊಳ್ಳಿ. ಮುಚ್ಚಳದ ಅಡಿಯಲ್ಲಿ ನೀರ ಹನಿಗಳು ಜೋತುಬಿದ್ದಿರುವುದು ಕಾಣಬಹುದು. ಅದೇ ಗುಂಡಾಲವನ್ನು ನೀರಿಲ್ಲದೆ ಬರಿದೆ ಕಾಯಲು ಇಡಿ. ಮುಚ್ಚಳದ ಅಡಿಯಲ್ಲಿ ನೀರ ಹನಿಗಳು ಕೂಡಿರುವುದಿಲ್ಲ, ಬದಲಿಗೆ ಮುಚ್ಚಳವು ಬಿಸಿಗಾಳಿ ತಗುಲಿ ಕಾದಿರುತ್ತದೆ. ಈ ಎತ್ತುಗೆಯನ್ನು ಬರಿನೆಲ ಮತ್ತು ನೀರನ್ನು ಗುಂಡಾಲದಂತೆ ತುಂಬಿಕೊಂಡಿರುವ ಕಡಲಿಗೆ ಹೊಂದಿಸಿ ನೋಡಿದಾಗ, ಕಾದ ಬಿಸಿಗಾಳಿಯು ಕಡಲಿಂದ ನೆಲದಮೇಲೆ ಮತ್ತು ನೆಲದಿಂದ ಕಡಲಿಗೆ ಬೀಸಿದಾಗ ಪಡಲಿಕೆಯನ್ನು ಉಂಟುಮಾಡುತ್ತದೆ. ನೆಲದಿಂದ ನೆಲಕ್ಕೆ ಬೀಸಿದ ತೇವವಿಲ್ಲದ ಗಾಳಿಯು ಪಡಲಿಕೆಯನ್ನು ಉಂಟುಮಾಡುವುದಿಲ್ಲ.

ಬಿನಕೂ ಹರವಿನಿಂದಾಗಿ ಇಡಿನೆಲದ ಗಾಳಿಪರಿಚೆಯಲ್ಲಿ ಉಂಟಾಗುವ ಏರುಪೇರುಗಳ ಬಗ್ಗೆ ತಿಳಿಯೋಣ. ಅಡ್ಡಡ್ಡವಾಗಿ ಬಿಸುಪು, ಪಸೆ ಮತ್ತು ಒತ್ತಡದಲ್ಲಿ ಹೆಚ್ಚು ಮಾರ್ಪುಗಳಿಲ್ಲದ ನೂರು ಇಲ್ಲ ಸಾವಿರಾರು ಚದರ ಮೈಲಿಗಳವರೆಗೂ ಹಬ್ಬಿದ ಗಾಳಿಯ ದೊಡ್ಡ ಒಟ್ಟಲನ್ನು ಗಾಳಿಯೊಟ್ಟಲು(air mass) ಎನ್ನಬಹುದಾಗಿದೆ. ನೆಲದ ಮೇಲಿಂದ ಬೀಸುವ ಗಾಳಿಯೊಟ್ಟಲು ಒಣದಾಗಿದ್ದರೆ ಕಡಲ ಮೇಲಿಂದ ಬೀಸುವುವು ಒದ್ದೆಯಾಗಿರುತ್ತವೆ. ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಆಫ್ರಿಕಾ ನೆಲತುಂಡಿನ ಮೇಲೆ ಬೀಸುವ ಮಾರುಗಾಳಿಗಳು ಎರಡು ಬಗೆಯ ಗಾಳಿಯೊಟ್ಟಲುಗಳಾಗಿ ಬೀಸುತ್ತವೆ. ಮೊದಲನೇದಾಗಿ, ಬಡಗು-ಮೂಡಣದ ಮಾರುಗಾಳಿಗಳು ಬಿಸಿಲ್ನೆಲೆಯ ನೆಲತುಂಡಿನ ಗಾಳಿಯೊಟ್ಟಲಾಗಿ (cT – Tropical Continental air mass) ಬೀಸುವುದು. ಎರಡೆನೇದಾಗಿ, ಬೀಸುವ ತೆಂಕು-ಪಡುವಣದ ಮಾರುಗಾಳಿಗಳು ಬಿಸಿಲ್ನೆಲೆಯ ಕಡಲಿನ ಗಾಳಿಯೊಟ್ಟಲು (mT – Tropical Maritime air mass).

