ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳ ಬೇರ‍್ಮೆ

ರತೀಶ ರತ್ನಾಕರ.

ಹಿಂದಿನ ಬರಹದಲ್ಲಿ ಕಾಫಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಫಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಭಾಗ ರೊಬಸ್ಟಾವನ್ನು ಬೆಳೆಯುತ್ತಾರೆ. ಹಾಗಾದರೆ ಈ ಅರಾಬಿಕಾ ಹಾಗು ರೊಬಸ್ಟಾ ಕಾಫಿಯ ನಡುವಿನ ಬೇರ‍್ಮೆಗಳೇನು ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳು ನೋಡುವುದಕ್ಕೆ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಕಂಡರೂ, ಬೆಳೆಯುವ ಬಗೆ ಮತ್ತು ಅವುಗಳ ಗುಣಗಳಲ್ಲಿ ಹಲವು ಬೇರ‍್ಮೆಗಳನ್ನು ಕಾಣಬಹುದು. ಆ ಗುಣಗಳು ಮತ್ತು ಅದರ ಬೇರ‍್ಮೆಗಳನ್ನು ಈ ಕೆಳಗೆ ನೀಡಲಾಗಿದೆ.

ಕಾಫಿಯ ತಳಿ:

ಅರಾಬಿಕಾ ಕಾಫಿಯೂ ‘ಕಾಫಿಯೇಯ್ ಅರಾಬಿಕಾ‘(Coffea Arabica) ಎಂಬ ತಳಿಯಾಗಿದ್ದು ಈ ತಳಿಯ ಇರುವಿಕೆಯನ್ನು 1753 ರಲ್ಲಿ ಕಂಡು ಹಿಡಿಯಲಾಯಿತು. ಮೊತ್ತ ಮೊದಲನೆಯದಾಗಿ ಬೇಸಾಯ ಮಾಡಿ ಬೆಳೆಯಲು ಆರಂಬಿಸಿದ ತಳಿ ಎಂಬ ಹೆಗ್ಗಳಿಗೆಯನ್ನು ಇದು ಹೊಂದಿದೆ. ಅತಿ ಎತ್ತರದ ಮತ್ತು ಬೆಟ್ಟದ ಸಾಲುಗಳಲ್ಲಿ ಬೆಳೆಯಲು ಸೂಕ್ತವಾಗಿರುವ ಬೆಳೆಯಾದ ಇದು ‘ಬೆಟ್ಟದ ಕಾಫಿ’ ಎಂದು ಹೆಸರುವಾಸಿಯಾಗಿದೆ. ಈ ಕಾಫಿಯಲ್ಲಿರುವ ‘ಕಾಫಿನ್’ (Caffeine) ಅಂಶವು ಕಾಫಿಯ ಉಳಿದ ಎಲ್ಲಾ ತಳಿಗಳಿಗಿಂತ ಕಡಿಮೆಯಿದೆ, ಹಾಗಾಗಿ ಉಳಿದ ಕಾಫಿಯ ತಳಿಗಳಿಗಿಂತ ರುಚಿಕರವಾದ ಕಾಫಿ ಎಂದು ಕೂಡ ಕರೆಸಿಕೊಳ್ಳುತ್ತದೆ.

ರೊಬಸ್ಟಾ ಕಾಫಿಯೂ ‘ಕಾಫಿಯೇಯ್ ಕನೆಪೋರಾ‘ (Coffea Canephora) ಎಂಬ ತಳಿಯಾಗಿದ್ದು ಇದನ್ನು 1895ರಲ್ಲಿ ಕಂಡು ಹಿಡಿಯಲಾಯಿತು. ವ್ಯಾವಹಾರಿಕ ಉದ್ದೇಶಕ್ಕಾಗಿಯೇ ಈ ಕಾಫಿಯ ತಳಿಯನ್ನು ಕಂಡು ಹಿಡಿಯಲಾಗಿದೆ. ಅರಾಬಿಕಾ ಕಾಫಿಗಿಂತ ಹೆಚ್ಚಿನ ಇಳುವರಿಯನ್ನು ರೊಬಸ್ಟಾ ಕಾಫಿಬೆಳೆಯಲ್ಲಿ ಕಾಣಬಹುದು. ಅರಾಬಿಕಾ ಕಾಫಿಯ ಬೆಳೆಗೆ ಹೋಲಿಸಿದರೆ ಇದು ಕೀಟ ಮತ್ತು ರೋಗಕ್ಕೆ ಕೂಡಲೇ ತುತ್ತಾಗುವುದಿಲ್ಲ ಮತ್ತು ಬದಲಾಗುವ ಗಾಳಿಪಾಡಿಗೆ ಹೊಂದಿಕೊಂಡು ಬೆಳೆಯುತ್ತದೆ ಹಾಗಾಗಿ ರೊಬಸ್ಟಾ ಬೆಳೆಯನ್ನು ಅರಾಬಿಕಕ್ಕಿಂತ ಕಡಿಮೆ ಆರೈಕೆ ಕೊಟ್ಟು ಸುಲಭವಾಗಿ ಬೆಳೆಯಬಹುದು.

