ತಂಪುಪೆಟ್ಟಿಗೆಯ ಬಾಗಿಲನ್ನು ತೆಗೆದಾಗ ತಣ್ಣನೆ ಗಾಳಿಯು ಕೆಳಗೆ ಸುಳಿದಂತಾಗುತ್ತದೆ. ಬಿಸಿ ನೀರೆರಕೊಂಡು ಆದಮೇಲೆ ಬಚ್ಚಲುಮನೆ ಬಾಗಿಲು ತೆಗೆದಾಗ ಬಿಸಿಗಾಳಿ ಮೇಲೇರುತ್ತಿರುತ್ತಿದ್ದರೆ ತಣ್ಣನೆ ಗಾಳಿ ಕೆಳಗಿನಿಂದ ನುಸುಳುತ್ತಿರುತ್ತದೆ. ಹೀಗೇಕೆ ಎಂದು ಗಮನಿಸಿದ್ದೀರೇ?. ತಂಪಾದ ಗಾಳಿಯು ಹೆಚ್ಚು ಒತ್ತೊಟ್ಟಾಗಿರುವುದರಿಂದ, ಕಾದ ಬಿಸಿಗಾಳಿಗಿಂತ ಹೆಚ್ಚು ತೂಕದ್ದಾಗಿರುತ್ತದೆ. ಬಿಸಿಗಾಳಿಯಲ್ಲಿ ನೀರಾವಿ ಹೆಚ್ಚಿದ್ದೂ ತಂಪು ಗಾಳಿಗಿಂತ ಮಾಲಿಕ್ಯೂಲ್ಗಳು ಕಡಿಮೆ ಒತ್ತೊಟ್ಟಾಗಿರುತ್ತದೆ. ಇದರಿಂದಾಗಿ ತಂಪು ಗಾಳಿಯು ಬಿಸಿಗಾಳಿಗಿಂತ ಹೆಚ್ಚು ತೂಕ ಹೊಂದಿ ಕೆಳಗಿಳಿದರೆ, ಬಿಸಿ ಗಾಳಿಯು ಮೇಲೇರುತ್ತಿರುತ್ತದೆ. ನೀರಾವಿ ಕಡಿಮೆಯಿರುವ ತಂಪು ಗಾಳಿಯು ಒಣದಾಗಿದ್ದು ಹೆಚ್ಚು ತೂಕದಿಂದಾಗಿ ನೆಲಮಟ್ಟದಲ್ಲಿ ಬೀಸಿದರೆ, ನೀರಾವಿ ಹೆಚ್ಚು ತುಂಬಿಕೊಂಡಿರುವ ಹಗುರ ಬಿಸಿಗಾಳಿಯು ಮೇಲೇರಿ ಮಳೆ ಸುರಿಸುತ್ತದೆ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಗಾಳಿಹೊದಿಕೆಯ ಸುತ್ತೇರ್ಪಾಟು, ಬೀಸುಗಾಳಿಗಳ ಬಗ್ಗೆ ಅರಿಯಬಹುದು.
ನೇಸರದಿಂದ ನೆಲವು ಎಲ್ಲೆಡೆಯೂ ಒಂದೇ ಮಟ್ಟದಲ್ಲಿ ಕಾಯುವುದಿಲ್ಲ. ಹೀಗೆ ಏರುಪೇರಾಗಿ ಕಾದ ನೆಲವೇ ಗಾಳಿಯನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವಂತೆ ಮಾಡುತ್ತದೆ. ಬಿಸುಪಿನಿಂದ ಒಂದು ತಾಣದ ಗಾಳಿಹೊದಿಕೆಯು (Atmosphere) ಮತ್ತೊಂದಕ್ಕಿಂತ ಹೆಚ್ಚು ಕಾದಾಗ ಒತ್ತಡದ ಬೇರ್ಮೆ ಇಲ್ಲ ಒತ್ತಡದ ಏರಿಳಿತ (Pressure gradient) ಉಂಟಾಗುತ್ತದೆ. ಒತ್ತಡದ ಬೇರ್ಮೆ ಉಂಟಾದಾಗ, ಗಾಳಿಯು ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದೆಡೆಗೆ ಸಾಗುತ್ತದೆ. ಹೀಗೆ ಸಾಗಿದ ಗಾಳಿಯನ್ನು ಬೀಸುಗಾಳಿ ಎಂದು ಕರೆಯುತ್ತೇವೆ. ಕಾಣುವುದಕ್ಕು, ಹಿಡಿಯುವುದಕ್ಕು ಕುದರದ ಗಾಳಿಯು ಬೀಸಿದಾಗಿನ ಒತ್ತರದಿಂದ ಅದರ ಇರುವಿಕೆ ತಿಳಿಯುತ್ತದೆ. ಬೀಸುಗಾಳಿಯು ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಬಲ್ಲದು ಮತ್ತು ಚಳಿಹೊತ್ತಲ್ಲಿ ಎಲುಬುಗಳನ್ನು ನಡುಗಿಸಬಲ್ಲದು. ಅದು ಹಡಗುಗಳನ್ನು ಕಡಲುಗಳಾಚೆ ಸಾಗಿಸಬಲ್ಲದು ಮತ್ತು ಹೆಮ್ಮರಗಳನ್ನು ನೆಲಕ್ಕುರುಳಿಸಬಲ್ಲದು. ಗಾಳಿಹೊದಿಕೆಯನ್ನು ಒಂದೇ ಮಟ್ಟದಲ್ಲಿ ಇಡಲು, ಕಾವು ಸಾಗಣಿಕೆಗೆ, ಪಸೆ (moisture), ಕೊಳುಕೆ (pollutants), ದುಂಬು (dust)ಗಳಂತುವುನೆಲ್ಲಾ ಇಡಿನೆಲ (globe)ದೊಳು ಹೆಚ್ಚು ಗೆಂಟಿನುದ್ದಕ್ಕೂ ಹೊತ್ತೊಯ್ಯಲು ಬೀಸುಗಾಳಿಯು ಅನುವಾಗಿದೆ.
