ಹುರಿಕಟ್ಟಿನ ಏರ್ಪಾಟು (musculo-skeletal system) ಬಾಗ-3:
ಕಂಡಗಳು ಮೆತ್ತನೆಯ ಅಂಗಾಂಶಗಳಾಗಿದ್ದು (soft tissue), ಅಂಗಗಳ ಚಲನೆಗೆ ನೆರವಾಗುತ್ತವೆ. ಇವು ಎಲುಬುಗಳ ಸುತ್ತ, ಗುಂಡಿಗೆಯಲ್ಲಿ ಮತ್ತು ಇತರ ಅಂಗಗಳ ಗೋಡೆಗಳಲ್ಲಿ ಕಂಡುಬರುತ್ತವೆ. ಎಲುಬಿನ ಸುತ್ತ ಕಂಡುಬರುವ ಕಂಡವನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.
ಕಂಡಗಳು ಉಂಟುಮಾಡುವ ಏರ್ಪಾಟನ್ನು ಕಂಡದೇರ್ಪಾಟು ಇಲ್ಲವೇ ಹುರಿ ಏರ್ಪಾಟು (muscular system) ಎಂದು ಗುರುತಿಸಲಾಗುತ್ತದೆ. ಕಂಡಗಳ ಏರ್ಪಾಟು ಮೇಲೆ ತಿಳಿಸದಂತೆ ಮೂರು ಬಗೆಯ ಕಂಡಗಳನ್ನು ಹೊಂದಿರುತ್ತದೆ.
1) ಗುಂಡಿಗೆ ಕಂಡ (cardiac muscle): ಇದು ಎದೆಗುಂಡಿಗೆಯಲ್ಲಿ ಕಾಣಸಿಗುತ್ತದೆ.
2) ನುಣುಪು ಕಂಡ (smooth muscle): ಎದೆಗುಂಡಿಗೆಯನ್ನು ಹೊರತು ಪಡಿಸಿ, ಉಳಿದ ಅಂಗಗಳ ಗೋಡೆಗಳು ನುಣುಪುಕಂಡದಿಂದ ಮಾಡಲ್ಪಟ್ಟಿರುತ್ತವೆ
3) ಕಟ್ಟಿನ ಕಂಡ (skeletal muscle): ಕಟ್ಟಿನ ಕಂಡವು ಎಲುಬುಗಳ ಜೊತೆಗೂಡಿ ಹುರಿಕಟ್ಟಿನ ಏರ್ಪಾಡನ್ನು ಮಾಡುತ್ತದೆ. ಕಂಡಗಳು ಎಲುಬುಗಳನ್ನು ಒಂದಕ್ಕೊಂದು ಜೋಡಣೆಯಾಗುವಂತೆ ನೋಡಿಕೊಳ್ಳುತ್ತವೆ.
ಈ ಬರಹವು ಹುರಿಕಟ್ಟಿನ ಏರ್ಪಾಟಿಗೆ (musculo-skeletal system) ಸಂಬಂದಿಸಿದ್ದರಿಂದ, ಈ ಏರ್ಪಾಟಿನ ಬಾಗವಾದ ಕಟ್ಟಿನ ಕಂಡಗಳ (skeletal muscles) ಬಗ್ಗೆ ಈ ಬರಹದಲ್ಲಿ ತಿಳಿಸಲಾಗುವುದು. ಮೇಲಿನ ಮೊದಲೆರಡು ಕಂಡಗಳ ಬಗ್ಗೆ ಸರಣಿಯ ಮುಂದಿನ ಬಾಗಗಳಲ್ಲಿ ಬರೆಯಲಾಗುವುದು.
ಕಟ್ಟಿನ ಕಂಡದ ಮುಕ್ಯ ಕೆಲಸಗಳು:
1) ಮಯ್ ಅಲುಗಾಟ ಹಾಗು ಓಡಾಟ
2) ಮಯ್ ಕಂಡಿಗಳ (orifice) ಕೆಲಸವನ್ನು ಅಂಕೆಯಲ್ಲಿಡುವುದು: ಮಯ್ಯಲ್ಲಿರುವ ಅಂಗಗಳಿಂದ ಗಟ್ಟಿಯಾದ ಇಲ್ಲವೇ ನೀರಿನ ಅಂಶಗಳನ್ನು ಹೊರಹಾಕುವಾಗ ಇಲ್ಲವೇ ಒಳಬಿಟ್ಟುಕೊಳ್ಳುವಾಗ ’ಗೆಂಡೆಗಳು’ (sphincter) ಎಂದು ಕರೆಯಲಾಗುವ ಕಂಡಗಳು ಹಿಗ್ಗುತ್ತವೆ. ಈ ಮೂಲಕ ಅಂಶಗಳನ್ನು ಹೊರಹಾಕಲು/ಒಳತರಲು ಅಂಗಗಳಿಗೆ ಸುಲಬವಾದ ದಾರಿಯನ್ನು ಮಾಡಿಕೊಡುತ್ತವೆ. ಗೆಂಡೆಗಳು ಕಟ್ಟಿನ ಕಂಡಗಳ ಬಗೆಗಳಲ್ಲೊಂದು.