ಬಿಸಿಲ್ನೆಲ ನೆಲತುಂಡಿನ ಗಾಳಿಯೊಟ್ಟಲು – Tropical Continental air mass:
ಈ ಗಾಳಿಯೊಟ್ಟಲು ಸಹಾರಾ ಮರಳುಗಾಡಿನಿಂದ ಮೊದಲ್ಗೊಂಡು ಬಿಸಿಲ್ನೆಲೆಯ ಅಡ್ಡಗೆರೆಗಳ ಮೇಲೆ ಕಡುಕಾದು, ಹೋಲಿಕೆಯಲ್ಲಿ ಕಡಿಮೆ ಗಾಳಿಯೀರ(humid)ವನ್ನು ಹೊಂದಿ ಮಾರ್ಪಡದ ಗಾಳಿಪಾಡನ್ನು ಉಂಟುಮಾಡುತ್ತದೆ.

ಬಿಸಿಲ್ನೆಲ ಕಡಲಿನ ಗಾಳಿಯೊಟ್ಟಲು – Tropical Maritime air mass:
ಈ ಗಾಳಿಯೊಟ್ಟಲು ಅಟ್ಲಾಂಟಿಕ್ ಹೆಗ್ಗಡಲ/ಗಲ್ಫ್ ಆಪ್ ಗಿನೀಯಿಂದ ಮೊದಲ್ಗೊಂಡು ಬಿಸಿಲ್ನೆಲೆಯ ಅಡ್ಡಗೆರೆಗಳ ಮೇಲೆ ಕಡುಕಾದು, ಹೋಲಿಕೆಯಲ್ಲಿ ಹೆಚ್ಚು ಗಾಳಿಯೀರವನ್ನು ಹೊಂದಿದ್ದರಿಂದಾಗಿ ಮಾರ್ಪಿನ ಗಾಳಿಪಾಡನ್ನು ಉಂಟುಮಾಡುತ್ತದೆ.

ಇವೆರೆಡು ಗಾಳಿಯೊಟ್ಟಲುಗಳು ಕಡಿಮೆ ಒತ್ತಡದ ಬಿನಕೂ ಹರವಿನಲ್ಲಿ ಕೂಡಿದಾಗ ಪಸೆ/ತೇವವುಳ್ಳ ಗಾಳಿಯು ಮೇಲಕ್ಕೆ ತಳ್ಳಲ್ಪಡುತ್ತದೆ. ಮೇಲೇರಿದಂತೆ ತಂಪುಗೊಂಡ ಗಾಳಿಯಲ್ಲಿನ ನೀರಾವಿಯು ನೀರಾಗಿ ಇಡಿನೆಲದ ಸುತ್ತಲೂ ಮೋಡಕವಿದ ಮಳೆಯು ಸುರಿಯುತ್ತದೆ.

ಕಾವಿನ ಸರಿಗೆರೆಯು ಕದಲಿದಂತೆ ಬಿನಕೂ ಹರವೂ ಕದಲುತ್ತದೆ ಎಂದು ತಿಳಿದಿದ್ದೇವೆ. ಹೀಗೆ ಮಾರ್ಚ್ 21ರ ತರುವಾಯ ಬಡಗಿಗೆ ಕದಲುವಾಗ ಈ ಹರವು, ಕಡಲಿನ ಗಾಳಿಯೊಟ್ಟಲನ್ನೂ(mT) ಬಡಗಿನೆಡೆಗೆ ಎದುರಾಗುವ ನೆಲಕ್ಕೆ ಹೊತ್ತೊಯ್ಯುವುದರಿಂದ ಅಲ್ಲೆಲ್ಲಾ ಒದ್ದೆ ಗಾಳಿಪಾಡು ತರುತ್ತದೆ. ಅದೇ ಹೊತ್ತಲ್ಲಿ ಬಿನಕೂ ಹರವಿಗೆ ಬಡಗು ದಿಕ್ಕಿನಲ್ಲಿರುವ ನೆಲಕ್ಕೆ ನೆಲತುಂಡಿನ ಗಾಳಿಯೊಟ್ಟಲಿಂದಾಗಿ ಒಣ ಬಿಸಿ ಗಾಳಿಪಾಡು ಉಂಟಾಗುತ್ತದೆ. ಅದೇ ಹೊತ್ತಲ್ಲಿ ಸರಿಯಾಗಿ ಹರವಿನ ಕೆಳಗೆ ಗುಡುಗುಮಳೆಯಾಗುತ್ತಿರುತ್ತದೆ.