ಗಾಳಿಹೊದಿಕೆಯಲ್ಲಿನ ಒತ್ತಡದ ಬೇರ್ಮೆಗಳು ಬೀಸುಗಾಳಿಯನ್ನು ಉಂಟುಮಾಡುತ್ತವೆ. ನೆಲನಡುಗೆರೆ ಇರುವ ಎಡೆಯಲ್ಲಿ ನೇಸರವು ನೀರು ಮತ್ತು ನೆಲವನ್ನು ಇಡಿನೆಲದ ಉಳಿದೆಡೆಗಳಿಗಿಂತ ಹೆಚ್ಚು ಬಿಸಿಗೈಯ್ಯುತ್ತದೆ. ನೆಲನಡುಗೆರೆಯ ತಾವೆಲ್ಲ ಬಿಸಿಗೊಂಡ ಗಾಳಿಯು ಮೇಲಕ್ಕೇರಿ ತುದಿಗಳೆಡೆಗೆ ಸಾಗುತ್ತದೆ. ಇದು ಕಡಿಮೆ ಒತ್ತಡದೇರ್ಪಾಟು. ಹಾಗೆಯೇ ತಣಿದ, ಒತ್ತೊಟ್ಟಾದ (denser) ಗಾಳಿಯು ನೆಲದ ಮೇಲ್ಮಯ್ ಮೇಲೆ ಹಾದು ನೆಲನಡುಗೆರೆಯೆಡೆಗೆ, ಅದಾಗಲೇ ಬಿಸಿಗಾಳಿ ತೆರವುಗೊಂಡಿದ್ದ ತಾವನ್ನು ಸೇರಿಕೊಳ್ಳುತ್ತದೆ. ಇದು ಹೆಚ್ಚು ಒತ್ತಡದೇರ್ಪಾಟು. ಆದರೆ ಬೀಸುಗಾಳಿಗಳು ಹೆಚ್ಚು ಒತ್ತಡದ ನೆಲೆಗಳಿಂದ ಕಡಿಮೆ ಒತ್ತಡ ನೆಲೆಗಳೆಡೆಗೆ ಸಾಗುವಾಗ ನೇರವಾಗಿ ಬೀಸುವುದಿಲ್ಲ. ನೆಲದ ತಿರುಗುವಿಕೆಯಿಂದ ಉಂಟಾದ ಕೊರಿಯೋಲಿಸ್ ಆಗುಹವು ಬೀಸುವ ದಾರಿಯನ್ನು ಬಾಗಿದಂತೆ ಮಾಡುತ್ತದೆ. ಅಂದರೆ ಬೀಸುಗಾಳಿಗಳು ಎರಡೂ ಅರೆಗೋಳಗಳಲ್ಲಿ ನೇರಗೆರೆಯಂತೆ ಬಡಗು-ತೆಂಕು ದಿಕ್ಕಿನಲ್ಲಿ ಬೀಸುವುದಿಲ್ಲ. ಬದಲಾಗಿ ಓರೆಯಾಗಿ ಬಡಗು ಅರೆಗೋಳದಲ್ಲಿ ಬಡಗು-ಮೂಡಣ ಇಲ್ಲ ತೆಂಕು-ಪಡುವಣ ಮತ್ತು ತೆಂಕು ಅರೆಗೋಳದಲ್ಲಿ ಬಡಗು-ಪಡುವಣ ಇಲ್ಲ ತೆಂಕು-ಮೂಡಣದ ದಿಕ್ಕಿನಿಂದ ಬೀಸುತ್ತವೆ. ಬೀಸುಗಾಳಿಗಳನ್ನು ಹೆಸರಿಸುವಾಗ ಅವು ಯಾವ ದಿಕ್ಕಿನಿಂದ ಬೀಸುತ್ತಿವೆಯೋ ಆ ದಿಕ್ಕಿನ ಬೀಸುಗಾಳಿಗಳೆಂದು ಗುರುತಿಸಲಾಗುತ್ತದೆ.
ಕೆಲವೆಡೆ ಬೀಸುಗಾಳಿಗಳು ಒಂದೇ ದಿಕ್ಕಿನಿಂದ ಒಂದೇತೆರನಾಗಿ ಬೀಸುತ್ತಿರುತ್ತವೆ, ಅಂತವುಗಳನ್ನು ವಾಡಿಕೆಯ ಬೀಸುಗಾಳಿಗಳು (Prevailing winds) ಎಂದು ಕರೆಯುತ್ತೇವೆ. ವಾಡಿಕೆಯ ಬೀಸುಗಾಳಿಗಳು ಬಂದು ಸೇರುವ ನೆಲೆಗಳನ್ನು ಕೂಡು/ಒಟ್ಟುಸೇರು ಹರವುಗಳೆಂದು (convergence zones) ಕರೆಯುತ್ತೇವೆ. ಕೊರಿಯೋಲಿಸ್ ಆಗುಹದಿಂದ ಬೀಸುಗಾಳಿಯ ಏರ್ಪಾಡುಗಳು ಬಡಗು ಅರೆಗೋಳದಲ್ಲಿ ಎಡಸುತ್ತು (counter-clockwise) ಮತ್ತು ತೆಂಕು ಅರೆಗೋಳದಲ್ಲಿ ಬಳಸುತ್ತು (clockwise) ತಿರುಗುತ್ತವೆ.