3) ನಿಲುವು ಮತ್ತು ನೆಲೆತ (posture & stability): ಯಾವುದೇ ಗಳಿಗೆಯಲ್ಲೂ ಮಯ್ಯಲ್ಲಿನ ಕಂಡಗಳು ಒಂದು ಮಟ್ಟಕ್ಕಾದರೂ, ಕುಗ್ಗಿದ ಸ್ತಿತಿಯಲ್ಲಿರುವುದರ ಮೂಲಕ ತನ್ನ ಕೆಲಸವನ್ನು ಮಾಡುತ್ತಿರುತ್ತವೆ. ಇದರಿಂದ, ನೆಲದ ರಾಶಿಸೆಳೆತವನ್ನು (gravity) ಎದಿರಿಸುವ ಹಾಗು ಬೇಡದೆ ಇರುವ ಮಯ್ ಅಲುಗಾಡಿಸುವಿಕೆಯನ್ನು ತಪ್ಪಿಸುವ ಕೆಲಸವನ್ನು ಮಾಡುತ್ತಾ ಮಯ್ಗೆ ನೆಲೆತವನ್ನು (stability) ಕೊಡುತ್ತವೆ.
4) ಮಯ್ ಬಿಸುಪನ್ನು ಅಂಕೆಯಲ್ಲಿಡುವುದು: ನಾವು ತಿನ್ನುವ ಕೂಳಿನ ಅಂಶಗಳನ್ನು ಶಕಿಯನ್ನಾಗಿ ಮಾಡುವ ಕೆಲಸವನ್ನು ತರುಮಾರ್ಪಿಸುವಿಕೆ (metabolism) ಎಂದು ಕರೆಯಲಾಗುತ್ತದೆ. ಮಯ್ ಗೂಡುಗಳಲ್ಲಿ (cell) ನಡೆಯುವ ಈ ತರುಮಾರ್ಪಿಸುವಿಕೆಯ ಕೆಲಸದಲ್ಲಿ ಹುಟ್ಟುವ ಶಕ್ತಿಯ ಹೆಚ್ಚಿನ ಬಾಗವು ಕಾವಿನ (heat) ರೂಪದಲ್ಲಿ ಹೊರ ಹಾಕಲ್ಪಡುತ್ತದೆ.
ಮನುಶ್ಯನ 40% ಮಯ್ಯಿ ಕಂಡದಿಂದ ಮಾಡಲ್ಪಟ್ಟಿದೆ. ಮಯ್ ಕಂಡವು ಹುರುಪಿನ ಕೆಲಸದಲ್ಲಿ ತೊಡಗಿಕೊಂಡಾಗ, ತರುಮಾರ್ಪಿಸುವ (metabolism) ಕೆಲಸದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಿಸಿ ಹೊಮ್ಮುತ್ತದೆ. ಹೀಗೆ ಮಾಡಲ್ಪಟ್ಟ ಬಿಸಿಯು ರಕ್ತದ ನೆರವಿನಿಂದ ನಮ್ಮ ಇಡೀ ಮಯ್ಯಿಗೆ ಹರಡುವು ಮೂಲಕ ಮಯ್ ಬಿಸುಪನ್ನು (temperature) ಕಾಪಾಡುತ್ತದೆ.
5) ಅರುಹುವಿಕೆ (communication): ಮೊಗ ನುಡಿತ (facial expression), ಮಯ್ಮಾತು (body language), ಕಯ್ ಸನ್ನೆ, ಬರೆಯುವಿಕೆ, ಉಲಿಯುವಿಕೆ ಹೀಗೆ ಹಲವು ಬಗೆಯಲ್ಲಿ ಮತ್ತೊಬ್ಬರೊಡನೆ ಒಡನಾಡಲು ಕಟ್ಟಿನಕಂಡವು ನೆರವಾಗುತ್ತದೆ.