ಒಟ್ಟಿನಲ್ಲಿ ಬಿನಕೂ ಹರವು ಮೇಲೆ/ಕೆಳಗೆ ಕದಲುವುದರಿಂದ ಸರಿಗೆರೆನೆಲೆಯಲ್ಲಿ ಬರುವ ನಾಡುಗಳಲ್ಲೆಲ್ಲಾ ಒದ್ದೆ ಮತ್ತು ಒಣ ಸೂಳುಗಳು ತಳೆಯುತ್ತವೆ. ಆಫ್ರಿಕಾ ನೆಲತುಂಡಿನೊಳಗೆ ಜರುಗುವ ಕೆಲವು ಎತ್ತುಗೆಗಳನ್ನು ನೋಡುವುದಾದರೆ,

unnamed (4)

ಗಾವ್: ಬಿನಕೂ ಹರವು ಬಡಗಿನ 10ಡಿಗ್ರಿ ಅಡ್ಡಗೆರೆಯನ್ನು ದಾಟಿದಾಗ, ಹರವಿನ ಬಡಗಿಗೆ ಇರುವ ನಾಡು ಮಾಲಿ. ಮಾಲಿ ನಾಡಿನ ಗಾವ್ ಪಟ್ಟಣಕ್ಕೆ ಏಡಿಗೆ 200mm ಮಳೆಸುರಿಯುವುದರಿಂದ ಅಲ್ಲೆಲ್ಲಾ ಬಿಸಿ ಮರಗಾಡಿನ ಗಾಳಿಪರಿಚೆಯಿರುತ್ತದೆ. ಇಲ್ಲಿ ವರುಶದುದ್ದಕ್ಕೂ ಒಣದಾದ, ಬಿಸಿ ಗಾಳಿಯೊಟ್ಟಲು ನೆಲತುಂಡಿನ ಮೇಲಿಂದ ಬೀಸುವುದರಿಂದ ಕಡಿಮೆ ದಿನಗಳಲ್ಲಷ್ಟೇ ಮಳೆ ಸುರಿಯುತ್ತದೆ ಮತ್ತು ವರುಶದ ಒಟ್ಟು ಪಡಲಿಕೆ ಬಹಳ ಕಡಿಮೆಯಿರುತ್ತದೆ. ಏಕೆಂದರೆ ಗಾವ್ ಪಟ್ಟಣವು ವರುಶದ ಹೆಚ್ಚು ದಿನ ಹರವಿನ ಬಡಗಿಗೆ ಇರುತ್ತದೆ.

ಅಬಿಜಾನ್: ಅಬಿಜಾನ್ ಪಟ್ಟಣವು ಅಯ್ವೊರಿ ಕೋಸ್ಟ್ ನಾಡಿನ ಗಲ್ಪ್ ಆಪ್ ಗಿನಿಯಾ ಕರಾವಳಿಯಲ್ಲಿ ಬರುತ್ತದೆ. ಇಲ್ಲಿ ವರುಶದ ಒಟ್ಟು ಮಳೆಸುರಿತ  1700mm ಆಗಿದ್ದೂ ಬಿನಕೂ ಹರವು, ಮೇ ಕೊನೆಯಲ್ಲಿ ಬಡಗಿಗೆ ಮತ್ತು ಅಕ್ಟೋಬರ್ ಕೊನೆಗೆ ತೆಂಕಿಗೆ ಕದಲುವುದರಿಂದ ಬಿಸಿ, ಗಾಳಿಯೀರ ಹೊಂದಿದ ಕಡಲಿನ ಗಾಳಿಯೊಟ್ಟಲು ವರುಶದುದ್ದಕ್ಕೂ ಮಳೆಸುರಿಸುತ್ತದೆ. ಜೂನ್ ಮತ್ತು ಅಕ್ಟೋಬರ್ ಅಲ್ಲಿ ಎರಡು ಹೆಚ್ಚಿನ ಮಳೆ ಸುರಿತಗಳು ಮತ್ತು ವರುಶದುದ್ದಕ್ಕೂ ಬಿಸಿಲು, ಮಳೆಯಿರುವುದರಿಂದ ಇಲ್ಲಿ ಬಿಸಿಲ್ನೆಲೆಯ ದಟ್ಟಕಾಡುಗಳು(tropical rainforest) ಕಂಡುಬರುತ್ತವೆ.