ನೆಲವು ಅಯ್ದು ಬೀಸುಗಾಳಿ ಹರವುಗಳನ್ನು ಹೊಂದಿದೆ
- ತಗ್ಗಿದ ಗಾಳಿನೆಲೆಗಳು,
- ಮಾರು ಗಾಳಿಗಳು,
- ಕುದುರೆ ಅಡ್ಡಗೆರೆಗಳು,
- ಪಡುವಣಗಾಳಿಗಳು
- ತುದಿಯ ಮೂಡಣಗಾಳಿಗಳು.
ಇವುಗಳ ಜೊತೆಗೆ ಗಾಳಿಹೊದಿಕೆಯ ಸುತ್ತೇರ್ಪಾಟನ್ನು ಮೂರು ಕುಣಿಕೆಗಳಲ್ಲಿ ಹೆಸರಿಸಲಾಗಿದೆ. ಅವು (1) ಹ್ಯಾಡ್ಲಿಸ್ ಗಾಳಿಕುಣಿಕೆ(cell), (2) ಫ್ಯಾರೆಲ್ ಗಾಳಿಕುಣಿಕೆ ಮತ್ತು (3) ತುದಿಯ ಗಾಳಿಕುಣಿಕೆ.
ಗಾಳಿಹೊದಿಕೆಯ ಸುತ್ತೇರ್ಪಾಟಿನ ಕುಣಿಕೆಗಳು (Atmospheric Circulation Cells)
ಇಡಿನೆಲದೊಳು ಈ ಬೀಸುಗಾಳಿ ಕುಣಿಕೆಗಳು 30ಡಿಗ್ರಿ ಅಡ್ಡಗೆರೆಗಳಿಗೆ ಒಂದರಂತೆ ಗುರುತಿಸಲಾಗಿದೆ. 0-30ಡಿಗ್ರಿಯ ಕುಣಿಕೆಯನ್ನು ಹ್ಯಾಡ್ಲಿ ಗಾಳಿಕುಣಿಕೆ, 30-60ಡಿಗ್ರಿಯದ್ದು ಫ್ಯಾರೆಲ್ ಗಾಳಿಕುಣಿಕೆ ಮತ್ತು 60-90ಡಿಗ್ರಿಗೆ ತುದಿಯ ಗಾಳಿಕುಣಿಕೆ ಎಂದು ಹೆಸರಿಸಲಾಗಿದೆ.
ಹ್ಯಾಡ್ಲಿ ಗಾಳಿಕುಣಿಕೆ: ಹ್ಯಾಡ್ಲಿಸ್ ಕುಣಿಕೆಯು ಜಾರ್ಜ್ ಹ್ಯಾಡ್ಲಿ ಎಂಬವರ ಹೆಸರಿನಲ್ಲಿ ಕರೆಯಲಾಗಿದ್ದೂ, ಇದು ನೆಲನಡುಗೆರೆಯ ಎರಡೂ ಬದಿಗಳು ಅಂದರೆ ಬಡಗು ಅರೆಗೋಳ ಮತ್ತು ತೆಂಕು ಅರೆಗೋಳದ 0-30ಡಿಗ್ರಿ ಅಡ್ಡಗೆರೆಗಳವರೆಗೆ ಸುತ್ತುವ ಗಾಳಿಯ ಇಡಿನೆಲ ಮಟ್ಟದ ಕುಣಿಕೆಯಾಗಿದೆ. ನೆಲನಡುಗೆರೆಯ ಹತ್ತಿರದ ಗಾಳಿಯು ಮೇಲಕ್ಕೇರಿ, ಸುಮಾರು 10-15ಕಿಮೀ ಎತ್ತರದಲ್ಲಿ ತುದಿಗಳ ಕಡೆಗೆ ಸಾಗುತ್ತಾ, ಅಡಿ-ಬಿಸಿಲ್ನೆಲೆಗಳ (subtropics) ಮೇಲೆ ಕೆಳಗಿಳಿದು ಮತ್ತೇ ನೆಲದ ಮೇಲ್ಮಯ್ಗೆ ಹತ್ತಿರವಾಗಿ ನೆಲನಡುಗೆರೆಯ ಕಡೆಗೆ ಮಾರು ಗಾಳಿಗಳಾಗಿ (trade winds) ಹಿಂದಿರುಗಿದಾಗ ಒಂದು ಕುಣಿಕೆ ಮುಗಿದಂತಾಗುತ್ತದೆ. ಈ ಸುತ್ತುವಿಕೆಯಿಂದ ಮಾರು ಗಾಳಿಗಳು, ಬಿಸಿಲ್ನೆಲೆಯ ಮಳೆಗಳು, ಅಡಿ-ಬಿಸಿಲ್ನೆಲೆಯ ಮರಳುಗಾಡುಗಳು, ಹರಿಕೇನ್ ಗಳು ಮತ್ತು ಕಡುಬಿರುಗಾಳಿಗಳು (Jet Streams) ಉಂಟಾಗಿವೆ.