ಕಾಫಿ ಬೆಳೆಯುವ ಗಾಳಿಪಾಡು:
ಅರಾಬಿಕಾ ಕಾಫಿ ಬೆಳೆಯಲು ವರುಶದ ಬಿಸುಪು 15-24 ಡಿಗ್ರಿ ಸೆಂಟಿಗ್ರೇಡ್ ಮತ್ತು ವರುಶಕ್ಕೆ 1200 – 2200 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ಅರಾಬಿಕಾ ಕಾಫಿ ಬೆಳೆಯುವ ಜಾಗ ಕಡಿಮೆ ಎಂದರೂ 1200 -2200 ಮೀಟರ್ ನಷ್ಟು ಎತ್ತರದಲ್ಲಿರಬೇಕು. ಆದರೆ ಹಿಮ ಬೀಳುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ.

ರೊಬಸ್ಟಾ ಕಾಫಿಬೆಳೆಯಲು ವರುಶದ ಬಿಸುಪು 18-35 ಡಿಗ್ರಿಯವರೆಗೆ ಮತ್ತು ವರುಶಕ್ಕೆ ಅರಾಬಿಕಾಕ್ಕಿಂತ ಹೆಚ್ಚಿನ ಮಳೆ ಅಂದರೆ 2200 ರಿಂದ 3000 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ತೀರ ಎತ್ತರವಿಲ್ಲದ ಜಾಗದಲ್ಲಿಯೂ ಕೂಡ ಇದನ್ನು ಬೆಳೆಯಬಹುದು. ಇದನ್ನು ಬೆಳೆಯಲು ಕಡಲ ಮಟ್ಟದಿಂದ ಸುಮಾರು 0-800 ಮೀಟರ್ ನಷ್ಟು ಎತ್ತರದಲ್ಲಿರುವ ಜಾಗವಿದ್ದರೂ ಸಾಕು.

ಕಾಫಿ ಬೀಜ ಮತ್ತು ಗಿಡದ ಏರ್ಪಾಟು:

ಅರಾಬಿಕಾ ಕಾಫಿಯೂ ನೆಲದಿಂದ 9-12 ಮೀಟರ್ ನವರೆಗೆ ಬೆಳೆಯುತ್ತವೆ. ಎಲೆಗಳು ಕಂದು ಹಸಿರು ಬಣ್ಣದಲ್ಲಿದ್ದು ಕೊಂಚ ಹೊಳೆಯವಂತಿರುತ್ತವೆ. ಮೊಟ್ಟೆಯಾಕಾರದ ಎಲೆಗಳು ಸುಮಾರು 6-12 ಸೆ.ಮೀ. ಉದ್ದ ಮತ್ತು 4-8 ಸೆ.ಮೀ. ಅಗಲವಿರುತ್ತವೆ. ಅರಾಬಿಕಾ ಕಾಫಿಯ ಹಣ್ಣುಗಳು 10-15 ಮಿ.ಮಿ ಅಡ್ಡಳತೆ ಹೊಂದಿದ್ದು ಎರೆಡು ಬೇಳೆಗಳನ್ನು ಒಳಗೊಂಡಿರುತ್ತದೆ. ಈ ಬೇಳೆಗಳೇ ಕಾಫಿ ಬೀಜಗಳು. ಕಾಫಿ ಬೀಜವು ಉದ್ದ-ಉರುಟಾದ (Elliptical) ಆಕಾರವನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿಯ ಬೇರುಗಳು ರೊಬಸ್ಟಾಗೆ ಹೋಲಿಸಿದರೆ ಹೆಚ್ಚು ಆಳಕ್ಕೆ ಹರಡಿಕೊಂಡಿರುತ್ತದೆ.      

