ಇಲೆಕ್ಟ್ರಿಕ್ ಗಾಡಿಗಳನ್ನು ಹೀಗೆ ಕಾಪಾಡಿ

ಜಯತೀರ್ಥ ನಾಡಗೌಡ

ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಇತ್ತಿಚೀನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಇಲೆಕ್ಟ್ರಿಕ್ ಇಗ್ಗಾಲಿ ಗಾಡಿಗಳ(2Wheelers) ಸಂಖ್ಯೆ ಸುಮಾರು 33% ರಷ್ಟು ಹೆಚ್ಚಿವೆ. ಗಾಡಿಗಳ ಸಂಖ್ಯೆ ಹೆಚ್ಚಿದಂತೆ ಅವುಗಳ ಬಾಳಿಕೆ ಹೆಚ್ಚುವಂತೆ ನೋಡಿಕೊಳ್ಳುವುದು ಅಗತ್ಯ. ಪೆಟ್ರೋಲ್/ಡೀಸೆಲ್ ಗಾಡಿಗಳ ಹೋಲಿಕೆಯಲ್ಲಿ ಇಲೆಕ್ಟ್ರಿಕ್ ಗಾಡಿಗಳು ಬ್ಯಾಟರಿ ಗೂಡು(Battery Pack), ಇಲೆಕ್ಟ್ರಿಕ್ ಮೋಟಾರ್ ನಂತಹ ಬೇರೆ ಹಾಗೂ ಕಡಿಮೆ ಮೆಕ್ಯಾನಿಕಲ್ ಬಿಡಿಭಾಗ‍ಗಳನ್ನು ಹೊಂದಿರುತ್ತವೆ. ಹಾಗಾಗಿ ಇವುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತಾಗಿ ಈ ಬರಹ.

 

  • ಮೊದಲನೇಯದಾಗಿ ಬ್ಯಾಟರಿ:

ಬ್ಯಾಟರಿ ಅಂದರೆ ಮಿಂಕಟ್ಟು, ಇದರ ಆರೋಗ್ಯ ಬಲುಮುಖ್ಯ. ಸಾಮಾನ್ಯವಾಗಿ ಬ್ಯಾಟರಿಗಳು ಹಲವು ದಿನಗಳವರೆಗೆ ಬಳಸದೇ ಹಾಗೇ ಬಿಟ್ಟರೆ ತಮ್ಮ ಹುರುಪು(Charge) ಕಳೆದುಕೊಳ್ಳುತ್ತಾ ಹೋಗುತ್ತವೆ. ಬ್ಯಾಟರಿಗಳು ಹೆಚ್ಚಿನ ಬಿಸಿಲಿಗೊಡ್ಡಿಕೊಂಡಾಗಲೂ ಬೇಗನೆ ಹುರುಪು ಕಳೆದುಕೊಳ್ಳುತ್ತವೆ. ಒಮ್ಮೆ ಪೂರ್ತಿಯಾಗಿ ಹುರುಪು ತುಂಬಿ, ಬ್ಯಾಟರಿ ಹುರುಪು ಕಳೆದುಕೊಳ್ಳುವವರೆಗೆ ಅದನ್ನು ಒಂದು “ಚಾರ್ಜಿಂಗ್ ಸೈಕಲ್” ಎನ್ನುತ್ತಾರೆ. ಮಿಂಕಟ್ಟುಗಳು ಪದೇ ಪದೇ ಈ ರೀತಿಯ ಸುತ್ತಿಗೆ(Cycle) ಒಳಪಡುತ್ತಿರುತ್ತವೆ. ಇದೆಲ್ಲವೂ ಬ್ಯಾಟರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದೆಲ್ಲರಿಂದ ಕಾಪಾಡಲು, ನಿಮ್ಮ ಗಾಡಿಗಳನ್ನು ಆದಷ್ಟು ನೆರಳಿರುವ ಜಾಗಗಳಲ್ಲೇ ನಿಲ್ಲಿಸಿ.ಬ್ಯಾಟರಿಗಳಿಗೆ ಅಗತ್ಯವಿರುವ ಹುರುಪು ತುಂಬಿ,ಕೆಲವು ಗಾಡಿಗಳ ತಯಾರಕರು 85-90% ರಷ್ಟು ಮಾತ್ರ ಹುರುಪು ತುಂಬಿಸುವಂತೆ ತಿಳಿಸಿರುತ್ತಾರೆ, ಇವುಗಳನ್ನು ಪಾಲಿಸಬೇಕು. ದಿಢೀರನೆ ಗಾಡಿಯನ್ನು ಜೋರಾಗಿ ಓಡಿಸುವುದು, ದಿಢೀರನೆ ಬ್ರೇಕ್ ಹಾಕಿ ನಿಲ್ಲಿಸುವುದು ಪದೇ ಪದೇ ಮಾಡುವುದು ಒಳ್ಳೆಯದಲ್ಲ. ಈ ರೀತಿಯ ಗಾಡಿ ಓಡಿಸುವ ಅಭ್ಯಾಸ ಬಿಟ್ಟು ಬಿಡಿ. ತಗ್ಗು-ದಿಣ್ಣೆ ರಸ್ತೆ, ಅತಿ ಬಿಸಿಲು, ಕೆಸರು, ನೀರಿನಿಂದ ಕೂಡಿದ ದಾರಿಗಳಲ್ಲಿ ಓಡಿಸುವ ಅಗತ್ಯ ಬಂದಾಗ “ಬ್ಯಾಟರಿ ಸೇವರ್” ಮೋಡ್‌ನಲ್ಲಿ ಓಡಿಸುವುದು ಒಳ್ಳೆಯದು. ಪದೇ ಪದೇ, ಗಾಡಿಯ ಮಿಂಕಟ್ಟಿನ ಹುರುಪು 20%ಗಿಂತ ಕಡಿಮೆಯಾದಾಗ ಗಾಡಿಯನ್ನು ಓಡಿಸುವುದು ಬ್ಯಾಟರಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಈಗ ಬಹುತೇಕ ಗಾಡಿಗಳಿಗೆ ಡಿಸಿ ಫಾಸ್ಟ್‌ಚಾರ್ಜಿಂಗ್ ಅಂದರೆ 20-30 ನಿಮಿಷಗಳಲ್ಲಿ ಗಾಡಿಗೆ ವೇಗದಲ್ಲಿ ಹುರುಪು ತುಂಬುವ ಏರ್ಪಾಟುಗಳು ಸಿಗುತ್ತವೆ. ಇವುಗಳನ್ನು ಅತಿ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಅತಿಯಾಗಿ ಈ ಫಾಸ್ಟ್‌ಚಾರ್ಜಿಂಗ್ ಬಳಕೆಯಿಂದ ಬ್ಯಾಟರಿಯ ಒಳಗೆ ಹೆಚ್ಚಿನ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಇದರಿಂದ ಅವುಗಳ ಬಾಳಿಕೆ ಕಡಿಮೆಯಾಗುತ್ತದೆ.

