ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

ರತೀಶ ರತ್ನಾಕರ.

The Honey Bee: Our Friend in Danger | Finger Lakes Land Trust

 

ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ ಓಡಿಸುವ ಈ ಹುಳಗಳು ಬೆರಗಿನ ಗಣಿಗಳು. ಇವುಗಳ ಬದುಕಿನ ಬಗೆಯನ್ನು ಅರಿಯುವ ಪ್ರಯತ್ನ ಮಾಡುತ್ತಾ ಹಲವು ಬರಹಗಳು ಈಗಾಗಲೇ ಅರಿಮೆಯಲ್ಲಿ ಮೂಡಿಬಂದಿವೆ. ಬನ್ನಿ, ಇವುಗಳ ಬದುಕಿನ ಮತ್ತಷ್ಟು ಸೋಜಿಗದ ಸಂಗತಿಗಳನ್ನು ಚುಟುಕಾಗಿ ತಿಳಿಯೋಣ.

“ಹನಿಮೂನ್” (honeymoon) ಎಂಬ ಪದದ ಹುಟ್ಟು ಮತ್ತು ಆಚರಣೆ ಹೇಗಾಯಿತು ಗೊತ್ತೇ? – ಸುಮಾರು 8 ನೇ ಶತಮಾನದಲ್ಲಿ ಯುರೋಪಿನಲ್ಲಿದ್ದ ‘ನಾರ್ಸ್ ಮತ'(Norse religion)ದಲ್ಲಿ ಒಂದು ಕಟ್ಟುಪಾಡು ಇತ್ತು. ಅದರಲ್ಲಿ ಮದುವೆಯಾದ ಹೊಸ ಜೋಡಿಗಳಿಗೆ ಒಂದು ತಿಂಗಳ ಕಾಲ ‘ಜೇನು ಹೆಂಡ'(fermented honey) ಅಂದರೆ ಜೇನುತುಪ್ಪಕ್ಕೆ ನೀರನ್ನು ಸೇರಿಸಿ ಹುದುಗೆಬ್ಬಿಸಿ ಕೊಡಲಾಗುತ್ತಿತ್ತು. ಜೇನಿನಿಂದ ಮಾಡಿದ ಹೆಂಡವನ್ನು ಹೊಸ ಜೋಡಿಗಳಿಗೆ ಕೊಡುತ್ತಿದ್ದ ಒಂದು ತಿಂಗಳ ಕಾಲಕ್ಕೆ ‘ಹನಿಮೂನ್'(honey + moon [-means month]) (ಜೇನು ತಿಂಗಳು/ಸಿಹಿ ತಿಂಗಳು) ಎಂದು ಅವರು ಕರೆಯುತ್ತಿದ್ದರು. ಇದೇ ಜೇನಿಗೂ ‘ಹನಿಮೂನ್’ ಗೂ ಇರುವ ನಂಟು!

ಜೇನುತುಪ್ಪದಲ್ಲಿ ಯಾವುದೇ ಸೀರುಸಿರುಗಳು (micro organisms) ತನ್ನ ಬದುಕನ್ನು ನಡೆಸಲು ಆಗುವುದಿಲ್ಲ ಆದ್ದರಿಂದ ಅದನ್ನು ಕೊಳೆಯಳಿಕ(antiseptic)ವಾಗಿ ಬಳಸುತ್ತಾರೆ. ಇದಲ್ಲದೇ ಇದು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೊಂದಿರುವುದರಿಂದ ಹೆಣಗಳು ಕೊಳೆಯದಂತೆ ಕಾಪಾಡಲು ಬಳಸುವ ಅಡಕಗಳಲ್ಲಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ‘ಅಲೆಕ್ಸಾಂಡರ‍್‘ ದೊರೆಯ ಹೆಣವನ್ನು ಕೊಳೆಯದಂತೆ ಕಾಪಾಡಲು ಕೂಡ ಜೇನುತುಪ್ಪವನ್ನು ಒಂದು ಅಡಕವನ್ನಾಗಿ ಬಳಸಲಾಗಿತ್ತು.

ಬನ್ನಿ, ಮತ್ತಷ್ಟು ಬೆರಗಿನ ತುಣುಕುಗಳನ್ನು ಸವಿಯೋಣ.