ನೆಲನಡುಗೆರೆಯ ಪಟ್ಟಿ ಹಾಗು ಅದಕ್ಕೆ ಹೊಂದಿಕೊಂಡಿರುವ ಬಿಸಿಲ್ನೆಲೆಗಳ ಕೂಡು ಹರವು ತಾಣಗಳಲ್ಲೆಲ್ಲಾ ಇತರೆಲ್ಲೆಡೆಗಿಂತ ಹೆಚ್ಚಾಗಿ ಕಾದ ಗಾಳಿಯು ತೇಲಿಕೊಂಡು ಮೇಲೇರಿ ದಟ್ಟ ಮೋಡಗಳು ಉಂಟಾಗಿ ಗುಡುಗಿನಿಂದ ದಟ್ಟ ಮಳೆಯನ್ನು ಸುರಿಸುತ್ತದೆ. ಮಳೆಯಿಂದಾಗಿ ನೀರಾವಿಯನ್ನು ಕಳೆದುಕೊಂಡ ಗಾಳಿಯು ಒಣದಾಗಿ ಅಡಿ-ಬಿಸಿಲನೆಲೆಗಳ ಮೇಲೆ ಕೆಳಗಿಳಿಯುತ್ತದೆ. ಇದರಿಂದಾಗಿ ಅಡಿ-ಬಿಸಿಲ್ನೆಲೆಗಳಲ್ಲಿ ನೆಲನಡುಗೆರೆಯ ಪಟ್ಟಿಯಲ್ಲಿ ಉಂಟಾಗುವಂತೆ ದಟ್ಟ ಗುಡುಗು ಮಳೆಯಾಗುವುದಿಲ್ಲ. ಆದ್ದರಿಂದಲೇ ಅಡಿ-ಬಿಸಿಲ್ನೆಲೆಗಳಲ್ಲಿ ಹೆಚ್ಚು ಮರಳುಗಾಡುಗಳು ಕಂಡುಬರುತ್ತವೆ.
ಫ್ಯಾರೆಲ್ ಗಾಳಿಕುಣಿಕೆ: ಹ್ಯಾಡ್ಲಿ ಮತ್ತು ತುದಿಯ ಗಾಳಿಕುಣಿಕೆಗಳು ಸೇರಿ 30-60ಡಿಗ್ರಿ ಅಡ್ಡಗೆರೆಗಳ ನಡುವೆ ಫ್ಯಾರೆಲ್ ಗಾಳಿಕುಣಿಕೆಯನ್ನು ಉಂಟುಮಾಡುತ್ತದೆ. ಹ್ಯಾಡ್ಲಿ ಗಾಳಿಕುಣಿಕೆಯಲ್ಲಿ ಕೆಳಗಿಳಿಯುತ್ತಿರುವ ಗಾಳಿಯ ಒಂದುಪಾಲು ಫ್ಯಾರೆಲ್ ಗಾಳಿಕುಣಿಕೆಯ ಪಾಲಾಗಿ ನೆಲದಮಟ್ಟದಲ್ಲಿ ಪಡುವಣಗಾಳಿಗಳಾಗಿ ಬೀಸುತ್ತವೆ. 60ಡಿಗ್ರಿ ಅಡ್ಡಗೆರೆಯ ಹತ್ತಿರ ಮೇಲಕ್ಕೇರಿ ನೆಲನಡುಗೆರೆಯ ದಿಕ್ಕಿನೆಡೆಗೆ ಸಾಗುತ್ತದೆ.
ತುದಿಯ ಗಾಳಿಕುಣಿಕೆ: ೬೦ಡಿಗ್ರಿ ಅಡ್ಡಗೆರೆಯಲ್ಲಿ ನೆಲ/ಹೆಗ್ಗಡಲಿಗೆ ತಾಕಿ ಬಿಸಿಗೊಂಡ ಗಾಳಿ ಮೇಲೇರಿ ತುದಿಗಳಿಗೆ ತಲುಪಿದಾಗ ತಣಿದಿರುತ್ತದೆ. ಎತ್ತುಗೆಗೆ ಬಡಗು ತುದಿಗೆ ತಲುಪುವ ಹೊತ್ತಿಗೆ ತಂಪುಗೊಂಡ ಗಾಳಿ ಕೆಳಗಿಳಿದು ನೆಲದಮಟ್ಟದಲ್ಲಿ ತೆಂಕು-ಪಡುವಣ ದಿಕ್ಕಿನಲ್ಲಿ ತುದಿಯ-ಮೂಡಣಗಾಳಿಗಳಾಗಿ ಬೀಸುತ್ತದೆ.