  • ಎರಡನೇಯದಾಗಿ ಗಾಡಿಯ ಇಲೆಕ್ಟ್ರಿಕ್ ಮೋಟಾರ್:

ಮೋಟಾರ್‌ಗಳು ಅನುಮಾನಾಸ್ಪದವಾಗಿ ಸದ್ದು ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ಬಳಿ ಗಾಡಿಯನ್ನು ತೆಗೆದುಕೊಂಡು ಹೋಗಿ ನೆರವು ಪಡೆಯುವುದು ಒಳಿತು. ಮೋಟಾರ್‌ನ ತಂಪಿನ ಏರ್ಪಾಟು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಆಗಾಗ ಪರೀಕ್ಷಿಸಿಕೊಳ್ಳಿ.  ಮೋಟಾರ್ ಇಲ್ಲವೇ ಇತರೆ ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಗಾಡಿಯ ತೋರುಮಣೆಯಲ್ಲಿಯ(Dashboard) ದೀಪಗಳು ಹೊಳೆಯುವುದರ ಮೂಲಕ ಕೆಲಸ ಮಾಡದ ಏರ್ಪಾಟಿನ ಬಗ್ಗೆ ನಮಗೆ ಮಾಹಿತಿ ಒದಗಿಸುತ್ತಿರುತ್ತವೆ. ಇದನ್ನು ಗಮನಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

  • ಕೊನೆಯದಾಗಿ ಹೇಳಬೇಕೆಂದರೆ

 ಪೆಟ್ರೋಲ್/ಡೀಸೆಲ್ ಮುಂತಾದ ಒಳಉರಿವಿನ ಇಂಜೀನ್(IC Engine) ಹೊಂದಿರುವ ಗಾಡಿಗಳಂತೆ, ಇಲೆಕ್ಟ್ರಿಕ್ ಗಾಡಿಗಳಲ್ಲೂ ಬ್ರೇಕ್ ಏರ್ಪಾಟು(Brake System), ಒರೆಸುಕ(Wiper) ಮತ್ತು ಗಾಲಿಗಳು ಇದ್ದೇ ಇರುತ್ತವೆ. ತಡೆತದ ಏರ್ಪಾಟಿನ ತಂಪುಕ, ಒರೆಸುಕಕ್ಕೆ ಬೇಕಾಗುವ ನೀರು/ತಂಪುಕಗಳು ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಗಾಲಿಗಳಲ್ಲಿ ಗಾಳಿಯ ಒತ್ತಡದ ಮಟ್ಟ ಸರಿಯಾಗಿರಬೇಕು. ಇಂದಿನ ಬಹುಪಾಲು ಇಲೆಕ್ಟ್ರಿಕ್ ಗಾಡಿಗಳಲ್ಲಿ ರೀಜನರೇಟಿವ್ ಬ್ರೇಕಿಂಗ್ ಏರ್ಪಾಟು ಇರುತ್ತದೆ ಅಂದರೆ, ಗಾಡಿಗೆ ತಡೆ ಹಾಕಿದಾಗ(Brake Applied) ಗಾಲಿಗಳಲ್ಲಿರುವ ಕದಲಿಕೆಯ ಬಲ(Kinetic Energy) ಉಳಿಸಿಕೊಂಡು ಮೋಟಾರ್ ಮೂಲಕ ಗಾಡಿಗೆ ಅಗತ್ಯವಿರುವ ಸಂದರ್ಭದಲ್ಲಿ ಬಲ ಒದಗಿಸುವ ಏರ್ಪಾಟು. ಈ ಏರ್ಪಾಟುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು.

ಇಲೆಕ್ಟ್ರಿಕ್ ಬಂಡಿಗಳಲ್ಲಿ ಹೈ ವೋಲ್ಟೇಜ್, ಲೋ ವೋಲ್ಟೇಜ್ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಹೆಚ್ಚಿನ ಬಿಡಿಭಾಗಗಳು ಇರುತ್ತವೆ. ಇವುಗಳ ಬಳಕೆ ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಿ. ಮನೆಗಳಲ್ಲಿ ರಿಪೇರಿ, ಸರ್ವೀಸ್ ಮಾಡುವ ಸಾಹಸಕ್ಕೆ ಕೈಹಾಕಬಾರದು. ಇದಕ್ಕೆ ನುರಿತ ಮೆಕ್ಯಾನಿಕ್, ನೆರವುದಾಣಗಳಲ್ಲಿ ಕೊಂಡೊಯ್ದು ರಿಪೇರಿ ಮಾಡಿಸುವುದೇ ಸರಿಯಾದದ್ದು. ಗಾಡಿ ಬಳಕೆಯ ಕೈಪಿಡಿಯಲ್ಲಿ(Manual) ನೀಡಿರುವ ಎಲ್ಲ ಮಾಹಿತಿಗಳನ್ನು ಅನುಸರಿಸಿಕೊಂಡು ಹೋಗಬೇಕು.

 

ಮಾಹಿತಿ ಮತ್ತು ತಿಟ್ಟ ಸೆಲೆ: evpedia.co.in     freepik.com

ಬೆಳ್ಳಿ ಕಿರಣ ಮೂಡಿಸಿದ ಸಾಲಿಡ್ ಸ್ಟೇಟ್ ಬ್ಯಾಟರಿ

ಜಯತೀರ್ಥ ನಾಡಗೌಡ

ಬಹುತೇಕ ವಿದ್ಯುತ್ತಿನ ಕಾರುಗಳಲ್ಲಿ ಬಳಸಲ್ಪಡುವ ಲಿಥಿಯಮ್ ಅಯಾನ್ ಬ್ಯಾಟರಿ ಬದಲಿಗೆ ಸೋಡಿಯಮ್ ಅಯಾನ್ ಬ್ಯಾಟರಿಗಳ ಬಗ್ಗೆ ಸಂಶೋಧನೆಗಳು ಒಂದೆಡೆ ನಡೆಯುತ್ತಿದ್ದರೆ, ಸ್ಯಾಮ್‌ಸಂಗ್ ರವರ ಹೊಸದಾದ ಸಂಶೋಧನೆ ಬ್ಯಾಟರಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಹೆಸರುವಾಸಿ ಸ್ಯಾಮ್‌ಸಂಗ್ ಕಂಪನಿಯವರು ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ಕಂಡುಹಿಡಿದಿದ್ದು. ಬ್ಯಾಟರಿ ಉದ್ದಿಮೆಯಲ್ಲಿ ಇದು ಹೊಸತಾಗಿದೆ. ಇಂದು ಹೆಚ್ಚಾಗಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲ್ಪಡುವ ಎಲೆಕ್ಟ್ರೋಲೈಟ್‌ಗಳು ದ್ರವ ರೂಪದಲ್ಲಿರುತ್ತವೆ(Liquid State). ಆದರೆ, ಸ್ಯಾಮ್‌ಸಂಗ್ ಮುಂದಿಟ್ಟಿರುವ ಸಿಲ್ವರ್ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲಿ ಗಟ್ಟಿಯಾದ ಬೆಳ್ಳಿಯ ಎಲೆಕ್ಟ್ರೋಲೈಟ್‌ಗಳು ಇರಲಿವೆ.