ಜೇನುಹುಳ:

  • ಇರುವೆ ಮತ್ತು ಕಡಜದ ಹುಳಗಳು ಆದಮೇಲೆ ಕೀಟಗಳ ಹೆಚ್ಚೆಣಿಕೆಯಲ್ಲಿ ಜೇನುಹುಳಗಳಿಗೆ ಮೂರನೇ ಜಾಗ
  • ಒಂದು ಗೂಡಿನಲ್ಲಿ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ
  • ದುಡಿಮೆಗಾರ ಹುಳಗಳು 45 ದಿನಗಳು ಬದುಕಿದ್ದರೆ ಒಡತಿ ಜೇನುಹುಳವು 5 ವರುಶದವರೆಗೆ ಬದುಕಬಲ್ಲದು
  • ಒಡತಿ ಹುಳವು ಒಂದು ದಿನಕ್ಕೆ 1500 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ
  • ಜೇನುಹುಳಗಳು ಗಂಟೆಗೆ 15 ಮೈಲಿ ಉರುಬಿನಲ್ಲಿ ಹಾರಬಲ್ಲವು
  • ಜೇನುಹುಳದ ರೆಕ್ಕೆಗಳು ನಿಮಿಷಕ್ಕೆ 11, 400 ಸಲ ಬಡಿಯುತ್ತವೆ. ಹುಳಗಳ ‘ಜುಂಯ್’ ಎನ್ನುವ ಸದ್ದಿಗೆ ಈ ರೆಕ್ಕೆಯ ಬಡಿತವೇ ಕಾರಣ
  • ಇಡಿ ನೆಲದಲ್ಲಿರುವ ಕೀಟಗಳಲ್ಲಿ ಜೇನುಹುಳಗಳ ಊಟ(ಜೇನು)ವನ್ನು ಮಾತ್ರ ಮಾನವ ತನ್ನ ತಿನಿಸಾಗಿ ಬಳಸುತ್ತಾನೆ
  • ಜೇನುಹುಳಗಳು ಗೂಡಿನಿಂದ ಸಾಮಾನ್ಯವಾಗಿ ಸುಮಾರು 5 ಕಿ.ಮೀ ದೂರದವರೆಗೆ ಹಾರುತ್ತವೆ. ಮೇವಿಗಾಗಿ ಗೂಡಿನಿಂದ ಸುಮಾರು 10. ಕೀ. ಮೀ. ದೂರದವರೆಗೆ ಇವು ಹಾರಬಲ್ಲವು
  • ತನ್ನ ಗೂಡನ್ನು ಕಟ್ಟಲು ಬೇಕಾದ ಜೇನುಮೇಣವನ್ನು ತನ್ನ ಮೈಯಿಂದಲೇ ಹುಳವು ಉತ್ಪಾದಿಸುತ್ತದೆ
  • ಅರ್ಧ ಕೆ.ಜಿ. ಜೇನುಮೇಣವನ್ನು ಒಸರಲು (secrete) ಇವು 4 ಕೆ.ಜಿ ಸಿಹಿಯನ್ನು ತಿನ್ನಬೇಕು!
  • ತಮ್ಮನ್ನು ಕಾಪಾಡಿಕೊಳ್ಳಲು ಬೇರೊಂದು ಪ್ರಾಣಿಗೆ ಚುಚ್ಚಿ ಬಳಿಕ ತಾನು ಸಾಯುವ ಕೀಟವೆಂದರೆ ಜೇನುಹುಳ ಮಾತ್ರ
  • ಜೇನುಹುಳಗಳು ಕಡುನೇರಳೆ (ultravoilet) ಮತ್ತು ಪೊಲರೈಸ್ಡ್ (polarised) ಬೆಳಕನ್ನು ನೋಡಬಲ್ಲವು. ಹಾಗೆಯೇ ನಾವು ಕಾಣುವ ಕೆಂಪು ಬಣ್ಣವನ್ನು ಈ ಹುಳಗಳು ಕಾಣಲಾರವು
  • ಜೇನುಹುಳದ ಮಿದುಳು ಮಾನವನ ಮಿದುಳಿಗಿಂದ 20,000 ಪಟ್ಟು ಚಿಕ್ಕದು!
  • ಜೇನುಹುಳವು ಮಾನವನ ಮುಖವನ್ನು ಗುರುತಿಸಬಲ್ಲವು! 2 ಕೂಡುಗಣ್ಣು ಮತ್ತು 3 ಸುಳುಗಣ್ಣುಗಳು ಸೇರಿ ಒಟ್ಟು 5 ಕಣ್ಣುಗಳನ್ನು ಇವು ಹೊಂದಿವೆ
  • ಜೇನುಹುಳಗಳು ನಾಲ್ಕರವರೆಗೆ ಎಣಿಸಬಲ್ಲವು.