ರೊಬಸ್ಟಾ ಕಾಫಿಯೂ ಕೂಡ ನೆಲದಿಂದ 10 ಮೀಟರ್ ವರೆಗೆ ಬೆಳೆಯುತ್ತವೆ. ಆದರೆ ಇದರ ಕಾಂಡವು ಅರಾಬಿಕಾಕ್ಕಿಂತ ಹೆಚ್ಚು ದಪ್ಪನಾಗಿದ್ದು ಎಲೆಗಳು ಕೂಡ ದೊಡ್ಡದಾಗಿರುತ್ತವೆ. ಕಾಫಿಬೀಜವು ಉಂಡನೆಯ ಆಕಾರದಲ್ಲಿದ್ದು ಹೆಚ್ಚು ಕಡಿಮೆ ಮೊಟ್ಟೆಯಾಕಾರದಲ್ಲಿರುತ್ತವೆ (Oval).

ಕಾಫಿಗಿಡಗಳು ಹೊರಗಿನ ರೋಗ ಮತ್ತು ಕೀಟಗಳಿಂದ ಕಾಪಾಡಿಕೊಳ್ಳಲು ತಮ್ಮ ಕಾಫಿ ಬೀಜಗಳಲ್ಲಿ ಕೆಫಿನ್ ಮತ್ತು ಕ್ಲೋರೊಜೆನಿಕ್ ಹುಳಿ(Chlorogenic Acid) ಯನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿ ಬೀಜವು 0.8 – 1.4% ನಷ್ಟು ಕೆಪಿನ್ ಹಾಗು 5.5-8.0% ನಷ್ಟು ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ರೊಬಸ್ಟಾವು ಅರಾಬಿಕಾಕ್ಕಿಂತ ಎರೆಡು ಪಟ್ಟು ಅಂದರೆ 1.7 – 4% ನಷ್ಟು ಕೆಪಿನ್ ಮತ್ತು 7-10% ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ಇದರಿಂದ ರೊಬಸ್ಟಾ ಕಾಫಿಯು ಕೀಟ ಹಾಗು ರೋಗಗಳಿಗೆ ಬೇಗನೆ ತುತ್ತಾಗುವುದಿಲ್ಲ ಮತ್ತು ಅರಾಬಿಕಾಕ್ಕಿಂತ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.

ಅರಾಬಿಕಾ ಕಾಫಿಯೂ ರೊಬಸ್ಟಾಗಿಂತ ಸರಿಸುಮಾರು 60% ಹೆಚ್ಚು ಸೀರೆಣ್ಣೆ(Lipids) ಯನ್ನು ಮತ್ತು ರೊಬಸ್ಟಾಗಿಂತ ಎರೆಡುಪಟ್ಟು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದೆ. ಅರಾಬಿಕಾದಲ್ಲಿ 6-9% ಸಕ್ಕರೆ ಅಂಶವಿದ್ದರೆ ರೊಬಸ್ಟಾದಲ್ಲಿ 3-7% ಇದೆ. 15-17% ಸೀರೆಣ್ಣೆ ಅರಾಬಿಕಾ ಬೀಜದಲ್ಲಿ ಇದ್ದರೆ 10-11.5% ರೊಬಸ್ಟಾದಲ್ಲಿದೆ, ಇದರಿಂದಾಗಿ ಅರಾಬಿಕ ಕಾಫಿಯ ಹುಳಿತ (Acidity) ಹೆಚ್ಚಿದೆ. ಸಕ್ಕರೆಯ ಅಂಶ ಕಡಿಮೆಯಿದ್ದು ಕೆಪಿನ್ ಅಂಶ ಹೆಚ್ಚಿರುವುದರಿಂದ ರೊಬಸ್ಟಾ ಕಾಫಿಯು ಹೆಚ್ಚು ಕಹಿಯಾಗಿದೆ.