ಸಾಮಾನ್ಯ ಮಿಂಕಟ್ಟುಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳೇ ಅಯಾನ್‌ಗಳು ಕ್ಯಾಥೋಡ್ ಮತ್ತು ಅನೋಡ್ ಬದಿ ಬೇರ್ಪಡುವಂತೆ ಮಾಡುತ್ತವೆ. ಈ ದ್ರವರೂಪದ ಎಲೆಕ್ಟ್ರೋಲೈಟ್ ಬದಲು ಇದೇ ಮೊದಲ ಬಾರಿಗೆ ಘನರೂಪದ ಗಟ್ಟಿಯಾದ ಬೆಳ್ಳಿ-ಇಂಗಾಲದ(Silver-Carbon, Ag-C) ಎಲೆಕ್ಟ್ರೋಲೈಟ್ ಅಭಿವೃದ್ಧಿ ಪಡಿಸಲಾಗಿದೆ. ಗಟ್ಟಿಯಾದ ಎಲೆಕ್ಟ್ರೋಲೈಟ್ ಹೆಚ್ಚಿನ ಅಳುವು ಹೊಂದಿವೆ. ಸಾಮಾನ್ಯ ದ್ರವ ರೂಪದ ಎಲೆಕ್ಟ್ರೋಲೈಟ್ ಸುಮಾರು 270 Wh/kg ಅಳುವು ಹೊಂದಿದ್ದರೆ, ಗಟ್ಟಿಯಾದ ಎಲೆಕ್ಟ್ರೋಲೈಟ್ 500 Wh/kg ನಷ್ಟು ಹೆಚ್ಚಿನ ಅಳುವು ಹೊಂದಿದೆ. ಇದು ಅಲ್ಲದೇ, ದ್ರವರೂಪದ ಎಲೆಕ್ಟ್ರೋಲೈಟ್‌ಗಳು ಉರಿ ಹೊತ್ತಿಕೊಳ್ಳಬಲ್ಲವಂತವು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಸ್ಯಾಮ್‌ಸಂಗ್ ರವರ ಗಟ್ಟಿಯಾದ ಬೆಳ್ಳಿಯ ಮಿನ್ನೊಡೆಕಗಳಲ್ಲಿ(Electrolyte) ಈ ಅಪಾಯ ಇರುವುದಿಲ್ಲ.  ಹೆಚ್ಚಿನ ಅಳುವು ಹೊಂದಿರುವ ಸಾಲಿಡ್ ಸ್ಟೇಟ್ ಎಲೆಕ್ಟ್ರೋಲೈಟ್ ಮಿಂಕಟ್ಟುಗಳು ಒಮ್ಮೆ ಹುರುಪು(Charge) ತುಂಬಿದರೆ ಹೆಚ್ಚಿನ ದೂರದವರೆಗೆ ಸಾಗಬಲ್ಲವು ಅಂದರೆ ಸುಮಾರು 960 ಕಿಮೀಗಳಷ್ಟು.

ಈ ಬ್ಯಾಟರಿಗಳಿಗೆ ಕೇವಲ 9-10 ನಿಮಿಷಗಳಲ್ಲಿ ಪೂರ್ತಿಯಾಗಿ ಹುರುಪು ತುಂಬಬಹುದಾಗಿದೆ. ಹೆಚ್ಚಿನ ಅಳುವು(Efficiency), ಒಮ್ಮೆ ಹುರುಪು ತುಂಬಿಸಿದರೆ ಹೆಚ್ಚು ದೂರದವರೆಗೆ ಸಾಗಣೆ ಹಾಗೂ ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುವ ಈ ಬ್ಯಾಟರಿಗಳು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಾಕಷ್ಟು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಹೇಳಿಕೊಂಡಿದೆ.  ಈಗಾಗಲೇ ಇಂತಹ ಬೆಳ್ಳಿಯ ಮಿಂಕಟ್ಟುಗಳ ಮಾದರಿಗಳನ್ನು ತಯಾರಿಸಿ ಕೆಲವು ಕಾರುತಯಾರಕರಿಗೆ ಸ್ಯಾಮ್‌ಸಂಗ್ ಸಂಸ್ಥೆ ನೀಡಿದ್ದು, ಅವರ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿವೆಯಂತೆ.

ಬೆಳ್ಳಿ ಲೋಹ ದುಬಾರಿಯಾಗಿರುವುದು ಇಂತಹ ಬ್ಯಾಟರಿಗಳ ಬೆಳವಣಿಗೆಗೆ ಇರುವ ಮೊದಲ ತೊಡಕು. ಈ ಬೆಳವಣಿಗೆಯಿಂದ ಬೆಳ್ಳಿಗೆ ಬೇಡಿಕೆ ಏರಿಕೆಯಾಗಿ ಅದರ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಘನರೂಪದ ಮಿಂಕಟ್ಟುಗಳು ಹೆಚ್ಚಿನ ಮಿಂಚಿನ ಕಾರುಗಳಲ್ಲಿ ಬಳಕೆಯಾಗಲಿದ್ದು, ಚೀನಾ ಮೂಲದ ಲಿಥಿಯಮ್-ಅಯಾನ್ ಬ್ಯಾಟರಿ ಕಂಪನಿಗಳಿಗೆ ಇದು ಪಣವೊಡ್ಡಲಿದೆ ಎಂಬುದು ಆಟೋಮೊಬೈಲ್ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿ.