ಬೀಸುಗಾಳಿ ಹರವುಗಳು (Wind Zones)
ಡೋಲ್-ಡ್ರಮ್ಸ್ (ತಗ್ಗಿದಗಾಳಿನೆಲೆಗಳು)
ಹ್ಯಾಡ್ಲಿ ಗಾಳಿಕುಣಿಕೆಯಿಂದಾಗಿ ಮಾರುಗಾಳಿಗಳು ಮತ್ತು ಕಡಿಮೆ ಒತ್ತಡದ ಡೋಲ್-ಡ್ರಮ್ಸ್ ಉಂಟಾಗುತ್ತವೆ. ಎರಡೂ ಅರೆಗೋಳದ ಮಾರುಗಾಳಿಗಳು ಕೂಡುವ ತಾಣವನ್ನು ಬಿಸಿಲ್ನೆಲೆಗಳ ಕೂಡು ಹರವು (ITCZ – intertropical convergence zone) ಎಂದು ಕರೆಯುತ್ತೇವೆ. ಈ ಹರವಿನ ಸುತ್ತಲಿರುವುದೇ ಡೋಲ್-ಡ್ರಮ್ಸ್. ನೆಲನಡುಗೆರೆಯಿಂದ 5ಡಿಗ್ರಿ ಬಡಗು ಮತ್ತು ತೆಂಕಿಗೆ ಹರಡಿದೆ. ಇಲ್ಲಿ ನೆಲವು ಕಡುಕಾದು, ಗಾಳಿಯು ಹಿಗ್ಗುತ್ತಾ ಮೇಲೇರುತ್ತದೆ. ಈ ವಾಡಿಕೆಯ ಗಾಳಿಗಳು ಅಸಳೆಯವಾಗಿದ್ದೂ ಗಾಳಿಪಾಡು (weather) ನಿಂತಗಾಳಿಯಂತೆ ಇರುತ್ತದೆ.
ಬಿಸಿಲ್ನೆಲೆಗಳ ಕೂಡು ಹರವು, ನೆಲನಡುಗೆರೆಯ ಎರಡು ಬದಿಗೂ ಹರಡಿರುತ್ತದೆ. ನೇಸರದಿಂದ ನೆಲನಡುತಾಣವು ಕಾದಂತೆಲ್ಲ ಗಾಳಿಯ ರಾಶಿಯು ಮೇಲಕ್ಕೇರಿ ಬಡಗು ಮತ್ತು ತೆಂಕಿನೆಡೆಗೆ ಸಾಗುತ್ತದೆ. ಹೀಗೆ ಸಾಗಿಬಂದ ಕಡಿಮೆ ಒತ್ತಡದ ಬಿಸಿ ಗಾಳಿಯು 30ಡಿಗ್ರಿ ಬಡಗು ಮತ್ತು ತೆಂಕಿನ ಅಡಿ-ಬಿಸಿಲ್ನೆಲೆಯ ಹೆಚ್ಚು ಒತ್ತಡದ ಪಟ್ಟಿಗಳಾದ ಕುದುರೆ ಅಡ್ಡಗೆರೆಗಳ ಸುತ್ತ ಕೆಳಗಿಳಿಯುತ್ತದೆ. ಅದರಲ್ಲಿ ಒಂದುಪಾಲು ಗಾಳಿ ರಾಶಿಯು ಮರಳಿ ತಗ್ಗಿದಗಾಳಿನೆಲೆಗಳೆಡೆಗೆ ಸಾಗಿದರೆ, ಇನ್ನೊಂದುಪಾಲು ಎದುರು ದಿಕ್ಕಿನಲ್ಲಿ ಪಡುವಣಗಾಳಿಗಳಾಗಿ ಬೀಸುತ್ತವೆ.
ಮಾರು ಗಾಳಿಗಳು (Trade Winds)
ಮಾರು ಗಾಳಿಗಳು ಹೆಚ್ಚು ಬಲವುಳ್ಳ ವಾಡಿಕೆಯ ಗಾಳಿಗಳಾಗಿದ್ದು ಬಿಸಿಲ್ನೆಲೆಗಳ (tropics) ಮೇಲೆ ಬೀಸುತ್ತವೆ. ಕೊರಿಯೋಲಿಸ್ ಬಲವು ನೆಲನಡುಗೆರೆಯಲ್ಲಿ ಇರುವುದೇ ಇಲ್ಲ ಮತ್ತು ಅದು ತುದಿಗಳೆಡೆಗೆ ಸಾಗಿದಂತೆ ಹೆಚ್ಚುತ್ತಾ ಹೋಗುತ್ತದೆ. ಈ ದೂಸರೆಯಿಂದಾಗಿ ಮಾರುಗಾಳಿಗಳು, ಅಡಿ-ಬಿಸಿಲ್ನೆಲೆಯ ಹೆಚ್ಚು ಒತ್ತಡದ ನೆಲೆಗಳಿಂದ ಕಡಿಮೆ ಒತ್ತಡದ ನೆಲನಡುಗೆರೆಯೆಡೆಗೆ ಬೀಸುತ್ತವೆ. ಬಡಗು ಅರೆಗೋಳದಲ್ಲಿ ಬಡಗು-ಮೂಡಣ ಕಡೆಯಿಂದ ತೆಂಕು-ಪಡುವಣ ದಿಕ್ಕಿನಲ್ಲಿ ಹಾಗೆಯೆ ತೆಂಕು ಅರೆಗೋಳದಲ್ಲಿ ತೆಂಕು-ಮೂಡಣ ಕಡೆಯಿಂದ ಬಡಗು-ಪಡುವಣ ದಿಕ್ಕಿನಲ್ಲಿ ನೆಲನಡುಗೆರೆಯೆಡೆಗೆ ಬೀಸುತ್ತವೆ. ಮಾರು ಗಾಳಿಗಳು ಮುಂದಾಗಿಯೇ ತಿಳಿಯಬಹುದಾಗಿವೆ. ಅರಸುಕೆ (exploration), ಅರುಹುಕೆ (communication) ಮತ್ತು ಮಾರಾಟದ ಹಿನ್ನಡವಳಿಯಲ್ಲಿ ಮಾರುಗಾಳಿಗಳೂ ಕೂಡ ದೂಸರೆಯಾಗಿವೆ. ಇಂದಿಗೂ ಹಡಗಿನ ಸರಕುಸಾಗಣಿಕೆಗೆ ಮಾರುಗಾಳಿಗಳು ಮತ್ತು ಅವುಗಳಿಂದ ಹರಿಯುವ ಹೆಗ್ಗಡಲ ಒಳಹರಿವುಗಳು ಅನುವಾಗಿವೆ.