ಇದಲ್ಲದೇ ಕಾಫಿ ಬೀಜದಲ್ಲಿ ಹಲವು ರಾಸಾಯನಿಕ ಅಂಶಗಳವೆ. ಅವುಗಳಲ್ಲಿ ಕ್ವಿನಿಕ್ (Quinic), ಕ್ಲೋರೋಜೆನಿಕ್ (Chlorogenic), ಸಿಟ್ರಿಕ್ (Citric), ಪಾಸ್ಪರಿಕ್ (Phosphoric) , ಅಸಿಟಿಕ್ (Acetic) ಹುಳಿಗಳು (Acids), ಟ್ರೈಗೊನೆಲೈನ್, ಕೆಪಿನ್, ಸೀರೆಣ್ಣೆ ಮತ್ತು ಕಾರ‍್ಬೋಹೈಡ್ರೇಟ್ಸ್.

ಇದಲ್ಲದೇ, ಈ ಕಾಫಿಯ ತಳಿಗಳ ನಡುವೆ ಮತ್ತಷ್ಟು ಬೇರ‍್ಮೆಗಳಿವೆ ಮೇಲಿನವು ಕೆಲವು ಮುಖ್ಯವಾದವು ಮಾತ್ರ. ಈ ಬೇರ‍್ಮೆಗಳ ಕಾರಣದಿಂದ ಅರಾಬಿಕಾ ಹಾಗು ರೊಬಸ್ಟಾ ಬೆಳೆಗಳ ಬೇಸಾಯದಲ್ಲಿಯೂ ಕೂಡ ಬೇರ‍್ಮೆಗಳನ್ನು ಕಾಣಬಹುದು. ಅರಾಬಿಕಾ ಕಾಫಿಕಾಫಿಯನ್ನು ಹೆಚ್ಚು ನಿಗಾವಹಿಸಿ ಕೀಟ ಹಾಗು ರೋಗಗಳಿಂದ ಕಾಪಾಡಿಕೊಂಡು ಬೆಳೆಯ ಬೇಕಾಗುತ್ತದೆ. ಅಲ್ಲದೇ ಗಾಳಿಪಾಡಿನ ಹೆಚ್ಚುಕಡಿಮೆ ಕೂಡ ಅರಾಬಿಕಾ ಗಿಡವನ್ನು ತೊಂದರೆಗೆ ಈಡು ಮಾಡುತ್ತದೆ. ಇದಕ್ಕೆ ಹೆಚ್ಚಿನ ನೆರಳಿನ ಅವಶ್ಯಕತೆ ಇದೆ. ಆದರೆ ರೊಬಸ್ಟಾ ಬೆಳೆ ಹಾಗಲ್ಲ, ಇದನ್ನು ಬೆಳೆಯುವುದು ಅರಾಬಿಕಾಕ್ಕಿಂತ ಸುಲಭ ಹಾಗು ಹೆಚ್ಚಿನ ನಿಗಾ ವಹಿಸುವ ಅವಶ್ಯಕತೆ ಇರುವುದಿಲ್ಲ.

ಬೇರ‍್ಮೆಗಳು ಏನೇ ಇದ್ದರು ಎರೆಡೂ ಬಗೆಯ ಕಾಫಿಗಳು ತಮ್ಮ ಒಂದಲ್ಲ ಒಂದು ಗುಣಗಳಿಂದ ಹೆಸರುವಾಸಿಯಾಗಿವೆ. ಇವುಗಳನ್ನು ಬೆಳೆಯುವ ಬಗೆಯನ್ನು ಮುಂದಿನ ಬರಹಗಳಲ್ಲಿ ಅರಿಯೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

ಕಾಫಿ ಬೆಳೆ: ಹುಟ್ಟು ಮತ್ತು ಹರವು

ರತೀಶ ರತ್ನಾಕರ.

 

ಹೀಗೊಂದು ಹಳೆಯ ಕತೆ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ ಕುರಿಗಳು ಕಾಡಿನ ನಡುವೆ ಸಿಕ್ಕ ಒಂದು ಬಗೆಯ ಹಣ್ಣನ್ನು ತಿಂದೊಡನೆ ಕುಣಿದು ಕುಪ್ಪಳಿಸ ತೊಡಗಿದವು. ಹಣ್ಣಿನಲ್ಲಿರುವ ಯಾವುದೋ ಒಂದು ಅಂಶ ಕುರಿಗಳಿಗೆ ನಲಿವನ್ನು ತರುತ್ತಿದೆ ಎಂದು ಅರಿತು ಕಾಲ್ಡಿಯೂ ಆ ಹಣ್ಣನ್ನು ತಿಂದು ನೋಡಿದ. ಒಂದು ಬಗೆಯ ರುಚಿಯ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡಿದ ಆ ಹಣ್ಣನ್ನು ತನ್ನವರಿಗೂ ಪರಿಚಯಿಸಿದ.