ಕಟ್ಟಿನ ಕಂಡಗಳನ್ನು (skeletal muscles) ಅವುಗಳ ಆಕಾರದ ಮೇಲೆ 7 ಗುಂಪುಗಳಾಗಿಸಬಹುದು:
1) ಡುಂಡನೆಯ ಕಂಡ (circular): ಈ ಬಗೆಯ ಕಂಡವು ದುಂಡಗಿರುತ್ತದೆ. ಇಂತಹ ಬಗೆಯ ಕಂಡಗಳು ಮೇಲೆ ತಿಳಿಸದಂತೆ ಅಂಗಗಳಿಂದ ಅಂಶಗಳನ್ನು ಹೊರಹಾಕಲು/ಒಳತರಲು ಹಿಗ್ಗಿಕೊಳ್ಳುವ ಗೆಂಡೆಗಳಲ್ಲಿ (sphincter) ಇರುತ್ತವೆ. ಉದಾಹರಣೆಗೆ ಬಾಯಿಯನ್ನು ಸುತ್ತುವರಿದ ಬಾಯ್ಸುತ್ತರಿ ಕಂಡ (orbicularis oris) ಮತ್ತು ಕಣ್ಣನ್ನು ಸುತ್ತುವರಿದ ಕಣ್ಸುತ್ತರಿ ಕಂಡ (orbicularis oculi).
2) ಒಮ್ಮೊಗದ ಕಂಡ (convergent) : ಯಾವುದೇ ಕಂಡವನ್ನು ಗುರುತಿಸುವಾಗ ಅದು ಯಾವ ಮೂಳೆಯ ಬಾಗದಲ್ಲಿ ಹುಟ್ಟಿ, ಯಾವ ಮೂಳೆಯ ಬಾಗವನ್ನು ಸೇರುತ್ತದೆ/ಅಂಟುತ್ತದೆ (insertion) ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಮ್ಮೊಗದ ಕಂಡಗಳು, ಹುಟ್ಟುವ ಬಾಗದಲ್ಲಿ ಅಗಲವಾಗಿದ್ದು, ಸೇರುವ (insertion) ತುದಿಯಲ್ಲಿ ಸಣ್ಣದಾಗಿರುತ್ತವೆ.
ಈ ಬಗೆಯ ಕಂಡದ ನಾರುಗಳ (muscle fiber) ಜೋಡಣೆಯು, ಹೆಚ್ಚಿನ ಬಲವನ್ನು ಹೊಮ್ಮಿಸುವಲ್ಲಿ ನೆರವಾಗುತ್ತದೆ. ಈ ಕಂಡಗಳನ್ನು ಮುಮ್ಮೂಲೆ (triangle) ಕಂಡವೆಂದೂ ಕರೆಯುವುದುಂಟು. ಉದಾ: ಎದೆಯ ಬಾಗದಲ್ಲಿ ಇರುವ ‘ಹಿರಿಯೆದೆಗಲ ಕಂಡ‘ (pectoralis major).
3) ಗರಿತೆರದ ಕಂಡ (unipinnate): ಈ ಬಗೆಯ ಕಂಡಗಳಲ್ಲಿ, ಕಂಡದ ನಾರುಗಳು ಕಂಡರಗಳೊಂದಿಗೆ (tendons) ಅಡ್ಡಬದಿಯಲ್ಲಿ (diagonal) ಸೇರಿಕೊಳ್ಳಲು (insertion) ನೆರವಾಗಲು ಪುಕ್ಕದ ಕೊಂಬೆಗಳಂತೆ ಜೋಡಿಸಲ್ಪಟ್ಟಿರುತ್ತವೆ. ಈ ಬಗೆಯ ಜೋಡಣೆಯು, ಕಂಡಗಳ ಬಲವನ್ನು ಹೆಚ್ಚಿಸುತ್ತದೆ. ಉದಾ: ಕಯ್ಯಲ್ಲಿ ಕಂಡುಬರುವ ‘ಹುಳುಬಗೆ‘ ಕಂಡ (lumbricals).
4) ಸರಿತೆರಪಿನ ಕಂಡ (parallel):. ಇವುಗಳಲ್ಲಿ ಕಂಡರದ ನಾರುಗಳು ಒಂದೇ ತೆರಪಿನ (parallel) ದಿಕ್ಕಿನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಇಂತಹ ಕಂಡಗಳನ್ನು ಬಾರು ಇಲ್ಲವೇ ಪಟ್ಟಿ (strap) ಕಂಡವೆಂದೂ ಕರೆಯಬಹುದು. ಇವು ಉದ್ದನೆಯ ಕಂಡಗಳ ಜಾತಿಗೆ ಸೇರಿದ್ದು, ಅಶ್ಟೇನು ಗಟ್ಟಿಯಾಗಿರುವುದಿಲ್ಲ. ಆದರೆ ಇವು ಹೆಚ್ಚಿನ ತಾಳಿಕೆಯನ್ನು (durability) ಹೊಂದಿರುತ್ತವೆ. ಉದಾ: ಹೊಲಿಗ ಕಂಡ (Sartorius/tailor muscle).
