ಮೈಯೊಂದು ಕನ್ನಡಿ

ಮೈ– ಪ್ರಶಾಂತ ಸೊರಟೂರ.

  • ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು.
  • ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು.
  • ಏನಾದಿತೋ ಎಂಬ ಅಂಜಿಕೆಯಿಂದ ಆತನ ಕೈ-ಕಾಲುಗಳು ನಡುಗುತ್ತಿದ್ದವು.
  • ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ ಬೆರಗಿನಿಂದ ಹುಬ್ಬೇರಿಸಿದರು.
  • ಅವರಲ್ಲಿ ಯಾವುದೋ ಕೊರಗಿದೆಯಂತಾ ಅವರ ಬಾಡಿದ ಮುಖವೇ ಹೇಳುತ್ತಿದೆ.
  • ಹೆಮ್ಮೆಯಿಂದ ಎದೆಯುಬ್ಬಿಸಿ ತನ್ನವರ ಕುರಿತು ಆತ ತಿಳಿಸಿಕೊಡುತ್ತಿದ್ದ.

ಇಂತಹ ಹಲವಾರು ಸಾಲುಗಳನ್ನು ಬದುಕಿನಲ್ಲಿ ಕಂಡ ಇಲ್ಲವೇ ಕತೆ-ಕಾದಂಬರಿಗಳಲ್ಲಿ ಓದಿದ ಅನುಭವ ನಿಮಗಾಗಿರಬಹುದು. ಬೇರೆ ಬೇರೆ ಭಾವನೆಗಳಿಗೆ ನಮ್ಮ ಮೈಯಲ್ಲಿ ಬದಲಾಣೆಗಳಾಗುತ್ತವೆ ಅಂತಾ ಗೊತ್ತಿದ್ದರೂ ಅವುಗಳಿಗೆ ಕರಾರುವಕ್ಕಾದ ನಂಟನ್ನು ತೋರಿಸಬಹುದೇ? ಭಾವನೆ ಮತ್ತು ಮೈಯಿಯ ನಂಟು ನಡೆ-ನುಡಿಗಳಿಗೆ, ನಾಡಿಗೆ ತಕ್ಕಂತೆ ಬೇರೆಯಾಗಿರುತ್ತದೆಯೇ? ಅನ್ನುವಂತ ಕೇಳ್ವಿಗಳು ಅರಿಗರನ್ನು ಹಿಂದಿನಿಂದಲೂ ಕಾಡಿದಂತವು.

ಈ ನಿಟ್ಟಿನಲ್ಲಿ ನಡೆದ ಅರಕೆಯೊಂದು ಬೆಳಕುಚೆಲ್ಲಿದ್ದು, ಮೊಟ್ಟಮೊದಲ ಬಾರಿಗೆ ಭಾವನೆಗೆ ತಕ್ಕಂತೆ ನಮ್ಮ ಮೈಯಿಯ ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಳ್ಳುತ್ತವೆ ಎಂದು ತೋರಿಸಿಕೊಟ್ಟಿದೆ. ಇದರ ಜತೆಗೆ ಭಾವನೆಗಳಿಗೆ ಮೈ  ನಡೆದುಕೊಳ್ಳುವ ರೀತಿಯಲ್ಲಿ ನಾಡುಗಳ ಎಲ್ಲೆಗಳಾಚೆ ಹಲವಾರು ವಿಷಯಗಳಲ್ಲಿ ಒಂತನವಿರುವುದು ಈ ಅರಕೆಯಲ್ಲಿ ಕಂಡುಬಂದಿದೆ. ಈ ಅರಕೆಯ ದೊರೆತಗಳನ್ನು (results) ಅಮೇರಿಕಾದ ನ್ಯಾಶನಲ್ ಆಕಾಡಮಿ ಆಪ್ ಸಯನ್ಸ್ ಹೊಮ್ಮಿಸಿದೆ.

ಪಿನ್‍ಲ್ಯಾಂಡ್, ಸ್ವೀಡನ್ ಮತ್ತು ತೈವಾನ್ ನಾಡುಗಳ ಸುಮಾರು 700 ಮಂದಿ ಪಾಲ್ಗೊಂಡಿದ್ದ ಪ್ರಯೋಗದಲ್ಲಿ ಬೇರೆ ಬೇರೆ ಭಾವನೆಗಳನ್ನು ಹೊಮ್ಮಿಸುವ ಪದಗಳು, ವಿಡಿಯೋಗಳು, ಕತೆಗಳನ್ನು ಪಾಲ್ಗೊಂಡವರ ಮುಂದಿಡಲಾಯಿತು.