ಉಲ್ಲಾಸ ನೀಡುವಂತಹ ಆ ಹಣ್ಣನ್ನು ಆಫ್ರಿಕಾದ ಬುಡಕಟ್ಟಿನವರು ಮೊದಲು ಹಾಗೆಯೇ ತಿನ್ನುತ್ತ ಬಳಿಕ ತಮ್ಮ ಊಟದ ಜೊತೆ ತಿನ್ನತೊಡಗಿದರು. ಹೀಗೆ ಮನುಷ್ಯನ ಊಟದ ಪಾಲಿನಲ್ಲಿ ಸೇರಿಕೊಂಡ ಆ ಹಣ್ಣು ಮುಂದೆ ಹಲವಾರು ಬಗೆಯಲ್ಲಿ ಮಾರ್ಪಾಟುಗೊಂಡು ಬೆಳಗ್ಗೆ ಎದ್ದಾಗ ಇಲ್ಲವೇ ಸಂಜೆಯ ಹೊತ್ತಿಗೆ ಕುಡಿಯುವ ಕಾಫಿಯಾಗಿ ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಕಾಲ್ಡಿಯು ಮೊತ್ತ ಮೊದಲ ಬಾರಿಗೆ ತನ್ನ ಕುರಿಗಳ ನೆರವಿನಿಂದ ಆ ಹಣ್ಣನ್ನು ತಿಂದ ಜಾಗದ ಹೆಸರು ‘ಕಪ’ ಎಂದು. ‘ಕಪ’ ಎಂಬ ಜಾಗದಲ್ಲಿ ದೊರೆತ ಹಣ್ಣು ಕಾಫಿಯಾಗಿ ಈಗ ನಮ್ಮ ನಡುವೆ ಹೆಸರುವಾಸಿಯಾಗಿದೆ.

ಹೌದು, ನಾವು ತಿನ್ನುವ ಹಾಗು ಕುಡಿಯುವ ವಸ್ತುಗಳ ಹಿಂದೆ ಸಾಕಷ್ಟು ಹಳಮೆ ಹಾಗು ಅರಿಮೆಯಿದೆ. ಕಾಫಿಯ ಹಳಮೆ ಮೇಲೆ ಹೇಳಿದ ಕತೆಯಿಂದ ಮೊದಲಾಗುತ್ತದೆ, ಈ ಹಳಮೆಯ ಜೊತೆ ನಾವು ಅರಿಯಬೇಕಾದ ಕಾಫಿಯ ಅರಿಮೆ ಕೂಡ ಸಾಕಷ್ಟಿದೆ. ಕಾಫಿಯ ಅರಿಮೆಯ ಮೇಲೆ ಕೊಂಚವಾದರು ಬೆಳಕು ಚೆಲ್ಲಬೇಕೆಂದು ಈ ಸರಣಿ ಬರಹ.