ಜೇನುತುಪ್ಪದ ಕುರಿತು ಕೆಲವು ಬೆರಗಿನ ಹನಿಗಳು:Honey-Dipper-The-Bee-Shop

  • ಇಡಿ ನೆಲದಲ್ಲಿ ಒಟ್ಟು 20 ಸಾವಿರ ಬಗೆಯ ಹುಳಗಳಿವೆ ಅದರಲ್ಲಿ 4 ಬಗೆಯ ಹುಳಗಳು ಮಾತ್ರ ಜೇನುತುಪ್ಪವನ್ನು ಮಾಡಬಲ್ಲವು
  • ಅರ್ಧ ಕೆ.ಜಿ ಜೇನುತುಪ್ಪವನ್ನು ಉತ್ಪಾದಿಸಲು ಜೇನುಹುಳಗಳು ಒಟ್ಟು 20 ಲಕ್ಶ ಹೂವುಗಳನ್ನು ಬೇಟಿ ಮಾಡಬೇಕು, ಹಾಗೆಯೇ 55, 000 ಮೈಲಿಗಳಷ್ಟು ಗೂಡಿನಿಂದ ಹೂವಿನ ಜಾಗಕ್ಕೆ ತಿರುಗಾಟ ನಡೆಸಬೇಕು!
  • ಒಂದು ಜೇನುಗೂಡಿನಲ್ಲಿ ದಿನಕ್ಕೆ 1 ಕೆ.ಜಿ.ಯಷ್ಟು ಜೇನುತುಪ್ಪ ಕೂಡಿಡಬಹುದು
  • ಒಂದು ಜೇನುಗೂಡಿನಲ್ಲಿ ವರುಶಕ್ಕೆ ಸುಮಾರು 200 ಕೆ.ಜಿ ಜೇನುತುಪ್ಪವನ್ನು ಹುಳಗಳು ಉತ್ಪಾದಿಸಬಲ್ಲವು
  • ಒಂದು ಜೇನುಹುಳವು ತನ್ನ ಇಡೀ ಬದುಕಿನಲ್ಲಿ 1/12 ಟೀ ಚಮಚದಷ್ಟು ಮಾತ್ರ ಜೇನುತುಪ್ಪವನ್ನು ಉತ್ಪಾದಿಸಬಲ್ಲದು
  • ಜೇನುತುಪ್ಪ ಎಂದಿಗೂ ಕೆಡುವುದಿಲ್ಲ
  • ಜೇನುಹುಳವೇನಾದರು ಇಡೀ ಭೂಮಿಯನ್ನು ಸುತ್ತಬೇಕು ಎಂದರೆ ಅದರ ಹಾರಾಟಕ್ಕೆ ಸುಮಾರು 28 ಗ್ರಾಂ ಜೇನುತುಪ್ಪ ಸಾಕಾಗುತ್ತದೆ. ಅಷ್ಟೊಂದು ಹುರುಪು ಜೇನುತುಪ್ಪದಲ್ಲಿದೆ.

ಎರಡು ಗೋದಿ ಕಾಳಿನನಷ್ಟು ದೊಡ್ಡದಿರುವ ಈ ಹುಳಗಳ ಬಾಳ್ಮೆಯ ಆಳಕ್ಕೆ ಇಳಿದರೆ ನಾವು ಹುಬ್ಬೇರಿಸುವಂತಹ ಅರಿಮೆ ಕಣ್ಣಿಗೆ ಕಾಣುತ್ತದೆ. ಇವುಗಳ ಬದುಕಿನ ಬಗ್ಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅರಕೆಗಳು ನಡೆಯುತ್ತಲೇ ಇವೆ. ಜೇನುಹುಳದ ಸಾಕಣೆಯು ಒಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಸಾಕಣೆಯಲ್ಲಿ ಬಗೆಬಗೆಯ ಚಳಕಗಳು ಹೊರಬರುತ್ತಿವೆ. ಜೇನು ಸಾಕಣೆಯ ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಲು ಹುಳದ ಬಗೆಗಿನ ಅರಕೆಗಳು ನೆರವನ್ನು ನೀಡುತ್ತಿವೆ. ನಮ್ಮಲ್ಲಿಯೂ ಇಂತಹ ಅರಕೆಗಳು ಹೆಚ್ಚಲಿ.

(ಮಾಹಿತಿ ಸೆಲೆ: westmtnapiary.com , pmc.ncbi , bbka.org.uk)

(ಚಿತ್ರ ಸೆಲೆ: thebeeshop.net, )

ಜೇನುಹುಳದ ಬಾಳ್ಮೆಸುತ್ತು

ರತೀಶ ರತ್ನಾಕರ.

ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಷ್ಟು ಹಲತನವಿದೆ. ಒಂದು ಜೇನಿನ ಗೂಡಿನಲ್ಲಿ ಒಡತಿ, ಗಂಡು ಜೇನು ಮತ್ತು ದುಡಿಮೆಗಾರ ಜೇನುಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ. ಎಲ್ಲಾ ಜೇನುಹುಳಗಳು ಮೊಟ್ಟೆ, ಮರಿಹುಳ (larvae), ಗೂಡುಹುಳ (pupa) ಮತ್ತು ಜೇನುಹುಳವೆಂಬ ನಾಲ್ಕು ಹಂತಗಳಲ್ಲಿ ಜೇನುಗೂಡಿನಲ್ಲಿ ಬದುಕು ನಡೆಸುತ್ತಿರುತ್ತವೆ.