ಬೊಬೊ-ಡಿಯೋಲಾಸ್ಸೋ: ಈ ಪಟ್ಟಣವು ಗಾವ್ ಮತ್ತು ಅಬಿಜಾನ್ ಪಟ್ಟಣಗಳ ನಡುವೆ ಬರುವುದರಿಂದ ಇಲ್ಲಿ ಒದ್ದೆ ಮತ್ತು ಒಣ ಸೂಳುಗಳೆರೆಡೂ ಉಂಟಾಗುತ್ತವೆ. ಬಿನಕೂ ಹರವು ಜೂನಿನಲ್ಲಿ ಬಡಗು ಮತ್ತು ಅಗಸ್ಟಿನಲ್ಲಿ ತೆಂಕಿನೆಡೆಗೆ ಕದಲುವಾಗ, ಕಡಲಿನ ಗಾಳಿಯೊಟ್ಟಲುಗಳಿಂದಾಗಿ ಇಲ್ಲಿ ಮಳೆಯಾಗುತ್ತದೆ. ಇಲ್ಲಿ ವರುಶದ ಒಟ್ಟು ಮಳೆಸುರಿತ 1000mm ಆಗಿದೆ.

ಇಂಡಿಯಾದ ಮೇಲೆ ಬಿನಕೂ ಹರವಿನ ಆಗುಹಗಳು:
ಮೇಲೆ ನೋಡಿದ ಗುಂಡಾಲದ ಎತ್ತುಗೆಯ ಬಗೆಯಲ್ಲಿ ಬಿನಕೂ ಹರವು ಇಂಡಿಯಾದ ಮೇಲೆ ಕದಲುವಾಗ ಬೇಸಿಗೆ ಸೂಳು ಮೊದಲಾಗುತ್ತದೆ. ಬೇಸಿಗೆಯಲ್ಲಿ ನೆಲ ಕಡುಕಾದು ಇಂಡಿಯಾದ ಒಳನಾಡಿನಲ್ಲಿ ಕಡಿಮೆ ಒತ್ತಡ ಏರ್ಪಡುತ್ತದೆ. ನೆಲಕ್ಕಿಂತ ಹೋಲಿಕೆಯಲ್ಲಿ ತಂಪಾದ ಹಿಂದೂ ಹೆಗ್ಗಡಲ ಮೇಲಿಂದ ತೆಂಕು ಪಡುವಣದ ಮಾರುಗಾಳಿಗಳು ಬಿನಕೂ ಹರವಲ್ಲಿ ಒಟ್ಟುಸೇರಲು, ಅಂದರೆ ಕಡಿಮೆ ಒತ್ತಡದ ಇಂಡಿಯಾದ ಒಳನಾಡುಗೆಳೆಡೆಗೆ ಬೀಸುತ್ತವೆ. ಹೀಗೆ ಬೀಸುವಾಗ ಮೇಲೆ ತಿಳಿಸಿದ ಎತ್ತುಗೆಯಂತೆ ಕಡಲಿನಿಂದ ಪಸೆಯನ್ನು ಹೊತ್ತು ನೆಲದ ಮೇಲೆ ಪಡಲಿಕೆಯನ್ನು ಉಂಟುಮಾಡುತ್ತವೆ. ಇದೇ ಬಗೆಯಲ್ಲಿ ಚಳಿಗಾಲದ ಸೂಳು ಉಂಟಾಗುವುದನ್ನು ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ.

unnamed (5)

unnamed (6)