ಜಗತ್ತಿನ ಕಾಫಿ ಬೆಳೆಯುವ ನಾಡುಗಳಲ್ಲಿ ಇಂಡಿಯಾವು ಆರನೇ ಜಾಗದಲ್ಲಿದೆ. ಇಂಡಿಯಾದ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೇ ಮೊದಲ ಜಾಗ. ಇಂಡಿಯಾದಲ್ಲಿ ಬೆಳೆಯುವ ಕಾಫಿಯಲ್ಲಿ 71% ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಕಾಫಿ ಬೆಳೆಯುವ ಮುಖ್ಯ ಜಿಲ್ಲೆಗಳು. ಬೇರೆ ಬೇರೆ ರಾಜ್ಯಗಳಲ್ಲಿಕಾಫಿಯನ್ನು ಬೆಳೆಯುವ ಜಾಗದ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಕರ್ನಾಟಕದಲ್ಲಿ ಬೆಳೆಯುವ ಕಾಫಿಯನ್ನು ನೆರಳಿನ ಜಾಗದಲ್ಲಿ ಬೆಳೆಯುವ ಜಗತ್ತಿನ ರುಚಿಕರವಾದ ಕಾಫಿ ಎಂದು ಗುರುತಿಸಲಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ನೇಸರನ ಬಿಸಿಲಿಗೆ ನೇರವಾಗಿ ಗಿಡವನ್ನು ಬೆಳೆಸಿ ಕಾಫಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಬೆಟ್ಟದ ಸಾಲುಗಳಲ್ಲಿ ಹಲವು ಬಗೆಯ ಮರದ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗ್ಗೆ:
ಕಾಫಿಯು ಗಿಡ ಇಲ್ಲವೇ ಚಿಕ್ಕ ಮರದ ರೂಪದಲ್ಲಿ ಬೆಳೆಯುತ್ತದೆ. ಕಾಫಿಯೇಯ್ (coffeeae) ಎಂಬ ಗಿಡಗಳ ಬುಡಕಟ್ಟು ಮತ್ತು ರುಬಿಯೇಸಿಯಯ್ (Rubiaceae) ಎಂಬ ಕುಟುಂಬಕ್ಕೆ ಈ ತಳಿಯು ಸೇರುತ್ತದೆ. ಕಾಫಿ ಗಿಡವು ಸುಮಾರು 14 ರಿಂದ 15 ಅಡಿಗಳ ವರೆಗೆ ಬೆಳೆಯುತ್ತದೆ. ದಪ್ಪನಾದ ಹಾಗು ಉದ್ದನೆಯ ಒಂದು ಕಾಂಡ ನೆಲದಿಂದ ಹೊರಬಂದು, ಬಳಿಕ ಮೂರು ಹಂತದಲ್ಲಿ ರಕ್ಕೆಗಳು ಕವಲೊಡೆದು, ಒಂದು ದೊಡ್ಡದಾದ ಪೊದೆಯ ಗಿಡದಂತೆ ಕಾಫಿ ಗಿಡವು ಕಾಣುತ್ತದೆ. ಕೊಂಚ ಹೊಳೆಯುವ, ಕೊಂಚ ಮೇಣದ ಪದರ ಮತ್ತು ಕಂದು ಹಸಿರುಬಣ್ಣವನ್ನು ಕಾಫಿಗಿಡದ ಎಲೆಯು ಹೊಂದಿರುತ್ತದೆ. ಕಾಫಿಗಿಡದ ಎಲೆಗಳು ಸುಮಾರು 7 ರಿಂದ 8 ಇಂಚಿನವರೆಗೂ ಉದ್ದವಾಗಿರುತ್ತವೆ.

ಕಾಫಿ ಗಿಡದ ಬೇರುಗಳು ಮುಖ್ಯವಾಗಿ ಮೂರು ಬಗೆಯವು. ಬದಿಯ ಬೇರು (Lateral Roots), ನಲ್ಲಿ ಬೇರು (Tap Roots) ಮತ್ತು ಮೇವಿನ ಬೇರು (Feeder roots). ಬದಿಯ ಬೇರುಗಳು ಗಿಡದಿಂದ ಸುಮಾರು 2 ಮೀಟರ್ಗಳವರೆಗೂ ಹರಡಿಕೊಳ್ಳಬಲ್ಲವು. ನಲ್ಲಿ ಬೇರುಗಳು ನೆಲದ ಅಡಿಗೆ ಸುಮಾರು 1 ರಿಂದ 1.5 ಅಡಿಗಳಷ್ಟು ಬೆಳೆಯಬಲ್ಲವು. ಮೇವಿನ ಬೇರುಗಳು ನೆಲದಿಂದ ಕೇವಲ 20 ಸೆ.ಮೀ. ನಷ್ಟು ಕೆಳಗೆ ಇರುತ್ತವೆ ಆದರೆ ಇವು ಗಿಡದ ಬುಡದಿಂದ ಸುಮಾರು 60-90 ಸೆ.ಮೀ. ದೂರದಿಂದ ಹರಡಿಕೊಂಡಿರುತ್ತವೆ. ಒಟ್ಟಿನಲ್ಲಿ ಗಿಡದ ಬುಡದಿಂದ 30 ರಿಂದ 60 ಸೆ. ಮೀ. ನಷ್ಟು ಆಳಕ್ಕೆ ಸಾಕಷ್ಟು ಕಾಫಿಗಿಡದ ಬೇರುಗಳನ್ನು ಕಾಣಬಹುದು. ಒಂದು ಕಾಫಿ ಗಿಡದ ಬೇರು ಸುಮಾರು 500 ಚದರ ಮೀಟರಿನಷ್ಟು ನೆಲದ ಜಾಗದಿಂದ ನೀರು ಮತ್ತು ಆರಯ್ಕೆಯನ್ನು ಹೀರಿಕೊಳ್ಳಬಲ್ಲವು. ಗಟ್ಟಿಯಾದ ಮತ್ತು ದಪ್ಪನಾಗಿರುವ ಕಾಫಿ ಗಿಡದ ಬೇರು ಬೆಳೆಯಲು ನೈಟ್ರೋಜನ್, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ನ ಅವಶ್ಯಕತೆ ತೀರಾ ಇದೆ, ಅವನ್ನು ಹೀರಿಕೊಳ್ಳಲು ನೆರವಾಗುವಂತಹ ಬೇರಿನ ರೂಪು ರೇಶೆಯನ್ನು ಕಾಫಿ ಗಿಡವು ಹೊಂದಿದೆ.