ಜೇನುಹುಳದ ಬಾಳ್ಮೆಸುತ್ತು (Life cycle):

ಜೇನುಗೂಡಿನಲ್ಲಿ ಸಾಕಷ್ಟು ಹೆಣ್ಣು ಜೇನುಹುಳಗಳಿದ್ದರೂ ಒಡತಿ ಜೇನುಹುಳವು ಮಾತ್ರ ಎರುಬುಳ್ಳ (fertile) ಹುಳವಾಗಿದೆ. ಒಡತಿ ಜೇನು ಮಾತ್ರ ಮೊಟ್ಟೆಗಳನ್ನಿಡುವ ಕಸುವನ್ನು ಹೊಂದಿದೆ. ಜೇನುಹುಳು ಎರಡು ಬಗೆಯ ಮೊಟ್ಟೆಯಿಂದ ಹುಟ್ಟಬಹುದು;
1) ಹೆಣ್ಣು ಗಂಡಿನೊಡನೆ ಕೂಡುವಿಕೆಯ ಬಳಿಕ ಇಟ್ಟ ಮೊಟ್ಟೆ 2) ಹೆಣ್ಣು ಗಂಡಿನೊಂದಿಗೆ ಕೂಡದೆಯೇ ಇಟ್ಟ ಮೊಟ್ಟೆ
ಮೊದಲ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಯಾವಾಗಲೂ ಹೆಣ್ಣು ಜೇನುಗಳಾಗಿರುತ್ತವೆ ಅದೇ ಎರಡನೇ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಗಂಡಾಗಿರುತ್ತವೆ; ಒಡತಿ ಹುಳವು ಗಂಡು ಹುಳದೊಡನೆ ಕೂಡಿದಾಗ ಅದರ ಗಂಡು ಬಿತ್ತುಗಳನ್ನು ಪಡೆದು ತನ್ನಲ್ಲಿ ಅಡಗಿಸಿಟ್ಟುಕೊಳ್ಳುತ್ತದೆ. ಯಾವಾಗ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸಬೇಕು ಮತ್ತು ಯಾವಾಗ ಗಂಡು ಜೇನುಗಳನ್ನು ಅನ್ನುವುದನ್ನು ಒಡತಿ ಜೇನು ತೀರ್ಮಾನಿಸುತ್ತದೆ. ಹೆಣ್ಣು ಜೇನುಹುಳುಗಳು ಬೇಕೆಂದಾಗ ಒಡತಿ ಜೇನು ತನ್ನಲ್ಲಿ ಕೂಡಿಟ್ಟುಕೊಂಡಿರುವ ಗಂಡುಬಿತ್ತುಗಳನ್ನು(sperm) ತನ್ನ ಮೊಟ್ಟೆಯೊಡನೆ ಬೆರಸಿ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸುತ್ತದೆ. ಒಡತಿ ಜೇನು ಗಂಡು ಜೇನುಹುಳಗಳನ್ನು ಹುಟ್ಟಿಸಬೇಕೆಂದಾಗ ಗಂಡುಬಿತ್ತುಗಳೊಂದಿಗೆ ಬೆರಸದೆಯೇ ಬರೀ ಮೊಟ್ಟೆಗಳನ್ನು ಇಡುತ್ತದೆ!

ಒಡತಿ ಜೇನುಹುಳವು ಗೂಡಿನಲ್ಲಿ ಮೊಟ್ಟೆಗಳನಿಟ್ಟ ಮೂರು ದಿನಗಳ ಬಳಿಕ ಮೊಟ್ಟೆಯೊಡೆದು ಮರಿಹುಳು(larvae) ಹೊರಗಡೆ ಬರುತ್ತದೆ. ಈ ಮರಿಹುಳಗಳಿಗೆ ದುಡಿಮೆಗಾರ ಜೇನುಹುಳಗಳು ಬೇಕಾದ ಊಟವನ್ನು ಒದಗಿಸುತ್ತವೆ. ಮರಿಹುಳಗಳಿಗೆ ಒದಗಿಸುವ ಊಟವು ‘ಜೇನುಗಂಜಿ‘ (Royal jelly) ಮತ್ತು ಜೇನುರೊಟ್ಟಿ (Bee Bread) ಆಗಿರುತ್ತದೆ. ಹೆಚ್ಚು ಮುನ್ನುಗಳಿರುವ (protein) ಹೂವಿನ ಬಂಡು (pollen), ಜೇನುತುಪ್ಪ ಮತ್ತು ಜೇನುಹುಳಗಳೇ ಹೊರಹಾಕುವ ದೊಳೆ(enzyme)ಗಳನ್ನು ಸೇರಿಸಿ ಜೇನುಗಂಜಿಯನ್ನು ಈ ದುಡಿಮೆಗಾರ ಹುಳಗಳು ಅಣಿಮಾಡುತ್ತವೆ. ಜೇನುರೊಟ್ಟಿ ಎಂಬುದನ್ನು ಜೇನುತುಪ್ಪ ಮತ್ತು ಹೂವಿನ ಬಂಡನ್ನು ಸೇರಿಸಿ ಹುಳಗಳು ತಯಾರಿಸಿರುತ್ತವೆ.