ತಿಟ್ಟ ಮತ್ತು ಮಾಹಿತಿ ಸೆಲೆ:

chargedevs.com

samsung.com

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-1)

ಜಯತೀರ್ಥ ನಾಡಗೌಡ

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಷ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಬೇಕೆಬೇಕು. ಹಗಲಿರುಳು ಓಡಾಟಕ್ಕೆ ಬಳಸಲ್ಪಡುವ ಕಾರುಗಾಡಿಗಳು ಕೆಲವೊಮ್ಮೆ ದಿಢೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ (Service Centre) ಅಂದರೆ ಸರ್ವೀಸ್ ಸೆಂಟರ್‌ಗಳಿಗೆ ಕರೆದೊಯ್ದು ರಿಪೇರಿ ಮಾಡಿಸಬಹುದು, ಆದರೆ ಪ್ರತಿಸಲವೂ ಚಿಕ್ಕ ಪುಟ್ಟ ರಿಪೇರಿಗಳಿಗೆ ನೆರವುದಾಣಕ್ಕೆ ಬಂಡಿಯನ್ನು ಕರೆದೊಯ್ಯಲು ಸಾಕಷ್ಟು ಹೊತ್ತು ಮತ್ತು ದುಡ್ಡು ನೀಡಬೇಕಾಗಿ ಬರಬಹುದು. ಪ್ರತಿ ಬಾರಿ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸುವ ಬದಲು ಮನೆಯಲ್ಲೇ ಸರಿಪಡಿಸಿದರೆ ಸಮಯ ಮತ್ತು ಹಣ, ಎರಡನ್ನು ಉಳಿಸಬಹುದು. ಕಾರುಗಾಡಿಗಳ ಹತ್ತಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲೇ ಸರಿಪಡಿಸಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

  1.   ಮಂಜುಗಟ್ಟಿದ ಗಾಳಿತಡೆ (Wind shield):

ಚಳಿಗಾಲ ಹೆಚ್ಚುತ್ತಿದ್ದಂತೆ ಎಲ್ಲೆಡೆ ಇಬ್ಬನಿ, ಮಂಜುಗಟ್ಟುವುದು ಸಾಮಾನ್ಯ. ರಾತ್ರಿ ಹೊತ್ತಿನಲಿ, ಬಂಡಿಗಳನ್ನು ಚಳಿ, ಗಾಳಿಗೆ ಮಯ್ಯೊಡ್ಡಿ ನಿಲ್ಲಿಸಿರುತ್ತೇವೆ. ಬೆಳಿಗ್ಗೆ ಎದ್ದು ನೋಡಿದರೆ ವಿಂಡ್‌ಶೀಲ್ಡ್ ಗಾಜು ಮಂಜಿನಿಂದ ಹೆಪ್ಪುಗಟ್ಟಿರುತ್ತದೆ. ಕೆಲವೊಂದು ಬಂಡಿಗಳಲ್ಲಿ ಮಂಜಿಳಕ (Defogger) ಎಂಬ ಮಂಜನ್ನು ಕರಗಿಸುವ ಏರ್ಪಾಟು ಅಳವಡಿಸಿರುತ್ತಾರೆ. ಅದು ಕಾರು ಮಾಲೀಕರ ಕೆಲಸವನ್ನು ಹಗುರ ಮಾಡುತ್ತದೆ. ಆದರೆ ಆದರೆ ಕೆಲವು ಹಳೆಯ ಮಾದರಿ ಗಾಡಿಗಳಲ್ಲಿ ಈ ಏರ್ಪಾಟು ಕಂಡುಬರುವುದಿಲ್ಲ. ಆದ್ದರಿಂದ ಡಿಫಾಗರ್ ಹೊಂದಿಲ್ಲದ ಕಾರು ಹೊಂದಿರುವವರು ಅಥವಾ ಡಿಫಾಗರ್ ಕೆಲಸ ಮಾಡದ ಸಂದರ್ಭಗಳಲ್ಲಿ ಈ ರೀತಿ ಮಾಡಬಹುದು: ಗಾಳಿತಡೆಯ ಮೇಲಿನ ಧೂಳು, ಕಸ ಕಡ್ಡಿಗಳಿದ್ದರೆ ಒರೆಸಿ ತೆಗೆಯಿರಿ. ಟೂತ್ ಪೇಸ್ಟ್ ತೆಗೆದುಕೊಂಡು ಒಂಚೂರು ಗಾಳಿತಡೆಯ (Windshield) ಗಾಜಿಗೆ ಹಚ್ಚಿ. ಮೆತ್ತನೆಯ ಬಟ್ಟೆಯೊಂದನ್ನು ತೆಗೆದುಕೊಂಡು, ಗಾಜನ್ನು ಪೂರ್ತಿಯಾಗಿ ಒರೆಸಿಬಿಡಿ. ನೀರಾವಿ, ನೀರಿನ ಹನಿಗಳು ಇಂಗಿ ಮಂಜುಗಟ್ಟುವುದನ್ನು ಟೂತ್ ಪೇಸ್ಟ್ ತಡೆಯುತ್ತದೆ.

  1. ಬಂಡಿ ಘಮಘಮಿಸುವಂತೆ ಹೀಗೆ ಮಾಡಿ:

ದೂರದ ಊರುಗಳಿಗೆ ಪಯಣಿಸುವಾಗ ಬಂಡಿಯಲ್ಲೇ ಕುಳಿತು ತಿಂಡಿ ತಿನಿಸುಗಳನ್ನು ತಿನ್ನಬೇಕಾಗಿ ಬರುತ್ತದೆ. ಕೆಲವೊಮ್ಮೆ ತಿನಿಸಿನ ಸಾಮಾನುಗಳನ್ನು ಬಂಡಿಯಲ್ಲಿಟ್ಟು ಹಬ್ಬ ಹರಿದಿನಗಳಂದು ಸಾಗಿಸುವುದು ಉಂಟು. ಇಂತ ಸಂದರ್ಭಗಳಲ್ಲಿ ತಿಂಡಿ ತಿನಿಸಿನ ವಾಸನೆ ಒಂದೆರಡು ದಿನಗಳವರೆಗೆ ಬಂಡಿಗಳಲ್ಲಿಯೇ ಉಳಿದು . ಕೆಟ್ಟ ವಾಸನೆ ಬರುವುದುಂಟು. ಕಳೆಯೇರಿಸುಕಗಳಿದ್ದರೆ (Air Freshener) ಅವುಗಳನ್ನು ಬಳಸಿ ಈ ಕೆಟ್ಟ ವಾಸನೆಗೆ ತಡೆ ಹಾಕಬಹುದು. ಬಂಡಿಯೊಳಗಿನ ಎರ್ ಫ್ರೆಶ್ನರ್ ಖಾಲಿಯಾಗಿದ್ದರೆ ಅಥವಾ ಎರ್ ಫ್ರೆಶ್ನರ್‌ಗಳಿಂದ ಅಲರ್ಜಿಯಿದ್ದರೆ, ಚಿಂತೆಬೇಡ. ಇದಕ್ಕೊಂದು ಮನೆ ಮದ್ದು ಉಂಟು. ಕಲ್ಲಿದ್ದಿಲು ತೆಗೆದುಕೊಂಡು ಕಲ್ಲಿದ್ದಲನ್ನು ಪುಡಿಯಾಗಿಸಿ, ಅದರೊಂದಿಗೆ ಅಡುಗೆ ಸೋಡಾ ಬೆರೆಸಬೇಕು. ಈ ಬೆರಕೆಯನ್ನು ಕಾರಿನ ಒಳಭಾಗದಲ್ಲೆಲ್ಲ ಚಿಮುಕಿಸಿ ಸ್ವಲ್ಪ ಹೊತ್ತು ಬಿಡಬೇಕು. ಸುಮಾರು ಒಂದು ಗಂಟೆಯ ನಂತರ ಈ ಪುಡಿಯನ್ನು ಗುಡಿಸಿ , ಬಂಡಿಯನ್ನು ಹಸನಾಗಿಸಿ. ಗಾಡಿಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಮಂಗ ಮಾಯವಾಗಿರುತ್ತದೆ.