ಕಾಫಿ ಬೆಳೆಯಲು ಬೇಕಾದ ಗಾಳಿಪಾಡು:
ಕಾಫಿಯ ಬೆಳವಣಿಗೆಗೆ ಸುಮಾರು 15 -28 ಡಿಗ್ರಿ ಸೆಲ್ಶಿಯಸ್ ಬಿಸುಪು ವರುಶವಿಡಿ ಇದ್ದರೆ ಒಳಿತು. ಕೊರೆಯುವ ಚಳಿಯಿದ್ದು, ಹಿಮ ಬೀಳುವಂತಹ ಜಾಗಗಳಲ್ಲಿ ಕಾಫಿಯ ಬೆಳವಣಿಗೆ ಸಾಧ್ಯವಿಲ್ಲ . ಹಾಗೆಯೇ ವರುಶಕ್ಕೆ 60-80 ಇಂಚು ಮಳೆ ಬೀಳಬೇಕು, ಜೊತೆಗೆ ಎರೆಡರಿಂದ ಮೂರು ತಿಂಗಳುಗಳ ಕಾಲ ಅತಿ ಕಡಿಮೆ ಮಳೆಯಿದ್ದು ಬಿಸಿಲು ಸಿಗುವಂತಿರಬೇಕು. ಮಳೆ ಇಲ್ಲವೇ ಚಳಿಯಿಂದ ಕಾಫಿಯ ಗಿಡಕ್ಕೆ ತಂಪು ಹೆಚ್ಚಾದರೆ ಅದರ ಬೆಳವಣಿಗೆಗೆ ಪೆಟ್ಟು ನೀಡಿದಂತೆ, ಹಾಗಾಗಿ ಮಳೆ ಬಿದ್ದೊಡನೆ ಅದರ ನೀರು ಹರಿದು ಹೋಗುವಂತೆ ಮತ್ತು ಗಾಳಿಯು ಚೆನ್ನಾಗಿ ಹರಿದಾಡುವಂತೆ ಇರುವ ಇಳಿಜಾರಿನ ಜಾಗಗಳಲ್ಲಿ ಕಾಫಿಯನ್ನು ಬೆಳಯಲಾಗುತ್ತದೆ. ನೀರು ಹರಿದುಕೊಂಡು ಹೋಗುವಂತಹ ಮತ್ತು ಗಾಳಿಗೆ ಸುಳಿದಾಡಲು ಜಾಗ ಕೊಡುವಂತಹ ಬೆಟ್ಟ-ಗುಡ್ಡದ ಜಾಗವು ಒಳ್ಳೆಯದಾಗಿರುತ್ತದೆ.