5) ಇಗ್ಗರಿತೆರದ ಕಂಡ (bipinnate): ಹಕ್ಕಿಯ ಪುಕ್ಕವನ್ನು ಹೋಲುವ ಈ ಕಂಡವು, ಎದುರು-ಬದುರು ದಿಕ್ಕಿನಲ್ಲಿ ಸಾಗುವ ಎರಡು ಸಾಲುಗಳ ನಾರುಗಳನ್ನು ಹಾಗು ನಡುವಿನಲ್ಲಿ ಕಂಡರದ (tendon) ಕಡ್ಡಿಯನ್ನು ಹೊಂದಿರುತ್ತದೆ. ಈ ಬಗೆಯ ಜೋಡಣೆಯು, ಕಂಡದ ಬಲವನ್ನು ಹಿಗ್ಗಿಸುತ್ತದೆಯಾದರೂ, ಅದರ ಅಲುಗಾಟದ ಮಟ್ಟವನ್ನು ಕುಗ್ಗಿಸುತ್ತದೆ. ನೆಟ್ಟನೆಯ ತೊಡೆಕಂಡವು (rectus femoris) ಇಗ್ಗರಿತೆರದ ಗುಂಪಿಗೆ ಸೇರುತ್ತದೆ.
6) ಕಡುಬು ಬಗೆ ಕಂಡ (fusiform): ಈ ಬಗೆಯ ಕಂಡಗಳಲ್ಲಿ, ತುದಿಗಳಿಗೆ ಹೋಲಿಸಿದರೆ ನಡುಬಾಗವು ಅಗಲವಾಗಿರುತ್ತದೆ. ಉದಾ: ಇತ್ತಲೆ ತೋಳ್ ಕಂಡ (ತೋಳ್=brachii; ಇತ್ತಲೆ/ಎರಡು ತಲೆ=biceps).
7) ಹಲಗರಿತೆರ ಕಂಡ (multipinnate): ಈ ಬಗೆಯ ಕಂಡದಲ್ಲಿ ನಡು ಕಂಡರವು, ಎರಡಕ್ಕಿಂತ ಹೆಚ್ಚು ಕವಲುಗಳನ್ನು ಹೊಂದಿದ್ದು, ಈ ಕಂಡರದ ಕವಲುಗಳ ಮೇಲೆ, ಇಕ್ಕೆಲಗಳಲ್ಲೂ ಕಂಡದ ನಾರುಗಳು ಜೋಡಿಸಲ್ಪತ್ತಿರುತ್ತವೆ. ಉದಾ: ಮೂರು ಕಂಡದ ಕಂತೆಗಳನ್ನು (ಮುಂದಿನ, ಹಿಂದಿನ ಮತ್ತು ನಡುವಿನ ಕಂತೆ) ಹೊಂದಿರುವ ಡೆಲ್ಟಾ ಕಂಡ (delta) (ಈ ಕಂಡವು ಗ್ರೀಕ್ ಲಿಪಿಯ “ಡೆಲ್ಟಾ” ಬರಿಗೆಯನ್ನು ಹೋಲುವುದರಿಂದ, ಈ ಹೆಸರು ಬಂದಿದೆ).
ಈ ಬರಹದಲ್ಲಿ ಹುರಿಕಟ್ಟಿನ ಏರ್ಪಾಟಿನ ಬಾಗವಾದ ಕಂಡಗಳ ಬಗ್ಗೆ ತಿಳಿಸಲಾಯಿತು. ಮುಂದಿನ ಬರಹದಲ್ಲಿ ಹುರಿಕಟ್ಟು ಏರ್ಪಾಟಿನ ಇನ್ನೊಂದು ಬಾಗವಾದ ಎಲುಬುಗಳ ಕೀಲುಗಳ ಬಗ್ಗೆ ತಿಳಿಸಲಾಗುವುದು.
(ಚಿತ್ರ ಸೆಲೆಗಳು: intranet.tdmu.edu, myrevolution, www.artintercepts.org)
(ಈ ಬರಹವು ಹೊಸಬರಹದಲ್ಲಿದೆ)