ಹೀಗೆ ದುಡಿಮೆಗಾರ ಹುಳಗಳಿಂದ ಆರೈಕೆ ಮಾಡಿಸಿಕೊಂಡ ಮರಿಹುಳಗಳು ಬೆಳೆಯುತ್ತಿದ್ದಂತೆ, ಅವುಗಳ ಗೂಡುಗಳನ್ನು ದುಡಿಮೆಗಾರ ಹುಳಗಳು ಮೇಲಿನಿಂದ ಮೇಣವನ್ನು ಬಳಸಿ ಮುಚ್ಚುತ್ತವೆ, ಇದು ಮರಿಹುಳಗಳನ್ನು ಹೊರಗಿನ ತೊಂದರೆಗಳಿಂದ ಕಾಪಾಡುತ್ತದೆ ಮತ್ತು ಅವುಗಳ ಬೆಳವಣಿಗೆಗೆ ಬೇಕಾದ ಬಿಸುಪನ್ನು ಕಾದುಕೊಳ್ಳುತ್ತದೆ. ಮುಚ್ಚಿದ ಗೂಡಿನೊಳಗಿರುವ ಮರಿಹುಳ ಮತ್ತಷ್ಟು ಬೆಳೆದು ಗೂಡುಹುಳದಹಂತಕ್ಕೆ ಹೋಗುತ್ತದೆ. ಬಳಿಕ ಗೂಡುಹುಳದಿಂದ ಜೇನುಹುಳ ಹೊರಗೆ ಬರುತ್ತದೆ. ಇದು ಗೂಡಿನ ಮುಚ್ಚನ್ನು ಒಡೆದು ಹೊರಬಂದು ಉಳಿದ ಹುಳಗಳೊಡನೆ ಬೆರೆತು ಬೆಳೆಯುತ್ತದೆ.

ಮೊಟ್ಟೆಯಿಂದ ಒಡತಿ, ಗಂಡುಹುಳ ಮತ್ತು ದುಡಿಮೆಗಾರ ಹುಳಗಳು ಆಗುವ ಬಗೆಯನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು:

ಒಡತಿ ಜೇನುಹುಳ:

ದುಡಿಮೆಗಾರ ಜೇನುಹುಳಗಳು ಯಾವ ಮರಿಹುಳವು ಒಡತಿ ಜೇನುಹುಳವಾಗಬೇಕೆಂದು ಆರಿಸುತ್ತವೆ. ಹಾಗಾಗಿ, ಒಡತಿಯಾಗುವ ಆ ಮರಿಹುಳಕ್ಕೆ ಹೆಚ್ಚು ಜೇನುಗಂಜಿಯನ್ನು ಒದಗಿಸುತ್ತವೆ. ತನ್ನ ಮರಿಹುಳದ ಹಂತದ ಕೊನೆಯವರೆಗೂ ಒಡತಿಯು ಊಟವನ್ನು ಪಡೆಯುತ್ತದೆ. ಇದು ಒಡತಿಯ ಹೆರುವ ಅಂಗಗಳು ಮತ್ತು ಸುರಿಗೆ(hormone)ಗಳ ಬೆಳವಣಿಗೆಗೆ ನೆರವಾಗುತ್ತದೆ. ಒಡತಿಯು ದುಡಿಮೆಗಾರ ಹುಳಕ್ಕಿಂತ ಒಂದೂವರೆ ಪಟ್ಟು ದೊಡ್ಡದಿರುತ್ತದೆ. ತನ್ನ ಬಾಳಿನುದ್ದಕ್ಕೂ ಇದು ಜೇನುಗಂಜಿಯನ್ನು ತಿಂದೇ ಬದುಕುತ್ತದೆ.