23.5 ಡಿಗ್ರಿ ಮೇಲ್ಬಿಸಿಲ್ನೆಲೆ ಅಡ್ಡಗೆರೆಯು ಇಂಡಿಯಾದ ಗುಜರಾತ್, ರಾಜಸ್ತಾನ, ಮದ್ಯ ಪ್ರದೇಶ, ಚತ್ತೀಸ್ಗಡ, ಜಾರ್ಕಂಡ್, ಪಡುವಣ ಬಂಗಾಳ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಮೇಲೆ ಹಾದುಹೋಗುತ್ತದೆ. ಮಾರ್ಚ್ 21ರಿಂದ ಜೂನ್ 21ವರೆಗಿನ ಬಿಸಿಲ್ನೆಲೆಗಳ ಕೂಡು ಹರವಿನ ಬಡಗು ಅರೆಗೋಳದಲ್ಲಾಗುವ ಕದಲಿಕೆಯು ಇಂಡಿಯಾದ ಮೇಲೆಯೂ ಜರುಗುತ್ತದೆ. ಇಂಡಿಯಾದ ಗಾಳಿಪಾಡಿನ ಮೇಲೂ ಬಿಸಿಲ್ನೆಲೆಗಳ ಕೂಡು ಹರವಿನಿಂದಾಗಿ ಏರುಪೇರುಗಳಾಗುತ್ತವೆ. ಎತ್ತುಗೆಗೆ ಜೂನ್ ಮೊದಲ ವಾರದಲ್ಲಿ ಮೊದಲಾಗುವ ಇಂಡಿಯಾದ ಮಳೆಗಾಲ. ಇದನ್ನು ತೆಂಕು-ಪಡುವಣದ ಮಾನ್ಸೂನ್ ಎಂದು ಕರೆಯಲಾಗುತ್ತದೆ.

ಬೇಸಿಗೆಯಲ್ಲಿ ಅಂದರೆ ಮಾರ್ಚ್-ಏಪ್ರಿಲ್-ಮೇ-ಜೂನ್ ತಿಂಗಳುಗಳಲ್ಲಿ ನೇಸರನ ನೇರ ಕದಿರುಗಳು ಸರಿಗೆರೆಯ ಬಡಗಿಗೆ ಬೀಳತೊಡಗುವುದರಿಂದ ಕಾವಿನ ಸರಿಗೆರೆಯು ಬಡಗಿಗೆ ಕದಲತೊಡಗುತ್ತದೆ. ಕಾವಿನ ಸರಿಗೆರೆಗೆ ಹೊಂದಿಕೊಂಡೆ ಬಿನಕೂ  ಹರವು ಏರ್ಪಡುತ್ತದೆ ಎಂದು ಈಗಾಗಲೇ ತಿಳಿದಿದ್ದೇವೆ. ಇಂಡಿಯಾ ಕೂಡ ಬಡಗು ಬಿಸಿಲ್ನೆಲೆಯಲ್ಲಿರುವುದರಿಂದ ನೆಲವು ಇಲ್ಲಿ ಹೆಚ್ಚು ಕಾಯುತ್ತದೆ. ಇದರಿಂದಾಗಿ ಕಡಿಮೆ ಒತ್ತಡ ಏರ್ಪಟ್ಟು, ತೆಂಕು ಅರೆಗೋಳದ ತೆಂಕು-ಪಡುವಣ ಮಾರುಗಾಳಿಗಳು ಹಿಂದೂ ಪೆರ್ಗಡಲ ಮೇಲಿಂದ ಬಡಗು-ಮೂಡಣ ದಿಕ್ಕಿನಲ್ಲಿ ಕೇರಳದ ಕರಾವಳಿ ಮತ್ತು ಅಂಡಮಾನ್ ನಿಕೋಬಾರ್ ನಡುಗಡ್ಡೆಗಳ ಮೇಲಿನ ನೆಲವನ್ನು ಸರಿಯಾಗಿ ಜೂನ್ ಮೊದಲ ಇಲ್ಲ ಮೇ ಕೊನೆವಾರದಲ್ಲಿ ತಾಕಿದಾಗ ಮಾನ್ಸೂನ್/ಮಳೆಗಾಲವು ಇಂಡಿಯಾದಲ್ಲೆಲ್ಲಾ ಮೊದಲಾದಂತೆ. ಸರಿಗೆರೆಯೆಡೆಯ ಕಡಲಿನ ಗಾಳಿಯೊಟ್ಟಲು(mE) ಆಗಿದ್ದರಿಂದ ಇಂಡಿಯಾದ ಅಡಿ-ನೆಲತುಂಡಿನುದ್ದಕ್ಕೂ ಮಳೆಯಾಗುತ್ತದೆ.

unnamed (7)