ನೆಲದಿಂದ ಬೀಸುವ ಮಾರುಗಾಳಿಗಳು ಕಡಲ (ಕಡಲಿನ ಮಾರುಗಾಳಿಗಳು – maritime trade winds) ಮೇಲಿನವುಗಳಿಗಿಂತ ಹೆಚ್ಚು ಒಣ ಮತ್ತು ಬಿಸಿಯಾಗಿರುತ್ತವೆ, ಇವಗಳನ್ನು ಪೆರ್ನೆಲದ ಮಾರುಗಾಳಿಗಳು (continental trade winds) ಎನ್ನಲಾಗುತ್ತದೆ. ಬಿರುಸಾದ ಮಾರುಗಾಳಿಗಳು ಪಡಲಿಕೆ (precipitation) ಇಲ್ಲದ್ದರಿಂದ ಉಂಟಾದರೆ, ಅಸಳಾದ ಮಾರುಗಾಳಿಗಳು ಒಳನಾಡಿನುದ್ದಕ್ಕೂ ಮಳೆಸುರಿಸಬಲ್ಲವು. ತಕ್ಕುದಾದ ಎತ್ತುಗೆಯೆಂದರೆ ತೆಂಕು-ಮೂಡಣ ಏಶಿಯಾದ ಮಾನ್ಸೂನ್ (southeast Asian monsoon).
ಹಡಗು ಸಾಗಣಿಕೆ ಮತ್ತು ಮಳೆಸುರಿತದ ಹೊರತಾಗಿ ಮಾರುಗಾಳಿಗಳು ಸಾವಿರಾರು ಕಿಲೋಮೀಟರುದ್ದಕ್ಕೂ ದುಂಬು, ಮರಳನ್ನು ಹೊತ್ತೊಯ್ಯೊಬಲ್ಲದು. ಎತ್ತುಗೆಗೆ ಸಹಾರ ಮರಳುಗಾಡಿಂದ ಹೊತ್ತೊಯ್ದ ಮರಳು ದುಮ್ಮಿನ ಗಾಳಿಮಳೆಯು (storm) ಕೆರೀಬಿಯನ್ ಕಡಲಿನಲ್ಲಿರುವ ನಡುಗಡ್ಡೆಗಳು ಮತ್ತು ಫ್ಲೋರಿಡಾ ವರೆಗೂ ಸುಮಾರು 8,047ಕಿಮೀ ಉದ್ದಕ್ಕೂ ಬೀಸುತ್ತವೆ.
ಕುದುರೆ ಅಡ್ಡಗೆರೆಗಳು (Horse Latitudes)
ಕುದುರೆ ಅಡ್ಡಗೆರೆಗಳು ಪಡುವಣಗಾಳಿಗಳು ಮತ್ತು ಮಾರು ಗಾಳಿಗಳ ನಡುವಣ ಕಿರಿದಾದ ಹರವಿನಲ್ಲಿನ ಒಣ, ಬಿಸಿಯಾದ ಗಾಳಿಪರಿಚೆಗಳಾಗಿವೆ (climates). ಹ್ಯಾಡ್ಲಿ ಮತ್ತು ಫಾರೆಲ್ ಗಾಳಿಕುಣಿಕೆಗಳ ನಡುವಲ್ಲಿ ಈ ಗಾಳಿಪರಿಚೆಗಳು ಏರ್ಪಡುತ್ತವೆ. ಇವು 30-35ಡಿಗ್ರಿ ಬಡಗು ಮತ್ತು ತೆಂಕು ಅರೆಗೋಳದಲ್ಲಿ ಹಬ್ಬಿರುತ್ತವೆ. ತೆಂಕು-ಅಮೇರಿಕಾದ ಮಳೆಯಿಲ್ಲದ ಅಟಕಾಮಾದಿಂದ ಹಿಡಿದು ಆಪ್ರಿಕಾದ ಕಲಹರಿ ಬಗೆಯ ಹಲವಾರು ಮರಳುಗಾಡುಗಳು ಈ ಕುದುರೆ ಅಡ್ಡಗೆರೆಗಳಲ್ಲಿ ಕಂಡುಬರುತ್ತವೆ. ಇಲ್ಲಿ ವಾಡಿಕೆಯ ಬೀಸುಗಾಳಿಗಳು ಹೆಚ್ಚಾಗಿ ಹಗುರವಾಗಿರುತ್ತವೆ. ಒಂದುವೇಳೆ ಬಿರುಸಾಗಿ ಬೀಸಿದರೂ ಚೂರು ಹೊತ್ತಿಗೆಲ್ಲಾ ತಗ್ಗುತ್ತವೆ. ಆದ್ದರಿಂದ ಇಲ್ಲಿ ಹೆಚ್ಚುಸಲ ಬೀಸುಗಾಳಿಯೇ ಇಲ್ಲವೆಂಬಂತೆ ಅಲುಗಾಡದ ತಾಣವಿದ್ದಂತೆ ಇರುತ್ತದೆ. ವಲಸೇನೆಲಸು (colonial) ನಾಳುಗಳಲ್ಲಿ ನ್ಯೂ-ಜಿಲ್ಯಾಂಡಿನ ಹಡಗಾಳುಗಳು ಕುದುರೆಗಳನ್ನು ವೆಸ್ಟ್-ಇಂಡೀಸ್ಗೆ ಸಾಗಿಸುತ್ತಿದ್ದಾಗ ಗಾಳಿಯೂ ಅಲುಗಾಡದ ಈ ತಾಣಗಳಲ್ಲಿ ನಾಳುಗಟ್ಟಲೆ ಸಿಕ್ಕಿಕೊಂಡು, ಕುಡಿಯಲು ನೀರೂ ಇಲ್ಲದಂತಾಗಿ ಸತ್ತ ಕುದುರೆಗಳನ್ನು ಅಲ್ಲಿಯೇ ಕಡಲಿಗೆ ಬಿಸಾಡಿ ಹೋಗುತ್ತಿದ್ದರಂತೆ. ಈ ದೂಸರೆಯಿಂದಾಗಿಯೇ ಕುದುರೆ ಅಡ್ಡಗೆರೆಗಳು ಎಂಬ ಹೆಸರು ಬಂತೆಂದು ಹೇಳಲಾಗಿದೆ.