ಮೊಟ್ಟೆಯೊಡೆದು ಹೊರಬರುವ ಹೊಸ ಒಡತಿ ಹುಳವು ಮೊದಲು ಮಾಡುವ ಕೆಲಸವೆಂದರೆ, ಉಳಿದ ಗೂಡುಗಳಿಗೆ ಹೋಗಿ ಅಲ್ಲಿ ಯಾವುದಾದರು ಒಡತಿಯಾಗುತ್ತಿರುವ ಗೂಡುಹುಳವಿದ್ದರೆ ಅದಕ್ಕೆ ತನ್ನ ಕೊಂಡಿಯಿಂದ ನಂಜನ್ನು ಚುಚ್ಚಿ ಸಾಯಿಸುವುದು. ಬಳಿಕ ಜೇನುಗೂಡಿನ ತುಂಬೆಲ್ಲಾ ಓಡಾಡಿ ಆಗುತ್ತಿರುವ ಕೆಲಸವನ್ನು ಗಮನಿಸುತ್ತದೆ. ಈ ಹೊಸ ಒಡತಿ ಹುಳವನ್ನು ಒಮ್ಮೆಲೆ ಒಡತಿ ಹುಳವೆಂದು ಉಳಿದ ದುಡಿಮೆಗಾರ ಹುಳಗಳು ಒಪ್ಪಿಕ್ಕೊಳ್ಳುವುದಿಲ್ಲ. ಒಡತಿ ಎಂದು ಹೇಳಿ ತಿರುಗುತ್ತಿರುವ ಈ ಹುಳವು ಗೂಡಿನಿಂದ ಹೊರಬಂದ ಎರಡು ಮೂರು ವಾರಗಳಲ್ಲಿ ಗಂಡು ಜೇನುಹುಳದ ಜೊತೆ ಒಂದಾಗಿ ಮೊಟ್ಟೆಗಳನ್ನಿಡುವ ಸುಳಿವನ್ನು ನೀಡಬೇಕು. ಆಗ ಮಾತ್ರ ಇದನ್ನು ಒಡತಿ ಎಂದು ಎಲ್ಲರು ಒಪ್ಪಿಕೊಳ್ಳುತ್ತಾರೆ, ಇಲ್ಲವಾದರೆ ದುಡಿಮೆಗಾರ ಹುಳಗಳು ಈ ಒಡತಿಯ ಸಾಯಿಸಿಯೋ, ಓಡಿಸಿಯೋ ಇನ್ನೊಂದು ಒಡತಿ ಹುಳವನ್ನು ನೇಮಿಸುತ್ತವೆ.

ಗೂಡಿನಿಂದ ಹೊರಬಂದ ಆರನೇ ದಿನಕ್ಕೆ ಒಡತಿ ಹುಳವು ಮೈನೆರೆದು ಗಂಡು ಹುಳದೊಡನೆ ಒಂದಾಗಲು ಸಿದ್ಧವಾಗಿರುತ್ತದೆ. ಮೊದಲು ಗೂಡಿನ ಸುತ್ತಲು ಅದು ತನ್ನ ಹಾರಾಟವನ್ನು ಆರಂಬಿಸುತ್ತದೆ. ಗೂಡಿನ ಸುತ್ತ ಹಾರಾಡುವುದರಿಂದ ಅದರ ಕಂಡಗಳು ಬಲಗೊಳ್ಳುತ್ತವೆ. ಕಂಡಗಳು ಬಲಗೊಳ್ಳುವುದರಿಂದ ಹೆಚ್ಚು ಗಂಡು ಹುಳಗಳ ಜೊತೆ ಒಂದಾಗಲು ಸಾಧ್ಯವಾಗುತ್ತದೆ, ಹಾಗಾಗಿ ಹೆಚ್ಚು ಗಂಡುಬಿತ್ತುಗಳನ್ನು (sperms) ಪಡೆದುಕೊಳ್ಳಲು ನೆರವಾಗುತ್ತದೆ. ಇದರಿಂದ ಒಡತಿ ಜೇನುಹುಳದ ಹುಟ್ಟಿಸುವಿಕೆಯ ಕಸುವು ಹೆಚ್ಚುತ್ತದೆ. ಇದು ಎರಡು ವಾರಗಳಲ್ಲಿ ಗಂಡು ಹುಳಗಳ ಜೊತೆ ಒಂದಾಗಿ ಮೊಟ್ಟೆಗಳನ್ನು ಇಡುವ ಸೂಚನೆ ಕೊಡಬೇಕು, ಇಲ್ಲವಾದರೆ ಅದು ಬೇಟದ (sexual) ಹರೆಯ ದಾಟಿದೆ ಎಂದು ಬೇರೆ ಒಡತಿಯನ್ನು ನೇಮಿಸಲಾಗುತ್ತದೆ.