  1. ಕೊಳೆಯಾದ ಕೂರುಮಣೆ ಸುಚಿಯಾಗಿಸಿ:

ಗಾಡಿಯಲ್ಲಿ ಕುಳಿತು ತಿಂಡಿ ತಿಂದಾಗ ಕೆಲವೊಮ್ಮೆ ಚಹಾ, ಕಾಪಿ ಬಿದ್ದು ಕೂರುಮಣೆಯ (Seat) ಮೇಲೆ ಜಿಡ್ಡಿನ ಕಲೆಗಳಾಗಿ ಬಿಡಬಹುದು. ಈ ಕಲೆಗಳನ್ನು ತೆಗೆಯಲು ಸರ್ವೀಸ್ ಸೆಂಟ ರ್‌ಗಳಿಗೆ ಹೋದರೆ ಅಲ್ಲಿ ದುಬಾರಿ ಹಣನೀಡಬೇಕಾಗುವುದು. ಇದರ ಬದಲಾಗಿ ಮನೆಯಲ್ಲಿ ಇದನ್ನು ಸುಳುವಾಗಿ ಹಸನಾಗಿಸಬಹುದು. ಮನೆಯಲ್ಲಿ ಗಾಜು ಒರೆಸಲು ಬಳಸುವ ಎಣ್ಣೆಯನ್ನು ತೆಗೆದುಕೊಂಡು, ಮೆತ್ತನೆಯ ಹಾಳೆ ಇಲ್ಲವೇ ಬಟ್ಟೆಗೆ ಸಿಂಪಡಿಸಬೇಕು. ಹೀಗೆ ಒದ್ದೆಯಾದ ಬಟ್ಟೆ/ಹಾಳೆಯನ್ನು ಕಲೆಯಾದ ಜಾಗದಲ್ಲಿ 5 ನಿಮಿಷಗಳವರೆಗೆ ಇಡಬೇಕು. ನೋಡು ನೋಡುತ್ತಿದ್ದಂತೆ ಕಲೆ ಹೊರಟು ಹೋಗಿರುತ್ತದೆ. ಬಟ್ಟೆ/ಹಾಳೆಯನ್ನು ಕಲೆಯಿರುವ ಜಾಗದಲ್ಲಿ ತಿಕ್ಕಿದರೆ, ಕಲೆ ಎಲ್ಲೆಡೆ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಬೇಕು. ಕೀಲೆಣ್ಣೆ (Grease) ಜಿಡ್ಡಿನ ಕಲೆಗಳಿದ್ದರೆ ಹೀಗೆ ಮಾಡಿ. ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಡಿಟರ್ಜಂಟ್ ಅನ್ನು ನೀರಿನೊಂದಿಗೆ ಬೆರೆಸಿ, ಜಿಡ್ಡು ಇರುವ ಜಾಗದ ಮೇಲೆ ಚೆನ್ನಾಗಿ ತಿಕ್ಕಬೇಕು. ಬಂಡಿಯಲ್ಲಿ ಹೆಚ್ಚು ಹೊತ್ತು ಪಯಣಿಸುವಾಗ ಕೆಲವರಿಗೆ ವಾಂತಿಯಾಗುವುದು ಸಹಜ. ಇಂತಹ ವಾಂತಿ ಕಲೆಗಳೇನಾದರೂ ಇದ್ದರೆ, ಆ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ನಂತರ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಕಲೆಯಿರುವ ಜಾಗಕ್ಕೆ ಒರೆಸಿದರೆ, ಅಡುಗೆ ಸೋಡಾ ಕೆಟ್ಟ ವಾಸನೆ ಬರುವುದನ್ನು ತಡೆಯುತ್ತದೆ. ನೀರು ಬಳಸಿ ತೊಳೆಯುವುದರಿಂದ, ಜಾಗ ಹಸಿಯಾಗಿರುತ್ತದೆ. ಇದನ್ನು ಬೇಗನೆ ಒಣಗಿಸಲು, ಕೂದಲು ಒಣಗಿಸಲು ಬಳಸುವ ಹೇರ್ ಡ್ರೈಯರ್ (Hair Dryer) ಉಪಯೋಗಿಸಬಹುದು.

  1. ಡಿಕ್ಕಿಕಾಪನ್ನು(Bumper) ಹೀಗೆ ಸರಿಪಡಿಸಿ:

ಇಂದಿನ ದಿನಗಳಲ್ಲಿ ಸಂಚಾರಿ ದಟ್ಟಣೆಗೆ (Traffic Jam) ಹಲವು ಊರುಗಳು ನಲಗುತ್ತಿವೆ. ಎಶ್ಟೋ ಸಾರಿ, ಎರಡು ಗಾಡಿಗಳ ಮಧ್ಯೆ ಎಳ್ಳಷ್ಟೂ ಜಾಗವಿರದಷ್ಟು ದಟ್ಟಣೆ. ಈ ವಾಹನಗಳ ದಟ್ಟಣೆಯಲ್ಲಿ ಆಮೆ ವೇಗದಲ್ಲಿ ಸಾಗುವ ಕಾರುಗಳು ಒಮ್ಮೊಮ್ಮೆ ಗುದ್ದಿಕೊಳ್ಳುವುದುಂಟು. ಮೆಲ್ಲಗೆ ಸಾಗುತ್ತಿರುವ ಗಾಡಿಗಳ ಗುದ್ದುವಿಕೆಯಿಂದ ದೊಡ್ಡ ಅನಾಹುತ ಆಗದೇ ಹೋದರು, ಬಂಡಿಗಳ ಡಿಕ್ಕಿಕಾಪು (Bumper) ಸುಲಭವಾಗಿ ನೆಗ್ಗಿ ಬಿಡುತ್ತವೆ. ನೆಗ್ಗಿದ ಬಂಡಿಯ ಡಿಕ್ಕಿಕಾಪಿನ ಭಾಗವನ್ನು ಸುಳುವಾಗಿ ಮನೆಯಲ್ಲೇ ಸರಿಪಡಿಸಬಹುದು. ಅದಕ್ಕಾಗಿ ಒಂದರ್ಧ ಬಕೆಟ್‌ನಶ್ಟು ಬಿಸಿ ನೀರು ತೆಗೆದುಕೊಳ್ಳಬೇಕು. ಈ ಬಿಸಿ ನೀರನ್ನು ನೆಗ್ಗಿದ ಭಾಗದಲ್ಲಿ ಸುರಿಯಬೇಕು. ಬಿಸಿ ನೀರು ಬೀಳುವುದರಿಂದ ಡಿಕ್ಕಿ ಕಾಪು ಹಿಗ್ಗಿ ತನ್ನ ಮೊದಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಮೊದಲಿನ ಆಕಾರಕ್ಕೆ ಹೊಂದಿಕೊಳ್ಳದೇ ಹೋದರೆ, ಒಳಗಡೆಯಿಂದ ಮೆಲ್ಲನೆ ದೂಡಿದರೆ ಸಾಕು, ಅದು ಮೊದಲಿನಂತಾಗಿರುತ್ತದೆ. ಇದನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆವಹಿಸಿ ಮಾಡಬೇಕು.