ಪಡುವಣಗಾಳಿಗಳು (Westerlies)
ಪಡುವಣಗಾಳಿಗಳು ಪಡುವಣದಿಂದ ನಟ್ಟಡ್ಡಗೆರೆಗಳ (mid latitudes) ತಾಣಗಳೆಡೆಗೆ ಬೀಸುವ ವಾಡಿಕೆಯ ಗಾಳಿಗಳಾಗಿವೆ. ಅಡಿ-ಬಿಸಿಲ್ನೆಲೆಗಳ ಹೆಚ್ಚು ಒತ್ತಡದ ನೆಲೆಗಳಿಂದ ನಡುತರ ಕಡಿಮೆ ಒತ್ತಡದ ನೆಲೆಗಳೆಡೆಗೆ ಬೀಸುತ್ತವೆ. ಇವು ಫಾರೆಲ್ ಗಾಳಿಕುಣಿಕೆಯಿಂದಾಗಿ ಉಂಟಾಗುವ ನೆಲಮಟ್ಟದ ಬೀಸುಗಾಳಿಗಳು. ತುದಿಯ ಮೂಡಣಗಾಳಿಗಳು ಮತ್ತು ಹೆಚ್ಚು ಒತ್ತಡದ ಕುದುರೆ ಅಡ್ಡಗೆರೆ ತಾಣಗಳ ಬೀಸುಗಾಳಿಗಳು, ಎರಡು ಬದಿಗಳಿಂದ ಕೂಡಿ ಪಡುವಣಗಾಳಿಗಳನ್ನು ಉಂಟುಮಾಡುತ್ತವೆ. ಪಡುವಣಗಾಳಿಗಳು ಚಳಿಗಾಲದಲ್ಲಿ ಹಾಗು ತುದಿಗಳಮೇಲೆ ಕಡಿಮೆ ಒತ್ತಡವಿದ್ದ ಹೊತ್ತಲ್ಲಿ ಹೆಚ್ಚು ಬಿರುಸಾಗಿರುತ್ತವೆ ಮತ್ತು ಬೇಸಿಗೆಯಲ್ಲಿ ಹಾಗು ತುದಿಯ ಮೂಡಣಗಾಳಿಗಳು ಬಿರುಸಾಗಿದ್ದಾಗ ಪಡುವಣಗಾಳಿಗಳು ಅಳವುಗುಂದುತ್ತವೆ.