ಒಂದು ಒಡತಿ ಹುಳವು ತನ್ನ ಹರೆಯದಲ್ಲಿ ಸುಮಾರು 40 ಗಂಡು ಹುಳಗಳ ಜೊತೆ ಒಂದಾಗುತ್ತವೆ. ತಾನು ಮೊಟ್ಟೆಯಿಡಲು ಶುರುಮಾಡಿದರೆ ದಿನಕ್ಕೆ 2000 ದ ತನಕ ಮೊಟ್ಟೆಗಳನ್ನಿಡುತ್ತವೆ. ಒಂದು ಒಡತಿ ಹುಳವು ಸುಮಾರು 5 ವರುಶಗಳವರೆಗೆ ಬದುಕಬಲ್ಲದು, ಆದರೆ ವಯಸ್ಸಾದಂತೆ ಅದರೆ ಮೊಟ್ಟೆಗಳನ್ನಿಡುವ ಕಸುವು ಕಡಿಮೆಯಾಗುತ್ತದೆ. ಆಗ ಗೂಡಿನ ಹುಳಗಳು ಅದನ್ನು ಬದಲು ಮಾಡಬಹುದು. ಅಲ್ಲದೇ, ಗಾಳಿಪಾಡು (weather) ಮತ್ತು ಹೊರಗಿನ ತೊಂದರೆಗಳಿಂದಲೂ ಇದು ತನ್ನ ಮೊಟ್ಟೆಯಿಡುವ ಕಸುವನ್ನು ಕಳೆದುಕೊಂಡು ಒಡತಿಯ ಜಾಗದಿಂದ ಕೆಳಗಿಳಿಯಬಹುದು. ಹೊಸ ಒಡತಿಯೊಂದು ಗೂಡಿನಲ್ಲಿ ಬೆಳೆಯುವಾಗ ಈಗಾಗಲೇ ಇರುವ ಒಡತಿ ಏನಾಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈಗಾಗಲೇ ಗೂಡಿನಲ್ಲಿರುವ ಒಡತಿ ತನ್ನ ಮೊಟ್ಟೆಯಿಡುವ ಕಸುವನ್ನು ಚೆನ್ನಾಗಿರಿಸಿಕೊಂಡಿದ್ದರೆ ಅದು ಕೆಲವು ದುಡಿಮೆಗಾರ ಹುಳಗಳ ಒಡನೆ ಇನ್ನೊಂದು ಜಾಗಕ್ಕೆ ಹಾರಿಹೋಗುತ್ತದೆ, ಅಲ್ಲಿ ಮತ್ತೊಂದು ಜೇನುಗೂಡು ಹುಟ್ಟುತ್ತದೆ.

ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳ ಬೆಳವಣಿಗೆಯ ದಿನದ ಹಂತಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

ಗಂಡು ಜೇನುಹುಳ:

ನಾವು ಮೊದಲೇ ತಿಳಿದಂತೆ ಒಡತಿ ಹುಳವು ಗಂಡು ಹುಳದ ಜೊತೆ ಒಂದಾಗದೆ, ಬಸಿರಿಲ್ಲದೆಯೂ ಕೂಡ ಮೊಟ್ಟೆಗಳನ್ನು ಇಡಬಲ್ಲದು. ಇಂತಹ ಬಸಿರಿಲ್ಲದೆ ಇಟ್ಟ ಮೊಟ್ಟೆಗಳಿಂದ ಮೂಡಿದ ಹುಳಗಳೇ ಗಂಡುಹುಳಗಳು. ಮೊಟ್ಟೆಯೊಡೆದ ಹದಿನಾರು ದಿನಗಳಿಗೆ ಗಂಡು ಹುಳವು ಮೈನೆರೆಯುತ್ತದೆ. ಜೇನುಗೂಡಿನ ಸುತ್ತ ಹಾರಾಡುತ್ತ ಒಡತಿ ಜೇನುಹುಳವನ್ನು ಕಂಡು ಒಂದಾಗುವುದು ಇದರ ಕೆಲಸವಾಗಿರುತ್ತದೆ.

ಈ ಗಂಡುಹುಳದ ಮುಕ್ಯ ಕೆಲಸವೇ ಒಡತಿ ಹುಳದ ಜೊತೆ ಒಂದಾಗಿ ಜೇನು ಹುಳದ ಸಂತತಿಯನ್ನು ಬೆಳೆಸುವುದು, ಈ ಕೆಲಸಕ್ಕಾಗಿ ಅದಕ್ಕೆ ದಕ್ಕುವ ಬಹುಮಾನ ಎಂದರೆ ಸಾವು! ಹೌದು, ಒಂದು ಗಂಡು ಜೇನುಹುಳವು, ಒಮ್ಮೆ ಒಡತಿ ಜೇನಿನ ಜೊತೆ ಒಂದಾದ ಕೂಡಲೆ ಅದರ ಬೇಟದ ಅಂಗವು (sexual organ) ಕಿತ್ತು ಒಡತಿ ಹುಳದೊಳಗೆ ಉಳಿಯುತ್ತದೆ. ಇದರಿಂದ ಗಂಡು ಹುಳವು ಸಾವನ್ನಪ್ಪುತ್ತದೆ ಮತ್ತು ಒಡತಿ ಹುಳವು 100% ಗಂಡುಬಿತ್ತನ್ನು (Sperm) ಪಡೆದು ತನ್ನಲ್ಲಿಟ್ಟುಕೊಳ್ಳುತ್ತದೆ. ಗಂಡು ಹುಳಗಳು ಗೂಡಿನಲ್ಲಿ ಯಾವುದೇ ಹೆಚ್ಚಿನ ಕೆಲಸ ಮಾಡುವುದಿಲ್ಲ. ಚಳಿಗಾಲದಲ್ಲಿ ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಯ್ದುಕೊಳ್ಳಲು ಇವು ನೆರವು ನೀಡುತ್ತವೆ ಅದನ್ನು ಬಿಟ್ಟರೆ ಗೂಡುಕಟ್ಟುವುದಾಗಲಿ, ಮೇವು ತರುವುದಾಗಲಿ ಇನ್ನಿತರ ಯಾವ ಕೆಲಸವನ್ನು ಮಾಡುವುದಿಲ್ಲ. ಗಂಡುಹುಳಗಳು ಒಡತಿಯ ಜೊತೆ ಒಂದಾದಾಗ ಸಾಯುತ್ತವೆ, ಇಲ್ಲವೇ ಹಸಿವಿನಿಂದ, ಹೊರಗಿನ ದಾಳಿಯಿಂದ ಸಾಯುತ್ತವೆ.