ಚಳಿಗಾಲದ ಮಾನ್ಸೂನ್: ಅಕ್ಟೋಬರ್ ಇಂದ ಏಪ್ರಿಲ್ ವರೆಗೆ ಚಳಿಗಾಲದ ಮಾನ್ಸೂನ್ ಇರುತ್ತದೆ. ಬೇಸಿಗೆಯ ತೆಂಕು-ಪಡುವಣದ ಮಾನ್ಸೂನಿನಶ್ಟು ಚಳಿಗಾಲದ ಮಾನ್ಸೂನ್ ಹೆಸರಾಗಿಲ್ಲ. ಕಾವಿನ ಸರಿಗೆರೆ ಇಲ್ಲ ಬಿಸಿಲ್ನೆಲೆ ಕೂಡು ಹರವಿನೆಡೆಗೆ ಬಡಗು ಅರೆಗೋಳದಲ್ಲಿ ಬೀಸುವ ಬಡಗು-ಮೂಡಣದ ಮಾರುಗಾಳಿಗಳು ತೆಂಕು-ಮೂಡಣದ ಏಸಿಯಾದಲ್ಲೆಲ್ಲಾ ಬಡಗು-ಮೂಡಣದ ಮಾನ್ಸೂನ್ ಗಾಳಿಗಳೆಂದು ಕರೆಯಲ್ಪಡುತ್ತವೆ. ಮೊಂಗೋಲಿಯಾ ಮತ್ತು ಬಡಗು-ಪಡುವಣದ ಚೀನಾದಿಂದ ಬೀಸುವ ಈ ಚಳಿಗಾಲದ ಒಣ ಮಾನ್ಸೂನ್ ಗಾಳಿಗಳು ಬೇಸಿಗೆಯ ಮಾನ್ಸೂನ್ ಗಾಳಿಯಶ್ಟು ಬಿರುಸಾಗಿರುವುದಿಲ್ಲ.  ಹಿಮಾಲಯದ ಬೆಟ್ಟಸಾಲುಗಳು ಅಡ್ಡಗಟ್ಟುವುದರಿಂದ ಕರಾವಳಿ ತಲುಪುವಶ್ಟರಲ್ಲಿ ಅಳವುಗುಂದುತ್ತವೆ ಮತ್ತು ತೆಂಕು ಇಂಡಿಯಾ ಮುಟ್ಟುವಶ್ಟರಲ್ಲಿ ಬಹಳಶ್ಟು ತಂಪನ್ನು ಕಳೆದುಕೊಂಡಿದ್ದಕ್ಕಾಗಿ ಚಳಿಗಾಲದಲ್ಲೂ ಕೊಂಚ ಬಿಸಿ ಗಾಳಿಪಾಡು ತೆಂಕು ಇಂಡಿಯಾದಲ್ಲಿ ಇರುತ್ತದೆ.

ಆದರೆ ತೆಂಕು-ಮೂಡಣದ ಏಸಿಯಾದ ಪಡುವಣ ಪಾಲಿನಂತಲ್ಲದೆ, ಮೂಡಣಪಾಲಿನಲ್ಲಿ ಬರುವ ಇಂಡೋನೇಶಿಯಾ, ಮಲೇಶಿಯಾಗಳಲ್ಲಿ ಚಳಿಗಾಲದಲ್ಲೂ ಮಳೆಯಾಗುತ್ತದೆ. ಏಕೆಂದರೆ ಮೊದಲನೇದಾಗಿ ಇಲ್ಲಿ ಹಿಮಾಲಯ ಬೆಟ್ಟಗಳು ಅಡ್ಡಬರುವುದಿಲ್ಲ. ಎರಡನೇದಾಗಿ ತೆಂಕು ಚೀನಾ ಕಡಲಿನಿಂದ ನೀರಾವಿಯನ್ನು ಹೊತ್ತ ಬಡಗು-ಮೂಡಣದ ಮಾನ್ಸೂನ್ ಗಾಳಿಯು ಮಳೆಸುರಿಸುತ್ತದೆ.
ಮುಂದಿನ ಅಂಕಣದಲ್ಲಿ ಹೆಗ್ಗಡಲ ಒಳಹರಿವುಗಳು ಮತ್ತು ಅವುಗಳ ಮೇಲೆ ಬಿನಕೂ ಹರವಿನ  ಆಗುಹಗಳನ್ನು ತಿಳಿಯೋಣ.

(ಚಿತ್ರ ಸೆಲೆಗಳು: worldatlas.comclimate.ncsu.edu)