  1. ಮಿಂಕಟ್ಟು(Battery) ಕೆಲಸ ಮಾಡದೇ ಹೋದಾಗ?:

ಎಷ್ಟೋ ಸಾರಿ ಗಾಡಿ ಶುರು ಮಾಡಲು ಹೋದಾಗ, ಬಿಣಿಗೆ(Engine) ಶುರು ಆಗುವುದೇ ಇಲ್ಲ. ಕಾರಿನ ಮಿಂಕಟ್ಟು ಸರಿಯಾಗಿ ಮಿಂಚಿನ ಪೂರೈಕೆ ಮಾಡದೇ ಇರುವುದರಿಂದ ಹೀಗಾಗುತ್ತದೆ. ಬ್ಯಾಟರಿ ಚಾರ್ಜ್ ಕಳೆದುಕೊಂಡು ಬಾಳಿಕೆ ಕಡಿಮೆಯಾಗುತ್ತಿದೆ ಎಂದೇ ಇದರರ್ಥ. ಆದರೂ ಚಿಂತಿಸಬೇಕಿಲ್ಲ, ಈ ಗಾಡಿಯನ್ನು ಇನ್ನೊಂದು ಬಂಡಿಯ ಬ್ಯಾಟರಿ ಮೂಲಕ ಶುರು ಮಾಡಬಹುದು. ಇದಕ್ಕೆ ಜಂಪರ್ ತಂತಿಗಳ(Jumper Cable) ಅಗತ್ಯವಿದೆ. ಹೀಗೆ ಜಂಪರ್ ತಂತಿ ಬಳಸಿ ಗಾಡಿಯನ್ನು ಶುರು ಮಾಡುವುದನ್ನು ಜಂಪ್ ಸ್ಟಾರ‍್ಟ್(Jump Start) ಎಂದೇ ಕರೆಯುತ್ತಾರೆ. ಇದನ್ನು ಸುಳುವಾಗಿ ಅರಿಯಲು, ಶುರುವಾಗದೇ ಇರುವ ಗಾಡಿಯನ್ನು ಗಾಡಿ-1 ಮತ್ತು ಅದಕ್ಕೆ ಚಾರ್ಜ್ ಒದಗಿಸಲಿರುವ ಗಾಡಿಯನ್ನು ಗಾಡಿ-2 ಎಂದುಕೊಳ್ಳಿ. ಎರಡು ಗಾಡಿಗಳ ಬಿಣಿಗವಸು(Bonnet/Hood) ಮೇಲೆತ್ತಿ ಮಿಂಕಟ್ಟಿನ ಕೂಡು ತುದಿ(Positive Terminal) ಪತ್ತೆ ಹಚ್ಚಿಕೊಳ್ಳಿ. ಹೆಚ್ಚಿನ ಬ್ಯಾಟರಿಗಳಲ್ಲಿ ಕೂಡು ತುದಿಯನ್ನು ಕೆಂಪನೆ ಬಣ್ಣದ ಮುಚ್ಚಳದಿಂದ ಮುಚ್ಚಿರುತ್ತಾರೆ ಮತ್ತು ಅದು ಕಳೆ ತುದಿಗಿಂತ(Negative Terminal) ಕೊಂಚ ದೊಡ್ಡದಾಗಿರುತ್ತದೆ. ಕೆಂಪು ಬಣ್ಣದ ಜಂಪರ್ ತಂತಿ ಮೂಲಕ ಎರಡು ಕಾರುಗಳ ಮಿಂಕಟ್ಟಿನ ಕೂಡು ತುದಿಗಳನ್ನು ಸೇರಿಸಿ. ಗಾಡಿ-2 ರ ಕಳೆ ತುದಿಗೆ ಕಪ್ಪು ಬಣ್ಣದ ಜಂಪರ್ ಸಿಕ್ಕಿಸಿ ಅದನ್ನು ಗಾಡಿ-1ರ ಲೋಹದ ಭಾಗಕ್ಕೆ(Metal Surface) ಮುಟ್ಟಿಸಿ. ಗಾಡಿಗಳ ಮಿಂಕಟ್ಟಿನ ಎರಡು ತುದಿಗಳು ಒಂದಕ್ಕೊಂದು ತಾಗದಂತೆ ಎಚ್ಚರವಹಿಸಿ. ಈಗ ಗಾಡಿ-2 ನ್ನು ಶುರು ಮಾಡಿ 10ನಿಮಿಷಗಳವರೆಗೆ ಹಾಗೇ ಬಿಡಿ. 10 ನಿಮಿಷಗಳಲ್ಲಿ ಗಾಡಿ-2ರ ಮಿಂಕಟ್ಟಿನಿಂದ ಸಾಕಶ್ಟು ಮಿಂಚು ಗಾಡಿ-1ರ ಮಿಂಕಟ್ಟಿಗೆ ಪೂರೈಕೆಯಾಗಿ, ಅದರಲ್ಲಿ ಮಿಂಚಿನ ಹುರುಪು (Electric Charge) ತುಂಬಿಕೊಂಡಿರುತ್ತದೆ. ಈಗ ಗಾಡಿ-1 ನ್ನು ಶುರು ಮಾಡಿ, ಯಾವುದೇ ತೊಂದರೆಯಿಲ್ಲದೇ ಬಂಡಿ ಶುರುವಾಗುತ್ತದೆ.

 

ಬ್ಯಾಟರಿಲೋಕದ ಹೊಸ ಚಳಕ

ಜಯತೀರ್ಥ ನಾಡಗೌಡ.