ತೆಂಕು ಅರೆಗೋಳದ 40, 50 ಮತ್ತು 60ಡಿಗ್ರಿ ಅಡ್ಡಗೆರೆಗಳ ನಡುವಿನ ಬೀಸುಗಾಳಿಗಳ ಹರವನ್ನು ಸಾಲಾಗಿ “ಬೊಬ್ಬಿರಿವ ನಲವತ್ತುಗಳು – (Roaring Forties)”, “ರೊಚ್ಚಿನ ಅಯ್ವತ್ತುಗಳು – (Furious Fifties)” ಮತ್ತು “ಕಿರುಚುವ ಅರವತ್ತುಗಳು – (Shrieking Sixties)” ಎಂದು ಕರೆಯಲಾಗುತ್ತದೆ. ಏಕೆಂದರೆ ತೆಂಕು ಅರೆಗೋಳದಲ್ಲಿ ಹೆಗ್ಗಡಲು ಹೆಚ್ಚಾಗಿ ಹಬ್ಬಿರುವುದರಿಂದ ಇಲ್ಲಿನ ಪಡುವಣಗಾಳಿಗಳು ಕಡುಬಿರುಸಾಗಿ ಬೀಸುತ್ತವೆ. ಈ ತಾಣಗಳಲ್ಲೆಲ್ಲ ಬಹಳ ಕಡಿಮೆ ಗಟ್ಟಿನೆಲಗಳು (Land mass) ಕಾಣಸಿಗುವುದರಿಂದ ಇಲ್ಲಿ ಬೀಸುಗಾಳಿಗೆ ಹೆಚ್ಚು ತಡೆಯಿಲ್ಲದಂತಾಗುತ್ತದೆ. ತೆಂಕು ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳ ತುತ್ತತುದಿ ಹಾಗು ನ್ಯೂಜಿಲ್ಯಾಂಡಿನ ನಡುಗಡ್ಡೆಗಳೊಂದೇ (island) ಬೊಬ್ಬಿರಿವ ನಲವತ್ತುಗಳು ಹಾದುಹೋಗುವ ಗಟ್ಟಿನೆಲಗಳು. ಅರಸುಗೆಯ (exploration) ನಾಳುಗಳಲ್ಲಿ ಹಡಗಾಳುಗಳಿಗೆ ಬೊಬ್ಬಿರಿವ ನಲವತ್ತುಗಳು ಬಹಳ ಮುಕ್ಯವಾಗಿದ್ದವು. ಯುರೋಪ್ ಹಾಗು ಪಡುವಣ ಏಶಿಯಾದ ಅರಸುಗರು ಮತ್ತು ಮಾರಾಳಿಗಳು ತೆಂಕು-ಮೂಡಣದ ಸಾಂಬಾರು ಮಾರುಕಟ್ಟೆಗಳಿಗೆ ಮತ್ತು ಆಸ್ಟ್ರೇಲಿಯಾಗೆ ಸೇರಲು ಈ ಬೊಬ್ಬಿರಿವ ನಲವತ್ತುಗಳು ಎಂಬ ಪಡುವಣಗಾಳಿಗಳನ್ನು ಬಳಸಿ ಹೋಗುತ್ತಿದ್ದರು.
ಹೆಗ್ಗಡಲ ಒಳಹರಿವುಗಳ (Oceanic Currents) ಮೇಲೆ ಅದರಲ್ಲೂ ಹೆಚ್ಚಾಗಿ ತೆಂಕು ಅರೆಗೋಳದಲ್ಲಿ ಪಡುವಣಗಾಳಿಗಳು ಹೆಚ್ಚು ಪ್ರಬಾವ ಬೀರಿವೆ. ಇಡೀ ನೆಲದಲ್ಲೆಲ್ಲಾ ದೊಡ್ಡದಾದ ಅಂಟಾರ್ಟಿಕ್ ತುದಿಸುತ್ತುವ ಒಳಹರಿವು (Antarctic Circumpolar Current-ACC), ಪಡುವಣಗಾಳಿಗಳ ಪ್ರಬಾವದಿಂದ ಪಡುವಣ-ಮೂಡಣ ದಿಕ್ಕಿನಲ್ಲಿ ಪೆರ್ನೆಲವನ್ನು (continent) ಸುತ್ತುತ್ತದೆ. ಹೀಗೆ ಸುತ್ತುತ್ತಾ ಎಣಿಸಲಾಗದಶ್ಟು ತಂಪಾದ, ಹೆಚ್ಚು ಪೊರೆತಗಳ (nutrients) ನೀರನ್ನು ಸಾಗಿಸುವುದಲ್ಲದೆ ಒಳ್ಳೆಯ ಕಡಲಬಾಳಿನ ಹೊಂದಿಕೆಯೇರ್ಪಾಟುಗಳನ್ನು (marine ecosystems) ಮತ್ತು ಉಣಿಸುಬಲೆಗಳನ್ನು (food webs) ಉಂಟುಮಾಡುತ್ತದೆ.
ತುದಿಯ ಮೂಡಣಗಾಳಿಗಳು (Polar Easterlies)
ತುದಿಯ ಮೂಡಣಗಾಳಿಗಳು ಒಣ ಹಾಗು ತಂಪಾದ ವಾಡಿಕೆಯ ಗಾಳಿಗಳಾಗಿದ್ದು ಮೂಡಣದ ಕಡೆಯಿಂದ ಬೀಸುತ್ತವೆ. ಇವು ಬಡಗು-ತೆಂಕು ತುದಿಗಳ (poles) ಎತ್ತರದ ಹಾಗು ಹೆಚ್ಚು ಒತ್ತಡದ ನೆಲೆಗಳಿಂದ ನಡುತರ ಕಡಿಮೆ ಒತ್ತಡದ ಅಡಿ-ತುದಿಯ (sub-polar) ನೆಲೆಗಳೆಡೆಗೆ ಬೀಸುತ್ತವೆ. ಇವು ತಂಡ್ರಾ ಮತ್ತು ಮಂಜು ಹೊದ್ದ ನೆಲೆಗಳಿಂದ ಬೀಸುವುದರಿಂದ ಕಡುತಂಪಾಗಿರುತ್ತವೆ. ತುದಿಯ ಮೂಡಣಗಾಳಿಗಳು ಬಡಗು ತುದಿಗಿಂತ ಹೆಚ್ಚು ತೆಂಕಲ್ಲಿ ಕಂಡುಬರುತ್ತವೆ.
ಮುಂದಿನ ಬಾಗದಲ್ಲಿ ಬಿಸಿಲ್ನೆಲೆಗಳ ಕೂಡು ಹರವು ಮತ್ತು ಅದರ ಕದಲಿಕೆಯಿಂದ ನೆಲದ ಗಾಳಿಪಾಡಿನ ಮೇಲೆ ಉಂಟಾಗುವ ಆಗುಹಗಳ ಬಗ್ಗೆ ತಿಳಿಯೋಣ.