ಕಾಫಿ ಬೆಳೆಯಲು ಬೇಕಾಗಿರುವ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿರಬೇಕು ಮತ್ತು ಕೊಂಚ ಹುಳಿಯಾಗಿರಬೇಕು, ಅಂದರೆ ಮಣ್ಣಿನ ಹುಳಿಯಳತೆ (pH) 6.0 – 6.5 ಇರಬೇಕು. ಈ ಎಲ್ಲಾ ಗಾಳಿಪಾಡುಗಳು ಸಿಗಬೇಕೆಂದರೆ ಕಡಲಿನಿಂದ 1000 – 1500 ಮೀಟರ್ ನಷ್ಟು ಎತ್ತರದಲ್ಲಿರುವ ಬೆಟ್ಟ-ಗುಡ್ಡದ ಜಾಗಗಳನ್ನು ಕಾಫಿ ಬೆಳೆಯಲು ಆಯ್ಕೆ ಮಾಡಬೇಕಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿರುವ ಬೆಟ್ಟಗುಡ್ಡದ ಜಾಗಗಳು ಈ ಗಾಳಿಪಾಡನ್ನು ಹೊಂದಿದ್ದು ಕಾಫಿ ಬೆಳೆಯಲು ಸೂಕ್ತವಾಗಿವೆ.

ಕರ್ನಾಟಕದಲ್ಲಿ ಕಾಫಿಯ ಜೊತೆ ಕಾಳುಮೆಣಸು, ಶುಂಟಿ, ಅಡಿಕೆ, ಚಕ್ಕೆ ಹೀಗೆ ಕೆಲವು ಬೆಳೆಗಳನ್ನು ಒಟ್ಟೊಟ್ಟಿಗೆ ಬೆಳೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಕಾಡುಮರಗಳ ಜೊತೆಗೆ ಸಿಲ್ವರ್ ಇಲ್ಲವೇ ಇತರೆ ಮರಮಟ್ಟುಗಳಿಗೆ ನೆರವಾಗುವ ಮರಗಳ ಜೊತೆ ನೆರಳಿನಲ್ಲಿ ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗೆಗಳು:
ಕುಡಿಯುವ ಕಾಫಿಯಲ್ಲಿ ನಾವು ಹಲವಾರು ಬಗೆಗಳನ್ನು ಕಾಣುತ್ತೇವೆ ಹಾಗೆಯೇ ಕಾಫಿಯ ಗಿಡಗಳಲ್ಲಿಯೂ ಹಲವಾರು ಬಗೆಗಳಿವೆ, ಅವುಗಳಲ್ಲಿ ಕೆಲವೆಂದರೆ ಲಿಬೆರಿಕಾ (Liberica), ಗ್ರಾಸ್ ಇಂಡೆಂಟೆ (Gros Indente), ಎಕ್ಸೆಲ್ಸ (Excelsa), ಕುಯ್ಲೂ (Kouilou), ಪೆಟಿಟ್ ಇಂಡೇನಿಜೆ (Petit Indénizé), ಅರಾಬಿಕಾ ಮತ್ತು ರೊಬಸ್ಟಾ. ಇವುಗಳಲ್ಲಿ ಅರಾಬಿಕಾವನ್ನು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ನೂರಕ್ಕೆ 75% ನಷ್ಟು ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ರೊಬಸ್ಟಾ ಎರಡನೆಯ ಜಾಗವನ್ನು ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ರೊಬಸ್ಟಾವನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ 67.3% ರೊಬಸ್ಟಾ ಮತ್ತು ಉಳಿದ 32.7% ಅರಾಬಿಕ ಬೆಳೆಯಲಾಗುತ್ತದೆ.

ಹಾಗದರೆ ಅರಾಬಿಕಾ ಮತ್ತು ರೊಬಸ್ಟಾ ನಡುವಿನ ವ್ಯತ್ಯಾಸವೇನು?ಕಾಫಿಯನ್ನು ಮೊಳಕೆ ಬರಿಸುವುದರಿಂದ ಹಿಡಿದು ಹಣ್ಣು ಕುಯ್ಯುವುದರವರೆಗೂ ಇರುವ ಹಂತಗಳಾವವು? ಕುಡಿಯುವ ಕಾಫಿಯಲ್ಲಿ ಹಲವು ಬಗೆಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು? ಕಾಫಿಯ ಕುರಿತು ಮತ್ತೇನಾದರು ಸೋಜಿಗದ ಸುದ್ದಿಗಳು ಇದೆಯೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ಮೇಲಿನ ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

(ಚಿತ್ರ ಸೆಲೆ: Wikimediagktodaycoffeeplanet.nl)