ಬ್ಯಾಟರಿ ಇಲ್ಲವೇ ಮಿಂಕಟ್ಟು ಈ ಪದದ ಹೆಸರು ಕೇಳದವರು ಅತಿ ಕಡಿಮೆ. ರೇಡಿಯೋ, ರಿಮೋಟ್, ಮಕ್ಕಳ ಆಟಿಕೆಯಿಂದ ಹಿಡಿದು ಮೊಬೈಲ್, ಕಾರು, ಬಸ್‌ಗಳಲ್ಲಿ ಬಳಕೆಯಾಗಲ್ಪಡುವ ವಸ್ತುವಾಗಿ ಬೆಳೆದಿದೆ. ಬಂಡಿಯ ಇಲೆಕ್ಟ್ರಿಕ್ ಏರ್ಪಾಟು ನಡೆಸಲಷ್ಟೇ ಸೀಮಿತವಾಗಿದ್ದ ಬ್ಯಾಟರಿ, ಇಂದು ಮಿಂಚಿನ ಬಂಡಿಗಳ(Electric Vehicle) ಪ್ರಮುಖ ಭಾಗವಾಗಿದೆ. ಮಿಂಚಿನ ಬಂಡಿಗಳ ಬಳಕೆ ಹೆಚ್ಚುತ್ತಿರುವಂತೆ ಅವುಗಳಲ್ಲಿ ಬಳಸಲ್ಪಡುವ ಬ್ಯಾಟರಿ ತಾಳಿಕೆ-ಬಾಳಿಕೆ ಬಗ್ಗೆಯೂ ಹೆಚ್ಚಿನ ಅರಕೆಗಳು ನಡೆಯುತ್ತಿವೆ. ಇಂದು ಬಹುಪಾಲು ಮೊಬೈಲ್, ಮಿಂಚಿನ ಬಂಡಿಗಳಲ್ಲಿ ಕಂಡುಬರುವ ಮಿಂಕಟ್ಟು ಲಿಥಿಯಮ್-ಅಯಾನ್ ರಾಸಾಯನಿಕಗಳಿಂದ ಮಾಡಲ್ಪಟ್ಟಿವೆ. ಹೆಚ್ಚಿನ ಬಾಳಿಕೆಗೆ ಹೆಸರಾಗಿರುವ ಲಿಥಿಯಮ್-ಅಯಾನ್ ಬ್ಯಾಟರಿ ಬಳಕೆ ಎಲ್ಲೆಡೆ ಹೆಚ್ಚುತ್ತಿದೆ. ಹೆಚ್ಚು ಲಿಥಿಯಮ್ ನಿಕ್ಷೇಪ ಹೊಂದಿರುವ ಚೀನಾ ದೇಶ, ಲಿಥಿಯಮ್-ಅಯಾನ್ ಮಿಂಕಟ್ಟು ಬಳಕೆ ಹೆಚ್ಚಿಸಿ ಜಗತ್ತಿನ ಮೇಲೆ ತನ್ನ ಹಿಡಿತ ಪಡೆಯುವತ್ತ ಮುನ್ನುಗ್ಗಿದೆ. ಅದರಲ್ಲೂ ಮಿಂಚಿನ ಕಾರುಗಳಲ್ಲಿ ಬಳಸಲ್ಪಡುವ ಬಹುತೇಕ ಲಿಥಿಯಮ್-ಅಯಾನ್ ಮಿಂಕಟ್ಟುಗಳು ಚೀನಾ ದೇಶದಿಂದ ಬರುತ್ತಿವೆ. ಇದರಿಂದ ಜಾಗತಿಕ ಸರಬರಾಜು ಸರಪಳಿ ಮೇಲೂ ಸಾಕಷ್ಟು ಒತ್ತಡ ಬಂದಿದೆ. ಇದನ್ನು ಮೆಟ್ಟಿನಿಲ್ಲಲು ಹೊಸದೊಂದು ರಾಸಾಯನಿಕ,  ಸೋಡಿಯಮ್-ಅಯಾನ್ ಬ್ಯಾಟರಿ ಈಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಅರಕೆ ಮಾಡಿದ ವಿಜ್ಞಾನಿಗಳು ಸೋಡಿಯಮ್ , ಲಿಥಿಯಮ್ ಗಿಂತ ಹೆಚ್ಚಿನ ಅನುಕೂಲ ಹೊಂದಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಸೋಡಿಯಮ್ ಕಡಲ ನೀರಿನಲ್ಲಿ ಹೇರಳವಾಗಿ ಸಿಗುವ ರಾಸಾಯನಿಕವಾದ್ದರಿಂದ, ಕಡಲ ನೀರನ್ನು ಭಟ್ಟಿಕರೀಸಿ ಸೋಡಿಯಮ್ ಪಡೆಯಬಹುದು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೆಲೆಯಲ್ಲೂ ಅಗ್ಗವಾಗಿರಲಿವೆ. ಸೋಡಿಯಮ್-ಅಯಾನ್ ಬ್ಯಾಟರಿ ಹೇಗೆ ಲಿಥಿಯಮ್-ಅಯಾನ್ ಮಿಂಕಟ್ಟುಗಳಿಗಿಂತ ಹೆಚ್ಚು ಅನುಕೂಲವಾಗಿರಲಿದೆ ನೋಡೋಣ ಬನ್ನಿ.