ದುಡಿಮೆಗಾರ ಹುಳಗಳು:
ಒಡತಿಯು ಗಂಡು ಹುಳಗಳ ಜೊತೆ ಒಂದಾಗಿ ಬಸಿರಾಗಿ ಇಡುವ ಮೊಟ್ಟೆಗಳಿಂದ ಮೂಡಿಬರುವ ಹುಳಗಳೇ ದುಡಿಮೆಗಾರ ಹುಳಗಳು. ಈ ಬಗೆಯಲ್ಲಿ ಹುಟ್ಟುವ ದುಡಿಮೆಗಾರ ಹುಳಗಳು ಹೆಣ್ಣು ಹುಳಗಳೇ ಆಗಿರುತ್ತವೆ. ಒಡತಿ ಮತ್ತು ಗಂಡುಹುಳಕ್ಕಿಂತ ಚಿಕ್ಕದಾಗಿ ಕಾಣುವ ಇವು ಗೂಡನ್ನು ಕಟ್ಟುವುದು, ಮೊಟ್ಟೆಗಳ ಆರೈಕೆ, ಒಡತಿಯ ಆರೈಕೆ, ಗೂಡಿನ ಆರೈಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೂವಿಂದ ಹೂವಿಗೆ ಹಾರಿ ಜೇನನ್ನು ತುಂಬಿಕೊಂಡು ಬಂದು ಕೂಡಿಡುವುದು. ಅದಕ್ಕಾಗಿ ಇವು ನಿಜವಾದ ದುಡಿಮೆಗಾರ ಹುಳಗಳು.

ಗೂಡಿನ ಎಲ್ಲಾ ಕೆಲಸಗಳನ್ನು ನೋಡಿಕೊಂಡು ಎಣಿಕೆಯಲ್ಲಿಯೂ ಕೂಡ ಹೆಚ್ಚಿರುವ ಈ ದುಡಿಮೆಗಾರ ಹುಳಗಳನ್ನು, ‘ಜೇನುಗೂಡಿನ ಬೆನ್ನೆಲುಬು’ ಎಂದು ಕರೆಯುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಗೂಡಿನಲ್ಲೇ ಇರುವ ದುಡಿಮೆಗಾರ ಹುಳಗಳು ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಪಾಡುತ್ತವೆ. ಮೇವಿಗಾಗಿ ಹೆಚ್ಚು ಹಾರಾಟ ನಡೆಸದೇ ಹೋದಲ್ಲಿ ಇವುಗಳು 4-5 ತಿಂಗಳು ಬದುಕುತ್ತವೆ. ಆದರೆ ಮೇವಿಗಾಗಿ ಹೂವಿಂದ ಹೂವಿಗೆ ಹೆಚ್ಚು ತಿರುಗಾಟ ಮಾಡುತ್ತಿದ್ದರೆ ಕೇವಲ 1-2 ತಿಂಗಳು ಮಾತ್ರ ಬದುಕುತ್ತವೆ.
ಹೀಗೆ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳು ತಮ್ಮ ಕೆಲಸಗಳನ್ನು ನಡೆಸುತ್ತ, ಒಂದಕ್ಕೊಂದು ನೆರವಾಗಿ ಜೇನುಗೂಡಿನಲ್ಲಿ ಸಂಸಾರ ನಡೆಸುತ್ತಿರುತ್ತವೆ.

(ಮಾಹಿತಿ ಮತ್ತು ಚಿತ್ರಸೆಲೆ: theholyhabibee.comgetbuzzingaboutbees.com)