ಭಾವನೆಗೆ ತಕ್ಕಂತೆ ತಮ್ಮ ಮೈಯಲ್ಲಿ ಎಂತ ಬದಲಾವಣೆಗಳಾದವು, ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಂಡಿರುವಂತೆ ತೋರಿದವು ಅಂತಾ ಪಾಲ್ಗೊಂಡವರಿಂದಲೇ ಅರಕೆಗಾರರು ಪಡೆದುಕೊಂಡರು. ಆಮೇಲೆ ಅವರ ನಾಡುಗಳ ನಡೆ-ನುಡಿಗಳಿಂದಾಗಿಯೇ ಬಂದಿರಬಹುದಾದ ಕೆಲವು ಹೊರತುಗಳನ್ನು (exceptions) ಅರಕೆಗಾರರು ಕೈಬಿಟ್ಟರು. ಹೀಗೆ ಭಾವನೆಗೆ ತಕ್ಕಂತೆ ಮಾರ್ಪಡುವ  ಮೈಗನ್ನಡಿಯ ಒಟ್ಟು ನೋಟವನ್ನು ಅಣಿಗೊಳಿಸಲಾಯಿತು.

Body_Emotions

(ಭಾವನೆ ಮತ್ತು ಮೈ  ಭಾಗಗಳ ನಂಟು ತೋರಿಸುತ್ತಿರುವ ತಿಟ್ಟ. ಎಲ್ಲಕ್ಕಿಂತ ಹೆಚ್ಚು ಹುರುಪುಗೊಂಡಿರುವ ಭಾಗಗಳು ಹಳದಿ ಬಣ್ಣದಲ್ಲಿ ಮತ್ತು ಕಡಿಮೆ ಹುರುಪುಗೊಂಡಿರುವ ಭಾಗಗಳನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ)

ಬೇರೆ ಬೇರೆ ಭಾವನೆಗಳಿಗೆ, ಮೈಯಿಯ ಬೇರೆ ಭಾಗಗಳು ಹುರುಪುಗೊಂಡಿರುವುದು ಕಂಡಿತಾದರೂ ಕೆಲವು ಭಾವನೆಗಳಿಗೆ ಮೈಯಿಯ  ಅದೇ ಭಾಗಗಳು ಹೆಚ್ಚು ಹುರುಪುಗೊಂಡಿರುವುದು ಕಂಡಿತು. ಎತ್ತುಗೆಗೆ: ಸಿಟ್ಟು ಮತ್ತು ಅಂಜಿಕೆಗೆ ಎದೆಯ ಮೇಲ್ಭಾಗ ಹೆಚ್ಚು ಹುರುಪುಗೊಳ್ಳುವಂತಹ ವಿಷಯ. ಹೀಗಾಗಲು ಸಿಟ್ಟು ಇಲ್ಲವೇ ಅಂಜಿಕೆಯಾದಾಗ ಉಸಿರಾಟ ಮತ್ತು ನಾಡಿ ಮಿಡಿತ ಹೆಚ್ಚಾಗುವುದು ಮುಖ್ಯ ಕಾರಣವಿರಬಹುದೆಂದು ಅರಕೆಗಾರರು ತಿಳಿಸಿದ್ದಾರೆ.

ಈ ಅರಕೆಯಲ್ಲಿ ಇನ್ನೊಂದು ಕರಾರುವಕ್ಕಾಗಿ ಕಂಡುಬಂದಿದ್ದೆಂದರೆ, ’ನಲಿವು’ ಆದಾಗ ಅಷ್ಟೇ ಇಡೀ ಮಯ್ಯಿ ಹೆಚ್ಚು ಹುರುಪುಗೊಳ್ಳುತ್ತದೆ. ಗೊತ್ತಾಯಿತಲ್ಲ, ನಲಿವಿನ ’ಹುರುಪು’ ಎಂತದು ಅಂತಾ 🙂.

ತಿಳಿವಿನ ಮತ್ತು ತಿಟ್ಟಸೆಲೆ: discovermagazine)