ಸೋಡಿಯಮ್-ಅಯಾನ್ ಮಿಂಕಟ್ಟನ್ನು ತೋರಿಸುವ ತಿಟ್ಟ

ಸಿಗುವಿಕೆ ಕುರಿತು ನೋಡಿದಾಗ ಸೋಡಿಯಮ್ ಸುಲಭವಾಗಿ ಸಿಗುವಂತ ರಾಸಾಯನಿಕ, ಕಡಲ ನೀರಿನಿಂದಲೂ ಸೋಡಿಯಮ್ ಸುಲಭ ಮತ್ತು ಅಗ್ಗವಾಗಿ ಪಡೆಯಬಹುದು. ಲಿಥಿಯಮ್ ಚೀನಾ, ಅರ್ಜಂಟೀನಾ ಹೀಗೆ ಕೆಲವೇ ದೇಶಗಳಲ್ಲಿ ಸಿಗುತ್ತಿದೆ. ಸೋಡಿಯಮ್, ಸಾಗಣೆ ಮತ್ತು ಕೂಡಿಡಲು ಯಾವುದೇ ಅಪಾಯ ತಂದೊಡ್ಡುವುದಿಲ್ಲ. ಲಿಥಿಯಮ್ ಅನ್ನು ಸಾಗಿಸುವುದು ಮತ್ತು ಕೂಡಿಡುವುದು ಕಷ್ಟದ ಕೆಲಸ, ಸಾಗಿಸುವಾಗ  ಸಾಮಾನ್ಯವಾಗಿ 30% ಹುರುಪು(Charge) ಬ್ಯಾಟರಿಗಳಲ್ಲಿ ಇರಲೇಬೇಕು. ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ಕಾರ್ಬನ್ ಮೂಲದ ಆನೋಡ್(Anode) ಮತ್ತು ತಾಮ್ರದ ಕರೆಂಟ್ ಕಲೆಕ್ಟರ್‌ಗಳ(Copper Current Collector) ಬಳಕೆ ಮಾಡಿರುವುದರಿಂದ, ಇದು ಶಾರ್ಟ್ ಸರ್ಕ್ಯೂಟ್ ಮೂಲಕ ಬೆಂಕಿ ಅವಘಡದಂತ ಇರ್ಕು(Risk) ತಂದೊಡ್ಡಬಲ್ಲುದು. ಸೋಡಿಯಮ್-ಅಯಾನ್ ಮಿಂಕಟ್ಟನ್ನು ಹುರುಪಿಲ್ಲದೇ(Zero Charge) ಸುಲಭವಾಗಿ ಸಾಗಿಸಬಹುದು, ಇದರಲ್ಲಿ ಕಾರ್ಬನ್ ಮೂಲದ ಆನೋಡ್ ಮತ್ತು ಅಲ್ಯುಮಿನಿಯಮ್ ಕರೆಂಟ್ ಕಲೆಕ್ಟರ್‌ಗಳು ಇರುವುದರಿಂದ ಯಾವುದೇ ಅಪಾಯವಿಲ್ಲ. ಹಾಗೆಯೇ ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ತಾಮ್ರದ ಕಲೆಕ್ಟರ್‌ಗಿಂತ  ಸೋಡಿಯಮ್-ಅಯಾನ್ ಬ್ಯಾಟರಿಗಳ ಅಲ್ಯುಮಿನಿಯಮ್ ಕಲೆಕ್ಟರ್‌ಗಳು ಅಗ್ಗವಾಗಿವೆ. ಸೋಡಿಯಮ್‌ನ ಮಿಂಕಟ್ಟುಗಳು ಹೆಚ್ಚಿನ ಬಿಸುಪನ್ನು ತಡೆಕೊಳ್ಳುವ ಶಕ್ತಿಹೊಂದಿವೆ, ಅಂದರೆ ಹೆಚ್ಚು ಬಿಸುಪಿನ ವಾತಾವರಣದಲ್ಲಿ ಹೆಚ್ಚಿನ ಬಾಳಿಕೆ ಬರುತ್ತವೆ. ಆದರೆ ಲಿಥಿಯಮ್ ಮಿಂಕಟ್ಟುಗಳು ಸೋಡಿಯಮ್ ಮೂಲದ ಮಿಂಕಟ್ಟುಗಳಷ್ಟು ಬಿಸುಪನ್ನು ತಡೆಯಲಾರವು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೇಗನೆ ಹುರುಪು(Charge) ಪಡೆಕೊಳ್ಳಬಲ್ಲವು ಮತ್ತು ಇದರಿಂದ ಇವುಗಳ ಲಿಥಿಯಮ್ ಅಯಾನ್ ಬ್ಯಾಟರಿಗಳಿಗಿಂತ 3ಪಟ್ಟು ಹೆಚ್ಚಿನ ಕಾಲ ಬಾಳಿಕೆ ಹೊಂದಿವೆ.

ಸೋಡಿಯಮ್-ಅಯಾನ್ ಮಿಂಕಟ್ಟುಗಳು ಕೆಲವು ಅನಾನುಕೂಲಗಳನ್ನು ಹೊಂದಿವೆ. ಅವು ಹೀಗಿವೆ:

  1. ಸೋಡಿಯಮ್ ಬ್ಯಾಟರಿಗಳ ಸರಬರಾಜು-ಸರಪಳಿ ಏರ್ಪಾಟು(Supply Chain System) ಇನ್ನೂ ತಕ್ಕಮಟ್ಟಿಗೆ ಬೆಳೆದಿಲ್ಲ. ಸಾಕಷ್ಟು ಕೊರತೆಗಳಿವೆ.
  2. ಈ ಚಳಕ(Technology) ಇನ್ನೂ ಎಳವೆಯಲ್ಲಿದೆ ಎನ್ನಬಹುದು, ಕೇವಲ ಬೆರಳೆಣಿಕೆ ಕಂಪನಿಗಳು ಮಾತ್ರ ಇದರಲ್ಲಿ ತೊಡಗಿಕೊಂಡಿರುವುದರಿಂದ ಸೋಡಿಯಮ್-ಅಯಾನ್ ಮಿಂಕಟ್ಟುಗಳು ದುಬಾರಿ ಎನಿಸಿವೆ.
  3.  ಚಳಕ ಎಳವೆಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳು ಕೂಡ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಆದಕಾರಣ ಈ ಹೊಸ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ.
  4. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಸೋಡಿಯಮ್-ಅಯಾನ್ ಮಿಂಕಟ್ಟುಗಳನ್ನು ನಮಗಿಷ್ಟದ ಆಕಾರದಂತೆ ಅಂದರೆ ಸಿಲಿಂಡರ್, ಒಡಕಗಳಂತೆ(Prism) ಮಾರ್ಪಡಿಸಲಾಗದು.
  5. ಸೋಡಿಯಮ್-ಅಯಾನ್ ಬ್ಯಾಟರಿಯ ದಟ್ಟಣೆಯೂ(Density) ಕಡಿಮೆ ಇರುವುದರಿಂದ ಇವುಗಳು ಕೂಡಿಡುವ ಅಳವು(Storage Capacity) ಕಡಿಮೆ.

ಕೆಲವೊಂದು ಅನಾನುಕೂಲಗಳು ಇದ್ದರೂ ಸೋಡಿಯಮ್-ಅಯಾನ್ ಬ್ಯಾಟರಿಗಳ ಬಗ್ಗೆ ಇನ್ನೂ ಹೆಚ್ಚಿನ ಬೆಳವಣಿಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಅಳವು(Efficiency) ನೀಡುವಲ್ಲಿ ಇವುಗಳು ಲಿಥಿಯಮ್-ಅಯಾನ್ ಬ್ಯಾಟರಿಗಳಿಗೆ ತಕ್ಕ ಪೈಪೋಟಿಯಾಗುವುದು ಖಚಿತ.

ಮಾಹಿತಿ ಸೆಲೆ:

https://www.gep.com/blog/strategy/lithium-ion-vs-sodium-ion-battery

https://faradion.co.uk/technology-benefits/strong-performance/